[1]ಕರಕಮಲದೊಳಗಿಪ್ಪ ಪರಮಲಿಂಗವು ತನ್ನ
ಹರಣ ಮನ ಭಾವದೊಳು ಬೆರಸಿದಂದವ
ನರಿದು ಚರಿಸುವನೆ ನಿಜಮುಕ್ತಾ ||  || ೧ ||

ಆಕಾರವಿಲ್ಲದ ನಿರಾಕಾರಲಿಂಗವ
ಸಾಕಾರವ ಮಾಡಿ ಕರದಲ್ಲಿ ಧರಿಸಿಯ
ಲ್ಲೇಕಿಕರಿಸದವನೆ ನಿಜಮುಕ್ತಾ ||  || ೨ ||

ಇಷ್ಟಲಿಂಗದಿ ದೃಷ್ಟಿನಟ್ಟು ನಿಬ್ಬೆರಗಾಗಿ
ಬೆಟ್ಟ ಘಟ್ಟದಲ್ಲಿ ಚರಿಸಾಡಿ ಕಾಯದ
ಕಷ್ಟವಳಿದವನೆ ನಿಜಮುಕ್ತಾ ||  || ೩ ||

ಕರಣದಿಚ್ಛೆಯ ಕೆಡಿಸಿ ಮರಣಬಾಧೆಯ ಗೆಲಿದು
ಪರಮನಲಿಂಗವನು ಕರಕಮಲದಲ್ಲಿ ಧರಿಸಿ
ಚರಿಸಾಡುತಿಹಗೆ ಭವವಿಲ್ಲ ||  || ೪ ||

ಅಷ್ಟದಳ ಕಮಲದ ನಟ್ಟನಡುವಿರುತಿಪ್ಪ
ಇಷ್ಟಲಿಂಗದಲಿ ಮನ ಭಾವ ಕರಣವ
ಕಟ್ಟುಗೊಳಿಸದ{ವ}ಗೆ ಭವವಿಲ್ಲ ||  || ೫ ||

ಆದಿಶೂನ್ಯವಪ್ಪ ನಾದಸ್ವರೂಪನ
ವೇದಿಸಿ ಕರದಿ ಜಡಮನಜರುಗಳ
ಬೋಧಿಸಿದವನೆ ನಿಜಮುಕ್ತಾ ||  || ೬ ||

ಪರಮಲಿಂಗವನು ಕರದಿ ಧರಿಸಿ ಜಡವನು
ಜರ ಮನೆಗೆ ಹೋಗದೆ ತಾನು ಗಿರಿಗುಹೆ ವಾಸದಿ
ಚರಿಸಬಲ್ಲವನೆ ನಿಜಮುಕ್ತಾ ||  || ೭ ||

ಕರಕಮಲದೊಳಗಿಪ್ಪ ನಿರುಪಮ ಲಿಂಗದಿ
ಸ್ಥಿರವಾಗಿ ಮನವ ನಿಲಿಸಿ ಜಡರ ಮನೆಗೆ
ಪರಿಯದೆ ಚರಿಸಲವ ಮುಕ್ತಾ ||  || ೮ ||

ತನು ಮನ ಪ್ರಾಣವ ಘನದೊಳಗಿಂಬಿಟ್ಟು
ಅನುಪಮ ಪದದಿ ಬೆಟ್ಟ ಘಟ್ಟಂಗಳ
ಕೊನೆಯಲಿ ಚರಿಸಲವ ಮುಕ್ತಾ ||  || ೯ ||

ಕರಣ ಹರಣಂಗಳ ಪರಮಲಿಂಗದಿ ಬೆರಸಿ
ಗಿರಿಗುಹೆ ವಾಸದೊಳಗೆ ಚರಿಸಾಡುವ
ನಿರುಪಮ ಮುಕ್ತ ಶಿವಶಿವಾ ||  || ೧೦ ||

ಪಿಂಡಬ್ರಹ್ಮಾಂಡವನೊಳಕೊಂಡು ಬರುತಿಪ್ಪ
ಖಂಡಿತ ಘನವ ಧರಿಸಿ ತನುಗುಣಂಗಳ
ಅಂಡಲೆಯ ಗೆಲಿದಡವ ಮುಕ್ತಾ ||  || ೧೧ ||

