೬೦. ಅನನ್ಯ ಪರಿಪೂರ್ಣ ಸ್ಥಲ

ಇಂತು ಭಿನ್ನಶಿವಯೋಗ ನಿರಸನವ ಮಾಡಿ ತಾನಿದಿರೆಂಬ ಭಾವ ತಲೆದೋರದೆ ‘ಸರ್ವಖಲ್ವಿದಂ ಬ್ರಹ್ಮ’ವೆಂಬ ಶ್ರುತಿ ಪ್ರಮಾಣಿನಿಂ ಅಖಂಡ ಪರಿಪೂರ್ಣ ವಸ್ತು ತಾನಾದ ಬ್ರಹ್ಮ ಜ್ಞಾನಿಯಪ್ಪ ಮಹಾಘನಲಿಂಗೈಕ್ಯನ ಅನನ್ಯಪರಿಪೂರ್ಣ ಸ್ಥಲ ||

ಗ್ರಂಥ |

ಲಿಂಗಾಂಗಮಯಮೇವೇದಂ ಜಗತ್ಸರ್ವಂ ಚರಾಚರಂ
ಚಿದಾತ್ಮ ವ್ಯತಿರೇಕೇಣ ಜಗತ್ಸತ್ಯಂ ನಿರಸ್ಯತೇ ||  || ||

ಯಥಾಘೇನತರಂಗಾದಿ x x x x x x x x x
x x x x x x x x x x x x x x x x ||
||

ಯಥಾ ತಂತುಭಿರುತ್ಪನ್ನಃ ಷಟಸ್ತಂತುಮಯ ಸ್ಮೃತಃ
ತಥಾ ಶಿವಾತ್‌ಸಮುತ್ಪನ್ನಂ ಶಿವ ಏವ ಚರಾಚರಂ ||  || ||

ಲಿಂಗಾಂಗಮಯಮೇವೇದಂ ಜಗತ್ಸರ್ವಂ ಚಾರಾಚರಂ
ಲಿಂಗಾಂಗವ್ಯತಿರೇಕೇಣ ನಾಸ್ತಿ ಸರ್ವತ್ರ ಕಿಂಚನ ||  || ||

ಇತಿಭಾವನಾ ಸಂಧಾನಂ ಯತ್ತಲ್ಲಿಂಗಾರ್ಚನಂ ವಿದುಃ
ತದನ್ಯದರ್ಚನಂ ಯಶ್ಚಕುರುತೇ ನ ಪಶುರ್ನರಃ ||  || ||

ವೃತ್ತ |

ಪಾತಾಳೇ ತ್ವಂತರಿಕ್ಷೇ ದಶದಿಶಗಗನೇ ಸರ್ವಶೈಲೇ ಸಮುದ್ರೇ
ಕಾಷ್ಠೇ ಲೋಷ್ಠೇ ಚ ಹೇಮ್ನಿ ಕ್ಷಿತಿಜಲಪವನೇ ಸ್ಥಾವರೇ ಜಂಗಮೇ ಚ
ಬೀಜೇ ವೃಕ್ಷೇ ಲತಾಯಾಂ ತ್ವಸುರ ಸುರಪುರೇ ಪುಪ್ಪಪತ್ರೆತೃಣಾಗ್ರೇ
ಸರ್ವ ವ್ಯಾಪೀ ಶಿವೋsಹಂ ನಿಖಿಲ ಜಗಯುತಂ ನಾಸ್ತಿ ತತ್ವಂದ್ವಿತೀಯಂ ||  || ||

ಭೂತಾನಿ ಶಂಭುರ್ಭುವನಾನಿ ಶಂಭುರ್‌
ನೆಕೋsಪಿ ಮತ್ತೋsತಿರಿಕ್ತಂ ಚ ತತ್ವಂ
ತತ್ವಂ ತದೇಕಂ ಪರಮಾತ್ಮ ತತ್ವಂ
ನ ಕಿಂಚಿದಸ್ತೀತಿ ಶ್ರುತಿಪ್ರಮಾಣಂ || ||

ವಚನ |

ಆನೆಂಬುದೇನು ಇದಿರಿಟ್ಟು ತೋರುವ ಇದೇನೊ? ಇದೆಲ್ಲಿಂದಲೊದಗಿತ್ತು ಇದರ ಲಯವು? ತಾನೇನೆಂದು ಅನುಮಾನಿಸಿ, ಶ್ರೀಗುರುಚರಣವ ನಂಬಿ, ಅಂತರ್ಮುಖದಲ್ಲಿ ವಿಚಾರಿಸಿ ನೋಡಿ, ಅಲ್ಲಿ ಒಂದು ಮಾರ್ಗವ ಕಂಡು, ಆ ಮಾರ್ಗದ ಬಳಿವಿಡಿದು ತಲೆಹೊಲಕೆ ಹೋಗಿ, ಹಿಂದು ಮುಂದು ಮರೆದು ಮಹಾಬೆಳಗಿನ ಬೆಳಗಿನೊಳು ನಿಂದು, ಪರಮಾನಂದ ಸಾಗರದೊಳು ಸಮರಸವಾದಂಗೆ ಇಹಪರವಿಲ್ಲೆಂದನಂಬಿಗಚೌಡಯ್ಯ ||

ಸಮುದ್ರದೊಳಗೆ ತೆರೆನೊರೆಗಳು ನೆಗಳ್ದವೆಂದಡೆ ಸಮುದ್ರದಿಂದ ಅನ್ಯವಪ್ಪವೇ? ನಿರ್ವಿಕಾರ ನಿತ್ಯ ನಿರಂಜನ ನಿರ್ಗುಣ ಪರಿಪೂರ್ಣ ನಿರ್ವಿಕಲ್ಪ ಪರಬ್ರಹ್ಮ ಶಿವನಿಂದ ಜಗತ್ತು ಉದಯಿಸಿತ್ತೆಂದಡೆ, ಶಿವನಿಂದ ಅನ್ಯವೆನಬಹುದೆ? ಇಂತಪ್ಪರಿವು ನೀವು ಕೊಟ್ಟ ಸಮ್ಯಕ್‌ಜ್ಞಾನ ಕಂದೆರೆದಿಪ್ಪುದಯ್ಯಾ ಗುಹೇಶ್ವರಾ ||

ಘನ ಗಂಭೀರ ವಾರಿಧಿಯಲ್ಲಿ ಫೇನ ತರಂಗಬುದ್ಬುದಂಗಳಾದವಲ್ಲಾ ಎಂದಡೆ ಬೇರಾಗಬಲ್ಲವೆ? ಪರಮಾತ್ಮನೆಂಬ ಅಂಬುಧಿಯಲ್ಲಿ ಸಕಲ ಬ್ರಹ್ಮಾಂಡಗಳು ತೋರದವಲ್ಲಾ ಎಂದಡೆ ಬೇರಾಗಬಲ್ಲವೆ? ಇವೆಲ್ಲಿಯವೆಂಬ ಅರೆಮರುಳನನೇನೆಂಬೆ? ವಿಶ್ವವು, ತಿಳಿದು ನೋಡಲು ಸಿಮ್ಮಲಿಗೆಯ ಚನ್ನರಾಮನೆಂಬ ಲಿಂಗಕ್ಕನ್ಯವಿಲ್ಲ ||

ಸಮುದ್ರದಿಂದಾದ ತೆರೆಗಳು ಸಮುದ್ರದೊಳಗೆ ಅಡಗುತ್ತ ಆ ಸಮುದ್ರದೊಳಗೇ ಇಹವು, ತೆರೆಗಳು ಬೇರೊಂದುದಕವೇ? ನಿಮ್ಮಿಂದಲಾದ ಜಗವು ನಿಮ್ಮಲ್ಲಿಯೇ ಇದ್ದು ನಿಮ್ಮಲ್ಲಿಯೇ ಅಡಗುವುದು ಬೇರೆ ಬೇರೆ ಕುಲವುಂಟೇ ಈ ಜಗಕ್ಕೆ? ಅದೆಂತೆಂದಡೆ : ಬ್ರಹ್ಮಬೀಜಂ ಜಗತ್‌ಸರ್ವಬ್ರಹ್ಮಣೈವ ವಿವರ್ಧತೇ | ಬ್ರಹ್ಮಣ್ಯೇವಲಯಂ ಯಾತಿ ಜಾತಿಭೇಧಃ ಕಥಂ ಭವೇತ್‌, ಇಂತೆಂದುದಾಗಿ, ಕುಲವು ಇಲ್ಲ, ಛಲವು ಇಲ್ಲ, ಮರೆಯ ನುಡಿಯನೊಪ್ಪುವನೆ ಸಿಮ್ಮಲಿಗೆಯ ಚೆನ್ನರಾಮ ಬಿಡು ಜಡನೇ? ||

ಮೃತ್ತಿಕೆಯೊಂದರಲಾದ ಭಾಂಡದಂತೆ, ಚಿನ್ನವೊಂದರಲಾದ ಭೂಷಣದಂತೆ ಉದಕವೊಂದರಲಾದ ವಾರಿಕಲ್ಲಿನಂತೆ, ಬ್ರಹ್ಮದಿಂದಲಾದ ಜಗವು ಭಿನ್ನವೆಲ್ಲಿಯದು ಸಕಳೇಶ್ವರಯ್ಯಾ? ||

ಘಟಪಟಭಿತ್ತಿಯಂತೆ ಭಿನ್ನವೆಂಬ ಹಾಂಗಿಹುದು; ತಿಳಿದು ನೋಡಿರೆ! ಭಿನ್ನವುಂಟೆ ಫಟದೊಳಗಣ ಬಯಲು, ಪಟದೊಳಗಣ ನೂಲು, ಭಿತ್ತಿಯ ಮೃತ್ತಿಕೆಯು? ಒಂದಲ್ಲದೆ ಎರಡಿಲ್ಲ, ದೇಹಿಗಳೂ ಗುಹೇಶ್ವರನಲ್ಲದೆ ಮತ್ತಾರೂ ಅಲ್ಲ ||

ಊರೊಳಗಣ ಬಯಲು ಊರ ಹೊರಗಣ ಬಯಲೆಂದುಂಟೇ? ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆಯರ ಬಯಲೆಂದುಂಟೇ? ಎಲ್ಲಿ ನೋಡಿದಡೆ ಬಯಲೊಂದೆ: ಭಿತ್ತಿಯಿಂದ ಒಳಹೊರಗೆಂಬ ನಾಮವೈಸೆ! ಎಲ್ಲಿ ನೋಡಿದಡೆ, ಕರೆದೆಡೆ, ಓ ಎಂಬಾತನೆ ಬಿಡಾಡಿ ||

ಘಟಪಟಿ ನಾದಾ, ಓ ಎಂಬಾತ ಲಿಂಗ, ತರಗೆಲೆಗಳಿಗೊಂದೆ ಗಾಳಿ; ಹಾರುತ್ತಿಪ್ಪವು ಒಂದೆ ಅನಿಲ, ನಿಂದ ದೇಹಪಟ್ಟೆಗಳೊಳಗೆಲ್ಲ ಕರೆದೆಡೆ, ಓ, ಎಂಬಾತನೆ ಬಿಡಾಡಿ ||

ಮಣಿಗಣ ಸೂತ್ರದಂತೆ ತ್ರಿಣಯನ, ನೀನಿಪ್ಪೆಯಯ್ಯಾ, ಎಣಿಸಲ್ಕೆ, ತನು ಭಿನ್ನ, ಆತ್ಮನೊಬ್ಬನೆ, ಅಣು ರೇಣು ತೃಣಕಾಷ್ಠ ಭರಿತನೆಂದು ಮಣಿಯುತಿಪ್ಪೆಯಯ್ಯಾ ರಾಮನಾಥಾ ||

