೨೧. ಗುರುಕರಣ ಲಿಂಗಾನುಗ್ರಹ ಸ್ಥಲ

ಇಂತಪ್ಪಸ್ಥಾವರಲಿಂಗ ನಿರಸನವಾದ ಬ್ರಹ್ಮಜ್ಞಾನಿಯಪ್ಪ ಸಚ್ಛಿಶ್ಯಂಗೆ ಗುರುಕರಣ ಲಿಂಗಾನುಗ್ರಹ ಸ್ಥಲ ||

ಗ್ರಂಥ |

ನ ಮುಕ್ತಿಶ್ಚನ ಧರ್ಮಶ್ಚ ನ ಪುಣ್ಯಂ ಚ ನ ಪಾಪಕಂ
ನ ಕರ್ಮ ಚ ನ ಜನ್ಮ ಚ ಗುರೋರ್ಭಾವನಿರೀಕ್ಷಣಾತ್ ||  || ೧ ||

ಪಶುನಾಧಶ್ಯಿವಸ್ತಸ್ಮಾತ್ಪಶೂನಂ ಪತಿರಿತ್ಯಪಿ
ಪಶುಪಾಶವಿನಿರ್ಮುಕ್ತೋ ಗುರೋರ್ಭಾವ ನಿರೀಕ್ಷಣಾತ್ ||  || ೨ ||

ಯಥಾಪುರತ್ರಯಂ ದಗ್ಧಂ ಯುಗಪತ್ಪುರವೈರಿಣಾ
ತಥಾ ಮಲತ್ರಯಂ ದಗ್ಧಂ ಯುಗಪದ್ದೇಶಿಕಾತ್ಮನಾ ||  || ೩ ||

ಹಸ್ತ ಮಸ್ತಕಸಂಯೋಗಾಚ್ಛಲಾದ್ವೇಧೇತಿ ಗೀಯತೇ
ಗುರುಣೋದೀರಿತಾಕರ್ಣೇ ಯಾ ಸಾ ಮಂತ್ರೇತಿ ಕಥ್ಯತೇ ||  || ೪ ||

ಶಿಷ್ಯಪಾಣಿತಲೇ ದತ್ತಾ ಯಾ ದೀಕ್ಷಾ ಸಾ ಕ್ರಿಯಾಮತಾ
ಯಥಕಲಾ ತಥಾ ಭಾವೋ ಯಥಾ ಭಾವಸ್ತಥಾ ಮನಃ
ಯಥಾ ಮನಸ್ತಥಾ ದೃಷ್ಟಿರ್ಯಥಾ ದೃಷ್ಟಿಸ್ತಥಾ ಸ್ಥಲಂ ||  || ೫ ||

ವಚನ |

ಆಣವಮಲ, ಮಾಯಾಮಲ, ಕಾರ್ಮಿಕ ಮಲವೆಂಬ ಮಲತ್ರಯಂಗಳಂ ಕಳೆದು, ಆಜ್ಞಾದೀಕ್ಷೆ, ಉಪಮಾದೀಕ್ಷೆ, ಸ್ವಸ್ತಿಕಾರೋಹಣ, ವಿಭೂತಿಯ ಪಟ್ಟ, ಕಳಶಾಭಿಷೇಕ, ಲಿಂಗಾಯತ, ಲಿಂಗಸ್ವಾಯತ, – ಈ ಏಳನೂ ಕಾಯಕ್ಕುಪದೇಶವ ಮಾಡುವುದು, ಸಮಯ ನಿಸ್ಸಂಸಾರ, ನಿರ್ವಾಣ, ತತ್ತ್ವದೀಕ್ಷೆ, ಆಧ್ಯಾತ್ಮ, ಅನುಗ್ರಹ, ಸತ್ಯಶುದ್ಧವಿದ್ಯೆ, ಈ ಏಳನೂ ಪ್ರಾಣಕ್ಕುಪದೇಶವ ಮಾಡುವುದು, ಏಕಾಗ್ರಚಿತ್ತ, ದೃಢವ್ರತ, ಪಂಚೇಂದ್ರಿಯಾರ್ಪಿತ, ಅಹಿಂಸೆ, ಲಿಂಗನಿಜ, ಮನೋಲಯ, ಸದ್ಯೋನ್ಮುಕ್ತಿ, – ಈ ಏಳನೂ ಮನಕ್ಕುಪದೇಶ ಮಾಡುವುದು, ಇಂತೀ ಕ್ರಮವರಿದು ಮಾಡುವುದು ಕೂಡಲಚನ್ನಸಂಗಯ್ಯನಲ್ಲಿ ಸಹಜದೀಕ್ಷೆ ||

ಆತ್ಮನಲ್ಲಿ ಪ್ರಣವ ಪಂಚಾಕ್ಷರಿಯ ನಿಲಿಸಿ ಸದ್ಗುರು ಶಿವಾತ್ಮಕನಂ ಮಾಡಿದನಾಗಿ, ಆತ್ಮಶುದ್ಧಿ ! ಪಂಚಭೂತಂಗಳಲ್ಲಿ ಪಂಚಬ್ರಹ್ಮವ ನಿಲಿಸಿದನಾಗಿ, ಭೂತಶುದ್ಧಿ ! ಅಂಡಜ, ಸ್ವೇದಜ, ಉದ್ಭಿಜ ಜರಾಯುಜವೆಂಬ ಎಂಬತ್ತು ನಾಲ್ಕುಲಕ್ಷ ಯೋನಿಯಲ್ಲಿ ಬಹ ಜೀವನ ಅಯೋಜನಂ ಮಾಡಿದನಾಗಿ, ಜೀವಶುದ್ಧಿ ! ಅಂಗದ ಮೇಲೆ ಲಿಂಗಪ್ರತಿಷ್ಠೆಯ ಮಾಡಿದನಾಗಿ, ಅಂಗಶುದ್ಧಿ ! ಇಂತು ಸರ್ವಾಂಗಶುದ್ಧನಂ ಮಾಡಿ ಎನ್ನ ಪೂರ್ವಾಶ್ರಯವ ಕಳೆದನಾಗಿ, ಕೂಡಲಚನ್ನಸಂಗಯ್ಯನಲ್ಲಿ ನ ಗುರೋರಧಿಕಂ, ನ ಗುರೋರಧಿಕಂ, ನ ಗುರೋರಧಿಕಂ ಎನುತಿದ್ದೆನು ||

