ಐಕ್ಯಸ್ಥಲ

೫೬. ಐಕ್ಯಸ್ಥಲ

ಇಂತು ಸದಾನಂದದಿಂ ಶರಣಾಗಿ, ಆ ಸದಾನಂದದೊಳಗಣ ಸಮರಸ ಸುಖಭಾವದಿಂದ ಬ್ರಹ್ಮಜ್ಞಾನಿಯಪ್ಪ ಶರಣನು ತಾನೇ ಐಕ್ಯನಾದ ಐಕ್ಯಸ್ಥಲ ||

ವೃತ್ತ |

ನಾಹಂ ತ್ವಮಪ್ರಥಿತ ಶಬ್ದ ವಿಭೇದ ವೃತ್ತಿ
ರ್ನ ಪ್ರಾಣದೇಹ ಮನ ಇಂದ್ರಿಯ ಭೌತಿಕಾನಿ
ಸರ್ವ ಭ್ರಮಾತ್ಮ ಕಮಿದಂ ಮಯಿ ನೇತಿ ಭಾವಾ
ದೈತ್ಯಸ್ಥಲಂ ಸಮರಸಂ ಸುಖರೂಪ ಮಾಹುಃ ||

ಗ್ರಂಥ |

ಅಖಂಡ ಪರಿಪೂರ್ಣೇಶ ಸ್ವಾತ್ಮ ಸಂಭಾವನೀರ್ಜಿತಃ
ಸ್ವಪ್ನೇಪ್ಯಭೇದ ಸಂ ಭ್ರಾಂತೋ ಯಸ್ಯ ಐಕ್ಯ ಇಹೋದಿತಃ ||  || ||

ಅನಾದ್ಯಂತಮಜಂ ಸಾಕ್ಷಾತ್ಪ್ರಭಾಮಂಡಲಮಂಡಿತಂ
ತಲ್ಲಿಂಗವೇದ್ಯ ಶರಣೋ ಮಹಾಲಿಂಗೈಕ್ಯ ಉಚ್ಯತೇ ||  || ||

ಷಡೂರ್ಮಯಶ್ಚ ಷಡ್ವರ್ಗಾ ನಾಸ್ತಿ ಚಾಷ್ಟವಿಧಾನರ್ಚನಂ
ನಿರ್ಭಾವೋ ನಿಜಲಿಂಗೈಕ್ಯಃ ಶಿಖಿಕರ್ಪೂರ ಯೋಗವತ್‌ ||  || ||

ವಚನ |

ಸಮರಸ್ಯೆಕ್ಯದೊಳಗಣ ಸ್ನೇಹವು ಹೆಂಗಯ್ಯಾ ಎಂದಡೆ, ಮತ್ಸ್ಯ ಕೂರ್ಮವಿಹಂಗನಂತೆ ಸ್ನೇಹದ ನೋಟದಲ್ಲಿ ತೃಪ್ತಿ; ಸ್ನೇಹದ ನೆನಹಿನಲ್ಲಿ ತೃಪ್ತಿ; ಸ್ನೇಹದ ಸ್ಪರ್ಶನದಲ್ಲಿ ಕೂಡಿಕೊಂಬ ಪರಿ. ಇಂತೀ ಪರಿಯಲ್ಲಿ ಎನ್ನ ಮಹಾಲಿಂಗ ಗಜೇಶ್ವರನಲ್ಲಿ ಐಕ್ಯವಾಗಿ, ವಾರಿಕಲ್ಲ ಪುತ್ಥಳಿ ಕರಗಿ ಅಪ್ಪುವ ಕೂಡಿದಂತಾಯಿತ್ತು ||

ದೆಸೆ ದಿಕ್ಕು ಧರೆ ಗಗನವೆಂಬುದ ನಾನರಿಯೆನಯ್ಯಾ | ‘ಲಿಂಗಮಧ್ಯೇ ಜಗತ್ಸರ್ವ’ ಎಂಬುದ ನಾನರಿಯೆನಯ್ಯಾ! ಅಂಬುಧಿಯೊಳಗೆ ಬಿದ್ದ ವಾರಿಕಲ್ಲಿನಂತೆ ಭಿನ್ನ ಭಾವವಿಲ್ಲದೆ, ಕೂಡಲ ಸಂಗಮದೇವ, ಶಿವಶಿವ, ಎನುತಿದ್ದೆನಯ್ಯಾ ||

ನಿರ್ವಿಕಲ್ಪವೆಂಬ ನಿಜದೊಳಗಯ್ಯಾ, ನಿರಹಂಭಾವದಿಂದೆ ನಾನಿದ್ದೆನಯ್ಯಾ, ನೋಡಿ ಹೆನೆಂದಡೆ ನೋಡಲಿಲ್ಲ, ಕೇಳಿಹನೆಂದೆಡೆ ಕೇಳಲಿಲ್ಲ, ಘನ ನಿರಂಜನದ ಬೆಳಗಿಂಬಾದುದನೇನೆಂಬೆನಯ್ಯಾ ಗುಹೇಶ್ವರಾ ? ||

ಘನ ಗಂಭೀರ ಮಹಾಘನದೊಳಗೆ ಘನಕ್ಕೆ ಘನವಾಗಿದ್ದೆನಯ್ಯಾ! ಕೂಡಲ ಸಂಗಯ್ಯನೆಂಬ ಬೆಳಗಿನೊಳಗೆ ಬೆಳಗಾಗಿದ್ದು ಶಬ್ದಮುಗ್ದವಾಗಿದ್ದುದನೇನೆಂಬೆನಯ್ಯಾ ||

ಭಾವಕ್ಕೆ ಇಂಬಿಲ್ಲ, ಶಬ್ದಮೀಸಲು ನೋಡಾ! ನುಡಿಗೆಡೆಯಿಲ್ಲ, ಎಡೆಗೆ ಕಡೆಯಿಲ್ಲ, ಗುಹೇಶ್ವರನೆಂಬ ಶಬ್ದ ವೇದಿಸಲೊಡನೆ. ||

