೫೨. ಮಾಯಾಭ್ರಾಂತಿ ನಿರಸನಸ್ಥಲ

ಇಂತಪ್ಪ ಆಶಾಲಾಂಛನ ನಿರಸನವಂ ಮಾಡಿ ರಜ್ಜು – ಸರ್ಪ, ಸ್ಥಾಣು – ಚೋರ, ಮಹೇಂದ್ರ ಜಾಲ – ಮರೀಚಿಕಾ – ಜಲದಂತೆ ಸಂಕಲ್ಪ ಭ್ರಾಂತಿಯಿಂ ತೋರುವ ದೇಹಾದಿ ಮಾಯಿಕವಂ ವಿಕಲ್ಪ ವಿವೇಕದಿಂದಿಲ್ಲವೆಂದರಿಂದ ಬ್ರಹ್ಮಜ್ಞಾನಿಯಪ್ಪ ಮಹಾಘನಮಹಿಮ ಶರಣನ ಮಾಯಾಭ್ರಾಂತಿ ನಿರಸನ ಸ್ಥಲ ||

ವೃತ್ತ |

ಆಲೋಕಯೇ ಯದಿ ಬಹಿಃಕರಣ ಪ್ರಸಂಗೇ
ಯಸ್ಮಿನ್ಮನಶ್ಯವಗತಂ ನಿಜತತ್ವರೂಪಂ
ತತ್ರಾವಲೋಕನ ಮುಖೇ ಸ್ಥಿತಮಾತ್ಮಾಲೀನಂ
ಆತ್ಮೈವ ಚಿತ್ರಪಟ ಚಿತ್ರಿತ ಯೋವತಸ್ಥೇ ||  || ||

ಗ್ರಂಥ |

ಸಂದೇಹಸ್ಥಲಮಾಕ್ರಾಂತಾ ಯೋಗಿನಾಮಪಿ ಬುದ್ಧಯಃ
ರೌತ್ರೌ ವಲ್ಮೀಕಸಂಬಂಧಾ ರಜ್ಜುಸ್ಸರ್ಪ ಪ್ರಯುಜ್ಯತೇ ||  || ||

ಸ್ಥಾಣುಚೋರಧಿಯಾ ಸರ್ವೇ ಮೂಢಾ ಯದ್ವತ್‌ಪಲಾಯಿತಾಃ
ಚಿದಾನಂದಮಯಂ ಲೋಕಂ ಮೂಢೋ ಮಿಥ್ಯೇತಿ ಮನ್ಯತೇ ||  || ||

ವಚನ |

ತಪ್ಪಿ ನೋಡಿದಡೆ, ಮನದಲ್ಲಿ ಅಚ್ಚೊತ್ತಿದಂತಿದ್ದಿತ್ತು, ಇಪ್ಪೆಡೆಯ ನೋಡಿದಡೆ ಇಲ್ಲದಂತಾಯಿತ್ತು, ತೆಪ್ಪದ ಜಲಧಿಯ ಪಾದಘಾತದಂತೆ ಕರ್ತೃತ್ವವೆಲ್ಲಿಯದೋ ಗುಹೇಶ್ವರಾ ||

ಊರದ ಚೇಳಿನ ಏರದ ಬೇನೆಯಲ್ಲಿ ಮೂರುಲೋಕವೆಲ್ಲಾ ನರಳುತ್ತಿದೆ ನೋಡಾ! ಹುಟ್ಟಿದ ಗಿಡುವಿನ ಬಿಟ್ಟೆಲೆಯನೇ ತಂದು ಮುಟ್ಟದೆ ಪೂಸಲು ಮಾಬುದು ಗುಹೇಶ್ವರಾ ||

ಇಲ್ಲವ ಕುತ್ತವ ಕೊಂಡು, ಬಲ್ಲವರ ಬಾಯ ಹೊಗಹೋದಡೆ ಬಲ್ಲಬಲ್ಲವರು ಆ ಬಲೆಯಲ್ಲಿ ಅಲ್ಲತ್ತಗೊಳುರ್ತಿದರು, ಇದೆಲ್ಲಿಯ ಕುತ್ತವೆಂದು ತಿಳಿದು ವಿಚಾರಿಸಲು ಅದೆಲ್ಲಿಯ ಬಯಲಾಯಿತ್ತು ಗುರುಸಿದ್ಧಮಲ್ಲ ||

ಮುಂಡವ ಹೊತ್ತುಕೊಂಡು ಮಂಡಲಕ್ಕೆ ಹೋದಡೆ ಮಂಡಲದ ಹೆಮ್ಮೆಕ್ಕಳೆಲ್ಲ ಆ ಮುಂಡವ ನೋಡುತ್ತಿದ್ದರು ಇತ್ತ ತಾರುಮಾ, ಇತ್ತ ತೋರಿಮಾ, ಎನುತ್ತ ನೆರೆದು ಮುಂಡವ ಕೊಂಡಾಡುತ್ತಿದ್ದರು, ಇದರ ತಲೆ ಎತ್ತ ಹೋಯಿತ್ತೆಂಬಲ್ಲಿಯೆ ಅಡಗಿತ್ತು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ, ಇಲ್ಲ ಎಂದುದಾಗಿ ||

ನೀರೊಳಗೊಂದು ನೆಳಲು ಸುಳಿಯಿತ್ತಲ್ಲಾ! ನೆಳಲೊಳಗೊಂದು ಹೊಳೆವ ಶಬ್ದವು, ಅದು ನಮ್ಮೆಲ್ಲ ಸೊಮ್ಮಲ್ಲ, ಅಮ್ಮಿದರಾಯಿತ್ತು, ನೆಮ್ಮಿದರಳಿಯಿತ್ತು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ, ಇಲ್ಲ ಬಯಲು ||

ನೆಳಲ ಹೂಳಿಹೆನೆಂದು ಬಳಲುತ್ತಿದೆ ಜಗವೆಲ್ಲ, ನೆಳಲು ಸಾಯಬಲ್ಲುದೆ? ಅಂಗ ಪ್ರಾಣಿಗಳು ಸಮುದ್ರದಾಚೆಯ ತಡಿಯಲ್ಲಿ ಕಳ್ಳನ ಕಂಡು, ಇಲ್ಲಿಂದ ಮುನಿದು ಬೈದಡೆ, ಅವ ಸಾಯಬಲ್ಲನೇ? ಭುವದ ಹೊದ್ದ ಹೊಲಿಗೆಯ ಭೇದವನರಿಯರು! ಕಾಮಿಸಿದರುಂಟೆ ನಮ್ಮ ಗುಹೇಶ್ವರ ಲಿಂಗವು? ||

