೭. ಸಂಸಾರಯಾತನ ಸ್ಥಲ

ಇಂತಪ್ಪ ಸಂಸಾರದಲ್ಲಿ ಸಂಚರಿಸುತ್ತ ಆ ಸಂಸಾರದ ಸುಖವೆ ದುಃಖದ ಮೂಲವೆಂದರಿದು, ಆ ಸಂಸಾರದಲ್ಲಿ ದುಃಖ – ಚಿಂತೆ ತಲೆದೋರಿದಾತಂಗೆ ಸಂಸಾರಯಾತನ ಸ್ಥಲ ||

ವೃತ್ತ |

ಆನಂದಮೂಲ ಗುಣ – ಪಲ್ಲವ ತತ್ವಶಾಖಾ –
ವೇದಾಂತ ಪುಷ್ಪಫಲ – ಮೋಕ್ಷರಸಾದಿ – ಪೂರ್ಣ
ಚೇತೋವಿಹಂಗ, ಶಿವಕಲ್ಪತರುಂ ವಿಹಾಯ
ಸಂಸಾರ – ಶುಷ್ಕ – ವಿಟಪೇ ಕಿಮಿದಂ ಕರೋಷಿ ||  || ೧ ||

ಗ್ರಂಥ |

ಸಂಸಾರ – ದುಃಖ – ಕಾಂತಾರೇ ನಿಮಗ್ನಶ್ಚ ಮಹಾತಪೇ
ಚಕ್ರವದ್ಭ್ರಮತೇ ದೇವಿ, ಲಿಂಗಾರ್ಚನವಿವರ್ಜಿತಃ ||  || ೨ ||

ಸಂಸಾರ – ಸರ್ಪ – ದಷ್ಟಾನಾಂ ತ್ರಯಲೋಕ್ಯೇ ಸಚರಾಚರೇ |
ಚಂದ್ರಶೇಖರ ಪಾದಾಬ್ಚ – ಸ್ಮರಣಂ ಪರಮೌಷಧಂ ||  || ೩ ||

ವಚನ |

ಭವಬಂಧನ ಭವಪಾಶವಾದ ಕಾರಣವೇನಯ್ಯಾ? ಹಿಂದಣ ಜನ್ಮದಲ್ಲಿ ಲಿಂಗವ ಮರದೆ ನಾಗಿ ಹಿಂದಣ ಸಿರಿಯಲ್ಲಿ ಜಂಗಮವ ಮರದೆನಾಗಿ ಅರಿದೊಡೆ ಸಂಸಾರವ ಹೊದ್ದಲೀವೆನೇ ಕೂಡಲಸಂಗಮದೇವಾ ||

ಸಂಸಾರವೆಂಬ ಸರ್ಪ ಮುಟ್ಟಲು, ಪಂಚೇಂದ್ರಿಯ ವಿಷಯವೆಂಬ ವಿಷದಿಂದಲಾನು ಮುಂದುಗೆಟ್ಟೆನಯ್ಯಾ! ಆನು ಹೊರಳುತ್ತಿದ್ದೇನಯ್ಯಾ! ‘ಓಂ ನಮಃ ಶಿವಾಯ’ ಎಂಬ ಮಂತ್ರವ ಜಪಿಸುತ್ತಿದ್ದೇನಯ್ಯಾ ಕೂಡಲಸಂಗಮದೇವಾ ||

ಸಂಸಾರವೆಂಬ ರಾಹುವಿನಣಲೊಳಗಿದ್ದೇನಯ್ಯಾ ! ಆವಾಗ ನುಂಗಿಹಿತೆಂದರಿಯೆನಯ್ಯಾ ! ಆವಾಗ ಉಗುಳಿಹಿತೆಂದರಿಯೆನಯ್ಯಾ ! ಆವಾಗ ಮರಣವಾದೀತೆಂದರಿಯೆನಯ್ಯಾ ! ಇವರ ಬಾಯೊಳಗಣಿಂದ ಎನ್ನ ಕಡೆಗೆ ತೆಗೆದು ಕಾಯಯ್ಯಾ ! ಕಪಿಲಿಸಿದ್ಧ ಮಲ್ಲಿನಾಥಯ್ಯಾ ||

ಸಂಸಾರ – ಸಾಗರದ ತೆರೆಕೊಬ್ಬಿ ಮುಖದ ಮೇಲಲೆವುತ್ತಿದೆ, ಸಂಸಾರ ಸಾಗರ ಉರದುದ್ದವೆ, ಹೇಳಾ? ಸಂಸಾರ ಕೊರಳುದ್ದವೆ ಹೇಳಾ? ಶಿರದುದ್ಧವಾದ ಬಳಿಕ, ಏನ ಹೆಳುವೆನಯ್ಯಾ? ಅಯ್ಯಾ! ಅಯ್ಯಾ! ಎನ್ನ ಹುಯ್ಯಲ ಕೇಳಯ್ಯಾ ಕೂಡಲಸಂಗಮ ದೇವಯ್ಯಾ, ನಾ ನಿನ್ನೇವೆನಯ್ಯಾ ||

ಹಳ್ಳದೊಳಗೆ ಹುಳ್ಳಿ ಬರುತ್ತಿರಲು ನೊರೆತೊರೆಗಳು ತಾಗದಿಪ್ಪವೇ? ಸಂಸಾರ ಸಾಗರ ದೊಳಗೆ ಮುಳುಗಾಡುತಿಪ್ಪ ಪ್ರಾಣಿಗಳಿಗೆ ಸುಖ – ದುಃಖಗಳು ತಾಗದಿಪ್ಪವೆ? ಇದು ಕಾರಣ, ಮೂರ್ತಿಯಾದುದಕ್ಕೆ ಪ್ರಳಯವಾಯಿತ್ತು, ಕಾಣಾ, ಗುಹೇಶ್ವರಾ ||

