೩೯. ಅಚ್ಚ ಪ್ರಸಾದ ಸ್ಥಲ

ಇಂತು ಶ್ರೀ ಗುರುಲಿಂಗ ಜಂಗಮವೆಂಬ ತ್ರಿವಿಧಲಿಂಗ ಪ್ರಸಾದಸಂಪನ್ನನಾದ ಬ್ರಹ್ಮಜ್ಞಾನಿಯಪ್ಪ ಮಹಾಪ್ರಸಾದಿಯ ಅಚ್ಚಪ್ರಸಾದ ಸ್ಥಲ ||

ಗ್ರಂಥ |

ಶಬ್ದಃ ಸ್ವರ್ಶಶ್ಚರೂಪಂ ಚ ರಸಗಂಧ ಮಹಾರುಚಿಃ
ಅರ್ಪಿತಶ್ಚಾರ್ಪಿತಂ ಸ್ಥಾನಮಿಂದ್ರಿಯಂ ಮಿಂದ್ರಿಯಂ ತಥಾ ||  || ೧ ||

ಇಂದ್ರಿಯ ಸ್ಥಾನಂ ತತ್ಕರ್ಮ ಸಮರ್ಪಣ ಕ್ರಿಯಾರ್ಪಿತಂ
ಉಭಯಾರ್ಪಣವಿಹೀನಶ್ಚ ಪ್ರಸಾದೋ ನಿಷ್ಫಲೋ ಭವೇತ್‌ ||  || ೨ ||

ವಚನ |

ಅಚ್ಚಪ್ರಸಾದಿ ಅಚ್ಚಪ್ರಸಾದಿಗಳೆಂದು ನಿಚ್ಚನಿಚ್ಚ ಬಗಳುವ ಕುನ್ನಿಗಳ ನೋಡಾ! ಬರದ ನಾಡಿಂದ ಬಂದ ಬಣಗುಗಳಂತೆ ಮತ್ತೆ ಇಕ್ಕಿಹರೋ ಇಕ್ಕರೋ ಎಂದು ಒಟ್ಟಿಸಿಕೊಂಡು ತಿಂದು ಮಿಕ್ಕುದ ಬಿಸುಡುವ ಕುನ್ನಿಗಳ ಮೆಚ್ಚುವನೆ ನಮ್ಮ ಕೂಡಲಸಂಗಮದೇವ? ||

ಅಚ್ಚಪ್ರಸಾದಿ ಅಚ್ಚಪ್ರಸಾದಿಗಳೆಂಬ ಹುಚ್ಚರ ನಾನೇನೆಂಬೆನಯ್ಯಾ? ಲಿಂಗದ ಹವಣನರಿಯದೆ ತನ್ನ ಒಡಲ ಹವಣಿಂಗೆ ಗಡಣಿಸಿಕೊಂಬ ದುರಾತ್ಮರನೇನೆಂಬೆನಯ್ಯಾ? ತನ್ನ ಒಡಲ ಹವಣಿಂಗೆ ಮನವು ಸಾಕೆಂದು ತೃಪ್ತಿಯಾದುದು ಲಿಂಗಾರ್ಪಿತಕ್ಕೆ ಅದು ಸಲುವುದೇ, ಹೇಳಿರೆ? ಆ ಲಿಂಗವು ಮುಟ್ಟದ ಅನಾರ್ಪಿತವನುಂಡು ಅಚ್ಚಪ್ರಸಾದಿಗಳೆನಿಸಿಕೊಂಬವರ ಲಿಂಗದಲ್ಲಿ ಸಜ್ಜನ ಸನ್ನಹಿತ ಶರಣರು ಮೆಚ್ಚುವರೇ? ಬಂದ ಬಂದ ಸಕಲ ಪದಾರ್ಥಂಗಳೆಲ್ಲವ ಲಿಂಗಕ್ಕೆ ಅರ್ಪಿಸಿಕೊಳ್ಳಬಲ್ಲಡೆ ಕೂಡಲಚನ್ನಸಂಗಯ್ಯನಲ್ಲಿ ಆತನೆ ಅಚ್ಚಪ್ರಸಾದಿ |

ಅಚ್ಚಪ್ರಸಾದ, ಅಚ್ಚಪ್ರಸಾದವೆಂದು ತಮ್ಮ ತಮ್ಮ ಮನದ ಹವಣಿಂಗೆ ಗಡಣಿಸಿಕೊಂಬರು, ತನುಮನ ಮುಟ್ಟಿದೋಗರ ಲಿಂಗಾರ್ಪಿತವಲ್ಲ, ಅನರ್ಪಿತವನುಂಡು ಅಚ್ಚ ಪ್ರಸಾದಿಗಳಾದೆವೆಂಬವರನು ಲಿಂಗದಲ್ಲಿ ಸಮ್ಯಕ್‌ಶರಣರು ಮೆಚ್ಚರು, ಬಂದುದ ಕೂಡಲ ಚನ್ನಸಂಗಯ್ಯಂಗರ್ಪಿಸಿಕೊಳಬಲ್ಲಡೆ, ಆತನೇ ಅಚ್ಚಪ್ರಸಾದಿ ||

ಅಚ್ಚಪ್ರಸಾದಿ, ಅಚ್ಚಪ್ರಸಾದಿಗಳೆಂದು ನಿಚ್ಚ ನಿಚ್ಚ ಹುಸಿವರು, ನೋಡಾ! ಬಯಲ ಬೆರಸುವಲ್ಲಿ, ವಾಯು ಬೀಸುವಲ್ಲಿ ಭಾಜನಸಹಿತ ಭೋಜನವುಂಟೆ? ಅಂಗನೆಯರ ಸುರತದ ಸುಖವನು ಲಿಂಗ ವಿರೋಧದಿಂದ ನೆರೆವ ನಿಚ್ಚಪರಾಧಿಗಳನೊಲ್ಲ, ನಮ್ಮ ಸಕಳೇಶ್ವರದೇವರು ||

ರೂಪನರ್ಪಿಸಬಹುದಲ್ಲದೆ ರುಚಿಯನರ್ಪಿಸುವ ಪರಿಯೆಂತಯ್ಯಾ? ಉರವಣಿಸಿ ಬಂದ ತನುಗುಣಾದಿಗಳ ಲಿಂಗದಲ್ಲಿ ನಿಕ್ಷೇಪವ ಮಾಡಲರಿಯದಿರ್ದ್ದಡೆ ಪ್ರಾಣಲಿಂಗ ನಾಸ್ತಿ; ಪ್ರಸಾದವೆಲ್ಲಿಯಾದಯ್ಯಾ ಕೂಡಲಚನ್ನಸಂಗಯ್ಯಾ? ||

ಕಾಮಿಸಿ ಬಂದ ಪದಾರ್ಥದ ಪೂರ್ವಾಶ್ರಯವ ಕಳೆದು ತನ್ನ ಕಾಯವ ಮುಟ್ಟಲೀಯದೆ ಲಿಂಗಾರ್ಪಿತವ ಮಾಡಬಲ್ಲಡೆ, ಕೂಡಲ ಚನ್ನಸಂಗಯ್ಯನಲ್ಲಿ ಆತನೆ ಅಚ್ಚಪ್ರಸಾದಿ ||

ವ್ಯಾಧಿಯಿಲ್ಲದಿರ್ದಡೆ ಲಿಂಗಪ್ರಸಾದಿಯೆಂಬೆ, ಆದಿಯಿಲ್ಲದಿರ್ದಡೆ ಜಂಗಮಪ್ರಸಾದಿಯೆಂಬೆ, ಲೌಕಿಕವ ಬೆರಸದಿರ್ದಡೆ ಸಮಯಪ್ರಸಾದಿಯೆಂಬೆ, ಇಂತೀ ತ್ರಿವಿಧ ಸಂಬಂದಿಯಾದಡೆ ಅತನೇ ಅಚ್ಚಪ್ರಸಾದಿಯೆಂಬೆ ಕಾಣಾ ಕೂಡಲಚನ್ನಸಂಗಮದೇವಾ ||

