ಟೊಮೇಟೋ ೫೦  ರೂಪಾಯಿ, ಬೆಂಡೆ ೪೦ ರೂಪಾಯಿ, ಹಾಗಲು ೩೫ ರೂಪಾಯಿ, ಬಟಾಟೆ ೨೪ ರೂಪಾಯಿ, ಬೀನ್ಸ್ ೩೨ ರೂಪಾಯಿ ಎಂದು ಗಗನಕ್ಕೇರಿದ  ತರಕಾರಿ ಬೆಲೆ ನೋಡಿದ್ದೇವೆ. ಪೇಟೆ ತರಕಾರಿಗೆ  ವಾರಕ್ಕೆ  ೭೦-೮೦ ರೂಪಾಯಿ ಖರ್ಚು ಮಾಡುವ ಹಳ್ಳಿಗರು  ಈಗ ನಮ್ಮ ಕರಾವಳಿ  ಕೃಷಿ ಜಾಣ್ಮೆ ಗಮನಿಸಬೇಕು.  ನಮ್ಮ  ಮನೆಯಲ್ಲಿ ಪೇಟೆ ತರಕಾರಿ ತರೋದಿಲ್ಲಎನ್ನುವುದು ಬಹುತೇಕ ಕರಾವಳಿಗರ ಮನೆ ಮನೆಯ  ಧ್ವನಿ.

ಮನೆಯ ಹಿತ್ತಲು, ಅಡಿಕೆ ತೋಟ ಸುತ್ತಿದರೆ ನಿತ್ಯವೂ  ಬರಪೂರ ಸ್ವಾದಿಷ್ಟ ತರಕಾರಿ. ಬೇರು ಹಲಸು, ನೀರು ಹಲಸು, ನುಗ್ಗೆ, ಜಾಯಿಕಾಯಿ, ಒಂದೆಲಗ, ಕನ್ನೇಕುಡಿ, ಶ್ರೀಗಂಧದ ಕುಡಿ, ಸುವರ್ಣ ಗಡ್ಡೆ, ಅಮಟೆ, ಬಿಂಬಳೆ, ನೆಲ್ಲಿ, ಮಾವು, ಹಲಸು, ಕರಮಾದಲು, ಅರಿಶಿನ, ಶುಂಠಿ, ಮಾವಿನಶುಂಠಿ, ಲವಂಗ,ಕಾಳು ಮೆಣಸು  ಹೀಗೆ  ಬೆಳೆ ಪಟ್ಟಿ ಬೆಳೆಯುತ್ತದೆ. ಇಂಚಿಂಚು ನೆಲದಲ್ಲೂ ಬೆಳೆ ವೈವಿಧ್ಯ ಪೋಷಿಸುವದು ಕೃಷಿಕರ ಪರಂಪರೆ. ಒಮ್ಮೆ  ಉತ್ತರ ಕನ್ನಡದ ಕರಾವಳಿಯ ಕುಮಟಾ, ಹೊನ್ನಾವರಗಳ ಅಡಿಕೆ ತೋಟಗಳ ಸಮೀಕ್ಷೆ  ಮಾಡುತ್ತಿದ್ದೆವು. ಇಲ್ಲಿ  ನಾಲ್ಕು ಗುಂಟೆಯಿಂದ ಆರಂಭಿಸಿ ಒಂದು ಎಕರೆವರೆಗೆ ಜಮೀನು ವಿಸ್ತೀರ್ಣ. ಅಡಿಕೆ, ತೆಂಗು,ಬಾಳೆ, ವೀಳ್ಯದೆಲೆ ಪ್ರಮುಖ ಬೆಳೆಗಳು. ತೋಟದ ಅಂಚು, ನೀರು ಕಾಲುವೆ, ಅಡಿಕೆ ಹಾಗೂ ತೆಂಗಿನ ಮರಗಳ ನೆರಳಲ್ಲಿ ವಿವಿಧ ಉಪಯುಕ್ತ ಸಸಿ ನಾಟಿ. ಆಹಾರ, ಜೌಷಧೀಯ ಮಹತ್ವದ ಈ ಸಸಿಗಳು ಇಡೀ ಕುಟುಂಬದ ಆರೋಗ್ಯ ಕಾಪಾಡುತ್ತವೆ. ಕುಟುಂಬ ನಿರ್ವಹಣೆಗೆ ಪ್ರತಿವಾರವೂ ನಿಶ್ಚಿತ ಸಣ್ಣಪುಟ್ಟ ಆದಾಯ ನೀಡಬಲ್ಲ ಸಸ್ಯಗಳು ಕೃಷಿ ಜೀವನಕ್ಕೆ ನೆಮ್ಮದಿಯ ಸೂತ್ರ ನೀಡಿವೆ. ಎಲ್ಲಕ್ಕಿಂತ ಮುಖ್ಯವಾಗಿ ತರಕಾರಿಗೆ ಪೇಟೆಗೆ ಹೋಗುವ ಪ್ರಮೇಯ ತಪ್ಪಿಸಿ ಹಣ, ಸಮಯ ಉಳಿಸಿವೆ.

