ಇಂದ್ರ ಚಂದ್ರನಿಂದ ಸರಸಿಜಸ್ಕಂದ ಮೊದಲಾದ ರೂಪೇಂದ್ರರು
ಸಿಂಧುನಂದ ಮುನೀಂದ್ರ ನಿರ್ಜರರು ವೃಂದವೈದ್ಯಗಣೇಂದ್ರರು
ಚಂದಚಂದದ ರುದ್ರ ಪ್ರಮಥರು ಕುಂದದೋಲೈಸಿಕೊಂಡಿಹ
ಸಾಂದ್ರ ಮೂರು[1]ತಿ1ಘಣೀಂದ್ರ ಕಂಕಣ ಚಂದ್ರಮೌಳಿಯನರ್ಚಿಪೆ ||  || ೧ ||

ಗಂಗೆ ತುಂಗೆ ಸಮಸ್ತ ನದಿಗಳ ಪುಂಗವನು ಪಡೆದ ಗಂಗೆಯ
ಅಂಗ ಸೋಂಕಲು ಸರ್ವರೋಗವ ಹಿಂಗಿಸುವ ಪಾವನಾಂಗಿಯ
ಹಿಂಗದೆಲ್ಲವ ಜಗವ ಪಾಲಿಸುವ ಕರುಣಕೃಪಾಂಗಿಯ
ಹೊಂಗಿ ಹೊಗಳುತ ಲಿಂಗದೇವನಿಗೆ ತಂದು ಮಜ್ಜನಗೈದಪೆ ||  || ೨ ||

ಅಗರು ಕುಂಕುಮ ಚಂದನ [2]ಪಚ್ಚೆ2 ಮೊಲ್ಲೆ ಬಾವನ್ನದಾ
ಮೃಗನಾಭಿ ಜ[3]ವಾ3 ದಿಯಿಂದವೆ ಸಾದು ಪನ್ನೀರಿಂದಲಿ
ಅಗಲದೆಲ್ಲವ ಕೂಡಿ ಮರ್ದಿಸಿ ಸೊಗಸೆನಿಸುವ ಸುಗಂಧಮಂ
ನೆಗವ [4]ಪುಳಕದಿಂ4ದವೆ ಅಂಗಜೆಯರಸನಿಗರ್ಚಿಪೆ ||  || ೩ ||

ವಜ್ರ ಶಂಖದ ತಿಳುಪು ನುಣುಪಿನ ಶುದ್ಧ ಸ್ಫಟಿಕ ಸುವರ್ಣದ
ಅಬ್ಜವೈರಿಯ ಬಣ್ಣ ಮುತ್ತಿನ ಮಿಣ್ಣು ತಾರೆಯ ಬಿಳ್ವಿನ
ಪ್ರಜ್ವಲಿಸುತಿಹ ಶುಭ್ರತಂಡುಲ ಅಕ್ಷತೆಯನಿಡಲೀಶಗೆ
ನಿರ್ಜರದ ನಿಭಕ್ತಿಯಿಂದವೆಸದ್ಯೋಜಾತನಿಗರ್ಚಿಪೆ ||  || ೪ ||

ಅಳಿಗಳೆಲ್ಲವ ತುಳಿದು ಚುಂಬಿಸಿ ಬಳಸಿ ಬಿಟ್ಟರಳಲ್ಲದೆ
ನಳಿನ ನೇತ್ರನ ಕಿರಣ ಸೋಂ[5]ಕಿ5 ಕಳಲಿಕುಂದಿದುದಲ್ಲದೆ
ಸುಳಿವ ಪಾವನಗೆ ಕಂಪಸೂಸುವ ಕಳೆಬಲು ನನೆಯಲ್ಲದೆ
ಇಳೆಯೊಳುಳ್ಳ ಸುಗಂಧ ಪುಷ್ಪವ ನಳಿನಸಖಧರಗರ್ಚಿಪೆ ||  || ೫ ||

ಜಾಲುಗುಗ್ಗಳ ಹಾಲು ಮಡ್ಡಿಯು ಮಿರುಗುತಿಪ್ಪ ಲೋಬಾನಮಂ
ಮೇಲೆನಿಪ ಸಾಂಬ್ರಾಣಿ ಸೌರಭ ಜಾಲುಗುಗ್ಗಳ ದಶಕೂಟಮಂ
ಲೀಲೆಯಿಂದಲಿ ಕೂಡಿ ಕೆಂಡದ ಮೇಲೆ ನೀಡಲು ಧೂಪಮಂ
ಸಾಲಿಡಲು ನರುಗುಂಪಿನಿಂಪಿನ ಶೂಲ ಪಾಣಿಯನರ್ಚಿಪೆ ||  || ೬ ||