ಶೂಲದ ಮೇಲಣ ಭೋಗವೇನಾದಡೇನೋ? ನಾನಾವರ್ಣದ ಸಂಸಾರ ಹಾವು ಹಾವಾಡಿಗನ ಸ್ನೇಹದಂತೆ, ತನ್ನಾತ್ಮ ತನಗೆ ಹಗೆಯಾದ ಬಳಿಕ ಬಿನ್ನಾಣವುಂಟೇ ಮಹಾದಾನಿ ಕೂಡಲಸಂಗಮದೇವಾ ||

ಎಂದೋ ಸಂಸಾರದಂದುಗ ಹಿಂಗುವುದು ಎಂದೋ! ಮನದಲ್ಲಿ ಪರಿಣಾಮವಹುದೆನಗೆಂದೋ! ಕೂಡಲಸಂಗಮದೇವಾ! ಇನ್ನೆಂದೋ? ಪರಮ ಸಂತೋಷದಲ್ಲಿಹುದೆನಗೆಂದೋ ||

ಒಂದು ಯೊನಿಯಲ್ಲಿ ಬಂದ ದುಃಖವ ಎಂದೆಂದಿಗೂ ನಾನು ಕಳೆಯಲರಿಯೆ! ಇನ್ನು ಎಂಭತ್ತುನಾಲ್ಕು ಲಕ್ಷವೆಂದಡೆ, ನಾನಿನ್ನೇವೆನಯ್ಯಾ! ಒಂದುವನರಿಯದ ಶಿಶು ನಾನು ! ನೊಂದೆನಯ್ಯಾ! ಬೆಂದೆನಯ್ಯಾ ‘ಎನ್ನ ಕಂದ, ಬಾ’ ಎಂದು ಎನ್ನ ಕಂಬನಿಯ ತೊಡದೆತ್ತಿ, ಆನಂದದಿಂದ ಕಂಡರೆ, ಉಳಿಯುಮೇಶ್ವರಾ ||

ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ ! ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯಾ! ಇಂದೆನ್ನ ದೇಹಕ್ಕೆ ಗ್ರಹಣವಾಯ್ತು! ಇನ್ನೆಂದಿಂಗೆ ಮೋಕ್ಷವಹುದು, ಕೂಡಲ ಸಂಗಮದೇವಾ ||

೧೦

ಅರಿಯದೆ ಜನನಿಯ ಜಠರದಲ್ಲಿ ಹುಟ್ಟಿದೆನಾಗಿ, ಬಾರದ ಭವಂಗಳಲ್ಲಿ ಬರಿಸಿದೆ ತಂದೆ! ಹುಟ್ಟಿದ್ದೆ ತಪ್ಪಾಯಿತ್ತೆ, ಎಲೆ ಲಿಂಗವೆ? ಮುನ್ನ ಹುಟ್ಟಿದುದಕ್ಕೆ ಕೃಪೆಮಾಡು, ಲಿಂಗವೇ! ಇನ್ನು ಹುಟ್ಟಿದೆನಾದಡೆ, ಕೂಡಲಸಂಗಮದೇವಾ ನಿಮ್ಮಾಣೆ ||

ಇಂತು ಸಂಸಾರಯಾತನ – ಸ್ಥಲ ಸಮಾಪ್ತ ||

೮. ದೇಹಮೋಹ ನಿರಸನ ಸ್ಥಲ

ಇಂತಪ್ಪ ಸಂಸಾರಯಾತನೆ ತಾನೇತರೀಂದಲಾಯಿತ್ತಯ್ಯಾ ಎಂದಡೆ, ದೇಹಮೋಹ ಮರವೆಯಿಂದಲಾಯಿತ್ತೆಂದರಿವಾತಂಗೆ ದೇಹಮೋಹ ನಿರಸನಸ್ಥಲ ||

ಗ್ರಂಥ |

ಮಾಂಸಾಸೃಕ್ ಪೂಯವಿಣ್ಮೂತ್ರ – ಸ್ನಾಯು ಮಜ್ಜಾಸ್ಥಿಸಂಹತೌ
ದೇಹೇ ಚೇತ್ ಪ್ರೀತಿಮಾನ್ ಮೂಢೋ ಭವಿತಾ ನರಕೇsಪಿಸಃ ||  || ೧ ||

ತಥಾ ಶರೀರಂ ನಿಸ್ಸಾರಂ ಯೋನಿಯಂತ್ರಪ್ರಪೀಡನಾತ್ |
ಸಂವರ್ತಿಸ್ಸಾಂಗ ಪ್ರತ್ಯಂಗಂ ಜರಾಯು ಪರಿವೇಷ್ಟಿತಂ ||  || ೨ ||

ತಸ್ಮದತ್ರ ಸುಖಂ ನೈವ ವಿದ್ಯತೇ ದೋಷಹೇತುಕೇ
ಮೋಕ್ಷೋsಸ್ತಿ ಸುಖಮತ್ಯರ್ಥಂ ತ ದ್ವಿವೇಕಾಧಿಭಿರ್ಭವೇತ್ ||  || ೩ ||

ವಚನ |

ಅಸ್ತಿ, ಚರ್ಮ, ಮಾಂಸ, ರಕ್ತ, ಖಂಡದ ಚೀಲ ಲೆಕ್ಕಕ್ಕೆ ಬದುಕುವಡೆ ಹುರುಳಿಲ್ಲದ ಸಂಸಾರ ಎಂದರಿಯದೆ ನಾನಿದನು ಹೊತ್ತು ತೊಳಲುವೆನಯ್ಯಾ, ಎಂದಿಂಗೆ ನಾನಿದನು ಸವೆಸಿ, ಬಳಲುವೆನಯ್ಯಾ, ಎಡಹಿ ಕೊಡನುದಕವನು ನಡು ನೀರೊಳು ಒಡೆವೆರಸಿದಂತೆ, ಎನ್ನೊಡ ಲೊಡೆದು ನಿಮ್ಮೊಳೆಂದು ನೆರೆವೆನುಳಿಯುಮೇಶ್ವರಾ ||