ಲಿಂಗವೆನ್ನೆ, ಲಿಂಗೈಕ್ಯವೆನ್ನೆ, ಸಂಗವೆನ್ನೆ, ಸಮರಸವೆನ್ನೆ, ಆಯಿತ್ತೆನ್ನೆ, ಆಗದನ್ನೆ, ನೀನೆನ್ನೆ, ನಾನೆನ್ನೆ, ಚನ್ನಮಲ್ಲಿಕಾರ್ಜುನನಲ್ಲಿ ಲಿಂಗೈಕ್ಯವಾದ ಬಳಿಕ ಏನೂ ಎನ್ನೆ ||

ಉದಕದೊಳಗಣ ಕಿಚ್ಚಿನಂತೆ ಲಿಂಗೈಕ್ಯವು, ವಾಯುನುಂಗಿದ ಪರಿಮಳದಂತೆ ಲಿಂಗೈಕ್ಯವು ಉರಿಯೊಳಡಗಿದ ಕರ್ಪುರದಂತೆ ಲಿಂಗೈಕ್ಯವು, ಆಲಿ ನುಂಗಿದ ನೋಟ, ನೋಟ ನುಂಗಿದ ಕೂಟ, ಭಾವನಾಟಿದ ಬಯಲಂತೆ, ಅರಿವು ಮರಹಿನಲಡಗಿ, ಮರಹು ಅರುವಿನಲಡಗಿ, ಅರಿವು ಮರಹಿಲ್ಲದ ನಿಜದ ನಿಲವ ‘ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ’ ವಾಕು ಮನಕ್ಕೆ ಬಾರದ ಶರಣರ ಬೆರೆಸಿಪ್ಪ ಶಂಭುಜಕ್ಕೇಶ್ವರಾ ||

ಅಲರೊಳಡಗಿದ ಪರಿಮಳದಂತೆ, ಪತಂಗದೊಳಡಗಿದ ಅನಲನಂತೆ, ಶಶಿಯೊಳಡಗಿದ ಷೋಡಶ ಕಳೆಯಂತೆ, ಉಲುಹಗಿದ ವಾಯುವಿನಂತೆ, ಸಿಡಿಲೊಳಡಗಿದ ಗಾತ್ರದ ತೇಜದಂತೆ, ಇರಬೇಕಯ್ಯಾ ಯೋಗ ಎನ್ನ ಅಜಗಣ್ಣ ತಂದೆಯಂತೆ ||

ಅಪ್ಪುವನಪ್ಪಿದ ವಾರಿಕಲ್ಲಿನಂತೆ, ವಾಯುವನಪ್ಪಿದ ಪರಿಮಳದಂತೆ; ಲಿಂಗವನಪ್ಪಿದ ಶರಣನ ದೇಹಿ ಎನ್ನಬಹುದೆ? ಅನಲಪ್ಪಿದ ಕರ್ಪುರದಂತೆ, ಈ ತ್ರಿವಿಧ ನಿರ್ಣಯ ಕೂಡಲಚನ್ನಸಂಗಯ್ಯಾ ಲಿಂಗೈಕ್ಯವು ||

