ಕಂದ |

ಶ್ರೀ ಮತ್ಪಂಚಾಕ್ಷರಿಯ ಮ
ಹಾ ಮಂತ್ರಮಂ ಮನೋಮುದದಿಂದುಸುರ್ದು
ಪ್ರೇಮದಿಂದ ಜಪಿಸುತ್ತಿರೆ
ಕಾಮಹರನೀವಂ ಸಕಲ ಸುಖ ಸಂಪದಮಂ ||

ಗದ್ಯ |

ಶ್ರೀ ಮಹಾಮಹೋನ್ನತಾದಿಗಮ್ಯದು ಪ್ರಮಾಣವೆನಿಪ ಮಹಾಮಹೋಚರ ಪ್ರಕಾಶದೀಪ್ತಿ ಮೀರಿ ತೋರ್ಪ ಸಕಲ ಬೆಳಗನವಪುದಿಗಿಪ್ಪ ಲಿಂಗದಲ್ಲಿ ಜನಿಸಿರ್ಪ ಸಕಲ ಸೃಷ್ಟಿಕಾರ ಮೂರ್ತಿಯಾಗಿ ಮೀರಿ ತೋರ್ಪ ತ್ರಿವಿಧ ಮಾತ್ರ ತ್ರಿವಿಧ ಮೂರ್ತಿ ಭೇದವಾಗಿ ಮೀರಿ ತೋರ್ಪ ||

ರಗಳೆ |

ತತ್ವವಾಗಿ ತ್ರವಿಧಮೂರ್ತಿಯಾದುದೋಂ ನಮಃಶಿವಾಯ
ತತ್ವಮೂರ್ತಿ ತ್ರಿವಿಧ ಕರ್ತೃವಾದುದೋಂ ನಮಃಶಿವಾಯ
ಶಿವಂ ಸದಾಶಿವಂ ಮಹೇಶ ತ್ರಿವಿಧ ಓಂ ನಮಃಶಿವಾಯ
ಶಿವಂ ತತ್ವಂ ಸಮಾನೇನ ನಿಃಷ್ಕಳಂಕೋಂ ನಮಃಶಿವಾಯ
ಸಕಳ ನಿಷ್ಕಳಂ ಸಾದಾಖ್ಯಮಿತಿಮತೋ ನಮಃಶಿವಾಯ
ಸಕಳವಾ ಮಹೇಶ ತತ್ವವಾದುದೋಂ ನಮಃಶಿವಾಯ
ಶಿವಾ ಪರಾಪರಂ ಸೂಕ್ಷ್ಮ ತತ್ವ ಓಂ ನಮಃಶಿವಾಯ
ಶಿವನು ನಿತ್ಯ ಸರ್ವಗತ ಸದಾಯನೋಂ ನಮಃಶಿವಾಯ
ಅನುಪನು ಮನೋಪಾಗಮಮಪ್ರಮೆಯೋಂ ನಮಃಶಿವಾಯ
ಅನುಘಚಲ ನಿತ್ಯ ಸುಗುಣ ನಿರ್ಗುಣೋಂ ನಮಃಶಿವಾಯ ||  || ೧೦ ||

ಶಿವ ಸ್ವಯಾನುಭಾವ ಪಂಚಪ್ರಣವ ಓಂ ನಮಃಶಿವಾಯ
ಶಿವನು ಸೂಕ್ಷ್ಮ ಪಂಚಪ್ರಣವವರ್ಣ ಓಂ ನಮಃಶಿವಾಯ
ಪ್ರಣಮವರ್ಣವದು ಮೂತಿಯಾದುದೋಂ ನಮಃಶಿವಾಯ
ಪ್ರಣಮವೈದರಲಿ ಮಂತ್ರಪಂಚಕೋಂ ನಮಃಶಿವಾಯ
ಮಂತ್ರದಲಿ ಶಿವಸ್ವಯಾಸ್ವರಾಜ್ಯ ಓಂ ನಮಃಶಿವಾಯ
ಅಂತು ಮೂರ್ತಿ ಕರ್ತು ಮೂರ್ತಿ ಕರ್ತು ಓಂ ನಮಃಶಿವಾಯ
ಕರ್ತು ಕರ್ಮ ಕೂಡೆ ಪಂಚಮೂರ್ತಿ ಓಂ ನಮಃಶಿವಾಯ
ಮೂರ್ತಿ ಐದಕೆ ಐದು ಶಕ್ತಿ ಜನನ ಓಂ ನಮಃಶಿವಾಯ
ಪಂಚಮೂರ್ತಿ ಪಂಚ ಶಕ್ತಿಯಲ್ಲಿ ಓಂ ನಮಃಶಿವಾಯ
ಸಂಚಲಿಪ ಮಹೇಶನುದವಾದದೋಂ ನಮಃಶಿವಾಯ || ೨೦ ||

