೨೫. ಜ್ಞಾನಕ್ರಿಯಾ ವಿಶ್ವಾಸ ಸ್ಥಲ

ಇಂತಪ್ಪ ಶ್ರೀ ವಿಭೂತಿ ಶ್ರೀ ರುದ್ರಾಕ್ಷಿ ಶ್ರೀ ಪಂಚಾಕ್ಷರಿಯೆ ಪರಮೈಶ್ವರ್ಯವಾಗಿಯುಳ್ಳ ಬ್ರಹ್ಮಜ್ಞಾನಿಯಪ್ಪ ಪರಮಲಿಂಗಾಂಗಿಯ ಜ್ಞಾನಕ್ರಿಯಾ ವಿಶ್ವಾಸಸ್ಥಲ ||

ಗ್ರಂಥ |

ಅಂತರ್ಜ್ಞಾನಂ ಬಹಿಃಕ್ರಿಯಾ ಏಕ್ರೀಭಾವೋ ವಿಶೇಷತಃ
ತತ್ರ ಭೇದಂ ನ ಜಾನಾತಿ ನಚ ಜ್ಞಾನಂ ನವ ಕ್ರಿಯಾ ||  || ೧ ||

ನ ಕ್ರಿಯಾರಹಿತಂ ಜ್ಞಾನಂ ನ ಜ್ಞಾನ ರಹಿತಾ ಕ್ರಿಯಾ
ನ ಪಶ್ಯತ್ಯಂಧಕೋ ದಗ್ಧಂ ಪಶ್ಯನ್ ದಹತಿ ಪಂಗುಲಃ ||  || ೨ ||

ಜ್ಞಾನಕ್ರಿಯಾ ಸ್ವಭಾವತ್ವಾತ್ ಸ್ಥಾಣೋರಮಿತ ತೇಜಸಃ
ಜ್ಞಾನವಂತಃ ಕ್ರಿಯಾನಿಷ್ಠಃ ಸಾಕ್ಷಾದೇವ ಮಹೇಶ್ವರಾ ||  || ೩ ||

ವಚನ |

ಅಹುದಹುದು, ಭಕ್ತಿಯ ಭಾವ ಭಜನೆಯೆಂತಿಹುದಂತೆ ಅಂತರಂಗದರಿವು, ಅಂತರಂಗದರಿವಿಂಗೆ ಆಚಾರವೆ ಕಾಯ, ಆಚಾರ ಕಾಯವಿಲ್ಲದಿರ್ದಡೆ ಅರಿವಿಂಗಾಶ್ರಯವಿಲ್ಲ ಅರಿವು ಆಚಾರದಲ್ಲಿ ಸಮವೇಧಿಸಿದ ಲಿಂಗೈಕ್ಯನ ಕ್ರಿಯಾಬದ್ಧನೆಂದು ನುಡಿದಡೆ ಪಂಚಮಹಾ ಪಾತಕ, ನಿನ್ನ ಅರಿವಿಂಗೆ ಅಚ್ಚಾಗಿ, ಆಚಾರಕ್ಕೆ ಆಳಾಗಿ ನಮ್ಮ ಗುಹೇಶ್ವರನು ನಿನ್ನ ಕೈವಶಕ್ಕೆ ಒಳಗಾದನು ನಿನ್ನ ಸುಖಸಮಾಧಿಯ ತೋರು ಬಾರಾ, ಸಿದ್ಧರಾಮಯ್ಯಾ ||

ಅಂತರಂಗದಲ್ಲಿ ಅರಿವಾದಡೇನಯ್ಯಾ ಬಹಿರಂಗದಲ್ಲಿ ಕ್ರೀಯಿಲ್ಲದನ್ನಕ್ಕ? ದೇಹವಿಲ್ಲದಿರ್ದಡೆ ಪ್ರಾಣಕ್ಕಾಶ್ರಯವುಂಟೇ ? ಕನ್ನಡಿಯಿಲ್ಲದಿರ್ದಡೆ ತನ್ನ ಮುಖವ ಕಾಣಬಹುದೇ? ಸಾಕಾರ – ನಿರಾಕಾರ ಏಕೋದೇವ ನಮ್ಮ ಕೂಡಲಚನ್ನಸಂಗಯ್ಯಾ ||

ಜ್ಞಾನದಲ್ಲಿ ಅರಿದಡೇನಯ್ಯಾ ಸತ್ಕ್ರೀಯನಾಚರಿಸದನ್ನಕ್ಕ? ನೆನೆದ ಮಾತ್ರದಲಾಗಿ ಕಾವುದೆ ಕಾರ್ಯದಲಾದಲ್ಲದೆ? ಕುರುಡ ಕಾಣ ಪಥವ; ಹೆಳವ ನಡೆಯಲರಿಯ, ಒಂದಿಲ್ಲದಿದ್ದ ಡೊಂದಾಗದು, ಜ್ಞಾನವಿಲ್ಲದ ಕ್ರೀ ಜಡನು; ಕ್ರೀಯಿಲ್ಲದ ಜ್ಞಾನವಾಗ್ಜಾಲ ಭ್ರಾಂತು ಇದು ಕಾರಣ ಸಿದ್ಧ ಸೋಮನಾಥನಲ್ಲಿ ಎರಡೂ ಬೇಕು ||

ಅಂತರಂಗದಲ್ಲಿ ಅರಿವಿಲ್ಲದವಂಗೆ ಬಹಿರಂಗದಲ್ಲಿ ಕ್ರೀಯಿದ್ದು ಫಲವೇನು? ಅದು ಕಣ್ಣಿಲ್ಲದವನ ಬಾಳುವೆಯಂತೆ, ಬಹಿರಂಗದಲ್ಲಿ ಕ್ರೀಯಿಲ್ಲದವಂಗೆ ಅಂತರಂಗದಲ್ಲಿ ಅರಿವಿದ್ದು ಫಲವೇನು ? ಅದು ಶೂನ್ಯಾಲಯದ ದೀಪದಂತೆ ಅಂತರಂಗದ ಅರಿವು ಬಹಿರಂಗದ ಕ್ರಿಯೆ ಈ ಉಭಯಾಂಗವೊಂದಾಗಬೇಕು ಅದೆಂತೆಂದಡೆ : ಅಂತರ್ಜ್ಞಾನಂ ಬಹಿಃಕ್ರಿಯಾ ಏಕೀಭಾವೋ ವಿಶೇಷತಃ ಇಂತೆಂದುದಾಗಿ, ಅಂತರಂಗದಲ್ಲಿ ಅರಿವು, ಬಹಿರಂಗದಲ್ಲಿ ಕ್ರಿಯೆಯುಳ್ಳ ಮಹಾತ್ಮನೆ ಭಕ್ತನಪ್ಪ, ಮಹೇಶ್ವರನಪ್ಪ, ಪ್ರಸಾದಿಯಪ್ಪ, ಪ್ರಾಣಲಿಂಗಿಯಪ್ಪ ಶರಣನೈಕ್ಯನಪ್ಪ ನಮ್ಮ ಪರಮಗುರು ಶಾಂತಮಲ್ಲಿಕಾರ್ಜುನಾ, ತಾನೆಯಪ್ಪ ||

ಲಿಂಗ ಜಂಗಮವೆಂಬ ಸನ್ಮತವಾದ ಕ್ರೀಯಾನು ಅಹುದಾಗದೆಂಬ ಸಂದೇಹವಾಗದು ಕ್ರೀವಿಡಿದು ತನುವ ಗಮಿಸುವುದು ಅರಿವಿಡಿದು ಮನವ ಗಮಿಸುವುದು ಅನುಭಾವದಿಂದಲೆ ಸಕಲೇಂದ್ರಿಯಂಗಳು ಕೂಡಲಚೆನ್ನಸಂಗಯ್ಯನಲ್ಲಿ ತಲ್ಲೀಯತದ್ರೂಪು ||