೧೦

ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂದಿತು ಷಟ್‌ಸ್ಥಲವಾರು; ಭಕ್ತ ಮಹೇಶ, ಈ ಎರಡು ಗುರುಸ್ಥಲ; ಪ್ರಸಾದಿ ಪ್ರಾಣಲಿಂಗಿ, ಈ ಎರಡೂ ಲಿಂಗಸ್ಥಲ ಶರಣ ಐಕ್ಯ, ಈ ಎರಡು ಜಂಗಮಸ್ಥಲ; ಇವಕ್ಕೆ ವಿವರಂಗಳಾವವೆಂದಡೆ: ಭಕ್ತಂಗೆ ಪೃಥ್ವಿಯೆ ಅಂಗ, ಮಹೇಶ್ವರಂಗೆ ಅಪ್ಪುವೆ ಅಂಗ, ಪ್ರಸಾದಿಗೆ ಅಗ್ನಿಯೆ ಅಂಗ, ಪ್ರಾಣಲಿಂಗಿಗೆ ವಾಯುವೆ ಅಂಗ, ಶರಣಂಗೆ ಆಕಾಶವೆ ಅಂಗ, ಐಕ್ಯಂಗೆ ಆತ್ಮನೆ ಅಂಗ, ಈ ಅಂಗಂಗಳಿಗೆ ಹಸ್ತಗಳಾವವೆಂದಡೆ ಭಕ್ತಂಗೆ ಸುಚಿತ್ತವೆ ಹ್ತ, ಮಹೇಶ್ವರಂಗೆ ಸುಬುದ್ಧಿಯೆ ಹಸ್ತ, ಪ್ರಸಾದಿಗೆ ನಿರಂಹಕಾರವೆ ಹಸ್ತ, ಪ್ರಾಣಲಿಂಗಿಗೆ ಸುಮನವೆ ಹಸ್ತ, ಶರಣಂಗೆ ಸುಜ್ಞಾನವೆ ಹಸ್ತ, ಐಕ್ಯಂಗೆ ಸದ್ಭಾವವೆ ಹಸ್ತ. ಈ ಹಸ್ತಂಗಳಿಗೆ ಲಿಂಗಾಂಗಳಾವವೆಂದಡೆ: ಸುಚಿತ್ತ ಹಸ್ತಕ್ಕೆ ಆಚಾರಲಿಂಗ, ಸುಬುದ್ಧಿ ಹಸ್ತಕ್ಕೆ ಗುರುಲಿಂಗ, ನಿರಂಹಕಾರ ಹಸ್ತಕ್ಕೆ ಶಿವಲಿಂಗ, ಸುಮನ ಹಸ್ತಕ್ಕೆ ಜಂಗಮ ಲಿಂಗ, ಸುಜ್ಞಾನ ಹಸ್ತಕ್ಕೆ ಪ್ರಸಾದಲಿಂಗ, ಸದ್ಭಾವ ಹಸ್ತಕ್ಕೆ ಮಹಾಲಿಂಗ, ಈ ಅಂಗಗಳಿಗೆ ಮುಖಂಗಳಾವವೆಂದಡೆ : ಆಚಾರಲಿಂಗಕ್ಕೆ ಘ್ರಾಣ, ಗುರುಲಿಂಗಕ್ಕೆ ಜಿಹ್ವೆ, ಶಿವಲಿಂಗಕ್ಕೆ ನೇತ್ರ, ಚರಲಿಂಗಕ್ಕೆ ತ್ವಕ್ಕು, ಪ್ರಸಾದಲಿಂಗಕ್ಕೆ ಶ್ರೋತ್ರ, ಮಹಾಲಿಂಗಕ್ಕೆ ನಿರ್ಭಾವ, ಈ ಮುಖಂಗಳಿಗೆ ಅರ್ಪಿತಂಗಳಾವವೆಂದಡೆ : ಘ್ರಾಣಕ್ಕೆ ಗಂಧ, ಜಿಹವೆಗೆ ರುಚಿ, ನೇತ್ರಕ್ಕೆ ರೂಪು, ತ್ವಕ್ಕಿಗೆ ಸ್ಪರ್ಶನ, ಶ್ರೋತ್ರಕ್ಕೆ ಶಬ್ದ, ನಿರ್ಭಾವಕ್ಕೆ ನಿರ್ವಯಲು. ಇಂತೀ ಸರ್ವೇಂದ್ರಿಯ ಸಮ್ಮತ ನಿರ್ವಿಕಲ್ಪ ಮಹಾಲಿಂಗಾಂಗ ಭಾವದ ಸುಚಿತ್ತಲೇಪಗ್ರಾಹಕ ಭಕ್ತ ಗುರುಲಿಂಗವಾದ. ಗುರುಲಿಂಗಾಂಗ ಸುಬುದ್ಧಿ ಲೇಪಗ್ರಾಹಕ ಮಹೇಶ್ವರ ಶಿವಲಿಂಗವಾದ, ಶಿವಲಿಂಗಂಗ ನಿರಹಂಕಾರ ಲೇಪಗ್ರಾಹಕ ಪ್ರಸಾದಿ ಜಂಗಮಲಿಂಗವಾದ, ಜಂಗಮಲಿಂಗಾಂಗ ಸುಮನಲೇಪಗ್ರಾಹಕ ಪ್ರಾಣಲಿಂಗಿ ಪ್ರಸಾದಲಿಂಗವಾದ, ಪ್ರಸಾದಲಿಂಗಾಂಗ ಸುಜ್ಞಾನಲೇಪಗ್ರಾಹಕ ಶರಣ ಮಹಾಲಿಂಗವಾದ, ಮಹಾಲಿಂಗಾಂಗ ಸದ್ಭಾವಲೇಪಗ್ರಾಹಕ ಐಕ್ಯ ಅಭೇದಾನಂದ ಪರಿಪೂರ್ಣಮಯವಾದ. ‘ನಿಸ್ಯಬ್ದಂ ಬ್ರಹ್ಮ ಉಚ್ಯತೇ’ ಎಂಬ ಶ್ರುತಿಯ ಮೀರಿ ನಿಂದ ಅಖಂಡ ಮಹಿಮಂಗೆ, ಸುನದಯುಕ್ತಂಗೆ ಶಬ್ದ ನಷ್ಟವಾದಲ್ಲಿ, ಆಚಾರಲಿಂಗವಿಲ್ಲ ಭಕ್ತಂಗೆ, ಗುರುಲಿಂಗವಿಲ್ಲ ಮಹೇಶ್ವರಂಗೆ, ಶಿವಲಿಂಗವಿಲ್ಲ ಪ್ರಸಾದಿಗೆ, ಚರಲಿಂಗವಿಲ್ಲ ಪ್ರಾಣಲಿಂಗಿಗೆ, ಪ್ರಸಾದಲಿಂಗವಿಲ್ಲ ಶರಣಂಗೆ, ಇತ್ಯಾದಿ ಜಡದೇಹಭಾವವಿಲ್ಲ ಐಕ್ಯಂಗೆ. ಇದು ಕಾರಣ, ಕೂಡಲಚೆನ್ನಸಂಗಯ್ಯಾ, ನಿಮ್ಮ ಷಟ್‌ಸ್ಥಲದ ಪರಿಯಾಯವ ನೀವೆ ಬಲ್ಲಿರಿ. ಉಳಿದ ಅಜ್ಞಾನಿ ಜೀವಿಗಳೆತ್ತ ಬಲ್ಲರು? ||

೧೧

ಏನೆಂಬೆನೇನೆಂಬೆ ಒಂದೆರಡಾದುದ? ಅವಿರಳ ಘನಲಿಂಗೈಕ್ಯವ ಮಹಾದಾನಿ ಕೂಡಲಸಂಗಯ್ಯ ತಾನೆ ಬಲ್ಲ ||

ಶ್ರೀಮದ್‌ಬ್ರಹ್ಮಜ್ಞಾನಿಯಪ್ಪ ಐಕ್ಯನ ಪ್ರಥಮ ಸ್ಥಲ ಸಮಾಪ್ತ ||

೫೭. ಸ್ವಸಿದ್ಧ ಸ್ಥಲ

ಇಂತು ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯಾಂತವಹ ಷಟ್‌ಸ್ಥಲ ಸಂಪನ್ನನಾಗಿ, ಅಹಂಕಾರ, ಚಿತ್ತ, ಬುದ್ಧಿ ಮನ, ಜೀವ, ಜ್ಞಾನವೆಂಬ ಷಡ್ಗುಣಂಗಳಳಿದು, ವಾಙ್ಮನಕ್ಕೆ ಹೊರಗಾದ ಪರಬ್ರಹ್ಮವೇ ತಾನಾದ ಬ್ರಹ್ಮಜ್ಞಾನಿಯಪ್ಪ ಮಹಾಘನಲಿಂಗೈಕ್ಯನ ಸ್ವಸಿದ್ಧ ಸ್ಥಲ ||

ಗ್ರಂಥ |

ಅವ್ಯಕ್ತಂ ಕಾರಣಂ ಪ್ರಾಹುರಾನಂದಂ ಜ್ಯೋತಿರಕ್ಷರಂ
ಅಹಮೇವ ಪರಂ ಬ್ರಹ್ಮ ಮತ್ತೋಹ್ಯನ್ಯಂ ನ ವಿದ್ಯತೇ ||  || ||

