ಕರಸ್ಥಲ ಮಲ್ಲಿಕಾರ್ಜುನೊಡೆಯ

ಕರಸ್ಥಲ ಸಾಹಿತ್ಯ ಪರಂಪರೆಯಲ್ಲಿ ಬಂದಮತ್ತೊಬ್ಬ ಪ್ರಸಿದ್ಧ ವ್ಯಕ್ತಿ ಕರಸ್ಥಲ ಮಲ್ಲಿಕಾರ್ಜುನೊಡೆಯ. ಈತನ ವೈಯುಕ್ತಿಕ ಜೀವನದ ಬಗೆಗೆ ಹೆಚ್ಚಿಗೆ ಏನೂ ತಿಳಿದು ಬರುವುದಿಲ್ಲ. ‘ಬ್ರಹ್ಮದ್ವೈತ ಸಿದ್ದಾಂತ ಷಟ್ಪ್ಸಲಾಭರಣ’ದ ಆದಿ – ಅಂತ್ಯ ಕಂದ ಪದ್ಯಗಳಿಂದ ಮಲ್ಲಿಕಾರ್ಜುನೊಡೆಯನ ಗುರು ‘ಶಾಂಕೇಶ’ನೆಂದು ವಿದಿತವಾಗುತ್ತದೆ. ಕರಸ್ಥಲ ವೀರಣ್ಣೊಡೆಯ, ಕರಸ್ಥಲ ನಾಗಿದೇವನ ಗುರುವೂ ಮಲ್ಲಿಕಾರ್ಜುನೊಡೆಯನು ಈ ಪರಂಪರೆಗೆ ಸೇರಿದವನನಾಗಿದ್ದಾನೆ. ವೀರಣ್ಣೊಡೆಯ, ನಾಗಿದೇವರುಗಳು ಪ್ರೌಢದೇವರಾಯನ ಕಾಲದಲ್ಲಿದ್ದವರೆಂಬುದು ತಿಳಿದು ಬರುವುದರಿಂದ, ಈತನೂ ಅವರ ಸಮಕಾಲೀನನೆಂದು ಊಹಿಸಲವಕಾಶವಿದೆ.

ಬ್ರಹ್ಮಾದ್ವೈತ ಸಿದ್ಧಾಂತ ಷಟ್ಸ್ಥ ಲಾಭರಣದ ಪ್ರತಿಯೊಂದು ಸ್ಥಲದ ಕೊನೆಯಲ್ಲಿ “ಇದು ಶ್ರೀಮದವಿತೋರು ಲಿಂಗಾಂಗ ಸಂಯೋಗಾನುಭವ ಪ್ರಸಿದ್ಧ ಪರಿಪೂರ್ಣಶೀಲ ಪರಮಾದ್ವೈತ ವಿಶ್ರಾಂತರುಮಪ್ಪ ಪರಮಾಚಾರರೂಪ ಶ್ರೀ ಕರಸ್ಥಲದ, ಮಲ್ಲಿಕಾರ್ಜುನೊಡೆಯರು………” ಎಂದಿದೆ.ಇದರಿಂದ ಲಿಂಗಾಂಗ ಸಾ,ಮರಸ್ಯರೂಪದ ಶಿವಾನುಭವದಲ್ಲಿ ಪ್ರಸಿದ್ಧನೂ, ಪರಿಪೂರ್ಣಶೀಲ ಪರಮಾದ್ವೈತದಲ್ಲಿ ನೆಲೆಗೊಂಡವನೂ, ಪರಮ ಆಚಾರ ಸ್ವರೂಪನಾದ ಈತ ಶಿವಾನುಭಾವದ ಪರಮ ಚರಮ ಸೀಮೆಯಲ್ಲಿದ್ದು, ಅತ್ಯಂತ ಆಚಾರನಿಷ್ಠನೂ, ತತ್ವಜ್ಞಾನಿಯೂ ಆಗಿದ್ದನೆಂದು ಹೇಳಬಹುದು. ಬ್ರಹ್ಮದ್ವೈತ ಸಿದ್ದಾಂತ ಷಟ್ಸ್ಥಲಾಭರಣ ಎಂಬ ಗ್ರಂಥವನ್ನು ಸಂಕಲಿಸುವುದರ ಜೊತೆಗೆ ವಚನಗಳನ್ನು ರಚನೆ ಮಾಡಿದ್ದಾನೆ.ಈಗ ಇವುಗಳನ್ನು ಅವಲೋಕಿಸಬಹುದು.

