ಉಪದೇಶ ಕ್ರಮ

೧. ಮಹಾಶೂನ್ಯಸ್ಥಲ

ಸಚ್ಚಿದಾನಂದ ರೂಪಾತ್ಮನ್‌ನಿರ್ವಿಕಲ್ಪ ನಿರಂಜನ
ಪ್ರತ್ಯಕ್ಷ ಜಗದಾಧಾರ ಚಂದ್ರಶೇಖರ ಪಾಹಿಮಾಂ || ೧ ||

ಕಂದ ||
ಶ್ರೀಮದಖಂಡಬ್ರಹ್ಮವೆ
ಸೀಮಾ ನಿಸ್ಸೀಮೆಯಿಲ್ಲದಿಹ ಪರಿಪೂರ್ಣ
ನಾಮಾನಾಮವನೆಯ್ದದ
ನಾಮಯ ಸಲಹೆನ್ನ ಪರಮಗುರು ಶಾಂತೇಶ ||  || ೧ ||

ವೇದಾಗಮ ಪೌರಾಣದೊ
ಳಾದ್ಯರ ವಚನದೊಳಗಾದಿ ಮಧ್ಯಾಂತಗಳಾ
ಭೇದಂ ಮೂರಹ ತೆರನಿದ
ಸಾಧನವಂ ಮಾಳ್ಪೆ ಭಕ್ತಜನಕತಿ ಹಿತದಿಂ ||  || ೨ ||

ಶ್ರುತಿ ಶಾಸ್ತ್ರಗಮ ವಚನದೊ
ಳತಿಶಯ ವಾಕ್ಯವನು ತೆಗೆದು ಬ್ರಹ್ಮಾದ್ವೈತವ
ಮತಿಯ ಚಮತ್ಕೃತಿಗರಿದೆನ
ಲತಿ ವಿಸ್ತರಮಾಳ್ಪೆ ಶರಣಜನಸಂತತಿಗಂ ||  || ೩ ||

ಬ್ರಹ್ಮ ದೊಳೊಗೆದಿಹ ನಾದವೆ
ಬ್ರಹ್ಮವಲಾ! ಎಂದು ತಮ್ಮ ತಾವರಿವರ್ಗೆ
ಬ್ರಹ್ಮ ಪದಮುಕುರಮಪ್ಪಾ
ಬ್ರಹ್ಮಾದ್ವೈತವನು ಸೇರಿಸುವೆ ನಲವಿಂದಂ ||  || ೪ ||

ಬ್ರಹ್ಮಾದ್ವೈತವನರಿದಾ
ಬ್ರಹ್ಮಾದ್ವೈತಿಗಳ ಪೇಳ್ದ ವಚನಾರ್ಥಗಳಿಂ
ಬ್ರಹ್ಮಮಯಮಪ್ಪ ಷಟ್‌ಸ್ಥಲ
ಬ್ರಹ್ಮಿಗಳೊಲೆವಂತೆ ಸೇರಿಸುವೆ ಮುದದಿಂದಂ ||  || ೫ ||

ಸಿದ್ಧಾಂತದಿಂದಲಲ್ಲದೆ
ಶುದ್ಧ ಶಿವೈಕ್ಯವನು ಪಡೆಯವರೆಂಬುದನರಿದಾ
ಶೃದ್ದಾದಿಸಮರಸಾಂತ್ಯದೊ
ಳುದ್ದರಿಸುವೆನೊಲ್ದು ಷಟ್‌ಸ್ಥಲಾಭರಣಮಿದಂ ||  || ೬ ||

ಬಸವೇಶ ಸಿದ್ಧರಾಮನು
ದಸರಯ್ಯನು ಚನ್ನಬಸವ ಮಡಿವಳ ಮೊದಲಾ
ದಸಮಾನಾಲ್ಲಮಶರಣರ
ದೆಸೆಯಿಂ ಸೇರಿಸಿದೆ ಷಟ್‌ಸ್ಥಲಾಭರಣಮಿದಂ ||  || ೭ ||

ಅಲ್ಲಮನಜಗಣ್ಣನು ಮಿಗೆ
ಬಲ್ಲಿದ ಬಸವೇಶ ಚನ್ನಬಸವಾದ್ಯಖಿಲರ್
ಸೊಲ್ಲಿದ ವಚನಾಮೃತದೊಳ
ಗಲ್ಲಲ್ಲಿಗೆ ತೆಗೆದು ಸೇರಿಸಿದೆ ಸಂಗ್ರಹಮಂ ||  || ೮ ||