ಅಭೇಧಜ್ಞಾನಸರೂಪಂ ತು ಸಾನಂದಮಮಲ ಧ್ರುವಂ |
ಅತರ್ಕ್ಯಮ್ವಯಂ ಪೂರ್ಣ ಬ್ರಹ್ಮೈವಾಸ್ಮಿ ನ ಸಂಶಯ ||  || ||

ಮನಸ್ಥಂ ಮನೋಮಧ್ಯಸ್ಥಂ ಮನೋಂತಸ್ಸ್ಥಂ ಮನೋsತೀತಂ
ಮನಸಾ ಮನ ಆಲೋಕ್ಯ ಸ್ವಯಂ ಸಿದ್ಧಂತಿ ಯೋಗಿನಾಂ ||  || ||

ವಚನ |

ಮುನ್ನ ಎಂತಾಯಿತ್ತು? ಆಗದಡೆಂತಾಯಿತ್ತು? ತನ್ನ ತಾನರಸುತ್ತಿದ್ದಿತು, ತನ್ನ ಬಚ್ಚಿಟ್ಟ ಬಯಕೆಯ ನಿಧಾನವ ಕಂಡು ತಾನೆ ಮಹವೆಂದು ತಿಳಿದುದು ನೋಡಾ! ಗುಹೇಶ್ವರಲಿಂಗವು ತನ್ನುವ ತನ್ನಂತೆ ಮಾಡಿತ್ತು ||

ಕಟ್ಟ ಒಡವೆಯನ ರಸ ಹೋಗಿ ಆ ಕೆಟ್ಟ ಒಡವೆಯ ಕಂಡ ಬಳಿಕ ಆರನೂ ಕೇಳಲಿಲ್ಲ, ಹೇಳಲಿಲ್ಲ, ಅದು ಮುನ್ನಲಿದ್ದ ಹಾಂಗೆ ಆಯಿತ್ತು. ಅಂತು ಶರಣನು ಆ ಪರಿಯಲೆ ತನ್ನ ಸ್ವಯಾನುಭಾವದಿಂದ ತನ್ನ ನಿಜವ ತಾ ಕಂಡು ಸೈವೆರಗಾಗಿರಲು, ಅದನು ಅಜ್ಞಾನಿಗಳು ಬಲ್ಲರೆ ಗುಹೇಶ್ವರಾ ||

ಖಂಡಾಖಂಡ ಯೋಗ ಸಂಪುಟವಿಲ್ಲದ ಅಖಂಡಿತದ ನಿಲವು ತನ್ನಲ್ಲಿಯಲ್ಲದೆ ಮತ್ತೆಲ್ಲಿಯೂ ಇಲ್ಲ. ಬಯಲ ಹಿರಿಯರು ಬಯಲನರಸುವರು. ಅಲ್ಲುಂಟೆ ಹೇಳಾ, ಗುಹೇಶ್ವರಾ? ||

ಖಂಡಾಖಂಡ ಯೋಗ ಸಂಪುಟವಿಲ್ಲದ ಅಖಂಡಿತದ ನಿಲವು ತನ್ನಲ್ಲಿಯಲ್ಲದೆ ಮತ್ತೆಲ್ಲಿಯೂ ಇಲ್ಲ. ಬಯಲ ಹಿರಿಯರು ಬಯಲನರಸುವರು. ಅಲ್ಲುಂಟೆ ಹೇಳಾ, ಗುಹೇಶ್ವರಾ? ||

ತನ್ನುವ ಹುಸಿ ಮಾಡಿ ಇನ್ನೊಂದ ದಿಟ ಮಾಡುವ ಅಣ್ಣಂಗೆ ನಂಬುಗೆ ನಂಬುಗೆಯಿನ್ನಾವದೋ? ತನ್ನೊಳಗಣ ಘನವ ತಾ ತಿಳಿಯಲರಿಯದೆ ಪರಬ್ರಹ್ಮಕ್ಕೆ ತಲೆಯಾರನಿಕ್ಕಿ ಸೆಳೆದಹೆನೆಂಬಣ್ಣ ಗಾಲವಿನೆಂದಾತನಂಬಿಗಚೌಡಯ್ಯ ||

ತನ್ನುವ ಮರೆದು ದೇವರ ಕಂಡೆಹೆನೆಂದೆಂಬರು. ತನ್ನುವ ಮರೆದು ದೇವರ ಕಂಡೆಹೆವೆಂದೆಂಬ ಕಾರಣ, ಹರಿಬ್ರಹ್ಮಾ ಸುರಾದಿಗಳೆಲ್ಲರೂ ತಲೆಕೆಳಗಾಗಿ ಹೋದರು. ಆ ದೇವರ ಮರೆದು ತನ್ನುವನರಿದಡೆ ತಾನೆ ನಿಜವೆಂದನಂಬಿಗಚೌಡಯ್ಯ ||

ಘಟವನೊಡೆದು ಬಯಲ ನೋಡಲದೇಕೆ? ಘಟದೊಳಗಿಪ್ಪುದೆ ಬಯಲೆಂದರಿದಡೆ ಸಾಲದೆ? ಪಟವ ಹರಿದು ತಂತುವ ನೋಡಲದೇಕೆ? ಪಟವೆ ತಂತುವೆಂದರಿದಡೆ ಸಾಲದೆ? ಕಟಕವ ಮುರಿದು ಕಾಂಚನವ ನೋಡಲದೇಕೆ? ಕಟಕವೆ ಕಾಂಚನವೆಂದರಿದಡೆ ಸಾಲದೆ? ತನ್ನನುಳಿದು ಘನವ ನೋಡಲದೇಕೆ? ತಾನೆ ಘನವೆಂದರಿದಡೆ ಸಾಲದೆ? ಹೇಳಾ ರಾಮಾನಾಥ ||

ಗುರುವಿಡಿದ ಅರಿವು ಅರಿವಲ್ಲ, ಲಿಂಗವಿಡಿದ ಅರಿವು ಅರಿವಲ್ಲ, ಇಲ್ಲದ ಗುರು, ಇಲ್ಲದ ಲಿಂಗ, ಕಲ್ಪಿತಕ್ಕೆ ಅರಿವಹುದೆ? ತನ್ನಿಂದ ತಾನರಿವುದೇ ಅರಿವು, ಗುಹೇಶ್ವರಾ ||

