೧೬. ಸಮಸ್ತ ದೇವತಾ ಜನಕ ಸ್ಥಲ

ಇಂತು ಏಕೋದೇವ ಪ್ರತಿಷ್ಠೆಯಿಂದ ಸಮಸ್ತದೇವತಾ – ನಿರಸನಮಂ ಮಾಡಿ ಆ ಸಮಸ್ತ ದೇವತಾ ಮೂರ್ತಿಗಳಿಗೆ ಏಕೋದೇವನಪ್ಪ ಪರಬ್ರಹ್ಮ ಶಿವನು ತನೆ ಜನಕನೆಂದರಿದ ಬ್ರಹ್ಮಜ್ಞಾನಿಯ ಸಮಸ್ತದೇವತಾ ಜನಕಸ್ಥಲ ||

ಜಠರೇ ಲೀಯತೇ ಸರ್ವ | ಜಗತ್ ಸ್ಥಾವರ ಜಂಗಮಂ |
ಪುನರುತ್ಪದ್ಯತೇ ತಸ್ಮಾದ್ಬ್ರಹ್ಮಾದ್ಯಂ ಸಚರಾಚರಂ ||  || ೧ ||

ಶ್ರುತಿ |

ಬ್ರಾಹ್ಮಣೋsಸ್ಯ ಮುಖಮಾಸೀತ್‌ಬಾಹೂರಾಜನ್ಯಃ ಕೃತಃ
ಊರು ತದಸ್ಯ ಯದ್ವೈಶ್ಯ; ಪದ್ಭಾಂ ಶೂದ್ರೋ ಅಜಾಯತ
ಚಂದ್ರಮಾ ಮನಸೋ ಜಾತಃ ಚಕ್ಷೋಃ ಸೂರ್ಯೋ ಅಜಾಯತ
ಮುಖಾದಿಂದ್ರಶ್ಚಾಗ್ನಿಶ್ಚ ಪ್ರಾಣಾತ್ಪಾಯುರಜಾಯತ
ನಾಭ್ಯಾಂ ಆಸೀದಂತರಿಕ್ಷಂ ಶೀರ್ಷ್ಣೋ ದ್ಯೌಸ್ಸಮವರ್ತತ
ಪದ್ಭ್ಯಾಂ ಭೂಮಿರ್ದಿಶಶ್ಯ್ರೊತ್ರಾತ್ ತಥಾ ಲೋಕಾನ್ ಅಕಲ್ಪಯನ್ ||  || ೨ ||

ವಚನ |

‘ಈಶ್ವರ ಸದ್ಭಾವೇ ಕಿಂ ಪ್ರಮಾಣಂ’ ಎಂಬ ಮೀಮಾಂಸಕನ ಮೂಗಿನ ಕೊನೆಯನು ‘ಓಂ ದ್ಯಾವಾಭೂಮೀ ಜನಯನ್ ದೇವ ಏಕಃ’ ಎಂಬ ಸುರಿಗಿಯಲ್ಲಿ ಕೊಯ್ದು, ವೈಶೇಷಿಕವೆಂಬಿಟ್ಟಿಗೆಯಲೊರಸಿ, ಕೂಡಲಸಂಗಯ್ಯನೆಂಬ ಕನ್ನಡಿಯ ತೋರುವೆ ||

ಬ್ರಹ್ಮವಿಷ್ಣ್ವಾದಿ ದೇವತೆಗಳಿಗೆ ಶಿವನೆ ಜನಕನೆಂಬ ಯಜುರ್ವೇದವ ಕೇಳಿರೇ ದ್ವಿಜ ರೆಲ್ಲರೂ, ಅದೆಂತದಡೆ “ಸೋಮಃ ಪವತೇ ಜನಿತಾ ಮತೀನಾಂ ಜನಿತಾ ದಿವೋ ಜನಿತಾ ಪೃಥಿವ್ಯಾ ಜನಿತಾಗ್ನಿರ್ಜನಿತಾ ಸೂರ್ಯಶ್ಚ ಜನಿತೇಂದ್ರೋ ಜನಿತಾಥ ವಿಷ್ಣುಃ” || ಮತ್ತಂ ಆದಿತ್ಯ ಪುರಾಣೇ, ಉಮಯಾ ಸಹಿತಃ ಸೊಮಃ ಸೊಮ ಇತ್ಯುಚ್ಯತೇ ಬುಧೈಃ | ಸ ಎವ ಕಾರಣಂ ನಾನ್ಯೋ ವಿಷ್ಣೋ ರಪಿ ಚ ವೈ ಶ್ರುತಿಃ || ಮತೀನಾಂ ಚ ದಿವಃ ಪೃಥ್ವ್ಯಾ ವಹ್ನೇಃ ಸೂರ್ಯಸ್ಯ ವಜ್ರಿಣಃ ಸಾಕ್ಷಾದಪಿ ಚ ವಿಷ್ಣೋರ್ವೈ ಸೋಮೋ ಸನಯೀತೇಶ್ವರಃ || ಎಂದುದಾಗಿ ಮತ್ತೆ ದೈವವುಂಟೆಂಬ ಅಜ್ಞಾನಿ ಜಾತ್ಯಂಧರ ನಾನೇನೆಂಬೆ ಬಸವಪ್ರಿಯ ಕೂಡಲಚನ್ನ ಸಂಗಮದೇವಾ ||

ರುದ್ರ ಮುಖದಲ್ಲಿ ವಿಷ್ಣು ಭುಜದಲ್ಲಿ ಜಂಘೆಯಲ್ಲಿ ಅಜ – ಜನನವು, ಇಂದ್ರ ಪಾದದಲ್ಲಿ ಚಂದ್ರ ಮನದಲ್ಲಿ ಚಕ್ಷುವಿನಲ್ಲಿ ಸೂರ್ಯ ಜನನವು, ನೊಸಲಲಗ್ನಿಯು, ಪ್ರಾಣದಲ್ಲಿ ವಾಯು, ನಾಭಿಯಲ್ಲಿ ಅಂತರಿಕ್ಷ ಗಗನವು, ಶಿರದಲುದಯ ತೆತ್ತೀಸಕೋಟಿ ದೇವದೇವಾದಿಗಳು, ಪಾದತಳದಲ್ಲಿ ಭೂಮಿ ಜನನವು, ಶ್ರೋತ್ರದಲ್ಲಿ ದಶದಿಕ್ಕುವು ; ಜಗವ ನಿಕ್ಷೇಪಿಸಿದ ಕುಕ್ಷಿಯೊಳಕ್ಷಯನಗಣಿತಮಹಿಮನು, ಸಾಸಿರ ಸಿರ, ಸಾಸಿರ ಕಣ್ಣು, ಸಾಸಿರ ಕೈ, ಸಾಸಿರ ಪಾದ, ಸಾಸಿರ ಸನ್ನಹಿತ, ಕೂಡಲಚನ್ನಸಂಗಯ್ಯಾ ||