ಬೆಳಗಿನೊಳಗಣ ರೂಪ ತಿಳಿದು ನೋಡಿಯೇ ಕಳೆದು, ಹಿಡಿಯದೇ ಹಿಡಿದುಕೊಳ್ಳಬಲ್ಲನಾಗಿ, ಲಿಂಗಪ್ರಸಾದಿ, ಜಾತಿ ಸೂತಕವೆಂಬ ಶಂಕೆ ತಲೆದೋರದೆ ಆತ ನಿಶ್ಯಂಕನಾಗಿ, ಸಮಯಪ್ರಸಾದಿ, ಸಕಲ ಭ್ರಮೆಯನೆ ಜರೆದು ಲಿಂಗದಲ್ಲಿ ಅವಿರಳನಾಗಿ, ಆತ ಮಹಾಪ್ರಸಾದಿ, ಗುಹೇಶ್ವರಾ, ನಿಮ್ಮ ಅಚ್ಚಪ್ರಸಾದಿ ||

ಇಂತೀ ಅಚ್ಚಪ್ರಸಾದ ಸ್ಥಲ ಸಮಾಪ್ತ ||

೪೦. ಸಾವಧಾನಲಿಂಗಾರ್ಪಣ ಪ್ರಸಾದ ಸ್ಥಲ

ಇಂತಪ್ಪ ಅಚ್ಚಪ್ರಸಾದದಲ್ಲಿ ಅವಿರಳಾನಂದನಾಗಿ ನಿಶ್ಚಿಂತನಾದ ಬ್ರಹ್ಮಜ್ಞಾನಿಯಪ್ಪ ಮಹಾಪ್ರಸಾದಿಯ ಸಾವಧಾನ ಲಿಂಗಾರ್ಪಣ ಪ್ರಸಾದ ಸ್ಥಲ ||

ಗ್ರಂಥ |

ಪರಾಣಪ್ರಯಾಣಕಾಲೇ ತು ಲಿಂಗಭೋಗೋಪಯೋಗಿನಾಂ
ಅರ್ಪಣೇ ಸಾವಧಾನೀ ಚ ಸ ಲಿಂಗಪ್ರಾಣಿನಾಯಕಃ ||  || ೧ ||

ಅಭಾವೇ ಭಾವಮಾಸಾಧ್ಯ ಹ್ಯಸ್ಥಾನೇ ಸ್ಥಾನಮಾಚರೇತ್‌
ಏತದ್ದ್ವಯಪರಿಜ್ಞಾನೀ ಪ್ರಸಾದೀ ಸಾವಧಾನಿಕಃ ||  || ೨ ||

ಪಂಚೇಂದ್ರಿಯ ಮುಖಂ ಜ್ಞಾತ್ವಾ ಅರ್ಪಿತಂ ಚ ಸದುರ್ಲಭಂ
ತಲ್ಲಿಂಗಂ ಮನುತೇಯಸ್ತು ತಸ್ಮಿನ್‌ಲ್ಲಿಂಗೇ ಪ್ರಲೀಯತೇ ||  || ೩ ||
ವಚನ |

ಎನ್ನ ಕಾಯಕ್ಕೆ ಸೀಮೆಯ ಮಾಡುವೆನು; ಎನ್ನ ಕಾಯದೊಳಗಣ ಕರಣಾದಿ ಗುಣಂಗಳಿಗೆ ಸೀಮೆಯ ಮಾಡುಎನು; ಎನ್ನ ಶ್ರೋತ್ರಕ್ಕೆ ಸೀಮೆಯ ಮಾಡುವೆನು, ಎನ್ನ ಶ್ರೋತ್ರದೊಳಗಣ ಶಬ್ದಕ್ಕೆ ಸೀಮೆಯ ಮಾಡುವೆನು, ಎನ್ನ ತ್ವಕ್ಕಿಂಗೆ ಸೀಮೆಯ ಮಾಡುವೆನು; ಎನ್ನ ತ್ವಕ್ಕಿನೊಳಗಣ ಸ್ವರ್ಶನಕ್ಕೆ ಸೀಮೆಯ ಮಾಡುವೆನು, ಎನ್ನ ನಯನಕ್ಕೆ ಸೀಮೆಯ ಮಾಡುವೆನು; ಎನ್ನ ನಯನದೊಳಗಿರ್ದ ರೂಪಿಂಗೆ ಸೀಮೆಯ ಮಾಡುವೆನು, ಎನ್ನ ಜಿಹ್ವೆಗೆ ಸೀಮೆಯ ಮಾಡುವೆನು; ಎನ್ನ ಜಿಹ್ವೆಯೊಳಗಿರ್ದ ರುಚಿಗೆ ಸೀಮೆಯ ಮಾಡುವೆನು, ಎನ್ನ ಘ್ರಾಣಕ್ಕೆ ಸೀಮೆಯ ಮಾಡುವೆನು; ಎನ್ನ ಘ್ರಾಣದೊಳಗಿರ್ದ ಗಂಧಕ್ಕೆ ಸೀಮೆಯ ಮಾಡುವೆನು, ಎನ್ನ ಮನಕ್ಕೆ ಸೀಮೆಯ ಮಾಡುವೆನು; ಎನ್ನ ಮನದೊಳಗಿರ್ದ ಮರಹಿಂಗೆ ಸೀಮೆಯ ಮಾಡುವೆನು ಎನ್ನ ಭಾವಕ್ಕೆ ಸೀಮೆಯ ಮಾಡುವೆನು, ಎನ್ನ ಭಾವೊದಳಗಿರ್ದ ಭ್ರಾಂತಿಗೆ ಸೀಮೆಯ ಮಾಡುವೆನು, ಎನ್ನ ಪ್ರಾಣಕ್ಕೆ ಸೀಮೆಯ ಮಾಡುವೆನು; ಎನ್ನ ಪ್ರಾಣದೊಳಗಿರ್ದ ಪರಿಣಾಮ ಹಿಂಗದಂತೆ ಸೀಮೆಯ ಮಾಡುವೆನು ನಿಮ್ಮಲ್ಲಿ ನಿಲುಸುವೆ ಕೂಡಲ ಚನ್ನಸಂಗಮದೇವಾ ||

ಸಾರಾಯ ಪದಾರ್ಥನಾರಯ್ಯಬೇಕೆಂದು ಶರಣ ಮರ್ತ್ಯಕ್ಕೆ ಬಂದು ಇಪ್ಪತ್ತೈದಿಂದ್ರಿಯಗಳ ತಪ್ಪಿ ಹರಿಯಲೀಯದೆ ಅವರ ಭಕ್ತರ ಮಾಡಿ, ಅವರ ಪೂರ್ವಾಶ್ರಯವ ಕಳೆದು, ಕಲ್ಪತವಿಡಿದು ಲಿಂಗಾರ್ಪಿತವ ಮಾಡಬೇಕೆಂದು ಆ ಇಂದ್ರಿಯಂಗಳು ತಮ್ಮ ಮುಖದಲ್ಲಿ ಗ್ರಹಿಸಲಮ್ಮದೆ, ಕೂಡಲಚನ್ನಸಂಗಯ್ಯಂಗೆ ಬೇಕೆಂದು ಹಿಡಿದುಕೊಂಡೈದಾವೆ ||

