ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಒಂದಾಗಿರುವ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಅತ್ಯಂತ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಕೋಮುವಾದದ ಸ್ವರೂಪವನ್ನು ವಿಶ್ಲೇಷಿಸುವುದು ಈ ಅಧ್ಯಯನದ ಮುಖ್ಯ ಉದ್ದೇಶ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಕರಾವಳಿ ಪ್ರದೇಶ ಮತ್ತು ಕರಾವಳಿ ಒಳನಾಡನ್ನು ಒಳಗೊಂಡು ರೂಪುಗೊಂಡಿದೆ.[1] ಕರಾವಳಿ ಪ್ರದೇಶವು ಮಂಗಳೂರು, ಉಡುಪಿ, ಕುಂದಾಪುರ ತಾಲೂಕುಗಳನ್ನು ಒಳಗೊಂಡಿದೆಯಾದರೆ ಕರಾವಳಿ ಒಳನಾಡು ಪುತ್ತೂರು, ಸುಳ್ಯ, ಬೆಳ್ತಂಗಡಿ ಕಾರ್ಕಳ ಮತ್ತು ಬಂಟ್ವಾಳ ತಾಲೂಕುಗಳನ್ನು ಒಳಗೊಂಡಿದೆ. ಬಹು ಕಾಲದಿಂದಲೂ ವ್ಯಾಪಾರ ವಹಿವಾಟುಗಳಿಂದಾಗಿ ಇತಿಹಾಸದ ಭಾಗವಾಗಿ ಹೋಗಿರುವ ಕರಾವಳಿಯ ಪಟ್ಟಣಗಳೆಂದರೆ ಮಂಗಳೂರು, ಉಡುಪಿ ಮತ್ತು ಕುಂದಾಪುರ. [2] ಆದರೆ ಕರಾವಳಿಯ ಒಳನಾಡಿನ ತಾಲೂಕುಗಳು ವಾಣಿಜ್ಯವಾಗಿ ಅಂಥ ಬಹು ದೊಡ್ಡ ಪಾತ್ರವನ್ನು ನಿರ್ವಹಿಸಿಲ್ಲವಾದರೂ ಎಂಬತ್ತರ ದಶಕದ ನಂತರ ಈ ಪ್ರದೇಶಗಳೂ ವ್ಯವಹಾರಿಕವಾಗಿ ಬೆಳೆದು ಸ್ವಲ್ಪ ಮಟ್ಟಿಗೆ ಗಟ್ಟಿ ಮುಟ್ಟಾಗಿವೆ. ಹೀಗಿದ್ದರೂ ವ್ಯಾಪಾರ ವಹಿವಾಟುಗಳಲ್ಲಿ ಕರಾವಳಿ ಪ್ರದೇಶದ ತಾಲ್ಲೂಕುಗಳು ಮತ್ತು ಒಳನಾಡಿನ ಈ ತಾಲೂಕುಗಳ ನಡುವೆ ಸಾಕಷ್ಟು ಅಂತರವಿದೆ. ಆದರೆ ಕರ್ನಾಟಕದ ಉಳಿದ ಭಾಗಗಳಿಗೆ ಹೋಲಿಸಿದಲ್ಲಿ ಅವಿಭಾಜ್ಯ ದಕ್ಷಿಣ ಕನ್ನಡ ಅಭಿವೃದ್ಧಿಯ ಬಹುತೇಕ ಸೂಚ್ಯಂಕಗಳ ಪ್ರಕಾರ ಮುಂದಿದೆ. ಮೂಲಭೂತ ಸೌಕರ್ಯಗಳು, ಭೂಮಸೂದೆ ತಂದ ಬದಲಾವಣೆಗಳು, ಕೈಗಾರಿಕೆಗಳು, ಸಾಮಾನ್ಯ ಶಿಕ್ಷಣ ಮತ್ತು ಉನ್ನತ ಶಿಕ್ಷಣವನ್ನು ಕಲ್ಪಿಸುವ ಸಂಸ್ಥೆಗಳ ಸಂಖ್ಯೆಯಲ್ಲಿನ ಅಭೂತಪೂರ್ವ ವಿಸ್ತರಣೆ, ಇಲ್ಲಿ ಹುಟ್ಟ ದೇಶವೆಲ್ಲ ವ್ಯಾಪಿಸಿರುವ ಬ್ಯಾಂಕುಗಳು ಇವೆಲ್ಲವುಗಳನ್ನು ಈ ಪ್ರದೇಶ ಸಾಧಿಸಿದ ಶ್ರೀಮಂತಿಕೆಗೆ ಕೆಲವು ಉದಾಹರಣೆಗಳನ್ನಾಗಿ ಕೊಡಬಹುದು.[3]ಇವೆಲ್ಲ ಅಭಿವೃದ್ಧಿಯ ಸಾಂಪ್ರದಾಯಿಕ ಗುಣಲಕ್ಷಣಗಳು. ಇವನ್ನು ಹೊರತುಪಡಿಸಿದ ಇತರ ಹಲವಾರು ಗುಣಲಕ್ಷಣಗಳೊಂದಿಗೆ ಜಿಲ್ಲೆಯನ್ನು ಗುರುತಿಸಬಹುದಾಗಿದೆ. ಅವುಗಳಲ್ಲಿ ಅತಿಯಾದ ಸ್ವಾಭಿಮಾನ, ನೀತಿ ನಿಯಮಗಳ ಕಟ್ಟುನಿಟ್ಟಿನ ಅನುಸರಣೆ ಮತ್ತು ಇದರಿಂದ ಸಾಧ್ಯವಾದ ಸಂಸ್ಥೆಗಳ ಬೆಳವಣಿಗೆ, ಭಾಷಾ ಸಂಗೋಪನೆ, ಪರಿಸರ ಕಾಳಜಿ ಇತ್ಯಾದಿಗಳು ಪ್ರಮುಖ. ವ್ಯಕ್ತಿಯಾಗಿ ಹಾಗೂ ಸಮಷ್ಠಿಯಾಗಿ ಜಿಲ್ಲೆ ಸ್ವಾಭಿಮಾನವನ್ನು ಹಲವಾರು ಸಂಗತಿಗಳಲ್ಲಿ ಮೆರೆದಿದೆ. ಉದ್ಯೋಗಕ್ಕಾಗಿ ಊರೂರು ಅಲೆದರು ಸ್ವಂತ ಊರಲ್ಲೊಂದು ಸೂರು ಬೇಕೆಂದು ಇಲ್ಲಿಂದ ಹೊರಗೆ ದುಡಿಯುವ ಬಹುತೇಕರು ಬಯಸುತ್ತಾರೆ. ಇದರಿಂದಾಗಿ ಎಷ್ಟೋ ಬಾರಿ ಕೇರಳದ ಹಾಗೆ ಇಲ್ಲಿನ ಆರ್ಥಿಕತೆ ಕೂಡ ಹೊರವಲಸಿಗರ ಆದಾಯದ ಮೇಲೆ ನಿಂತಿದೆ ಎನ್ನುವ ಕಲ್ಪನೆಗೆ ಎಡೆಮಾಡಿಕೊಟ್ಟಿದೆ. ಶಿಕ್ಷಣ, ಆರೋಗ್ಯ, ಹಣಕಾಸು, ಸಾರಿಗೆ ಇತ್ಯಾದಿ ಮೂಲಭೂತ ಸೌಲಭ್ಯಗಳನ್ನು ಸೃಷ್ಟಿಸಲು ಜಿಲ್ಲೆ ಸರಕಾರದ ನೆರವನ್ನು ಕಾದಿಲ್ಲ. ದಶಕಗಳಿಂದಲೇ ಈ ಎಲ್ಲ ಕ್ಷೇತ್ರಗಳಲ್ಲೂ ಇಲ್ಲಿನ ಮೇಲ್ವರ್ಗ ತಕ್ಕಮಟ್ಟಿನ ಸೌಲಭ್ಯಗಳನ್ನು ಸೃಷ್ಟಿಸಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಹುಟ್ಟಿಹಾಕಿದ ಸಂಸ್ಥೆಗಳು ಇಂದು ದೇಶ ಮತ್ತು ಪರದೇಶಗಳಲ್ಲೂ ಹಬ್ಬಿವೆ. ಇಲ್ಲಿನ ಬಹುತೇಕರ ಭಾಷೆ ತುಳು. ತುಳು ಭಾಷೆಗೆ ಲಿಪಿಯಿಲ್ಲ. ಅದಕ್ಕೆ ಪ್ರಭುತ್ವದ ಬೆಂಬಲವಿಲ್ಲ. ಹಾಗಿದ್ದರೂ ಅದು ಇಂದು ಕೂಡ ಇಲ್ಲಿನ ಬಹುತೇಕರ ಭಾಷೆಯಾಗಿದೆ. ಇದು ಸಾಧ್ಯವಾಗಿರುವುದು ಜಿಲ್ಲೆಯ ಪ್ರತಿಯೊಬ್ಬರು ಕಾಲದೇಶಗಳ ಮಿತಿಯನ್ನು ಮೀರಿ ತುಳು ಭಾಷೆಯನ್ನು ಬಳಸುತ್ತಿರುವುದರಿಂದ, ರಾಜ್ಯದಲ್ಲಿ ಅತೀ ಹೆಚ್ಚಿನ ಪರಿಸರ ಚಳವಳಿಗಳನ್ನು ನಡೆಸಿದ ಕೀರ್ತಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸಲ್ಲಬೇಕು. ಸರಕಾರದ ವಿರುದ್ಧ, ಬಹುರಾಷ್ಟ್ರೀಯ ಕಂಪೆನಿಗಳ ವಿರುದ್ಧ, ರಾಷ್ಟ್ರೀಯ ಕಂಪೆನಿಗಳ ವಿರುದ್ಧ ಹೀಗೆ ಜಿಲ್ಲೆಯ ಪರಿಸರಕ್ಕೆ ಧಕ್ಕೆ ತರುವ ಎಲ್ಲರ ವಿರುದ್ಧ ಜಿಲ್ಲೆಯಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿವೆ. ಹೀಗೆ ಒಂದು ಪ್ರಾದೇಶಿಕ ಬೆಳವಣಿಗೆಗೆ ಮಾದರಿಯಾಗಬಹುದಾದ ಎಲ್ಲ ಗುಣಲಕ್ಷಣಗಳು ಈ ಜಿಲ್ಲೆಯಲ್ಲಿದೆ. ಅದೇ ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಈ ಜಿಲ್ಲೆ ಕೋಮುವಾದದ ಬೆಳವಣಿಗೆಗೂ ಮಾದರಿಯಾಗುತ್ತಿದೆ.

ಒಂದು ಅರ್ಥದಲ್ಲಿ ಕೋಮುವಾದವೆಂಬುದು ಈ ಪ್ರದೇಶಕ್ಕೆ ಬಹಳ ಹೊಸದಾದ ಅಥವಾ ಅಪರಿಚಿತವಾದ ಸಂಗತಿಯೇನೂ ಅಲ್ಲ. ಎಪತ್ತರ ದಶಕದ ಆಸುಪಾಸಿನಲ್ಲೇ ಇಲ್ಲಿಯ ಬಂಟ್ವಾಳ ತಾಲೂಕಿನ ಕಲ್ಲಡ್ಕ, ಪುತ್ತೂರು ತಾಲೂಕಿನ ಪುತ್ತೂರುಪೇಟೆ ಹಾಗೂ ಮಂಗಳೂರು ತಾಲೂಕಿನ ಊಳ್ಳಾಲ ಈ ಪ್ರದೇಶಗಳು ಕೋಮು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲ್ಪಟ್ಟಿದ್ದವು. ಆದರೆ ಆ ಕಾಲದ ಕೋಮು ಗಲಭೆಗಳಿಗೂ ಈಗ ಕರಾವಳಿ ಪ್ರದೇಶದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳಿಗೂ ಗುಣಾತ್ಮಕವಾದ ವ್ಯತ್ಯಾಸಗಳಿವೆ.[4] ಕಳೆದ ಆರೇಳು ವರ್ಷಗಳಿಂದ ಈ ಪ್ರದೇಶದ ಕೋಮು ಸೂಕ್ಷ್ಮ ಸ್ಥಳಗಳು ಮತ್ತು ಹಿಂದು ಮುಸ್ಲಿಮರೊಳಗಿನ ಮತೀಯ ಗಲಭೆಗಳ ಸಂಖ್ಯೆ ಗಾಬರಿ ಹುಟ್ಟಿಸುವಷ್ಟು ವೃದ್ಧಿಯಾಗಿದೆ. ಈಗಾಗಲೇ ಉಲ್ಲೇಖಿಸಿದ್ದ ಪ್ರದೇಶಗಳಷ್ಟೇ ಅಲ್ಲದೆ ಮಂಗಳೂರು ಪಟ್ಟಣ, ಸುರತ್ಕಲ್, ಅದರ ಸಮೀಪದ ಕುಳಾಯಿ, ಕಾಟಿಪಳ್ಳ ಮತ್ತು ದೂರದ ಸುಳ್ಯವೂ ಈಗ ಮತೀಯ ಗಲಭೆಗಳ ಆಡುಂಬೊಲವಾಗಿದೆ. ಇಡೀ ಜಿಲ್ಲೆಯೇ ಕೋಮುಗ್ರಸ್ತವಾಗಿದೆ. ಈ ಕೋಮುಗ್ರಸ್ತ ವಾತಾವರಣದ ಭೀಕರ ಶಕ್ತಿ ಎಷ್ಟಿದೆ ಯೆಂದರೆ ಒಂದು ಅತ್ಯಂತ ಸಣ್ಣ ಮತ್ತು ಕ್ಷುಲ್ಲಕ ಸಂಗತಿಯನ್ನೂ ಅದು ಮತೀಯ ಗಲಭೆಗೆ ಘನ ಗಂಭೀರ ಕಾರಣವನ್ನಾಗಿ ಮಾಡುತ್ತದೆ.

