೧೨. ಅಜ್ಞಾನ ನಿದ್ರಾ ನಿರಸನ ಸ್ಥಲ

ಇಂತಪ್ಪ ಹೊನ್ನು ಹೆಣ್ಣು ಮಣ್ಣೆಂಬ ಪಾಶತ್ರಯ ತಾನೇತರಿಂದಲಾಯಿತಯ್ಯಾ ಎಂದಡೆ ಜ್ಞಾನದ ಮರವೆಯಿಂದಲಾಯಿತ್ತೆಂದರಿದಾತಂಗೆ ಅಜ್ಞಾನ – ನಿದ್ರಾ ನಿರಸನಸ್ಥಲ ||

ಗ್ರಂಥ |

ಉದಯೇ ಜನನಂ ನಿತ್ಯಂ ರಾತ್ರಾಂ ಚ ಮರಣಂ ತಥಾ
ಅಜ್ಞಾನೇ ಸರ್ವ ಜಂತೂನಾಂ ತದ್ವಿಧಿಶ್ಚ ಪುನಃ ಪುನಃ ||  || ೧ ||

ನಿದ್ರಾಮಾತ್ರಂ ಹರೇದಾಯುಃ ಕ್ಷೀಣಾಗ್ನೀ ರೋಗಮೂರ್ಜಿತಂ
ಮನಃಪವನಸಂಗೇನ ಯಥಾ ನಿದ್ರಾ ಷಡಾನನ ||  || ೨ ||

ವಚನ |

ಉದಯದಲ್ಲಿ ನಿಚ್ಚ ನಿಚ್ಚ ಹುಟ್ಟಿದ ಪ್ರಾಣಿಗಳಿಗೆ ಅಸ್ತಮಾನದಲ್ಲಿ ನಿಚ್ಚ ನಿಚ್ಚ ಮರಣವಾಯಿತ್ತಲ್ಲಾ, ಇದರಂತುವನಾರೂ ತಿಳಿಯಲರಿಯದೆ ಅಜ್ಞಾನಿಗಳಾಗಿ ಹೋದರಲ್ಲಾ ಎಲ್ಲರೂ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ, ಇಲ್ಲ ನಿಲ್ಲು ಮಾಣು ||

ರಾತ್ರೆಯೆಂಬ ಹುತ್ತಿನೊಳಗೆ ನಿದ್ರೆಯೆಂಬ ಕಾಳೋರಗ ಹೆಡೆಯನೆತ್ತಿ ಆಡಿ ಅಟ್ಟಿ ಕಚ್ಚಲೊಡನೆ ಅಂಜನಸಿದ್ಧರ ಅಂಜನ ಕರಗಿತ್ತು, ಘುಟಿಕಾಸಿದ್ಧರ ಘುಟಿಕೆ ಉರುಳಿಬಿದ್ದಿತ್ತು. ಯಂತ್ರಿಗಳ ಯಂತ್ರವದ್ದಿ ಹೋಯಿತ್ತು, ಮಂತ್ರಿಗಳ ಮಂತ್ರ ಮರೆಯಿತ್ತು, ಔಷಧಿಕರ ಔಷಧವನಾಳಿಗೊಂಡಿತ್ತು, ಸರ್ವವಿದ್ಯಾ ಮುಖಜ್ಯೋತಿ ನಂದಿತ್ತು, ಇದರ ವಿಷವ ಪರಿಹರಿಸುವರನಾರನೂ ಕಾಣೆ, ಈ ರಾಹುವಿನ ವಿಷದಲ್ಲಿ ತ್ರಿಭುವನವೆಲ್ಲೆ ಮೂರ್ಚ್ಛಿತರಾಗುತ್ತಿಹರು ಗುಹೇಶ್ವರಾ ||

ದೇವ ದಾನವ ಮಾನವ ಮೊದಲಾದ ಎಲ್ಲ ಜೀವನದಲ್ಲಿ ಹಿರಿದು ಕಿರಿದೆನ್ನದೆ ನಿದ್ರೆ ಬಲೆಯ ಬೀಸಿ ಸರಿದು ತೆಗೆಯಲೊಡನೆ ಅರಿವು ಮರೆಯಿತ್ತು, ನೋಡ ಜಾರಿತ್ತು, ಬುದ್ಧಿ ತೊರೆಯಿತ್ತು, ಜೀವ ಹಾರಿತ್ತು, ದೇಹವರಗಿತ್ತು, ಇದು ನಿಚ್ಚ ನಿಚ್ಚ ಬಹುದರ ಕೀಲನಾರೂ ಅರಿಯರು ಕೂಡಲಚನ್ನಸಂಗಮದೇವಾ ||

ಅಂಧಕಾರವೆಂಬ ಗುಹ್ವರದೊಳಗೆ ನಿದ್ರೆಯೆಂಬ ರಾಕ್ಷಸಿ ಗ್ರಹಿಸಿ ವೀರರ ಹುಚ್ಚುಮಾಡಿ, ಧೀರರ ಧ್ರತಿಗೆಡಿಸಿ, ಶಾಪಾನುಗ್ರಹಸಮರ್ಥರೆಲ್ಲರ ಸತ್ತಂತಿರಿಸಿ, ನಿಚ್ಚ ನಿಚ್ಚ ಜೀವನಾಶವ ಮಾಡುತ್ತಿಹಳು ನೋಡಯ್ಯಾ, ಕೂಡಲಸಂಗಮದೇವಾ ||

ಮೂರು ಲೋಕದ ಧೀರೆ, ನಿದ್ರಾಂಗನೆ ಎಲ್ಲರನೂ ಹಿಂಡಿ ಹೀರಿ ಪ್ರಾಣಾಕರ್ಷಣೆಯಂ ಮಾಡಿ, ಕಟ್ಟುಗೆಡಹಿದಳಲ್ಲಾ, ಇವಳ ಗೆಲುವ ಧೀರನಾರುವನೂ ಕಾಣೆ, ಇವಳ ಬಾಣಕ್ಕೆ ಗುರಿಯಾಗಿ, ಏಳುತ್ತ ಬೀಳುತ್ತಲಿದ್ದರೆಲ್ಲರೂ ಗುಹೇಶ್ವರ ||

ರೂಪಿಲ್ಲದವಳೊಡನಾಡಿ ಮೃತ್ಯುವಿಪ್ಪ ಠಾವನರಿಯಬಾರದು, ಹಿತವೆಯಂತಿಪ್ಪಳು, ಒತ್ತಿ ಕೆಡಹುವಳು ದೊಪ್ಪನೇ ಭೂಮಿಗೆ, ಇವಳಪ್ಪುವ ಅಗಲುವ ಪರಿಯ ನೋಡಾ ಈ ಲೋಕದೊಳಗೆ; ಎನ್ನ ಕಪಿಲಸಿದ್ಧಮಲ್ಲಿನಾಥ ದೇವರದೇವಾ ||

ನಿದ್ರೆಯಿದ್ದೆಡೆಯಲ್ಲಿ ಬುದ್ಧಿಯೆಂಬುದಿಲ್ಲ ನೋಡಾ, ಕಾಯವೊಂದೆಸೆ; ಜೀವವೊಂದೆಸೆ, ಗುಹೇಶ್ವರಲಿಂಗ ತಾನೊಂದೆಸೆ ||

ಇಂತಪ್ಪ ಅಜ್ಞಾನ – ನಿದ್ರಾ – ನಿರಸನಸ್ಥಲ ಸಮಾಪ್ತ

೧೩. ಮನೋವಿಕಾರ ನಿರಸನ ಸ್ಥಲ

ಇಂತಪ್ಪ ಅಜ್ಞಾನ – ನಿದ್ರೆ ತಾನೇತರಿಂದಲಾಯಿತ್ತಯ್ಯಾ, ಎಂದೆಡೆ ಮನೋವಿಕಾರ ದಿಂದಲಾಯಿತ್ತೆಂದರಿದಾತಂಗೆ ಮನೋವಿಕಾರ ನಿರಸನಸ್ಥಲ ||

