೨೯. ಆಚಾರ ಲಿಂಗಾರ್ಪಣ ಸ್ಥಲ

ಇಂತಪ್ಪ ಆಚಾರಲಿಂಗಾರ್ಚನೆಯಲ್ಲಿ ಸದಾನಂದನಾದ ಬ್ರಹ್ಮಜ್ಞಾನಿಯಪ್ಪ ಸಹಜ ಸದ್ಭಕ್ತನ ಆಚಾರಲಿಂಗಾರ್ಪಣಸ್ಥಲ ||

ಗ್ರಂಥ |

ಪತ್ರಂ ಪುಷ್ಟಂ ಫಲಂ ತೋಯಂ ಅನ್ನಪಾನಾದ್ಯಮೌಷಧಂ
ಶಿವಾರ್ಪಣಂ ವಿನಾ ಭುಂಕ್ತೇ ಸದ್ಯೋ ಭವತಿ ಕಿಲ್ಬಿಷಂ ||  || ೧ ||

ಫಲಂ ಪುಷ್ಟಂ ಸುಗಂಧಂ ಚ ವಸ್ತ್ರಾಧ್ಯಾಭರಣಾನಿ ಚ
ಲಿಂಗಾರ್ಪಿತಂ ಪ್ರಸಾದಂ ಚ ಅನ್ಯದ್ಗೋಮಾಂಸವಿಟ್ಸಮಂ || ೨ ||

ಅಸಮರ್ಪ್ಯ ಪದೇ ಶಂಭೋ ಭುಂಕ್ತೇ ಖಾದತಿ ಪಾತಿ ಚ
ಶ್ವಾನಮಾಂಸಾಸ್ಥಿ ಮೂತ್ರಂ ಚ ಭುಂಕ್ತೇ ಖಾದತಿ ಪಾತಿ ಚ ||  || ೩ ||

ಪ್ರಾಣೇಶ ಲಿಂಗಂ ಸಂಕಲ್ಪ್ಯ ಯೋ ಭುಂಕ್ತೇ ಲಿಂಗವರ್ಜಿತಃ
ಶ್ವಾನಮಾಂಸಾಸ್ಥಿರುಧಿರಂ ಸಾದರಂ ಭಕ್ಷಿತೋ ಭವೇತ್ ||  || ೪ ||

ಸಂಯೊಗೇ ಚ ವಿಯೋಗೇ ಚ ಅಣುಬಿಂದುಸುಖಾರ್ಪಿತಂ
ಯತ್ಕುರ್ಯಾದಿಷ್ಟಲಿಂಗೇ ಚ ಸಾವಧಾನೀ ನಿರಂತರಂ ||  || ೫ ||

ವಚನ |

ಅಂಗಕ್ಕೆ ಆಚಾರವಾಗಿ ಕಳೆಗಳುಳ್ಳನ್ನಕ್ಕ ಸಕಲ ಪದಾರ್ಥವ ಲಿಂಗಕ್ಕೆ ಕೊಟ್ಟಲ್ಲದೆ ಕೊಳಲಾಗದು, ಅಂಗವ ಬಿಟ್ಟು, ಕಳೆ ಹಿಂಗಿದ ಬಳಿಕ ಅಂಗವೇನ ಬಲ್ಲುದೋ ಕಪ್ಪಡಿಯ ಸಂಗಮನಾಥನಲ್ಲಿ ಐಕ್ಯವಾದಂದಿಗೆ? ನಿಜವ ಮರೆ ಗುಹೇಶ್ವರಲಿಂಗ ಸಾಕ್ಷಿಯಾಗಿ, ಸಂಗನ ಬಸವಣ್ಣ ಅರ್ಪಿತವಿಲ್ಲದೆ ಕೊಳದಿರು ಅನರ್ಪಿತವ ||

ಲಿಂಗಾರ್ಪಿತವಿಲ್ಲದೆ ಬೋನ ಪದಾರ್ಥವ ಕೊಂಡಡೆ ಮಕ್ಕಳಡಗು ನರಮಾಂಸವಯ್ಯಾ! ಲಿಂಗಾರ್ಪಿತವಿಲ್ಲದೆ ಉದಕವ ಮುಕ್ಕುಳಿಸಿದಡೆ ನಾಯ ಮೂತ್ರವ ಮುಕ್ಕುಳಿಸಿದುದಯ್ಯಾ, ಲಿಂಗಾರ್ಪಿತವಿಲ್ಲದೆ ಹಲುಕಡ್ಡಿಯಯನಿರಿದಡೆ ನಾಯ ಎಲುಬಿದ್ದ ಮಲಕ್ಕೆ ಬಾಯ ದೆರೆದುದು! ನಿಮಗೆತ್ತಿದ ಕರವ ಅನ್ಯರಿಗೆ ಮುಗಿದಡೆ ಅಘೋರ ನರಕವಯ್ಯಾ! ಈ ಭಾಷೆಗೆ ತಪ್ಪಿದಡೆ, ತಲೆದಂಡ; ತಲೆದಂಡ, ಅಳವರಿಯದೆ ನುಡಿದೆನು, ಕಡೆಮುಟ್ಟ ನಡೆಸಯ್ಯಾ, ಪ್ರಭುವೆ, ಕೂಡಲಸಂಗಮದೇವಾ ||

