೪೯. ಮನೋಭ್ರಾಂತಿ ನಿರಸನ ಸ್ಥಲ

ಇಂತು ಬಾಹಾಭ್ಯಂತರವೆಂಬ ಸರ್ವಾಂಗವು ಲಿಂಗವಾಗಿನೆನೆವ, ನೆನಹಿಕೊಂಬ, ಎರಡಿಲ್ಲದೆ ನಿಂದು ಮನೋಲಯವಾದ ಬ್ರಹ್ಮಜ್ಞಾನಿಯಪ್ಪ ಮಹಾಘನ ಪ್ರಾಣಲಿಂಗಿಯ ಮನೋಭ್ರಾಂತಿ ನಿರಸನಸ್ಥಲ ||

ಗ್ರಂಥ |

ಏಕದೇವೋ ಮನಸ್ಸಾಕ್ಷೀ ಮನೋ ಮೇ ದೃಶ್ಯತೇ ಮಯಾ
ತರ್ಹಿ ದೇವಸ್ತ್ವಮೇವಾಸಿ ಏಕದೇವ ಇತಿ ಶ್ರುತಿಃ ||  || ೧ ||

ಜ್ಞೇಯಂ ಚ ಸರ್ವ ತಿರ್ಥ ಚ ಜ್ಞಾನಂ ಚ ಮನ ಉಚ್ಯತೇ
ಜ್ಞೇಯಂ ಜ್ಞಾನಂ ಸಮಂ ಕೃತ್ವಾ ನಾನ್ಯಮಸ್ತಿ ದ್ವಿತೀಯಕಂ ||  || ೨ ||

ಚಿಂತಯಾಮಿ ಶಿವಂ ಕೇನ ಜಾತಂ ಶಿವಮಯಂ ಮನಃ
ಪಯೋನಿಮಗ್ನ ವಪುಷೋ ಜಲತೃಷ್ಣಾ ನ ಜಾಯತೇ ||  || ೩ ||

ವಚನ |

ಆರಾದಡೆಯೂ ನಿಮ್ಮ ನೆನೆವರಯ್ಯಾ, ನಾ ನಿಮ್ಮ ನೆನೆವನಲ್ಲ, ಅದೇನು ಕಾರಣವೆಂದಡೆ, ಎನ್ನ ನೆನೆವ ಮನ ನೀವೇಯಾದಿರಾಗಿ; ಆರಾದಡೆಯೂ ನಿಮ್ಮ ಪೂಜಿಸುವರಯ್ಯಾ, ನಾ ನಿಮ್ಮ ಪೂಜಿಸುವನಲ್ಲ, ಅದೇನು ಕಾರಣವೆಂದಡೆ, ಎನ್ನ ತನುವಿಂಗೆ ನೀವೆ ಪೂಜೆಯಾದಿರಾಗಿ; ಆರಾದಡೆಯೂ ನಿಮಗರ್ಪಿಸುವರಯ್ಯಾ, ನಾ ನಿಮಗರ್ಪಿಸುವನಲ್ಲ, ಅದೇನು ಕಾರಣವೆಂದಡೆ, ಎನ್ನ ಸರ್ವಾಂಗವೂ ನಿಮಗರ್ಪಿತವಾಯಿತ್ತಾಗಿ; ಇದು ಕಾರಣ, ಭಕ್ತದೇಹಿಕ ದೇವ, ದೇವ ದೇಹಿಕ ಭಕ್ತನೆಂಬ ಶ್ರುತಿಯನರಿದು, ಕೂಡಲಚನ್ನಸಂಗಮದೇವಾ ||

ಕಂಗಳು ತುಂಬಿದ ಬಳಿಕ ನೋಡಲಿಲ್ಲ, ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ, ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ, ಮನ ತುಂಬಿದ ಬಳಿಕ ನೆನೆಯಲಿಲ್ಲ, ಮಹಂತ ಕೂಡಲ ಸಂಗಮದೇವ ||

ನೆನಹಿನ ನಲ್ಲನು ಮನೆಗೆ ಬಂದಡೆ ನೆನೆವುದಿನ್ನಾರನವ್ವಾ? ನೆರೆವ ಕ್ರೀಯಲ್ಲಿ ನೆರೆದು ಸುಖಿಯವುದಲ್ಲದೆ ನೆರೆವುದಿನ್ನಾರನವ್ವಾ? ನೆನಹಿನ ನಲ್ಲ ಉರಿಲಿಂಗದೇವನ ಕಂಡ ಬಳಿಕ ನೆನೆವುದಿನ್ನಾರ ಹೇಳವ್ವಾ? ||

ನೆನೆ ನೆನೆಯಂದಡೆ, ನಾನಿನ್ನೇನ ನೆನೆವನೆಯ್ಯಾ? ಎನ್ನ ಕಾಯವೇ ಕೈಲಾಸವಾಯಿತ್ತು, ಮನ ಲಿಂಗವಾಯಿತ್ತು, ತನು ಸಜ್ಜೆಯಾಯಿತ್ತು ನೆನೆವಡೆ ದೇವರುಂಟೆ? ನೋಡುವಡೆ ಭಕ್ತರುಂಟೇ? ಗುಹೇಶ್ವರನೆಂಬ ಲಿಂಗವ ಬೆರಸಿ ಸಮಧಾತುವಾದ ಬಳಿಕ, ನೆನೆಯಲಿಲ್ಲ ಕಾಣಾ, ಸಿದ್ಧರಾಮಯ್ಯಾ ||

ನೆನೆವೆನೆ? ಮರೆದವನಲ್ಲ, ನೆನೆಯನೇ? ಉದಾಸೀನಿಯಲ್ಲ, ಕುರುಹೆಂಬೆನೆ? ತೆರಹಿಲ್ಲವಾಗಿ, ಅರಿಯೆನಿನ್ನಾವ ಭಾವಂಗಳೆಂಬುವನೂ, ಎರಡಳಿದು ಒಂದುಳಿದ ಕಾರಣ ನೆನೆಯ ಲಿಲ್ಲೆಂದನಂಬಿಗಚೌಡಯ್ಯ ||

