ಕರ್ನಾಟಕದ ಪ್ರಮುಖ ರಾಜಮನೆತನಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ವಿಜಯನಗರ. ಈ ಮನೆತನದ ಪ್ರೌಢದೇವರಾಯನ ಕಾಲಾವಧಿಯಲ್ಲಿ ಕನ್ನಡ ಸಾಹಿತ್ಯ, ಧರ್ಮ, ಸಂಸ್ಕೃತಿಗಳು ಉತ್ತುಂಗ ಶಿಖರವೇರಿದ್ದವು ಅದರಲ್ಲಿಯೂ ವೀರಶೈವ ಸಾಹಿತ್ಯವು ಇನ್ನೂಒಂದು ಹೆಜ್ಜೆ ಮುಂದೆ ಹೋಗಿ, ಹೊಸ ಹೊಸ ರೂಪಗಳಲ್ಲಿ ತನ್ನ ವೈಶಿಷ್ಟವನ್ನು ಮೆರೆದಿತ್ತು. ಶಿವಶರಣರ ವಚನಗಳ ಸಂಗ್ರಹ – ಸಂಕಲನ – ಸಂಪಾದನೆ, ಕಾಲಜ್ಞಾನ, ಅಷ್ಟಕ, ತಾರಾವಳಿ. ಕಂದ ಮುಂತಾದ ಛಂದಸ್ಸುಗಳಲ್ಲಿ ನೂತನ ಸಾಹಿತ್ಯ ಪ್ರಕಾರಗಳ ಹುಟ್ಟು, ಹಳೆಯ ಸಾಹಿತ್ಯ ರೂಪಗಳ ಮರುಹುಟ್ಟು, ವಚನ ಮತ್ತು ಕಾವ್ಯಗಳಿಗೆ ಟೀಕೆ – ಟಿಪ್ಪಣೆ – ವ್ಯಾಖ್ಯಾನ ರಚನೆ, ಸ್ಥಲಕಟ್ಟು ಜೋಡಣೆ, ತಾತ್ವಿಕ ವಿವೇಚನೆ – ಇವೇ ಮೊದಲಾದ ಹತ್ತು ಹಲವು ಕಾರ್ಯಗಳು ಈತನ ಆಳ್ವಿಕೆಯಲ್ಲಿ ಒಂದು ‘ಚಳುವಳಿ’ ಯೆಂಬಂತೆ ನಡೆದವು. ಈ ಕಾರಣಕ್ಕಾಗಿಯೇ ಕನ್ನಡ ಸಾಹಿತ್ಯ ವಾಹಿನಿಯಲ್ಲಿ ಇದೊಂದು ವೈವಿಧ್ಯಪೂರ್ಣಯುಗವೆಂದೂ ಕರೆಯಲಾಗಿದೆ. ಅಲ್ಲದೇ, ವೀರಶೈವ ಸಾಹಿತ್ಯದ ಮರು ಸುಗ್ಗಿಯಕಾಲವೆಂದೂ ಈ ಯುಗವನ್ನು ಮಾನ್ಯಮಾಡಲಾಗಿದೆ.

ಪ್ರೌಢದೇವರಾಯನು ಕ್ರಿ.ಶ. ೧೪೨೪ರಿಂದ ೧೪೪೭ರ ವರೆಗೆ ಅಂದರೆ, ೨೨ ವರ್ಷಗಳ ಕಾಲ ರಾಜ್ಯಭಾರದ ಕರ್ಣಧಾರತ್ವವನ್ನು ವಹಿಸಿದ್ದನೆಂದು ಶಾಸನಾಧಾರಗಳಿಂದ ತಿಳಿದುಬರುತ್ತದೆ. ಈತನ ಕಾಲಾವಧಿಯಲ್ಲಿ ಸಾಮ್ರಾಜ್ಯವು ರಾಜಕೀಯ ಸ್ಥಿರತೆ, ಸಾಮಾಜಿಕ ಸುಖ – ಶಾಂತಿಗಳಿಂದ ಕೂಡಿದ ನೆಮ್ಮದಿಯ ಬೀಡಾಗಿತ್ತು. ಅರಸ, ಪ್ರಧಾನಿ, ಪ್ರಜೆಗಳಾದಿಯಾಗಿ ಎಲ್ಲರೂ ಸಾಹಿತ್ಯ, ಕಲೆ, ಸಂಗೀತ, ಸಂಸ್ಕೃತಿಗಳಲ್ಲಿ ವಿಶೇಷ ಆಸಕ್ತಿ ವಹಿಸಿದ್ಧರು. ಹೀಗಾಗಿ ಈ ಅವಧಿಯಲ್ಲಿ ಸಮೃದ್ಧ, ಸತ್ವಯುತವಾದ ಸಾಹಿತ್ಯ ರಚನೆಗೊಂಡಿತು. ಚಾಮರಸ, ಲಕ್ಕಣ್ಣದಂಡೇಶ, ಮೊಗ್ಗೆಯ ಮಾಯಿದೇವ, ಗುರುಬಸವ, ಕರಸ್ಥಲ ವೀರಣ್ಣೊಡೆಯ, ಕರಸ್ಥಲ ನಾಗಿದೇವ ಮೊದಲಾದ ಕವಿಗಳು ವೈವಿದ್ಯಮಯವಾದ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದಾರೆ.

ಕರಸ್ಥಲ ಸಾಹಿತ್ಯ

‘ಕರಸ್ಥಲ’ ಎಂಬುದು ಒಂದು ವೀರಶೈವ ಪಾರಿಭಾಷಿಕ ಪದ. ಇಷ್ಟಲಿಂಗ, ಸದ್ಭಾವವೆಂಬ ಹಸ್ತ ಎಂಬ ಅರ್ಥಗಳನ್ನು ಅದು ಹೊಂದಿದೆ. ವೀರಶೈವರಲ್ಲಿ ಶ್ರೀಗುರುವು ಶಿಷ್ಯನ ಕರಸ್ಥಲಕ್ಕೆ ಇಷ್ಟಲಿಂಗವನ್ನು ಕರುಣಿಸುತ್ತಾನೆ. ಇದಕ್ಕೆ ‘ವೇಧಾದೀಕ್ಷೆ’ ಯೆಂದೂ ಕರೆಯುತ್ತಾರೆ. ಇದನ್ನೆ ಹಸ್ತಮಸ್ತಕ ಸಂಯೋಗವೆಂದೂ ಹೇಳಲಾಗುತ್ತಿದೆ. ಮಾಯಿದೇವಾಚಾರ್ಯನು ತನ್ನ ಶಿವಾನುಭವಸೂತ್ರದಲ್ಲಿ ‘ಹಸ್ತಮಸ್ತಕ ಸಂಯೋಗಾಚ್ಚಲಾದ್ವೇಧೇತಿಗೀಯತೆ’ ಎಂದು ಉಲ್ಲೇಖಿಸಿದ್ದಾನೆ.[1] ಈ ವಿಚಾರವು ತತ್ಪೂರ್ವದ ಶಿವಶರಣರ ವಚನಗಳಲ್ಲಿಯೂ ಬಂದಿದೆ. ‘ಕೂಡಲಸಂಗಮದೇವಯ್ಯ ಎನ್ನಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ’, ‘ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ’ ಎಂಬ ಉಲ್ಲೇಖಗಳನ್ನು ಗಮನಿಸಿದರೆ ‘ಕರಸ್ಥಲ’ ಎಂಬುದು ವೀರಶೈವ ವಿಶಿಷ್ಟ ಪರಿಭಾಷೆಯೆಂಬುದು ತಿಳಿದುಬರುತ್ತದೆ. ಹಾಗೆಯೇ ‘ಕರಸ್ಥಲ’ ವೆಂಬುದು ಹಂಪೆಯ ಪರಿಸರದಲ್ಲಿರುವ ಒಂದು ಗ್ರಾಮವೆಂದು ಕನ್ನಡ ನಿಘಂಟು (ಕ.ಸಾ.ಪ.ಸಂ.೨)ವಿನಲ್ಲಿ ಹೇಳಲಾಗಿದೆ. ಆದರೆ ಈ ಹೆಸರಿನ ಗ್ರಾಮ ಈಗ ಅಸ್ತಿತ್ವದಲ್ಲಿಲ್ಲ. ಬಹುಶಃ ವಿಜಯನಗರದ ಕಾಲದಲ್ಲಿ ಈ ಗ್ರಾಮವೂ ಇದ್ದರಬಹುದೆಂದು ಊಹಿಸಿಬಹುದಾಗಿದೆ.