ಇಂತು ಜ್ಞಾನಕ್ರಿಯಾ ವಿಶ್ವಾಸಸ್ಥಲ ಸಮಾಪ್ತಿ ||

ಶ್ರೀಮದಮಿತೋರು ಲಿಂಗಾಂಗ ಸಂಯೋಗಾನುಭಾವ ಪ್ರಸಿದ್ದ ಪರಿಪೂರ್ಣ ಶೀಲ
ಪರಮಾದ್ವೈತ ವಿಶ್ರಾಂತರುಮಪ್ಪ ಪರಮಾಚಾರರಪ್ಪ ಶ್ರೀ ಕರಸ್ಥಲದ
ಮಲ್ಲಿಕಾರ್ಜುನೊಡೆಯರುಸಿರಿಸಿದ ಮಹಾನುಭಾವ ಬೋಧೆಯಪ್ಪ
ಶ್ರೀ ಮಹಾಬ್ರಹ್ಮಾದ್ವೈತಸಿದ್ಧಾಂತ ಷಟ್‌ಸ್ಥಲಾಭರಣದೊಳು
ಜ್ಞಾನಕ್ರಿಯಾ ವಿಶ್ವಾಸ ಮುಖ್ಯವಾದ ಉಪದೇಶಕ್ರಮ ಸಮಾಪ್ತಿ ||

 

ಭಕ್ತ ಸ್ಥಲ

೨೬. ಭಕ್ತ ಸ್ಥಲ

ಇಂತಪ್ಪ ಅಂತರಂಗದರಿವು ಬಹಿರಂಗದ ಕ್ರಿಯೆಯಲ್ಲಿ ಸದಾ ಸಂಪನ್ನನಾದ ಬ್ರಹ್ಮಜ್ಞಾನಿ ಯಪ್ಪ ಪರಮಲಿಂಗಾಂಗಿಗೆ ತನ್ನ ಆದಿಯಾದ ಪರಬ್ರಹ್ಮ ಲಿಂಗಾನುಸಂಧಾನ ಸಮರಸೈಕ್ಯಕ್ಕೆ ಸಾಧನವಾದ ಪ್ರಥಮ ಭಕ್ತ ಸ್ಥಲ ||

ವೃತ್ತ |

ಮಿಥ್ಯೈವ ಸತ್ಯಮಿವ ಭಾತಮಿದಂ ಶರೀರಂ
ಪ್ರಾಣಾರ್ಥಜಾತಮಿತ ತತ್ರ ನಿವೃತ್ತ ಚಿತ್ತಂ
ಭಕ್ತಿಕ್ರಿಯಾಚರಣ ಏವ ಸದಾವಿರಕ್ತಂ
ಭಕ್ತಸ್ಥಲಂ ಭವವಿಕಾರವಿದೂರಮಾಹುಃ ||  || ೧ ||

ಗ್ರಂಥ |

ಅರ್ಥ ಪ್ರಾಣಾಭಿಮಾನಂ ಚ ಗುರುಲಿಂಗಂ ಚ ಜಂಗಮಃ
ತಲ್ಲಿಂಗವೇದ್ಯ ಶರಣೋ ಭಕ್ತಸ್ಥಲ ಸುಬುದ್ಧಿಮಾನ್ ||  || ೨ ||

ಶಿವಭಕ್ತಮಹೋತ್ಸಾಹೀ ಶಿವಾರ್ಚನ ಪರಾಯಣಃ
ಶಿವಾಚಾರ ಸಮಾಯುಕ್ತೋ ದಯಾದಾಕ್ಷಿಣ್ಯ ಗೋಚರಃ ||  || ೩ ||

ದಂಭ ಮಾತ್ಸರ್ಯ ನಿರ್ಮುಕ್ತಕೋ ಯಥಾತಥ್ಯಾಭಿ ಭಾಷಣಃ
ಸಂಯತೋ ಧರ್ಮ ಸಂಪನ್ನಃ ಸರ್ವಾರ್ಥಂ ಸಾಧಯಂತಿ ತೇ ||  || ೪ ||

ದಿನೇ ದಿನೇ ವಿಶೇಷಂ ಚ ಮಾಸೇ ಮಾಸೇ ಮಹದ್ಘನೇ
ವತ್ಸರೇ ಚ ಮಹಾಚೋದ್ಯಂ ಮಮ ಭಕ್ತಸ್ಯ ಲಕ್ಷಣಂ ||  || ೫|

ವಚನ |

ಭಕ್ತ ಭಕ್ತನೆಂದೆಂಬರು ಪೃಥ್ವಿಯ ಪೂರ್ವಾಶ್ರಯವ ಕಳೆಯದನ್ನಕ್ಕ, ಅಪ್ಪುವಿನ ಪೂರ್ವಾಶ್ರಯವ ಕಳೆಯದನ್ನಕ್ಕ, ತೇಜದ ಪೂರ್ವಾಶ್ರಯವ ಕಳೆಯದನ್ನಕ್ಕ, ವಾಯುವಿನ ಪೂರ್ವಾಶ್ರಯವ ಕಳೆಯದನ್ನಕ್ಕ, ಆಕಾಶದ ಪೂರ್ವಾಶ್ರಯವ ಕಳೆಯದನ್ನಕ್ಕ, ಸೋಮ ಸೂರ್ಯ ಆತ್ಮರ ಕಳೆಗಳ ಪೂರ್ವಾಶ್ರಯವ ಕಳೆಯದನ್ನಕ್ಕ, ಭಕ್ತರೆಂದು ಲಿಂಗವ ಪೂಜಿಸು ವವರ ಕಂಡು ನಾ ಬೆರಗಾದೆ ಕಾಣಾ ಗುಹೇಶ್ವರಾ ||

ಪೃಥ್ವಿಯ ಪೂರ್ವಾಶ್ರಯ ಸಮ್ಮಾರ್ಜನೆ ರಂಗವಾಲಿಯಿಂದ ಹೋಹುದು, ಅಪ್ಪುವಿನ ಪೂರ್ವಾಶ್ರಯ ಮಂತ್ರವಿಭೂತಿಯಿಂದೆ ಹೋಹುದು, ಅಗ್ನಿಯ ಪೂರ್ವಾಶ್ರಯ ಧೂಪದೀಪದಿಂದ ಹೋಹುದು, ವಾಯುವಿನ ಪೂರ್ವಾಶ್ರಯ ಧ್ಯಾನ ಮೌನದಿಂದೆ ಹೋಹುದು, ಆಕಾಶ ಪೂರ್ವಾಶ್ರಯ ಜಪಸ್ತೋತ್ರದಿಂದ ಹೋಹುದು, ಚಂದ್ರ ಸೂರ್ಯರ ಪೂರ್ವಾಶ್ರಯ ಮಾಡುವ ಕ್ರೀಯಿಂದ ಹೋಹುದು, ಆತ್ಮನ ಪೂರ್ವಾಶ್ರಯ ಕಿಂಕೂರ್ವಾಣದಿಂದೆ ಹೋಹುದು, ಇದು ಕಾರಣ, ಭಕ್ತಕಾಯ ಮಮಕಾಯ ಕೂಡಲಚನ್ನಸಂಗಯ್ಯಾ ||

ಭಕ್ತ ಭಕ್ತನೆಂದೇನೋ ಭವಿಗಳು ಮನೆಯಲುಳ್ಳನ್ನಕ್ಕ ಭಕ್ತನೇ? ಭಕ್ತ ಭಕ್ತನೆಂದೇನೋ! ಅನ್ಯದೈವಸುರೆ ಮಾಂಸವುಳ್ಳನ್ನಕ್ಕ ಭಕ್ತನೇ, ಭಕ್ತ ಭಕ್ತನೆಂದನೇನೋ! ಹರಕೆ ತೀರ್ಥಯಾತ್ರೆ ಯುಳ್ಳನ್ನಕ್ಕ ಭಕ್ತನೇ? ಭಕ್ತನೇ? ಭಕ್ತ ಭಕ್ತನೆಂದೇನೋ? ತನುಮನಧನ ವಂಚನೆಯುಳ್ಳನ್ನಕ್ಕ ಭಕ್ತನೇ? ಇವರೆಲ್ಲರು ಎದೆಯಲ್ಲಿ ಕಲ್ಲನಿರುದುಕೊಂಡು ಸಾವಿಂಗೆ ಸಂಬಳಿಗರು ಕಾಣಾ ಗುಹೆಶ್ವರಾ ||