೧೦

ಎತ್ತೆತ್ತ ನೋಡಿದಡತ್ತತ್ತ ನೀನೆ, ವಿಸ್ತಾರದ ರೂಪು ನೀನೆ ದೇವಾ, ವಿಶ್ವತೋ ಚಕ್ಷು ನೀನೆ ದೇವಾ, ವಿಶ್ವತೋ ಮುಖ ನೀನೆ ದೇವಾ, ವಿಶ್ವತಃ ಪಾದ ನೀನೆ ದೇವಾ, ವಿಶ್ವತೋ ಬಾಹು ನೀನೆ ದೇವಾ, ವಿಶ್ವತಶ್ಚಕ್ಷು ನೀನೆ ದೇವಾ, ವಿಶ್ವತಃ ಪ್ರಾಣ ನೀನೆ ದೇವಾ, ವಿಶ್ವತೋಮಯ ನೀನೆ ದೇವಾ, ವಿಶ್ವವು ನೀನೆ ಕೂಡಲಸಂಗಮದೇವಾ ||

ಗ್ರಂಥ |

ಶಿವೋ ದಾತಾ ಶಿವೋ ಭೋಕ್ತಾ ಶಿವಸ್ಸರ್ವಮಿದಂ ಜಗತ್‌ ||

೧೧

ದ್ರವ್ಯ ನೀನು, ದ್ರವ್ಯಾರ್ಥಿ ನೀನು, ಪದ ನೀನು, ಪದಾರ್ಥ ನೀನು, ಸಕಲ ನೀನು, ನಿಃ ಕಲ ನೀನು, ನಿಃಕಲಾತ್ಮ ಪರಿಪೂರ್ಣ ಶಿವನಲ್ಲದೆ ಅನ್ಯ ಭಿನ್ನಭಾವವುಂಟೆ? ಸಕಲ ಪದಾರ್ಥಂಗಳೆಲ್ಲವೂ ನಿಮ್ಮ ಸಾಮರಸ್ಯಭಾವವನೈದಿಹೆನೆಂದು ತಮ್ಮ ತಮ್ಮ ಅಂಗದ ಮೇಲೆ ಹೆಸರಿಟ್ಟು ಹೊತ್ತುಕೊಂಡೈದಾವೆ, ನೋಡಾ! ಅದೆಂತೆಂದಡೆ: ದ್ರವ್ಯತ್ವಂಚ ಮಹಾದೇವೀ ದ್ರವ್ಯರೂಪೋ ಮಹೇಶ್ವರಃ| ಏತಯೋರ್ಭೇದಕೋನಾಸ್ತಿ ಸರ್ವರೂಪಃ ಸದಾ ಶಿವಃ || ಎಂದುದಾಗಿನಾದ ನೀನು, ಬಿಂದು ನೀನು, ಕಳೆ ನೀನು, ಕಳಾತೀತ ನೀನು ಗುಹೇಶ್ವರಾ ||

೧೨

ಪ್ರವೃತ್ತಿ ನಿವೃತ್ತಿಕ್ರಮ :

ಕಟಕ ಸೂತ್ರದ ನೂಲ ಗೂಡನೆ ಮಾಡೆ ಸೂತ್ರಕ್ಕೆ ನೂಲನದೆಲ್ಲಿಂದ ತಂದಿತ್ತಯ್ಯಾ? ರಾಟೆಯಿಲ್ಲವದಕೆ; ಹಂಜಿ ತಾ ಮುನ್ನಿಲ್ಲ, ನೂತವರಾರು? ತನ್ನೊಡಲ ನೂಲ ತಾ ತೆಗೆದು ಪಸರಿಸುತ್ತ ಅದರೊಳು ಪ್ರೀತಿಯಿಂದೊಲೆದಾಡಿ, ತುದಿಯಲ್ಲಿ ತಾ ತನ್ನೊಳಗದ ಮಡಗಿಕೊಂಡಿಪ್ಪಂತೆ ತನ್ನಿಂದಲಾದ ಜಗವ ತನ್ನೊಳಗಡಗಿಸಿ ತನ್ನೊಳೈದಿಸಿಕೊಳಬಲ್ಲ ಕೂಡಲಚನ್ನಸಂಗಯ್ಯಾ ||

ಇಂತು ಅನನ್ಯ ಪರಿಪೂರ್ಣ ಸ್ಥಲ ಸಮಾಪ್ತ ||

೬೧. ಸರ್ವಶೂನ್ಯಸ್ಥಲ

ಇಂತಪ್ಪ ಅನನ್ಯಪರಿಪೂರ್ಣ ಸಂಪನ್ನ ತಾನಾಗಿ, ತಾನೆಂಬುದಿಲ್ಲದೆ, ಇದರೆಂಬುದಿಲ್ಲದೆ, ಸ್ವಯವೆಂಬುದಿಲ್ಲದೆ, ಪರವೆಂಬುದಿಲ್ಲದೆ ಸ್ಥಲವೆಂಬುದಿಲ್ಲದೆ, ಕುಳವೆಂಬುದಿಲ್ಲದೆ, ಒಳಗೆಂಬುದಿಲ್ಲದೆ, ಹೊರಗೆಂಬುದಿಲ್ಲದೆ, ಅಳಿವೆಂಬುದಿಲ್ಲದೆ, ಉಳಿವೆಂಬುದಿಲ್ಲದೆ, ಅರಿವೆಂಬುದಿಲ್ಲದೆ, ಮರವೆಂಬುದಿಲ್ಲದೆ, ದ್ವೈತವಿಲ್ಲದೆ, ಅದ್ವೈತವಿಲ್ಲದೆ, ಸಹಜವಿಲ್ಲದೆ, ಅಸಹಜವಿಲ್ಲದೆ, ಸತ್ಯವಿಲ್ಲದೆ, ಅಸತ್ಯವಿಲ್ಲದೆ, ಸಾವಯವಿಲ್ಲದೆ, ನಿರಯವವಿಲ್ಲದೆ, ನಿರವಯವಿಲ್ಲದೆ, ಖಂಡಿತವಿಲ್ಲದೆ, ಅಖಂಡಿತವಿಲ್ಲದೆ, ಪೂರ್ಣವಿಲ್ಲದೆ, ಪರಿಪೂರ್ಣವಿಲ್ಲದೆ, ಶೂನ್ಯವಿಲ್ಲದೆ, ನಿಶ್ಯೂನ್ಯವಿಲ್ಲದೆ, ಬಯಲಿಲ್ಲದೆ, ನಿರ್ವಯಲಿಲ್ಲದೆ, ಶಬ್ದವಿಲ್ಲದೆ, ನಿಶ್ಯಬ್ದವಿಲ್ಲದೆ, ನಿರವಯವಿಲ್ಲದೆ ಇಲ್ಲವೆಯಾದ ಬ್ರಹ್ಮಜ್ಞಾನಿಯಪ್ಪ ಮಹಾಘನಲಿಂಗೈಕ್ಯನ ಜ್ಞಾನಶೂನ್ಯಮಪ್ಪ ಸರ್ವಶೂನ್ಯ ಸ್ಥಲ ||