ಎಲುವಿನ ಹಂಜರ, ಕರುಳ ಜಾಳಿಗೆ, ಅಮೇಧ್ಯದ ಹುತ್ತ, ಮೂತ್ರದ ಬಾವಿ, ಶ್ಲೇಷ್ಮದ ಕೇಸರು, ಕೀವಿನ ಸೋನೆ, ನೆತ್ತರಮಡು, ನಾಡಿಗಳ ಸುತ್ತುವಳಿ, ಪ್ರಾಣ ನರವಿನ ನೇಣ ಜಂತ್ರ ಮಾಂಸದ ಘಟ್ಟಿಯ ತೆಪ್ಪ, ಕಿಸುಕಳದ ಹೇಸಿಗೆ, ಅತಿಹೇಯದ ಮಲಿನ, ಮಾಸಿಕೆಯ ರೋಮ, ತೊಗಲುವಾಕುಳ, ಕ್ರಿಮಿಯ ಸಂಕುಳ, ಬಲಿದ ಪರರೇತೋ ರಜಸ್ಸಿನಲ್ಲಿ ಜನಿತ, ಉತ್ಪತ್ತಿ ಸ್ಥಿತಿಲಯಕೆ ಬೀಜ, ಆಧಿವ್ಯಾಧಿಯ ತವರುಮನೆ, ವಿಷಯ – ಭವ – ದುಃಖದಾಗರ, ಮೋಹದ ಬಲೆ, ಈ ಹೀಗಾಗಿಯೂ ತೋರಿ ಕೆಡುವ ತನು! ಇದ ನೀನೆಂದು, ನಿನ್ನದೆಂದು ಮಾಡಬಾರದ ಪಾಪಂಗಳಂ ಮಾಡಿ, ನಿಚ್ಚಕ್ಕೆ ಬಾರದ ಭವಂಗಳಲ್ಲಿ ಬಂದು ದೇಹದಿಚ್ಛೆಗೆ ಸಂದು, ಹೂಸಿ, ಮೆತ್ತ, ಹೊದಿಸಿಕೊಂಡು, ಈ ದೇಹಂಗೊಂಡು ಮರುಗುವೆ! ಅಘೋರ ನರಕದಲ್ಲಿಕ್ಕುವಾಗ ಅಡ್ಡ ಬಪ್ಪವರಾರು? ಹೇಳೆಲೆ ಮರುಳೇ! ಅಹಂ ಮಮತೆಯ ಮರದು, ದೇಹದಿಚ್ಛೆಯ ಬಿಟ್ಟು ಸೋsಹಂ ಬ್ರಹ್ಮಾಸ್ಮಿ ಎಂದು, ಕೇಡಿಲ್ಲದ ಸುಖವ ಮಾಡಿಕೋ ಮರುಳೆ! ಬೇಡ ಮೋಹ! ಕೆಡುವೆ! ನಿನ್ನಲ್ಲಿ ನಿನ್ನ ತಿಳಿದು ನೋಡಾ ಸಿಮ್ಮಲಿಗೆಯ ಚೆನ್ನರಾಮನಲ್ಲಿ ||

ಅಮೇಧ್ಯದ ಹಡಿಕೆ, ಮೂತ್ರದ ಕುಡಿಕೆ, ಎಲುವಿನ ತಡಿಕೆ, ಕೀವಿನ ಹಡಿಕೆ, ಸುಡಲೀ ದೇಹವ! ಒಡಲುವಿಡಿದು ಕೆಡದಿರು ಚೆನ್ನಮಲ್ಲಿಕಾರ್ಜುನನರಿಯದ ಮರುಳೇ ||

ದೊಡ್ಡವೆರಡು ಕಂಬದ ಮಧ್ಯದಲ್ಲಿ ಚಿಕ್ಕವೆರಡು ಕಂಬ, ಇಂತೀ ನಾಲ್ಕರ ಮಧ್ಯದ ಮನೆ ಅಸ್ತಿಗಳು, ನರದ ಕಟ್ಟು, ಮಜ್ಜೆಯ ಸಾರ, ಮಾಂಸದ ಗೋಡೆ, ಚರ್ಮದ ಹೊದಿಕೆ, ಶೋಣಿತನ ಸಾರಣಿ; ಶುಕ್ಲದ ಕುಂಭದಿಂದಿಪ್ಪುದೊಂದು ಚಿತ್ರದ ಮನೆ ನೋಡಾ! ಆ ಮನೆಗೆ ಒಪ್ಪದ ಬಾಗಿಲು, ಕೀಳುಮೇಲೆಂಬೆರಡು ತಾರುಗದ ಇಡಪಿಂಗಳವೆಂಬೆರಡು ಗುಳಿಯ ಬಹಳದ ಮೃದುಕಠಿಣದ ಭೇದವ ನೋಡಾ! ಇತ್ತಲೆಯ ಮೇಲಿಪ್ಪ ಸುಷುಮ್ನಾ ನಾಳದ ಭೇದವ ಮುಚ್ಚಿ, ದಿವಾರಾತ್ರೆಯೆಂಬ ಅರುಹುಮರಹಿನ ಉಭಯವ ಕದಗೆತ್ತು ಮನೆ ನಷ್ಟವಾಗಿ ಮನೆಗೆ ಮರಳುವುದು ತಪ್ಪದು, ಮನೆಗೆ ಮರಳದಂತೆ ಮಾಡು, ಕಾಮ ಭೀಮ ಜೀವ – ಧನದೊಡೆಯ ನೀನೆ ಬಲ್ಲೆ ||