. ವಚನಗಳು: ಮಲ್ಲಿಕಾರ್ಜುನೊಡೆಯನು ವಚನಗಳನ್ನು ರಚಿಸುವುದರ ಮೂಲಕ ತನ್ನ ಪ್ರತಿಭೆಯನ್ನು ತೋರ್ಪಡಿಸಿದ್ದಾನೆ. ಪರಮಗುರು ಶಾಂತೇಶ, ಪ್ರಸನ್ನ ಪ್ರಭು ಶಾಂತಮಲ್ಲಿಕಾರ್ಜುನದೇವೆಂಬ ಅಂಕಿತವನ್ನೊಳಗೊಂಡ ಆರು ವಚನಗಳು ಈಗ ಲಭಿಸಿವೆ. ಈತನ ಅಂಕಿತದ ಬಗೆಗೆ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಬ್ರಹ್ಮಾದ್ವೈತ ಸಿದ್ಧಾಂತ ಷಟ್ಸ್ಥಲಾಭರಣದಲ್ಲಿ ಪರಮಗುರು ಶಾಂತೇಶ ಎಂಬ ಅಂಕಿತದ ನಾಲ್ಕು ವಚನಗಳಿದ್ದು ಸಂಪಾದಕರಾದ ಡಾ.ಆರ್.ಸಿ. ಹಿರೇಮಠ ಅವರು ಅವುಗಳ ಕರ್ತೃ ಅಜ್ಞಾತ ಎಂದು ಪ್ರಶ್ನಾರ್ಥಕ ಚಿಹ್ನೆ ಹಾಕಿದ್ದಾರೆ.[1] “ಈ ಅಂಕಿತದ ಒಂದು ವಚನ (ಕರಸ್ಥಲದ ಲಿಂಗವ …..) ಗುರುಸಿದ್ಧದೇವನ ಚಿದೈಶ್ವರ್ಯ ಚಿದಾಭರಣದಲ್ಲಿಯೂ ಉಲ್ಲೇಖಗೊಂಡಿದೆ.ಈ ಕೃತಿಯ ಸಂಪಾದಕರಾದ ಶ್ರೀ ಪಿ.ಎಂ. ಗಿರಿರಾಜು ಅವರು ಈ ವಚನದ ಕರ್ತೃ ಕರಸ್ಥಲದ ಮಲ್ಲಕಾರ್ಜುನೊಡೆಯನೆಂದು ಹೇಳಿದ್ದಾರೆ.”[2] ಬ್ರ.ಸಿ.ತ.ದ. ಆದಿ – ಅಂತ್ಯದ ಕಂದ ಮತ್ತು ವಚನಗಳ ಅಂಕಿತ ಒಂದೇ ಆಗಿರುವುದಿರಿಂದ ಈ ವಚನಗಳ ಕರ್ತೃ ಮಲ್ಲಿಕಾರ್ಜುನನೊಡೆಯನೆಂಬುದು ಸ್ಪಷ್ಟವಾಗಿ ಹೇಳಬಹುದು.ಅಲ್ಲದೇ ಸಕಲ ಪುರಾತನರ ವಚನಗಳ ಕಟ್ಟುಗಳಲ್ಲಿ ಎರಡು ವಚನಗಳು (ಕರಸ್ಥಲದ ಲಿಂಗವ ಬಿಟ್ಟು, ಸತಿಯನೋಡಿ) ಮಡಿವಾಳ ಮಾಚಯ್ಯಗಳ ಸಮಯಾಚಾರದ ಮಲ್ಲಿಕಾರ್ಜುನ ಎಂಬ ವಚನಕಾರರ ಹೆಸರಿನಡಿಯಲ್ಲಿ ದೊರೆಯುತ್ತವೆ. ಅಂಕಿತ ಮಾತ್ರ “ಪರಮ ಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನ” ಎಂದಿದೆ. ಇಬ್ಬರು ಹೆಸರಿನಲ್ಲಿಯು ವಿಶೇಷಣವನ್ನು ತೆಗೆದರೆ ಉಳಿಯುವ ‘ಮಲ್ಲಿಕಾರ್ಜುನ’ ಎಂಬುದು, ಇಬ್ಬರ ಅಂಕಿತದಲ್ಲಿನ ‘ಪರಮ ಪಂಚಾಕ್ಷರಮೂರ್ತಿ’ ಮತ್ತು ‘ಪರಮಗುರು’ ಎಂಬುದನ್ನು ತೆಗೆದರೆ ಉಳಿಯುವ ‘ಶಾಂತ ಮಲ್ಲಿಕಾರ್ಜುನ’ ಎಂಬುದು ಒಂದೇ ಆಗಿರುವುದು. ಇವರಿಬ್ಬರೂ ಭಿನ್ನರೋ ಅಥವಾ ಅಭಿನ್ನರೋ ಎಂಬ ಸಂಶಯಕ್ಕೆ ಎಡೆಮಾಡುತ್ತದೆ. ಆದ್ದರಿಂದ ‘ಕಾಲಮಾನದ ದೃಷ್ಟಿಯಿಂದ ಒಬ್ಬ ೧೨ನೆಯ ಶರಮಾನಕ್ಕೆ ಸೇರಿದವನಾದರೆ, ಇನ್ನೊಬ್ಬ ೧೫ನೆಯ ಶತಮಾನಕ್ಕೆ ಸೇರಿದವನಾಗಿದ್ದಾನೆ. ಹಸ್ತ ಪ್ರತಿಗಳಲ್ಲಿ ಮಡಿವಾಳ ಮಾಚಯ್ಯಗಳ ಸಮಾಚಾರದ’ ಎಂದು ಪಾಠಾಂತರದೊಂದಿಗೆ ದೊರೆಯುತ್ತದೆ. ಇದರಿಂದ ಮಡಿವಾಳ ಮಾಚಯ್ಯನ ಸಮಯಾಚಾರವನ್ನು (ಅಂದರೆ ಗಣಾಚಾರ ನಿಷ್ಠೆಯನ್ನು) ಪಾಲಿಸುವ ವ್ಯಕ್ತಿ ಎಂಬುದು ಸ್ಪಷ್ಟವಾಗುತ್ತದೆ. ಆ ವ್ಯಕ್ತಿ ಯಾವ ಕಾಲದವನಾದರೂ ಆಗಿರಬಹುದು. ಈಗ ದೊರೆತ ಮಲ್ಲಿಕಾರ್ಜುನನೊಡೆಯನ ವಚನಗಳಲ್ಲಿ ಗಣಾಚಾರನಿಷ್ಠೆ ವ್ಯಕ್ತವಾಗಿದೆ. ಹೀಗಾಗಿ ಕರಸ್ಥಲದ ಮಲ್ಲಕಾರ್ಜುನೊಡೆಯನೇ ‘ಮಡಿವಾಳ ಮಾಚಯ್ಯಗಳ ಸಮಯಾಚಾರ’ವನ್ನು ಪಾಲಿಸುವ ಮಲ್ಲಿಕಾರ್ಜುನ ಆಗಿರುವ ಸಂಭವವಿದೆ. ಇದನ್ನು ಖಚಿತಗೊಳಿಸಲು ಇನ್ನಷ್ಟು ಆಧಾರಗಳ ಅವಶ್ಯಕತೆಯಿದೆ.”[3]

ಇಷ್ಟಲಿಂಗವಿದ್ದೂ ಸ್ಥಾವರಲಿಂಗ ಪೂಜಿಸುವ ನರಕಿ ನಾಯಿಗಳ ನಿಂದೆಯನ್ನು ಇಲ್ಲಿಯ ವನಚಗಳಲ್ಲಿ ವಿಮರ್ಶಿಸಲಾಗಿದೆ.

ಕರಸ್ಥಲದ ಲಿಂಗವ ಬಿಟ್ಟು
ಧರೆಯ ಮೇಲಣ ಪ್ರತಿಷ್ಠೆಗೆರಗುವ
ನರಕಿ ನಾಯಿಗಳನೆಂನೆಂಬೆನಯ್ಯಾ
||

ಎಂದು ಮೂದಲಿಸಿದ್ದಾನೆ. ಸತಿ, ಸುತ, ಸಂಸಾರದಲ್ಲಿ ಮೈಮರೆತವರನ್ನು ಟೀಕಿಸಿದ್ದಾನೆ. ಅಂತರಂಗದಲ್ಲಿ ಅರಿವಿಲ್ಲದ ಬಹಿರಂಗ ಶ್ರೀಮಂತರನ್ನು ಕುರಿತು ಹೇಳುತ್ತಾ “ಅಂತರಂಗದಲ್ಲಿ ಅರಿವು ಬಹಿರಂಗದಲ್ಲಿ ಕ್ರಿಯೆಯುಳ್ಳ ಮಹಾತ್ಮನೆ ಭಕ್ತಿ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ”ನೆಂದು ಹೇಳಿದ್ದಾನೆ. ವಾಯುವಿನೊಳಗಣ ಪರಿಮಳವ ಹಿಡಿದು ದಂಡೆಯ ಕಟ್ಟಿ ಮಂಡೆಯೊಳಗೆ ಮುಡಿಯಬಹುದೆ ಅಯ್ಯಾ? ಬಯಲ, ಮರೀಚಿಕಾ ಜಲವ ಕೊಡನಲ್ಲಿ ತುಂಬಿ ಹೊತ್ತು ತಂದು ಅಡಿಗೆಯ ಮಾಡಿಕೊಂಡು ಉಣಬಹುದೆ ಅಯ್ಯಾ? ಎಂಬಂಥ ವಾಕ್ಯಗಳು ನೇರ ನಿರೂಪಣೆ, ಸರಳ ಭಾಷೆ – ಭಾವಗಳಿಂದ ಓದುಗರ ಗಮನವನ್ನು ಸೆಳೆಯುತ್ತದೆ.

