ಸತಿಯರ ನೋಡಿ ಸಂತೋಷವ ಮಾಡಿ
ಸುತರ ನೋಡಿ ಸುಮ್ಮಾನವನೈದಿ
ಮತಿಯ ಹೆಚ್ಚುಗೆಯಿಂದ ಮೈಮರದೊರಗಿ
ಸತಿಸುತರೆಂಬ ಸಂಸಾರದಲ್ಲಿ
ಮತಿಗೆಟ್ಟು ಮರುಳಾದುದನೇನೆಂಬೆ
ಎನ್ನ ಪರಮಗುರು ಶಾಂತಮಲ್ಲಿಕಾರ್ಜುನಾ ||


ಅಂತರಂಗದಲ್ಲಿ ಅರಿವಿಲ್ಲದವಂಗೆ
ಬಹಿರಂಗದಲ್ಲಿ ಕ್ರೀಯಿದ್ದು ಫಲವೇನು ?
ಅದು ಕಣ್ಣಿಲ್ಲದವನ ಬಾಳುವೆಯಂತೆ,
ಬಹಿರಂಗದಲ್ಲಿ ಕ್ರೀಯಿಲ್ಲದವಂಗೆ
ಅಂತರಂಗದಲ್ಲಿ ಅರಿವಿದ್ದು ಫಲವೇನು ?
ಅದು ಶೂನ್ಯಾಲಯದ ದೀಪದಂತೆ
ಅಂತರಂಗದ ಅರಿವು ಬಹಿರಂಗದ ಕ್ರಿಯೆ
ಈ ಉಭಯಾಂಗವೊಂದಾಗಬೇಕು
ಅದೆಂತೆಂದಡೆ :
ಅಂತರ್ಜ್ಞಾನಂ ಬಹಿಃಕ್ರಿಯಾ ಏಕೀಭಾವೋ ವಿಶೇಷತಃ
ಇಂತೆಂದುದಾಗಿ
ಅಂತರಂಗದಲ್ಲಿ ಅರಿವು ಬಹಿರಂಗದಲ್ಲಿ ಕ್ರಿಯೆಯುಳ್ಳ ಮಹಾತ್ಮನೆ
ಭಕ್ತನಪ್ಪ, ಮಹೇಶ್ವರನಪ್ಪ, ಪ್ರಸಾದಿಯಪ್ಪ, ಪ್ರಾಣಲಿಂಗಿಯಪ್ಪ
ಶರಣನೈಕ್ಯನಪ್ಪ
ನಮ್ಮ ಪರಮಗುರು ಶಾಂತಮಲ್ಲಿಕಾರ್ಜುನಾ ತಾನೆಯಪ್ಪ ||


ಕರಸ್ಥಲದ ಲಿಂಗವ ಬಿಟ್ಟು
ಧರೆಯ ಮೇಲಣ ಪ್ರತಿಷ್ಠೆಗೆರಗುವ
ನರಕಿ ನಾಯಿಗಳನೇನೆಂಬೆನಯ್ಯಾ |
ಪರಮಗುರು ಶಾಂತಮಲ್ಲಿಕಾರ್ಜುನಾ ||