ಇಂತು ಸಮಸ್ತದೇವತಾ ಜನಕಸ್ಥಲ ಸಮಾಸ್ತ ||

೧೭. ಗುರುಕಾರುಣ್ಯಾಹ್ವಾನ ಶಿವಚಿಂತನ ಸ್ಥಲ

ಇಂತಪ್ಪ ಸಮಸ್ತದೇವತಾ ಜನಕನಪ್ಪ ಪರಬ್ರಹ್ಮ ಶಿವನು ಸಗುಣ ನಿರ್ಗುಣ ಭರಿತನಾಗಿ ತಾನಖಂಡ ಪರಿಪೂರ್ಣನಾದಡೆಯೂ ಗುರುಮುಖದಿಂದಲ್ಲದೆ ಸಾಧಿಸಿ ಬೆರಸಬಾರದೆಂದರಿದ ಬ್ರಹ್ಮಜ್ಞಾನಿಗೆ ಗುರುಕರುಣಾಹ್ವಾನ ಶಿವಚಿಂತನಸ್ಥಲ ||

ವೃತ್ತ |

ಶಿವತಾಭರಿತೇ ಭುವನತ್ರಿತಯೇ ಶಿವತಾಂ ಜನತಾ ನ ತಥಾಪಿ ಗತಾ
ಗುರುದರ್ಶನತಃ ಶಿವತಾಗಮದ್ ಗುರುತಶ್ಯಿವತೋ ಗುರುದೇವ ಗುರುಃ ||  || ೧ ||

ಗ್ರಂಥ |

ಭಾವಾಂತರಚರೋ ದುಃಖೀ ನಿರ್ಮಲಂ ಸಂಸ್ಮರೇಚ್ಛಿ ವಂ
ಭವದುಃಖಜಡಂ ನಾಸ್ತಿ ಕೃತಾರ್ಥೋ ಹಿ ನ ಸಂಶಯಃ ||  || ೨ ||

ತ್ವಚ್ಛಿಂತಯಾ ಮಹಾದೇವ | ತ್ವಮೇವಾಹಂ ನ ಸಂಶಯಃ
ಭ್ರಾಂತ ಭ್ರಮರ ಚಿಂತಾಯಾಂ ಕ್ರೀಟೋsಪಿ ಭ್ರಮರಾಯತೇ ||  || ೩ ||

ವಚನ |

ಘಟದೊಳಗೆ ತೋರುವ ಸೂರ್ಯನಂತೆ ಸರ್ವರಲ್ಲಿ ಶಿವಚೈತನ್ಯವಿಪ್ಪುದು, ಇದ್ದಡೇನು? ಸರ್ವರಿಗೆ ಸಾಧ್ಯವಲ್ಲ, ಮುಟ್ಟಿ ಮುಟ್ಟದು; ಅದ ಕೂಡವಡೆ ಗುರುವಿಲ್ಲಂದಲ್ಲದಾಗದು ಕಾಣಾ, ಕಲಿದೇವರ ದೇವಾ ||

ಅರಿವೆಂದರಿದೇನುವ ತಟ್ಟದೆ ಮುಟ್ಟದೆ ಇದ್ದೆನಯ್ಯಾ; ಅಂತರಂಗ ಸನ್ನಹಿತ, ಬಹಿರಂಗ ನಿಶ್ಚಿಂತನಾಗಿ ಇದ್ದೆನಯ್ಯಾ, ಸ್ವಾತಿಯ ಬಿಂದುವ ಬಯಸುವ ಚಿಪ್ಪಿನಂತೆ ಗುರುಕಾರುಣ್ಯವ ಬಯಸುತಿದ್ದೆ ಕೂಡಲಸಂಗಮದೇವಾ ||

ಕನ್ನಡಿಯು ತನ್ನದಡೇನು? ಅನ್ಯರದಾದಡೇನು? ತನ್ನ ಮುಖ ಕಾಣಬಂದಡೆ ಸಾಲದೇ? ಸದ್ಗುರುವಾರಾದಡೇನು? ತನ್ನನರಿಹಿದಡೆ ಸಾಲದೇ ಸಿಮ್ಮಲಿಗೆಯ ಚೆನ್ನರಾಮಾ ||

ಇನ್ನು ಶಿವಚಿಂತನೆ, ಭವಭವನದಲ್ಲಿ ಎನ್ನ ಮನ ಸಿಲುಕದೇ? ಭವಭವನದಲ್ಲಿ ಎನ್ನ ಮನ ಕಟ್ಟುದೇ? ಭವಸಾಗರದಲ್ಲಿ ಆಳದೇ? ಮುಳುಗದೇ? ಭವರಾಟಾಳದಲ್ಲಿ ತುಂಬದೇ? ಕೆಡಹದೇ? ಭವರೋಗ ವೈದ್ಯ ನೀನು ಭವವಿರಹಿತ ನೀನು ಅವಧಾರು, ಕರುಣಿಸು, ಕೂಡಲ ಸಂಗಮದೇವಾ ||

ಸುಖವನನುಭವಿಸಿ ಆ ಸುಖದ ಹವಣನು ಕಂಡೆ, ದುಃಖವನನುಭವಿಸಿ ಆ ದುಃಖದ ಹವಣನು ಕಂಡೆ, ಸಾಕೆಂದು ನಿಂದೆ ನಿಶ್ಚಿಂತನಾಗಿ ಸಾಕೆಂದು ನಿಂದೆ ನಿಭ್ರಾಂತನಾಗಿ, ಇದೊಂದೆ ಘನ ಸಕಳೇಶ್ವರನಲ್ಲದೆ ಪೆರತೇನೂ ಇಲ್ಲವೆಂದು ಬಯಸುತ್ತಿದ್ದೆ ||

ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು, ಪುರುಷ, ಬಾ, ಬಾ, ಪುಣ್ಯರತ್ನವೇ ನೀ ಬಾ, ನಿನ್ನ ಬರವೆನ್ನಸುವಿನ ಬರವಾದುದೀಗ, ಬಾರಾ! ಬಾರಾ! ಚೆನ್ನಮಲ್ಲಿಕಾರ್ಜುನದೇವ ಬಂದಾನೆಂದು ಬಟ್ಟೆಗಳ ನೋಡಿ ಬಾಯಾರುತಿದ್ದೆ ||

ಒಳಗ ಶೋಧಿಸಿ, ಹೊರಗ ಧವಳಿಸಿ, ಭಾವದಿಂದ ಗುಡಿತೋರಣವ ಕಟ್ಟಿದೆನಯ್ಯಾ, ಲಿಂಗ ಬಾರಯ್ಯಾ, ಎನ್ನ ದೇವ, ಬಾರಯ್ಯಾ, ಅಂತರಂಗದ ಪರಂಜ್ಯೋತಿಯನಿದಿರುಗೊಂಬೆನೆನ್ನ ಮಹಾಲಿಂಗ ಗಜೇಶ್ವರಯ್ಯನ ||

ಎಲ್ಲವ ಕಳೆದು ಶರಣನಿಂಬು ಮಾಡಿದ, ಅಂತರಂಗ ಬಹಿರಂಗದಲ್ಲಿಯೆ, ಬಳಿಕ, ತನ್ನ ಹರೆ ತನ್ನ ಕೊಳಲು ಕೂಡಲಚನ್ನಸಂಗಾ, ಲಿಂಗಸಂಗಿಯಹೆನೆಂದು ||

ಇಂತು ಗುರುಕಾರುಣ್ಯಾಹ್ವಾನ ಶಿವಚಿಂತನಸ್ಥಲ ಸಮಾಪ್ತ ||

೧೮. ಗುರುಕೃಪಾ ಪ್ರಸನ್ನ ಸ್ಥಲ

ಇಂತಪ್ಪ ಗುರುಕಾರುಣ್ಯಾಹ್ವಾನ ಶಿವಚಿಂತನೆಯೊಳಿಪ್ಪ ಬ್ರಹ್ಮಜ್ಞಾನಿಗೆ ಸಗುಣ – ನಿರ್ಗುಣ – ಸಂಪನ್ನನಾದ ಆ ಪರಬ್ರಹ್ಮ ಶಿವನು ತಾನೆ ಪರಮ ಗುರು ಮೂರ್ತಿಯಾದ ಗುರುಕೃಪಾ ಪ್ರಸನ್ನ ಸ್ಥಲ ||

ಗ್ರಂಥ |

ಅಹಮೇವ ಗುರುರ್ಭೂತ್ವಾ ಚ ರಾಮಿ ವಸುಧಾತಲೇ
ಅತ್ರಿಣೇತ್ರ ಚತುರ್ಬಾಹುರವ್ಯಕ್ತೋಮದಿಗ್ರಹಃ ||  || ೧ ||

ಗುರುಬ್ದಸ್ತ್ವಂಧಾಕರಃ ಸ್ಯಾತ್ ರುಶಬ್ದಸ್ತನ್ನಿರೋಧಕಃ
ಅಂಧಕಾರ ನಿರೋಧತ್ವಾತ್ ಗುರುರೀತ್ಯಭಿಧೀಯತೇ ||  || ೨ ||

ಗುಕಾರಸ್ತು ಗುಣಾತೀತೋ ರೂಪಾತೀತಂ ರುಕಾರಕಂ
ಗುಣರೂಪವಿಹೀನಸ್ತು ಸದ್ಗುರೀತ್ಯಭಿಧೀಯತೇ ||  || ೩ ||

ವಚನ |

ಕಾಯದಲಾದ ಮೂರ್ತಿಯಲ್ಲ, ಜೀವದಲಾದ ಮೂರ್ತಿಯಲ್ಲ, ಪ್ರಾಣದಲಾದ ಮೂರ್ತಿಯಲ್ಲ, ಪುಣ್ಯದಲಾದ ಮೂರ್ತಿಯಲ್ಲ, ಮೂರ್ತಿಯಲಾದ ಮೂರ್ತಿಯಲ್ಲ, ಯುಗದಲ್ಲಾದ ಮೂರ್ತಿಯಲ್ಲ, ಜಗದಲಾದ ಮುರ್ತಿಯಲ್ಲ, ಶಿವನಲಾದ ಮೂರ್ತಿಯಲ್ಲ; ಶಕ್ತಿಯಲಾದ ಮೂರ್ತಿಯಲ್ಲ, ಇದೆಂಥ ಮೂರ್ತಿಯೆಂದುಪಮಿಸುವೆ, ಕಾಣಬಾರದ ಕಾಯ, ನೋಡಬಾರದ ತೇಜ, ಉಪಮಿಸಬಾರದ ನಿಲವು, ಕಾರಣವಿಡಿದು ಕಂಗೆ ಗೋಚರವಾದ ಸುಖವನೇನೆಂದು ಹೆಳುವೆನು ಗುಹೇಶ್ವರಾ ||

ಸ್ಫಟಿಕದ ಘಟಕದಂತೆ ಒಳಹೊರಗಿಲ್ಲ ನೋಡಾ! ವಿಗಡ ಚರಿತ್ರಕ್ಕೆ ಬೆರಗಾದೆನು, ನೋಡುವಡೆ ಕಾಣಬರುತ್ತಿದೆ, ಮುಟ್ಟುವಡೆ, ಕೈಗೆ ಸಿಲುಕದು, ಹೊದ್ದುವಡೆ, ಸಮೀಪ; ಹತ್ತೆ ಸಾರಿದಡತ್ತತ್ತ ತೋರುತಿದೆ, ಆಕಾರ ನಿರಾಕಾರಣ ನುಂಗಿ, ಬಯಲು ಸಮಾಧಿಯಲ್ಲಿ ಸಿಲುಕಿತ್ತು ನೋಡಾ! ದರ್ಶನದಿಂದಲಮೃತಾಹಾರವಾಯಿತ್ತು! ಬೆರಸಿದಡಿನ್ನೆಂತೋ ಗುಹೇಶ್ವರಾ ||

ಅರಸುವ ಬಳ್ಳಿ ಕಾಲ ಸುತ್ತಿತೆಂಬಂತೆ, ಬಯಸುವ ಬಯಕೆ ಕೈಸಾರುವಂತೆ, ಬಡವ ನಿಧಾನವನೆಡಹಿ ಕಂಡಂತೆ, ನಾನರುಸುತ್ತಲರಸುತ್ತ ಬಂದು ಭಾವಕ್ಕಗಮ್ಯನ ಕಂಡೆನಯ್ಯಾ! ಎನ್ನ ಅರಿವಿನ ಹರಿವ ಕಂಡೆನೆಯ್ಯಾ! ಎನ್ನೊಳ ಹೊರಗೆ ಸರ್ವಾಂಗ ಪರಮಪ್ರಕಾಶದೊಳು ಬೆಳಗುವ ಜ್ಯೋತಿಯ ಕಂಡೆ ನೋಡಾ ! ಕುರುಹಳಿದ ಕರಸ್ಥಲವ ನಿಬ್ಬೆರಗಿನ ನೋಡದ ಎನ್ನ ಪರಮಗುರುವ ಕಂಡು ಬದುಕಿದೆನು ಕಾಣಾ, ಗುಹೇಶ್ವರಾ ||

ಪುಣ್ಯವುಳ್ಳ ಕಾಲಕ್ಕೆ ಮಣ್ಣು ಹೊನ್ನಹುದು, ಪುಣ್ಯವುಳ್ಳ ಕಾಲಕ್ಕೆ ಪಾಷಾಣ ಪರುಷವಪ್ಪುದು, ನೋಡಯ್ಯಾ ! ಮುನ್ನ ಮುನ್ನವೆ ಅಚ್ಚೊತ್ತಿದ್ದ ಭಾಗ್ಯವೆನ್ನ ಕಣ್ಣ ಮುಂದಕ್ಕೆ ಕಾಣ ಬಂದಿತ್ತು ನೋಡಾ, ಮಣ್ಣ ಮರೆಯ ದೇಗುಲದೊಳಗೊಂದು ಮಾಣಿಕ್ಯವ ಕಂಡ ಬಳಿಕ ಇನ್ನು ಮುನ್ನಿನಂತಪ್ಪುದೆ ಗುಹೇಶ್ವರಾ ||

ಕಂಡುದ ಹಿಡಿಯಲೊಲ್ಲದೆ ಕಾಣದುದನರಿಸಿ ಹಿಡಿದೆಹೆನೆಂದಡೆ, ಸಿಕ್ಕದೆಂಬ ಬಳಲಿಕೆಯ ನೋಡಾ! ಕಂಡುದನೆ ಕಂಡು, ಗುರುಪಾದವ ಹಿಡಿದಲ್ಲಿ ಕಾಣದುದ ಕಾಣಬಹುದು, ಕಾಣಾ ಗುಹೇಶ್ವರಾ ||

ನೀನೆನಗೆ ಶ್ರೀಗುರುವಪ್ಪಡೆ, ನಾನಿನಗೆ ಶಿಷ್ಯನಪ್ಪಡೆ, ಎನ್ನ ಕಾಯದ ಕರ್ಮವ ತೊಡೆದು, ಎನ್ನ ಕರಣಾದಿ ಗುಣಂಗಳ ಕಳೆದು, ನೀನೆನ್ನ ಕಾಯದಲ್ಲಡಗಿ ನೀನೆನ್ನ ಪ್ರಾಣದಲ್ಲಡಗಿ, ನೀನೆನ್ನ ಭಾವದಲ್ಲಡಗಿ, ನೀನೆನ್ನ ಕರಸ್ಥಲಕ್ಕೆ ಬಂದು, ಕಾರುಣ್ಯವ ಮಾಡಾ, ಗುಹೇಶ್ವರಾ ||

ಆದಿಯಿಂದತ್ತತ್ತಲೆನಗೆ ನೀನು ಗುರುವಯ್ಯಾ, ಅನಾದಿಯಿಂದತ್ತತ್ತಲೆನಗೆ ನೀನು ಗುರುವಯ್ಯಾ, ಈ ಎರಡು ನಾಮ ಹುಟ್ಟದ ಮುನ್ನ ನಿಮಗೆ ನಾನು ಶಿಷ್ಯನಯ್ಯಾ! ಎನ್ನ ಭಾವ ಕಾಯದೊಳಗೆ ಭ್ರಮೆಯ ಕಳೆದು, ಎನ್ನ ಜ್ಞಾನಕಾಯದೊಳಗೆ ಮರಹ ಕಳೆದು ಎನ್ನೊಳಗೆ ತಿಳುವಿನ ಬಗೆದೋರುತ್ತೆ ಹೊರಗೆ ನುಡಿಯದಂತಿದ್ದದೆ, ಬಿಡೆ, ನೋಡಾ! ನಿಮ್ಮ ಶ್ರೀಚರಣವೆಂತು ಮಾಡಿದಡಂತು ಮಹಾಪ್ರಸಾದವೆಂದು ಕೈಕೊಂಬೆನು, ಇಂತಾವ ತೆರದಲಾದಡೂ ಎನ್ನೊಡಲ ನಿಮ್ಮಲ್ಲಿ ಸವೆದು ಹಡೆವೆನು ನಿಮ್ಮ ಕರುಣವ ಗುಹೇಶ್ವರಾ, ಎನ್ನಿರವಿನ ಪರಿಯಿಂತು ನೋಡಾ ||

ಜ್ಯೋತಿಯೊಳಗಿಪ್ಪ ಕರ್ಪೂರಕ್ಕೆ, ಅಪ್ಪುವಿನೊಳಗಿಪ್ಪ ಉಪ್ಪಿಂಗೆ, ಶ್ರೀಗುರುವಿನೊಳಗಿಪ್ಪ ಶಿಷ್ಯಂಗೆ ಬೇರೆ ಬೇರೆ ಕ್ರಿಯಾವರ್ತನ ಉಂಟೇ? ಗುಹೇಶ್ವರಾ ||

ಇಂತು ಗುರುಕೃಪಾ ಪ್ರಸನ್ನಸ್ಥಲ ಸಮಾಪ್ತ ||

೧೯. ತಾಮಸದೀಕ್ಷಾ ನಿರಸನ ಸ್ಥಲ

ಇಂತಪ್ಪ ಪರಬ್ರಹ್ಮ ಪ್ರಸನ್ನ ಗುರುವಿನಲ್ಲಿ ಅವಿನಾಭಾವಿಯಾದ ಬ್ರಹ್ಮಜ್ಞಾನಿಯಪ್ಪ ಸತ್ ಶಿಷ್ಯಂಗೆ ತಾಮಸದೀಕ್ಷಾ ನಿರಸನಸ್ಥಲ ||