. ಬ್ರಹ್ಮಾದ್ವೈತ ಸಿದ್ಧಾಂತ ಷಟ್ಸ್ಥಲಾಭರಣ : ಷಟ್ಸ್ಥಲ ಸಿದ್ಧಾಂತವನ್ನು ನಿರೂಪಿಸುವುದೇ ಈ ಸಂಕಲನದ ಮುಖ್ಯ ಉದ್ದೇಶವಾಗಿದೆ. ಪ್ರತಿಯೊಂದು ಸ್ಥಲದ ಅಂತ್ಯದಲ್ಲಿ “ಶ್ರೀ ಕರಸ್ಥಲದ ಮಲ್ಲಕಾರ್ಜುನೊಡೆಯರು ಸೇರಿಸಿದ ಮಹಾನುಭವ ಬೋಧೆಯಪ್ಪ ಶ್ರೀ ಮದ್ಬ್ರಹ್ಮಾದ್ವೈತ ಸಿದ್ಧಾಂತ ಷಟ್ಸ್ಥಲಾಭರಣ” ಎಂದು ಹೇಳಲಾಗಿದ್ದು, ಈ ಕೃತಿಯ ಸಂಕಲನಕಾರ ಮಲ್ಲಿಕಾರ್ಜುನೊಡೆಯನೆಂಬುದು ಸ್ಪಷ್ಟವಾಗುತ್ತದೆ. ಲಿಂಗಾಲೀಲಾವಿಲಾಸ ಚಾರಿತ್ರ, ಶೂನ್ಯ ಸಂಪಾದನೆ, ವಿಶೇಷಾನುಭವ ಷಟ್ಸ್ಥಲ, ಷಟ್ಪ್ರಕಾರ ಸಂಗ್ರಹ ಮೊದಲಾದ ಗ್ರಂಥಗಳ ಮಾದರಿಯಲ್ಲಿ ಈ ಕೃತಿಯು ವೀರಶೈವ ತತ್ವವನ್ನು ಪ್ರತಿಪಾದಿಸುತ್ತದೆ.

ಮಹಾಶೂನ್ಯಸ್ಥಲದಿಂದ ಜ್ಞಾನಶೂನ್ಯವಪ್ಪ ಸರ್ವಶೂನ್ಯ ಸ್ಥಲದವರೆಗೆ ೬೧ ಸ್ಥಲಗಳಲ್ಲಿ ಈ ಕೃತಿಯು ವ್ಯಾಪಿಸಿದೆ. ಪ್ರತಿಯೊಂದು ಸ್ಥಲದ ಆರಂಭದಲ್ಲಿ ಆಗಮ ಸೂತ್ರಗಳನ್ನು ಹೇಳಿ, ಅನಂತರ ಅನೇಕ ಶಿವಶರಣರ ವಚನಗಳನ್ನು ಸಂದರ್ಭೋಚಿತವಾಗಿ ಸೇರಿಸಲಾಗಿದೆ. ಬಸವಯುಗದ ೩೯ ಶರಣರ ೬೭೮ ವಚನಗಳು ಇಲ್ಲಿ ಸೇರ್ಪಡೆಗೊಂಡಿವೆ. ೧೧ ವೃತ್ತಗಳು ೧೧ಕಂದ ಪದ್ಯಗಳಲ್ಲಿ ಈ ಕೃತಿಯ ಸ್ವರೂಪ, ಮಹತ್ವ, ಉಪಯೋಗವನ್ನು ಕುರಿತು ಮಲ್ಲಿಕಾರ್ಜುನೊಡೆಯನು ವಿವರಿಸಿದ್ದಾನೆ.

ಬ್ರಹ್ಮಾದ್ವೈತ ಸಿದ್ಧಾಂತ ಷಟ್ಸ್ಥಲಾಭರಣ ಕೃತಿಯ ರಚನೆಯ ಹಿಂದಿರುವ ಉದ್ದೇಶವನ್ನು ಮಲ್ಲಿಕಾರ್ಜುನೊಡೆಯನು ಕಂದ ಪದ್ಯಗಳಲ್ಲಿ ವಿವರಿಸಿದ್ದಾನೆ. ಅವುಗಳ ಒಟ್ಟು ಸಾರವನ್ನು ಹೀಗೆ ಸಂಗ್ರಹಿಸಬಹುದು; ವೇದ, ಆಗಮ, ಪುರಾಣ, ಆದ್ಯರ ವಚನಗಳಲ್ಲಿ ಆದಿ, ಮಧ್ಯ, ಅಂತ್ಯ, ಈ ಮೂರು ಬಗೆಯ ಭೇದ ತೋರುವುದನ್ನು ಭಕ್ತಜನರಿಗಾಗಿ ಸಾಧನೆಯನ್ನು ಮಾಡುವೆನು, ಶ್ರುತಿ, ಶಾಸ್ತ್ರ, ಆಗಮ, ವಚನಗಳಲ್ಲಿರುವ ಉತ್ತಮವಾದ ವಾಕ್ಯಗಳನ್ನು ಉಲ್ಲೇಖಿಸಿ, ಮತಿಯ ಚಮತ್ಕೃತಿಗಳಿಗೆ ಆಶ್ಚರ್ಯವಾಗುವಂತೆ ಈ ಕೃತಿಯನ್ನು ಶರಣ ಜನ ಸಮೂಹಕ್ಕೆ ವಿವರಿಸುವೆನು. ಬ್ರಹ್ಮದಲ್ಲಿ ಹುಟ್ಟಿದ ನಾದವೇ ಬ್ರಹ್ಮ ಎಂದು ತಿಳಿದು ತಮ್ಮನ್ನು ತಾವು ಅರಿತುಕೊಂಡವರಿಗೆ ಬ್ರಹ್ಮ ಪದವು ಕೈಗನ್ನಡಿಯಂತಾಗುವ ಬ್ರಹ್ಮಾದ್ವೈತವನ್ನು ಸಂತೋಷದಿಂದ ಸೇರಿಸುವೆನು. ಬ್ರಹ್ಮಾದ್ವೈತವನ್ನು ಅರಿತ ಬ್ರಹ್ಮಾದ್ವೈತಿಗಳು ಹೇಳಿದ ವಚನಗಳಿಂದ ಬ್ರಹ್ಮಮಯವಾಗಿರುವ ಈ ಬ್ರಹ್ಮಾದ್ವೈತವನ್ನು ಷಟ್ಸ್ಥಲಬ್ರಹ್ಮಿಗಳು ಮೆಚ್ಚುವಂತೆ ಸೇರಿಸುವೆನು. ಸಿದ್ಧಾಂತದಿಂದಲ್ಲದೆ ಶುದ್ಧ ಶಿವೈಕ್ಯವನ್ನು ಪಡೆಯಲಾಗದು ಎಂಬುದನ್ನು ತಿಳಿದು ಈ ಷಟ್ಸ್ಥಲಾಭರಣವನ್ನು ಶ್ರದ್ಧೆಯಿಂದ ಸಾಮರಸ್ಯದವರೆಗೆ ಉದ್ಧರಿಸುವೆನು. ಬಸವ, ಸಿದ್ಧರಾಮ, ಚೆನ್ನಬಸವ, ಮಡಿವಾಳ ಮಾಚಿದೇವ, ಅಲ್ಲಮಪ್ರಭು, ಅಜಗಣ್ಣ ಮೊದಲಾದವರು ಹೇಳಿದ ವಚನಾಮೃತವನ್ನು ಉದ್ದರಿಸಿ ಷಟ್ಸ್ಥಲಾಭರಣವನ್ನು ರಚಿಸುವೆನು. ಬ್ರಹ್ಮಾಜ್ಞಾನದಲ್ಲಿ ಬ್ರಹ್ಮಾದ್ವೈತವನ್ನು ತಿಳಿದು ಅದನ್ನು ಮೆಚ್ಚಿಕೊಂಡವರೇ ಬ್ರಹ್ಮಾನಂದದಲ್ಲಿ ಮುಳುಗಿ ಪರಬ್ರಹ್ಮವೇ ತಾವಾಗುವರು. ಈ ಗ್ರಂಥವು ಅರಿಯುವವರಿಗೆ ಅರಿವನ್ನು ಹೇಳಿಕೊಡುತ್ತದೆ. ಸುಜ್ಞಾನದ ಕನ್ನಡಿಯಂತೆ ಶೋಭಿಸುವುದು. ಅದನ್ನು ಕೇಳಿದವರಿಗೆ ಪರಮತತ್ವ, ಇದನ್ನು ಬರೆದವರಿಗೆ ಓದಿದವರಿಗೆ ಹೇಳಿದವರಿಗೆ ಮತ್ತು ಕೇಳಿದವರಿಗೆ ಜನ್ಮ ಜನ್ಮಾಂತರದಲ್ಲಿ ನಿರ್ಮಲವಾದ ಶಿವಭಕ್ತಿಯ ಅಮೃತವು ಪ್ರಾಪ್ತವಗುತ್ತದೆ.

