ಶ್ರೀಮದನಂತಶಾಸ್ತ್ರ ನಿಗಮಾವಳಿ ತರ್ಕಸಮೂಹವೆಯ್ದದಿ
ರ್ಪಾ ಮಹಿಮೋನ್ನತೋನ್ನತವೆನಿಪ್ಪ ಮಹಾಘನಲಿಂಗದೊಳ್ ಸದಾ
ವ್ಯೋಮ ಮರುತ್ಸಮೇಳದವೊಲದ್ವಯ ಸೌಖ್ಯಮನಾಂತು ನಿಂದು ನಿ
ಸ್ಸೀಮಪದ ಪ್ರಸಿದ್ಧನೆನಿಪಂ ಶರಣಂ ನಿಜಶಾಂತ ನಿಃಕಲಾ ||  || ೧ ||

ತನುವಿನೊಳುಂ ಸುಚಿತ್ತದೊಳುಮೊಳ್ಪಿನ ಭಾವದೊಳೆಯ್ದೆ ಲಿಂಗಮಂ
ಘನಗುರುಥನೊಲ್ದಿರಿಸಲಾ ಪರಮೈಕ್ಯಮನೈದದನ್ಯ ಭಾ
ವನೆಯೊಳೆ ಪೂಜೆಗೆಯ್ವ ಜಡರಾ ನಿಜದಿಂ ಪರರಾಗಿ ಜನ್ಮವಾ
ಸನೆ ಬಿಡದಿರ್ಪರಾ ಸುಕೃತ ದುಷ್ಕೃತದಿಂ ನಿಜಶಾಂತ ನಿಃಕಲಾ ||  || ೨ ||

ಕರ್ಮಮೆ ಭಕ್ತಿಯಾಗಿ ನಿಜಭಕ್ತಿಯೆ ಚಿತ್ಪದಮಾಗಿ ಚಿತ್ಪದಂ
ನಿರ್ಮಲ ಲಿಂಗದೊಳಂ ಬೆರಸಿ ತದ್ವಿವಿಧತ್ವಮಡಂಗಿ ನಿತ್ಯದೊಳ್
ಮರ್ಮಮನೆಯ್ದಿ ಖಂಡಿತಮುಮಿಲ್ಲದ ಲೌಕಿಕ ಭಾವದೊಳ್ ಕರಂ
ಕೂರ್ಮೆಯನಾಂತು ನಿಂದವನೆ ಲಿಂಗವಲೈ ನಿಜಶಾಂತ ನಿಃಕಲಾ ||  || ೩ ||

ದೃಷ್ಟವ ಲಿಂಗದೊಳ್ ಮನವನೊಂದಿಸಿ ನಿಂದವನಂತೆ ಭಿನ್ನದು
ತ್ಕೃಷ್ಟದ ಪೂಜಕರ್ ಗೃಹದೊಳುಳ್ಳತಿ ಸೇವೆಯನಾಂತು ಚೇಷ್ಟೆಗೇಂ
ದೃಷ್ಟದ ಸೌಖ್ಯಸಿದ್ಧಿದೊರಕೊಂಬುದೆ ಭಾವಿಸಲಾ ಗೃಹಸ್ಥನೊಳ್
ಶಿಷ್ಟತೆವೆತ್ತ ಮಾನಿನಿಯವೋಲ್ ಸಂತತಂ ನಿಜಶಾಂತ ನಿಃಕಲಾ ||  || ೪ ||

ಲಿಂಗದೊಳಾವಗಂ ನೆನಹನೊಂದಿಸಿ ಜಂಗಮದಲ್ಲಿ ಯರ್ಥಮಂ
ಪಿಂಗದೆ ಕೊಟ್ಟು ಕಾಯಮುಮನಾ ಗುರುಸೇವೆಯೊಳಿತ್ತು ತಾನೆ ನಿ
ಸ್ಸಂಗವದೇನುಮಿಲ್ಲದೆ ಶುಭಾತ್ಮಕಮೇ ಕರಿಗೊಂಡು ಭಾವದೊಳ್
ಮಂಗಳವಾದವರಿಗೆ ಜಡವಾಕ್ ಭ್ರಮೆಯೇ ನಿಜಶಾಂತ ನಿಃಕಲಾ ||  || ೫ ||

ವೃಷ್ಟಿಯೆನಲ್ಕದೊಂದು ನದಿಗಳ್ಗಮಶುದ್ಧ ಜಲಕ್ಕಮುರ್ವಿಯಾ
ಸ್ಪೃಶ್ಯನರಾಲಯಂ ವರಶಿವಾಲಯಮಿಂತಿಕೊಂದೆನಿಪ್ಪ ತ
ದೃಷ್ಟದವೋಲ್ ಭಕ್ತಭವಿಗಳ್ಗೆ ಶರೀರಗುಣಗಳೊಂದೆನಲ್
ಶಿಷ್ಟಮಶಿಷ್ಟಮೆಂಬುಭಯಮಿಲ್ಲದುದೇಂ ನಿಜಶಾಂತ ನಿಃಕಲಾ ||  || ೬ ||

ಶಿಲೆಯೆನಲೊಂದೆ ಬಣ್ಣದ ವಿಶೇಷತೆಯಿಂ ವರರತ್ನಮಾಗಲು
ಜ್ವಲಿಪವೊಲೈದೆ ಮಿಕ್ಕ ಶಿಲೆಗಳ್ ಮೆರೆದೊಪ್ಪವೆ ರೂಪವೊಂದೆನಲ್
ಸಲೆ ಶಿವನಂಗದೊಳ್ ಶರಣರೊಪ್ಪಿ ಸುಖಂಬಡುವಂತೆ ಲೋಕದೊಳ್
ಕುಲಯುತ ಮಾನವರ್ ಪಡೆಯಲಾರ್ಪರೆ ಪೇಳ್ ನಿಜಶಾಂತ ನಿಃಕಲಾ ||  || ೭ ||

ತಿಳುಪುವನಾವವಂ ಜಡವಿವೇಕವನುಳ್ಳವನಂ ಮದಾಂಧನಂ
ಕಳವಿನೊಳಿರ್ಪನಂ ಕುಮತನಂ ಕುಟಲಾನ್ವಯನಂ ದುರುಕ್ತನಂ
ಖಲನರನಂ ಸದಾವಿಕಳನಂ ಬರುವೊಮ್ಮದ ವಾಕ್ಯಜಾಳಮಂ
ಗಳಪುವ ಗಾಂಪನಂ ಬಯಲ ಪೆರ್ಮೆ ಘನಂ ನಿಜಶಾಂತ ನಿಃಕಲಾ ||  || ೮ ||

ಕೇಳದೆ ಪೇಳ್ವರಾ ಜಡವಿವೇಕನುಳ್ಳ ನರರ್ ಮಹಾತ್ಮರೊಳ್
ಜಾಳಿಸಿಕೊಳ್ವ ಜಾಡ್ಯಗುಣಮುಂ ಕೆಲವುಂಟೆನುತಂ ಮುದೋಕ್ತಿಯಿಂ
ಕೂಳಿಯನೊತ್ತುವಂ ಕಲಕದಿರ್ ಜಲಮಂ ಪೆರೆಸಾರೆನುತ್ತೆ ತಾಂ
ಗಾಳವನಿಕ್ಕುವಂಗುಸುರ್ಪ ಗಾಂಪನವೋಲ್ ನಿಜಶಾಂತ ನಿಃಕಲಾ ||  || ೯ ||

ಭವಿಮನುಜರ್ ಮಹಾಪರಲಿಂಗಮುಮಂ ಶಿಲೆಯೆಂದು ಸಜ್ಜನ
ರ್ಗವಗುಣಮಂ ಪ್ರಮಾಣಿಪೊಡೆ ತಪ್ಪದಿದೆಂದೆನುತಿರ್ಪನಾವದೊಳ್
ವಿವರಸಲುಂಟೆ ಲಿಂಗ ನಿಜಮಂ ಗುರುಭಕ್ತಿ ದೃಢತ್ವಮಂ ಸದಾ
ಶಿವನ ಮತಂಗಳಿಂ ತಿಳಿವ ನಂಬುಗೆಯಂ ನಿಜಶಾಂತ ನಿಃಕಲಾ ||  || ೧೦ ||

ಕೃತಕ ಕುಮಂತ್ರ ಕುತ್ಸಿತ ಕುಚೇಷ್ಟೆ ಕುಶಬ್ದ ಕುಮಾರ್ಗ ಕುತ್ಸಿತೋ
ನ್ನತ ಕುಹಕಂ ಕುಬೋಧಕ ಕುತಂತ್ರ ಕುಭುಂಜಕ ಕುಪ್ರಸಂಗದೊಳ್
ಶ್ರುತಿತತಿಯಾದಿಯಾದ ಸವಚೋನಿವಹಂಗಳಿರಲ್ ವಿಶೇಷಮೇಂ
ಆತುಳಸುಗಂಧಮಂ ತಳೆದ ಸೂಕರನೊಲ್ ನಿಜಶಾಂತ ನಿಃಕಲಾ ||  || ೧೧ ||

ನುಡಿದನುಭಾವ ವಾರ್ತೆಯನೆ ಮಾನಸದೊಳ್ ಜಡಸಂಶಯಂಗಳೊಳ್
ತೊಡರ್ದು ನಿರಂತರಂ ಭ್ರಮೆಯೊಳಾಳ್ವ ನರರ್ ಘನನಿತ್ಯಮುಕ್ತರೊಳ್
ನಡೆನುಡಿಯೇಕಮಾದ ನಿಜಮಂ ಸಲೆ ಕಾಣದತೀವ ನಿಷ್ಠೆಯಂ
ಪಡೆದನಿಶಂ ಭವಾಬ್ಧಿಯೊಳಗಿರ್ಪರಲೈ ನಿಜಶಾಂತ ನಿಃಕಲಾ ||  || ೧೨ ||

ಸುಧೆಯನುಣುತ್ತೆ ತೃಪ್ತಿಯನಪೇಕ್ಷಿಸಲುಂಟೆ ಪುರಾಕೃತತ್ವದಿಂ
ನಿಧಿಯನೆ ಕಂಡು ಸಂಪದಕೆ ಪೋರಲದೇಂ ನಿಜಗಾತ್ರದಲ್ಲಿ ನಿಂ
ದಧಿಕವೆನಿಪ್ಪ ಲಿಂಗವಿರಲಲ್ಲಿ ನಿಜೈಕ್ಯ ವಿರಕ್ತಿ ಮುಕ್ತಿಗಂ
ವಿಧಿ ಬಡುತಿಪ್ಪರೇತಕೆ ಜಡರ್ ಸತತಂ ನಿಜಶಾಂತ ನಿಃಕಲಾ ||  || ೧೩ ||