ಈ ಬ್ರಹ್ಮಾದ್ವೈತ ಸಿದ್ಧಾಂತ ಷಟ್‌ಸ್ಥಲಾಭರಣದ ಸ್ಥಲಪರ್ಯಾಯವೆಂತೆಂದಡೆ, ಪ್ರಥಮದಲ್ಲಿ ಅನಿರ್ವಾಚ್ಯವಪ್ಪ ಮಹಾಶೂನ್ಯಸ್ಥಲ, ಎರಡನೆಯಲ್ಲಿ ಸ್ವಯಂಭು ಲಿಂಗಸ್ಥಲ, ಮೂರನೆಯಲ್ಲಿ ಉಮಾಪತಿ ಸ್ವಯಂಭು ಲಿಂಗಸ್ಥಲ, ನಾಲ್ಕನೆಯಲ್ಲಿ ವಿಶ್ವೋತ್ಪತ್ತಿಸ್ಥಲ, ಐದನೆಯಲ್ಲಿ ದೇವದೇಹಿಗಳುದಯಸ್ಥಲ, ಆರನೆಯಲ್ಲಿ ಸಂಸಾರಸ್ಥಲ, ಏಳನೆಯಲ್ಲಿ ಸಂಸಾರಯಾತನಸ್ಥಲ, ಎಂಟನೆಯಲ್ಲಿ ದೇಹಮೊದನಿರಸನಸ್ಥಲ, ಒಂಭತ್ತನೆಯಲ್ಲಿ ಮಾಯಾವಿಲಾಸ – ನಿರಸನಸ್ಥಲ, ಹತ್ತನೆಯಲ್ಲಿ ಆಶಾಮಾಯಿಕ ನಿರಸನಸ್ಥಲ, ಹನ್ನೊಂದನೆಯಲ್ಲಿ ಪಾಶತ್ರಯನಿರಸನಸ್ಥಲ, ಹನ್ನೆರಡನೆಯಲ್ಲಿ ಅಜ್ಞಾನ – ನಿದ್ರಾ – ನಿರಸನ ಸ್ಥಲ, ಹದಿಮೂರನೆಯಲ್ಲಿ ಮನೋವಿಕಾರನಿರಸನಸ್ಥಲ, ಹದಿನಾಲ್ಕನೆಯಲ್ಲಿ ಜ್ಞಾನ ಪ್ರಕಾಶಸ್ಥಲ, ಹದಿನೈದನೆಯಲ್ಲಿ ಎಕೋ – ದೇವ – ಪ್ರತಿಷ್ಠೆ – ಸಮಸ್ತದೇವತಾ ನಿರಸನಸ್ಥಲ, ಹದಿನಾರನೆಯಲ್ಲಿ ಸಮಸ್ತದೇವತಾಜನಕಸ್ಥಲ, ಹದಿನೇಳನೆಯಲ್ಲಿ ಗುರುಕಾರುಣ್ಯಾಹ್ವಾನ ಶಿವಚಿಂತನಸ್ಥಲ, ಹದಿನೆಂಟನೆಯಲ್ಲಿ ಗುರುಕೃಪಾಪ್ರಸನ್ನಸ್ಥಲ, ಹತ್ತೊಂಭತ್ತನೆಯಲ್ಲಿ ತಾಮಸದೀಕ್ಷಾನಿರಸನಸ್ಥಲ, ಇಪ್ಪತ್ತನೆಯಲ್ಲಿ ಸ್ಥಾವರಲಿಂಗನಿರಸನಸ್ಥಲ, ಇಪ್ಪತ್ತೊಂದನೆಯಲ್ಲಿ ಗುರುಕರುಣ ಲಿಂಗಾನುಗ್ರಹಸ್ಥಲ, ಇಪ್ಪತೆರಡನೆಯಲ್ಲಿ ಶ್ರೀ ವಿಭೂತಿ ಧಾರಣಸ್ಥಲ, ಇಪ್ಪತ್ತು ಮೂರನೆಯಲ್ಲಿ ಶ್ರೀ ರುದ್ರಾಕ್ಷ ಧಾರಣಸ್ಥಲ, ಇಪ್ಪತ್ತು ನಾಲ್ಕನೆಯಲ್ಲಿ ಶ್ರೀ ಪಂಚಾಕ್ಷರೀ ಜಪಸ್ಥಲ, ಇಪ್ಪತ್ತೈದನೆಯಲ್ಲಿ ಜ್ಞಾನಕ್ರಿಯಾವಿಶ್ವಾಸಸ್ಥಲ, ಇಪ್ಪತ್ತಾರನೆಯಲ್ಲಿ ಭಕ್ತಸ್ಥಲ, ಇಪ್ಪತ್ತೇಳನೆಯಲ್ಲಿ ಭಕ್ತನ ಅಚಾರಲಿಂಗಮಹಾತ್ಮ್ಯಸ್ಥಲ, ಇಪ್ಪತ್ತೆಂಟನೆಯಲ್ಲಿ ಭಕ್ತನ ಆಚಾರಲಿಂಗಾರ್ಚನಸ್ಥಲ, ಇಪ್ಪತ್ತೊಂಭತ್ತನೆಯಲ್ಲಿ ಭಕ್ತನ ಆಚಾರಲಿಂಗಾರ್ಪಣಸ್ಥಲ, ಮೂವತ್ತನೆಯಲ್ಲಿ ಭಕ್ತನ ಜಂಗಮ – ನಿಂದಾ – ನಿರಸನ – ವಿಶ್ವಾಸಸ್ಥಲ, ಮೂವತ್ತೊಂದನೆಯಲ್ಲಿ ಭಕ್ತನ ಜಂಗಮ ಪಾದೋದಕ ಪ್ರಸಾದವಿಶ್ವಾಸಸ್ಥಲ, ಮೂವತ್ತರಡನೆಯಲ್ಲಿ ಮಾಹೇಶ್ವರ ಸ್ಥಲ, ಮೂವತ್ತ ಮೂರನೆಯಲ್ಲಿ ಮಾಹೇಶ್ವರನ ಶ್ರುತ – ಭ್ರಾಂತಿ – ನಿರಸನಸ್ಥಲ, ಮೂವತ್ತನಾಲ್ಕನೆಯಲ್ಲಿ ಮಾಹೇಶ್ವರನ ಸ್ಥಿತಿ – ಭ್ರಾಂತಿ ನಿರಸನಸ್ಥಲ, ಮೂವತ್ತೈದನೆಯಲ್ಲಿ ಮಾಹೇಶ್ವರನ ಪ್ರಪಂಚಭಕ್ತ ನಿರಸನಸ್ಥಲ, ಮೂವತ್ತಾರನೆಯಲ್ಲಿ ಮಾಹೇಶ್ವರ ಕಾಮ್ಯಭ್ರಾಂತಿನಿರಸನಸ್ಥಲ, ಮೂವತ್ತೇಳನೆಯಲ್ಲಿ ಮಾಹೇಶ್ವರನ ಕಾಮ್ಯಭ್ರಾಂತಿ ನಿರಸನಸ್ಥಲ, ಮೂವತ್ತೇಳನೆಯಲ್ಲಿ ಮಾಹೇಶ್ವರನ ಶಿವಲೋಕಭ್ರಾಂತಿ ನಿರಸನಸ್ಥಲ, ಮೂವತ್ತೆಂಟನೆಯಲ್ಲಿ ಪ್ರಸಾದಿಸ್ಥಲ, ಮೂವತ್ತೊಂಭತ್ತನೆಯಲ್ಲಿ ಪ್ರಸಾದಿಯ ಅಚ್ಚಪ್ರಸಾದಸ್ಥಲ, ನಾಲ್ವತ್ತನೆಯಲ್ಲಿ ಪ್ರಸಾದಿಯ ಸಾವಧಾನ ಲಿಂಗಾರ್ಪಣ ಪ್ರಸಾದಸ್ಥಲ, ನಾಲ್ವತ್ತೊಂದನೆಯಲ್ಲಿ ಪ್ರಸಾದಿಯ ಸ್ವಾತ್ಮಭೋಗಲಿಂಗಾರ್ಪಣ ಪ್ರಸಾದಸ್ಥಲ, ನಾಲ್ವತ್ತೆರಡನೆಯಲ್ಲಿ ಪ್ರಸಾದಿಯ ನಿರ್ದೇಹಲಿಂಗಾರ್ಪಣ ಪ್ರಸಾದಸ್ಥಲ, ನಾಲ್ವತ್ತಮೂರನೆಯಲ್ಲಿ ಪ್ರಸಾದಿಯ ಅರ್ಪಿತನರ್ಪಿತ ನಾಸ್ತಿಯಾದ ಅಭಿನ್ನಲಿಂಗ ಪ್ರಸಾದಸ್ಥಲ, ನಾಲ್ವತ್ತನಾಲ್ಕನೆಯಲ್ಲಿ ಪ್ರಾಣಲಿಂಗಿ ಸ್ಥಲ, ನಾಲ್ವತ್ತೈದನೆಯಲ್ಲಿ ಪ್ರಾಣ ಲಿಂಗಿಯ ಬಾಹ್ಯಕ್ರಿಯಾನಿರಸನಸ್ಥಲ, ನಾಲ್ವತ್ತಾರನೆಯಲ್ಲಿ ಪ್ರಾಣಲಿಂಗಿಯ ಇಷ್ಟಲಿಂಗ ಭ್ರಾಂತಿ – ನಿರಸನಸ್ಥಲ, ನಾಲ್ವತ್ತೇಳನೆಯಲ್ಲಿ ಪ್ರಾಣಲಿಂಗಿಯ ಇಷ್ಟಲಿಂಗವಿಯೋಗ – ಭ್ರಾಂತಿ – ನಿರಸನಸ್ಥಲ, ನಾಲ್ವತ್ತೆಂಟನೆಯಲ್ಲಿ ಪ್ರಾಣಲಿಂಗಿಯ ಬಾಹ್ಯಾಭ್ಯಂತರಲಿಂಗಸ್ಥಲ, ನಾಲ್ವತ್ತೊಂಭತ್ತನೆಯಲ್ಲಿ ಪ್ರಾಣಲಿಂಗಿಯ ಮನೋಭ್ರಾಂತಿ ನಿರಸನಸ್ಥಲ, ಐವತ್ತನೆಯಲ್ಲಿ ಶರಣಸ್ಥಲ, ಐವತ್ತೊಂದನೆಯಲ್ಲಿ ಶರಣನ ಆಶಾಲಾಂಛನ – ನಿರಸನಸ್ಥಲ, ಐವತ್ತೆರಡನೆಯಲ್ಲಿ ಶರಣನ ಮಾಯಾಭ್ರಾಂತಿ ನಿರಸನಸ್ಥಲ, ಐವತ್ತಮೂರನೆಯಲ್ಲಿ ಶರಣನ ನಿಸ್ಸಂಗ ಚಾರಿತ್ರಸ್ಥಲ, ಐವತ್ತನಾಲ್ಕನೆಯಲ್ಲಿ ಶರಣನ ನಿರ್ಲೇಪಚಾರಿತ್ರಸ್ಥಲ, ಐವತ್ತೈದನೆಯಲ್ಲಿ ಶರಣನ ಬಂಧಮೊಕ್ಷನಿರಸ್ಥಲ, ಐವತ್ತಾರನೆಯಲ್ಲಿ ಐಕ್ಯಸ್ಥಲ, ಐವತ್ತೇಳನೆಯಲ್ಲಿ ಐಕ್ಯನ ಸ್ವ ಸಿದ್ಧಸ್ಥಲ, ಐವತ್ತೆಂಟನೆಯಲ್ಲಿ ಐಕ್ಯನ ಭಿನ್ನಜ್ಞಾನ ನಿರಸನಸ್ಥಲ, ಐವತ್ತೊಂಭತ್ತನೆಯಲ್ಲಿ ಐಕ್ಯನ ಭಿನ್ನಶಿವಯೋಗ ನಿರಸನಸ್ಥಲ, ಅರುವತ್ತನೆಯಲ್ಲಿ ಐಕ್ಯನ ಅನನ್ಯಪರಿಪೂರ್ಣಸ್ಥಲ, ಅರುವತ್ತೊಂದನೆಯಲ್ಲಿ ಐಕ್ಯನ ಜ್ಞಾನಶೂನ್ಯವಪ್ಪ ಸರ್ವಶೂನ್ಯಸ್ಥಲ.

