೧.

ಎನ್ನ ಕಾಮದ ಕಳೆಯ ಕಳೆಯಯ್ಯ ಸಿದ್ಧರಾಮ್ಯ
ಎನ್ನ ಕ್ರೋಧದ ಕೊನರ ಚಿವುಟಯ್ಯ ಚೆನ್ನಬಸವಣ್ಣ
ಎನ್ನಲೋಭದ ಬಲೆಯ ಹರಿಯಯ್ಯ ಪ್ರಭುದೇವ
ಎನ್ನ ಮೋಹದ ಮದವ ಬಿಡಿಸಯ್ಯ ಸಂಗನಬಸವಣ್ಣ
ಎನ್ನ ಮದಕ್ಕೆ ಮಾವತಿಗನಾಗಿ ಬಾರಯ್ಯ ಮಾಡಿವಾಳಯ್ಯ
ಎನ್ನ ಮಚ್ಚರಕಿಚ್ಚ ಸುಟ್ಟು ನಿಮ್ಮಲ್ಲೆನ್ನ ಅಚ್ಚೊತ್ತಿದಂತಿರೊಸಯ್ಯ
ಮಹಾಘನ ಶಾಂತಮಲ್ಲಿಕಾರ್ಜುನಲಿಂಗವೆ.

ಎನ್ನ ತನು ಬಸವಣ್ಣನಲ್ಲಿ ಅಡಿಗಿತ್ತು
ಎನ್ನ ಮನ ಚೆನ್ನಬಸವಣ್ಣನಲ್ಲಿ ಅಡಗಿತ್ತು
ಎನ್ನ ಪ್ರಾಣ ಪ್ರಭುದೇವರಲ್ಲಿ ಅಡಗಿತ್ತು
ಎನ್ನ ಸರ್ವಾಂಗದ ಸಕಲರಕಣಂಗಳೆಲ್ಲವು
ನಿಮ್ಮ ಶರಣರ ಶ್ರೀಪಾದದಲ್ಲಿ ಅಡಗಿದವು
ಮಹಾಘನ ಶಾಂತಮಲ್ಲಿಕಾರ್ಜುನ.

ಚೊಕ್ಕ ಭೋಜನ ಕಂಪಿತವಾದ ತಂದೆಯವನು,
ತನ್ನ ಸಾಗಿಸಿ ಸಾಕಿದವ್ವೆಯನು,
ತನ್ನಲ್ಲಿ ಮೆಚ್ಚಿಯಚ್ಚೊತ್ತಿಹ ಬೆಚ್ಚಳನು,
ಇಚ್ಚೆಗಿಚ್ಛೆಯ ಬಿಟ್ಟು ಪರಜಂಗಮವಾಗಿ ನಿಂದು ಬಳಿಕ
ಆ ಚೊಕ್ಕ ಭೋಜನ ತನಗಿಲ್ಲದಿರಬೇಕು
ಆ ತಂದೆಗೆ ತಪ್ಪಿರಬೇಕು,ಆ ತಾಯಿಗೆ ಸಂದಿಸದಿರಬೇಕು
ಹೆಂಡತಿ ಮನವಕ್ಕದಿರಬೇಕು
ಇಂತಾದಾತನೆ
ಪರಮಪ್ರಭು ಶಾಂತಮಲ್ಲಿಕಾರ್ಜುನದೇವರು ತಾನೇ ಕಾರಣ
ಲಜ್ಜೆಗಟ್ಟಿ ನಿರ್ಲಜ್ಜನಾದ ಶರಣ.

