೨. ಸ್ವಯಂಭುಲಿಂಗ ಸ್ಥಲ

ಇಂತು ತಾನೆಂಬ ತೋರಿಕೆ ತನಗಿಲ್ಲದೆ ತನ್ನಿಂದ ತೋರುವ ವಿಶ್ವಪ್ರಪಂಚವೇನೂ ಇಲ್ಲದೆ ಅನಿರ್ವಾಚ್ಯವಾಗಿ ಮಹಾಶೂನ್ಯವಾಗಿಪ್ಪ ಆ ಮಹಾಪರಬ್ರಹ್ಮವು ತನ್ನ ಲೀಲೆಯಿಂ ತಾನೆ ಅಖಂಡ ಪರಿಪೂರ್ಣ ಗೋಳಾಕಾಕಾರ ಸ್ವಯಂಭುಲಿಂಗವಾದ ಸ್ವಯಂಭುಲಿಂಗಸ್ಥಲ ||

ಉಪನಿಷತ್ತು |

ಸರ್ವಜ್ಞಃ ಸರ್ವವಿದ್ಯಃ ಸ್ವಭಾವತಃ ಶುದ್ಧಃ ಸ ಏವ ಹಿ
ಸ್ವಯಂಭುಃ ಸ್ಯಾತ್ ||  || ೧ ||

ಗ್ರಂಥ |

ನೋದೇನಿ ನಾಸ್ತ ಮೇತೀಹ ನ ವೃದ್ಧಿಂ ಯಾ ನಕ್ಷಯಂ
ಸ್ವಯಂ ವಿಭೂತಿ ಭೂತಾನಿ ಭಾಸಯೇತ್ ಸಾಧನಂ ವಿನಾ ||  || ೨ ||

ವೃತ್ತ |

ನೋದೇತಿ ಯನ್ನ ನಶ್ಯತಿ | ನಿರ್ವಾತಿ ನ ನಿವೃತ್ತಿಂ ಪ್ರಯಚ್ಛತಿ ಚ |
ಜ್ಞಾನಕ್ರಿಯಾ ಸ್ವಭಾವಂ | ತತ್ತೇಜಶ್ಯಾಂಭವಂ ಜಯಂತಿ ||  || ೩ ||

ವಚನ |

ಮಹಾಕಾಲ ಕಾಲದಲ್ಲಿ ಓಂ ಪ್ರಥಮ ನಿಮ್ಮಿಂದ ನೀವೆ ಸ್ವಯಂಭುವಾಗಿರ್ದಿರೊಂದ ನಂತಕಾಲ | ಮನವು ಮಹಾನಂದದಲುಕ್ಕಾಡಿ ಮತ್ತಲ್ಲಿಯೇ ತಲ್ಲೀಯವಾಗಿರ್ದಿರೊಂದನಂತ ಕೋಟಿ ವರುಷ | ಕೂಡಲಸಂಗಯ್ಯನು ವಿಪರೀತ ಚರಿತ್ರನು ||

ಕಾಮ್ಯಕಲ್ಪಿತಂಗಳಿಲ್ಲದೆ ನಿಮ್ಮಿಂದ ನೀವೇ ಸ್ವಯಂಭುವಾಗಿದ್ದಿರಲ್ಲಾ | ನಿಮ್ಮ ಪರಮಾನಂದ ಪ್ರಭಾವ ಪರಿಣಾಮದಲ್ಲಿ ಒಂದನಂತಕಾಲವಿದ್ದಿರಲ್ಲಾ ! ನಿಮ್ಮ ಆದ್ಯಂತವ ನೀವೆ ಅರಿವುತ್ತಿದ್ದಿರಲ್ಲಾ, ನಿಮ್ಮ ಸ್ವಯಂಭು ಸ್ವಭಾವದುದಯವ ನೀವೆ ಬಲ್ಲಿರಿ ಕೂಡಲಚನ್ನಸಂಗಮದೇವಾ ||

ಹುಟ್ಟುಮೆಟ್ಟೆಂಬುದು ನಿಮ್ಮಲ್ಲಿಯಿಲ್ಲ ನಿಮ್ಮಿಂದ ನೀವೆ ಸ್ವಯಂಭುವಯ್ಯಾ | ಇಂತಾ ದಿರಯ್ಯಾ, ಇಂತಾದಿರಯ್ಯಾ ಹರುಷದಿಂದ ನೀವಿಂತಾದಿರಯ್ಯಾ | ನಿಮ್ಮ ಮಹಾತ್ಮ್ಯೆಯ ನೀವೆ ಬಲ್ಲಿರಿ ನಿಜಗುರು ಕಪಿಲಸಿದ್ಧಮಲ್ಲಿನಾಥಾ ||

ತಾಯಿತಂದೆಯಿಲ್ಲದ ಕಂದಾ, ನಿನಗೆ ನೀನೆ ಹುಟ್ಟಿ ಬೆಳೆದೆಯಲ್ಲಾ, ನಿನ್ನ ಪರಿಣಾಮವೆ ನಿನಗೆ ಪ್ರಾಣತೃಪ್ತಿಯಾಗಿದ್ದೆಯಲ್ಲಾ ! ಭೇದಕರಿಗೆ ನೀನು ಅಭೇದ್ಯನಾಗಿ ನಿನ್ನ ನೀನೆ ಬೆಳಗುತ್ತಿದ್ದೆಯಲ್ಲಾ, ನಿನ್ನ ಚಾರಿತ್ರ ನಿನಗೆ ಸಹಜ ಗುಹೇಶ್ವರಾ ||

ತನಗೆ ತಾನೆ ಹುಟ್ಟಿದನಾಗಿ ತಾನೆ ಸ್ಥಾವರವಾದ ಆ ಲಿಂಗ ತನ್ನಲ್ಲಿಯಿದ್ದ ರುಚಿಯ ಅವ್ಯಕ್ತಕ್ರಿಯಿಂದ ಮನವೆ ಬಾಯಾಗಿ ಉಂಬ ಲಿಂಗವ ಇತರ ಸುಖವ ಬಲ್ಲುದೇ ಕೂಡಲಚನ್ನಸಂಗಮದೇವಾ ||

