ಕರಸ್ಥಲ ನಾಗಿದೇವ

ವೀರಣ್ಣೊಡೆಯನ ಶಿಷ್ಯನಾದ ಈತ ನೂರೊಂದು ವಿರಕ್ತರಲ್ಲಿ ಆದ್ಯನೆನಿಸಿದ್ದಾನೆ. ಮೂಲತಃ ಅಕ್ಕಸಾಲಿಗನಾದ ನಾಗಿದೇವ ಒಬ್ಬ ಮಹಾ ಅನುಭಾವಿಯಾಗಿ ವೀರಶೈವ ಸಾಹಿತ್ಯ ಚರಿತ್ರೆಯಲ್ಲಿ ತನ್ನ ಹೆಸರನ್ನು ಸ್ಥಿರಗೊಳಿಸಿದ್ದಾನೆ.ಈತನ ಜೀವನ ಚರಿತ್ರೆಯು ಮೋದಿಯು ರುದ್ರನ ನೂರೊಂದು ವಿರಕ್ತರ ಕಾವ್ಯ, ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ, ರುದ್ರನ ಕರಸ್ಥಲ ನಾಗಲಿಂಗನ ಚರಿತ್ರೆ ಮೊದಲಾದ ಕಾವ್ಯ, ಪುರಾಣಗಲಿಂದ ತಿಳಿದು ಬರುತ್ತದೆ. ಈತನೂ ಶ್ರೀರಂಗಪಟ್ಟಣದ ಸಮೀಪವಿರುವ ಬೊಮ್ಮೂರು ಗ್ರಾಮದವನು. ಮೈಸೂರು ಜಿಲ್ಲೆಯ ಗುಂಡ್ಲಪೇಟೆ ತಾಲೂಕಿನಲ್ಲಿ ಕರಸ್ಥಲ ನಾಗಿದೇವನ ಬೆಟ್ಟವಿದ್ದು ಅಲ್ಲಿ ಆತನ ಹೆಸರಿನ ಒಂದು ಗುಹೆಯೂ ಇದೆ. ಭಕ್ತಾದಿಗಳು ಇಂದಿಗೂ ಅಲ್ಲಿಗೆ ನಡೆದುಕೊಳ್ಳುತ್ತಾರೆ.

ನಾಗಿದೇವನು ಸರಿಸುಮಾರು ಕ್ರಿ ಶ. ೧೪೩೦ರಲ್ಲಿದ್ದನೆಂದು ಹೇಳಬಹುದು. ಇದಕ್ಕೆ ಶಾಸನ, ಕಾವ್ಯಗಳಲ್ಲಿ ನಮಗೆ ಉಲ್ಲೇಖಗಳು ದೊರಕುತ್ತವೆ. ಕ್ರಿ.ಶ. ೧೪೭೪ರ ಗುಮ್ಮಾಳ ಪುರದ ಶಾಸನವೊಂದರಲ್ಲಿ ನಾಗಿದೇವನ ಹೆಸರು ಉಲ್ಲೇಖಗೊಂಡಿದೆ.[1] ಆದುದರಿಂದ ಈತ ೧೪೭೪ಕ್ಕಿಂತ ಹಿಂದಿನವನೆಂಬುದು ಸ್ಪಷ್ಟವಾಗುತ್ತದೆ. ಹಾಗೆಯೇ ಅನಂತರ ಬಂದ ಚೆನ್ನವೀರಜಂಗಮದೇವನ ಷಟ್ಸ್ಥಲ ವಲ್ಲಭ (೧೫೦೦), ಅದೃಶ್ಯ ಕವಿಯ ಪ್ರೌಢರಾಯನ ಕಾವ್ಯ (೧೫೮೦), ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ (೧೫೮೪), ಕಂಬಾಳ ಮಲ್ಲೇಶನ ಗಣವಚನ ರತ್ನಾವಳಿ (೧೬೦೦), ಸಿದ್ಧನಂಜೇಶನ ರಾಘವಾಂಕ ಚಾರಿತ್ರ, ಗುರುರಾಜ ಚಾರಿತ್ರ (೧೬೫೦), ರುದ್ರಕವಿಯ ಕರಸ್ಥಲ ನಾಗಲಿಂಗನ ಚರಿತ್ರೆ (೧೬೫೦), ಮೋದಿರುದ್ರನ ನೂರೊಂದು ವಿರಕ್ತರ ಕಾವ್ಯ (೧೭೩೭) ಮುಂತಾದ ಕಾವ್ಯಗಳಲ್ಲಿ ಕರಸ್ಥಲ ನಾಗಿದೇವನ ಚರಿತ್ರೆ ನಿರೂಪಿತಗೊಂಡಿದೆ. ರುದ್ರಕವಿಯಂತೂ ಈತನನ್ನು ಕುರಿತು ಸ್ವತಂತ್ರವಾದ ಕೃತಿಯೊಂದನ್ನು ರಚಿಸಿರುವುದನ್ನು ನೋಡಿದರೆ, ನಾಗಿದೇವನು ಆ ಕಾಲದಲ್ಲಿ ತುಂಬ ಮಹತ್ವದ ವ್ಯಕ್ತಿಯಾಗಿದ್ದನೆಂದು ಹೇಳಬಹುದು. ಡಾ. ಆರ್.ಸಿ. ಹಿರೇಮಠ ಅವರು ಹೇಳುವಂತೆ “ಪ್ರೌಢರಾಯನ ಕಾವ್ಯದಲ್ಲಿ ಉಕ್ತರಾದ ಕರಸ್ಥಲ ನಾಗಿದೇವ, ಕಲ್ಲುಮಠದ ಪ್ರಭುದೇವ,ಕರಸ್ಥಲದ ವೀರಣ್ಣೊಡೆಯ, ಚಾಮರಸ – ಈ ನಾಲ್ವರೊಳಗೆ ಕರಸ್ಥಲ ನಾಗಿದೇವನ ಹೊರತಾಗಿ ಉಳಿದ ಮೂವರು ನೂರೊಂದು ವಿರಕ್ತರ ಗುಂಪಿನಿಂದ ಬೇರೆಯಾಗುತ್ತಾರೆ. ಕರಸ್ಥಲದ ನಾಗಿದೇವನು ನೂರೊಂದು ವಿರಕ್ತರೊಳಗಿನವನೆಂಬ ವಿಷಯದಲ್ಲಿ ಯಾವ ಸಂದೇಹವೂ ಇಲ್ಲ. ನೂರೊಂದು ವಿರಕ್ತರಲ್ಲಿ ಅವರೇ ಆದಿ, ಅವರೇ ಅಗ್ರಹಣ್ಯರು.”[2]