ಗ್ರಂಥ |

ಕ್ಷಣಂ ವಾ ಯಾತಿ ಪಾತಾಲೇ ಕ್ಷಣಂ ಯಾತಿ ನಭಸ್ಥಲೇ
ಕ್ಷಣಂ ವಾಯಾತಿ ದಿಕ್ಷುಂಜೇ ಮನಶ್ಚರತಿ ಮರ್ಕಟಃ ||  || ೧ ||

ವೃತ್ತ |

ಮಚ್ಚಿತ್ತ ಮರ್ಕಟಮಿಮಂ ಚಪಲ ಸ್ವಭಾವಂ
ದುಃಖಪ್ರದೇಷು ವಿಷಯೇಷು ವೃಥಾಭ್ರಮಂತಂ ||  || ೨ ||

ಶಂಭೋ ಬಧಾನ ಕೃಪಾಯ ದೃಡಭಕ್ತಿರಜ್ಜ್ವಾ
ಶರ್ಮ ಪ್ರದೇತ್ವದನು ಚಿಂತನಕಲ್ಪವೃಕ್ಷೇ ||  || ೩ ||

ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ
ಬದ್ಧೋ ಹಿ ವಿಷಯಾಸಕ್ತೋ ಮುಕ್ತೋ ನಿರ್ವಿಷಯಸ್ತಥಾ ||  || ೪ ||

ವಚನ |

ಸುಡು ಡುಸು ಈ ಮನವನ್ನು; ಹುಡುಗನ ಮಾಡಿತ್ತು ನಡೆವಲ್ಲಿ, ನುಡಿವಲ್ಲಿ ಅಧಿಕ ನೆಂದೆನಿಸಿತ್ತು ಬೆಡಗಿನ ಕೀಲುಕಳೆದು ಹೋಹಾಗ ನಂಬಿದ ಕಡುಸ್ನೇಹದ ಮಡದಿ ಮುಟ್ಟಲಮ್ಮಳು; ನೋಡಾ! ಒಡಲನುರಿಕೊಂಬುದು; ಒಡವೆಯನರಸುಕೊಂಬ, ಮಡದಿಯನು ಮತ್ತೊಬ್ಬ ಜಾಣ ಚೆನ್ನಿಗ ಕೊಂಬ ಮುನ್ನ ಮಾಡಿದ ಕರ್ಮ ಬೆನ್ನಬಿಡದನ್ನಕ್ಕ ಇನ್ನು ಬಯಸಿದರುಂಟೇ ? ಕೂಡಲಸಂಗಮದೇವಾ ||

ಅರಿದೊಡೆ ಶರಣ; ಮರೆದೊಡೆ ಮಾನವ; ಪಾತಕನು, ಹೊಲೆಯನು, ನಾನೇತಕ್ಕೆ ಬಾತೇ? ಹೊತ್ತಿಂಗೊಂದೊಂದು ಪರಿ ಗೋಸುಂಬೆಯಂತೆ ಈಶನ ಶರಣರ ಕಂಡುದಾಸೀನವ ಮಾಡುವ ದಾಸೋsಹವರಿಯದ ದೂಷಕನು ನಾನಯ್ಯಾ, ಏಸು ಬುದ್ಧಿಯ ಹೇಳಿ ಬೇಸತ್ತೆನೀ ಮನಕೆ, ಈಶ ನೀ ಸಲಹಯ್ಯಾ, ಉರಿಲಿಂಗತಂದೆ ||

ತನ್ನಿಚ್ಛೆಯ ನುಡಿದಡೆ ಮೆಚ್ಚುವುದೀ ಮನವು, ಇದರಿಚ್ಛೆಯ ನುಡಿದಡೆ ಮೆಚ್ಚದೀ ಮನವು, ಕೂಡಲಸಂಗಮದೇವನ ಶರಣರ ನಚ್ಚದ ಮಚ್ಚದ ಮನವ ನೀ ಕಿಚ್ಚಿನೊಳಗಿಕ್ಕು ||

ತನ್ನ ವಿಚಾರಿಸಲೊಲ್ಲದೀ ಮನವು, ಇದಿರ ವಿಚಾರಿಸಹೋಹುದೀ ಮನವು, ಏನ ಮಾಡುವೆನೀ ಮನವನು, ಎಂತು ಮಾಡುವೆನೀ ಮನವನುಅ ಕೂಡಲಸಂಗನ ಶರಣರ ನಚ್ಚದ ಮಚ್ಚದ ಬೆಂದ ಮನವನುಲ ||

ಅಂದಂದಿನ ದಿನಕ್ಕೆ ಮನ ನಾಚದ ಪರಿಯ ನೋಡಾಅ ಕಂದದೀ ಮನವು ಕುಂದದೀ ಮನವು ಲಿಂಗದೇವನ ಒಲುಮೆಯ ಇದೆಯೆಂದು ಮಹಾಲಿಂಗ ಕಲ್ಲೇಶ್ವರಯ್ಯಾ ಈ ಬೆಂದ ಮನವು ಹೆಸದ ಪರಿಯ ನೋಡಾ ||

ಹೊತ್ತಿಂಗೊಂದು ಪರಿಯಹ ಮನವ ಕಂಡು, ಕಂಡು, ದಿನಕೊಂದು ಪರಿಯಹ ತನುವ ಕಂಡು ಕಂಡು ಕಂಡುದಂದಿಗೆ ಭಯವು, ಒಂದು ನಿಮಿಷಕನಂತವ ನೆನೆವ ಮನವ ಕಂಡು, ಕಂಡುದಂದಿಗೆ ಭಯವು ಇದನರಿದು ನಿಮ್ಮ ನೆನೆಯಲೀಯದು ಮನ, ಹಗೆಯಾದುದು, ಸದ್ಗುರುವೆ ಪುರದ ಮಲ್ಲ ||

ಕೊಂಬಿನ ಮರ್ಕಟನಂತೆ ಹಲವು ಕೊಂಬಿಂಗೆ ಹಾಯ್ವುತ್ತಿದೆ, ಬೆಂದ ಮನವ ನಾನೆಂತು ನಂಬುವೆನಯ್ಯಾ, ನಾನೆಂತು ನಚ್ಚುವೆನಯ್ಯಾ, ಎನ್ನ ತಂದೆ ಕೂಡಲಸಂಗಮದೇವನಲ್ಲಿಗೆ ಹೋಗಲೀಯದಯ್ಯಾ ||

ಅಂದಳವನೇರಿದ ಸೊಣಗನಂತೆ, ಕಂಡಡೆ ಬಿಡದು ತನ್ನ ಮುನ್ನಿನ ಸ್ವಭಾವವನು ಸುಡು, ಸುಡು, ವಿಷಯಕ್ಕೆ ಹರಿವುದು, ಮೃಡ ನಿಮ್ಮನನುದಿನ ನೆನಯಲೀಯದು ಎನ್ನೊಡೆಯ ಕೂಡಲಸಂಗಮದೇವಾ, ನಿಮ್ಮ ಚರಣಕಮಲ ನೆನೆವಂತೆ ಕರುಣಿಸು ಅ ಸೆರಗೊಡ್ಡಿ ಬೇಡುವೆ, ನಿಮ್ಮ ಧರ್ಮ ||

ಮರನನೇರಿದ ಮರ್ಕಟನಂತೆ ಲಂಘಿಸುತ್ತಿಹುದೆನ್ನ ಮನವು, ನಿಂದಲ್ಲಿ ನಿಲಲೀಯದೆನ್ನ ಮನವು, ಹೊಂದಿದಲ್ಲಿ ಹೊಂದಲೀಯದೆನ್ನ ಮನವು, ಎನ್ನ ತಂದೆ, ಕೂಡಲಸಂಗಮದೇವಾ, ನಿಮ್ಮ ಚರಣಕಮಲದಲ್ಲಿ ಭ್ರಮರನಾಗಿಸು ನಿಮ್ಮ ಧರ್ಮ ||