ತನುಗುಣಂಗಳ ಕೆಡಿಸಿ ಮನಲಿಂಗದೊಳಿರಿಸಿ
ಅನುಪಮ ಪದದಿ ಚರಿಸಾಡಬಲ್ಲಂಗೆ
ಘನಮುಕ್ತಿ ತಾನೆ ಶಿವಶಿವಾ ||  || ೧೨ ||

ಜಪತಪವನು ಮಾಡಿ ಗತಿಗೆಡಲೇತಕ್ಕೆ
ಅತಿಶಯದ ಲಿಂಗ ಕರದೊಳಿರೆಯದರಲ್ಲಿ
ಮತಿಯಾಗಿ ಚರಿಸಲವ ಮುಕ್ತಾ ||  || ೧೩ ||

ಧ್ಯಾನಪೂಜೆಗಳೆಂಬ ಹೀನತ್ವವಳಿದು ಸು
ಜ್ಞಾನಿ ತಾನಾಗಿ ಚರಿಸಿ ನಿಜಲಿಂಗದೊಳು
ಲೀನವಾದವನೆ ನಿಜಮುಕ್ತಾ ||  || ೧೪ ||

ಲಿಂಗದ ನೆನಹಿನಿಂ ಅಂಗದ ಭ್ರಮೆಯಳಿದು
ಮಂಗಳವಾಗಿ ನಿಜಲಿಂಗದೊಳು ದೃಷ್ಟಿ
ಹಿಂಗದೆ ಬೆರಸಲವ ಮುಕ್ತಾ ||  || ೧೫ ||

ಅಂಗೈಯೊಳಿಪ್ಪ ಘನಲಿಂಗ ಷಡೇಂದ್ರಿಯದಿ
ಸಂಗಮವಾಗಿರಲು ಅರ್ಪಿತನಾರ್ಪಿತ
ವೆಂಬುಭಯವಳಿದಡವ ಮುಕ್ತಾ ||  || ೧೬ ||

ಅಂಗೇಂದ್ರಿಯಂಗಳ ಲಿಂಗದೊಳು ಬೆರೆಸಿಪ್ಪ
ಅಂದವ ತಿಳಿದು ಅರ್ಪಿತಂಗಳ ಮುಖವ
ಕಂಡು ಚರಿಸುವನೆ ನಿಜಮುಕ್ತಾ ||  || ೧೭ ||

ಅಂಗಲಿಂಗದೊಳಡಗಿ ಲಿಂಗಪ್ರಾಣದೊಳಡಗಿ
ದ್ವಂದ್ವವಳಿದಿಪ್ಪ ಶರಣಂಗೆ ಅರ್ಪಿಸುವ
ಸಂದೇಹವೇಕೆ ಶಿವಶಿವಾ ||  || ೧೮ ||

ಲಿಂಗವ ಕರದೊಳು ಧರಿಸಿ ಅಂಗಗುಣಗಳ ಮರೆದು
ಮಂಗಳವಾಗಿ ಗಿಡುತರುಲತೆಗಳೊಳು
ಹಿಂಗದೆ ಚರಸಲವ ಮುಕ್ತಾ ||  || ೧೯ ||

ತಾನಿದಿರೆಂದೆಂಬ ಹೀನವನತಿಗಳೆದು
ತಾನು ತಾನಾದ ನಿಜಲಿಂಗ ಕರದೊಳಿರೆ
ಮೋನದಿ ಚರಿಸಲವ ಮುಕ್ತಾ ||  || ೨೦ ||

ತನವನರಿದು ಲಿಂಗದನುವ ತಿಳಿದು ಮತ್ತೆ
ಯನುಪಮ ಸುಖದಿ ಬೆಟ್ಟ ಘಟ್ಟಂಗಳ
ಕೊನೆಯಲ್ಲಿ ಚರಿಸಲವ ಮುಕ್ತಾ ||  || ೨೧ ||