ಅಕ್ಕಟ ಮಾನವರ್ ತಿಳಿಯಲೊಲ್ಲರಿದೇಂ ಘನಲಿಂಗವಂಗದೊಳ್
ಸಿಕ್ಕಿರೆ ಭಾವದಿಂದೆ ಮನದೊಳ್ ಬಿಡದಲ್ಲಿಯೆ ನಿತ್ಯಮುಕ್ತಿಯೊಳ್
ಪೊಕ್ಕಿರದಿರ್ಪರೆಂತೆನೆ ನಿಧಾನಮದಿರ್ದೆಡೆಯೊಳ್ ಮಹೋರಗಂ
ತೆಕ್ಕೆಯ ಕಾಯದಿಂದದನೆ ಕಾಯ್ವ ತೆರದಿಂ ನಿಜಶಾಂತ ನಿಃಕಲಾ ||  || ೧೪ ||

ಗುರುವೆನಲೇಂ ಮಹಾಪರಲಿಂಗಮಿದೆಂದೆನಲೇಂ ಶಿವತ್ವದಿಂ
ಚರಿಸುವ ಜಂಗಮಸ್ಥಲದ ಮಾರ್ಗಮಿದೆಂದೆನಲೇನೆನುತ್ತಹಂ
ಕರಿಸಿ ವಚೋವಿಳಾಸದೊಳೆ ಸಂದು ನಿಜಂ ನೆಲೆಗೊಳ್ಳದಿರ್ಪವರ್
ನಿರಯಮನೆಯ್ದಿ ಬಾಳ್ವರದು ಸಂಶಯಮೇ ನಿಜಶಾಂತ ನಿಃಕಲಾ ||  || ೧೫ ||

ಜ್ಯೋತಿಯೊಳೊಂದಿ ವರ್ತಿಕುಳಮುಜ್ಜಲ ದೀಪಸಮೂಹಮಪ್ಪವೋಲ್
ಜಾತಿವಿದೂರಮಪ್ಪ ಪರಮಾರ್ಥ ಪರಾಯಣನಂ ನಿರಂತರಂ
ಪ್ರೀತಿಯೊಳೊಲ್ದು ಸಾರ್ದ ಸುಜನರ್ ಪರಿಪಾಕಮನೆಯ್ದೆ ಲೋಕ ವಿ
ಖ್ಯಾತಿಯನಾಂಪುದೇನವರ್ಗದಚ್ಚರಿಯೇ ನಿಜಶಾಂತ ನಿಃಕಲಾ ||  || ೧೬ ||

ಅಂಗದ ಸಂಗವಾದ ನಿಜಲಿಂಗ ನಿಜೈಕ್ಯಮನೆಯ್ದಲಲ್ಪ ಶಾ
ಸ್ತ್ರಂಗಳ ಪಾಠದಿಂ ಭ್ರಮಿಸುತಂ ನಿಗಮಾಂತ್ಯಮೆ ಬೊಮ್ಮಮೆಂದು ದು
ಸ್ಸಂಗಿಗಳಾಗಿ ಶಬ್ದಸುಖ ಜಾಡ್ಯಮನೇ ಪರಮೆಂದು ನಿಂದವರ್
ಮಂಗಳ ಮಾರ್ಗದೊಳ್ ಮಹವನೆಯ್ದುವರೇ ನಿಜಶಾಂತ ನಿಃಕಲಾ ||  || ೧೭ ||

ತನುಮದಮಿಂದ್ರಯ ಪ್ರತತಿಯಂ ಜಡಭೌತಿಕಮಾನ್ಯಮೆಂದೆನು
ತ್ತನುಭವಿಸುತ್ತೆ ಮತ್ತವರೊಳಂ ಬಿರುಮಾತುಗಳಿಂದೆ ಬೊಮ್ಮದಾ
ನೆನಲದು ತಥ್ಯಮೇ ಪರಮಲಿಂಗಮನಾಂತಿರುತಾ ಶರೀರಮಂ
ತನಗೆರವೆಂಬ ಪಾತಕರನೇನೆನಲೈ ನಿಜಶಾಂತ ನಿಃಕಲಾ ||  || ೧೮ ||

ಅನಘಮತರ್ಕ್ಯಮದ್ವಯಮನೂನ ಮಹಾಘನವೆಂಬ ಲಿಂಗದೊಳ್
ಮನವೊಸೆದೈದಲೊಲ್ಲದೆ ಜಗಂ ಶಿವನೆಂದು ಜಡೋಕ್ತರಾವಗಂ
ಜಿನುಗುತಿರಲ್ಕಮೀ ಜನನಮೀ ಸ್ಥಿತಿಯೀ ಲಯವೆಂಬ ವಾರ ಪೀ
ಡನೆಗಳವೇನನಾಶ್ರಿಪುದು ದ್ವಿತ್ರಿಗುಣಂ ನಿಜಶಾಂತ ನಿಃಕಲಾ ||  || ೧೯ ||

ಕರಣ ಚತುಷ್ಟಯಂಗಳೊಳಗಾದ ಶರೀರಗುಣಂಗಳೆಲ್ಲಮಂ
ಪರಿಹರಿಸಲ್ಕೆವೇಳ್ಕುಮೆನುತಂ ಜಡರೆಯ್ದೆ ನಿರೋಧದಿಂದೆ ಸಂ
ಚರಿಸುತ ಲಿಂಗದಲ್ಲಿ ಸಹವರ್ತನವಿಲ್ಲದೆ ಜೀವ ಭಾವಿಗಳ್
ಮರುಳೆನಿಸಿರ್ಪರಾ ನಿಜಮನೆಯ್ದದೆ ಕೇಳ್ ನಿಜಶಾಂತ ನಿಃಕಲಾ ||  || ೨೦ ||

ನುಡಿಯ ವಿಲಾಸದಿಂ ಜನಮನೊಗ್ಗಿಪನೊರ್ವನುದಾತ್ತ ನಿಷ್ಠೆಯಿಂ
ನಡೆದು ಚತುರ್ವಿಧಾಮಳ ಪದಾಸೆಯೊಳಿರ್ಪನೊರ್ಬನೀದ್ವಯಂ
ಜಡೆಮೆನುತಲ್ಲಿ ನಿಲ್ಲದೆ ಮಹಾಘನಲಿಂಗದ ಸಂಗ ಸೌಖ್ಯದೊಳ್
ಬಿಡದಡಸಿರ್ಪ ನಿಶ್ಚಲನನೇನೆನಲ್ಕೆ ನಿಜಶಾಂತ ನಿಃಕಲಾ ||  || ೨೧ ||

ಜ್ಞಾನದ ವಾಕ್ಯಜಾಳಮನೆ ಜೋಡಿಸಿಕೊಂಡುದರಾಗ್ನಿ ಬಾಧಿಸಲ್
ಮಾನವರಿಪ್ಪ ಗೇಹದೊಳ್ ಹೊಕ್ಕತಿ ಶಿಷ್ಟತೆಯಿಂದೆ ನಿಲ್ಲಲಾ
ಹೀನಮನಾಗಳೀಕ್ಷಿ ಸುತವರ್ ನಗುತಿತ್ತುದನುಂಡು ಮತ್ತೆ ಕೇಳ್
ಜ್ಞಾನಿಗಳೆಂಬ ಜಾಡ್ಯರುಮನೇನೆನಲ್ಕೆ ನಿಜಶಾಂತ ನಿಃಕಲಾ ||  || ೨೨ ||

ಕರೆಯದೆ ಪೋಗಿ ಸಾದರತೆಯಿಲ್ಲದೆ ಕುಳ್ಳಿರುತಾ ಗೃಹಾಧಿಪಂ
ಪರಿಕಿಸದಿರ್ದೊಡಂ ನುಡಿವುತೂಟದ ಪೊತ್ತುನಕಮಾತನೊಳ್
ಸೊರಹುತ್ತರಲ್ಕೆ ಬೇಸರತವಂ ಕರೆವುತ್ತಣಲೆದ್ದು ಪೋಧೊಡಂ
ತ್ವರಿತದೊಳೆದ್ದು ಭುಂಜಿಪರನೇನೆನಲೈ ನಿಜಶಾಂತ ನಿಃಕಲಾ ||  || ೨೩ ||

ನುಡಿದಿದಿರಿಚ್ಛೆಯಂ ಪಡೆದುದಂ ಸಲೆ ಕೊಂಬೆವೆನುತ್ತೆ ಚಿತ್ತದೊಳ್
ತೊಡರ್ದು ದುರಾಸೆಯೊಳ್ ಬಿಡದೆ ಕಂಗೆಡುತಂ ಮರೆಯಾದ ತಾಣದೊಳ್ಳ
ವಡದ ವಿಚಾರದಿಂ ನಿಜಮನೆಯ್ದದೆ ಮಾತಿನ ಮಾಲೆಯಂದದೊಳ್
ಪೊಡೆ ಕೆಡುತ್ತಿರ್ಪರಜ್ಞತೆಯ ಕಾಟಮೋ ಪೇಳ್ ನಿಜಶಾಂತ ನಿಃಕಲಾ ||  || ೨೪ ||

ಹೃದಯದೊಳಾಸೆ ಭೀತಿ ಜಡೆಶಂಕೆಗಳುಳ್ಳ ನರರ್ ಮಹಾತ್ಮರೆಂ
ದೊದವಿದ ಗರ್ವಧಿ ಪಲವು ಮಾತುಗಳಂ ಪುರಗಟ್ಟಿತೋರೆ ಲಿಂ
ಗದ ನಿಜ ಸಂಗಿಗಳ್ ನಗರೆ ಪೇಳ್ ಗುರು ಮುದ್ರೆಯ ಕಳ್ಳಹೊನ್ನನೊ
ಯ್ದದನೆ ಸುವರ್ಣವಾಣಿಜರ್ಗೆ ತೋರುವವೊಳ್ ನಿಜಶಾಂತ ನಿಃಕಲಾ ||  || ೨೫ ||