ಕುಮಟಾ ತಾಲೂಕಿನ ಬಡಗಣಿಯ ಆರ್ ಬಿ ಹೆಗಡೆಯವರಿಗೆ ೨೧ ಗುಂಟೆ ಅಡಿಕೆ ತೋಟವಿದೆ. ಅಡಿಕೆ, ತೆಂಗು ಪ್ರಮುಖ ಬೆಳೆ. ಇಲ್ಲಿನ ತೋಟದಲ್ಲಿ ೪೫ಕ್ಕೂ ಹೆಚ್ಚು ಜಾತಿಯ ಸಸ್ಯಗಳಿವೆ. ತೋಟದ ನಡುವೆ ಸುಮಾರು ೩೦ ವರ್ಷದ ಒಂದು ಜಾಯಿಕಾಯಿ ಮರವಿದೆ.  ಇದು ವರ್ಷಕ್ಕೆ ೫೦-೫೫ಕಿಲೋ ಜಾಯಿಕಾಯಿ  ನೀಡುತ್ತಿದೆ.  ಒಂದು ಮರದಿಂದ  ೬-೭ ಸಾವಿರ ರೂಪಾಯಿ ಆಧಾಯವಿದೆ. ಕೊಯ್ಲು ಬಿಟ್ಟರೆ ವಿಶೇಷ ಕೃಷಿ ಖರ್ಚು ಇಲ್ಲ. ಅಮಟೆ ಮರ ವರ್ಷಕ್ಕೆ ಎರಡು ಸಾರಿ ಫಲ ನೀಡುತ್ತದೆ. ಒಂದು ಮರದ ಫಲದಿಂದ ೨೧೦೦ ರೂಪಾಯಿ ನೀಡಿದೆ. ಅಡಿಕೆ ೭೦೦೦, ತೆಂಗಿನಿಂದ ೨೦.೦೦೦, ಕಾಳು ಮೆಣಸು ೫೦೦೦, ಬೇರು ಹಲಸು ೧೫೦೦, ಅಂಟವಾಳ ೩೦೦ ಹೀಗೆ ಹತ್ತಾರು ಆಧಾಯ ಮೂಲಗಳಿವೆ. ಈ ಪುಟ್ಟ ಜಮೀನು ವರ್ಷಕ್ಕೆ  ೫೦-೬೦ ಸಾವಿರ ನೀಡುತ್ತದೆ. ಕೃಷಿ ನಿರ್ವಹಣೆಯ ಬಹುತೇಕ ಕೆಲಸಗಳನ್ನು  ಮನೆಯವರೇ ನಿಭಾಯಿಸುತ್ತಾರೆ. ತೋಟಕ್ಕೆ ಗೊಬ್ಬರ ಹಾಕುವದು, ತೆಂಗಿನ ಮರಕ್ಕೆ ಸೊಪ್ಪು ಹಾಕುವ ಕೆಲಸಗಳಿಗೆ ಮಾತ್ರ  ೭೦೦೦ ರೂಪಾಯಿ ಇಡೀ ವರ್ಷದ ಕೂಲಿ ಖರ್ಚು. ಉತ್ಪನ್ನ ನೀಡುವ  ಈ ಮರಗಳಲ್ಲದೇ ಮನೆ ಬಳಕೆಗೆ ಫಲ ನೀಡುವ ದಾಳಿಂಬೆ, ಮಾವು, ಪೇರಲ, ಲಿಂಬು, ಜಂಬನೇರಲೆ, ಪಪಾಯಿ, ಬಾಳೆ, ರಾಜನೆಲ್ಲಿ ಮುಂತಾದ ಗಿಡಗಳಿವೆ. ಅಡಿಕೆ ತೋಟದಲ್ಲಿ  ಇಷ್ಟೊಂದು  ಸಸ್ಯ ವೈವಿಧ್ಯ  ಪೋಷಿಸಿರುವ ಕಾರಣಕ್ಕೆ ಅಡುಗೆ ಮನೆಗೂ ತೋಟಕ್ಕೆ  ಸಂಬಂಧ ಬೆಸೆದಿದೆಆರೋಗ್ಯ ಸ್ವಾವಲಂಬನೆಯ ಸರಳ ದಾರಿ ಕಾಣಿಸಿದೆ.