ಪರಿಣಾಮವಾಗಿ ಐದಾರು ಜನರ ಅಮಾನವೀಯ ಹತ್ಯೆ ಮತ್ತು ಲಕ್ಷಾಂತರ ರೂಪಾಯಿಗಳ ಮೌಲ್ಯದ ಆಸ್ತಿ ನಾಶವಾಗುತ್ತದೆ. ಈ ಇಡೀ ವಿದ್ಯಮಾನದ ಹರಡುವಿಕೆ ಇಂದು ಎಷ್ಟು ತೀವ್ರವಾಗಿದೆಯೆಂದರೆ ಅತ್ಯಾಧುನಿಕ ತಂತ್ರಜ್ಞಾನಗಳ ‘ಸೇವೆ’ಯನ್ನು ಬಳಸಿಕೊಂಡು ಕೋಮುಗಲಭೆಗಳಂತಹ ವಿದ್ಯಮಾನಗಳು ಮಿಂಚಿನ ವೇಗದಲ್ಲಿ ಇಡಿಯ ಜಿಲ್ಲೆಯನ್ನು ವ್ಯಾಪಿಸಿಕೊಂಡು ಬಿಡುತ್ತವೆ. ಪರವಿರೋಧದ ಸಭೆಗಳು, ಪರವಿರೋಧದ ಮೆರವಣಿಗೆಗಳು, ಘೋಷಣೆ ಪ್ರತಿಘೋಷಣೆಗಳು ಈ ಸಂದರ್ಭದಲ್ಲಿ ಕಾಣಿಸಿಕೊಂಡು ಈಗಾಗಲೇ ಕೆಟ್ಟಿರುವ ಪರಿಸ್ಥಿತಿಯನ್ನು ಇನ್ನಷ್ಟು ಉದ್ವಿಗ್ನಗೊಳಿಸುತ್ತವೆ. ಮೆರವಣಿಗೆಯಲ್ಲಿ ಪಾಲ್ಗೊಂಡ ಜನರು ಇದ್ದಕ್ಕಿದ್ದಂತೆ ಅಥವಾ ಪೂರ್ವ ಯೋಜಿತವಾಗಿ ಉದ್ರಿಕ್ತರಾಗಿ, ಅನ್ಯ ಧರ್ಮದ ಜನರ ಮೇಲೆ, ಅವರ ಮನೆಗಳ ಮೇಲೆ ಅಂಗಡಿ ಮುಂಗಟ್ಟುಗಳ ಮೇಲೆ ಎರಗಿ ನಾನಾ ಬಗೆಯ ಹಾನಿಯನ್ನುಂಟು ಮಾಡುವುದು ಇಲ್ಲಿ ಮಾಮೂಲಾಗಿ ಬಿಟ್ಟಿದೆ.

ಈ ಮತೀಯ ಗಲಭೆಗಳ ಸಂದರ್ಭದಲ್ಲಿ ಅಥವಾ ಗಲಭೋತ್ತರದ ದಿನಗಳಲ್ಲಿ ಸಾಮಾನ್ಯ ಜನತೆ ಮತ್ತು ಸ್ಥಳೀಯ ಮಾಧ್ಯಮಗಳು ಸದ್ರಿ ಗಲಭೆಗೆ ಕಾರಣವಾದ ಅಂಶಗಳ ಬಗ್ಗೆ, ಯಾವ್ಯಾವ ಜನರು ಗಲಭೆಗಳಲ್ಲಿ ಪಾಲ್ಗೊಂಡಿದ್ದರು ಎನ್ನುವುದರ ಬಗ್ಗೆ, ಗಲಭೆಗಳಲ್ಲಿ ನೊಂದವರ ಬಗ್ಗೆ ಮತ್ತು ಪೊಲೀಸರ ಕಾರ್ಯಾಚರಣೆಯ ವೈಖರಿಯ ಬಗ್ಗೆ ಚರ್ಚೆಗಳನ್ನೂ ನಡೆಸುತ್ತವೆ. ಈ ಎಲ್ಲ ಸಂದರ್ಭಗಳಲ್ಲೂ ತಕ್ಷಣದ ಕಾರಣದ ಕಡೆಗೆ ಗಮನಹರಿಸಲಾಗುತ್ತಿದೆ. ಇವರ ಪ್ರಕಾರ ಬಹುತೇಕ ಮತೀಯ ಗಲಭೆಗಳಿಗೆ ಹೆಣ್ಣು ಮಕ್ಕಳ ವಿಷಯ, ಸಣ್ಣಪುಟ್ಟ ಮನಸ್ತಾಪಗಳು, ಕ್ಷುಲ್ಲಕ ಕಾರಣಕ್ಕೆ ಆರಂಭವಾಗುವ ಜಗಳಗಳು, ಹಬ್ಬ ಹರಿದಿನಗಳಲ್ಲಿ ನಡೆಯುವ ಮೆರವಣಿಗೆ ಸಂದರ್ಭದಲ್ಲಿ ಕಿಡಿಗೇಡಿಗಳು ನಡೆಸುವ ಕಲ್ಲು ತೂರಾಟಗಳು, ಆರಾಧನಾ ಸ್ಥಳಗಳಿಗೆ ಒದಗಿದ ಧಕ್ಕೆ ಅಥವಾ ಅಪಚಾರಗಳು ಇತ್ಯಾದಿಗಳು ಪ್ರಧಾನ ಕಾರಣವಾಗಿರುತ್ತವೆ. ಯಾವುದೋ ಒಂದು ಕೋಮಿಗೆ ಸೇರಿದ ಹೆಣ್ಣು ಮಕ್ಕಳನ್ನು ಮತ್ತೊಂದು ಕೋಮಿಗೆ ಸೇರಿದ ಕಿಡಿಗೇಡಿಗಳು ಚೇಡಿಸುವುದು, ಆಟದ ಮೈದಾನದಲ್ಲಿ ಅಥವಾ ದಿನನಿತ್ಯದ ವ್ಯವಹಾರದಲ್ಲಿ ನಡೆಯುವ ಭಿನ್ನಮತ ದೊಡ್ಡ ಗಲಭೆಯಾಗಿ ಸ್ಫೋಟಗೊಳ್ಳುವುದು, ಮಸೀದಿಲ್ಲಿ ಹಂದಿ ಮಾಂಸ ಅಥವಾ ದೇವಸ್ಥಾನದಲ್ಲಿ ದನದ ಮಾಂಸ ಕಾಣುವುದು ಇತ್ಯಾದಿಗಳು ಗಲಭೆ ಆರಂಭವಾಗಲು ಕಾರಣವಾಗುತ್ತವೆ. ಆದರೆ ಬಹುತೇಕ ಸಂದರ್ಭಗಳಲ್ಲಿ ನಡೆದಿದೆ ಎಂದು ಸುದ್ದಿಯಾಗುವ ಇಂಥ ಯಾವತ್ತೂ ಘಟನೆಗಳೂ ಸಂಭವಿಸಿಯೇ ಇರುವುದಿಲ್ಲ. ಮಾಧ್ಯಮ ಅಥವಾ ಗಾಳಿಸುದ್ದಿಗಳು ಮತ್ತು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಎಸ್ಸೆಮೆಸ್‌ಗಳು ಇಲ್ಲದ್ದನ್ನು ‘ಸಂಭವಿಸಿಯೇ ಬಿಟ್ಟಿತು’ ಎಂಬ ಅಧಿಕೃತತೆಯಲ್ಲಿ ಪ್ರಸಾರ ಮಾಡುತ್ತಿವೆ.[5] ಕೋಮುಸೂಕ್ಷ್ಮ ಪ್ರದೇಶಗಳ ಜನರು ಇಂಥ ಸುದ್ದಿಗಳಿಗೆ ಅದೆಷ್ಟು ಬೇಗ ಪ್ರತಿಕ್ರಿಯಿಸುತ್ತಾರೆಂದರೆ ಈ ಸುದ್ದಿಗಳ ತಾಜಾತನದ ಬಗ್ಗೆ ಯಾವ ಪರಿಶೀಲನೆಗೂ ತೊಡಗದೆ ನೇರವಾಗಿ ಇನ್ನೊಂದು ಸಮುದಾಯದ ಅದ್ಯಾವುದೋ ಅಮಾಯಕ ಜನರ ‘ವಿಚಾರಣೆಗೆ’ ಹೊರಡುತ್ತಾರೆ.