ತುಂಬಿತುಳುಂಕದಿರ್ಪ ಪರಿಪೂರ್ಣ ಪರಸ್ಥಿತರಲ್ಲದಾವಗಂ
ನಂಬಿ ಸುಲಿಂಗದೊಳ್ ಮನಮಡಂಗಿರರಲ್ಲದ ಜಾಡ್ಯರಪ್ಪ ವಾಕ್
ಡಂಬಕರಿಂದೆ ಚಿದ್ಫನತೆ ಕೆಟ್ಟುದರಿಂದವೆ ನೋಡೆ ನಾಡಿನೊಳ್
ಡೊಂಬರು ಪೆರ್ಚಿ ಅಡ್ಯಮದು ಕೆಟ್ಟತೆರಂ ನಿಜಶಾಂತ ನಿಃಕಲಾ ||  || ೨೬ ||

ಆಶೆಯನಾಸ್ವಭಾವಗುಣದಲ್ಲಿ ಶರೀರದೊಳಿಟ್ಟು ಲಿಂಗಮಂ
ದಾಸತೆವೆತ್ತು ಸಂಸ್ಕೃತಿಗೆ ಲಿಂಗ ನಿಜೈಕ್ಯಮದಿಲ್ಲದಿರ್ಪವ
ರ್ಗೇಸು ವಚಸ್ಸಿರಲ್ ಭ್ರಮಿತರೆಂದು ಜಡಾತ್ಮಕರೆಂದು ಜನ್ಮದೋ
ಪಾಸಿತರೆಂದು ಕಾಣ್ಬುದವರಂ ಸತತಂ ನಿಜಶಾಂತ ನಿಃಕಲಾ ||  || ೨೭ ||

ತಕ್ಕುದನಾಡಿ ಲೋಕದ ಜನಾಳಿಗಳೊಳ್ಮಿಗೆ ತುಚ್ಛ ವೃತ್ತಿಯೊಳ್
ಸಿಕ್ಕಿ ವಚಸ್ಸಿನಿಂ ಪಿರಿಯರೆಂದೆನುತಂ ಭ್ರಮಿಯಿಂ ನಿರಂತರಂ
ಕುಕ್ಕುರನಂತೆ ಪಲ್ಗಿರಿವುತಿಪ್ಪ ಜಡಾತ್ಮಕರಲ್ಲಿ ಚಿತ್ಪ್ರಕಾ
ಶಕ್ಕೆಡೆಯುಂಟೆ ಲಿಂಗನಿಜಸಂಗಿಯವೋಲ್ ನಿಜಶಾಂತ ನಿಃಕಲಾ ||  || ೨೮ ||

ಕಾಮಿಸುತಿರ್ದು ಚಿತ್ತದೊಳಕಾಮಿಯೆನುತ್ತೆ ವೃಥಾ ವಿರಕ್ತಿಯಿಂ
ನೇಮಿಸೆ ಮಾನವರ್ಕಳೊಳೆ ಭುಕ್ತಿಗೆ ಸಾಧನಮಾಗೆ ಲಿಂಗದೊಳ್
ಪ್ರೇಮರಸತ್ವಮುಂ ಘಟಸದಿರ್ಪ ಜಡಾತ್ಮರ ಗೌರವ ಸ್ಪೃಹಾ
ಸೀಮೆಯೊಳಿಲ್ಲದಿರ್ಪ ನಿಲವೇ ದಿಟಕಂ ನಿಜಶಾಂತ ನಿಃಕಲಾ ||  || ೨೯ ||

ರಂಜಿಪರಾವುದಕ್ಕೆ ಜನಮಂ ಭ್ರಮೆ ಪಿಂಗಿದ ಚಿತ್ಪರರ್ಕಳಂ
ರಂಜಿಪರಾವಗಂ ಜನಮನಾಭ್ರಮೆ ಪಿಂಗದ ಜಾಡ್ಯರೊತ್ತು ವಾ
ಗ್ರಂಜನದಿಂದೆ ನೀಚತನಕಾಶ್ರಿತರಾಗವರುಂಡು ಮಿಕ್ಕುದುಂ
ಭುಂಜಿಸಿ ತತ್ಸುಖಕ್ಕೆ ಬಿಗಿವೊಪ್ಪುವಿದೇಂ ನಿಜಶಾಂತ ನಿಃಕಲಾ ||  || ೩೦ ||

ಶಕ್ತಿಗೆ ಭೃತ್ಯನಾಗಿ ಜಡಶಕ್ತಿಯನಾತ್ಮದೊಳಿಟ್ಟು ಮಂತ್ರಮಾ
ಶಕ್ತಿಯ ಜಾಡ್ಯದೊಳ್ ಮನಮನೊಗ್ಗಿಸಿ ಶಕ್ತಿಯಾಗಿ ತತ್
ಶಕ್ತಿವಿಲಾಸದೊಳ್ ಮನವನಿತ್ತು ವಿರಕ್ತಿಯ ಯುಕ್ತಿಗಾಣದಾ
ಮುಕ್ತಿವಿದೂರನಾದನರಿವೇನರಿವೇಂ ನಿಜಶಾಂತ ನಿಃಕಲಾ ||  || ೩೧ ||

ಏತರಾ ಮಾತದೇತರರಿವೇತರರಿವೇತರ ತೇಜಮದೇತರುನ್ನತಂ
ಖ್ಯಾತಿಯ ಲಂಪಟಂ ಸ್ಪೃಹೆಯೆ ಲಂಪಟಮುಂ ಬರಿ ಯೋಗದೊಳ್ ಸದಾ
ಪ್ರೀತರುಮಾಗಿ ಲಿಂಗನಿಜದೊಳ್ ಮನವೆಯ್ದುದವರ್ಗೆ ಮತ್ತೆ ತಾ
ನೇತರ ಚಿದ್ವಿಲಾಸಮದರಿಂ ಫಲಮೇಂ ನಿಜಶಾಂತ ನಿಃಕಲಾ ||  || ೩೨ ||

ನುಡಿಯನೆ ಕೊರ್ಚುತಂ ನಡೆಗೆ ಬೆರ್ಚುತೆ ಸನ್ನಯದೊಳ್ ವಿರಕ್ತಿಯೊಳ್
ಜಡಮತಿಯಾಗುತಂ ಮಿಗೆ ಸರಕ್ತಿಯೊಳುಂ ನಲಿವುತ್ತಮಂತವರ್
ನಡೆವರೆದೆಂತು ಬಾರದುಮವರ್ ಬರುವೇಷದ ಭೂಷಣಂಗಳಂ
ತೊಡುತವೆ ತದ್ವಿಲಾಸಕವರುರ್ಬುವವೋಲ್ ನಿಜಶಾಂತ ನಿಃಕಲಾ ||  || ೩೩ ||

ಅರಿದು ನಿರಂತರಂ ಪರಮ ಲಿಂಗಮನೆಯ್ದಿದರಂತೆ ಮಾತಿನೊಳ್
ಬರಿದೆ ಜಡಾತ್ಮರೆಲ್ಲರ ವಿಚಾರತೆಯಿಂದೆ ವೃಥಾ ವಿಲಾಸಮಂ
ಮರೆವರದೆಂತೆನಲ್ ಪುಲಿಯ ಬಣ್ಣಮನೀಕ್ಷಿಸುತಂತೆ ಜಂಬುಕಂ
ಮರೆದೆನೆನುತ್ತೆ ತಾಂ ಸುಡುವವೊಲ್ ಒಡಲಂ ನಿಜಶಾಂತ ನಿಃಕಲಾ ||  || ೩೪ ||

ಅದ್ವಯನೆಂದೆನುತ್ತಮನಿಶಂ ದ್ವಯದಲ್ಲಿ ಕೆಡರ್ದು ಮತ್ತೆ ತಾ
ನದ್ವಯನೆಂದು ರಂಜಿಸುತೆ ಪಾಮರರೊಳ್ ವ್ಯಸನಾರ್ಥಿಯಾಗಿ ತಾಂ
ಚಿದ್ವಿಮಲತ್ವದಿಂದ ಘನಲಿಂಗದೊಳದ್ವಯನಾಗದಿರ್ಪ ವಾ
ಗದ್ವಯನೇಂ ವಿರಾಜಿಪನೆ ನಿತ್ಯನವೋಲ್ ನಿಜಶಾಂತ ನಿಃಕಲಾ ||  || ೩೫ ||

ಅನವರತಂ ಮಹತ್ತತೆಯನಾಂತಿರುತಿರ್ಪ ಘನೇಷ್ಟಲಿಂಗದೊಳ್
ಮನವೆ ನಿರಂತರಂ ನಿಜವನೆಯ್ದದೆ ತಾ ಪ್ರಕೃತಿ ಪ್ರಭಾವಮಂ
ನೆನೆವುತೆ ತನ್ಮಯೋಕ್ತಿಯೊಳೆ ಸಂದು ಜಡರ್ ಘನಲಿಂಗ ವಾರ್ತೆಯಂ
ಜಿನುಗಿಯನನ್ಯರೆಂದು ನುಡಿವರ್ ಸತತಂ ನಿಜಶಾಂತ ನಿಃಕಲಾ ||  || ೩೬ ||

ಜ್ಞಾನಿಯವೋಲ್ ವಿರಕ್ತನವೊಲುನ್ನತ ಶೀಲನವೋಲ್ ಮಹತ್ವದೊಳ್
ತಾನೆರಡಿಲ್ಲದಿರ್ಪ ಘನ ನಿರ್ಧರನಂತೆ ನಿರಾಳನಂತೆ ಮೇಣ್
ಸ್ಟಾನುಭವೈಕ್ಯನಂತೆ ನಿಜ ನಿಷ್ಕಳನಂತೆ ಕರಂ ವಚೋವಿಲಾ
ಸಾನುಭವಂಗಳಿಂದೆ ಜಡರೊಪ್ಪುವರೆ ನಿಜಶಾಂತ ನಿಃಕಲಾ ||  || ೩೭ ||