ಇಂತು ಸ್ಥಲ ಅರುವತ್ತೊಂದರಿಂ ಸಂಪೂರ್ಣಮಾಗಿ ವೇದವೇದಾಂತ ಸಿದ್ದಾಂತಾದಿಯಾದ ಸರ್ವಾನುಭಾವ ಬೋಧೆಯನು [ಒಳಗೊಂಡ] ಈ ಬ್ರಹ್ಮಾದ್ವೈತ ಸಿದ್ಧಾಂತ ಷಟ್‌ಸ್ಥಲಾಭರಣ ನಿರೂಪಿಸಲ್ಪಟ್ಟಿತು.

ಈ ಸಂಗ್ರಹ – ಕರ್ತೃವಪ್ಪ ಪರವಸ್ತುಲಿಂಗಲೀಲಾಸ್ವಭಾವವೆಂತೆಂದೆಡೆ

ಗ್ರಂಥ |

ಫಲಪತ್ರಲತಾಪುಷ್ಪಶಾಖಾವಿಟಪ ಮೂಲವಾನ್
ವೃಕ್ಷೋ ಬೀಜೋ ಯಥಾ ಹ್ಯೇತತ್ ಜಗದ್ಬ್ರಹ್ಮಣಿ ಸಂಸ್ಥಿತಂ ||  || ೧ ||

ಅನಾದಿ ಸಿದ್ದಸಂಸ್ಕಾರ ಕರ್ತೃಕರ್ಮವಿವರ್ಜಿತಃ
ಸ್ವಯಮೇವ ಭವೇದ್ದೇಹಿ ಸ್ವಯಂಮೇವವಿಲೀಯತೇ ||  || ೨ ||

ವಚನ |

ಬೀಜ ವೃಕ್ಷದಂತೆ ನೀನಿಪ್ಪೆಯಯ್ಯಾ, ನಿರಾಕಾರವೆ ಮೂರ್ತಿಯಾಗಿ, ಮೂರ್ತಿಯೆ ನಿರಾಕಾರವಾಗಿ | ಇವನೆಲ್ಲವನಳಿದು ಬಯಲಾಗಿಪ್ಪೆ ಎನ್ನ ಕಪಿಲ ಸಿದ್ಧಮಲ್ಲಿಕಾರ್ಜುನ ದೇವರ ದೇವಾ | ಇಂತಪ್ಪ ಪರವಸ್ತುವಿಂಗೆ ನಮಸ್ಕಾರವು ||

ಗ್ರಂಥ |

ಆದಿಮಧ್ಯಾಂತರಹಿತಂ ಸರ್ವತತ್ತ್ವಾಶ್ರಯಂ ವಿಭುಂ
ವ್ಯೋಮಾತೀತಂ ಪರಂ ಸೂಕ್ಷ್ಮಂ ಶಿವಂ ವಂದೇsಹಮವ್ಯಯಂ ||  || ೩ ||

ಇನ್ನು ಈ ಬ್ರಹ್ಮಾದ್ವೈತ ಸಿದ್ಧಾಂತ ಷಟ್‌ಸ್ಥಲಾಭರಣದ ಕುಳಸ್ಥಲ, ಸ್ಥಲ ಕುಳದ ಕಥಾಗರ್ಭವೆಂತೆಂದಡೆ –

ಪ್ರಥಮದಲ್ಲಿ ವಸ್ತು ಅನಿರ್ವಾಚ್ಯವಾಗಿದ್ದಿತು. ಆ ಅನಿರ್ವಾಚ್ಯವಾಗಿದ್ದ ವಸ್ತು ತನ್ನ ಲೀಲೆಯಿಂ ತಾನೆ ಪರಬ್ರಹ್ಮವೆಂಬ ನಾಮವನೈದಿ ಕುಳವಾಯಿತ್ತು. ಆ ಕುಳದಿಂದ ಆತ್ಮನೆಂಬ ಸ್ಥಲವಾಯಿತ್ತು. ಆ ಸ್ಥಲವು ಕುಳದೊಳಗೈದಿ ಸ್ಥಲಕುಳವೆಂಬ ಎರಡಿಲ್ಲದೆ ನಿಂದಿತ್ತು.

ಅದೆಂತೆಂದಡೆ,
ವಾಙ್ಮನಕ್ಕೆ ಹೊರಗಾದ ಪರಬ್ರಹ್ಮದಿಂದಲಾಯಿತ್ತು ಜ್ಞಾನ; ಜ್ಞಾನದಿಂದಲಾಯಿತ್ತು ಜೀವ; ಜೀವದಿಂದಲಾಯಿತ್ತು ಮನ; ಮನದಿಂದಲಾಯಿತ್ತು ಬುದ್ಧಿ; ಬುದ್ಧಿಯಿಂದಲಾಯಿತ್ತು ಚಿತ್ತ; ಚಿತ್ತದಿಂದಲಾಯಿತ್ತು ಅಹಂಕಾರ.

ಇಂತು ಅಹಂಕಾರ, ಚಿತ್ತ, ಬುದ್ಧಿ, ಮನ, ಜೀವ, ಜ್ಞಾನವೆಂದಾದವು. ಈ ಆರು ಕೆಟ್ಟಲ್ಲದೆ ವಾಙ್ಮನಕ್ಕೆ ಹೊರಗಾದ ಪರಬ್ರಹ್ಮವಾಗಬಾರದು, ಇವ ಕೆಡಿಸುವದಕ್ಕಾರು ಸ್ಥಲವಾದವು. ಆರು ಸ್ಥಲ ಆವಾವೆಂದಡೆ –

ಅಹಂಕಾರವಡಗಿದಾಗ ಭಕ್ತಸ್ಥಲ ; ಚಿತ್ತಗುಣ ಕೆಟ್ಟಾಗ ಮಾಹೇಶ್ವರಸ್ಥರ; ಬುದ್ದಿಗುಣ ಕೆಟ್ಟಾಗ ಪ್ರಸಾದಿಸ್ಥಲ; ಮನೋಗುಣ ಕೆಟ್ಟಾಗ ಪ್ರಾಣಲಿಂಗಿಸ್ಥಲ ; ಜೀವ ಗುಣ ಕೆಟ್ಟಾಗ ಶರಣಸ್ಥಲ ; ಅರಿವು ದ್ವೈತವಳಿದು ಅದ್ವೈತವಾದಾಗ ಐಕ್ಯಸ್ಥಲ.

ಇಂತು ಷಟ್‌ಸ್ಥಲ ವಾಙ್ಮನಕ್ಕೆ ಹೊರಗಾದ ಪರಬ್ರಹ್ಮವೆ ಆತ್ಮನು. ಆತ್ಮನಿಂದ ಆಕಾಶ ಪುಟ್ಟಿತ್ತು; ಆಕಾಶದಿಂದ ವಾಯು ಪುಟ್ಟಿತ್ತು; ವಾಯುವಿನಿಂದ ಅಗ್ನಿ ಪುಟ್ಟಿತ್ತು; ಅಗ್ನಿಯಿಂದ ಅಪ್ಪು ಪುಟ್ಟಿತ್ತು; ಅಪ್ಪುವಿನಿಂದ ಪೃಥ್ವಿ ಪುಟ್ಟಿತ್ತು.