ಅಮೂಲ್ಯನ ಪ್ರಮಾಣನಗೋಚರಲಿಂಗ, ಆದಿ ಮಧ್ಯ ಅಂತ್ಯವಿಲ್ಲದ ಸ್ವತಂತ್ರಲಿಂಗ, ನಿತ್ಯ ನಿರ್ಮಳಲಿಂಗ, ಅಯೋನಿ ಸಂಭವ, ನಮ್ಮ ಕೂಡಲಚನ್ನಸಂಗಮದೇವಾ
ಇಂತು ಸ್ವಯಂಭುಲಿಂಗಸ್ಥಲ ಸಮಾಪ್ತ

೩. ಉಮಾಪತಿ ಸ್ವಯಂಭುಲಿಂಗ ಸ್ಥಲ

ಇಂತಪ್ಪ ಸ್ವತಂಭುಲಿಂಗವೇ ವಿಶ್ವೋತ್ಪತ್ತಿ ಕಾರಣ ಸ್ವಲೀಲೆಯಿಂದ ”ಸ್ವಯಮೇವ ದ್ವಿಧಾ ಭವೇತ್” ಎಂಬ ಶ್ರುತಿ ಪ್ರಮಾಣಿನಿಂದ ಉಮಾಪತಿಯಾಗಿ, ಆ ಉಮಾಪತಿಯೆ ಸ್ವಯಂಭು ಲಿಂಗವಾದ ಉಮಾಪತಿ – ಸ್ವಯಂಭು – ಲಿಂಗ ಸ್ಥಲ

ಗ್ರಂಥ |

ಶಿವಂ ಬ್ರಹ್ಮ ಇತಿ ಪ್ರಾಹುಃ ಶಕ್ತಿಶೈವಾಂಗ ಉಚ್ಯತೇ
ಶಿವಶಕ್ತಿ ಸಮಾಯೋಗಂ ಜಗತ್‌ – ಸೃಷ್ಟ್ಯರ್ಥಕಾರಣಂ ||  || ೧ ||

ಸ್ವಯಂ ಜ್ಯೋತಿಸ್ಸರ್ವ ಚೈತನ್ಯಂ ತತ್ತ್ವಮಾಲಾ ಧಾರಾಂಕಿತಂ
ಪರಶಕ್ತಿ ಸಮಾಯೋಗಂ ಜಗತ್ – ಸೃಷ್ಟ್ಯರ್ಥಕಾರಣಂ ||  || ೨ ||

ವೃತ್ತ |

ಅಂಕುರದಲ – ಕುಸುಮಾನ್ಯನೋಕಹೇ
ಕಾಲಯೋಗತೋ ಭಾಂತಿ ಮೂರ್ತಯೋ
ಏವಂ ವಿವಿಧಾಃ ಪರೇ ಶಿವಶಕ್ತಿಯೋಗತೋ ಭಾಂತಿ ||  || ೩ ||

ಲೀಲಯಾ ಸಹಿತಸ್ಸಾಕ್ಷಾದುಮಾಪತಿರಿತೀರಿತಃ
ಲೀಲಯಾ ರಹಿತಃ ಪಶ್ಚಾತ್ ಸ್ವಯಂಭುರಿತಿ ಕಥ್ಯತೆ ||  || ೪ ||

ನ ಶಿವೇನ ವಿನಾ ಶಕ್ತಿರ್ನಶಕ್ತಿರಹಿತಃ ಶಿವಃ
ಷಷ್ಪಗಂಧಮಿನಾನ್ಯೋನ್ಯ ಮಾರುತಾಂಬರಯೋರಿವ ||  || ೫ ||

ವಚನ |

ಓಂ ಪ್ರಥಮದಲ್ಲಿ ದಿವ್ಯನಿರಾಲಂಬಮೂರ್ತಿ ಜಗಹಿತಾರ್ತವಾಗಿತ್ತಾದಲ್ಲಿ ಪಂಚಬ್ರಹ್ಮ ಸಾಕಾರಮೂರ್ತಿ ಲೀಲಾಸ್ವಯಂಭುವಾದಲ್ಲಿ ಅಣುವಿಂಗೆ ಅಣು ಮಹತ್ತಿಂಗೆ ಮಹತ್ತಾದಲ್ಲಿ ಅಂಗಕರಂಡ, ಆತ್ಮ ಸುಗಂಧ – ನೀನಾದೆಯೆಲ್ಲಾ ಏಣಾಂಕಧರ ಸೋಮೇಶ್ವರಲಿಂಗ ||

ಮರದೊಳಗಣ ಪತ್ರೆಫಲಂಗಳು ಮರಕಾಲವಶದಲ್ಲಿ ತೋರುವಂತೆ, ಹದನೊಳಗಣ ಲೀಲಾಪ್ರಕೃತಿಸ್ವಭಾವ ಹರನ ಲೀಲಾವಶದಲ್ಲಿ ತೋರುವುದು, ಲೀಲೆಯಾದಡೆ ಉಮಾಪತಿ, ಲೀಲೆನಿಂದಡೆ ಸ್ವಯಂಭು ನಮ್ಮ ಗುಹೇಶ್ವರ ಲಿಂಗವು ||

ಏನೂ ಇಲ್ಲದ ಠಾವಿನಲ್ಲಿ ‘ನಾ’ ‘ನೀ’ ನೆಂಬುದ ತಾನೆ ತಂದನು ಇಲ್ಲದನುಂಟಾದುದ, ಸಾವಿರವನಾಡಿದಡೇನು? ಉಂಟಾದುದನಿಲ್ಲ ಮಾಡಬಲ್ಲಡೆ ಆ ‘ಇಲ್ಲವೆ’ ತಾನೆ ಗುಹೇಶ್ವರಾ ||