‘ಕರಸ್ಥಲ’ದ ಮಹತ್ವವನ್ನು ತಮ್ಮ ಕೃತಿಗಳ ಮುಖಾಂತರ ಹೆಚ್ಚು ಪ್ರಚುರ ಪಡಿಸಿದವರು ಕರಸ್ಥಲ ವೀರಣ್ಣೊಡೆಯ, ಕರಸ್ಥಲ ನಾಗಿದೇವ, ಕರಸ್ಥಲ ಮಲ್ಲಿಕಾರ್ಜುನ. ಹೀಗಾಗಿ ಇವರಿಗೆ ‘ಕರಸ್ಥಲ’ ಎಂಬ ವಿಶೇಷ ಅನ್ವರ್ಥಕನಾಮ ಪ್ರಾಪ್ತವಾದಂತಿಗೆ. ಕರಸ್ಥಲದ ಗುರುಶಾಂತ ವೀರಯ್ಯ, ಪಾಲ್ಕುರಿಕೆಯ ಕರಸ್ಥಲದ ವಿಶ್ವೇಶ್ವರ, ಕರಸ್ಥಲದೇವರು ಎಂಬ ಹೆಸರಿನ ಕೆಲವರು ಕಾವ್ಯಗಳಲ್ಲಿ ಉಲ್ಲೇಖಗೊಂಡಿದ್ದರೂ ಅವರು ಕೃತಿಗಳನ್ನು ರಚಿಸಿದ ಬಗೆಗೆ ಯಾವುದೇ ಆಧಾರಗಳು ಲಭಿಸಿಲ್ಲ. ಈಗ ಉಪಲಬ್ದವಾಗಿರುವ ಕರಸ್ಥಲ ವೀರಣ್ಣೊಡೆಯ, ಕರಸ್ಥಲ ನಾಗಿದೇವ, ಕರಸ್ಥಲಮಲ್ಲಿಕಾರ್ಜುನರ ಸಾಹಿತ್ಯವನ್ನು ಒಟ್ಟಾಗಿ ‘ಕರಸ್ಥಲ ಸಾಹಿತ್ಯ’ವೆಂದು ಕರೆಯಬಹುದು. ಡಾ. ವಿ. ಶಿವಾನಂದ ಅವರು ಹೇಳುವಂತೆ ‘ಕರಸ್ಥಲ ವೀರಣ್ಣೊಡೆಯನೊಡನೆ’ ಕರಸ್ಥಲ ಸಾಹಿತ್ಯ’ವೂ ಬೆಳೆದು ಬಂದುದು ಕನ್ನಡದ ಭಕ್ತಿ ಭಾಂಡಾರದ ಶ್ರೀಮಂತಿಕೆಯ ದ್ಯೋತಕವಾಗಿದೆ.”[2]ಈ ಮೂವರ ಜೀವನ ಚರಿತ್ರೆ, ಸಾಹಿತ್ಯಿಕ ಸಾಧನೆಗಳನ್ನು ಆಧಾರಗಳ ಸಹಿತ ಈಗ ಅವಲೋಕಸಬಹುದು.

ಕರಸ್ಥಲ ವೀರಣ್ಣೊಡೆಯ

ಪ್ರೌಢದೇವರಾಯನ ಕಾಲದ ಒಬ್ಬ ಪ್ರಭಾವಿ ವ್ಯಕ್ತಿ ಕರಸ್ಥಲ ವೀರಣ್ಣೊಡೆಯ. ರಾಜಕೀಯ, ಧಾರ್ಮಿಕ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸಿದ ಈತ ನೂರೊಂದು ವಿರಕ್ತರೊಡನೆ ಅನ್ಯೋನ್ಯವಾಗಿದ್ದನು. ಅದೃಶ್ಯಕವಿ, ಶಾಂತಲಿಂಗ ದೇಶಿಕರಂತೂ ಈತನನ್ನು ನೂರೊಂದು ವಿರಕ್ತರಲ್ಲಿ ಒಬ್ಬನೆಂದು ಗುರುತಿಸಿದ್ದಾರೆ. ಪ್ರೌಢದೇವರಾಯನು ವೀರಣ್ಣೊಡೆಯನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದೆನಂಬ ಸಂಗತಿಯನ್ನು ವಿರೂಪಾಕ್ಷ ಪಂಡಿತ ಹಾಗೂ ಮೋದಿಯ ರುದ್ರ ಕವಿಗಳು ತಮ್ಮ ಕಾವ್ಯಗಳಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ ಈತನ ಜೀವನ ಹಲವು ತಿರುವುಗಳನ್ನು ಪಡೆದುಕೊಂಡಿದೆ.

ಪ್ರೌಢದೇವರಾಯನ ಆಸ್ಥಾನದಲ್ಲಿ ಈತ ಮಂತ್ರಿಯಾಗಿದ್ದನೆಂದು ಊಹಿಸಲು ನಮಗೆ ಶಾಸನಗಳು ಪುಷ್ಟಿಯನ್ನು ನೀಡುತ್ತದೆ. ಆ ಕಾಲದ ಮಂತ್ರಿಗಳಿಗೆ ಸಾಮಾನ್ಯವಾಗಿ ಒಡೆಯ ಎಂಬುದು ಒಂದು ಪ್ರಶಸ್ತಿಯಾಗಿತ್ತು. ಇರುಗಪ್ಪೊಡೆಯ, ಬೈಚಪ್ಪೊಡೆಯ, ನಾಗಣ್ಣೊಡೆಯ ಎಂದು ಶಾಸನಗಳಲ್ಲಿ ಕರೆಯಲಾಗಿದೆ. ಆದ್ದರಿಂದ ವೀರಣ್ಣೊಡೆಯ ಎಂಬ ಹೆಸರೇ ಸೂಚಿಸುವಂತೆ ಈತನೂ ಪ್ರೌಢದೇವರಾಯನಲ್ಲಿದ್ದ ಲಕ್ಕಣ್ಣ, ಜಕ್ಕಣ್ಣ, ಮುದ್ದಣ್ಣ, ನಾಗಣ್ಣ ಮುಂತಾದ ಮಹಾ ಮಂತ್ರಿಗಳಲ್ಲಿ ಒಬ್ಬನಾಗಿದ್ದನೆಂದು ಹೇಳಬಹುದು. ಇಲ್ಲಿಯವರೆಗೆ ಈತನನ್ನು ಕುರಿತಂತೆ ಆರು ಶಾಸನಗಳು ಲಭಿಸುತ್ತಿವೆ.[3] ಚೆನ್ನಬಸವಪುರಾಣ, ನೂರೊಂದು ವಿರಕ್ತರ ಕಾವ್ಯ, ಕರಸ್ಥಲ ನಾಗಲಿಂಗನ ಚರಿತ್ರೆ, ಶಿವತತ್ವ ಚಿಂತಾಮಣಿ ಮುಂತಾದ ಕಾವ್ಯಗಳಲ್ಲಿ ಈತನ ಜೀವನಕ್ಕೆ ಸಂಬಂಧಿಸಿದಂತೆ ಸಂಗತಿಗಳು ಉಲ್ಲೇಖಗೊಂಡಿವೆ. ಇವೆಲ್ಲವುಗಳ ಆಧಾರದಿಂದ ಕರಸ್ಥಲ ವೀರಣ್ಣೊಡೆಯನ ಜೀವನ ಮತ್ತು ಸಾಹಿತ್ಯವನ್ನು ಪರಮರ್ಶಿಸಬಹುದು.

ಜೀವನ ವಿವರಗಳು

ವಿರುಪಣ್ಣೊಡೆಯ, ವೀರಣ್ಣೊಡೆಯ, ವೀರಣ್ಣಯ್ಯ, ವೀರಯ್ಯ, ವೀರಣಯ್ಯ, ಗುರು ವೀರಣ್ಣಯ್ಯ, ಕರಸ್ಥಲ ವೀರಣ್ಣ, ಕರಸ್ಥಲ ಗುರುಶಾಂತವೀರಯ್ಯ ಎಂದು ಶಾಸನ ಮತ್ತು ಕಾವ್ಯಗಳಲ್ಲಿ ಈತನನ್ನು ಕರೆಯಲಾಗಿದೆ. ‘ವೀರಣ್ಣೊಡೆಯ’ ಎಂಬ ಹೆಸರಿನ ಜೊತೆಗೆ ‘ಕರಸ್ಥಲ’ ಎಂಬ ಪದ ಪ್ರಾಪ್ತವಾದುದು ಬಹುಶಃ ನಾಗಿದೇವನಿಗೆ ಗುರುವಾದ ಮೇಲೆಯೇ ಎಂದು ತೋರುತ್ತದೆ. ಶ್ರೀರಂಗಪಟ್ಟಣದ ಸಮೀಪವಿರುವ ಕಾವೇರಿ ನದಿ ತೀರದಲ್ಲಿರುವ ಬೊಮ್ಮೂರು ಈತನ ಜನ್ಮಗ್ರಾಮ. ಹದಿನಾಡೊಳೆಸೆವ ಬೊಮ್ಮನಹಳ್ಳಿಯಲ್ಲಿರ್ಪ ಮದನ ಹರಶರಣ ವೀರಣಯ್ಯ’ ಎಂದು ಶಿವತತ್ವ ಚಿಂತಾಮಣಿಯಲ್ಲಿ ಹೇಳಲಾಗಿದೆ.[4] ಕರಸ್ಥಲ ನಾಗಲಿಂಗನ ಚರಿತ್ರೆಯಲ್ಲಿ ಹೇಳಿರುವ ಹಾಗೆ ಈತನ ಸ್ಥಳ ಬೊಮ್ಮೂರು ಮತ್ತು ಲಕ್ಕಣ್ಣ ದಂಡೇಶ ಹೇಳಿರುವ ಬೊಮ್ಮನಹಳ್ಳಿ ಒಂದೇ ಆಗಿವೆ.

