೧. ಕಂಡಿರೆಯಕ್ಕ ಕಂಡಿರೆ

ಕಂಡಿರೆಯಕ್ಕ ಕಂಡಿರೆ, ಭೂ
ಮಂಡಲದೊಳಗೊಬ್ಬ ದಿಂಡೆಯ ಕಳ್ಳನ? ||  || ಪಲ್ಲ ||

ಆದಿಯ ಕದ್ದ, ಅನಾದಿಯ ಕದ್ದನು,
ಭೇದಿಸಿ ಕದ್ದ ಮೂವತ್ತಾರನು
ವಾದಕ್ಕೆ ನಿಲುಕದ ಅಜಹರಿಗಳ ಕದ್ದ
ವೇದ ಶಾಸ್ತ್ರವ ಕದ್ದ ವಿಗಡದ ಕಳ್ಳನ ||  || ೧ ||

ಮಡಿಕೆಯೊಳಿದ್ದ ಮಾನಿಖ್ಯವನು ಕದ್ದ,
ಕುಡಿಕೆಯೊಳಿದ್ದ ಮುತ್ತನು ಕದ್ದ,
ಕಡೆಮೊದಲಿಲ್ಲದ ನಾನಾ ರೂಪನು ಕದ್ದ
ಎಡೆದೆರಹಿಲ್ಲದಾನಂದದ ಕಳ್ಳನ ||  || ೨ ||

ಆರ ಕದ್ದ, ಮೂರೊಂದನು ಕದ್ದ,
ಬೇರೆ ಇನ್ನೂರೆರಡೆಂಟನು ಕದ್ದ,
ನೂರೊಂದು ನಾಮಾಂಕಿತ ಶಾಂತಮಲ್ಲನ
ಸೇರಿ ಕದ್ದ ಕಳ್ಳ ಮರಳಿತ್ತ ಬಾರ || ೩ ||

೨. ಕೋಲು ಕೋಲು ಕೋಲೆ
ರಾಗ: ಮಂಗಳ ಕೌಶಿ

ಕೋಲು ಕೋಲು ಸುಜ್ಞಾನದ
ಕೋಲು ಕೋಲೆ ಪದನ ಘನಲೀಲೆ | ನೀ
ಪೇಲಂಗಲಿಂಗದ ಮೇಲೆ ||  || ಪಲ್ಲ ||

ಗಗನ ಮಂಟಪದೊಳಪುಗುತ
ಸೊಗಸು ಲಿಂಗದ ಗತಿ ಮಿಗುತ
ಯುಗನಯನಾಶ್ರುಗಳೊಗುತ | ಈ
ಜಗದ ಜನರ ಕಂಡು ನಗುತ ||  || ೧ ||

ಆರು ಮುಖದ ಶಕ್ತಿ ನೋಡೆ
ಮೂರು ಲಿಂಗದ ಗತಿಗೂಡೆ
ತೋರೆ ಸದ್ಭಕ್ತಿಯ ಪಾಡೆ | ಮಿಗೆ
ಮೀರಿದ ಯುಕ್ತಿಯೊಳಾಡೆ || ೨ ||

ಎತ್ತಿ ಸತ್ಕ್ರಿಯೆಗಳ ನುಡಿದು
ನಿತ್ಯಾನಂದದಿ ನಡೆದು
ಅತ್ಯಂತಾನುಭಾವವಡೆದು | ನೀ
ಹತ್ತಿರ ಬಾ ಕೋಲ್ಬವಿಡಿದು ||  || ೩ ||

ಕದುಬುವ ಕರಣದ ಚಿಂತೆ ನಿ
ನ್ನೆದೆವನೆಯೊಳು ನಿಲ್ಲದಂತೆ
ಸದಮಲ ಸದ್ಗುಣವಂತೆ | ಕೋಲ್
ಒದಗಿ ನೀ ಬಾರೆ ಚಿತ್ಕಾಂತೆ ||  || ೪ ||

ಭಾವದೃಷ್ಟಿ ಬಲಿಬಲಿಯೆ
ತೀವಿದ ಮನ ನಲಿನಲಿಯೆ
ಸೇವೆ ರತಿಯೊಳುಲಿದುಲಿಯೆ | ನ
ಮ್ಮೈವರ ಗತಿಗೊಲಿದೊಲಿಯ ||  || ೫ ||

ರೂಪು ರೂಪನಿಂದರಿಯೆ
ರೂಪಿನೊಳಗೆ ಮೈಮರೆಯೆ
ರೂಪನೆರಡು ಕಣ್ದೆರೆಯೆ | ಚಿ
ದ್ರೂಪು ನಿರೂಪಿನೊಳ್ಮರದೆರೆಯೆ || ೬ ||

ಮಂಗಳಮಯ ಪಟುವಾಗೆ
ಸಂಗಸುಖದ ಘಟವಾಗೆ
ಲಿಂಗಭೋಗವು ದಿಟವಾಗೆ | ನಿ
ನ್ನಂಗದ ಗುಣ ಸಟೆಯಾಗೆ || ೭ ||

ಜಾಣ ನಿನ್ನಯ ನಿಜವೇಷ
ಮಾಣದೆ ನಿಂದ ವಿಲಾಸ
ಹೂಣಿಸಿ ಬಲಿದ ಪ್ರಕಾಸ | ನೆರೆ
ಕಾಣಿಸುತಿದೆ ಕೈಲಾಸ ||  || ೮ ||

ಸಂತತ ಪ್ರಣವ ಸುನಾದ
ಚಿಂತಿತಾತ್ಮ ನಿರ್ಭೇದ
ಇಂತೆಸಿಯಲ್ಕೆ ವಿನೋದ | ಗುರು
ಶಾಂತಮಲ್ಲೇಶ ತಾನಾದ ||

೩. ಅಲಸಿದೆನಕ್ಕ ಅಲಸಿದೆ
ರಾಗ: ಆಹರಿಪಂತು

ಅಲಸಿದೆನಕ್ಕ ಅಲಸಿದೆ, ಅಳುವ ಮ
ಕ್ಕಳ ಕಾಟ, ಉಲಿವ ಗಂಡನ ಕೂಟ || ಪಲ್ಲ ||

ಎಂಬತ್ತು ನಾಲ್ಕು ಲಕ್ಷ ತವರೂರು ದಾರಿಯ
ಹಂಬಲಿಸುತ ನಾ ನಡದು ಬಂದು,
ತುಂಬಿದ ಜಲವನು ಮಿಂದುಂಡು ಮಲಗಲು
ಬಂದು ಹತ್ತಿತು ಕಿಚ್ಚು ಮನೆಯನು ||

ಒಡಹುಟ್ಟಿದೈವರು ಹಿಡಿದು ಕೈ ಸುಟ್ಟರು
ಮಡದಿಯರೈವರ ಮುಡಿ ಬೆಂದು
ನಡುಮನೆಯಾಕೆಯ ಕಿಡಿ ಹತ್ತಿ ಅಂಗಾಲು,
ನಡೆಯಲಾರದೆ ಸತ್ತು ಮಡಿಯಲು || ೨ ||

ಕಳಬಂದ ಕಳ್ಳರು ಕೀಳಿಲ ಮರೆಯಲಿರ್ದು
ಬೆಳಗಾಗಲು ಬಿಟ್ಟೋಡಿದರು
ತಳವಾರನ ಕಣ್ಣ ಕಳದು ಕೈಯಲ್ಲಿ ಕೊಟ್ಟು
ಹೊಳೆಯ ದಾಂಟಿದೆ ನಾ ಬೆಳಗಾಗೆ ||  || ೩ ||

ತವರೂರ ಪೊರಮಟ್ಟು, ಕಿವಿಯೋಲೆಗಳದು
ತವೆ ತಲೆಯಿಲ್ಲದವರ ಕಿವಿಗಿಕ್ಕಿ
ಹವಣಿಸಬಾರದ ಭವಿಸಂಗದೊಳಗಿರ್ದು,
ತವಕದಿ ಪರವೂರಿನ ದಾರಿಯ ನಡದು ||  || ೪ ||