ಬ್ರಹ್ಮಾದ್ವೈತ ಸಿದ್ಧಾಂತ ಷಟ್ಸ್ಥಲಾಭರಣದಲ್ಲಿ ಸ್ಥಲಗಳ ವಿಭಜನೆ ಎರಡು ಹಂತಗಳಲ್ಲಿ ನಡೆದಿದೆ. ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗ, ಶರಣ, ಐಕ್ಯ ಈ ಆರು ಮೂಲಸ್ಥಲಗಳು. ಭಕ್ತಸ್ಥಲಕ್ಕೆ ಮೊದಲು ವಿಶ್ವೋತ್ಪತ್ತಿ ಸ್ಥಲ, ಮನೋವಿಕಾರಾದಿಯಾದ ಗರ್ವಸಂಸಾರ ನಿರಸನ ಸ್ಥಲ, ಜ್ಞಾನಕ್ರಿಯಾ ವಿಶ್ವಾಸಸ್ಥಲ, ಎಂಬುವು ಸೇರಿಕೊಂಡಿವೆ. ಹೀಗೆ ಒಂಬತ್ತು ಪ್ರಮುಖ ಸ್ಥಲಗಳಲ್ಲಿ ಆವಾಂತರ ಸ್ಥಲಗಳು ಸೇರ್ಪಡೆಗೊಂಡಿವೆ.

ಆದುದರಿಂದ “ಈ ವಿಭಜನೆಯು ಬೇರೆ ಕೆಲವು ಷಟ್ಸ್ಥಲ ಗ್ರಂಥಗಳ ಸ್ಥಲ ವಿಭಜನೆ ಕೆಲವೊಂದು ದೃಷ್ಟಿಯಿಂದ ಸಾಮ್ಯವಾಗಿಯೂ, ಮತ್ತೆ ಕೆಲವು ದೃಷ್ಟಿಯಿಂದ ಮಲ್ಲಿಕಾರ್ಜುನನೊಡೆಯರ ಸ್ವಾನುಭಾವ ಸ್ವಚಿಂತನೆಗಳ ಮೂಲಕ ವೈಶಿಷ್ಟಪೂರ್ಣವೂ ಆಗಿ ಕಂಡುಬರುತ್ತದೆ.”[4]ಹೀಗಾಗಿ ಸ್ಥಲ ವಿಭಜನೆಯಲ್ಲಿ ಉಳಿದ ಎಲ್ಲ ಗ್ರಂಥಗಳಿಗಿಂತಲೂ ಇದು ಹೆಚ್ಚು ಶಾಸ್ತ್ರಿಯವಾಗಿರುವುದು ಸ್ಪಷ್ಟವಾಗುತ್ತದೆ.

ಪ್ರತಿಯೊಂದು ಸ್ಥಲದ ಆರಂಭದಲ್ಲಿ ಆಯಾ ಸ್ಥಲದ ಸಾರ, ಅಲ್ಲಿ ಕಂಡುಬರುವ ವಿಕಾಸ ಇವುಗಳನ್ನೆಲ್ಲ ಚಿಕ್ಕ ಚಿಕ್ಕ ಗದ್ಯ ಭಾಗಗಳಲ್ಲಿ ವಿವರಿಸಲಾಗಿದೆ. ಗ್ರಂಥದ ಕೊನೆಯಲ್ಲಿ” ಈ ಬ್ರಹ್ಮಾದ್ವೈತ ಸಿದ್ಧಾಂತ ಷಟ್ಸ್ಥಲಾಭರಣದ ಅನಿರ್ವಾಚ್ಯಮಪ್ಪ ಮಹಾಶೂನ್ಯ ಮೊದಲು ಜ್ಞಾನಶೂನ್ಯಮಪ್ಪ ಸರ್ವಶೂನ್ಯ ಕಡೆಯಾದ ಅರುವತ್ತೊಂದು ಸ್ಥಲಕ್ಕೆ ಸೇರಿಸಿದ ಆಗಮ ಶ್ರುತಿ ವೇದಶಾಸ್ತ್ರ ಪುರಾಣದೊಳು ಗ್ರಂಥ ೨೬೦, ವೃತ್ತ ೨೪, ವಚನ ೬೨೮, ಕಂದ ೧೧, ಆದ್ಯರು ವಚನ ಅಂತುಭಯ ಗ್ರಂಥ ಆದ್ಯರ ವಚನ ಶ್ರುತಿ ವೃತ್ತ ಕಂದ ಕೂಡಿ ೯೭೫ಕ್ಕಂ ಶ್ರೀ ಬ್ರಹ್ಮಾದ್ವೈತಸಿದ್ಧಾಂತ ಷಟ್ಸ್ಥಲಾಭರಣದ ಸ್ಥಲಕಟ್ಟಿನ ವಿವರಣೆಯಲ್ಲಿ ಭಕ್ತನೋರ್ವನ ಮನದ ವಿವಿಧ ಹಂತಗಳನ್ನು ವಿವರಿಸುವಲ್ಲಿ ಯಶಸ್ವಿಯಾಗಿದೆ.