ಅದೆಂತೆಂದಡೆ –
ಆತ್ಮನ್ಯಾಕಾಶಸಂಭೂತಿರಾಕಾಶಾದ್ವಾಯುಸಂಭವಃ
ವಾಯೋರಗ್ನಿಃ ಸಮುತ್ಪನ್ನೋ ವಹ್ನೇರಾಪ ಉದಾಹೃತಃ
ಅದ್ಭಿಃ ಪೃಥ್ವೀಸಂಭೂತಿರ್ಲಕ್ಷಣೈಕ ಪ್ರಭಾವತಃ ||  || ೪ ||

ಎಂದುದಾಗಿ,
ಇಂತು ಷಡಂಗವಾಗಿ ಕುಳಸ್ಥಲವಾಗಿ ಇನ್ನು ಸ್ಥಲಕುಳವಹ ವಿವರವೆಂತೆಂದಡೆ –
ಪೃಥ್ವಿ ಅಪ್ಪುವಿನಲ್ಲಿ ಅಡಗಿ, ಅಪ್ಪು ಅಗ್ನಿಯಲಡಗಿ, ಅಗ್ನಿ ವಾಯುವಿನಲ್ಲಿ ಅಡಗಿ, ವಾಯು ಆಕಾಶದಲ್ಲಿ ಅಡಗಿ, ಆಕಾಶವಾತ್ಮನಲ್ಲಿ ಅಡಗಿ, ಅದೆಂತೆಂದಡೆ –

ಪೃಥ್ವೀಶೀರ್ಣಾ ಜಲೆ ಮಗ್ನಾ, ಜಲಂ ಗ್ರಸ್ತಂ ಮಹಾಗ್ನಿನಾ
ವಾಯಾ ವಸ್ತಮಿತಂ ತೇಜೋ ವ್ಯೋಮಿ ವತೋ ವಿಲೀಯತೆ
ವ್ಯೋಮ ಚಾತ್ಮನಿ ಚಾತ್ಮಾsಸೌ ಸ್ವೀಯೆ ಪರಶಿವೇ ಪದೇ ||  || ೫ ||

ಇಂತೆಂದುದಾಗಿ,
ಆತ್ಮನು ಪರಬ್ರಹ್ಮದಲಡಗಿ ನಿಂದಿತ್ತು ಗುಹೇಶ್ವರಾ ||
ಇಂತು ಸ್ಥಳಕುಳವೆಂಬ ಆದಿ ಅನಾದಿಗಳಿಲ್ಲದಂದು,
ಆ ಪರಬ್ರಹ್ಮವಹ ಪರವಸ್ತುವಿಲ್ಲವಾಗಿರ್ದಿತ್ತು,

ಅದೆಂತೆಂದಡೆ,
ಅಷ್ಟತನುಮೂರ್ತಿ ಬ್ರಹ್ಮಾಂಡಾದಿಯಾದ, ಚರಾಚರಾತ್ಮ ಕವಹ ವಿಶ್ವಪ್ರಪಂಚವೇನೂ ತನ್ನಿಂ ತೋರದೆ, ತಾನೆಂಬ ತೋರಿಕೆ ತನಗಿಲ್ಲದೆ ತಾನೊಂದೆ ವಸ್ತು ವಾಙ್ಮ ನೋsತೀತವಾಗಿ ನಾಮ – ಅನಾಮಕ್ಕೆ ನಿಲುಕದೆ ಅನಿರ್ವಾಚ್ಯಮಾಗಿಯಿದ್ದಿತು. ಅಂತು, ತನ್ನಿಂದ ತೋರುವ ವಿಶ್ವಪ್ರಪಂಚವೇನೂಯಿಲ್ಲದೆಯಿದ್ದ ಆ ಮಹಾಪರಬ್ರಹ್ಮ ವಹ ಪರವಸ್ತು ತಾನೆ ಪ್ರಥಮದಲ್ಲಿ ಅನಿರ್ವಾಚ್ಯವಪ್ಪ ಮಹಾಶೂನ್ಯಸ್ಥಲವೆನಿಸುವುದು ಅದೆಂತೆಂದಡೆ,

ಅನಿರ್ವಾಚ್ಯಪದಂ ವಕ್ತುಮಶಕ್ಯಂ ತು ಸುರೈರಪಿ
ಸ್ವಾತ್ಮಪ್ರಕಾಶರೂಪಂ ಹಿ ಕಿಂ ಶಾಸ್ತ್ರೇಣ ಪ್ರಕಾಶ್ಯತೇ ||  || ೬ ||
ಎಂದುದಾಗಿ

ಅಸ್ಮಿನ್‌ಚೈಕತ್ರ ವಿಶ್ರಮ್ಯ ಜಗದ್ಗಚ್ಛತಿ ಶೂನ್ಯ ತಾಂ
ನ ಶೂನ್ಯಂ ಯತ್ ಸ್ವತಸ್ತತ್ ಸ್ಯಾನ್ಯ ಹಾಶೂನ್ಯಮನುತ್ತಮಂ ||  || ೭ ||
ಇಂತೆಂದುದಾಗಿ,
ಅಂತು ಅನಿರ್ವಾಚ್ಯವಪ್ಪ ಮಹಾಶೂನ್ಯಸ್ಥಲವಾಯಿತ್ತು,
ಅನಿರ್ವಾಚ್ಯಮಪ್ಪ ಮಹಾಶೂನ್ಯಸ್ಥಲ ||

ಇದಕ್ಕೆ ಗ್ರಂಥ ||
ಅಲಕ್ಷ್ಯಮದ್ವಯಂ ಶೂನ್ಯಮಮೂರ್ತಂ ಪರಮವ್ಯಯಂ
ಅನಾಮಮಕುಲಂ ಶುದ್ಧಮನಾದ್ಯಂ ಶಿವ ಉಚ್ಯತೇ ||  || ೧ ||