ಈ ಎಲ್ಲ ಸಂಗತಿಗಳನ್ನು ಬೆಳೆಯುತ್ತಿರುವ ಮತೀಯ ವ್ಯಾಧಿಯ ಆರಂಭಿಕ ಗುಣಲಕ್ಷಣಗಳೆಂದು ಬಗೆದು ಇದರ ನಿಜವಾದ ಕಾರಣವನ್ನು ಹುಡುಕುವುದು ಈ ಅಧ್ಯಯನದ ಉದ್ದೇಶ.

ಈ ಅಧ್ಯಯನ ಕರಾವಳಿ ಜಿಲ್ಲೆಯ ಒಂದು ಪ್ರಮುಖ ವಿದ್ಯಮಾನವಾದ ಕೋಮುವಾದದ ಬೆಳವಣಿಗೆಯ ಸ್ವರೂಪವನ್ನು ಅಧ್ಯಯನ ಮಾಡುತ್ತದೆ. ಇದನ್ನು ಇನ್ನಷ್ಟು ಖಚಿತ ಪಡಿಸುವುದಾದಲ್ಲಿ ಕೋಮುವಾದ ಈ ಜಿಲ್ಲೆಯಲ್ಲಿ ಇಷ್ಟೊಂದು ವ್ಯಾಪಕವಾಗಿ ಬೆಳವಣಿಗೆಯಾಗುವುದಕ್ಕೆ ಪೂರಕವಾದ ಅಂಶಗಳು ಯಾವುವು? ಇದು ಕೇವಲ ಸಂಘ ಪರಿವಾರ ಅಥವಾ ಮುಸ್ಲಿಮ್‌ ಮೂಲಭೂತವಾದದ ಏಕೈಕ ಉತ್ಪಾದನೆಯೆ? ಅಥವಾ ಒಟ್ಟು ಈ ಜಿಲ್ಲೆಯಲ್ಲಿ ಬದಲಾಗುತ್ತಿರುವ ಸಮಾಜೋ ಆರ್ಥಿಕ ಸ್ಥಿತಿಗತಿಗಳಿಗೆ ಪ್ರತಿಕ್ರಿಯೆಯಾಗಿ ಸೃಷ್ಟಿಯಾದ ರಾಜಕೀಯ ಲಕ್ಷಣವೇ? ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇಲ್ಲಿನ ಮೇಲ್ಜಾತಿ-ಕೆಳಜಾತಿಗಳ ರಾಜಕೀಯ ಸಂಘರ್ಷದ ಉತ್ಪನ್ನವೇ? ಅಥವಾ ಒಟ್ಟು ಜಗತ್ತಿನಲ್ಲಿ ಬದಲಾಗುತ್ತಿರುವ ವಿದ್ಯಮಾನದ ಅರ್ಥಾತ್‌ ಜಾಗತೀಕರಣವೆಂಬ ಮೋಹಕ ಮಾಯಾಜಾಲದ ಒಂದು ಬಗೆಯ ಸ್ಥಳೀಯ ಮಹಿಮೆಯೇ? ಎಂಬಿತ್ಯಾದಿ ಪ್ರಶ್ನೆಗಳನ್ನು ಈ ಅಧ್ಯಯನದ ಸಂದರ್ಭದಲ್ಲಿ ಎತ್ತಿ ನಿರ್ವಹಿಸಲಾಗುವುದು. ಈ ಅಧ್ಯಯನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಶೋಧನೆಯ ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸಿ ಸಂಗ್ರಹಿಸಲಾಗಿದೆ. ವಸಾಹತುಪೂರ್ವದ, ವಸಾಹತುಕಲದ ಮತ್ತು ನಂತರದ ಜಿಲ್ಲೆಯ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಈಗಾಗಲೇ ಪ್ರಕಟವಾಗಿರುವ ಬರಹಗಳ ಜತೆಗೆ ಮೌಖಿಕ ರೂಪದಲ್ಲಿ ಪ್ರಚಲಿತದಲ್ಲಿರುವ ಮಾಹಿತಿಗಳನ್ನು ಕೂಡ ಬಳಸಿಕೊಳ್ಳಲಾಗಿದೆ. ಮತೀಯ ಗಲಭೆಗಳ ಪ್ರದೇಶದಲ್ಲಿ ಸಂಚರಿಸಿ ಕೋಮು ಗಲಭೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು, ಪರೋಕ್ಷವಾಗಿ ತೊಡಗಿಸಿಕೊಂಡವರು ತಟಸ್ಥರಾದವರು, ಕಷ್ಟನಷ್ಟ ಅನುಭವಿಸಿದವರು ಮುಂತಾದವರೊಂದಿಗೆ ಅನೌಪಚಾರಿಕವಾಗಿ ಮಾತಾಡಿ ಮಾಹಿತಿ ಸಂಗ್ರಹಿಸಲಾಗಿದೆ. ಕರಾವಳಿ ಜಿಲ್ಲೆಗಳ ಮತೀಯ ಗಲಭೆಗಳಿಗೆ ಮುಸ್ಲಿಮರು ಮತ್ತು ಕ್ರಿಶ್ಚಿನ್ನರು ನೇರವಾಗಿ ಸಂಘ ಪರಿವಾರವನ್ನು ಮತ್ತು ಪರೋಕ್ಷವಾಗಿ ಹಿಂದೂ ಮೇಲ್ಜಾತಿಯ ಜನರು ಕಾರಣ ಎಂದು ಹೇಳುತ್ತಾರೆ. ಆದರೆ ಜನ ಸಾಮಾನ್ಯ ಹಿಂದೂಗಳು ಮತ್ತು ಸಂಘ ಪರಿವಾರದವರು ಬೇರೆಯದೇ ಆದ ಕಾರಣಗಳನ್ನು ಹೇಳುತ್ತಾರೆ. ಎಲ್ಲೆಲ್ಲಿ ಮತೀಯ ಸಂಘರ್ಷಗಳು ನಡೆದವೋ ಅಲ್ಲಿಯ ಜನರು ಈ ಎಲ್ಲ ಗಲಭೆಗಳ ಹಿಂದೆ ಮುಸ್ಲಿಮರ ಕಿತಾಪತಿ ಇದೆ ಎಂದೇ ಅಭಿಪ್ರಾಯ ಪಡುತ್ತಾರೆ. ಉಳಿದವರು ಇದಕ್ಕಿಂತ ಸ್ವಲ್ಪ ಭಿನ್ನವಾದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರಾದರೂ ಮುಸ್ಲಿಮರನ್ನು ಇಡಿಯ ವಿದ್ಯಮಾನಗಳಿಂದ ಪೂರ್ಣ ಹೊರಗಿಡುವುದಿಲ್ಲ. ಆದರೆ ಇಲ್ಲಿ ಪ್ರಕಟವಾಗುವ ಒಂದು ಮಾಮೂಲು ಧ್ವನಿಯೆಂದರೆ ಮುಸ್ಲಿಮರೆಲ್ಲರೂ ‘ಒಂದೇ’ ಎನ್ನುವ ಅವಿಮರ್ಶಿತ ನಿಲುವು. ಮುಸ್ಲಿಮ್ ಸಮುದಾಯದೊಳಗಿನ ಬಹು ಪ್ರಮುಖವಾದ ಸಾಮಾಜಿಕವಾದ ಮತ್ತು ಆರ್ಥಿಕವಾದ ಅಸಮಾನತೆಗಳು ಕೋಮುವಾದಿಗಳಿಗೆ ಮತ್ತು ಸಾಮಾನ್ಯ ಜನರಿಗೂ ಕಾಣುವುದೇ ಇಲ್ಲ. ಈ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಗಳು ಮುಸ್ಲಿಮ್ ಸಮುದಾಯದೊಳಗೆ ಸಾಕಷ್ಟು ಅಗಲವಾದ ಕಂದಕವನ್ನು ಸೃಷ್ಟಿಸಿವೆ. ಶಿಕ್ಷಣದ ವಿಷಯದಲ್ಲಿ, ನಗರ-ಹಳ್ಳಿಗಳ ಬದುಕಿನ ಕ್ರಮದಲ್ಲಿ ಮತ್ತು ಒಟ್ಟು ಜೀವನಕ್ರಮಗಳಲ್ಲಿ ಮುಸ್ಲಿಮರು ಒಂದಲ್ಲ; ಮುಸ್ಲಿಮರೊಳಗೆ ಹಲವಾರು ಸಮುದಾಯಗಳನ್ನು ಕಾಣಬಹುದು. ಆದರೆ ಮುಸ್ಲಿಮೇತರ ಜಗತ್ತು ಯಾವತ್ತು ‘ಮುಸ್ಲಿಮ್’ ಅನ್ನುವ ಸಮುದಾಯವೊಂದನ್ನು ಭಿನ್ನತೆಗಳೇ ಇಲ್ಲದ, ವಿರೋಧಾಭಾಸಗಳೇ ಇಲ್ಲದ ‘ಏಕಶಿಲಾಕಾರ’ದ ಮಾದರಿಯಲ್ಲಿದೆ ಎಂದು ಭಾವಿಸಿರುವ ಸ್ಥಿತಿ ಇಡಿಯ ಜಗತ್ತಿನಲ್ಲಿಯೇ ಇದೆ. ಹಾಗೆಯೇ ಅದು ಕರಾವಳಿ ಜಿಲ್ಲೆಯಲ್ಲೂ ಇದೆ.