ಶಿವನ ನೆನೆದಡೆ ಭವಹಿಂಗುವದೆಂಬ ವಿವರಗೇಡಿಗಳ ಮಾತ ಕೇಳಲಾಗದು, ಅದೇನು ಕಾರಣವೆಂದಡೆ, ಜ್ಯೋತಿಯ ನೆನೆದಡೆ ಕತ್ತಲೆ ಹರಿವುದೆ? ಮೃಷ್ಟಾನವ ನೆನೆದಡೆ ಹೊಟ್ಟೆ ತುಂಬುವುದೆ? ರಂಭೆಯ ನೆನೆದಡೆ ಕಾಮದ ಕಳವಳ ಹಿಂಗುವುದೆ? ನೆನೆದಡಾಗದು, ನಿರ್ಧರಿಸಿ ತಾನಾದಲ್ಲದೆ ಸದ್ಗುರು ಸೋಮನಾಥಲಿಂಗವು ||

ದೇವರ ನೆನೆದು ಮುಕ್ತರಾದೆವೆಂಬ ಯುಕ್ತಿಶೂನ್ಯರ ಮಾತ ಕೇಳಲಾಗದು, ಅದೇನು ಕಾರಣವೆಂದಡೆ, ದೇವರ ನೆನೆವಂಗೆ ದೇವರುಂಟೆ? ದೂರ ದೂರದಲ್ಲಿದ್ದವರ ನೆನೆವರಲ್ಲದೆ ಸಮೀಪದಲ್ಲಿದ್ದವರ ನೆನೆವವರಿಲ್ಲ, ಇದನರಿದು, ನೀನೆನ್ನೊಳಡಗಿ ನಾ ನಿನ್ನ ನೆನೆಯಲಿಲ್ಲ! ನೀನೆನಗೆ ಮುಕ್ತಿಯನೀಯಲಿಲ್ಲ ನೀನಾನೆಂದೆನಲಿಲ್ಲ ಗಜೇಶ್ವರಾ ||

ಮನವೆ ಲಿಂಗವಾದ ಬಳಿಕ ಇನ್ನಾರ ನೆನೆವುದಯ್ಯಾ? ಭಾವವೆ ಲಿಂಗೈಕ್ಯವಾದ ಬಳಿಕ ಬಯಸುವದಿನ್ನಾರನು? ಭ್ರಮೆಯಳಿದು ನಿಜವು ಸಾಧ್ಯವಾದ ಬಳಿಕ ಅರಿವುದಿನ್ನಾರನು ಗುಹೇಶ್ವರಾ ||

ತನು ರೂಪಾದ ಬಳಿಕ ಆರಿಗೆ ಮಾಡುವೆ? ಮನ ನಿಮ್ಮ ರೂಪಾದ ಬಳಿಕ ಆರ ನೆನೆವೆ? ಪ್ರಾಣ ನಿಮ್ಮ ರೂಪಾದ ಬಳಿಕ ಆರನಾರಾಧಿಸುವೆ? ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ ಆರನರಿವೆ? ಚನ್ನಮಲ್ಲಿಕಾರ್ಜುನಾ, ನಿಮ್ಮಲ್ಲಿ ನೀವಾಗಿ, ನಿಮ್ಮಿಂದ ನಿಮ್ಮ ಮರೆವೆ ||

೧೦

ನೆನಹು ಸತ್ತಿತ್ತು, ಭ್ರಾಂತು ಬೆಂದಿತ್ತು, ಅರಿವು ಅರತಿತ್ತು, ಕುರುಹುಗೆಟ್ಟಿತ್ತು, ಅಲ್ಲಿ ಗತಿಯನರಸುವರೇ? ಮತಿಯನರಸುವರೇ? ಅಂಗವೆಲ್ಲ ನಷ್ಟವಾಗಿ, ಲಿಂಗಲೀಯವಾದ ಬಳಿಕ ಕಂಗಳಂಗದ ಕಳೆಯ ಬೆಳಗಿನ ಭಂಗ ಹಿಂಗಿತ್ತು ಗುಹೇಶ್ವರಾ ||

೧೧

ನೆನೆವಡೆ ಮನವಿಲ್ಲ, ತನುವಿನಾಸೆ ಮುನ್ನಿಲ್ಲ, ನೆನೆವ ಮನವ ನೇತಿ ಮಾಡುವ ಘನಕ್ಕೆ ಘನವನೇನೆಂಬೆನಯ್ಯಾ? ತನ್ನಿಂದ ತಾನಾದುದು ಭಿನ್ನವಿಲ್ಲದೆ ನಿಂದ ನಿಜವು! ಅನಾಯಾಸದಿರವಿಂಗೆ ಬೆರಗಾದೆ ಗುಹೇಶ್ವರಾ ||

ಇಂತು ಮನೋಭ್ರಾಂತಿ ನಿರಸನಸ್ಥಲ ಸಮಾಪ್ತ

ಇಂತಪ್ಪ ಮನೋಭ್ರಾಂತಿ ನಿರಸನಸ್ಥಲವೆ ಕಡೆಯಾಗಿ ಷಟ್ಪ್ರಕಾರವನುಳ್ಳ
ಸರ್ವಸ್ವಾನುಭಾವ ವಿವೇಕ ಸಂಪೂರ್ಣಮಪ್ಪ ಬ್ರಹ್ಮಜ್ಞಾನಿಯ
ಮಹಾಘನಪ್ರಾಣಲಿಂಗಿಸ್ಥಲ ಸಮಾಪ್ತ ||

ಶ್ರೀ ಶ್ರೀ ಶ್ರೀ ಇಂತು ಶ್ರೀಮದಮಿತೋರು ಲಿಂಗಾಂಗ
ಸಂಯೋಗಾನುಭವ ಪ್ರಸಿದ್ಧ ಪರಿಪೂರ್ಣ ಶೀಲ
ಪರಮಾದ್ವೈತ ವಿಶ್ರಾಂತರುಮಪ್ಪ ಪರಮ ಚರರೂಪ
ಶ್ರೀ ಕರಸ್ಥಲದ ಮಲ್ಲಿಕಾರ್ಜುನೊಡೆಯರು ಸೇರಿಸಿದ
ಮಹಾನುಭವ ಬೋಧೆಯಪ್ಪ
ಶ್ರೀಮದ್ಭ್ರಹ್ಮಾದ್ವೈತ ಸಿದ್ಧಾಂತ ಷಟ್‌ಸ್ಥಲಾಭರಣದೊಳು
ಬ್ರಹ್ಮಜ್ಞಾನಿಯಪ್ಪ ಪ್ರಾಣಲಿಂಗಿಯ ವರ್ಗಂ
ಚತುರ್ಥ ಪರಿಚ್ಛೇದ ಸಮಾಪ್ತ ಮಂಗಳ ಮಹಾ ||

 