ಸೂಳೆ, ಸುರೆ, ಬೆಕ್ಕು, ನಾಯಿ, ಅನ್ಯದೈವ, ತಾಳ ಹಣ್ಣು ಇಷ್ಟುಳ್ಳನ್ನಕ್ಕರ, ಅವಭಕ್ತನೇ? ಅಲ್ಲ ಅಲ್ಲ ಅವ ಶಿವದ್ರೋಹಿ, ಅವ ಗುರುದ್ರೋಹಿ, ಹಂದಿ ಹಂದಿಯ, ಹೇಲ ತಿಂದು ಬಂದರ ಮೋರೆಯನೊಂದು ಮೂಸಿ ನೋಡುವಂತೆ ಕಾಣಾ ಕಲಿದೇವರದೇವಾ ||

ಅಯ್ಯಾ, ಭಕ್ತನೆಂತೆಂಬೆನಯ್ಯಾ ಯುಕ್ತಿ ಶೂನ್ಯನ? ಅದೇನು ಕಾರಣವೆಂದಡೆ : ಅವನು ತನುಮನಧನ ವಂಚಕನಾದ ಕಾರಣ, ಧನವ ಕೊಟ್ಟು ಜಂಗಮವನೊಲಿಸಬೇಕು, ಮನವ ಕೊಟ್ಟು ಲಿಂಗವನೊಲಿಸಬೇಕು, ತನುವ ಕೊಟ್ಟು ಪ್ರಸಾದವನೊಲಿಸಬೇಕು, ಇಂತೀ ತನುಮನ ಧನವ ಬಾರಿಸಿ ಕುರುಹ ಪೂಜಿಸುವ ಗೊರವರ ಮೆಚ್ಚುವನೆ ನಮ್ಮ ಕೂಡಲ ಸಂಗಮ ದೇವರು? ||

ಅರ್ಥ ಪ್ರಾಣಾಭಿಮಾನ ವಂಚನೆಯಿಲ್ಲದಿಹುದೆ ಭಕ್ತಿ, ಹೆಚ್ಚು ಕುಂದಿಲ್ಲದಿಹುದೆ ಸಮಯಾಚಾರ, ತನುಲಂಪಟ, ಮನವಿಕಾರ ಬಿಡದು, ನಾನಿನ್ನೇವೆನಯ್ಯಾ? ಒಡೆಯನ ಕಂಡ ನಾಯಿ ಬಾಲವ ಬಡಿದಡೆ, ಅದಕ್ಕೆ ವೆಚ್ಚಹತ್ತಿದುಂಟೆ? ಕೂಡಲಚನ್ನಸಂಗಮದೇವಾ ||

ಭಕ್ತ ಭಕ್ತನೆಂದು ಯುಕ್ತಿಗೆಟ್ಟು ನುಡಿವಿರಿ, ಭಕ್ತಿಸ್ಥಲವೆಲ್ಲರಿಗೆಲ್ಲಿಯದೋ? ಹಾಗದಾಸೆ, ಹಣವಿನಾಸೆಯುಳ್ಳನ್ನಕ್ಕ ಭಕ್ತನೆ? ಅಯ್ಯಾ, ಅರ್ಥ ಪ್ರಾಣಾಭಿಮಾನ ವಂಚನೆಯುಳ್ಳನ್ನಕ್ಕ ಭಕ್ತನೆ? ಹೊನ್ನು ಹೆಣ್ಣು ಮಣ್ಣು ಹಣಿದವಾಡದದನ್ನಕ್ಕ ಭಕ್ತನೇ? ಭಕ್ತರಿಗೆ ನಾವು ಹೇಳಿದಡೆ ದುಗುಡ ದುಮ್ಮಾನ, ನೀನೊಮ್ಮೆ ಹೇಳಾ ಪ್ರಳಯಕಾಲದ ಸೊಡ್ಡಾಳಾ ||

ವಚನದ ರಚನೆಯ ನುಡಿವ ಬರಿಬಾಯ ಭುಂಜಕರೆಲ್ಲ ಭಕ್ತರಪ್ಪರೆ ಅಯ್ಯಾ? ಮಾಡುವ ದಾಸೋಹದಿಂದ ಭಕ್ತಂಗೆ ಅವಗುಣಂಗಳಲ್ಲದಿರಬೇಕು, ಕೋಪದ ಕೆಚ್ಚಂ ಕಡಿದು, ಲೋಭಲಂಪಟಮಂ ಕೆದರಿ ಮೋಹದ ಮುಳ್ಳು ಮೊನೆಯ ತೆಗೆದು, ಮದದಚ್ಚಂ ಮುರಿದು, ಮತ್ಸರಿಪ ಸರ್ಪನಂ ಸಮತೆಯೆಂಬ ಗಾರುಡದಲ್ಲಿ ಗಾರುಡಿಸಿ, ಕರಣಾದಿ ಗುಣಂಗಳು ಹರಿಯಲೀಯದೆ, ವಿಶ್ರಮಿಸಿಪ್ಪ ಭಕ್ತನ ಕಾಯವೆ ಕೈಲಾಸ, ಅಂತಲ್ಲದೆ, ಬರಿಯ ಮಾತಿಂಗೆ ಮಾತನೆ ಕೊಟ್ಟು ತಾನಾಡಿದುದೆ ನೆಲೆಯೆಂಬಾತ ಭಕ್ತನೇ? ಅಲ್ಲ, ಉಪಜೀವಿ, ಹೇಮದಿಚ್ಛೆಗೆ ಹರಿದು ಕಾಮರತಿಗಳುಪುವ ಕೋಪದುರಿಯ ಹೊದ್ದುಕೊಂಬ, ಲೋಭಮೋಹದ ಕೆಚ್ಚ ಕೂಡಿಕೊಂಡು ನರಕದೊಳಗೋಲಾಡುವಾತ ಭಕ್ತನೇ? ಅಲ್ಲ, ಆದಿಯಲ್ಲಿ ನಮ್ಮವರು ಹೊನ್ನು ಹೆಣ್ಣು ಮಣ್ಣು ಈ ತ್ರಿವಿಧವ ಬಿಟ್ಟಿದ್ದರೆ? ಇಲ್ಲ, ಅವ ತಲೆಯೆತ್ತಲೀಯರಾಗಿ ಅನ್ಯಸಂಗವ ಹೊದ್ದರು ಭವಿಮಿಶ್ರವ ಮುಟ್ಟರು ಹಮ್ಮುಬಿಮ್ಮುಯಿಲ್ಲದಿಪ್ಪ ಇಂತಪ್ಪರೆ ನಮ್ಮ ಭಕ್ತರು, ನಮ್ಮ ಭಕ್ತರ ನೆಲೆಯ, ಮಹಾದಾನಿ ಸೊಡ್ಡಳ ನೀನೆ ಬಲ್ಲೆಯಲ್ಲದೆ, ಉಳಿದ ಜಡಜೀವಿಗಳೆತ್ತ ಬಲ್ಲರು? ||

ಭಕ್ತನು ಶಾಂತನಾಗಿರಬೇಕು; ಸತ್ಯನಾಗಿರಬೇಕು ತನ್ನ ಕೂರ್ತ ಬಂದ ಠಾವಿನಲ್ಲಿ ಭೂತಹಿತವಹ ವಚನವ ನುಡಿಯಬೇಕು, ಜಂಗಮ ಲಿಂಗದಲ್ಲಿ ನಿಂದೆಯಿಲ್ಲದಿರಬೇಕು, ಸಕಲ ಪ್ರಾಣಿಗಳ ತನ್ನಂತೆ ಕಾಣಬೇಕು, ತನುಮನಧನವ ಗುರುಲಿಂಗ ಜಂಗಮಕ್ಕೆ ಸವೆಸಬೇಕು, ಅಪಾತ್ರದಾನವ ಮಾಡಲಾಗದು, ಸಕಲೇಂದ್ರಿಗಳ ತನ್ನ ವಶವಂ ಮಾಡಿಕೊಂಬುದು, ಇದೇ ಮೊದಲಲ್ಲಿ ಬೇಕು, ನೋಡಾ! ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ, ಎನಗಿದೇ ಸಾಧನ ಕೂಡಲ ಚನ್ನಸಂಗಮದೇವಾ ||