ಗ್ರಂಥ |

ಆದಿಮಧ್ಯಾಂತಶೂನ್ಯಂ ಚ ವ್ಯೋಮಾವ್ಯೋಮವಿವರ್ಜಿತಂ
ಧ್ಯಾನಜ್ಞಾನಮನೋಹೀನಂ ಶೂನ್ಯಲಿಂಗಮನಾಶ್ರಯಂ ||  || ||

ಅಂತಶೂನ್ಯಂ ಬಹಿಶ್ಯೂನ್ಯಂ ಸರ್ವಶೂನ್ಯಂ ದಶಾದಿಶಂ
ಸರ್ವಶೂನ್ಯಂ ನಿರಾಲಂಬಂ ನಿರ್ದ್ವಂದ್ವಂ ಪರಮಂ ಪದಂ ||  || ||

ಊರ್ಧ್ವಶೂನ್ಯಮಧಶ್ಯೂನಂ ಮಧ್ಯಶೂನ್ಯಮರೂಪಕಂ
ಆದಿಮಧ್ಯಾಂತಶೂನ್ಯಂ ಚ ನಿಷ್ಕಲಂ ದೇಹವರ್ಜಿತಂ ||  || ||

ನ ದೇಹೋನೇಂದ್ರಿಯಂ ಪ್ರಾಣಾ ಮನೋಬುದ್ಧಿರಹಂಕೃತಿಃ
ನ ಚಿತ್ತಂ ನೈವ ಮಾಯಾ ಚ ನ ಚ ವ್ಯೋಮಾದಿಕಂ ಜಗತ್‌ ||  || ||

ಆತ್ಮಶೂನ್ಯಂ ಪರಂ ಶ್ಯೂನಂ ಶೂನ್ಯಮಿದಂ ಜಗತ್‌
ತಸ್ಮಾನ್‌ಶೂನ್ಯಸ್ಯೆ ಸಂಪ್ರಾಪ್ತೌ ಪುನರ್ಜನ್ಮನ ವಿದ್ಯತೇ ||  || ||

ವಚನ |

ಅರಿವರತು ಬೆರಗು ಹತ್ತಿತೆಂಬ ಜ್ಞಾನವಿದೇನೋ! ‘ನಾಹಂ’ ಎಂಬಲ್ಲಿ ತಾನಾರೋ! ‘ಕೋಹಂ’ ಎಂಬಲ್ಲಿ ಮುನ್ನಾರೋ! ‘ಪರಬ್ರಹ್ಮ ಸೋsಹಂ’ ಎಂಬಲ್ಲಿ ಮುನ್ನ ತಾನೇನಾಗಿ ರ್ದನೋ! ‘ಚಿದಹಂ’ ಎಂಬ ಹಮ್ಮಿನ ಭವಮಾಲೆಯೇನು, ಹೇಳಾ! ‘ನಿಶ್ಯಬ್ದಂ ಬ್ರಹ್ಮ ಉಚ್ಯತೇ’ ಎಂಬ ಶಬ್ದವಿಡಿದು ಬಳಲುವ ಕಾರಣವಿದೇನು, ಹೇಳಾ ಗುಹೇಶ್ವರಾ ||

ಕರ್ಪೂರದ ಕಳ್ಳನ ಹುಲ್ಲಿನಲ್ಲಿ ಕಟ್ಟಿರಲು, ಅಗ್ನಿಯೆಂಬ ಹಿತವ ಬಂದು ಬಿಡಿಸಲು, ಪಾಶ ಬೆಂದುದು; ಕಳ್ಳ ತನ್ನಲ್ಲಿಯೇ ಅಡಗಿದನು, ಬಯಲ ಶರಣಂಗೆ ಬಯಲ ಪಾಶ ಬಂದು ಕಟ್ಟಿರಲು, ಬಯಲ ಲಿಂಗ ಬಂದು ಬಿಡಿಸಲು ಬಯಲು ಬಯಲೇಕವಾಯಿತ್ತು! ಮಹಾಲಿಂಗ ಕಲ್ಲೇಶ್ವರನೆಂಬ ಸಂಪತ್ತು ಸದಾ ಶೂನ್ಯವಾಯಿತ್ತು ||

ಮನದ ಕೊನೆಯಲ್ಲಿ ನೆನೆದ ನೆನಹು ಜನನ ಮರಣವ ನಿಲ್ಲಿಸಿ, ಜ್ಞಾನ ಜ್ಯೋತಿ ಉದಯ ಭಾನುಕೋಟಿಯ ಮೀರಿ, ಸ್ವಾನುಭಾವದ ಉದಯಜ್ಞಾನ ಶೂನ್ಯದಲಡಗಿ, ತಾನು ತಾನಾದ ಘನವನೇನೆಂಬೆ ಗುಹೇಶ್ವರಾ? ||