ಎಂಬತ್ತುನಾಲ್ಕು ಲಕ್ಷ ಜೀವರಾಶಿ ಯೋನಿಯಲ್ಲಿ ಜನಿಸಿ, ನಾನಾ ಯಾತನೆಯಲ್ಲಿ ತೊಳಲಿ ಬಳಲುತ್ತಿಹ ಆ ಪರಿಭವಂಗಳಂ ಕಳೆದು, ಅಯೋನಿಜನಂ ಮಾಡಿ, ಶ್ರೀಗುರು ತನ್ನ ಕರುಣಕಟಾಕ್ಷ ನಿರೀಕ್ಷಣೆಯಿಂದ ಕರಕಮಲದಲ್ಲಿ ಬೆಸಲಾದನಾಗಿ, ಅಂತಹ ಯೋನಿಯಲ್ಲಿ ಮುಖಜನ್ಮಂಗಳ ಕಳೆದುಳಿದ ಶರಣಂಗೆ ಇನ್ನು ಭವಮಾಲೆಯುಂಟೇ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ||

ಪೂರ್ವಜನ್ಮ ನಿವೃತ್ತಿಯಾಗಿ, ಶ್ರೀಗುರುವಿನ ಕರಕಮಲದಲ್ಲಿ ಜನಿಸಿದ ಸದ್ಭಕ್ತನ ಪಂಚಭೌತಿಕದ ತನುವೆಂದು ವರ್ಣಿಸಿ ನುಡಿಯಬಹುದೇ? ಉತ್ತಮಾಧಮ ತೃಣವೆಲ್ಲವು ಅಗ್ನಿ ಮುಟ್ಟಲು ಭಸ್ಮವಾದ ಹಾಂಗೆ, ಜ್ಯೋತಿಯಲ್ಲಿ ಮತ್ತೊಂದು ಬತ್ತಿಯ ಮುಟ್ಟಿಸಲದೊಂದೆ ಜ್ಯೋತಿಯಾದ ಹಾಂಗೆ, ಜ್ಯೋತಿರ್ಮಯಲಿಂಗವ ಮುಟ್ಟಿದ ತನು ಕೇವಲ ಜ್ಯೋತಿರ್ಮಯ ಲಿಂಗವೇಯಾಯಿತ್ತಾದ ಕಾರಣ, ಇನ್ನು ಆ ಸದ್ಭಕ್ತಂಗೆ, ಆಧಾರ, ಸ್ವಾದಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ, ಬ್ರಹ್ಮರಂಧ್ರು, ವರ್ಣ, ದಳ, ಅಕ್ಷರ, ಅಧಿದೇವತೆಯೆಂದು, ಸಂಬಂಧಿಸಿ ನುಡಿಯಬಹುದೇ? ಶುಕ್ಲಶೋಣಿತವ ಕೂಡಿ ಕೊಂಡಿಹ ಜಡಾತ್ಮರ ಹಾಂಗೆಂದು, ವರ್ಣಿಸಿ ನುಡಿಯಬಹುದೇ ಆ ಸದ್ಭಕ್ತನನು? ಅದೆಂತೆಂದಡೆ, ಯೋ ಕಾಯೋ ಭಕ್ತಕಾಯೋ ವಾ ಮಮ ಕಾಯಸ್ತು ಭಕ್ತಿಮಾನ್, ಎಂದುದಾಗಿ, ಇಂತೀ ಎನ್ನೊಳಹೊರಗೆ ತೆರಹಿಲ್ಲದೆ ಸರ್ವಾಂಗವೆಲ್ಲವ ಲಿಂಗವ ಮಾಡಿದನು, ಕೂಡಲಚನ್ನಸಂಗಯ್ಯಾ, ಶ್ರೀ ಗುರುಲಿಂಗವು ||

ಇನ್ನು ಲಿಂಗಾನುಗ್ರಹ, ಶ್ರೀ ಗುರು ಕರುಣಿಸಿ ಹಸ್ತಮಸ್ತಕಸಂಯೋಗದಿಂದ ಪ್ರಾಣಲಿಂಗವನು ಕರತಳಾಮಳಕವಾಗಿ ಕರಸ್ಥಲಕ್ಕೆ ತಂದುಕೊಟ್ಟನಾಗಿ, ಒಳಗೆನ್ನದೆ ಹೊರಗೆನ್ನದೆ, ಆ ಲಿಂಗದಲ್ಲಿ ನಚ್ಚಿ, ಮಚ್ಚಿ, ಹರುಷದೊಳೋಲಾಡುವೆ! ಅದೆಂತೆಂದಡೆ, ಯತೋ ವಾಚೋ ನಿವರ್ತಂತೇ ಅಪ್ರಾಪ್ಯಮನಸಾ ಸಹ | ನಾದ ಬಿಂದುಕಲಾತೀತಂ ಗುರುಣಾಲಿಂಗಮುದ್ಭವಂ || ಎಂದುದಾಗಿ, ಆ ಲಿಂಗವ ಪಡೆದು ಆನಂದಿಸುವೆ, ಕೂಡಲಸಂಗಮದೇವಾ ||

ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೇ, ಭವಬಂಧನವ ಬಿಡಿಸಿ ಪರಮ ಸುಖವ ತೋರಿದ ಗುರುವೇ, ಭವಿಯೆಂಬುದ ತೊಡೆದು, ಭಕ್ತನೆಂದೆನಿಸಿದ ಗುರುವೇ, ಚನ್ನ ಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೇ, ಶರಣಂ ||

ಅಂಗದಾಶ್ರಯವ ಕಳೆದು ಲಿಂಗದಾಶ್ರಯವ ಮಾಡಿದ ಗುರುವೇ ಶರಣು ! ಶ್ರೀಗುರುವೇ ಶರಣು, ಪರಮಸುಖವ ತೋರಿದೆಯಾಗಿ, ಮಹಾಘನ ಸೋಮೇಶ್ವರನ ಸಾಹಿತ್ಯವ ಮಾಡಿ ನಿಜನಿವಾಸದಲ್ಲಿರಿಸಿದೆಯಾಗಿ ||

ಕಂಗಳ ಮುಂದಣಿಂದ ಶ್ರೀಗುರುಲಿಂಗ ಹಿಂಗಿದಡೆ, ವ್ರತಕ್ಕೆ ಭಂಗವಾದೀತೆಂದು ತಂದು ಕೊಟ್ಟನು ಶ್ರೀಗುರು ಕರಸ್ಥಲದಲ್ಲಿ ಪ್ರಾಣಲಿಂಗವನು. ಆ ಲಿಂಗ ಮುಟ್ಟಲೊಡನೆ, ತನುಪ್ರಸಾದ. ಮನಪ್ರಸಾದ, ಧನಪ್ರಸಾದವಾಯಿತ್ತು. ಇಂತು ಸರ್ವಾಂಗ ಪ್ರಸಾದವಾಯಿತ್ತು, ಕೂಡಲಚನ್ನಸಂಗಮದೇವಾ ||

ಗುರುಶಿಷ್ಯ ಸಂಬಂಧವನರಿಸಲೆಂದು ಹೋದಡೆ, ತಾನೆ ಗುರುವಾದ, ತಾನೆ ಶಿಷ್ಯನಾದ, ತಾನೆ ಲಿಂಗವಾದ, ಗುಹೇಶ್ವರಾ, ನಮ್ಮ ಶರಣರ ಕೈಯಲ್ಲಿ ಲಿಂಗವ ಕೊಟ್ಟಡೆ, ಭಾವ ಬತ್ತಲೆಯಾಯಿತ್ತು ||

೧೦

ಜಗದಗಲ, ಮುಗಿಲಗಲ, ಮಿಗೆಯಗಲ ನಿಮ್ಮಗಲ, ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ, ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮಕುಟ, ಅಪ್ರಮಾಣ ಅಗಮ್ಯ, ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಾ, ಎನ್ನ ಕರಸ್ಥಲಕೆ ಬಂದು ಚುಳುಕಾದಿರಯ್ಯಾ ||

೧೧

ಆದಿಯಲ್ಲಿ ದೇವ, ನಮ್ಮನಾರು ಬಲ್ಲರು? ವೇದಂಗಳು ಮುನ್ನತ್ತತ್ತಲರಿಯವು, ವೇದಿಗಳು ಪರಬ್ರಹ್ಮವೆಂದೆಂಬರು, ನಾದಬಿಂದು ಕಲಾತೀತನೆಂದೆಂಬರು, ಸಾಧು ಸಜ್ಜನ ಭಕ್ತರಿಚ್ಛೆಗೆ ಬಂದೆಯಾಗಿ, ಈಗೀಗ ದೇವನಾದೆ ಶಂಭುಜಕ್ಕೇಶ್ವರಾ ||

ಇಂತು ಗುರುಕರುಣ ಲಿಂಗಾನುಗ್ರಹಸ್ಥಲ ಸಮಾಪ್ತ ||

೨೨. ಶ್ರೀ ವಿಭೂತಿಧಾರಣ ಸ್ಥಲ

ಇಂತಪ್ಪ ಗುರುಕರಣ ಲಿಂಗಾನುಗ್ರಹ ಸಂಪನ್ನನಾದ ಬ್ರಹ್ಮಜ್ಞಾನಿಯಪ್ಪ ಪರಮ ಲಿಂಗಾಂಗಿಗೆ ಶ್ರೀ ವಿಭೂತಿಧಾರಣಸ್ಥಲ ||

ಗ್ರಂಥ |

ಭೂರ್ತಿರ್ಭೂತಿಕರೀ ಪವಿತ್ರ ಜನನೀ ಪಾಪೌಘವಿಧ್ವಂಸಿನೀ
ಸರ್ವೋಪದ್ರವನಾಶಿನೀ ಶುಭಕರೀ ಸರ್ವಾರ್ಥಸಂಪತ್ಕರೀ
x x x x x x x x x x x x x x x x x x
ತೇಜೋರಾಶಿ ವಿಶೇಷ ಮೋಕ್ಷಕರಣೀ ಭೂತಿಸ್ಸದಾಧಾರ್ಯತೇ ||  || ೧ ||

ವಿಪ್ರಾಣಾಂ ವೇದವಿದುಷಾಂ ವೇದಾಮತಜ್ಞಾನವೇದಿನಾಂ
ಸಿತೇನ ಭಸ್ಮನಾ ಕಾರ್ಯ ತ್ರಿಪುಂಡ್ರಮಿತಿ ಪದ್ಮಭೂಃ ||  || ೨ ||

ಸಿತೇನ ಭಸ್ಮನಾ ಕಾರ್ಯ ತ್ರಿಸಂಧ್ಯಾಯಾಂ ತ್ರಿಪುಂಡ್ರಕಂ
ಸರ್ವಪಾಪವಿನಿರ್ಮುಕ್ತಶ್ಯಿವ ಸಾಯುಜ್ಯಮಾಪ್ನುಯಾತ್ ||  || ೩ ||