ಹೆತ್ತ ಮಕ್ಕಳನೆಲ್ಲ ಅತ್ತೆಯ ವಶಮಾಡಿ
ಮುತ್ತೈದೆರೈವರ ಕೂಡಿಕೊಂಡು,
ಚಿತ್ತವಲ್ಲಭ ಶಾಂತಮ್ಲ್ಲೇಶಲಿಂಗಕೆ
ನೆತ್ತಿಯ ನೀರ ನಾ ನೆರೆ ಹೊತ್ತೆನು || ೫ ||

೪. ಏನ ಹೇಳುವೆನಕ್ಕ
ರಾಗ: ಶ್ರೀ

ಏನ ಹೇಳುವೆನಕ್ಕ ಕನಸುವ ?
ನಾನೊಂದ ಕನಸ ಕಂಡೆನಿಂದಿನಿರುಳೊಳು ||  || ಪಲ್ಲ ||

ಮಲಗಿರ್ದ ಸರ್ಪನು ನಲಿದು ಹೆಡೆಯನೆತ್ತಿ
ಬಲು ಹದ್ದು ಹೊಯ್ದುದು ಗಗನವ ದೇಳೆ
ಲಲನೆಯೊಳಡಗಿರ್ದ ಮೊಲೆಯ ಕಾಣುತ ಬಟ್ಟಬ
ಯಲೊಳು ಬಯಲಾದುದ ಕಂಡೆನು ||  || ೧ ||

ಮೂಲದೊಳ್ಕಕಿಚ್ಚೆದ್ದು ಸಾಲು ಮಠವನು ಸುಟ್ಟು,
ಕೀಲು ಸಡಿಲಿ ತೊಲೆ ಮುರಿಯಲು
ಜಾಳಂದ್ರದುರಿ ತಾಗಿ, ಮೇಲಣ ಕೊಡನುಕ್ಕಿ
ಜಾಲಗಾರನು ಸತ್ತ ಕನಸುವ ||  || ೨ ||

ಹುಟ್ಟು ಬಂಜೆಯ ಮಗ ಸುಟ್ಟನು ತವರೂರ
ಉಟ್ಟುದ ಬಿಸುಟು ಉಣ್ಣದೆ ಹೋದುದ;
ಶ್ರೇಷ್ಠ ನಿರ್ಮಲ ಗುರುಶಾಂತಮಲ್ಲನ ಕೂಡಿ
ದೃಷ್ಟವದೃಷ್ಟವಾದುದ ಕಂಡೆನು? ||  || ೩ ||

೫. ಕಂಡೆ ನಾ ವಿಪರೀತ ಕನಸ
ರಾಗ: ಪಂತುವರಾಳಿ

ಕಂಡೆ ನಾ ವಿಪರೀತ ಕನಸ ಪರ
ಮಂಡಲದೊಳಗೊಂದು ಮಾಣಿಕವ || ಪಲ್ಲ ||

ಮುಪ್ಪುರದೊಳಗೊಂದು ಸರ್ಪನ ಹೆಡೆಯ ಮೇಲೆ
ಒಪ್ಪವಿಟ್ಟ ಮಾಣಿಕ್ಯಪ್ರಭೆಯ
ಉಪ್ಪರಿಗೆಯ ಮೇಲೆ ಕಪ್ಪುರಕಂಬವ
ನಪ್ಪಿದ ಮಾಣಿಕ್ಯ ಜ್ಯೋತಿಯನು ||

ಬ್ರಹ್ಮಲೋಕವ ನೇರಿ, ವಿಷ್ಣುಲೋಕವ ಸಾರಿ,
ಗಮ್ಮನೆ ರುದ್ರರೀಶ್ವರ ಸೀಮೆಯ
ನೆಮ್ಮಿ ಸದಾಶಿವಲೋಕದ ಮೇಲೆ
ಬ್ರಹ್ಮದ ಸೀಮೆಯ ಬಯಲೊಳಗೆ                 || ೨ ||

ಅಂಬರ ಸರಸಿಯೊಳಂಬುಜವರಳಲು
ತುಂಬಿಯ ನಾದವನಾಲಿಸುತ
ಶಂಭು ಸದ್ಗುರು ಶಾಂತಮಲ್ಲೇಶನ ಕೂಡೆ
ಹಂಬಲಿಸುತ ಹರವರಿಯೊಳಗೆ                      || ೩ ||

. ಹೆಣ್ಣಿನ ಸಂಗದಲಿ ಮೈಮರೆದಣ್ಣ
ರಾಗ : ಮೌಳಿ

ಹೆಣ್ಣಿನ ಸಂಗದಲಿ ಮೈಮರೆದ
ಣ್ಣಗಳಿಗನುಭವವೇಕೆ ||  || ಪಲ್ಲ ||

ಸತಿಯರ ಕಾಲ್ದೆಸೆಯಲಿ ಬಿದ್ದು
ಅತಿಶಯ ಲಿಂಗಸಂಗವ ಮರೆದು
ಗತಿಗೆಟ್ಟುವರು ನಿಜದನುಭಾವ
ಸ್ಥಿತಿಯನರಿದೆವೆಂದೆಲೇಕೆ ||  || ೧ ||

ಹಿಂದು ಮುಂದನೆ ಹರಿದು ಲಿಂಗದೊ
ಳೊಂದಿ ಬೆರಸಿದನುಭಾವಿಗಳೆಂದು
ಚಂದ ಚಂದದಿ ನುಡಿದು ಮರಳಿ
ಹಿಂದ ಬಯಸಲೇಕೆ ||  || ೨ ||

ಪರಿಪೂರ್ಣ ಲಿಂಗದೊಳು ಬೆರಸಿದ
ಪರಮ ವಿರಕ್ತರು ತಾವೆಂದು
ಶರಣರೊಳಗೆ ಗಳಹಿ ತರುಣಿಯ
ರೆರಡು ಕಾಲೆಡೆಯ ಮಂಡಿಸಲೇಕೆ ||  || ೩ ||

ಕಾಮನಾಬಾಣಕಂಜಿ ಸತಿಯರ
ಕಾಲ ಕೆಗಡಗುತಿರ್ದು
ಆ ಮಹಾಘನಲಿಂಗದ ಅನುಭಾವ
ಸೀಮೆಯಾದೆವೆಂದೆನಲೇಕೆ ||  || ೪ ||

ಕನ್ನೆಯರೆರಡ ಕಾಲ ಹೆಗಲೊಳಿಟ್ಟು
ಕರ್ಣದಿ ಚರ್ಮದಂಡವನು ಕೂಡುವ
ಕನ್ನೆಜಡರು ಲಿಂಗದನುಭಾವಾ
ನಿರ್ಣಯವನರಿದೆವೆನಲೇಕೆ ||  || ೫ ||

ಶಕ್ತಿಗೆ ಭೃತ್ಯನಾಗಿ ಜಡ
ಶಕ್ತಿಯನಾತ್ಮದೊಳಗೆ ಧರಿಸಿ
ಮುಕ್ತಿದೂರರಾದ ಜಡರು ವಿ
ರಕ್ತಾನುಭವನವನುಸುರಲೇಕೆ ||  || ೬ ||

ಕರಕಮಲದೊಳಿರ್ಪ ನಿರುಪಮ
ನಿರವಯ ನಿಜಗುರುಶಾಂತನಲ್ಲಿ
ಮನವ ನಿಲಿಸಲೊಲ್ಲದೆ ಸತಿ
ಯರ ನೆನಹಿಲಿರ್ದಗನುಭವವೇಕೆ ||  || ೭ ||

. ತನು ಗುಣಂಗಳ ಹಿಂಗಿ ಮನವು
ರಾಗ : ಮಖಾರಿ

ತನುಗುಣಂಗಳ ಹಿಂಗಿ ಮನವು ಲಿಂಗದಿ ನಿಲದು
ಅನುಭಾವಿಗಳೆಂದೆನುತ ನುಡುವಿರಣ್ಣ ||  || ಪಲ್ಲ ||

ಕಾಮದಲಿ ಕಂಗೆಟ್ಟು ಕ್ರೋಧದಲಿ ಮುಂಗೆಟ್ಟು
ಆ ಮಹಾ ಮದ ಮತ್ಸರದಲಿ ಮುಳುಗೆ
ಕಾಮಿನಿಯ ಕಾಲೆಡೆಯ ಹಳ್ಳದೊಳು ಸಿಲ್ಕಿ ನಿ
ಸ್ಸೀಮ ಲಿಂಗವನೆಂತು ಅರಿವಿರಣ್ಣ ||  || ೧ ||