ನ ಬ್ರಹ್ಮಾರ್ದಿ ನವಿಷ್ಣುಶ್ಚ ನ ರುದ್ರೋ ನ ರವಿರ್ವಿಧುಃ
ನಾಗ್ನಿರ್ವ್ಯೋಮಸಮೀರಾಂಬುರ್ನ ಭೂಮಿರ್ನಗ್ರಹಾ ದಿಶಃ ||  || ೨ ||

ನ ತತ್ವಪ್ರಚಯಂ ಕಾಲೇ ಶಿವ ಎಕೋsಸ್ತಿ ಕೇವಲಂ
ಶಿವೋsಸ್ತಿ ಸಚ್ಚಿದಾನಂದ ಪರಿಪೂರ್ಣೋ ನಿರಂಜನಃ
ಅಕಾರಣಮಕಾರ್ಯಂ ಚ ಮನೋವಾಚಾಮಗೋಚರಂ ||  || ೩ ||

ವಚನ |

ಅಪರವಿಲ್ಲದಂದು, ಪರಬ್ರಹ್ಮವಿಲ್ಲದಂದು, ಅನಾಧಿಯಿಲ್ಲದಂದು, ಆದಿಯಿಲ್ಲದಂದು, ಸದಾಶಿವನಿಲ್ಲದಂದು, ಶಿವನಿಲ್ಲದಂದು, ಏನೆಂಬುದೇನೂ ತಾನಿಲ್ಲದಂದು, ಕೂಡಲ ಚೆನ್ನಸಂಗಯ್ಯ ತನ್ನ ತಾನೆನ್ನದಿರ್ದನಂದು. ||

ಆದಿ ಆಧಾರವಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು, ಸುರಾಳ ನಿರಾಳವಿಲ್ಲದಂದು, ಶೂನ್ಯನಿಶೂನ್ಯವಿಲ್ಲದಂದು, ಸಚರಾಚರವೆಲ್ಲ ರಚನೆಗೆ ಬಾರದಂದು ಗುಹೇಶ್ವರಾ, ನೀನೊಬ್ಬನೇ ಇದ್ದೆಯಲ್ಲಾ, ಇಲ್ಲದಂತೆ ||

ಆದಿ ಅನಾದಿಯಿಲ್ಲದಂದು, ಶೂನ್ಯಮಹಾಶೂನ್ಯವಿಲ್ಲದಂದು, ಸಾಧ್ಯವಸಾಧ್ಯವಿಲ್ಲದಂದು, ರೂಪು ನಿರೂಪು ಇಲ್ಲದಂದು, ಸ್ಥೂಲಸೂಕ್ಷ್ಮ ವಿಲ್ಲದಂದು, ಸಾಕಾರ ನಿರಾಕಾರ ವೆಂಬ ವಾಕು ಹುಟ್ಟುದಂದು, ದ್ವೈತಾದ್ವೈತವಾಗದಂದು, ಶಂಕರ, ಶಶಿಧರ, ಈಶ್ವರರೆಂಬ ಗಣಾಧೀಶ್ವರರಿಲ್ಲದಂದು, ವರ್ತನೆ ನಿರ್ವರ್ತನೆಯಿಲ್ಲದಂದು, ಉಮೆಯ ಕಲ್ಯಾಣವಾಗದಂದು, ಇವರೊಬ್ಬರ ನಾಮ ಸೀಮೆಯಿಲ್ಲದಂದು, ನೀನು ಉಲುಹಡಗಿಯಿದ್ದೆಯಲ್ಲಾ ಕಲಿದೇವಯ್ಯಾ ||

ಶೂನ್ಯ ಹುಟ್ಟದಂದು, ನಿಶೂನ್ಯವಿಲ್ಲದಂದು, ಬ್ರಹ್ಮವಿಷ್ಣುಮಹೇಶ್ವರರಿಲ್ಲದಂದು, ಹದಿನಾಲ್ಕು ಭುವನ, ದಿಕ್ಕುದಿಗುವಳಯವಿಲ್ಲದಂದು, ಕೂಡಲಚನ್ನಸಂಗಯ್ಯಾ, ಹೆಸರಿಲ್ಲ ದಿರ್ದನಂದು ||

ಬ್ರಹ್ಮ ತಲೆದೋರದಂದು, ವಿಷ್ಣು ಉದಯಿಸದಂದು, ರುದ್ರನವತರಿಸದಂದು, ಈರೇಳು ಭುವನ ನೆಲೆಗೊಳ್ಳದಂದು, ಸಪ್ತ ಸಾಗರಂಗಳುಕ್ಕಿ ಹರಿಯದಂದು, ಅಮೃತಮಥನವಿಲ್ಲದಂದು, ಮೂವತ್ತು ಮೂರುಕೋಟಿ ದೇವರ್ಕ್ಕಳಿಲ್ಲದಂದು, ಮುನ್ನಾರು ಬಲ್ಲರು? ಅದೇ ಮೂಲ ಸ್ವಾಮಿ ಕೂಡಲಚನ್ನಸಂಗಯ್ಯ ಹಮ್ಮಿಲ್ಲದಿರ್ದನಂದು ||

ಆದಿ ಸ್ವಯಂಭುವಿಲ್ಲದ ಮುನ್ನ, ಸಂಗನಿಸ್ಸಂಗವಿಲ್ಲದ ಮುನ್ನ, ನಕ್ಷತ್ರಗ್ರಹಣಂಗಳಿಲ್ಲದ ಮುನ್ನ, ಯೋಗಕರಂಣಗಳಿಲ್ಲದ ಮುನ್ನ, ಖೇಚರಭೂಚರರಿಲ್ಲದ ಮುನ್ನ, ಆರೂ ಆರೂ ಇಲ್ಲದ ಮುನ್ನ, ಆಕಾಶ ಮಾರುತರಿಲ್ಲದ ಮುನ್ನ, ಅಂಬುಧಿಕಮಠರಿಲ್ಲದ ಮುನ್ನ ಹರಿಬ್ರಹ್ಮಾದಿಗಳಾರೂ ಇಲ್ಲದ ಮುನ್ನ, ಹಿಮಕರ – ದಿನಕರರ ಸುಳುಹಿಲ್ಲದ ಮುನ್ನ, ಹಿಂದಿಲ್ಲ, ಮುಂದಿಲ್ಲ, ಒಂದೂ ಇಲ್ಲದ ಮುನ್ನ, ಗುಹೇಶ್ವರನಿದ್ದ ತನ್ನ ತಾನರಿಯದಂತೆ ||