ವಿಭೂತಿವಿಲಸದ್ಭಾವ ಶಿವಲೋಕನಲಾಲಸ
ನರಸ್ಯಪಾಪಲೇಪಾದಿರ್ನಸ್ಯತ್ಯತ್ರ ನ ಸಂಶಯಃ ||  || ೪ ||

ವಚನ |

ಹಿತವಿದೆ ಸಕಲಲೋಕದ ಜನಕ್ಕೆ ಮತವಿದೆ, ಶ್ರುತಿಪುರಾಣದ ಗತಿಯಿದೆ ; ಭಕುತಿಯ ಬೆಳಗಿನ್ನುನ್ನತಿಯಿದೆ, ಶ್ರೀ ವಿಭೂತಿಯ ಧರಿಸಿದೆಡೆ, ಭವವನು ಪರಿವುದು, ದುರಿತಸಂಕುಳ ವನೊರಸುವದು, ಹರನ ಸಾಲೋಕ್ಯ ಸಾಮೀಪ್ಯದಲ್ಲಿರುವುದು, ನಿರುತವಿದು ನಂಬು! ಮನುಜಾ, ಜವನ ಭೀತಿಯಾ ವಿಭೂತಿ, ಮರಣ ಭಯದಿಂದೆ ಅಗಸ್ತ್ಯ, ಕಾಶ್ಯಪ, ಜಮದಗ್ನಿಗಳು ಧರಿಸುವರು ನೋಡಾ! ಶ್ರೀಶೈಲಚೆನ್ನಮಲ್ಲಿಕಾರ್ಜುನನೊಲಿವ ಶ್ರೀ ವಿಭೂತಿ ||

ಮುನ್ನ ಮಾಡಿದ ಪಾಪವೆಂತು ಹೋಹುದೆಂದು ಚಿಂತಿಸಬೇಡ, ಕಹಿಸೋರೆಯ ಕಾಯ ತಂದು ವಿಭೂತಿಯ ತುಂಬಿದಡೆ ಸಿಹಿಯಾಗದೆ ಮೂರು ದಿವಸಕ್ಕೆ, ಅಯ್ಯಾ? ಹಲವು ಕಾಲ ಕೊಂದ ಸೂನೆಗಾರನ ಕೈಯ ಕತ್ತಿಯಾದಡೇನು? ಪರುಷ ಮಟ್ಟಲು ಹೊನ್ನಾಗದಿಪ್ಪುದೇ ಅಯ್ಯಾ ಲಲಾಟದಲಿ ವಿಭೂತಿಯ ಪಟ್ಟಮಂ ಕಟ್ಟಲೊಡನೆ, ಪಾಪ ಪಲ್ಲಟವಾಗದೆ ಕೂಡಲ ಸಂಗಮದೇವಾ ||

ಊರಿಗೆ ಆರವೆ ಶೃಂಗಾರ, ನೀರಿಗೆ ನೈದಿಲು ಶೃಂಗಾರ, ಸಮುದ್ರಕ್ಕೆ ತೆರೆಗಳು ಶೃಂಗಾರ, ನಾರಿಗೆ ಗುಣವೆ ಶೃಂಗಾರ, ಗಗನಕೆ ಚಂದ್ರಮನೆ ಶೃಂಗಾರ, ನಮ್ಮ ಕೂಡಲಸಂಗಮನ ಶರಣರಿಗೆ ಲಲಾಟ ತುಂಬಿದ ವಿಭೂತಿಯೆ ಶೃಂಗಾರ ||

ಸನ್ಯಾಸಿಯಾದಡೆ, ತ್ರಿಸಂಧ್ಯಾಕಾಲದಲ್ಲಿ ಶ್ರೀ ವಿಭೂತಿಯ ಧರಿಸಬೇಕೆಂದುದು ವೇದ, ಬಳಿಕಲೊಂದು ದಿವ್ಯಸ್ಥಾನದೊಳಗೆ ಶಿವಧ್ಯಾನದಲಿರಬೇಕೆಂದುದು ವೇದ, ಅದೆಂತೆಂದಡೆ, ”ಅವೀರ್ಯ ಭಸ್ಮ ತ್ರಿಸಂಧ್ಯಾಯಾಮುದ್ಧೂಲನೇ ದಿವ್ಯಸ್ಥಾನೇ ಸಾವಧೀಯತೇ” ಎಂದುದಾಗಿ, ಬಸವಪ್ರಿಯ ಕೂಡಲಚನ್ನಸಂಗಯ್ಯಾ, ಶ್ರೀ ವಿಭೂತಿಯೇ ಪರಮಗತಿ ಸಾಧನ ||