ಶರಣಸ್ಥಲ

೫೦. ಶರಣ ಸ್ಥಲ

ಇಂತು ಸ್ವಾನುಭಾವ ವಿವೇಕದಿಂ ಪ್ರಾಣಲಿಂಗಿಯಾಗಿ, ಆ ಸ್ವಾನುಭಾವ ವಿವೇಕದೊಳಗಣ ಸದಾನಂದದಿಂ ಬ್ರಹ್ಮಜ್ಞಾನಿಯಪ್ಪ ಪ್ರಾಣಲಿಂಗಿ ತಾನೆ ಶರಣನಾದ ಶರಣಸ್ಥಲ ||

ಗ್ರಂಥ |

ಪತಿರ್ಲಿಂಗಂ ಸತೀಚಾಹಂ ಹೃದಿ ಯುಕ್ತಃ ಸದಾಶಿವಃ
ಪಂಚೇಂದ್ರಿಯ ಸುಖಂ ನಾಸ್ತಿ ಶರಣಸ್ಥಲಮುತ್ತಮಂ ||  || ೧ ||

ಶಿವಾಂಗ ಶರಣಸ್ಸಾಕ್ಷಾಚ್ಛರಣಾಂಗಂ ಶಿವೋ ಭವೇತ್‌ || ೨ ||

ವೃತ್ತ |

ಯಃಗಸ್ಚ ನಿದ್ರಾ ಕೃತವಶ್ಚರಿತ್ರಂ
ಸ್ವೇಚ್ಛಾಸನಂ ದೇವ ಮಹಾ ನಿವೇದ್ಯಂ
ಲೀಲಾರ್ಪಣಂ ದೇವ ಪವಿತ್ರದಾನಂ
ಜಪಃ ಪ್ರಲಾಪಃ ಶಯನಂ ಪ್ರಣಾಮಃ ||  || ೩ ||

ಗ್ರಂಥ |

ಕೃತಿಸ್ಸೇವಾ ಗತಿರ್ಯಾತ್ರಾ ಮತಿಶ್ಚಿಂತಾ ವಚಸ್ತುತಿಃ
ಅಹೋ ಸರ್ವಾತ್ಮನಶ್ಯಂಭೋಃ ಸಂಧಿಯಾಂ ಸರ್ವಾಥರ್ಚನಂ ||  || ೪ ||

ವಚನ |

ಅಂಗವ ಲಿಂಗ ಮುಖದಲ್ಲಿ ಅರ್ಪಿಸಿ ಅಂಗ ಅಂಗನವಾಯಿತ್ತು, ಮನವರಿದು ಲಿಂಗಕ್ಕರ್ಪಿಸಿ ಮನ ಲಯವಾಯಿತ್ತು, ಅಂಗಭಾವ ಮನೋಭಾವವಳಿದ ಕಾರಣ, ಕಾಯ ಅಕಾಯವಾಯಿತ್ತು ಎನ್ನ ಅಕಾಯದ ಸುಖ ಭೋಗವ ಲಿಂಗವೆ ಭೋಗಿಸುವನಾಗಿ ಶರಣ ಸತಿ ಲಿಂಗ ಪತಿಯಾದೆನು ಇದುಕಾರಣ, ಚನ್ನಮಲ್ಲಿಕಾರ್ಜುನನೆಂಬ ಗಂಡನ ಒಳಹೊಕ್ಕು ಬೆರಸಿದೆನು ||

ಜ್ಞಾನ ತನ್ನೊಳಗೆ, ಅಜ್ಞಾನ ತನ್ನೊಳಗೆ, ಎರಡುವರಿಯನವ ಸಹಜ ಸುಜ್ಞಾನಿಯಾಗಿ! ಲಿಂಗ ವಶನಾಗಿದ್ದಲ್ಲಿ ಪರಿಣಾಮಿ ಕೂಡಲಚನ್ನಸಂಗಾ ನಿಮ್ಮ ಶರಣನು ||

ಲಿಂಗ ಮುಂತಾಗಿಯೆ ನಡೆವನು ಶರಣನು, ಲಿಂಗ ಮುಂತಾಗಿಯೆ ನುಡಿವನು ಶರಣನು, ಲಿಂಗ ಮುಂತಾಗಿಯೆ ರುಚಿಸುವನು ಶರಣನು, ಲಿಂಗ ಮುಂತಾಗಿಯೆ ನೋಡುವನು ಶರಣನು, ಲಿಂಗ ಮುಂತಾಗಿಯೆ ಸಂಗವ ಮಾಡುವನು ಶರಣನು, ಲಿಂಗ ಮುಂತಾಗಿಯೆ ತೃಪ್ತಿಯ ನೈದುವನು ಶರಣನು, ಲಿಂಗ ಕಾಯವೇ ಶರಣನ ಕಾಯ, ಶರಣನ ಕಾಯವೇ ಲಿಂಗವಾಗಿ, ಇದು ಕಾರಣ, ಕೂಡಲಚನ್ನಸಂಗಯ್ಯಾ, ನಿಮ್ಮ ಶರಣ ಸರ್ವಾಂಗಲಿಂಗಿ ||

ಶರಣ ನಿದ್ರೆಗೈದಡೆ ಜಪವೋ! ಶರಣನೆದ್ದಿದ್ದಡೆ ಶಿವರಾತ್ರಿ, ಕಾಣಿಭೋ! ಶರಣ ನಡೆದುದೆ ಪಾವನ, ಶರಣ ನುಡಿದುದೆ ಶಿವಶಾಸ್ತ್ರ, ಕಾಣಿಭೋ! ಕೂಡಲಸಂಗನ ಶರಣನ ಕಾಯವೆ ಕೈಲಾಸ ಕಾಣಿಭೊ ||

ಆತ್ಮನ ನಿಜವನರಿದು, ಪರಮಾತ್ಮ ತಾನೆಂದರಿದ ಶರಣಂಗೆ, ಎಂತಿರ್ದಡಂತೆ ಪೂಜೆ ನೋಡಾ! ಆ ಶರಣ ಭೋಗಿಸಿತ್ತೆಲ್ಲವೂ ಲಿಂಗಾರ್ಪಿತ, ಆ ಶರಣ ರುಚಿಸಿತ್ತೆಲ್ಲವೂ ಪ್ರಸಾದ, ಆ ಶರಣನರಿದುದೆಲ್ಲವೂ ಪರಬ್ರಹ್ಮ, ಆ ಶರಣ ನುಡಿದುದೆಲ್ಲವೂ ಶಿವತತ್ವ, ಆ ಶರಣ ತಾನೆ ಕೂಡಲಚನ್ನಸಂಗಯ್ಯನು ||