೧೦

ತಡಿನೆಲೆಯಿಲ್ಲದ ಮಹಾನದಿಯಲ್ಲಿ ಒಡಲಿಲ್ಲದ ಅಂಬಿಗ ಬಂದಿದ್ದೇನೆ, ಹಿಡಿವ ಬಿಡುವ ಮನವ ಬೆಲೆಗೊಟ್ಟೊಡೆ ಕಡೆಗಾಣಿಸಿ ಹಾಯಿಸುವೆ ಹೊಳೆಯನು, ನುಡಿಯಿಲ್ಲದ ನಿಸ್ಸೀಮ ಗ್ರಾಮದಲ್ಲಿರಿಸುವೆನೆಂದಾತನಂಬಿಗಚೌಡಯ್ಯ ||

೧೧

ಅಂಗದ ಕೊನೆಯ ಮೇಲಣ ಕೋಡಗ ಕೊಂಬಿ ಕೊಂಬಿಂಗೆ ಹಾರಿತ್ತಯ್ಯಾ, ಅಯ್ಯಾ ಒಂದು ಚೋದ್ಯವ ನೋಡಾ ಕೈ ನೀಡಿದಡೆ ಮೈಯೆಲ್ಲವ ನುಂಗಿತ್ತು, ಒಯ್ಯನೆ ಕರೆದಡೆ ಮುಂದೆ ಬಂದು ನಿಂದಿತ್ತು, ಮುಯ್ಯಾಂತಡೆ ಬಯಲಾಯಿತ್ತು ಗುಹೇಶ್ವರಾ ||

೧೨

ಕರ್ಮದ ಗಡಣ ಹಿಂಗಿದವಿಂದು, ಪಾಪದ ಬಲೆ ಬಳಸಿ ಹೋದವು, ಬಲ್ಲೆನೊಲ್ಲೆನೀ ಸಂಸಾರದಲ್ಲಿ ನೊಂದು ಬೆಂದೆನಾಗಿ ಮಾಯದ ತಲೆಯ ಮೆಟ್ಟಿ ಹೋದೆನು, ಇನ್ನು ಮರಳಿ ಬಾರೆನು, ಗುಹೇಶ್ವರಾ ನಿಮ್ಮಾಣೆ, ||

ಇಂತು ಮನೋವಿಕಾರಾದಿಯಾದ ಗರ್ವ ಸಂಸಾರನಿರಸನಸ್ಥಲ ಸಮಾಪ್ತ ||

ಶ್ರೀಮದಮಿತೋರು ಲಿಂಗಾಂಗಸಂಯೋಗಾನುಭವ ಪ್ರಸಿದ್ಧಪರಿಪೂರ್ಣ
ಶೀಲ ಪರಮಾದ್ವೈತವಿಶ್ರಾಂತರುಮಪ್ಪ ಪರಮಚರರೂಪ
ಶ್ರೀಕರಸ್ಥಲದ ಮಲ್ಲಿಕಾರ್ಜುನ ಒಡೆಯರು ಸೇರಿಸಿದ
ಮಹಾನುಭಾವ ಬೋಧೆಯಪ್ಪ
ಶ್ರೀಮದ್ಬ್ರಹ್ಮಾದ್ವೈತಸಿದ್ಧಾಂತ ಷಟ್‌ಸ್ಥಲಾಭರಣದೊಳು
ಸರ್ವ ಸಂಸಾರನಿರಸನಸ್ಥಲ ಕ್ರಮ ಸಮಾಪ್ತ ||

೧೪. ಜ್ಞಾನಪ್ರಕಾಶ ಸ್ಥಲ

ಇಂತಪ್ಪ ಸರ್ವ ಸಂಸಾರ ನಿವೃತ್ತಿಯಾದಾತಂಗೆ ಜ್ಞಾನಪ್ರಕಾಶ ಸ್ಥಲ ||

ವೃತ್ತ |

ಪ್ರಕಾಶಮಾನೇ ಪರಮಾತ್ಮ ಭಾಸಾ
ನಶ್‌ತ್ಯವಿದ್ಯಾ – ತಿಮಿರಂ ಸಮಸ್ತಂ
ಅಹೋ ಬುಧಾ ನಿರ್ಮಲ ದೃಷ್ಟಿಯೋಗಾತ್
ಕಿಂಚಿನ್ನ ಪಶ್ಯಂತಿ ಜಗತ್ಪ್ರಪಂಚಂ ||

ವಚನ |

ಸತ್ತ ಕೋಳಿ ಎದ್ದು ಕೂಗಿತ್ತ ಕಂಡೆ, ಮೊತ್ತದ ಮಾಮರನುರಿಯಿತ್ತ ಕಂಡೆ, ಕತ್ತಲೆ ಬೆಳಗಾಯಿತ್ತ ಕಂಡೆ, ಹೊತ್ತಾರೆಯೆದ್ದು ಹೊಲಬುದಪ್ಪುವುದ ಕಂಡೆ, ಇದೇನು ಹತ್ತಿತ್ತೆಂದರಿಯೆ ಗುಹೇಶ್ವರಾ ||

ಊರೊಳಗಣ ಕಿಚ್ಚು ಕಾನನದೊಳಗುರಿಯಿತ್ತ ಕಂಡೆ, ಕಾನನದ ಕಿಚ್ಚು ಬಂದೂರೊಳ ಗುರಿಯಿತ್ತ ಕಂಡೆ, ಆಲಿಸಿರೋ! ಆಲಿಸಿರೋ! ನಾಲ್ಕು ದಿಕ್ಕಿನ ಬೇಗೆಯ! ಆ ಭೂಭೂಕಾರವ ದೃಷ್ಟಿ ಮುಟ್ಟಿದಡೆ ಅಟ್ಟೆ ಸಹಸ್ರವಾಡಿತ್ತು, ಲೆಕ್ಕವಿಲ್ಲದ ಮರಣ ಮಡಿಯಿತ್ತು, ಗುಹೇಶ್ವರಾ ||

ಮನೆಯೊಳಗಣ ಕಿಚ್ಚು ಕಾನನವ ಸುಟ್ಟು ಕಾನನ ಬೆಂದಲ್ಲಿ ಮನೆ ಉರಿಹತ್ತಿತ್ತು, ಅಲ್ಲಿಯೊಂದು ಕಂಬವುಳಿಯಿತ್ತು, ಆ ಕಂಬದ ಮೇಲೊಂದು ರತ್ನವಿದ್ದುದ ಕಂಡೆ, ಅದರ ಬೆಳಗು ಮೂರು ಲೋಕವ ತುಂಬಿತ್ತಲ್ಲ, ಇದು ಕಾರಣ ಕೂಡಲಚನ್ನಸಂಗನಲ್ಲಿ ಪ್ರಭುದೇವರ ನಿಲವಿಂಗೆ ನಾನು ಶರಣೆನುತಿರ್ದೆನು ||

ಇಂತು ಜ್ಞಾನಪ್ರಕಾಶಸ್ಥಲ ಸಮಾಪ್ತ ||

೧೫. ಏಕೋದೇವಪ್ರತಿಷ್ಠೆ – ಸಮಸ್ತದೇವತಾ ನಿರಸನ ಸ್ಥಲ

ಇಂತಪ್ಪ ಜ್ಞಾನಪ್ರಕಾಶ ಸಂಪನ್ನನಾದ ಬ್ರಹ್ಮಜ್ಞಾನಿ ತನಗೊದಗಿದ ಸಂಸಾರದ ಮರವೆ ತಾನೇತರಿಂದಲಾಯಿತ್ತೆಂದು ವಿಚಾರಿಸಲು, ಸೃಷ್ಟಿಯಿಂದಲಾಯಿತ್ತು ; ಈ ಸೃಷ್ಟಿ ತಾನಾರಿಂದ ಲಾಯಿತ್ತೆಂದು ವಿಚಾರಿಸಲು, ಪರಬ್ರಹ್ಮ ಶಿವನ ಲೀಲೆಯಿಮದಲಾಯಿತ್ತು, ಆ ಪರಬ್ರಹ್ಮವಪ್ಪ ಶಿವನು ತಾನೇಕೋದೇವನೆಂದರಿದ ಬ್ರಹ್ಮಜ್ಞಾನಿಯ ಏಕೋದೇವಪ್ರತಿಷ್ಠೆ ಸಮಸ್ತದೇವತಾ ನಿರಸನ ಸ್ಥಲ ||