ಏಕಶಿರ ತ್ರಿನೇತ್ರ ನಾಲ್ಕುಭುಜ ಓಂ ನಮಃಶಿವಾಯ
ಏಕವಪ್ಪ ಪಾದದ್ವಯಂ ವಿರಾಜಿತೋಂ ನಮಃಶಿವಾಯ
ಜಡೆಯ ಮಂಡಲ ಎಡೆಯಲಮೃತ ಕಡಲದೋಂ ನಮಃಶಿವಾಯ
ಕಡಲ ಬಳಸಿ ಬಿಗಿದ ಜಡೆಯ ಮಡದಿಯ ಓಂ ನಮಃಶಿವಾಯ
ಹವಿ ಶಶಾಂಕನರ್ಕ ನೇತ್ರ ತ್ರಯವಿದೋಂ ನಮಃಶಿವಾಯ
ಪವನಭುಕ್ತ ಬಾಲಕರ್ಣ ಕುಂಡಲೋಂ ನಮಃಶಿವಾಯ
ನಾಗಪಾಶ ಹವಿಕರಾಗ್ರದುರಯ ಓಂ ನಮಃಶಿವಾಯ
ಚಾಗು ವರದ ವಾಸಗಂಥೆಪಾಣಿ ಓಂ ನಮಃಶಿವಾಯ
ಇಂತೀ ಮಹೇಶಮೂರ್ತಿ ತತ್ಪದಿರವಿದೋಂ ನಮಃಶಿವಾಯ
ಅಂತ್ಯ[1]ಸಯಾದಿ ಸಕಲ ಸೃಷ್ಟಿಕಾರಣೋಂ ನಮಃಶಿವಾಯ             || ೩೦ ||

ಪೂರ್ಣಚಂದ್ರಕೋಟಿವರ್ಣರಾಜಿತೋಂ ನಮಃಶಿವಾಯ
ವರ್ಣವಿದು ಮಹೇಶ ತತ್ವಮೂರ್ತಿ ಓಂ ನಮಃಶಿವಾಯ
ಆ ಮಹೇಶ ಪಂಚವಕ್ತ್ರವಾದುದೋಂ ನಮಃಶಿವಾಯ
ಆ ಮಹಾದಿ ಪಂಚಮೂರ್ತಿ ಪಂಚಮುಖೋಂ ನಮಃಶಿವಾಯ
ಕರ್ಮರೂಪ ಪೂರ್ವವಕ್ತ್ರವಾದುದೊಂ ನಮಃಶಿವಾಯ
ನಿರ್ಮಳಾದಿ ಕರ್ತೃ ದಕ್ಷಿಣಾಸ್ಯ ಓಂ ನಮಃಶಿವಾಯ
ಅಪರವಕ್ತ್ರ ಮೂರ್ತಿಕರ್ತುವಾದುದೋಂ ನಮಃಶಿವಾಯ
ಸುಪಥದಿಂದ ಮೂರ್ತಿ ಉತ್ತರಾನನೋಂ ನಮಃಶಿವಾಯ
ಮೂರ್ಧ್ನಿಯಿಂ ಶಿವಂ ಸದಾಖ್ಯಮೂರ್ತಿಯೋಂ ನಮಃಶಿವಾಯ
ಮೂರ್ಧ್ನಿಮಾದಿ ಪಂಚವಕ್ತ್ರಮಿತಿಮತೋಂ ನಮಃಶಿವಾಯ           || ೪೦ ||