ಲಿಂಗಮುಖದಲ್ಲಿ ಬಂದ ಪ್ರಸಾದವಲ್ಲದೆ ಕೊಂಡಡೆ, ನಿಮ್ಮಾಣೆ! ಲಿಂಗಾರ್ಪಿತವಿಲ್ಲದೆ ಉದಕವ ಕೊಂಡಡೆ ಸಲ್ಲೆನು ನಿಮ್ಮ ಗಣಾಚಾರಕ್ಕಯ್ಯ! ಲಿಂಗಾರ್ಪಿತವಿಲ್ಲದೆ ಹಲ್ಲುಕಡ್ಡಿಯ ಕೊಂಡಡೆ ಬಲ್ಲೆನಯ್ಯಾ ಮುಂದೆ ಭವಘೋರ ನರಕವೆಂದು ನಿಮಗೆತ್ತಿದ ಕರದಲ್ಲಿ ಮತ್ತೊಂದಕ್ಕೆ ಕೈಯಾನೆ! ಅಳವರಿಯದೆ ನುಡಿದೆನು ಕಡೆಮುಟ್ಟ ಸಲಿಸದಿದ್ದಡೆ, ತಲೆದಂಡ! ಕೂಡಲಸಂಗಮದೇವಾ

ಲಿಂಗವಿಲ್ಲದೆ ನಡೆವವನ, ಲಿಂಗವಿಲ್ಲದೆ ನುಡಿದವನ, ಲಿಂಗವಿಲ್ಲದೆ ಸಂಗವ ಮಾಡು ವವನ, ಅವನ ಮುಟ್ಟಲಾಗದು ಲಿಂಗವಿಲ್ಲದೆ ಗಮಿಸಿದಡೆ, ಆ ನುಡಿನುಡಿಗೊಮ್ಮೆ ಪಾತಕ, ಲಿಂಗವಿಲ್ಲದಡೆ ನುಡಿವ ಶಬ್ದವ ಕೇಳಲಾಗದು, ಶಿವಲಿಂಗವಿಲ್ಲದೆ ಉಗುಳ ನುಂಗಿದಡೆ ಅಂದಂದಿಂಗೆ ಕಿಲ್ಬಿಷ! ಕೂಡಲಚನ್ನಸಂಗಮದೇವಾ ||

ದೂರದಲರ್ಪಿತವೆಂಬ ದುರಾಚಾರಿಯನೇನೆಂಬೆನಯ್ಯಾ, ಅಂತದಲರ್ಪಿತವೆಂಬ ಅನಾಚಾರಿಯನೇನೆಂಬೆನಯ್ಯಾ, ಭಾವದಲರ್ಪಿತವೆಂಬ ಭ್ರಮಿತರನೇನೆಂಬೆನಯ್ಯಾ, ಮನದಲ್ಲಿ ಅರ್ಪಿತವೆಂಬ ವ್ರತಗೇಡಿಗಳನೇನೆಂಬೆನಯ್ಯಾ, ಇಂತೀ ತನ್ನ ಇಷ್ಟಲಿಂಗಕ್ಕೆ ಕೊಟ್ಟು ಕೊಳ್ಳದಿದ್ದಡೆ ಸತ್ತನಾಯ ಮಾಂಸವ ತಂದು ಅಟ್ಟದ ಮೇಲಿರಿಸಿ ನಿತ್ಯಂ ನವೋಲಪ್ಪಲವ ತೂಗಿ ತಿಂದಂತೆ ಕಾಣಾ ಕಲಿದೇವರದೇವಾ ||

ದೇಹಗೊಂಡು ಹುಟ್ಟಿದವರೊಪ್ಪಚ್ಚಿ ದೇಹಾರವ ಮಾಡಿರಯ್ಯಾ! ದೇಹಾರವ ಮಾಡಿ ಲಿಂಗಾರ್ಪಿತವ ಮಾಡದೆ ಆಹಾರವ ಕೊಂಡಡೆ, ಕೋಳಿ ಹುಳವನ್ನಾಯ್ದು ತಿಂದಂತೆ ಕಾಣಾ, ಸಂಗಮನಾಥಾ ||

ಲಿಂಗಕ್ಕೆ ರೂಪ ಸಲಿಸುವೆ, ಜಂಗಮಕ್ಕೆ ರುಚಿಯ ಸಲಿಸುವೆ, ಕಾಯಕ್ಕೆ ಶುದ್ಧ ಪ್ರಸಾದವ ಸಲಿಸುವೆ, ಪ್ರಾಣಕ್ಕೆ ಸಿದ್ಧ ಪ್ರಸಾದವ ಸಲಿಸುವೆ ನಿಮ್ಮ ಪ್ರಸಾದದಿಂದ, ಧನ್ಯಳಾದೆನಯ್ಯಾ ಚೆನ್ನಮಲ್ಲಿಕಾರ್ಜುನಾ ||

ಕಾಯಕ್ಕೆ ಮಜ್ಜನ, ಪ್ರಾಣಕ್ಕೆ ಓಗರ, ಇಷ್ಟ ಮಾಡಲೇಬೇಕು, ಸುಳುಹಿನ ಸುಳುಹುಳ್ಳನ್ನಕ್ಕ ಇಷ್ಟ ಮಾಡಲೇಬೇಕು, ಗುಹೇಶ್ವರನೆಂಬ ಆತ್ಮನುಳ್ಳನ್ನಕ್ಕ ಇಷ್ಟ ಮಾಡಲೇಬೇಕು.