ಲಿಂಗಾರ್ಪಿತವ ಮಾಡುವ ಅವಧಾನವೆಂತೆಂದಡೆ, ಅನ್ಯಾಯವು ಸೋಂಕಲೀಯದವ ಧಾನವು; ಅರಿಷಡ್ವರ್ಗಂಗಳು ಮುಟ್ಟಲೀಯದದವಧಾನವು, ಪಂಚಭೂತದ ಭವಿತ್ವವ ಕಳೆದು ಪ್ರಸಾದ ಕಾಯವಾಗಿಪ್ಪ ಪರಿಯ ನೋಡಾ, ಪಂಚೇಂದ್ರಿಯಂಗಳ ಗುಣವ ಕಳೆದು ಪಂಚ ವಿಂಶತಿ ತತ್ವದಲ್ಲಿ ಪರಿಣಾಮಿ, ಕೂಡಲ ಸಂಗಮದೇವರಲ್ಲಿ ಚನ್ನಬಸವಣ್ಣನು ||

ಸರ್ವಸುವಿಧಾನಿಯೆನಿಸಿಕೊಳ್ಳಬಲ್ಲಡೆ, ಬಂದ ಕಾಮ – ಕ್ರೋಧ – ಲೋಭ – ಮೋಹ – ಮದಮತ್ಸರಂಗಳ ಲಿಂಗಾರ್ಪಿತವ ಮಾಡಬೇಕು ಅಲಗಿನ ಮೊನೆಯ ಮೇಲಣ ಸಿಂಹಾಸನ ಹೊರಳಿ ಹೋಗಬಾರದು ಶಿವಾಚಾರದಾಚಾರದಲ್ಲಿ, ಮುಟ್ಟದ ಮುನ್ನವೇ ಅರ್ಪಿತವ ಮಾಢಬಲ್ಲಡೆ, ಭಿನ್ನಭಾವವೆಲ್ಲಿಯದೋ ಗುಹೇಶ್ವರಾ ||

ಶ್ರೋತ್ರದ ಕೊನೆಯಲ್ಲಿ ಬಂದ ಸಂಗೀತದ ಪರಿಣಾಮವ ಅವಧಾನದ ಕೊನೆಯ ಮೊನೆಯ ಮೇಲೆ ಲಿಂಗಕ್ಕೆ ಸಮರ್ಪಣ ಮಾಡಬೇಕು, ನೇತ್ರದ ಕೊನೆಯಲ್ಲಿ ಬಂದ ಸುಲಕ್ಷಣದ ಪರಿಣಾಮದ ಅವಧಾನದ ಕೊನೆಯ ಮೊನೆಯ ಮೇಲೆ ಲಿಂಗಕ್ಕೆ ಸಮರ್ಪಿಸಬೇಕು, ನಾಸಿಕದ ಕೊನೆಯಲ್ಲಿ ಬಂದ ಸುಗಂಧದ ಪರಿಣಾಮವ ಅವಧಾನದ ಕೊನೆಯ ಮೊನೆಯ ಮೇಲೆ ಲಿಂಗಕ್ಕೆ ಸಮರ್ಪಣ ಮಾಡಬೇಕು, ಜಿಹ್ವೆಯ ಕೊನೆಯಲ್ಲಿ ಬಂದ ಷಡುರುಚಿಯ ಪರಿಣಾಮವ ಅವಧಾನದ ಕೊನೆಯ ಮೊನೆಯ ಮೇಲೆ ಲಿಂಗಕ್ಕೆ ಸಮರ್ಪಿಸಬೇಕು, ತ್ವಗಿಂದ್ರಿಯದ ಕೊನೆಯಲ್ಲಿ ಬಂದ ಸುಸ್ಪರ್ಶನದ ಪರಿಣಾಮವ ಅವಧಾನದ ಕೊನೆಯ ಮೊನೆಯ ಮೇಲೆ ಲಿಂಗಕ್ಕೆ ಸಮರ್ಪಿಸಬೇಕು, ರತಿ ಸಂಗದ ಕೊನೆಯಲ್ಲಿ ಬಂದ ಸುಖದ ಪರಿಣಾಮವ ಅವಧಾನದ ಕೊನೆಯ ಮೊನೆಯ ಮೇಲೆ ಲಿಂಗಕ್ಕೆ ಸಮರ್ಪಿಸಬೇಕು, ತಟ್ಟುವ ಮುಟ್ಟುವ ತಾಗು ನಿರೋಧವೆಲ್ಲವನೂ ಅವಧಾನದ ಕೊನೆಯ ಮೊನೆಯ ಮೇಲೆ ಲಿಂಗಕ್ಕೆ ಸಮರ್ಪಿಸಬೇಕು, ಈ ಅವಧಾನದ ಕೊನೆಯ ಮೊನೆಯ ಮೇಲೆ ಲಿಂಗಾರ್ಪಿತವ ಮಾಡಬಲ್ಲಡೆ, ಇದೆ ಅರ್ಪಿತಮುಖ ಕೇಳಿರಣ್ಣಾ! ನಮ್ಮ ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭು ಶಾಂತಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಅರ್ಪಿತ ಮುಖದಲ್ಲಿ ತೃಪ್ತಿಯನೈದಿದ ಶರಣರ ಮಹಿಮೆಯ ನೀವೆ ಬಲ್ಲಿರಲ್ಲದೆ, ನಾನೆತ್ತ ಬಲ್ಲೆನಯ್ಯಾ? ನಿಮ್ಮ ಧರ್ಮ! ನಿಮ್ಮ ಧರ್ಮ ||

ಆದಿಯನು ಲಿಂಗಮುಖದಲ್ಲಿ ಅರ್ಪಿತವ ಮಾಡಿ, ಅನಾದಿಯನು ಲಿಂಗಮುಖದಲ್ಲಿ ಅರ್ಪಿತವ ಮಾಡಿ, ಮನವೆಂಬುದ ನಿರಾಕಾರದಲ್ಲಿ ನಿಲಿಸಿ, ಪರಿಣಾಮದಲ್ಲಿ ತದ್ಗತನಾಗಿ, ಪ್ರಸಾದವೇ ಪ್ರಾಣ, ಪ್ರಸಾದವೇ ಜ್ಞಾನ, ಪ್ರಸಾದವೇ ಧ್ಯಾನ, ಪ್ರಸಾದವೇ ಭೋಗವಾಗಿಪ್ಪ ನಮ್ಮ ಗುಹೇಶ್ವರಲಿಂಗದಲ್ಲಿ ಮರುಳಶಂಕರದೇವರ ನಿಲವನುಪಮಿಸಬಾರದು, ನೋಡಾ! ಚನ್ನಬಸವಣ್ಣಾ ||

ಅಂಗ ಅನಂಗವೆಂಬೆರಡರ ಸಂಗವಳಿದ ಮಹಾಂತರ ಅಂಗ ಸೋಂಕಿತ್ತೆಲ್ಲವೂ ಪವಿತ್ರ ಕಾಣಿರೋ! ಪವಿತ್ರದಲ್ಲಿ ಪದಾರ್ಥವಿರಬಹುದು, ಪದಾರ್ಥದಲ್ಲಿ ಮನವಿಹುದು, ಮನವಿದ್ದಲ್ಲಿ ಹಸ್ತವಿಹುದು, ಹಸ್ತವಿದ್ದಲ್ಲಿ ಜಿಹ್ವೆಯಿಹುದು, ಜಿಹ್ವೆಯಿದ್ದಲ್ಲಿ ರುಚಿಯಿಹುದು, ರುಚಿಯಿದ್ದಲ್ಲಿ ಅವಧಾನವಿಹುದು, ಅವಧಾನವಿದ್ದಲ್ಲಿ ಭಾವವಿಹುದು, ಭಾವವಿದ್ದಲ್ಲಿ ಲಿಂಗವಿಹುದು, ಲಿಂಗವಿದ್ದಲ್ಲಿ ಅರ್ಪಿತವಿಹುದು, ಅರ್ಪಿತವಿದ್ದಲ್ಲಿ ಪ್ರಸಾದವಿಹುದು, ಪ್ರಸಾದವಿದ್ದಲ್ಲಿ ಪರಿಣಾಮವಿಹುದು ಇದುಕಾರಣ, ಮಹಾಘನ ಸದ್ಗುರು ಸೋಮನಾಥಲಿಂಗ, ನಿಮ್ಮ ಶರಣರು ಪ್ರಾಣಲಿಂಗ ಪ್ರವೇಶಿಗಳಾಗಿ ಪರಿಣಾಮ ಪ್ರಸಾದಿಗಳಯ್ಯಾ ||