ಗ್ರಂಥ |

ಏಕ ಏವ ಸದಾರುದ್ರೋ ನ ದ್ವಿತೀಯೋsಸ್ತಿಕಶ್ವನ
ಏತದದ್ವೈತವಿಜ್ಞಾನಂ ಅನ್ಯದ್ ವ್ಯರ್ಥಮುದಾಹ್ರತಂ ||  || ೧ ||

ಶ್ರುತಿ |

ಏಕ ಏವ ರುದ್ರೋನ ದ್ವಿತೀಯಾಯ ತಸ್ಥೇ
ಏಕಮೇವ ನ ದ್ವಿತೀಯಂ ಬ್ರಹ್ಮ ಇತಿ ||  || ೨ ||

ವೃತ್ತ |

ತ್ವಂ ವಿಶ್ವಕರ್ತಾ ತವ ನಾಸ್ತಿ ಕರ್ತಾ
ತ್ವಂ ವಿಶ್ವಭರ್ತಾ ತವನಾಸ್ತಿ ಭರ್ತಾ
ತ್ವಂ ವಿಶ್ವಹರ್ತಾ ತವನಾಸ್ತಿ ಹರ್ತಾ
ತ್ವಂ ವಿಶ್ವನಾಥಸ್ತವನಾಸ್ತಿ ನಾಥಃ ||  || ೩ ||

ಶುಕವಸ್ತವ ವಿಶ್ವೇಶ ಕ್ರೀಡಯೈ ಕೇವಲಂ ವಯಂ
ತವೋನ್ಮೇಷ – ನಿಮೇಷಾಭ್ಯಾಮಸ್ಮಾಕಂ ಪ್ರಳೋದಯೌ ||  || ೪ ||

ಯಥಾಸ್ಯಾಪಾನಯೋಸ್ಸಾಮ್ಯಂ ಛಿದ್ರತ್ಯೇsಪಿ ನ ವಿದ್ಯತೇ
ತಥೈಕತ್ವೇನ ಸರ್ವೇಷಾಂ ರುದ್ರಸಾಮ್ಯಂ ನ ವಿದ್ಯತೇ ||  || ೫ ||

ವಿಷ್ಣ್ವಾದಿದೇವತಾನಾಂ ತು ವಿಶ್ವಾದಿಕ್ಯಂ ವದಂತಿ ಯೇ
ಅಧೋಮುಖೋರ್ಧ್ವಪಾದಾಸ್ತೇ ಯಾಸ್ಯಂತಿ ನರಕಾರ್ಣವಂ ||  || ೬ ||

ವಚನ |

ಶಿವನೆ ಜಗಕ್ಕೆ ಒಡೆಯನೆಂದಿತ್ತು ವೇದ, ಉತ್ಪತ್ತಿ ಸ್ಥಿತಿಲಯ ಕಾರಣನೆಂದಿತ್ತು ವೇದ, ‘ಶಿವಸ್ಸರ್ವ ಜಗತ್ಕರ್ತಾ ಪ್ರಭುಃಪ್ರೇರಕ ವಿಶ್ವಭುಕ್’ ಇದುಕಾರಣ, ಕೂಡಲಚನ್ನಸಂಗಯ್ಯ ನೊಬ್ಬನೇಯೆಂದಿತ್ತು ವೇದ ||

ಉಪ್ಪರಗುಡಿ ನಂದಿವಾಹನ ಸದ್ಯೋಜಾತನ ಬಾಗಿಲ ಮುಂದೆ ಸಾರುತೈದಾವೆ ನೋಡಾ ಶ್ರುತಿಗಳು, ನಾಲ್ಕು ವೇದ ಹುಸಿಯದೆ, ”ಭರ್ಗೋ ದೇವಸ್ಯ ಧೀಮಹಿ” ಎಂದುದಾಗಿ, ಕೂಡಲಸಂಗಮದೇವನಲ್ಲದಿಲ್ಲೆಂದವು ವೇದ ||

ನಾಲಗಗೆ ಶಿವನ ಹೊಗಳುವುದೇ ವಿಧಿಯೆಂದು ಹೇಳಿತ್ತು ವೇದ, ಮತ್ತೆಯೂ ಶಿವನನೆ ಸ್ತುತಿಸುವುದೆ ವಿಧಿಯೆಂದು ಹೇಳಿತ್ತು ವೇದ, ಅನ್ಯದೈವವ ಹೊಗಳಲಾಗದೆಂದುದು ಋಗ್ವೇದ ಸ್ತುತಿಶ್ರುತಂ ಗರ್ತಸದಂ ಯುವಾನಂ ಮೃಗಂ ನ ಭೀಮಮುಪಹತ್ನುಮುಗ್ರಂ | ಮೃಡಾಜರಿತ್ರೇ ರುದ್ರಸ್ತವಾನೋ ಅನ್ಯಂ ತೇ ಅಸ್ಮಿನ್ನಿವ ಪಂತು ಸೇನಾಃ | ಎಂದುದು ಶ್ರುತಿ, ಬಸವಪ್ರಿಯ ಕೂಡಲಚನ್ನಸಂಗಮದೇವಾ ||

ಸಕಲೇದ್ರಿಯಕ್ಕೆ ನಾಯಕನಪ್ಪ ಮನಕ್ಕಿದೆ ವಿಧಿಯೆಂದು ಹೇಳಿತ್ತು ವೇದ, ಶಿವನ ನೆನೆವುದು, ಶಿವನನೆ ಸ್ತುತಿಸುವುದು, ಶಿವನಲ್ಲದೆ ಮತ್ತನ್ಯದೈವಕ್ಕೆರಗಲಾದೆಂದುದು ಯಜುರ್ವೇದ, ತಮಸ್ತುಹಿ ಯಸ್ತು ಸುಷುಧನ್ವನೋ ವಿಷ್ವಕ್ಷಯತಿ ಭೇಷಜಸ್ಯಯಕ್ಷ ಉ ಮನಸಾ ಮನಸಾಯೇ ರುದ್ರಾ’ ಎಂದುದು ಶ್ರುತಿ ಬಸವಪ್ರಿಯ ಕೂಡಲಚನ್ನಸಂಗಮದೇವಾ ||

ದೈವವೆನಿಸಿಕೊಂಬ ಹಲವು ದೈವಂಗಳ ಬಿಟ್ಟು ಶಿವಲಿಂಗವನೆ ಧರಿಸಿ ಪೂಜಿಸಿ, ಶಿವ ಭಕ್ತಿಯನೆ ಮಾಡೆಂದುವು ಶ್ರುತಿ, ಅದೆಂತೆಂದಡೆ : ಈಶಾನಃ ಶಿವ ಏಕೋಧ್ಯೇಯಃ ಶಿವಂಕರಃ ಸರ್ವಮನ್ಯತೇ ಪರಿತ್ಯಜೇತ್ ಎಂದುದಾಗಿ ಬಸವಪ್ರಿಯ ಕೂಡಲಚನ್ನಸಂಗಯ್ಯ ನೊಬ್ಬನೆ ಎಂದುದು ವೇದ ||

ವೇದಂಗಳೆಲ್ಲವು ಶಿವಲಿಂಗಧಾರಣ ಮಾಡಿಸಿಕೊಂಡವೆಂದು ಹೇಳುತ್ತಿದೆ ವೇದ, ದೇವದಾನವ ಮಾನವ ಹರಿವಿರಂಚಿಗಳು ಮೊದಲಾಗಿ ಲಿಂಗವ ಪೂಜಿಸಿದರೆಲ್ಲರು ನೋಡಾ! ತ್ಯ್ರಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯಮಾಮೃತಾತ್ ಎಂದುದು ಶ್ರುತಿ, ಬಸವಪ್ರಿಯ ಕೂಡಲ ಚನ್ನಸಂಗಮ ದೇವಾ ||