ವಿಭೂತಿಯಿಂದಲಿ ಮಾಡಬಹುದು ಅರ್ಬುದಕೋಟಿ ಭಕ್ತರನಾದಡೆಯು, ವಿಭೂತಿಯಿಲ್ಲದೆ ಮಾಡಿ ತೋರಿರೆ, ಒಬ್ಬ ದ್ವಿಜನ? ವಿಭೂತಿಯಿಂದ ವಿಪ್ರನಾಗನೇ ಕಬ್ಬಿಲಿತಿಯ ಮಗ ವ್ಯಾಪನು? ವಿಭೂತಿಯಿಂದಗ್ರಜನಾಗನೇ ಕುಂಭಸಂಭವನು ವಿಭೂತಿಯಿಂದ ಹಾರುವನಾಗನೇ? ಊರ್ವಶಿಗೆ ಹುಟ್ಟಿದ ವಶಿಷ್ಠ? ವಿಭೂತಿಯಿಂದ ವಿಶ್ವಾಮಿತ್ರ ಸದ್ಬ್ರಾಹ್ಮಣನಾಗನೇ? ಇದಕ್ಕೆ ಶ್ರುತಿ ಓಂ ಕಶ್ಯಪ ಋಷಿ ರುದ್ರೋ ದೇವತಾ | ಜಗತೀಚ್ಛಂದ್ರಃ ವಿಭೂತಿಧಾರಣೇ ವಿನಿಯೋಗಃಮಾ ನಸ್ತೋಕೇ ತನಯೇ ಮಾ ನ ಆಯುಷಿ ಮಾ ನೋ ಗೋಷು ಮಾ ನೋ ಆಶ್ವೇಷುರೀರಷಃ | ವೀರಾನ್ಮಾನೋ ರುದ್ರಭಾಮಿತೋವದೀರ್ಹ ವಿಷ್ಮಂತೋ ನಮಸಾ ವಿಧೇಮ ತೇ | ತ್ರಿಯಾಯುಷಂ ಜಮದಗ್ನೇಃ ಕಶ್ಯಪಸ್ಯತ್ರಿತಾತಯುಷಂ | ಶತಾಯುಷಂ | ”…ಲಲಾಟೇಚ ಭುಜದ್ವೇಯ| ನಾಭೌ ಶಿರಸಿ ಹೃತ್ಪಾರ್ಶ್ಪೇ ಬ್ರಾಹ್ಮಣಾಃ ಕ್ಷತ್ರಿಯಾಸ್ತಥಾ” ಇಂತೆಂದುದಾಗಿ, ವಿಭೂತಿ ಮೇಧಾವಿ ಇಂದ್ರಿಯಂಗಳು ಗರ್ಭ ಶೂದ್ರದ್ವಿಜ ನಾಗುತ್ತಮಿರೆ ಊರ್ವಿಯೊಳಗೆ ಮುಂಗಯ್ಯ ಕಂಕಣಕ್ಕೆ ಶುಭ್ರ ದರ್ಪಣವೇಕೆ? ವಿಭೂತಿಯ ನೊಲ್ಲದಾ ನಿರ್ಭಾಗ್ಯ ದಿಗ್ವಿಜರು ಸರ್ವ ಶಾಸ್ತ್ರ ಶ್ರುತಿ ಸ್ಮೃತಿ ಪುರಾಣ ಶಾಪಹತರೆಂದು ಶ್ರುತಿಗಳು ಬೊಬ್ಬಿಡುತ್ತಿವೆ ಬಸವೇಶ್ವರಾ ||

ಇಂತು ಶ್ರೀ ವಿಭೂತಿಧಾರಣಸ್ಥಲ ಸಮಾಪ್ತ ||

೨೩. ಶ್ರೀ ರುದ್ರಾಕ್ಷಧಾರಣ ಸ್ಥಲ

ಇಂತಪ್ಪ ಶ್ರೀ ವಿಭೂತಿವಿಲಸದ್ಗಾತ್ರನಾದ ಬ್ರಹ್ಮ ಜ್ಞಾನಿಯಪ್ಪ ಪರಮಲಿಂಗಾಂಗಿಗೆ ಶ್ರೀ ರುದ್ರಾಕ್ಷಧಾರಣಸ್ಥಲ ||

ಗ್ರಂಥ |

ಸರ್ವಾಶ್ರಮಾಣಾಂ ಧರ್ಮಾಣಾಂ ಭೂತಿರುದ್ರಾಕ್ಷಧಾರಣಂ
ಕರ್ತವ್ಯಂ ಮಂತ್ರಿತಂ ಪ್ರೋಕ್ತಂ ದ್ವಿಜಾನಾಂ ನಾತ್ರಸಂಶಯಃ ||  || ೧ ||

ರುದ್ರಾಕ್ಷಧಾರಣಂ ಹಸ್ತೆ ವಕ್ಷಸ್ಯಾಪಿ ಚ ಮಸ್ತಕೇ
ಚಿಹ್ನಂ ಶಿವಾಶ್ರಮಸ್ಥಾನಂ ಭಸ್ಮನಾ ಚ ತ್ರಿಪುಂಡ್ರಕಂ ||  || ೨ ||

ಹಸ್ತೇ ಚೋರಸಿಕಂಠೇವಾ ಮಸ್ತಕೇ ವಾsಪಿ ಧಾರಯೇತ್
ಮುಚ್ಯತೇ ಸರ್ವಪಾಪೇಭ್ಯೋ ರುದ್ರಾಕ್ಷಸ್ಯ ಚ ಧಾರಣಾತ್ ||  || ೩ ||

ರುದ್ರನೇತ್ರಾಂಬುಜಾತಾನಿ ರುದ್ರಾಕ್ಷಾಣಿ ನರೋತ್ತಮಃ
ಯೋ ಧತ್ತೇ ಭಸ್ಮರುದ್ರಾಕ್ಷಂ ಸ ರುದ್ರೋ ನಾತ್ರಸಂಶಯಃ ||  || ೪ ||

ವಚನ |

ಸದ್ಯೋಜಾತ ವಾಮದೇವ ಮೋದಲಾದ ಪಂಚವಕ್ತ್ರವೆ ಪಂಚಮುಖದ ರುದ್ರಾಕ್ಷಿ, ಆ ರುದ್ರಾಕ್ಷಿಯ ಹಸ್ತ, ತೋಳು, ಉರ, ಕಂಠ, ಕರ್ಣ, ಮಸ್ತಕದಲ್ಲಿ ಧರಿಸಿಪ್ಪ ಶಿವಭಕ್ತನೆ ರುದ್ರನು, ಆತನ ದರ್ಶನ ಸ್ಪರ್ಶನದಿಂದ ಭವರೋಗ ದುರಿತವಿರಲಮ್ಮವು ನೋಡಾ ! ಆತ ಏವ ರುದ್ರಾಕ್ಷ ಧಾರಣಾತ್ ರುದ್ರೋ ಎಂದುದಾಗಿ ರುದ್ರಪದವಿಯನೀವ ರುದ್ರಾಕ್ಷಿಯ ಧರಿಸಿಪ್ಪ ಶರಣರಿಗೆ ಶರಣೆಂಬೆನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ||