ಹೀಗೆ ಕರಸ್ಥಲ ಪರಂಪರೆಯಲ್ಲಿ ವೀರಣ್ಣೊಡೆಯ, ನಾಗಿದೇವ, ಮಲ್ಲಿಕಾರ್ಜುನೊಡೆಯರು ವೈವಿದ್ಯಮಯವಾದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ವೀರಶೈವ ಸಾಹಿತ್ಯಕ್ಕೆ, ಆ ಮೂಲಕ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟವಾದ ಕೊಡುಗೆಯನ್ನು ನೀಡಿದ್ದಾರೆ. ಇವರ ಸಮಗ್ರ ಸಾಹಿತ್ಯವನ್ನು ಒಂದೆಡೆ ಕೊಡುವ ಪ್ರಯತ್ನವಾಗಿದೆ ಈ ಸಂಪುಟ.

ಪರಿಷ್ಕರಣ

ಪ್ರಸ್ತುತ ಸಂಪುಟದ ಕೃತಿಗಳನ್ನು ಬೇರೆ ಬೇರೆ ಹಸ್ತಪ್ರತಿಗಳ ಆಧಾರದಿಂದ ಪರಿಷ್ಕರಿಸಲಾಗಿದೆ. ಈಗಾಗಲೇ ಪ್ರಕಟವಾದವುಗಳಲ್ಲಿ ಪಾಠ – ದೋಷಗಳಿದ್ದರೆ ಸರಿಪಡಿಸಿಕೊಂಡು ಇಲ್ಲಿ ಸೇರಿಸಲಾಗಿದೆ. ಅವುಗಳ ವಿವರಗಳು ಹೀಗಿವೆ.

ಕರಸ್ಥಲದ ವೀರಣ್ಣೊಡೆಯನ ಸಾಹಿತ್ಯ

. ಕರಸ್ಥಲದ ವೀರಣ್ಣೊಡಯನ ಕಂದ

ಬೆಂಗಳೂರು ವಿ.ವಿ. ಕನ್ನಡ ಅಧ್ಯಯನದ ಕೇಂದ್ರದ ಹಸ್ತಪ್ರತಿ ಭಾಂಡಾರದ ಕೆ. ೨೦೧/೨ನೆಯ ಕ್ರಮಾಂಕದ ತಾಳೆಗರಿ ಪ್ರತಿ

ಪ್ರಕಟಣೆ: ಕರ್ನಾಟಕ ಭಾರತಿ ಸಂ:೫ – ೪, ಸಂ: ಶ್ರೀ ಎಸ್. ಶಿವಣ್ಣ, ೧೯೭೩

. ನಿಃಕಲ ಶತಕ

ಪ್ರಕಟಣೆ: ಶತಕ ಸಂಪುಟ ಭಾಗ – ೧, ಸಂ. ಶ್ರೀ ಜಿ.ಎ. ಶಿವಲಿಂಗಯ್ಯ, ೧೯೯೫

. ಪರಮವಿರಕ್ತನ ಐಕ್ಯಸ್ಥಲ

ಧಾರವಾಡ ಕನ್ನಡ ಸಂಶೋಧನೆ ಸಂಸ್ಥೆಯ ೬೬೩ನೆಯ ಕ್ರಮಾಂಕದ ತಾಳೆಗರಿ ಪ್ರತಿ

. ಅಷ್ಟವಿಧಾರ್ಚನೆ

ಧಾರವಾಡ ಡಾ. ಆರ್.ಸಿ ಹಿರೇಮಠ ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿ ಭಾಂಡಾರದ ೯೧೦ನೆಯ ಕ್ರಮಾಂಕದ ಕಾಗದ ಪ್ರತಿ

ಪ್ರಕಟಣೆ: ಹೇಮಕೂಟ ೫ – ೯, ಸಂ: ಡಾ. ವೀರಣ್ಣ ರಾಜೂರ, ೧೯೮೦

. ಮಂತ್ರೋತ್ಪತ್ತಿ ರಗಳೆ

ಧಾರವಾಡದ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿ ಭಾಂಡಾರದ ತಾಳೆಗರಿ ಪ್ರತಿ

ಪ್ರಕಟಣೆ: ಬಸವ ಪಥ ೭ – ೪, ಸಂ.ಬಿ.ಬಿ. ಬಿರಾದಾರ, ೧೯೮೦

. ವಚನಗಳು

ಪ್ರಕಟಣೆ: ಸಂಕೀರ್ಣ ವಚನ ಸಂಪುಟ – ೫, ಡಾ. ಬಿ.ಆರ್. ಹಿರೇಮಠ,೧೯೯೩.

ಸಂಕಿರ್ಣ ವಚನ ಸಂಪುಟ – ೯, ಸಂ: ಡಾ. ವೀರಣ್ಣ ರಾಜೂರ, ೧೯೯೩

. ಸ್ವರವಚನಗಳು

ಪ್ರಕಟಣೆ: ಶಿವಯೋಗ ಪ್ರದೀಪಿಕೆ (ಸಂ. ಡಾ.ವೀರಣ್ಣ ರಾಜೂರ, ೧೯೮೧) ಗಣವಚನ ರತ್ನಾವಳಿ (ಸಂ.ಎಸ್. ಉಮಾಪತಿ, ೧೯೮೬) ಪರಮಮೂಲ ಜ್ಞಾನ ಷಟ್ಸ್ಥಲ (ಸಂ. ಡಾ.ಎಂ.ಎಸ್. ಸುಂಕಾಪುರ,೧೯೯೭), ಸ್ವರವಚನಸಂಪುಟ – ೧ (ಸಂ. ಎಸ್. ಶಿವಣ್ಣ ೧೯೯೫), ಸ್ವರವಚನ ಸಂಪುಟ – ೪ (ಸಂ. ಡಾ. ವೈ.ಸಿ. ಭಾನುಮತಿ, ೧೯೯೫)

ಕರಸ್ಥಲ ನಾಗಿದೇವನ ಸಾಹಿತ್ಯ

೧. ಕರಸ್ಥಲ ನಾಗಿದೇವನ ತ್ರಿವಿಧಿ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಭಾಂಡಾರದ ೯೮ನೆಯ ಕ್ರಮಾಂಣಕದ ತಾಳೆಗರಿ ಪ್ರತಿ

ಪ್ರಕಟಣೆ: ಸದ್ಧರ್ಮ ದೀಪಿಕೆ ೭೦, ೭೧, ಸಂ: ಚೆನ್ನಮಲ್ಲಿಕಾರ್ಜುನರು, ೧೯೩೭

. ಅಕ್ಷರ ಚೌಪದನ

ಧಾರವಾಡದ ಡಾ. ಆರ್.ಸಿ. ಹಿರೇಮಠ ಕನ್ನಡದ ಅಧ್ಯಯನ ಪೀಠದ ೬೭೮ನೆಯ ಕ್ರಮಾಂಕದ ಕಾಗದ ಪ್ರತಿ

ಮೈಸೂರು ವಿ.ವಿ.ದ ಕುಂವೆಪು ಕನ್ನಡ ಅಧ್ಯಯನ ಸಂಸ್ಥೆಯ ೩೨೮ನೆಯ ಕ್ರಮಾಂಕದ ಕಾಗದ ಪ್ರತಿ.

