೪೬. ಇಷ್ಟಲಿಂಗಭ್ರಾಂತಿ ನಿರಸನ ಸ್ಥಲ

ಇಂತು ಬಾಹ್ಯಕ್ರಿಯಾ ನಿರಸನವ ಮಾಡಿ ಕಾಯವೇ ಪೀಠಿಕೆ, ಪ್ರಾಣವೇಲಿಂಗವೆಂದರಿದು, ಕುರುಹಿನ ಪರಿಯನಳಿದ ಬ್ರಹ್ಮ ಜ್ಞಾನಿಯಪ್ಪ ಮಹಾಘನ ಪ್ರಾಣಲಿಂಗಿಯ ಇಷ್ಟಲಿಂಗಭ್ರಾಂತಿ ನಿರಸನ ಸ್ಥಲ ||

ಗ್ರಂಥ |

ದೇಹಂ ದೇವಾಲಯಂ ಸಾಕ್ಷಾತ್ತತ್ರ ಜೀವಸದಾಶಿವಃ
ಇತಿ ನಿಶ್ಚಯವಾನ್‌ಪಿಂಡೋ ಲಿಂಗಜಂಗಮ ಉಚ್ಯತೇ ||  || ||

ನ ಕಾಷ್ಠೇ ವಿದ್ಯತೇ ದೇವೋ ನ ಶಿಲಾಯಾಂ ನ ಕರ್ದಮೇ
ಭಾವೇ ಹಿ ವಿದ್ಯತೇ ದೇವಸ್ಥಸ್ಮಾದ್ಭಾವೇನ ಭಾವಯೇತ್‌ ||  || ||

ಶಿಲಾಮೃದ್ದಾರುಚಿತ್ರೇಷು ದೇವತಾಬುದ್ದಿ ಕಲ್ಪನೇ
ಅಕಲ್ಪಿತ ಸ್ವಯಂಜ್ಯೋತಿರಾತ್ಮನಾದೈವತೇನ ಕಿಂ ||  || ||

ಅಲಿಂಗಮೇಕಮವ್ಯಕ್ತಂ ಲಿಂಗಂ ಬ್ರಹ್ಮೇತಿ ನಿಶ್ಚಿತಂ
ಸ್ವಯಂಜ್ಯೋತಿಃ ಪರಂತತ್ವ ಪರವ್ಯೂಮ್ನಿ ವ್ಯವಸ್ಥಿತಂ ||  || ||

ಶಿವಂ ಪರಾತ್ಪರಂ ಸೂಕ್ಷ್ಮಂ ನಿತ್ಯಂ ಸರ್ವಗತಾವ್ಯಯಂ
ಅನಿಂದಿತಮನೌಪಮಂ ಪ್ರಣಮಾಮ್ಯಹಮನಾಮಯಂ ||  || ||

ವಚನ |

ಕಾಯವೇ ಪೀಠೀಕೆ, ಪ್ರಾಣವೇ ಲಿಂಗವಾಗಿರಲು ಬೇರೆ ಮತ್ತೆ ಕುರುಹೇಕಯ್ಯಾ? ಕುರುಹುವಿಡಿದು ಕೂಡುವ ನಿರವಯವುಂಟೆ ಜಗದೊಳಗೆ? ನಷ್ಟವ ಕೈಯಲ್ಲಿ ಪಿಡಿದು ದೃಷ್ಟವ ಕಂಡೆಹೆನೆಂದಡೆ ಕಪಿಲಸಿದ್ಧಮಲ್ಲಿಕಾರ್ಜುನದೇವರು ಸಾಧ್ಯವಹ ಪರಿಯ ಹೇಳಾ, ಪ್ರಭುವೇ ||

ಅರಿಯದಕಾರಣ ಕುರುಹ ಹಿಡಿದೆನಲ್ಲದೆ ಅರೆದ ಬಳಿಕಿನ್ನೆಂತೋ! ಬಿಟ್ಟಡೆ ಸಮಯ ವಿರೋಧ, ಬಿಡದಿರ್ದಡೆ ಜ್ಞಾನವಿರೋಧ, ಗುಹೇಶ್ವರಲಿಂಗ ಉಭಯದಳದ ಮೇಲೈದಾನೆ ಕಾಣಾ, ಸಿದ್ಧರಾಮಯ್ಯಾ ||

ಉದಕದೊಳಗಿದ್ದ ಶತಪತ್ರದಂತೆ ಸಂಸಾರದೊಳಗಿರ್ದು ಇಲ್ಲದಂತಿರಬೇಕು, ಶರಣನ ಕಾಯವೇ ಪೀಠಿಕೆ, ಪ್ರಾಣವೇ ಲಿಂಗವಾದ ಬಳಿಕ ಕೊರಳಲ್ಲಿಗೇಕೋ ಶರಣಂಗೆ? ಗುಹೇಶ್ವರಾ ||

ಇಷ್ಟಲಿಂಗವನು ಪ್ರಾಣಲಿಂಗವೆಂಬ ಕಷ್ಟದ ಮಾತಿದೆಲ್ಲಿಯದೋ! ಇಷ್ಟಲಿಂಗ ಹೋದಡೆ ಪ್ರಾಣಲಿಂಗ ಹೋಗದು ಇಷ್ಟಲಿಂಗ ಪ್ರಾಣಲಿಂಗದ ಬೇಧವ ಗುಹೇಶ್ವರ, ನಿಮ್ಮ ಶರಣನೆ ಬಲ್ಲ ||

ಇಷ್ಟಲಿಂಗವ ಪ್ರಾಣಲಿಂಗವೆಂಬ ಮಿಟ್ಟೆಯ ಭಂಡರು ನೀವು ಕೇಳಿರೋ! ಇಷ್ಟವನು ಕಾಯವನು ಮೆಟ್ಟಿ ಹೂಳುವಲ್ಲಿ ಬಿಟ್ಟು ಹೋಹ ಪ್ರಾಣಕ್ಕೆ ಲಿಂಗವೆಲ್ಲಿಯದು ಹೇಳಾ, ಗುಹೇಶ್ವರಾ? ||

ಪೃಥ್ವಿ ಹುಟ್ಟಿದ ಶಿಲೆ, ಕಲ್ಲುಕುಟ್ಟಿಗೆಗೆ ಹುಟ್ಟಿದ ಮೂರ್ತಿ, ಗುರುಮಂತ್ರಕ್ಕೆ ಲಿಂಗವಾಯಿತ್ತಲ್ಲ! ಈ ಮೂವರಿಗೆ ಹುಟ್ಟಿದ ಮಗುವ ಲಿಂಗವೆಂದು ಕೈವಿಡಿದ ಅಚ್ಚವ್ರತಗೇಡಿ ಗಳನೇನೆಂಬೆ ಗುಹೇಶ್ವರಾ ||

ಆಚಾರ್ಯ ಕುಟಿಲವ ಕೊಟ್ಟು ಹೋದನಲ್ಲಾ! ಮಹೇಂದ್ರ ಜಾಲದೊಳಗೆ ಭ್ರಾಂತರಾದರೆಲ್ಲರು, ಆಚಾರ್ಯನ ಸುಟ್ಟು ಹರಿದೆ ಕುಟಿಲವ ಮೆಟ್ಟೊರಸಿದೆ! ಎನಗೆ ಆಚಾರ್ಯನಿಲ್ಲದೆ ಹೋಯಿತು! ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ, ಇಲ್ಲ, ನಿಲ್ಲು, ಮಾಣು ||