ಇಷ್ಟ ಲಿಂಗಕ್ಕೆ ಮಜ್ಜನ, ಪ್ರಾಣಲಿಂಗಕ್ಕೆ ಭೋಜನ, ತೃಪ್ತಿ ಲಿಂಗ ಮುಖದಲ್ಲಿ ಪರಿಣಾಮವಯ್ಯಾ, ಕಾಮಿತ, ಕಲ್ಪಿತ, ಅರ್ಪಿತ, ಭಾವಿತ ತಾನಲ್ಲ, ಅಲ್ಲಲ್ಲಿಗವಧಾನದಾಯತವ ನೋಡಯ್ಯಾ, ಅವಧಾನದ ಕೊನೆಯ ಮೊನೆಯ ಮೇಲಣ ಸುಯಿಧಾನವ ಲಿಂಗವ ನಿಮ್ಮ ಶರಣನ ಸರ್ವಾಂಗದಲ್ಲಿ ಕಾಣಬಹುದು ಕೂಡಲಚನ್ನಸಂಗಮದೇವಾ ||

ಅಂತರಂಗದಲ್ಲಿ ಆಯತ ಸ್ವಾಯುತವಾಗಿ ನಿಂದಾತಂಗೆ ಬಹಿರಂಗದ ಬಳಕೆಯೆಲ್ಲಿಯದೋ? ಅಂತರಂಗದಲ್ಲಿ ಅನಿಮಿಷನಾಗಿ ನಿರಂತರ ಸುಖಿ, ನೋಡಯ್ಯಾ, ಸರ್ವೇಂದ್ರಿಯಗಳು ಸಮ್ಮತವಾಗಿ ಮಹಾಲಿಂಗ ಸೋಮೇಶ್ವರನ ಕೂಡಿದೆನಾಗಿ ||

ಇಂತು ಸಾವಧಾನ ಲಿಂಗಾರ್ಪಣ ಪ್ರಸಾದಸ್ಥಲ ಸಮಾಪ್ತ ||

೪೧. ಸ್ವಾತ್ಮ ಭೋಗಲಿಂಗಾರ್ಪಣ ಪ್ರಸಾದ ಸ್ಥಲ

ಇಂತಪ್ಪ ಸಾವಧಾನಲಿಂಗಾರ್ಪಣ ಪ್ರಸಾದ ಭೋಗದಲ್ಲಿ ಸಾವಧಾನಿಯಾದ ಬ್ರಹ್ಮಜ್ಞಾನಿಯಪ್ಪ ಮಹಾಪ್ರಸಾದಿಯ ಸ್ವಾತ್ಮಭೋಗಲಿಂಗಾರ್ಪಣ ಪ್ರಸಾದಸ್ಥಲ ||

ಗ್ರಂಥ |

ಯಥಾ ಗರ್ಭಿಣಿ – ಭೋಗಾಂತೇ ಶಿಶೂನಾಂ ತೃಪ್ತಿಸಂಭವಃ
ತಥಾ ಭಕ್ತಸ್ಯ ಭೋಗಾಂತೇ ಲಿಂಗಂ ತೃಪ್ತಿಮಾಪ್ನಯಾತ್‌ ||  || ||

ನೈವೇದ್ಯಂ ಪುರತೋನ್ಯಸ್ತಂ ದರ್ಶನಾತ್‌ಸ್ವೀಕೃತಂ ಮಯಾ
ರಸಾನ್ ಭಕ್ತಸ್ಯ ಜಿಹ್ವಾಗ್ರಾದಶ್ನಾಮಿ ಕಮಲೋದ್ಭವ ||  || ||

ಭಕ್ತಿ ಜಿಹ್ವಾಗ್ರಕೇ ಲಿಂಗಂ ಲಿಂಗಜಿಹ್ವಾಗ್ರಕೇ ರುಚಿಃ
ರುಚಿಜಿಹ್ವಾಗ್ರೇ ಪ್ರಸಾದಃ ಪ್ರಸಾದಃ ಪರಮಂ ಪದಂ ||  || ||

ವಚನ |

ಬಸುರೊಳಗಣ ಕೂಸಿಂಗೆ ಬೇರೆ ಊಟ ಬೇರೆ ಮೀಹ ಉಂಟೆ? ಜ್ಞಾನವೆಂಬ ಗರ್ಭದೊಳೆ ಲಿಂಗವೆಂಬ ಶಿಶುವಿರಲು ಬೇರೆ ಕೊಡುವ ಕೊಂಬ ಪರಿಯೆಂತೋ! ದೇಹದೊಳಗಣ ಪ್ರಾಣವ ಬೇರೆ ಮಾಡಿ ಭೋಗಿಸಲುಂಟೇ? ಅನುಮಾನವಳಿದು ಮಹದಲ್ಲಿ ಮನ ಮುಸುಕಿದ ಬಳಿಕ ಭಿನ್ನಮಾಡಲುಂಟೇ ಗುಹೇಶ್ವರಾ ||

ತಾ ಸವಿದಲ್ಲದೆ ಆ ಸವಿಯ ಲಿಂಗಕ್ಕರ್ಪಿಸಲಾಗದು, ಅದೇನು ಕಾರಣವೆಂದಡೆ, ಆ ಲಿಂಗವು ಕಹಿಸಿಹಿಯೆಂದರಿಯದಾಗಿ, ಇದು ಕಾರಣ, ಕಹಿಯೆಂದು ಕಳೆದು, ಸಿಹಿಯೆಂದುಕೊಂಡದೆ, ಕೊಂಡುದು ಕಿಲ್ಬಿಷ, ಕೂಡಲಸಂಗಮದೇವಾ ||

ಅಂಗದ ಮೇಲಿಹ ಲಿಂಗಕ್ಕರ್ಪಿಸಿದಲ್ಲದೆ ಕೊಳಲಾಗದು ಅಂಗೈಯಲ್ಲಿ ಹಿಡಿದು ಅರ್ಪಿಸಿ ಹೆನೆಂದಡೆ ಅರ್ಪಿತವಾಗದು, ಇನ್ನರ್ಪಿಸುವ ಪರಿಯೆಂತೆಂದಡೆ; ನಾಸಿಕದಲ್ಲಿ ಗಂಧವರ್ಪಿತ; ಶ್ರೋತ್ರದಲ್ಲಿ ಶಬ್ದವರ್ಪಿತ, ಹೃದಯದಲ್ಲಿ ಪರಿಣಾಮವರ್ಪಿತ, ಇಂತೀ ಪರಿಯಲರ್ಪಿಸಬಲ್ಲಡೆ ಅರ್ಪಿತ, ಇದನರಿತು ಭೋಗಿಸಬಲ್ಲಡೆ ಪ್ರಸಾದ, ಇದನರಿಯದೆ ಕೊಂಡ ಪ್ರಸಾದವೆಲ್ಲವೂ ಅನರ್ಪಿತ, ನುಂಗಿದ ಉಗುಳೆಲ್ಲವೂ ಕಿಲ್ಬಿಷ, ಕೂಡಲಚೆನ್ನಸಂಗಮದೇವಾ ||