ಮಹಾ ಅನುಭಾವಿಯಾದ ನಾಗಿದೇವನು ವ್ಯಕ್ತಿತ್ವವನ್ನು ವೈಭವೀಕರಿಸುವಲ್ಲಿ ಹಲವಾರು ಕವಿಗಳು ಕೆಲವು ಪ್ರಸಂಗಗಳನ್ನು ಸೃಷ್ಟಿಸಿದ್ದಾರೆ. ನಾಗಿದೇವನು ಹಾದರಕ್ಕೆ ಹೊಕ್ಕಪ್ರಸಂಗ, ವಿದ್ಯಾ (ವಿಜಯ) ನಗರದಲ್ಲಿ ಹುಚ್ಚುರಾಹುತನ ಸತಿಯೊಡನೆ ನೆರೆದ ಪ್ರಸಂಗ, ಸಿಂಗಾರ ತೋಟದಲ್ಲಿನ ಕಾಯಿಗಳ ಎಳನೀರನ್ನು ಲಿಂಗಕ್ಕರ್ಪಿಸಿದ ಪ್ರಸಂಗವನ್ನು ಗಮನಿಸಿದಾಗ ಈಗ ಯೋಗಸಿದ್ಧಿ ಪಡೆದ ಗಂಭೀರನೂ, ಪ್ರಾಣಲಿಂಗಿ, ಪ್ರಸಾದಿ ಸ್ಥಲವನ್ನು ಮೆಟ್ಟಿ ನಿಂತ ಶಿವಶರಣನೂ, ಬಯಲ ಸ್ವರೂಪಿಯಾದ ಶಿವಯೋಗಿಯೂ, ವೀರಶೈವ ತತ್ವಗಳನ್ನು ಪ್ರತ್ಯಕ್ಷವಾಗಿ ಅನುಷ್ಠಾನಕ್ಕೆ ತಂದ ಮಹಾ ವಿರಕ್ತನೂ ಆಗಿದ್ದುದು ಕಂಡು ಬರುತ್ತದೆ. ವೀರಶೈವ ಸಹಿತ್ಯ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡ ನಾಗಿದೇವ ಪ್ರೌಢದೇವರಾಯ ನಿಂದ ಗೌರವಾದರಗಳನ್ನು ಪಡೆದುಕೊಂಡಿದ್ದಾನೆ. ಜೊತೆಗೆ ವೈವಿದ್ಯಪೂರ್ಣವಾದ ಅನುಭಾವ ಸಾಹಿತ್ಯವನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕಲ್ಕೆ ವಿಶಿಷ್ಟ ಕಾಣಿಕೆಯನ್ನು ಸಲ್ಲಿಸಿದ್ದಾನೆ. ತ್ರಿವಿಧಿ, ಚೌಪದಿ, ಕಂದ, ತಾರಾವಳಿ, ಸ್ತೋತ್ರ, ವಚನ, ಕಾಲಜ್ಞಾನ, ಸ್ವರ ವಚನ ಹೀಗೆ ವಿವಿಧ ಪ್ರಕಾರಗಳಲ್ಲಿ ಈತನ ಸಾಹಿತ್ಯ ಸೃಷ್ಟಿ ವ್ಯಾಪಿಸಿದೆ.ಶಿವಯೋಗದ ಬೆಡಗು, ಉತ್ಕಟ ವೈರಾಗ್ಯ, ಜ್ಞಾನದ ದೀಪ್ತಿ, ಧೀರಭಾವಗಳು ಇವನ ಎಲ್ಲ ಕೃತಿಗಳಲ್ಲಿ ಎದ್ದು ಕಾಣುತ್ತವೆ. ಈತನ ಕೃತಿಗಳ ವಿವರಗಳು ಹೀಗಿವೆ:

೧. ಕರಸ್ಥಲ ನಾಗಿದೇವನ ತ್ರಿವಿಧಿ

೨. ಅಕ್ಷರ ಚೌಪದನ

೩. ಏಕವಿಂಶತಿ ದೀಕ್ಷಾವಿಧಾನ

೪. ಮಡಿವಾಳ ಮಾಚಯ್ಯನ ತಾರಾವಳಿ

೫. ಶಾಂತ ಶತಕ

೬. ಲಿಂಗನಿಜಸ್ಥಲದ ವಚನ

೭. ಪಂಚಿವಿಂಶತಿ ಲೀಲಾಂಕಿತ ಸ್ತೋತ್ರ

೮. ಕಾಲಜ್ಞಾನ

೯. ವಚನ

೧೦. ಸ್ವರವಚನ

ಈ ಎಲ್ಲ ಕೃತಿಗಳು ಸ್ತೋತ್ರರೂಪದಲ್ಲಿದ್ದು, ವೀರಶೈವ ತತ್ವ, ಲೋಕಾನುಭವ, ಶಿಬಾನುಭವ, ಸಮಕಾಲೀನ ಸಮಾಜದ ಪರಿಸರವನ್ನು ನಿರೂಪಿಸುತ್ತವೆ.

. ಕರಸ್ಥಲ ನಾಗಿದೇವನ ತ್ರಿವಿಧಿ : ಕರಸ್ಥಲ ನಾಗಿದೇವನು ೩೧ ತ್ರಿಪದಿಗಳಲ್ಲಿ ವೀರಶೈವ ಲಿಂಗಾಂಗಸಾಮರಸ್ಯ ತತ್ವವನ್ನು ಹಾಗೂ ಶಿವಯೋಗ ಮಾರ್ಗದ ರಹಸ್ಯವನ್ನು ಬೆಡಗಿನ ರೂಪದಲ್ಲಿ ನಿರ್ವಚಿಸಿದ್ದಾನೆ. ಇದಕ್ಕೆ ಮಾಸಾಳ ವರ್ಣದ ತ್ರಿವಿಧಿಯೆಂದೂ ಕರೆಯಲಾಗುತ್ತಿದೆ. ಈ ಕೃತಿಯ ಮಹತ್ವವನ್ನರಿತು ಮುಂದೆ ಬಂದ ಪರ್ವತ ಶಿವಯೋಗಿಯು ಟೀಕೆಯನ್ನು ಬರೆದಿದ್ದಾನೆ. ಈ ತ್ರಿವಿಧಿಗೆ ಇನ್ನೂ ಒಬ್ಬ ಟೀಕೆ ಬರೆದಿದ್ದು, ಅದರ ಕರ್ತೃ ಯಾರೆಂಬುದು ತಿಳಿದಿಲ್ಲ. ಈ ಟೀಕೆಯಲ್ಲಿ ಕೇವಲ ಅದರ ತಾತ್ಪರ್ಯವನ್ನು ಮಾತ್ರ ಸಂಗ್ರಹಿಸಿ ಹೇಳಲಾಗಿದೆ. ಕರಸ್ಥಲ ನಾಗಿದೇವನು ವೀರಶೈವ ಕ್ರಿಯಾಚರಣೆಗೆ ಸಂಬಂಧಿಸಿದಂತೆ, ಲಿಂಗಾಂಗ ಸಾಮರಸ್ಯದ ಪರಿಚಯವನ್ನು ತುಂಬ ಮನೋಜ್ಞವಾಗಿ ವರ್ಣಿಸಿದ್ದಾನೆ:

ಮಂಜಿನಾ ನೀರನ್ನು ಹಂಜರಕೆ ನಾನಿತ್ತೆ
ಹಂಜರವು ದಣಿದು ದಣಿಯದಾ ನೀರಿಂಗೆ
ಹಂಜರವು ಕೊಟ್ಟು ಬರುತಿರ್ದೆ
||

ಕರಸ್ಥಲದ ಲಿಂಗಕ್ಕೆರದ ನೀರು, ದೇಹವೆಂಬ ಹಂಜರದಲ್ಲಿ ಮಾತ್ರನಿಲ್ಲದೆ, ಅಂಗ – ಮನ – ಪ್ರಾಣಗಳಲ್ಲಿ ಪ್ರಸಾದ ಜಲವಾಗಿ ಹರಿಯುತ್ತದೆ. ಈ ಕ್ರಿಯೆಗೆ ‘ಅಂಗನು ಸೋತು ಲಿಂಗದೊಡವೆರೆದು ಸರ್ವಾಂಗವೂ ಲಿಂಗಾಂಗವಾದ ಬಗೆಯನ್ನಿಲ್ಲಿ ಈ ರೀತಿಯಾಗಿ ನಾಗಿದೇವನ ನಿರೂಪಿಸುತ್ತಾನೆ.