ಅಂಡಜವಳಯವಿಲ್ಲದ ಮುನ್ನ, ದ್ವೀಪಂಗಳೇಳೂ ಇಲ್ಲದ ಮುನ್ನ, ಅನಲಪವನರಿಲ್ಲದ ಮುನ್ನ, ರವಿಚಂದ್ರರಿಲ್ಲದ ಮುನ್ನ, ತ್ರಿದೇವತೆಗಳಿಲ್ಲದ ಮುನ್ನ, ಗುಹೇಶ್ವರನುಲು ಹಡಗಿರ್ದನಂದು ||

ಅಂಡಜವಳಯ ರಚಿಸದಂದು, ಭೂಮಂಡಲವಾಗದಂದು, ಪಿಂಡದ ಬೀಜವ ನವ ಬ್ರಹ್ಮರು ತಾರದಂದು ನವಖಂಡ ಪೃಥ್ವಿ ರಚಿಸದಂದು, ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶವಿಲ್ಲದಂದು ಅನುಕರಿಸದಂದು, ರೂಪಿಸದಂದು, ಎನಗೆ ತನಗೆಂಬ ಚೈತನ್ಯ ತಲೆದೋರದಂದು, ಋಷಿಗಳಾಶ್ರಮ ಲೋಕಕ್ಕೆ ಹರೆಯದಂದು, ಅಂದು ಬಸವಣ್ಣನಿರ್ದ ಕಾಣಾ ಇಲ್ಲದಂತೆ, ರೇಕಣ್ಣಪ್ರಿಯ ನಾಗಿನಾಥಾ ||

ಜಲಕೂರ್ಮ ಗಜಫಣಿಯ ಮೇಲೆ ಧರೆ ವಿಸ್ತರಿಸಿ ನಿಲದಂದು, ಗಗನವಿಲ್ಲದಂದು, ಪವನನ ಸುಳುದು ಇಲ್ಲದಂದು, ಅಗ್ನಿಗೆ ಕಳೆಮೊಳೆದೋರದಂದು, ತರುಗಿರಿತೃಣಕಾಷ್ಟಾದಿಗಳಿಲ್ಲದಂದು ಯುಗಜುಗ ಮಿಗಿಲೆನಿಸಿದ ಹದಿನಾಲ್ಕುಭುವನ ನೆಲೆಗೊಳ್ಳದಂದು, ನಿಜವನರಿದೆನೆಂಬ ತ್ರಿಜಗಾಧಿಪತಿಗಳಿಲ್ಲದಂದು, ತೋರುವ ಬೀರುವ ಭಾವದ ಪರಿಯ ಅಭಾವದಲ್ಲಿ ಭರಿತ ಅಗಮ್ಯ ಗುಹೇಶ್ವರ ನಿರಾಳವು ||

೧೦

ಸರ್ಪನ ಮೇಲೆ ಪೃಥ್ವಿರಚಿಸದಂದು, ಸಮುದ್ರಂಗಳೇಳೂ ಹಾಸದಂದು, ಅಷ್ಟದಿಗುದಂತಿಗಳು ಹೂಡದಂದು, ಸ್ವಯಂಭು ಶಕ್ತಿಗಳಿಲ್ಲದಂದು, ಗಂಗೆಗೌರಿಯ ವಲ್ಲಭರಿಲ್ಲದಂದು, ಬ್ರಹ್ಮ, ವಿಷ್ಣು, ರುದ್ರ, ಈಶ್ವರ ಸದಾಶಿವರಿವರೈವರೂ ಇಲ್ಲದಂದು, ಇವರೆಲ್ಲರ ತಾಯಿತಂದೆಯಿಲ್ಲದಂದು, ನಿಜಗುರು ಸ್ವತಂತ್ರ ಕಪಿಲಸಿದ್ಧ ಮಲ್ಲಿನಾಥಾ, ಅತ್ತತ್ತ ಮುನ್ನ ನಿಮಗೆ ಹೆಸರಿಲ್ಲವಯ್ಯಾ ||

೧೧

ಬ್ರಹ್ಮಾಬ್ರಹ್ಮರಿಲ್ಲದಂದು, ವಿಷ್ಣುಮಾಯೆ ಜಲವಿಲ್ಲದಂದು; ಸೃಷ್ಟಿ ಸೃಷ್ಟಿಯಿಲ್ಲದಂದು ಕಾಳಿಂಗನಕರೆಕಂಠವಿಲ್ಲದಂದು, ಉಮೆಯಕಲ್ಯಾಣವಿಲ್ಲದಂದು, ದ್ವಾದಶಾದಿತ್ಯರಿಲ್ಲದಂದು, ನಂದಿಕೇಶ್ವರನಿಲ್ಲದಂದು, ಲಿಂಗಸ್ಥಲ, ಜಂಗಮಸ್ಥಲ, ಪ್ರಸಾದಿಸ್ಥಲವಿಲ್ಲದಂದು ದೇಹಾಂಕಾರ ಪ್ರಕೃತಿಯಿಲ್ಲದಂದು, ‘ಯತೋ ವಾಚೋ ನಿವರ್ತಂತೇ ಅಪ್ರಾಪ್ಯಮನಸಾ ಸಹ’ ಎಂದುದು ಶ್ರುತಿ ಕೂಡಲಚೆನ್ನಸಂಗಯ್ಯ ತನ್ನ ತಾನೆನ್ನದಿರ್ದನಂದು ||