ತಾನಿಲ್ಲದ ಮುನ್ನವೆ ಗುರುವೆಲ್ಲಿಯದೋ? ಲಿಂಗವೆಲ್ಲಿಯದೊ ? ಜಂಗಮವೆಲ್ಲಿಯದೊ ಪ್ರಾದೋದಕ ಪ್ರಸಾದವೆಲ್ಲಿಯದೋ? ಪರವೆಲ್ಲಿಯದೊ? ಸ್ವಯವೆಲ್ಲಿಯದೋ? ತನಗೆ ತೋರಿದ ಗುರು, ತನಗೆ ತೋರಿದ ಲಿಂಗ ತನಗೆ ತೋರಿದ ಜಂಗಮ, ತನಗೆ ತೋರಿದ ಪಾದೋದಕ ಪ್ರಸಾದ, ತನಗೆ ತೋರಿದ ಪರ, ತನಗೆ ತೋರಿದ ಸ್ವಯ, ಗುರುವೆಂದರಿದವನು ತಾನೆ, ಲಿಂಗವೆಂದರಿದವನು ತಾನೆ, ಜಂಗಮವೆಂದರಿದವನು ತಾನೆ, ಪಾದೋದಕ ಪ್ರಸಾದವೆಂದರಿದವನು ತಾನೆ, ಪರವೆಂದರಿದವನು ತಾನೆ, ಸ್ವಯವೆಂದರಿದವನು ತಾನೆ, ಇಂತಿವೆಲ್ಲವ ಹೊತ್ತರಿವು ತಾನೆ ಸ್ವಯಂ ಜ್ಯೋತಿ ಮಹಾಲಿಂಗ ಕಲ್ಲೇಶ್ವರಾ ||

ಅರಿವನರಿದೆಹೆನೆಂಬುದು ಮರವೆ, ಮರವ ಮರೆದೆಹೆನೆಂಬುದು ಮರವೆ, ಸಾಕಾರ ನಿಷ್ಠೆ, ನಿರಾಕಾರ ದೃಷ್ಟವೆಂಬುದು ಭಾವದ ಬಳಲಿಕೆ, ಗುರುವೆಂಬುದು ಶಿಷ್ಯನೆಂಬಲ್ಲಿ ಹೋಯಿತ್ತು ಶಿಷ್ಯನೆಂಬುದು ಗುರುವೆಂಬಲ್ಲಿಯೆ ಹೋಯಿತ್ತು, ನಿರ್ಣಯದಲ್ಲಿ ನಿಜೈಕ್ಯನಾದೆಹೆನೆಂದಡೆ ಎಚ್ಚರಿಕೆಯಲ್ಲಿ ತಪ್ಪಿತ್ತು, ಸಹಜ ಸಂಬಂಧಕ್ಕೆ ಗುರುವಲ್ಲದೆ ಸಹಜಕ್ಕೆ ಗುರುವುಂಟೇ? ಗುಹೇಶ್ವರಲಿಂಗದಲ್ಲಿ ಪರವೆಂಬಲ್ಲಿ ಗುರುವುಂಟಲ್ಲದೆ ಸ್ವಯವೆಂಬಲ್ಲಿ ನುಡಿಯಲಿಲ್ಲ ||

೧೦

ಮುಟ್ಟದ ಮುನ್ನ ಗುರುವುಂಟು; ಮುಟ್ಟದ ಮುನ್ನ ಲಿಂಗವುಂಟು; ಮುಟ್ಟದ ಮುನ್ನ ಜಂಗಮವುಂಟು : ಪಾದೋದಕ ಪ್ರಸಾದವುಂಟು, ಮುಟ್ಟಿದ ಬಳಿಕ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕ ಪ್ರಸಾದವಿಲ್ಲ, ಇದು ಕಾರಣ, ಕೂಡಲಚನ್ನಸಂಗಯ್ಯಾ, ಸ್ವಯವಲ್ಲದೆ ಪರವಿಲ್ಲ ||

೧೧

ಮುಟ್ಟದ ಮುನ್ನ ನರರು, ಸುರರು, ಕಿನ್ನರರು ಮೊದಲಾದವರೆಲ್ಲರೂ ಪಿಂಡವೆಂಬ ಭಾಂಡದಲ್ಲಿ ಅಡಗಿದರಾಗಿ, ನಾನವರ ರೂಪಿಸಬಲ್ಲೆ. ದೇವಗಣ, ಪ್ರಮಥಗಣ, ರುದ್ರಗಣಂಗಳೆಂಬವರೆಲ್ಲರೂ ಬ್ರಹ್ಮಾಂಡವೆಂಬ ಭಾಂಡದಲ್ಲಿ ಅಡಗಿದರಾಗಿ, ನಾನವರ ಭಾವಿಸಬಲ್ಲೆ, ಸತ್ಯರು, ನಿತ್ಯರು, ಮುಕ್ತರೆಂಬ ಮಹಾಮಹಿಮರೆಲ್ಲರೂ ಚಿದ್ಭಾಂಡವೆಂಬ ಭಾಂಡದಲ್ಲಿ ಅಡಗಿದರಾಗಿ, ನಾನವರನರಿದು ಬಲ್ಲೆ, ಇಂತಿ ತ್ರಿಭಾಂಡವನೊಳಕೊಂಡು ಆ ಅಖಂಡಿತದಿರವೆ ತಾನೆಂದರಿದ ಲಿಂಗೈಕ್ಯನ ರೂಹಿಸಲಿಲ್ಲಾಗಿ, ಭಾವಿಸಲಿಲ್ಲಾಗಿ, ಅರಿಯಲಿಲ್ಲ, ಅರಿವೆ ತಾನೆಂದರಿದ ಬಳಿಕ, ಗುಹೇಶ್ವರನೆಂಬುದು ಬಯಲು ನೋಡಾ ||