ಊಡಿದಡುಣ್ಣದು, ಒಡನೆ ಮಾತಾಡದು, ಬೇಡದು ಕಾಡದು! ಕಾಡ ಬೆರಣಿಯ ಕೈಯಲಿ ಕೊಟ್ಟು ಹೇಳದೆ ಹೋದೆ ಮಾರೇಶ್ವರಾ ||

ಮನ – ವ್ಯಸನ ಕಂಗಳಲ್ಲಿ ಗರ್ಭವಾಗಿ ಕೈ ಪ್ರಸೂತವಾದ ಪ್ರಪಂಚವನೇನೆಂಬೆ? ಮಾಡಿದರಾಯಿತು! ಮಾಡಿದಲ್ಲಿ ಹೋಯಿತು! ನಚ್ಚದಿರು ನಿಶ್ಚಯದಲ್ಲಿ! ಸಿಮ್ಮಲಿಗೆಯ ಚನ್ನರಾಮನೆಂಬ ಸಂಸಾರಿ, ನೀ ಕೇಳಾ ||

೧೦

ಆಕಾಶವನಡರುವಂಗೆ ಅಟ್ಟಗೋಲ ಹಂಗೇಕೆ? ಸಮುದ್ರವ ದಾಂಟುವಂಗೆ ಹರುಗೋಲ ಹಂಗೇಕೆ? ಸೀಮೆಯಳಿದ ನಿಸ್ಸೀಮಂಗೆ ಸೀಮೆಯ ಹಂಗೇಕೆ? ಗುಹೇಶ್ವರಲಿಂಗದಲ್ಲಿ ನಿಸ್ಸೀಮ ಸಿದ್ಧರಾಮಯ್ಯಂಗೆ ಲಿಂಗವೆಂದೇನು ಹೇಳಾ, ಚನ್ನಬಸವಣ್ಣಾ ||

೧೧

ಅಹುದಹುದು, ಅಂಗಕ್ಕೆ ಲಿಂಗವನರಸಲೇಬೇಕಲ್ಲದೆ ಲಿಂಗಕ್ಕೆ ಲಿಂಗವನರಸಲುಂಟೇ? ಪ್ರಾಣಕ್ಕೆ ಜ್ಞಾನವನರಸಬೇಕಲ್ಲದೆ ಜ್ಞಾನಕ್ಕೆ ಜ್ಞಾನವನರಸಲುಂಟೇ? ಎರಡಾಗಿರ್ದುದನೊಂದ ಮಾಡಬೇಕಲ್ಲದೆ ಒಂದಾಗಿರ್ದುದನೇನನು ಮಾಡಲಿಲ್ಲ! ಕೂಡಲಚನ್ನಸಂಗಯ್ಯನಲ್ಲಿ ನಿಸ್ಸೀಮ ಸಿದ್ಧರಾಮಯ್ಯದೇವರ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ, ಪ್ರಭುವೇ ||

೧೨

ಅಂಗದ ಮೇಲಣ ಲಿಂಗವೆಲ್ಲಿಯಾದಡೆಯೂ ಉಂಟು; ಪ್ರಾಣದ ಮೇಲಣ ಲಿಂಗ ವಪೂರ್ವ! ಅವರನೆ ಅರಸಿ ತೊಳಲಿ ಬಳಲುತ್ತಿದ್ದೆನಯ್ಯಾ, ಇದುಕಾರಣ, ಕೂಡಲಚನ್ನಸಂಗಯ್ಯಾ, ನಿಮ್ಮ ಶರಣರಿದ್ದಾರು; ಸಕೃತ್‌ಕಾಣಬಾರದು ||

೧೩

ಅಂಗಲಿಂಗಸಂಬಂಧವಾಗಬೇಕೆಂಬ ಭಂಗಿತರ ಮಾತು ಕೇಳಲಾಗದು, ಅಂಗ – ಲಿಂಗ ಸಂಬಂಧ ಕಾರಣವೇನು ಮನಲಿಂಗ ಸಂಬಂಧವಾಗದನ್ನಕ್ಕ? ಮನವು ಮಹದಲ್ಲಿ ನಿಂದ ಬಳಿಕ ಲಿಂಗಸಂಬಂಧವದೇನು ಹೇಳಾ ಕಲಿದೇವರದೇವಾ ||

೧೪

ಜ್ಞಾನದ ಉಬ್ಬುಕೊಬ್ಬಿನಲಿ ಉರಿಪುತಿರ್ದರೆಲ್ಲರು ನಾಮ ನಾಸ್ತಿಯಾಗದು, ತನುಗುಣ ನಾಸ್ತಿಯಾಗದು, ಕರಣಾದಿಗುಣಂಗಳು ನಾಸ್ತಿಯಾಗವು, ಕರಸ್ಥಲ ನಾಸ್ತಿಯಾಗದು! ಇದೆತ್ತಣ ಉಲುಹೋ ಗುಹೇಶ್ವರಾ ||

೧೫

ಅಂಗದ ಮೇಲೆ ಲಿಂಗವ ಕಟ್ಟಿ ಸುಳಿವಾತ ಜಂಗಮನಲ್ಲ; ಆ ಜಂಗಮಕ್ಕೆ ಮಾಡುವಾತ ಭಕ್ತನಲ್ಲ, ಉಭಯಕುಲವಳಿದು ಸುಳಿಯಬಲ್ಲಡಾತ ಜಂಗಮಹ ಆ ಜಂಗಮವದನುರಿದಡಗ ಬಲಲಡಾತ ಭಕ್ತ, ಇದುಕಾರಣ ಕೂಡಲಚನ್ನಸಂಗಯ್ಯಾ, ಇಂಥ ಭಕ್ತ ಜಂಗಮ ಅಪೂರ್ವ ||

೧೬

ಅರಿದು ಪೂಜಿಸಲಿಲ್ಲ, ಮರೆದು ನೆನೆಯಲಿಲ್ಲ, ತೆರಹಿಲ್ಲದ ಘನಕ್ಕೆ ಕುರುಹು ಮುನ್ನಿಲ್ಲ, ತನಗೆ ಗುರುವಿಲ್ಲ, ಗುರುವಿಂಗೆ ತಾನಿಲ್ಲ ಗುರುವಿಂಗೆ ಶಿಷ್ಯನು ತಾನು ಹೊಡೆವಡದ ಕಾರಣ, ಮುನ್ನಿಲ್ಲ ಬಯಲ ಬಿತ್ತಲೂ ಇಲ್ಲ, ಒಕ್ಕಲು ತೂರಲೂ ಇಲ್ಲ ಗುಹೇಶ್ವರಲಿಂಗಕ್ಕೆ ಕುರುಹು ಮುನ್ನಿಲ್ಲ ||