ಹುಲ್ಲ ಮನುಷ್ಯನ ಕಂಡು ಹುಲ್ಲೆ ತಾ ಬೆದರುವಂತೆ, ಇಲ್ಲದ ಶಂಕೆಯನುಂಟೆಂಬನ್ನಕ್ಕ, ಅದರಲ್ಲಿಯೇ ರೂಪಾಯಿತ್ತು, ಹೇಡಿಗಳನೇಡಿಸಿ, ಕಾಡಿತ್ತು! ಸಿಮ್ಮಲಿಗೆಯ ಚನ್ನರಾಮನೆಂಬ ಭಾವದಗಸಣಿ ||

ಸಂಜೆ ಮಂಜಿನ ಕಪ್ಪು! ಅಂಜಿದಡೆ ಆ ಶಂಕೆ ಅಲ್ಲಿಯೆ ತದ್ರೂಪಾಗಿ ನಿಂದಿತ್ತು; ಅದು ತನ್ನ ಭಾವದ ನಟನೆ ನಡೆವನ್ನಕ್ಕ ನಡೆಯಿತ್ತು, ಅದನರಿದಡೆ ಹಿಂದೆ ಹುಸಿ ಮುಂದೆ, ಕೂಡಲಚನ್ನಸಂಗಯ್ಯನ ನಿಲವು ತಾನೆ ||

ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು, ಸ್ತ್ರೀಯ ಮಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡುವುದು, ಲೋಕವೆಂಬ ಮಾಯೆಗೆ ಶಿವಶರಣರ ಚರಿತ್ರ ಮರುಳಾಗಿ ತೋರುವುದು, ಚನ್ನಮಲ್ಲಿಕಾರ್ಜುನನೊಲಿದ ಶರಣಂಗೆ ಮಾಯೆಯೂ ಇಲ್ಲ, ಮರುಹೂ ಇಲ್ಲ, ಅಭಿಮಾನವೂ ಇಲ್ಲ, ಹಿರಿದಪ್ಪ ಮಾಯೆಯನೆಂತು ಕೆಡಿಸುವನೆಂದು ಬೆಂಬೀಳದಿರುವ ಮರುಳೇ, ಮಾಯೆ ದಿಠಕ್ಕೆ ಇಲ್ಲ! ಇಲ್ಲದುದನೆಂತು ಕೆಡಿಸುವಿರೋ? ತನ್ನನರಿದಡೆ ಸಾಕು; ಅರಿದೆನರಿಯೆನೆಂಬುದು ಮಾಯೆ ಆ ಮಾಯೆ ನಿನಗಿಲ್ಲ; ನಿಜ ನೀನೆ, ಸಿಮ್ಮಲಿಗೆ ಚನ್ನರಾಮಾ ||

೧೦

ಅರಿವು, ಅರಿವಿನ ಮುಂದಣ ಅರಿವುದದೇನೋ! ಅರಿವಿನ ಎರಡರ ಅರಿವು ನಿಷ್ಪತ್ತಿ! ಮಾಯೆ ಮುಂದಡಗಿತ್ತಲ್ಲಾ! ಅರಿದಡೆ ಹಿಂದಾಯಿತ್ತು, ಮರೆದಡೆ ಮುಂದಾಯಿತ್ತು ಚಿಕ್ಕಯ್ಯ ಪ್ರಿಯ ಸಿದ್ಧಲಿಂಗ, ಇಲ್ಲ, ಇಲ್ಲ, ನಿಲ್ಲು ಮಾಣು ||

೧೧

ಇಲ್ಲದ ಮಾಯೆಯನುಂಟುಮಾಡಿಕೊಂಡು ಬಲ್ಲತನಕ್ಕೆ ಬಾಯಬಿಡಲೇಕೋ! ಇಲ್ಲದ ಮಾಯೆಯನಿಲ್ಲೆಂದರಿಯದೆ ತಲ್ಲಣಿಸಿ ಬಾಯ ಬಿಡಲೇಕೋ? ಎಲ್ಲವ ತನ್ನ ತಾ ತಿಳಿದು ನೋಡಿದಡೆ ಕೂಡಲಚನ್ನಸಂಗ ತಾನೆ, ಬೇರಿಲ್ಲ ||

೧೨

ತಾನಿದಿರೆಂಬ ಮಾಯೆ ತೋರಿತ್ತಾಗಿ, ತಾನಲ್ಲ ಈ ತೋರುವುದು, ಉಳುಮೆ ಜ್ಞಾನಾನಂದ ಪರಿಪೂರ್ಣ ತಾನೆಂಬುದನಾರೂ ಅರಿಯರಲ್ಲಾ, ತಿಳಿದು ನೋಡಲಿಲ್ಲಾಗಿ ನಿಜಸಿದ್ಧ ನೀನೆ, ಸಿಮ್ಮಲಿಗೆಯ ಚನ್ನರಾಮಾ ||

೧೩

ಗ್ರಾಮದ ಮಧ್ಯದಲ್ಲೊಂದು ಸತ್ತ ಹೆಣನಿರುತ್ತಿರಲು, ಗ್ರಾಮವ ಸುತ್ತಿ ಬರುತ್ತಿಹರಕ್ಕಸಿಯದ ಕಂಡು, ಗ್ರಾಮವೆನ್ನ ಕಾವಲು, ಗ್ರಾಮದಲ್ಲಿ ನಾನಿಪ್ಪೆನು, ಇದಾರೋ ಕೊಂದವರು? ಕೈಮುಟ್ಟಿ ಕೊಲ್ಲದ ಮುನ್ನವೇ ಸತ್ತಿತ್ತು, ಗ್ರಾಮದ ಕೆಡಿಸಿತ್ತು, ಅಲ್ಲಿದ್ದವರಿಗುಪಟಳವಾಯಿತ್ತೆನುತ ಗ್ರಾಮವ ಬಿಟ್ಟು ಹೋಯಿತ್ತು, ಕೂಡಲಚನ್ನಸಂಗಯ್ಯಾ ||

ಇಂತು ಮಾಯಾಭ್ರಾಂತಿ ನಿರಸನಸ್ಥಲ ಸಮಾಪ್ತ ||

೫೩

ನಿಸ್ಸಂಗಚಾರಿತ್ರ ಸ್ಥಲ

ಇಂತಪ್ಪ ಮಾಯಾಭ್ರಾಂತಿ ನಿರಸನವಂ ಮಾಡಿ, ಮನವು ಮಹದಲ್ಲಿ ವಿಶ್ರಾಂತಿಯನೈದಿ, ತನು ಸರ್ವಸಂಗದೊಳಿದ್ದು, ಆ ಸಂಗರಹಿತನಾಗಿ ಇರ್ದ ಬ್ರಹ್ಮಜ್ಞಾನಿಯಪ್ಪ ಮಹಾಘನ ಶರಣನ ನಿಸ್ಸಂಗಚಾರಿತ್ರ ಸ್ಥಲ ||