೧೦

ಶಿವಭಕ್ತಿಯುಳ್ಳವಂಗೆ ಕಾಮ ಬೇಡ, ಕ್ರೋಧ ಬೇಡ, ಲೋಭ ಬೇಡ, ಮೋಹ ಬೇಡ, ಮದ ಬೇಡ, ಮತ್ಸರ ಬೇಡ, ಮತ್ತೆ ಶಿವಭಕ್ತಿಯುಳ್ಳವಂಗೆ ಕಾಮ ಬೇಕು, ಕ್ರೋಧ ಬೇಕು, ಲೋಭ ಬೇಕು, ಮೋಹ ಬೇಕು, ಮದ ಬೇಕು, ಮತ್ಸರ ಬೇಕು, ಬೇಕೆಂಬುದಕ್ಕಾವಗುಣ? ಬೇಡೆಂಬುದಕ್ಕಾವಗುಣ? ಕಾಮ ಬೇಡ ಪರಸ್ತ್ರೀಯರಲ್ಲಿ, ಕ್ರೋಧ ಬೇಡ ಗುರುವಿನಲ್ಲಿ, ಲೋಭ ಬೇಡ ಸಂಸಾರದಲ್ಲಿ, ಮೋಹ ಬೇಡ ತನುಮನಧನದಲ್ಲಿ, ಮದ ಬೇಡ ಶಿವಭಕ್ತರಲ್ಲಿ, ಮತ್ಸರ ಬೇಡ ತನುಮನಧನದಲ್ಲಿ, ಮದ ಬೇಡ ಶಿವಭಕ್ತರಲ್ಲಿ, ಮತ್ಸರ ಬೇಡ ಸಕಲಪ್ರಾಣಿಗಳಲ್ಲಿ, ಬೇಡಾಯೆಂಬುದೀ ಗುಣ! ಬೇಕೆಂಬುದಕ್ಕಾವ ಗುಣ? ಕಾಮ ಬೇಕು ಲಿಂಗದಲ್ಲಿ, ಕ್ರೋಧ ಬೇಕು ಕರಣಾದಿ ಗುಣಂಗಳಲ್ಲಿ, ಲೋಭ ಬೇಕು ಪಾದೋದಕ ಪ್ರಸಾದದಲ್ಲಿ, ಮೋಹ ಬೇಕು ಗುರುಲಿಂಗ ಜಂಗಮರಲ್ಲಿ ಮದಬೇಕು ಶಿವಾಚಾರದಿಂದ ಘನವಿಲ್ಲೆಂದು, ಮತ್ಸರ ಬೇಕು ತನ್ನ ಮುಕ್ತಿಗೆ ವಕ್ರವಹಲ್ಲಿ ಇಂತೀ ಷಡ್ವಿಧವನರಿದು, ಷಡ್ವಿಧವ ಬಿಟ್ಟು, ಷಡ್ವಿಧವ ಹಿಡಿಯಬಲ್ಲಡೆ, ಆತನೆ ಸಹಜ ಸದ್ಭಕ್ತ ಕಾಣಾ, ಕೂಡಲಚನ್ನಸಂಗಮದೇವಾ ||

೧೧

ನಿಮ್ಮ ಭಕ್ತಂಗೆ ಮಲತ್ರಯವಿಲ್ಲ, ಅದೇನು ಕಾರಣವೆಂದಡೆ, ತನುವ ಸದಾಚಾರಕ್ಕರ್ಪಿಸಿ, ಮನವ ಮಹಾಲಿಂಗ ಧ್ಯಾನದಲ್ಲಿರಿಸಿ, ಧನವ ನಿಮ್ಮ ಶರಣರ ದಾಸೋಹಕ್ಕೆ ಸವೆಯ ಬಲ್ಲನಾಗಿ, ಇಂತೀ ತ್ರಿವಿಧವ ತ್ರಿವಿಧಕ್ಕೆ ಕೊಟ್ಟ ಬಳಿಕ ಆ ಭಕ್ತನ ಮನ ನಿಶ್ಚಿಂತ; ಆ ಭಕ್ತನು ತನು ನಿರ್ಮಲ; ಆ ಭಕ್ತನ ಧನ ನಿರ್ವಾಣ, ಇಂತಪ್ಪ ಭಕ್ತ ಪ್ರಸಾದ ಕಾಯನಯ್ಯಾ ಕೂಡಲ ಚನ್ನಸಂಗಮದೇವಾ ||

೧೨

ಪರಂಜ್ಯೋತಿ ವಸ್ತು ಉಪದೇಶವ ಕೊಟ್ಟು ಗುರುವಾದ, ಕರಸ್ಥಲಕ್ಕೆ ಬಂದು ಲಿಂಗವಾದ, ಹಸರವಾದ ಪ್ರಪಂಚನಳಿಸಿದ, ದಾಸೋಹವ ಮಾಡಿಸಿಕೊಂಡು ಜಂಗಮವಾದ, ಆ ಗುರುಲಿಂಗ ಜಂಗಮವೊಂದೆಯಲ್ಲದೆ ಭಿನ್ನವಿಲ್ಲ, ಮೂರಕ್ಕೆ ಮೂರನಿತ್ತು ಮೂರನೊಂದ ಮಾಡಬಲ್ಲಡೆ ಆ ಭಕ್ತನಚ್ಚ ಪ್ರಸಾದಿ ಕಾಣಾ, ಕೂಡಲಸಂಗಮದೇವ

ಶ್ರೀಮದ್ ಬ್ರಹ್ಮಜ್ಞಾನಿಯಪ್ಪ ಭಕ್ತನ ಪ್ರಥಮಸ್ಥಲ ಸಮಾಪ್ತ ||

೨೭. ಆಚಾರಲಿಂಗ ಮಹಾತ್ಮ್ಯ ಸ್ಥಲ

ಇಂತು ಗುರುಲಿಂಗಜಂಗಮವೆಂಬ ತ್ರಿವಿಧದಾಸೋಹ ಸಂಪನ್ನನಾದ ಬ್ರಹ್ಮಜ್ಞಾನಿಯಪ್ಪ ಸಹಜ ಸದ್ಭಕ್ತನ ಆಚಾರಲಿಂಗ ಮಾಹಾತ್ಮ್ಯಸ್ಥಲ ||

ಗ್ರಂಥ |

ಅರೂಪಂ ನಿಷ್ಕಲಂ ಬ್ರಹ್ಮ ಭಾವಾತೀತಂ ನಿರಂಜನಂ
ಶಬ್ದಾದಿವಿಷಯಾತೀತಂ ಮೂಲಲಿಂಗಮಿಹೋಚ್ಯತೇ ||  || ೧ ||

ಮೂಲಮಂತ್ರ ಸ್ವರೂಪಯ ಮೂಲಮಂತ್ರಾತ್ಮರೂಪಿಣೇ
ಮೂಲಪ್ರಕೃತಿ ಸಂಜ್ಞಾಯ ಮೂಲಸ್ತಂಭಾಯ ಮೂರ್ತಯೇ ||  || ೨ ||

ತತ್ವರಾಶಕ್ತಿರಿತ್ಯುಕ್ತಾ ಪೀಠಿಕಾ ಸೈವ ನಾನ್ಯಥಾ
ಸರ್ವಸ್ಯೋತ್ಪತ್ತಿಲಕ್ಷಿತ್ವಾತ್ ಪ್ರಥಮಂ ಲಿಂಗಮುಚ್ಯತೇ ||  || ೩ ||