ವಿಭವ ವಿವೇಕ ನಿಶ್ಚಯ ವಿಲಾಸ ಮಹೋನ್ನತಿ ಪೆರ್ಮೆ ಚಿತ್ತದೊಳ್
ಶುಭತೆ ನಿಜೇಷ್ಠಲಿಂಗ ನಿಜನಿಷ್ಠೆ ಗಭೀರತೆ ಭಾವಶುದ್ಧಿ ಸತ್
ಪ್ರಭುತೆಯ ದೈನ್ಯವೃತ್ತಿ ಸದಯಾಸುಲಭತ್ವವಂಚಿತೆಯೆಂಬವೇಂ
ಪ್ರಭವಿಸಲಾರ್ಪವೇ ಬಿಡದೆ ಬೇಡುವರೊಳ್ ನಿಜಶಾಂತ ನಿಃಕಲಾ ||  || ೩೮ ||

ಬೇಡುವದೊಂದು ದೈನ್ಯವಿಡಿದಿರ್ಪ ಜಡಾತ್ಮಕನಂ ಮಹಾತ್ಮನೆಂ
ದಾಡುತಿರಲ್ಕುಪಾಸ್ಥೆಯನೆ ಮಾಡಿ ಭವಂಗೆಡುವೊಂದುಪಾಯಮಂ
ನೋಡಿದರುಂಟೆ ಕೇಳು ತನಗಂ ನೆರೆ ಕಾಣದೆ ದೈವದೊಳ್ವರಂ
ಬೇಡಿ ನಿರಂತರಂ ಭ್ರಮೆಯೊಳಾಳ್ವನವೋಲ್ನಿಜಶಾಂತ ನಿಃಕಲಾ ||  || ೩೯ ||

ಲಿಂಗ ವಿಹೀನನಾದ ಗುರುವಿಂದುಪದೇಶವನಾಂತನಾವನಾ
ತಂಗೆ ಭವಿತ್ವಮುಂ ತೊಲಗದೆಂತೆನೆ ತದ್ಗುರುವಿಂದನಾರತಂ
ಪಿಂಗದೆ ವಂದಿಪಾ ಬಗೆಯೊಳೊಂದಿ ವೃಥಾ ಧರಿಸಿರ್ದ ಲಿಂಗಮಂ
ಭಂಗಿರತಪ್ಪರೈ ಭವಭವಂಗಳೊಳಂ ನಿಜಶಾಂತ ನಿಃಕಲಾ ||  || ೪೦ ||

ಅವಘನೆನಿಪ್ಪವಂಗೆ ಗಮನಂ ಸಲೆ ಲೇಸಚಲತ್ವಮಾಗದೆಂ
ದೆನೆ ಜಡರಾವಗಂ ಚರಿಸಿ ಜೀವಿಗಳಂತವರ್ಗಾವುದೊಳ್ಳಿತ
ತ್ಯನುಪಮ ಲಿಂಗವೇಂ ಚರಿಸದಿರ್ದೊಡೆ ಹೀನಮೆ ಈ ನಿಜತ್ವಮಂ
ಮನುಜರ ಯುಕ್ತಿ ಗೋಚರಿಸಲಾರ್ಪುದೆ ಪೇಳ್ ನಿಜಶಾಂತ ನಿಃಕಲಾ ||  || ೪೧ ||

ಉರುತರಮಪ್ಪ ನಿಸ್ಪೃಹತೆಯಂ ಧರಿಸಿರ್ಪತಿ ಸತ್ವಮಿಲ್ಲದೀ
ಧರೆಯ ಜನಂಗಳೊಳ್ ಭಜನೆಗಾಗಿ ಕರಂ ಜಡನಾಟಕಂಗಳಂ
ಧರಿಸಿ ದುರಾಸೆಯೊಳ್ ತೊಡೆರ್ದು ಹಾನಿಯ ಹೀನಮನೆಯ್ದಿ ಲೋಕದೊಳ್
ಚರಿಸುವರೇಕೆ ಪೇಳ್ ಪಿರಿಯರೆಂದಕಟಾ ನಿಜಶಾಂತ ನಿಃಕಲಾ ||  || ೪೨ ||

ಮಂಡೆಯೊಳಾಂತು ಪಂಚಶಿಖೆಯಂ ಸಲೆ ಕರ್ಣಯುಗಂಗಳಲ್ಲಿರಲ್
ಕುಂಡಲಮಿರ್ಪ್ವಿಭೂತಿಯೆನೆ ಧೂಳಿಸಿ ಮಾನಸದೊಳ್ ವಿರಕ್ತಿಯಿಂ
ಮಂಡಿಸಿಯಾಸೆಯೊಳ್ ಮುಳುಗಿ ಸದ್ಗುರು ಮಾರ್ಗವಿದೂರರಾದರಂ
ದಂಡಧರಂ ಕರಂ ಸದೆಯದಿರ್ಪನೆ ಕೇಳ್ ನಿಜಶಾಂತ ನಿಃಕಲಾ ||  || ೪೩ ||

ಉದರನಿಮಿತ್ತವತ್ಯಧಿಕ ವೇಷಮನಾಂತು ಸಮಸ್ತ ದೇಶದೊಳ್
ನದಿಯನನೇಕಮಂ ಪಲವು ದೈವಮುಮಂ ಪರಿದೆಯ್ದಿ ನೋಡಲೆಂ
ಹೃದಯದೊಳಿರ್ಪ ಜಾಡ್ಯಮದು ಪೋಪುದೆಚ್ಚತ್ತೊಗೆಯಲ್ಕೆ ಹೃತ್ತಮಂ
ಬೆದರಿರದೋಡಿ ಪೋಗಿ ಬಯಲಪ್ಪುದು ಕೇಳ್ ನಿಜಶಾಂತ ನಿಃಕಲಾ ||  || ೪೪ ||

ವಿಷವನುಣಲ್ಕೆ ನಿವಿಷಮನುಂಡ ನರಂಗದು ಮಾಳ್ಪದೋಷಮೇಂ
ತುಷದನಿತುಂಟೆ ಸರ್ವರುಚಿಯುಂ ಸವಿಯಲ್ ಘನಲಿಂಗಸಂಗಿಗೇಂ
ವಿಷಯ ಗಣಂಗಳಾಗಿ ಸಲಲಾರ್ಪವೆ ನಿರ್ಧರದಿಂ ನಿಜೋಕ್ತಿ ದು
ರ್ವಿಷಯ ವಿಚಾರ ರೂಹಿಗರಿಯಲುಬಹುದೇ ನಿಜಶಾಂತ ನಿಃಕಲಾ ||  || ೪೫ ||

ಮದನನ ಬಲ್ಪು ಮಾಯೆಯ ಮದೋನ್ನತೆ ಕಾಲನ ಕೂರ್ಪು ಸಲ್ಲದ
ತ್ಯುದಿತವೆನಿಪ್ಪ ಚಿತ್ಪ್ರಭೆಯನೀಕ್ಷಿಸಿ ಲಿಂಗಮಹತ್ವದಲ್ಲಿ ತಾ
ನೊದಗಿ ನಿರಂತರಂ ಪರಮ ಸಂಗದೊಳುಂ ಸಲೆಸಂದು ನಿಃಪ್ರಪಂ
ಚದ ನಿಜದೊಳ್ ವಿರಾಜಿಪನ ಮುಂದೆ ಕರಂ ನಿಜಶಾಂತ ನಿಃಕಲಾ ||  || ೪೬ ||

ಮನಸಿಜನುರ್ಕು ಮನ್ಮಥನ ಗರ್ವವನಂಗನ ಬಲ್ಪು ಪುಷ್ಪಧ
ನ್ವನ ಚಪಲತ್ವವಂಗಜನ ತೀವ್ರತೆ ಚಿತ್ತಜನುಗ್ರವಿಕ್ವುಚಾ
ಪನ ಕುಹಕಂ ವಿಚಾರಿಪೊಡೆವೆಯ್ದವವಾರನೆನಲ್ಕೆ ಲಿಂಗದೊಳ್
ಘನ ಸುಖದಿಂ ವಿರಾಜಿಪ ಮಹಾತ್ಮಕನಂ ನಿಜಶಾಂತ ನಿಃಕಲಾ ||  || ೪೭ ||

ಬೇಡುವನೇ ಚತುರ್ವಿಧ ಫಲಂಗಳನಾ ಶಿವನಂ ಸ್ವಲೀಲೆಯಿಂ
ದಾಡುವ ನಿಸ್ಪೃಹಂ ಘನ ಶಿವಾತ್ಮತೆಯೊಳ್ ಸಲೆಸಂದನಾಗಿ ಕೇಳ್
ನಾಡೆ ಮನುಷ್ಯರಂ ಬಗೆವನೇ ಬಿಡು ಲಿಂಗದೊಳಂ ನಿರಂತರಂ
ಕೂಡಿ ಮಹಾತ್ಮನಾದ ಪರಮಾನುಭವಂ ನಿಜಶಾಂತ ನಿಃಕಲಾ ||  || ೪೮ ||

ದೃಕ್ಕುಭಯಕ್ಕೆ ದೃಕ್ಕೆನಿಪ ಭಾವ ನಿಜಾಕ್ಷಿಯನೆಯ್ದಿ ಲಿಂಗದೊಳ್
ಸಿಕ್ಕಿಸಿ ತತ್ಪರತ್ವದ ವಿಳಾಸತೆಯೊಳ್ ಸಲೆಸಂದು ಲೋಕಮಂ
ಲೆಕ್ಕಿಸದಿರ್ದು ತಜ್ಜನ ಮರೀಚಿಯ ನಾಟಕದೊಪ್ಪವಂ ಬಹಿರ್
ದೃಕ್ಕಿನೊಳೀಕ್ಷಿಸುತ್ತೆ ನಗುವಂ ಶರಣಂ ನಿಜಶಾಂತ ನಿಃಕಲಾ ||  || ೪೯ ||

ನೆಮ್ಮಿದನಾವವಂ ಪರಮ ಲಿಂಗಮಹತ್ವವನಂತವಂಗೆ ಚಿ
ತ್ತಂ ಮನಮುಂ ಸುಬುದ್ಧಿಯುಮಹಂಕೃತಿಯೆಂಬ ಚತುಷ್ಟಯಂಗಳುಂ
ಸುಮ್ಮನಿರುತ್ತೆಯಾಚಿತದೊಳಾದುದನೆ ಗ್ರಹಿಸುತ್ತೆ ಕೆಟ್ಟು ಜಾ
ಡ್ಯಂ ಮಹಿಯೊಳ್ ವಿರಾಜಿಸುವನೈ ಶರಣಂ ನಿಜಶಾಂತ ನಿಃಕಲಾ ||  || ೫೦ ||