ಲಿಂಗದಿ ನಿಜದೃಷ್ಟಿ ಹಿಂಗದೆ ನಿಂದುವಾ
ಲಿಂಗಧ್ಯಾನದಲಿ ಇಹಪರನರಿಯದಾ
ನಂದದಿ ಚರಿಸಲವ ಮುಕ್ತಾ ||  || ೨೨ ||

ಘನಮಹಾಲಿಂಗಕ್ಕೆ ಮನವನೆ ಮನೆಮಾಡಿ
ತನುಗುಣವಳಿದು ಹಸಿವು ತೃಷೆ ನಿದ್ರೆಯ
ನೆನವಿಲ್ಲದವನೆ ನಿಜಮುಕ್ತಾ ||  || ೨೩ ||

ಗಿರಿಗುಹೆ ಗವಿಗಳೆ ಮನೆಯಾಗಿ ಲಿಂಗದ
ನೆನಹಿನಲ್ಲಿ ತೃಪ್ತಿವಡೆದಾ ಲಿಂಗದೊಳು
ತನುವನಿಂಬಿಟ್ಟಡವ ಮುಕ್ತಾ ||  || ೨೪ ||

ಮರ್ತ್ಯದ ಸುಖಗಳ ವ್ಯರ್ಥವೆಂದತಿಗಳೆದು
ಚಿತ್ತವ ಲಿಂಗದೊಳಿಗಿರಿಸಿ ತರುಗಳ
ಮೊತ್ತದಲಿ ಚರಿಸಲವ ಮುಕ್ತಾ ||  || ೨೫ ||

ಅರಣ್ಯವಾಸದೊಳು ಆರೈಕೆಗಳ ಮರೆದು
ಧೀರತ್ವದಿಂದ ಚರಿಸಾಡಿ ಲಿಂಗದೊಳು
ಭೋರನೈದುವನೆ ನಿಜಮುಕ್ತಾ ||  || ೨೬ ||

ಆದಿ ಮಹಾಲಿಂಗದಿ ವೇಧಿಸಿ ಪ್ರಾಣವ
ಭೇದಗುಣವಳಿದು ತಾನಿದಿರೆಂದೆಂಬ
ದೇಹವಳಿದವನೆ ನಿಜಮುಕ್ತಾ ||  || ೨೭ ||

ಸರ್ವಭೋಗಂಗಳ ನಿರ್ವೈಸಿ ಕರಣದ
ಗರ್ವವ ಕೆಡಿಸಿ ಅಡವಿ ಗಿರಿ ಗುಹೆಗಳಲಿ
ಪರ್ವತದಿ ಚರಸಲವ ಮುಕ್ತಾ ||  || ೨೮ ||

ನಡೆನುಡಿ ಉಭಯದ ಜಡ ಹಿಂಗಿ ಲಿಂಗದಲಿ
ಒಡಗಲಸಿ ನಿಂದು ಅಡವಿ ಗಿರಿ ಗುಹೆಗಳಲಿ
ಬಿಡದೆ ಚರಿಸುವನೆ ನಿಜಮುಕ್ತಾ ||  || ೨೯ ||

ನಿಜದ ನಿರ್ವಾಣದಲಿ ಅಜನ ಕಲ್ಪನೆಯಳಿದು
ನಿಜಲಿಂಗದಲ್ಲಿ ಬೆರಸಿ ಪರ್ವತಗಳ
ತುದಿಯಲ್ಲಿ ಚರಿಸಲವ ಮುಕ್ತಾ ||  || ೩೦ ||

ಪರ್ವತದ ಕೊನೆಗಳೊಳಗೊರ್ವನೆ ಚರಿಸದೆ
ನಿರ್ವಾಣತ್ವದಲಿ ನಿಜವಾಗಿ ಲಿಂಗದೊಳ
ಗೊಯ್ಯನೆ ಬೆರಸಲವ ಮುಕ್ತಾ ||  || ೩೧ ||

ಬೆಟ್ಟ ಘಟ್ಟಂಗಳ ತುಟ್ಟು ತುದಿಗಳ ಮೆಟ್ಟಿ
ಇಷ್ಟಲಿಂಗದಲಿ ನಿಜದೃಷ್ಟಿಯಿಟ್ಟು ಮನ
ಮುಟ್ಟಿ ಚರಿಸಾಡಲವ ಮುಕ್ತಾ ||  || ೩೨ ||