ಪರದಿಂದಲಾದ ಶಕ್ತಿ ಪರಶಕ್ತಿಯಾಯಿತು, ಪರಶಕ್ತಿಯಿಂದ ಒದಗಿದ ಭೂತಂಗಳು ಭೂತಂಗಳಿಂದೊದಗಿದ ಅಂಗ, ಅಂಗಕ್ಕಾದ ಕರಣೇಂದ್ರಿಯಂಗಳು, ಇಂದ್ರಿಯಂಗಳಿಂದೊವಿದ ವಿಷಯಂಗಳು, ಆ ವಿಷಯದ ಪರಮುಖಕ್ಕೆ ತಾ ಶಕ್ತಿಯಾಗಿ ಭೋಗಿಸಬಲ್ಲಡೆ, ಆತ ನಿರ್ಲೇಪ ಮಸಣಯ್ಯ ಪ್ರಿಯ ಗಜೇಶ್ವರಾ ||

ಪಂಚಭೂತವಂಗವಾಗಿಪ್ಪ ಆತ್ಮಂಗೆ ಪಂಚೇಂದ್ರಿಯಂಗಳೆ ಮುಖಂಗಳು, ಕರಣಂಗಳೆ ಕೈಗಳು, ಪಂಚವಿಷಯವೆ ಪೂಜೆ, ಪಂಚಪದಾರ್ಥವೇ ಭೋಗ, ಇವನೆಲ್ಲವ ತನ್ನ ನಿಜಮೂರ್ತಿಯಪ್ಪ ಫನಕ್ಕೈದಿಸಬಲ್ಲಡೆ, ಆತ ಸರ್ವನಿರ್ವಾಣಿ, ಸಕಲ ನಿಃಕಲಾತ್ಮಕನು; ಉರಿಲಿಂಗಪೆದ್ದಿ ಪ್ರಿಯ ವಿಶ್ವೇಶ್ವರಾ ||

ಪೃಥ್ವಿ ಅಂಗ, ಚಿತ್ತ ಹಸ್ತ, ನಾಸಿಕ ಮುಖ, ಗಂಧ ಪದಾರ್ಥ, ಆಚಾರಲಿಂಗಕ್ಕರ್ಪಿತ ಭಕ್ತ, ಅಪ್ಪು ಅಂಗ, ಬುದ್ಧಿ ಹಸ್ತ, ಜಿಹ್ವೆ ಮುಖ, ರುಚಿ ಪದಾರ್ಥ, ಗುರುಲಿಂಗಕ್ಕರ್ಪಿತ ಮಹೇಶ್ವರ, ಅನಲ ಅಂಗ, ನಿರಹಂಕಾರ ಹಸ್ತ, ನೇತ್ರ ಮುಖ, ರೂಪು ಪದಾರ್ಥ, ಶಿವಲಿಂಗಕ್ಕರ್ಪಿತ ಪ್ರಸಾದಿ, ಪವನ ಅಂಗ, ಮನ ಹಸ್ತ, ತ್ವಕ್ಕು ಮುಖ, ರೂಪು ಪದಾರ್ಥ, ಶಿವಲಿಂಗಕ್ಕರ್ಪಿತ ಪ್ರಾಣಲಿಂಗಿ, ವ್ಯೋಮ ಅಂಗ, ಜ್ಞಾನ ಹಸ್ತ, ಶ್ರೋತ್ರ ಮುಖ, ಶಬ್ದ ಪದಾರ್ಥ, ಮಹಾಲಿಂಗಕ್ಕರ್ಪಿತ ಐಕ್ಯ ಇಂತೀ ಷಟ್‌ಸ್ಥಲವಳವಟ್ಟಾತನು ಪರಶಕ್ತಿಯ ಸ್ವರೂಪನು ಆತನು ನಿಜಶಿವಯೋಗ ಸಂಪನ್ನನು, ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ ||

ದೇಹವೆಂಬ ಅರಮನೆಯಲ್ಲಿ ಮಹಾಲಿಂಗವೆಂಬ ಅರಸು ಸುಮನವೆಂಬ ಪೀಠದ ಮೇಲೆ ಮೂರ್ತಿಗೊಂಡು, ಅಂತಃಕರಣಂಗಳೆಂಬ ಪರಿಚಾರಕರುಗಳ ಕೈಯಿಂದ ಪಂಚೇಂದ್ರಿಯಂಗಳೆಂಬ ಪರಿಯಾಣದಲ್ಲಿ ಶಬ್ದ, ಸ್ಪರ್ಶ, ರೂಪು, ರಸ, ಗಂಧಂಗಳೆಂಬ ಪದಾರ್ಥಗಳನು ಎಡೆಮಾಡಿಸಿಕೊಂಡು ಸವಿವುತ್ತಿರಲು, ಆನಂದವೇ ಮಹಾಪ್ರಸಾದವಾಗಿ, ಉರಿಲಿಂಗಪೆದ್ದಿ ಪ್ರಿಯ ವಿಶ್ವೇಶ್ವರನು ಸದಾ ಸನ್ನಿಹಿತ ಕಾಣಿರೇ ||

ಮನಭಾವಕರಣಂಗಳೊಳಹೊರಗೆ ತೆರಹಿಲ್ಲದ ದೇವಾ, ಬಂದ ಪದಾರ್ಥವನವಧರಿಸು ದೇವಾ, ಭಾವಭರಿತದೇವಾ! ಅದೆಂತೆಂದಡೆ : ತಿಲಮಧ್ಯೇ ಯಥಾ ತೈಲಂ ಕ್ಷೀರಮಧ್ಯೇ ಯಥಾ ಥೃತಂ | ಪುಷ್ಪಮಧ್ಯೇ ಯಥಾ ಗಂಧೋ ಭಾವಮಧ್ಯೇ ತಥಾ ಶಿವಃ || ಎದುದಾಗಿ, ಎಲ್ಲ ಭೋಗಂಗಳು ತನ್ನವಾಗಿ, ಎಲ್ಲ ಕರಣಂಗಳ ತನ್ಮಯಮಾಡಿಕೊಂಡನಾಗಿ ಕೂಡಲಚನ್ನಸಂಗಮದೇವರು ||

ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಅಂಗವಾ ಲಿಂಗವದು, ಮನದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಕರಣಂಗಳು ಆ ಲಿಂದವು, ಪ್ರಾಣದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಪಂಚೇಂದ್ರಿಹಂಗಳು ಆ ಲಿಂಗದವು, ಅರಿವಿನ ಮೇಲೆ ಲಿಂಗಸಾಹಿತ್ಯವಾದ ಬಳಿಕ ಅರಿವಿನ ವಿಷಯಾದಿಭೋಗಂಗಳು ಆ ಲಿಂಗದವು, ಸರ್ವಾಂಗಲಿಂಗ, ಸರ್ವಭೋಗ ಲಿಂಗ ಭೋಗ ಕೂಡಲಚನ್ನಸಂಗಮದೇವಾ ||

೧೦

ನಿಮ್ಮಿಂದಲಾದೆ ನಾನು ನನಗೆ ದೇಹೇಂದ್ರಿಯ ಮನಃಪ್ರಾಣಾದಿಗಳಾದುವು, ನನ್ನ ದೇಹೇಂದ್ರಿಯ ಮನಃಪ್ರಾಣಾದಿಗಳ ಕರ್ತನು ನೀನೆ, ಅವರಾಗು ಛೇಗೆ ಸುಖದುಃಖ ನಿನ್ನವು, ನನ್ನ ಮುಟ್ಟಿದವೆಲ್ಲ ನಿನ್ನ ಸುಂಖಂಗಳು, ಒಳಗೆ ನೀನು, ಹೊರಗೆ ನೀನು ನಾನೆಂಬುದು ನಡುವಣ ಭ್ರಾಂತು, ಎಲ್ಲ ವಿನೋದ ನೀನೆ ಬಲ್ಲೆ ದೇವರಾಯ ಸೊಡ್ಡಳಾ ||