ಏಕಮೇವ ನ ದ್ವಿತೀಯಾಯ ಎಂಬ ಶ್ರುತಿಯನರಿದು, ಮತ್ತೆ ದೈವವುಂಟೆಂಬ ವಿಪ್ರರು ನೀವು ಕೇಳಿ ಭೋ! ಓಂ ನಿಧನ ಪತಯೇನಮಃ ನಿಧನಪತಾಂತಿಕಾಯ ನಮಃ ಓಂ ಊರ್ಧ್ವಾಯ ನಮಃ, ಊರ್ಧ್ವಲಿಂಗಾಯನಮಃ ಓಂ ಹಿರಣ್ಯಾಯನಮಃ, ಹಿರಣ್ಯಲಿಂಗಾಯ ನಮಃ ಓಂ ಸುವರ್ಣಾಯನಮಃ, ಸುವರ್ಣಲಿಂಗಾಯನಮಃ ಓಂ ದಿವ್ಯಾಯನಮಃ, ದಿವ್ಯ ಲಿಂಗಾಯನಮಃ ಎಂದುದಾಗಿ, ಸರ್ವಲಿಂಗಂ ಸ್ಥಾಪಯೇತ್ ಪಾಣಿಮಂತ್ರಂ ಪವಿತ್ರಂ ಎಂದುದಾಗಿ, ಇದನರಿದರಿದು ಮತ್ತೆ ದೈವವುಂಟೆ ದ್ವಿಜರೆಲ್ಲರು ಭ್ರಮಿತರು, ಕೂಡಲಚನ್ನ ಸಂಗಮದೇವಾ ||

ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣುವೇ ಶಿವಸ್ಯ ಹೃದಯಂ ವಿಷ್ಣುಃ ವಿಷ್ಣೋಶ್ಚ ಹೃದಯಂ ಶಿವಃ ಯಥಾ ಶಿವಮಯೋ ವಿಷ್ಣುಃ ಏವಂ ವಿಷ್ಣುಮಯಃ ಶಿವಃ ಇಂತೆಂಬ ಪಾತಕರು ನೀವು ಕೇಳಿ ಭೋ ! ಓಂ ಭೂಃ, ಓಂ ಭುವಃ ಓಂ ಜನಃ ಓಂ ತಪಃ ಓಂ ಸತ್ಯಂ, ಓಂ ತತ್‌ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ಇಂತೆಂಬ ಶ್ರುತಿಯೊಳಗೆ ಅಶಬ್ದವುಳ್ಳಡೆ ತೋರಿರೆ, ಹಿಂದನರಿಯರು, ಮುಂದೆ ವಿಚಾರಿಸರು, ಇಂತಪ್ಪ ಅಂತ್ಯಜರನೇನೆಂಬೆ ಕೂಡಲಚನ್ನಸಂಗಮದೇವಾ ||

ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣುವೇ ಎಂಬುದೇ ವೇದವೇ ಅಲ್ಲ; ಪ್ರತ್ಯಕ್ಷ ನಿಲ್ಲು, ಮಾಣು, ಸಂಜೆ ಸಾವಿರಮಠವೆಂಬಲ್ಲಿಯೆ ತಾನು ಕಟ್ಟುಕ, ವೇದವೆರಡುಂಟೇ? ದೈವವೆರಡುಂಟೇ ಒಂದೆಯಲ್ಲದೆ? ಧ್ಯಾನಪೂಜೆಯೊಂದೆಯಲ್ಲದೆ ಎರಡುಂಟೇ? ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ ಎಂಬ ಶ್ರುತಿಯಿರಲು, ಶಿವನೊಬ್ಬನಲ್ಲದೆ ಇಬ್ಬರುಂಟೇ? ಶಿವ ಏಕೋ ಧ್ಯೇಯಶ್ಯಿವಂಕರಸ್ಸರ್ವಮನ್ಯತ್‌ಪರಿತ್ಯಜೇತ್ ಎಂದುದಾಗಿ ವೇದ ವೆರಡುಂಟೆಂದು ಹೇಳಿ ತೋರುವವನ ಬಾಯಲಿ ಎಡದ ಕಾಲ ಕೆಪ್ಪನಿಕ್ಕುವೆ ಬಸವಪ್ರಿಯ ಕೂಡಲಚನ್ನಸಂಗಮದೇವಾ ||