೧೭

ಅರಿವಿನ ಹೃದಯ ಕಣ್ದೆರೆಯಬೇಕೆಂದು ಗುರುವೆಂದು ಕಲ್ಪಿಸಿಕೊಂಡನಲ್ಲದೆ, ಗುರುವಿಂಗೆ ಶಿಷ್ಯನೆಂದುಂಟೆ? ಶಿಷ್ಯಂಗೆ ಗುರುವೆಂದುಂಟೆ? ಗಮನಾಗಮನ ನಾಸ್ತಿಯಾದ ಲಿಂಗಕ್ಕೆ ಅಂಗವೆಲ್ಲಿಯದೋ ಗುಹೇಶ್ವರಾ ||

೧೮

ಕೃತ್ರಿಮಕ್ಕೆ ಬಾರದ ಲಿಂಗವ ಕೃತ್ರಿಮಕ್ಕೆ ತಂದವರಾರೋ? ವಾಙ್ಮನಕಗೋಚರ ಲಿಂಗವ, ಬೊಟ್ಟಿಡಲೆಡೆದೆರಹಿಲ್ಲದ ಪರಿಪೂರ್ಣಲಿಂಗಪರಾಪರವ, ಈ ಗುರು ಕೊಟ್ಟ, ಶಿಷ್ಯ ಕೊಂಡನೆಂಬ ರಚ್ಚೆಯ ಭಂಡರ ನೋಡಾ, ಕೂಡಲಚನ್ನಸಂಗಮದೇವಾ ||

೧೯

ಅರಿಯಬಹುದು, ಕುರುಹಿಡಬಾರದು; ಭಾವಿಸಬಹುದು, ಬೆರೆಸಬಾರದು; ಕಾಣಬಹುದು, ಕೈಗೆ ಸಿಲಕದು ಅಖಂಡ ನಿರಾಳವ, ಕಪಿಲಸಿದ್ದಮಲ್ಲಿಕಾರ್ಜುನಾ, ನಿಮ್ಮ ಶರಣರು ಬಲ್ಲರು ||

೨೦

ಆಕಾರವಿಲ್ಲದ ನಿರಾಕಾರಲಿಂಗವ ಕೈಯಲ್ಲಿ ಹಿಡಿದು ಕೊರಳಲ್ಲಿ ಕಟ್ಟಿದೆವೆಂಬರು ನರಕಜೀವಿಗಳು, ಹರಿಬ್ರಹ್ಮರು, ವೇದಶಾಸ್ತ್ರಂಗಳು ಅರಸಿಕಾಣದ ಲಿಂಗ! ಭಕ್ತಿಗೆ ಫಲಪದಂಗಳಲ್ಲದೆ ಲಿಂಗವಿಲ್ಲ, ಕರ್ಮಕ್ಕೆ ನರಕವಲ್ಲದೆ ಲಿಂಗವಿಲ್ಲ, ಜ್ಞಾನ ಪರಿಭ್ರಮಣವಲ್ಲದೆ ಲಿಂಗವಿಲ್ಲ, ವೈರಾಗ್ಯಕ್ಕೆ ಮುಕ್ತಿಯಿಲ್ಲದೆ ಲಿಂಗವಿಲ್ಲ, ಇದುಕಾರಣ, ಅದ್ವೈತದಿಂದ ತನ್ನ ತಾನರಿದು, ತಾನಾದಡೆ, ಚನ್ನಮಲ್ಲಿಕರ್ಜುನಲಿಂಗ, ತಾನೆ, ಬೇರಿಲ್ಲ ||

ಇಂತು ಇಷ್ಟಲಿಂಗಭ್ರಾಂತಿನಿರಸನಸ್ಥಲ ಸಮಾಪ್ತ ||

೪೭. ಇಷ್ಟಲಿಂಗವಿಯೋಗಭ್ರಾಂತಿ ನಿರಸನ ಸ್ಥಲ

ಇಂತಪ್ಪ ಇಷ್ಟಲಿಂಗ ಭ್ರಾಂತಿ ನಿರಸನವ ಮಾಡಿ, ಹಿಡವಡೆ ಸಿಕ್ಕದೆ, ಬಿಡುವಡೆ ಹೋಗದೆ, ಕಡೆಮೊದಲೆಡೆದೆರಹಿಲ್ಲದ ಅಖಂಡ ಪರಿಪೂರ್ಣ ಮಹಾಘನಲಿಂಗವೇ ಪ್ರಾಣಲಿಂಗವೆಂದರಿದ ಬ್ರಹ್ಮಜ್ಞಾನಿಯಪ್ಪ ಮಹಾಘನ ಪ್ರಾಣಲಿಂಗಿಯ ಇಷ್ಟಲಿಂಗವಿಯೋಗಭ್ರಾಂತಿ ನಿರಸನ ಸ್ಥಲ ||

ಗ್ರಂಥ |

ಇಷ್ಟಲಿಂಗಂ ಪರಿಭ್ರಷ್ಟಂ ದಗ್ದಂ ಮಗ್ನಂ ಜಲೇsಪಿವಾ
ಅಷ್ಟೋತ್ತರಶತಂ ಜಪೇತ್‌ಪುನರ್ಲಿಂಗಂ ಚ ಧಾರಯೇತ್‌ ||  || ||

ಪರಿಣೀತ ಪ್ರಾಣಲಿಂಗೀನಾಂ ಲಿಂಗಂ ಪ್ರಾಣವದುತ್ತಮಂ
ಸ್ವಯಮಾತ್ಮಹತಿಂ ಕೂರ್ಯಾನ್ನರಕೇ ಕಾಲಮಕ್ಷಯಂ ||  || ||

ಪಾಣಿನಾ ಧಾರ್ಯತೇ ಲಿಂಗಂ ಪ್ರಾಣಸ್ಥಾನೇ ತು ನಿಕ್ಷಿಪೇತ್‌
ತತ್ರ ಭೇದಂ ನ ಜಾನಾತಿ ನ ಚ ಲಿಂಗಂ ನಚಾರ್ಚನಂ ||  || ||

ಪ್ರಾಣಲಿಂಗಂ ಮನೋಗ್ರಾಹ್ಯಂ ಭವೇತ್‌ಸಕಲ ನಿಷ್ಕಲಂ
ತತ್ಪ್ರ್‌ಣೇಷ್ವಂತರ್ಮನಸಿ ಲಿಂಗಮಾಹುರಿತಿ ಸ್ಮೃತಿಃ ||  || ||

ಅದೃಷ್ಟೇ ಭಾವನಾ ನಾಸ್ತಿ ಯುದ್ದೃಷ್ಟಂ ತದ್ವಿನಶ್ಯತಿ
ದೃಶ್ಯಾದೃಶ್ಯರೂಪತ್ವೇ ತಥಾ ಸೇವಾಂ ಸಮಭ್ಯಸೇತ್‌ ||  || ||