. ಏಕವಿಂಶತಿ ದೀಕ್ಞಾವಿಧಾನ

ಮೈಸೂರು ವಿ.ವಿ. ಕುವೆಂಪು ಅಧ್ಯಯನ ಸಂಸ್ಥೆಯ ಕೆ – ೧೭೫೧) ನೆಯ ಕ್ರಮಾಂಕದ ತಾಳೆಗರಿ ಪ್ರತಿ.

ಪ್ರಕಟಣೆ: ಸಾವಧಾನ ೨೩ – ೧೬ ಡಾ. ಜಚನಿ

. ಮಡಿವಾಳ ಮಾಚಯ್ಯಗಳ ತಾರಾವಳಿ

ಧಾರವಾಡದ ಡಾ. ಆರ್.ಸಿ. ಹೀರಮಠ ಕನ್ನಡ ಅಧ್ಯಯನ ಪೀಠದ ೩೫೦ನೆಯ ಕ್ರಮಾಂಕದ ತಾಳೆಗರಿ ಪ್ರತಿ.

ಪ್ರಕಟಣೆ: ವೀರಶೈವ ತಾರಾವಳಿ ಸಂಪುಟ, ಸಂ: ಡಾ. ವೀರಣ್ಣ ರಾಜೂರ, ೧೯೯೪.

. ಶಾಂತ ಶತಕ

ಹಂಪಿ ಕನ್ನಡ ವಿಶ್ವವಿದ್ಯಾಲಯದ ೨೮೯ನೆಯ ಕ್ರಮಾಂಕದ ತಾಳೆಗರಿ ಪ್ರತಿ

ಪ್ರಕಟಣೆ: ಸದ್ಧರ್ಮ ದೀಪಿಕೆ ಸಂ: ೬೪, ೬೫ ಸಂ: ಶ್ರೀ ಚೆನ್ನಮಲ್ಲಿಕಾರ್ಜುನರು

. ಲಿಂಗನಿಜಸ್ಥಲದ ವಚನ

ಧಾರವಾಡದ ಕನ್ನಡ ಸಂಶೋಧನ ಸಂಸ್ಥೆಯ ೬೬೩ನೆಯ ಕ್ರಮಾಂಕದ ಕಾಗದ ಪ್ರತಿ.

. ಪಂಚವಿಶಂತಿ ಲೀಲಾಂಕಿತ ಸ್ತೋತ್ರ

ಧಾರವಾಡದ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಕಾಗದ ಪ್ರತಿ.

ಪ್ರಕಟಣೆ: ಪರಂಜ್ಯೋತಿ ೧೮ – ೩, ಸಂ. ಡಾ. ವೀರಣ್ಣ ರಾಜೂರ – ೧೯೯೪

. ಕಾಲಜ್ಞಾನ

ಮೈಸೂರು ವಿ.ವಿ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕೆ – ೨೫೭ನೆಯ ಕ್ರಮಾಂಕದ ತಾಳೆಗರಿ ಪ್ರತಿ

ಪ್ರಕಟಣೆ: ಕಾಲಜ್ಞಾನ ಸಂಗ್ರಹ, ಸಂ, ಶಿವಬಸವಸ್ವಾಮಿಗಳು, ಮೈಸೂರು, ೧೯೪೫

೧೦. ವಚನಗಳು

ಪ್ರಕಟಣೆ: ಕರ್ನಾಟಕ ಕವಿಚರಿತೆ ಭಾಗ – ೨, ಡಾ. ಆರ್. ನರಸಿಂಹಾಚಾರ್ – ೧೯೭೩

೧೧. ಸ್ವರವಚನಗಳು

ಪ್ರಕಟಣೆ: ಶಿವಯೋಗ ಪ್ರದೀಪಿಕೆ (ಸಂ. ಡಾ. ವೀರಣ್ಣ ರಾಜೂರ, ೧೯೮೧) ಗಣವಚನ ರತ್ನಾವಳಿ (ಸಂ. ಎಸ್. ಉಮಾಪತಿ, ೧೯೮೬) ಸ್ವರಚನದ ಸಂಪುಟ – ೨ (ಸಂ. ಎಸ್.ಶಿವಣ್ಣ ೧೯೯೫) ಸ್ವರವಚನ ಸಂಪುಟ – ೪ (ಸಂ. ಡಾ. ವೈ.ಸಿ. ಭಾನುಮತಿ, ೧೯೯೫), ಕರಸ್ಥಲ ನಾಗಲಿಂಗನ ಚರಿತ್ರೆ (ಸಂ. ಕೆ.ಆರ್. ಶೇಷಗಿರಿ ೧೯೭೨), ಬಸವಪಥ ೫ – ೪, ೧೯೮೩

ಕರಸ್ಥಲ ಮಲ್ಲಿಕಾರ್ಜುನೊಡೆಯ

. ವಚನಗಳು

ಸಂಕೀರ್ಣ ವಚನ ಸಂಪುಟ – ೫, ಸಂ. ಡಾ. ವೀರಣ್ಣ ರಾಜೂರ, ೧೯೯೩

. ಬ್ರಹ್ಮಾದ್ವೈತ ಸಿದ್ಧಾಂತ ಷಟ್ಸ್ಥಲಾಭರಣ

ಧಾರವಾಡದ ಡಾ. ಆರ್.ಸಿ. ಹಿರೇಮಠ ಕನ್ನಡದ ಅಧ್ಯಯನದ ಪೀಠದ ೭೭ನೆಯ ಕ್ರಮಾಂಕದ ಕಾಗದ ಪ್ರತಿ.