ತತ್ಪುರುಷ ವದನ ಕರ್ಮಮೂರ್ತಿಯೋಂ ನಮಃಶಿವಾಯ
ತಪ್ಪದಲ್ಲಿ ರಕ್ತವರ್ಣವಾದುದೋಂ ನಮಃಶಿವಾಯ
x x x x x x x x x x x x x x x
ಇಪ್ಪುದಲ್ಲಿ ಋಗ್ವೇದ ರೇಕೆಯೋಂ ನಮಃಶಿವಾಯ
ಅಕ್ಷರಯೆಂಬ ಎತ್ತಿ ಪ್ರೋಕ್ಷಣಂಗ ಓಂ ನಮಃಶಿವಾಯ
ಅಕ್ಷಯಾದಿ ಸ್ಥೂಲ ಮಂತ್ರಮಕ್ಷರೋಂ ನಮಃಶಿವಾಯ
ಪ್ರಣವ ಸಹನವಕ್ಷರಂಗಳಾದುದೋಂ ನಮಃಶಿವಾಯ
ಎಣಿಕೆಯಕ್ಷಮಾಲೆ ಮೂವತ್ತೆರಡು ಮಣಿ ನಮಃಶಿವಾಯ
ಮಧ್ಯ ಬೆರಳಿನಿಂ ತ್ರಿಲಕ್ಷ ಜಪವಾದುದೋಂ ನಮಃಶಿವಾಯ
ನಿರ್ಧರಾಣಿಮಾದಿ ಸಿದ್ಧಿ ವಶ್ಯ ಓಂ ನಮಃಶಿವಾಯ || ೫೦ ||

ದಕ್ಷಿಣಕೆ ಪೊರವಕ್ತ್ರಕರ್ತು ಓಂನಮಃಶಿವಾಯ
ಅಕ್ಷಯಾದಿ ಕಪ್ಪುವರ್ಣ ದರ್ಪಣೊಂ ನಮಃಶಿವಾಯ
ಭಸ್ಮಭೂಸಿತ ಪ್ರಸಾದ ಮಂತ್ರ ಓಂನಮಃಶಿವಾಯ
ಯಸ್ಮಂ ಪಂಚದಶ ಯಕ್ಷಮಾಲೆ ಓಂ ನಮಃಶಿವಾಯ
ತರ್ಜ್ಯನ್ಯಾದಿ ತ್ರಿಲಕ್ಷ ನಪವಾದುದೋಂ ನಮಃಶಿವಾಯ
ಊರ್ಜಿತಾಭಿಚಾರಮಕ್ಕು ಅಸಿಪದಂ ನಮಃಶಿವಾಯ
ಪಶ್ಚಿವ ಮನನಕ್ಕೆ ಮೂರ್ತಿ ಕರ್ತೃ ಓಂನಮಃಶಿವಾಯ
ನಿಶ್ಚಯಾಸ್ಯ ಸದ್ಯೋಜಾತ ವದನ ಓಂ ನಮಃಶಿವಾಯ
ಭೂತಿ ಭಸಿಕಾಂಗ ಯಜಸುಸಿಶೇಖ ಓಂ ನಮಃಶಿವಾಯ
ಶ್ವೇತ ವರ್ಣವಷ್ಟಮಾತ್ರೆ ಮಂತ್ರ ಓಂ ನಮಃಶಿವಾಯ || ೬೦ ||

ಸಪ್ತವಿಂಶತ್ಯಕ್ಷ ಮಾಲೆಯಿಂದದೋಂ ನಮಃಶಿವಾಯ
ನಿಷ್ಠೆಯಿಂದಲನಾಮಿಕದ ಜಪವಾದದುದೋಂ ನಮಃಶಿವಾಯ
ಅನಘನತ ಸಮೃದ್ಧಿ ಧನವು ಧಾನ್ಯ ಓಂ ನಮಃಶಿವಾಯ
ವಿನಮಿತರ್ಥ ಕಾಮ್ಯಾಫಲ ಪದಂಗಳೋಂ ನಮಃಶಿವಾಯ
ಉತ್ತರಾಭಿಮುಖಕ್ಕೆ ಮೂರ್ತಿಕರ್ತು ಓಂ ನಮಃಶಿವಾಯ
ನಿತ್ಯ ವಾಮದೇವ ಸೋಮಶೇಖ ಓಂ ನಮಃಶಿವಾಯ
ಭಸಿತ ಭೂಸಿತಾಂಗ ತಾಂಬ್ರವರ್ಣ ಓಂ ನಮಃಶಿವಾಯ
ಚಾರುಮಷ್ಟವಿಂಶತ್ರ್ಯಕ್ಷಮಾಲೆಯೋಂ ನಮಃಶಿವಾಯ
ಮೂಲಮಂತ್ರದಿಂ ಕನಿಷ್ಟ ಬೆರಳಿನೋಂ ನಮಃಶಿವಾಯ
ಕಾಲ ತ್ರಿವಿಧದಿಂದಜಾಷ್ಯ ಪೌಷ್ಟಿಕೋಂ ನಮಃಶಿವಾಯ || ೭೦ ||