ಪುತ್ರ ಮಿತ್ರ ಕಳತ್ರ ಮೋಹದಲಿ ಕೂಡಿದ್ದು
ನಿತ್ಯ ಲಿಂಗಾರ್ಚನೆಗೆ ತೆರಹಿಲ್ಲದೆ
ಮತ್ತೆ ನೀವು ಲಿಂಗಾನುಭಾವಿಗಳೆಂದು ಜಡ
ಭಕ್ತರೊಳು ನುಡಿದು ಬೆಟ್ಟನೆ ಬೆರಹಿರಿ ||  || ೨ ||

ಬರಿಯ ಮಯ್ಯೊಳು ತಿರುಗಿ ಕರಪಾತ್ರೆಯಲ್ಲುಂಡು
ಉರುತರದನುಭಾವ ನಾವರಿದೆವೆಂದು
ಮರಳಿ ಸತಿಯರ ಸಂಗದಲಿ ಮೆಚ್ಚಿ ಮರುಳಾದ
ದುರಳಗರಿಗನುಭಾವವೆತ್ತಲಣ್ಣ ||  || ೩ ||

ಬಿಟ್ಟ ಮಲ ತ್ರಿವಿಧವನು ಕಚ್ಚಿ ಲಿಂಗವ ಮರೆದು
ಭ್ರಷ್ಟರುಗಳೆಲ್ಲರು ಕೇಳಿರಣ್ಣಾ
ಮರ್ತ್ಯಕ್ಕೆ ನೀವು ನಿಜಲಿಂಗಾಗಿಳ ಕೂಡೆ
ಶ್ರೇಷ್ಠಾನುಭಾವಿಗಳೆಂದೆಂಬಿರಣ್ಣ ||  || ೪ ||

ಪಾತಕಕೆ ನೆಲೆಯಪ್ಪ ಮೂತ್ರದ ಕುಳಿಯ ಕಂಡು
ದಾಟಲಾರದೆಯಲ್ಲಿ ಬಿಡಿರಣ್ಣ
ಸ್ವಾತಂತ್ರ್ಯ ಘನಲಿಂಗದನುಭಾವನನರಿಯದೆ
ಮೂತ್ರದ ಕುಳಿಯಲ್ಲಿ ಬಿದ್ದಿರಣ್ಣಾ ||  || ೫ ||

ಅಂಗನೆಯರೆರಡು ಕಾಲನು ಹೆಗಲೊಳಗೆ ಹೊತ್ತು
ಭಂಗಬಟ್ಟಾ ಕಾಲಮಧ್ಯದಲ್ಲಿ
ಹಿಂಗದನುದಿನ ಹೊರಳಿ ಉರುಳಿ ನರಳುತಲಿದ್ದು
ಲಿಂಗಾನುಭವವೆಂತರಿದಿರಣ್ಣ ||  || ೬ ||

ಸತಿಯ ದ್ವಿಕಾಲ ಮಧ್ಯದಿ ಮಂಡಿಗಾಲಿಕ್ಕಿ ಶಾ
ಶ್ವತ ಸಿದ್ಧಲಿಂಗ ಸಂಗವನು ಮರೆದು
ಮತಿಗೆಟ್ಟು ಗತಿಯ ಹೋಗಾಡಿ ಕ್ರೀಡಿಸುವಲ್ಲಿ
ಅತಿಶಯದನುಭಾವವೆಂತರಿವಿರಣ್ಣ ||  || ೭ ||

ಅಂಗಗುಣಗಳ ಬಿಟ್ಟು ಲಿಂಗದಲಿ ಮನವಿಟ್ಟು
ಕಂಗಳಲಿ ಕರುಣರಸ ಕೋಡಿವರೆದು
ಅಂಗನೆಯರಳುಪಿಂಗೆ ಮಯ್ಯೊಡ್ಡದಿರುವ ಜಡ
ಲಿಂಗಾಂಗಿಯನುಭವನರಿವೆನಣ್ಣ ||  || ೮ ||

ನಿತ್ಯಾನಿತ್ಯವ ತಿಳಿದು ಮರ್ತ್ಯದ ಸುಖವ ಮರೆದು
ಕರ್ತ ನಿಜಗುರುಶಾಂತಮಲ್ಲಯ್ಯನಾ
ಹಸ್ತದಲಿ ಧರಿಸಿ ಗಿರಿಗುಹೆಗಳೊಳು ಚರಿಸುವ ವಿ
ರಕ್ತ ಲಿಂಗಾನುಭಾವವಾರಿಗಣ್ಣ ||  || ೯ ||

. ಆರು ಕೂಡಲರಿಯರು ದೂರ
ರಾಗ: ನಾದ ರಾಮಕ್ರಿ

ಆರು ಕೂಡಲರಿಯರು ದೂರ ಹೋದವನ ಮ
ತ್ತಾರು ಕಾಣಲರಿಯವರು ಸಾರೆ ಇದ್ದವನ ||  || ಪಲ್ಲ ||

ಜಪತಪನೇಮಗಳೆಂಬ ವಿಪರೀತ ಕ್ರೀಗಳನರಿದು
ಅಪರಾಪರದೊಳಾಡುವ ಉಪಮಾತೀತವನು ||  || ೧ ||

ಕಾಲಸುನೇಮಗಳೆಂಬ ನೇಣಿನೊಳಗೆ ಸಿಕ್ಕದ ನಿರುಪಮ
ಮೇಳದೊಳಾಡುವ ಕರ್ಮವ ಜಾಳಿಸಿ ಹೋದವನ ||  || ೨ ||

ಕಟ್ಟಳೆಗೈದದ ಮಹದೊಳು ನೆಟ್ಟ ಮನ ಹಿಮ್ಮೆಟ್ಟಿದೆ
ಗಟ್ಟಿಹೊಂಡರುಹಿನೊಳು ಹುಟ್ಟುಗೆಟ್ಟಿವನಾ ||  || ೩ ||

ತಾನಿದಿರೆನ್ನದೆ ಮನದೊಳು ಧ್ಯಾನಿಸದಿಹ ಸಹಜದೊಳು
ತಾನುತಾನಾದವಿರಳ ಜ್ಞಾನಾತೀತನನು ||  || ೪ ||

ಅಜಹರಿಸುರ ಮುನಿಗಳ ಭಜನೆಗೆ ಸಿಕ್ಕಿದ ನಿರುಪಮ
ನಿಜಗುರು ಶಾಂತನೊಳೈದಿದ ಅಜಡದ್ವೈತನನೂ ||  || ೫ ||

. ಧ್ಯಾನ ಧಾರಣ ನಿಜಸಮಾಧಿಗಳೆಂಬ
ರಾಗ: ಶುದ್ಧ ಕಾಂಬೋಧಿ

ಧ್ಯಾನ ಧಾರಣ ನಿಜಸಮಾಧಿಗಳೆಂಬ ಬಗೆಯ
ಏನನೆಣಿಸದೆ ಲಿಂಗವೆ ತಾನಾದ ಶರಣ ||  || ಪಲ್ಲ ||

ಬ್ರಹ್ಮರಂಧ್ರದೆ ಸಹಸ್ರದಳ ಕರ್ಣಿಕೆಯೊಳಿಪ್ಪ ಆ
ಗಮ್ಯ ಚಿತ್ಕಳೆದೆಗೆದು ಕರಕಮಲದಲಿ ಪಿಡಿದ ||  || ೧ ||