೧೧

ಎನಗೆ ನೀನು ಪ್ರಾಣ, ನಿನಗೆ ನಾನು ಪ್ರಾಣ, ಇನ್ನೇನು ಸಂದಿಲ್ಲ, ಹಂಗಿಲ್ಲ, ಹರಿಯಿಲ್ಲ, ಮತ್ತೇನೂ ಪ್ರಪಂಚು ಇಲ್ಲವಾಗಿ, ನೀ ನಡೆಸಿದಂತೆ ನಡೆದೆ, ನೀ ನುಡಿಸಿದಂತೆ ನುಡಿದೆ, ನೀ ನೋಡಿಸಿದಂತೆ ನೋಡಿದೆ, ನೀ ಆಡಿಸಿದಂತೆ ಆಡಿದೆ, ನೀ ಮಾಡಿಸಿದಂತೆ ಮಾಡಿದೆ, ಈ ಪುಣ್ಯ ಪಾಪ ಸುಖ ದುಃಖಾತ್ಮಕನು ನೀನೆ ಅಯ್ಯಾ, ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ ||

೧೨

ಎನ್ನ ಅಂಗದಲ್ಲಿ ನಿನಗೆ ಮಜ್ಜನ, ಎನ್ನ ಲಲಾಟದಲ್ಲಿ ನಿನಗೆ ಗಂಧಾಕ್ಷತೆ, ಎನ್ನ ತುರುಬಿನಲ್ಲಿ ನಿನಗೆ ಕುಸುಮ ಪೂಜೆ, ಎನ್ನ ನೆತ್ರದಲ್ಲಿ ನಿನಗೆ ನಾನಾರೂಪು ವಿಚಿತ್ರ ವಿನೋದ, ನೋಡಾ! ಎನ್ನ ಶ್ರೋತ್ರದಲ್ಲಿ ನಿನಗೆ ಪಂಚಮಹಾವಾದ್ಯ ಕೇಳಿಕೆ, ಎನ್ನ ನಾಸಿಕದಲ್ಲಿ ನಿನಗೆ ಗಂಧ ಧೂಪದೀ ಪರಿಮಳ, ಎನ್ನ ಜಿಹ್ವೆಯಲ್ಲಿ ನಿನಗೆ ಷಡ್ರಸಾನ್ನ ನೈವೇದ್ಯ, ಎನ್ನ ತ್ವಕ್ಕಿನಲ್ಲಿ ನಿನಗೆ ವಸ್ತ್ರಾಭರಣ ಅಲಂಕಾರ ಪೂಜೆ, ಎನ್ನ ಸಚ್ಚಿದಾನಂದವೆಂಬ ಸಜ್ಜೆ ಗೃಹದಲ್ಲಿ ನೀನೆನ್ನ ಸ್ಪರ್ಶನಂಗೈದು ನೆರೆದಿಪ್ಪೆಯಾಗಿ, ನೀ ನಾನೆಂಬೆರಡಳಿದು ತಾನು ತಾನಾದ ಘನವನೇನೆಂಬೆನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ||

ಇಂತೀ ಸ್ವಾತ್ಮಭೋಗಲಿಂಗಾರ್ಪಣ ಪ್ರಸಾದಸ್ಥಲ ಸಮಾಪ್ತ ||

೪೨. ನಿರ್ದೇಹ ಲಿಂಗಾರ್ಪಣ ಪ್ರಸಾದ ಸ್ಥಲ

ಇಂತಪ್ಪ ಸ್ವಾತ್ಮಭೋಗಲಿಂಗಾರ್ಪಣ ಪ್ರಸಾದದಲ್ಲಿ ಪರಮಾನಂದವಾಗಿ ಮಹಾಘನವೆ ತಾನಾದ ಬ್ರಹ್ಮಜ್ಞಾನಿಯಪ್ಪ ಮಹಾಪ್ರಸಾದಿಯ ನಿರ್ದೇಹ ಲಿಂಗಾರ್ಪಣ ಪ್ರಸಾದ ಸ್ಥಲ ||

ಗ್ರಂಥ |

ಕರ್ಪೂರಲಮನಲಗ್ರಾಹ್ಯಂ ರೂಪಂ ನಾಸ್ತಿನಿರಂಜನಂ
ಸದ್ಗುರೋರ್ಲಿಂಗ ಸಂಯುಕ್ತಂ ಶರೀರಂ ಲಿಂಗಮುದ್ಭವಂ || ||

ಸರ್ವಜ್ಞಾನಮಯಂ ದೇಹಂ ಸರ್ವಕಾರಣ ಕಾರಣಂ
x x x x x x x x x x x x x x x x x x || ||

ಫಲಪ್ರಕಾಶಕಂ ಪುಷ್ಪಂ ಫಲಂ ಪುಷ್ಪವಿನಾಶಕಂ
ಜ್ಞಾನ ಪ್ರಕಾಶಕಂ ದೇಹಂ ಜ್ಞಾನಂ ದೇಹವಿನಾಶಕಂ ||

ವಚನ |

ಅರ್ಪಿತ ಅನರ್ಪಿತವೆಂಬರು; ಅರ್ಪಿತವ ಮಾಡುವ ಪರಿಯೆಂತಯ್ಯಾ? ತನುಮುಟ್ಟಿಕೊಂಬುದು ಲಿಂಗಾರ್ಪಿತವಲ್ಲ, ಮನಮುಟ್ಟಿಕೊಂಬುದು ಲಿಂಗಾರ್ಪಿತವಲ್ಲ ಅರ್ಪಿತದ ಕ್ರಮವ, ಕೂಡಲಚನ್ನಸಂಗಮದೇವಯ್ಯಾ ನಿಮ್ಮ ಶರಣನೆ ಬಲ್ಲ ||

ಅಧರ ತಾಗಿದ ರುಚಿಯ, ಉದರ ತಾಗಿದ ಸುಖವ ಲಿಂಗಾರ್ಪಿತವ ಮಾಡಿದಡೆ ಕಿಲ್ಬಿಷ ನೋಡಾ ಶ್ರೋತ್ರ ನೇತ್ರ ಭುಂಜನೆಯ ಮಾಡಲಾಗದು ತಟ್ಟಿತ್ತು ಮುಟ್ಟಿತ್ತು ಲಿಂಗಾರ್ಪಿತವೆಂದಡೆ ಅವನಂದೇ ವ್ರತಗೇಡಿ ಕೂಡಲಚನ್ನಸಂಗಮದೇವಾ ||

ಕಂಡುದು, ಕೇಳಿದುದು, ತಾಕಿತ್ತು, ಸೋಂಕಿತ್ತು ಕಾಯದ ಕೈಯಲ್ಲಿ ಲಿಂಗಾರ್ಪಿತವಾಯಿತೆಂದೆಡೆ, ತಪ್ಪಿತ್ತು ನೋಡಾ! ತಾನರಿವುತ್ತ ಕೊಡಲುಂಟೇ ಲಿಂಗಕ್ಕೆ? ಲಿಂಗಕ್ಕೆ? ಸಿಮ್ಮಲಿಗೆಯ ಚನ್ನರಾಮನೆಂಬ ಲಿಂಗದಲ್ಲಿ ಶರಣನಲ್ಲ ಆತ! ಸಂದೇಹಿ ||