ತೆರಹಿಲ್ಲದ ನಡೆ ತರೆಹಿಲ್ಲದ ನುಡಿ, ತೆರಹಿಲ್ಲದ ಸಂಭಾಷಣೆಯ ಸುಖವು, ತೆರಹಿಲ್ಲದ ನಂಬುಗೆ, ತೆರಹಿಲ್ಲದ ವಿಚಾರ ಕೂಡಲಚನ್ನಸಂಗಮದೇವ, ನಿಮ್ಮ ಶರಣಂಗೆ ||

ಬೇಕೆನಲಾಗದು ಶರಣಂಗೆ, ಬೇಡೆನಲಾಗದು ಶರಣಂಗೆ, ಬಂದ ಸುಖವನತಿಗಳೆಯಲಾಗದು ಶರಣಂಗೆ, ಇದು ಕಾರಣ, ಕೂಡಲಚನ್ನಸಂಗನ ಶರಣನು ಉಂಡುಪವಾಸಿ ಬಳಸಿ ಬ್ರಹ್ಮಚಾರಿ ||

ಬೇಕೆನಲಾಗದು ಶರಣಂಗೆ, ಬೇಡೆನಲಾಗದು ಶರಣಂಗೆ, ಲಿಂಗ ವಶದಿಂದ ಬಂದುದ ಪತಿಕರಿಸದೆ ಇದ್ದಡೆ, ಮಹಾಘನವು ಅವಗವಿಸದು ನೋಡಾ, ಅದೆಂತೆಂದಡೆ : ಅವ್ರತಂ ಸುವ್ರತಂ ಚೈವ ವೇಶ್ಯಾ ದಿವ್ಯಾನ್ನ ಭೂಷಣಂ | ಅಕಲ್ಪಿತಂ ಚ ಭೋಗನಾಂ ಸರ್ವತ್ರ ಲಿಂಗಪ್ರೇರಣಂ || ಎಂದುದಾಗಿ, ಇದು ಕಾರಣ, ಕೂಡಲಚನ್ನಸಂಗಯ್ಯ ನಿಮ್ಮ ಶರಣರಪರಾಧಿಗಳೆಂದು ನುಡಿದವರಿಗೆ ನಾಯಕ ನರಕ ತಪ್ಪದು ||

ಬಯಸಿ ಬಂದುದಂಗಕ್ಕೆ ಭೋಗ; ಬಯಸದೆ ಬಂದುದು ಲಿಂಗಕ್ಕೆ ಭೋಗ, ಅಂಗಭೋಗನರ್ಪಿತ, ಲಿಂಗಭೋಗ ಪ್ರಸಾದ; ಬೇಕೆಂಬುದು ಕಾಯಗುಣ, ಬೇಡೆಂಬುದು ವೈರಾಗ್ಯ, ಈ ಉಭಯವನತಿಗಳೆದು ಭೋಗಿಸಬಲ್ಲಡೆ, ಕೂಡಲಚನ್ನಸಂಗಯ್ಯನಲ್ಲಿ ಆತನೆ ಶರಣ ||

೧೦

ಒಲ್ಲೆನೆಂಬುದು ವೈರಾಗ್ಯ, ಒಲಿವೆನೆಂಬುದು ಕಾಯಗುಣ; ಆವ ಪದಾರ್ಥವಾದಡೂ ತನ್ನಿದ್ದೆಡೆಗೆ ಬಂದಡೆ ಲಿಂಗಾರ್ಪಿತವ ಮಾಡಿಕೊಂಬುದು ಕೂಡಲ ಸಂಗಯ್ಯನೊಲಿಸಬಂದ ಪ್ರಸಾದಕಾಯವ ಕೆಡಿಸಲಾಗದು ||

೧೧

ಆರುವನೊಲ್ಲೆನೆಂದು ಅರಣ್ಯಕ್ಕೆ ಹೋಹುದು ಕಾಯಕವಲ್ಲ; ದುರುಳುತನ! ಊರೊಳಗಿದ್ದಡೆ ನರರ ಹಂಗು; ಅರಣ್ಯಕ್ಕೆ ಹೋದೆಡೆ ತರುಗಳ ಹಂಗು, ಆರ ಹಂಗಿಲ್ಲ! ಬಂದ ಪದಾರ್ಥವ ಲಿಂಗಕರ್ಪಿತವ ಮಾಡಿ ಕೊಂಬ ಶರಣನೇ ಜಾಣ, ಸಕಳೇಶ್ವರಾ ||

೧೨

ಮಠವೇಕೋ, ಪರ್ವತವೇಕೋ, ಜನವೇಕೋ, ನಿರ್ಜನವೇಕೋ, ಚಿತ್ತ ಸಮಾಧಾನವುಳ್ಳ ಶರಣಂಗೆ? ಮತ್ತೆ, ಹೊರಗಣ ಚಿಂತೆ, ಧ್ಯಾನಮೌನ, ಜಪತಪವೇಕೋ ತನ್ನ ತಾನರಿದ ಶರಣಂಗೆ, ಗುಹೇಶ್ವರಾ? ||

೧೩

ಸರ್ವಸಂಗ ಪರಿತ್ಯಾಗವ ಮಾಡಿದ ಶರಣನ ಸಂಸಾರಿಗಳವರೆಂತು ಮೆಚ್ಚುವರಯ್ಯಾ? ಅಡವಿಯೊಳಗಿದ್ದಡೆ ಮೃಗವೆಂಬರು; ಊರೊಳಗಿದ್ದಡೆ ಸಂಸಾರಿಯೆಂಬರು; ಮಾತನಾಡದಿದ್ದಡೆ ಮೂಗನೆಂಬರು; ಮಾತನಾಡಿದಡೆ ಜ್ಞಾನಿಗೇಕಯ್ಯಾ ಮಾತೆಂಬರು; ಹೊನ್ನ ಬಿಟ್ಟಡೆ ದರಿದ್ರನೆಂಬರು; ಹೆಣ್ಣ ಬಿಟ್ಟಡೆ ನಪುಂಸಕನೆಂಬರು; ಪುಣ್ಯವ ಬಿಟ್ಟಡೆ ಪೂರ್ವದ ಕರ್ಮಿಯೆಂಬರು; ನಿಜವನಾಡಿದಡೆ ನಿಷ್ಠುರಿಯೆಂಬರು; ಸಮತೆಯನಾಡಿದಡೆ ಅಂಜುವೆನೆಂಬರು ಇದು ಕಾರಣ, ಕೂಡಲಚನ್ನಸಂಗಯ್ಯಾ, ನಿಮ್ಮ ಶರಣ ಲೋಕದಿಚ್ಛೆಯ ನಡೆಯ; ಲೋಕದಿಚ್ಛೆಯ ನುಡಿಯ ||