ರೂಪು – ನಿರೂಪ ವಿಚಾರಿಸುವರು, ಸಾಕಾರ – ನಿರಾಕಾರವ ವ್ಯವಹರಿಸುವರು, ಅರುಹು ಮರವೆಯ ಕುರುಹ ಹಿಡಿವರು, ಮನ ಘನವ ಸಂಬಂಧಿಸುವರು, ಒಂದೆಂಬೆನೇ? ನಾಮಗಳೆರಡಾಗಿವೆ; ಎರಡೆಂಬಡೆ ಮೂರ್ತಿಯೊಂದ! ಒಂದೆರಡೆಂಬುದು ತನ್ನಿಂದಾಯಿತ್ತಾಗಿ ತಾನೆ ಮಹಾಲಿಂಗ ಕಲ್ಲೇಶ್ವರಾ ||

ನಿಜವಸ್ತುವೊಂದೇ, ತನ್ನ ಲೀಲೆಯಲೆರಡಾಗಬಲ್ಲುದದೊಂದೆ; ಬೇರೆ ತೋರುಬಲ್ಲುದದೊಂದೆ; ತನ್ನ ಮರೆಯ ಬಲ್ಲುದುದೊಂದೆ, ಆ ಮರವೆಯ ಬಲ್ಲುದುದೊಂದೆ, ತಾನಲ್ಲ ದನ್ಯವಿಲ್ಲೆಂದರಿದ ಅರಿವು ತಾನೆ ಸಿಮ್ಮಲಿಗೆಯ ಚೆನ್ನರಾಮಾ ||

ಶಿವಶಕ್ತಿ ಸಂಪುಟವೆಂಬುದದೆಂತುಂಟು, ಹೇಳಿರಣ್ಣಾ! ಶಿವನೇ ಚೈತನ್ಯಾತ್ಮನು, ಶಕ್ತಿಯೇ ಚಿತ್ತು ಇಂತು ಚೈತನ್ಯಾತ್ಮನೆ ಚಿತ್‌ಸ್ವರೂಪವೆಂದರಿಯಬಲ್ಲಡೆ, ಭಿನ್ನ ಭಾವವೆಲ್ಲಿಯದು ಗುಹೇಶ್ವರಾ ||

ಶರೀರವುಳ್ಳನ್ನಕ್ಕ ನೆಳಲಿಲ್ಲದೆಯಿರಬಾರದು ಭೂಮಿಯುಳ್ಳನ್ನಕ್ಕ ಆಕಾಶವಿಲ್ಲದೆಯಿರ ಬಾರದು, ನಾನುಳ್ಳನ್ನಕ್ಕ ನೀನಿಲ್ಲದೆಯಿರಬಾರದು, ಗುಹೇಶ್ವರಲಿಂಗವು ಶಕ್ತಿಗೊಳಗಾಯಿತ್ತಾಗಿ, ಬಚ್ಚಬರೆಯ ಬಯಲೆಂಬುದಕ್ಕೆ ಉಪಮಾನವಿಲ್ಲ ||

ವಾಯು ಬಯಲೆಂದಡೆ, ತರುಗಿರಿಗಳೊದರುವ ಪರಿಯಿನ್ನೆಂತು, ನಾದ ಬಯಲೆಂದಡೆ, ಶಬ್ದಂಗಳು ತೋರುವ ಪರಿಯಿನ್ನೆಂತು, ತನ್ಮಯವೆಲ್ಲವೂ ರೂಪು, ಏಣಾಂಕಧರ ಸೊಮೇಶ್ವರ ಲಿಂಗವು ಸ್ವರೂಪನಾಗಿ ಜಗದಲ್ಲಿ ಇಹನ್ನಬರ ||

ಇಂತು ಸ್ವಯಂಭುಲಿಂಗಸ್ಥಲ ಸಮಾಪ್ತ

೪. ವಿಶ್ವೋತ್ಪತ್ತಿ ಸ್ಥಲ

ಇಂತಪ್ಪ ಸ್ವಯಂಭುಲಿಂಗವಾಗಬಲ್ಲ ಸ್ವಶಕ್ತಿಸಮೇತನಾಗಿ ವಿಶ್ವಲೀಲಾ ವಿಲಾಸವ ನಟಿಸ ಬಲ್ಲ ಸ್ವತಂತ್ರಲೀಲೆಯನ್ನುಳ್ಳ ಮಹಾಘನ ಉಮಾಪತಿ ಸ್ವಯಂಭುಲಿಂಗದಿಂದಾದ ವಿಶ್ವೋತ್ಪತ್ತಿ ಸ್ಥಲ ||

ಗ್ರಂಥ |

ಮಾತಾ ಶಂಭುಃ ಪಿತಾ ಶಂಭುರ್ಭ್ರಾತಾ ಶಂಭುಸ್ತಧೈವ ಚ |
ದೇವರಾಸುರಮನುಷ್ಯಾಣಾಂ ಸೃಷ್ಟಿಶ್ಚ ಪರಮೇಶ್ವರಾತ್ ||  || ೧ ||

ಸರ್ವಶೂನ್ಯಂತರೇ ಮಧ್ಯೆ ಆದಿಮೂರ್ತಿ ಸಮುದ್ಭವಃ
ಆದಿಮೂರ್ತಿ ಸಮಾಖ್ಯಾತಃ ಪರಾಶಕ್ತಿ ಸಮುದ್ಭವಃ ||  || ೨ ||

ಪರಾಶಕ್ತಿ ಸಮಾಖ್ಯಾತಃ ನಾದಬಿಂದು ಸಮುದ್ಭವಃ
ನಾದಬಿಂದು ಸಮಾಕ್ಯಾತಃ ಸದಾಜ್ಞಾನ ಸಮುದ್ಭವಃ ||  || ೩ ||