ವೇದಾದಿನಾಮ ನಿರ್ನಾಮ ಮಹತ್ವಂ ಮಮ ರೂಪಕಂ
ಗುರೂಕ್ತ ಮಂತ್ರಮಾರ್ಗೇಣ ಇಷ್ಟಲಿಂಗಂತು ಶಾಂಕರಿ ||  || ೪ ||

ಇಷ್ಟಮೂರ್ಜ ಸ್ವಭಕ್ತಾನಾಂ ಸಮಂ ಯಚ್ಛತಿ ಸರ್ವದಾ
ಇಷ್ಟಲಿಂಗಮಿತ ಪ್ರಾಹುಃ ತಸ್ಮಾದಾಥರ್ವಣೀ ಶ್ರುತಿಃ ||  || ೫ ||

ವಚನ |

ಲಿಂಗವೆಂಬುದು ಪರಶಿವಶಕ್ತಿಯ ನಿಜನಿವಾಸ, ಲಿಂಗವೆಂಬುದು ಪರಶಿವನ ಪರಮಜ್ಞಾನ ತೇಜ, ಲಿಂಗವೆಂಬುದು ಅಖಂಡ ಸ್ವರೂಪವು, ಲಿಂಗವೆಂಬುದು ಹರಿಬ್ರಹ್ಮರ ನಡುವೆ ನೆಗಳ್ದ ಜ್ಯೋರ್ತಿಲಿಂಗ! ಲಿಂಗವೆಂಬುದು ಚರಾಚರದ ಲಯದಮನಸ್ಥಾನ, ಲಿಂಗವೆಂಬುದು ಪಂಚಸಂಜ್ಞೆಯನುಳ್ಳದು, ಅದೆಂತೆಂದಡೆ – ಜ್ವಾಲಾಮಾಲಾವೃತಾಂಗಾಯ ಜ್ವಲಸ್ತಂಭರೂಪಿಣೇ, ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ಲೀಯತೇ ಗಮ್ಯತೇ ಯತ್ರ ಯೇನ ಸರ್ವ ಚರಾಚರಂ, ತದೇತಲ್ಲಿಂಗಮಿತ್ಯುಕ್ತಂ ಲಿಂಗತತ್ವ ಪರಾಯಣೈಃಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್ ಯದಾದವೀಶ್ವರಂ ತೇಜಸ್ತಲ್ಲಿಂಗ ಪಂಚ ಸಂಜ್ಞಕಂ || ಎಂದುದಾಗಿ, ಇದು ಲಿಂಗದ ಮರ್ಮ ಈ ಲಿಂಗವನರಿದಾತನೆ ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರ ||

ವಟಬೀಜ ವಟವೃಕ್ಷ ಕೋಟಿಯ ನುಂಗಿದಂತೆ ಸಟೆಯಿಂದಲಾದ ಅಜಾಂಡ ಬ್ರಹ್ಮಾಂಡ ಕೋಟಿಯನೊಳಕೊಂಡಿಪ್ಪ ಲಿಂಗವೇ, ದಿಟಪುಟವಾಗಿ ಎನ್ನ ಕಂಗೆ ಮನಃಕರಸ್ಥಲಕ್ಕೆ ಬಂದು ಪ್ರಕಟವಾದೆ ಮಝ ಭಾಪು ! ಮಝ ಭಾಪು ಲಿಂಗವೇ, ‘ನ ಚ ರೇಣು ನ ಚ ಚಕ್ಷು’ ಎಂದೆನಿಸುವ ಲಿಂಗವೇ, ನಿನ್ನವ ಮುಟ್ಟಿ ಉತ್ಪತ್ತಿ ಸ್ಥಿತಿಲಯಕ್ಕೆ ಹೊರಗಾದೆನು ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ ||

”ಯತೋ ವಾಚೋ ನವರ್ತಂತೇ ಅಪ್ರಾಪ್ಯ ಮನಸಾ ಸಹ” ಎಂದೆನಿಸುವ ಲಿಂಗವು, ”ಚಕಿತಮಭಿದತ್ತೇ” ಎಂದೆನಿಸುವ ಲಿಂಗವು, ”ಅಣೋರಣೀಯಾನ್ ಮಹತೋ ಮಹೀಯಾನ್” ಎಂದೆನಿಸುವ ಲಿಂಗವು, “ಅಯಂ ಮೇ ಹಸ್ತೋ ಭಗವಾನ್, ಅಯಂ ಮೇ ಭಗವತ್ತರಃ” ಎಂದೆನಿಸುವ ಲಿಂಗವು ”ಏಕ ಮೂರ್ತಿಸ್ತ್ರಿಧಾ ಭೇದಃ” ಎಂದೆನಿಸುವ ಲಿಂಗವು, ಶ್ರೀ ಗುರುಲಿಂಗ ಜಂಗಮವಾಗಿ, ”ಇಷ್ಟಂ ಪ್ರಾಣಸ್ತಥಾಭಾವಃ” ಎಂದು ‌ತ್ರಿವಿಧವು ಏಕೀಭವಿಸಿ, ಎನ್ನ ಕರಸ್ಥಲಕ್ಕೆ ಬಂದು ಕರತಳಾಮಳಕವಾಗಿ ತೋರುತ್ತಿದೆ, ಆಹಾ! ಎನ್ನ ನಿತ್ಯವೇ, ಆಹಾ! ಎನ್ನ ಪುಣ್ಯವೇ, ಆಹಾ! ಎನ್ನ ಭಾಗ್ಯವೇ, ಶಿವಶಿವ, ಶಿವಶಿವ, ಮಹಾದೇವ, ಮಹಾದೇವ, ನೀವೆ ಬಲ್ಲಿರಿ; ನೀವೆ ಬಲ್ಲಿರಿ; ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ||

ಕಾಣಬಾರದ ಲಿಂಗವೆನ್ನ ಕರಸ್ಥಲಕ್ಕೆ ಬಂದಡೆ, ಹೇಳಲಮ್ಮೆ; ಕೇಳಲಮ್ಮೆ; ಎನಗಿದು ಚೋದ್ಯ; ಎನಗಿದು ಚೋದ್ಯ ಗುಹೇಶ್ವರನೆಂಬ ನಿರಾಕಾರದ ಬಯಲು ಸಾಕಾರವಾಗಿ ಎನ್ನ ಕರಸ್ಥಲಕ್ಕೆ ಬಂದಡೆ, ಅಹುದೆನಲಮ್ಮೆ; ಅಲ್ಲೆನಲಮ್ಮೆ ||

ಕಾಣದುದನರಸುವರಲ್ಲದೆ ಕಂಡುದನರಸುವರೇ? ಘನಕ್ಕೆ ಘನವಾದ ವಸ್ತು, ತಾನೆ ಗುರುವಾದ; ತಾನೆ ಲಿಂಗವಾದ, ತಾನೆ ಜಂಗಮವಾದ, ತಾನೆ ಪ್ರಸಾದವಾದ, ತಾನೆ ಮಂತ್ರವಾದ, ತಾನೆ ತಂತ್ರವಾದ, ತಾನೆ ಸಕಲ ವಿದ್ಯಾಸ್ವರೂಪನಾದ, ಇಂತಿವೆಲ್ಲವ ನೊಳಗೊಂಡು ಎನ್ನ ಕರಸ್ಥಲಕ್ಕೆ ಬಂದ ಬಳಿಕ ಎನ್ನು ನಿರ್ವಿಕಾರ ಕಾಣಾ ಗುಹೇಶ್ವರಾ ||