ತನುವ ತಾಗದ ಮುನ್ನ ಮನವ ತಾಗದ ಮುನ್ನ, ಅಪ್ಯಾಯನ ಬಂದು ಎಡೆಗೊಳ್ಳದ ಮುನ್ನ, ಅರ್ಪಿತವ ಮಾಡಬೇಕು, ಗುರುವಿನ ಕೈಯಲೆಳತಟವಾಗದ ಮುನ್ನ ಲಿಂಗಾರ್ಪಣ ಮಾಡಬೇಕು, ಎಡದ ಕೈಯಲಿ ಕಿಚ್ಚು, ಬಲ್ಲದ ಕೈಯಲಿ ಹುಲ್ಲು, ಉರಿಹತ್ತಿತ್ತು ಗುಹೇಶ್ವರಾ, ನಿಮ್ಮ ಪ್ರಸಾದಿಯ ||

ತನು ಮುಟ್ಟದ ಮುನ್ನ ಲಿಂಗಾರ್ಪಿತವ ಮಾಡಬೇಕು, ಮನ ಮುಟ್ಟದ ಮುನ್ನ ಲಿಂಗಾರ್ಪಿ ತವ ಮಾಡಬೇಕು, ಶ್ರೋತ್ರ, ನೇತ್ರ, ಘ್ರಾಣ, ಜಿಹ್ವೆ, ತ್ವಕ್ಕು ಮುಟ್ಟದ ಮುನ್ನವೇ ಲಿಂಗಾರ್ಪಿತವ ಮಾಡಬೇಕು, ಕೂಡಲಚನ್ನಸಂಗಯ್ಯನಲ್ಲಿ ಪ್ರಸಾದಿಯಾಗಬಲ್ಲೆಯಾದಡೆ ||

ಕಂಗಳು ನೋಡಿದ ಪದಾರ್ಥ ಲಿಂಗಾರ್ಪಿತವಲ್ಲ, ನಾಸಿಕ ಮುಟ್ಟಿದ ಪದಾರ್ಥ ಲಿಂಗಾರ್ಪಿತವಲ್ಲ, ಕಿವಿಗಳು ಕೇಳಿದ ಪದಾರ್ಥ ಲಿಂಗಾರ್ಪಿತವಲ್ಲ, ಜಿಹ್ವೆ ಸೋಂಕಿದ ಪದಾರ್ಥ ಲಿಂಗಾರ್ಪಿತವಲ್ಲ, ಕೈಗಳು ಮುಟ್ಟಿದ ಪದಾರ್ಥ ಲಿಂಗಾರ್ಪಿತವಲ್ಲ, ಸಂಕಲ್ಪವಿರಹಿತವಾಗಿ ಅರ್ಪಿಸಿದ ರೂಪ ರುಚಿ ಗಂಧ ಸ್ಪರ್ಶ ಶಬ್ದವನು ಕೂಡಲಚನ್ನಸಂಗಯ್ಯಾ, ನೀನರಿಯಲು, ಪ್ರಸಾದವೆನಗೆ ||

ಎನ್ನ ಕರಸ್ತಲದ ಲಿಂಗಕ್ಕೆ ಬಂದ ಪದಾರ್ಥಂಗಳನರ್ಪಿಸುವೆನೇ? ಅರ್ಪಿಸಲಮ್ಮೆ! ಅದೇನು ಕಾರಣವೆಂದಡೆ : ಎನ್ನ ಕಂಗಳು ಕಂಡವಾಗಿ, ಎನ್ನ ಶ್ರೋತ್ರಂಗಳು ಕೇಳಿದವಾವಾಗಿ, ಎನ್ನ ಕೈಗಳು ಮುಟ್ಟಿದವಾಗಿ, ಎನ್ನ ನಾಶಿಕ ವಾಸಿಸಿತಾಗಿ, ಎನ್ನ ಜಿಹ್ವೆ ರುಚಿಸಿತ್ತಾಗಿ, ಇಂತಪ್ಪ ಎನ್ನ ಅಂಜಿಕೆಯನು ನಿಮ್ಮ ಶರಣರು ಬಿಸಿದರಾಗಿ! ಅದೆಂತೆಂದಡೆ : ಎನ್ನ ಶ್ರೋತ್ರದಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಎನ್ನ ನೇತ್ರದಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಎನ್ನ ಘ್ರಾಣದಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಎನ್ನ ಜಿಹ್ವೆಯಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಎನ್ನ ತ್ವಕ್ಕಿನಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಅಲ್ಲಲ್ಲಿ ಅರ್ಪಿತಂಗಳಾಗುತ್ತಿದ್ದವಾಗಿ, ಇನ್ನಂಜೆನಿನ್ನಂಜೆನು ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ ||

ಘನವೆಂಬ ಮನದ ತಲೆವಾಗಿಲಲ್ಲಿ ಸದಾ ಸನ್ನಹಿತನಾಗಿ ನೀನಿಪ್ಪೆಯಯ್ಯಾ ಎಲೆ ಅಯ್ಯ, ಬಂದಂತಹ ಸಕಲ ಪದಾರ್ಥಂಗಳ ರುಚಿಯ ನೀನೆ ಅನುಭವಿಸುತ್ತಿಪ್ಪೆಯಲ್ಲ! ಎಲೆ ಅಯ್ಯಾ! ಅದೆಂತೆಂದಡೆ: ಆಚಾರೇಣ ಚ ಗುರುಣಾ ಶಿವೇನ ಚರಮೂರ್ತಿನಾ ಪ್ರಸಾದೇನ ಚ ಮಹತಾಘ್ರಾತಂ ಪೀತಂ ದೃಷ್ಟಂ ಸ್ಪೃಷ್ಟಂ ಶ್ರುತಂ ಸ್ಮೃತಂ ಚ ಭಜ ಸನ್ಮತಂ, ಎಂದುದಾಗಿ ನಿಮ್ಮ ಮುಟ್ಟೆಬಹುದಲ್ಲದೆ ನಿಮ್ಮ ಮುಟ್ಟದೆ ಬಾರದೆಂಬುದಕ್ಕೆ ನಿಮ್ಮ ಮನಕ್ಕೆ ನೀವೆ ಸಾಕ್ಷಿ ಕೂಡಲಚನ್ನಸಂಗಮದೇವಾ ||

ಭಾವ ಭಾವಿಸಬಲ್ಲದೇ? ಭಾವ ಭಾವಿಸಲರಿಯದು ಅದೇನು ಕಾರಣ? ಭಾವದ ಕೊನೆಯಲ್ಲಿದ್ದು ಭಾವಿಸುವಾತ ನೀನಾದ ಕಾರಣ, ಶ್ರೋತ್ರಂಗಳು ಕೇಳಬಲ್ಲವೇ? ಕೇಳಲರಿಯವು ಅದೇನು ಕಾರಣ? ಶ್ರೋತ್ರಂಗಳ ಬಾಗಿಲಲ್ಲಿರ್ದು ಸುಶಬ್ದವನರಿವಾತ ನೀನಾದ ಕಾರಣ, ತ್ವಕ್ಕು ಸ್ಪರ್ಶನವ ಮಾಡಬಲ್ಲುದೇ? ಅರಿಯಲರಿಯದು, ಅದೇನು ಕಾರಣ? ತ್ವಕ್ಕಿನಿಂದ ಸೋಂಕುವ ಸ್ಪರ್ಶವನರಿವಾತ ನೀನಾದ ಕಾರಣ, ನೇತ್ರಂಗಳು ರೂಪವನರಿಯಬಲ್ಲುವೇ? ಅರಿಯಲರಿಯವು, ಅದೇನು ಕಾರಣ? ನೇತ್ರದ ಬಾಗಿಲಲಿದ್ದು ರೂಪವನರಿವಾತ ನೀನಾದ ಕಾರಣ, ನಾಸಿಕ ವಾಸಿಬಲ್ಲುದೇ? ವಾಸಿಸಲರಿಯದು, ಅದೇನು ಕಾರಣ? ನಾಸಿಕದ ಬಾಗಿಲದಲ್ಲಿದ್ದು ವಾಸಿಸುವಾತ ನೀನಾದ ಕಾರಣ, ಜಿಹ್ವೆ ರುಚಿಸಬಲ್ಲುದೇ? ರುಚಿಸಲರಿಯದು, ಅದೇನು ಕಾರಣ? ಜಿಹ್ವೆಯ ಕೊನೆಯದಲಿರ್ದು ರುಚಿಯನರಿವಾತ ನೀನಾದ ಕಾರಣ, ಜಂತ್ರಂಗಳಾಡ ಬಲ್ಲುವೇ? ಆಡಲರಿಯವು, ಅದೇನು ಕಾರಣ? ಜಂತ್ರಂಗಳನಾಡಿಸುವ ಯಂತ್ರವಾಹಕ ನೀನೆ ಕೂಡಲಚನ್ನಸಂಗಮದೇವಾ ||