ಕರಸ್ಥಲ ವೀರಣ್ಣೊಡೆಯನ ಕಾಲವನ್ನು ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲವಾದರೂ, ಶಾಸನಾಧಾರಗಳಿಂದ ಕೆಲವು ಅಂಶಗಳು ತಿಳಿದುಬರುತ್ತವೆ. ವೀರಣ್ಣೊಡೆಯನಿಗೆ ಸಂಬಂಧಿಸಿದ ಶಾಸನಗಳು ಕ್ರಿ.ಶ. ೧೪೦೪ ರಿಂದ ೧೪೩೪ರ ಅವಧಿಯಲ್ಲಿ ರಚನೆಗೊಂಡಂಥವುಗಳು. ಆದ್ದರಿಂದ ಈತ ಮೊದಲನೆಯ ದೇವರಾಯ (೧೪೦೬ – ೧೪೨೨)ನ ಕಾಲದಿಂದಲೂ ರಾಜ್ಯದಲ್ಲಿ ಅಧಿಕಾರಿಯಾಗಿದ್ದನೆಂಬುದು ಸ್ಪಷ್ಟವಾಗುತ್ತದೆ. ಅರಗನಾಡ ಪ್ರಜೆಗಳು ಒಂದಾಗಿ ವೀರಣ್ಣೊಡೆಯರಿಗೆ ಹುಲ್ಲೇನಹಳ್ಳಿಯನ್ನು ದಾನಮಾಡಿದುದನ್ನು ಕ್ರಿ.ಶ. ೧೪೦೪ ರ ಶಾಸನವು ಉಲ್ಲೇಖಿಸಿದೆ.[5] ವೀರಣ್ಣೊಡೆಯನ ಅರಗಪ್ರಾಂತಕ್ಕೆ ಒಡೆಯನಾಗಿದ್ದನೆಂದು ಇದರಿಂದ ತಿಳಿದುಬರುತ್ತದೆ. ಅಲ್ಲದೇ ೧೮ ಕಂಪಣದ ಅರಗವೇಂಠೆಯ ೨೫ ಮಹಾಜನಗಳಿಗೆ ವೀರಣ್ಣೊಡೆಯರು ವೀಳೆಯಿತ್ತು ಅರಗದ ಮೂಲಸ್ಥಾನದ ಕಲ್ಲಿನಾಥದೇವರ ಸೇವೆಗೆಂದು ಬೊರಡಿಗಳ್ಳಿಯ ಭೂಮಿಯನ್ನು ಪಡೆದುಕೊಂಡರೆಂಬುದನ್ನು ಕ್ರಿ.ಶ. ೧೪೩೪ರ ಶಾಸನಲ್ಲಿ ಹೇಳಲಾಗಿದೆ.[6]ಜೊತೆಗೆ ಈತ ಅಧಿಕಾರ (ಮಂತ್ರಿ)ದಲ್ಲಿದ್ದಾಗ ಜನತೆಗೆ ಭಾರವಾಗಿದ್ದ ತೆರಿಗೆಗಳನ್ನು ಕಡಿಮೆಗೊಳಿಸಿದುದನ್ನು ಒಂದು ಶಾಸನದಲ್ಲಿ ಹೇಳಲಾಗಿದೆ.[7] ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಈತ ಮಂತ್ರಿಯಾಗಿದ್ದಾಗ ಜನಹಿತಕಾರಿ ಕಾರ್ಯಗಳನ್ನು ಮಾಡಿ ಹೆಸರು ಗಳಿಸಿದ್ದನೆಂದು ವ್ಯಕ್ತವಾಗುತ್ತದೆ. ಪ್ರೌಢದೇವರಾಯನಿಗಂತೂ ಈತ ಆಪ್ತ ಮಂತ್ರಿಯಾಗಿ ಅಳಿಯನಾಗಿ ರಾಜ್ಯದ ಕಲ್ಯಾಣಕ್ಕೆ ಶ್ರಮಿಸುತ್ತಿದ್ದನು. ಒಟ್ಟಿನಲ್ಲಿ ಈತನ ಕಾಲವನ್ನು ವಿದ್ವಾಂಸರು ಸು. ೧೪೩೦ ಎಂದು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ವೀರಣ್ಣೊಡೆಯ ೧೩೮೦ – ೧೪೫೦ರವರೆಗೂ ಜೀವಿಸಿರುವ ಸಾಧ್ಯತೆಗಳಿವೆ.

ವೀರಣ್ಣೊಡೆಯನ ಜೀನವಮಾರ್ಗ ಎರಡು ರೀತಿಯಾಗಿ ಹರಿದು ಬಂದಿರುವುದನ್ನು ಕಾಣಬಹುದು ಒಂದು: ಪೂರ್ವಾರ್ಧ ಜೀವನವು ಪ್ರೌಢದೇವರಾಯನ ಆಸ್ಥಾನದಲ್ಲಿ ಮಹಾಮಂತ್ರಿಯಾಗಿ, ಅಪ್ತನಾಗಿ ಕಾಣಿಸಿಕೊಂಡಿದ್ದು, ಎರಡು: ಉತ್ತರಾರ್ಧ ಜೀವನವು ಕರಸ್ಥಲ ನಾಗಿದೇವನ ಗುರುವಾಗಿ, ವೀರಶೈವ (ಕರಸ್ಥಲ) ಸಾಹಿತ್ಯಕ್ಕೆ ತನ್ನದೇ ಆದ ಸೇವೆಯನ್ನು ಸಲ್ಲಿಸಿದ್ದು. ಈ ಎರಡು ಮಾರ್ಗಗಲ್ಲಿ ಈತನ ಜೀವನದ ಉತ್ತರಾರ್ಧವನ್ನು ಶಿವತತ್ವ ಚಿಂತಾಮಣಿ, ಚೆನ್ನಬಸವ ಪುರಾಣ, ಕರಸ್ಥಲ ನಾಗಿದೇವನ ಚರಿತ್ರೆ, ನೂರೊಂದು ವಿರಕ್ತರ ಕಾವ್ಯ ಮುಂತಾದ ಕಾವ್ಯಗಳು ಧೀರ್ಘವಾಗಿ ಚಿತ್ರಿಸಿವೆ. ಅವುಗಳ ಒಟ್ಟು ಸಾರವನ್ನು ಹೀಗೆ ಸಂಗ್ರಹಿಸಬಹುದು.