ಈಶಗಾದಿ ಶಿವನದಾಖ್ಯ ಮೂರ್ತಿಯೋಂ ನಮಃಶಿವಾಯ
ಶಾಶ್ವತಲಿಂಗಮೀಶಾನ್ಯ ವಕ್ತ್ರ ಓಂ ನಮಃಶಿವಾಯ
ಪ್ರಣವಶೇಖ ಕೃಷ್ಣವರ್ಣವಾದುದೋಂ ನಮಃಶಿವಾಯ
ತ್ರಿಣುನಂಗರಕ್ಷ ಭಾನ ಭೂಷಣಂ ನಮಃಶಿವಾಯ
ಪಂಚವಿಂಶತ್ರ್ಯಕ್ಷಮಾರಿಯಿಮದಲೋಂ ನಮಃಶಿವಾಯ
ಸಂಚಲಿಪಡೆ ಸೂಕ್ಷ್ಮ ಮಂತ್ರದಿಂದಲೋಂ ನಮಃಶಿವಾಯ
ಅಂಗುಷ್ಟರಜಫಲ ಮೋಕ್ಷಪದವಾದುದೋಂ ನಮಃಶಿವಾಯ
ಸಂಗಸಖ್ಯಲಿಂಗ ಮಂಗಳಾಂಗ ಓಂ ನಮಃಶಿವಾಯ
ಪೂರ್ಣಕೋಟಿ ಚಂದ್ರರಾಜಿತಾಂಗ ಓಂ ನಮಃಶಿವಾಯ || ೮೦ ||

ಸ್ವರ್ಣಾದಿ ಜಟಾಂಶ ಮಕುಟ ಮಂಡಿತೋಂ ನಮಃಶಿವಾಯ
ಕರ್ಣಕುಂಡಲ ಶಶಾಂಕ ಜೂಟ ಓಂ ನಮಃಶಿವಾಯ
ಪಂಚದಶದುಗ್ರ ಪ್ರಕಾಶ ರಾಜಿತೋಂ ನಮಃಶಿವಾಯ
ಪಂಚಪಂಚ ಭುಜಸ್ತಪೂರ್ತಿವಿಲಸಿತಂ ನಮಃಶಿವಾಯ
ಭರಣ ದ್ವಿವಿಧ ಪದ್ಮಸ್ವಸ್ಥಿತಂ ಸದಾನ ಓಂ ನಮಃಶಿವಾಯ
ಪರುಷ ಶೂಲ ಖಡ್ಗ ವಜ್ರನಭಯಕರ ನಮಃಶಿವಾಯ
ಅಭಯ ಹಸ್ತ ದಕ್ಷಿಣಾಂಗಮಿತ್ತಮತೋಂ ನಮಃಶಿವಾಯ
ಶುಭದಿ ನಾಗಪಾಶಮಂಕುಶಾಂಕಿತೋಂನಮಃಶಿವಾಯ
ಅನಲ ಗಂಟೆ ಡಮರುಗಾದಿ ವಾಮಕರೋಂ ನಮಃಶಿವಾಯ
ಇನಿತು ಸರ್ವಲಕ್ಷಣಾಂಗ ಸಂಯುತೋಂ ನಮಃಶಿವಾಯ || ೯೦ ||

ದಿವ್ಯವಸ್ತ್ರ ಭೂಸಿತಾಂಗ ಓಂನಮಃಶಿವಾಯ
ದಿವ್ಯಗಂಧ ಲೇಪಿತಾಂಗ ಮೂರ್ತಿ ಓಂ ನಮಃಶಿವಾಯ
ದಿವ್ಯಮೂಲವೃದ್ಧಿಶಿತಾಂಗ ಕಾಂತಿ ಓಂ ನಮಃಶಿವಾಯ
ದಿವ್ಯರೂಪ ಸರ್ವಕಾಂತಿ ವಿಂಶತೋಂ ನಮಃಶಿವಾಯ
ಶಾಂತರೂಪ ವಕ್ತ್ರ ಪ್ರಹಸಿತಾನನೋಂ ನಮಃಶಿವಾಯ
ಶಾಂತಿ ವಿಶ್ವರೂಪ ನಿತ್ಯಸ್ಥಿತಿಪರೋಂ ನಮಃಶಿವಾಯ
ಇತಿ ಸದಾಶಿವಾದಿ ಮೂರ್ತಿದ್ಯಾನ ಓಂ ನಮಃಶಿವಾಯ
ಅತಿಶಯಾದಿ ಮುಕ್ತಿಕಾಮ್ಯಫಲದೋಂ ನಮಃಶಿವಾಯ
ಧರ್ಮ ಕಾಮ್ಯ ಮೋಕ್ಷ ಶಿವನ ಧ್ಯಾನದೋಂ ನಮಃಶಿವಾಯ
ಧರ್ಮದಲ್ಲಿ ವಿಶೇಷವಪ್ಪ ಫಲಪದೋಂ ನಮಃಶಿವಾಯ || ೧೦೦ ||