ಇಂತು ಆಚಾರಲಿಂಗಾರ್ಪಣಸ್ಥಲ ಸಮಾಪ್ತಿ ||

೩೦. ಜಂಗಮನಿಂದಾ ನಿರಸನವಿಶ್ವಾಸ ಸ್ಥಲ

ಇಂತಪ್ಪ ಆಚಾರಲಿಂಗವ ಇಷ್ಟಲಿಂಗಾರ್ಪಣ ಪ್ರಸಾದ ಭೋಗದಲ್ಲಿ ಸದಾ ಸಂಪನ್ನನಾಗಿ ಆ ಲಿಂಗಕ್ಕೆ ಪ್ರಾಣಕಳೆ ಜಂಗಮವೆಂದರಿದ ಬ್ರಹ್ಮಜ್ಞಾನಿಯಪ್ಪ ಸಹಜ ಸದ್ಭಕ್ತನ ಜಂಗಮನಿಂದಾ ನಿರಸನವಿಶ್ವಾಸ ಸ್ಥಲ ||

ಗ್ರಂಥ |

ಯಥಾ ಭೇರುಂಡ ಪಕ್ಷೀ ಚ ದ್ವಿಮುಖೇನ ಪ್ರಭುಂಜತೇ
ತಥಾಚಾಹಮುಮಾದೇವಿ ಉಭಯೋರ್ಲಿಂಗ ಜಂಗಮಯೋಹೋಃ ||  || ೧ ||

ಸ್ಥಾವರಂ ಜಂಗಮಶ್ವೈವ ದ್ವಿವಿಧಂ ಲಿಂಗಮುಚ್ಯತೇ
ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ ||  || ೨ ||

ನಿಶ್ಯಬದ್ದಂ ಸ್ಥಾವರಂ ಚೈವ ಶಬ್ದಮಂತ್ರೋಪದೇಶತಃ
ಲೋಕಪೂಜ್ಯಕರೋ ದೇವಿ ಶ್ರೇಷ್ಠಸ್ತಲ್ಲಿಂಗ ಜಂಗಮಃ ||  || ೩ ||

ಲಿಂಗಾರ್ಚನಂ ಕರ್ತವ್ಯಂ ಕರ್ತವ್ಯಂ ಜಂಗಮಾರ್ಚನಂ
ಲಿಂಗ ಜಂಗಮ ಸಂಯೋಗೇ ಜಂಗಮಸ್ತು ವಿಶೇಷಿತಃ ||  || ೪ ||

ದೀಕ್ಷಾಮೂರ್ತಿರ್ಗುರುಲಿಂಗಂ ಪೂಜಾಮೂರ್ತಿ ಪರಃಶಿವಃ
ದೀಕ್ಷಾ ಶಿಕ್ಷಾ ಚ ಪೂಜಾ ಚ ಚರ್ವಕರ್ತಾ ಚ ಜಂಗಮಃ ||  || ೫ ||

ವಚನ |

ಭೇರುಂಡನ ಪಕ್ಷಿಗೆ ದೇಹವೊಂದೆ ತಲೆಯೆರಡರ ನಡುವೆ ಕನ್ನಡವ ಕಟ್ಟಿ ಒಂದು ತಲೆಯಲ್ಲಿ ಹಾಲನೆರೆದು, ಒಂದು ತಲೆಯಲ್ಲಿ ವಿಷವನರಿದಡೆ, ದೇಹವೊಂದೇ, ವಿಷವ ಬಿಡುವುದೇ? ಅಯ್ಯಾ, ಲಿಂಗದಲ್ಲಿ ಪೂಜೆಯ ಮಾಡಿ ಜಂಗಮದಲ್ಲಿ ನಿಂದೆಯ ಮಾಡಿದಡೆ ನಾನು ಬೆಂದೆ ಕಾಣಾ, ಕೂಡಲಸಂಗಮದೇವಾ ||

ಜಂಗಮನಿಂದೆಯ ಮಾಡಿ ಲಿಂಗವ ಪೂಜಿಸುವ ಭಕ್ತನಂಗವಣೆಯೆಂತೋ! ಶಿವಶಿವ! ನಿಂದಿಸುವ ಪೂಜಿಸುವ ಪಾತಕವ ಕೇಳಲಗದು ಗುರುವಿನ ಗುರು ಜಂಗಮವೆಂದುದು ಕೂಡಲ ಸಂಗಯ್ಯನ ವಚನ ||

ಎಡದ ಕೈಯಲ್ಲಿ ನಿಗಳವನಿಕ್ಕಿ, ಬಲದ ಕೈಯ ಕಡಿದುಕೊಂಡಡೆ ನೋವು ನಿಮ್ಮದಲ್ಲ, ಅಂಗಪ್ರಾಣದಂತಿಪ್ಪವು ಲಿಂಗಜಂಗಮವು ಲಿಂಗದಲ್ಲಿ ಪೂಜೆಯ ಮಾಡಿ, ಜಂಗಮದಲ್ಲಿ ನಿಂದೆಯ ಮಾಡಿದಡೆ ನಿಮ್ಮ ಮುಂದೆ ನಾಯಕ ನರಕದಲ್ಲಿಕ್ಕುವ ನಮ್ಮ ಮಹಾಲಿಂಗ ಕಲ್ಲೇಶ್ವರಾ ||

ಎತ್ತಿಕೊಳ್ಳಲೇಕೆ? ಮತ್ತಿಳುಹಲೇಕೆ? ಧರಧುರದ ಭಕ್ತಿಯ ಮಾಡಲದೇಕೆ? ನಿಂದಿಸಲೇಕೆ? ಸ್ತುತಿಸಲೇಕೆ? ಹೋಗಬಿಟ್ಟು ಜಂಗಮವ, ಹಿಂದಾಡುವ ಬಾಯಲ್ಲಿ ಮೆಟ್ಟಿ ಹುಡಿಯ ಹೊಯ್ಯದೆ ಮಾಬನೆ ನಮ್ಮ ಕೂಡಲಸಂಗಮದೇವ ||

ಇನ್ನು ಆವಿಶ್ವಾಸದ ಲೋಕದ ಕರ್ಮಿಗಳಿಗೆ ಯಮದೂತರೆಂಬ ದಂಡಣೆಯೆಂಬುದಂ ಮಾಡಿದೆಯಯ್ಯಾ! ಇದು ಕಾರಣ, ಭಕ್ತಿಯನರಿಯೆ, ಯುಕ್ತಿಯನರಿಯೆ! ಜಂಗಮವೆ ಕೂಡಲಚನ್ನಸಂಗಯ್ಯನೆಂಬೆ ||

ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ! ನವಕೋಟಿ ಬ್ರಹ್ಮರಿಗೆ ಪ್ರಳಯವ ಮಾಡುವುದ ನಾನು ಬಲ್ಲೆನಾಗಿ, ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ! ದಶಕೋಟಿ ನಾರಾಯಣರಿಗೆ ಪ್ರಳಯವ ಮಾಡುವುದ ನಾನು ಬಲ್ಲೆನಾಗಿ, ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ ಅನಂತಕೋಟಿ ರುದ್ರರಿಗೆ ಪ್ರಳಯವ ಮಾಡುವುದ ನಾನು ಬಲ್ಲೆನಾಗಿ, ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ ಎನ್ನನೇಳೇಳು ಜನ್ಮಕ್ಕೆ ತಂದಿರಾಗಿ ! ನಾನುಭಯ ಗುರುಲಿಂಗ ಜಂಗಮದ ಮರೆವೊಕ್ಕು ಎನ್ನ ಭವಂ ನಾಸ್ತಿಯಾಗಿ ಬದುಕಿದೆನು ಕಾಣಾ, ಕೂಡಲ ಸಂಗಮದೇವಾ ||

ಗುರುಸ್ಥಲ ಘನವೆಂಬೆನೇ? ಗುರುವಿಂಗೆ ಲಿಂಗವುಂಟು, ಲಿಂಗಸ್ಥಲ ಘನವೆಂಬೆನೇ? ಲಿಂಗಕ್ಕೆ ಜಂಗಮವುಂಟು, ಆ ಜಂಗಮವೆ ಘನವೆಂದು ಎನ್ನ ಮನ ಕಂಡು ಹಿಡಿಯಿತ್ತಾಗಿ ಆ ಜಂಗಮದ ಗುಣದಿಂದೆನ್ನ ಹಿಂದಣ ಏಳೇನುಭವದ ಸೂತಕ ಹರಿಯಿತ್ತಾಗಿ ನಿನ್ನಿಂದಲರೆ ಕಾಸೂ ಹರಿಯದು ಕಾಣಾ, ಕೂಡಲಸಂಗಮದೇವಾ ||

ಇಷ್ಟಲಿಂಗ ಪೂಜಕರೆಲ್ಲ ದೃಷ್ಟಲಿಂಗವನೆತ್ತಬಲ್ಲರೋ! ಜಂಗಮವೇ ಲಿಂಗವೆಂಬುದು ಭವಭಾರಿಗಳೆತ್ತಬಲ್ಲರೋ! ಕೂಡಲಚನ್ನಸಂಗಯ್ಯನಲ್ಲಿ ಮಹಾಪ್ರಸಾದಿ ಬಸವಣ್ಣ ಬಲ್ಲ ||

ಆದಿಯಲ್ಲಿ ನಿಮ್ಮ ಜಂಗಮವೆಂಬುದನಾರು ಬಲ್ಲರಯ್ಯಾ ಬಸವಣ್ಣನಲ್ಲದೆ? ಎಲ್ಲಿ ಸ್ಥಾವರದಲ್ಲಿ ನೋಡಲಾಗದು, ಮನದಲ್ಲಿ ನೆನೆಯಲಾಗದು ಲಿಂಗಕ್ಕಾದಡೆಯೂ ಜಂಗಮವೆ ಬೇಕು ಜಂಗಮವಿಲ್ಲದೆ ಲಿಂಗವುಂಟೆ? ಗುರುವಿಂಗಾದಡೆಯೂ ಜಂಗಮವೆ ಬೇಕು ಜಂಗಮ ವಿಲ್ಲದೆ ಗುರುವುಂಟೆ? ಎಲ್ಲಿ ಜಂಗಮವಿದ್ದಡಲ್ಲಿಯೇ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ ಅನುಭಾವ ಸನ್ನಿಹಿತವಾಗಿಹುದು, ಇಂತೀ ಜಂಗಮವೇ ಲಿಂಗವೆಂಬುದ ಬಸವಣ್ಣ ಬಲ್ಲ ಆ ಬಸವಣ್ಣನ ಶ್ರೀ ಪಾದಕ್ಕೆ ಅಹೋರಾತ್ರಿ ಶರಣೆಂದು ಶುದ್ಧನಾದೆ ಕಾಣಾ ಕಲಿದೇವರ ದೇವಯ್ಯಾ ||

೧೦

ಜಂಗಮದನುವರಿಯದಿದ್ದಡೆ ಲಿಂಗವು ತಮತಮಗೆಲ್ಲಿಯದೋ! ಲಿಂಗವಿಪ್ಪ ಸೆಜ್ಜೆಯಲ್ಲಾ ಜಂಗಮ, ಜಂಗಮದ ಪ್ರಾಣವೆಲ್ಲಾ ಲಿಂಗವು, ಜಂಗಮದ ಪ್ರಾಣವೆಲ್ಲಾ ಲಿಂಗವು ರೇಕಣ್ಣಪ್ರಿಯ ನಾಗಿನಾಥ ಜಂಗಮದ ಕಾಯವ ತೊಟ್ಟುಕೊಂಡು ಸುಳಿವನಾಗಿ ||

೧೧

ಬೀಜದಿಂದಾಯಿತ್ತು ಅಂಕುರವರೆಂಬರು, ಆ ಬೀಜಕ್ಕೆ ಅಂಕುರವೇ ಪ್ರಾಣವೆಂದರಿಯರು, ಲಿಂಗದಿಂದಾಯಿತ್ತು ಜಂಗಮವೆಂಬರು ಆ ಲಿಂಗಕ್ಕೆ ಜಂಗಮವೇ ಪ್ರಾಣವೆಂದರಿದೆ ಕಾಣಾ ಕೂಡಲಚನ್ನಸಂಗಮದೇವಾ ||