ಕೃಷಿಕರಿಗೆ ಜಮೀನು ಎಷ್ಟಿದೆ ಎಂಬುದರಲ್ಲಿ  ನಾವು ಅವರ ಶ್ರೀಮಂತಿಕೆ ಅಳೆಯುತ್ತೇವೆ.  ಆದರೆ ಅಲ್ಲಿ ಏನು ಬೆಳೆಯುತ್ತೇವೆ ಎನ್ನುವದು ಮುಖ್ಯ ಎಂಬುದು ಕರಾವಳಿ ತೋಟ ನೋಡಿದವರ ಉದ್ಗಾರ. ಐದು ಜನರ ಒಂದು ಕುಟುಂಬ ೨೧ ಗುಂಟೆ ಭೂಮಿಯಲ್ಲಿ ಬದುಕಬಹುದು. ಕೃಷಿ  ಆದಾಯವನ್ನು ಹೇಗೆ ನಿರ್ವಹಣೆ ಮಾಡುತ್ತೇವೆ ಎಂಬುದರ ಮೇಲೆ  ಭವಿಷ್ಯ ರೂಪಿಸಬಹುದು. ಸ್ವತಃ ಶ್ರಮಪಡುವುದು, ಹೊಸ ಹೊಸ ಸಸ್ಯ ಬೆಳೆಸುವ ಕಾರ್ಯ ನಿರಂತರವಾಗಿರಬೇಕು.  ಈ ಸಣ್ಣ ಉತ್ಪನ್ನದಲ್ಲಿ  ಮೊಬೈಲ್, ಟಿ.ವಿ, ಬೈಕ್‌ಗಳ ನಿರ್ವಹಣೆ ಕಷ್ಟವಾಗಬಹುದು. ಮರ್ಯಾದೆಯಿಂದ ಹೊಟ್ಟೆ ತುಂಬ ಊಟ ಮಾಡಿ ನೆಮ್ಮದಿಯಿಂದಿರಲು ಇಷ್ಟು ನೆಲ ಸಾಕುಬಡಗಣಿಯ ಆರ್.ಬಿ. ಹೆಗಡೆ  ಪ್ರತಿಪಾದನೆ.