ಹಸಿವು ತೃಷೆ ವಿಷಯವನು ಹೊಸೆದು ಭಸ್ಮವ ಮಾಡಿ
ಕಿಸುಕುಳದ ಗಂಟಿ ಕಡೆಗೊತ್ತಿ ಸಂಸಾರ
ಹಸೆಗೆಟ್ಟಿತೆಂದು ನಗುತಿರ್ದೆ
||
ಅರಿವರತು ನೆರೆಯುಂದು ಅಂಗಕ್ಕೆ ದಣಿವಿಲ್ಲ
ಧರೆಬೆಂದ ಕೊರಡ ತಿರಿದೊಟ್ಟಿ ಜೀವನದ
ಒಡಲೆಂಬ ಘನವ ಮುರಿದಿಹೆನು ||

ಎಂಬಂಥ ಹಲವಾರು ಪದ್ಯಗಳಲ್ಲಿ ನಾಗಿದೇವನ ಸಾಧನಮಾರ್ಗ, ಅಲ್ಲಿ ಆತ ಏರಿನಿಂತ ಪರಮ ಹಂತವನ್ನು ಕಾಣುತ್ತೇವೆ. ಯೋಗದ ವಿಚಾರಗಳನ್ನು ಬೆಡಗಿನ ರೂಪದಲ್ಲಿ ವರ್ಣಿಸುವ ರೀತಿ ಅನನ್ಯವಾದುದು. ಉದಾಹರಣೆಗಾಗಿ

ಉಟ್ಟ ಸೀರೆಯ ಬಿಟ್ಟು ಉಣ್ಣದೂಟವನುಂಡು
ಬಟ್ಟಬಯಲಾಗ ಘನಸುಖದ ಹಾರೈಕೆ
ದಿಟ್ಟನಿಗಲ್ಲದೆ ಬರಿದುಂಟೆ
||

ಅಜ್ಞಾನಬೆಂಬ ಪರದೆಯನ್ನು ಹರಿದೊಗೆದು, ಲೋಕ ಹಂಗನೂಟವನುಣ್ಣದೆ, ಶುದ್ಧ – ಸಿದ್ಧ – ಪ್ರಸಿದ್ಧ ಪ್ರಸಾದವನ್ನು ಸ್ವೀಕರಿಸಿ, ನಿರಾಕಾರದ ನಿಜವನರಿದು ಬಯಲು ಪುತ್ಥಳಿಯಾದ ನಿತ್ಯ ಸುಖಗಳನ್ನು ಇಲ್ಲಿ ವರ್ಣಿಸಿದ್ದಾನೆ. ಈ ಕೃತಿಯಲ್ಲಿ ಬರುವ ನಾಲ್ಕು ಮನೆ, ನಾಲ್ಕು ದೇಗುಲ, ನಾಲ್ಕು ಹನ್ನೆರಡರ ಚೌಕದ ಬಾಗಿಲು, ಆರುಕಳ್ಳರು,ಎಂಟು ಕಾಡಾನೆ, ಮಂಜಿನ ನೀರು, ಕೆಂಡವ ನುಂಗಿದ ಪಕ್ಷಿ, ಉರು ಕರ್ಪುರದಂತಾಗು, ಮೂವತ್ತು ಮುಳ್ಳಿನ ಮುತ್ತಗದ ಹೂವು, ಕಪಿನಾಲ್ಕು, ದಶಮೃಗ ಅಗಣಿತ ಕೋಡುಗಳು ಮುಂತಾದ ಶಬ್ದಗಳು ಸಾಂಕೇತಿಕ ರೂಪದ ಯೋಗದ ವಿಶಿಷ್ಟ ಅರ್ಥಗಳನ್ನು ಪಡೆದುಕೊಂಡಿವೆ. ಒಟ್ಟಿನ್ಲಲಿ “ನಾಗಿದೇವನ ತ್ರಿವಿಧಿಯಲ್ಲಿ ಪ್ರತಿಮಾ ವಿಧಾನವಿದ್ದರೂ ಅಕ್ಕನ ಯೋಗಾಂಗ ತ್ರಿವಿಧಿಯಲ್ಲಿರುವ ಕಾವ್ಯ ಸೌಂದರ್ಯವಾಗಲಿ, ಆಧ್ಯಾತ್ಮಿಕ ಸೌಂದರ್ಯವಾಗಲಿ ಹೆಚ್ಚಿಲ್ಲ. ಆದರೆ ಇವನ ಯೋಗದ ಗೂಢಾರ್ಥ ಪ್ರತೀತಿ ಸೈದ್ದಾಂತಿಕ ಸ್ವರೂಪದಲ್ಲಿ ಅಕ್ಕನಿಗಿಂತ ಮುಂದಾಗಿದೆ. ವೈಯುಕ್ತಿಕ ಯೋಗ ಸಿದ್ಧಿಯ ಅನುಭವವನ್ನು ಪ್ರತಿನಿಧಿಸುವಲ್ಲಿ ಪ್ರಖರತೆ ಎದ್ದು ಕಾಣುತ್ತದೆ. ‘ಸಂಸಾರ ಹಸೆಗೆಟ್ಟಿತೆಂದು ನಗುತಿರ್ದೆ, ಮನವು ಓಂಕಾರದಲ್ಲಿ ಮುಳುಗಿತು’ ಪರಮ ಹಂಸನೊಳೊಡವೆರೆದು ಕರಸ್ಥಲದ ಗುರುಶಾಂತನೊಳಗೆ ಬಯಲಾದೆ’ ಈ ಕಡೆಗಳಲ್ಲಿ ವೀರಶೈವ ತತ್ವಾನುಸಂಧಾನ ಮತ್ತು ಯೋಗತತ್ವಗಳೆರಡರ ಸಮನ್ವಯದ ಲಕ್ಷಣವಿದೆ. ಗಾತ್ರದಲ್ಲಿ ಕಿರಿದಾದರೂ ಯೋಗವಿದ್ಯೆಗೆ ಕರಸ್ಥಲ ನಾಗಿದೇವನ ತ್ರಿವಿಧಿ ಕೈಪಿಡಿಯಾಗಿದೆ” ಎಂಬ ಡಾ. ವಿ. ಶಿವಾನಂದವರ ಅಭಿಪ್ರಾಯ ಸಮಂಜಸವಾದುದಾಗಿದೆ.[3]

. ಅಕ್ಷರ ಚೌಪದನ : ಕರಸ್ಥಲ ನಾಗಿದೇವನ ಮತ್ತೊಂದು ಲಘು ಕೃತಿ ಅಕ್ಷರ ಚೌಪದನ, ೨೧ ಚೌಪದಗಳನ್ನೊಳಗೊಂಡ ಇದು ಸಹ ಶಿವತತ್ವ, ಯೋಗ ವಿಚಾರಗಳನ್ನು ಹೇಳುತ್ತದೆ.

ಅಕ್ಷರವೆಂಬುದು ತಾನೇನು ಹೇಳಿ
ಅಕ್ಷರ ಬಲ್ಲವರು ಸಮನಿಸಿ ಹೇಳಿ
ಅಕ್ಷರ ಅರಿದ ಹಿರಿಯರನು ಕೇಳಿ
ಅಕ್ಷರದಾತ್ಮನುದಾವಾತ ಹೇಳಿ
||

ಹೀಗೆ ಬೆಡಗಿನ ರೂಪದಲ್ಲಿ ನಾಗಲಿಂಗನು ಹೇಳುತ್ತಾ ಹೋಗುವ ರೀತಿ ಅದ್ಭುತವಾದುದು.