ವೃತ್ತ |

ಪುಂಖಾನುಪುಂಖ ವಿಷಯೇಕ್ಷಣ ತತ್ವರೋsಪಿ
ಬ್ರಹ್ಮಾವಲೋಕನನಿರೂಢಮನಾಶ್ಚಯೋಗೀ
ಸಂಗೀತ ತಾಲ ಲಯ ವಾದ್ಯ ಸುಸಂಗತೋsಪಿ
ಮೌಲಿಸ್ಥಕುಂಭಪರಿರಕ್ಷಣಧಿರ್ನಟೀವ ||  || ||

ಗ್ರಂಥ |

ದಾಸೀಚಿತ್ತಂ ಯಥಾಕುಂಭೇ ವೇಶ್ಯಾಚಿತ್ತಂ ಯಥಾ ಧನೇ
ಪದ್ಮಪತ್ರಂ ಜಲೇ ಭಿನ್ನಂ ಯೋಗೀಚಿತ್ತಂ ತಥಾ ಶಿವೇ ||  || ||

ಪರಪುರುಷರತಾನಾರೀ ಭರ್ತಾರಮನುವರ್ತತೇ
ಪರಬ್ರಹ್ಮತತೋಯೋಗೀ ಸಂಸಾರಮನುವರ್ತತೇ ||  || ||

ವಚನ |

ಆತ್ಮ ಸಂಗವಾದವರ್ಗೆ ಬಹಿರ್ಭಾವವಿಲ್ಲ, ಇಂದ್ರಿಯಂಗಳು ಲಿಂಗವಾದವರ್ಗೆ ಸೂತಕವಿಲ್ಲ, ಕರಣಂಗಳು ಲಿಂಗವಾದವರ್ಗೆ ಹಿಂದುಮುಂದೆಂಬ ಸಂಶಯವಿಲ್ಲ, ಲಿಂಗಾಲಯ ಮನವಾದವರ್ಗೆ ಇಹಪರವೆಂಬ ಸಂಬಂಧವಿಲ್ಲ, ಲೋಕದಂತೆ ನಡೆವರು, ಮಾಯಾ ಮೋಹ ದಂತಿಪ್ಪರು! ತನು ವ್ಯವಹರಿಗಳಲ್ಲದೆ ಮನವು ಮಹದಲ್ಲಿ ಪರಿಣಾಮಿಗಳು, ನೋಡಾ! ಇಂತಲ್ಲದೆ, ಲಿಂಗಾನುಭವ – ಸುಖಿಗಳ ಲೋಕದ ಪ್ರಪಂಚಗಳೆಂದಡೆ, ಮನೋಮಧ್ಯದೊಳಿಪ್ಪ ಜ್ಯೋತಿರ್ಲಿಂಗ ನಗದಿಹನೆ ಗುಹೇಶ್ವರಾ ||

ಅರಿವ ಬಚ್ಚಿಟ್ಟುಕೊಂಡು ಮರೆಯ ಮಾನವರಂತೆ ಕುರುಹಿನ ಹೆಸರಲ್ಲಿ ಕರೆದಡೆ ‘ಓ’ ಎನುತಿಪ್ಪವರು, ನರರೇ ಅಯ್ಯಾ, ನಿಮ್ಮ ಶರಣರು? ಕುರುಹಿಲ್ಲ ಲಿಂಗಕ್ಕೆ, ತೆರಹಿಲ್ಲ, ಶರಣಂಗೆ! ಬರಿಯ ಸಂಸಾರವ ಬಳಸಿಯೂ ಬಳಸದಂತಿಪ್ಪರು ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣರು ||

ಲಿಂಗದೊಳಗಿಂದುದಯಿಸಿ ಅಂಗಡಿವಿಡಿದಿಪ್ಪವರ ಇಂಗಿತವನೇನ ಬೆಸಗೊಂಬಿರಯ್ಯಾ? ಅವರ ನಡೆಯೇ ಆಗಮ, ಅವರ ನುಡಿಯೇ ಪರಮಾಮೃತ ಅವರ ಲೋಕದ ಮಾನವರೆಂದೆನ ಬಹುದೇ ಅಯ್ಯಾ? ಅದೆಂತೆಂದಡೆ, ವೃಕ್ಷಾದ್ಭಭವಂತಿ ಬೀಜಾನಿ ತದ್‌ವೃಕ್ಷೋಲೀಯತೇ ಪುನಃ, ರುದ್ರಲೋಕಂ ಪರಿತ್ಯಜ್ಯ ಶಿವಲೋಕಂ ಪ್ರವಿಶ್ಯತಿ, ಎಂದುದಾಗಿ, ಅಂಕೋಲೆಯ ಬೀಜ ತರುವನಪ್ಪಿದಂತೆ ಅಪ್ಪಿದರು ಕೂಡಲಚನ್ನಸಂಗಯ್ಯಾ, ನಿಮ್ಮ ಶರಣರು ||

ಲಿಂಗಾಭಿಮಾನಿಗೆ ಅಂಗಾಶ್ರಯಾಭಿಮಾನವಿಲ್ಲ ನೋಡಾ! ಬಂದುದೇ ಪರಿಣಾಮ, ನಿಂದುದೇ ನಿವಾಸ, ಅದು ಇದು ಎಂಬುದಿಲ್ಲ ಕೂಡಲಚನ್ನಸಂಗಯ್ಯನ ಶರಣಂಗೆ ||

ಭವಕ್ಕೆ ಹುಟ್ಟುವನಲ್ಲ, ಸಂದೇಹ ಸೂತಕಿಯಲ್ಲ, ಆಕಾರ ನಿರಾಕಾರನೂ ಅಲ್ಲ, ನೋಡಯ್ಯಾ, ಕಾಯ ವಂಚಕನಲ್ಲ, ಜೀವವಂಚಕನಲ್ಲ, ಶಂಕೆಯಿಲ್ಲದ ಮಹಾಮಹಿಮ ನೋಡಯ್ಯಾ ಕೂಡಲಚನ್ನಸಂಗಯ್ಯನ ಶರಣನುಪಮಾತೀತನು ||

ಇಹಪರನಲ್ಲ, ಪರಾಪರನಲ್ಲ, ಕಾಮಿಸಿ ಕಾಮಿಯಲ್ಲ, ಅನಾಯಸ ನಿರಂಜನನು ಸಿದ್ಧ ಸೋಮನಾಥ, ನಿಮ್ಮ ಶರಣ ಬಳಸಿ ಬಳಸುವನಲ್ಲ ||

ಮಗಂಗೆ ತಂದೆಯಾಗಿರುವಹ; ತಂದೆಗೆ ಮಗನಾಗಿರುವಹ; ಹೆಂಡತಿಗೆ ಗಂಡನಾಗಿರುವಹ, ಊರಿಗೆ ಒಕ್ಕಲಾಗಿರುವಹ, ಮಸಣಕ್ಕೆ ಹೆಣನಾಗಿರುವಹ ಸಕಳೇಶ್ವರದೇವಾ ನಿಮ್ಮ ಶರಣನ ಪರಿ ಬೇರೆ ||