ಬಂದುದು ವಾರದೆಂಬುಭಯ ದಂದುಗಮಂ ಕೆಡೆಮೆಟ್ಟಿ ಲಿಂಗದೊಳ್
ನಿಂದು ನಿರಂತರಂ ದ್ವಯಮುಖಮಿಲ್ಲದೆ ಸಾಗರಮಾ ಸರಿತ್ತುಗಳ್
ಬಂದೊಡೆ ಬಾರದಿರ್ದೊಡವಕಂ ಮಿಗಪೆರ್ಚದೆ ಕುಂದದಂತೆ ಸಾ
ನಂದದೊಳೊಪ್ಪುವಂ ಶರಣನತ್ಯಧಿಕಂ ನಿಜಶಾಂತ ನಿಃಕಲಾ ||  || ೫೧ ||

ಅರಿವುಂ ನಿರಂತರಂ ಮರವೆಯಿಲ್ಲದೆ ನಿರ್ಮಲನಾಗಲಂತದಂ
ಕರಿಗೊಳಿಸುತ್ತೆ ಲಿಂಗಜದೊಳ್ ದ್ವಯಮೆಂಬುದಡಂಗಿ ಲೋಕಮಂ
ಕುರುಪಿಡದಿರ್ಪ ನಿರ್ಗುಣಮನೆಯ್ದಿ ನಿರಾಕುಳ್ ನಿತ್ಯಮುಕ್ತಿಯೊಳ್
ಮೆರೆವವನಾವನಂತವನೆ ಲಿಂಗವಲೈ ನಿಜಶಾಂತ ನಿಃಕಲಾ ||  || ೫೨ ||

ಜಾಗರಮಾದಿಯಾಗಿ ಮಿಗೆ ತೋರುವ ತತ್ ತ್ರಯದಲ್ಲಿ ಲಿಂಗ ಸಂ
ಯೋಗಮುಮಾಗಿಮುಂ ನಿನ್ನ ಜಡತ್ರಮಮುಂ ನೆರೆನೀಗಿ ಸರ್ವಮಂ
ಭೋಗಿಪನೈಸೆ ಮತ್ತೆ ಮತವೇಂ ಶರಣಂಗೆ ಸದಾಶಿವತ್ವದಿಂ
ರಾಗಿಪ ಲಿಂಗಸಂಗ ಸುಮಹತ್ಸುಖದೊಳ್ ನಿಜಶಾಂತ ನಿಃಕಲಾ ||  || ೫೩ ||

ಲಿಂಗಮನಂಗದೊಳ್ ಕರಣದೊಳ್ ನಿಜಭಾವದೊಳಿಂದ್ರಿಯಂಗಳೊಳ್
ಸಂಗಿಸಿ ಮತ್ತಮಂತವರೊಳುಳ್ಳ ಸುಖಂಗಳನಿತ್ತು ಜಾಡ್ಯಮಂ
ಪಿಂಗಿಯನನ್ಯ ಲೀಲೆಯೊಳೆ ಸಂದು ಮಹಾಮಹಿಮಾ ವಿಲಾಸದಿಂ
ಮಂಗಳನಾದವಂಗೆ ಬಿಡವೆಲ್ಲಯವೈಸೆ ನಿಜಶಾಂತ ನಿಃಕಲಾ ||  || ೫೪ ||

ಕುಂದದ ಲಿಂಗನಿಷ್ಠೆಯವರೊಳ್ ನೆಲೆಗೊಂಡವಧಾನದಲ್ಲಿ ಕೇಳ್
ನಿಂದಿರುತಿರ್ಪ ಸನ್ನಹಿತದಿಂ ನಿಜಮುಕ್ತಿಯೆ ಏಕಮಾಗಿ ತಾಂ
ಸಂದನಿ ರಾಕುಳತ್ವಮದರಿಂ ದ್ವಯಮಿರ್ಪೆಡೆಗೆಟ್ಟು ಪೋಗಲಾ
ದಂದುಗಮೆಯ್ದೆ ಪಿಂಗಿ ಮೆರೆವಂ ಶರಣಂ ನಿಜಶಾಂತ ನಿಃಕಲಾ ||  || ೫೫ ||

ಕಂಡೊಡೆ ಕಂಡು ಮುಟ್ಟಿದೊಡೆ ಮುಟ್ಟಿ ಮಹಾಘನಲಿಂಗವೊಲ್ದು ತಾ
ನುಂಡೆಡೆಯುಂಡು ಕೇಳಿದೊಡೆ ಕೇಳುತೆ ನಾಸಿಕದಿಂದೆ ಸೌರಭಂ
ಗೊಂಡಡೆ ಕೊಂಡು ಲಿಂಗಸಹವಾಗಿ ವಿರಾಜಿಪ ಲಿಂಗಲೀಲೆ ಮುಂ
ಕೊಡೆಸದಿರ್ದ್ದಡಾತನೆ ನಿರಂಗನಲೈ ನಿಜಶಾಂತ ನಿಃಕಲಾ ||  || ೫೬ ||

ಅಂಗಮದಾದಿಯಾಗಿ ಮಿಗೆ ತೋರಿಕೆಯೆಲ್ಲವಂ ಮಹಾ
ಲಿಂಗದೊಳಿತ್ತು ಪುಷ್ಕರದೊಳಿರ್ಪ ಸಮೀರನವೋಲ್ ಮಹತ್ತೆಯಂ
ಪಿಂಗಿಸಿ ಅಂಗಮಿಲ್ಲೆನಿಸಿ ಚತ್ಸರಮೈಕ್ಯ ಪದಸ್ಥನಾಗಿ ಆ
ವಂಗಮುಮಿಲ್ಲದಿರ್ಪನನಿಶಂ ಶರಣಂ ನಿಜಶಾಂತ ನಿಃಕಲಾ ||  || ೫೭ ||

ಮನಮೊಳೆಯಾಗಿ ತೋರ್ಪ ಕರಣಂಗಳ ವರ್ಮಮುಮಂ ನಿರಂತರಂ
ಘನ ಶಿವಲಿಂಗದೊಳ್ ಸಲೆ ಸಮರ್ಪಿಸಿ ಭಿನ್ನಮಡಂಗಿ ಸತತಂ
ಘನಮಯನಾಗಿ ಸರ್ವಸುಖಮಂ ಘನಲಿಂಗವನೆಯ್ದೆ ನೋಡೆ ತ
ನ್ನನೆ ಮರೆದಿರ್ದೂಡಾತನೆ ನಿರಂಗನಲೈ ನಿಜಶಾಂತ ನಿಃಕಲಾ ||  || ೫೮ ||

ಕನಕದ ಬಣ್ಣದಂತೆ ನಿಜರತ್ನದ ಸುಪ್ರಭೆಯಂತೆ ಪುಷ್ಪವಾ
ಸನೆಯ ಸಮೇಳದಂತೆ ಘನಲಿಂಗದೊಳೊಂದೆನಿಸಿರ್ಪ ನಿಃಪ್ರಪಂ
ಚನನನವಧ್ಯನಂ ಮತಿಗಸಾಧ್ಯನನಾಮಯನಂ ನಿರಾಳನಂ
ಮನಜರದೆಂತು ಕಾಣ್ಬರರಿವಿಲ್ಲದೆ ಪೇಳ್ ನಿಜಶಾಂತ ನಿಃಕಲಾ ||  || ೫೯ ||

ಅರಿವಿನ ನಿರ್ಮಲಂ ಮನದ ನಿರ್ಮಲಮೊಪ್ಪುವ ಭಾವ ನಿರ್ಮಲಂ
ತುರುಗಿ ನಿಮಿರ್ದು ನಿಲ್ಲದೆ ಮಹಾಘನಲಿಂಗಮನೈದೆ ಭಿನ್ನಮಂ
ತೊರೆದವನೆಂತೆನಲ್ ನದಿಗಳಂಬುಧಿಯೊಳ್ ಸಲೆಕೂಡಿ ಭೇದಮಂ
ಪರಿದು ತದಂಬುರಾಶಿಯೆನಲೊಪ್ಪುವವೋಲ್ ನಿಜಶಾಂತ ನಿಃಕಲಾ ||  || ೬೦ ||

ಬಯಲೊಳೆ ತೋರಿ ಸರ್ವಭುವನಂಗಳುಮಾ ಭ್ರಮೆಗಾವಿಯತ್ತು ತಾ
ನಯನಮಿಲ್ಲದಿರ್ದವೋಲನಿರತೆನಿಪ್ಪ ನರರ್ಗೆ ಸಂತನೇಂ
ಸ್ವಯ ವಚನಗಳಿಂದಮುಪಚರಿಪನೇ ಘನಲಿಂಗ ಸಂಗದೊಳ್
ದ್ವಯಮಳಿದದ್ವಯತ್ವದೊಳೆ ರಾಜಿಸುವಂ ನಿಜಶಾಂತ ನಿಃಕಲಾ ||  || ೬೧ ||

ಲಿಂಗ ಸುಸಂಗ ಸೌಖ್ಯದೊಳೆ ಸಂದು ಮನಂ ಪೆರತೊಂದರಾಶೆಯಂ
ಪಿಂಗಿ ಘನಾದ್ವಯತ್ವ ಶಿವತತ್ವದೊಳೇ ಸಲೆಸಂದು ಜಾಡ್ಯಮಂ
ಭಂಗಿಸಿ ನೂಂಕಿ ನೋಡಲಿದಿರಿಲ್ಲದ ನಿತ್ಯ ನಿಜೈಕ್ಯಭಾವದು
ತ್ತುಂಗ ವಿಲಾಸದಿಂದೆ ಮೆರೆವಂ ಶರಣುಂ ನಿಜಶಾಂತ ನಿಃಕಲಾ ||  || ೬೨ ||

ಕರ್ಮದ ಕಾಟಮಂ ತೊಲಗೆ ನೂಕುತೆ ಭಕ್ತಿಯೊಳುಳ್ಳ ಸೇವಕಾ
ಧರ್ಮಮುಮಂ ನಿವಾರಿಸಿ ಚಿದಂಬಕದೊಳ್ ಸಲೆ ಕಾಣ್ಬಭಿನ್ನಮಂ
ನಿರ್ಮಲ ಲಿಂಗದಲ್ಲಿಯ ನಿಜೈಕ್ಯತೆಯಂ ಮಿಗೆ ದಾಂಟದಾ ಮಹಾ
ಪೆರ್ಮೆಯೊಳೊಪ್ಪುತಿರ್ಪನನಿಶಂ ಶರಣಂ ನಿಜಶಾಂತ ನಿಃಕಲಾ ||  || ೬೩ ||