ಇನ್ನು, ಸರ್ವಶೂನ್ಯ ಆದಿ ಅನಾದಿ ಭಕ್ತಸ್ಥಲ, ನಾದಬಿಂದು ಮಹೇಶವರ ಸ್ಥಲ ಕಳೆ ಬೆಳಗು ಪ್ರಸಾದಿಸ್ಥಲ, ಅರಿವು ನಿರ್ವಯವು ಪ್ರಾಣಲಿಂಗಿ ಸ್ಥಲ, ಜ್ಞಾನ ಸುಜ್ಞಾನ ಶರಣಸ್ಥಲ, ಭಾವವಿಲ್ಲದ ಬಯಲು ಬಯಲಿಲ್ಲದ ಭಾವ ಅಗಮ್ಯದೈಕ್ಯಸ್ಥಲ ಇಂತೀ ಷಡುಸ್ಥಲದ ಕೊರಡ ಮೆಟ್ಟಿ ನಿಂದಂಗೆ ಹೆಸರಿಲ್ಲ, ಕುರುಹಿಲ್ಲ, ತನಗೆ ತಾನಿಲ್ಲ, ಗುಹೇಶ್ವರಾ ||

ಷಡೂರ್ಮೆಯಿಲ್ಲ, ಷಡ್ವರ್ಗವಿಲ್ಲ, ನಾನೆಂಬುದಿಲ್ಲ, ಅದೆಂತೆಂದಡೆ, ಭಕ್ತೋ ಮಹೇಶಪ್ರಸಾದೀ ಪ್ರಾಣಲಿಂಗೀ ಶರಣೈಕ್ಯಂ | ಐಕ್ಯಶ್ಚೇದನಹಂಕಾರೀ ಷಟ್‌ಸ್ಥಲಂ ಕಿಂ ಪ್ರಯೋಜನಂ || ಎಂದುದಾಗಿ, ಏನೆಂಬುದೇನೂಯಿಲ್ಲದುಹದೀಗ ಚಿದಹಂಕಾರದೈಕ್ಯ ಗುಹೇಶ್ವರಾ ||

ಭಕ್ತಸ್ಥಲ ಘನವೆಂದು ನುಡಿವಿರಿ ಭಕ್ತಸ್ಥಲವಾವುದು ಘನ, ಬಲ್ಲಡೆ ನೀವು ಹೇಳಿರೆ! ಭಕ್ತಸ್ಥಲಕ್ಕೆ ಮಾಹೇಶವರ ಪ್ರತಿ ಉರ್ಳಳುದರಿವೆ? ಪ್ರತಿ ಉಳ್ಳುದು ಜ್ಞಾನವೆ? ಪ್ರತಿ ಉಳ್ಳುದು ನಿರ್ಭಾವವೆ? ಪ್ರತಿ ಉಳ್ಳುದು ನಿರ್ಭಾವವೆ? ಪ್ರತಿ ಉಳ್ಳುದು ಮೋಕ್ಷವೆ? ಮಾಹೇಶ್ವರ ಸ್ಥಲ ಘನವೆಂದು ನುಡಿವಿರಿ, ಮಾಹೇಶ್ವರ ಸ್ಥಲವಾವುದು ಘನ, ಬಲ್ಲಡೆ ನೀವು ಹೇಳಿರೆ! ಮಾಹೇಶ್ವರ ಸ್ಥಲಕ್ಕೆ ಪ್ರಸಾದಿಸ್ಥಲ ಪ್ರತಿ ಉಳ್ಳುದರಿವೆ? ಪ್ರತಿ ಉಳ್ಳುದು ಜ್ಞಾನವೆ? ಪ್ರತಿ ಉಳ್ಳುದು ನಿರ್ಭಾವವೆ? ಪ್ರತಿ ಉಳ್ಳುದು ಮೋಕ್ಷವೆ? ಪ್ರಸಾದಿ ಸ್ಥಲ ಘನವೆಂದು ನುಡಿವಿರಿ, ಪ್ರಸಾದಿಸ್ಥಲವಾವುದು ಘನ, ಬಲ್ಲಡೆ ನೀವು ಹೇಳಿರೆ! ಪ್ರಸಾದಿಸ್ಥಲಕ್ಕೆ ಪ್ರಾಣಲಿಂಗಿಸ್ಥಲ ಪ್ರತಿ ಉಳ್ಳುದರಿವೆ? ಪ್ರತಿ ಉಳ್ಳುದು ಜ್ಞಾನವೆ? ಪ್ರತಿ ಉಳ್ಳುದು ಮೋಕ್ಷವೆ? ಪ್ರಸಾದಿ ಸ್ಥಲ ಘನವೆಂದು ನುಡಿವಿರಿ, ಪ್ರಸಾದಿಸ್ಥಲವಾವುದು ಘನ, ಬಲ್ಲಡೆ ನೀವು ಹೇಳಿರೆ! ಪ್ರಸಾದಿಸ್ಥಲಕ್ಕೆ ಪ್ರಾಣಲಿಂಗಿಸ್ಥಲ ಪ್ರತಿ ಉಳ್ಳುದರಿವೆ? ಪ್ರತಿ ಉಳ್ಳುದು ಜ್ಞಾನವೆ? ಪ್ರತಿ ಉಳ್ಳುದು ಮೋಕ್ಷವೆ? ಶರಣಸ್ಥಲ ಘನವೆಂದು ನುಡಿವಿರಿ, ಶರಣಸ್ಥಲವಾವುದು ಘನ, ಬಲ್ಲಡೆ ನೀವು ಹೇಳಿರೆ! ಶರಣಸ್ಥಲಕ್ಕೆ ಐಕ್ಯಸ್ಥಲ ಪ್ರತಿ ಉಳ್ಳದರಿವೆ? ಪ್ರತಿ ಉಳ್ಳುದು ಜ್ಞಾನವೆ? ಪ್ರತಿ ಉಳ್ಳುದು ನಿರ್ಭಾವವೆ? ಪ್ರತಿಉಳ್ಳುದ ಮೋಕ್ಷವೆ? ಇಂತೀ ಷಡುಸ್ಥಲ ವರ್ಮವಲ್ಲ, ಸ್ಥಲವಲ್ಲ, ನಿಃಸ್ಥಲವಲ್ಲ, ಒಳಗಲ್ಲ, ಹೊರಗಲ್ಲ, ಸಾವಯವಲ್ಲ, ನಿರವಯವಲ್ಲ. ಸುಸಂಗದ ಬಯಲು; ಕೂಡಲಚನ್ನಸಂಗಯ್ಯನಲ್ಲಿ ಸ್ಥಲ ಬೇರೊಂದು ||