ಸರ್ಪ ಸಂಸಾರದೊಡನಾಡಿ ಕಟ್ಟುವಡೆಯಿತ್ತು ನೋಡಾ | ಮನದ ತಮಂಧ ಬಿಡದು, ಮನದ ಕಪಟ ಬಿಡದು, ಸಟೆಯೊಡನೆ ದಿಟವಾಡಿ ಬಯಲು ಬಡಿವಡೆಯಿತ್ತು ನೋಡಾ ! ಕಾಯದ ಸಂಗದ ಜೀವವುಳ್ಳೆನ್ನಕ್ಕರ ಎಂದು ಭವಹಿಂಗುವುದು ಗುಹೇಶ್ವರಾ ||

ಅಸ್ತಿಭಾತಿಯೆಂಬ ಭಿತ್ತಿಯಮೇಲೆ ನಮರೂಪೆಂಬ ಚಿತ್ರವ ಬರೆಯಿತ್ತು, ಇಲ್ಲದ ಭಿತ್ತಿಯ ಮೇಲೆ, ಉಂಟೆಂಬ ಚಿತ್ರದಂತಿರ್ದ್ದಿತ್ತು ಅದೆಂತೆಂದಡೆ : ಅಸ್ತಿಭಾತಿಪ್ರಿಯಂ ರೂಪಂ ನಾಮಚೇತ್ಯರ್ಥ ಪಂಚಕಂ ಆದ್ಯತ್ರಯಂ ಬ್ರಹ್ಮರೂಪಂ ಮಾಯಾರೂಪಂ ತತೋದ್ವಯಂ || ಎಂದುದಾಗಿ ಇದೇ ಎನಗೆ ಮಾಯೆಯಾಗಿ ಕಾಡಿತ್ತು ಕೂಡಲಸಂಗಮದೇವಾ ||

ಕಾನನ ಮಂದಿರದಡವಿಯೊಳಗೆ ಶುಕ್ಲ ಶೋಣಿತವೆಂಬ ಮಡಕೆಯ ಮಾಡಿ ಮೂತ್ರ ಶ್ಲೇಷ್ಮ ಅಮೇಧ್ಯವೆಂಬ ಪಾಕ ದ್ರವ್ಯಂಗಳನಾ ಮಡಕೆಯಲ್ಲಿ ನಿಶ್ಚಯಿಸಿ ಆ ಮಡಕೆಯನೊಡೆ ದಾತ ಬಸವಣ್ಣ ಕಾಣಾ ರೇಕಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿದೆನು ||

ಇಂತು ದೇಹಮೋಹನಿರಸನಸ್ಥಲ ಸಮಾಪ್ತ.

೯. ಮಾಯಾವಿಲಾಸ ನಿರಸನ ಸ್ಥಲ

ಇಂತಪ್ಪದೇಹ ಮೋಹದ ಮರವೆ ತಾನೇತರಿಂದಲಾಯಿತ್ತಯ್ಯಾ ಎಂದಡೆ, ಮಾಯಾ ವಿಲಾಸದಿಂದಲಾಯಿತ್ತೆಂದರಿದಾತಂಗೆ ಮಾಯಾವಿಲಾಸ ನಿರಸನಸ್ಥಲ ||

ವೃತ್ತ |

ಹರಿಹರ ಹಿರಣ್ಯಗರ್ಭಾ
ಶಿವಶಿವ ಮಾಯಾಪದಂ ಸ್ವತೋ ಯಾತಾಃ

ಸ್ವಯಮಸ್ಯಹಮಿತಿ ವಕ್ತಾ
ಕಿಮೇಕಮಖಿಲಂ ಮಹೇಶ ತವಮಾಯಾ ||  || ೧ ||

ವಚನ |

ಬ್ರಹ್ಮ ಘನವೆಂಬೆನೇ? ಬ್ರಹ್ಮನ ನುಂಗಿತ್ತು ಮಾಯೆ, ವಿಷ್ಣು ಘನವೆಂಬೆನೇ? ವಿಷ್ಣುವಿನ ನುಂಗಿತ್ತು ಮಾಯೆ, ರುದ್ರ ಘನವೆಂಬೆನೆ? ರುದ್ರನ ನುಂಗಿತ್ತು ಮಾಯೆ, ತಾ ಘನವೆಂಬೆನೇ? ತನ್ನ ನುಂಗಿತ್ತು ಮಾಯೆ, ಸರ್ವವೂ ನಿನ್ನ ಮಾಯೆ, ಒಬ್ಬರನೊಳಕೊಂಡಿತ್ತೇ ಹೇಳಾ ಗುಹೇಶ್ವರಾ ||

ಹರಿಯ ನುಂಗಿತ್ತು ಮಾಯೆ, ಅಜನ ನುಂಗಿತ್ತು ಮಾಯೆ, ಇಂದ್ರನ ನುಂಗಿತ್ತು ಮಾಯೆ, ಚಂದ್ರನ ನುಂಗಿತ್ತು ಮಾಯೆ, ಬಲ್ಲೆನೆಂಬ ಬಲುಗೈಯರ ನುಂಗಿತ್ತು ಮಾಯೆ, ಅರಿಯೆನೆಂಬ ಅಜ್ಞಾನಿಗಳ ನುಂಗಿತ್ತು ಮಾಯೆ, ಈರೇಳುಭುವನವನಾರಡಿಗೊಂಡಿತ್ತು ಮಾಯೆ, ಚೆನ್ನಮಲ್ಲಿಕಾರ್ಜುನಯ್ಯಾ, ಎನ್ನ ಮಾಯೆಯ ಮಾಣಿಸಾ ಕರುಣಿ ||

ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ, ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ, ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ, ನೆನಹಿಂಗೆ ಅರಿವಾಗಿ ಕಾಡಿತ್ತು ಮಾಯೆ, ಜಗದ ಜಂಗುಳಿಗಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ, ಚೆನ್ನಮಲ್ಲಿಕಾರ್ಜುನ ನೀನೊಡ್ಡಿದ ಮಾಯೆಯನಾರೂ ಗೆಲಬಾರದು ||