ಕರ್ಮಕಾರಣ ಕ್ರಿಯಾದಿ ಮೂರ್ತಿಯೋಂ ನಮಃಶಿವಾಯ
ನಿರ್ಮಲಸ್ವರೂಪ ಪಂಚವದನ ಓಂ ನಮಃಶಿವಾಯ
ಇತಿ ಯಥಾರ್ಥ ಶಾಸ್ತ್ರನಿಶ್ವಯುಗ್ಮ ಓಂನಮಃಶಿವಾಯ
ಇತಿ ಶ್ರುತಿ ಸ್ಮೃತಿ ಪುರಾಣವಾಕ್ಯ ಓಂನಮಃಶಿವಾಯ
ವಿಕಲ ಕರ್ಮರೂಪ ಪೂಜ್ಯವಿಧಾತ ಓಂ ನಮಃಶಿವಾಯ
ಸಕಲ ಸೃಷ್ಟಿಕಾರಣಂ ಮಹೇಶನೋಂ ನಮಃಶಿವಾಯ
ಸದ್ಯೋಜಾತ ಮುಖದಿ ಪೃಥ್ವಿಜನನ ಓಂ ನಮಃಶಿವಾಯ
ನಿರ್ಧರಾದಿ ವಾಮದೇವನೆಂಜಲೋಂ ನಮಃಶಿವಾಯ || ೧೧೦ ||

ಆ ಅಘೋರ ವಕ್ತ್ರವಗ್ನಿ ಜನನ ಓಂ ನಮಃಶಿವಾಯ
ಆ ಅನಂತ ಕಾರಣಂಗಾದುದೋಂ ನಮಃಶಿವಾಯ
ತತ್ಪುರುಷ ವದನಕಂ ಮಾತುರವಾದುದೋಂ ನಮಃಶಿವಾಯ
ತಪ್ಪದೀಶಾನವಕ್ತ್ರ ಗಗನವಾದುದೋಂ ನಮಃಶಿವಾಯ
ಇಂತು ಪಂಚ ಭೌತಿಕಂಗಳುದಯವಾದುದೋಂ ನಮಃಶಿವಾಯ
ಸಂತತಾದಿ ಪಂಚಬ್ರಹ್ಮದುದಯವಾದುದೋಂ ನಮಃಶಿವಾಯ
ಧರೆ ಜಲಾಗ್ನಿ ಮಾತುರಮಾಕಾಶಾದಿದೋಂ ನಮಃಶಿವಾಯ
ನೀರಜಭವನು ವಿಷ್ಣುರುದ್ರಮೀಶ್ವರೋಂ ನಮಃಶಿವಾಯ
ಆ ಸದಾಶಿವಾದಿ ಪಂಚಬ್ರಹ್ಮ ಓಂ ನಮಃಶಿವಾಯ
ಶಾಶ್ವತದಲಿ ಸಕಲ ಸೃಷ್ಟಿಕಾರಣೋಂ ನಮಃಶಿವಾಯ ||  || ೧೨೦ ||

ಆಸ್ತಿ ಚರ್ಮರೋಮ ಪೃಥ್ವಿ ಅಂಶಿಕೋಂ ನಮಃಶಿವಾಯ
ರಕ್ತ ಮೂತ್ರಿ ಪಿತ್ತ ವಾರಿಯಂಶಿಕೋಂ ನಮಃಶಿವಾಯ
ಮೇಧ ಶುಕ್ಲ ಶ್ಲೇಷ್ಮಾಗ್ನಿಯಂಶಿಕೋಂ ನಮಃಶಿವಾಯ
x x x x x x x x x x x x x x x x x x x
ಇಂತು ಪಿಂಡ ಪಂಚಮಾತ್ರೆಯಂಶಿಕೋಂ ನಮಃಶಿವಾಯ
ಸತತ ತ್ರಯವಂಗಳೈದು ಮಾತ್ರೆಯೋಂ ನಮಃಶಿವಾಯ
ಆರು ಚಕ್ರಕಾರು ಬೀಜ ಮಾತ್ರೆಯೋಂ ನಮಃಶಿವಾಯ
ಆರು ವರ್ಗಕಾರು ವೃಕ್ಷಂಗಳೋಂ ನಮಃಶಿವಾಯ
ಆರು ಮಾತ್ರೆಯಾರು ಸ್ಥಲಕ್ಕೆಯ್ದುದೋಂ ನಮಃಶಿವಾಯ
ಆರು ದೇವಕಾರು ಮಾತ್ರೆಯಾದಿಯೋಂ ನಮಃಶಿವಾಯ || ೧೩೦ ||