ಕ್ಷೀರಸಾಗರದೊಳಗಿರ್ದು ಆಕಳ ಚಿಂತೆಯೇಕೆ? ಮೇರುಮಂದಿರದೊಳಗಿರ್ದು ಜರಗ ತೊಳೆವ ಚಿಂತೆಯೇಕೆ? ಶ್ರೀ ಗುರುವಿನೊಳಗಿರ್ದು ತತ್ತ್ವವಿದ್ಯೆಯ ಚಿಂತೆಯೇಕೆ? ಪ್ರಸಾದದೊಳಗಿರ್ದು ಮುಕ್ತಿಯ ಚಿಂತೆಯೇಕೆ? ಕರಸ್ಥಲಕೆ ಲಿಂಗ ಬಂದ ಬಳಿಕ ಇನ್ನಾವ ಚಿಂತೆ ಹೇಳಾ, ಗುಹೇಶ್ವರಾ ||

ಎನ್ನ ಕರಸ್ಥಲದ ಲಿಂಗದೊಳಗೊಂದು ಮಹಾಬೆಳಗ ಕಂಡೆನಯ್ಯಾ! ಮಹಾಮಂಗಳ ನಿಳಯವಾಗಿ ತೋರುತ್ತಿದೆ, ಗುಹೇಶ್ವರನೆಂಬ ಲಿಂಗಾರತಿಗಳು ಸಂಗನಬಸವಣ್ಣನ ನಿವಾಳಿ ಸುತ್ತಿದ್ದವಯ್ಯಾ ||

ಕರಸ್ಥಲದ ಜ್ಯೋತಿಯದು ಕರುವಿಟ್ಟ ಎರಕವದು, ಅದರ ನೆಲೆಯನರಿದಡೆ ನಿಜ ದಾನಂದವು, ಹೊಲಬುದೋರದಿಹ ನಿಸ್ಸೀಮನ ಹೊಲಬನರಿದು ಕೂಡುವಾತನೆ ಮೃಡನು ಕಾಣಾ ರಾಮನಾಥ ||

ಸತ್ತು ರೂಪು ಲಿಂಗ, ಚಿತ್ತು ರೂಪು ಜಂಗಮ, ಆನಂದ ರೂಪು ಪ್ರಸಾದ, ಇಂತೀ ತ್ರಿವಿಧದರಿವನು ಶ್ರೀಗುರು ಇಷ್ಟಲಿಂಗದಲ್ಲಿ ತೋರಿ ಬಿಜಯಂಗೈಸಿ ಕೊಟ್ಟ ಬಳಿಕ ಸತ್ತು ಚಿತ್ತು ಆನಂದವೆಂಬ ಬಟ್ಟಬಯಲು ಮಾತೇಕಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ||

೧೦

ಸಾಕಾರವಿಡಿದರ್ಚನೆ ಪೂಜನೆಯ ಮಾಡುವುದಲ್ಲದೆ ನಿರಾಕಾರವ ನಂಬಲಾಗದು, ಶ್ರೀ ಗುರುಲಿಂಗವು ಪ್ರಾಣಲಿಂಗವನು ಕರಸ್ಥಲದಲ್ಲಿ ಬಿಜಯಂಗೈಸಿ ಕರುಣಿಸಿದ ಬಳಿಕ ವಜ್ರದಲ್ಲಿ ಬಯಲನರಸುವರೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ||

೧೧

ಕರಸ್ಥಲದಲ್ಲಿ ಶಿವಲಿಂಗವ ಬಿಜಯಂಗೈಸಿಕೊಂಡು ಕಣ್ಣು ಮುಚ್ಚಿ ಬಾಯಿ ತೆರೆದು ಅನ್ಯವ ನೆನೆವನ್ನಬರ, ಇನ್ನು ಲಿಂಗದ ಮರ್ಮವನರಿದುದಿಲ್ಲ, ಉಂಟಾದುದ ಹುಸಿಮಾಡಿ, ಇಲ್ಲದುದ ನೆನೆದಡೆ ಅದು ಸಹಜವಾಗಬಲ್ಲುದೇ? ದೇವದೇಹಿಕ ಭಕ್ತ, ಭಕ್ತದೇಹಿಕ ದೇವನೆಂದುದಾಗಿ, ತನ್ನೊಳಗೆ ಲಿಂಗ, ಲಿಂಗದೊಳಗೆ ತಾನು, ನೆನೆಯಲಿಲ್ಲ, ನೆನೆಹಿಸಿಕೊಳ್ಳಲಿಲ್ಲಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ||

೧೨

ನಿತ್ಯನಿರಂಜನ ಪರಂಜ್ಯೋತಿಲಿಂಗವು ಪ್ರತ್ಯಕ್ಷವಾಗಿ ತನ್ನ ಕರಸ್ಥಲಕ್ಕೆ ಬಂದಿರುತ್ತಿರಲು ಮತ್ತೆ ನೆನೆನೆನೆದು ಬದುಕಿದೆನೆಂಬುದು ಅಜ್ಞಾನ ಕಾಣಿರೇ! ಸತ್ಯವು ಸರ್ವಾಂಗಲಿಂಗ ವೆಂದರಿಯದೆ ಮತ್ತೆ ಕಾಯವೆರಸಿ ಕೈಲಾಸಕ್ಕೆ ಹೋದೇನೆಂಬುದು ಕ್ರಮವಲ್ಲ, ಪಂಚಾಮೃತವು ಮುಂದೆ ಬಂದಿರುತ್ತಿರಲು, ಹಸಿದೆನೆಂದು ಲೋಗರ ಮನೆಯನ್ನವ ಬೇಡುವರೇ? ಕಣ್ಣಮುಂದೆ ನಿಧಾನವಿರುತ್ತಿರಲು, ಬಳಸಲರಿಯದೆ ಬಡತನದಲ್ಲಿಹರೇ? ಲಿಂಗವಿಲ್ಲದವರು ಮೊದಲಾಗಿ ಲಿಂಗವ ನೆನೆದು ಬದುಕಿದೆನೆಂಬರು ಇದ ಕಂಡು ಕಂಡು ನಂಬದಿಹುದುಚಿತವೆ? ಆಹಾ! ಇದು ಗುಣವಲ್ಲ! ಮುಂಗೈ ಕಂಕಣಕ್ಕೆ ಕನ್ನಡಿ ಬೇಡ! ಅಂಗದ ಮೇಲೆ ಲಿಂಗವಿದ್ದುದಕ್ಕೆ ಲಿಂಗದಪರಿಯೆಂತೆಂದು ಅನ್ಯರ ಬೆಸಗೊಳಲಿಲ್ಲ, ಬೇರೆ ಮತ್ತರಸಲಿಲ್ಲ; ಕಾಣೆನೆಂದು ಮರುಗಲಿಲ್ಲ, ಮುಂದೆ ಜನ್ಮವುಂಟೆಂದು ಮನದಲ್ಲಿ ನೆನೆಯಲಿಲ್ಲ. ಇದು ಕಾರಣ, ತನ್ನ ಕರಸ್ಥಲದಲ್ಲಿದ್ದ ವಸ್ತುವ ತಾನೆಂದರಿದಡೆ, ತಾನೆ ಶಿವನು, ಇದು ಸತ್ಯ ಶಿವ ಬಲ್ಲ ಶಿವನಾಣೆ! ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ||

೧೩

ಅಂಗೈಯವ ಲಿಂಗವ ಕಂಗಳು ನೋಡಿ, ಮನ ಹಾರೈಸಿದಲ್ಲಿ ಅಂಗದಲ್ಲಿಯ ಇಂದ್ರಿಯಂಗಳೆಲ್ಲವು ಲಿಂಗೇಂದ್ರಿಯಂಗಳಾದವು, ಅಂಜದಿರು ಮನವೆ, ಲಿಂಗವು ನಿನಗೆ ದೂರವೆಂದು, ಮನೋಮಧ್ಯದೊಳಿಪ್ಪನು, ಅಂಗದ ಕಂಗಳಲ್ಲಿಪ್ಪನು, ಭಾವದ ಪ್ರಾಣದಲ್ಲಿಪ್ಪನು, ಅಂಗ ಪ್ರಾಣ ಭಾವ ಸರ್ವಾಂಗಲಿಂಗವಾದ ಬಳಿಕ, ಲಿಂಗಮಧ್ಯೇ ಪ್ರಾಣವು, ಪ್ರಾಣಮಧ್ಯೇ ಲಿಂಗವು ಉತ್ಪತ್ತಿ ಸ್ಥಿತಿಲಯವಿಲ್ಲವಾಗಿ, ಲಿಂಗದಿಂದ ಜನಿಸಿ ಲಿಂಗೇಂದ್ರಿಯ ಲಿಂಗಜ್ಞಾನದಲ್ಲಿ ವರ್ತಿಸಿ ದ್ವೈತಾದ್ವೈತವಿಲ್ಲವಾಗಿ ಬಂದುದೆ ಲಿಂಗದ ಮೇಲೆ! ಇದ್ದುದೆ ಲಿಂಗದ ಆನಂದ, ಮನೋಲಯವೆ ಲಿಂಗದ ನಿರವಯವು ಇದು ಸತ್ಯ; ಶಿವಬಲ್ಲ ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ||