ಕರಾವಳಿ ಜಿಲ್ಲೆಯಲ್ಲಿ ಸಂಘ ಪರಿವಾರ ಸ್ವಾತಂತ್ರ‍್ಯ ಪೂರ್ವದಿಂದಲೇ ಅಂದರೆ ೧೯೪೦ ರಿಂದಲೂ ಅಸ್ತಿತ್ವದಲ್ಲಿದೆ. ವಿಶ್ವ ಹಿಂದೂ ಪರಿಷತ್‌ನ ಮೊತ್ತಮೊದಲ ರಾಷ್ಟ್ರೀಯ ಸಮ್ಮೇಳನವು ೧೯೬೪ ರಲ್ಲಿ ಉಡುಪಿಯಲ್ಲಿ ನಡೆಯಿತು. ಅಂದಿನಿಂದ ಇಂದಿನವರೆಗೂ ಉಡುಪಿ ಮತ್ತು ವಿ.ಹಿಂ.ಪ.ದ ಸಂಬಂಧ ಗಾಢವಾಗಿದೆ. [6] ಅಷ್ಟೇ ಗಮನಾರ್ಹವಾದ ಮತ್ತು ಪ್ರಮುಖವಾದ ಸಂಗತಿಯೆಂದರೆ ಆರ್.ಎಸ್.ಎಸ್. ಈ ಅವಿಭಜಿತ ಜಿಲ್ಲೆಯಲ್ಲಿ ೧೩೭೭ ಶಾಖೆಗಳನ್ನು ಮತ್ತು ಸಾವಿರಾರು ಸಂಖ್ಯೆಯಲ್ಲಿ ಸ್ವಯಂಸೇವಕರನ್ನು ಹೊಂದಿದೆ. ಈ ಮೇಲಿನ ಅಂಕಿ ಅಂಶಗಳನ್ನು ಮಾತ್ರ ಇಟ್ಟುಕೊಂಡು ಕರಾವಳಿಯಲ್ಲಿ ಸಂಭವಿಸುತ್ತಿರುವ ಮತೀಯ ಸಂಘರ್ಷಕ್ಕೆ ಇದೇ ಕಾರಣ ಎಂದು ನಾವು ತಿಳಿದುಕೊಂಡರೆ ಅದೊಂದು ತಕ್ಷಣದ ತೀರ್ಮಾನವೂ, ಸೆಕ್ಯುಲರ್ ಭಾವಾವೇಶವೂ ಹಾಗೆಯೇ ಈ ಜಿಲ್ಲೆಗಳ ಉಳಿದ ಸಂಗತಿಗಳ ಕುರಿತು ದಿವ್ಯ ಮತ್ತು ಉದ್ದೇಶಪೂರ್ವಕ ನಿರ್ಲಕ್ಷ್ಯವೂ ಆಗಿ ಬಿಡುತ್ತದೆ. ಇಲ್ಲಿನ ಮುಸ್ಲಿಮ್ ಮೂಲಭೂತವಾದದ ಬಗೆಗೂ ಹೇಳಬೇಕಾದ ಕೆಲವು ಮಾತುಗಳಿವೆ. ಇಡಿಯ ಮುಸ್ಲಿಮ್ ಸಮುದಾಯವನ್ನು ಒಂದು ರೀತಿಯಲ್ಲಿ ಏಕಛತ್ರಿಯ ಕೆಳಗೆ ತರುವ ಪ್ರಯತ್ನವನ್ನು ಇಲ್ಲಿಯ ಮುಸ್ಲಿಮ್ ಮೂಲಭೂತವಾದ ಶ್ರದ್ಧೆಯಿಂದ ಮಾಡುತ್ತಿವೆ. ಶಿಕ್ಷಣ, ಆರೋಗ್ಯ ಇತ್ಯಾದಿಗಳ ಮೂಲಕ ಸಮುದಾಯದ ಜನರನ್ನು ಸಶಕ್ತೀಕರಣಗೊಳಿಸುವ ಬದಲು ಇತ್ತೀಚಿನವರೆಗೂ ಮಸೀದಿ, ಉರುಸ್ ಇತ್ಯಾದಿಗಳ ಮೂಲಕ ಜನರನ್ನು ಭಾವನಾತ್ಮಕವಾಗಿ ಬೆಸೆಯುವುದಕ್ಕೆ ಮುಸ್ಲಿಮ್ ಸಾಂಪ್ರದಾಯಿಕವಾದ ಮಹತ್ವ ನೀಡಿದೆ. [7] ಮುಸ್ಲಿಮ್ ಸಾಂಪ್ರದಾಯವಾದಿಗಳ ನೀತಿಯನ್ನು ಪ್ರಶ್ನಿಸುವ ಮುಸ್ಲಿಂ ಸಮುದಾಯದೊಳಗಿನ ಭಿನ್ನ ಧ್ವನಿಗಳು ಒಂದು ಬಗೆಯ ದ್ವೀಪವಾಗುವಂತೆ ಸಾಂಪ್ರದಾಯವಾದಿಗಳು ನೋಡಿಕೊಂಡಿದ್ದಾರೆ.