ಸ್ಥಲದಿಂದ ನಡೆನುಡಿ ಆಯಿತ್ತು, ಸ್ಥಲದಿಂದ ನಡೆನುಡಿ ಕೆಟ್ಟಿತ್ತು, ನೋಡಲೊಡನೆ ಸ್ಥಲವಾಗಿ ತೋರಿತ್ತು, ಆರಯ್ಯಲೊಡನೆ ನಿಸ್ಥಲವಾಗಿ ತೋರಿತ್ತು, ಅದೆಂತೆಂದಡೆ: ಸ್ಥಲೀಸ್ಥಲಗತ ಸ್ಥಾಪ್ಯ ಕಾಮ ಸಮ್ಮಾನ ವರ್ಜಿತಂ | ಸ್ಥಲಂ ಚ ನಿಸ್ಥಲಂ ನಾಸ್ತಿ ಘನಲಿಂಗ ಸ್ವಭಾವತ || ಎಂದುದಾಗಿ ಸ್ಥಲವೂ ಇಲ್ಲ, ನಿಃಸ್ಥಲವೂ ಇಲ್ಲ ಕೂಡಲಚನ್ನಸಂಗಯ್ಯಾ ||

ಅರಿಯಲ್ಲಿಲ್ಲದ ಅರಿವು, ಮರೆಯಲಿಲ್ಲದ ಮರಹು, ನೋಡಲಿಲ್ಲದ ನೋಟ, ಕೂಡ ಲಿಲ್ಲದ ಕೂಟ, ಬೆರಸಲಿಲ್ಲದ ಬೆರಗು ನಿಂದುದು ಕೂಡಲಚನ್ನಸಂಗಯ್ಯಾ ನಿಮ್ಮಲ್ಲಿ ||

ಸತ್ಯವೆನ್ನದೆ, ಸಹಜವೆನ್ನದೆ, ಅಚಲವೆನ್ನದೆ, ಖಂಡಿತವೆನ್ನದೆ, ಪರಿಪೂರ್ಣವೆನ್ನದೆ, ಶೂನ್ಯವೆನ್ನದೆ, ನಿಃಶೂನ್ಯವೆನ್ನದೆ ಎನೂ ಏನೂ ಎನ್ನದೆ ಕೂಡಲಚೆನ್ನಸಂಗಯ್ಯನೆಂಬ ನುಡಿಗೆಡೆಯಿಲ್ಲ ದುದನಾನೇನೆಂಬೆ? ||

೧೦

ನಾನೆಂಬುದಿಲ್ಲ, ನೀನೆಂಬುದಿಲ್ಲ, ಸ್ವಯವೆಂಬುದಿಲ್ಲ, ಪರವೆಂಬುದಿಲ್ಲ, ಅರಿವೆಂಬುದಿಲ್ಲ, ಮರಹೆಂಬುದಿಲ್ಲ, ಒಳಗೆಂಬುದಿಲ್ಲ, ಹೊರಗೆಂಬುದಿಲ್ಲ, ಕೂಡಲಚೆನ್ನಸಂಗಯ್ಯನೆಂಬುದು ಮುನ್ನಿಲ್ಲ ||

೧೧

ಸತ್ಯವೆಂಬುದಿಲ್ಲ, ಅಸತ್ಯವೆಂಬುದಿಲ್ಲ, ಸಹಜವೆಂಬುದಿಲ್ಲ, ಅಸಹಜವೆಂಬುದಿಲ್ಲ, ನಾನು ಇಲ್ಲ, ನೀನು ಇಲ್ಲ, ಇಲ್ಲವೆಂಬುದು ಮುನ್ನಿಲ್ಲ, ಗುಹೇಶ್ವರ ಬಯಲು ||

೧೨

ಅರಿದೆನೆಂಬುದು ತಾ ಬಯಲು, ಅರಿಯೆನೆಂಬುದು ತಾ ಬಯಲು, ಮರೆದೆನೆಂಬುದು ತಾ ಬಯಲು, ಮರೆಯೆನೆಂಬುದು ತಾ ಬಯಲು, ಅರುಹಿನ ಕುರುಹಿನ ಮರಹಿನೊಳಗೆ ಗುಹೇಶ್ವರ ಬಯಲು ||

೧೩

ಆಡಬಾರದ ಬಯಲು, ಸೂಡಬಾರದ ಬಯಲು, ಹಿಡಿಯಬಾರದ ಬಯಲು, ಕಡಿಯ ಬಾರದ ಬಯಲು, ಒಡಲಿಲ್ಲದ ಬಯಲೊಳಡಗಿಪ್ಪ ಭೇದವ ಲೋಕದ ಜಡರೆತ್ತ ಬಲ್ಲರೈ ರಾಮನಾಥಾ ||

೧೪

ಬಯಲೊಳಗಣ ಬಯಲು ನಿರವಯವ ನುಂಗಿತ್ತು! ಬಯಲ ಬಯಲ ನಿರವಯಲು! ಮಹಾ ಬಯಲೊಳಗೆ ಬಯಲಾಗಿ ಬಯಲಿಲ್ಲ! ನಿರ್ವಯಲಿಲ್ಲ ! ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ, ಇಲ್ಲ ||

೧೫

ತನು ಬಯಲು ನಿರವಯಲೊಳಡಗಿತ್ತು, ಮನ ಬಯಲು ನಿರವಯಲೊಳಡಗಿತ್ತು, ಭಾವ ಬಯಲು ನಿರವಯಲೊಳಡಗಿತ್ತು, ಬಯಲು ಬಯಲ ಬೆರೆಸಿ ಬಯಲಾಗಿ ಬಯಲಿಲ್ಲ ನಿರ್ವಯಲಿಲ್ಲದೆ ಕೂಡಲಚೆನ್ನಸಂಗಯ್ಯನೆಂಬ ಶಬ್ದ ಮುಗ್ದವಾಯಿತ್ತು ||