ಯತಿಗಳ ವ್ರತಿಗಳ ಧೃತಿಗೆಡಿಸಿತ್ತು ಮಾಯೆ, ಕಲಿಗಳ ಛಲಿಗಳ ಬಲುಹ ಮುರಿಯಿತ್ತು ಮಾಯೆ, ಹರಿಬ್ರಹ್ಮರುದ್ರಾದಿಗಳೆಲ್ಲರ ತರಕಟ ಕಾಡಿತ್ತು ಮಾಯೆ, ಹೋ ! ಹೋ ! ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ ಮಾಯಾ ಮರ್ಕಟ ವಿಧಿಯೇ ||

ಒಡಲುಗೊಂಡ ಮಾನವರೆಲ್ಲರು ನೀವು ಕೇಳಿರೇ? ಬಿಡದೆ ಕಾಡುವುದು ವಿಧಿ ಮೂರು ಲೋಕವನೆಲ್ಲ, ಒಡಲೊಡವೆಯನೊಲ್ಲೆನೆಂಬವರುಗಳಿಗೆ ತೊಡರನಿಕ್ಕಿತ್ತು ಮಾಯೆ, ಆರು ದರ್ಶನಕ್ಕೆಲ್ಲ, ಮಡದಿಮಕ್ಕಳನೊಲ್ಲೆನೆಂಬ ಹಿರಿಯರಿಗೆಲ್ಲ ತೊಡರನಿಕ್ಕಿತ್ತು ಮಾಯೆ, ಮೃಡ ಮೊದಲಾದ ಹರಿವಿರಂಚಿಗಳೆಲ್ಲರನು ಕೋಡಗದಾಟವನಾಡಿಸುವಂತೆ ಆಡಿಸಿತ್ತು, ಗುಹೇಶ್ವರಾ ನಿಮ್ಮ ಮಾಯೆ ||

ಅಡವಿಯ ಹೊಗಿಸಿತ್ತು; ಹುಡುಕು ನೀರಲದ್ದಿತ್ತು, ಜಡೆಗಟ್ಟಿ ಭಸ್ಮವ ತೊಡಿಸಿತ್ತು ; ಉಡೆ ಉಚ್ಚಗೊಳಿಸಿತ್ತು, ಹಿಡಿದೊತ್ತಿ ಕೇಶವ ಕೀಳಿಸಿತ್ತು ; ಹುಡಿಹುಚ್ಚುಗೊಳಿಸಿತ್ತು ಊರೊಳಗೆಲ್ಲ ಈ ಬೆಡಗಿನ ಮಾಯೆಯ ಬಡಿಹಾರಿ ಸಮಯಿಗಳ ನುಡಿಗೆ ನಾಚುವೆನೆಂದ ನಂಬಿಗಚೌಡಯ್ಯ ||

ದೇವರೆಲ್ಲ ಹೊಡೆತಂದು ದೇವಿಯರೊಳಗೆ ಕೂಡಿತ್ತು, ಹರಹರಾ ಮಾಯೆಯಿದ್ದೆಡೆಯ ನೋಡಾ, ಶಿವಾ ಶಿವಾ ಮಾಯೆಯಿದ್ದೆಡೆಯ ನೋಡಾ, ಎರಡೆಂಭತ್ತೇಳು ಕೋಟಿ ಪ್ರಮಥ ಗಣಂಗಳು, ಅಂಗಾಲ ಕಣ್ಣವರು, ಮೈಯೆಲ್ಲ ಕಣ್ಣವರು, ನಂದಿವಾಹನ ರುದ್ರರು, ಇವರೆಲ್ಲರೂ ಮಾಯೆಯ ಕಾಲುಗಾಹಿನ ನರಮಾಲೆ ಕಾಣಾ ಗುಹೇಶ್ವರಾ ||

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ, ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ, ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ, ಇದಾವವ ಪರಿಯಲು ಕಾಡಿತ್ತು ಮಾಯೆ, ಈ ಮಾಯೆಯ ಕಳೆವರೆ ಎನ್ನಳವಲ್ಲ ನೀವೆ ಬಲ್ಲಿರಿ ಕೂಡಲಸಂಗಮದೇವಾ ||

ದಿಟಪುಟ ಭಕುತಿ ಸಂಪುಟ ನೆಲೆಗೊಳ್ಳದಾಗಿ ಟೀವಕ ಟಿಂಬಕನಾಡಿಸುತ್ತಿದ್ದಿತಯ್ಯಾ ನಿನ್ನ ಮಾಯೆ ಕೂಡಲಸಂಗಮದೇವಯ್ಯ, ಹೊನ್ನು ಹೆಣ್ಣು ಮಣ್ಣು ತೋರಿ ಟೀವಕ ಟಿಂಬಕನಾಡಿಸುತ್ತಿದ್ದಿತಯ್ಯ ನಿನ್ನ ಮಾಯೆ ||

೧೦

ಬಿಟ್ಟೇನೆಂದಡೆ ಬಿಡದೀ ಮಾಯೆ, ಬಿಡದಿದ್ದಡೆ ಬೆಂಬತ್ತಿತ್ತು ಮಾಯೆ, ಯೋಗಿಗೆ ಯೋಗಿಣಿಯಾಯಿತ್ತು ಮಾಯೆ, ಶ್ರವಣಂಗೆ ಕಂತಿಣಿಯಾಯಿತ್ತು ಮಾಯೆ, ಯತಿಗೆ ಪರಾಕಿ ಯಾಯಿತ್ತು ಮಾಯೆ, ನಿನ್ನ ಮಾಯೆಗೆ ನಾನಂಜುವಳಲ್ಲಾ, ಚನ್ನಮಲ್ಲಿಕಾರ್ಜುನದೇವಾ, ನಿಮ್ಮಾಣೆ ||