೧೪

ನ್ಯಾಯ ನಿಷ್ಠುರಿ, ದಾಕ್ಷಿಣ್ಯಪರ ನಾನಲ್ಲ! ಲೋಕವಿರೋಧಿ ಶರಣನು; ಆರಿಗಂಜುವನಲ್ಲ! ಕೂಡಲಚನ್ನಸಂಗಮದೇವರ ರಾಜತೇಜದೊಳಿಪ್ಪನಾಗಿ, ಮತ್ತಾರಿಗಂಜುವನಲ್ಲ ||

೧೫

ಲೋಕ ಒಂದನೆಂದಡೆ ತಾನೊಂದನೆನಬೇಡ, ಮತ್ತಾರೇನಂದಡೆಯೂ ತನ್ನನೆಂದರೆಂದೆನ ಬೇಡ, ಅದೆಂತೆಂದಡೆ ; ನಾಹಂ ಲೋಕೋ ನ ಲೋಕೋsಹಂ ಲೋಕನಿಂದಾ ಕುಲೋಮಮ | ಇತಿ ನಿಶ್ಚಯವದ್ಭಾವಃ ಶಿವಜ್ಞಾನೀತಿ ಕಥ್ಯತೇ || ಇಂತೆಂದುದಾಗಿ, ಭೈತ್ರಕ್ಕೆ ಬೆಂಗುಂಡ ನಿಕ್ಕಿದಂತಿರಬೇಕು ಹಿರಿಯರು, ಗುಹೇಶ್ವರಾ ||

೧೬

ಶಬ್ದವೂ ಅಶಬ್ದವೂ ಶಬ್ದದಲ್ಲಿಯೇ ಕಾಣಬಹುದು, ಇದ್ದವರಿದ್ದ ಸ್ಥಲವನೇ ನುಡಿವರು ಅದಕ್ಕದು ಸಹಜ! ಲಿಂಗದ ನಡೆ, ಲಿಂಗದ ನುಡಿ ಲಿಂಗದ ನೋಟ, ಲಿಂಗದ ಕೂಟ ಕೂಡಲ ಚನ್ನಸಂಗಯ್ಯಾ ನಿಮ್ಮ ಶರಣಂಗೆ ||

೧೭

ಶರಣನು ದೃಷ್ಟಾದೃಷ್ಟವೆರಡುವನರಿಯನು, ಸಾವಯ ನಿರವಯವನೇನೆಂದು ವಿವರಿಸಿ ನುಡಿಯನು, ಶರಣನು ತಾನು ಸ್ವತಂತ್ರನಾಗಿ ಭಾವರಹಿತನು, ವಿಕೃತ ವೇಷದಿಂದ ಸುಕೃತವ ಜೋಡಿಸುವನಲ್ಲ, ಪ್ರಕೃತಿ ಗುಣವಿಡಿದು ಮೂರ್ತಿಯಾದ ಉಪಜೀವಿತನಲ್ಲ, ಇದು ಕಾರಣ, ಕೂಡಲಚನ್ನಸಂಗಾ, ನಿಮ್ಮ ಶರಣನು ಸಾರಾಯ ಸನ್ಮತನು ||

೧೮

ಮೂರ್ತನಲ್ಲ, ಅಮೂರ್ತನಲ್ಲ ಲಿಂಗದಲ್ಲಿ ಪ್ರಾಣ ಸಂಚಿತ, ಪ್ರಾಣದಲ್ಲಿ ಪ್ರಸಾದ ಸಂವರಣೆ, ಪ್ರಸಾದದಲ್ಲಿ ಕಾಯಾಶ್ರಿತ! ಲೋಕ ಲೌಕಿಕ ಪ್ರಕಾರದುದಯದವನಲ್ಲ, ಕೂಡಲ ಚನ್ನಸಂಗಯ್ಯಾ, ನಿಮ್ಮ ಶರಣನು ||

೧೯

ಉದ್ಭ್ರಮಿಯಲ್ಲ, ಉದ್ದೇಶಿಯಲ್ಲ; ನಿದ್ದೆಗೆಟ್ಟವನು ನಿಜವನೇ ಬೆಳಗುತ್ತಿಹನು, ನಿಶ್ಚಿಂತ ಶರಣನು ಚಿಂತೆಗೆಟ್ಟು, ಸ್ಥಿರವಾಗಿ ನಿಂದು ಸೀಮೆಯ ಕೆಡಿಸಿ ನಿಸ್ಸೀಮನಾದ, ಬೋಧೆಯ ಕೆಡಿಸಿ ನಿರ್ಬೋಧನಾದ, ಕಾಯವ ಕೆಡಿಸಿ ಕರ್ಮಾದಿ ಗುಣವಿರಹಿತನಾದ ; ಆಶೆಯ ಕೆಡಿಸಿ ನಿರಾಶಕನಾದ, ಇದು ಕಾರಣ, ಕೂಡಲಚನ್ನಸಂಗಯ್ಯಾ, ನಿಮ್ಮ ಶರಣಂಗೆ ಆರೂ ಸರಿಯಿಲ್ಲ ||

೨೦

ದೇಹಿಯಲ್ಲ, ನಿರ್ದೇಹಿಯಲ್ಲ; ಬೋಧನಲ್ಲ, ನಿರ್ಭೋಧನಲ್ಲ; ಕಾಮಿಯಲ್ಲ, ನಿಷ್ಕಾಮಿಯಲ್ಲ; ಆಶೆವಿದು ಅವವ ಆಮಿಷನಲ್ಲ; ಅವಗುಣವಿಲ್ಲದ ನಿರ್ಗುಣಿ ನೋಡಯ್ಯಾ! ನಿರಂತರ ಸುಖಿ, ಕೂಡಲಚನ್ನಸಂಗಯ್ಯಾ, ನಿಮ್ಮ ಶರಣ ||

೨೧

ಸ್ಥಲವನರಿದೆಹೆನೆಂದಡೆ ಕುಳವನರಿಯಲೆಬೇಕು, ಕುಳವನರಿದೆಹೆನೆಂದಡೆ ಭ್ರಾಂತು ಸೂತಕವಿಲ್ಲ, ಕಂಡಯ್ಯಾ ! ಲಿಂಗದಲ್ಲಿ ತನುಮನ ಬಯಲಾದ ನಿಜಲಿಂಗೈಕ್ಯಂಗೆ ಲಿಂಗದೇವಾ ಎಂದು ಉಪಚರಿಸಲುಂಟೇ ಆಗಮ ಮುನ್ನವೆ ಹಿಂಗಿತ್ತು, ಆಚಾರ ಮೀರಿತ್ತು; ಕೂಡಲ ಚನ್ನಸಂಗಯ್ಯಾ ನಿಮ್ಮ ಶರಣ ಸುಚರಿತ್ರಂ ಭೋ ||