ಜ್ಞಾನಶೂನ್ಯಮಪ್ಪ ಸರ್ವಶೂನ್ಯಸ್ಥಲ ಸಮಾಪ್ತ ||

ಇಂತು ಜ್ಞಾನಶೂನ್ಯವಪ್ಪ ಸರ್ವಶೂನ್ಯಸ್ಥಲವೆ ಕಡೆಯಾಗಿ
ಷಟ್ಪ್ರಕಾರವುಳ್ಳ ಸರ್ವರಸ ಸಂಪೂರ್ಣವಾಗಿ ಸರ್ವಶೂನ್ಯವಾದ
ಶ್ರೀಮದ್‌ಬ್ರಹ್ಮಜ್ಞಾನೈಕ್ಯಸ್ಥಲಂ ಸಮಾಪ್ತಂ
ಇದು ಶ್ರೀಮದಮಿತೋರು ಲಿಂಗಾಂಗ ಸಂಯೋಗಾನುಭವ ಪ್ರಸಿದ್ಧ ಪರಿಪೂರ್ಣ
ಶೀಲ ಪರಮಾದ್ವೈತ ವಿಶ್ರಾಂತರುಮಪ್ಪ ಪರಮಾಚಾರರೂಪ
ಶ್ರೀ ಕರಸ್ಥಲದ ಮಲ್ಲಿಕಾರ್ಜುನೊಡೆಯರು ಸೇರಿಸಿದ ಮಹಾನುಭಾವಭೋಧೆಯಪ್ಪ
ಶ್ರೀಮದ್ಬ್ರಹ್ಮಾದ್ವೈತ ಸಿದ್ಧಾಂತ ಷಟ್‌ಸ್ಥಲಾಭರಣದೊಳು
ಶ್ರೀಮದ್ಬ್ರಹ್ಮಜ್ಞಾನಿಯಪ್ಪ ಐಕ್ಯನ ವರ್ಗ
ಷಷ್ಟಮ ಪರಿಚ್ಛೇದ ಸಮಾಪ್ತ ||

ಸಂಗ್ರಹ ಮಹಾತ್ಮೆ

ಈ ಬ್ರಹ್ಮಾದ್ವೈತ ಸಿದ್ಧಾಂತ ಷಟ್‌ಸ್ಥಲಾಭರಣವನರಿದಾಚರಿಸಿ ಪರಬ್ರಹ್ಮದಲ್ಲಿ ಸಮರಸ ಸಂಧಾನವನೈದಿದ ಸದ್ಯೋನ್ಮುಕ್ತನಾದ ಪರಶಿವಯೋಗಿಗೆ ಪರಿಭವಂಗಳಳಿದು ಮರಳಿ ಪರಿಭವಕ್ಕೆ ಬಾರದೆ ತಾನ ಭವನಾಗಿಪ್ಪನದೆಂತೆಂದಡೆ ||

ಗ್ರಂಥ |

ಪುನರ್ಭವಾದಿಕಶ್ಚೈವ ಮುಕ್ತ್ಯಾಸಹನ ವಿದ್ಯತೇ
ಯಥಾ ದಗ್ಧಶ್ಯ ಬೀಜಸ್ಯ ಪ್ರರೋಹೋ ನಾತ್ರ ದೈತ್ಯತೇ ||

ವಚನ |

ವಾರಿಧಿಯೊಳಗಣ ವಾರಿಕಲ್ಲ ಕಡಿದು ತೊಲೆ ಕಂಭವ ಮಾಡಿ ಮನೆಯ ಕಟ್ಟಿಕೊಂಡು ಒಕ್ಕಲಿರಬಹುದೆ ಅಯ್ಯಾ, ಅಗ್ನಿಯೊಳಗಿಪ್ಪ ಕರ್ಪುರವ ಕರಡಿಗೆಯ ಮಾಡಿ ಪರಿಮಳವ ತುಂಬಿ, ಅನುಲೇಪನ ಮಾಡಿ ಸುಖಿಸಬಹುದೆ ಅಯ್ಯಾ, ವಾಯುವಿನೊಳಗಣ ಪರಿಮಳವ ಹಿಡಿದು ದಂಡೆಯ ಕಟ್ಟಿ ಮಂಡೆಯೊಳಗೆ ಮುಡಿಯಬಹುದೆ ಅಯ್ಯಾ, ಬಯಲ ಮರೀಚಿಕಾ ಜಲವ ಕೊಡನಲ್ಲಿ ತುಂಬಿ ಹೊತ್ತು ತಂದು ಅಡಿಗೆಯ ಮಾಡಿಕೊಂಡು ಉಣಬಹುದೆ ಅಯ್ಯಾ, ನಿಮ್ಮ ನೆರೆಯರಿದು ನೆರೆದು ಪರವಶನಾಗಿ ತನ್ನ ಮರೆದ ಪರಶಿವಯೋಗಿಗೆ ಮರಳಿ ಪರಿಭವಂಗಳುಂಟೆ ಪರಮಗುರುಶಾಂತಮಲ್ಲಿಕಾರ್ಜುನಾ ||

ಇಂತಪ್ಪ ಪರಶಿವಯೋಗಿಗೆ ಮರಳಿ ಪರಿಭವಂಗಳಿಲ್ಲದಂತೆ ತನ್ನಲ್ಲಿ ಸಮರಸಭಾವವನೈದಿಕೊಂಡ ಆ ಮಹಾಪರಬ್ರಹ್ಮವು ತನ್ನ ಲೀಲೆಯಿಂದಲಾದ ವಿಶ್ವಪ್ರಪಂಚನೆಲ್ಲವನು ತನ್ನ ಲೀಲೆಯಲ್ಲಿ ಲಯವನೈದಿಸಿಕೊಂಡು, ತನ್ನ ಲೀಲೆ ತನ್ನಲ್ಲಿಯೇ ನಿಂದು ತಾ ನಿರ್ವಯಲಾಗಿ, ಅನಿರ್ವಾಚ್ಯವಾಗಿದ್ದ ಆ ಮಹಾ ಪರಬ್ರಹ್ಮದ ಲೀಲಾನಿರ್ವಾಹವೆಂತೆಂದಡೆ ||