ಪ್ರಕಟಣೆ: ಸಂ. ಡಾ. ಆರ್.ಸಿ. ಹಿರೇಮಠ, ೧೯೭೩

ಮೇಲೆ ಸೂಚಿಸಿದ ಹಸ್ತಪ್ರತಿಗಳನ್ನು, ಗ್ರಂಥಗಳನ್ನು, ಪತ್ರಿಕೆಗಳನ್ನು ಈ ಸಂಪುಟದ ಸಿದ್ಧತೆಗಾಗಿ ಬಳಸಿಕೊಳ್ಳಲಾಗಿದೆ. ಏಕೈಕ ಪ್ರತಿಯಲ್ಲಿ ದೊರೆತ ಕೃತಿಗಳಿಗೆ ಪಾಠಾಂತರ ಹಾಕಿಲ್ಲ. ಮೂಲದಲ್ಲಿ ದೊರೆತ ಕೃತಿಗಳಿಗೆ ಪಾಠವಿದ್ದರೆ ಮಾತ್ರ ಅದನ್ನು ಮೂಲ ಎಂಬ ಸಂಕೇತಕೊಟ್ಟು ಅಡಿಯಲ್ಲಿ ಕೊಡಲಾಗಿದೆ. ಸಂಭವನೀಯ ಶುದ್ಧಪಾಠಗಳನ್ನು, ಚೌಕಕಂಸಿಯಲ್ಲಿ ಹಾಕಿ ಮೇಲೆ ಇಡಲಾಗಿದೆ. ಒಂದಕ್ಕಿಂತ ಹೆಚ್ಚು ಕೃತಿಗಳು ಹೆಚ್ಚು ಪ್ರತಿಗಳು ದೊರೆತಲ್ಲಿ, ಪಾಠಂತರಗಳನ್ನು ಹಾಕಲಾಗಿದೆ. ಹಸ್ತಪ್ರತಿಗಳು ಲಭ್ಯವಿಲ್ಲದ ಕೃತಿಗಳನ್ನು ಈಗಾಗಲೇ ಪ್ರಕಟವಾದ ಮೂಲಗಳಿಂದಲೇ ಎತ್ತಿಕೊಂಡು, ದೋಷಗಳನ್ನು ಸರಿಪಡಿಸಿ ಸ್ವೀಕರಿಸಲಾಗಿದೆ. ಗ್ರಂಥಭಾಗ ತ್ರುಟಿವಾಗಿದ್ದಲ್ಲಿ x x x x x x x x ಈ ಚಿಹ್ನೆಯೊಂದಿಗೆ ಹಾಕಲಾಗಿದೆ.

ಹೀಗೆ ವೀರಣ್ಣೊಡೆಯನ ಏಳು ಕೃತಿಗಳು, ನಾಗಿದೇವನ ಹನ್ನೊಂದು ಕೃತಿಗಳು, ಮಲ್ಲಿಕಾರ್ಜುನೊಡೆಯನ ಎರಡು ಕೃತಿಗಳೂ ಸೇರಿ ಒಟ್ಟು ಇಪ್ಪತ್ತು ಕೃತಿಗಳು ಈ ಸಂಪುಟದ ಮೂಲಕ ಒಂದೆಡೆ ಬೆಳಕು ಕಾಣುತ್ತಲಿವೆ. ಅಲ್ಲದೆ ಈವರೆಗೆ ಅಜ್ಞಾತವಾಗಿದ್ದ ಪರಮವಿರಕ್ತನ ಐಜ್ಯಸ್ಥಲ (ವೀರಣ್ಣೊಡೆಯ), ಅಕ್ಷರ ಚೌಪದನ, ಲಿಂಗನಿಜಸ್ಥಲ ವಚನ (ನಾಗಿದೇವ) ಕೃತಿಗಳು ಮೊದಲ ಬಾರಿಗೆ ಪ್ರಕಟವಾಗುತ್ತಲಿವೆ. ಜೊತೆಗೆ ಬೇರೆ ಬೇರೆ ವಚನಸಂಕಲನಗಳಲ್ಲಿ, ನಿಯತಕಾಲಿಕೆಗಳಲ್ಲಿ ಚದುರಿಹೋಗಿದ್ದ ವೀರಣ್ಣೊಡೆಯ, ನಾಗಿದೇವರ ಸ್ವರವಚನಗಳೂ ಸಹ ಒಂದೆಡೆ ಈಗ ನಮಗೆ ಲಭ್ಯವಾದಂತಾಗಿದೆ. ಕರಸ್ಥಲ ಸಾಹಿತ್ಯದ ವೈವಿಧ್ಯತೆ, ವಿಶಿಷ್ಟತೆ ಮತ್ತು ಅದರ ವ್ಯಾಪ್ತಿಯನ್ನು ಈ ಸಂಪುಟದಲ್ಲಿ ಗುರುತಿಸಬಹುದು.

ಒಟ್ಟಿನಲ್ಲಿ ಕರಸ್ಥಲ ಸಾಹಿತ್ಯ ಪರಂಪರೆಯಲ್ಲಿ ಬಂದ ಕರಸ್ಥಲ ವೀರಣ್ಣೊಡೆಯ, ನಾಗಿದೇವ, ಮಲ್ಲಿಕಾರ್ಜುನೊಡೆಯರ ಕೃತಿಗಳನ್ನು ಒಂದೆಡೆ ಸಂಹ್ರಹಿಸಿ , ಪರಿಷ್ಕರಿಸಿ ಈ ಸಂಪುಟದಲ್ಲಿ ಕ್ರಮಬದ್ದವಾಗಿ ಅಳವಡಿಸಲಾಗಿದೆ.

ಕೃತಜ್ಞತೆಗಳು

೧೯೯೯ರ ಕನ್ನಡ ವಿ.ವಿ. ಹಸ್ತಪ್ರತಿಶಾಸ್ತ್ರ ವಿಭಾಗದ ವೈಯುಕ್ತಿಕ ಯೋಜನೆಯಡಿಯಲ್ಲಿ ಕರಸ್ಥಲ ಸಾಹಿತ್ಯವನ್ನು ಸಂಪಾದನೆ ಕೈಗೆತ್ತಿಕೊಳ್ಳಲಾಗಿದೆ. ಹಸ್ತಪ್ರತಿಗಳ ಸಂಗ್ರಹ, ಪಾಠ ಪರಿಷ್ಕರಣೆ, ಸಂಪಾದನೆ ವಿಧಾನಗಳ ಬಗೆಗೆ ಸೂಕ್ತ ಸಲಹೆ – ಸಹಕಾರ ನೀಡಿದವರು ನನ್ನ ವಿದ್ಯಾಗುರುಗಳಾದ ಮಾನ್ಯ ಕುಲಪತಿ ಡಾ. ಎಂ.ಎಂ. ಕಲಬುರ್ಗಿ ಅವರು.ಅವರ ಪ್ರೀತಿ ಪೂರ್ವಕ ಒತ್ತಾಯ ಪ್ರೋತ್ಸಾಹವಿಲ್ಲದಿದ್ದರೆ ಇಂಥದೊಂದು ಉಪೇಕ್ಷಿತ ಸಾಹಿತ್ಯ ಸಂಪುಟವೊಂದು ಬೆಳಕು ಕಾಣುತ್ತಿರಲಿಲ್ಲವೇನೋ. ಈ ಯೋಜನೆಯನ್ನು ಕೈಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕಾಗಿ ಅವರಿಗೆ ನನ್ನ ಅನಂತ ನಮನಗಳು.