೧೦

ಓಂ ಪಂಚಾಕ್ಷರಿಯ ಪ್ರಮಾಣಂಗಳು; ಆದಿ ಅನಾದಿಗಳಿಲ್ಲದಂದು, ಸ್ಥಿತಿಗತಿ ಉತ್ಪತ್ಯವಾಗದಂದು, ಭಕ್ತಿಯ ಮಗ ಭವಿಯ ಬಸುರೊಳಗೆ ಸತ್ಯಜ್ಞಾನವೆಂಬ ಶಾಸ್ತ್ರಂಗಳು ಹುಟ್ಟಿದವು, ಆ ಶಾಸ್ತ್ರಂಗಳೊಳಡಗಿದವು ವೇದಪುರಾಣ ಆಗಮಂಗಳು ಆ ಆಗಮಂಗಳೊಳಡಗಿದವು ಐವತ್ತೆರಡಕ್ಷರಂಗಳು ಆ ಐವತ್ತರೆಡಕ್ಷರಂಗಳೋಡಗಿದವು ಇಪ್ಪತ್ತೇಳು ನಕ್ಷತ್ರಂಗಳು, ಆ ಇಪ್ಪತ್ತೇಳು ನಕ್ಷತ್ರಂಗಳೊಳಡಗಿದವು ಈರೇಳು ಲೋಕದ ಗಳಿಗೆ, ಜಾವ, ದಿನ, ಮಾಸ, ಸಂವತ್ಸರಗಳು, ಇಂತಿವೆಲ್ಲವನೊಳಗಿಟ್ಟುಕೊಂಡು ಓಂ ನಮಃ ಶಿವಾಯ ಎಂಬಾತ ಕಾಣಿರೇ ಒಳಗಿಪ್ಪವನು, ಓಂ ನಮಃ ಶಿವಾಯ ಎಂಬಾತ ಕಾಣಿರೇ ಹೊರಗಿಪ್ಪವನು, ಓಂ ನಮಃ ಶಿವಾಯ ಎಂಬಾತ ಕಾಣಿರೇ ಉಳಿದಿಪ್ಪವನು, ಓಂ ನಮಃ ಶಿವಾಯ ಎಂಬಾತ ಕಾಣಿರೇ, ಮತ್ತಿರ್ದ ಯೋನಿಜರೆಲ್ಲರೂ ಶಾಪಹತರಾಗಿ ಹೋದರು, ಇದು ಕಾರಣ, ಓಂ ನಮಃ ಶಿವಾಯ ಎಂಬಾತನೆ ಲಿಂಗವು ಪಂಚಾಕ್ಷರಿಯೆ ಪರಮೇಶ್ವರನು, ಪಂಚಾಕ್ಷರಿಯೆ ಪರಮತತ್ವ, ಪಂಚಾಕ್ಷರಿಯೆ ಪರಮಯೋಗ, ಪಂಚಾಕ್ಷರಿಯೆ ಪರಂಜ್ಯೋತಿ, ಪಂಚಾಕ್ಷರಿಯೆ ಪಾಪಾಂತಕನು, ‘ನ’ ಎಂಬಕ್ಷರವೆ ದೇವರ ದಯೆ ಚರಣ; ‘ಮ’ ಎಂಬಕ್ಷರವೆ ದೇವರ ಒಡಲು; ‘ಶಿ’ ಎಂಬಕ್ಷರವೆ ದೇವರ ಹಸ್ತ; ‘ವಾ’ ಎಂಬಕ್ಷರವೆ ದೇವರ ನಾಶಿಕ;’ಯ’ ಎಂಬಕ್ಷರವೆ ದೇವರ ನೇತ್ರ, ಮತ್ತೆ ‘ನ’ ಎಂಬಕ್ಷರವೆ ದೇವರ ದಯೆ ‘ಮ’ ಎಂಬಕ್ಷರವೆ ದೇವರ ಶಾಂತಿ ‘ಶಿ’ ಎಂಬಕ್ಷರವೆ ದೇವರ ಕ್ರೋಧ; ‘ವಾ’ ಎಂಬಕ್ಷರವೆ ದೇವರ ದಮನ ‘ಯ’ ಎಂಬಕ್ಷರವೆ ದೇವರ ರಸ ಮನ ಮತ್ತೆ ‘ನ’ ಎಂಬಕ್ಷರವೆ ಪೃಥ್ವಿ; ‘ಮ’ ಎಂಬಕ್ಷರವೆ ಅಪ್ಪು; ‘ಶಿ’ ಎಂಬಕ್ಷರವೆ ಅಗ್ನಿ; ‘ವಾ’ ಎಂಬಕ್ಷರವೆ ವಾಯು; ‘ಯ’ ಎಂಬಕ್ಷರವೆ ಆಕಾಶ; ಮತ್ತೆ ‘ನ’ ಎಂಬಕ್ಷರವೆ ಬ್ರಹ್ಮ; ‘ಮ’ ಎಂಬಕ್ಷರವೆ ವಿಷ್ಣು; ‘ಶಿ’ ಎಂಬಕ್ಷರವೆ ರುದ್ರ; ‘ವಾ’ ಎಂಬಕ್ಷರವೆ ಶಕ್ತಿ; ‘ಯ’ ಎಂಬಕ್ಷರವೆ ಲಿಂಗ ಇಂತು ಪ್ರಣವ ಪಂಚಾಕ್ಷರಿಯೊಳಗೆ ಅಳಿವಕ್ಷರವೈದು ಉಳಿವಕ್ಷರವೊಂದು ಈ ಪಂಚಾಕ್ಷರಿಯನೆಕಾಕ್ಷರಿಯಂ ಮಾಡಿದ ಬಳಿಕ ದೇವನೊಬ್ಬನೆಯೆಂದರಿದು ಬ್ರಹ್ಮ ದೈವವೆಂಬ ಬ್ರಹ್ಮೇತಿಕಾರನೇನೆಂಬೆನಯ್ಯಾ? ವಿಷ್ಣು ದೈವವೆಂಬ ವಿಚಾರಹೀನರನೇನೆಂಬೆನಯ್ಯಾ? ಅಶ್ವಿನಿ, ಭರಣಿ, ಕೃತ್ತಿಕೆ ಮೊದಲಾದ ಇಪ್ಪತ್ತೇಳು ನಕ್ಷತ್ರಂಗಳೊಳಗೆ ಆದಿ ಮೂಲನಕ್ಷತ್ರದಲ್ಲಿ ಹುಟ್ಟಿದನಾಗಿ ಆದಿ ಮೂಲನೆಂಬ ಹೆಸರಾಯಿತ್ತು ದೆವರ ಸೇವಾಕಾರ್ಯಕ್ಕೆ ಪ್ರಾಪ್ತನೆಂದು ವೇದಂಗಳು ಬಿನ್ನಯಿಸಲು, ಜ್ಯೋತಿಜ್ಞಾನ ಶಾಸ್ತ್ರಂಗಳು ಹುಸಿಯಾದಾವೆಂದು ನಿಮ್ಮ ಹಿರಯನಡವಿಯಲ್ಲಿ ಬೀಸಾಡಲು, ಅಲ್ಲಿ ಅಳುತ್ತಿರ್ದ ಮಗನಂ ಕಂಡು ಭೂದೇವತೆ ಸಲುಹಿ, ಭೂಕಾಂತನೆಂಬ ಹೆಸರಂ ಕೊಟ್ಟು ಭೂಕ್ರಿ ತನ್ನ ರೂಹತೋಳಲ್ಲಿ ಸೂಡಿಸಿ ಶಿವಧರ್ಮಾಗಮ ಪೂಜಾಭಕ್ತಿಯಲ್ಲಿ ಯುಕ್ತನ ಮಾಡಿದ ಬಳಿಕ ಮತ್ತೆ ನಮ್ಮ ದೇವರ ಶ್ರೀ ಚರಣದಲ್ಲಿ ಒರೆದು ತೋರಲುದೇವರು ಪುರಾಣಂಗಳಂ ಕರೆದು, ವಿಷ್ಣುವಿನ ಪಾಪಕ್ಷಯವ ನೋಡಿರೇ ಎಂದಡೆ ಆ ಪುರಾಣಂಗಳಿಂತೆಂದವು: ಪಾಪಂ ತು ಮೂಲನಕ್ಷತ್ರಂ ಜನನೀ ವರಣಂ ಪುನಃ ಪಾಪಂ ಪರ್ವತಸ್ಥೂಲಂ ಶಿವೇ ವೈರಮತಃ ಪರಂ || ಶಿವದಾಸೋಹಭಾವೇನ ಪಾಪಕ್ಷಯಮವಾಪ್ನುಯಾತ್ ಎಂದು ಪುರಾಣಂಗಳು ಹೇಳಲಾಗಿ ವಿಷ್ಣು ಕೇಳಿ ಪುರಾಣದ ಕೈಯಲು ದೀಕ್ಷಿತನಾಗೆ, ಪುರಾಣ ಪುರೋಷತ್ತಮನೆಂಬ ಪೆಸರು ಬಳಿಕಾಯಿತ್ತು, ಮತ್ತೆ ನಮ್ಮ ದೇವರ ಪಾದರಕ್ಷೆಯಂ ತಲೆಯಲ್ಲಿ ಹೊತ್ತುಕೊಂಡು ಭೂತಂಗಳಿಗಂಜಿ ಶಂಖಮಂ ಪಿಡಿದು, ದುರಿತಂಗಳಿಗಂಜಿ ನಾಮವನ್ನಿಟ್ಟು, ಪ್ರಳಯಂಗಳಿಗಂಜಿ ವೇಷಮಂ ತೊಟ್ಟು, ರಾಕ್ಷಸರಿಗಂಜಿ ಚಕ್ರಮಂ ಪಿಡಿದು, ಶಿವನ ದಾಸೋಹದ ದಾಸಿಯೆಂದು ಕಸಕಿಲಂ ಪಿಡಿದು ದೇವರ ರಾಜಾಂಗಣವನುಡುಗಿ ಹೊತ್ತ ನೀರಿನಲ್ಲಿ ಪೃಥ್ವಿಯಂ ಚಳೆಯಂ ಗೊಟ್ಟು, ಏಳ್ನೂರೆಪ್ಪತ್ತೇಳು ಲಕ್ಷ ವರುಷ ಶಿವಭಕ್ತಿಯಂ ಮಾಡಿ ಮತ್ತೆ ಹಡೆದ ಗರುಡವಾಹನವ ಸತಿ ಲಕ್ಷ್ಮಿಯ, ಕ್ಷೀರವಾರುಧಿಯಂ ಪಡೆದು ದೇವರ ಎಡಗದ್ದುಗೆಯ ಬಿಡದೆ ಓಲೈಸಿಪ್ಪವನ ದೇವರೆಂದು ನೀವಂತೆಂಬಿರಿ, ಕೇಳಿರಣ್ಣಾ, ವಚನಶುದ್ಧ ಭಾವದಲ್ಲಿ ಭಕ್ತಿಯುಳ್ಳವರು ನೀವು ಹೊತ್ತಿದ್ದ ವೇಷದಲ್ಲಿ ತಿಳಿದು ನೋಡಿರೇ! ತಂದೆ ತಾಯಿಯಿಂದ್ರಿಯದಲ್ಲಿ ಬಂದವರು ದೇವರೇ? ಸಂದೇಹ ಭ್ರಮೆಯಲ್ಲಿ ಸಿಲುಕಿದವರು ದೇವರೇ? ಶುಕ್ಲ ಶೋಣಿತದಲ್ಲಿ ಬೆಳೆದವರು ದೇವರೇ? ಆ ತಂದೆ ತಾಯಿ ಹುಟ್ಟಿಸಿದವರು ಆರೆಂದು ಕೇಳಿರೇ! ಹಿಂದಕ್ಕೆ ಸಂದ ಯುಗಂಗಳು ಶತಕೋಟಿ ಸಂಖ್ಯೆಯ ಮೇಲೆ ಏಳುನೂರಿಪ್ಪತ್ತು ಸಾವಿರ ಯುಗಂಗಳು ಇದಕ್ಕೆ ನವಕೋಟಿ ನಾರಾಯಣರಳಿದರು ಶತಕೋಟಿ ಸಂಖ್ಯೆಯ ಬ್ರಹ್ಮರಳಿದರು, ಉಳಿದವರ ಪ್ರಳಯವ ಹೇಳಲಿನ್ನಾರ ವಶ? ಇಂತಿವನೆಲ್ಲವನು ಬಿಟ್ಟು ಉಳಿದಿಪ್ಪಾತನೊಬ್ಬನೆ ಆತಂಗೆ ನಮೋ ನಮೋ ಎಂಬೆ ಕೂಡಲಚನ್ನಸಂಗಮದೇವಾ ||

