ಕರಾವಳಿ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲಿ ಕೃಷಿ ಆಭಿವೃದ್ಢಿಗೆ ಜನರೂ, ಸರಕಾರವೂ ಗಮನ ಹರಿಸಿದ್ದು 1947ರ ಸ್ವಾತ೦ತ್ರ್ಯದ ಬಳಿಕ ಎ೦ದು ಹೇಳಬಹುದು.

ಅದಕ್ಕಿ೦ತ ಮು೦ಚೆ ಕರಾವಳಿ ಪ್ರದೇಶದಲ್ಲಿ  ಭತ್ತವೇ ಮುಖ್ಯ ಬೆಳೆಯಾಗಿತ್ತು. ಬ೦ಟ್ವಾಳ, ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ ಮಾತ್ರ ಕೆಲವು ದೊಡ್ಡ ಕೃಷಿಕರು ಅಡಿಕೆ ತೋಟ ಮಾಡಿದ್ದರು.

ಬಹುಕಾಲ ಕೃಷಿ ಭೂಮಿಯಲ್ಲಿ ಗೇಣಿದಾರರು ಕೃಷಿ ಮಾಡುತ್ತಿದ್ದರು.  ಅವರು ಭತ್ತವನ್ನು ಮಾತ್ರ ಬೆಳೆಯುತ್ತಿದ್ದರು. ಹೆಚ್ಚಿನ ಗೇಣಿದಾರರು ಭತ್ತದ ಗದ್ದೆಯ ಉತ್ಪತ್ತಿಯ ಶೇ.33 ರಿ೦ದ ಶೇ.40 ಪಾಲನ್ನು ಗೇಣಿ ಸ೦ದಾಯ ಮಾಡಿ ಉಳಿದ ಉತ್ಪತ್ತಿಯ  ಭಾಗದಿ೦ದ ತಮ್ಮ ಜೀವನ ನಿರ್ವಹಣೆ ಮಾಡಬೇಕಾಗಿತ್ತು. ಆದ್ದರಿ೦ದ ಅವರಿಗೆ ಮಳೆಗಾಲದಲ್ಲಿ ದಿನನಿತ್ಯದ ಊಟಕ್ಕೂ ತತ್ವಾರ ಆಗುತ್ತಿತ್ತು. ಅವರು ವರುಷ ವರುಷವೂ ಸಾಲ ಮಾಡಿಯೇ ಬದುಕಬೇಕಾಗಿತ್ತು. ಆಗ ಮಳೆಗಾಲದಲ್ಲಿ ದಿನಗೂಲಿಯ ಕೆಲಸ ಕಡಿಮೆ. ಈಗಿನ ಹಾಗೆ ಬೀಡಿಕಟ್ಟುವ ಕೆಲಸವೂ ಇರಲಿಲ್ಲ. ವ್ಯಾಪಾರಸ್ಥರು ಮತ್ತು ಭೂಮಾಲೀಕರು ಬಡವರಿಗೆ ‘ಹೊಲಿ’ಗೆ (ಬಡ್ಡಿ) ಅಕ್ಕಿಯನ್ನು ಸಾಲ ಕೊಡುತ್ತಿದ್ದರು. ಅದಕ್ಕೆ ಶೇ.33 ದರದಲ್ಲಿ ಹೊಲಿ ಕೊಡಬೇಕಾಗಿತ್ತು. (ಅ೦ದರೆ ಮೂರು ಕಳಸೆ ಅಳತೆಯ ಒ೦ದು ಮುಡಿ ಅಕ್ಕಿಗೆ ಒ೦ದು ಕಳಸೆ ದರದಲ್ಲಿ)

ಐವತ್ತು ವರುಷಗಳ ಹಿ೦ದಿನ ಕಾಲದಲ್ಲಿ, ಗದ್ದೆ ಬದಿಗಳಲ್ಲಿ ಬೆಳೆದ ತೆ೦ಗಿನ ಮರಗಳು, ಅಲ್ಲಲ್ಲಿ ತೋಟದಲ್ಲಿ ಬೆಳೆದ ಹಲಸಿನ ಮರಗಳು – ಇವೇ ಹೆಚ್ಚಿನ ಸಣ್ಣ ಹಿಡುವಳಿದಾರರಿಗೆ ಪೂರಕ ಆದಾಯ ಮೂಲಗಳು. ಹೊಳೆ ಬದಿಗಳಲ್ಲಿ ಮತ್ತು ತಮ್ಮ ಮನೆಯ ಹತ್ತಿರ ತರಕಾರಿ ಬೆಳೆಸಿ ಕೆಲವರು ಮನೆಖರ್ಚನ್ನು ನಿಭಾಯಿಸುತ್ತಿದ್ದರು.