ಈ ಸಂಪುಟವನ್ನು ಸಿದ್ಧಪಡಿಸುವಲ್ಲಿ ಹಲವಾರು ಸಂಸ್ಥೆಯ ಹಸ್ತಪ್ರತಿ ಭಾಂಡಾರದ ನೆರವನ್ನು ಪಡೆದಿದ್ದೇನೆ. ಧಾರವಾಡದ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನದ ಪೀಠ, ಕನ್ನಡ ಸಂಶೋಧನ ಸಂಸ್ಥೆ, ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಬೆಂಗಳೂರಿನ ಕನ್ನಡ ಅಧ್ಯಯನ ಕೇಂದ್ರ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಭಾಂಡಾರಗಳಲ್ಲಿಯ ಹಸ್ತಪ್ರತಿಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿದ ಎಲ್ಲ ಸಂಸ್ಥೆಯ ಮುಖ್ಯಸ್ಥರುಗಳಿಗೆ ನನ್ನ ಕೃತಜ್ಞತೆಗಳು.

ಈ ಸಂಪುಟದ ಸಾಕಾರರೂಪ ಪಡೆಯುವಲ್ಲಿ ಹಲವಾರು ವಿದ್ವಾಂಸರ ನೆರವನ್ನು ಪಡೆದಿದ್ದೇವೆ. ವಿಶೇಷವಾಗಿ ನನ್ನ ವಿದ್ಯಾಗುರುಗಳಾದ ಡಾ. ವೀರಣ್ಣ ರಾಜೂರ ಅವರು ಕರಸ್ಥಲ ಸಾಹಿತ್ಯದ ಬಗೆಗೆ ಬಹಳಷ್ಟು ಕೆಲಸ ಮಾಡಿದವರು. ನಾನು ಪತ್ರ ಬರೆದಾಗ ಪೋನ ಮಾಡಿದಾಗಲೆಲ್ಲ ಬೇಸರಿಸಿಕೊಳ್ಳದೇ, ತಮ್ಮಲ್ಲಿದ್ದ ಮಾಹಿತಿಯನ್ನು ಒದಗಿಸಿ ಉಪಕರಿಸಿದ್ದಾರೆ. ಜೊತೆಗೆ ಪರಿಷ್ಕರಣ ಸಂದರ್ಭದಲ್ಲಿ ಉಂಟಾದ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ್ದಾರೆ. ಹಾಗೆಯೇ ಬೆಳಗಾವಿ ಶ್ರೀ ನಾಗನೂರು ಶ್ರೀ ರುದ್ರಾಕ್ಷಿಮಠದ ವೀರಶೈವ ಸಂಶೋಧನ ಕೇಂದ್ರ ಮತ್ತು ಗ್ರಂಥಾಲಯದ ನಿರ್ದೇಶಕರಾದ ಡಾ. ಎಸ್.ಆರ್. ಗುಂಜಾಳ ಅವರು ತಮ್ಮ ಗ್ರಂಥಾಲಯದಲ್ಲಿ ಲಭ್ಯವಿದ್ದ ಕರಸ್ಥಲ ಸಾಹಿತ್ಯವನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಇವರಿರ್ವರಿಗೂ ನನ್ನ ವಂದನೆಗಳು.ಸಂಪಾದನಾ ಕಾರ್ಯದಲ್ಲಿ ನೆರವಾದ ಸಹೋದ್ಯೋಗಿ ಮಿತ್ರ ಡಾ. ಕೆ. ರವೀಂದ್ರನಾಥ್, ಮೈಸೂರಿನ ಡಾ. ವೈ.ಸಿ. ಭಾನುಮತಿ ಅವರಿಗೆ ನನ್ನ ಕೃತಜ್ಞತೆಗಳು. ಹಸ್ತಪ್ರತಿಯನ್ನು ಪ್ರತಿ ಮಾಡುವಲ್ಲಿ ಸಹಕರಿಸಿದ ನನ್ನ ಶ್ರೀಮತಿ ಯಶೋದಾ ಹಾಗೂ ಚಿರಂಜೀವಿ ವಿಕಾಸ ಅವರಿಗೂ ವಂದನೆಗಳು.

ಗ್ರಂಥ ಪ್ರಕಟಣೆಯಲ್ಲಿ ವಿಶೇಷ ಮುತುವರ್ಜಿ ವಹಿಸಿದ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರೂ, ಪ್ರಸಾರಾಂಗದ ನಿರ್ದೇಶಕರೂ ಆದ ಪ್ರೊ ಎ.ವಿ. ನಾವಡ ಹಾಗೂ ಪುಟ ವಿನ್ಯಾಸದಲ್ಲಿ ನೆರವು ನೀಡಿದ ಪ್ರಸಾರಾಂಗದ ಸಹಾಯ ನಿರ್ದೇಶಕರಾದ ಶ್ರೀ ಸುಜ್ಞಾನ ಮೂರ್ತಿಯವರ ನೆರವನ್ನು ನೆನೆಯುತ್ತೇನೆ. ಅಚ್ಚುಕಟ್ಟಾಗಿ ಟಿ.ಡಿ.ಪಿ. ಕಾರ್ಯ ಮಾಡಿದ ವಿ.ಆರ್. ಕಂಪ್ಯೂಟರ್ಸ್ ಶ್ರೀ ರಾಘವೇಂದ್ರ ಭಟ್. ಮುಖಪುಟ ರಚಿಸಿದ ಕಲಾವಿದ ಶ್ರೀ ಕೆ.ಕೆ. ಮಕಾಳಿಯವರಗೆ ನನ್ನ ವಂದನೆಗಳು.

ಡಾ. ಎಫ್.ಟಿ. ಹಳ್ಳಿಕೇರಿ

 

[1] ಬ್ರಹ್ಮಾದ್ವೈತ ಸಿದ್ಧಾಂತ ಷಟ್ಸ್ಥಲಾಭರಣ (ಸಂ. ಡಾ. ಆರ್.ಸಿ. ಹಿರೇಮಠ) ಪು.೩೪

[2] ಚಿದೈಶ್ವರ್ಯ ಚಿದಾಭರಣ (ಸಂ. ಪಿ.ಎಂ. ಗಿರಿರಾಜು) ಪು.೨೪೮

[3] ಸಂಕೀರ್ಣ ವಚನ ಸಂಪುಟ – ೮ (ಸಂ. ಡಾ. ವೀರಣ್ಣ ರಾಜೂರ, ೧೯೯೩) ಪ್ರಸ್ತಾವನೆ, ಪು: XXVI

[4] ಬ್ರಹ್ಮಾದೈತ ಸಿದ್ಧಾಂತ ಷಟ್ಸ್ಥಲಾಭರಣ (ಸಂ. ಡಾ.ಆರ್.ಸಿ. ಹಿರೇಮಠ) ಪು.೮