ನಾಗಿದೇವನು ಗುರುವನ್ನು ಹುಡುಕಿಕೊಂಡು ಬರುತ್ತಿರುವಾಗ ಆತನ ಕೈಯಲ್ಲಿ ‘ಪೀಠ ರಹಿತವಾಗಿ ಲಿಂಗ’ ವಿದ್ದುದನ್ನು ಕಂಡು ವೀರಣ್ಣೊಡೆಯ ಅದಕ್ಕೆ ಪೀಠವನ್ನು ಅನುವುಗೊಳಿಸಿ ವೀರಶೈವ ತತ್ವಗಳನ್ನು ಬೋಧಿಸುತ್ತಾನೆ. ಆದರೆ ನಾಗಿದೇವನಿಗೆ ತನ್ನ ಗುರುವಿನ ಐಹಿಕ ಜೀವನದ ರೀತಿ – ನೀತಿ ಹಿಡಿಸುವುದಿಲ್ಲ. ಒಂದು ದಿನ ವೀರಣ್ಣೊಡೆಯ ಪುಷ್ಪವಾಟಿಕೆಗೆ ಹೋಗಿರಲು ನಾಗಿದೇವ ‘ಮೂರಡೆಯಲ್ಲಿ ಮಲವ ಬಿಟ್ಟು’ ಅಲ್ಲಿದ್ದ ನಾರಿಯನ್ನು ಕುರಿತು ‘ತರುಣೀ ಕೇಳೀ ಮಲಕ್ಕೊಳಗಾದೊಡೆ ಇಲ್ಲಿ ಸುಖಮಿರಲಿ ನಿಮ್ಮೊಡೆಯರ, ಅಲ್ಲದೊಡೆ ನಮ್ಮಕೂಡೀಗಬರಲಿ’ ಎಂದು ಹೇಳಿ ಹೊರಟು ಹೋಗುತ್ತಾನೆ, ವೀರಣ್ಣೊಡೆಯ ಬಂದು ನಾಗಿದೇವನೆಲಲ್ಲಿ? ಎಂದು ಕೇಳಲು, ನಾಗಿದೇವ ನಿಮ್ಮ ಗುರುವೋ ಶಿಷ್ಯನೋ ಕಾಣೆ ಎನ್ನುತ್ತ ನಡೆದ ಘಟನೆಯನ್ನು ತಿಳಿಸಿ ಹೇಳುತ್ತಾನೆ. ಈ ವಿಷಯವನ್ನು ತಿಳಿದ ವೀರಣ್ಣೊಡೆಯ ನಾಗಿದೇವನಿದ್ದಲ್ಲಿಗೆ ಧಾವಿಸಿ ಬರುತ್ತಾನೆ. ವೀರಣ್ಣೊಡೆಯ ಅರಸುತ್ತ ಬಂದು ಅರಣ್ಯದಲ್ಲಿ ಶಿವಯೋಗದಲ್ಲಿ ನಾಗಿದೇವನನ್ನು ಎಚ್ಚರಗೊಳಿಸುತ್ತಾನೆ. ಇದರಿಂದ ನಾಗಿದೇವನಿಗೆ ತುಂಬ ಸಂತೋಷವಾಗುತ್ತದೆ. ಮುಂದೆ ಇಬ್ಬರೂ ಪ್ರೌಢದೇವರಾಯನ ಸ್ಥಳವಾದ ಪಂಪಾಪುರಕ್ಕೆ ಬರುತ್ತಾರೆ.

ಪಂಪಾಪುರ (ವಿಜಯನರಗ)ಕ್ಕೆ ಬಂದ ಮೇಲೆ ವೀರಣ್ಣೊಡೆಯನು ನಾಗಿದೇವನೊಡೆಯನೆಯೇ ಇರುತ್ತಾನೆ. ಅಲ್ಲಿ ಒಂದು ಘಟನೆ ನಡೆಯುತ್ತದೆ. ನಾಗಿದೇವನು ಭಿಕ್ಷೆಗೆಂದು ಹೋಗಿರಲು ‘ಹುಚ್ಚರಾಹುತನ ಸತಿ’ ಶೃಂಗಾರಗೊಂಡು ಆತನೊಲಿದು ಬಂದು, ತನ್ನನ್ನೇ ಭಿಕ್ಷೆಯಿತ್ತುದಾಗಿ ಹೇಳುತ್ತಾಳೆ. ನಾಗಿದೇವ ಅವಳಿಗೊಲಿದಿರಲು ಹುಚ್ಚರಾವುತನು ಬಂದು ನಾಗಿದೇವನನ್ನು ಖಡ್ಗದಿಂದ ಇರಿಯುತ್ತಾನೆ. ಆಗ ನಾಗಿದೇವನಿಗೆ ಗಾಯವಾಗದಿರುವುದನ್ನು ಕಂಡು ಅವನ ಯೋಗಕಾಯಕ್ಕೆಬೆರಗಾಗುತ್ತಾನೆ. ಇಂಥ ಶಿವಯೋಗಿಯನ್ನು ನಾನು ಕಂಡಿಲ್ಲವೆಂದು ಪ್ರೌಢದೇವರಾಯನಿಗೆ ತಿಳಿಸುತ್ತಾನೆ. ಆಗ ದೊರೆ ವೀರಣ್ಣೊಡೆಯ, ನಾಗಿ ದೇವರನ್ನು ಅರಮನೆಗೆ ಕರೆಸುತ್ತಾನೆ. ರಾಜನ ಅಪ್ಪಣೆಯಂತೆ ಇವರಿಬ್ಬರಿಗೂ ಗುರುಬಸವ (ಸಪ್ತಕಾವ್ಯದ)ನಿದ್ದ ಸ್ಥಳಕ್ಕೆ ಹೋಗುತ್ತಾರೆ. ಕರಸ್ಥಲ ನಾಗಿದೇವ ಅಲ್ಲಿಯೇ ಕೆಲವು ದಿನಗಳ ಕಾಲ ಇದ್ದು, ಶ್ರೀಶೈಲಕ್ಕೆ ಹೋಗುತ್ತಾನೆ. ಹೋಗುವಾಗ ವೀರಣ್ಣಡೆಯನಿಗೆ ನೀನು ವಿದ್ಯಾನಗರದಲ್ಲಿಯೇ ಇರಬೇಕೆಂದು ತಿಳಿಸುತ್ತಾನೆ. ನಂತರ ಪ್ರೌಢದೇವರಾಯನು ತನ್ನ ಮಗಳನ್ನು “ವೀರಣ್ಣೊಡೆಯನಿಗೆ ಕೊಟ್ಟು ಮದುವೆ ಮಾಡುತ್ತಾನೆ. ಆದುದರಿಂದ “ವೀರಣ್ಣೊಡೆಯನಿಗೆ ತನ್ನ ಮಗಳನ್ನು ಕೊಡವಲ್ಲಿ ರಾಯನು ಯೋಗ್ಯ ವರನನ್ನೇ ಹುಡುಕಿದಂತಿದೆ. ಏಕೆಂದರೆ ವೀರಣ್ಣೊಡೆಯ ಈಗ ವೀರಶೈವ ಮಹಾನುಭಾವನಾದರು ಒಂದು ಕಾಲಕ್ಕೆತನ್ನ ಸಾಮ್ರಾಜ್ಯದಲ್ಲೇ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದವನು. ಈ ಸಂಗತಿ ಅವನಿಗೆ ತಿಳಿದಿದ್ದು ಈಗ ವೀರಶೈವರೊಡನೆ ರಕ್ತ ಸಂಬಂಧ ಮಾಡಿಕೊಳ್ಳುವಲ್ಲಿ ಸ್ವಯಂ ಪ್ರೇರಿತನಾಗಿ ಆ ಧರ್ಮದ ಆದರ್ಶವನ್ನು ಅರಿತಂತಿದೆ. ಇದು ಅಂದಿನ ವೀರಶೈವದ ಅಭ್ಯುದಯಕ್ಕೆ ನಾಂದಿಯಾಗಯಿತೆನ್ನಬೇಕು.”[8]

ಲೌಕಿಕವಾಗಿ ಬಾಳಿ ಅಲೌಕಿಕ ಸಿದ್ಧಿಯನ್ನು ಸಂಪಾದಿಸಿದ ಕರಸ್ತಲ ವೀರಣ್ಣೊಡೆಯನು ಲೋಕಾನುಭವ – ಶಿವಾನುಭವಗಳೆರಡನ್ನೂ ಗಳಿಸಿಕೊಂಡವರು. ಧರ್ಮ, ತತ್ವಬೋಧೆಯ ಜೊತೆಗೆ ವೀರಶೈವ ತತ್ವಬೋಧಕವಾದ ಕೃತಿಗಳನ್ನು ರಚಿಸಿ, ವೀರಶೈವಸಾಹಿತ್ಯ, ಆ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಸೇವೆಯನ್ನು ಸಲ್ಲಿಸಿದ್ದಾನೆ. ಈಗ ಈತನ ಉಪಲಬ್ಧವಾದ ಕೃತಿಗಳನ್ನು ಪರಿಶೀಲಿಸಬಹುದು.

ಕರಸ್ಥಲ ವೀರಣ್ಣೊಡೆಯನು ಕಂದ, ಶತಕ, ವೃತ್ತ, ತ್ರಿಪದಿ, ರಗಳೆ, ವಚನ, ಸ್ವರವಚನ – ಹೀಗೆ ವಿವಿಧ ಪ್ರಕಾರಗಳಲ್ಲಿ ಏಳು ಕೃತಿಗಳನ್ನು ರಚಿಸಿದ್ದಾನೆ.

೧. ವೀರಣ್ಣೊಡೆಯರ ಕಂದ

೨. ನಿಃಕಲ ಶತಕ

೩. ಪರಮವಿರಕ್ತನ ಐಕ್ಯಸ್ಥಲ

೪. ಅಷ್ಟವಿಧಾರ್ಚನೆ

೫. ಮಂತ್ರೋತ್ಪತ್ತಿ ರಗಳೆ

೬. ವಚನ

೭. ಸ್ವರವಚನ

ಈ ಎಲ್ಲ ಕೃತಿಗಳು ಸ್ತುತಿ ರೂಪದಲ್ಲಿದ್ದು, ಲಿಂಗ, ಮಂತ್ರ, ಅರ್ಚನೆ ಮೊದಲದ ವೀರಶೈವ ತತ್ವಗಳ ನಿರೂಪಣೆ ಇಲ್ಲಿದೆ.