ಗ್ರಂಥ |

ಜ್ಞಾನಹೀನೇ ಗುರೌಪ್ರಾಪ್ತೇ ಶಿಷ್ಯಜ್ಞಾನಂ ಸಿದ್ಧ್ಯತಿ
ಮೂಲಚ್ಛಿನ್ನೇ ಯಥಾ ವೃಕ್ಷೇ ಕಥಂ ಪುಷ್ಪಫಲಂ ತಥಾ ||  || ೧ ||

ಜ್ಞಾನಾಹೀನಂ ಗುರುಂಪ್ರಾಪ್ಯಕುತೋಮುಕ್ತಿಮವಾಪ್ನುಯಾತ್
ಭಿನ್ನನಾವಾಶ್ರಿತಸ್ಸಿಂಧೋರ್ಯಥಾಪಾರಂ ನ ಗಚ್ಛತಿ ||  || ೨ ||

ನಾಮಧಾರಕ ಶಿಷ್ಯಾಣಾಂ ನಾಮಧಾರೀ ಗುರುಸ್ತಥಾ
ಅಂಧಕೋಂsಧರರಾಯುಕ್ತೋದ್ವಾವಿಮೌ ಪತಿತೌ ಧ್ರುವಂ ||  || ೩ ||

ವಚನ |

ತಾವು ಗುರುವೆಂದು ಮುಂದಣದವರಿಗೆ ಉಪದೇಶವ ಮಾಡುವರಯ್ಯಾ ; ತಾವೆಂತು ಗುರು? ಎಲ್ಲರ ಹಾಂಗೆ ದೇಹ, ಪ್ರಾಣ, ಗುರುವೆಂಬುದು ತಾ ಪುರುಷವೆಂಬರು ಆ ಪುರಷ ಲೋಹವ ಮುಟ್ಟಿದಡೆ ಸುವರ್ಣವಹುದಲ್ಲದೆ, ಪರುಷವಾಗಲರಿಯದು! ಅದು ಗುರು ಸ್ಥಲವಲ್ಲ, ಇನ್ನು ಗುರುವೆಂಬುದು ಜ್ಯೋತಿಪ್ರಕಾಶ, ಅದು ಮುಟ್ಟಿ ತನ್ನಂತೆ ಮಾಡಿಕೊಳ್ಳಬಲ್ಲುದಾಗಿ, ಅದಾವ ಜ್ಯೋತಿಯೆಂದಡೆ ಸ್ವಯಂ ಜ್ಯೋತಿ, ಆ ಜ್ಯೋತಿಯ ಬೆಳಗಿಂ ಪ್ರಾಣಲಿಂಗವ ಕಂಡು ಸುಖಿಯಾಗಬೇಕದೆಂತೆಂದಡೆ ನಾಲ್ಕು ವೇದದರ್ಥ, ಗಾಯತ್ರಿ, ಗಾಯತ್ರಿಯರ್ಥ, ಅಜಪಗಾಯತ್ರಿ, ಅಜಪಗಾಯತ್ರಿಯರ್ಥ, ಪ್ರಾಣಾಯಮ, ಪ್ರಾಣಾ ಯಾಮದಿಂದ ಪಶ್ಚಿಮಜ್ಯೋತಿಯಂ ಬೆಳಗಿ, ಪ್ರಾಣಲಿಂಗ ಸಂಬಂಧವಂ ಮಾಡುವುದು, ಇಷ್ಟರಲ್ಲಿ ಸ್ವತಂತ್ರನಾದಡೆ, ಇಷ್ಟಲಿಂಗವನುಪದೇಶವಂ ಮಾಡುವುದು, ಇಷ್ಟೂ ಇಲ್ಲದೆ ಕೊಟ್ಟಡೆ, ಅಂಧಕನ ಕೈ ಅಂಧಕ ಹಿಡಿದಂತೆ ಕಾಣಾ, ಕೂಡಲ ಸಂಗಮದೇವಾ ||

ತನ್ನ ಲಿಂಗವ ಶಿಷ್ಯಂಗೆ ಬಿಜಯಂಗೈಸಿ ಕೊಟ್ಟು ಮುಂದೆ ತಾನೇನಾಗಿ ಹೋಹನೆಲ್ಲವೋ? ಅವನ ಧನಕ್ಕೆ ಗುರುವಾದನಲ್ಲದೆ, ಅವನ ಮನಕ್ಕೆ ಗುರುವಾದುದಿಲ್ಲ, ಹಿಂದಾದ ಮುಕ್ತಿಯ ಮಾರಿಕೊಂಡುಂಬ ಬಂಡರ ತೋರದಿರು, ಕೂಡಲಚನ್ನಸಂಗಮದೇವಾ ||

ಹಣದಾಸೆಗೆ ಹದಿನೆಂಟು ಜಾತಿಯ ಭಕ್ತರಮಾಡಿ ಲಿಂಗವಕೊಟ್ಟು ಲಿಂಗದ್ರೋಹಿಯಾದ, ಪ್ರಸಾದವ ನೀಡಿ ಪ್ರಸಾದ ದ್ರೋಹಿಯಾದ, ಪಂಚಾಕ್ಷರಿಯ ಹೇಳಿ ಪಂಚಮಹಾಪಾತಕಕ್ಕೊಳಗಾದ, ಇಂತೀ ಹೊನ್ನ ಹಂದಿಯ ಕೊಂದು, ಬಿನ್ನಾಣದಲ್ಲಿ ಕಡಿತಿಂಬ ಕುನ್ನಿಗಳನೇನೆಂಬೆ ನಯ್ಯಾ ಕಲಿದೇವರದೇವಾ ||

ಹಿಂದೆ ಹರಿಯದೆ, ಮುಂದನರುಹಿಸದೆ, ಹರಿಹರಿದುಪದೇಶವ ಮಾಡುವ ಹಂದಿಗಳ ನಾನೇನೆಂಬೆನೆಲವೋ? ಗಂಡನ ಗುರು ಹೆಂಡತಿಗೆ ಮಾವನೇ? ಹೆಂಡತಿಯ ಗುರು ಗಂಡಂಗೆ ಮಾವನೇ? ಉಪಮೆಗೆ ಬಾರದ ಘನವನುಪಮೆಗೆ ತಂದು ನುಡಿವ ನರಕಿಜೀವಿಗಳನು ಕೂಗಿಡೆ, ಕೂಗಿಡೆ, ನರಕದಲ್ಲಿಕ್ಕುವ ನಮ್ಮ ಕೂಡಲಚನ್ನಸಂಗಮದೇವರು ||