ವಚನ |

ಅರಿವೆಂಬ ಗುರುವಿನ ಕೈಯಲ್ಲಿ ವಿರಕ್ತಿಯೆಂಬ ಶಿವದಾರಮಂ ಕೊಟ್ಟು, ಸಮತೆಯೆಂಬ ಸಜ್ಜೆಯಂ ಪೋಣಿಸಿ ನಿರಾಳವೆಂಬ ಲಿಂಗಸಾಹಿತ್ಯವ ಬಿಜಯಂಗೈಸಿಕೊಂಡು ಸರ್ವಜೀವದಯಾಪರವೆಂಬ ಲಿಂಗಾರ್ಚನೆಯಂ ಮಾಡುವ ಭಕ್ತನ ಕರದಾಧಾರ ಲಿಂಗವು ತಪ್ಪಿ ಆಧಾರ, ಸ್ಥಾಪ್ಯವಾದಡೇನು ಶಂಕೆಗೊಳ್ಳಲಿಲ್ಲ, ತೆಗೆದುಕೊಂಡು ಮಜ್ಜನಕ್ಕೆರೆವುದೆ ಸದಾಚಾರ ಶ್ರೀಗುರು ಷಟ್‌ಸ್ಥಲವನು ಅಂತರಂಗದಲ್ಲಿ ನಿಕ್ಷೇಪಿಸಿದನಾಗಿ, ದೃಶ್ಯಕ್ಕೆ ತ್ಯಾಗವಲ್ಲದೆ ಅದೃಶ್ಯಕ್ಕೆ ತ್ಯಾಗವುಂಟೆ? ಇಲ್ಲ, ಉಂಟೆಂದನಾದಡೆ ಗುರುದ್ರೋಹಿ ಆ ಭಕ್ತನಂತಹನಿಂತಹನೆಂದು ದೂಷಿಸಿ ನುಡಿದವರಿಗೆ ಅಘೋರ ನರಕ ತಪ್ಪದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ||

ಪೃಥ್ವಿಯ ಮೇಲಣ ಕಣಿಯ ತಂದು ಅಷ್ಟತನುವಿನ ಕೈಯಲ್ಲಿ ಕೊಟ್ಟು ಮುಟ್ಟಿ ಪೂಜಿಸಬೇಕೆಂಬರು ಮೂವರಿಗೆ ಹುಟ್ಟಿದಾತನನೆಂತು ಪೂಜಿಸುವೆನು? ಭೂಮಿಗೆ ಹುಟ್ಟಿ ಶಿಲೆಯಾಯಿತ್ತು; ಕಲ್ಲುಕುಟ್ಟಿಗ ಮುಟ್ಟಿ ರೂಪಾಯಿತ್ತು; ಗುರು ಮುಟ್ಟಿ ಲಿಂಗವಾಯಿತ್ತು. ಇದು ಬಿದ್ದಿತೆಂದು ಸಮಾಧಿಯ ಹೊಕ್ಕೆಹೆವೆಂಬರು, ಎತ್ತಿಕೊಂಡು ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದೇ ವ್ರತವು; ಕಟ್ಟುವ ಠಾವನು, ಮುಟ್ಟುವ ಭೇದವನು, ಕೂಡಲಚನ್ನಸಂಗಯ್ಯಾ, ನಿಮ್ಮ ಶರಣನೆ ಬಲ್ಲ ||

ಸೃಷ್ಟಿಯ ಮೇಲಣ ಶಿಲೆಯ ತಂದು ಅಷ್ಟತನುವಿನ ಕೈಯಲ್ಲಿ ಕೊಡಲು, ಅಷ್ಟತನುವಿನ ಕೈಯ ತಪ್ಪಿ, ಸೃಷ್ಟಿಯ ಮೇಲೆ ಬಿದ್ದಡೆ, ಕೆಟ್ಟನನಾಚಾರಿಯೆಂದು ಮುಟ್ಟಲಮ್ಮರು, ನೋಡಾ! ಮುಟ್ಟಿದ ಕಾಯವ ಬಿಚ್ಚದ ಪ್ರಾಣವ ಕಷ್ಟಜೀವಿಗಳೆತ್ತ ಬಲ್ಲರು, ಕೂಡಲಚನ್ನ ಸಂಗಮದೇವಾ ||

ಅಂಗದೊಳಗೆ ಮಹಾಲಿಂಗವಿರಲು, ಕೈಯ ಲಿಂಗ ಬಿದ್ದಿತೆಂದು ನೆಲದೊಳಗಂಗವ ಹೂಳುವರು! ಭಂಗಬಡುವವರಲ್ಲ! ಗುಹೇಶ್ವರ ಲಿಂಗವರಿಯದ ಜಡರೆತ್ತ ಬಲ್ಲರು? ||

ತೆರಹಿಲ್ಲದ ಮಹಾಘನ ಪರಿಪೂರ್ಣಲಿಂಗವು ಭರಿತನೆಂದೇ ಭಾವಿಸಿ ಪೂಜಿಸಿ ಮರಳಿ ಬಿದ್ದಿತು, ಕೆಡೆಯಿತ್ತೆಂಬ ಅಜಞಾನನ ನೋಡಾ! ತೆರಹಿಲ್ಲದ ಮಹಾಘನ ಪರಿಪೂರ್ಣ ಲಿಂಗವು ಬೀಳಲಿಕೆ ತೆರಹುಂಟೇ? ಅರಿಯರರಿಯರು ಪ್ರಾಣಲಿಂಗದ ನೆಲೆಯನು ಅರಿಯದೆ ಅಜ್ಞಾನದಲ್ಲಿ ಕುರುಹು ಬಿದ್ದಿತೆಂದು ಪ್ರಾಣಘಾತವ ಮಾಡಿಕೊಂಡು ಸಾವ ಅಜ್ಞಾನಿಗಳ ನೋಡಾ! ಅರಿದು ಕೂಡಿ ಸ್ವಯವಾಗಿರ್ದ ಲಿಂಗವು ಓಸರಿಸಿತೆಂದು, ಆ ಲಿಂಗದೊಡನೆ ಸಾವ ಅಜ್ಞಾನಿಗಳಿಗೆ ಅಘೋರ ನರಕ ತಪ್ಪದು ಕಾಣಾ, ಕೂಡಲಚನ್ನಸಂಗಮದೇವಾ ||

ಶ್ರೀ ಗುರುಲಿಂಗದೇವರು ತಮ್ಮ ಹಸ್ತವ ತಂದು ಎನ್ನ ಮಸ್ತಕದ ಮೇಲಿರಿಸಿದಾಗಲೆ ಎನ್ನ ಭವಂ ನಾಸ್ತಿಯಾಯಿತು! ಎನ್ನ ತನ್ನಂತೆ ಮಾಡಿದ; ಎನಗೆ ತೆರಹಿಲ್ಲದಂತೆ ಮಾಡಿತೋರಿದನು ನೋಡಾ! ತನ್ನ ಕರಸ್ಥಲದಲ್ಲಿದ್ದ ಮಹಾಘನಲಿಂಗವನು ಎನ್ನ ಕರಸ್ಥಲದಲ್ಲಿ ಮೂರ್ತಿಗೊಳಿಸಿದ, ಎನ್ನ ಕರಸ್ಥಲದಲ್ಲಿದ್ದ ಮಹಾಲಿಂಗವನು ಎನ್ನ ಮನಸ್ಥಲದಲ್ಲಿ ಮೂರ್ತಿಗೊಳಿಸಿದ, ಎನ್ನ ಮನಸ್ಥಲದಲ್ಲಿದ್ದ ಮಹಾಘನಲಿಂಗವನು ಎನ್ನ ಭಾವಸ್ಥಲದಲ್ಲಿ ಮೂರ್ತಿಗೊಳಿಸಿದನು. ಎನ್ನ ಭಾವಸ್ಥಲದಲ್ಲಿದ್ದ ಮಹಾಘನಲಿಂಗವನು ಎನ್ನ ಜ್ಞಾನಸ್ಥಲದಲ್ಲಿ ಮೂರ್ತಿಗೊಳಿಸಿದನು, ಎನ್ನ ಜ್ಞಾನಸ್ಥಲದಲ್ಲಿದ್ದ ಮಹಾಘನಲಿಂಗವನು ಎನ್ನ ಸರ್ವಾಂಗ ದೊಳಹೊರಗೆ ತೆರಹಿಲ್ಲದಳವಡಿಸಿಕೊಂಡ ಬಳಿಕ, ಕಬ್ಬು ಮೆದ್ದು, ತೆರನಿಸವ ನುಂಡು, ಹಿಪ್ಪೆಯನುಗುಳುವಂತೆ, ಮೈಯ ಮೇಲಣ ಪಾಷಾಣ ಹೋಯಿತ್ತೆಂದು ಆತ್ಮಘಾತ ಮಾಡಿ ಕೊಂಬ ಬ್ರಹ್ಮೇತಿ ಸೂನಗಾರರನೆನಗೆ ತೋರಿದಿರಾ ಚನ್ನಮಲ್ಲಿಕಾರ್ಜುನಾ ||