. ವೀರಣ್ಣೊಡೆಯರ ಕಂದ: ಕರಸ್ಥಲ ವೀರಣ್ಣೊಡೆಯವ ಕಂದವು ೨೫ ಕಂದ ಪದ್ಯಗಳನ್ನೊಳಗೊಂಡ ಲಘುಸ್ತೋತ್ರ ರಚನೆಯಾಗಿದೆ. ಸಾಕಾರ ಪರಮಾತ್ಮನನ್ನು ವರ್ಣಿಸುತ್ತಾ ಆತನ ಕರಸ್ಥಲದಲ್ಲಿ ಪ್ರತಿಷ್ಟಿತಗೊಂಡುದು ಇದರ ವಿಷಯವಾಗಿದೆ. ಪ್ರತಿಯೊಂದು ಪದ್ಯವೂ ‘ಕಂಡೆನೆನ್ನ ಕರಕಮಲದೊಳು’ ಎಂದು ಮುಕ್ತಾಯವಾಗುತ್ತದೆ. ಈ ಕೃತಿಯು ಆಧ್ಯಾತ್ಮ ರಸದ ಸ್ತ್ರೋತ್ರಗೀತೆಯಾಗಿದ್ದು, ಕವಿ ಭಕ್ತಿಭಾವಾವೇಶದೊಂದಿಗೆ ಪರಮಾತ್ಮನನ್ನು ಸ್ತುತಿಸಿದ್ದಾನೆ.

ವೇದ ಮೊದಲಾದ ಶಾಸ್ತ್ರದ
ಲಾದಿಯ ಪೌರಾಣದಾಗಮ ರಹಸ್ಯಗಳು
ಬೋಧಿಸಿದ ನಾದಮೂರ್ತಿಯ
ಪಾದಸುಪದ್ಮವನು ಕಂಡೆ ಕರಕಮಲದೊಳುಂ
||

ಎಂದು ನಾನಾ ರೀತಿಯಾಗಿ ಶಿವನನ್ನು ಸ್ತುತಿಸಿದ್ದಾನೆ. ಅಜಹತಿ ಸುರಮನು ಮುನಿಗಳ ಭಜಿಸುವ ಬಾಧನೆಗೆ ಸಿಲುಕದ ಜಡಧ್ವಯವನ್ನು ಕರಕಮದಲ್ಲಿ ಕಂಡು ಪುಲಕಿತನಾಗಿದ್ದಾನೆ. ಒಟ್ಟಿನಲ್ಲಿ “ಕನ್ನಡದ ಕಂದ ಸಾಹಿತ್ಯದಲ್ಲಿ ಕರಸ್ಥಲ ವೀರಣ್ಣೊಡೆಯನ ರಚನೆ ಉತ್ಕ್ರಷ್ಟವೂ, ಉದಾತ್ತವೂ, ವಿಶಿಷ್ಟವೂ ಆಗಿದೆ. ಇದು ವೀರಶೈವ ತತ್ವಗಳನ್ನು ನಿರೂಪಿಸುತ್ತಿದ್ದು, ಲಿಂಗಪೂಜಕರಿಗಂತೂ ನಿತ್ಯ ಪಾರಾಯಣಕ್ಕೆ ಪ್ರಶಸ್ತವಾಗಿದೆ. ಈ ಕಂದದಿಂದ ಕರಸ್ಥಲ ವೀರಣ್ಣೊಡೆಯನ ಲಿಂಗನಿಷ್ಠೆ ನಿಚ್ಚಳವಾಗುತ್ತದೆ. ಕರಸ್ಥಳದಲ್ಲಿ ಲಿಂಗಸ್ಥಲವನ್ನಳವಡಿಸಿಕೊಂಡು ಲಿಂಗಾಂಗ ಸಾಮರಸ್ಯದ ಅವಿರಳಾನಂದದಲ್ಲಿ ದೊರಕಿಸಿಕೊಂಡ ಭಾವಸಂಪತ್ತಿ ಜೊತೆಗೆ ಅದನ್ನು ಅಭಿವ್ಯಕ್ತ ಪಡಿಸುವಲ್ಲಿ ಅನುಸರಿಸಿದ ಕಲ್ಪನಾ ಸಂಪತ್ತು, ವರ್ಣನಾಶಕ್ತಿ ಮಿಗಿಲಾಗಿದೆ”.[9]

. ನಿಃಕಲ ಶತಕ: ಈ ಕೃತಿಯು ೧೦೦ ವೃತ್ತಗಳನ್ನೊಳಗೊಂಡಿದೆ. ಅನುಭಾವಿ ಕವಿಯಾದ ವೀರಣ್ಣೊಡೆಯನು ತನ್ನ ಗುರುವಿನ ಮಹತಿಯನ್ನು ಕೊಂಡಾಡಿದ್ದಾನೆ. ಪ್ರತಿಯೊಂದು ಪದ್ಯವೂ ‘ನಿಜಶಾಂತ ನಿಃಕಲಾ’ ಎಂದು ಮುಕ್ತಾಯವಾಗುತ್ತದೆ. ನಿಜಶಾಂತ ಎಂಬುದು ಈತನ ಇಷ್ಟಗುರು. ಪ್ರತಿಯೊಂದು ಮನುಷ್ಯನಲ್ಲಿರುವ ಜಡಸಂಶಯಗಳನ್ನು ತೊಡೆದು ಹಾಕಬೇಕು. ಘನಲಿಂಗ ಮಹಿಮೆಯನ್ನು ಮಾನವರಾರು ತಿಳಿಯಲೊಲ್ಲರು. ಲೋಕದ ಜನಗಳಿಗೆ ಕೆಲವರು ತುಚ್ಛ ಮಾತುಗಳನ್ನಾಡಿ ವರ್ಚಸ್ಸಿನಿಂದ ತಾವೆ ಹಿರಿಯರೆಂದು ವರ್ತಿಸುತ್ತಿರುವರು. ಅಂಥವರೆಲ್ಲರೂ ಆ ಭ್ರಮೆಯಿಂದ ಹೊರಬಂದು ಲಿಂಗ ನಿಜದ ಸಂಗವನ್ನು ಮಾಡಬೇಕೆಂದು ವೀರಣ್ಣೊಡೆಯ ಈ ಕೃತಿಯಲ್ಲಿ ಪ್ರತಿಪಾದಿಸಿದ್ದಾನೆ. ಉದಾಹರಣೆಗಾಗಿ ಈ ಪದ್ಯವನ್ನು ಇಲ್ಲಿ ಹೆಸರಿಸಬಹುದು.

“ಹೃದಯದೊಳಾಸೆ ಭೀತಿ ಜಡಶಂಕೆಗಳುಳ್ಳ ನರರ್ ಮಹಾತ್ಮರಿಂ
ದೊದವಿದ ಗರ್ವದಿಂ ಪಲವು ಮಾತುಗಳಂ ಪುರಿಗಟ್ಟಿ ತೋರೆ ಲಿಂ
ಗದ ನಿಜ ಸಂಗಿಗಳ್ ನಗರೆ ಪೇಳ್ ಗುರು ಮುದ್ರೆಯ ಕಳ್ಳಹೊನ್ನ ನೊ
ಯ್ದದನೆ ಸುವರ್ಣವಾಣಿಜರ್ಗೆ ತೋರುವವೊಲ್ ನಿಜಶಾಂತ ನಿಃಕಲಾ ||

ಹೀಗೆ ಈ ಶತಕವು ವೀರಶೈವರಿಗೆ ಅಗತ್ಯವಾಗಿ ಉಪಯೋಗವಾಗುತ್ತದೆ. ನಿಃಕಲ ಪರಶಿವನನ್ನು ಈ ಕೃತಿಯ ಮೂಲಕ ಕೊಂಡಾಡಲಾಗಿದೆ.