೧೨

ಅಂಗ ಮುಖದಲ್ಲಿ ಅಳವಟ್ಟ ಸುಖವ ಲಿಂಗ ಮುಖದಲ್ಲಿ ಲೀಯವಾಗಿ, ಲಿಂಗ ಮುಖದಲ್ಲಿ ಲೀಯವಾದ ಸುಖವ ಮಹಾಲಿಂಗದಲ್ಲಿ ಲೀಯವಾಗಿ, ಮಹಾಲಿಂಗದಲ್ಲಿ ಲೀಯವಾದ ಸುಖವ ಸುಜ್ಞಾನ ಮುಖದಲ್ಲಿ ಲೀಯವಾಗಿ ಸುಜ್ಞಾನ ಮುಖದಲ್ಲಿ ಲೀಯವಾದ ಸುಖವ ಮಹಾಜ್ಞಾನದಲ್ಲಿ ಲೀಯವಾಗಿ, ಮಹಾಜ್ಞಾನದಲ್ಲಿ ಲೀಯವಾದ ಸುಖವ ಸಮಾಧಾನದಲ್ಲಿ ಲೀಯವಾಗಿ ಸಾಮಾಧಾನದಲ್ಲಿ ಲೀಯವಾದ ಸುಖವ ಐಕ್ಯಸ್ಥಲದಲ್ಲಿ ಲೀಯವಾಗಿ, ಐಕ್ಯಸ್ಥಲದಲ್ಲಿ ಲೀಯವಾದ ಸುಖವ ನಿರಾಕಾರದಲ್ಲಿ ಲೀಯವಾಗಿ, ನಿರಾಕಾರದಲ್ಲಿ ಲೀಯವಾದ ಸುಖವ ನಿಶ್ಯಬ್ಧದಲ್ಲಿ ಲೀಯವಾಗಿ, ನಿಶ್ಯಬ್ದದಲ್ಲಿ ಲೀಯವಾದ ಸುಖವ ನಿರಂಜನದಲ್ಲಿ ಲೀಯವಾಗಿ, ನಿರಂಜನದಲ್ಲಿ ಲೀಯವಾದ ಸುಖವ ಪರಬ್ರಹ್ಮದಲ್ಲಿ ಲೀಯವಾಗಿ, ಪರಬ್ರಹ್ಮದಲ್ಲಿ ಲೀಯವಾದ ಸುಖವ ಅಹಂಬ್ರಹ್ಮದಲ್ಲಿ ಲೀಯವ ಮಾಡಿದರು. ನಮ್ಮ ಶುದ್ಧ ಸಿದ್ಧ ಪ್ರಸಿದ್ಧ ಪ್ರಭುವೆ, ಶಾಂತಚೆನ್ನಮಲ್ಲಿಕಾರ್ಜುನದೇವಯ್ಯ, ನಿಮ್ಮಲ್ಲಿ ಜನನ ಮರಣ ವಿರಹಿತ ನಿಜತತ್ವ ನಿಃಸ್ಪೃಹ ನಿಃಕಳಂಕ ಮಹಾಶರಣಂಗಲ್ಲದೆ ಉಳಿದ ಭೂಲೋಕದ ಭೂಭಾರಿ ಜೀವಿಗಳಿಗಳವಡುವುದೆ? ಮಹಾಲಿಂಗೈಕ್ಯರ ನಿಲವುಗಳ ನೀವೆ ಬಲ್ಲಿರಿ, ನಾನೆತ್ತ ಬಲ್ಲೆನಯ್ಯಾ? ನಿಮ್ಮ ಧರ್ಮ, ನಿಮ್ಮ ಧರ್ಮ, ನಿಮ್ಮ ಧರ್ಮ ||

ಇಂತು ಸ್ವಸಿದ್ಧ ಸ್ಥಲ ಸಮಾಪ್ತ ||

೫೮. ಭಿನ್ನಜ್ಞಾನ ನಿರಸನ ಸ್ಥಲ

ಇಂತು ಸ್ವಸಿದ್ಧಸ್ಥಲ ಸಂಪನನ್ನಾಗಿ ಅರುಹಿಸಿಕೊಂಬ ಮಹಾಘನವೆ ಅರಿವಾತನಾಗಿ ಅರಿವ, ಅರುಹಿಸಿಕೊಂಬ ಎರಡಿಲ್ಲದೆ ನಿಂದು ಅಭಿನ್ನಜ್ಞಾನಿ ತಾನಾದ ಬ್ರಹ್ಮಜ್ಞಾನಿಯಪ್ಪ ಮಹಾಘನ ಲಿಂಗೈಕ್ಯನ ಭಿನ್ನಜ್ಞಾನ ನಿರಸನಸ್ಥಲ ||

ಗ್ರಂಥ |

ಉಲ್ಕಾಹಸ್ತೋ ಯಥಾ ಕಾಷ್ಠಂ ದ್ರವ್ಯಮಾಲೋಕ್ಯ ಸಂತ್ಯಜೇತ್‌
ಜ್ಞಾನೇನ ಜ್ಞೇಯಮಾಲೋಕ್ಯ ಪಶ್ಚಾತ್‌ಜ್ಞಾನಂ ಪರಿತ್ಯಜೇತ್‌ ||  || ||

ಜ್ಞಾನೇನ ಜ್ಞೇಯಮಾಲೋಕ್ಯ ಜ್ಞಾನಮೇವ ಪರಿತ್ಯಜೇತ್‌
ಜ್ಞಾನಾನ್ನಾನ್ಯಮಿತಿ ಪ್ರೋಕ್ತಂ ನಿರಾಲಂಬಂ ನಿರಾಮಯಂ ||  || ||

ಜ್ಞಾನೇನ ಜ್ಞೇಯಮಾಲೋಕ್ಯ ಜ್ಞಾನಂ ತತ್ರ ವಿಲೀಯತೇ
ಲಕ್ಷ್ಯ ಲಕ್ಷಣಯೋರೈಕ್ಯಂ ಜ್ಞಾನಶೂನ್ಯಮಿತೀರೀತಂ ||  || ||

ವಚನ |

ಅರಿದೆನರಿದೆನೆಂದಡೆ, ಅದೇಕೋ ಮುಂದೆ ಮರವೆ? ಅರಿದೆನೆಂಬುದು ನಿನ್ನಲ್ಲಿ ಲೇಸಾಗಿ ಉಳ್ಳಡೆ, ನಿನ್ನರಿವೆಲ್ಲ ಹರಿಹಂಚಾಗಿ ಹೋದುದನರಿಯಾ ಮರುಳೇ? ಸ್ವತಂತ್ರ ಘನದೊಳಗಿರ್ದು ನಿಜವನರಿದೆಹೆನೆಂದಡೆ, ಮೂರ್ತಿ ಕಿರಿದಲ್ಲ, ನಿಲ್ಲು, ಮಾಣು! ಗುಹೇಶ್ವರನೆಂಬ ಘನಘಟ್ಟಿಯನರೆಯಬಲ್ಲಡೆ ನಿನ್ನರಿವೆಲ್ಲ ಬಚ್ಚಬರಿಯ ಬಲಯೆಂದರಿಯಾ ನೀನೂ ನಿರ್ಭಾವಿಯಪ್ಪಡೆ ||