ಏಕದೇವತಾರಾಧನೆ, ಏಕನಂಬಿಕೆಗಳಿತ್ಯಾದಿ ಧಾರ್ಮಿಕ ಪ್ರಾಥಮಿಕ ಸಂಗತಿಗಳನ್ನು ಹೊರತುಪಡಸಿದರೆ ಮುಸ್ಲಿಮ್ ಸಮುದಾಯವೂ ಇತರ ಎಲ್ಲಾ ಸಮುದಾಯಗಳ ಹಾಗೆ ಭಿನ್ನ ಭಿನ್ನ ಜೀವನ ಕ್ರಮಗಳ ಸಮುದಾಯ. ಎರಡೂ ಸಮುದಾಯಗಳಲ್ಲೂ (ಹಿಂದು ಮತ್ತು ಮುಸ್ಲಿಮ್) ಸಾಮಾಜಿಕ ಮೌಲ್ಯಗಳನ್ನು ಕಾಪಾಡುವ ಜವಾಬ್ದಾರಿ ಬಡವರು ಮತ್ತು ಮಧ್ಯಮ ವರ್ಗಕ್ಕೆ ಸೇರಿದ ಜನರದ್ದು. ಶ್ರೀಮಂತ ವರ್ಗಕ್ಕೆ ಸೇರಿದವರು ಧಾರ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಆಚರಿಸದಿರುವುದು ಅಪಚಾರವಾಗುವುದಿಲ್ಲ. ಬುರ್ಕಾ ತೊಡದೆ ಹೊರಗೆ ಬರುವುದು, ಅಂತರ್‌ಧರ್ಮ ವಿವಾಹವಾಗುವುದು, ಊಟ ಪಾನೀಯಗಳು ನಿಯಮ ಉಲ್ಲಂಘನೆ ಮಾಡುವುದು ಇತ್ಯಾದಿಗಳು ಬಡ ಮತ್ತು ಮಧ್ಯಮ ವರ್ಗದ ಮುಸ್ಲಿಮರಿಗೆ ಕಷ್ಟ. ಅದೇ ರೀತಿ ಇತರ ಜಾತಿ/ಧರ್ಮದ ಬಡ ಮತ್ತು ಮಧ್ಯಮ ವರ್ಗದ ಮುಸ್ಲಿಮರಿಗೆ ಕಷ್ಟ. ಅದೇ ರೀತಿ ಇತರ ಜಾತಿ/ಧರ್ಮದ ಬಡ ಮತ್ತು ಕೆಳವರ್ಗದವರಿಗೆ ಅವರ ಜಾತಿ/ಧರ್ಮದ ಮೌಲ್ಯಗಳನ್ನು ಮೀರಿ ಬದುಕುವುದು ಕಷ್ಟ. ಆದರೆ ಅಚ್ಚರಿಯ ವಿದ್ಯಮಾನವೊಂದರಲ್ಲಿ ಧಾರ್ಮಿಕ ಮೂಲಭೂತವಾದ ಮತ್ತು ಈಗಿನ ಜಾಗತೀಕರಣದ ಹಿತಾಸಕ್ತಿಯನ್ನು ಕಾಪಾಡುವ ಸಂಘ ಸಂಸ್ಥೆಗಳು ನಿರ್ಮಿಸುವ ತಾತ್ವಿಕತೆಯೂ ಇಡಿಯ ಮುಸ್ಲಿಮ್ ಸಮುದಾಯವನ್ನು ‘ಅಖಂಡವಾಗಿ’ ಪರಿಕಲ್ಪಿಸಿವೆ. ಈ ಬಗೆಯ ಅಖಂಡತೆಯ ಸೃಷ್ಟಿ ಎರಡೂ ಸಮುದಾಯಗಳ (‘ಅನ್ಯ’ ಮತ್ತು ‘ಸ್ವ’ಕ್ಕೆ ಸೇರಿದ) ತಳಸ್ತರದ ಜನರ ಬದುಕನ್ನು ಅಸಹನೀಯಗೊಳಿಸುತ್ತಿದೆ. (ಕೋಮುಗಲಭೆಯಂತಹ) ಅಸಮಾನ್ಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಮಾಡುವ ತಪ್ಪು ಅಥವಾ ಅಪರಾಧಗಳು ಇಡಿಯ ಸಮುದಾಯದ ತಪ್ಪು/ಅಪರಾಧವಾಗಿ ಕಾಣಿಸಿಕೊಳ್ಳುತ್ತವೆ. ಅಂತಹ ಅಪರಾಧಿಗಳನ್ನು ದಂಡಿಸುವುದು ಅಥವಾ ಶಿಕ್ಷಿಸುವುದು ಮತ್ತೊಂದು ಸಮುದಾಯಕ್ಕೆ ಸೇರಿದವರ ಕರ್ತವ್ಯವಾಗುತ್ತದೆ. ಕೋಮುಗಲಭೆಯಂತಹ ಹಿಂಸಾತ್ಮಕ ಘಟನೆಗಳು ಹಾದು ಹೋಗುವ ಸಂಗತಿಗಳು; ಶಾಶ್ವತ ಅಲ್ಲ. ಆದರೆ ವಿರೋಧಿ ಕೋಮುಗಳನ್ನು ಸೃಷ್ಟಿಸಲು ಮತ್ತು ಅವುಗಳು ಹಿಂಸಾತ್ಮಕವಾಗಿ ವ್ಯವಹರಿಸಲು ಜನರ ಮನಸ್ಸನ್ನು ಹದಗೊಳಿಸಲು ಸೃಷ್ಟಿಸುವ ಚಿಂತನೆಗಳ ಮತ್ತು ಆಚರಣೆಗಳ ಪ್ರಭಾವ ಒಂದು ಗಳಿಗೆ ಬಂದು ಹೋಗುವ ಸಂಗತಿಗಳಲ್ಲ. ಅದು ಜನ ಸಾಮಾನ್ಯರ ಬದುಕನ್ನು ನಿರಂತರವಾಗಿ ಕಾಡುವ ಸಂಗತಿಗಳಾಗುತ್ತವೆ. ಇವುಗಳಿಂದಾಗಿ ಎರಡೂ ಸಮುದಾಯಗಳ ತಳಸ್ತರದ ಜನರು ತಮ್ಮದೇ ಬೇರುಗಳ ಬಗ್ಗೆ (ಊಟ, ಪಾನೀಯ, ಕಸುಬು, ಭಾಷೆ, ಉಡುಗೆ ತೊಡುಗೆ ಇತ್ಯಾದಿಗಳ ಬಗ್ಗೆ) ಒಂದು ಬಗೆಯ ಕೀಳರಿಮೆಯನ್ನು ರೂಢಿಸಿಕೊಂಡು ಇಬ್ಬಂದಿತನದಿಂದ ಬದುಕಬೇಕಾದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆನೂ ಇದೆ. ಈ ಎಲ್ಲ ಸಂಗತಿಗಳು ಅಧ್ಯಯನದ ವ್ಯಾಪ್ತಿಯನ್ನು ಮತ್ತು ಪ್ರಾಮುಖ್ಯತೆಯನ್ನು ವಿಸ್ತರಿಸಿವೆ.