ಸಮ್ಯಜ್ಞಾನ ಸಮಾಖ್ಯಾತಃ ಶಿವತತ್ವ ಸಮುದ್ಭವಃ
ಶಿವತತ್ವ ಸಮಾಖ್ಯಾತಃ ಈಶ್ವರಾತ್ಮ – ಸಮುದ್ಭವಃ ||  || ೪ ||

ಈಶ್ವರಾತ್ಮ ಸಮಾಖ್ಯಾತಃ ರುದ್ರಕ್ರಿಯಾ – ಸಮುದ್ಭವಃ
ರುದ್ರಕ್ರಿಯಾ ಸಮಾಖ್ಯಾತಃ ವಿಷ್ಣುಲಕ್ಷ್ಮೀ ಸಮುದ್ಭವಃ ||  || ೫ ||

ವಿಷ್ಣುಲಕ್ಷ್ಮೀ ಸಮಾಖ್ಯಾತಃ ಬ್ರಹ್ಮವಾಣೀ ಸಮುದ್ಭವಃ
ಬ್ರಹ್ಮವಾಣೀ ಸಮಾಖ್ಯಾತಃ ಸರ್ವಜೀವ ಸಮುದ್ಭವಃ || ೬ ||

ಉಪನಿಷತ್ತು |

ಬ್ರಹ್ಮಾಣಾಂ ವಿಧವೇ ಪುತ್ರಮೃಗಜಾತಂ ಚ
ತೇನ ಸರ್ವಾನ್ ಲೋಕಾನ್ ಉತ್ಪಾದ್ಯ ಕ್ರೀಡತೀಶಾನಃ ||  || ೭ ||

ವಚನ |

ಏನೆಂದೆನಲಿಲ್ಲದ ಮಹಾಘನವು ತನ್ನ ಲೀಲೆಯಿಂ ತಾನೆ ಸ್ವಯಂಭುಲಿಂಗಸ್ಥಲವಾಯಿತ್ತು! ಆ ಲಿಂಗದಿಂದಾಯಿತ್ತು ಶಿವಶಕ್ತ್ಯಾತ್ಮಕ. ಶಿವಶಕ್ತ್ಯಾತ್ಮಕದಿಂದಾದುದಾತ್ಮನು ಆತ್ಮನಿಂದಾದುದಾಕಾಶ, ಆಕಾಶದಿಂದಾಯಿತ್ತು ವಾಯು. ವಾಯುವಿನಿಂದಾಯಿತ್ತು ಅಗ್ನಿ, ಅಗ್ನಿಯಿಂದಾಯಿತ್ತು ಅಪ್ಪು, ಅಪ್ಪುವಿನಿಂದಾಯಿತ್ತು ಪೃಥ್ವಿ, ಪೃಥ್ವಿಯಿಂದಾಯಿತ್ತು ಸಕಲ ಜೀವ ಜಗ! ಇವೆಲ್ಲವೂ ನಿಮ್ಮ ನೆನಹು ಮಾತ್ರದಿಂದಾದುವು ಸಿಮ್ಮಲಿಗೆಯ ಚೆನ್ನರಾಮಾ ||

ಅನಾದಿಯ ಮಗನಾದಿ, ಆದಿಯಮಗನತೀತ ಅತೀತನ ಮಗನಾತ್ಮ, ಆತ್ಮನ ಮಗ ನಾಕಾಶ, ಆಕಾಶನ ಮಗ ವಾಯು, ವಾಯುವಿನ ಮಗನಗ್ನಿ, ಅಗ್ನಿಯ ಮಗ ಅಪ್ಪು, ಅಪ್ಪುವಿನ ಮಗ ಪೃಥ್ವಿ, ಪೃಥ್ವಿಯಿಂದ ಸಕಲ ಜೀವಂಗಳುದ್ಭವಿಸಿದವು ಗುಹೇಶ್ವರಾ ||

ಸಹಜದಿಂದ ನಿರಾಲಂಬವಾಯಿತ್ತು, ನಿರಾಲಂಬದಿಂದ ನಿರಾಳವಾಯಿತ್ತು, ನಿರಾಳದಿಂದ ನಿರವಯವಾಯಿತ್ತು, ನಿರವಯದಿಂದ ಆದಿಯಾಯಿತ್ತು, ಆದಿಯಲಿ ಮೂರ್ತಿಯಾದನೊಬ್ಬ ಶರಣ, ಆ ಶರಣನ ಮೂರ್ತಿಯಿಂದ ಸದಾಶಿವನಾದ, ಸದಾಶಿವನ ಮೂರ್ತಿಯಿಂದ ಶಿವನಾದ, ಆ ಶಿವನ ಮೂರ್ತಿಯಿಂದ ರುದ್ರನಾದ, ರುದ್ರನ ಮೂರ್ತಿಯಿಂದ ವಿಷ್ಣುವಾದ, ವಿಷ್ಣುವಿನ ಮೂರ್ತಿಯಿಂದ ಬ್ರಹ್ಮನಾದ ಆ ಬ್ರಹ್ಮನ ಮೂರ್ತಿಯಿಂದಲಾದವು ಸಕಲ ಜೀವ ಜಂತುಗಳೆಲ್ಲ, ನಮ್ಮ ಗುಹೇಶ್ವರನ ಕರಸ್ಥಲದ ಹಂಗಿನಲ್ಲಿ ಬೆಳೆದರು ||