೨೨

ಲಿಂಗಸ್ಥಲ ಲಿಂಗದಲ್ಲಿಯೇ ನಿಂದಿತ್ತು; ಜಂಗಮಸ್ಥಲ ಜಂಗಮದಲ್ಲಿಯೇ ನಿಂದಿತ್ತು; ಪ್ರಸಾದ ಸ್ಥಲ ಪ್ರಸಾದದಲ್ಲಿಯೇ ನಿಂದಿತ್ತು; ಕೂಡಲಚನ್ನಸಂಗಯ್ಯಾ ನಿಮ್ಮ ಶರಣಂಗೆ ||

ಶ್ರೀಮದ್ಬ್ರಹ್ಮಜ್ಞಾನಿಯಪ್ಪ ಶರಣನ ಪ್ರಥಮಸ್ಥಲ ಸಮಾಪ್ತ ||

೫೧. ಆಶಾಲಾಂಛನ ನಿರಸನಸ್ಥಲ

ಇಂತಪ್ಪ ಸ್ಥಳಕುಳವನರಿದಾಚರಿಸಿ ಪರಮ ಜಂಗಮಸ್ಥಲ ಸಂಪನ್ನನಾಗಿ ಜೀವಭಾವದಿಂದ ಲೋಕವನಾಶ್ರಯಿಸುವ ಆಶೆ ಲಘುವೆಂದರಿದು ಆ ಆಶಾಪಾಶವ ಹರಿದು, ನಿರಾಶಭರಿತನಾಗಿ ಸಹಜ ನಿರಾಭಾರಿಯಾದ ಬ್ರಹ್ಮಜ್ಞಾನಿಯಪ್ಪ ಮಹಾಘನ ಶರಣನ ಆಶಾಲಾಂಛನ ನಿರಸನ ಸ್ಥಲ ||

ಗ್ರಂಥ |

ಜಗತಾಂ ಪತಿರರ್ಥಿತ್ವಾದ್ವಿಷ್ಣುರ್ವಾಮನತಾಂ ಗತಃ
ಅಧಿಕಃ ಕಃ ತಸ್ಮಾದ್ಯೋನಯಾಸ್ಯತಿ ಲಾಘವಂ ||  || ೧ ||

ವ್ಯಾಧೀನಾಮಾಕರಂ ತೋಯಂ ಪಾಪಾನಾಮಾಕರಂ ಸ್ತ್ರೀಯ
ನಾಶಾನಾಮಾಕರಂ ಕ್ರೋಧ ಆಶಾ ಪರಿಭವಸ್ತಥಾ ||  || ೨ ||

ಆಶಾಯ ವೇಷಧಾರೀ ಚ ವೇಷಾಚ್ಚ ಗ್ರಾಸ ಸಂಭವಃ
ಗ್ರಾಸಚ್ಚ ದೋಷ ಸಂಭೂತಿಸ್ತಸ್ಮಾದಾಶಾಂ ಪರಿತ್ಯಜೇತ್‌ ||  || ೩ ||

ಆಶಾಯಾಶ್ಚತು ಯೇ ದಾಸಾಸ್ತೇ ದಾಸಾಃ ಸರ್ವಲೋಕಸ್ಯ
ಆಶಾ ತು ಯೇಷಾಂ ದಾಸೀ ಚ ತೇಷಾಂ ದಾಸಯತೇ ಲೋಕಃ ||  || ೪ ||

ಆಶಾ ಚ ನರಕಂ ಚೈವ ನಿರಾಶಾ ಮುಕ್ತಿರೇವಚ
ಆಶಾ ನಿರಾಶಾ ಹೀನಾ ಯೇ ತತ್ಸುಖೇನ ಸಮಂ ನ ಹಿ ||  || ೫ ||

ವಚನ |

ಆಸೆಯಿಂದ ಬಿಟ್ಟು ಕಿರಿಯರಿಲ್ಲ; ನಿರಾಶೆಯಿಂದ ಬಿಟ್ಟು ಹಿರಿಯರಿಲ್ಲ; ದಯದಿಂದ ಬಿಟ್ಟು ಧರ್ಮವಿಲ್ಲ; ವಿಚಾರದಿಂದ ಬಿಟ್ಟು ಸಹಾಯಿಗಳಿಲ್ಲ ಸಚರಾಚರಕ್ಕೆ ಸಕಳೇಶ್ವರನಿಂದ ಬಿಟ್ಟು ದೈವವಿಲ್ಲ ||

ಹೊರವೇಷದ ವಿಭೂತಿ ರುದ್ರಾಕ್ಷಿಯನ್ನು ಧರಿಸಿಕೊಂಡು ವೇದಶಾಸ್ತ್ರ ಪುರಾಣ ಆಗಮದ ಬಹುಪಾಠಿಗಳು, ಅನ್ನ, ಹೊನ್ನು, ವಸ್ತ್ರವ ಕೊಡುವನ ಬಾಗಿಲ ಕಾಯ್ದು ಮಣ್ಣ ಪುತ್ಥಳಿಯಂತಿಹ ನಿತ್ಯನಿಯಮದ ಹಿರಿಯರುಗಳು, ಅದೆಂತೆಂದಡೆ: ವೇದವೃದ್ಧಾ ವಯೋವೃದ್ಧಾಃ ಶಾಸ್ತ್ರವೃದ್ಧಾಃ ಬಹುಶ್ರುತಾ ಇತ್ತೇತೇ ಧನವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ, ಎಂದುದಾಗಿ, ಎಲ್ಲ ಹಿರಿಯರುಗಳು ಲಕ್ಷ್ಮಿಯ ದ್ವಾರಪಾಲಕರಾದರು, ಗುಹೇಶ್ವರಾ ||