೧೨

ಎಲ್ಲರ ಪ್ರಾಣಲಿಂಗವು ಬೇರೆ ಕಂಡಯ್ಯಾ, ಎನ್ನ ಪ್ರಾಣಲಿಂಗವು ಬೇರೆ ಕಂಡಯ್ಯಾ, ಕೂಡಲಸಂಗಮದೇವಯ್ಯಾ, ಜಂಗಮವು ಎನ್ನ ಪ್ರಾಣಲಿಂಗವು ಕಂಡಯ್ಯಾ ||

೧೩

ಕುಲದೈವ ಮನೆದೈವವೆನಗೆ ಜಂಗಮ ಕಂಡಯ್ಯಾ ತನು ಮೀಸಲು, ಮನ ಮೀಸಲು, ನಯನ ಮೀಸಲು ಕಂಡಯ್ಯಾ ದೇವಾ! ತನು ಮೀಸಲು, ಮನ ಮೀಸಲು, ಧನ ಮೀಸಲು ದೇವಾ! ಕೂಡಲಸಂಗಮದೇವಯ್ಯಾ ನಿಮ್ಮ ನಿಮ್ಮ ಶರಣರಿಗೆನ್ನ ||

ಇಂತು ಜಂಗಮನಿಂದಾ ನಿರಸನವಿಶ್ವಾಸಸ್ಥಲ ಸಮಾಪ್ತ ||

೩೧. ಜಂಗಮ ಪಾದೋದಕ ಪ್ರಸಾದ ವಿಶ್ವಾಸ ಸ್ಥಲ

ಇಂತಪ್ಪ ಪರಮ ಜಂಗಮ ವಿಶ್ವಾಸವನುಳ್ಳ ಬ್ರಹ್ಮಜ್ಞಾನಿಯಪ್ಪ ಸಹಜ ಸದ್ಭಕ್ತನ ಜಂಗಮ ಪಾದೋದಕ ಪ್ರಸಾದ ವಿಶ್ವಾಸ ಸ್ಥಲ ||

ಗ್ರಂಥ |

ಜಂಗಮಾನಾಂ ಚ ಚರಣ ಸಲಿಲಂ ಪಾಪ ನಾಶನಂ
ಪ್ರಸಾದೋ ಮೋಕ್ಷ ಸಿದ್ಧ್ಯರ್ಥಂ ಸತ್ಯಮೀಶ್ವರಭಾಷಿತಂ ||  || ೧ ||

ಜಂಗಮಾನಾಂ ಪಾದತೀರ್ಥ ಲಿಂಗಮಜ್ಜನಮುತ್ತಮಂ
ತತ್ಪ್ರಸಾದೋ ಮಹಾದೇವಿ ನೈವೇದ್ಯಂ ಮಂಗಲಂ ಶುಭಂ ||  || ೨ ||

ಪಾದಾಭಿಷೇಕ ಸಲಿಲಂ ಭುಕ್ತಶೇಷಾನ್ನಮುತ್ತಮಂ
ಅಭಿಷೇಕಂ ಚ ನೈವೇದ್ಯಂ ಪ್ರಸಾದಿ ಶಿವಲಿಂಗಿನಾಂ ||  || ೩ ||

ಜಂಗಮಸ್ಯ ಪ್ರಸಾದಾನ್ನ ನೈವೇದ್ಯಂ ಚ ಸಮರ್ಪಣಂ
ಪ್ರಸಾದೇನ ತು ಶುದ್ದಾತ್ಮಾ ಪ್ರಸಾದಿಸ್ಥಲಮುತ್ತಮಂ ||  || ೪ ||

ಪಾದತೀರ್ಥಂ ಪ್ರಸಾದಂ ಚ ನಿತ್ಯಂ ಶಿವಲಿಂಗಾರ್ಪಿತಂ
ಸದಾಸೇವಿತ ಭಕ್ತನಾಂ ಮಮರೂಪಂ ತು ಪಾರ್ವತಿ ||  || ೫ ||

ಪಾದೋದಕ ಪ್ರಸಾದ ಶಬ್ದ ನಿರ್ವಚನ ಗ್ರಂಥ

ಗ್ರಂಥ |

ಪಾಕಾರಂ ಪರಮಜ್ಞಾನಂ ದೋಕಾರಂ ದೋಷನಾಶನಂ
ದಕಾರಂ ದಹ್ಯತೇ ಜನ್ಮ ಕಕಾರಂ ಕರ್ಮನಾಶನಂ ||  || ೬ ||

ಪ್ರಶಬ್ದಸ್ಯಾಚ್ಛಿವಜ್ಞಾನಂ ಸಾಶಬ್ದೋ ಗತಿರುಚ್ಯತೇ
ದಾನಸ್ವರೂಪೀ ದಶ್ಯಬ್ದ ಸ್ತ್ರೀವರ್ಣ ಅಭಿದೀಯತೇ ||  || ೭ ||