ಆದಿಯಲ್ಲೊಬ್ಬ ಶರಣ ಮೂರ್ತಿಯಾದನು, ಆ ಶರಣನ ಮೂರ್ತಿಯಿಂದ ಸದಾಶಿವನಾದನು, ಆ ಸದಾಶಿವನ ಮೂರ್ತಿಯಿಂದ ಜ್ಞಾನಶಕ್ತಿಯಾದಳು, ಆ ಸದಾಶಿವಗಂಗೆಯೂ ಜ್ಞಾನಶಕ್ತಿಯಿವರಿಬ್ಬರಿಗೆಯೂ ಶಿವನಾದ, ಆ ಶಿವಂಗೆ ಇಚ್ಛಾಶಕ್ತಿಯಾದಳು, ಆ ಶಿವಂಗೆ ಇಚ್ಛಾಶಕ್ತಿಯಿವರಿಬ್ಬರಿಗೆಯೂ, ರುದ್ರನಾದ, ಆ ರುದ್ರಂಗೆ ಕ್ರಿಯಾಶಕ್ತಿಯಾದಳು, ಆ ರುದ್ರಂಗೆಯೂ ಕ್ರಿಯಾಶಕ್ತಿಯಿವರಿಬ್ಬರಿಗೆಯೂ ವಿಷ್ಣುವಾದ, ಆ ವಿಷ್ಣುವಂಗೆಯೂ ಮಹಾಲಕ್ಷ್ಮಿಯುಯಿಬ್ಬರಿಗೆಯೂ ಬ್ರಹ್ಮನಾದ, ಬ್ರಹ್ಮಂಗೆ ಸರಸ್ವತಿಯಾದಳು, ಆ ಬ್ರಹ್ಮಂಗೆ ಸರಸ್ವತಿಯಿಬ್ಬರಿಗೆಯೂ ನರರು, ಸುರರು, ದೇವರ್ಕ್ಕಳು, ಹೆಣ್ಣು, ಗಂಡು ಸಚರಾಚರಂಗಳು ಸಹಿತವಾಗಿ ಎಂಭತ್ತನಾಲ್ಕು ಲಕ್ಷ ಜೀವಜಂತುಗಳು ತೋರುವ ತೋರಿಕೆಯೆಲ್ಲ ಹುಟ್ಟಿತ್ತು ಕೂಡಲಚನ್ನಸಂಗಯ್ಯಾ ||

ಆದಿಪುರಷನ ಮನವು ಮಹವನಕ್ಕಾಡಿ ಮತ್ತಲ್ಲಿಯೇ ಆನಂದದಿಂದ ಆ ನಿರವಯವು ಬೆಸಲಾಯಿತ್ತು, ಧರೆಯಂಬರವಾರಿಧಿ ಸಹಿತ ಜಾರೆಯೆಂದಡೆ ಜಗದಲ್ಲಿ ನಿಂದರು, ಚೌರಾಸಿ ಲಕ್ಷ ಜೀವ ಜಂತುಗಳು ‘ಹೊರೆ’ ಯೆಂದಡೆ ಆಕಾಶದಲ್ಲಿ ನಿಂದರು, ಗರುಡ – ಗಂಧರ್ವ – ಸಿದ್ಧ – ವಿದ್ಯಾಧರ – ದೇವರ್ಕಳು ಮೊದಲಾದ ದೇವಸಮೂಹಂಗಳೆಲ್ಲಾ ಕೂಡಲ ಸಂಗಮದೇವಾ ನೀವು ಮನದಲ್ಲಿ ಸಂಕಲ್ಪಿಸಿ ಆಗೆಂದಡಾದವು ||

ಕಾಳಾಂಧಕಾರ ವಾರುಧಿ ಸಹಿತ ಆರೂ ಇಲ್ಲದಂದು, ಪ್ರಮಥನೊಬ್ಬನೇ ಇದ್ದ ನೊಡಾ ಒಂದನಂತಕಾಲ; ಧರೆ, ಅಂಬರ, ರವಿ, ಶಶಿ ಸಹಿತ ಆರೂ ಇಲ್ಲದಂದು, ನಿರ್ಮಾಯನಾಗಿದ್ದ ನೊಂದು ಕೋಟಾನುಕೋಟಿ ವರುಷ, ಅಲ್ಲಿ ಅನಾಗತವುಂಟು ಮನವು ಮಹವನಕ್ಕಾಡಿ, ಮತ್ತಲ್ಲಿಯೇ ನಿರಾಳ ಬೆಸಲಾಯಿತ್ತು! ನರರು ಸುರರು ಮೊದಲಾದ ಚೌರಾಸಿ ಲಕ್ಷ ಜೀವಜಂತುಗಳುದಯಿಸಿದವಯ್ಯಾ, ಕೂಡಲಚನ್ನಸಂಗಯ್ಯಾ ನಮ್ಮ ಬಸವಣ್ಣ ನೆನೆದಡೆ ||

ಅವನಿಯಂಬರ ಉದಯಿಸದಂದು ಒಂದು ತುಂಬಿದ್ದ ಕೊಡನ ಕಂಡೆ, ಅದನೆತ್ತಿದವರಿಲ್ಲ; ಇಳುಹಿದವರಿಲ್ಲ, ಆ ಕೊಡ ತುಳುಕಿದಲ್ಲಿ ಒಂದು ಬಿಂದು ಕಡೆಗೆ ಸಿಡಿಯಿತ್ತ ಕಂಡೆ, ಆ ಬಿಂದುವಿನಲ್ಲಿ ಅನಂತ ವೇದಮೂರ್ತಿಗಳು ಹುಟ್ಟಿತ್ತ ಕಂಡೆ, ಇದು ಕಾರಣ ಚಿಕ್ಕಯ್ಯಪ್ರಿಯ ಸಿದ್ಧಲಿಂಗದ ಲೀಲೆಯ ಮೂಲವ ಕಂಡು ಇಲ್ಲ, ಇಲ್ಲ ಎನುತ್ತಿರ್ದೆನು ||