ತೆರಹಿಲ್ಲದ ಘನವು ಭಿನ್ನವಾಯಿತ್ತೆಂದು ತನುವಿನ ಮೇಲೆ ಶಸ್ತ್ರವನಿಕ್ಕಿಕೊಂಬ ಶಿವ ದ್ರೋಹಿಯ ಮುಖವ ನೋಡಲಾಗದು, ಕಲುಕುಟಿಗೆ ಮುಟ್ಟಿ ಚಕ್ಕೇಳುವಲ್ಲಿ, ಪ್ರಾಣಲಿಂಗ ಭಿನ್ನವಾಯಿತ್ತೇ? ಭಾವಲಿಂಗ ಭಿನ್ನವಾಯಿತೇ ಪೂಜಾಲಿಂಗ ಭಿನ್ನವಾಯಿತ್ತಲ್ಲದೆ? ಇಂತೀ ನಿರಾಳದ ನೆಲೆಯ ಸೋಂಕನಾರೂ ಅರಿಯರಾಗಿ, ಇಷ್ಟಲಿಂಗ ಸಂಬಂಧಿಗಳ ಕಷ್ಟವ ನೋಡಾ, ಕೂಡಲಚನ್ನಸಂಗಮದೇವಾ ||

ಪ್ರತಿಯಿಲ್ಲದಪ್ರತಿಮಲಿಂಗವು ಭಿನ್ನವಾಯಿತ್ತೆಂದು ತನುವಿನ ಮೇಲೆ ಶಸ್ತ್ರದಲ್ಲಿ ಘಾತಿಸಿ ಕೊಂಬ ಆತ್ಮದ್ರೋಹಿಯ ಮುಖವ ನೋಡಲಾಗದು ಅದೆಂತೆಂದಡೆ : ಪರಿಣೀತ ಪ್ರಾಣ ಲಿಂಗೀನಾಂ ಲಿಂಗಂ ಪ್ರಾಣವದುತ್ತಮಂ| ಸ್ವಯಾಮಾತ್ಮ ಹತಿಂ ಕೂರ್ಯಾನ್ನರಕೇ ಕಾಲ ಮಕ್ಷಯಂ || ಇಂತೆಂದುದಾಗಿ, ಮಂತ್ರ ಭಿನ್ನವಿಲ್ಲವಾಗಿ ಪೂಜೆ ಭಿನ್ನವಿಲ್ಲ, ಪೂಜೆ ಭಿನ್ನವಿಲ್ಲವಾಗಿ ವೇಧ ಭಿನ್ನವಿಲ್ಲ, ವೇಧ ಭಿನ್ನವಿಲ್ಲದೆಯಿಪ್ಪ ಮಹಾಬಯಲ ಕೂಡಿಹ ಪ್ರಾಣ ಲಿಂಗದ ಸಂಚವನರಿಯರಾಗಿ, ಕೂಡಲಚನ್ನಸಂಗಮದೇವರಲ್ಲಿ ಅವರಿಗೆ ಗುರೂಪದೇಶವು ತಪ್ಪಿ ಅಘೋರ ನರಕಕ್ಕಿಳಿವರು ||

ಪರುಷದ ಲಿಂಗವಿದ್ದುದ ಕಾಣಲರಿಯದೆ, ಇಷ್ಟಲಿಂಗ ಬಿದ್ದಿತೆಂದು ತನುವಿನ ಮೇಲೆ ಶಸ್ತ್ರವ ಹಾಯ್ಕಿಕೊಂಬರು ಅರಿದರಿದು! ಗುರುಶಿಷ್ಯ ಸಂಬಂಧ ಅರಿವುಳ್ಳವರಿಗಲ್ಲದೆ ಮತ್ತಾರಿಗೆಯೂ ಅಳವಡದು, ಅರುವು ಘನವೋ, ಕುರುಹು ಘನವೋ, ಅರಿವುಳ್ಳವರು ನೀವು ಹೇಳಿರೆ! ಮರಹು ಬಂದುದೆಂದು, ಗುರು ಕುರುಹ ತೋರಿದನಲ್ಲದೆ ಅರಿವ ಮರೆವಡೆ ಕೂಡಲಚನ್ನಸಂಗಯ್ಯಂಗೆ ಅವರೆಂದೂ ದೂರ ||

೧೦

ತೆರಹಿಲ್ಲದ ಲಿಂಗ ಭರಿತವೆಂದು ನಾಮವಿಡಿದು ಪೂಜಿಸಿ ಮರಳಿ ಬಿದ್ದಿತೆಂಬ ನಾಚಿಕೆಯ ನೋಡಾ, ಅರಿಯರರಿಯರು ಪ್ರಾಣಲಿಂಗದ ನೆಲೆಯನು, ಅರಿದು ಕುರುಹಿಂಗೆ ವೇಳೆಯ ಮಾಡುವರು ಮತಿಭ್ರಷ್ಟರು, ಅರಿದರಿದು ! ಸ್ವಯವಾದ ಲಿಂಗ ಓಸರಿಸಿತೆಂದು ಒಡನೆ ಸಾವ ವ್ರತಗೇಟಿಗಳ ನೊಲ್ಲೆ, ಕೂಡಲಚನ್ನಸಂಗಮದೇವಾ ||

೧೧

ಅಂಗದ ಮೇಲಣ ಲಿಂಗ ಹಿಂಗಿತ್ತೆಂದು ಆತ್ಮಘಾತವ ಮಾಡಿಕೊಂಬ ಅಜ್ಞಾನಿಗಳು ಅಂಗವಾವುದು, ಲಿಂಗವಾವುದೆಂಬುದನವರೆತ್ತ ಬಲ್ಲರು? ಅಂಗವೇ ಆತ್ಮನು, ಲಿಂಗವೇ ಸಂವಿತ್ತು, ಈ ಎರಡರ ಸಂಬಂಧ ತಿಳಿಯದೆ ಅಂಗದ ಲಿಂಗ ಹಿಂಗಿತೆಂಬವರಿಗೆ ಪ್ರಾಣಲಿಂಗ ನಾಸ್ತಿ; ಪ್ರಸಾದವಿನ್ನೆಲ್ಲಿಯದೋ ಕೂಡಲಚನ್ನಸಂಗಮದೇವಾ ||