. ಏಕವಿಂಶತಿ ದೀಕ್ಷವಿಧಾನ : ವೀರಶೈವ ಸಾಹಿತ್ಯದಲ್ಲಿ ದೀಕ್ಷೆಯನ್ನು ಕುರಿತ ವಿಚಾರ ಮೊದಲಿಗೆ ಬರುವುದು ವಚನಗಳಲ್ಲಿ. ಅನಂತರ ಬಂದ ಸ್ವತಂತ್ರ ಕೃತಿಯೆಂದರೆ ಕೆರೆಯ ಪದ್ಮರಸನ ದೀಕ್ಷಾಬೋಧೆ. ಅಲ್ಲಿಂದ ಈಚೆಗೆ ವೀರಶೈವ ಪುರಾಣ, ಕಾವ್ಯಗಳಲ್ಲಿ ದೀಕ್ಷೆಯನ್ನು ಕುರಿತು ಸಂದರ್ಭಾನುಸಾರ ಹೇಳುತ್ತಾ ಬರಲಾಗಿದೆ. ಪ್ರಸ್ತುತ ಕರಸ್ಥಲ ನಾಗಲಿಂಗದೇವನ ‘ಏಕವಿಂಶತಿ ದೀಕ್ಷಾವಿಧಾನ’ ವು ಈ ಪರಂಪರೆಯಲ್ಲಿ ಬಂದ ಲಘುಕೃತಿ. ಇದಕ್ಕೆ ಮೂರೇಳು ದೀಕ್ಷಾ ವಿಧಾನವೆಂದೂ ಕರೆಯಲಾಗುತ್ತದೆ. ಕೃತಿಯ ಆರಂಭದಲ್ಲಿ “ಗುರು ಶಾಂತಲಿಂಗ ಮೂರೇಳು ದೀಕ್ಷೆಯನಿತ್ತಾ ತೆರನ ಕೇಳುವುದೆನ್ನ ಮತಿಗೆ ತಕ್ಕನಿತನು ಶರಣ ಜನರಾಲಿಪುದು ಪಾಲಿಪುದು” ಎಂದು ನಾಗಿದೇವನು ಇಪ್ಪತ್ತೊಂದು ದೀಕ್ಷೆಯ ವಿವರಗಳನ್ನು ಹೇಳುವುದರ ಬಗೆಗೆ ಸೂಚನೆ ಕೊಟ್ಟಿದ್ದಾನೆ. ಪ್ರತಿಯೊಂದು ಪದ್ಯದಲ್ಲಿಯೂ ಒಂದೊಂದು ದೀಕ್ಷೆಯ ಸ್ವರೂಪ, ಲಕ್ಷಣಗಳನ್ನು ನಿರೂಪಿಸಿದ್ದಾನೆ. ೨೧ ವಾರ್ಧಕ ಷಟ್ಪದಿಗಳನ್ನೊಳಗೊಂಡ ಇದು ‘ಗುರುಶಾಂತಲಿಂಗ’ ಎಂಬ ಅಂಕಿತದಲ್ಲಿದೆ.

ವೀರಶೈವ ಧರ್ಮದಲ್ಲಿ ಪ್ರಚಲಿತವಿರುವ ತನುದೀಕ್ಷೆ ಹಾಗೂ ಅದರ ಉಪಾಂಗ ದೀಕ್ಷೆಗಳನ್ನು ನಾಗಿದೇವ ಇಲ್ಲಿ ವಿಸ್ತರಿಸುತ್ತಾ ಹೋಗಿದ್ದಾನೆ. ಆರಂಭದಲ್ಲಿ ತನುದೀಕ್ಷೆಗೆ ಸಂಬಂಧಿಸಿದ ಅಜ್ಞಾದೀಕ್ಷೆ, ಉಪಮಾದೀಕ್ಷೆ, ಸ್ವಸ್ತಿಕಾರೋಹಣಾದೀಕ್ಷೆ, ಲಿಂಗಸ್ವಾಯತ ದೀಕ್ಷೆಗಳ ವಿವರಗಳಿವೆ. ಮುಂದೆ ಮನದೀಕ್ಷೆಯಲ್ಲಿ ಸಮಯದೀಕ್ಷೆ, ನಿಸ್ಸಂಸಾರ ದೀಕ್ಷೆ, ನಿರ್ವಾಣ ದೀಕ್ಷೆ, ತತ್ವದೀಕ್ಷೆ, ಆತ್ಮದೀಕ್ಷೆ, ಅನುಗ್ರಹದೀಕ್ಷೆ, ಸತ್ಯಶುದ್ಧದೀಕ್ಷೆ, ಏಕಾಗ್ರದೀಕ್ಷೆ, ದೃಡದೀಕ್ಷೆ, ಪಂಚೇಂದ್ರಿಯಾರ್ಪಿತದೀಕ್ಷೆ, ಅಹಿಂಸಾದೀಕ್ಷೆ, ಲಿಂಗನಿಷ್ಠಾದೀಕ್ಷೆ, ಮನೋಲಯ ದೀಕ್ಷೆ, ಸದ್ಯೋನ್ಮಕ್ತಿ ದೀಕ್ಷೆಗಳನ್ನು ಪ್ರತಿಪಾದಿಸಲಾಗಿದೆ.ಲಿಂಗಾಯತ ದೀಕ್ಷೆಯನ್ನು ಕುರಿತು ಹೀಗೆ ಹೇಳಿದ್ದಾನೆ:

ನೆತ್ತಿಯೊಳಗಿರ್ದ ತನ್ನಯ ಕಳೆಯ ತೆಗೆತಂದು
ಮತ್ತಿಷ್ಟರೂಪಿನೊಳು ತುರುಗಿ ಮಂತ್ರವನೋದಿ
ಅತ್ಯಂತ ಪಂಚಾಭಿಷೇಕ ಮಜ್ಜನಗಯ್ದು ಅಷ್ಟವಿಧ ಪೂಜೆಗಳನು
ಇಂತು ಷೋಡಶವೆನಿಪವುಚಾರವನು ಮಾಡಿ
ಸತ್ತು ಚಿತ್ತಾನಂದ ನಿತ್ಯ ಪರಿಪೂರ್ಣ ಕಳೆ
ತುತ್ತುರುಗಿ ಚರಲಿಂಗ ತೀರ್ಥ ಪ್ರಸಾದವೀಯಲ್ಕೆ ಲಿಂಗಾಯುತ ದೀಕ್ಷೆಯು
||

ಹೀಗೆ ನಾಗಿದೇವನು ೨೧ ದೀಕ್ಷೆಗಳ ಸ್ವರೂಪ, ಅವುಗಳನ್ನು ಆಚರಿಸುವ ವಿಧಾನಗಳನ್ನು ಸರಳವಾದ ಭಾಷೆಯಲ್ಲಿ ನಿರರ್ಗಳವಾಗಿ ಹೇಳಿದ್ದಾನೆ. ವೀರಶೈವ ಆಚಾರ ಸಿದ್ದಾಂತಗಳನ್ನು ನಿರೂಪಿಸುವಲ್ಲಿ ಕರಸ್ಥಲ ನಾಗಿದೇವನ ಸೇವೆ ಮಹತ್ವವಾಗುದುದೆಂಬುದನ್ನು ಈ ಕೃತಿ ತೋರಿಸಿಕೊಟ್ಟಿದೆ.