ಲಿಂಗದೊಳಂಗಮಂ ಕೆಳೆವುತಂಗದೊಳಾ ಪರಿಪೂರ್ಣ ಲಿಂಗಮಂ
ಪಿಂಗದೆ ತಾಳ್ದು ಮಾರುತನೊಳೆಯ್ದಿದ ಪುಷ್ಕರದೊಳ್ವಭಿನ್ನಭಾ
ವಂ ಗತಮಾಗಿ ಕಾಣಲಿದಿರಿಲ್ಲದೆ ನಿಂದು ಮಹವಿಳಾಸದಿಂ
ದಂ ಗುಣದೂರನಾಗಿ ಮೆರೆವಂ ಶರಣಂ ನಿಜಶಾಂತ ನಿಃಕಲಾ ||  || ೬೪ ||

ಅಪ್ಪುದದಪ್ಪುದಾಗದದುಮಾಗದೆನಿಪ್ಪ ವಿವೇಕ ನಿಶ್ಚಯಂ
ತಪ್ಪದಿದೆಂತು ತದ್ವಯಕದಾವ ವಿಚಾರಮದೇಕೆನುತ್ತೆ ತಾ
ನಿರ್ಪನನಾರತಂ ಪರಮಲಿಂಗನಿಜೈಕ್ಯ ನಿರಾಕುಳ್ವದಿಂ
ದೊಪ್ಪಿ ಕರಂ ವಿಲಾಸಿಸುವನೈ ಶರಣಂ ನಿಜಶಾಂತ ನಿಃಕಲಾ ||  || ೬೫ ||

ದೃಶ್ಯಮದಾಗಿ ತೋರ್ಪ ಜಗಮೆಯ್ದೆ ವಿನಶ್ವವರಮೆಂದು ಸರ್ವಥಾ
ದೃಷ್ಟಿಸಿ ಶಾಸ್ತ್ರಮಂ ನುಡಿಯೆ ವಿಶ್ವದೊಳಂ ಜಡಬುದ್ಧಿ ಸಿದ್ಧಿಗಳ್
ದೃಶ್ಯಮದಾಗಿ ನಶ್ವರಮನೆಯ್ದುರು ಲಿಂಗಸಂಗದೊಳ್ ಸದಾ
ದೃಶ್ಯಪದಾತಿ ದೂರನೆನಿಪಂ ಶರಣಂ ನಿಜಶಾಂತ ನಿಃಕಲಾ ||  || ೬೬ ||

ಮನದೊಳನಾರತಂ ಪರಮಲಿಂಗಮನಪ್ಪಿ ಜಗದ್ವಿಲಾಸಮಂ
ಕನಸಿನವೋಲ್ ನಿವಾರಿಸುತೆ ತಜ್ಜಗದಲ್ಲಿಯೆ ಸೌಖ್ಯಮೆಂಬುದಿಂ
ದ್ರನ ಧನುವೆಂದು ನಿರ್ಧರಿಸಿ ನಿಂದಮಹಾಶರಣಂಗೆ ತೋರ್ಪ ರಂ
ಜನಮಿವು ತೋರವೇ ಪುಸಿಯ ವಾರ್ಧಿಯವೋಲ್ ನಿಜಶಾಂತ ನಿಃಕಲಾ ||  || ೬೭ ||

ಕತ್ತಲೆಯೊಳ್ ವಿರಾಜಿಸುವ ದೀಪಿಕೆಯಂ ಬಳಸಿರ್ದು ಪೋಗದಾ
ಕತ್ತಲೆಯೆಂಬ ತದ್ವಯಮಿನೋದಯದೊಳ್ ಬಯಲಾದವೋಲ್ ಸುಸಂ
ವಿತ್ತೊಗೆಯಲ್ಕೆ ತೋರುವ ಜಡಾಜಡಮೆಂಬುಭಯ ಪ್ರಭಾವಮಂ
ಬತ್ತಲೆ ಮಾಡಿ ಲಿಂಗೆವೆನಿಪಂ ಶರಣಂ ನಿಜಶಾಂತ ನಿಃಕಲಾ ||  || ೬೮ ||

ಶಂಕತೆಯಂ ನಿವಾರಿಸುತೆ ಜಾಡ್ಯವಿರಲ್ ಕಳೆಯುತ್ತೆ ಹಂತೆಯೊಳ್
ಬಿಂಕವಿರಲ್ಕೆ ಝಂಕಿಸಿ ದುರಾಶೆಯನುತ್ತಿರುಸುತ್ತೆ ಮತ್ತೆ ನಿಃ
ಶಂಕತೆಯಿಂ ವಿಲಾಸಿನಿ ನಿರಾಶೆಯನೀಕ್ಷಿಸಿ ಪಾಲಿಸುತ್ತೆ ಬಾ
ಳ್ವಂ ಕರಮೊಪ್ಪಿ ಲಿಂಗನಿಜದೊಳ್ ಶರಣಂ ನಿಜಶಾಂತ ನಿಃಕಲಾ ||  || ೬೯ ||

ಕಾನನ ಮಧ್ಯದೊಳ್ತರುಗಳೊಳ್ತರುಗಳ್ಮಥಿಸಲ್ಕೆ ಪುಟ್ಟಿ ದಾ
ವಾನಲಮೇಂ ನವಾರ್ದ್ರಮಿದು ಶುಷ್ಕಮಿದೆನ್ನದೆ ಸರ್ವಭೂಜಮಂ
ತಾನುರೆ ಸುಟ್ಟವೋಲ್ ಸುಕೃತ ದುಷ್ಕೃತಮಂ ಶರಣಂ ಚಿದಾಗ್ನಿಯಿಂ
ದೇನುಮದಿಲ್ಲದಂತೆ ಸುಡನೆ ಬಗೆಯಲ್ ನಿಜಶಾಂತ ನಿಃಕಲಾ ||  || ೭೦ ||

ನೊಣೆದು ದುರಾಶೆಯಂ ಪಣಿದವಾಡಿ ದುರಾಗ್ರಹಮಂ ಮನೋಜನಂ
ಪೊಣೆದು ವಿಚಾರದೊಳ್ ಮಣಿದು ಮಾಯೆಯ ನೆತ್ತಿಯನೋವದಾರ್ಪಿನಿಂ
ದಣಿದು ವಿರಕ್ತಿಯೊಳ್ ಪೆಣೆದು ಲಿಂಗ ಸುಸಂಗ ಸುಖಭಾವದಿಂ
ದಣಿದು ವಿಶುದ್ಧನಾಗಿ ಮೆರೆವಂ ಶರಣಂ ನಿಜಶಾಂತ ನಿಃಕಲಾ ||  || ೭೧ ||

ಬಸವನೆ ಸಾಕ್ಷಿ ಚೆನ್ನಬಸವಣ್ಣನೆ ಸಾಕ್ಷಿ ಚಿದಾತ್ಮ ಲೀಲೆಯಿಂ
ದೆಸೆವ ಮಹಾತ್ಮನಲ್ಲಮನೆ ಸಾಕ್ಷಿಯಯಾಚಿತ ಭಿಕ್ಷೆಯಲ್ಲದಾ
ನುಸುರಿ ಪದಾರ್ಥಮಂ ನೆರಪಿಕೊಂಡೊಡೆ ಲಿಂಗ ನಿರೂಪಮೆಂಬ ಮಾ
ತೆಸೆವುದೆ ಕಲ್ಪಿತಂಗಳಳಿದೊಪ್ಪುವರೊಳ್ ನಿಜಶಾಂತ ನಿಃಕಲಾ ||  || ೭೨ ||

ತನತನಗಿರ್ದೊಡೇನಿರದೆ ಪೋದೊಡೆದೆಂನಿಜಲಿಂಗ ಸಂಗದೊಳ್
ಘನಸುಖಿಯಾಗಿ ದೇಹಮೆ ಮೊದಲ್ ಸಲೆ ಧರ್ಮಕೆನಿಪ್ಪ ಸಿದ್ದಿ ಕೇಳ್
ತನಗೆಸೆಯಲ್ಕೆ ತತ್ಸುಖದೊಳೊಂದಿ ಮಹೋನ್ನತೆವೆತ್ತು ರಾಜಿಪ
ತ್ಯನುಪಮ ಲೀಲೆಯಿಂ ಚರಿಸುವ ಶರಣಂ ನಿಜಶಾಂತ ನಿಃಕಲಾ ||  || ೭೩ ||

ತನುವಿರುತಿರ್ದ ತತ್ತನುವಿನೋಳ್ ನುಡಿಯಿರ್ದ ನಿಜೈಕ್ಯರೆಂದು ತಾ
ವೆನುತಿರಲೇತಕೆಂದು ಜಡರೆಂದರೆ ಕುಂದೆ ವಿಯತ್ತಿನಲ್ಲಿ ಕೇಳ್
ಘನವಿರಲಿಲ್ಲ ಪುಟ್ಟಿದ ಸುನಾದವಿರುತ್ತಿರೆ ಬಂಧವಲ್ಲದಂ
ತನುಪಮ ಲಿಂಗಸಂಗ ಸುಖಿಗುಂಟೆ ಜಡಂ ನಿಜಶಾಂತ ನಿಃಕಲಾ ||  || ೭೪ ||

ಅಂದೊಳಾವಗಂ ಮೆರೆವುತಿರ್ಪ ದಶೇಂದ್ರಿಯ ವರ್ಣವಾ ಮಹಾ
ಲಿಂಗದೊಳೆಯ್ದೆ ರಾಜಿಸುತೆ ಭಾವ ಮನಸ್ಸುಗಳೊಲ್ದು ಲಿಂಗದೊಳ್
ಸಂಗಿಸಿ ದುಗ್ಧವಾಲುಗಳ ಕೂಪದವೊಲ್ ಬಿಡದಿರ್ಪ ಸತ್ಯನಿ
ತ್ಯಂಗಣೆಯಾರ್ ಚತುರ್ದಶ ಮಹಾಜಗದೊಳ್ ನಿಜಶಾಂತ ನಿಃಕಲಾ ||  || ೭೫ ||