ಪರಿಪೂರ್ಣ ಲಿಂಗದಲಿ ಬೆರೆಸಿದ ವಿರತಂಗೆ
ಪರಿಭವವಿಲ್ಲ ಊರಡವಿಯೆಂದೆಂಬ
ವಿವರ ಮುನ್ನಿಲ್ಲ ಶಿವಶಿವಾ ||  || ೩೩ ||

ಲಿಂಗದಲಿ ಬೆರೆಸಿದ ಚಿದಂಗ ವಿರಕ್ತಂಗೆ
ಹಿಂದುಮುಂದಿಲ್ಲ ಊರಡವಿಯೆಂದೆಂಬಾ
ಸಂದೇಹವಿಲ್ಲ ಶಿವಶಿವಾ ||  || ೩೪ ||

ಅದ್ಯಂತರಹಿತವೆಂದೆನಿಸುವ ಲಿಂಗವ
ಭೇದಿಸಿ ಕರದಿ ಧರಿಸಿದ ವಿರಕ್ತಂಗೆ
ಚೋದ್ಯವೊಂದುಂಟೆ ಶಿವಶಿವಾ ||  || ೩೫ ||

ಇರುಳು ಹಗಲೆಂದೆಂಬ ಕಳವಳಂಗಳ ಕೆಡಿಸಿ
ಪರಮಲಿಂಗದಲಿ ಬೆರಸಿದ ನಿರ್ವಾಣಿ
ನಿರುಪಮನಕ್ಕು ಶಿವಶಿವಾ ||  || ೩೬ ||

ಅತ್ತಲಿತ್ತಲು ತಿರುಗಿ ಹೊತ್ತುಗಳೆಯಲಿ ಬೇಡ
ಚಿತ್ತ ಲಿಂಗದಲಿ ನೆಲೆಗೊಂಡ ಮಹಿಮಂಗೆ
ಮುಕ್ತಿ ಬೇರುಂಟೆ ಶಿವಶಿವಾ ||  || ೩೭ ||

ಗಿರಿಗುಹೆವಾಸದಲಿ ಚರಿಸಲವ ನಿರ್ವಾಣಿ
ನಿರಪಮನಾಗಿ ಘನಲಿಂಗದೊಳು ಬೆರಸಿ
ಪರಿಭವವಿಲ್ಲದಿರುತಿರ್ಪ ||  || ೩೮ ||

ಉರುತರವಹ ಲಿಂಗ ಕರಕಮಲದೊಳಗಿರೆ
ಸ್ಥಿರವಾಗಿ ಮನವನಾ ಲಿಂಗದೊಳಗಿರಿಸಿ
ಚರಿಸಬಲ್ಲವನೆ ನಿಜಮುಕ್ತಾ ||  || ೩೯ ||

ಅಂಗಸಮರಸವಾದ ಲಿಂಗವ ತೆಗೆತಂದು
ಹಿಂಗದೆ ಕರದಿ ಧರಿಸಿಯಾ ಲಿಂಗ ಸು
ಸಂಗದಿ ಚರಿಸಲವ ಮುಕ್ತಾ ||  || ೪೦ ||

ನುಡಿವಲ್ಲಿ ನಡೆವಲ್ಲಿ ಕೊಡವಲ್ಲಿ ಕೊಂಬಲ್ಲಿ
ಒಡಗಲಸಿ ಲಿಂಗದೊಳಗೆರಡಿಲ್ಲದೆ
ದೃಢದಿಂದಾಚರಿಸಲವ ಮುಕ್ತಾ ||  || ೪೧ ||

ಆತ್ಮಾಂತರಾತ್ಮ ಪರಮಾತ್ಮನೆನಿಸುವ ಘನವ
ಪ್ರೀತಿಯಿಂ ಕರದಿ ಧರಿಸಿ ಗಿರಿಗುಹೆಗಳ
ವಾಸದಿ ಚರಿಸಲವ ಮುಕ್ತಾ ||  || ೪೨ ||