. ಮಡಿವಾಲ ಮಾಚಯ್ಯನ ತಾರಾವಳಿ: ಕರಸ್ಥಲ ನಾಗಿದೇವನ ಮಡಿವಾಳ ಮಾಚಯ್ಯನ ತಾರಾವಳಿಯು ತಾರಾವಳಿ ಸಾಹಿರ್ಯದ ಮೊದಲ ಕೃತಿಯಾಗಿದೆ. ಹೀಗಾಗಿ ಮುಂದೆ ಬಂದಂತಹ ತಾರಾವಳಿ ಕೃತಿಗಳಿಗೆಲ್ಲ ಈತ ಮಾದರಿಯೆನಿಸಿದ್ದಾನೆ. ವೀರಭದ್ರನ ಅವತಾರವೆನಿಸಿದ ಮಡಿವಾಳ ಮಾಚದೇವನ ಶೌರ್ಯ, ಸಾಹಸಗಳನ್ನು ಕಣ್ಣಿಗೆ ಕಟ್ಟುವಂತೆ ೨೭ ನುಡಿಗಳಲ್ಲಿ ನಾಗಿದೇವನ ವರ್ಣಿಸಿದ್ದಾನೆ. ವೀರಭದ್ರನು ಶಿವನ ಹಣೆಗಣ್ಣಿನಿಂದ ಉದಯಿಸಿ, ದಕ್ಷನ ಯಾಗವನ್ನು ಕೆಡಿಸಿ, ಆತನ ತಲೆ ಕಡಿದು,ಶಿವನ ಆಜ್ಞೆಯಂತೆ ಕುರಿದಲೆಯನ್ನು ಇಟ್ಟು ಸಾಹಸ ಮೆರೆದ ವಿವರಣೆಗಳು ಆರಂಭದ ಹತ್ತು ನುಡಿಗಳಲ್ಲಿವೆ.ಮುಂದಿನ ಹದಿನೇಳು ನುಡಿಗಳಲ್ಲಿ ಆ ವೀರಭದ್ರನೇ ಭೂಲೋಕದಲ್ಲಿ ವೀರಶೈವಾಚಾರವನ್ನು ಉದ್ದರಿಸಿ ಬರುವೆನೆಂದು ಹಿಪ್ಪಿಲಿಗೆಯ ಶಿವಭಕ್ತ ದಂಪತಿಗಳ ಉದರದಲ್ಲಿ ಜನಿಸುತ್ತಾನೆ. ಆ ಮೇಲೆ ಕಲ್ಯಾಣಕ್ಕೆ ಬಂದು ಮಡಿವಾಳ ವೃತ್ತಿಯನ್ನು ಕೈಕೊಂಡು ಶಿವಭಕ್ತರ ಬಟ್ಟೆ ತೊಳೆಯುವ ಕಾಯಕದಲ್ಲಿ ನಿರತನಾಗಿರುತ್ತಾನೆ. ಆ ಸಂದರ್ಭದಲ್ಲಿ ಒಮ್ಮೆ ಭವಿಯಾದ ಬಿಜ್ಜಳ ತನ್ನ ಬಟ್ಟೆಯನ್ನು ತೊಳೆದುಕೊಡಬೇಕೆಂದು ಒತ್ತಾಯಿಸುತ್ತಾನೆ. ಅದನ್ನು ಮಾಚಿದೇವ ತಿರಸ್ಕರಿಸುತ್ತಾನೆ. ಇದರಿಂದ ಕೋಪಗೊಂಡ ಬಿಜ್ಜಳನು ಮದವೇರಿದ ಆನೆಯನ್ನು ಆತನ ಮೇಲೆ ಹಾಯಿಸುತ್ತಾನೆ.ಮಾಚಯ್ಯನ ಆನೆಯನ್ನು ಮುರಿದಿಕ್ಕಿ ಬಿಜ್ಜಳನ ಬಲವನ್ನೆಲ್ಲ ನಾಶಮಾಡುತ್ತಾನೆ. ಇದರಿಂದ ಪಶ್ವಾತ್ತಾಪ ಪಟ್ಟು ಬಿಜ್ಜಳನು ಮಾಚಯ್ಯನಿಗೆ ಶರಣಾಗುತ್ತಾನೆ. ಈ ಎಲ್ಲ ಸಂಗತಿಗಳು ಇಲ್ಲಿ ಅದ್ಭುತವಾಗಿ ಮೂಡಿ ಬಂದಿವೆ. ವಸ್ತು ನಿರೂಪಣೆ – ರೂಪ, ಶೈಲಿಯ ದೃಷ್ಟಿಯಿಂದಲೂ ಮೊದಲ ತಾರಾವಳಿ ಎಂಬ ದೃಷ್ಟಿಯಿಂದಲೂ ಈಕೃತಿಗೆ ವಿಶಿಷ್ಟ ಸ್ಥಾನ ಮೀಸಲಾಗಿದೆ.

. ಶಾಂತ ಶತಕ: ೧೧೮ ಕಂದಗಳನ್ನೊಳಗೊಂಡ ಈ ಕೃತಿಯಲ್ಲಿ ಇಷ್ಟಲಿಂಗವು ಕರಸ್ಥಲದಲ್ಲಿರಬೇಕು. ಆ ಮೂಲಕ ಲಿಂಗಾಂಗ ಸಾಮರಸ್ಯ ಸಾಧ್ಯ ಎನ್ನುವುದನ್ನು ನಿರೂಪಿಸುತ್ತಾ ಹೋಗಲಾಗಿದೆ. ಪ್ರತಿಯೊಂದು ಕಂದಪದ್ಯದ ಕೊನೆಗೆ ‘ನಿಜಗುರು ಶಾಂತ’ ಎಂಬ ಅಂಕಿತವಿದೆ. ಲಿಂಗಾಧಾರಿಗಳಾದವರು ಆಚರಿಸತಕ್ಕ ನೀತಿ ನಿಯಮಗಳನ್ನು ನಾಗಿದೇವ ತುಂಬ ಮನೋಜ್ಞವಾಗಿ ಹೇಳಿದ್ದಾನೆ.

ಹರಭಕ್ತಿರುಗಳ ಮನೆಯಂ
ಭರವಸದಿ ಹೊಕ್ಕು ತತ್ವಜ್ಞಾನದ ಮಾತಂ
ಒರೆವುತ ಉದರವ ಹೊರೆಯದ
ನಿರೂಪಮನೇ ನಿತ್ಯಮುಕ್ತ ನಿಜಗುರುಶಾಂತ
||

ಅಲ್ಲದೇ ಕೀರ್ತಿಗಾಗಿ ಆತುರದಲ್ಲಿ ಭಕ್ತರೆಂಬ ಭ್ರಾಂತಿಯಲ್ಲಿರುವವರ ಮನೆಗೆ ಲಿಂಗಾಧಾರಿಗಳು ಹೋಗಬಾರದೆಂದು ಹೇಳುವ ರೀತಿ ಸ್ಪಷ್ಟವಾಗಿದೆ. ಅನ್ನೋದಕ ಪ್ರೀತಿಯನ್ನು ಬಿಡಬೇಕೆಂದು ನಡೆಯುವದಾದರೆ ಉಪವಾಸವಿರಬೇಕೆಂದಿಲ್ಲ. ಪಾದೋದಕ ಪ್ರಸಾದಗಳನ್ನು ಸ್ವೀಕರಿಸಬೇಕು.ಲಿಂಗಧಾರಿಯಾದವನು ಸ್ತ್ರೀ ಸಂಗ ಮಾಡಬಾರದೆಂದೂ, ಸ್ತ್ರೀ ಸಂಗಿಗಳ ಮನೆಗೆ ಹೋಗಬಾರದೆಂದು ಬೋಧಿಸಲಾಗಿದೆ.

ಅಂಗಜನ ಕೇಳಿ ತೊತ್ತಿನ
ಲಿಂಗಗಳಾಗಿಹ ಜಡರೊಳುಣಿಸಿ ನೆರೆಬಿಡುತಂ
ಪಿಂಗದೆ ಲಿಂಗದ ಸಂಗದೊ
ಳಂಗವಿಸಿರೆ ನಿತ್ಯಮುಕ್ತ ನಿಜಗುರುಶಾಂತ
||

ಸತಿಯರ ಕಾಲಿನ ಘಾತಿಗೆ
ಸತತಂ ಮೈಮರೆದು ಮತ್ತೆ ಜ್ಞಾನಿಗಳೆಂಬಾ
ಮತಿಗೆಟ್ಟರ ಸಂಗವ ತೊರೆ
ದತಿಶಯನೇ ನಿತ್ಯಮುಕ್ತ ನಿಜಗುರುಶಾಂತ
||

ಹೀಗೆ ಈ ಕೃತಿಯಲ್ಲಿ ಲಿಂಗಧಾರಿಯಾದವನು ಅನುಸರಿಸಬೇಕಾದ ನೀತಿ – ನಿಯಮಗಳನ್ನು ಪ್ರತಿಯೊಂದು ಪದ್ಯದಲ್ಲಿ ಸ್ಪುಟವಾಗಿ ಹೇಳಲಾಗಿದೆ.