೧೨

ದೇವರು ಬಿದ್ದರು, ದೇವರು ಬಿದ್ದರೆಂದು ಸಾಹಿತ್ಯದ ಕೂಡೆ ಸಾಯಬೇಕೆಂಬರು, ಆವಾಗ ಬಿದ್ದಿತ್ತು, ಆವಾಗ ಬಿದ್ದಿತೆಂದರಿಯರು ; ಆವಾಗಳಿದ್ದಿತ್ತು, ಆವಾಗ ಬಿದ್ದಿತ್ತು, ಎಂಬುದು ಬಲ್ಲಡೆ, ನೀವು ಹೇಳಿರೇ! ಅದೆಂತೆಂದಡೆ : ಅವೃಶ್ಯೇ ಭಾವನಾ ನಾಸ್ತಿ, ದೃಶ್ಯಮೇವ ವಿನಸ್ಯತಿ! ಅವರ್ಣಮಕ್ಷರಂ ಬ್ರಹ್ಮ ಧ್ಯಾಯಂತಿ ಯೋಗಿನಃ || ಎಂಬುದಾಗಿ, ಕೂಡಲ ಚನ್ನಸಂಗಯ್ಯ ಅರಿದಾಗಳಿದ್ದಿತ್ತು, ಮರೆದಾಗ ಬಿದ್ದಿತ್ತು ||

೧೨

ಅರಿದಾಗಳಿದ್ದಿತ್ತು, ಮರೆದಾಗ ಬಿದ್ದಿತ್ತು, ಅರಿವು ಮರೆವೆಯ ತಿಳಿದು ಕರಿಗೊಂಡ ಗವರೇಶ್ವರನ ಲಿಂಗಕ್ಕೆ ಅರಿವೆ ಅರ್ಪಿತ ! ಮರೆವೆ ಅನರ್ಪಿತ ! ಮೊರನ ಹೊಲಿವ ಗವರೆ ನಾನೆತ್ತ ಬಲ್ಲೆ ||

೧೪

ಕಟ್ಟಿದಾತ ಭಕ್ತನಪ್ಪನೇ ಕೆಡಹಿದಾತ ದ್ರೋಹಿಯಪ್ಪನೆ? ಲಿಂಗವ ಕಟ್ಟಲಿಕ್ಕೆ ತನ್ನ ಕೈಯೊಳಪ್ಪುದೇ? ಕೆಡಹಲಿಕ್ಕೆ ಬೀಳಬಲ್ಲುದೇ? ಆ ಲಿಂಗ ಬಿದ್ದ ಬಳಿಕ ಜಗತ್ತುಳಿಯ ಬಲ್ಲುದೇ? ಪ್ರಾಣಲಿಂಗ ಬಿದ್ದ ಬಳಿಕ ಪ್ರಾಣ ಉಳಿಯಬಲ್ಲುದೇ? ಲಿಂಗ ಬಿದ್ದಿತ್ತೆಂಬುದು ಸೂತಕ ಶಬ್ದ ! ಭ್ರಾಂತುವಿನ ಪುಂಜ! ಅಂತದ ಕೇಳಲಾಗದು! ಯುಗಜುಗಂಗಳು ಗತವಹಲ್ಲದೆ ಲಿಂಗಕ್ಕೆ ಗತವುಂಟೆ? ಲಿಂಗವು ಬಿದ್ದಿತೆಂದು ನಿಂದಿಸಿ ನುಡಿವ ದ್ರೋಹಿಯ ಮಾತ ಕೇಳಲಾಗದು ಕಾಣಾ, ಗುಹೇಶ್ವರಾ ||

೧೫

ವ್ರತಗೇಡಿ, ವ್ರತಗೇಡಿ, ಎಂಬರು ವ್ರತಗೆಡಲೇನು ಹಾಲಂಬಿಲವೆ? ವ್ರತ ಕರಿದೊ? ಬಿಳಿದೋ? ಕಟ್ಟಿದಾತ ಭಕ್ತನಪ್ಪನೇ? ಕೆಡಹಿದಾತ ವೈರಿಯಪ್ಪನೇ? ಕಟ್ಟುದಕ್ಕೆ ಲಿಂಗ ಒಳಗಾಗ ಬಲ್ಲದೇ? ಕೆಡಹುವುದಕ್ಕೆ ಲಿಂಗವು ಬೀಳಬಲ್ಲುದೆ? ಲಿಂಗ ಬಿದ್ದಡೆ ಭೂಮಿಯಾನು ಬಲ್ಲುದೆ? ಲಿಂಗ ಬಿದ್ದಡೆ ಲೋಕಾದಿಲೋಕಂಗಳುಳಿಯಬಲ್ಲುವೇ? ಪ್ರಾಣಲಿಂಗ ಬಿದ್ದಿತೆಂಬ ದೂಷಕರ ನುಡಿಯ ಕೇಳಲಾಗದು, ಗುಹೇಶ್ವರಾ ||

೧೬

ಅಂಗದ ಮೇಲಣ ಲಿಂಗ ಹಿಂಗಲಾಗದೆಂಬರು, ಅಂಗ ಲಿಂಗ ಸಂಬಂಧವಾದಲ್ಲಿ ಫಲವೇನು? ಮನ ಲಿಂಗ ಸಂಬಂಧಿಯಾಗದನ್ನಕ್ಕ? ಕೂಡಲಚನ್ನಸಂಗಯ್ಯ, ಮನದಿಂದಲೇನೂ ಘನವಿಲ್ಲ ||

೧೭

ಅಂಗದೊಳಗಿಪ್ಪುದು ಲಿಂಗವಲ್ಲ; ಅಂಗದ ಹೊರಗಿಪ್ಪುದು ಲಿಂಗವಲ್ಲ ಎಲ್ಲ ಅಂಗಗಳ ನೊಳಕೊಂಡಿಪ್ಪ ಲಿಂಗ ಹೋಗುತ್ತ ಬರುತ್ತ ಇಹುದಲ್ಲ! ಚಲನೆಯಿಲ್ಲದ ಅಚಲವಪ್ಪ ಲಿಂಗಕ್ಕೆ ಹೋಯಿತ್ತು, ಇದ್ದಿತೆಂಬ ಸಂದೇಹವಿಲ್ಲೆಂದನಂಬಿಗಚೌಡಯ್ಯ ||