ಶರಣಾರ್ಥಿ ಶರಣಾರ್ಥಿ ಸಿದ್ಧರಾಮ್ಯ
ಶರಣಾರ್ಥಿ ಶರಣಾರ್ಥಿ ಚೆನ್ನಬಸವಣ್ಣ
ಶರಣಾರ್ಥಿ ಶರಣಾರ್ಥಿ ಪ್ರಭುದೇವಾ
ಶರಣಾರ್ಥಿ ಶರಣಾರ್ಥಿ ಸಂಗನಬಸವವಣ್ಣ
ಶರಣಾರ್ಥಿ ಶರಣಾರ್ಥಿ ಅಜಗಣ್ಣಯ್ಯ
ಶರಣಾರ್ಥಿ ಶರಣಾರ್ಥಿ ಮುಕ್ತಾಯವ್ವಾ
ಶರಣಾರ್ಥಿ ಶರಣಾರ್ಥಿ
ಮಹಾಘನ ಶಾಂತಮಲ್ಲಿಕಾರ್ಜುನಲಿಂಗವ ತೋರಿದ
ಮಹಾಗಣಂಗಳ ಶ್ರೀಪಾದಕ್ಕೆ ಶರಣಾರ್ಥಿ ಶರಣಾರ್ಥಿ
ನಮೋ ನಮೋ ಎನುತಿರ್ದೆನಯ್ಯಾ

ಜಂಗಮವೆಂತವನೆಂದಡೆ:
ನಿಜಸ್ವರೂಪವಾದಾತನೀಗ ಜಂಗಮ
ಅಧೀನವುಳ್ಳಾತನು ಅಲ್ಲ, ಅಧೀನವಿಲ್ಲದಾತನು ಅಲ್ಲ
ಸಾಕಾರನು ಅಲ್ಲ,ನಿರಾಕಾರನು ಅಲ್ಲ
ಶಾಂತನು ಅಲ್ಲ, ಕ್ರೋಧಿಯು ಅಲ್ಲ
ಕಾಮಿಯು ಅಲ್ಲ, ನಿಷ್ಕಾಮಿಯು ಅಲ್ಲ
ಖಂಡಿತನು ಅಲ್ಲ, ಅಖಂಡಿತನು ಅಲ್ಲ
ದ್ವೈತಾದ್ವೈತವನಳಿದು ದ್ವಂದ್ವಾತೀತನಾಗಿ
ನಿಜಗುರು ಶಾಂತಮಲ್ಲಿಕಾರ್ಜುನ ತಾನಾದ ಜಂಗಮ.

ಶರಣಂಗಾಧಾರವಿಲ್ಲ
ಶರಣ ತಾನಿನೆಲ್ಲವಕ್ಕಾಲಯವಾದ
ಶರಣಂಗಿಹವಿಲ್ಲ ಪರವಿಲ್ಲ
ಎಂತಿರ್ದಂತೆ ಪರಬ್ರಹ್ಮವು ತಾನೇ
ನಿಜಗುರು ಶಾಂತಮಲ್ಲೇಶ್ವರಾ ನಿಮ್ಮ ಶರಣನು.