. ಪರಮವಿರಕ್ತನ ಐಕ್ಯಸ್ಥಲ: ೬೧ ತ್ರಿಪದಗಳಲ್ಲಿ ಪರಮ ವಿರಕ್ತನ ಮಹತ್ವವನ್ನು ವೀರಣ್ಣೊಡೆಯ ಹೇಳಿದ್ದಾನೆ. ವೀರಣ್ಣೊಡೆಯನ ದೃಷ್ಟಿಯಲ್ಲಿ ಪರಮ ವಿರಕ್ತನಾದವನು “ಪರಮ ಲಿಂಗವ ಕರದಿ ಧರಿಸಿ ಜಡಮನುಜರ ಮನೆಗೆ ಹೋಗದೆ ತಾನು ಗಿರಿಗುಹೆಯಲ್ಲಿ ವಾಸಮಾಡಬೇಕು. ಅಂಥವನೆ ನಿಜವಾದ ವಿರಕ್ತನು.” ಪ್ರತಿಯೊಂದು ತ್ರಿಪದಿಯೂ ‘ನಿಜಮುಕ್ತಾ’ ಎಂದು ಮುಕ್ತಾಯಗೊಳ್ಳುತ್ತದೆ. ಲಿಂಗವನ್ನು ಕರದೊಳಗೆ ಧರಿಸಿದ ಮೇಲೆ ಅಂಗಗುಣಗಳನ್ನು ಮರೆಯಬೇಕು. ಮರ್ತ್ಯದಲ್ಲಿರುವ ಸುಖಗಳು ವ್ಯರ್ಥವೆಂದು ತಿಳಿದು ಚಿತ್ತವನ್ನು ಲಿಂಗದೊಳಿಗಿರಿಸಬೇಕು. ಹೀಗೆ ಪ್ರತಿಯೊಂದು ಪದ್ಯದಲ್ಲಿಯೂ ಪರಮ ವಿರಕ್ತನ ಗುಣಗಾನವನ್ನು ಮಾಡಲಾಗಿದೆ.

. ಮಂತ್ರೋತ್ಪತ್ತಿ ರಗಳೆ: ಹೆಸರೇ ಸೂಚಿಸುವಂತೆ ಇದು ರಗಳೆ ಛಂದಸ್ಸಿನಲ್ಲಿದೆ. ಆದಿಯಲ್ಲಿ ಒಂದು ಕಂದ, ಗದ್ಯ, ಅಂತ್ಯದಲ್ಲಿ ಒಂದು ಕಂದಪದ್ಯವಿದ್ದು, ೨೦೨ ಪಾದಗಳಲ್ಲಿ ವಿಸ್ತಾರಗೊಂಡಿದೆ. ಓಂ ನಮಃಶಿವಾಯ ಎಂಬ ಷಡಕ್ಷರ ಮಂತ್ರವ ಉತ್ಪತ್ತಿ, ಅದರ ಮಹತ್ವವನ್ನು ಕುರಿತಂತೆ ಸುದೀರ್ಘವಾಗಿ ಹೇಳಲಾಗಿದೆ.

ಶಿವ ಸ್ವಯಾನುಭಾವ ಪಂಚಪ್ರಣವ ಓಂ ನಮಃಶಿವಾಯ
ಶಿವನು ಸೂಕ್ಷ್ಮ ಪಂಚಪ್ರಣವವರ್ಣ ಓಂ ನಮಃಶಿವಾಯ
ಪ್ರಣಮ ವರ್ಣದ ಮೂರ್ತಿಯಾದುದೋಂ ನಮಃಶಿವಾಯ

ಎಂದು ಓಂ ನಮಃಶಿವಾಯ ಪ್ರತಿ ಸಾಲಿನಲ್ಲಿಯೂ ಪುನರಾವರ್ತನೆಗೊಂಡಿದೆ. ಮಂತ್ರೋತ್ಪತ್ತಿ ರಗಳೆಯನ್ನು ಅನವರತ ಯಾರೇ ಆಗಲಿ ಪಠಣ ಮಾಡಿದರೆ ಶಾಂತನ ಸನ್ನಧಿಯೊಳು ಭಕ್ತನು ಇರುತ್ತಾನೆಂದು ಕೊನೆಯಲ್ಲಿ ಹೇಳಾಗಿದೆ.

. ಅಷ್ಟವಿಧಾರ್ಚನೆ : ಮಜ್ಜನ, ಸುಗಂಧ ಲೇಪನ, ಅಕ್ಷತೆ, ಪುಷ್ಪ ಧೂಪ, ದೀಪ, ನೈವೇದ್ಯ, ತಾಂಬೂಲವೆಂಬ ಎಂಟು ರೀತಿಯ ದ್ರವ್ಯಗಳಿಂದ ಲಿಂಗವನ್ನು ಪೂಜಿಸುವ ವಿಧಾನಗಳನ್ನು ಈ ಕಿರುಕೃತಿಯಲ್ಲಿ ವೀರಣ್ಣೊಡೆಯ ಹೇಳಿದ್ದಾನೆ. ೧೧ ಮಲ್ಲಿಕಾಮಾಲಾ ವೃತ್ತಗಳಲ್ಲಿ ಇದು ರಚಿತವಾಗಿದೆ. ಒಂದೊಂದು ವಿಧದ ಅರ್ಚನೆಯ ಸ್ವರೂಪವನ್ನು ಒಂದೊಂದು ವೃತ್ತಗಳ ಮುಖಾಂತರ ಹೇಳಲಾಗಿದೆ. ಪುಷ್ಪಾರ್ಚನೆಯ ವಿಧಾನವನ್ನು ನೋಡಬಹುದು:

ಅಳಿಗಳೆಲ್ಲವ ತುಳಿದು ಚುಂಬಿಸಿ ಬಳಸಿ ಬಿಟ್ಟರಳಲ್ಲದೆ
ನಳಿನ ನೇತ್ರನ ಕಿರಣ ಸೋಂಕಿ ಕಳಲಿ ಕುಂದಿದುಲ್ಲದೆ
ಸುಳಿವ ಪಾವನಗೆ ಕಂಪಸೂಸುವ ಕಳೆ ಬಲು ನನೆಯಲ್ಲದೆ
ಇಳೆಯೊಳುಳ್ಳ ಸುಗಂಧ ಪುಷ್ಪವ ನಳಿನ ಸುಖಧರಗರ್ಚಿಪೆ
||

ವೀರಣ್ಣೊಡೆಯನ ಭಕ್ತಿ ಭಾವ, ಸರಳಸುಂದರ ಶೈಲಿಗೆ ಹಿಡಿದ ಕನ್ನಡಿಯಂತಿವೆ ಇಲ್ಲಿಯ ಪದ್ಯಗಳು.

. ವಚನಗಳು: ಕರಸ್ಥಲ ವೀರಣ್ಣೊಡೆಯ ಬಸವೋತ್ತರ ಯುಗದ ಒಬ್ಬವಚನಕಾರ. ಸಧ್ಯ ಈತನ ಏಳು ವಚನಗಳು ಲಭ್ಯವಾಗಿದ್ದು, ಅವು ಬೇರೆ ಬೇರೆ ವಚನ ಸಂಕಲನಗಳಲ್ಲಿ ಎಡೆಪಡೆದುಕೊಂಡಿವೆ. ಮಹಾಘನ ಶಾಂತಮಲ್ಲಿಕಾರ್ಜುನ, ನಿಜಗುರು ಶಾಂತ ಮಲ್ಲಿಕಾರ್ಜುನ, ಶಾಂತಮಲ್ಲಿಕಾರ್ಜುನ, ಪರಮಪಂಚಾಕ್ಷರ ಮೂರ್ತಿ ಶಾಂತಮಲ್ಲಿಕಾರ್ಜುನ, ಪರಮಪ್ರಭು ಶಾಂತಮಲ್ಲಿಕಾರ್ಜುನ, ನಿಜಗುರು ಶಾಂತ ಮಲ್ಲೆಶ್ವರಾ ಎಂಬು ಆರು ವಿವಿಧ ಅಂಕಿತಗಳಲ್ಲಿ ವಚನಗಳನ್ನು ಈತ ರಚಿಸಿದ್ದಾನೆ.

ಮೂರು ವಚನಗಳಲ್ಲಿ ಬಸವ, ಚೆನ್ನಬಸವ, ಪ್ರಭುದೇವ ಸಿದ್ಧರಾಮ, ಮಡಿವಾಳ ಮಾಚಯ್ಯ, ಅಜಗಣ್ಣ ಮುಕ್ತಾಯಕ್ಕಗಳ ಸ್ತುತಿ, ವ್ಯಕ್ತಿ ವೈಶಿಷ್ಟ್ಯವನ್ನು ಹೇಳಲಾಗಿದೆ. ಎನ್ನ ಕಾಮ, ಕ್ರೋಧ, ಲೋಭ, ಮೋಹ, ಮದ,ಮತ್ಸರಗಳನ್ನು ಕ್ರಮವಾಗಿ ಸಿದ್ಧರಾಮಯ್ಯ, ಚೆನ್ನಬಸವಣ್ಣ, ಪ್ರಭುದೇವ, ಸಂಗನಬಸವಣ್ಣ, ಮಡಿವಾಳಯ್ಯಗಳು ಕಳೆಯಬೇಕೆಂದು ಅವರಲ್ಲಿ ಪ್ರಾರ್ಥಿಸಿದ್ದಾನೆ. ಹಾಗೇಯೇ ಜಂಗಮನ ಸ್ವರೂಪವನ್ನು ಹೇಳುತ್ತಾ ನಿಜಸ್ವರೂಪ ವಾದಾತನೀಗ ಜಂಗಮ, ಅಧೀನವುಳ್ಳಾತನೂ ಅಲ್ಲ. ಅಧೀನವಿಲ್ಲಾತನೂ ಅಲ್ಲ.ಸಾಕಾರನೂ ಅಲ್ಲ. ನಿರಾಕಾರನು ಅಲ್ಲ. ಶಾಂತನು ಅಲ್ಲ, ಕ್ರೋಧಿಯೂ ಅಲ್ಲ ಎಂದು ಮುಂತಾಗಿ ವಿವರಿಸಿದ್ದಾನೆ.