೧೨

ದೇವಿಯರಿಬ್ಬರಿಲ್ಲದಂದು, ಪ್ರಧಾನಮಂತ್ರಿಗಳಿಲ್ಲದಂದು, ಆರೂ ಆರೂ ಇಲ್ಲದಂದು, ಸಂಕಲ್ಪ ವಿಕಲ್ಪವಿಲ್ಲದಂದು, ಉತ್ಪತ್ತಿಗಳಿಲ್ಲದಂದು, ನಿನ್ನಲ್ಲಿ ನೀ ನಾನೆಂಬುದು ಶೂನ್ಯ ವಾಗಿರ್ದೆ ಎನ್ನ ಕಪಿಲಸಿದ್ಧಮಲ್ಲಿನಾಥಾ ||

೧೩

ದ್ವೀಪಾದ್ವೀಪವಿಲ್ಲದಲ್ಲಿಂದತ್ತತ್ತ, ಮಾಯಾಮೋಹವಿಲ್ಲದಲ್ಲಿಂದತ್ತತ್ತ, ಏನೂ ಅದೇನೂ ಇಲ್ಲದಲ್ಲಿಂದತ್ತತ್ತ, ಆದಿಮೂವರಿಲ್ಲದಲ್ಲಿಂದತ್ತತ್ತ, ಸಿಮ್ಮಲಿಗೆಯ ಚನ್ನರಾಮ ನೆಂಬ ಲಿಂಗವಿಲ್ಲದಲ್ಲಿಂದತ್ತತ್ತ ||

೧೪

ಅಸುರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ, ಬ್ರಹ್ಮಕಪಾಲವಿಲ್ಲ, ಭಸ್ಮ ಭೂಷಣನಲ್ಲ, ವೃಷಭವಾಹನನಲ್ಲ, ಋಷಿಯಮಗಳೊಡನಿದ್ದಾತನಲ್ಲ, ಎಸಗುವ ಸಂಸಾರದ ಕುರುಹಿಲ್ಲದಾತಂತೆ ಹೆಸರಾವುದಿಲ್ಲೆಂದನಂಬಿಗಚೌಡಯ್ಯ ||

೧೫

ನಾಮ ಅನಾಮವಿಲ್ಲ, ನಾನೂ ತಾನೂ ಮುನ್ನವೆಯಿಲ್ಲ, ಈ ಉಭಯನಾಮವಾದ ಸೀಮೆಯೊಳಗಿಲ್ಲ, ಒಡಲೂ ಇಲ್ಲ, ನೆಳಲೂ ಇಲ್ಲ, ಏನೆಂಬುದೇನೂ ತಾ ಮುನ್ನಿಲ್ಲ, ಚಿಕ್ಕಯ್ಯಪ್ರಿಯಾ ಸಿದ್ದಲಿಂಗಯ್ಯಾ, ನಾನೂ ಇಲ್ಲ ನೀನೂ ಇಲ್ಲ ||

೧೬

ಏನೆಂದೆನಲಿಲ್ಲ, ನುಡಿಯ ಹೇಳಲಿಕಿಲ್ಲ, ನಿಜದಲ್ಲಿ ನಿಲ್ಲದ ಬೆರಗ ಕುರುಹರಿವುದೇ? ಅದು ತನ್ನಲ್ಲಿ ತಾನಿಲ್ಲ, ಏನೆಂದೆನಲಿಲ್ಲದ ಬಯಲು ! ಅಲ್ಲಿ ಏನೂ ಅರಸಲಿಲ್ಲ, ಇದಿರಿಲ್ಲ, ತಾನಿಲ್ಲ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ, ಇಲ್ಲ ||

೧೭

ನಾನೆಂದೆನಲಿಲ್ಲ, ನುಡಿದು ಹೇಳಲಿಕಿಲ್ಲ, ತನ್ನಲ್ಲಿ ತಾನಾದ ಬಯಲ ಘನವನು ಕುರುಹರಿವುದೆ ಮರುಳೇ? ಹರಿದು ಹತ್ತುವುದೇ ತನ್ನಲ್ಲಿ ತಾನಾದ ಬಯಲು ಘನವನು? ಇನ್ನೇನನರಸಲಿಲ್ಲ, ಅದು ಮುನ್ನ ತಾನಿಲ್ಲ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ, ಇಲ್ಲ ||

೧೮

ನಾಮಾನಾಮವೆಂದು ನೀನು ನಾಮಕ್ಕೆ ಬಳಲುವೆ ನಾಮವಾದ ಸೀಮೆಯೊಳಗಿಪ್ಪುದು, ಹೇಳಲೆ ಮರುಳೇ? ನಾಮವೂ ಇಲ್ಲ, ಸೀಮೆಯೂ ಇಲ್ಲ, ಒಡಲೂ ಇಲ್ಲ, ನೆಳಲೂ ಇಲ್ಲ, ನಾನೂ ಇಲ್ಲ, ನೀನೂ ಇಲ್ಲ, ಏನೂ ಇಲ್ಲ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ, ಇಲ್ಲ, ಎಂದುದಾಗಿ ||

೧೯

ನಿರ್ಜನಿತ, ನಿರಾಶ್ರಯ, ನಿರಾಚರಣ, ನಿಸ್ಸಂಗಿ, ನಿರ್ಲಿಖಿತ, ನಿಷ್ಕಪಟಿ, ನಿರ್ಮಾಯ, ನಿಷ್ಟ್ರಪಂಚ, ನಿರವಯನನವಯವಕ್ಕೆ ತರಲಿಲ್ಲ ನಿಲ್ಲೋ! ನಿರ್ವಚನೀಯನ ವಚನಕ್ಕೆ ತರಲಿಲ್ಲ, ನಿಲ್ಲೋ! ಸಿಮ್ಮಲಿಗೆಯ ಚನ್ನರಾಮನೆನಲಿಲ್ಲ, ನಿಲ್ಲು, ಮಾಣು ||

೨೦

ವೇದಾತೀತ, ವರ್ಣಾತೀತ, ಅಷ್ಟತ್ರಿಶಂತ್ಕಲಾತೀತ ಜ್ಞಾನಾತೀತ ನಮ್ಮ ಕೂಡಲ ಸಂಗಮದೇವ ||

ಅನಿರ್ವಾಚ್ಯಮಪ್ಪ ಮಹಾಶೂನ್ಯಸ್ಥಲ ಸಮಾಪ್ತ !