ಶ್ರೋತ್ರದ ಕೊನೆಯಲ್ಲಿ ಬಂದ ಸಂಗೀತದ ಪರಿಣಾಮವ
ಅವಧಾನದ ಕೊನೆಯ ಮೊನೆಯ ಮೇಲೆ
ಲಿಂಗಕ್ಕೆ ಸಮರ್ಪಣ ಮಾಡಬೇಕು
ನೇತ್ರದ ಕೊನೆಯಲ್ಲಿ ಬಂದ ಸುಲಕ್ಷಣದ ಪರಿಣಾಮವ
ಅವಧಾನದ ಕೊನೆಯ ಮೊನೆಯ ಮೇಲೆ
ಲಿಂಗಕ್ಕೆ ಸಮರ್ಪಿಸಬೇಕು
ನಾಸಿಕದ ಕೊನೆಯಲ್ಲಿ ಬಂದ ಸುಗಂಧದ ಪರಿಣಾಮವ
ಅವಧಾನದ ಕೊನೆಯ ಮೊನೆಯ ಮೇಲೆ
ಲಿಂಗಕ್ಕೆ ಸಮರ್ಪಣ ಮಾಡಬೇಕು
ಜಿಹ್ವೆಯ ಕೊನೆಯಲ್ಲಿ ಬಂದ ಷಡುರುಚಿಯ ಪರಿಣಾಮವ
ಅವಧಾನದ ಕೊನೆಯ ಮೊನೆಯ ಮೇಲೆ
ಲಿಂಗಕ್ಕೆ ಸಮರ್ಪಿಸಬೇಕು
ತ್ವಗಿಂದ್ರಿಯದ ಕೊನೆಯಲ್ಲಿ ಬಂದ ಸುಸ್ಪರ್ಶದ ಪರಿಣಾಮವ
ಅವಧಾನದ ಕೊನೆಯ ಮೊನೆಯ ಮೇಲೆ
ಲಿಂಗಕ್ಕೆ ಸಮರ್ಪಿಸಬೇಕು
ರತಿ ಸಂಗದ ಕೊನೆಯಲ್ಲಿ ಬಂದ ಸುಖದ ಪರಿಣಾಮವ
ಅವಧಾನದ ಕೊನೆಯ ಮೊನೆಯ ಮೇಲೆ
ಲಿಂಗಕ್ಕೆ ಸಮರ್ಪಿಸಬೇಕು
ತಟ್ಟುವ ಮುಟ್ಟುವ ತಾಗು ನಿರೋಧವೆಲ್ಲವನೂ
ಅವಧಾನದ ಕೊನೆಯ ಮೊನೆಯ ಮೇಲೆ
ಲಿಂಗಕ್ಕೆ ಸಮರ್ಪಿಸಬೇಕು
ಈ ಅವಧಾನದ ಕೊನೆಯ ಮೊನೆಯ ಮೇಲೆ
ಲಿಂಗಾರ್ಪಿತವ ಮಾಡಬಲ್ಲಡೆ
ಇದೆ ಅರ್ಪಿತಮುಖ ಕೇಳಿರಣ್ಣ ?
ನಮ್ಮ ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭು
ಶಾಂತ ಮಲ್ಲಿಕಾರ್ಜುನದೇವಯ್ಯಾ
ನಿಮ್ಮ ಅರ್ಪಿತ ಮುಖದಲ್ಲಿ ತೃಪ್ತಿಯನೈದಿದ
ಶರಣರ ಮಹಿಮೆಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ ? ನಿಮ್ಮ ಧರ್ಮ ! ನಿಮ್ಮ ಧರ್ಮ ! ? ||