ಧ್ಯಾನದಿಂದಾಹ್ವಾನಿಸುಜ್ಞಾನವಳಿದು
ತಾನುತಾನಾಗಿಪ್ಪ ಲಿಂಗದಿ ಮೌನಿಯಾದ ||  || ೨ ||

ಕಂಡೆ ಕಾಣೆನೆಂಬ ಖಂಡಿತಜ್ಞಾನವಳಿದು ಆ
ಖಂಡ ಪರಿಪೂರ್ಣಾತ್ಮ ಲಿಂಗಸುಸಂಗಿಯಾದ ||  || ೩ ||

ಮನದ ಮಧ್ಯದಲಿಪ್ಪ ಲಿಂಗದ ಅನುವನರಿದು
ನೆನಹು ನಿಃಪತಿಯಾಗಿ ತನುಗುಣಗಳನು ಮರೆದಾ || ೪ ||

ಒಮ್ಮೊಗೊಮ್ಮೆಗೆ ಕಟ್ಟಿ ಬಿಡುತಿಹ ಕರ್ಮವಳಿದು
ನಿರ್ಮಲಾಮೃತ ಲಿಂಗವೆ ತಾನಾದ ಶರಣ ||  || ೫ ||

ಹೃದಯ ಕಮಲದ ಮಧ್ಯದೊಳಿಗಿರುರ್ಪ ಘನದಾ
ತುದಿಯ ರೂಪನೆ ಕಂಡು ಕರಕಮಲದಲಿ ಪಿಡಿದಾ ||  || ೬ ||

ಆಗು ಹೋಗಿನ ಚೇಗೆಯಲಿ ಕಳವಳಿಪ ಮನವ
ಬೇಗ ಲಿಂಗದಿ ಬೆರಸಿ ನಿಜಸಂಯೋಗಿಯಾದ ||  || ೭ ||

ಅಡಿಗಡಿಗೆ ಅರ್ಪಿಸುವ ಭಿನ್ನದ ಜಡವನಳಿದು
ವಡಗಲಿಸಿ ಪರಿಪೂರ್ಣ ಲಿಂಗದಿ ಅಜಡನಾದಾ ||  || ೮ ||

ಲಿಂಗದೊಳು ಅರ್ಪಿಸುವ ಭಿನ್ನದ ಜಡವನಳಿದು
ಅಂಗದಿಚ್ಛೆಯನಳಿದು ನಿಜಗುರುಶಾಂತನಾದಾ ||  || ೯ ||

೧೦. ಬರಿಯ ಬ್ರಹ್ಮದ ಮಾತು ಉಸುರಿ
ರಾಗ : ಶಂಕರಾಭರಣ

ಬರಿಯ ಬ್ರಹ್ಮದ ಮಾತ ಉಸುರಿ ಜೀವರ ಕೂಡೆ
ಮೆರೆದಿಹೆನೆಂಬಾತನರಿವದೇತರದೋ ||  || ಪಲ್ಲ ||

ತನು ನಿರ್ವಾಣವ ಇದಿರಿಗೆ ಬೋಧಿಸಿ
ಮನ ವಾಗ್ವಾದವ ಕಲಿತುಕೊಂಡು
ಅನುದಿನ ಇದರಿಂದ ಒಡಲು ಹೊರೆವುತಿಹ
ಮನಹೀನಗೆಲ್ಲಿಯದೋ ಶಿವಜ್ಞಾನ ||  || ೧ ||

ಹಸಿವು ತೃಷೆಗಳಾಗೆ ಅಶನಾರ್ಥಕಾಗಿ
ಅಸುವ ಹೊರೆಯಲು ಎಲ್ಲರ ಮುಂದೆ ನಿಂದು
ದೆಸೆಗಟ್ಟು ಬಾಯಾರಿ ಹಲವ ಹಂಬಲಿಸುವ
ಪಶುಜೀವಿಗೆಲ್ಲಿಯದು ಶಿವಜ್ಞಾನ ||  || ೨ ||

ಉರುತರವಹ ಗುರುಲಿಂಗ ಜಂಗಮವ
ಪರಿಕಿಸಿ ನೋಡಿ ತಾ ತೋರಿದನೆಂದು
ನೆರಹಿ ಹತ್ತರ ಮುಂದೆ ಗಳಹಿ ಮಾತಾಡುವ
ದುರುಳ ಮನುಜರಿಗೆಲ್ಲಿಯದೋ ಶಿವಜ್ಞಾನ ||  || ೩ ||

ಎಲೆಗಳದಿಹ ವೃಕ್ಷದಂತಿಹೆನೆಂಬಂಗೆ
ತಲೆ ಹೊಲದಲಿ ಬೊಬ್ಬೆ ಉಲಿಯಲುಂಟೆ
ನೆಲೆಗೆಟ್ಟು ಶೂನ್ಯದೊಳಗೆ ಮನವಡಗದು
ಹುಲು ಪ್ರಾಣಿಗೆಲ್ಲಿಯದೊ ಶಿವಜ್ಞಾನ ||  || ೪ ||

ಅಂತರವರಿಯದೆ ಅನುಭಾವಿ ತಾನೆಂದು
ಸಂತೆಯೊಳಗೆ ಮಂತಣಗೊಂಬಂತೆ
ಎಂತರಿವರೋ ನಿಜಗುರು ಶಾಂತೇಶನ
ಶಾಂತಿತೀತೋತ್ತರೆ ಎಂದೆಂಬ ಕಲೆಯ ||  || ೫ ||
೧೧. ಲಿಂಗ ಕರಕಮಲದೊಳು ಹಿಂಗದಿರೆ
ರಾಗ : ಭೂಪಾಳಿ

ಲಿಂಗಕರಕಮಲದೊಳು ಹಿಂಗದಿರೆ ಅದ ಮರೆದು
ಕಂಗಳನು ಮುಚ್ಚಿ ಏನನರಸುತಿಹಿರಿ ||  || ಪಲ್ಲ ||

ಆದಿ ಶೂನ್ಯ ನಿರಾಳ ನಿರುಪಾಧಿಕ ಜ್ಯೋತಿ
ನಾದ ಸ್ವರೂಪನಾಗಿ ಆತ್ಮನೊಳಗೆ
ಭೇದಿಸಿರೆ ತೆಗೆದು ಗುರು ಕರಕಮಲದೊಳಗಿರಿಸಿ
ಭೇದವುಂಟೆಂದೇನನರಸತಿಹಿರಿ ||  || ೧ ||

ಷಡುಚಕ್ರದೊಳು ತೊಳಗಿ ಬೆಳಗುತಿಹ ಅಕ್ಷರದ
ನಡುವೆ ಬೀಜಾಕ್ಷರ ಸ್ವರೂಪನಾಗಿ
ಒಡನಂಗದೊಳಹೊರಗೆ ತೆರಹಿಲ್ಲದಾ ಘನದ
ಬೆಡಗನರಿಯದಲೇಕೆ ಭ್ರಮಿಸುತಿಹಿರಿ ||  || ೨ ||

ಕಂಗಳೊಳು ಬೆಳಗಾಗಿ ಮನದೊಳಗೆ ನೆನಹಾಗಿ
ಹಾಂಗೆ ಪ್ರಾಣದೊಳು ಚೈತನ್ಯವಪ್ಪ
ಲಿಂಗ ಕರಕಮಲದೊಳು ಸಂಗವಾಗಿರೆ ಮರೆದು
ಹಿಂದಿ ಮುಂದೇನುಂಟೆಂದರಸುತಿಹಿರಿ ||  || ೩ ||

ನಿತ್ಯನೇಕೋರುದ್ರನದ್ವಿತೀಯನೆಂದು ವೇ
ದೋಕ್ತ ಹೊಗಳುತ್ತಿರಲು ನಿಜಲಲಿಂಗವ
ಹಸ್ತದೊಳು ಧರಿಸಿ ಮನಭಾವದೊಳಗಚ್ಚೊತ್ತಿ
ಮತ್ತೆ ಉನ್ಮನಿಯೊಳೇಮನನರಸುತಿಹಿರಿ ||  || ೪ ||

ಹೃದಯ ಕಮಲದ ಮಧ್ಯದೊಳಗೆ ನಿಜಗುರುಶಾಂತ
ಸದಮಲಜ್ಯೋತಿ ಪ್ರಕಾಶವಾಗಿ
ಹುದುಗಿರ್ದ ಕರಕಮಲದೊಳಗೆ ಬೆಳಗುತಿರೆ
ಲಿದನರಿಯದೆ ನೀವು ಬಳಲುಹಿರಿ ||  || ೫ ||