. ಸ್ವರ ವಚನಗಳು: ಕರಸ್ಥಲ ವೀರಣ್ಣೊಡೆಯ ಶಾಂತಮಲ್ಲ, ಗುರು ಶಾಂತಮಲ್ಲೇಶ, ಸದ್ಗುರು ಶಾಂತಮಲ್ಲೇಶ, ಶಾಂತಮಲ್ಲೇಶಲಿಂಗ, ನಿಜಗುರು ಮುಗ್ಧಶಾಂತಮಲ್ಲ, ಮದ್ಗುರು ಶಾಂತಮಲ್ಲೇಶಲಿಂಗ ಎಂಬ ಅಂಕಿತಗಳಲ್ಲಿ ಸ್ವರವಚನಗಳನ್ನು ರಚಿಸಿದ್ದಾನೆ. ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿಯೊಂದರಲ್ಲಿ ದೊರೆತ ‘ಶಾಂತಮಲ್ಲೇಶ್ವರ’ ಎಂಬ ಅಂಕಿತವುಳ್ಳ ಸ್ವರವಚನದ ಆದಿಯಲ್ಲಿ ‘ವೀರಣ್ಣ ದೇವರು ನಿರೂಪಿಸಿದ ಪದನು’ ಎಂದು ಬರೆದುದನ್ನು ಗಮನಿಸಿ, ಮೇಲೆ ಹೆಸರಿಸಿದ ಅಂಕಿತಗಳ ಸ್ವರವಚನಗಳ ಕರ್ತೃ ವೀರಣ್ಣ ದೇವರು ಎಂದು ನಿರ್ಧರಿಸಲಾಗಿದೆ. ಆದ್ದರಿಂದ “ಈಗ ಉಪಲಬ್ಧವಾದ (ವೀರಣ್ಣೊಡೆಯರ) ಕಂದದೊಡನೆ ಶಾಂತಮಲ್ಲೇಶ ಅಂಕಿತದ ಸ್ವರವಚನ, ವೃತ್ತಗಳನ್ನು ಹೋಲಿಸಿ ನೋಡಿದರೆ ಭಾಷೆ, ಭಾವ ಶೈಲಿಗಳಲ್ಲಿ ಹೆಚ್ಚಿನ ಸಾಮ್ಯತೆ ಕಂಡು ಬರುತ್ತದೆ. ಅಲ್ಲದೆ ಒಂದು ಸ್ವರವಚನದ ಅಂಕಿತದಲ್ಲಿ ವೀರಣ್ಣೊಡೆಯರದೆಂದು ನಂಬಲಾದ ‘ನಿಜಗುರುಶಾಂತ’ ಎಂಬ ಅಂಕಿತದ ಜೊತೆಗೆ ‘ಮಲ್ಲೇಶ’ ಎಂಬುದೂ ಬೆರೆತು ‘ನಿಜಗುರುಶಾಂತಮಲ್ಲ’ ಎಂದಾಗಿದೆ ಇದರಿಂದ ಕರಸ್ಥಲದ ವೀರಣ್ಣೊಡೆಯನ ಅಂಕಿತ ಒಬ್ಬನೇ ವಚನಕಾರನ ಹಲವು ರೂಪಗಳನ್ನು ಹೊಂದಿದ ಅಂಕಿತದಂತೆ ಶಾಂತ, ನಿಜಗುರುಶಾಂತ, ಶಾಂತಮಲ್ಲೇಶ ಎಂದು ಮುಂತಾಗಿ ಪ್ರಯೋಗವಾಗಿರಬೇಕು.”[10]

ಈಗ ಆತನ ೨೦ ಸ್ವರವಚನಗಳು ಉಪಲಬ್ಧವಿದ್ದು, ಅವು ಕಂಬಾಳ ಶಾಂತಮಲ್ಲೇಶನ ಗಣವಚನ ರತ್ನಾವಳಿ, ಚನ್ನವೀರಾರ್ಯನ ಶಿವಯೋಗ ಪ್ರದೀಪಿಕೆಯಲ್ಲಿ ಸೇರಿಕೊಂಡಿವೆ. ಅಲ್ಲದೆ ಕೆಲವು ಬಿಡಿಬಿಡಿ ರೂಪದಲ್ಲಿಯೂ ದೊರೆತಿವೆ. ಕಾಮ ಕ್ರೋಧ ಮದ ಮತ್ಸರ ಮತ್ತು ಮಾನಿನಿಯರ ಮೋಹಜಾಲದಲ್ಲಿ ಸಿಲುಕಿಕೊಂಡವರಿಗೆ ಲಿಂಗದ ಮಹತ್ವವನ್ನು ಅರಿತುಕೊಳ್ಳುವುದು ಅಸಾಧ್ಯವೆಂದು ಸ್ವರವಚನವೊಂದರಲ್ಲಿ ಹೇಳಿದ್ದಾನೆ.

ಕಾಮದಲಿ ಕಂಗೆಟ್ಟು ಕ್ರೋಧದಲಿ ಮುಂಗೆಟ್ಟು
ಆ ಮಹಾ ಮದ ಮತ್ಸರದಲ್ಲಿ ಮುಳುಗೆ
ಕಾಮಿನಿಯ ಕಾಲೆಡೆಯ ಹಳ್ಳದೊಳು ಸಿಲ್ಕಿ ನಿ
ಸ್ಸೀಮ ಲಿಂಗವನೆಂತು ಅರಿವಿರಣ್ಣ

ಎಂದು ನಿರೂಪಿಸಿದ್ದಾನೆ. ಅಲ್ಲದೆ ಪುತ್ರ ಮಿತ್ರ ಕಳತ್ರ ಎಂಬ ಮೋಹವನ್ನು ತ್ಯಜಿಸಿ, ಲಿಂಗದಲ್ಲಿ ಮನಸ್ಸು ನೆಲೆಗೊಳಿಸಿದಾಗ ಮಾತ್ರ ಲಿಂಗಾನುಭಾವಿಯೆನಿಸಿಕೊಳ್ಳುತ್ತಾನೆಂದು ವೀರಣ್ಣೊಡೆಯ ತಿಳಿಸಿದ್ದಾನೆ.

ವೀರಶೈವ ಧರ್ಮದ ತತ್ವಗಳಾಧ ಷಟ್ ಸ್ಥಲ, ಅಷ್ಟಾವರಣ, ಶಿವಯೋಗ, ಲಿಂಗಾಂಗ ಸಾಮರಸ್ಯ ಮುಂತಾದ ವಿಷಯಗಳನ್ನು ಸ್ವರವಚನಗಳಲ್ಲಿ ಕಾಣಬಹುದು.

“ಗುರುಲಿಂಗಜಂಗಮವನರಿದು ಮುಂದೆ
ಪರವ ಬೆರಸಿಹೆನೆಂಬ ಶರಣರೆಲ್ಲರು
ಚರಲಿಂಗ ನಿಜಗುರುಶಾಂತೇಶನ ಚರಣವ ನೆನೆದು
ಬೆರೆದು ಭಿನ್ನಭಾಜನವಳಿದಡವನೆ ಸುಜ್ಞಾನಿ”

ಎಂದಿದ್ದಾನೆ. ಬರಿಯ ಬೊಮ್ಮದ ಮಾತು ಕೇಡು ಗುರುಕರುಣವ ಪಡೆದಂತರಂಗವ ನೋಡು, ವಾಯು ಮನವನೊಂದು ಮಾಡು ನಿನ್ನ ಕಾಯವಿಡಿದು ಪರಮಾತ್ಮನ ಕೂಡು, ಮಾಯಪಾಶವ ಹೋಗಲಾಡು ನಿನಗಾಯಾಸವಲ್ಲಿಲ್ಲ ಇಲ್ಲಿದೆ ನೋಡು, ಹಿಂಗದೆ ಮನೋಭಾವ ಬಲಿದು ಲಿಂಗವು ತನಗಂಗವಾಗಿರಬಲ್ಲಡೆ ಶರಣಾ, ಎನ್ನುವಂತಹ ಮಾತುಗಳಲ್ಲಿ ವೀರಣ್ಣೊಡೆಯನ ಶಿವಾನುಭಾವ, ಲೋಕಾನುಭಾವ ಎದ್ದು ಕಾಣುತ್ತವೆ. ವಚನಗಳ ನಿರೂಪಣೆಯಲ್ಲಿ ಸಹಜತೆ, ಸರಳತೆ, ಸಹೃದಯತೆಗಳು ಎದ್ದು ಕಾಣುತ್ತವೆ.