ವಚನ |

ನಿಮ್ಮ ಜಂಗಮವ ಕಂಡುದಾಸೀನವ ಮಾಡಿದದೆ ಒಂದನೆಯ ಪಾಪ; ನಿಮ್ಮ ಜಂಗಮದ ಸಮಯೋಚಿತವ ನಡೆಸದಿದ್ದಡೆ ಎರಡನೆಯ ಪಾತಕ, ನಿಮ್ಮ ಜಂಗಮದ ಕೂಡೆ ಮಾರುತ್ತರವ ಕೊಟ್ಟಡೆ ಮೂರನೆಯ ಪಾತಕ, ನಿಮ್ಮ ಜಂಗಮದ ಸಕಲಾರ್ಥಕ್ಕೆ ಸಲ್ಲದಿದ್ದಡೆ ನಾಲ್ಕನೆಯ ಪಾತಕ, ನಿಮ್ಮ ಜಂಗಮಕ್ಕೆ ಮಾಡಿದೆನೆಂದು ಮನದಲ್ಲಿ ಹೊಳೆದಡೆ ಐದನೆಯ ಪಾತಕ, ನಿಮ್ಮ ಜಂಗಮವು ಅಂಥವರಿಂಥವರೆಂದು ನುಡಿದಡೆ ಆರನೆಯ ಪಾತಕ, ನಿಮ್ಮ ಜಂಗಮವೆ ಲಿಂಗವೆಂದು ನಂಬದಿದ್ದಡೆ ಏಳನೆಯ ಪಾತಕ, ನಿಮ್ಮ ಜಂಗಮದ ಕೂಡೆ ಸುಖ ಸಂಭಾಷಣೆಯ ಮಾಡದಿದ್ದಡೆ ಎಂಟನೆಯ ಪಾತಕ, ನಿಮ್ಮ ಜಂಗಮಕ್ಕೆ ಸಕಲ ಪದಾರ್ಥವ ನೀಡದೆ ತನ್ನ ಲಿಂಗಕ್ಕೆ ಕೊಡುವುದು ಒಂಭತ್ತನೆಯ ಪಾತಕ, ನಿಮ್ಮ ಜಂಗಮದ ಪಾದೋದಕ ಪ್ರಸಾದವನು ತಂದು ತನ್ನ ಲಿಂಗಕ್ಕೆ ಕೊಟ್ಟು ಕೊಳದಿಹುದು ಹತ್ತನೆಯ ಪಾತಕ, ಇಂತೀ ಹತ್ತನೆಯ ಪಾತಕವ ಕಳೆದಲ್ಲದೆ, ಭಕ್ತನಲ್ಲ, ಮಹೇಶ್ವರನಲ್ಲ, ಪ್ರಸಾದಿಯಲ್ಲ, ಪ್ರಾಣಲಿಂಗಿಯಲ್ಲ, ಶರಣನೈಕ್ಯನಂತೂ ಆಗಲರಿಯ ಇದು ಕಾರಣ, ಕೂಡಲಚನ್ನ ಸಂಗಮದೇವಾ ಭಕ್ತಿಹೀನ ಜಡಜೀವಿಗಳು ನಿಮಗೆಂದೂ ದೂರವಯ್ಯಾ ||

ಜಂಗಮವೆ ಪ್ರಾಣವೆಂದರಿದ ಭಕ್ತಂಗೆ ಜಂಗಮಪ್ರಸಾದವಿಲ್ಲದೆ ಲಿಂಗಪ್ರಸಾದವ ಕೊಳಲಾಗದು, ಜಂಗಮ ಪ್ರಸಾದವನು ಲಿಂಗಕ್ಕೆ ಸಲ್ಲದೆಂದು ಶಂಕಿಸಲಾಗದು, ಅದೆಂತೆಂದಡೆ, ಜಂಗಮಾದಿ ಗುರೂಣಾಂ ಚ ಅನಾದಿ ಸ್ವಯಲಿಂಗವತ್, ಆದಿಪ್ರಸಾದವಿರೋಧೇ ಇಷ್ಟೋಚ್ಛಿಷ್ಟಂತು ಕಿಲ್ಬಿಷಂ ಎಂದುದಾಗಿ ಪ್ರಾಣಭಾವದಲ್ಲಿ ಸಂಬಂಧವಾಗಿ ಇಷ್ಟಕ್ಕೂ ಸಂದಿತ್ತು ಈ ಭೇದವನರಿದು ಜಂಗಮ ಪ್ರಸಾದವಿಲ್ಲದೆ ಲಿಂಗಪ್ರಸಾದವ ಕೊಳಲಾಗದು ಕೂಡಲಚನ್ನಸಂಗಮದೇವಯ್ಯಾ ||

ಲಿಂಗಭರಿತ ಶರಣ, ಶರಣಭರಿತ ಲಿಂಗವು, ಅದೆಂತೆಂದಡೆ, ಶರಣಮಧ್ಯೇ ಲಿಂಗಂ, ಲಿಂಗಮಧ್ಯೇ ಶರಣಃ ಎಂದುದಾಗಿ, ಶರಣ ಬೇರೆ? ಲಿಂಗ ಬೇರೆ? ಶಿವ ಶಿವಾ! ಒಂದೇ ಕಾಣಿರಣ್ಣಾ ಅಂತು, ಶರಣನ ಕ್ರೀಯೆಲ್ಲವೂ ಲಿಂಗದ ಕ್ರೀ, ಲಿಂಗದ ಕ್ರೀಯೆಲ್ಲವೂ ಶರಣನ ಕ್ರೀ, ಅದುಕಾರಣ, ಶರಣನ ಪ್ರಸಾದವು ಲಿಂಗಕ್ಕೆ ನೈವೇದ್ಯ ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ||

ಆದಿಲಿಂಗ, ಅನಾದಿ, ಶರಣನೆಂಬುದು ತನ್ನಿಂದ ತಾನಾಯಿತ್ತು, ಕೇಳಿರಣ್ಣಾ, ಆದಿ ಕಾಯ, ಅನಾದಿ ಪ್ರಾಣ, ಈ ಉಭಯದ ಭೇದವ ತಿಳಿದು ವಿಚಾರಿಸಿ ನೋಡಿರಣ್ಣಾ ಅಂತು, ಅನಾದಿಯ ಪ್ರಸಾದ ಆದಿಗೆ ಸಲುವುದು ಅದೆಂತೆಂದಡೆ, ಅನಾದಿ ಜಂಗಮಶ್ಚೈವ ಆದಿಲಿಂಗ ಸ್ಥಲಂ ಭವೇತ್ ಅನಾದೇಶ್ಚ ವಿರೋಧೇನ ಇಷ್ಟೋಚ್ಚಿಷ್ಟಂ ತು ಕಿಲ್ಬಿಷಂ || ಇಂತೆಂದುದಾಗಿ, ಪ್ರಾಣಸ್ವರೂಪವೇ ಜಂಗಮ, ಪಿಂಡ ಸ್ವರೂಪವೇ ಇಷ್ಟಲಿಂಗ, ಪ್ರಾಣಪ್ರಸಾದ ವಿರೋಧವಾಗಿ ಪಿಂಡ ಪ್ರಸಾದವ ಕೊಂಡಡೆ ಕೊಂಡುದು ಕಿಲ್ಬಿಷ ಕೂಡಲಚನ್ನಸಂಗಮದೇವಾ ||