. ಲಿಂಗನಿಜಸ್ಥಲದ ವಚನ : ಲಿಂಗದ ಮಹಿಮೆಯನ್ನು ನಿರೂಪಿಸುವ ಈ ಕೃತಿಯು ೯೮ ತ್ರಿಪದಿಗಳಲ್ಲಿ ಹಬ್ಬಿಕೊಂಡಿದೆ. ಪ್ರತಿಯೊಂದು ನುಡಿಯುಯ ‘ನಿಜಮುಕ್ತಾ’: ಎಂದು ಮುಕ್ತಾಯವಾಗುತ್ತದೆ. ಹಸ್ತಪ್ರತಿಯ ಪ್ರಾರಂಭದಲ್ಲಿ ಇದಕ್ಕೆ ‘ವಚನ’ ಎಂದೂ, ಈ ವಚನವನ್ನು ಒನಕೆವಾಡು ತ್ರಿಪದಿ, ವರ್ಣದಿಂದ ಓದುವುದು’ ಎಂದು ಹೇಳಲಾಗಿದೆ.

ಹಾಳು ಮಾತನೆ ನುಡಿದು ಕಾಲಕರ್ಮಗಳ
ಜಾಲದೊಳು ಸಿಕ್ಕಿ ಕೆಡದೆ ಶಿವಲಿಂಗದಾ
ಮೇಳದೊಳಗಿಪ್ಪನವಮುಕ್ತಾ
||

ಹೆಣ್ಣು ಹೊನ್ನು ಮಣ್ಣಿಂದ ಬಣ್ಣ ಬಡುತಿಪ್ಪವರು
ತನ್ನ ನಿಜವರಿಯರದರಿಂದ ಲಿಂಗದಲಿ
ತನ್ನ ಮನವಿರಿಸುವ ಮುಕ್ತಾ
||

ಎಂದು ಲಿಂಗಧಾರಿಗಳಾಗುವವರು ವೃಥಾಕಾಲ ಹರಣ ಮಾಡಿದೆ ಶಿವಲಿಂಗದ ಸ್ಮರಣೆಯಲ್ಲಿರಬೇಕು, ಹೆಣ್ಣು ಹೊನ್ನು ಮಣ್ಣಿನ ಆಸೆನಯನ್ನು ಬಿಟ್ಟು ಲಿಂಗದಲ್ಲಿ ಮನವನ್ನು ಕೇಂದ್ರಿಕರಿಸಬೇಕು ನಾಗಿದೇವನ ಹೇಳಿದ್ದಾನೆ. ಹೀಗೆ ಪ್ರತಿಯೊಂದು ಪದ್ಯದಲ್ಲಿ ಲಿಂಗದ ಮಹಿಮೆಯನ್ನು ವಿಸ್ತರಿಸಿ ಹೇಳಲಾಗಿದೆ.

. ಪಂಚವಿಂಶತಿ ಲೀಲಾಂಕಿತ ಸ್ತೋತ್ರ : ೨೭ ಶರಷಟ್ಪದಿಯನ್ನೊಳಗೊಂಡು ಈ ಲಘುಕೃತಿಯು ಶಿವನ ಇಪ್ಪತ್ತೈದು ಲೀಲೆಗಳನ್ನು ವಿವರಿಸುತ್ತದೆ.

ಕರಿಕನ್ನಡಿಯೊಳೆಯ್ದೆ
ಪರಿಶೋಭಿಸುವವೊಲೀ
ಶ್ವರನ ಘನತರ ಲೀಲೆಗಳ
ಶರಷಟ್ಪದದೆ ವಿಸ್ತಿರಿಸಿದೆನಾಲಿಸಿ
ಗುರುಶಾಂತಲಿಂಗನರ್ಚಕರು
||

ಎಂಬ ಕೊನೆಯ ಪದ್ಯದಲ್ಲಿ ಕರಿಯು ಕನ್ನಡಿಯಲ್ಲಿ ತೋರಿಸುವಂತೆ ಶಿವನ ಘನತರವಾದ ಲೀಲೆಗಳನ್ನು ಶರಷಟ್ಪದಿಯಲ್ಲಿ ವಿಸ್ತರಿಸಿದ್ದೇನೆ ಎಂದು ನಾಗಿದೇವನು ಹೇಳಿಕೊಂಡಿದ್ದಾನೆ. ಸತಿ ಪತಿ ಭಾವವನ್ನೊಳಗೊಂಡ ಈ ಕೃತಿಯ ಶೈಲಿ ಸುಲಲಿತವಾಗಿದೆ. ಇದು ಸ್ವರವಚನ ಪ್ರಕಾರಕ್ಕೂ ಸೇರುತ್ತದೆಂದು ಡಾ. ವೀರಣ್ಣ ರಾಜೂರ ಅವರು ಅಭಿಪ್ರಾಯಪಟ್ಟಿದ್ದಾರೆ.[4]

. ಕಾಲಜ್ಞಾನ ಪದಗಳು : ಕರಸ್ಥಲ ನಾಗಿದೇವ ಕಾಲಜ್ಞಾನ ಪ್ರಕಾರದಲ್ಲಿಯೂ ತನ್ನ ಪ್ರತಿಭೆಯನ್ನು ತೋರ್ಪಡಿಸಿದ್ದಾನೆ. ಹುಯ್ಯಲೋ ಡಂಗುರವ, ಕುರುಹ ಕೇಳಿರೋ, ಧಿಮ್ಮಿ ಸಾಲೆನ್ನಿರೋ, ದಿಮ್ಮಿ ಸಾಲೆ ಎಂದು ಒಂದೊಂದು ಪದಗಳು ಮುಕ್ತಾಯವಾಗುತ್ತವೆ. ಪ್ರತಿ ಪದ್ಯದ ಕೊನೆಯಲ್ಲಿ ಸಂಗ ಸದ್ಗುರು ನಾಗಲಿಂಗ ಸಾರಿದವೆಂದು ಹುಯ್ಯೆಲೋ ಡಂಗುರವ, ಧರಿಣಿಯೊಳು ನಾಗಲಿಂಗೇಶನ ಕಾರಣ್ಯವರಹುತಿದೆ, ನಾಗಲಿಂಗ ನುಡಿಸಿದಂಥ ಆಗಮಗಳ ಕೇಳಿರೊ, ನಾಗಲಿಂಗನೆನ್ನಂಗದೊಳು ಹಿಂಗದೆ ಸಾರಿದ ದಿಮ್ಮಿ ಸಾಲೆಎಂದು ಹೇಳಲಾಗಿದೆ. ಇಲ್ಲಿಯ ಕಾಲಜ್ಞಾನಗಳು ಯೋಗ ವಿಷಯಗಳನ್ನೊಳಗೊಂಡಿದ್ದರೂ, ಮುಖ್ಯವಾಗಿ ಉತ್ತರ ದೇಶದ ದಾಳಿಗಳು, ಬಿದನೂರು ವಿನಾಶ, ವೀರ ವಸಂತನು ಬರುವ ಕಾಲದ ಸೂಚನೆ ವೃತಿಗಳ, ಮತಿಗೇಡಿಗಳು ಬಗೆಗೆ ಆಚಾರ – ವಿಚಾರ ವಿಡಂಬನೆಗಳು ಬಂದಿವೆ.