೧೧

ಇಂತೆಂಬ ವಚನವಿಡಿದು ಶಿವಂಗೆ ಬ್ರಹ್ಮ ವಿಷ್ಣುಗಳು ಸರಿಮಿಗಿಲೆನಲಾಗಿ, ಸುರಿಯವೇ ಬಾಯಲ್ಲಿ ಬಾಲಹುಳುಗಳು? ಧರೆ ಚಂದ್ರರವಿವುಳ್ಳನ್ನಬರ, ಇರದೆ ಉರಿಯುತ್ತಿಪ್ಪರಯ್ಯಾ ನರಕದ ಕಿಚ್ಚಿನಲ್ಲಿ, ರುದ್ರಸ್ಯ ಬ್ರಹ್ಮ ವಿಷ್ಣುಭ್ಯಾಂ ನಾಧಿಕ್ಯಂ ಪ್ರವದಂತಿಯೇ ತೇಷಾಂ ಪಾಪಸ್ಯ ಸಾಂಕರ್ಯಮಸ್ತೀತಿ ಮಮ ನಿಶ್ಚಯಃ ಇದು ಕಾರಣ, ಹರಿಬ್ರಹ್ಮಾದಿಸುರರೆಲ್ಲರೂ ಪರಮ ಪದವಯ್ಯ ಬಸವಪ್ರಿಯ ಕೂಡಲಚನ್ನಸಂಗಮದೇವಾ ||

೧೨

ಹರಿ ಹರನೊಂದೇಯೆಂದಡೆ ಸುರಿಯವೇ ಬಾಯಲ್ಲಿ ಬಾಲಹುಳುಗಳು? ಹರಿಗೆ ಹತ್ತು ಪ್ರಳಯ ಬ್ರಹ್ಮಂಗನಂತ ಪ್ರಳಯ ಹರಂಗೆ ಪ್ರಳಯವುಂಟೆಂದು ಬಲ್ಲಡೆ, ನೀವು ಹೇಳಿರೇ? ಪ್ರಳಯ ಪ್ರಳಯದಂದಂದಿಗೆ ಹಳೆಯ ಕೂಡಲಸಂಗಮದೇವನೊಬ್ಬನೇ ನಿತ್ಯ ||

೧೩

ಅಜಹರಿಸುರರೆಲ್ಲರು ಅಳಿವರಲ್ಲದೆ ಉಳಿವರಲ್ಲ, ಶಿವನೊಬ್ಬನೆ ನಿತ್ಯನೆಂಬು ಪೊಡವಡುತ್ತಿವೆ ವೇದ, ಶಿವನೊಬ್ಬನೆ ನಿತ್ಯನೆಂದು ಹೊಗಳುತ್ತಿವೆ ನೋಡಾ, ಉತೈವಂ ವಿಶ್ವಾಭೂತಾನಿ ಸದೃಷ್ಣೋ ಮೃಡಯಾತಿನಃ ನಮೋsಸ್ತು ನೀಲಗ್ರೀವಾಯ | ಸಹಸ್ರಾಕ್ಷಾಯ ಮೀಡುಷೇ | ಎಂಬ ಶ್ರುತಿ ಬಸವಪ್ರಿಯ ಕೂಡಲಚನ್ನಸಂಗಮದೇವಾ ||

೧೪

ಜನನ ಮರಣ ವಿರಹಿತನೊಬ್ಬನೇ ಶಿವನೆಂದು ಸಂಸಾರಭಯಕ್ಕಂಜಿ ಶರಣು ಹೊಕ್ಕುದು ವೇದ, ಕಾರುಣ್ಯದಿಂದ ಸದಾ ರಕ್ಷಿಸುವುದೆಂದು ಮಾರಾರಿಗೆ ಶರಣು ಹೊಕ್ಕುದು ವೇದ ನೋಡಾ! ಓಂ ಅಜಾಯತೇ ಕಶ್ಚಿದ್ ಭೀರುಃ ಪ್ರಪದ್ಯೇ| ರುದ್ರಾಯತೇ ದಕ್ಷಿಣಮುಖಂ ತೇನ ಮಾಂ ಪಾಹಿ ನಿತ್ಯಂ | ಎಂದುದಾಗಿ, ಇದು ಕಾರಣ ಅಜಹರಿಸುರರು ಮೊದಲಾದವರಿಗೆ ನೀವೆ ಶರಣಯ್ಯಾ, ಬಸವಪ್ರಿಯಕೂಡಲಚನ್ನಸಂಗಮದೇವಾ ||

೧೫

ಒಬ್ಬರಿಬ್ಬರು ಮೂವರು ದೇವರೆಂದುಬ್ಬಿ ಮಾತನಾಡಬೇಡ, ಒಬ್ಬನೇ ಕಾಣಿರೋ! ಒಬ್ಬನೇ ಕಾಣಿರೋ! ಇಬ್ಬರು ಮೂವರು ಎಂಬುದು ಹುಸಿಮಾತು ಒಬ್ಬ ಕೂಡಲಸಂಗಯ್ಯ ನಲ್ಲದಿಲ್ಲೆಂದುಬ್ಬಿ ಬೊಬ್ಬಡುವುದು ವೇದ ||

೧೬

ಶಿವನಲ್ಲದೆ ಮತ್ತೆ ದೈವವಿಲ್ಲೆಂದವು ವೇದ, ಉಳ್ಳಡೆ, ದಕ್ಷನ ಜನ್ಮ ತಾನೆ ಹೇಳದೇ? ಉಳ್ಳಡೆ, ಕ್ರತುವನು ಕಾಯಲಾಗದೇ? ಊಳ್ಳಡೆ, ತಮ್ಮ ತಮ್ಮ ಶಿರಗಳ ಹೋಗಲಾಡಿ ಕೊಳಲೇಕೆ? ಈ ಕ್ರತುಗಳಿಗೆ ಶಿವನೇಕೋ ದೇವನೆಂದುದು ಋಗ್ವೇದ, ಆವೋ ರಾಜಾನುಮಧ್ವರಸ್ಯ ರುದ್ರಂ ಹೋತಾರಂ ಸತ್ಯ ಯುಜುಂರೋದಸ್ತೋಃ | ಅಗ್ನಿಂ ಪುರಾತನ ಯಿತ್ನೊರಚಿತ್ತಾದ್ಧಿರಣ್ಯರೂಪಮವಸೇ ಶ್ರುಣುಧ್ವಂ || ಎಂದುದಾಗಿ ಇಂತೆಂಬ ಶ್ರುತಿಯಿದೆ, ಇದುಕಾರಣ, ಕೂಡಲಚನ್ನಸಂಗನಲ್ಲದಿಲ್ಲ, ನಿಲ್ಲು, ಮಾಣು ||

೧೭

ಬ್ರಹ್ಮನೆಂದೆನ್ನೆ; ಬ್ರಹ್ಮುಗನೆಂದೆನ್ನೆ, ನಾರಣನೆಂದೆನ್ನೆ; ನಾರುಗನೆಂದನ್ನೆ; ಜಿನನೆಂದೆನ್ನೆ; ಜಿನುಗನೆಂದೆನ್ನೆ, ಭೈರವನೆಂದೆನ್ನೆ ಭೈರುಗನೆಂದೆನ್ನೆ, ವೀರಭದ್ರ ಕೊಲುವಲ್ಲಿ, ವಿಷ್ಣುವಟ್ಟಿ ಸುಡುವಲ್ಲಿ, ಕೂಡಲಸಂಗಮದೇವ, ಶಿವಧೋ! ಶಿವಧೋ ||