ಅನ್ನದಾನಿ ವಸ್ತ್ರದಾನಿ, ಹಿರಣ್ಯದಾನಿಗಳ ಮನೆಯ ಬಾಗಿಲ ಕಾದಿಪ್ಪರಯ್ಯಾ, ಬಹುವಿಧದ ವೇಷಧಾರಿಗಳು! ಅದೆಂತೆಂದಡೆ : ವಯೋವೃದ್ದಾಸ್ತಪೋ ವೃದ್ಧಾ ವೇದವೃದ್ಧಾ ಬಹುಶ್ರುತಾ ಸರ್ವೇ ಕಾಂಚನ ವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ ಎಂದುದಾಗಿ, ದೈನ್ಯವ ಬಿಟ್ಟಿಪ್ಪ ನಿರಾ ಭಾರಿಗಳ ತೋರಿ ಬದುಕಿಸಯ್ಯಾ ಕೂಡಲಚನ್ನಸಂಗಮದೇವಾ ||

ಮುಸುರೆಯ ಮಡಕೆಯ ನೊಣ ಮುತ್ತಿಕೊಂಡಿಪ್ಪಂತೆ ಕಸವುಳ್ಳ ಹೊಲದಲ್ಲಿ ಪಶುಗಳು ನೆರದಿಪ್ಪಂತೆ, ಅನ್ನ, ಉದಕ, ಹೊನ್ನು, ವಸ್ತ್ರವುಳ್ಳ ದೊರೆಯ ಬಾಗಿಲ್ಲಲಿ ಬಹುಭಾಷೆಯ ಹಿರಿಯರುಗಳು ನೆರೆದುಕೊಂಡಿಪ್ಪರು! ಗುಹೇಶ್ವರಾ, ನಿಮ್ಮ ಶರಣರು ಆಶಾಪಾಶವಿರಹಿತರು ||

ಆಶೆಯೆಂಬ ಶೂಲದ ಮೇಲೆ ವೇಷವೆಂಬ ಹೆಣನ ಕುಳ್ಳಿರಿಸಿ, ದೇಶದ ಮೇಲುಳ್ಳ ಹಿರಿಯರು ಹೀಗೆ ಸವೆದು ಹೋದರು ನೋಡಾ! ಆಶೆಯ ಮುಂದಿಟ್ಟುಕೊಂಡು ಸುಳಿವ ಹಿರಿಯರ ಕಂಡು ಹೇಸಿಕೆಯಾಯಿತ್ತು ಕಾಣಾ, ಗುಹೇಶ್ವರಲಿಂಗಕ್ಕೆ, ಸಂಗನಬಸವಣ್ಣಾ ||

ಲೋಕದವರನೊಂದು ಭೂತ ಸೋಂಕಿದಡೆ ಆ ಭೂತದಿಚ್ಛೆಯಲ್ಲದೆ ತಮಿಚ್ಚೆಯಲ್ಲ ನೋಡಾ, ವೇಷಧಾರಿ ಆಸೆಯಿಂದ ಘಾಸಿಯಾಗಲೇಕಯ್ಯಾ? ಆನೆಯ ಚೋಹವ ತೊಟ್ಟು, ನಾಯಾಗಿ ಬಗಳುವ ಮಾನವರನೇನೆಂಬೆ ಗುಹೇಶ್ವರಾ? ||

ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು ಮನೆಮನೆದಪ್ಪದೇ ತಿರುಗುವ ತುಡುಗುಣಿ ನಾಯಂತೆ ಕಾಡಲಾಗದು ಭಕ್ತನ ! ಬೇಡಲಾಗದು ಭವಿಯ! ಕಾಡಿ, ಬೇಡಿ, ಕೊಂಡು ತಮ್ಮು ದರವ ಹೊರೆವಡೆ ಬೇಟೆಯ ನಾಯಿ ಮೊಲನ ಹಿಡಿದಂತೆ ಕಾಣಾ, ಗುಹೇಶ್ವರಾ ||

ಹಸಿವು, ತೃಷೆ, ವ್ಯಸನಕ್ಕೆ ಕುದಿ ಕುದಿದು ಸಚರಾಚರದೊಳಗೆಲ್ಲ ಲಯವಾಗಿ ಹೋದರಲ್ಲ ಉದರವ ಹೊರೆವ ಕೋಟಿ ವೇಷಧಾರಿಗಳೆಲ್ಲ ಜಂಗಮವಪ್ಪರೇ? ಅಲ್ಲ! ಲಿಂಗಸ್ಥಲವನರಿಯರು, ಜಂಗಮಸ್ಥಲವನರಿಯರು, ಪ್ರಸಾದಸ್ಥಲ ವನರಿಯರು, ಇಂತೀ ತ್ರಿವಿಧಸ್ಥಲವನರಿಯದ ಕಾರಣ, ಅವರ ಗಾವಿಲರ ಮಕ್ಕಳೆಂಬೆ, ಕಲಿದೇವರ ದೇವಾ ||

ಜಂಗಮ ಲಿಂಗವಾದಲ್ಲಿ, ಜಗದ ಜಂಗುಳಿಗಳ ಬಾಗಿಲ ಕಾಯದಿರಬೇಕು, ಒಡೆಯನ ಓಲಗವ ಬಂಟ ಕಾಯಬೇಕಲ್ಲದೆ ಬಂಟನ ನಿಳಯವನೊಡೆಯ ಕಾಯಬಲ್ಲನೇ? ಇಂತಿವನರಿದು, ರಾಜಮಂದಿರದಲ್ಲಿ, ಗ್ರಹಸ್ಥಾಶ್ರಮದಲ್ಲಿ ವೇಳೆಯನರಿದು ಭುಂಜಿಸಿಹೆನೆಂಬ ದರ್ಶನ ಜಂಗುಳಿಗಳಿಗೆ ಜಂಗಮಸ್ಥಲವಿಲ್ಲವೆಂದೆ ಸದಾಶಿವಮೂರ್ತಿಲಿಂಗವು ಅವರಂಗಕ್ಕೆ ಮುನ್ನವೇ ಇಲ್ಲವೆಂದೆ ||

೧೦

ರಚನೆ ರಂಜಕವ ನುಡಿವಾತ ಜಂಗಮವಲ್ಲ, ನರರ ಹಾಡಿ ಹೊಗಳಿ ಬೇಡುವಾತ ಜಂಗಮವಲ್ಲ, ನರರ ಕೈವಾರಿಸುವಾತ ಜಂಗಮವಲ್ಲ, ನರರ ಸ್ತುತಿಸುವಾತ ಜಂಗಮವಲ್ಲ, ಇದು ಕಾರಣ, ಕೂಡಲಚನ್ನಸಂಗಯ್ಯನಲ್ಲಿ ಪ್ರಭುವೇ ಜಂಗಮ, ಬಸವಣ್ಣನೇ ಭಕ್ತ ||