ಅಯ್ಯಾ, ನೀನು ನಿರಾಳ ನಿರ್ಮಾಯನಾಗಿಪ್ಪೆಯಾಗಿ, ಆಕಾಶ – ಪ್ರಕಾಶವಿಲ್ಲದಂದು, ಸಾಕ್ಷಿ ಸಭೆಗಳಿಲ್ಲದಂದು, ಸಚರಾಚರವೆಲ್ಲ ರಚನೆಗೆ ಬಾರದಂದು, ಆಧಾರದೊಳಗಣ ವಿಭೂತಿಯನೆ ತೆಗೆದು, ಭೂಮಿಯ ನೆಲೆಗೊಳಿಸಿ ಪಂಚಾಶತ್ಕೋಟಿ ವಿಸ್ತೀರ್ಣ ಭೂಮಂಡಲಕ್ಕೆ ಸುತ್ತಿ ಹರಿದವು ಸಪ್ತಸಾಗರಂಗಳು, ಎಂಭತ್ತಾರುಕೋಟಿಯುಂ ತೊಂಭತ್ತೇಳು – ಲಕ್ಷ ಕಾಲ ಭುವನ ಮಂಡಲಕ್ಕೆ ಉದಯ. ಬ್ರಹ್ಮಾಂಡ, ಅರುವತ್ತಾರುಕೋಟಿ ತಾರಾಮಂಡಲವೆಂದಡೆ ಬೆಳಗಿ ತೋರಿದ ಹನ್ನೆರಡು ಜ್ಯೋತಿಯ, ನಿಲಿಸಿ ತೋರಿದ ಹದಿನಾಲ್ಕು ಭುವನವ ಈ ಜಗದ ಜಂಗುಳಿಯ ಕಾವಗೋವಳ ತಾನಾಗಿ, ಚೌರಾಸಿ ಲಕ್ಷ ಜೀವರಾಶಿಗಳಿಗೆ ರಾಶಿವಾಳ ತಾನಾಗಿ, ಸಕಲದ, ಆಳಿವಿನ, ಉಳಿವಿನ, ನಿಂದ ನಿಜದ, ನಿಲವ ನೋಡಿ, ಕಂಡೆನು, ಗುಹೇಶ್ವರಾ, ನಿಮ್ಮ ಶ್ರೀ ಪಾದಕ್ಕೆ ನಮೋ ನಮೋ ಎನುತಿರ್ದೆನು ||

ಭವಿ ಮಾಡಲಿಕೆ ಪೃಥ್ವಿಯಾಯಿತ್ತು, ಭವಿ ಮಾಡಲಿಕೆ ಅಪ್ಪುವಾಯಿತ್ತು, ಭವಿ ಮಾಡಲಿಕೆ ತೇಜವಾಯಿತ್ತು, ಭವಿ ಮಾಡಲಿಕೆ ವಾಯುವಾಯಿತ್ತು, ಭವಿ ಮಾಡಲಿಕ್ಕೆ ಆಕಾಶವಾಯಿತ್ತು ಭವಿ ಮಾಡಲಿಕೆ ಚಂದ್ರಸೂರ್ಯರಾದರು, ಭವಿ ಮಾಡಲಿಕೆ ಆತ್ಮನಾದನು, ಭವಿ ಮಾಡಲಿಕೆ ಬ್ರಹ್ಮವಿಷ್ಣುರುದ್ರರಾದರು, ಇದುಕಾರಣ, ಕೂಡಲಚೆನ್ನಸಂಗಯ್ಯಾ ಭವಿಯಿಂದಲಾಯಿತ್ತು ಸಕಲ ಜಗವೆಲ್ಲ ||

ಇಂತು ವಿಶ್ವೋತ್ಪತ್ತಿಸ್ಥಲ ಸಮಾಪ್ತ !

ಇದು ಶ್ರೀಮದಮಿತಾನು ಲಿಂಗಾಂಗ ಸಂಯೋಗಾನುಭವ ಪ್ರಸಿದ್ಧ
ಪರಿಪೂರ್ಣ ಶೀಲ ಪರಮಾದ್ವೈತ ವಿಶ್ರಾಂತರುಮಪ್ಪ ಪರಮ ಚರರೂಪ
ಶ್ರೀ ಕರಸ್ಥಲದ ಮಲ್ಲಿಕಾರ್ಜುನ ಒಡೆಯರು ಸೇರಿಸಿದ ಮಹಾನುಭವ
ಬೋಧೆಯಪ್ಪ ಶ್ರೀಮದ್ ಬ್ರಹ್ಮಾದ್ವೈತ್ ಸಿದ್ಧಾಂತ ಷಟ್‌ಸ್ಥಲಾಭರಣದೊಳು
ವಸ್ತು ನಿರ್ದೇಶ ವಿಶ್ವೋತ್ಪತ್ತಿಕ್ರಮ ಸಮಾಪ್ತ !
ಮಂಗಲ ಮಹಾ! ಶ್ರೀ ಶ್ರೀ ಶ್ರೀ

೫. ದೇವದೇಹಿಗಳುದಯ ಸ್ಥಲ

ಇಂತು ನಿತ್ಯನಿರಂಜನ ನಿರ್ವಿಕಾರ ನಿರ್ವಿಕಲ್ಪ ಪರಬ್ರಹ್ಮ ಶಿವನ ಲೀಲಾಸೃಷ್ಟಿಯಿಂದಲಾದ ಮಾಯಾಮಯದ ದೇಹ – ದೇಹಿಗಳುದಯಸ್ಥಲ ||

ಗ್ರಂಥ |

ದೇವಸ್ಥಂ ಸಕಲಂ ಜ್ಞೇಯಂ ನಿಷ್ಕಲಂ ದೇಹವರ್ಜಿತಂ
ದೇಹಸ್ಯ ತತ್‌ಕಲೋಪೇತಂ | ಧಾತುಪಿಂಡಮಿತಿ ಸ್ಮೃತಂ ||  || ೧ ||