ಕೋಮುವಾದದ ಮೇಲಿನ ಅಧ್ಯಯನ ಪರಿಗಣಿಸಬೇಕಾದ ತಾತ್ವಿಕ ಸಂಗತಿಗಳ ಸಾಲಿನಲ್ಲಿ ‘ಅನ್ಯ’ ನಿರ್ಮಾಣದ ವಿವರಣೆ ಈ ಅಧ್ಯಯನದ ದೃಷ್ಟಿಯಿಂದ ಪ್ರಾಮುಖ್ಯವಾದುದು. ಗಲಭೆಗಳಲ್ಲಿ ನೇರವಾಗಿ (ಹೊಡೆತ ಬಡಿತಗಳಲ್ಲಿ ಪಾಲುಗೊಳ್ಳುವುದು) ಇಲ್ಲಾ ಪರೋಕ್ಷವಾಗಿ ಕೋಮು ಚಿಂತನೆಗಳಿಗೆ ಪ್ರವಾಹಕರಾಗುವುದು, ಕೋಮುಗಲಭೆಯಲ್ಲಿ ನೊಂದವರಿಗೆ ಸಾಂತ್ವಾನ ನೀಡದಿರುವುದು, ಕಣ್ಣೆದುರು ನಡೆಯುವ ಕೋಮು ಗಲಭೆಗಳ ಬಗ್ಗೆ ನಿರ್ಲಿಪ್ತವಾಗಿರುವುದು) ಭಾಗವಹಿಸುವವರಿಗೆಲ್ಲಾ ‘ಅನ್ಯ’ ಸಮುದಾಯದ ಬಗ್ಗೆ ಅವರದ್ದೇ ಆದ ಒಂದು ‘ಕಲ್ಪಿತ ಚಿತ್ರಣ’ವಿರುತ್ತದೆ. ಆ ಕಲ್ಪಿತ ಚಿತ್ರಣದಲ್ಲಿ ‘ಅನ್ಯ ಸಮುದಾಯ’ ನಕರಾತ್ಮಕವಾಗಿ ಚಿತ್ರಿಸಲ್ಪಟ್ಟಿರುತ್ತದೆ. ಇಂತಹ ನಕರಾತ್ಮಕ ಸಂಗತಿಗಳನ್ನು (ಅನ್ಯ ಸಮುದಾಯದವರನ್ನು) ಇಲ್ಲದಾಗಿಸುವುದು ಅಥವಾ ನಿಷ್ಕ್ರಿಯಗೊಳಿಸುವುದು ಅಥವಾ ನಿರ್ನಾಮ ಮಾಡುವುದು ಅಥವಾ ನಿಕೃಷ್ಟಗೊಳಿಸುವುದು ಕೋಮುವಾದವನ್ನು ನಂಬುವವರ ಕರ್ತವ್ಯ. ಈ ‘ಅನ್ಯ’ದ ಕಲ್ಪನೆಯನ್ನು ಯಾರು ಮತ್ತು ಹೇಗೆ ನಿರ್ಮಿಸಿದ್ದಾರೆನ್ನುವುದು ಈಗ ನಮ್ಮ ಮುಂದಿರುವ ಪ್ರಶ್ನೆ. ಭಾರತದ ಬೇರೆ ಪ್ರದೇಶಗಳಲ್ಲಿನ ಕೋಮುವಾದದ ವಿವರಣೆಯನ್ನು ಆಧರಿಸಿ ಹೇಳುವುದಾದರೆ ಸಂಕಥನದಿಂದ ‘ಅನ್ಯ’ದ ಕಲ್ಪನೆಯನ್ನು ನಿರ್ಮಿಸಲಾಗಿದೆ. ಸಂಕಥನದಿಂದ ‘ಅನ್ಯ’ ಸಮುದಾಯದ ಚಿತ್ರಣ ಜನಸಾಮಾನ್ಯರ ಪ್ರಜ್ಞೆಯ ಭಾಗವಾಗುತ್ತದೆ ಎನ್ನುವುದನ್ನು ಮೇಲ್ನೋಟಕ್ಕೆ ಸಾಧಿಸಬಹುದಾದ ಹಲವಾರು ಸಂಗತಿಗಳು ಕರಾವಳಿ ಕರ್ನಾಟಕದಲ್ಲಿವೆ. ವ್ಯಕ್ತಿ, ಸಂಘ ಸಂಸ್ಥೆ, ಸಮುದಾಯ ಇತ್ಯಾದಿಗಳ ಹೊರಮುಖವನ್ನು ಸಾರ್ವಜನಿಕರಿಗೆ ಪರಿಚಯಿಸುವಲ್ಲಿ ಮಾಧ್ಯಮಗಳು ಪರಿಣಾಮಕಾರಿ ಪಾತ್ರವಹಿಸುತ್ತವೆ. ಇತರ ಸಂಗತಿಗಳೊಂದಿಗೆ (ಸಂಘ ಪರಿವಾರದ ಚಟುವಟಿಕೆಗಳೊಂದಿಗೆ) ಕರಾವಳಿ ಜಿಲ್ಲೆಗಳಲ್ಲಿ ಬಹಳ ಜನಪ್ರಿಯವಾಗಿರುವ ದಿನಪತ್ರಿಕೆಗಳು ಪರೋಕ್ಷವಾಗಿ ಮತ್ತು ಮೂಲಭೂತವಾದಿ ಸಂಘಟನೆಗಳ ಮುಖವಾಣಿಯಾಗಿರುವ ದಿನಪತ್ರಿಕೆಗಳು ನೇರವಾಗಿ ಈ ಪ್ರದೇಶದಲ್ಲಿ ಮೂಲಭೂತವಾದಿ ಸಂಘಟನೆಗಳ ಜೊತೆಗೆ ಯಾವುದೇ ಬಗೆಯ ಸಂಬಂಧವನ್ನೂ ಇಟ್ಟುಕೊಳ್ಳದ ಜನಸಾಮಾನ್ಯರಲ್ಲೂ ‘ಮುಸ್ಲಿಮರೆಂದರೆ ಹೀಗೆ’ ಎಂಬ ಹೀನತಾ ಮನೋಭಾವವನ್ನು ಹುಟ್ಟಿಸುವಲ್ಲಿ ತಕ್ಕಮಟ್ಟಿನ ಯಶಸ್ಸು ಸಾಧಿಸಿರಬಹುದು. ಮುಖ್ಯವಾಹಿನಿಯ ಮಾಧ್ಯಮಗಳು ಮತ್ತು ಇತರ ಕಾರ್ಯಕ್ರಮಗಳು ಕಟ್ಟಿಕೊಡುವ ‘ಮುಸ್ಲಿಮರೆಂದರೆ ಹೀಗೆ’ ಎನ್ನುವ ಚಿತ್ರಣವನ್ನು ಕೇವಲ ಮೆಜಾರಿಟಿ ಸಮುದಾಯ ತನ್ನ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತದೆ ಎನ್ನಲಾಗುವುದಿಲ್ಲ. ಕರಾವಳಿ ಕರ್ನಾಟಕದಲ್ಲಿ ಮುಸ್ಲಿಮೇತರಿಗೆ ಮುಸ್ಲಿಮರ ಕುರಿತು ಇರುವ ಈ ಭಾವನೆಯನ್ನು ತನ್ನ ವಾದಕ್ಕೆ ಗೊಬ್ಬರವಾಗಿ ಮುಸ್ಲಿಮ್ ಮೂಲಭೂತ ವಾದ ಕೂಡ ಬಳಸಿಕೊಳ್ಳಬಹುದು.