ಲೋಕಾಚಾರಿಯಲ್ಲ ಶರಣ, ಸ್ತುತಿನಿಂದೆಯಿಲ್ಲದ ಶರಣ, ಶತ್ರುಮಿತ್ರರಿಲ್ಲದ ಶರಣ, ಸಂಪತ್ತು ಆಪತ್ತುಗಳಿಲ್ಲದ ಶರಣ, ಸುಳಿದು ಸೂತಕಿಯಲ್ಲ, ನಿಂದು ಬದ್ಧನಲ್ಲ ಕಲಿದೇವರ ದೇವಯ್ಯಾ, ನಿಮ್ಮ ಶರಣ ಪ್ರಭುದೇವರು ||

ಲಿಂಗದೊಳಗಣ ಬೀಜ ಜಂಗಮದಲುತ್ಪತ್ತ, ಕಾಯಗುಣವಿಲ್ಲವಾಗಿ ಸಂಸಾರ ಭಯವಿಲ್ಲ, ಅಂತರಂಗ ಶುದ್ಧಾತ್ಮ ನಿಸ್ಸಂಗಿ ಜಂಗಮ, ಕೂಡಲಚನ್ನಸಂಗಮದೇವಾ ||

೧೦

ಸಂಗವಿಡಿದಂತೆ ಸಂಗವಿಡಿದು ನೋಡಿದೆಡೆ, ಶರಣ ಸಂಗಸೂತಕಿಲ್ಲ, ಲಿಂಗಪತಿಚೇತನ ಸಂಗವಂತನೆಂದೆನ್ನದಿರು, ಶರಣನು ಮನಬಂದಂತೆ ಮಾಡುವ, ಅರಿದು ಸಕಳಾಗಮಾಚಾರ್ಯನಪ್ಪ, ಅಹುದಾಗದೆಂಬವರಿಲ್ಲ ನೋಡಾ ಕೂಡಲಚನ್ನಸಂಗನ ಶರಣ ಸಂಗಿಯಲ್ಲ, ನಿಸ್ಸಂಗಿಯಲ್ಲ ||

ಇಂತು ನಿಸ್ಸಂಗಚಾರಿತ್ರ ಸ್ಥಲ ಸಮಾಪ್ತ ||

೫೪. ನಿರ್ಲೇಪಚಾರಿತ್ರ ಸ್ಥಲ

ಇಂತು ನಿಸ್ಸಂಗಚಾರಿತ್ರ ಸಂಪನ್ನನಾಗಿ ಸಕಲ ಪ್ರಪಂಚಿನೊಳಗೆ ಹುಡಿ ಹತ್ತದ ಹಾಳಿಯಂತೆ, ಕಾಡಿಗೆ ಹತ್ತದಾಲಿಯಂತೆ, ನೇಯಿಹತ್ತದ ನಾಲಗೆಯಂತೆ, ಬಿಸಿಲು ಮಳೆಯಲ್ಲಿ ನಾದದಂತೆ, ತಾವರೆಯಲೆಯೊಳಗಣ ನೀರಿನಂತಿದ್ದಿರವೆ ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿಯಾಗಿರ್ದ ಬ್ರಹ್ಮಜ್ಞಾನಿಯಪ್ಪ ಮಹಾಘನಶರಣನ ನಿರ್ಲೇಪಚಾರಿತ್ರ ಸ್ಥಲ ||

ಗ್ರಂಥ |

ಯಥಾ ರವಿಸ್ಸರ್ವರಸಾಂಶ್ಚ ಪೀತ್ವಾ
ಹುತಾಶನಸ್ಸರ್ವಹುತಂ ವಿಭಕ್ಷ್ಯ
ತಥೈವ ಯೋಗೀ ವಿಷಯಾಂಶ್ವ ಭುಂಕ್ತ್ವಾ
ನ ಲಿಪ್ಯತೇ ಕರ್ಮ ಶುಭಾಶುಭೈಶ್ವ ||  || ||

ತೈಲಮಿವ ತಿಲಶರೀರೇ ಬೋಧಸ್ಸವಾಂಗ ಮಧ್ಯಪರಿಪೂರ್ಣಃ
ಪಶ್ಯತಿ, ಶ್ರುಣೋತಿ, ಜಿಘ್ರತಿ, ರಸ್ಯತಿ, ಸಂಪ್‌ಋಶತಿ ನಿತ್ಯರ್ಲೇಪಃ ||  || ||

ಮಮ ಸಾಹಿತ್ಯ ಭಕ್ತಾಶ್ಚ ತಮೋಮಯಾ ವಿವರ್ಜಿತಾಃ
ಮೇಘ ನಿರ್ಮಲ ತೋಯಾನಿ ಜಲಪತ್ರಂ ನ ದಾರಯೇತ್‌ ||  || ||

ಸರ್ಪಿಷಾ ಲಿಪ್ಯತೇ ಪಾಣೀ ರಸನಾ ವೈ ನ ಲಿಪ್ಯತೇ
ಯಥಾ ಕಾಲಿಕಯಾ ದೃಷ್ಟಿಃ ಸಂಪೃಕ್ತಾsಪಿ ನ ಲಿಪ್ಯತೇ ||  || ||

ವಿರಕ್ತೋ ವಾನುರಕ್ತೋ ವಾ ಸ್ತ್ರೀಭ್ವಾದಿ ವಿಷಯೇಷ್ವಪಿ
ಕುರ್ವನ್ನಪಿ ನ ಲಿಪ್ಯತೇ ಪದ್ಮಪತ್ರಮಿವಾಂಭಸಿ ||  || ||

ಯದ್ವನ್ಮಂತ್ರಬಲೋಪೇತಂ ಕ್ರೀಡಾ ಸರ್ಪೋನ ದಂಶತಿ
ಕ್ರೀಡೋ ನ ದಂಶ್ಯತೇ ಯೋಗೀ ತದ್ವದಿಂದ್ರಿಯ ಪನ್ನಗೈಃ ||  || ||