೧೨. ಲಿಂಗಕ್ಕೆ ತನಗೆ ಭಿನ್ನಭಾಜನ
ರಾಗ : ಪಾಡಿ

ಲಿಂಗಕ್ಕೆ ತನಗೆ ಭಿನ್ನಭಾಜನ ಮಾಡಿಕೊಂಡು
ಇಂಗಡಿಸಿಕೊಂಬ ಪಾತಕ ನರನೋ ಪರಮನೋ ||  || ಪಲ್ಲ ||

ಕೊಟ್ಟು ದೇಶಿಕ ಮಹಾಲಿಂಗವನೊಲಿದು ತ
ನ್ನಿಷ್ಟ ಪ್ರಾಣವೇಕೀಕರವಾಗಬೇಕೆನುತ
ಇಷ್ಟಗಿಣ್ಣಲಲ್ಲಿ ಲಿಂಗಕ್ಕೋರಗವನಿಟ್ಟು ಮುಂದೆ
ಶ್ರೇಷ್ಠ ಭಾಜನದೆ ಕೊಂಬ ನರನು ಹುಳುಗೊಂಬನು ||  || ೧ ||

ಮಂಚ ಒಂದು ಕಂಚು ಬೇರೆಂದೆಂಬ ಪ್ರಪಂಚನೆ ಬಿಟ್ಟು
ಸಂಚಿತಾರ್ಥದಿಂದ ಬಂದಾ ಲಿಂಗವೆಂದರಿದು
ಕಿಂಚಿತ್ತಾವಾದಡೆಯು ಲಿಂಗಮುಖದೊಳಾರೋಗಿಸುವ
ವಂಚನೆ ಇಲ್ಲದೆ ಕೊಂಬ ಭಕ್ತನು ಸನ್ನಿಹಿತನು ||  || ೨ ||

ಗುರುಲಿಂಗ ಜಂಗಮವನರಿದು ಮುಂದೆ
ಪರವ ಬೆರಸಿಹೆನೆಂಬ ಶರಣರೆಲ್ಲರು
ಚರಲಿಂಗ ನಿಜಗುರುಶಾಂತೇಶನ ಚರಣವ ನೆನದು
ಬೆರೆದು ಭಿನ್ನಭಾಜನವಳಿದಡವನೆ ಸುಜ್ಞಾನಿ ||  || ೩ ||

೧೩. ಲಿಂಗದೊಳು ಪ್ರಾಣಮನಭಾವ
ರಾಗ : ತೆಲಗು ಕಾಂಬೋಧಿ

ಲಿಂಗದೊಳು ಪ್ರಾನಮನಭಾವಕರಣಾದಿಗಳು
ಸಂಗವಾಗಿರ್ದಡವನು
ಲಿಂಗವಂಗದೊಳು ಹೊರಗೆ ಪರಿಪೂರ್ಣವಾ
ದಿಂಗಿತವನರಿದಪ್ಪವನೂ ||  || ಪಲ್ಲ ||

ಗುರುಕರುಣದಿಂದ ಉನ್ಮನಿಯ ಸ್ಥಾನದೊಳಿಪ್ಪ
ಪರಮಾಮೃತಲಿಂಗವನು ಕರದೊಳಿರಿಸಿ
ವರ ಕರಸ್ಥಲದೊಳಿಪ ಪರಮಾತ್ಮವನುಂಡು
ಹರಿವರಿವ ಹಸಿವು ತೃಷೆ ನಿದ್ರೆಗಳನು
ಪರಿಹರಿಸಿಯಾ ಮಹಲಿಂಗದೊಳು ಮನಭಾವ
ಕರಣ ಹರಣಾದಿಗಳ ತೆರೆಹಿಲ್ಲದಾ
ಸ್ಫುರಿಸಿ ಬೆಳಗುವ ಮಹಾಜ್ಯೋತಿ ಪ್ರಕಾಶದೊಳು
ಪರಿಣಾಮಿಯಾಗಿಪ್ಪನವನು ||  || ೧ ||

ಅಂಗೈಯೊಳಗೆ ಇರಿಸಿ ಅರ್ಚಿಸುವ ಶಿವಲಿಂಗ
ದಂಗ ಹರಣಂ ಕರಣ ಭರಿತವಾದ
ಇಂಗಿತವನರಿದು ಆ ನಿಜಲಿಂಗದೊಳು ಮನವ
ಹಿಂಗಲೀಯದೆ ಬೆರಸಿಯೊಂದುಗೂಡಿ
ಅಂಗಸೋಂಕುವ ಸುಖವನರಿಯದ ಘನಲಿಂಗ
ಸಂಗಾಮೃತವನುಂಡು ತೃಪ್ತನಾಗಿ
ಲಿಂಗವೇಷ್ಟ ಪ್ರಾಣ ಪ್ರಾಣವೆ ಲಿಂಗವಾಗಿಯೂ
ಲಿಂಗವದೊಳಡಗಿಪ್ಪನವನೂ ||  || ೨ ||

ಅಂಗದೊಳು ಲಿಂಗ ಪರಿಪೂರ್ಣವಾಗಿಹ ಬೆಡಗ
ಅಂಗ ಸಂಗದಿ ಕಂಡು ಪರಿಣಾಮಿಸಿ
ಲಿಂಗವೆ ಪ್ರಾಣಕ್ಕೆ ಚೈತನ್ಯವೆಂದರಿದು
ಲಿಂಗದೊಳು ಮನಭಾವ ಲೀಯವಾಗಿ
ಗಂಗಾರ್ಣವದಿ ಬಿದ್ದ ವಾರಿಕಲ್ಲಿನ ತೆರದಿ
ಲಿಂಗಾಂಗವೆಂದೆಂಬೀ ಉಭಯವಳಿದು
ಮಂಗಳಾತ್ಮಕೆ ಲಿಂಗವೆ ಪ್ರಾಣವಾಗಿಯೂ
ಲಿಂಗದೊಳು ಬೆರಸಿಪ್ಪನವನೂ ||  || ೩ ||

ಒಳಹೊರಗು ಹೊರಗು ಒಳಗೆಂಬ ಭೇದವನಳಿದು
ಅಳವಟ್ಟು ನಿಂದ ನಿಜಲಿಂಗದೊಳಗೆ
ತಿಳಿತಿಳಿದು ತಿಳಿದು ಮತ್ತೇನುವಿಲ್ಲದೆ ಲಿಂಗ
ದೊಳು ಬೆರಸಿ ಮನವು ನಿಶ್ಚಿಂತನಾಗಿ
ಕಳೆ ಮೊಳಗು ಬೆಳಗು ಉನ್ಮನಿಯೊಳುಂಟೆಂದೆಂಬ
ಕಳವಳಂಗಳನಳಿದು ಕರಕಮಲದಿ
ಬೆಳಗುತಿಹ ಜ್ಯೋತಿ ಪ್ರಕಾಶ ಲಿಂಗವಭಾವ
ದೊಳಗಿರಿಸಿ ನಿಜಭರಿತನಾದವನು ||  || ೪ ||

ನಡೆಯೊಳಗೆ ನಡೆಯಾಗಿ ನುಡಿಯೊಳಗೆ ನುಡಿಯಾಗಿ
ಅಡಗಿಪ್ಪ ನಿಃಶೂನ್ಯ ಲಿಂಗ ನಿಜವ
ದೃಢವಾಗಿ ಕರಕಮಲದೊಳು ಪಿಡಿದು ಆ ಲಿಂಗ
ದೊಡಗಲಿಸಿ ಮನಭಾವಕೆ ತೆರಹಿಲ್ಲದೆ
ಕೊಡುವ ಕೊಂಬೆಡೆಯಾಡವಂ ತ್ಯಜಿಸಿ ಲಿಂಗವೆ
ಒಡಲಾಗಿ ಭಿನ್ನ ಕ್ರಿಯೆಗಳ ಮರೆದು
ಜಡಗಮನವಳಿದು ನಿಜಗುರುಶಾಂತನೊಳಡಗಿ ಆ
ಜಡನಾಗಿರುತಿರ್ಪನವನು ||  || ೫ ||