ಇಂತು ಆಚಾರಲಿಂಗ ಮಹಾತ್ಮ್ಯಸ್ಥಲ ಸಮಾಪ್ತ ||

೨೮. ಆಚಾರಲಿಂಗಾರ್ಚನ ಸ್ಥಲ

ಇಂತಪ್ಪ ಆಚಾರಲಿಂಗ ಮಹಾತ್ಮ್ಯೆಯಲ್ಲಿ ಅವಿರಳಸಂಗಿಯಾದ ಬ್ರಹ್ಮಜ್ಞಾನಿಯಪ್ಪನ ಸಹಜ ಸದ್ಭಕ್ತನ ಆಚಾರಲಿಂಗಾರ್ಚಾನಸ್ಥಲ ||

ಗ್ರಂಥ |

ಬ್ರಾಹ್ಮೀ ಮೂಹೂರ್ತೇ ಚೋತ್ಥಾಯ ಲಿಂಗಂ ಸ್ಪೃಷ್ಟ್ವಾ ವಿಧಾನತಃ
ಪ್ರಭಾತೇ ಶಿವಭಕ್ತಾನಾಂ ಮುಖಂ ಯಃ ಪರಿಪಶ್ಯತಿ
ತಸ್ಮೈವ ಜನ್ಮ ಸಫಲ ಮಿತ್ಯಾಹ ವಚನಂ ಶಿವಃ ||  || ೧ ||

ಪೂಜಯೇದ್ಗುರುಣಾದತ್ತಮಿಷ್ಟಲಿಂಗಮತಂದ್ರಿತಃ
ಪಾಣಿಪದ್ಮಾಸನೇ ನಿತ್ಯಂ ತ್ರಿಕಾಲಂ ಶುದ್ಧಮಾನಸಃ ||  || ೨ ||

ವೃತ್ತ |

ತದೇವ ಹಸ್ತಾಂಬುಜ ಪೀಠಮಧ್ಯೇ
ನಿಧಾಯ ಲಿಂಗಂ ಪರಮಾತ್ಮ – ಚಿಹ್ನಂ
ಸಮರ್ಚಯೇದೇಕಧಿಯೋಪಚಾರೈ –
ರ್ನರಸ್ಯ ಬಾಹ್ಯಾಂತರ ಭೇದ ಭಿನ್ನಂ ||  || ೩ ||

ಯೋ ಹಸ್ತಪೀಠೇ ನಿಜಲಿಂಗಮಿಷ್ಟಂ
ವಿನ್ಯಸ್ಯ ತಲ್ಲೀನ ಮನಃ ಪ್ರಚಾರಃ
ಬಾಹ್ಯ ಕ್ರಿಯಾ ಸಂಕುಳ ನಿಷ್ಟೃಹಾತ್ಮಾ
ಸಂಪೂಜಯೇತ್ಯಂಗ ಸ ವೀರಶೈವಃ ||  || ೪ ||

ಲಿಂಗ ಮಧ್ಯೇ ಜಗತ್ಸರ್ವ ತ್ರೈಲೋಕ್ಯಂ ಸಚರಾಚರಂ
ಲಿಂಗಬಾಹ್ಯಾತ್ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ ||  || ೫

ವಚನ |

ಮುಂದು ಜಾವದೊಳೆದ್ದು ಲಿಂಗದಂಘ್ರಿಯ ಮುಟ್ಟಿ ಸುಪ್ರಭಾತದೊಳು ಶಿವಶರಣರ ಮುಖವ ನೋಡುವುದು, ಹುಟ್ಟಿದುದಕ್ಕಿದೆ ಸಫಲ ಕಂಡಯ್ಯ ಸತ್ಯವಚನಮಿಂತೆಂದುದಾಗಿ, ಇಷ್ಟಿಲ್ಲದವರ ನೊಲ್ಲೆ ನೊಲ್ಲೆ ಕಾಣಾ ಗುಹೇಶ್ವರಾ ||

ಹೊತ್ತುಳ್ಳಲ್ಲಿ ಎದ್ದು ಅಗ್ಫವಣಿ ಪತ್ರೆಯಂ ತಂದು ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ, ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು? ಹೊತ್ತು ಹೋಗದ ಮುನ್ನ, ಮೃತ್ಯು ಒಯ್ಯದ ಮುನ್ನ, ಕರ್ತನ ಪೂಜಿಸು ನಮ್ಮ ಕೂಡಲಸಂಗಯ್ಯನ ||

ಉಂಬ ಬಟ್ಟಲು ಬೇರೆ ಕಂಚಲ್ಲ, ನೋಡುವ ದರ್ಪಣ ಬೇರೆ ಕಂಚಲ್ಲ, ಭಾಂಡ ಒಂದೆ, ಭಾಜನ ಬೇರೆ, ಬೆಳಗಿ ಕನ್ನಡಿಯೆನಿಸಿತ್ತಯ್ಯ! ಅರಿದಡೆ ಶರಣ, ಮರೆದಡೆ ಮಾನವ; ಮರೆಯದೆ ಪೂಜಿಸು ನಮ್ಮ ಕೂಡಲಸಂಗಯ್ಯನ ||

ಹೊತ್ತಾರೆದ್ದು ಲಿಂಗದೇವನ ದೃಷ್ಟಿವಾರೆ ನೋಡದವನ ಸಂಸಾರವೇನವನ? ನಡೆವೆಣನ ನುಡಿವೆಣನ ಸಂಸಾರವೇನವನ? ಬಾಳುವೆಣನ ಬೀಳುವೆಣನ ಕೂಡಲಸಂಗಮದೇವನೊಲ್ಲದ ಪಾಪಿಯ? ||

ಉದಯ ಕಾಲ, ಮಧ್ಯಾಹ್ನ ಕಾಲ, ಅಸ್ತಮಯ ಕಾಲದಲ್ಲಿ ತನ್ನ ಇಷ್ಟಲಿಮಗಕ್ಕೆ ಅಷ್ಟ ವಿಧಾರ್ಚನೆ ಷೋಡಶೋಪಚಾರವ ಮಾಡುವಾತನೆ ಸದ್ಭಕ್ತನು, ಇಂತೀ ತ್ರಿಕಾಲದಲ್ಲಿ ಲಿಂಗಾರ್ಚನೆಯಂ ಮಾಡುವಾತನು ಭಕ್ತನಲ್ಲ, ಶರಣನಲ್ಲ, ಲಿಂಗೈಕ್ಯನಲ್ಲ ಆತನು ಪಂಚ ಮಹಾಪಾತಕನು, ಘಾತಕನು, ಲಿಂಗಚೋರಕನು ಕೇಳಾ ಇಂತೆಂದುದು ನಮ್ಮ ಕೂಡಲಚನ್ನಸಂಗಯ್ಯನ ವಚನ ||