ಹಸ್ತಕಡಗ ಕೈಗಧಿಕ ನೋಡಾ ! ಕೊಡಲಹುದು ಕೊಳಲಹುದು, ಬಾಹು ಬಳೆ ತೋಳಿಗಧಿಕ ನೋಡಾ, ಪರವಧುವನಪ್ಪಲಾಗದು, ಕರ್ಣಕುಂಡಲ ಕಿವಿಗಧಿಕ ನೋಡಾ, ಶಿವನಿಂದೆಯ ಕೇಳಲಾಗದು, ಕಂಠಮಾಲೆ ಕೊರಳಿಂಗಧಿಕ ನೋಡಾ, ಅನ್ಯದೈವಕ್ಕೆ ತಲೆವಾಗಲಾಗದು, ಆಗಳೂ ನಿಮ್ಮವ ನೆನೆದು, ನಮ್ಮ ಕೂಡಲಸಂಗನ ಪೂಜಿಸಿ ಸದಾ ಸನ್ನಹಿತನಾಗಿಪ್ಪನು ||

ಶ್ರೀ ವಿಭೂತಿಯ ಧರಿಸದವನ, ಶ್ರೀ ರುದ್ರಾಕ್ಷಿಯ ಧರಿಸದವನ, ನಿತ್ಯ ಲಿಂಗಾರ್ಚನೆಯ ಮಾಡದವನ, ಜಂಗಮವೇ ಲಿಂಗವೆಂದರಿಯದವನ, ಸದ್ಭಕ್ತರ ಸಂಗದಲ್ಲಿರದವನ ತೋರದಿರು, ತೋರದಿರು, ಕೂಡಲಸಂಗಮದೇವಾ ಸೆರಗೊಡ್ಡಿ ಬೇಡುವೆನು ||

ಶ್ರೀ ವಿಭೂತಿ ರುದ್ರಾಕ್ಷಿಯಿದ್ದವರನೆ ಲಿಂಗವೆಂದೆಂಬೆ ಇಲ್ಲದವರನೆ ಭವಿಗಳೆಂದೆಂಬೆ ಕೂಡಲಸಂಗಮದೇವಯ್ಯಾ ಸದ್ಭಕ್ತರ ನೀನೆಂಬೆ ||

ಅಡ್ಡ ತ್ರಿಪುಂಡ್ರ ಮಣಿಮುಕುಟ ವೇಷದ ಶರಣರ ಕಂಡಡೆ ನಂಬುವುದೆನ್ನ ಮನ, ನಚ್ಚುವುದೆನ್ನ ಮನ ಸಂದೇಹವಿಲ್ಲದೆ, ಇವಿಲ್ಲದ ಶರಣನ ಕಂಡಡೆ ಹೊದ್ದೆ ಕೂಡಲ ಸಂಗಮದೇವಾ ||

ಶ್ರೀ ವಿಭೂತಿ ರುದ್ರಾಕ್ಷಿ ಭಕ್ತಿ ಎನ್ನ ಮುಕ್ತಿಗೆ ಸಾಧನವೋ ಎನ್ನ ತಂದೆ, ಶಿವ ಶಿವಾ ಎಂಬ ಮಂತ್ರವೆನಗಮೃತಾರೋಗಣಿಯೋ ಎನ್ನ ತಂದೆ, ಕೂಡಲಸಂಗಮದೇವಯ್ಯಾ, ನಿಮ್ಮ ನಾಮದ ರುಚಿ ತುಂಬಿತೋ ಎನ್ನ ತನುವ ||

ಇಂತು ಶ್ರೀ ರುದ್ರಾಕ್ಷಧಾರಣಸ್ಥಲ ಸಮಾಪ್ತ ||

೨೪. ಶ್ರೀ ಪಂಚಾಕ್ಷರೀ ಜಪ ಸ್ಥಲ

ಇಂತಪ್ಪ ಶ್ರೀ ವಿಭೂತಿರುದ್ರಾಕ್ಷಿಯನು ಸರ್ವಾಂಗದಲ್ಲಿ ಧರಿಸಿ ಸದ್ಯೋನ್ಮುಕ್ತನಾದ ಬ್ರಹ್ಮಜ್ಞಾನಿಯಪ್ಪ ಪರಮಲಿಂಗಾಂಗಿಗೆ ಶ್ರೀ ಪಂಚಾಕ್ಷರೀ ಜಪಸ್ಥಲ ||

ಗ್ರಂಥ |

ಸಪ್ತಕೋಟಿ ಮಹಾಮಂತ್ರಾ ಚಿತ್ತವ್ಯಾಕುಲಕಾರಣಂ
ಏಕಮೇಕಾಕ್ಷರಂ ದೇವಿ ತುರ್ಯಾತೀತ ಮನೋಲಯಂ ||  || ೧ ||

ಸಪ್ತಕೋಟಿ ಮಹಾಮಂತ್ರಾ ಉಪಮಂತ್ರಾಸ್ತ್ವನೇಕಧಾ
ಮಹ್ಯಂ ನಮಃಶಿವಾಯೇತಿ ಮಂತ್ರಾದನ್ಯನ್ನರೋಚತೇ ||  || ೨ ||

ಮನನತ್ರಾಣ ಧರ್ಮಾಣೋ ಮಂತ್ರಾಸ್ಸ್ಶುಃ ಸಪ್ತಕೋಟಯಃ
ಮಹ್ಯಂ ನಮಃಶಿವಾಯೇತಿ ಮಂತ್ರಾದನ್ಯನ್ನರೋಚತೇ ||  || ೩ ||

ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಗತೋsಪಿ ವಾ
ಸ್ಮರನ್ನಮಃ ಶಿವಾಯೇತಿ ನ ಚ ಪಾಪೈ ಪ್ರತಿಪ್ಯತೆ ||  || ೪ ||