ನಿಷ್ಕಲಂ ದೇಹಿ ಇತ್ಯುಕ್ತಂ ದೇಹಮುಚ್ಯತೇ
ದೇಹಿ ದೇಹಸ್ಯ ಸಂಬಂಧಮೇವ ರೂಪ ಮಿತಿ ಸ್ಮೃತಂ ||  || ೨ ||

ತನ್ಮಾ ತ್ರಪಂಚಕಂಚೈವ ಭೂತಪಂಚಕಮೇವ ಚ
ಜ್ಞಾನೇಂದ್ರಿಯಂ ತಥಾಪ್ರೋಕ್ತಂ | ಕರ್ಮೇಂದ್ರಿಯಮತಃ ಪರಂ ||  || ೩ ||

ಅಂತಃಕರಣ ಸಂಯುಕ್ತಂ ಗುಣತ್ರಯಮನಂತರಂ
ಕಲಾಪಂಚಕಮಿತ್ಯುಕ್ತಂ ಅವ್ಯಕ್ತಂ ತತ್ವಸಂಯುತಂ ||  || ೪ ||

ಇತ್ಯೇವಾಷ್ಟಪುರೀಯೋಗಾದಾತ್ಮಾ ಬಹುವಿಧಂ ಯಯೌ
ಸೋsಯಮಾತ್ಮಾ, ಸ್ವಯಂ ಸಾಕ್ಷಾತ್ ಶಿವಸ್ಯಾಂಶೋsಪಿ ತತ್ತ್ವತಃ ||  || ೫ ||

ವ್ಯವಹಾರದಶಾಯುಕ್ತಃ ಸಂಸಾರೀವ ಪ್ರಕಾಶತೇ
ಸಂಸಾರೋsವಿದ್ಯಯಾs ಚಾಸ್ಯ ಸತ್ಯವತ್ ಪರಿಕಲ್ಪಿತಃ
ದೇಹೇಂದ್ರಿಯಾದಿ ಸಂಘಾತೇsಹಂಮಮಭ್ರಾಮತಿರೂಪತಃ ||  || ೬ ||

ವಚನ |

ಶುಕ್ಲಶೋಣಿತ ಪಿಂಡೈಕ್ಯನ ಚಿತ್ತವಾಯು ಆರುದಳ ಪದ್ಮದಲಿ ಮೊಲೆಮುಡಿ ಮೂಡಿದಡೆ ಅದ ಹೆಣ್ಣೆಂಬರು, ನಿಡುಗಡ್ಡ ಮೀಸೆಯಾಗಲು ಅದ ಗಂಡೆಂಬರು, ನಡುವೆ ಸುಳಿವ ಆತ್ಮನು ಹೆಣ್ಣಲ್ಲ ಗಂಡಲ್ಲ! ಇದರಂತುವ ತಿಳಿಯಲ್ಕೆ ಶ್ರುತಿತತಿಗೋಚರವೆಂದನಂಬಿಗರ ಚೌಡಯ್ಯಾ ||

ಮೊಲೆ ಮುಡಿ ಬಂದಡೆ ಹೆಣ್ಣೆಂಬರು, ಗಡ್ಡ ಮೀಸೆ ಬಂದಡೆ ಗಂಡೆಂಬರು, ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ, ಕಾಣಾ ರಾಮನಾಥಾ ||

ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶವೆಂಬಿವು ಪಂಚಮಹಾಭೂತಂಗಳು, ಪ್ರಾಣಾಪಾನ ವ್ಯಾನ ಉದಾನ ಸಮಾನವೆಂಬಿವು ಪಂಚಪ್ರಾಣ ವಾಯುಗಳು, ವಾಕು, ಪಾಣಿ, ಪಾದ, ಪಾಯು, ಗುಹ್ಯವೆಂಬಿವು ಪಂಚ ಕರ್ಮೇಂದ್ರಿಯಗಳು, ಶ್ರೋತ್ರ, ನೇತ್ರ, ಘ್ರಾಣ, ಜಿಹ್ವೆ, ತ್ವಕ್ಕೆಂಬಿವು ಪಂಚ ಬುದ್ಧೀಂದ್ರಿಯಗಳು, ಮನ, ಬುದ್ಧಿ, ಚಿತ್ತ, ಅಹಂಕಾರವೆಂಬಿವು ಅಂತಃಕರಣ ಚತುಷ್ಟ ಯಂಗಳು, ಇಂತು ಇಪ್ಪತ್ತು ನಾಲ್ಕು ತತ್ವಂಗಳು ಕೂಡಿ ಸ್ಥೂಲ ತನುವಾಯಿತ್ತು ಅದೆಂತೆಂಡಡೆ:

ಗ್ರಂಥ |

ಭೌತಿಕ ಪಂಚಭಿಃ ಪ್ರಾಣೈಶ್ಚ ಚತುರ್ದಶಭಿರಿಂದ್ರಿಯೈಃ
ಚತುರ್ವಿಂಶತಿ ದೇಹಾನಿ ಸಾಂಖ್ಯ ಶಾಸ್ತ್ರವಿದೋ ವಿದು || ಎಂದುದಾಗಿ
ಇಂತೀ ಇಪ್ಪತ್ತನಾಲ್ಕು ತಂತ್ರಗಳ ಚೇಷ್ಟಿಸುವಾತನೆ ಜೀವಾತ್ಮನು, ಅದೆಂತೆಂದಡೆ –
ಮನಶ್ಚಚತುರ್ವಿಂಶಕಂ ಚ ಜ್ಞಾತೃತ್ವಂ ಪಂಚವಿಂಶಕಂ
ಆತ್ಮಾ ಷಡ್ವಿಂಶಕಶ್ಚೈವ, ಪರಾತ್ರಾ ಸಪ್ತವಿಶಂಕಃ ||  || ೧ ||