ಅಂಗದೊಳು ಚೈತನ್ಯವಾಗಿಪ್ಪ ಲಿಂಗದಲಿ
ಸಂಗಿಸಿ ಮನವ ಜನನ ಮರಣಂಗಳ
ಭಂಗವ ಗೆಲಿದಡವ ಮುಕ್ತಾ ||  || ೪೩ ||

ಜಾಗರ ಸ್ವಪ್ನ ಸುಷುಪ್ತಿಯ ಮರವೆಯ
ಬೇಗದಿ ನೀಗಿ ಘನಮಹಾಲಿಂಗದಿ
ಯೋಗಿಸಬಲ್ಲಡವ ಮುಕ್ತಾ ||  || ೪೪ ||

ಹಸಿವು ತೃಷೆ ನಿದ್ರೆಯ ಗಸಣಿಯೆಲ್ಲವ ಕೆಡಿಸಿ
ಅಸಮಾಕ್ಷ ಲಿಂಗ ಸಂಗದೊಳು ತೃಪ್ತಿಯ
ದೆಸೆಯ ಕಂಡವನೆ ನಿಜಮುಕ್ತಾ ||  || ೪೫ ||

ಊರಡವಿ ಹರಲಿರುಳು ಕ್ರೂರ ಮೃಗವೆನ್ನದೆ
ಓರಂತೆ ಹಸಿವು ತೃಷೆ ನಿದ್ರೆಯಂ
ದೂರಮಾಡಿದನೆ ನಿತ್ಯ ನಿಜಮುಕ್ತಾ ||  || ೪೬ ||

ಹೊದ್ದು ಹೋದೆಹೆನೆಂಬ ಬುದ್ಧವನತಿಗಳೆದು
ಶ್ರದ್ಧೆಯಿಂ ಲಿಂಗದೊಡಗೂಡಿ ಮನುಜರು
ಹೊದ್ದದೆ ಚರಿಸಲವ ಮುಕ್ತಾ ||  || ೪೭ ||

ನಿರವಯ ನಿರುಪಮ ನಿಃಶೂನ್ಯಲಿಂಗವ
ಕರಕಮಲದಲ್ಲಿ ಧರಿಸಿ ಮನವನಲ್ಲಿ
ಬೆರಸಿ ಚರಿಸಾಡಲವ ಮುಕ್ತಾ ||  || ೪೮ ||

ನಿತ್ಯನಿಜ ಬೆಳಗಿನಲಿ ಚಿತ್ತಮನಭಾವನ
ನಿಕ್ಷೇಪವ ಮಾಡಿ ಚರಿಸಾಡುತಿರ್ಪ
ವಿರಕ್ತನೆ ಮುಕ್ತ ಶಿವಶಿವಾ ||  || ೪೯ ||

ಜಡರುಗಳ ಸಂಗವ ಬಿಡೆಬೀಸಿ ಲಿಂಗವ
ದೃಢವಾಗಿ ಕರದಿ ಧರಿಸಿ ಚಲಿಸುತ ಲಿಂಗದೊ
ಳೊಡವರೆದವನೆ ನಿಜಮುಕ್ತಾ ||  || ೫೦ ||

ಬಟ್ಟಬಯಲು ತುಟ್ಟತುದಿಯ ಕೊನೆಯ ಮೊನೆಯ
ಮುಟ್ಟಿದ ಬೆಳಗಿನೊಳು ಮನಭಾವ ಕರಣವ
ಕಟ್ಟಿ ಚರಿಸುವನೆ ನಿಜಮುಕ್ತಾ ||  || ೫೧ ||

ಅಂಗಪ್ರಾಣದಿ ಮನ ಸಂಗಿಸಿ ಭಾವದೊಳು
ಹಿಂಗದೆ ಕರದೊಳಿಪ್ಪ ಘನಲಿಂಗದೊ
ಳೊಂದಿ ಚರಿಸುವನೆ ನಿಜಮುಕ್ತಾ ||  || ೫೨ ||

ಕಂಗಳೊಳಗಣ ಬೆಳಗು ಲೋಕಂಗಳ ಬೆಳಗಿನೊಳು
ಸಂಗಿಸಿ ರವವಳಿದ ಪರಯಂತೆ ಶರಣ ಘನ
ಲಿಂಗದೊಳು ಬೆರಸಿ ಸುಖಿಯಹ ||  || ೫೩ ||