ಜಗದ ಜನವ ಹಿಡಿದುಕೊಂಡು ಬಂದು ಉಪದೇಶವ ಮಾಡಿದ ಗುರುವಿಂಗೆ, ಆ ಉಪದೇಶ ಕೊಂಡು ಕೊಟ್ಟು ಮಾರಾಗಿ ಹೋಹುದಲ್ಲದೆ, ಅಲ್ಲಿ ನಿಜವಳವಡುವುದೇ? ತೆರನರಿಯದ ಸಂಸಾರ ಜೀವಿಗಳು ಮಾಡಿದ ದ್ರೋಹ ತಮ್ಮನೇ ತಿಂದು ಆ ಗುರುವಿಂಗು ಪಹತಿಯ ಮಾಡುವುದು ನೋಡಾ ! ಅದೆಂತೆಂದಡೆ, ‘ಶಿಷ್ಯಾಪಾಪೋ ಗುರೋರಪಿ’ ಎಂದುದಾಗಿ ಗುಹೆಶ್ವರಾ, ತಾನಿಟ್ಟ ಬೇತಾಳ ತನ್ನನೇ ತಿಂಬದೆ ಬೇಕು ಬೇಡಂದೆನಲುಂಟೇ? ||

ಹೊಲಬನರಿಯದ ಗುರು, ಸುಲಭನಲ್ಲದ ಶಿಷ್ಯ, ಕೆಲಬಲನ ನೋಡಿ ವಿಚಾರಿಸಿ ಮಾಡದುಪದೇಶ, ಅಂಧಕ ವನವ ಹೊಕ್ಕಂತೆ ಕಾಣಾ, ರಾಮನಾಥಾ ||

ತನ್ನ ಮನೆಯ ಹೊಗದ ಗುರುವನರಸಿಕೊಂಡು ಹೋಹಾತ ಶಿಷ್ಯನಲ್ಲ, ತಾ ಹೊಗದ ಮನೆಯಲುಪ್ರದೇಶವ ಮಾಡುವಾತ ಗುರುವಲ್ಲ, ಅಂಗವ ಮಾರಿಕೊಂಡುಂಬ ಶಿಷ್ಯ ಗುರುದ್ರೋಹಿ! ಲಿಂಗವ ಮಾರಿಕೊಂಡುಂಬ ಗುರು ಶಿವದ್ರೋಹಿ, ಈ ಗುರುಶಿಷ್ಯರಿಬ್ಬರನೂ ಕೂಡಲಚನ್ನಸಂಗಯ್ಯ ನಾಯಕ ನರಕದಲ್ಲಿಕ್ಕುವ ||

ಅರಿಯದ ಶಿಷ್ಯಂಗೆ ಅರಿಯದ ಗುರುವು ಅನುಗ್ರಹವ ಮಾಡಿದಡೆ, ಏನಪ್ಪುದೆಲವೋ! ಅಂಧಕನ ಕೈಯ ಅಂಧಕ ಹಿಡಿದಡೆ ಮುಂದೇನ ಕಾಬರೆಲವೋ! ಬರಿಯ ಮಾತಿನ ಮಂಜನೊಡ್ಡದಿರೆಲವೋ! ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವ ಹುಸಿಯ ಸರಕಿಕ್ಕ ದಿರಲೆವೋ ||

ಅರಿಯದ ಗುರು, ಅರಿಯದ ಶಿಷ್ಯ ಇವರಿಬ್ಬರಿಗೇನಪ್ಪುದೋ, ಕುರುಡ ಕುರುಡನ ಕೈವಿಡಿದು ಪಥವ ನಡೆಯಬಲ್ಲಡೆ, ತೊರೆಯಲದ್ದಿ ಹೋಹವನ ಈಸಲರಿಯದವ ತೆಗೆದಂತಾಯಿತ್ತೆಂದನಂಬಿಗಚೌಡಯ್ಯ ||

೧೦

ಎರಡು ಗ್ರಾಮದ ನಡುವೆ ಕಡದ ಸೀಮೆಯ ಕಲ್ಲು, ಅದ ಕಟ್ಟಿದಾತ ಗುರುವಲ್ಲ; ಕಟ್ಟಿಸಿಕೊಂಡಾತ ಶಿಷ್ಯನಲ್ಲ ; ಆದಿಯನರಿಯದ ಗುರುವು, ಭೇದಿಸಲರಿಯದ ಶಿಷ್ಯ, ಇವರಿಬ್ಬರೂ ಉಭಯಭ್ರಷ್ಟರೆಂದಾತನಂಬಿಗಚೌಡಯ್ಯ ||

೧೧

ಸತ್ತು ಮಣ್ಣಾಗಿ ಹೋದ ಮಾತಾಪಿತರುಗಳು ತಮ್ಮ ಸಂತಾನವಾಗಿ ಜನಿಸಿ ಬಂದರೆಂದು ಹೆತ್ತು ಹೆಸರಿಟ್ಟು ಕರೆವರಯ್ಯಾ, ಕಾಗೆಯ ಬಾಯ ಕರಗದ ಬಾಯೋಗರವ ಕೊಂಡು ಅನ್ಯ ದೈವಂಗಳ ಪೂಜಿಸುವ ಲೋಗರವರ ಕೈಯಲುಪದೇಶವ ಮಾಡಿಸಿಕೊಂಡ ಶಿಷ್ಯಂಗೆ ಉಪದೇಶವ ಕೊಟ್ಟ ಗುರುವಿಂಗೆ ಅವರಿಬ್ಬರಿಗೆಯೂ ಅಜ್ಞಾನಭವಂ ನಾಸ್ತಿಯಾಗದೇ ಭವಸಾಗರದೊಳಗವರಿಬ್ಬರೂ ಅಳುತ್ತ ಮುಳುಗುತ್ತಲಿಹರು ಕಾಣಾ ಕಲಿದೆವರದೇವಾ ||