ಅರಿವುವಿಡಿದು ಅರುವನರಿದು ಅರಿವೆ ನೀವೆಂಬ ಭ್ರಾಂತು ಎನಗಿಲ್ಲವಯ್ಯಾ, ಅರಿವು ವಿಡಿದು ಮರಹ ಮರೆದು ಮರೆದೆನೆಂಬ ಮರಹಿನವ ನಾನಲ್ಲವಯ್ಯಾ, ದೇಹ ಪ್ರಾಣಂಗಳ ಹಿಂಗಿ, ದೇಹವಿಡಿದು ದೇಹ ನಿಮ್ಮದೆಂಬ ಭ್ರಾಂತುಸೂತಕವೆನಗಿಲ್ಲಯ್ಯಾ, ನಿಮ್ಮನರಿದರಿವ ಭಿನ್ನವಿಟ್ಟು ಕಂಡೆನಾದಡೆ ನಿಮ್ಮಾಣೆ ಕಾಣಾ, ಕೂಡಲಸಂಗಮದೇವಾ ||

ಅರಿದೆವರಿದೆವೆಂದೆಂಬಿರಿ, ಅರಿದ ಪರಿಯೆಂತು ಹೇಳಿರೇ! ಅರಿದೆವರಿದೆವೆಂಬರೇ? ಅರಿಯಬಾರದ ಘನವನರಿದವರು ಅರಿಯದಂತಿಪ್ಪರು ಗುಹೇಶ್ವರಾ ||

ಅರಿದೆನೆಂದಡೆ ಅರಿಯಬಾರದು ನೋಡಾ! ಘನಕ್ಕೆ ಘನ ತಾನೆ ನೋಡಾ! ಚನ್ನಮಲ್ಲಿಕಾರ್ಜುನ ನಿರ್ಣಯವಿಲ್ಲದೆ ಸೋತೆನು ||

ಅಟ್ಟಿ ಮುಟ್ಟಿತು ಮನ ದೃಷ್ಟಿ ಲಿಂಗದ ಮೇಲೆ ತನ್ನ ತಾನರಿದಾತ ತಾನೆ ಮರೆದ ಗುಹೇಶ್ವರ ಅಲ್ಲಯ್ಯ ನಿಶ್ಯಬ್ದಲಿಂಗದಲ್ಲಿ ||

ಮಾಡಿ ಮಾಟವ ಮರೆದು, ಕೂಡಿ ಕೂಟವ ಮರೆದು ಬಯಲ ಸಮರಸಕ್ಕೆ ಮರುಳಾಯಿತ್ತಲ್ಲಾ! ಅನ್ಯ ಚಿಹ್ನವಳಿದು ತನ್ನ ತಾ ಮರೆಯಿತ್ತು ಕೂಡಲಚನ್ನಸಂಗನೆಂದೆನಿಸಿತ್ತು ||

ಅರಿದು ಮರೆಯಿತ್ತು, ಒಂದು ಬೆರಗು ಹತ್ತಿತ್ತು ಏನೆಂದರಿಯದು, ಅದೆಂತೆಂದರಿಯರು ಗುಹೇಶ್ವರನೆನುತ ಅದಲ್ಲಿಯೆ ನಿಂದಿತ್ತು ||

ಸೊಪ್ಪಡಗಿದ ಸುಮ್ಮಾನಿಗಳವರಲ್ಲಿ ಗತಿಯನರಸುವರೇ? ಅವರಲ್ಲಿ ಮತಿಯ ನರಸುವರೇ? ಘನ ಸಮನಿಸಿ ಮನ ವೇದಿಸಿದವರಲ್ಲಿ ಗತಿಯನರಸುವರೇ? ಅವರಲ್ಲಿ ಮತಿಯ ನರಸುವವರೇ? ಗುಹೇಶ್ವರನೆಂಬ ನಿಜ ನಿಂದವರಲ್ಲಿ ||

ಇಂತು ಭಿನ್ನಜ್ಞಾನ ನಿರಸನಸ್ಥಲ ಸಮಾಪ್ತ ||

೫೯. ಭಿನ್ನಶಿವಯೋಗ ನಿರಸನ ಸ್ಥಲ

ಇಂತು ಭಿನ್ನಜ್ಞಾನ ನಿರಸನವ ಮಾಡಿ ಕೂಡಲಿಲ್ಲದ ಅಗಲಲಿಲ್ಲದ ಅಖಂಡ ನಿರಾಳದಲ್ಲಿ ಅಭಿನ್ನ ಶಿವಯೋಗಿ ತಾನಾದ ಬ್ರಹ್ಮಜ್ಞಾನಿಯಪ್ಪ ಮಹಾಘನಲಿಂಗೈಕ್ಯನ ಭಿನ್ನಶಿವಯೋಗ ನಿರಸನಸ್ಥಲ ||

ವೃತ್ತ |

ಗಂತುಮದೂರಂ ತತ್ಪುನುರಾಗಂ ತತ್ವಮಸಮೀಪಂ
ಸ್ಪಷ್ಟಮಭಿನ್ನ ಜ್ಞಾನನಾಂ ತು ಚಿದ್ಬನಾನಂದ ಮಿತಿವಿದ್ಧಿ ಗುರುಪದ ಪರಿಪೂರ್ಣ || ||

ಗ್ರಂಥ |

ಯದಿ ಸಂಚಲಶೀಲತ್ವಂ ಯತ್ರಕುತ್ರಾಪಿ ತೇ ಮನಃ
ವಿಶ್ವವ್ಯಾಪಿ ಮಹಾದೇವ ವೃಕ್ಷೇ ವಿರಮ ಸಂತತಂ ||  || ||