ಸಿದ್ಧಿಯ ಬದ್ಧಮಂ ತೊಲಗನೂಂಕಿ ತಪಸ್ಸನುಪೇಕ್ಷೆಗೆಯ್ವ ಸ
ದ್ಬುದ್ಧಿಗೆ ಸಿಲ್ಕಿದೊಳ್ಪಿನ ಚತುಃಪದದೊಳ್ ಮರುಳಾಗದಾ ಮಹಾ
ಶುದ್ಧವೆನಿಪ್ಪ ಲಿಂಗನಿಜಸಂಗ ಸುಖೈಕ್ಯದೊಳಿರ್ದು ಜಾಡ್ಯಸಂ
ಬದ್ಧರನೀಕ್ಷಿಸುತ್ತೆ ನಗುವಂ ಶರಣಂ ನಿಜಶಾಂತ ನಿಃಕಲಾ ||  || ೭೬ ||

ಉದಕದೊಳಿರ್ದು ಬಾಳ್ವ ಶಫರಂ ನಿಜನಾಸಿಕನಾಳದತ್ತಲಾ
ಉದಕಮದೆಯ್ದದಂತೆ ಚರಿಪಂತಿರೆ ನೋಡೆ ಮಹಾವಿಲಾಸದಿಂ
ಪುದಿದು ಜಗತ್ ಪ್ರಪಂಚದೊಳಗಿರ್ದುದು ಪೊರ್ದದ ಮಾಳ್ಕೆಯಿಂ ನಿರಾ
ಳದ ನಿಜದೊಳ್ ವಿರಾಜಿಪನಲ್ಕೆ ಶರಣಂ ನಿಜಶಾಂತ ನಿಃಕಲಾ ||  || ೭೭ ||

ನಿಗಮ ಚಯಕ್ಕತೀತವಖಿಲಾಗಮವೆಯ್ದದ ಶಾಸ್ತ್ರ ಸಂಚಯಂ
ಪುಗುವಡೆ ಸಾಧ್ಯಮಲ್ಲದ ಪುರಾಣ ಸಮೂಹಭೇದ್ಯನೆಂದನಿ
ಪ್ಪಗಣಿತ ಲಿಂಗದೊಳ್ ಬೆರಸಿ ತನ್ನಿಜದೊಳ್ ನಿಜಮಾಗಿ ನಿಂದು ಮಾ
ತುಗರರಿಕ್ಕೆ ತಾನೆ ನಗುವಂ ಶರಣಂ ನಿಜಶಾಂತ ನಿಃಕಲಾ ||  || ೭೮ ||

ಸರಸಿಜದಿಂದೆ ಪುಟ್ಟಿದವಗುಳ್ಳ ಪದಂ ಮುರವೈರಿಯೆಂಬವಂ
ಗುರುತರವಾಗಿ ತೋರುವ ಪದಂ ತ್ರಿದಶಾದಿಪನೆಂಬನೊಪ್ಪುತಿ
ಪ್ಪುರುತರ ಸಂಪದಂ ಸರಿಯೆ ಚಿದ್ಛನ ಲಿಂಗಮಹತ್ವದೊಳ್ ಕರಂ
ಬೆರಸಿ ಮಹಾತ್ಮನಿರ್ಪ ಪದದುನ್ನತಿಗಂ ನಿಜಶಾಂತ ನಿಃಕಲಾ ||  || ೭೯ ||

ಭಜನೆಯ ಪೆರ್ಮೆಯೊಳ್ ಭ್ರಮಿಸುತಾಸೆಯೊಳಾಳ್ವತಿ ಲೌಕಿಕಾರ್ಥಮಂ
ತ್ಯಜಿಸಿ ನಿಜೈಕ್ಯ ಸೌಖ್ಯದೊಳೆ ಸಂದು ಮಹಾಘನಲಿಂಗ ಮೂರ್ತಿಯಂ
ಯಜಿಸುತೆ ಭಿನ್ನಭಾವನೆಯಡಂಗಿ ಮನಂ ಸುಖಿಯಾಗಿ ಪೂರ್ಣನಾ
ದಜಡ ಪದ ಪ್ರಸಿದ್ಧನೆನಿಪಂ ಶರಣಂ ನಿಜಶಾಂತ ನಿಃಕಲಾ ||  || ೮೦ ||

ಭಾವ ಮನಸ್ಸು ದೃಷ್ಟಿಗಳನೊಬ್ಬುಳಿಮಾಡಿ ಪರಾಖ್ಯಲಿಂಗದೊಳ್
ತೀವಿಯಹಂತೆಯಂ ತ್ಯಜಿಸಿ ತನ್ನಜದೊಳ್ ತೆರಹಿಲ್ಲದಿರ್ದು ಮ
ತ್ತಾವ ಮತಾಂತರಂಗಳೊಳನೈಕ್ಯನೆನಿಪ್ಪ ನಿಜಸ್ವಭಾವನಂ
ಭಾವಿಸಿ ನೋಡಿ ಪೇಳಲರಿದಾನಿಲಮಂ ನಿಜಶಾಂತ ನಿಃಕಲಾ ||  || ೮೧ ||

ಅಂಗುಟದಿಂದೆ ನೆತ್ತಿತನಕಂ ಘನಲಿಂಗದ ಸಂಗವಾದಗಂ
ಪಿಂಗದೆ ನಿಂದ ಭಾವನೆಯನಾ ಪ್ರಭೆಯಂ ಮಿಗೆ ಕಾಣ್ಬ ಶಬ್ದಜಾ
ಲಂಗಳ ಸಂಭ್ರಮಂಗಳೊಳಗಾಡುವ ಜಾಡ್ಯಮಡಂಗಿ ಪೂರ್ಣನಾ
ದಂಗೆಣೆಯಾವನಂಟು ನರರೊಳ್ ಸುರರೊಳ್ ನಿಜಶಾಂತ ನಿಃಕಲಾ ||  || ೮೨ ||

ಜನದ ಸಮೇಳದಲ್ಲಿ ಮನಮಂ ಮಿಗೆ ಮೆಚ್ಚಿಸದಾವಗಂ ಮಹಾ
ಘನ ಶಿವಲಿಂಗದಲ್ಲಿ ಸಲೆ ಮೆಚ್ಚಿಸಿ ಜಾಡ್ಯಮಡಂಗಿ ಪೂರ್ಣನಾ
ದನಘನಚಿಂತ್ಯಪ್ರತಿಮನದ್ವಯನುನ್ನತ ಸೌಖ್ಯಶೀಲನ
ತ್ಯನುಪಮನಾದಗುಂಟೆ ಕೆಲವಚ್ಚರಿ ಪೇಳ್ ನಿಜಶಾಂತ ನಿಃಕಲಾ ||  || ೮೩ ||

ಸಂಚಲವಿಲ್ಲದಂತೆ ಮನಮಂ ಘನದಲ್ಲಿ ತೊಡರ್ಚಿಯಾವಗಂ
ಸಂಚಿತಮಾಗಿ ತೋರ್ಪ ಜಡೆ ಕಾಮಿತ ಕಲ್ಪಿತ ಭಾವಿತಂಗಳಂ
ವಂಚಿಸಿ ಮುಂದೆ ನೋಡಲಿಹವಂ ಪರವೆಂಬುಭಯೋಕ್ತಿಯಂ ಮಹಾ
ಸಂಚದೊಳುಂಟುಮಾಡಿದನನೇನೆನಲೈ ನಿಜಶಾಂತ ನಿಃಕಲಾ ||  || ೮೪ ||

ಪರಮ ವಿವೇಕದಿಂದ ಸಲೆ ಕಂಡು ಮದಂ ಕುರುಪಿಟ್ಟುಮಲ್ಲಿ ತಾಂ
ಬೆರಸಿ ವಿಭೇದಮಿಲ್ಲ ಜಡಮಿಲ್ಲದ ತತ್ಸುಖ ಪೂರಿತಾಂಗನಾ
ಗಿರುತಿದಿರುಚ್ಛೆಗಂ ಕೃಪೆಯನಿತ್ತು ಮಹಾಶರಣಂ ಸ್ವಲೀಲೆಯಿಂ
ದುರುತರ ಪೀಠದಿಂದ ಮಿಗೆ ರಾಜಿಸುವಂ ನಿಜಶಾಂತ ನಿಃಕಲಾ ||  || ೮೫ ||

ಅನುಪಮವೆಂಬುದಪ್ರತಿಮೆಂಬುದನಾಮಯಮೆಂಬುದಳ್ತಿಯಿಂ
ಘನಪರಿಪೂರ್ಣಮೆಂಬುದು ನಿರಾಕುಳಮೆಂಬುದು ನಿತ್ಯಮೆಂಬುದೊ
ಳ್ಪಿನ ನಿಜಪ್ರಸಿದ್ಧಿಯೆಂಬುದು ನಿರಾಶ್ರಯಮೆಂಬುದು ಲಿಂಗಸಂಗದಿಂ
ದನವರತಂ ವಿರಾಜಿಸು ನಿರಂಜನನಂ ನಿಜಶಾಂತ ನಿಃಕಲಾ ||  || ೮೬ ||

ಅದು ಪರಿಪೂರ್ಣಮಂತದು ನಿರಾಳವನಾಶ್ರಯವಚ್ಛಮುಕ್ತಿ ತಾ
ನದು ನಿರವದ್ಯ ನಿಶ್ಚಲ ನಿರಾಕುಳ ನಿರ್ಗುಣ ನಿತ್ಯತೃಪ್ತಿಗ
ಳ್ಗದು ನೆಲೆ ನಿರ್ಮಲಂ ನಿರುಪಮಂ ಘನಲಿಂಗ ಸುಸಂಗ ಸೌಖ್ಯದೊಳ್
ಪುದಿದ ಮಹಾತ್ಮನಿರ್ಪ ಪರಮಾದ್ವಿತೀಯಂ ನಿಜಶಾಂತ ನಿಃಕಲಾ ||  || ೮೭ ||

ಘನಪರಿಪೂರ್ಣವೆಂದನಿಪ ಲಿಂಗ ನಿಜೈಕ್ಯಮನೆಯ್ದಿ ಭಿನ್ನ ಭಾ
ವನೆಯಳಿದಚ್ಯುತಾನುಭವದೊಳ್ ಶರಣಂ ಮಿಗೆಂ ರಂಜಿಪಂದನೆಂ
ತೆನೆ ನದಿಗಳ್ ಸರತ್ಪತಿಯನೆಯ್ದಿ ತದಂಬುಧಿಯಾಗಿ ಭಿನ್ನ ಭಾ
ವನೆಯನೆ ನೀಗಿ ನಿಂದಿರವಲೈ ಸತತಂ ನಿಜಶಂತ ನಿಃಕಲಾ ||  || ೮೮ ||