೧೨

ಹಲರ ನಡುವೆ ಕುಳ್ಳಿರ್ದ ಗುರುವಿಂಗೆ ಶಿಷ್ಯನು ಸಾಷ್ಟಾಂಗವೆರಗಿ ಶರಣೆಂದು ಪಾದ ಹಿಡಿದುಕೊಂಡು, ನನಗುಪದೇಶವ ಮಾಡಬೇಕೆಂದು ಬಿನ್ನಹಂ ಮಾಡಿದಡೆ ‘ನಾನುಪದೇಶವ ಮಾಡಲಮ್ಮೆನು ನಿಮ್ಮ ನುಜ್ಞೆಯಿಂದುಪದೇಶವ ಮಡಲೇ’ ಎಂದು ಆ ಹಲರಿಗೆ ಬಿನ್ನಹಂ ಮಾಡಲಿಕೆ, ಆ ಹಲರು ಕೊಟ್ಟ ನಿರೂಪವಿಡಿದು ಉಪದೇಶವಮಾಡುವ ಗುರು ಹಲರ ಮನೆಯ ಬಾರಿಕನೆಂದ ಕಲಿದೇವರದೇವಾ ||

ಇಂತು ತಾಮಸದೀಕ್ಷಾ ನಿರಸನಸ್ಥಲ ಸಮಾಪ್ತ ||

೨೦. ಸ್ಥಾವರಲಿಂಗ ನಿರಸನ ಸ್ಥಲ

ಇಂತಪ್ಪ ತಾಮಸದೀಕ್ಷೆ ನಿರಸನವಾದ ಬ್ರಹ್ಮಜ್ಞಾನಿಯಪ್ಪ ಸಚ್ಛಿಶ್ಯಂಗೆ ಸ್ಥಾವರಲಿಂಗ ನಿರಸನ ಸ್ಥಲ ||

ಗ್ರಂಥ |

ಇಷ್ಟಲಿಂಗಂ ಪರಿತ್ಯಜ್ಯ ಲೋಭಾದನ್ಯತ್ರ ಗಚ್ಛತಿ
ಸಕಿಲ್ವಿಷಮವಾಪ್ನೋತಿ ಪೂಜಾಯಾ ನಿಷ್ಫಲಾಭವೇತ್ ||  || ೧ ||

ಪ್ರಾಣಲಿಂಗಮವಿಶ್ವಸ್ಯ ತೀರ್ಥಲಿಂಗಂ ವಿಶೇಷಯೇತ್
ಪ್ರಸಾದೋ ನಿಷ್ಫಲಶ್ಚೈವ ರೌರವಂ ನರಕಂ ವ್ರಜೇತ್ ||  || ೨ ||

ಶಿವಲಿಂಗಂ ಪರಿತ್ಯಜ್ಯ ಲೋಭಾದನ್ಯತ್ರ ಗಚ್ಛತಿ
ಸ ಪಾಪೀ ನರಕಂ ಯಾತಿ ಯಾವಚ್ಚಂದ್ರದಿವಾಕರಂ ||  || ೩ ||

ವಚನ |

ಅಂಗದ ಮೇಲೆ ಲಿಂಗ ಸಾಹಿತ್ಯವಾದ ಬಳಿಕ ಸ್ಥಾವರಲಿಂಗಕ್ಕೆರಗಲಾಗದು, ತನ್ನ ಪುರುಷನ ಬಿಟ್ಟು ಅನ್ಯಪುರುಷನ ಸಂಗ ಸಲುವುದೇ? ಕರಸ್ಥಲದ ದೇವರಿದ್ದತೆ ದರೆಯ ಮೇಲಣ ಪ್ರತಿಷ್ಠೆ ಗೆರಗಿದಡೆ ನರಕದಲ್ಲಿಕ್ಕುವ ನಮ್ಮ ಕೂಡಲಸಂಗಮದೇವರು ||

ಅಂಗದ ಮೇಲೆ ಲಿಮಗವಿದ್ದು ಸ್ಥಾವರ ಲಿಂಗಕ್ಕೆ ಶರಣೆನ್ನಲಾಗದು, ಅನ್ಯ ಲಿಂಗವ ಮುಟ್ಟಿ, ದರುಶನ ಮಾಡುವ ಕುನ್ನಿಗಳನ್ನೇನೆಂಬೆ? ಅಂಗದ ಲಿಂಗವು ರಂಗದಕಲ್ಲ ತಾಗಿದಡೆ, ಆವುದು ಕಿರಿದೆಂಬೆ? ಆವುದು ಹಿರಿದೆಂಬೆ? ತಾಳೋಷ್ಠ ಸಂಪುಟಕ್ಕೆ ಬಾರದ ಘನವು, ಪ್ರಾಣ ಲಿಂಗಂ ಪರಿತ್ಯಜ್ಯ | ಅನ್ಯಲಿಂಗಮುಪಾಸತೇ| ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹ ಮಾಚರೇತ್ ಎಂದುದಾಗಿ, ದೀರ್ಘದಂಡ ಗುರುಸ್ವರ್ಶನ, ಕರಮುಟ್ಟಿ ಲಿಂಗಸ್ಪರ್ಶನ ಶಿರಮುಟ್ಟಿ ಜಂಗಮಸ್ಪರ್ಶನ ಹತ್ತಿರಿರ್ದ ಲಿಂಗವ ಕಿರಿದು ಮಾಡಿ ದೂರದಲ್ಲಿದ್ದ ಲಿಂಗವ ಹಿರಿದು ಮಾಡುವ ವ್ರತಗೇಡಿಗಳ ಮುಖವ ತೋರದಿರು ಕುಡಲಚನ್ನಸಂಗಮದೇವಾ ||

ತನ್ನ ಲಿಂಗವ ಬಿಟ್ಟು ಅನ್ಯಲಿಂಗಕ್ಕೆ ಶರಣೆಂಬ ಕುನ್ನಿಗಳನೇನೆಂಬೆನಯ್ಯಾ ಕಲಿ ದೇವರ ದೇವಾ ||

ಹಿಡಿದ ಲಿಂಗವಬಿಟ್ಟು ಗುಡಿಯ ಲಿಮಗಕ್ಕೆ ಶರಣೆಂಬ ಕುಡಿಹಿಗಳನೇನೆಂಬೆನಯ್ಯಾ ಕಲಿ ದೇವರದೇವಾ ||

ಒಟ್ಟಿರ್ದ ಮಣ್ಣಿರ್ಗೂ ನಟ್ಟಿರ್ದ ಕಲ್ಲಿಗೂ ಕಟ್ಟಿರ್ದ ಲಿಂಗವಡಿಯಾಗಿ ಬೀಳುವ ಲೊಟ್ಟೆ ಗುಡಿಹಿಗಳನೇನೆಂಬೆನಯ್ಯಾ ಕಲಿದೇವರದೇವಾ ||