ಗಂಧ ಗಾಳಿಯ ಕೂಡಿ ಒಂದಿಯೆರಡಳಿದಿಪ್ಪ
ಛಂದವ ಕಂಡು ಶರಣ ಘನಲಿಂಗದಿ
ಸಂದಳಿದಿಹನು ಶಿವಶಿವಾ ||  || ೫೪ ||

ನೀರು ಕ್ಷೀರವು ಕೂಡಿದಾರೈಕೆಯಳಿದ ಸ
ಕೀಲವನಳಿದು ಶರಣ ಘನಲಿಂಗದಿ
ಸಿರಿಯೆರಡಳಿದ ಸುಖಯಹ ||  || ೫೫ ||

ಜ್ಯೋತಿಯೆರಡರ ಬೆಳಗು ವ್ಯಾಪಿಸಿ ಒಂದಾದಂತೆ
ಸಾಕ್ಷಾತ್ ಲಿಂಗದೊಳು ಬೆರಸಿ ಶರಣ ನಿ
ರ್ಲೇಪಿಯಾಗಿಹನು ಶಿವಶಿವಾ ||  || ೫೬ ||

ಬೆಳಗು ಬೆಳಗನೆ ಕೂಡಿ ತಿಳವರೆರಡಿಲ್ಲದ
ಪರಿಯಂತ ಶರಣ ಘನಲಿಂಗದೊಳು ಬೆರಸಿ
ಉಲುಹಡಿಗಿಹನು ಶಿವಶಿವಾ ||  || ೫೭ ||

ಇಂತು ನಿಜಗುರು ಶಾಂತಮಲ್ಲಯ್ಯ ಕರದೊಳು
ಸಂತತ ಬೆಳಗುತಿರಲಲ್ಲಿ ಬೆರಸಿ ನಿ
ಶ್ಚಿಂತದಿ ಚರಿಸಲವ ಮುಕ್ತಾ ||  || ೫೮ ||

ನಿಜಗುರು ಶಾಂತಮಲ್ಲಯ್ಯನೊಳು ಮನ ಭಾವ
ಹುದುಗಿ ಎರಡಳಿದು ಉಜನೆಭಜನೆಗಳೆಂಬ
ಗಜಬಜೆಯಳಿದಡವ ಮುಕ್ತಾ ||  || ೫೯ ||

ಶ್ರೀಮತ್ಸರಮ ಪಾವನನೆನಿಸಿಪ್ಪ ನಿಜಗುರು
ಸ್ವಾಮಿ ಕರದಲ್ಲಿ ನೆಲಸಿರಲಲ್ಲಿ ಸ
ತ್ಪ್ರೇಮಿಯಾದವನೆ ನಿಜಮುಕ್ತಾ ||  || ೬೦ ||

ಬುದ್ಧಿ ಮನ ಚೈತನ್ಯವ ಶ್ರದ್ಧೆಯಿಂದೊಡಗೂಡಿ
ನಿರ್ಧರಿಸಿ ಮನವ ನಿಜಗುರು ಶಾಂತನೊಳ
ಗದ್ದಿದವ ಮುಕ್ತ ಶಿವಶಿವಾ ||  || ೬೧ ||

ಕರಸ್ಥಲದ ವೀರಣ್ಣೊಡೆಯ ದೇವರ ಪರಮವಿರಕ್ತನ ಐಕ್ಯಸ್ಥಲ
ಸಮಾಪ್ತ ಮಂಗಳ ಮಹಾ ಶ್ರೀ ಶ್ರೀ ||

 

[1] *ಆರಂಭದಲ್ಲಿ ”ಶ್ರೀ ಗುರು ಶಿದ್ದಲಿಂಗಾಯ ನಮಃ| ಪರಮ ವಿರಕ್ತನ ಮುಂದೆ ನಿಜನಿರ್ವಾಣದಲ್ಲಿ ಚಲಿಸಿ ಲಿಂಗದೊಳೈಕ್ಯವಾದ ಸ್ಥಲ || ತ್ರಿವಿಧಿ ||” ಎಂದು ಬರೆಯಲಾಗಿದೆ