ಆರು ಹಸ್ತಕಾರು ಮಾತ್ರೆಯಾದಿಯೋಂ ನಮಃಶಿವಾಯ
ಆರು ಮಾತ್ರೆಯಾರು ಲಿಂಗಮೂರ್ತಿಯೋಂ ನಮಃಶಿವಾಯ
ಆರು ಮಾತ್ರೆಯಾರು ಮುಖದ ಕಾಂತಿಯೋಂ ನಮಃಶಿವಾಯ
ಆರು ಮಾತ್ರೆಯಾರು ವಿಷಯದರ್ಪಿತೋಂ ನಮಃಶಿವಾಯ
ಆರು ಮೂವತ್ತಾರು ತತ್ಪಕಾಂತಿಯೋಂ ನಮಃಶಿವಾಯ
ಆರ ಮೀರಿ ತೋರ್ಪ ಮಹದ ಕಳೆಯಾದುದೋಂ ನಮಃಶಿವಾಯ
ಅಖಿಳ ಬೆಳಗ ನವಘನವಪ್ಪ ಬೆಳಗಿದೋಂ ನಮಃಶಿವಾಯ
ಸುಖಮುಖಂಗಳೆಲ್ಲ ಲಿಂಗ ಕಳೆಯದೋಂ ನಮಃಶಿವಾಯ
ಪ್ರಾಣಲಿಂಗ ಮುಖದ ಕಾಂತಿದರ್ಪಣೋಂ ನಮಃಶಿವಾಯ
ಪ್ರಾಣಕಾದಿ ತ್ರಾಣ ಸ್ಥಾಣುಮಿರವಿದೋಂ ನಮಃಶಿವಾಯ || ೧೪೦ ||

ಲಿಂಗಪ್ರಾಣದಂಗ ಸ್ಥಲದ ಕಾಂತಿಯೋಂ ನಮಃಶಿವಾಯ
ಲಿಂಗಸಂಗ ಮಂಗಳಾಂಗಭರಿತ ಓಂ ನಮಃಶಿವಾಯ
ನೋಡೆ ನೋಡೆ ಕೂಡೆ ಕೂಡೆಯರ್ಪಣೋಂ ನಮಃಶಿವಾಯ
ಕೂಡಲೊಡನೆ ಸುಖದರ್ಪಣೋಂ ನಮಃಶಿವಾಯ
ಅರ್ಪಿತನರ್ಪಿತುಭಯಸ್ತಿನಾಸ್ತಿ ಓಂ ನಮಃಶಿವಾಯ
ತುಪ್ಪದಗ್ನಿಯುಂಡ ಪತ್ರದಿರವಿದೋಂ ನಮಃಶಿವಾಯ
ಲಿಂಗಪ್ರಾಣದಂಗ ಶ್ವಾಸ ಓಂ ನಮಃಶಿವಾಯ
ಲಿಂಗರಚನ ರುಚಿರ ಸಾಂಗದಂಗ ಓಂ ನಮಃಶಿವಾಯ
ಲಿಂಗನೇತ್ರೆ ರೂಪಿನಂಗ ಸುಖವಿದೋಂ ನಮಃಶಿವಾಯ
ಲಿಂಗ ನೋಂಕಿನಂಗ ಸುಖದ ಕಾಂತಿ ಓಂ ನಮಃಶಿವಾಯ || ೧೫೦ ||