೧೧

ತನು ಬತ್ತಲಿದ್ದಡೇನೋ ಮನ ಶುಚಿಯಾಗದನ್ನಕ್ಕ? ಮಂಡೆ ಬೋಳಾದಡೇನೋ ಭಾವ ಬಯಲಾಗದನ್ನಕ್ಕ ಭಸ್ಮವ ಹೂಸಿದಡೆನೋ ಕರಣಾದಿಗುಣಂಗಳನೊತ್ತು ಮೆಟ್ಟಿ ಸುಡದನ್ನಕ್ಕ? ಈ ಆಶೆಯ ವೇಷದ ಭಾಷೆಗೆ ನೀ ಸಾಕ್ಷಿಯಾಗಿ, ಛೀ ಎಂಬ ಕಾಣಾ ಗುಹೇಶ್ವರಾ ||

೧೨

ಉಡಲು ಸೀರೆಯ ಕಾಣದೆ ಬತ್ತಲೆಯಿಪ್ಪರಯ್ಯಾ, ಉಣಲಶನವ ಕಾಣದೆ ಹಸಿದಿಪ್ಪರಯ್ಯಾ, ಮೀಯಲೆಣ್ಣೆಯ ಕಾಣದೆ ಮಂಡೆಯ ಬೋಳು ಮಾಡಿಕೊಂಡಿಪ್ಪರಯ್ಯಾ, ದಿಟದಿಂ ಬಿಡಿಸಬಾರದಂತೆ, ಈ ಸಟೆಯ ನಿಸ್ಸಂಸಾರವ ಧರಿಸಿಪ್ಪವರಿಗಂಜುವೆನು ಕಾಣಾ ಸಕಳೇಶ್ವರಾ ||

೧೩

ಅರಿವೆ ಗುರು, ಆಚಾರವೆ ಶಿಷ್ಯ, ಜ್ಞಾನವೆ ಲಿಂಗ, ಪರಿಣಾಮವೆ ತಪ, ಸಮತೆಯೆಂಬುದೆ ಯೋಗದಾಗು ನೋಡಾ! ಈಸುವನರಿಯದೆ ಲೋಕ ಬೋಳಾದಡೆ ಮಹಾಲಿಂಗ ಕಲ್ಲೇಶ್ವರ ದೇವರು ನಗುವರು ||

೧೪

ಅಕ್ಷರ ಪಂಚಕದ ನಿಕ್ಷೇಪವನರಿದಡೆ, ಬೋಳು; ಕುಕಷಿಯೊಳಗೈವತ್ತೆರಡಕ್ಷರದ ಲಕ್ಷಣ ವನರಿದಡೆ, ಬೋಳು; ಅಕ್ಷಯನಿಧಿ ಕೂಡಲಚನ್ನಸಂಗಯ್ಯಾ, ಭವಕ್ಕೆ ಬಾರದುದೆ ಬೋಳು ||

೧೫

ಕೂರಹು ಮುಟ್ಟದೆ, ಕೂದಲು ಹರಿಯದೆ ಬೋಳಾಗಬೇಕು, ಕಾಯ ಬೋಳೋ? ಕಪಾಲ ಬೋಳೋ? ಹುಟ್ಟುವುದು ಬೋಳೋ? ಹೊಂದುವುದು ಬೋಳೋ? ಹುಟ್ಟಿದೆ, ಹೊಂದದೆ ಹೋದುದು ಬೋಳು ಕಾಣಾ, ಗುಹೇಶ್ವರಾ ||

೧೬

ಕೇಶ ಕಾಷಾಯಾಂಬರ ವೇಷ ಲಾಂಛನವಾದಡೇನು? ಗ್ರಾಸಕ್ಕೆ ಭಾಜನರಲ್ಲದೆ ಲಿಂಗಕ್ಕೆ ಭಾಜನರಲ್ಲ! ಈ ಆಶೆಯ ವೇಷವ ಕಂಡಡೆ, ಕಾರಹುಣ್ಣಿಮೆಯ ಹಗರಣವೆಂಬೆ ಕಾಣಾ, ಕೂಡಲಚನ್ನಸಂಗಮದೇವಾ ||

೧೭

ಸಚರಾಚರದೊಳಗೆ ಆಶೆಯಿಂದ ತಿರುಗುವ ವೇಷ – ಲಾಂಛನ ದಾರಿಯ ತೋರದಿರಯ್ಯಾ ಎನಗೆ ಆಶೆಯ ನಿಃಕರಿಸಿದ ನಿರಾಶೆಯ ವೇಷವ ಕಂಡಡೆ ನೀ ಸರಿಯೆಂಬೆ ಕಾಣಾ ಕೂಡಲ ಚನ್ನಸಂಗಮದೇವಾ ||

೧೮

ವೇಷವನು ವೇಶಿಯನು ಸರಿಯೆಂಬೆ! ವೇಷವು ಲೋಕವ ಹಾರುವುದು, ವೇಶಿಯು ಲೋಕವ ಹಾರುವಳು, ವೇಷವ ತೊಟ್ಟು ಲೋಕವ ಹಾರದಿದ್ದಡೆ ಆತನೆ ಈಶ್ವರನೆಂಬೆ ಕಾಣಾ, ರಾಮನಾಥ ||

೧೯

ಆಶೆಯುಳ್ಳನ್ನಬರ ಆಶ್ರಯಿಸುವ ಆಶ್ರಯವು ದಾಸಿಯಿಂದ ಕರಕಷ್ಟ ಕಾಣಿರೋ ಅಯ್ಯಾ, ಆಶೆಯೇ ದಾಸಿ ಕಾಣಿರೋ! ನಿರಾಶೆಯೇ ಈಶಪದ ಕಾಣಿರಣ್ಣಾ ! ದಾಸತ್ವದ ಈಶತ್ವದ ಅನುವ ವಿಚಾರಿಸಿ ಆಶೆ ಅಡಗಿದಡೆ, ಅದೇ ಈಶಪದವು! ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ||

೨೦

ಆಶೆಯುಳ್ಳಾತನೊಬ್ಬರಾಧೀನದಲ್ಲಿಪ್ಪನು ಆಶೆಯ ಕೊನೆಯನರಿದಾತ ಕೈಲಾಸದಾಚೆಯಲ್ಲಿಪ್ಪನೆಂದಾತ ನಮ್ಮ ಅಂಬಿಗಚೌಡಯ್ಯ ||

ಇಂತು ಆಶಾಲಾಂಛನ ನಿರಸನ ಸ್ಥಲ ಸಮಾಪ್ತ ||