ಇಂತು ಮಾಯಾವಿಲಾಸ ನಿರಸನಸ್ಥಲ ಸಮಾಪ್ತ ||

೧೦. ಆಶಾಮಾಯಿಕ ನಿರಸನ ಸ್ಥಲ

ಇಂತಪ್ಪ ಮಾಯಾವಿಲಾಸ ತಾನೇತರಿಂದಲಾಯಿತ್ತಯ್ಯಾ ಎಂದಡೆ ಮನದ ಆಶಾಮಾಯಿ ಕಂದಿಂದಲಾಯಿತ್ತೆಂದರಿದಾತಂಗೆ ಆಶಾಮಾಯಿಕ ನಿರಸನಸ್ಥಲ ||

ಗ್ರಂಥ |

ಆಶಾಪಾಶೈರ್ಗತೀ ಭಧ್ವಾ ಗೃಹಶಾಖಾವಲಂಬನಾಃ
ಪುತ್ರದಾರಾದ್ವಯ ಶ್ವಾನೈಃ ಖಾದ್ಯಂತೇ ಖಲ್ವಹರ್ನಿಶಂ ||  || ೧ ||

ಆಶಯಾ ಬದ್ಧ್ಯತೇ ಲೋಕಃ ಕರ್ಮಣಾಂಬಹುಚಿಂತಯಾ
ಆಯುಃಕ್ಷೀಣಂ ನ ಜಾನಾತಿ ವೇಣುಸೂತ್ರ ಮಿವಸ್ವಯಂ ||  || ೨ ||

ಆಶಾನಾಮ ಮನುಷ್ಯಾಣಾಂ ಕಾಚಿದಾಶ್ಚರ್ಯ ಶೃಂಖಲಾ
ತಯಾ ಬದ್ಧಾಃ ಪ್ರಧಾವಂತಿ ಮುಕ್ತಾಸ್ತಿಷ್ಠಂತಿ ಕುತ್ರಚಿತ್ ||  || ೩ ||

ವಚನ |

ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ, ತನ್ನ ನೂಲು ತನ್ನನೇ ಸುತ್ತಿ ಸಾವಂತೆ ಮನಬಂದುದನು ಬಯಸಿ ಬೇವುತ್ತಿದ್ದೇನಯ್ಯಾ, ಎನ್ನ ಮನದ ದುರಾಶೆಯ ಮಾಣಿಸಿ ನಿಮ್ಮತ್ತ ತೋರಾ ಚನ್ನಮಲ್ಲಿಕಾರ್ಜುನಾ ||

ಹೊನ್ನು ಮಾಯೆಯೆಂಬರು ; ಹೊನ್ನು ಮಾಯೆಯಲ್ಲ, ಹೆಣ್ಣು ಮಾಯೆಯೆಂಬರು, ಹೆಣ್ಣು ಮಾಯೆಯಲ್ಲ, ಮಣ್ಣು ಮಾಯೆಯೆಂಬರು; ಮಣ್ಣು ಮಾಯೆಯಲ್ಲ, ಮನದ ಮುಂದಣ ಆಸೆಯೇ ಮಾಯೆ ಕಾಣಾ, ಗುಹೇಶ್ವರಾ ||

ಈ ಆಸೆಯೆಂಬವಳು ಆರನಾದಡೆಯೂ ತನ್ನತ್ತಲೆಳೆವಳು, ಈ ಆಸೆಯೆಂಬವಳು ಅವರಿವರೆನ್ನದೆ ಆರನಾದಡೆಯೂ ಕೊಲ್ಲಲಿಕ್ಕೆ ಬಗೆವಳು, ಈ ಆಸೆಯೆಂಬವಳಿಂದವೆ ನಿಮ್ಮಡೆ ಗಾಣದಿಪ್ಪೆನು, ಈ ಆಸೆಯೆಂಬವಳನೆಂದಿಗೆ ನೀಗಿ ಎಂದು ನಿಮ್ಮನೊಡಗೂಡಿ ಬೇರಾಗ ದಿಪ್ಪೆನೋ? ಎನ್ನ ಕಪಿಲಸಿದ್ಧ ಮಲ್ಲಿಕಾರ್ಜುನಾ ||

ಧರೆದೆಸೆವಳಯವೆಲ್ಲ ತನಗಾದೊಡಂ ನಿಲ್ಲಳು, ಎನಿತು ತ್ರಿಭುವನ ರಾಜ್ಯಪದಂಗಳು ತನಗಾದೊಡಂ ನಿಲ್ಲಳು, ಅನಿತರೊಳು ತೃಪ್ತಿವಡೆಯಳು, ಈ ಆಸೆಯೆಂಬವಳಿಂದಲೆ ನಿಮ್ಮೆಡೆಗಾಣದಿಪ್ಪೆನು ಈ ಆಸೆಯೆಂಬ ಪಾತಕಿಯನೆಂದಿಂಗೆ ನೀಗಿ, ಎಂದು ನಿಮ್ಮ ನೊಡಗೂಡಿ ಬೇರಾಗದಿಪ್ಪೆನೋ, ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ ||

ಎನಿತಾದಡನಿತರಲ್ಲಿಯೂ ನಿಲ್ಲಳು, ಮತ್ತಂ ಪರಸ್ಪರ ಪದವಿಗಳಿಗಾಸೆಗೆಯ್ವತಿಪ್ಪಳು, ಈ ಆಸೆಯೆಂಬವಳಿಂದಲೆ ನಿಮ್ಮೆಡೆಗಾಣದಿಪ್ಪೆನು, ಈ ಆಸೆಯೆಂಬ ಪಾತಕಿಯನೆಂದಿಂಗೆ ನೀಗಿ ಎಂದು ನಿಮ್ಮ ನೊಡಗೂಡಿ ಬೇರಾಗದಿಪ್ಪೆನೋ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಾ ||