೧೮

ಇಷ್ಟಲಿಂಗವ ಕೊಂಡು ಬಂದಿತೆಂದು ಮುಟ್ಟಲಾಗದಿನ್ನು ಕೆಟ್ಟವೆಂಬ ಪಾಪಿಗಳು, ನೀವು ಕೇಳಿರಿ! ಇಷ್ಟಲಿಂಗ ಪ್ರಾಣಲಿಂಗದಂತವನಾರು ಬಲ್ಲರು? ಹೃದಯ ಕಮಲ ಭೂಮಧ್ಯದಲ್ಲಿ ಸ್ವಯಂಜ್ಯೋತಿಷ್ಪ್ರಕಾಶ, ಆದಿ ಮಧ್ಯಸ್ಥಾಮದಲ್ಲಿ ಚಿನ್ಮಯ ಚಿದ್ರೂಪವಾಗಿಪ್ಪ ಮಹಾಘನವ ಬಲ್ಲ ಮಹಾಶರಣನ ಪರಿ ಬೇರೆ? ಇಷ್ಟಲಿಂಗ ಹೋದ ಬಟ್ಟೆಯ ಹೊಗಲಾಗದು; ಈ ಕಷ್ಟದ ನುಡಿ ಕೇಳಲಾಗದು, ಕೆಟ್ಟಿತ್ತು ಜ್ಯೋತಿಯ ಬೆಳಗು! ಅಟ್ಟಟ್ಟಿಕೆಯ ಮಾತಿನಲ್ಲಿರುವದೇನೋ ! ಆಲಿ ನುಂಗಿದ ನೋಟದಂತೆ, ಪುಷ್ಪ ನುಂಗಿದ ಪರಿಮಳದಂತೆ ಜಲವ ನುಂಗಿದ ಮುತ್ತಿನಂತೆ, ಅಪ್ಪುವಿನೊಳಗಿಪ್ಪ ಉಪ್ಪಿನಂತೆ, ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶ್ಯಬ್ಧದಂತೆ, ಬಯಲು ನುಂಗಿದ ಬ್ರಹ್ಮದಂತೆ ಇಂತಪ್ಪ ಮಹಾಘನ ತೇಜೋಮೂರ್ತಿಯ ಬಲ ಮಹಾಶರಣರ ಕಾಣಾ, ಶುದ್ಧ, ಸಿದ್ಧ ಪ್ರಸನ್ನ ಪ್ರಭುವೇ, ಶಾಂತಚನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಧರ್ಮ!ನಿಮ್ಮ ಧರ್ಮ!ನಿಮ್ಮ ಧರ್ಮ ||

ಇಂತು ಇಷ್ಟಲಿಂಗವಿಯೋಗಭ್ರಾಂತಿ ನಿರಸನಸ್ಥಲ ಸಮಾಪ್ತ ||

೪೮. ಬಾಹ್ಯಾಭ್ಯಂತರ ಲಿಂಗಸ್ಥಲ

ಇಂತಪ್ಪ ಇಷ್ಟಲಿಂಗವಿಯೋಗಭ್ರಾಂತಿ ನಿರಸನವ ಮಾಡಿ ಒಳಹೊರಗೆ ತೆರಹಿಲ್ಲದೆ ಸರ್ವಾಂಗದಲ್ಲಿ ಲಿಂಗಪರಿಪೂರ್ಣವೆಂದರಿದ ಬ್ರಹ್ಮಜ್ಞಾನಿಯಪ್ಪ ಮಹಾಘನ ಪ್ರಾಣಲಿಂಗಿ ಯಬಾಹ್ಯಾಂತರ ಲಿಂಗಸ್ಥಲ ||

ಗ್ರಂಥ |

ಲಿಂಗಮಾಭ್ಯಂತರಂ ಬಾಹ್ಯಂ ಲಿಂಗಂ ಸವ್ಯಾಪಸವ್ಯಗಂ
ಅಗ್ರತಃ ಪೃಷ್ಠತೋ ಲಿಂಗಮಧಸ್ತಾದೂಧ್ವಸಂಸ್ಥಿತಂ ||  || ೧ ||

ಸ್ಥೂಲಂ ಸೂಕ್ಷ್ಮಂ ಪರಂ ಲಿಂಗಂ ಲಿಂಗಂ ಪ್ರಾಣಸ್ವರೂಪಕಂ
ಸರ್ವಾಂಗಲಿಂಗಂ ಸಂಪೂರ್ಣಮಿತಿ ಜ್ಞಾತ್ವಾಸುಖೀಭವ ||  || ೨ ||

ಸ್ಥೂಲಂ ಬಾಹ್ಯಮಿತಿ ಪ್ರೋಕ್ತಂ ಸೂಕ್ಷ್ಮಮಾಭ್ಯಂತರಂ ಸ್ಮೃತಂ
ಸಬಾಹ್ಯಾಭ್ಯಂತರಂ ಯತ್ತತ್ಪರಮಿತ್ಯಭಿದಿಯತೇ ||  || ೩ ||

ವಾಚಾತೀತಂ ಮನೋತೀತಂ ಭಾವಾತೀತಂ ನಿರಂಜನಂ
ಅವರ್ಣಮಕ್ಷರಂ ಬ್ರಹ್ಮ ನಿತ್ಯಂ ಧ್ಯಾಯಂತಿ ಯೋಗಿನಃ ||  || ೪ ||

ಆತ್ಮ ಜ್ಯೋತಿರ್ಮನೋತಿಜ್ಯೋರ್ತೀಶ್ಚಕ್ಷುಶ್ಚ ಪಶ್ವತಿ
ಸಬಾಹ್ಯಾಭ್ಯಂತರಂ ಜ್ಯೋತಿಸ್ತಜ್ಜ್ಯೋತಿಶ್ಶಿವ ಉಚ್ಯತೇ ||  || ೫ ||

ವಚನ |

ಲಿಂಗ ಒಳಗೋ ಹೊರಗೋ? ಬಲ್ಲಡೆ, ನೀವು ಹೇಳಿರೇ? ಲಿಂಗ ಎಡನೋ ಬಲನೋ? ಬಲ್ಲಡೆ, ನೀವು ಹೇಳಿರೇ? ಲಿಂಗ ಹಿಂದೋ ಮುಂದೋ? ಬಲ್ಲಡೆ ನೀವು ಹೇಳಿರೇ? ಲಿಂಗ ಸ್ಥೂಲವೋ ಸೂಕ್ಷ್ಮವೋ? ಬಲ್ಲಡೆ, ನೀವು ಹೇಳಿರೆ? ಲಿಂಗ ಪ್ರಾಣವೋ ಪ್ರಾಣ ಲಿಂಗವೋ? ಬಲ್ಲಡೆ, ನೀವು ಹೇಳಿರೆ ಗುಹೇಶ್ವರನ ||

ಒಳಗಿದ್ದಾನೆಂಬೆನೇ? ಹೊರಗೆಲ್ಲ ತಾನೆ ನೋಡಾ, ಹೊರಗಿದ್ದನೆಂಬೆನೇ? ಒಳಗೆಲ್ಲ ತಾನೆ ನೋಡಾ, ಒಳಗೆ ಹೊರಗೆ ಸರ್ವಾಂಗದಲ್ಲಿ ಸನ್ನಹಿತನಾಗಿರ್ದ ಸಮರಸಮಹಿಮನ ತಿಳಿದು ನೋಡಾ! ಅಗಲಲಿಲ್ಲದ ಘನವನಗಲಿದೆನೆಂಬ ಮಾತು ಶಿವಶರಣರ ಮನಕ್ಕೆ ಬಹುದೇ? ತೆರಹಿಲ್ಲದ ಘನವು ಕಲಿದೇವಯ್ಯನು ಕರಸ್ಥಲದೊಳಗೈದಾನೆ ಕಾಣಾ, ಚೆನ್ನಬಸವಣ್ಣಾ ||