ಲಿಂಗಪ್ರಸಾದವ ಜಂಗಮ ಕೊಡುವ ಕರ್ಮಿ, ನೀ ಕೇಳಾ! ಜಂಗಮ ಪ್ರಸಾದವ ಲಿಂಗಕ್ಕೆ ಕೊಡುವ ಸುಧರ್ಮಿ, ನೀ ಕೇಳಾ! ಲಿಂಗಪ್ರಸಾದವ ಜಂಗಮಕ್ಕೆ ಕೊಡುವುದು ಅನಾಚಾರ, ಜಂಗಮ ಪ್ರಸಾದವ ಲಿಂಗಕ್ಕೆ ಕೊಡುವುದು ಸದಾಚಾರ; ಅದೆಂತೆಂದಡೆ, ಲಿಂಗಾರ್ಪಿತಂ ಪ್ರಸಾದಂ ಚ ದದ್ಯಾಚ್ಚರಮೂರ್ತಯೇ, ಚರಾರ್ಪಿತಂ ಪ್ರಸಾದಂ ಚ ತದ್ಧದ್ಯಾಲ್ಲಿಂಗ ಮೂರ್ತಯೇ || ಎಂದುದಾಗಿ, ಇದು ಕಾರಣ, ಕೂಡಲಚನ್ನಸಂಗಯ್ಯಾ ಜಂಗಮ ಮುಖದಲ್ಲಿ ಲಿಂಗ ನಿರಂತರಸುಖಿಯಯ್ಯಾ ||

ತನ್ನ ಲಿಂಗಕ್ಕೆ ಮಾಡಿದ ಬೋನವ ಜಂಗಮಕ್ಕೆ ನೀಡಬಾರದೆಂಬುದನೇಕ ನರಕ! ತನ್ನ ಲಿಂಗವಾರೋಗಿಸಿ ಮಿಕ್ಕ ಪ್ರಸಾದವ ಜಂಗಮಕ್ಕೆ ನೀಡುವುದನೇಕ ನಾಯಕ ನರಕ! ಆ ಜಂಗಮ ವಾರೋಗಿಸಿ ಮಿಕ್ಕ ಪ್ರಸಾದವೆನ್ನ ಲಿಂಗಕ್ಕೆ ಬೋನವಾಯಿತ್ತು, ಎನಗೆ ಪ್ರಸಾದವಾಯಿತ್ತು, ಭಕ್ತಿಗೆ ತೆರನಾಯಿತ್ತು, ಮುಕ್ತಿ ಹಸನಾಯಿತ್ತು ಕೂಡಲಚನ್ನಸಂಗಯ್ಯ ಎನಗೆಯೂ ನಿನಗೆಯೂ ಜಂಗಮಪ್ರಸಾದ ಪ್ರಾಣವಾಯಿತ್ತು ||

ಜಂಗಮವಾರೋಗಿಸಿ ಮಿಕ್ಕುದು ಲಿಂಗಕ್ಕೆ ಓಗರ, ಲಿಂಗವಾರೋಗಿಸಿ ಮಿಕ್ಕುದು ಪ್ರಸಾದ ನೀಡಬಹುದು ಜಂಗಮ ಮುಖದಲ್ಲಿ ಅರ್ಪಿತವಾಯಿತ್ತು ಓಗರವಾಯಿತ್ತು, ಲಿಂಗಮುಖದಲ್ಲಿ ಪ್ರಸಾದವಾಯಿತ್ತು, ಇದು ಕಾರಣ ಕೂಡಲಚನ್ನಸಂಗಯ್ಯಾ ನಿನಗೆಯೂ ಎನಗೆಯೂ ಜಂಗಮಪ್ರಸಾದ ||

ಜಂಗಮವೆ ಲಿಂಗವೆನಗೆ, ಜಂಗಮವೆ ಪ್ರಾಣವೆನಗೆ, ಎನಗೆಯೂ ನಿನಗೆಯೂ ಜಂಗಮ ಪ್ರಸಾದವೇ ಪ್ರಾಣ ಕಾಣಾ, ಕೂಡಲಸಂಗಯ್ಯಾ ||

ಪ್ರಕೃತಿವಿಡಿದಿಹುದು ಗುರುಲಿಂಗಜಂಗಮ, ಜ್ಞಾನವಿಡಿದಿಹುದು ಗುರುಲಿಂಗಜಂಗಮ, ಇಂತೀ ಪ್ರಸಾದ ಸಗುಣವೆಂದು ಹಿಡಿದು ನಿರ್ಗುಣವೆಂದು ಬಿಡುವ ವ್ರತಗೇಡಿಗಳ ತೋರದಿರು ಕೂಡಲಚನ್ನಸಂಗಮದೇವಾ ||