ಲಿಂಗವೆ ಜಂಗಮಂ ವಿಮಲ ಜಂಗಮನೆ ಘನಲಿಗವೆಂಬ ವಾ
ಕ್ಯಂಗಳೊಳಿಪ್ಪ ತಥ್ಯದ ನಿಜಾಚರಣಾನ್ವಿತರಾಗದಾವಗಂ
ಭಂಗಿತರಾಗಿ ಜಾಡ್ಯಮನಮಂ ಮಿಗೆ ಕಾಮಿಸುತಾಶೆಯೆಂಬುದಂ
ಪಿಂಗದುದೆ ಜಂಗಮ ಸ್ಥಲಕಯೋಗ್ಯವಲೈ ನಿಜಶಾಂತ ನಿಃಕಲಾ ||  || ೮೯ ||

ಲಿಂಗಮನಾಂತು ಲಿಂಗನಿಜದೊಳ್ ಸಲೆಸಂದು ತದೈಕ್ಯ ಭಾವದೊಳ್
ಮಂಗಳಮಾಗಿ ತೋರುವ ಜಗಂ ತೃಣಮೆಂಬ ನಿರಾಶೆಯಾವಗಂ
ಪಿಂಗದೆ ನಿಂದ ತನ್ನಿಜ ಮಹತ್ವ ವಿಲಾಸದೊಳಿರ್ಪನಾವನಾ
ತಂ ಗುರು ಜಂಗಮಸ್ಥಲಮದೊಪ್ಪುವದೈ ನಿಜಶಾಂತ ನಿಃಕಲಾ ||  || ೯೦ ||

ಲಿಂಗದ ನಿರ್ಮಲತ್ವಮನಿಶಂ ಮನದೊಳ್ ಸಲೆ ಬುದ್ಧಿಯೊಳ್ ಕರಂ
ಪಿಂಗದೆ ಚಿತ್ತದೊಳಗೆ ಯಹಂಕೃತಿಯೊಳ್ ನೆಲೆಗೊಂಡು ಕಾಲ ಕ
ರ್ಮಂಗಳ ಜಾಡ್ಯಮಂ ತೊಲಗ ನೂಂಕಿ ಮಹಾನಿಜ ನಿತ್ಯಮುಕ್ತನಾ
ತಂಗೆಣೆಯಾರ್ ನರೋರಗಸುರಾದಿಗಳೊಳ್ ನಿಜಶಾಂತ ನಿಃಕಲಾ ||  || ೯೧ ||

ಲಿಂಗದೊಳಾಟವತ್ಯಧಿಕ ಲಿಂಗದೊಳೊಪ್ಪುವ ಬೇಟವಾ ಮಹಾ
ಲಿಂಗದೊಳೆಯ್ದೆ ಕೂಟವದರಿಂದಚಲತ್ವವನೆಯ್ದಿ ಭಿನ್ನಮಂ
ಭಂಗಿಸಿ ನೂಂಕಿನಿಂದ ನಿಜದಿಂದೆ ವಿರಾಜಿಸುತಂ ನಿರಂತರಂ
ಲಿಂಗ ನಿಜೈಕ್ಯನಾಗಿ ಸುಖಿಪಂ ಶರಣಂ ನಿಜಶಾಂತ ನಿಃಕಲಾ ||  || ೯೨ ||

ಲಿಂಗದೊಳಿರ್ದ ಲಿಂಗದೊಳೆ ಬಾಳ್ದು ಮಹಾಪರಿಪೂರ್ಣಮಪ್ಪ ತ
ತ್ವಾಂಗ ಸುಸಂಗದೊಳ್ ಮನಮದದ್ವಯಮಾಗಿ ನಿರಾಕುಳತ್ವದೊಳ್
ಪಿಂಗದೆ ಪೋಗಿ ನಿಂದು ಮೆರೆವಾ ಘನ ಚಿದ್ಭ್ರಮೆ ಪಿಂಗಿ ನಿರ್ಗುಣೋ
ತ್ತುಂಗ ಮಹತ್ವದೊಳ್ ಶರಣನೊಪ್ಪುವನೈ ನಿಜಶಾಂತ ನಿಃಕಲಾ ||  || ೯೩ ||

ಮನದೊಳೆ ಲಿಂಗವಾ ಘನಲಿಂಗದೊಳು ಮನವೊಂದಿಭೇದಮಾಗಿ ನಿಂ
ದನಘನೆನಿಪ್ಪ ತತ್ ಶರಣನೊಂದಿಚಲತ್ವಮದೆಂತೆನಲ್ಕೆ ಕೇಳ್
ಮನಜನದೋರ್ವನಪ್ಪುವಿನೊಳದ್ದಿರುತಿರ್ದೆ ಮುಗುಳ್ದು ವಾರಿಯಂ
ನೆನೆಯದವೋಲ್ ಮಹಾಶರಣನೊಪ್ಪುವನೈ ನಿಜಶಾಂತ ನಿಃಕಲಾ ||  || ೯೪ ||

ಖಂಡಿತನಲ್ಲದಿರ್ಪ ಪರಿಪೂರ್ಣ ಮಹಾಲಿಂಗದೊಳ್ ಮನಂ
ಖಂಡಿತಮಲ್ಲದಿರ್ದ ಸುಖದೊಳ್ ಸಲೆಸಂದು ಜಗತ್ ಪ್ರಪಂಚಮಂ
ಖಂಡಿಸಿ ನೋಡೆ ಚಿತ್ತ್ರಯವಿರಲ್ಕವನೂರ್ಧ್ವವನೇರಿ ಸಂತತಂ
ಮಂಡಿತನಾಗಿ ತಾನೆ ಮೆರೆವಂ ಶರಣಂ ನಿಜಶಾಂತ ನಿಃಕಲಾ ||  || ೯೫ ||

ಅರಿದು ನಿರಂತರಂ ಪರಮ ಲಿಂಗಮನಾಂಪುದು ಮೇಣದಕ್ಕೆ ತಾ
ನರಿದು ತದೇಕ ನಿಷ್ಠೆಯದರಿಂದರಿದಲ್ಲಿಯ ಸಂಗಮಾ ನಿಜ
ಕ್ಕರಿದು ತದೈಕ್ಯ ಸೌಖ್ಯ ಸುಖವಾಸುಖದೆಚ್ಚರಡಂಗಿ ನಿಂದ ನಿ
ರ್ಧರವರಿದಾ ಪದಂ ಶರಣನಿರ್ಪ ಪದಂ ನಿಜಶಾಂತ ನಿಃಕಲಾ ||  || ೯೬ ||

ಅಗುಣವೆ ರೂಪವೆತ್ತು ಮನಮಂ ಮನದಿಂದಳಿಕ್ಷಿಗಕ್ಷಿಯಿಂ
ನೆಗೆದು ಕರಾಗ್ರದಲ್ಲಿಗೆ ಕರಾಗ್ರದಿನಂಗಕೆ ಬಂದು ಗಾತ್ರದಿಂ
ಮಿಗೆ ಸಕಲೋಪಚಾರದೊಳಗೆಯ್ದಿರುತಿರ್ಪ ಘನೇಷ್ಟಲಿಂಗದೊಳ್
ಮಿಗೆ ಬೆಳಗುತ್ತಲಿರ್ಪವನನೇನೆನಲೈ ನಿಜಶಾಂತ ನಿಃಕಲಾ ||  || ೯೭ ||

ನಿಜದೊಳೆ ನಿಂದರಾರ್ ಪರಮ ನಿರ್ಮಲರಾರ್ ಪರಮಾರ್ಥಯುಕ್ತರಾರ್
ಸುಜನ ಸುವಂದ್ಯರಾರಧಿಕರಾರ್ಜಡಮಾಯಿಕ ದುಃಖಬೋಧೆಯಿಂ
ತ್ಯಜಿಸಿದರಾರ್ ವಿರಕ್ತಿಯುತರಾರ್ ಘನಲಿಂಗ ಸುಸಂಗದಲ್ಲಿ ಸಂ
ದ ಜಡ ಮಹತ್ವವೆಂದೆ ಮೆರೆವಂ ಶರಣಂ ನಿಜಶಾಂತ ನಿಃಕಲಾ ||  || ೯೮ ||

ಬಲ್ಲವರುಂಟೆ ಕೇಳ್ ನಿಜಪದೈಕ್ಯನುಮಾಗಿ ಸುಚಿದ್ವಿಲಾಸದೊಳ್
ಬಲ್ಲವನಂ ನಿರಾಳಮಯನಂ ನಿರಪೇಕ್ಷಕನದ್ವಿತೀಯೆಯೊಳ್
ಸಲ್ಲವನಂ ನಿರಂಗನನಲೌಕಿಕನಂ ಸಕಲ ಪ್ರಪಂಚಿನ
ಲ್ಲಿಲ್ಲದನಂ ನಿರಾಶ್ರಯ ಪದಸ್ಥಿತನಂ ನಿಜಶಾಂತ ನಿಃಕಲಾ ||  || ೯೯ ||

ಈ ಶತಕ ಪ್ರಬಂದ ಸದರ್ಥನೆ ಮುಕ್ತನೆನಿಪ್ಪವಂಗೆ ತಾಂ
ಪಾಶವನಾರತಂ ಪರಮ ಮುಕ್ತನದಾವನವಂಗೆ ಮೋಕ್ಷನ
ತ್ಯಾಸೆಯನುಳ್ಳವಂಗೆ ಕುಮುದಂ ಜಡಮಪ್ಪ ದುರಾಶೆಯೆಂಬುದಂ
ನಾಶಮನೆಯ್ದೆ ಮಾಡಿ ಮೆರವಂಗೆ ಮುದಂ ನಿಜಶಾಂತ ನಿಃಕಲಾ ||  || ೧೦೦ ||

ಕರಸ್ಥಲ ವೀರಣ್ಣೊಡೆಯರ ನಿಃಕಲ ಶತಕ ಸಮಾಪ್ತ
ಮಂಗಳಮಹಾ ಶ್ರೀಶ್ರೀಶ್ರೀ
||