ಸಕಲವನು ಪೂಜಿಸಿಹೆನೆಂಬ ಪೂಜಕಂಗೆ ಸಕಲವನು ಲಿಂಗದಲ್ಲಿಯೆ ಪೂಜಿಸುವುದು, ನಿಃಕಲವ ಪೂಜಿಸಿಹೆನೆಂಬ ಪೂಜಕಂಗೆ ನಿಃಕಲವನು ಲಿಂಗದಲ್ಲಿಯೆ ಪೂಜಿಸುವುದು ಅದೆಂತೆಂದಡೆ : ಸಕಲ ನಿಃಕಲಾತ್ಮಕ ಲಿಂಗವು ಸಕಲ ನಿಃಕಲಾತೀತ ಲಿಂಗವು ಅಂತು ಲಿಂಗಾರ್ಚನೆಯಿಂದ ಪರವೊಂದೂ ಇಲ್ಲವಾಗಿ, ಒಳಗು ಹೊರಗೆಂಬ ಭಾವವಳಿದುಳಿದ ಶರಣನು ಅಂತರಂಗ ಬಹಿರಂಗದಲ್ಲಿ ಭರಿತನು! ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ||

ಅಂತರಂಗದಲ್ಲಿ ಅವರಿಸಿ ಬಹಿರಂಗದಲ್ಲಿ ತೋರುವೆ, ಕಂಗಳ ಕೊನೆಯಲ್ಲಿ ಮೂರ್ತಿಯಾಗಿ ಮನದ ಕೊನೆಯಲ್ಲಿ ತೊಳಲುವೆ, ಎನ್ನ ಬ್ರಹ್ಮರಂಧ್ರದಲ್ಲಿ ತೊಳ ತೊಳಗಿ ಬೆಳಗುತಿಪ್ಪ ಪರಂಜ್ಯೋತಿ ನೀನೆ, ಉರಿಲಿಂಗದೇವಾ ||

ಮನವ ಮಂಚವ ಮಾಡಿ ತನುವ ಪಚ್ಚಡಿಸುವೆ, ಬಾರಯ್ಯಾ! ಎನ್ನ ಅಂತರಂಗದೊಳಿಪ್ಪೆ, ಬಾರಯ್ಯಾ! ಎನ್ನ ಬಹಿರಂಗದೊಳಿಪ್ಪೆ, ಬಾರಯ್ಯಾ! ‘ಓಂ ನಮಃ ಶಿವಾಯ’ ಎಂದು ಕರೆವೆನು ಉಳಿಯುಮೇಶ್ವರಾ ||

ಎನ್ನ ತನುಮನವೆಂಬೆರಡನೂ ಗುರು ಕಳೆದು ಏಕವ ಮಾಡಿದನಾಗಿ, ಎನ್ನ ಅಂತರಂಗ ಬಹಿರಂಗವೆಂಬೆರಡೂ ನಿಮ್ಮವು ನೋಡಾ! ನಿಮ್ಮ ಅಂತರಂಗದೊಳೆ ನಿಮ್ಮನೆ ಇಂಬಿಟ್ಟುಕೊಂಬೆ; ನಿಮ್ಮ ಬಹಿರಂಗದೊಳಗೆ ನಿಮ್ಮ ನೀವಾಗಿ ಪೂಜಿಸುವೆ, ನಿಮ್ಮ ಅರಿವಿನಿಂದ ನಿಮ್ಮನೇ ಅರಿವೆ ಕಾಣಾ, ಕೂಡಲಸಂಗಮದೇವಾ ||

ಹೊರಗಿದ್ದಾನೆಂದು ನಾನು ಮರೆದು ಮಾತಾಡಿದೆ, ಅರಿಯಲೀಯದೆ ಎನ್ನ ಅಂತರಂಗದೊಳಿಪ್ಪ, ತೆರಹಿಲ್ಲದಭವನು ಮರಹಿಂಗೆಡೆಗುಡನವ್ವಾ! ಮರೆದಡೆಚ್ಚರಿಸುವನು ಕುರುಹಿಲ್ಲದ ನಲ್ಲನು; ಅರಿದಡೊಳ್ಳಿದ ನಮ್ಮ ಶಂಭುಜಕ್ಕೇಶ್ವರಾ ||

ನಲ್ಲನ ರೂಪೆನ್ನ ನೇತ್ರ ತುಂಬಿತ್ತು, ನಲ್ಲನ ನುಡಿಯೆನ್ನ ಶ್ರೋತ್ರ ತುಂಬಿತ್ತು, ನಲ್ಲನ ಸುಗಂಧವೆನ್ನ ನಾಸಿಕ ತುಂಬಿತ್ತು, ನಲ್ಲನ ಚುಂಬನವೆನ್ನ ಜಿಹ್ವೆ ತುಂಬಿತ್ತು, ನಲ್ಲನ ಆಲಿಂಗನವೆನ್ನ ಸರ್ವಾಂಗ ತುಂಬಿತ್ತು, ನಲ್ಲನ ಪ್ರೇಮವೆನ್ನ ಮನ ತುಂಬಿತ್ತು, ನಲ್ಲನ ಅಂತರಂಗ ಬಹಿರಂಗದಲ್ಲಿ ನೆರೆದು ಸುಖಿಯಾದೆ ಉರಿಲಿಂಗದೇವನ ||

ಅಂಗದ ಮೇಲೆ ಲಿಂಗಸಂಬಂಧವಾದ ಬಳಿಕ ಪ್ರಾಣನ ಮೇಲೆ ಜಞಾನ ನಿರ್ಧರವಾಯಿತ್ತು, ನೋಡಾ! ಒಳಗು ಹೊರಗು ಎಂಬುಭಯವು ಏಕಾರ್ಥವಾಯಿತ್ತು ! ಗುಹೇಶ್ವರ, ನಿಮ್ಮ ನೆರೆವೆನಾಗಿ ||

೧೦

ಜ್ಞಾನವೇ ಪ್ರಸಾದಕಾಯ, ಜ್ಞೇಯವೇ ಚಿನ್ಮಯಲಿಂಗ, ಜ್ಞಾತ್ರ ಜ್ಞಾನ ಜ್ಞೇಯ ಸಂಪುಟದಿಂದ ಶರಣನೆನಿಸಿಕೊಂಡ, ಜಂಗಮದ ಅಂತರಂಗ ಬಹಿರಂಗದಲ್ಲಿ ನೀನೆ! ಎಂತು ನೋಡಿದಡೆಯೂ ಶರಣನ ಕಣ್ಣ ಮೊದಲಲ್ಲಿ ನೀನೆ! ಶಿವಜ್ಞಾನ ಸಂಪನ್ನನಾದ ಶರಣಂಗೆ ಆಹ್ವಾನ ವಿಸರ್ಜನವೆಲ್ಲಿಯದು? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ||

ಇಂತು ಬಾಹ್ಯಾಭ್ಯಂತರ ಲಿಂಗಸ್ಥಲ ಸಮಾಪ್ತ ||