ಈ ಆಸೆಯೆಂಬವಳು ಒಂದು ನಿಮಿಷಂ ಬರಿದಿರಲೀಯಳು, ಆಗಳಾದಡೇನಾದಡೆಣಿಸು ತಿರ್ಪಳು, ಆ ಆಸೆಯೆಂಬವಳು, ಈ ಆಸೆಯೆಂಬ ಪಾತಕಿಯನೆಂದಿಂಗೆ ನೀಗಿ, ಎಂದು ನಿಮ್ಮನೊಡಗೂಡಿ ಬೇರಾಗದಿಪ್ಪೆನೋ, ಹೇಳಾ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಾ ||

ಈ ಆಸೆಯೆಂಬವಳು ವಾಹಿಗೊಟ್ಟಿಗೆಗಳಂ ಕಟ್ಟಿಸಿ ನದಿಯೊಳಗಂ ಪುಗಿಸಿ ಪರದೇಶಕಂ ನೂಂಕುವಳು, ಈ ಆಸೆಯೆಂಬ ಪಾತಕಿಯಿಂದವೆ ನಿಮ್ಮೆಡೆಗಾಣದಿಪ್ಪೆನು, ಈ ಆಸೆಯೆಂಬ ಪಾತಕಿಯನೆಂದಿಂಗೆ ನೀಗಿ, ಎಂದು ನಿಮ್ಮ ನೋಡಗೂಡಿ ಬೇರಾಗದಿಪ್ಪೆನೋ ಹೇಳಾ ಕಪಿಲಸಿದ್ಧ ಮಲ್ಲಿಕಾರ್ಜುನಾ ||

ಪರರಾಸೆಯೆಂಬ ಜ್ವರ ಹತ್ತಿತ್ತಾಗಿ ಕಳವಳಿಸಿ ನುಡಿವೆನಯ್ಯಾ ; ಹೊನ್ನು, ಹೆಣ್ಣು, ಮಣ್ಣು ಬಯಸಿ ವಿಕಳಗೊಂಡಂತೆ ಪ್ರಳಾಪಿಸಿ ವಿಕಳಂಗೊಂಡು ನುಡಿಯುತಿರ್ಪೆನಯ್ಯಾ, ಈ ಕಳವಳ ನುಳಿದು, ಸುಭಾಷೆಯನಿತ್ತು ನಿಮ್ಮ ಕರುಣಾಮೃತವೆಂಬ ಕಷಾಯವನೆರದು ಪರರಾಸೆಯೆಂಬ ಜ್ವರವ ಮಾಣಿಸು, ಬಸವಪ್ರಿಯ ಕೂಡಲಚನ್ನಸಂಗಮದೇವಾ ||

ಆದಿಮಧ್ಯ ಅವಸಾನದಲ್ಲಿ, ಎನ್ನಾಸೆಯೇ ಗ್ರಹಿಸುತ್ತಿದೆ, ಶಿವಶಿವಾ, ಆಸೆಯಿಂದವೆ ಘಾಸಿಯಾಗುತ್ತಿದೆನೆ ಶಿವಶಿವಾ, ಈ ಹೊನ್ನು ಹೆಣ್ಣು ಮಣ್ಣಿನಾಸೆಯ ಘಾಸಿಮಾಡುತ್ತಿದ್ದುದು ಶಿವಶಿವಾ ! ಈ ಆಸೆಯ ಕೆಡಿಸಿ ನಿಮ್ಮ ಶ್ರೀಪಾದವ ನಿವಾಸಗಿರಿಸಯ್ಯಾ, ಎನ್ನ ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ ನಿಮ್ಮ ಧರ್ಮ ||

ಇಂತು ಆಶಾಮಾಯಿಕ ನಿರಸನಸ್ಥಲ ಸಮಾಪ್ತ ||

೧೧. ಪಾಶತ್ರಯ ನಿರಸನ ಸ್ಥಲ

ಇಂತು ಆಶಾಮಾಯಿಕ ತಾನೇತರಿಂದಾಯಿತ್ತೆಂದಡೆ ಪಾಶತ್ರಯದಿಂದಲಾಯಿತ್ತೆಂದರಿದಾತಂಗೆ ಪಾಶತ್ರಯ ನಿರಸನಸ್ಥಲ ||

ಗ್ರಂಥ |

ಅರ್ಥಾನಾಮರ್ಜ ದುಃಖಂ ಅರ್ಜಿತಾನಾಂ ಚ ರಕ್ಷಣೇ
ಆಯೇ ದುಃಖಂ, ವ್ಯಯೇ ದುಃಖಂ ಧಿಗರ್ಥ ದುಃಖಭಾಜನಂ ||  || ೧ ||

ವಿತ್ತಂ ತು ರಾಜವಿತ್ತಂ ಕಾಮಿನೀ ಕಾಮುಕಾವಶಾ
ಪೃಥಿವೀ ವೀರಭೋಜ್ಯಾಚ ಸ್ವಧನಂ ಜ್ಞಾನಮೇವ ಚ ||  || ೨ ||

ಮಾತರ ಪಿತರಶ್ಚೈವ ಸ್ವಪತ್ನೀ – ಬಾಲಕಾಸ್ತಥಾ
ಹೇಮಭೂಮೀವಿನಾಶಾಯ ನ ದುಃಖಂ ಬ್ರಹ್ಮಚಾರಿಣಾಂ ||  || ೩ ||

ವಚನ |

ಬ್ರಹ್ಮಪಾಶ ವಿಷ್ಣು ಮಾಯೆಯೆಂಬ ಬಲೆಯ ಬೀಸಿ ಹೊನ್ನು ಹೆಣ್ಣು ಮಣ್ಣ ತೋರಿ ಮುಕ್ಕಣ್ಣ ವ್ಯಾಧನು ಬೇಂಟೆಯನಾಡಿದನು, ಆಸೆಯೆಂಬ ಕುಟುಕನಿಕ್ಕಿ ಹೇಸದೆ ಕೊಂದೆಯಲ್ಲಾ, ಗುಹೇಶ್ವರಾ ||