೧೦

ಎನ್ನ ಮನದ ಬಾಗಿಲಲ್ಲಿದ್ದು ಪಂಚೇಂದ್ರಿಯಂಗಳನರಿದು ಸುಖಿಸುವ ಅರಿವು ಮೂರ್ತಿ ನೀನಯ್ಯಾ! ಎನ್ನ ನೇತ್ರದ ಬಾಗಿಲಲ್ಲಿದ್ದು ಸ್ವರೂಪ ಸುಖಂಗಳ ಭೋಗಿಸುವಾತ ನೀನಯ್ಯಾ, ಎನ್ನ ಶ್ರೋತ್ರದ ಬಾಗಿಲಲಲ್ಲಿದ್ದು ಸುಶಬ್ದ ಸುಖಂಗಳ ಭೋಗಿಸುವಾತ ನೀನಯ್ಯಾ, ಎನ್ನ ಜಿಹ್ವೆಯ ಬಾಗಿಲಲ್ಲಿದ್ದು ಸುರುಚಿ ಸುಖಂಗಳ ಭೋಗಿಸುವಾತ ನೀನಯ್ಯಾ, ಎನ್ನ ತ್ವಕ್ಕಿನ ಬಾಗಿಲಲ್ಲಿದ್ದು ಸ್ಪರ್ಶನವ ಮಾಡಿ ಸ್ಪರ್ಶನ ಸುಖವ ಸುಖಿಸುವಾತ ನೀನಯ್ಯಾ, ಅದೇನು ಕಾರಣವೆಂದಡೆ, ನೀನಾಡಿಸುವ ಜಂತ್ರದ ಬೊಂಬೆ ನಾನೆಂದು ಅರಿದ ಕಾರಣ, ನಿಮ್ಮ ಕರಣಂಗಳೆನ್ನ ಹರಣಗಳಾಗಿ, ಎನ್ನ ಹರಣ ಕರಣಂಗಳೇ ಕಿರಣಂಗಳಾಗಿ ಇದು ಕಾರಣ, ಕೂಡಲಚನ್ನಸಂಗಮದೇವಾ ನೀನಾಡಿಸಿದಂತೆ ನಾನಾಡಿದೆನಯ್ಯಾ ||

೧೧

ಎನ್ನ ಶ್ರೋತ್ರದ ಕೊನೆಯಲಿರ್ದು ಸುಶಬ್ದವನರಿವಾತನು ನೀನೆ, ಎನ್ನ ನೇತ್ರದ ಕೊನೆಯಲಿರ್ದು ಸುವಾಸನೆಯನರಿವಾತನು ನೀನೆ, ಎನ್ನ ಜಿಹ್ವೆಯ ಕೊನೆಯಲಿರ್ದು ಸುರುಚಿಯ ನರಿವಾತನು ನೀನೆ, ಎನ್ನ ತ್ವಕ್ಕಿನ ಕೊನೆಯಲಿರ್ದು ಸುಸ್ಪರ್ಶನವ ಮುಟ್ಟುವಾತನೂ ನೀನೆ, ಎನ್ನ ಸರ್ವಾಂಗದಲ್ಲಿದ್ದು ಸರ್ವಭೋಗೋಪಭೋಗವ ಭೋಗಿಸುವಾತನೂ ನೀನೆ, ಕೂಡಲ ಚನ್ನಸಂಗಮದೇವಾ ||

೧೨

ನೋಡುವ ನೋಟ ನೀವೆಂದರಿದೆ, ಕೇಳುವ ಶ್ರೋತ್ರ ನೀವೆಂದರಿದೆ, ವಾಸಿಸುವ ನಾಸಿಕ ನೀವೆಂದರಿದೆ, ಮುಟ್ಟುವ ಸ್ಪರ್ಶನ ನೀವೆಂದರಿದೆ, ರುಚಿಸುವ ಜಿಹ್ವೆ ನೀವೆಂದರಿದೆ, ಎನ್ನ ಕರಣಂಗಳೆಲ್ಲವೂ ನೀವೆಂದರಿದೆ, ಎನ್ನ ಕರಣಂಗಳೆಲ್ಲವೂ ನಿಮ್ಮ ಕರಣಂಗಳಾಗಿ, ಕೂಡಲ ಚೆನ್ನಸಂಗಯ್ಯಾ, ನೀವು ಕೂರ್ತು ಕರುಣಿಸಿದ ಮಹಾಪ್ರಸಾದಕ್ಕೆ ಮಹಾಪ್ರಸಾದವೆಂದೆನು ||

೧೩

ಜಿಹ್ವೆ ಗುರು, ಕಂಗಳು ಲಿಂಗ, ನಾಸಿಕವಾಚಾರು, ಶ್ರೋತ್ರ ಪ್ರಸಾದ, ಹಸ್ತ ಜಂಗಮ ಇದು ಪಂಚಾಚಾರ ಸಂಜ್ಞೆ, ಇಂತು ಶುದ್ಧಸಿದ್ಧಪ್ರಸಿದ್ಧಯೋಗಿ ಸಂಜ್ಞಿಕನಾದಡೆ, ಕೂಡಲಚನ್ನಸಂಗಯ್ಯಾ, ನಿಮ್ಮ ಶರಣ ಸರ್ವಾಂಗಲಿಂಗಿ ||

೧೪

ಹರಿವ ಜಲಕ್ಕೆ ಮೈಯೆಲ್ಲ ಕಾಲು, ಉರಿವ ಅಗ್ನಿಗೆ ಮುಖವೆಲ್ಲ ಜಿಹ್ವೆ, ಬೀಸುವ ವಾಯುವಿಗೆ ಮೈಯೆಲ್ಲ ಕೈ, ಗುಹೇಶ್ವರ, ನಿಮ್ಮ ಶರಣಂಗೆ ಸರ್ವಾಂಗ ಲಿಂಗ ||

೧೫

ಅರ್ಪಿತವೆಂಬೆನೆ? ದೇವರೊಂದಿಲ್ಲವಾಗಿ, ಅರ್ಪಿಸುವ ಭಕ್ತ ಮುನ್ನವೆ ಇಲ್ಲವಾಗಿ, ಅರ್ಪಿತ ಅನರ್ಪಿತವೆಂಬಾತನು ನೀನೆ ಕೂಡಲಚನ್ನಸಂಗಮದೇವಾ ||

ಇಂತು ನಿರ್ದೇಹಲಿಂಗಾರ್ಪಣ ಪ್ರಸಾದಸ್ಥಲ ಸಮಾಪ್ತ ||