ಗ್ರಂಥ |

ಲೀಲಯಾ ಸಹಿತಃ ಸಾಕ್ಷಾದುಮಾಪತಿರಿತೀರಿತಃ
ಲೀಲಯಾ ರಹಿತಃ ಸಾಕ್ಷಾತ್‌ಸ್ವಯಂಭುರಿತಿ ಕಥ್ಯತೇ ||

ವಚನ |

ನಾದ ಬ್ರಹ್ಮಶಕ್ತಿಯಾಗಿ, ಬಿಂದು ವಿಷ್ಣುಶಕ್ತಿಯಾಗಿ, ಕಳೆ ರುದ್ರಶಕ್ತಿಯಾಗಿ, ತ್ರಿವಿಧ ಪ್ರಾಣ ಅತೀತಭೇದ ಚೇತನನಾಗಿ ಉಮಾಪತಿ ನಿರಸನ ಸ್ವಯಂಭು ಸದಾಶಿವ ಮೂರ್ತಿ ಲಿಂಗವು ತ್ರಿವಿಧ ನಾಮನಷ್ಟವಾಯಿತ್ತು ||

ಕಟಕ ಸೂತ್ರದ ಗೂಡ ಮಾಡಿಕೊಂಡಿಪ್ಪಲ್ಲಿ ಸೂತ್ರಕ್ಕೆ ನೂಲನದೆಲ್ಲಿಂದ ತಂದಿತ್ತು ? ರಾಟೆಯಿಲ್ಲ, ಹಂಜಿಯಿಲ್ಲ ತನ್ನಲ್ಲಿಯೆ ನೂಲ ಕಲ್ಪಿಸಿ ತಾನದ ಮಾಡಿಕೊಂಡು ಆಡಿ ಅಡಗಿಕೊಂಡು ಹೋಹಂತೆ ತನ್ನ ಲೀಲೆ ತಾನೆ ಮಾಡಿಕೊಂಡು ವಿಶ್ವಪ್ರಪಂಚ ತನ್ನಲ್ಲಿಯೆ ಲಯವನೈದಿಸಿಕೊಂಡು ಕೂಡಲಚನ್ನಸಂಗಯ್ಯ ನಿರ್ವಯಲಾದ ||

ಆಶೀರ್ವಾದ ಗ್ರಂಥ |

ಸಮ್ಯಗ್‌ಜ್ಞಾನಾದಹಂ ಸಾಕ್ಷಾತ್‌ಶಿವ ಏವೇತಿ ವೇದನಂ
ವೇದನೇ ನೈವ ತೇ ಕಾಮಾ ಆಪ್ತಕಾಮಃ ಸುಖೀಭವ ||  || ||

ಕಂದ :
ಬ್ರಹ್ಮಾದ್ವೈತವ ಮುದದಿಂದ
ಬ್ರಹ್ಮಜ್ಞಾನದೊಳು ನೋಡಿ ನೆರೆಯೊಲಿದವರೇ
ಬ್ರಹ್ಮಾನಂದದಿ ಮುಳುಗಿಹ
ಬ್ರಹ್ಮವೆ ತಾವಹರು ಪರಮ ಗುರುಶಾಂತೇಶಾ ||  || ||

ಅರಿವವಗರಿವನ್ನೀವುದು,
ಮೆರೆವುದು ಸುಜ್ಞಾನ ಮುಕುರಂದದೊಳಿದು ಕೇ
ಳ್ದರಿದವರು ತಾವೆ ಬೊಮ್ಮದ
ಕುರುಹಾಗಿಯೆ ತೋರ್ಪರೆಂದೆನಲ್‌ಕೌತುಕಮೆ?||  || ||

ಇದು ಪರಮತತ್ವ ನಿಶ್ಚಯ
ಮಿದ ಬರೆದೋದಿದಗೆ ಪೇಳಿಕೇಳಿದವರ್ಗುಂ
ಸದಮಲ ಶಿವಪದ ಭಕ್ತಿಯ
ಸೊದೆಯದು ದೊರೆಕೊಳ್ಗೆ ಜನ್ಮ ಜನ್ಮಾಂತರದೊಳ್‌ ||  || ||

ಈ ಬ್ರಹ್ಮಾದ್ವೈತಸಿದ್ಧಾಂತ ಷಟ್‌ಸ್ಥಲಾಭರಣದ ಅನಿರ್ವಾಚ್ಯಮಪ್ಪ ಮಹಾಶೂನ್ಯ ಮೊದಲು ಜ್ಞಾನಶೂನ್ಯಮಪ್ಪ ಸರ್ವಶೂನ್ಯ ಕಡೆಯಾದ ಅರುವತ್ತೊಂದು ಸ್ಥಲಕ್ಕೆ ಸೇರಿಸಿದ ಆಗಮಶ್ರುತಿ ವೇದಶಾಸ್ತ್ರ ಪುರಾಣದೊಳ್‌ಗ್ರಂಥ ೨೬೦, ವೃತ್ತ ೨೪, ವಚನ ೬೭೮, ಕಂದ ೧೧, ಆದ್ಯರ ವಚನ ಅಂತುಭಯಗ್ರಂಥ, ಆದ್ಯರ ವಚನ ಶ್ರುತಿವೃತ್ತಕಂದ ಕೂಡಿ ೯೭೩ ಕ್ಕಂ ಮಂಗಳ ಮಹಾ ಶ್ರೀ ಶ್ರೀ ಶ್ರೀ ||

ಬ್ರಹ್ಮಾದ್ವೈತ ಸಿದ್ಧಾಂತ ಷಟ್ಸ್ಥಲಾಭರಣ ಸಂಪೂರ್ಣ |
ಮಂಗಳಾ ಮಹಾ ಶ್ರೀ ಶ್ರೀ ಶ್ರೀ
||