೧೪. ಲಿಂಗವೆ ಪರಮಾತ್ಮ ಪರಮ
ರಾಗ: ಧನ್ವಾಸಿ

ಲಿಂಗವೆ ಪರಮಾತ್ಮ ಪರಮ ಚೈತನ್ಯವಾ
ಲಿಂಗವೆ ಪರಕೆ ಪರವೆಂದು ಶ್ರುತಿ ಹೊಗಳುತಿರೆ
ಲಿಂಗವಂ ಕರಕಮಲದೊಳಗಿರಿಸಿಯಾ
ಲಿಂಗಸಂಗದೊಳಿಹ ಶರಣನು ||  || ಪಲ್ಲ ||

ಆತ್ಮಾಂತರಾತ್ಮ ಪರಮಾತ್ಮನೆನಿಸಿಹ ಲಿಂಗ
ವಾಕಾರವಾಗಿ ಕರಕಮಲದೊಳಗಿರಲದಂ
ಸ್ವೀಕರಿಸಿ ಮನಭಾವಕರಣ ಹರಣಾದಿಗಳು ತೆರಹಿಲ್ಲದಲಿ ನಿಂದು
ಸಾಕಾರ ನಿರ್ವಯಲು ಒಂದೆಂಬುದಂ ತಿಳಿದು
ವ್ಯಾಕುಲವನಳಿದು ಮಹಾಘನಲಿಂಗದೊಳು ತನ್ನಾಕಾರವಳಿದ ಶರಣ ||  || ೧ ||

ಆದ್ಯಂತ ಶೂನ್ಯಮಮಲಂ ಎಂಬ ಆಗಮದ
ಹಾದಿಯನುಯ ನೋಡಿ ಪರಿಪೂರ್ಣಮೇಕಂ ಎಂಬ
ನಾದಿ ಲಿಂಗವನು ಕರಕಮಲದೊಳಗಿರಿಸಿಯಾ ಲಿಂಗಸಂಗದೊಳು ಮನ
ವೇಧಿಸಾ ನಿಜಲಿಂಗಸಂಗದೊಳು ಸುಖಿಯಾಗಿ
ಭೇದಾದಿಭೇದದಿಂ ಲಿಂಗನಿಜಮುಮನರಿದು
ನಾದಸ್ವರೂಪಾದ ಲಿಂಗವಂಗದೊಳಿಪ್ಪ ಭೇದವರಿದಿಹ ಶರಣನು ||  || ೨ ||

ಲಿಂಗ ಮಧ್ಯೇ ಜಗತ್ ಸರ್ವವೆಂದಡಿಗಡಿಗೆ
ಹಿಂಗದೋದುವ ಆಗಮಂಗಳರ್ಥವ ತಿಳಿದು
ಲಿಂಗ ಬಾಹ್ಯಾತ್ಪರಂ ನಾಸ್ತಿ ಎಂದರಿದು ಶಿವಲಿಂಗಮಂ ಕರದೊಳಿರಿಸಿ
ಲಿಂಗ ಸೂತಾತ್ಮನೋರಪಿ ಎಂದುದಾ ಲಿಂಗ
ಸಂಗದೊಳು ಕರಣಾದಿ ಗುಣಗಳೆಲ್ಲವ ನಿಲಿಸಿ
ಮಂಗಳಾತ್ಮಕ ಲಿಂಗದೊಳು ದೃಷ್ಟಿ ನಟ್ಟು ನಿಜಲಿಂಗವಾಗಿಹ ಶರಣನು ||  || ೩ ||

ವಿದಿತ ತವ ಹಸ್ತಾಂಬುದ ಪೀಠಮಧ್ಯೆ ಎಂ
ದೊದರುತಿಹ ಶ್ರುತ್ಯಾರ್ಥಮಂ ನೋಡಿ ನಲಿವುತಂ
ಸದನಿಧಾಯ ಲಿಂಗಪರಮಾತ್ಮ ಚಿನ್ನೆಂಬ ಲಿಂಗಮಂ ಕರದೊಳಿರಿಸಿ
ಹೃದಯ ಕಮಲದಿ ಅಷ್ಟದಳದ ಮಧ್ಯದೊಳಿಪ್ಪ
ಸದಮಲಜ್ಯೋತಿಪ್ರಕಾಶ ಲಿಂಗಮಿದೆಂದು
ಮುದವಲರಿ ಪ್ರಣಮಂ ಆ ಲಿಂಗ ಮಧ್ಯದೊಳು ಹುದುಗಬಲ್ಲನು ಶರಣನು ||  || ೪ ||

ಬ್ರಹ್ಮರಂಧ್ರದ ಸಹಸ್ರದಳದ ಮಧ್ಯದೊಳಿರ್ಪ
ನಿರ್ಮಳದ ಜ್ಯೋಯಿರಾಕಾರವಮೃತವ ಕಂಡು
ಸುಮ್ಮಾನದಿಂದದನೆ ತೆಗೆತಂದು ಕರಕಮಲದೊಳಗೆ ಇರಿಸಿ ಸುಜ್ಞಾನಭಾವ
ನೆಮ್ಮಿ ಈ ನಿಜಲಿಂಗಸಂಗದೊಳು ಸುಖಿಯಾಗಿ
ನಮ್ಮ ನಿಜಗುರುಶಾಂತನೆಂಬಮೃತ ತೃಪ್ತಿಯೊಳು ಕರ್ಮಗಳಳಿದ ಶರಣ ||  || ೫ ||

೧೫. ಲಿಂಗ ಸುಸಂಗವನು ಲಿಂಗ
ರಾಗ : ವಸಂತ ಭೈರವಿ

ಲಿಂಗ ಸುಸಂಗವನು ಲಿಂಗದೊಳೊಡಗೂಡಿದ ಲಿಂಗೈಕ್ಯವ ||  || ಪಲ್ಲ ||

ಪರವೆಂದನಿಪ ಲಿಂಗದ ಪರಮ ಕಳೆಯಾ
ಗುರು ಕರಸ್ಥಲದೊಳಗಿರಿಸಲು
ಅದರೊಳಗೆ ಮನ ಬೆರಸಿ ಘನನಗಂಭೀರನಾಗಿಹ ಲಿಂಗಿ ಬಲ್ಲ ||  || ೧ ||

ಹೃದಯಕಮಲದ ಅಂತರ್ನಾಳ ಏಕಪಟದೊಳಗೆ ಬೆಳಗುವ
ಸದಮಲ ಮಹಾಜ್ಞಾನಲಿಂಗವ
ಪುದುಗಿ ಕರಕಮಲದಲ್ಲಿ ಧರಿಸಿದ ಲಿಂಗಿ ಬಲ್ಲ ||  || ೨ ||

ಕಂಗಳೊಳು ತುಂಬಿಪ್ಪ ನಿಜವ ನಿರಂಗ ನಿರುಪಮ ನಿರವಯ ಪ್ರಭೆ
ಇಂಗಿತವನರಿದವನು ಕರದೊಳು
ಸಂಗವ ಮಾಡಿ ಅಲಂಗಿಸುವ ಲಿಂಗೈಕ್ಯ ಬಲ್ಲ ||  || ೩ ||

ನಾಸಿಕದ ಕೊನೆಯ ಸೌರಭವಾಸದೊಳಗಿರುತಿರ್ಪ ಲಿಂಗವ
ರೂಪು ಮಾಡಿಯೇ ಕರಕಮಲದೊಳು ಸ್ಥಾ
ಪಿಸಿದವರೊಳು ದೃಷ್ಟಿ ನೆಟ್ಟ ಮಹಂತ ಬಲ್ಲ ||  || ೪ ||

ಚಕ್ರವಳಯದೊಳು ಬೆಳಗುವ ಲಕ್ಷಣ ಅಕ್ಷಯ ಅಕ್ಷಂರಗಳ
ಅಕ್ಞರಾತ್ಮಕ ಲಿಂಗವನು
ಮನಮೆಚ್ಚಿ ಕರಕಮಲದಲ್ಲಿ ಧರಿಸಿದ ಲಿಂಗಿ ಬಲ್ಲ ||  || ೫ ||

ಆದಿ ಮಧ್ಯಾಂತವಿಲ್ಲದ ನಾದ ಕಳಾತ್ಮಕ ಲಿಂಗವ
ಸಾಧ್ಯ ಮಾಡಿಯೇ ಕರಕಮಲದೊಳು
ವೇಧಿಸದರೊಳು ಮೂಡಿ ಮುಳುಗುವ ಲಿಂಗಿ ಬಲ್ಲ ||  || ೬ ||