ವ್ರತನೇಮಶೀಲರು ಮಡಿಗೇಡಿಯಾದರು ಹುಯ್ಯೆಲೋ ಡಂಗುರವ
ಸತಿಯಿಂದ ಕಾಂತನು ಹತವಾಗುತೈದಾನೆ ಹುಯ್ಯೆಲೋ ಡಂಗುರವ
||

ಕೊಬ್ಬಿದ ಮನುಜರಿಗೆ ಹಬ್ಬವ ದಿನ ಬಂತೊ ಹುಯ್ಯೆಲೋ ಡಂಗುರವ
ಅಬ್ಬರದಿಂದಾರು ಲಕ್ಷವ ತರಿದಾರು ಹುಯ್ಯೆಲೋ ಡಂಗುರವ
||

ಕಲ್ಪನಂದಿಯ ಮುಂದೆ ಕಲ್ಯಾಣವಾದೀತು ದಿಮ್ಮಿಸಾಲೆ ಒಂದು
ಕಲ್ಲಿನ ಗವಿಯಿಂದ ಬಲ್ಲಹವಾದೀತು ದಿಮ್ಮಿಸಾಲೆ
||

ಹೀಗೆ ಈತನ ಕಾಲಜ್ಞಾನಗಳಲ್ಲಿ ಸಮಾಜ ವಿಡಂಬನೆಯನ್ನು ಕಾಣಬಹುದು. ಆದರೂ ಆ ಕಾಲಜ್ಞಾನಗಳನ್ನು ನಾಗಿದೇವ ರಚಿಸಿರಲಿಕ್ಕಿಲ್ಲವೆಂಬುದು ವಿದ್ವಾಂಸರ ಅಭಿಮತವಾಗಿದೆ. ಶ್ರೀ ಶಿವಬಸವಸ್ವಾಮಿಗಳು ಹೇಳುವಂತೆ “ಈತನ ಕಾಲಜ್ಞಾನ ರಚಿಸಿರುವಂತೆ ಕಾಣುವುದಿಲ್ಲ.ಅವನ ಪದ್ಯ ಸರಣಿಗಳು ಬಿಗಿತರವು, ರಮ್ಯವು ಇರುವುದಿರಿಂದ ಈ ಕಾಲಜ್ಞಾನಗಳನ್ನು ಈತನು ರಚಿಸಿಲ್ಲವೆಂದು ಹೇಳಬಹುದು. ಇವನ ಹೆಸರಿನಲ್ಲಿ ಮತ್ತಾವನೋ ಬೇರೆ ಕವಿ ಇತ್ತೀಚೆಗೆ ರಚಿಸಿರುವಂತೆ ಊಹಿಸಬಹುದಾಗಿದೆ.”[5]

. ವಚನಗಳು: ಕರಸ್ಥಲ ನಾಗಿದೇವನು ಬಸವೋತ್ತರ ಯುಗದ ಒಬ್ಬ ವಚನಕಾರ, ಈ ಮಾತಿಗೆ ಸಾಕ್ಷಿಯೆನ್ನುವಂತೆ ಈಗ ಒಂಬತ್ತು ವಚನಗಳನ್ನು ರಚಿಸಿದರೂ, ಒಂದು ವಚನ ಮಾತ್ರ ಉಪಲಬ್ದವಿದೆ. “ಇವುಗಳಿಗೆ ವಚನವೆಂಬ ಹೆಸರಿದ್ದರೂ ಇವು ವಾರ್ಧಕ ಷಟ್ಪದಿಯಲ್ಲಿವೆ, ಇವುಗಳ ಸಂಖ್ಯೆ ೯. ಇವುಗಳಲ್ಲಿ ಪಾರ್ವತಿಯ ಪ್ರಾರ್ಥನಾನುಸಾರ ಶಿವನು ಷಟ್ಥ್ಸಲ ಮಾರ್ಗಗಳನ್ನು ಅವಳಿಗೆ ಬೋಧಿಸಿದಂತೆ ತಿಳಿಯುತ್ತದೆ”. ಎಂದು ಆರ್. ನರಸಿಂಹಚಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.[6] ಉಪಲಬ್ಧವಿದ್ದ ಒಂದು ವಚನದಲ್ಲಿ ಷಡ್ಬ್ರಹ್ಮದಿಂದಾಗುವ ಪರಿಣಾಮಗಳನ್ನು ಹೇಳಲಾಗಿದೆ.

ಷಡ್ಬ್ರಹ್ಮದಿಂದೈದು ಭೂತಂಗಳುದಿಸಿದವು
ಷಡ್ಬ್ರಹ್ಮದಿಂದೆ ದಂಡ ಕೋಟಿಗಳು ನಿರ್ಮಿತವು
ಷಡ್ಬ್ರಹ್ಮದಿಂದೆ ಹರಿಯುಜರಿಂದ್ರ ಮೇರು ಸಾಗರ ತಾರೆ ಶಶಿಭಾಸ್ಕರಂ
ಷಡ್ಬ್ರಹ್ಮದಿಂದೆ ಮುನಿಮುನಿ ಸಿದ್ಧ ಸಾಧಕರು
ಷಡ್ಬ್ರಹ್ಮದಿಂದೆ ಸುರುದನುಜರಮರರು ನರರು
ಷಡ್ಬ್ರಹ್ಮದಿಂದೆ ಮಾಯಾಜನನ ಸ್ಥಿತಿಲಯವು ಸ್ವರ್ಗವಾದುದು ಶಂಕರೀ
||

೧೦. ಸ್ವರವಚನಗಳು : ಕರಸ್ಥಲ ನಾಗಿದೇವನ ಒಬ್ಬ ಪ್ರಸಿದ್ಧ ಸ್ವರವಚನಕಾರ, ವೀರಶೈವ ತತ್ವ, ಸಿದ್ಧಾಂತಗಳನ್ನು ತ್ರಿಪದಿ, ಕಂದ. ಶತಕ, ವೃತ್ತ, ರಗಳೆಯಲ್ಲಿ ನಿರೂಪಿಸಿದಂತೆ,ಸ್ವರವಚನಗಳಲ್ಲಿಯೂ ತನ್ನ ಅನುಭಾವದ ತೀವ್ರತೆಯನ್ನು ವ್ಯಕ್ತಪಡಿಸಿದ್ದಾನೆ. ಸದ್ಯದ ಮಟ್ಟಿಗೆ ಈತನ ೪೯ ಸ್ವರವಚನಗಳು ಲಭ್ಯವಿದ್ದು, ಅವುಗಳನ್ನು ಗಣವಚನ ರತ್ನಾವಳಿ, ಶಿವಯೋಗ ಪ್ರದೀಪಿಕೆ ಹಾಗೂ ಬಿಡಿ ಬಿಡಯಾದ ಹಸ್ತಪ್ರತಿಗಳಿಂದ ಸಂಗ್ರಹಿಸಲಾಗಿದೆ. ಗುರುಶಾಂತ, ಗುರುಕರುಣಿ ಶಾಂತ, ಸಿದ್ಧಶಾಂತ, ಗುರುಶಾಂತೇಶ್ವರ, ಗುರುಸಾಂತ ಪ್ರಭು, ಶಾಂತಲಿಂಗಮ ಮಹಾಗುರುಶಾಂತ ಎಂದು ಮೊದಲಾದ ಅಂಕಿತಗಳನ್ನು ಇಲ್ಲಿಯ ಹಾಡುಗಳಲ್ಲಿ ಕಾಣಬಹುದು. ಲಿಂಗದ ಮಹತ್ವ, ಶರಣರ ಸ್ತುತಿ, ಪಂಚವಿಶಂತಿ ಲೀಲೆಗಳ ವಿವರ , ಷಟ್ಥ್ಸಲ ಮಾರ್ಗ, ಅಷ್ಟಾವರಣಗಳ ವರ್ಣನೆ, ಶಿವಯೋಗ ಸಾಧನೆಯ ಸ್ವರೂಪ, ಸತಿ ಪತಿ ಭಾವದ ಮಾಧುರ್ಯ, ಜಾತಿ ಮತಗಳ ವಿವೇಚನೆಗಳು ಇಲ್ಲಿ ಸ್ವರವಚನಗಳಲ್ಲಿ ವ್ಯಕ್ತವಾಗಿದೆ. ಎಲ್ಲ ವಚನಗಳಿಗೂ ರಾಗ ನಿರ್ದೇಶನವಿದೆ. ಒಡ್ಡಿಯ ಧನ್ವಾಸಿ, ದೇಶಿ, ಸೌರಾಷ್ಟ್ರ, ಪಹಾಡಿ, ಶಂಕರಾಭರಣ, ನಾದರಾಮಕ್ರೀ, ಲಲಿತೆ ಪಾಡಿ, ಶ್ರೀರಾಗ, ಶುದ್ಧಕಾಂಬೋಧಿ, ಪಂತುರಾವಳಿ, ಆಹರಿ, ವರಾಳಿ ಮುಂತಾದ ರಾಗಗಳಲ್ಲಿ ಇವುಗಳನ್ನು ಹಾಡುಬಹುದು.