ಇಷ್ಟಲಿಂಗವ ಕೊಂಡು ಕಷ್ಟ ಬಂದಿತೆಂದು
ಮುಟ್ಟಲಾಗದಿನ್ನು, ಕೆಟ್ಟೆವೆಂಬ ಪಾಪಿಗಳು,
ನೀವು ಕೇಳಿರೆ |
ಇಷ್ಟಲಿಂಗ ಪ್ರಾಣಲಿಂಗದಂತವನಾರು ಬಲ್ಲರು ?
ಹೃದಯ ಕಮಲ ಭೂಮಧ್ಯದಲ್ಲಿ
ಸ್ವಯಂಬ್ಯೋತಿಪ್ಪ್ರಕಾಶ
ಆದಿ ಮಧ್ಯಸ್ಥಾನದಲ್ಲಿ ಚಿನ್ಮಯ ಚಿದ್ರೂಪವಾಗಿಪ್ಪ
ಮಹಾಘನವ ಬಲ್ಲ ಮಹಾಶರಣನ ಪರಿ ಬೇರೆ !
ಇಷ್ಟಲಿಂಗ ಹೋದ ಬಟ್ಟೆಯ ಹೊಗಲಾಗದು ;
ಈ ಕಷ್ಟದ ನುಡಿ ಕೇಳಲಾಗದು
ಕೆಟ್ಟಿತ್ತು ಜ್ಯೋತಿಯ ಬೆಳಗು !
ಅಟ್ಟಟ್ಟಿಕೆಯ ಮಾತಿನಲ್ಲಿರುವದೇನೋ !
ಅಲಿ ನುಂಗಿದ ನೋಟದಂತೆ, ಪುಷ್ಪನುಂಗಿದ ಪರಿಮಳದಂತೆ
ಜಲವ ನುಂಗಿದ ಮುತ್ತಿನಂತೆ, ಅಪ್ಪುವಿನೊಳಗಿಪ್ಪ ಉಪ್ಪಿನಂತೆ
ಜೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ಶಿಶ್ಯಬ್ದದಂತೆ
ಬಯಲ ನುಂಗಿದ ಬ್ರಹ್ಮದಂತೆ
ಇಂತಪ್ಪ ಮಹಾಘನ ತೇಜೋಮೂರ್ತಿಯ ಬಲ್ಲ
ಮಹಾಶರಣರ ಎತ್ತು, ತೊತ್ತು, ಮುಕ್ಕಳಿಸಿ ಉಗುಳುವ ಪಡಿಗ
ಮೆಟ್ಟುವ ಚಮ್ಮಾವುಗೆಯಾಗಿ
ಬದುಕಿದೆನು ಕಾಣಾ, ಶುದ್ಧ, ಸಿದ್ಧ ಪ್ರಸನ್ನ ಪ್ರಭುವೇ
ಶಾಂತಮಲ್ಲಿಕಾರ್ಜುನದೇವಯ್ಯಾ
ನಿಮ್ಮ ಧರ್ಮ ! ನಿಮ್ಮ ಧರ್ಮ !! ನಿಮ್ಮ ಧರ್ಮ !!! ||


ವಾರಿಧಿಯೊಳಗಣ ವಾರಿಕಲ್ಲ ಕಡಿದು
ತೊಲೆ ಕಂಬವ ಮಾಡಿ ಮನೆಯ ಕಟ್ಟಿಕೊಂಡು
ಒಕ್ಕಲಿರಬಹುದೆ ಅಯ್ಯಾ ?
ಅಗ್ನಿಯೊಳಗಿಪ್ಪ ಕರ್ಪುರವ ಕರಡಿಗೆಯ ಮಾಡಿ
ಪರಿಮಳವ ತುಂಬಿ, ಅನುಲೇಪನ ಮಾಡಿ
ಸುಖಿಸಬಹುದೆ ಅಯ್ಯಾ ?
ವಾಯುವಿನೊಳಗಣ ಪರಿಮಳವ ಹಿಡಿದು
ದಂಡೆಯ ಕಟ್ಟಿ ಮಂಡೆಯೊಳಗೆ
ಮುಡಿಯಬಹುದೆ ಅಯ್ಯಾ ?
ಬಯಲ ಮರೀಚಿಕಾ ಜಲವ ಕೊಡನಲ್ಲಿ ತುಂಬಿ
ಹೊತ್ತು ತಂದು ಅಡಿಗೆಯ ಮಾಡಿಕೊಂಡು ಉಣಬಹುದೆ ಅಯ್ಯಾ ?
ನಿನ್ನ ನೆರೆಯರಿದು ನೆರೆದು ಪರವಶನಾಗಿ
ತನ್ನ ಮರೆದ ಪರಶಿವಯೋಗಿಗೆ
ಮರಳಿ ಪರಿಭವಂಗಳುಮಟೆ
ಪರಮಗುರುಶಾಂತಮಲ್ಲಿಕಾರ್ಜುನಾ ||