ಏಕೋದೇವ ಶಿವನದ್ವಿತೀಯ
ಶಿವನಲ್ಲದೆ ಬೇರೆ ದೈವವಿಲ್ಲವೆಂದು ಸಾರಿ ನುಡಿವುತ್ತಿ[ವೆ]
ಶ್ರುತಿ ಶಾಸ್ತ್ರ ಪುರಾಣ ಆಗಮಂಗಳೆಲ್ಲವು
ಶಿವನಲ್ಲದೆ ಬೇರೆದೈವವಿಲ್ಲವೆಂದು ಸಾರಲು
ಮರಳಿ ವಿಷ್ಣು ದೇವರೆಂದು ನುಡಿವುತ್ತಿಪ್ಪರು
ದೈವಕ್ಕೆ ಉತ್ಪತ್ತಿ ಸ್ಥಿತಿ ಲಯಂಗಳೆಂಬುದುಂಟೆ
ದೃಷ್ಟಾಂತರ ಜಾಯತೆ ಅಷ್ಟಮಿ ಸಾಕ್ಷಿ
ಆ ವಿಷ್ಣುವಿಂಗೆ ಲಯವುಂಟೆಂಬುದಕ್ಕೆ
ಕಾಡಬೇಕನೆಚ್ಚುಂಬು ಅಂಗಾಲಲ್ಲಿ ನೆಟ್ಟು ಪ್ರಾಣವ ಬಿಟ್ಟುದೇ ಸಾಕ್ಷಿ
ಅಚ್ಯುತಂಗೆ ಅನೇಕ ಭವವುಂಟೆಂಬುದಕ್ಕೆ
ಮತ್ಯ್ಸಕೂರ್ಮವರಾಹವತಾರವಾದುದೇ ಸಾಕ್ಷಿ
ಆ ಹರಿ, ಹರನ ಭೃತ್ಯನೆಂಬುದಕ್ಕೆ
ರಾಮೇಶ್ವರ ಆದಿಯಾದ ಪ್ರತಿಷ್ಠೆಗಳೇ ಸಾಕ್ಷಿ
ಇಂತಪ್ಪ ಹರಿಯನು ಹರಂಗೆ ಸರಿಯೆಂದು ನುಡಿವರು ಅಜ್ಞಾನಿಗಳು
ಅತಂಗಿಲ್ಲದೆ ಮಹತ್ವದ ತಾವು ನುಡಿವುತ್ತಿಹರು
ಬಲಿಯ ಮೂರಡಿ ಭೂಮಿಯ ಸ್ಥಾನವ ಬೇಡಿದಲ್ಲಿ
ಪಂಚಾಶತಕೋಟಿ ಭೂಮಿ ಸಾಲದೆ ಹೋಯಿತೆಂದು ನುಡಿವುತ್ತಿಹರು
ಮಗಧನೆಂಬ ರಾಕ್ಷಸನನಟ್ಟುವಲ್ಲಿ ಅದೆಲ್ಲಿ ಹೋಯಿತೆಂದು ನುಡಿವುತ್ತಿಹರು
ಮಗಧನೆಂಬ ರಾಕ್ಷಸನನಟ್ಟುವಲ್ಲಿ ಅದೆಲ್ಲಿ ಬಂದಿತೋ ಓಡುವುದಕ್ಕೆ ಭೂಮಿ
ವಿಷ್ಣುವಿನ ಹೃದಯದಲ್ಲಿ ವಿಶ್ವವೆಲ್ಲಾ ಇದ್ದೀತೆಂದು ನುಡಿವುತ್ತಿಹರು
ಆ ವಿಷ್ಣುವಿನ ಹೃದಯದಲ್ಲಿ ವಿಶ್ವವೆಲ್ಲವು ಇದ್ದರೆ
ಸೀತೆ ಹೋದಳೆಂದು ಅರಸಿ ಸೇತುವೆ ಕಟ್ಟಿ ದಣಿಯಲೇಕೊ
ವಿಷ್ಣುವಿನ ಬಾಣವ ಮೊನೆಯಲ್ಲಿ ಸಪ್ತ ಸಮುದ್ರಂಗಳೆಲ್ಲವೂ ಬಂದವೆಂದು
ನುಡವುತ್ತಿಹರು
ಆ ವಿಷ್ಣುವಿನ ಬಾಣದ ಮೊನೆಯಲ್ಲಿ ಸಪ್ತ ಸಮುದ್ರಂಗಳೆಲ್ಲವೂ ಬಂದರೆ
ಕಪಿಗಳ ಕೂಡಿ ಸೇತುವೆ ಕಟ್ಟುವುದಕ್ಕೇನು ಕಾರಣ
ಇಂತಪ್ಪ ಹರಿಯನು ಹರಗೆ ಸರಿಯೆಂದು ನುಡಿವ ದ್ವಿಜರ ನುಡಿಯನು ಪ್ರಮಾಣಿಸಿದರೆ
ಅಘೋರ ನರಕದಲ್ಲಿ ಇಕ್ಕದೆ ಮಾಣ ನಿಜಗುರು ಶಾಂತಮಲ್ಲಿಕಾರ್ಜುನ

ಕರಸ್ಥಲ ವೀರಣ್ಣೊಡೆಯ ದೇವರ ವಚನ ಸಮಾಪ್ತ
ಸಮಾಪ್ತ ಮಂಗಳ ಮಹಾ ಶ್ರೀ ಶ್ರೀ ||