ಸಪ್ಪೆ ಕರ್ಪುರ ದೀಪ ತೈಲವ ಕೂಡಿ ಕರ್ಪುರದಾರ್ತಿಯ
ಒಪ್ಪುತಿಪ್ಪ ರತ್ನಪ್ರಣತಿಯೊಳಿಟ್ಟು ಮುಟ್ಟಿಸಲಗ್ನಿಯ
ಸರ್ಪವೈರಿಯ ಮಿತ್ರ ಪ್ರಭೆಗಳಿಗುಪ್ಪರಿಸುತಿಹ ಜ್ಯೋತಿಯ
ಅಪ್ರತಿಮಹಾನಂದ ಲಿಂಗಕೆ ತುಪ್ಪದಾರುತಿಯನೆತ್ತುವೆ ||  || ೭ ||

ಕ್ಷೀರವಾರುಧಿ ಬಿಳಿಗಲ್ಲಕೆ ಮೀರುತಿರ್ಪ ದೇವಾನ್ನಮಂ
ಮೇರೆದಪ್ಪದೆ ಕಂಪಿನಿಂಪಿನ ಸಾರಘೃತ ಕಜ್ಜಾಯಮಂ
ಕಾರಲೇತೊಗಲಾಂಬ ಮಧುರಸ ಮೇಳ ವಾರುಧಿಶಾಕಮಂ
ಸಾರ ಷಡುತಸ ಭಕ್ಷಭೋಜ್ಯವ ಕಾರುಣ್ಯಕರಗರ್ಚಿಪೆ ||  || ೮ ||

ಪೂಗಫಲದೊಳಗಾದ ಪನ್ನೀರನಾದೊಡದ ಕಸ್ತೂರಿಯ
ಬಾಗೆಯೊಳ್ಪಡೆಯೆತ್ತಿ ಕರ್ಪುರಯೋಗ ಕೂಡಿದ ಚೂರ್ಣಮಂ
ನಾಗವಳ್ಳಿ ಬಿಳಿಯವನನುವಾಗಿ ಶೋಧಿಸಿದ ಭಕ್ತಿಯಿಂ
ಲಾಗೆನಿಪ ವಸ್ತ್ರ ತಾಂಬೂಲವ ನಾಗಭೂಷಣನಿಗೆತ್ತುವೆ ||  || ೯ ||

ಭಾವಿಪೊಡೆ ಕ[6]ರ6ಣಾದಿ ಗುಣಂಗಳ ಗಾವುಳಿಯನೆಲ್ಲ ನಿಲಿಸಿ
ಆವರಿಪ ಸರ್ವಪ್ರಪಂಚವ ನೀಗಿ ನಿಶ್ಚಲದಿಂದಲಿ
ಈವುತಷ್ಟವಿಧಾರ್ಚನೆಗಳಿಂದ ನಾನಾವಿಧ ದಶಭಕ್ತಿಯಿಂ
ತೀವಿ ಶಾಂತಮಲ್ಲೇಶನಾಂಘ್ರಿಯ ನಾನಾವಿಧದೊಳಗರ್ಚಿಪೆ ||  || ೧೦ ||

ಶಂಭು ಶಾಂತನ ಲಿಂಗಪೂಜೆಗೆ ಸಂಭ್ರಮದ ಮಲ್ಲಕಾಮಾಲೆ
ಎಂಬೊ ಪುಣ್ಕದಂಬ ವೃತ್ತವ ಕುಂಭಿನಿಯೊಳಾವನಾದಡಂ
ಇಂಬರಿದು ಬರೆದೋದಿ ಲಾಲಿಸಿ ಸಂಭ್ರಮದಿ ಪಾಠಂಗೆಯ್ಯಲು
ಅಂಬಿಕಾತ್ರಯನೀವನವರಿಗೆ ಜಂಬರಾರಿಯ ಭೋಗವಂ ||  || ೧೧ ||

ಕರಸ್ಥಲ ವೀರಣ್ಣೊಡೆಯ ದೇವರ ಅಷ್ಟವಿಧಾರ್ಚನ ಸಪಾಪ್ತ
ಸಮಾಪ್ತ ಮಂಗಳ ಮಹಾ ಶ್ರೀ ಶ್ರೀ ||

 

[1] ರ್ತ್ರಿ (ಮೂ)

[2] ಅಗರು (ಮೂ)

[3] ವ್ವಾ (ಮೂ)

[4] ದೂರ್ಖಿ (ಮೂ)

[5] ರು (ಮೂ)

[6] ರು (ಮೂ)