ಗರುಡಶ್ಚಾಹಿಪಾಶೇ ನ ರಜ್ಜುಪಾಶೇ ನ ಪಾವಕಃ
ಯೋಗೀ ಸಂಸಾರಪಾಶೇನ ನ ಚ ಬದ್ಧೋ ನ ಬಧ್ಯತೇ ||  || ||

ವಚನ |

ಪೃಥ್ವಿ ಸಕಲವ ಧರಿಸಿಕೊಂಡಿಪ್ಪಂತೆ ಶಿವಯೋಗಿ ಸಮಾಧಾನಿಯಾಗಿರಬೇಕು, ಅಪ್ಪುವಿನ ನಿರ್ಮಳದಂತೆ ಶಿವಯೋಗಿ ನಿರ್ಮಳನಾಗಿರಬೇಕು, ಪಾವಕನು ಸಕಲ ದ್ರವ್ಯಂಗಳ ವಹಿಸಿಯೂ ಲೇಪವಿಲ್ಲದಿಹ ಹಾಂಗೆ ಶಿವಯೋಗಿ ನಿರ್ಲೇಪಿಯಾಗಿರಬೇಕು, ವಾಯು ಸಕಲ ದ್ರವ್ಯಂಗಳಲ್ಲಿ ಸ್ಪರ್ಶನವ ಮಾಡಿಯೂ ಆ ಸಕಲದ ಗುಣ ಮುಟ್ಟದ ಹಾಂಗೆ ಶಿವಯೋಗಿ ಸಕಲ ಭೋಗಂಗಳನ್ನು ಭೋಗಿಸಿ ತಾನಾ ಸಕಲಗುಣಂಗಳ ಮುಟ್ಟಿಯೂ ಮುಟ್ಟದೆ ನಿರ್ಲೆಪಿಯಾಗಿರಬೇಕು. ಆಕಾಶವು ಸಕಲದಲ್ಲಿ ಪರಿಪೂರ್ಣವಾಗಿಹ ಹಾಂಗೆ ಶಿವಯೋಗಿಯೂ ಸಕಲದಲ್ಲಿ ಪರಿಪೂರ್ಣನಾಗಿರಬೇಕು. ಇಂದುವಿನಂತೆ ಶಿವಯೋಗಿ ಸಕಲದಲ್ಲಿ ಶಾಂತನಾಗಿರಬೇಕು ಜ್ಯೋತಿ ತನುವನಳಿದು ಪ್ರಕಾಶವ ಮಾಡುವ ಹಾಂಗೆ ಶಿವಯೋಗಿಯೂ ಅವಿದ್ಯೆಯ ತೊಲಗಿಸಿ ಸುವಿದ್ಯೆಯ ಮಾಡಬೇಕು, ಇದು ಕಾರಣ ಸದ್ಗುರುಪ್ರಿಯ ಶಿವ ಸಿದ್ಧರಾಮೇಶ್ವರನ ಕರುಣವ ಹಡೆದ ಶಿವಯೋಗಿಗೆ ಇದೆ ಚಿಹ್ನವು ||

ಉಚ್ಛಷ್ಟೋದಕದೊಳಗೆ ಚಂದ್ರಮನ ನೆಳಲಿದ್ದಡೇನೋ! ಆ ಚಂದ್ರಮನು ಉಚ್ಛಿಷ್ಟದೊಳಗಣ ಉದಕದಲ್ಲಿದ್ದಾತನೇ? ಅಲ್ಲಲ್ಲ. ಸಂಸಾರ ವ್ಯಾಪಕದೊಳಗೆ ಶರಣನ ಕಾಯವಿದ್ದಡೇನೋ! ಆ ಶರಣನು ಸಂಸಾರದೊಳಗಿದ್ದಾತನೇ? ಅಲ್ಲಲ್ಲ, ಕೆಸರೊಳಗಣ ತಾವರೆಯಂತೆ ಮಠದೊಳಗಣ ಬಯಲಿನಂತೆ ಇದ್ದೂ ಇರನು, ಇದು ಕಾರಣ, ಕೂಡಲಚನ್ನಸಂಗಯ್ಯಾ, ನಿಮ್ಮ ಶರಣನು ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿ ||

ಲೋಕವಿಡಿದು ಲೋಕಸಂಗದಂತಿಪ್ಪೆನು, ಆಕಾರವಿಡಿದು ಸಾಕಾರ ಸಹಿತ ನಡೆವೆನು, ಹೊರಗ ಬಳಸಿ ಒಳಗ ಮರೆದಿಪ್ಪೆನು, ಬೆಂದ ನುಲಿಯಂತೆ ಹುರಿಗುಂದದಿಪ್ಪೆನು, ಎನ್ನ ದೇವ, ಚನ್ನಮಲ್ಲಿಕಾರ್ಜುನ, ಹತ್ತರೊಳಗೆ ಹನ್ನೊಂದಾಗಿ ನೀರ ತಾವರೆಯಂತಿಪ್ಪೆನು ||

ಜಲದೊಳಗಣ ಮತ್ಸ್ಯ ಜಲವ ತನ್ನ ನಾಸಿಕದತ್ತ ಹೊದ್ದಲೀಯದ ಪರಿಯ ನೋಡಾ ಅಯ್ಯಾ, ಶರಣ ಸರ್ವ ಪ್ರಪಂಚಿನೊಳಗಿರ್ದು ಆ ಪ್ರಪಂಚ ತನ್ನತ್ತ ಹೊದ್ದಲೀಯದ ಪರಿಯ ನೋಡಾ ಅಯ್ಯಾ, ಶರಣಂಗೀ ಬುದ್ಧಿಯ ಮತ್ಸ್ಯಂಗಾ ಬುದ್ಧಿಯ ಕರುಣಿಸಿದಿರಿ ನೀವೆ, ಕಪಿಲಸಿದ್ಧ ಮಲ್ಲಿಕಾರ್ಜುನದೇವಯ್ಯಾ ||

ಪ್ರಾಣಲಿಂಗವೆಂದೆಂಬರು : ಪ್ರಾಣನಲ್ಲಿ ಹರಿವ ಪ್ರಕೃತಿ ಗುಣಂಗಳಿಗಿನ್ನೆಂತೋ! ಪ್ರಾಣನ ಪರಮನಲ್ಲಿ ಒಂದುಮಾಡಿ, ಆರೂಢನಿರ್ಮಾಣದಲ್ಲಿ ನಿಂದಾತನ ನಿಲುವು ಎಂತಿದ್ದಿತ್ತೆಂದಡೆ: ನೆಯ್ ಹತ್ತದ ನಾಲಗೆಯಂತೆ, ಕಾಡಿಗೆ ಹತ್ತದಾಲಿಯಂತೆ, ಧೂಳು ಹತ್ತದ ಗಾಳಿಯಂತೆ, ಜಲ ಹತ್ತದ ಜಲಜದಂತೆ, ಉಷ್ಣ ಹತ್ತದ ಅಗ್ನಿಯಂತಿಪ್ಪ, ಕೂಡಲಚನ್ನಸಂಗಯ್ಯಾ, ನಿಮ್ಮ ಶರಣನು ||

ಇಹಪರವೆಂಬ ಇದ್ದೆ ಸೆನಿದ್ದೆ ಸೆಯಾದವನ ಪರಿ ಹೊಸತು, ನೆಯ್‌ಹತ್ತದ ನಾಲಗೆಯಂತೆ, ಹುಡಿಹತ್ತದ ಗಾಳಿಯಂತೆ ಕಾಡಿಗೆ ಹತ್ತದಾಲಿಯಂತೆ ಇದ್ದೆನಯ್ಯಾ, ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ ಆಚರಿಸುತ್ತ ಆಚರಿಸುತ್ತ ಆಚರಿಸದಂತ್ತಿದ್ದೆನಯ್ಯಾ ||