ಭಾಲೇ ತ್ರಿಪುಂಡ್ರಕಂ ಯಸ್ಯ ಗಲೇ ರುದ್ರಾಕ್ಷಮಾಲಿಕಾ
ವಕ್ತ್ರೇ ಷಡಕ್ಷರೀ ಮಂತ್ರಂ ಸ ರುದ್ರೋ ನಾತ್ರಸಂಶಯಃ ||  || ೫ ||

ವಚನ |

ವಿಪುಳ ವೇದವೇದಾಂತ ಸಾರ, ಸಕಳಲೋಕ ಜನಹಿತಸಾರ, ಸಪ್ತಕೋಟಿ ಮಂತ್ರಗಳ ತವರು ಭಕ್ತಜನ ಜೀವಾನಂದ, ಅಭಿದಾನಮತ ಸಂತಾನಹರಣ ಮುಕ್ತಿಗೆ ಆಗಾರ ಸೋಪಾನ, ಪರಣವಾಂಕುರ ಪಲ್ಲವ ಫಲರೂಪು, ತ್ರಿಣಯನನೊಲಿಸುವ ಕರ್ಣಾಭರಣ, ಹರನ ನಾಮದ ಸಾಕಾರದ ನಿಲುವು, ಪರಮ ಪಂಚ ಬ್ರಹ್ಮಾನಂದ, ಪರತತ್ವದ ನಿತ್ಯದ ನೆಲೆ ಹಂಪೆಯ ವಿರುಪನ ತೋರುವ ಗುರು ಪಂಚಾಕ್ಷರಿ ||

ಶ್ರೀ ಪಂಚಾಕ್ಷರಿಯೆ ಸರ್ವ ಮಂತ್ರವೆಲ್ಲವಕ್ಕೆ ಉತ್ಪತ್ತಿ ಸ್ಥಿತಿ ಲಯ ಸ್ಥಾನ, ಸರ್ವ ಕಾರಣವೆಲ್ಲವಕ್ಕೆ ಮೂಲ, ಅದೆಂತೆಂದಡೆ, ಸಪ್ತಕೋಟಿ ಮಹಾಮಂತ್ರಾ ಉಪಂತ್ರಾಸ್ತ್ವನೇಕಧಾ | ಪಂಚಾಕ್ಷರೇ ಪ್ರಲೀಯಂತೇ ಪುನಸ್ತತ್ರೈವ ನಿರ್ಗತಾಃ || ತಸ್ಮಿನ್ ವೇದಾಶ್ಚ ಶಾಸ್ತ್ರಾಣಿ ಮಂತ್ರೇ ಪಂಚಾಕ್ಷರೇ ಸ್ಥಿತಾಃ || ಎಂದುದಾಗಿ, ಇದು ಕಾರಣ, ಶ್ರೀ ಪಂಚಾಕ್ಷರಿಯುಳ್ಳ ಭಕ್ತನೆ ವೇದವಿತ್ತು, ಆ ಸದ್ಭಕ್ತನೆ ಶಾಸ್ತ್ರವಾನ್, ಆ ಮಹಾಮಹಿಮನೆ ಪುರಾಣಿಕನು ಆಗಮಿಕನು, ಆತನೆ ಸರ್ವಜ್ಞನಯ್ಯಾ, ಉರಿಲಿಂಗಪೆದ್ದಿಪ್ರಿಯಾ ವಿಶ್ವೇಶ್ವರಾ ||

ಓಂ ನಮಃ ಶಿವಾಯ ಓಂ ನಮಃ ಶಿವಾಯ ಎನ್ನದಿದ್ದಡೆ ಬಂಧನ, ಓಂ ನಮಃ ಶಿವಾಯ ಓಂ ನಮಃ ಶಿವಾಯ, ಎಂದಡೆ ಮೋಕ್ಷ, ಷಡಕ್ಷರ ಜಪಂ ನಾಸ್ತಿ ಸರ್ವೇ ಬಂಧನಂ ತಥಾ| ತನ್ಮಂತ್ತಜಪತೋ ಭಕ್ತ್ಯಾ ಸದ್ಯೋ ಮೋಕ್ಷೇನಸಂಶಯಃ || ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯಾ, ಬಂಧನ ಮೋಕ್ಷವು ಓಂ ನಮಃ ಶಿವಾಯ ||

ಅಗ್ರಜನಾಗಲಿ ಅಂತ್ಯಜನಾಗಲಿ ಮೂರ್ಖನಾಗಲಿ ಪಂಡಿತನಾಗಲಿ ಜಪಿಸುವುದು ಪಂಚಾಕ್ಷರಿಯ, ಜಪದಿಂದೆ ರುದ್ರನಪ್ಪುದು ತಪ್ಪದು ಅದೆಂತೆಂದಡೆ: ಅಗ್ರಜೋ ಅಂತ್ಯಜೋ ವಾsಪಿ ಮೂರ್ಖೋ ವಾ.ಪಂಡಿತೋಪಿ ವಾ ಜಪೇತ್ ಪಂಚಾಕ್ಷರೀ ನಿತ್ಯಂ ಸ ರುದ್ರೋ ನಾತ್ರ ಸಂಶಯಃ | ಇಂತೆಂದುದಾಗಿ, ಇದಕ್ಕೆ ಶಪಥವ ಮಾಡಿದೆನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ||