ತನುವಿಕಾರ, ಮನವಿಕಾರ, ಜನನ ಸ್ಥಿತಿ ಮರಣಕಾರಣ! ಹೊನ್ನ ತೋರಿದೆ ಜಗದ ಕಣ್ಣ ಮೊದಲಿಗೆ! ಹೆಣ್ಣ ಸುಳಿಸಿದೆ ಜಗದ ಕಣ್ಣ ಮೊದಲಿಗೆ! ಮಣ್ಣ ಹರಹಿದೆ ಜಗದ ಕಣ್ಣ ಮೊದಲಿಗೆ! ತನುವ ತಪ್ಪಿಸಿ, ಜಗವ ಸಂಸಾರಕೊಪ್ಪಿಸಿ ನುಣ್ಣನೆ ಹೋದನುಪಾಯದಿ ಸೊಡ್ಡಳಾ ||

ನೆನೆವ ಮನಕ್ಕೆ ಮಣ್ಣನೆ ತೋರಿದೆ, ನೋಡುವ ಕಣ್ಣಿಗೆ ಹೆಣ್ಣನೆ ತೋರಿದೆ, ಪೂಜಿಸುವ ಕೈಗೆ ಹೊನ್ನನೆ ತೋರಿದೆ, ಇಂತೀ ತ್ರಿವಿಧವನೆ ತೋರಿ ಕೊಟ್ಟು ಮರಸಿದಿರಯ್ಯಾ ! ಅಮರ ಗುಂಡದ ಮಲ್ಲಿಕಾರ್ಜುನಯ್ಯಾ, ನೀ ಮಾಡಿದ ಬಿನ್ನಣಕಾನು ಬೆರಗಾದೆನು ||

ಅಣ್ಣನೆಂಬಣ್ಣಗಳನಣ್ಣಿಸುವುದು ಹೊನ್ನು, ಅಣ್ಣನೆಂಬಣ್ಣಗಳನಣ್ಣಿಸುವುದು ಹೆಣ್ಣು, ಅಣ್ಣನೆಂಬಣ್ಣಗಳನಣ್ಣಿಸುವುದು ಮಣ್ಣು, ಹೊನ್ನ ಕಂಡ ಬಳಿಕ ಅಣ್ಣದಣ್ಣಗಳುಂಟೇ? ಹೆಣ್ಣ ಕಂಡ ಬಳಿಕ ಅಣ್ಣದಣ್ಣಗಳುಂಟೇ? ಹೆಣ್ಣು ಹಿರಣ್ಯ ಭೂಮಿಯೆಂಬ ಈ ಮಣ್ಣ ಕಣ್ಣಲಿ ಹೊಯ್ದು ಹೋದೆಯಲ್ಲಾ ಸೊಡ್ಡಳ ಗರಳಗಳಧರಾ ||

ತ್ರಿಭುವನವೆಂಬ ಪಂಜರದೊಳಗೆ ಸಂಸಾರಚಕ್ರದಲ್ಲಿ ಹೊನ್ನು ಪ್ರಾಣವೆ ಪ್ರಾಣವಾಗಿ, ಹೆಣ್ಣು ಪ್ರಾಣವೆ ಪ್ರಾಣವಾಗಿ, ಮಣ್ಣು ಪ್ರಾಣವೇ ಪ್ರಾಣವಾಗಿ, ಈ ಸುಖದ ಸೊಕ್ಕಿನಲ್ಲಿ ಈಸಿಯಾಡುತ್ತಿದ್ದಿರಲ್ಲಾ, ಬಹುವಿಧದ ವ್ಯವಹಾರ ವೇಧಿಸಿದವರು ಗುಹೇಶ್ವರಾ ||

ಊರ ಸೀರೆಗೆ ಅಸಗ ಬಡಿವಡೆದಂತೆ ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು ಎಂದು ಮರುಳಾಗಿ, ನಿಮ್ಮ ನರಿಯದೆ, ಕರ್ಮದಿಂದ ಕೆಮ್ಮನೆ ಕೆಟ್ಟನು ಕೂಡಲಸಂಗಮದೇವಾ ||

ಹಿಂದಾದ ದುಃಖವನು, ಮುಂದಾದ ಸುಖವನು, ಮರದೆಯಲ್ಲಾ ಯಜಮಾನನಾಗಿ ನೀ ಮರೆದ ಕಾರಣ, ಬಂಧನಪ್ರಾಪ್ತಿಯಾಯಿತ್ತಲ್ಲಾ, ಹೇಮಭೂಮಿ ಕಾಮಿನಿಯರೆಂಬ ಸಂಕೋಲೆಯಲ್ಲಿ ಬಂಧಿಸಿದರಲ್ಲಾ, ಪರಿಷಡ್ವರ್ಗವೆಂಬ ದಂಡದಲ್ಲಿ ದಂಡಿಸಿದರಲ್ಲಾ ಇನ್ನು ಮರೆಯದಿರು, ಉರಿಲಿಂಗಪೆದ್ದಿಪ್ರಿಯ ವೀಶ್ವೇಶ್ವರನ ||

ಮುಗಿಲನೆಚ್ಚಕೋಲು ಮುಗಿಲ ಮುಟ್ಟದೆ ಮರಳಿ ಬಿದ್ದಂತೆ ಏರಿ ಜಾರಿ ಬೀಳುವ ಪ್ರಾಣಿಗಳತ್ತಲಾರು ಬಲ್ಲರೋ? ಹೊನ್ನು ಹೆಣ್ಣು ಮಣ್ಣೆಂಬ ಬಲೆಯಲ್ಲಿ ಬಿದ್ದವರತ್ತಲಾರು ಬಲ್ಲರೋ ಗುಹೇಶ್ವರಾ, ನಿಮ್ಮ ಬಂದಿವಿಡಿದು ಸಯಬಂದಿಯಾದೆನು ||

ಇಂತು ಪಾಶತ್ರಯ ನಿರಸನಸ್ಥಲ ಸಮಾಪ್ತ ||