ಬ್ರಹ್ಮ ರಂಧ್ರದೊಳಗೆ ಬೆಳಗುವ ನಿರ್ಮಳಾಮೃತ ಜ್ಯೋತಿರ್ಲಿಂಗದ
ವರ್ಮವೆಲ್ಲವ ತಿಳಿದು ಮನದೊಳು
ನೆಮ್ಮಿ ಕರಕಮಲದೊಳು ಧರಿಸಿದ ಲಿಂಗಿ ಬಲ್ಲ ||  || ೭ ||

ಹಸಿವು ತೃಷೆ ನಿದ್ರೆಗಳೆಲ್ಲವ ದೆಸೆಗೆಡಿಸಿ ಘನದೊ
ಳೊಸರಿದಮೃತವನುಂಡು ಮನದಲ್ಲಿ
ಅಸಮ ತೃಪ್ತಿಯನಯದಿ ಚರಿಸುವ ಲಿಂಗಿ ಬಲ್ಲ ||  || ೮ ||

ಅತ್ತಲಿತ್ತಲಿ ಸುಳಿದು ಸೂಸುವ ಚಿತ್ತಮನಭಾವಂಗಳೆಲ್ಲ
ಕರ್ತೃ ನಿಜಗುರುಶಾಂತನೊಳ
ಚ್ಚೊತ್ತಿ ಪರಮಾನಂದದೊಳಗಿಹ ಲಿಂಗಿ ಬಲ್ಲ ||  || ೯ ||

೧೬. ಹಿಂಗದೆ ಮನೋಭಾವ ಬಲಿದು
ರಾಗ : ಆಹರಿ

ಹಿಂಗದೆ ಮನೋಭಾವ ಬಲಿದು ಲಿಂಗವು ತನ
ಗಂಗವಾರಿಬಲ್ಲಡೆ ಶರಣಾ ||  || ಪಲ್ಲ ||

ಪಿಡಿದ ಕುರುಹು ತನ್ನೊಳು ತಾನೆ ನೋಡಿ
ಬಿಡದೆ ನಿಶ್ಚೈಸಿ ಕೀಟಂ ನ್ಯಾಯದಿ
ತಡೆಯದೆ ನೆನಹು ಮುಟ್ಟಿ ಲಿಂಗವು ತನ
ಗೊಡಲಾಗಿರಬಲ್ಲಡೆ ಶರಣಾ ||  || ೧ ||

ಕುಟಿಲ ಗುಣವಳಿದು ಸಹಜ ಸದ್ಭಾವದಿ
ಘಟಿಸಿ ಮುತ್ತಿನೊಳರತ ವಾರಿಯಂತೆ
ಸ್ಫಟಿಕದ ನಿಜತೇಜದಂತೆ ಲಿಂಗದಿ ಮನ
ದಿಟನೆಲೆಗೊಂಡು ನಿಂದಡೆ ಶರಣಾ ||  || ೨ ||

ಹಲವು ಕಡೆಗೆ ಹರಿವ ಕರಣ ಸಂತತಿಯನು
ನಿಲಿಸಿ ಒಂದೆ ನೆಲೆಯಲಿ ತೆಗೆದು
ಜಲದೊಳು ಲವಣವು ಬೆರೆದಂತೆ ಲಿಂಗದೊಳು
ಸಲೆ ತನ್ನನರಿದು ನಿಂದಡೆ ಶರಣಾ ||  || ೩ ||

ವ್ಯಾಪಕತ್ವಾದುಪಾಧಿಯನಳಿದು ಸಹಜದಿಂ
ದೀಪ ದೀಪವಕೂಡಿದ ತೆರದಿ
ಆ ಪರಮ ಪ್ರಭೆಯೊಳಗಂಗ ಲಿಂಗದ
ರೂಪೆರಡಳಿದು ನಿಂದಡೆ ಶರಣಾ ||  || ೪ ||

ಅಜಹರಿ ಪದವನೊದೆದು ಸದಾನಂದದಿ
ಅಜಡ ಗುಣವನಂಗಂಗೊಂಡು
ನಿಜಗುರುಶಾಂತೇಶನ ಶರಣರೊಳು
ಭಜನೆಯಳಿದು ನಿಂದಡೆ ಶರಣಾ ||  || ೫ ||

೧೭. ತಾನಾರೆಂಬುದನರಿದಯದೆ
ರಾಗ : ನಾಟಿ

ತಾನಾರೆಂಬುದನರಿಯದೆ ನಾನಾ ಪರಿಯಲಿ ಜಪ ತಪ
ಧ್ಯಾನ ಮೌನ ವ್ರತದಾಯತ ಹೀನವಳಿಯಲು ಸಹಜವಿವು ದಿಟ ||  || ಪಲ್ಲ ||

ನೆನಹೆ ಮಹಾಘನವೆಂಬುದನರಿಯದೆ
ನೆನಹ ನೆನಹಿಸಿಕೊಂಬುಭಯದಾ
ನೆನಹನಾರೈದು ನಿರೀಕ್ಷಿಸಿ ಅನುವೆ
ಘನವಾಗಿರುತಿಹನೆಲ್ಲವನದಳಿದನುಪಮ
ಅನಘದ್ವಯನನುಪಮ ತಾನೆ ತಾನಹ
ತಾನೆ ಅಡಗಿ ವಿಚಾರಿಪ ಎಣಿಕೆಯರತವೆ ಸಹಜವು ದಿಟ ||  || ೧ ||

ಅಹುದೆನ್ನದೆ ಅಲ್ಲ ಎನ್ನದೆ ಇಹುದೆನ್ನದೆ ಇಲ್ಲಾ ಎನ್ನದೆ
ಬಹುದೆನ್ನದೆ ಬಾರದೆಂಬಂತೆ ಬಹಳ ಭಾವವನಳಿದು
ಇಹದೊಂದನೆ ತಿಳಿದು ವಿಚಾರಿಸಿ
ಮಹದಂಗವ ಮಾತಿಗೆ ತಾರದೆ
ಸಹಜಾಂಗವು ಜ್ಞಾನಾನಲನಿಂ
ದಹನವಾದಡೆ ಸಹಜವು ದಿಟ ||  || ೨ ||

ಲಕ್ಷಾಲಕ್ಷಗಳೆಂಬುಭಯವ ಲಕ್ಷವವನುರೆ ಲಕ್ಷಿಸಿ
ಲಕ್ಷಾಲಕ್ಷನು ಲಕ್ಷಿಸಿ ಲಕ್ಷವಲಕ್ಷವಂ ಲಕ್ಷಿಸುತಿಹ ನಿ
ರ್ಲಕ್ಷಾ ಲಕ್ಷಣ ಮಹವನೀಕ್ಷಿಸಿ
ನಿಜಗುರು ಶಾಂತೇಶ್ವರನಲ್ಲಿ ಸಾಕ್ಷಾತನಾದ ಸು
ಮೋಕ್ಷದ ಅಪೇಕ್ಷೆ ಎಲ್ಲವನಳಿದನುಪಮ
ಸುಕ್ಷೇಮದೊಳಿರೆ ಸಹಜವು ದಿಟ ||  || ೩ ||

೧೮. ಬಂದನೆನ್ನ ಕರಾಂಬುಜಕೆ
ರಾಗ: ಮಂಗಳ ಕೌಶಿ

ಬಂದನೆನ್ನ ಕರಾಂಬುಜಕೆ ಕೃಪಾನಂದರಸ
ಸಿಂಧು ಬಾಲೇಂದುಧರನು ||  || ಪಲ್ಲ ||

ತೃಷೆಯಡಸಿದಂಗ[ಕ]ಮೃತದಗಡಲೂ
ನಸಿದು ತುಜೆಯಿಂ ನೊಂದವಂಗಮೃತಹಸ್ತನಹ
ಕುಶಲನು ವೈದ್ಯನು ಬಂದ ತೆರದಿ
ಹೊಸ ಯೌವ್ವನಾವಸ್ಥೆಯಾಗಿಹ ನಲ್ಲಳಿಗೆ ಕಲಾ
ರಸಿಕನಹ ಪುರುಷ ಬಂದಂತೆ
ಹಸಗೆಟ್ಟು ದಾರಿದ್ರ ವಶನಾದವಗೆ ಸಿದ್ಧ
ರಸವದಗಿದಂತೆ ಮಹಾಲಿಂಗವಿದು ||  || ೧ ||