ಮಂಗಲ ಮಣ್ಣ ಬೆರಸದಂತೆ, ಗಾಳಿ ಧೂಳ ಹತ್ತದಂತೆ, ಬಿಸಿಲು ಮಳೆಯಲ್ಲಿ ನಾಂದದಂತೆ, ಬಯಲು ಮೂರ್ತಿಗೊಳ್ಳದಂತೆ, ಸಿದ್ಧಸೋಮನಾಥ, ನಿಮ್ಮ ಶರಣನೆಲ್ಲಿಯೂ ಬಳಸಿ ಬಳಸದಂತಿಪ್ಪನು ||

ಹುಡಿ ಹತ್ತದ ಗಾಳಿಯಂತೆ, ಕಾಡಿಗೆ ಹತ್ತದಾಲಿಯಂತೆ, ನೇಯ್ ಹತ್ತದ ನಾಲಗೆಯಂತೆ, ಮಂಗಲ ಮಣ್ಣ ಬೆರಸದಂತೆ, ಸಿದ್ಧಸೋಮನಾಥ, ನಿಮ್ಮ ಶರಣನು ಸಕಲ ಸುಖಂಗಳ ಸುಖಸಿಯೂ ಬೇರಪ್ಪನು ||

ಘನ ಸುಖ ಮಹಾ ಸುಖವ ಮುಟ್ಟಲು ಸಮುಸುಖಂಗಳ ಸುಖಿಸಬಲ್ಲ! ಸುಖವನಲ್ಲಿಯೇ ಕೊಯ್ದು ಸೂಡ ಕಟ್ಟಬಲ್ಲ ! ನಾಗಪ್ರಿಯ ಚನ್ನರಾಮೇಶ್ವರಾ, ನಿಮ್ಮ ಶರಣ ಸುಖಿಸಬಲ್ಲ ಸುಖವನು ||

೧೦

ಬೊಬ್ಬೆಯ ಬಾಯಿ, ಬಾಚ ಮಂಡೆ, ಮೀರಿದ ಶರಣಂಗೆಲ್ಲದೆಯಿಲ್ಲ, ಓಡಿನಲೂಟ, ಕಾಡಿನಲಿಕ್ಕೆ, ಮೀರಿದ ಶರಣಂಗಲ್ಲದೆಯಿಲ್ಲ, ಇದು ಕಾರಣ ಕೂಡಲಚನ್ನಸಂಗಯ್ಯಾ, ನಿಮ್ಮ ಶರಣರು ಮಲೆಯೊಳಗಿದ್ದಡೇನು, ಮೊಲೆಯೊಳಗಿದ್ದಡೇನು? ||

೧೧

ಲಿಂಗದೊಳನುಭವ ಹಿಂಗದ ಕಾರಣ, ಅಂಗನೆಯರ ಮೊಲೆ ಲಿಂಗವಾದವು, ತನುವೆ ತನ್ನ ಸುಖ, ಮನವೆ ಪರಮ ಸುಖ, ಸಕಳೇಶ್ವರಾ ನಿಮ್ಮ ಶರಣರಲ್ಲಿ ಕಾಮಿಯೆಂಬರು ನಂಬಿಯಣ್ಣನ ||

೧೨

ಕಾಲ ಕಲ್ಪಿತನಲ್ಲ ಕರ್ಮವಿರಹಿತ ಶರಣ ವಿಧಿ ನಿಷೇಧ ಪುಣ್ಯ ಪಾಪ ಕರ್ಮ ಕಾಯನು ಅಲ್ಲ ಆ ಶರಣನು, ಅವರಿವರ ಬೆರಸಿಪ್ಪನು, ತನ್ನ ಪರಿ ಬೇರೆ! ನಿರಂತರ ಸುಖಿ, ಕೂಡಲಚನ್ನಸಂಗಯ್ಯಾ, ನಿಮ್ಮ ಶರಣ ಪ್ರಪಂಚಿನೊಳಗಿದ್ದೂ, ತನ್ನ ಪರಿ ಬೇರೆ ||

೧೩

ಗಾರುಡಿಗನ ವಿಷವಡರಬಲ್ಲುದೆ? ಸೂರ್ಯನ ಮಂಜು ಮುಸುಕಬಲ್ಲುದೆ? ಗಾಳಿಯ ಮೊಟ್ಟೆಯ ಕಟ್ಟಬಹುದೆ? ಅಗ್ನಿಯ ಕೈಯಿಂದ ಆಕಾಶ ಬೇಯಬಲ್ಲುದೆ? ನಿಮ್ಮನ್ನರಿದ ನಿಜಯೋಗಿಗೆ ಕರ್ಮಪಾಶವೆಲ್ಲಿಯದು ರೇಕಣ್ಣಪ್ರಿಯ ನಾಗಿನಾಥಾ ||

ಇಂತು ನಿರ್ಲೇಪಚಾರಿತ್ರ ಸ್ಥಲ ಸಮಾಪ್ತ ||

೫೫. ಬಂಧಮೋಕ್ಷ ನಿರಸನಸ್ಥಲ

ಇಂತು ನಿರ್ಲೇಪಚಾರಿತ್ರ ಸಂಪನ್ನನಾಗಿ ಸಕಲಭೋಗಾದಿಭೋಗಂಗಳ ಹಿಡಿದುಬದ್ಧನಲ್ಲದೆ ಬಿಟ್ಟು ಮುಕ್ತನಲ್ಲದೆ ಇಂತು ಉಭಯ ಸಂಕಲ್ಪವಳಿದು ಎಂತಿರ್ದುದಂತೆ ಬ್ರಹ್ಮವಾಗಿನಿಂದ ಬ್ರಹ್ಮಜ್ಞಾನಿಯಪ್ಪ ಮಹಾಘನಶರಣನ ಬಂಧಮೋಕ್ಷ ನಿರಸನಸ್ಥಲ ||

ಗ್ರಂಥ |

ಬಂಧೇ ಸತಿ ಮುಕ್ತಿಸ್ಸ್ಯಾತ್‌ಸತ್ಯಂ ಮುಕ್ತೌ ಚ ಬಂಧನಂ
ಅನ್ಯಸ್ಯಾಪಗಮಾದನ್ಯ ಆಗಮಿಷ್ಯತಿ ಕಶ್ಚಚಿತ್‌ ||  || ||

ಶುದ್ಧೋ ನಿರಂಜನೋsನಂತೋ ಬೋಧೋsಹಂ ಪ್ರಕೃತೇಃ ಪರಃ
ನ ಬಂಧೋsಸ್ತಿ ನ ಮೋಕ್ಷೋsಸ್ತಿ ಬ್ರಹ್ಮೈವಾಸ್ಮಿ ನಿರಾಮಯಃ ||  || ||

ಸರ್ವಾವಸ್ಥಾ ಸ್ವಯಂ ಭೋಧಃ ಶಾಂಭವಸ್ತು ರಸಾತ್ಮಕಃ
ವರ್ತತೇ ತು ಕುಲೋ ಯತ್ರ ಬಂಧಮೋಕ್ಷೌ ಸ್ವಯಂ ಶಿವಃ ||  || ||