ನಮ್ಮ ಕೃಷಿ ವ್ಯವಸ್ಥೆಯಲ್ಲಿ  ಸುಲಭ ನಿರ್ವಹಣೆ, ಮಾರುಕಟ್ಟೆ ಅನುಕೂಲತೆಗೆ  ಹೆಚ್ಚು ಗಮನ ನೀಡುತ್ತೇವೆ. ತೆಂಗು, ಬಾಳೆ, ಅಡಿಕೆಯಂತಹ ಕೆಲವೇ ಬೆಳೆ ಬೆಳೆಯಲು ಆಸಕ್ತಿವಹಿಸುತ್ತೇವೆ. ಇದೇ ಭೂಮಿಯಲ್ಲಿ  ಮುಖ್ಯ ಬೆಳೆಗೆ ಹೆಚ್ಚಿನ ತೊಂದರೆಯಾಗದಂತೆ ಇನ್ನು ಯಾವ ಯಾವ ಸಸ್ಯ ಬೆಳೆಸಬಹುದು ಎಂದು ಕೃಷಿಕ ರಚನಾತ್ಮಕವಾಗಿ ಯೋಚಿಸಿದಾಗ ಸಾಧ್ಯತೆ ತೆರೆದುಕೊಳ್ಳುತ್ತದೆ. ಅಡಿಕೆ ಕೃಷಿ ಆರಾಮಕಣಿವೆಯಲ್ಲಿ ಕೃಷಿ ನಡೆಸುವವರು ಯಾವತ್ತೂ ಹೇಳುತ್ತಿದ್ದರು. ನೈಸರ್ಗಿಕ ನೀರಾವರಿಯಲ್ಲಿ ಕೃಷಿ ಗೆಲ್ಲುತ್ತಿತ್ತು. ಆದರೆ ಕರಾವಳಿಯಲ್ಲಿ ನೀರಾವರಿ ವ್ಯವಸ್ಥೆಗೆ  ಬಾವಿ ತೆಗೆಸಬೇಕು, ವಿದ್ಯುತ್ ಪಂಪ್ ಹಾಕಬೇಕು. ವಾರಕ್ಕೆ ಮೂರು ಸಾರಿ ನೀರು ನೀಡಬೇಕು. ಕೃಷಿ ಕಷ್ಟ ಕಂಡವರು ಜೀವನ ನಿರ್ವಹಣೆಗೆ ವೈವಿಧ್ಯಮಯ ಸಸ್ಯ ನಾಟಿ ಮಾಡಿದರು. ಮರದಿಂದ ವರ್ಷಕ್ಕೆ ೫೦೦, ೩೦೦ ರೂಪಾಯಿ ನೀಡಬಹುದಾದ ಬೆಳೆಯನ್ನೂ ನಿರ್ಲಕ್ಷಿಸದೇ ಶ್ರದ್ಧೆಯಿಂದ ಪೋಷಿಸಿದರುಫಲ ಕೊಯ್ದು ಮಾರುವ ಪರಿಪಾಟ ಉಳಿಸಿಕೊಂಡರು. ಹತ್ತಿರದ ಪೇಟೆಗೆ ಯಾವ ಕೆಲಸಕ್ಕೆ ಹೊರಟರೂ ಪುಟ್ಟ ಚೀಲದಲ್ಲಿ ನಾಲ್ಕು ಬೇರು ಹಲಸು, ನುಗ್ಗೆ, ಅಮಟೆ, ಲಿಂಬು ಕಾಯಿ ಒಯ್ದು  ಮಾರಾಟ! ದಿನದ ಖರ್ಚಿಗೆ ಪುಟ್ಟ ಆದಾಯ.  ತೆಂಗು, ಅಡಿಕೆಯ ಮುಖ್ಯ  ಬೆಳೆಯ ಆದಾಯವನ್ನು  ಮಕ್ಕಳ ಶಿಕ್ಷಣ, ಮನೆ ನಿರ್ಮಾಣ, ಸ್ವಯಂ ಉದ್ಯೋಗದಂತಹ ವಿಶೇಷ ಅಭಿವೃಧ್ಧಿ ಚಟುವಟಿಕೆಗೆ ವಿನಿಯೋಗ. ಅನವಶ್ಯಕ ತಿರುಗಾಟಗಳಿಗೆ ಕಡಿವಾಣ, ಖರ್ಚುಗಳ ನಿಯಂತ್ರಣ, ಸರಳ ಜೀವನ ಅನುಸರಿಸಿದ  ಕರಾವಳಿಯ ಹಳೆಯ ತಲೆಮಾರಿನವರು  ಪೇಟೆಗೆಂದು ಬಸ್ ಏರಿದ್ದು  ವರ್ಷಕ್ಕೆ  ೪-೬ ಸಾರಿ ಮಾತ್ರ, ಆಗ ಮಾತ್ರ  ಮೈಮುಚ್ಚುವ ಅಂಗಿ ತೊಟ್ಟವರು! ಇನ್ನುಳಿದ ದಿನ ಪುಟ್ಟ ಪಂಚೆಯಲ್ಲೇ ಜೀವಯಾನ.