ಚತುರ್ವಿಧಂ ತು ಮಾಯಾಂಶಂ ನಿರ್ಗುಣಃ ಪರಮೇಶ್ವರಃ
ಪಂಚವಿಂಶತಿ ತತ್ವಾನಿ ಮಾಯಾಕರ್ಮ ಗುಣಾಯತೇ ||  || ೨ ||

ವಿಷಯಾ ಇತಿ ಕಥ್ಯಂತೇ ಪಾಶಜೀವ – ನಿಬಂಧನಾತ್ || ಇಂತೆಂದುದಾಗಿ ಈ ಪಂಚವಿಂಶತಿ ತತ್ವಂಗಳುದಯವು ನಮ್ಮ ಸ್ಮರಣೆಯಿಂದಲಾಯಿತ್ತಾಗಿ ಇವರ ಗುಣಧರ್ಮ ಕರ್ಮ ನಿಮಗಿಲ್ಲ ಸಿಮ್ಮಲಿಗೆ ಚನ್ನರಾಮಾ ||

ದೇಹ – ದೇಹಿಗಳುದಯಸ್ಥಲ ಸಮಾಪ್ತ ||

೬. ಸಂಸಾರ ಸ್ಥಲ

ಇಂತು ಪಂಚವಿಶಂತಿ ತತ್ತ್ವಾತ್ಮ ಕವಪ್ಪ ದೇಹ – ದೇಹಿಗಳಿಂದಾಗ ಸಂಸಾರಸ್ಥಲ ||

ಮನೋವಿಲಾಸ ಸಂಸಾರೋ ಯತೀನಾಂಚ ಪ್ರಕೀರ್ತ್ಯತೇ
ಪುತ್ರದಾರಾದಿಸಂಸಾರಃ ಪುಂಸಾಂಸಂಮೂಢಚೇತಸಾಂ
ವಿದುಷಾಂ ಶಾಸ್ತ್ರ ಸಂಸಾರೋಯೋಗಾಬ್ಯಾಸಾದಿ ವಿಘ್ನಕೃತ್ ||  || ೧ ||

ವಚನ |

ಮೊಲೆ ಮುಡಿಯ ಮುದ್ದು ಮುಖದ ಅಸಿಯನಡುವಿನವಳ ಕಂಡಡೆ ನಾನು ಮನದೊಳಗಳು ಪದಿಪ್ಪೆನೇ ಅಯ್ಯಾ? ತನುವಿನ ಮೇಲೆ ಬ್ರಹ್ಮಚಾರಿತ್ವವಳವಟ್ಟಡೇನು ಮನದ ಮೇಲೆ ಬ್ರಹ್ಮಚಾರಿತ್ವವಳಡದನ್ನಕ್ಕ? ಸಕಳೇಶ್ವರದೇವ, ನೀನರ್ಧನಾರಿಯಲ್ಲವೇ? ||

ಜಡೆಯೆಡೆಯಾಯಿತ್ತು, ಬೋಳೆಡೆಯಾಯಿತ್ತು, ಊಚೆಡೆಯಾಯಿತ್ತು, ನಡೆಯ ಮುನ್ನಿನ, ನುಡಿಯ ಮುನ್ನಿನ ಒಡಲ ಗುಣಂಗಳಾರಿಗೂ ಬಿಡವು, ಎಡೆಯಣ ತಪವೇಕೆ? ಬಡ ಸಂಸಾರ ಸಾಲದೆ ಸೊಡ್ಡಳದೇವಾ ||

ಸತಿಯರ ನೋಡಿ ಸಂತೋಷವ ಮಾಡಿ, ಸುತರ ನೋಡಿ ಸುಮ್ಮಾನನವನೈದಿ, ಮತಿಯ ಹೆಚ್ಚುಗೆಯಿಂದ ಮೈಮರದೊರಗಿ ಸತಿಸುತರೆಂಬ ಸಂಸಾರದಲ್ಲಿ ಮತಿಗೆಟ್ಟು ಮರುಳಾದುದನೇನೆಂಬೆ ಎನ್ನ ಪರಮಗುರು ಶಾಂತಮಲ್ಲಿಕಾರ್ಜುನಾ ||

ಪಾಪಿ ನಾನೊಂದು ಪಾಪವ ಮಾಡಿದೆ, ಆ ಪಾಪವೆನಗೆ ಸತಿಸುತರಾಗಿ ಕಾಡುತ್ತಿದೆ. ಪಾಪವ ಬಿತ್ತಿ, ಕೋಪವ ಬೆಳೆದು ಈ ಪರಿಯಲ್ಲಿ ದಿನಂಗಳು ಹೋದವು, ಎನ್ನಗಿನ್ನೇವ ಪರಿಯು ಹೇಳಾ, ದೇವರಾಯ ಸೊಡ್ಡಾಳ ||

ಹಗಲು ಹಸಿವಿಂಗೆ ಕುದಿದು, ಇರುಳು ನಿದ್ರೆಗೆ ಕುದಿದು, ಉಳಿದಾದ ಹೊತ್ತೆಲ್ಲ ಅಶನ ವ್ಯಸನಕ್ಕೆ ಕುದಿದು, ಅಯ್ಯಾ, ನಿಮ್ಮ ನರಿಯದ ಪಾಪಿ, ನಾನಯ್ಯಾ| ಮಹಾಲಿಂಗ ಕಲ್ಲೇಶ್ವರ ದೇವಾ, ಅಗಸ ನೀರಡಿಸಿ ಸತ್ತಂತಾಯಿತೆನ್ನ ಸಂಸಾರ ||

ಸಂಸಾರವೆಂಬ ಹೆಣ ಬಿದ್ದಿರೆ, ತಿನಬಂದ ನಾಯ ಜಗಳವ ನೋಡಿರೆ! ನಾಯ ಜಗಳವ ನೋಡಿ ಹೆಣ ನಗುತ್ತಿದೆ ! ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿರೇ ||

ಇಂತು ಸಂಸಾರಸ್ಥಲ ಸಮಾಸ್ತ ||