ಪಾಪಪುಣ್ಯೇ ಜರಾಮೃತ್ಯೂ ಸ್ಥೂಲಸೂಕ್ಷ್ಮೇ ತು ಮಾಯಯಾ
ಸೈಷಾ ಭ್ರಾಂತಿಃ ಪರಿತ್ಯಾಜ್ಯಾ ಅದ್ವಯಾ ಭವ ಪಾರ್ವತಿ ||  || ||

ವಚನ |

ಇನ್ನು ಮುಕ್ತನೆಂಬನ್ನಕ್ಕ, ಮುನ್ನಲೇನು ಬದ್ಧನೇ? ಮುನ್ನ ಮುನ್ನವೆ ಮುಕ್ತನು, ಒಂದು ಕಾರಣದಿಂದ ಬಂದು ಗುರುಕರುಣದಿಂದ ಗುರುವಾದ ಬಳಿಕ ಬದ್ಧ ಮುಕ್ತನೆಂಬ ದಂದುಗದ ನುಡಿ ಹೊದ್ದಲುಂಟೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ||

ಜನನಾದಿಯಿಲ್ಲದವ ನಿನಗೆ ಜನನವನೇಕೊಡಂಬಡುವೆ? ಗುಣಕಮ್ಮವಿಲ್ಲದವ, ನಿನಗೆ ನಿರ್ವಿಷಯವನೇ ಕೊಡಂಬಡುವೆ? ಬಂಧವಿಲ್ಲದವ, ನಿನಗೆ ಮೋಕ್ಷವನೇ ಕೊಡಂಬಡುವೆ? ಇವೇನೂಯಿಲ್ಲದ ಒಡಂಬಡಿಕೆ ನಿನಗೆ ಸಿಮ್ಮಲಿಗೆಯ ಚನ್ನರಾಮಾ ||

ಆತ್ಮನಂತಪ್ಪಡೆ, ನಿರವಯ, ನಿರ್ಗುಣ, ನಿರ್ವಿಕಾರ! ನೋಡುವರೆ, ಕರ್ಮವ ಮಾಡುವವರಾರೋ? ಅಲ್ಲಿ ಸಂಸಾರವಾರಿಗೆ ತೋರಿತ್ತು? ಬಂಧ ಮೋಕ್ಷಂಗಳಾರಿಗೆ, ಎಲೆ ಅಯ್ಯಾ? ನಿನ್ನ ನಿನ್ನಿಂದ ತಿಳಿದು ನೋಡಲು ತಥ್ಯ ಮಿಥ್ಯಗಳೊಂದಕ್ಕೊಂದು ತಟ್ಟಲರಿವವೇ? ಪುಸಿ ಮಾಯೆ ತೋರಿತ್ತು, ಸೋಜಿಗ ಭ್ರಮೆ! ಧೀರ ನೀನೆ, ಸಿಮ್ಮಲಿಗೆಯ ಚನ್ನರಾಮಾ ||

ಪುಣ್ಯಪಾಪವೆಂಬ ಉಭಯಕರ್ಮವ, ಇವನಾರಯ್ಯಾ ಬಲ್ಲವರು? ಇವನಾರಯ್ಯಾ ಉಂಬವರು? ಕಾಯ ತಾನುಂಬಡೆ, ಕಾಯ ಮಣ್ಣು, ಜೀವ ತಾನುಂಬಡೆ, ಜೀವ ಬಯಲು, ಈ ಉಭಯದ ಭೇದವ, ಕೂಡಲಚನ್ನಸಂಗಯ್ಯಾ, ನಿಮ್ಮ ಶರಣನೆ ಬಲ್ಲ ||

ಮೀರಿದ ಕ್ರೀಯಾ ಸಂಪಾದಿಸನಾಗಿ, ದ್ವೈತಿಯಲ್ಲ, ಅದ್ವೈತಿಯಲ್ಲ, ನೀರಜಾರ ಹದುಳಿಗನಾಗಿ, ಸ್ವರ್ಗಿಯಲ್ಲ, ಅಪವರ್ಗಿಯಲ್ಲ, ಕೂಡಲಚನ್ನಸಂಗಯ್ಯನಲ್ಲಿ ಸ್ವಾಯತ ಪ್ರಸಾದಿ ಬಸವಣ್ಣನು ||

ಉಟ್ಟುದ ತೊರೆದಂಗೆ ಊರೇನು, ಕಾಡೇನು? ನಷ್ಟ ಸಂತಾನಕ್ಕೆ ಕುಲವೇನು, ಛಲವೇನು? ಹುಟ್ಟುಗೆಟ್ಟಾತಂಗೆ ಪುಣ್ಯವೇನು, ಪಾಪವೇನು? ಅದು ಕೆಟ್ಟುದು, ಕೆಟ್ಟುದು ತನ್ನ ತಾನರಿಯದೆ ಬಟ್ಟಬಯಲಲ್ಲಿ ಬಿದ್ದೆ ಅಜಗಣ್ಣ ತಂದೆ ||

ಕರಣಾದಿಗುಣಂಗಳಳಿದು ನವಚಕ್ರಂಗಳು ಭಿನ್ನವಾದ ಬಳಿಕ ಇನ್ನೇನೊ ಇನ್ನೇನೋ? ಪುಣ್ಯವಿಲ್ಲ, ಪಾಪವಿಲ್ಲ, ಇನ್ನೇನೋ? ಸ್ವರ್ಗವಿಲ್ಲ, ನರಕವಿಲ್ಲ, ಗುಹೇಶ್ವರನೆಂಬ ಲಿಂಗ ವೇದಿಸಲೊಡನೆ ಇನ್ನೇನೋ ಇನ್ನೇನ್ನೋ? ||

ಪರುಷ ಮುಟ್ಟಲು ಕಬ್ಬುನ ಹೊನ್ನಾದಂತೆ ಪುಣ್ಯ ಪಾಪಂಗಳಿಲ್ಲ, ಸ್ವರ್ಗ ನರಕಂಗಳಿಲ್ಲ, ನಿಮ್ಮವರಿಗೆ ಕೂಡಲಚನ್ನಸಂಗಯ್ಯಾ, ನಿಮ್ಮ ಶರಣರು ಭವವಿರಹಿತರು ||

ಮನದೊಳಗೆ ಘನ ವೇದ್ಯವಾಗಿ, ಘನದೊಳಗೆ ಮನ ವೇದ್ಯವಾದ ಬಳಿಕ ಪುಣ್ಯವಿಲ್ಲ, ಪಾಪವಿಲ್ಲ, ಸುಖವಿಲ್ಲ, ದುಃಖವಿಲ್ಲ ಕಾಲವಿಲ್ಲ, ಕರ್ಮವಿಲ್ಲ ಜನನವಿಲ್ಲ, ಮರಣವಿಲ್ಲ ಗುಹೇಶ್ವರಾ, ನಿಮ್ಮ ಶರಣರು ಘನಮಹಿಮರು ನೋಡಯ್ಯಾ ||