ಮುಂಜಾನೆ ನಾಲ್ಕು ಗಂಟೆಗೆ ಎದ್ದು ತೋಟಕ್ಕೆ ನೀರು ಹಾಕುವ ಕಷ್ಟದ ಕೃಷಿ ಜೀವನದ ಮಧ್ಯೆ  ಇಡೀ ಕುಟುಂಬ ಕರಾವಳಿಯ ಬದುಕಿನ ಪಾಠ ಆಲಿಸಿದೆ. ಇದರಿಂದಾಗಿ ಪುಟ್ಟ ಜಮೀನ್ದಾರರು ಇಲ್ಲಿ ನೆಮ್ಮದಿಯಿಂದಿರಲು ಸಾಧ್ಯವಾಗಿದೆ. ಅನುತ್ಪಾದಕ ಚಟುವಟಿಕೆಗಳಿಗೆ ಅಪಾರ ಹಣ ವಿನಿಯೋಗ, ವೈಭವ ಜೀವನ, ಕಾರು-ಬೈಕಿನ ದರ್ಬಾನಲ್ಲಿ ಇಂದು ಘಟ್ಟದ ಸೀಮೆಯಲ್ಲಿ ೫ ಎಕರೆ ಅಡಿಕೆ ತೋಟವಿದ್ದವರೂ   ೧೦-೨೦ ಲಕ್ಷ ರೂಪಾಯಿ ಸಾಲದಲ್ಲಿ ಬಿದ್ದ ಉದಾಹರಣೆಗಳಿವೆ. ಸದಾ ಸಾಲಕ್ಕೆ ಜೋತು ಬೀಳುವ ನಿದರ್ಶನಗಳಿವೆ. ಆದರೆ ಕೆಲವೇ ಗುಂಟೆ ಜಮೀನಿರುವ ಕರಾವಳಿಯ ಖಾತೆದಾರರು  ಬ್ಯಾಂಕ್‌ಗಳಲ್ಲಿ ಒಳ್ಳೆಯ ಠೇವಣಿಯಿಟ್ಟಿದ್ದಾರೆ, ಸಾಲವಿಲ್ಲದೇ  ನೆಮ್ಮದಿಯಲ್ಲಿ ಕೃಷಿ ನಿರ್ವಹಣೆ ನಡೆಸಿದ ಸಾವಿರಾರು ಕುಟುಂಬಗಳಿವೆ.

ನಮ್ಮ ಕೃಷಿ ಭೂಮೀಯ ವಿಸ್ತೀರ್ಣ ಗಮನಿಸಿದರೆ ಬಹುತೇಕ ಜನ ೨-೩ ಎಕರೆಗಿಂತ ಕಡಿಮೆ ಜಮೀನು ಉಳ್ಳವರು. ಆದರೆ  ಈಗ ನಮಗೆ ಮಾದರಿ ಕೃಷಿಕರಾಗಿ ಪಾಠ ಹೇಳುತ್ತಿರುವವರು ೩೦-೪೦ ಎಕರೆ ಜಮೀನುದಾರರು!. ಪುಟ್ಟ ಆಧಾಯದಲ್ಲಿ ಚಿಕ್ಕ ಜಮೀನು ನಿರ್ವಹಿಸುವದಕ್ಕೂ, ದೊಡ್ಡ ಜಮೀನಿನಲ್ಲಿ  ಯಂತ್ರ, ಆಧುನಿಕ ವಿಧಾನಗಳ ಮುಖೇನ  ಕೃಷಿ ನಿರ್ವಹಿಸುವದಕ್ಕೂ  ಅಪಾರ ವ್ಯತ್ಯಾಸವಿದೆ. ಮಾದರಿ ಕೃಷಿಯ ಮಾತು ಬಂದಾಗೆಲ್ಲ ಹೆಚ್ಚು ಅಡಿಕೆ, ತೆಂಗು, ಬಾಳೆ ಬೆಳೆದವರ ಮಾತು  ಊರಿಗೆಲ್ಲ ಕೇಳಿಸುತ್ತದೆ. ಆದರೆ  ಸಣ್ಣ ಭೂಮಿಯಲ್ಲಿ   ವಿವಿಧ  ಸಸ್ಯ ಪೋಷಿಸಿ ಗೆದ್ದವರನ್ನೂ ನಾವು ಸ್ವಲ್ಪ ಗಮನಿಸಬೇಕು. ಆಗ ಕೃಷಿ ನಿರ್ವಹಣೆಯ ಪರ್ಯಾಯ ದಾರಿ ಕಾಣಬಹುದು.