ಮುಪ್ಪಡಿಸಿ ಮೃತವನೆಯಿದುವಗೆ ಸಂಜೀವಿನಿಯೆ
ನಿಪ್ಪ ಮಂತ್ರವು ದೊರಕಿದಂತೆ
ಒಪ್ಪಿನ x x x x x x ಪದ ಜಾತ್ಯಂಧ
ನಪ್ಪವಗೆ ಕಂಗಳೊಗೆದಂತೆ
ತಪ್ಪಿ ನೆಲಗಾಣದಳಲುತಿಪ್ಪ ಶಿಶುವಿಗೆ ಹಿತವೆ
ಯಪ್ಪ ತಾಯೊದಗಿ ಬಂದಂತೆ
ಒಪ್ಪಿ ಒಡಗೂಡಿ ಸರ್ವಾಂಗದೊಳಹೊರಗಗಲದಿರ್ಪ
ಸಂಪರ್ಕಹರ ಪ್ರಹರನೊಲಿದು ||  || ೨ ||

ನಂದೀಶ ಮದ್ದಳೆಯ ನುಡಿಸೆ ಕಮಲಾಕ್ಷನೊಲ
ವಿಂದವಾವುಜವ ಧ್ವನಿಮಾಡೆ
ಚಂದದಿಂ ಬ್ರಹ್ಮ ತಾಳವನೊತ್ತುಗ್ಫಡೆಸೆ
ಗಂಧರ್ವರುಗಳೊಲಿದು ಪಾಡೆ
ಸ್ಕಂದ ಭೃಂಗಿ ವೀರೇಶ ಮೊದಲಾದ ಪ್ರಮ
ಥೇಂದ್ರರೊಡಗೂಡಿ ನಲಿದಾಡೆ
ಬಂದ ನಿಜಗುರುಶಾಂತ ಕರಕಮಲಕ್ಕೆ
ನಿಂದ ಬಲ್ಲಿದರುಂಟೆ ತ್ರೈಜಗದೊಳು ||  || ೩ ||

೧೯. ಬರಿಯ ಬೊಮ್ಮದ ಮಾತು
ರಾಗ : ಸೌರಾಷ್ಟ್ರ

ಬರಿಯ ಬೊಮ್ಮದ ಮಾತು ಕೇಡು
ಗುರುಕರುಣವ ಪಡೆದಂತರಂಗವ ನೋಡು ||  || ಪಲ್ಲ ||

ವಾಯಮನವನೊಂದು ಮಾಡು | ನಿನ್ನ
ಕಾಯವಿಡಿದು ಪರಮಾತ್ಮನ ಕೂಡು
ಮಾಯಾಪಾಶವ ಹೋಗಲಾಡು | ನಿನ
ಗಾಯಸವಲ್ಲಿಲ್ಲ ಇಲ್ಲಿದೆ ನೋಡು ||  || ೧ ||

ದಳನಾಲ್ಕರೊಳು ಚಲ್ಲವಾಡು | ಮೇಲೆ
ದಳವಾರರೊಳು ಪೊಕ್ಕು ಆನಂದವಾಡು
ಒಳಗೆ ವೇಧಿಸೆ ಮೇಲೆ ನೋಡು | ಮುಂದೆ
ತಿಳಗೊಳನುಂಟಲ್ಲಿ ನೀ ಮುಳುಗಾಡು ||  || ೨ ||

ಬ್ರಹ್ಮನಾಳವ ಹೊಕ್ಕು ನೋಡು | ಪರ
ಬ್ರಹ್ಮ ಮಂಟಪದೊಳಗಾನಂದವಾಡು
ಧರ್ಮಗುರವನೊಮ್ಮೆ ಪಾಡು | ನಮ್ಮ
ನಿರ್ಮಳ ನಿಜಗುರು ಶಾಂತನ ಕೂಡು ||  || ೩ ||

೨೦. ಬ್ರಹ್ಮಾಂಡ ಗರ್ಭಿತನೆ ಜೋ ಜೋ

ಬ್ರಹ್ಮಾಂಡ ಗರ್ಭಿತನೆ ಜೋ ಜೋ
ಅಖಿಲ ತತ್ವಾಲಯ ಸ್ಥಾನಿಕನೆ ಜೋ ಜೋ ||  || ಪಲ್ಲ ||

ನಿನ್ನ ಮಹಾನಂದವೇ ಗರ್ಭವಾಗಿ
ಅನುಪಮ ಚಿಚ್ಛಕ್ತಿ ಪುಟ್ಟಿದಳು
ತನ್ನಿಂದ ತತ್ವ ಜಗಜಾಲಂಗಳುದ್ಭವವೆಂದು
ನಿನ್ನಾದಿಯಂ ನೆನೆವುತ ಪಾಡಿದಳು ||  || ೧ ||

ಇಚ್ಛಾ ಜ್ಞಾನ ಕ್ರಿಯಾ ಶಕ್ತಿಯರು
ಸ್ವಚ್ಛಾನಂದಾನುಭವ ಸುಖದಿಂದ
ಅಚ್ಚಳಿಯದ ನಿರುಪಮಧ್ವಯನೆಂದು
ನಿಶ್ಚಲ ಬ್ರಹ್ಮನ ಪಾಡಿದಳು ||  || ೨ ||

ಬ್ರಹ್ಮವಿಷ್ಣು ರುದ್ರ ಈಶ್ವರರೆಂಬೀ
ನಿರ್ಮಲ ತತ್ವ ಸದಾಶಿವಾತ್ಮಗೂಡಿ
ಬ್ರಹ್ಮಪಂಚಕ ಶಕ್ತಿಯರುಗಳೆರಗುವ
ಗಮ್ಯಶಕ್ತಿಯ ಮತ್ಕತೀತನೇ ಜೋ ಜೋ ||  || ೩ ||

ಅರಿವೆಂಬ ಮನೆಯೊಳು ನಿರ್ವಕಾರನಾಗಿ
ನಿಜ ನಿಶ್ಚಿಂತವೆಂಬ ತೊಟ್ಟಿಲಿರಿಸಿ
ಮರದರಿದುಭಯವಳಿದು ಮುಕ್ತಾಂಗನೆಯ
ಕುರುಹಿಲ್ಲದ ನಿರುಪಮನ ತೂಗಿದಳು ||  || ೪ ||

ಉಪಮೆನಿಂದು ಜಗವ ಸೃಷ್ಟಿಸಲೆಂದು
ಜಪಕುಸುಮದ ಸ್ಪಟಿಕ ನ್ಯಾಯದಲಿ
ಅಪರಿಮಿತನು ನೀನು ಜಗವ ಹೊದ್ದಿಯು ಹೊದ್ದದ
ವಿಪರೀತ ಚರಿತನೆಂದು ಪಾಡಿದಳು ||  || ೫ ||

ಜೋ ಪರಿಪೂರ್ಣ ಜ್ಞಾನಿಗಳ ಹೃದಯದಲಿ
ಜೋ ಪರಮಾನಂದರ ಹೃದಯದಲಿ
ಜೋ ಪರಿಭವವಳಿದರ ಹೃದಯದಲಿ
ಜೋ ಪರಿಬೊಮ್ಮನೆಂದು ಪಾಡಿದಳು ||  || ೬ ||

ಶಬ್ದವೆನಲು ಆಕಾಶದ ಬಯಲು ನಿಃ
ಶಬ್ದವೆನಲು ಆಕಾಶದಗ್ಗದ ಘಟ್ಟಿ
ಶಬ್ದ ನಿಃಶಬ್ದವ ಹೊದ್ದಿಯು ಹೊದ್ದದ ನಿಜಗುರು
ಮುಗ್ಧ ಶಾಂತಮಲ್ಲಯೆಂದು ಪಾಡಿದಳು ||  || ೭ ||