೧೦

ಪುಣ್ಯಪಾಪವಿಲ್ಲವಾಗಿ, ಜನನದ ಹಂಗು ಬೇಡ ಬಂದುದನುಂಬುದಾಗಿ, ಮಾನವನ ಹಂಗು ಬೇಡ ಭವಗೆಟ್ಟುದಾಗಿ, ದೈವದ ಹಂಗು ಬೇಡ ಎನಗಿದ್ದುದಾಗಿ, ಇನ್ನಾರ ಹಂಗು ಬೇಡ ಸತ್ಯಜ್ಞಾನಾನಂತ ಆನಂದವೆ ತಾನಾಗಿ ಆರ ಹಂಗಿಲ್ಲದಾತ, ಗುಹೇಶ್ವರ, ಅಲ್ಲಯ ನೊಬ್ಬನೆ ||

೧೧

ಕಾಲನ ಕರೆದು ಕೆಪ್ಪೆಯ ಹೊಯ್ದೆ, ಕಲ್ಪಿತನೆಂಬವನ ನೊಸಲಕ್ಷರವ ತೊಡೆದೆ ಇನ್ನೇನು, ಇನ್ನೇನು, ಮುಂದೆ ಬಯಲಿಂಗೆ ಬಯಲು ಸನ್ನೆದೋರುತಿದೆ, ಹಿಂದಿಲ್ಲ, ಮುಂದಿಲ್ಲ, ಮತ್ತೇನುಮಿಲ್ಲವಾಗಿ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ, ಇಲ್ಲ ಇಲ್ಲ, ನಿಲ್ಲು ಮಾಣು ||

೧೨

ಆನು ನೀನು, ಅರಿದೆ, ಮರೆದೆ, ಅಳಿದೆ ಉಳಿದೆನೆಂಬ ಸಂಶಯ ಭ್ರಮೆ, ಸ್ಥೂಲ ಸೂಕ್ಷ್ಮವೆಂಬ ವಿಪರೀತ ಭ್ರಮೆ, ಅಂತರ್ಮುಖ ಭ್ರಮೆ, ಬಹಿರ್ಮುಖ ಭ್ರಮೆ, ಅನೃತಭ್ರಮೆ, ಸತ್ಯ ಭ್ರಮೆ, ತತ್ವ ಅತತ್ವವೆಂಬ ವಿವೇಕಭ್ರಮೆ, ಪುಣ್ಯಪಾಪ, ಸ್ವರ್ಗನರಕ, ಬಂಧಮೋಕ್ಷ, ಪ್ರವರ್ತನ ನಿವರ್ತನ ಆದಿಯಾದ ಕರ್ಮಭ್ರಮೆ, ಹುಸಿ ಜೀವ, ಪರಮ ಐಕ್ಯರೆಂಬ ಅನುಸಂಧಾನ ಭ್ರಮೆ, ಯೋಗದಾಗು ಸಿಲುಕು ಭ್ರಮೆ, ನಿತ್ಯಭ್ರಮೆ, ಅನಿತ್ಯಭ್ರಮೆ, ವಾಗದ್ವೈತ ಭ್ರಮೆ, ಅದ್ವೈತ ಭ್ರಮೆ, ಮಂತ್ರಭ್ರಮೆ, ತಂತ್ರಭ್ರಮೆ, ನಾಹಂ ಭ್ರಮೆ, ಕೋsಹಂ ಭ್ರಮೆ, ಸೋsಹಂ ಭ್ರಮೆ, ಚಿದಹಂ ಭ್ರಮೆ, ತತ್ವಸಹಕಾರಣವೇಷ್ಟಿತ ಜಗತ್ತೆಲ್ಲಾ ಮಾಯಾಮಯ, ಇದು ಕಾರಣ ಕೂಡಲಚನ್ನಸಂಗಯ್ಯಾ, ನಿಮ್ಮ ಶರಣಂಗೆ ಆವ ಭ್ರಮೆಯೂ ಇಲ್ಲ ||

೧೩

ಮಣ್ಣ ಕಳೆದು ಮಡಕೆಯಿಲ್ಲ, ಹೊನ್ನ ಕಳೆದು ತೊಡಿಗೆಯಿಲ್ಲ; ತನ್ನ ಕಳೆದು ಜಗವಿಲ್ಲ; ತಾನೇ ತನ್ನಿಂದನ್ಯವಿಲ್ಲ; ಸುಖ – ದುಃಖ ಬಂಧ – ಮೋಕ್ಷಂಗಳಿಲ್ಲದ, ನಾಹಂ ಎಂದೆನಲಿಲ್ಲದ, ಕೋsಹಂ ಎಂದೆನಲಿಲ್ಲದ ನುಡಿಗೆ ಎಡೆಯೆನಿಸಿ ಏನೂ ಇಲ್ಲದ ಸಚ್ಚಿದಾನಂದ ನಿತ್ಯಪರಿಪೂರ್ಣ ನೀನೆ, ಸಿಮ್ಮಲಿಗೆಯ ಚನ್ನರಾಮಾ ||

ಇಂತು ಬಂಧಮೋಕ್ಷ ನಿರಸನ್ಥಲ ||

ಇಂತಪ್ಪ ಬಂಧಮೋಕ್ಷ ನಿರಸನ ಸ್ಥಲ ಕಡೆಯಾಗಿ, ಷಟ್ಪ್ರಕಾರವನ್ನುಳ್ಳ ಸರ್ವಾನಂದ ಸಂಪೂರ್ಣಮಪ್ಪ ಬ್ರಹ್ಮಜ್ಞಾನಿಯ ಶರಣಸ್ಥಲ ಸಮಾಪ್ತ ||

ಇದು ಶ್ರೀಮದಮಿತೋರು ಲಿಂಗಾಂಗ ಸಂಯೋಗಾನುಭವ
ಪ್ರಸಿದ್ಧ ಪರಿಪೂರ್ಣಶೀಲ ಪರಮಾದ್ವೈತ ವಿಶ್ರಾಂತರುಮಪ್ಪ
ಪರಮಾಚಾರರೂಪ ಶ್ರೀ ಕರಸ್ಥಲದ ಮಲ್ಲಿಕಾರ್ಜುನೊಡೆಯರು
ಸೇರಿಸಿದ ಮಹಾನುಭಾವದ ಬೋಧೆಯಪ್ಪ
ಶ್ರೀಮದ್ಬ್ರಾಹ್ಮಾದ್ವೈತ ಸಿದ್ಧಾಂತ
ಷಟ್‌ಸ್ಥಲಾಭರಣದೊಳು ಬ್ರಹ್ಮಜ್ಞಾನಿಯಪ್ಪ
ಶರಣನ ವರೆಗೆ ಪಂಚಮ ಪರಿಚ್ಛೇದ ಸಮಾಪ್ತ ||