೧೮

ಹುಟ್ಟಿಸುವಾತ ಬ್ರಹ್ಮನೆಂದೆಂಬರು, ರಕ್ಷಿಸುವಾತ ವಿಷ್ಣುವೆಂದೆಂಬರು, ಬ್ರಹ್ಮ ತನ್ನ ಶಿರ ವನೇಕೆ ಹುಟ್ಟಿಸಲಾರ? ವಿಷ್ಣು ತನ್ನ ಮಗನನೇಕೆ ರಕ್ಷಿಸಲಾರ? ದುಷ್ಟನಿಗ್ರಹ, ಶಿಷ್ಟಪ್ರತಿಪಾಲಕ ನಮ್ಮ ಕೂಡಲಸಂಗಮದೇವರು ||

೧೯

ಕಿಚ್ಚಿಲ್ಲದುರಿವ ದೇವನು ಮತ್ತೊಬ್ಬರಿಗಂಜುವನಲ್ಲ, ಕೌತುಕದ ದೇವ ಕಾಣಿ, ಭೋ! ನಮ್ಮ ಶಿವನು, ಬಿರಿದರ ಬಿಂಕವ ಮುರಿವ, ಉಬ್ಬಿದರ ಗರ್ಭವ ಕಲಕುವ, ಬಲ್ಲಿದರ ಶಿರ ಕರದಲ್ಲಿ, ಬಲ್ಲಿದರ ನಯನ ಚರಣದಲ್ಲಿ ಅಯ್ಯಯ್ಯಾ! ಮಜ ಭಾಪುರೆ! ಉರಾವು ಸೊಡ್ಡಾಳಾ ||

೨೦

ಎಯ್ದುತೆ ಬ್ರಹ್ಮನ ಕಪಾಲ ಕರದಲ್ಲಿ, ಎಯ್ದುತೆ ವಿಷ್ಣುವಿನ ನಯನ ಶ್ರೀಪಾದದಲ್ಲಿ, ಎಯ್ದುತೆ ಕಾಮನ ಸುಟ್ಟ ವಿಭೂತಿ ಮೆಯ್ಯ ಮೇಲೆ, ಎಯ್ದುತೆ ಕಾಮನನುರುಹಿದ ಕಣ್ಣು ನೊಸಲಲ್ಲಿ, ಮುಖದ ಮೂದಲೆಯೇಕಯ್ಯಾ ಕೂಡಲಸಂಗಮದೇವಾ ||

೨೧

ಹರನ ಕೊರಳಲ್ಲಿಪ್ಪ ಕರೋಟಿಶಿರಮಾಲೆಯ ಶಿರಲಿಖಿತವ ಕಂಡು, ಮರುಳು ತಂಡಂಗಳೋದಿ ನೋಡಲು, ಇವನಜ, ಇವ ಹರಿ, ಇವ ಸುರಪತಿ, ಇವ ಧರಣೀಂದ್ರ, ಇವನಂತಕನೆಂದು ಹರುಷದಿಂದ ಸರಸವಾಡಿತ ಕಂಡು, ಹರ ಮುಕುಳಿತನಾದ ನಮ್ಮ ಕೂಡಲಸಂಗಮದೇವಾ ||

೨೨

ಬ್ರಹ್ಮ ನಿಮ್ಮ ಶ್ರೀಚರಣವನೊತ್ತುವ, ವಿಷ್ಣ ನಿಮ್ಮ ಶ್ರಿ ಹಸ್ತವನೊತ್ತುವ, ದೇವರಾಜ ನಿಮಗೆ ಸತ್ತಿಗೆಯ ಹಿಡಿವ, ವಾಯು ಬಂದು ನಿಮ್ಮ ರಾಜಾಂಗಣವನುಡುಗುವ, ಉಳಿದರ್ಧ ದೇವರ್ಕಳೆಲ್ಲ ನಿಮಗೆ ಜಯ ಜೀಯ ಹಸಾದವೆನ್ನುತ್ತಿಹರು, ಮಹಾದೇವ, ಮಹಾಮಹಿಮ ರೆನಿಸಿಕೊಂಬವರೆಲ್ಲ ನಿಮ್ಮ ಸೇವಕರು, ಅದೆಂತೆಂದಡೆ : ತವ ಶ್ರೀ ಚರಣೌ ಬ್ರಹ್ಮಾ ವಿಷ್ಣುರ್ಹಸ್ತೌ ಸಮಾಶ್ರಿತಃ, ಛತ್ರಮೂರ್ಧ್ವಾಯತೇಚೇಂದ್ರ ವಾಯುಮಾರ್ಗರ್ಗಯಶೋಧ ಯತ್‌ | ಅನ್ಯೇsಪಿ ದೇವತಾಸ್ಸರ್ವೇ ಜಯಜೀಯೇತ್ಯಬ್ರುವನ್ || ಎಂದುದಾಗಿ ಮಹಾದೇವಾ, ಮಹಾದೇವಾ, ನೀವಲ್ಲದೆ ಬೇರೆ, ದೈವವಿಲ್ಲವಾಗಿ, ಇಂತೆಂಬ ವಚನವಿಡಿದು ನಿಮಗೆ ಸರಿಯೆಂಬವಂದಿರ ತಲೆಯ ಮೆಟ್ಟಿ ನಡೆವೆ ನಾನು, ಮಹಾಮಹಿಮ, ಸೊಡ್ಡಳಾ ||

೨೩

ಗುಡಿಯೊಳಗಿರ್ದು ಗುಡಿಯ ನೇಣ ಕೊಯಿದಡೆ, ಗುಡಿಯ ದಂಡಿಗೆ ಬಿದ್ದು ಹಲ್ಲು ಹೋಹುದು, ನೋಡಾ! ಪೊಡವಿಗೀಶ್ವರನ ಕುಕ್ಷಿಯೊಳಗಿದ್ದು ನುಡಿವರು ಮತ್ತೊಂದು ದೈವವುಂಟೆಂದು, ತುಡುಗುಣಿ ನಾಯ ಹಿಡಿತಂದು ಸಾಕಿದಡೆ ತನ್ನೊಡೆಯಂಗೆ ಬಗುಳುವಂತೆ ಕಾಣಾ ಕೂಡಲಸಂಗಮದೇವಾ ||

೨೪

ಶಿವಲೋಕಕ್ಕೆ ಸರಿ ಬೇರೆ ಲೋಕವಿಲ್ಲ ; ಶಿವಮಂತ್ರಕ್ಕೆ ಸರಿ ಬೇರೆ ಮಂತ್ರವಿಲ್ಲ ಜಗಕ್ಕೆಯಿಕ್ಕಿದೆ ಮುಂಡಿಗೆಯನೆತ್ತಿಕೊಳ್ಳಿ ; ಕೂಡಲ ಸಂಗಯ್ಯನೊಬ್ಬನೇ ದೈವವೆಂದು ||

೨೫

ಸ್ಚಾಮಿ ನೀನು ಶಾಶ್ವತ ನೀನು, ಎತ್ತಿದೆ ಬಿರುದ ಜಗವೆಲ್ಲ ಅರಿಯಲು ‘ಮಹಾದೇವ, ಮಹಾದೇವ’ ಇಲ್ಲಿಂದ ಮೇಲೆ ಶಬ್ದವಿಲ್ಲ ! ಪಶುಪತಿಯೇ ಜಗಕ್ಕೆ ಏಕೋದೇವ, ಸ್ವರ್ಗ ಮರ್ತ್ಯ ಪಾತಾಳದೊಳಗೊಬ್ಬನೇ ದೇವ ಕೂಡಲಸಂಗಮದೇವ ||

ಇಂತು ಏಕೋದೇವಪ್ರತಿಷ್ಠೆ ಸಮಸ್ತದೇವತಾ ನಿರಸನಸ್ಥಲ ಸಮಾಪ್ತ ||