ತತ್ವ, ಅನುಭಾವ, ಯೋಗ ವಿಚಾರಗಳನ್ನು ಬೆಡಗಿನ ರೂಪದಲ್ಲಿ ಹೇಳಿರುವುದು ಸ್ವರವಚನಗಳ ವೈಶಿಷ್ಟವಾಗಿದೆ. ‘ಅಲಸಿದೆನಕ್ಕ ಅಲಸಿದೆ, ಅಳುವ ಮಕ್ಕಳ ಕಾಟ, ಉಲಿವ ಗಂಡನ ಕೂಟ’ ಎನ್ನುವ ಪಲ್ಲವಿಯೊಂದಿಗೆ ಪ್ರಾರಂಭವಾಗುವ ಈತನ ಬೆಡಗಿನ ರೂಪದ ಸ್ವರವಚನವನ್ನು ಗಮನಿಸಬಹುದು.

ವೀರಣ್ಣೊಡೆಯನ ಸ್ವರವಚನಗಳ ಆರಂಭದಲ್ಲಿ ಮಂಗಳ ಕೌಶಿ, ಅಹರಿಪಂತು, ಶ್ರೀ ಪಂತುವರಾಳಿ, ಮೌಳಿ, ಮುಖಾರಿ, ನಾದರಾಮಕ್ರಿ, ಶುದ್ಧಕಾಂಭೋದಿ, ಶಂಕರಾಭರಣ, ಭೂಪಾಳಿ ಪಾಡಿ, ತೆಲಗು ಕಾಂಬೋಧಿ, ಧನ್ವಾಸಿ, ವಸಂತ ಭೈರವಿ, ಅಹರಿ ನಾಟಿ, ಮಂಗಳಕಾಶಿ, ಸೌರಾಷ್ಟ್ರಿ, ಮುಂತಾದ ರಾಗತಾಳಗಳನ್ನು ನಿರ್ದೇಶಿಸಲಾಗಿದೆ. ಡಾ. ಬಿ. ಆರ್. ಹಿರೇಮಠ ಅವರು ಹೇಳುವಂತೆ” “ಈ ಎಲ್ಲ ರಾಗ, ತಾಳಗಳನ್ನು ಪ್ರಾದೇಶಿಕವಾಗಿ ಸಂಗ್ರಹಿಸಿ, ವರ್ಗೀಕರಿಸಿ ವಿಶ್ಲೇಷಿಸಬೇಕು. ಇಷ್ಟೇ ಅಲ್ಲ ಪ್ರಾದೇಶಿಕವಾಗಿ ಇವುಗಳನ್ನು ಹಾಡುವ ರೀತಿ, ಹಾಡುವವರು ಹಾಡುವಾಗ ಬಳಸುವ ವಾದ್ಯ, ಹಾಡುವ ಸಂದರ್ಭಗಳನ್ನು ಕಲೆಹಾಕಿ ಅಭ್ಯಸಿಸಬೇಕಾಗಿದೆ. ಇದಲ್ಲದೆ ಈ ಸ್ವರ ವಚನಕಾರರ ಸಂಗೀತಜ್ಞಾನ, ಸಂಗೀತಪ್ರಸಾರಗಳನ್ನು ಗುರುತಿಸುವ, ವಿವರಿಸುವ ಕಾರ್ಯವೂ ನಡೆಯಬೇಕಾಗಿದೆ. ಈ ವಾಗ್ಗೇಯಕಾರರು ಹರಿದಾಸರಿಗಿಂತ ಪೂರ್ವದಲ್ಲಿ ಹಾಗೂ ನಂತರದಲ್ಲಿ ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಯನ್ನೂ ಕಂಡುಹಿಡಿಯಬೇಕಾಗಿದೆ. ಜೊತೆಗೆ ಹರಿದಾಸರ ಕೀರ್ತನ ಸಾಹಿತ್ಯ ಕೀರ್ತನ ಸಂಗೀತಗಳಿಗೂ ಈ ಯುಗದ ಸ್ವರವಚನ ಸಾಹಿತ್ಯ,ಸ್ವರವಚನ ಸಂಗೀತಗಳಿಗೂ ಇರುವ ಪ್ರೇರಣೆ, ಪ್ರಭಾವ, ಪರಿಣಾಮ, ಸಾದೃಶ್ಯ – ವೈದೃಷ್ಯ, ವೈಶಿಷ್ಟ – ವಿಶೇಷತೆಗಳನ್ನು ಕುರಿತು ತಲುಸ್ಪರ್ಶಿಯಾದ ಅಧ್ಯಯನ ಇನ್ನೂ ನಡೆಯಬೇಕಾಗಿದೆ. ಇದರಿಂದ ಕೀರ್ತನ ಸಾಹಿತ್ಯ – ಸಂಗೀತಗಳ ಪೂರ್ವದಲ್ಲಿ ಹಾಗೂ ತರುವಾಯ ಇರುವ ಸ್ವರವಚನ ಸಾಹಿತ್ಯ – ಸಂಗೀತಗಳ ಅಸ್ತಿತ್ವ,ಪ್ರಕಾರ, ಪ್ರಸಾರಗಳ ಸ್ಪಷ್ಟವಾದ ಪರಿಚಯವಾಗುತ್ತದೆ. ಸ್ವರವಚನ ಸಾಹಿತ್ಯ – ಸಂಗೀತಗಳ ಮಹತ್ವ ವೇದ್ಯವಾಗುತ್ತದೆ.”[11] ಈ ಮಾತುಗಳನ್ನು ಒಟ್ಟು ಸ್ವರವಚನ ಸಾಹಿತ್ಯವನ್ನು ಕುರಿತು ಹೇಳಿದರೂ, ಕರಸ್ಥಲ ವೀರಣ್ಣೊಡೆಯರ ಸ್ವರವಚನ ಸಾಹಿತ್ಯಕ್ಕೂ ಇದನ್ನು ಅನ್ವಯಿಸಿ ಹೇಳಬಹುದು.

ಹೀಗೆ ಕರಸ್ಥಲ ವೀರಣ್ಣೊಡೆಯನು ಪ್ರೌಢದೇವರಾಯನ ಆಸ್ಥಾನದಲ್ಲಿ ಮಂತ್ರಿಯಾಗಿ ವೀರಶೈವ ಧರ್ಮದ ಏಳಿಗೆಗಾಗಿ ಶ್ರಮಿಸಿದವನು. ಜೊತೆಗೆ ಕಂದ, ತ್ರಿಪದಿ, ರಗಳೆ, ವೃತ್ತ, ಶತಕ,ವಚನ, ಸ್ವರವಚನ ರೂಪಗಳಲ್ಲಿ ಲಘುಸಾಹಿತ್ಯವನ್ನು ರಚಿಸಿ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತನ್ನದೇ ಆದ ಸ್ಥಾನವ್ನನು ಪಡೆದುಕೊಂಡಿದ್ದಾನೆ.

 

[1] ಶಿವಾನೂಭವ ಸೂತ್ರಂ, ಪಂಚಮಾಧಿಕರಣ ೨. – ೩೮

[2] ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ ಪು.೧೩೨

[3] Social and Political life under Vijayanagara Empire Vol. I & II, Mysore Archalogical Report of 1923 ಮತ್ತು Empigraphia Carnatica Vol – VIII ದಲ್ಲಿ ಈ ಶಾಸನಗಳು ಪ್ರಕಟಗೊಂಡಿವೆ.

[4] ಶಿವತತ್ವ ಚಿಂತಾಮಣಿ (ಸಂ.ಪಂಡಿತ ಬಸಪ್ಪ, ೧೯೬೦) ಸಂಧಿ : ೩೮ ಪದ್ಯ – ೧೧೦

[5] S.P.V.E.Vol – I P – 166

[6] ….. ಅದೇ ….. ಪುಟ ೪೪೯

[7] MAR of 1923, No – 370

[8] ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ ಪುಟ – ೧೨೫

[9] ….. ಅದೇ ….. ಪು.೧೩೦

[10] ಶಿವಯೋಗ ಪ್ರದೀಪಿಕೆ (ಸಂ. ಡಾ. ವೀರಣ್ಣ ರಾಜೂರ, ೧೯೮೧) ಪು – ೧೪

[11] ವೀರಶೈವ ಸಂಪದ, ಪುಟ ೪೩