ಪರಧನ ಪರಹಿಂಸೆ ಪರಸತಿ ಇವುಗಳಿಗೆ ಮನಸೋತು, ತೋರಿಕೆಗೆ ಗುರುಲಿಂಗ ಜಂಗಮರೆನಿಸಿಕೊಳ್ಳುವ ಸೋಗಲಾಡಿಗಳನ್ನು ನರಗುರಿ ಎಂದು ನಾಗಿದೇವ ಕರೆದಿದ್ದಾನೆ.

ಹೇಮ ಭೂಮಿ ಸತಿಯರೇಕೆಂಬ
ತಾಮಸದೊಳು ಸಿಲ್ಕಿನಿತ್ಯ
ವ್ಯೋಮಕೇಶನಿರವ ಮರೆದು
ಕಾಮಭೃತ್ಯರಿರವ ಕಂಡು ಹೇಸಿ
||

ತೊಲಗಲಿಲ್ಲವೆ ಶರಣ ಎಂದು ಸ್ಪುಟವಾಗಿ ಹೇಳಿದ್ದಾನೆ. ಶಿವಯೋಗದ ಮಹತ್ವವನ್ನು ಹೇಳುತ್ತಾ “ಆರು ಬಲ್ಲರು ಶಿವಯೋಗದ ನೆಲೆಯ ಊರಿಂದ ಹೊರಗಾದನಾಮಿಕಗಲ್ಲದೆ” ಎಂದಿದ್ದಾನೆ. ಜಾತಿ, ಜನನ, ಸೂತಕ, ವಿರಹಿತನಾಗಿ ದೇಹವನ್ನು ಶುದ್ಧವಾಗಿಸಿಕೊಂಡವನೇ ಊರಿಂದ ಹೊರಗಾದ ಅನಾಮಿಕ. ಮಾಯಪಾಶಕ್ಕೆ ಒಳಗಾಗದೆ ಮನಸ್ಸೆಂಬ ತಿಳಿನೀರ ತಳದಲ್ಲಿ ಹುದುಗಿದ ಜ್ವಾನಾಗ್ನಿಯ ಕಿಚ್ಚಿನಿಂದ ವಿಷಯಗಳನ್ನು ಸುಟ್ಟು, ಸಮರಸ ಭಕ್ತಿಯಲ್ಲಿ ಅವಿರಳಾನಂದವನ್ನು ಅನುಭವಿಸುವವನೇ ನಿಜವಾದ ಶಿವಯೋಗಿ” ಎಂಬ ತತ್ವ ಈ ಹಾಡಿನಲ್ಲಿ ಪ್ರತಿಪಾದಿತವಾಗಿದೆ. ಈತನ ಸ್ವರವಚನಗಳ ಧಾಟಿ ಸರಳವೂ, ತತ್ವ ಪೂರಿತವಾಗಿಯೂ ಇವೆ.

‘ಕಣಿಯ ಹೇಳಬಂದೆ ನಾನು ಕಣಿಯ ಕೇಳೆ ನೀನು, ಕ್ಷಣದಿ ನಿನ್ನ ದೇಹ ಜಡವ ಹಣಿದವಾಡಿ ಓಡಿಸುವೆ’ ಎನ್ನುವ ಸ್ವರವಚನ ತುಂಬ ಸೊಗಸಾಗಿದೆ. ಶರಣರ ಅನುಭಾವವನ್ನು ಹಾಡಿನ ಮೂಲಕ ವ್ಯಕ್ತಪಡಿಸುವ ರೀತಿ ವಿನೂತನವಾದುದು. ಹೀಗೆ ಈತನ ಸ್ವರವಚನಗಳು ವೀರಶೈವ ಧರ್ಮದ ಎಲ್ಲ ತಾತ್ವಿಕ ವಿಷಯಗಳನ್ನು ಬಿಡಿ ಬಿಡಿಯಾಗಿ ನಿರೂಪಿಸುತ್ತವೆ. ರಾಗ ಸಮನ್ವಿತವಾದ ಈ ಹಾಡುಗಳನ್ನು ಸ್ವರ ಜೋಡಿಸಿ ಹಾಡಿದಾಗ ಭಾವಪ್ರಕಾಶವನ್ನು, ರಾಗರಮ್ಯತೆಯನ್ನು ಓದುಗರಿಗೆ ತಂದುಕೊಡುತ್ತವೆ. ಒಟ್ಟಿನಲ್ಲಿ “ಅವನ ಹಾಡುಗಳ ವಿಷಯ ಗಹನವಾಗಿದ್ದರೂ, ತತ್ವಪೂರ್ಣವೂ ಪರಿಣಾಮಕಾರಿಯೂ ಆಗಿವೆ. ಸ್ವಾನುಭಾವದ ನಿರೂಪಣೆ, ರಾಗ – ತಾಳ ನಿರ್ದೇಶನದೊಡನೆ ಲಲಿತವಾದ ಕಾವ್ಯಮಾರ್ಗವನ್ನು ಇಲ್ಲಿ ರಚಿಸಿಕೊಂಡಿದೆ. ಸಹಜವಾದ ಪ್ರಾಸ ವಿನ್ಯಾಸ, ಬೆಡಗಿನ ಚಾತುರ್ಯ, ಆಧ್ಯಾತ್ಮ ಸಾಹಿತ್ಯಕ್ಕೆ ಮಾದರಿಯಾದ ರೀತಿಯಲ್ಲಿದೆ. ತ್ರಿವಿಧಿಗಿಂತ ಹೆಚ್ಚಾಗಿ ನಾಗಿದೇವನ ಹಾಡುಗಳು ಉನ್ನತಮಟ್ಟದ್ದಾಗಿದೆ. ಅಲ್ಲಿ ಅವನ ಸ್ವಯಂ ರಚನಾಶಕ್ತಿ ಪ್ರತಿಭೆ ಗರಿಗೆದರಿದೆ.”[7]

ಹೀಗೆ ಕರಸ್ಥಲ ನಾಗಿದೇವನ ತತ್ವಪರಿಣತಿ,ಕಾವ್ಯ ಪ್ರತಿಭೆ, ಅನುಭಾವ ಪಕ್ವತೆಗಳು ಎಲ್ಲ ಕೃತಿಗಳಲ್ಲಿ ಸಹಜವಾಗಿ ಪ್ರಕಟಿವಾಗಿದೆ. ಆಧ್ಯಾತ್ಮ ಸಾಹಿತ್ಯ ಕ್ಷೇತ್ರದಲ್ಲಿ ಈತನ ಹೆಸರು ಈ ಕೃತಿಗಳಿಂದಾಗಿ ಚಿರಸ್ಥಾಯಿಯಾಗಿದೆ.

 

[1] ಶಾಸನಗಳಲ್ಲಿ ಶಿವಶರಣರು ಪುಟ ೧೪೭

[2] ನೂರೊಂದು ವಿರಕ್ತರು, ಕ.ವಿ.ವಿ. ಪತ್ರಿಕೆ ಪು.೨೭

[3] ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ, ಸಂಪುಟ ೪ – ೨, ಪು.೭೫೬

[4] ವಿಜಯಕಲ್ಯಾಣ (ಸಂ. ಪ್ರೊ. ಸಂ.ಶಿ. ಭೂಸನೂರಮಠ) ಪು.೧೩೪

[5] ಕಾಲಜ್ಞಾನ ಸಂಗ್ರಹ ಭಾಗ – ೧ (ಸಂ.ಶ್ರೀ ಶಿವಬಸವಸ್ವಾಮಿಗಳು ) ಪ್ರಸ್ತಾವನೆ ಪು. – XVI

[6] ಕರ್ನಾಟಕ ಕವಿಚರಿತೆ ಭಾಗ – ೨,ಪು.೨೯

[7] ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ , ಪುಟ – ೧೪೬