ಕರಸ್ಥಲದ ಲಿಂಗವ ಬಿಟ್ಟು, ಧರೆಯ ಮೇಲಣ ಪ್ರತಿಷ್ಠೆಗೆರಗುವ ನರಕಿ ನಾಯಿಗಳ ನೇನೆಂಬೆನಯ್ಯಾ ಪರಮ ಗುರುಶಾಂತಮಲ್ಲಿಕಾರ್ಜುನಾ ||

ಹಾಲ ಹಿಡಿದು ಬೆಣ್ಣೆಯನರಸಲುಂಟೇ? ಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೇ? ಲಿಂಗಸಂಗವ ಮಾಡೇನೆಂಬಾತಂಗೆ ಅನ್ಯದೈವದ ಭಜನೆಯೇಕಯ್ಯಾ? ಅದೆಂ ತೆಂದಡೆ, ಇಷ್ಟಲಿಂಗಮವಿಶ್ವಸ್ಯ ಅನ್ಯದೈವಮುಪಾಸತೇ ಶ್ವಾನಯೋನಿಶತಂ ಗತ್ವಾ ಚಾಂಡಾಲ ಗ್ರಹಮಾಚರೇತ್ ಎಂದುದಾಗಿ ಇಂತಪ್ಪ ಪಾತಕರಿಗೆ ಅಘೋರ ನರಕ ತಪ್ಪದು ಕಾಣಾ, ಕೂಡಲಚನ್ನಸಂಗಮದೇವಾ ||

ಪತಿವ್ರತೆಯಾದಡೆ ಪರಮಪುರುಷರ ಸಂಗವೇಕಯ್ಯಾ? ಲಿಂಗಸಂಗಿಯಾದಡೆ ಅನ್ಯದೈವದ ಭಜನೆಯೇಕಯ್ಯಾ? ಕಂಡಕಂಡವರ ಹಿಂದೆ ಹರಿವ ಚಾಂಡಾಲಗಿತ್ತಿಯಂತೆ, ಒಬ್ಬನ ಕೈವಿಡಿದು, ಮತ್ತೊಬ್ಬನ ಸಂಗವ ಮಾಡುವ ಹಾದರಗಿತ್ತಿಯಂತೆ, ಪ್ರಾಣಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಹರಸಿ ಪೊಡವಟ್ಟು ಕೋಟಲೆಗೊಳಲೇಕೆ? ಇದು ಕಾರಣ ಕೂಡಲಚನ್ನಸಂಗಮದೇವಾ, ಇಂತಪ್ಪ ಪಾತಕರ ಮುಖವನೆನಗೆ ತೋರದಿರಯ್ಯಾ ||

ನಂಬಿದ ಹೆಂಡತಿಗೆ ಗಂಡನೊಬ್ಬನೇ ಕಾಣಿ ಭೋ! ನಂಬಿದ ಭಕ್ತಂಗೆ ಲಿಮಗದೇವನೋಬ್ಬನೇ ಕಾಣಿ ಭೋ! ಅನ್ಯಪುರುಷರ ಸಂಗವೆಂಬುದು ಹಾದರ ಕಾಣಿ ಭೋ! ಅನ್ಯದೈವದ ಸಂಗವೆಂಬುದು ಹಾದರ ಕಾಣಿಭೋ! ಇದುಕಾರಣ, ಕೂಡಲಸಂಗಮದೇವರು ಕೆಡಹಿ ಮೂಗ ಕೊಯ್ವ ಕಾಣಿ ಭೋ ||

೧೦

ಅನ್ಯದೈವವ ಬಿಟ್ಟುದಕ್ಕವುದು ಕ್ರಮವೆಂದಡೆ ಅನ್ಯದೈವದ ಮಾತನಾಡಲಾಗದು, ಅನ್ಯ ದೈವದ ಪೂಜೆಯ ನೋಡಲಾಗದು, ಸ್ಥಾವರಲಿಂಗಕ್ಕೆರಗಲಾಗದು, ಆ ಲಿಂಗದ ಪ್ರಸಾದವ ಕೊಳಲಾಗದು, ಇಷ್ಟೂ ನಾಸ್ತಿಯಾದಡೆ ಅನ್ಯದೈವವ ಬಿಟ್ಟಡೆ ಭಕ್ತನೆನಿಸುವನು, ಇವರೊಳ ಗನುಸರಣೆಯ ಮಾಡಿದನಾದಡೆ ಕುಂಭಿಯ ಪಾತಕ ನಾಯಕ ನರಕದಲ್ಲಿಕ್ಕುವ ನಮ್ಮ ಕೂಡಲಸಂಗಮದೇವರು ||

೧೧

ಸೂಳೆಯ ಮಗ ತಮ್ಮಪ್ಪನನರಿಯದೆ ಪಾಳೆಯದೊಳಗೆಲ್ಲ ಅರಸುತ್ತಲೈದಾನೆ ಆಳೆಂದರಿಯದೆ ಅರಸೆಂದರಿಯದೆ ಪಾಳೆಯದೊಳಗೆಲ್ಲ ಅರಸುತ್ತಲೈದಾನೆ ಅದೆಂತೆಂದಡೆ: ಬಹುಲಿಂಗ ಪೂಜಕಶ್ಚೈವ ಬಹುಭಾವಗುರುಸ್ತಥಾ, ಬಹುಪ್ರಸಾದಂ ಭುಂಜೀಯಾತ್ ವೈಶ್ಯಾಪುತ್ರೋನ ಸಂಶಯಃ ಇಂತೆಂದುದಾಗಿ ಕಾಳುಮೂಳೆಗೆ ಶಿವಭಕ್ತಿ ದೊರಕುವುದೇ? ಆಣೆ, ನಿಮ್ಮಾಣೆ, ಕೂಡಲಚನ್ನಸಂಗಮದೇವಾ ||

೧೨

ಪರುಷದ ಗೃಹದೊಳಗಿದ್ದು ತಿರಿವನೇ ಮನೆಮನೆಯ? ತೊರೆಯೊಳಗಿದ್ದವನು ತೃಷೆ ಯಾಗಲರಸುವನೇ ಕೆರೆಯುದಕವ? ಮಂಗಳಲಿಂಗವಂಗದ ಮೇಲಿದ್ದು ಅನ್ಯ ಲಿಂಗಗಳ ನೆನೆವನೇ ನಿಮ್ಮ ಭಕ್ತನು? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ||

ಇಂತು ಸ್ಥಾವರಲಿಂಗ ನಿರಸನಸ್ಥಲ ಸಮಾಪ್ತ ||