ಅಷ್ಟವಿಧಾರ್ಚನೆ ಷೋಡಶೋಪಬೌರವೆಂಬುದು ಬಾಹ್ಯಕ್ರೀಯೆಂಬ ಭಾವಭ್ರಮಿತರ ಮಾತು ಕೇಳಲಾಗದು ಕೇಳಲಾಗದು, ಧನವುಳ್ಳಾತ ಅಷ್ಟಸಂಪದೈಶ್ವರ್ಯ ಭೋಗವ ಭೋಗಿಸಬಲ್ಲನಲ್ಲದೆ ಧನಹೀನ ದರಿದ್ರನೇನ ಭೋಗಿಸುವನೋ! ಲಿಂಗವು ಪ್ರಾಣವು ಅವಿರಳಾತ್ಮಕವಾಗಿ ಉತ್ಕೃಷ್ಟವಾಗಿದ್ದು ಆ ಅಮಳ ಸೋಂಕು ತುಳುಕಿ ಬಾಹ್ಯಕ್ರೀಯಾಗಿ ಕರಸ್ಥಲಕ್ಕೆ ಬಂದಿತ್ತೈಸೆ! ಇದು ಅಂತರಂಗವಲ್ಲ; ಬಹಿರಂಗವಲ್ಲ ಉರಿಲಿಂಗದೇವರು ||

ಜಲ, ಗಂಧಾಕ್ಷತೆ, ಪತ್ರೆ, ಪುಷ್ಪ, ಧೂಪ, ದೀಪ, ನೈವೇದ್ಯ ತಾಂಬೂಲದಿಂದ ಪೂಜೆಯ ಮಾಡುವೆನು, ಇಂತಪ್ಪ ಅಷ್ಟವಿಧಾರ್ಚನೆಯಂ ಷೋಡಶೋಪಾಚಾರವಂ ಮಾಡುವೆನು ಅದೆಂತೆಂದಡೆ ಅರ್ಘ್ಯು ಪಾದ್ಯಂ ತಥಾಚಮ್ಯಂ ಸ್ನಾನಂ ಪಂಚಾಮೃತಾದಿಭಿಃ | ದರ್ಪಣಂ ಧೂಪದೀಪಂ ಚ ಚಾಮರಂ ಚಾತಪತ್ರಕಂ || ಗೀತಂ ವಾದ್ಯಂ ತಥಾ ನೃತ್ಯಂ ಜಪಸ್ತೋತ್ರಂ ಪ್ರಣಾಮಕಂ | ಪ್ರದಕ್ಷಿಣಂ ಮಾಯಾಚೋಕ್ತಂ ಷೋಡಶಸ್ಯೋಪಚಾರಕಂ || ಎಂದುದಾಗಿ, ಈ ಕ್ರಮದಿಂದೆ ಸತ್ಕೀರ್ತಿಯಿಂ ನಿಮ್ಮಲ್ಲಿ ಸಾರುವೆನು ಕೂಡಲಚನ್ನಸಂಗಮದೇವಾ ||

ಅಷ್ಟವಿಧಾರ್ಚನೆ ಷೋಡಶೋಪಚಾರವ ನಾನು ನಿಮಗೆ ಹಂಗು ಹರಿಯಿಲ್ಲದೆ ಮಾಡುವೆನಯ್ಯಾ ! ನಾನು ಮಾಡುವ ಕ್ರೀಗಳೆಲ್ಲವೂ ನೀವೆಯಾದ ಕಾರಣ ನಿಮ್ಮಲ್ಲಿ ತದ್ಗತನಾಗಿರ್ದೆ ಕಾಣಾ ಗುಹೇಶ್ವರಾ ||

ಅಷ್ಟವಿಧಾರ್ಚನೆ ಷೋಡಶೋಪಚಾರವ ಅಂದಂದಿನ ಕೃತ್ಯವನಂದಂದಿಗೆ ನಾನು ಮಾಡಿ ಶುದ್ಧನಯ್ಯಾ ! ಹಂಗು ಹರಿಯಿಲ್ಲದ ಕಾರಣ, ಕೂಡಲಸಂಗಮದೇವ ನಿಃಫಲದಾಯಕನಾಗಿ, ನಾನು ಮಾಡಿ ಶುದ್ಧನಯ್ಯಾ ||

೧೦

ಅಷ್ಟವಿಧಾರ್ಚನೆಯ ಮಾಡುವುದು, ಮಾಡಿದ ಪೂಜೆಯ ನೋಡುವುದು ಶಿವತತ್ವಗೀತವ ಪಾಡುವುದು ಶಿವನ ಮುಂದೆ ನಲಿದಾಡುವುದು ಭಕ್ತಿ ಸಂಭಾಷಣೆಯ ಮಾಡುವುದು ನಮ್ಮ ಕೂಡಲಸಂಗನ ಕೂಡುವುದು ||

೧೧

ಅಚ್ಚುಗವೇಕಯ್ಯಾ ಸಂಸಾರದೊಳಗೆ? ನಿಚ್ಚ ನಿಚ್ಚ ಶಿವರಾತ್ರಿಯ ಮಾಡುವುದು ! ಅರ್ಚನೆ ಪೂಜನೆಯ ಮಾಡುವುದು, ಬೇಗ ಬೇಗ ನಮ್ಮ ಕೂಡಲಸಂಗನ ಕೂಡುವುದು ||

೧೨

ಆಡಿ ಕಾಲು ದಣಿಯದಿವೆ, ನೋಡಿ ಕಣ್ಣು ದಣಿಯದಿವೆ, ಹಾಡಿ ಬಾಯಿ ದಣಿಯದಿನ್ನೇವೆ, ನಿನ್ನೇವೆ? ನಾ ನಿಮ್ಮ ಕೈಯಾರೆ ಮುಟ್ಟಿ ಪೂಜಿಸಿ ಮನ ದಣಿಯಲೊಲ್ಲದಿನ್ನೇವೆ ನಿನ್ನೇವೆ? ಕೂಡಲಸಂಗಮದೇವ ಕೇಳಯ್ಯಾ, ನಿಮ್ಮ ಉದರವನು ಬಗಿದಾನು ಹೋಗುವ ಭರವೆನಗೆ ||

೧೩

ವಾರವೆಂದರಿಯೆ, ದಿವಸವೆಂದರಿಯೆ, ಏನೆಂದರಿಯೆನಯ್ಯಾ ! ಇರುಳೆಂದರಿಯೆ, ಹಗಲೆಂ ದರಿಯೆ ಏನೆಂದರಿಯೆನಯ್ಯಾ! ನಿಮ್ಮವ ಪೂಜಿಸಿ ಅನ್ಯವ ಮರೆದೆ ಕೂಡಲಸಂಗಮದೇವಾ ||

೧೪

ಪುಣ್ಯವೆಂದರಿಯೆ, ಪಾಪವೆಂದರಿಯೆ, ಸ್ವರ್ಗವೆಂದರಿಯೆ, ನರಕವೆಂದರಿಯೆ, ಹರಹರಾ! ಮಹಾದೇವ, ಶಿವಶರಣೆಂದು ಶುದ್ಧ ನೋಡಯ್ಯಾ ! ಹರಹರಾ! ಮಹದೇವ, ಶಿವ ಶರಣೆಂದು ಧನ್ಯ ನೋಡಯ್ಯಾ! ಕೂಡಲಸಂಗಮದೇವಯ್ಯಾ ನಿಮ್ಮ ನರ್ಚಿಸಿ ಪೂಜಿಸಿ ನಿಶ್ಚಿಂತನಾದೆ ||

೧೫

ವಚನದಿ ನಾಮಮೃತ ತುಂಬಿ, ಎನ್ನ ನಯನದಿ ದೃಷ್ಟ ಮೂರುತಿ ತುಂಬಿ ಮನದೊಳಗೆ ನಿಮ್ಮ ನೆನಹು ತುಂಬಿ ತುಂಬಿ ಕಿವಿಯೊಳಗೆ ನಿಮ್ಮ ಕೀರುತಿ ತುಂಬಿ ಕೂಡಲಸಂಗಮ ದೇವಯ್ಯಾ ನಿಮ್ಮ ಚರಣ ಕಮಲದೊಳಗಾನು ತುಂಬಿ ||

ಇಂತು ಆಚಾರಲಿಂಗಾರ್ಚನಸ್ಥಲ ಸಮಾಪ್ತಿ ||