ವಚನ

ಹಿಂದೆ ಕೆಟ್ಟುದ ಮುಂದೆ ನೀನರಸುವೆ, ಹಿಂದಕ್ಕೆ ನೀನಾರು ಹೇಳಲೆ ಮರುಳೇ? ತಾ ಕೆಟ್ಟು, ತನ್ನನರಸುವಡೆ, ತಾನಿಲ್ಲ, ತಾನಲ್ಲ, ತಾನು ತಾನಾರೋ? ಮುಂದಕ್ಕೆ ಮೊದಲಿಲ್ಲ, ಹಿಂದಕ್ಕೆ ಲಯವಿಲ್ಲ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು, ಮಾಣು ||

ಈಶ್ವರನ ಕಾಂಬುದೊಂದಾಸೆಯುಳ್ಳಡೆ ಪರದೇಶಕ್ಕೆ ಹೋಗಿ ಬಳಲಲೇಕೆ? ಕಾಶಿಯಲ್ಲಿ ಕಾಯವ ನಾಶವ ಮಾಡಬೇಡ, ಕಂಡಾ! ಸರ್ವೇಶ್ವರ ಮುಳ್ಳುಗುತ್ತ ತೆರಹಿಲ್ಲ! ಬೇರೊಂದ ಗೂಡ ಸಾರಿಯಿದ್ದಾತನೆ? ಎಂದನಂಬಿಗಚೌಡಯ್ಯ ||

ಆರ ಪರಿಯಲ್ಲ ಎಮ್ಮ ನಲ್ಲ! ವಿಶ್ವವೆಲ್ಲ ಸತಿಯರು, ಸೋಜಿಗದ ಪುರುಷನು! ಅವರವರ ಪರಿಯಲ್ಲಿ ಅವರವರ ನೆರೆವನು, ಅವರವರಿಗೆ ಅವರಂತೆ ಸುಖಮಯನು, ಕೇಳಾ ಕೆಳದಿ, ಅವರ ಪರಿಯಲ್ಲ ಎನ್ನನಗಲದ ಪರಿ, ಕೇಳಾ ಕೆಳದಿ, ನೀನೊಳ್ಳಿದಳಾದಡೆ ಮಹಾಮಂತ್ರವ ಜಪಿಸು ನಿನ್ನನಗಲ! ನಿನ್ನಾಣೆ! ಉರಿಲಿಂಗದೇವ, ತನ್ನಾಣೆ ಕೆಳದಿ ||

ಕೂಡಲಿಲ್ಲದ ಅಗಲಲಿಲ್ಲದ ಘನವ ಕೂಡುವ ಪರಿಯೆಂತವ್ವಾ? ಹೇಳಿದಡೆ ಅದಕ್ಕೆ ಅದೇ ಕೊರತೆ, ಗುಹೇಶ್ವರಲಿಂಗವ ಬೇರೆ ಮಾಡಿ, ಬೆರಸಬಾರದು ಕೇಳಾ ||

ನಿಚ್ಚ ನಿಚ್ಚ ಮುಟ್ಟಿ ನಿಚ್ಚ ನಿಚ್ಚ ಅಗಲುವದ ಕಂಡು ನಾಚಿತ್ತಯ್ಯಾ ಎನ್ನ ಮನ, ನಾಚಿತ್ತು, ಸಂದಿಲ್ಲದಲ್ಲಿ ಸಂದ ಮಾಡಿದರು ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ, ಸಂಸಾರ ಸಂಬಂಧಿಗಳು ||

ಕಂಡೆನೆಂಬುದು ಕಂಗಳ ಮರವೆ, ಕಾಣೆನೆಂಬುದು ಮನದ ಮರವೆ, ಕೂಡಿದೆನೆಂಬುದು ಅರಿವಿನ ಮರವೆ, ಅಗಲಿದೆನೆಂಬುದು ಮರಹಿನ ಮರವೆ, ಇಂತು ಕೂಡಿದೆನಗಲಿದೆನೆಂಬ ಭ್ರಾಂತು ಸೂತಕವಳಿದು ನೋಡಲು, ಗುಹೇಶ್ವರಲಿಂಗವನಗಲಲಡೆಯಿಲ್ಲ ಕೇಳಾ, ಕೆಳದಿ ||

ಅಗಲದ ನಲ್ಲನನಗಲಿ ನೆರೆದಿಹೆನೆಂಬ ಕಾಮಿನಿಯ ಭಂಗವ ನೋಡವ್ವಾ! ಆ ನಮ್ಮ ನಲ್ಲನ ಅನುವಿನಲ್ಲಿದ್ದು ನೆರೆದಿಹೆನೆಂಬ ಭರವೆನಗೇಕೆ? ಮಹಾಲಿಂಗ ಗಜೇಶ್ವರ ದೇವನ ಗಲುವಡೆ ತಾನೇನು ಕಲುಮನದವಳೆ ಅವ್ವಾ? ||

ನಲ್ಲನನೊಲ್ಲೆನೆಂದು ಮುನಿದು ನಾನಡಗಲು, ಅಡಗುವ ಠಾವೆಲ್ಲ ತಾನೆ ನೋಡೆಲಗವ್ವಾ! ನಲ್ಲನಿಲ್ಲದೆಡೆಯಿಲ್ಲ; ಅಡಗಲಿಕಿಂಬಿಲ್ಲ; ಮುನಿದು ನಾನೇಗುವೆ? ಶರಣು ಗತಿವೊಗುವೆನೆನ್ನ ಉರಿಲಿಂಗದೇವಂಗೆ ||

ಎಮ್ಮ ನಲ್ಲ ಎಮ್ಮ ನೊಲ್ಲದಿದ್ದಡೆ ಇನ್ನೆಲ್ಲಿ ಅರುಹೋಹೆನವ್ವಾ! ಗಂಗೆಯ ನೋನೆ, ಗೌರಿಯ ನೋನೆ ಅಂತರಂಗದ ಆತ್ಮಜ್ಯೋತಿ ಉರಿಲಿಂಗದೇವನಲ್ಲಿಯೆ ಅರಿತು ಹೋ ಹೆನವ್ವಾ ||

ಇಂತು ಭಿನ್ನಶಿವಯೋಗ ನಿರಸನ ಸ್ಥಲ ಸಮಾಪ್ತ ||