ಲಿಂಗಶ್ರೋತ್ರ ಶಬ್ದ ಸುಖದ ದಾಸ ಓಂ ನಮಃಶಿವಾಯ
ಲಿಂಗರಂಧ್ರವಖಿಳ ಸುಖಾಸುಧಾಕರೋಂ ನಮಃಶಿವಾಯ
ಲಿಂಗಮಂಗಳಾಂಗ ಮಹದ ಬೆಳಗಿದೋಂ ನಮಃಶಿವಾಯ
ಲಿಂಗಾಮೃತಸಾರದಂಗ ಕಿರಣ ಓಂ ನಮಃಶಿವಾಯ
ಲಿಂಗ ನಿಜನಿಜಾಂಗ ಪರಮ ಕಳೆಯಿದೋಂ ನಮಃಶಿವಾಯ
ಲಿಂಗ ಪರಮ ತೇಜ ರಂಜಿತೋಂ ನಮಃಶಿವಾಯ
ಲಿಂಗವರ ಪರಂಜ್ಯೋತಿ ಸಂಗಂ ಓಂ ನಮಃಶಿವಾಯ
ಲಿಂಗದಂಗ ಸರ್ವಕಳೆಯ ಬೆಳಗಿದೋಂ ನಮಃಶಿವಾಯ
ಲಿಂಗಮಹದ ಕಳೆಯ ಬೆಳಗಿನಾದಿಯೋಂ ನಮಃಶಿವಾಯ
ಲಿಂಗದಿಹ ಪರಂಗವಾಸದಿದಿರವಿದೋಂ ನಮಃಶಿವಾಯ || ೧೬೦ ||

ಲಿಂಗಕಾದಿ ದೇಹ ಭೂಪಂಚಕೋಂ ನಮಃಶಿವಾಯ
ಲಿಂಗದಂಗ ಸಂಗ ಕಪಟನಾಟಕೋಂ ನಮಃಶಿವಾಯ
ಲಿಂಗ ಸೃಷ್ಟಿ ಕಾರಣಂಗ ಸೂತ್ರ ಓಂ ನಮಃಶಿವಾಯ
ಸಕಲ ಜೀವ ಮಂತ್ರವಹಕಾಂಗ ಓಂ ನಮಃಶಿವಾಯ
ಸಕಲ ಜೀವದುದಯ ಪ್ರಳಯ ಕರ್ತೃ ಓಂ ನಮಃಶಿವಾಯ
ಸರ್ವಮಯ ಸದಾದಿ ಮೂಲಮಂತ್ರ ಓಂ ನಮಃಶಿವಾಯ
ನಿರ್ವಿಕಲ್ಪ ನಿರ್ಮಳಾಂಗ ಲಿಂಗದಾಂಗ ಓಂ ನಮಃಶಿವಾಯ
ದೇಶಿಕಾಂಗ ವದನ ವಿಲಸಿತಾಂಗ ಓಂ ನಮಃಶಿವಾಯ
ದೇಶಿಕ ಪ್ರಕಾಶ ಕರ್ಣಪೂರಿತೋಂ ನಮಃಶಿವಾಯ
ದೇವಗುರು ಪರಾಪರ ಪ್ರೇಮಮೂರ್ತಿ ಓಂ ನಮಃಶಿವಾಯ || ೧೭೦ ||

ದೇವ ಪರಮ ತತ್ವಪುಂಜ ರಂಜಿತೋಂ ನಮಃಶಿವಾಯ
ಭೂತ ಭೌಷದ್ವರ್ತಮಾನದರಿವಿದೋಂ ನಮಃಶಿವಾಯ
ಖ್ಯಾತಿ ಭೂತ ಜನನ ಭೀತಿ ಮಂತ್ರ ಓಂನಮಃಶಿವಾಯ
ಜಾತ ಪ್ರೇತ ರಜ ಪವಿತ್ರ ಮಂತ್ರ ಓಂ ನಮಃಶಿವಾಯ
ಜಾತಿ ಶೇಷ ರಜ ಪವಿತ್ರ ಮಂತ್ರ ಓಂ ನಮಃಶಿವಾಯ
ಸಕಲ ಜನನ ವನಕುಠಾರವೆನಿಪುದೋಂ ನಮಃಶಿವಾಯ
ಅಖಿಲ ಭವದ ಮನದಿ ವಡಬನೆನಿಪುದೋಂ ನಮಃಶಿವಾಯ
ಮನಕೆ ಮಹದ ನೆಲಯ ಬೆಳಗು ತೋರ್ಪುದೋಂ ನಮಃಶಿವಾಯ
ಅನುಪಮ ಪ್ರಕಾಶ ಬೀರ್ವುದೋಂ ನಮಃಶಿವಾಯ
ನಾದ ಬ್ರಹ್ಮಕಾದಿ ಬೀಜವಾದುದೋಂ ನಮಃಶಿವಾಯ ||  || ೧೮೦ ||