೧೦

ಪಾದೋದಕ ಪ್ರಸಾದದಿಂದ ಮೇಲೆ ಪರವಿಲ್ಲವಾಗಿ, ಗುರುವಿಡಿದು ಲಿಂಗವ ಕಂಡೆ, ಲಿಂಗವಿಡಿದು ಜಂಗಮವ ಕಂಡೆ, ಪ್ರಸಾದದಿಂದೆ ಪರವ ಕಂಡೆ, ಪರವ ಕಂಡೆ, ಪರವ ತೋರಿದ ಗುರು ವಿನಾಜ್ಞೆಯನ್ನು ಮೀರುವ ದುರಾತ್ಮರನೆನ್ನ ಮುಖಕ್ಕೆ ತೋರದಿರು ಕಲಿದೇವರದೇವಯ್ಯಾ

೧೧

ಶ್ರೀ ಗುರುಲಿಂಗ ಜಂಗಮದ ಪಾದೋದಕ ಪ್ರಸಾದವ ಕೊಂಡೆವೆಂದೆಂಬಿರಿ, ಅವರು ಕೊಟ್ಟ ಪರಿಯಾವುದು? ನೀವು ಕೊಂಡ ಪರಿಯಾವುದು? ಆ ಗುರುವಿಂಗೆ ಜಂಗಮಪ್ರಸಾದವೆ ಬೇಕು, ಆ ಲಿಂಗಕ್ಕೆ ಜಂಗಮಪ್ರಸಾದವೆ ಬೇಕು; ಅದೆಂತೆಂದಡೆ, ಚರಪ್ರಸಾದಸ್ಸಂಗ್ರಾಹ್ಯೋ ಗುರುಲಿಂಗ ಜಂಗಮಾನಾಂ | ತದಿಚ್ಛಿಷ್ಟಂ ತು ಸಂಪ್ರಾಪ್ಯ ಭವೋನ್ಮುಕ್ತಿಸ್ತದಭವೇತ್ || ಎಂದುದಾಗಿ, ಕೂಡಲಚನ್ನಸಂಗಯ್ಯಾ, ನಿಮ್ಮ ಜಂಗಮಪ್ರಸಾದವಿಲ್ಲದಿರ್ದಡೆ ಗುರುವಾಗ ಬಾರದು; ಲಿಂಗವಾಗಬಾರದು; ಜಂಗಮವಾಗಬಾರದು ||

೧೨

ಗುರುವಾದಡೂ ಆಗಲಿ, ಲಿಂಗವಾದಡೂ ಆಗಲಿ, ಜಂಗಮವಾದಡೂ ಆಗಲಿ, ಪಾದೋದಕ ಪ್ರಸಾದವಿಲ್ಲದ ಪಾಪಿಯ ಮುಖವ ನೋಡಲಾಗದು, ಅವರ ನಡೆಯೊಂದು, ನುಡಿಯೊಂದು, ಕೆಮ್ಮನೇಯಹಂಕರಿಸಿ, ಬೆಬ್ಬನೇ ಬೆರೆವುತ್ತ ತಮ್ಮ ಉದರವ ಹೊರೆವ ದುರಾಚಾರಿಗಳ ಮೆಚ್ಚ ನಮ್ಮ ಕೂಡಲಸಂಗಮದೇವರು ||

ಇಂತು ಜಂಗಮ ಪಾದೋದಕ ಪ್ರಸಾದ ವಿಶ್ವಾಸಸ್ಥಲ ಸಮಾಪ್ತಿ ||

ಇಂತಪ್ಪ ಜಂಗಮ ಪಾದೋದಕ ಪ್ರಸಾದ ವಿಶ್ವಾಸಸ್ಥಲವೆ ಕಡೆಯಾಗಿ ಷಟ್ಟ್ರಕಾರವನುಳ್ಳ ಸರ್ವ ವಿಶ್ವಾಸ ಸಂಪೂರ್ಣಮಪ್ಪ ಬ್ರಹ್ಮಜ್ಞಾನಿಯ ಸದ್ಭಕ್ತಸ್ಥಲ ಸಮಾಪ್ತ ||

ಇಂತಪ್ಪ ಶಿವಭಕ್ತನೇ ಅಧಿಕನೆಂದು ಶಿವನು ನಮಸ್ಕಾರ ಮಾಡುವ ಶಿವಭಕ್ತ ಮಹಾತ್ಮ್ಯ ||

ಗ್ರಂಥ |

ಭಕ್ತಪ್ರಾಣ ಉಮಾದೇವಿ ಭಕ್ತಪ್ರಾಣೋ ಮಮೈವತು |
ಮತ್ತೋsಧೀಕೋ ಹಿ ಭಕ್ತಶ್ವ ತಸ್ಮಾದ್ಭಕ್ತಂ ನಮಾಮ್ಯಹಂ ||

ಇದು ಶ್ರೀ ಮದಮಿತೋರು ಲಿಂಗಾಂಗ ಸಂಯೋಗಾನುಭವ
ಪ್ರಸಿದ್ಧ ಪರಿಪೂರ್ಣ ಶೀಲ ಪರಮಾದ್ವೈತ ವಿಶ್ರಾಂತರುಮಪ್ಪ
ಪರಮಚರರೂಪ ಶ್ರೀ ಕರಸ್ಥಲದ ಮಲ್ಲಿಕಾರ್ಜುನೊಡೆಯರು ಸೇರಿಸಿದ
ಮಹಾನುಭವ ಬೋಧೆಯಪ್ಪ ಶ್ರೀ ಮದ್ಬ್ರಹ್ಮಾದ್ವೈತಸಿದ್ಧಾಂತ
ಷಟ್‌ಸ್ಥಲಾಭರಣದೊಳು ಬ್ರಹ್ಮಜ್ಞಾನಿಯಪ್ಪ ಭಕ್ತನ ವರ್ಗ
ಪ್ರಥಮ ಪರಿಚ್ಛೇದ ಸಮಾಪ್ತ
ಮಂಗಳ ಮಹಾ ಶ್ರೀ ಶ್ರೀ ಶ್ರೀ