ಎನ್ನ ಮನದಲ್ಲಿ ಮತ್ತೊಂದನರಿಯೆನು ಓಂ ನಮಃ ಶಿವಾಯ, ಓಂ ನಮಃ ಶಿವಯ ಓಂ ನಮಃ ಶಿವಾಯ ಎನುತಿದ್ದೆನು, ಎನಗೀದೇ ಮಂತ್ರ, ಎನಗಿದೇ ಜಪ, ಅದೆಂತೆಂದಡೆ : ಅಗಸ್ತ್ಯರಾಮಾದಿಭಿರಾದ್ರುತತ್ವಾ ದಮುಷ್ಯಮಂತ್ರಸ್ಯಚ ವೈದಿಕತ್ವಾತ್ ಪರಸ್ಯ ತತ್ಯಸ್ಯ ಚ ವಾಚಕತ್ವಾನ್ನಮಃ ಶಿವಾಯೇತಿ ಸದಾ ಜಪಧ್ವಂ || ಎಂದುದಾಗಿ ಕೂಡಲಸಂಗಮದೇವಾ ನೀನೆ ಬಲ್ಲೆ ಲಿಂಗಾ ||

ನಮಃ ಶಿವಾಯ ಲಿಂಗವು, ಓಂ ನಮಃ ಶಿವಾಯ ಬಸವಣ್ಣನು ನೀನೆ ಅಯ್ಯ, ಎನ್ನ ಮನಸ್ಥಲದಲ್ಲಿ ಬೆಳಗಿ ತೋರಿದೆಯಾಗಿ ಇದು ಕಾರಣ, ಕೂಡಲಚೆನ್ನಸಂಗಯ್ಯ ಆದಿ ಅನಾದಿಯಿಲ್ಲದಂದು, ಓಂ ನಮಃ ಶಿವಾಯ ಎನುತಿದ್ದೆನು ||

ಓಂ ನಮಃ ಶಿವಾಯ ಎಂಬುದೇ ವೇದ, ಓಂ ನಮಃ ಶಿವಾಯ ಎಂಬುದೇ ಶಾಸ್ತ್ರ, ಓಂ ನಮಃ ಶಿವಾಯ ಎಂಬುದೇ ಆಗಮ, ಓಂ ನಮಃ ಶಿವಾಯ ಎಂಬುದೇ ಪುರಾಣ, ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಮಃ ಶಿವಾಯ ಎಂಬುದೇ ಸಕಳ ಕಳೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ||

ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ, ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ, ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ಆಗಮ, ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ಪುರಾಣ, ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ, ಭಯಂಕರ ಭ್ರಮೆಗೊಂಡಿತ್ತು ಮಂತ್ರತಂತ್ರ ಶಿವನಂತುವನರಿಯದೆ ಚಿಂತಿಸುತಿದ್ದಿತ್ತು ಲೋಕ, ಕೂಡಲಸಂಗಮದೇವ ಶ್ವಪಚನ ಮೆರೆದಡೆ ಜಾತಿಭೇದವ ಮಾಡಲಮ್ಮೆವು ||

ಏಳುಕೋಟಿ ಮಹಾಮಮತ್ರ ಉಪಮಂತ್ರಗಳಿಗೆ ಲೆಕ್ಕವಿಲ್ಲ, ಚಿತ್ತವ್ಯಾಕುಲನಾಗದಿರಾ; ಭ್ರಮಿಸದಿರಾ ; ಕೇಳೆಲೆ ಮನವೇ, ಶಿವಾ ಶಿವಾ ಶಿವಶಿವಾ ಶಿವ ಶಿವಶಿವಾ ಶಿವಾಶಿವ ನಮೋ ಶಿವ ಶಿವಾ ಶಿವಾ ಶಿವಶಿವಾ ಶಿವಾಶಿವ ಶಿವಾ ಶಿವಾ ಶಿವ ಎಂದಡೆ ಸಾಲದೇ? ಅದೆಂತೆಂದಡೆ: ಶಿವೇತಿ ಮಂಗಲಂ ನಾಮ ಯಸ್ಯ ವಾಚಿ ಪ್ರವರ್ತತೇ | ಭಸ್ಮೀಭವಂತಿ ತಸ್ಯಾಸು ಮಹಾಪಾತಕ ಕೋಟಯಃ || ಇಂತೆಂದುದಾಗಿ, ಎನಗಿದೇ ಮಂತ್ರ, ಎನಗಿದೇ ತಂತ್ರ ಇದೇ ಗತಿ, ಇದೇ ಮತಿ ಚೈತನ್ಯವಾಗಿ ಸದ್ಗುರು ಚನ್ನಮಲ್ಲಿಕಾರ್ಜುನ ತೋರಿದ ಸಹಜ ಮಂತ್ರವಿದೇ ತತ್ವಸ್ವರೂಪು ||

೧೦

ಓಂ ನಮಃ ಶಿವಾಯ, ಓಂ ನಮಃಶಿವಾಯ, ಓಂ ನಮಃಶಿವಾಯ ಶರಣೆಂದಿದ್ದುದು ಲಲಾಟಲಿಖಿತವ ಬರೆದ ಬಳಿಕ ಪಲ್ಲಟ ಮಾಡಬಾರದಾರಿಗೆಯೂ, ಉರದಲುಂಡಿಗೆ, ಶಿರದಲಕ್ಷರ ಕೂಡಲಸಂಗಯ್ಯಾ ಶರಣೆನುತಿದ್ದುದು ||

ಪಂಚಾಕ್ಷರೀ ಮಂತ್ರ ನಿರ್ವಚನ

ವೃತ್ತ |

ನಮಃ ಪದಂ ತತ್ಖಲು ಜೀವವಾಚಿ
ಶಿವೇತಿ ಶಬ್ದಂ ಪರಮಾತ್ಮ ವಾಚಿ
ಅಯೇತಿ ತಾದಾತ್ಮ್ಯ ಪರಾ ಚತುರ್ಥೀ
ವಿದ್ಯಾದಹಂ ಬ್ರಹ್ಮ ಸದಾಸ್ಮ್ಯಖಂಡಂ ||

ಶ್ರೀ ಪಂಚಾಕ್ಷರೀ ಜಪಸ್ಥಲ ಸಮಾಪ್ತಿ ||