ನಾದ ವೇದಕಾದಿ ಜನನ ಬೀಜ ಓಂ ನಮಃಶಿವಾಯ
ಶಾಂತ ಗರ್ವಗತ್ತ ಸಮಸ್ತ ಪ್ರೀತಿ ಓಂ ನಮಃಶಿವಾಯ
ಶಾಂತ ಭಕ್ತ ಜನದ ಮುಖದ ಶಾಂತಿಯೋಂ ನಮಃಶಿವಾಯ
ಶಾಂತ ಪರಮ ತತ್ವನಾದ ಶರಧಿಯೋಂ ನಮಃಶಿವಾಯ
ಶಾಂತ ಪರಶಿವಾದಿ ಶರೀರ ಶರಧಿಯೋಂ ನಮಃಶಿವಾಯ
ಶಾಂತ ಪರಶಿವಾದಿ ಶರೀರ ಕಾಂತಿಯೋಂ ನಮಃಶಿವಾಯ
ಶಾಂತ ಉರುತರ ಪ್ರಮದಾಂತ ಓಂ ನಮಃಶಿವಾಯ
ಶಾಂತ ಸಕಲ ಶಶಿಯ ತೇಜಕಾಂತಿ ಓಂ ನಮಃಶಿವಾಯ
ಶಾಂತ ಸಹಸ್ರವಹ್ನಿ ತೇಜಕಾಂತಿ ಓಂ ನಮಃಶಿವಾಯ
ಶಾಂತ ಸಕಲ ವಿಪ್ರಕಾಶಲಾಂತ ಓಂ ನಮಃಶಿವಾಯ
ಶಾಂತ ಸರ್ವಮದಯವೆನಿಪಮಾಂತ ಓಂ ನಮಃಶಿವಾಯ || ೧೯೦ ||

ಶಾಂತದಾಮೃತ ಕಳೆ ಎನಿಪ ಶಾಂತಿ ಓಂ ನಮಃಶಿವಾಯ
ಶಾಂತಗವಯವಂಗಳಾದುದೋಂ ನಮಃಶಿವಾಯ
ಶಾಂತಿ ಶಾಂತವೈದು ಮುಖದ ಕಾಂತಿಯೋಂ ನಮಃಶಿವಾಯ
ಶಾಂತನಂಗೋಪಾಂಗದಖಿಳವೆಳಗಿದೋಂ ನಮಃಶಿವಾಯ
ಶಾಂತ ಮಲ್ಲಿಕಾರ್ಜುನಂಗಸಂಗ ಓಂ ನಮಃಶಿವಾಯ
ಶಾಂತ ಮಲ್ಲಿಕಾರ್ಜುನಂ ನಾಮ ಓಂ ನಮಃಶಿವಾಯ
ಶಾಂತ ಮಲ್ಲಿಕಾರ್ಜುನಂ ನಮಸ್ತೇ ಓಂ ನಮಃಶಿವಾಯ
ಶಾಂತಮಲ್ಲಿಕಾರ್ಜುನ ಲಿಂಗಸಂಗ ಓಂನಮಃಶಿವಾಯ
ಶಾಂತಮಲ್ಲಿಕಾರ್ಜುನ ನಾಮ ಒಂ ನಮಃಶಿವಾಯ
ಶಾಂತ ಮಲ್ಲಿಕಾರ್ಜುನ ನಮಸ್ತೇ ಓಂ ನಮಃಶಿವಾಯ || ೨೦೦ ||

ಶಾಂತಮಲ್ಲಿಕಾರ್ಜುನಂಗೆ ನಮಸ್ತೆ ನಮಸ್ತೆ ನಮಃಶಿವಾಯ
ನಮಸ್ತುತೆ ಮಂತ್ರ ಮಾಯಾಂಗಸಂಗ
ನಮಸ್ತುತೆ ಮಂತ್ರ ಜಗದೀಪಾಂಗ
ನಮಸ್ತುತೆ ಮಂತ್ರಪ್ರಿಯ ಶಾಂತಲಿಂಗ ||

ಕಂದ |
ಮಂತ್ರೋತ್ಪತ್ಯದ ರಗಳೆಯ
ಅಂತು ಅನವರತಾವನಾದಡಾಗಲಿ ಪಠಿಸೆ
ಸಂತತ ಸಾಮಿಪ್ಯದೊಳುಂ
ಶಾಂತನ ಸನ್ನಿಧಿಯೊಳಿರ್ಕು ಅನವರತ ಸುಖದಿಂ ||

ಕರಸ್ಥಲ ವೀರಣ್ಣೊಡೆಯ ದೇವನ ಮಂತ್ರೋತ್ಪತ್ತಿ ರಗಳೆ ಸಮಾಪ್ತ
ಸಮಾಪ್ತ ಮಂಗಳ ಮಹಾ ಶ್ರೀ ಶ್ರೀ
||

 

[1] ಅತ್ತಿ (ಮೂ)