ಇದೇ ಸಂದರ್ಭದಲ್ಲಿ ಮೇಲಿನ ವಾದದಲ್ಲಿರುವ ಕೆಲವೊಂದು ಸಮಸ್ಯೆಗಳನ್ನು ಕೂಡ ಪರಿಗಣಿಸಬೇಕಾಗುತ್ತದೆ. ಮೆಜಾರಿಟಿ ಸಮುದಾಯದ ಮೇಲ್ವರ್ಗಕ್ಕೆ ತನ್ನ ಸಾಂಪ್ರದಾಯಿಕ ಯಜಮಾನಿಕೆಯನ್ನು ಉಳಿಸಿಕೊಳ್ಳುವ ಮತ್ತು ಬೆಳೆಸುವ ದೃಷ್ಟಿಯಿಂದ ಹಿಂದೂ ಮುಸ್ಲಿಂ ಎನ್ನುವ ಎರಡೂ ಪರಸ್ಪರ ವಿರುದ್ಧ ಐಡೆಂಟಿಟಿಗಳನ್ನು ರೂಪಿಸಿ ವಿವಿಧ ಕಾರ್ಯಕ್ರಮಗಳ ಮೂಲಕ ಅವುಗಳನ್ನು ಜನರ ಪ್ರಜ್ಞೆಯ ಭಾಗವಾಗಿಸಲು ಪ್ರಯತ್ನಿಸಿದ ಕೂಡಲೇ ಜನ ಸಾಮಾನ್ಯರು ತಮ್ಮ ಜೀವದ ಹಂಗು ತೊರೆದು ಬೀದಿ ಕಾಳಗಕ್ಕೆ ರೆಡಿಯಾಗುತ್ತಾರೋ ಎನ್ನುವ ಪ್ರಶ್ನೆಗೆ ಸಮಾಧಾನಕರ ಉತ್ತರ ಮೇಲಿನ ವಿವರಣೆಯಲ್ಲಿ ಇಲ್ಲ. ಅಷ್ಟು ಮಾತ್ರವಲ್ಲ ಕೋಮುವಾದದ ಬೆಳವಣಿಗೆಯನ್ನು ಮೇಲಿನ ವಿವರಣೆಗಳಿಗೆ ಸೀಮಿತಗೊಳಿಸಿದರೆ ಜನಸಾಮಾನ್ಯರನ್ನು ಸ್ವಂತ ವಿವೇಚನೆ ಇಲ್ಲದೆ ಮೇಲ್ವರ್ಗ ಆಡಿಸಿದಂತೆ ಆಡುವ ಗೊಂಬೆಗಳಿಗೆ ಸಮೀಕರಿಸಿದಂತಾಗುತ್ತದೆ. ಇದು ಜನಸಾಮಾನ್ಯರ ಪ್ರಜ್ಞೆ ಮತ್ತು ಚಳುವಳಿಗಳಲ್ಲಿ ಅವರು ಭಾಗವಹಿಸುವುದರ ಕುರಿತು ಈಗಾಗಲೇ ಆಗಿರುವ ಅಧ್ಯಯನಗಳು ತಳೆದ ನಿರ್ಣಯಗಳಿಗೆ ಸಂಪೂರ್ಣ ವಿರುದ್ಧ. ಆದುದರಿಂದ ಒಂದು ದೃಷ್ಟಿಯಿಂದ ನೋಡುವ (ಮೇಲ್ವರ್ಗ ಸೃಷ್ಟಿಸುವ ಐಡೆಂಟಿಟಿಯ ದೃಷ್ಟಿಯಿಂದ) ಕ್ರಮದಿಂದ ಕೋಮುವಾದದ ಬೆಳವಣಿಗೆಯ ಎಲ್ಲ ಆಯಾಮಗಳ ಪರಿಚಯ ಸಾಧ್ಯವಿಲ್ಲ. ಇತರ ಆಯಾಮಗಳನ್ನು ಪರಿಶೀಲಿಸುವ ಅಗತ್ಯವಿದೆ. ಯಾಕೆಂದರೆ ಕೋಮುಗಲಭೆಗಳಲ್ಲಿ ಹೊಡೆತ ಬಡಿತಗಳಲ್ಲಿ ಪಾಲುಗೊಳ್ಳುವವರು, ಸಾವು ನೋವು ಅನುಭವಿಸುವವರು, ಜೈಲಿಗೆ ಹೋಗುವವರು, ಆಸ್ತಿಪಾಸ್ತಿ ಕಳೆದುಕೊಳ್ಳುವವರು ಎರಡೂ ಸಮುದಾಯಗಳ (ಹಿಂದು ಮತ್ತು ಮುಸ್ಲಿಂ) ತಳಸ್ತರದ ಜನರು. ಎರಡೂ ಸಮುದಾಯಗಳ ಮೇಲ್ವರ್ಗಕ್ಕೆ ಸೇರಿದವರು ಮೇಲಿನ ಯಾವುದೇ ನಷ್ಟಗಳನ್ನು ಅನುಭವಿಸುವುದಿಲ್ಲ. ಆದುದರಿಂದ ಆಯಾಮ ಸಮುದಾಯದ ತಳಸ್ತರದ ಜನರು ಕೋಮುವಾದವನ್ನು ವಿವೇಚನೆ ಇಲ್ಲದೆ ಒಪ್ಪಿಕೊಳ್ಳುತ್ತಾರೆ ಮತ್ತು ಅನುಸರಿಸುತ್ತಾರೆ ಎಂದು ನಂಬಲು ಸಾಧ್ಯವಿಲ್ಲ.

ದಿನನಿತ್ಯದ ವ್ಯವಹಾರಗಳು ಜನಸಾಮಾನ್ಯರ ನಂಬಿಕೆಯ ಅಡಿಪಾಯ. ಬರುತ್ತೇನೆಂದಾಗ ಬರುವುದು, ಕೊಡುತ್ತೇನೆಂದಾಗ ಕೊಡುವುದು, ಮಾಡುತ್ತೇನೆಂದಾಗ ಮಾಡುವುದು ಇತ್ಯಾದಿಗಳು ನಡೆದಾಗ ನಂಬಿಕೆ ರೂಪುಗೊಳ್ಳುತ್ತದೆ. ಅಂದರೆ ನಂಬಿಕೆ ರೂಪುಗೊಳ್ಳಬೇಕಾದರೆ ಆಡಿದಂತೆ ಮಾಡಿ ತೋರಿಸುವ (ನುಡಿ ಹಾಗೂ ನಡೆ ನಡುವಿನ ಸಂಬಂಧ) ಪುರಾವೆಗಳು ಬೇಕು. ಆದುದರಿಂದ ಹಿಂದುಗಳ ಮೇಲ್ವರ್ಗ ಮುಸ್ಲಿಮರೆಂದರೆ ಹೀಗೆ ಎಂದು ಚಿತ್ರಿಸಿದ ಕೂಡಲೇ ತಳಸ್ತರದ ಜನರು ನಂಬಲು ಸಾಧ್ಯವಿಲ್ಲ. ಕೋಮುವಾದಿಗಳು ಕಟ್ಟಿಕೊಡುವ ಮುಸ್ಲಿಮರ ಚಿತ್ರಣಕ್ಕೆ ಹತ್ತಿರ ಇರುವ ಮುಸ್ಲಿಮರ ವ್ಯವಹಾರಗಳನ್ನು ತಳಸ್ತರದ ಜನರು ನೋಡಿದರೆ ಅಥವಾ ಅನುಭವಿಸಿದರೆ ಅಥವಾ ಸತತವಾಗಿ ಕೇಳಿದರೆ ಮಾತ್ರ ಕೋಮುವಾದಿ ಚಿಂತನೆಗಳು ಮೊಳಕೆಯೊಡೆಯಲು ಅವಕಾಶ ಇರುತ್ತದೆ. ಮೊಳಕೆಯೊಡೆದ ನಂತರ ಬೆಳೆಯಲು ಮತ್ತು ಇತರ ಪ್ರದೇಶಗಳಿಗೆ ವಿಸ್ತರಿಸಲು ಮೇಲಿನದೇ ರೀತಿಯ ಪುರಾವೆಗಳು ಬೇಕಾಗದಿರಬಹುದು. ಕೋಮುವಾದಿ ಸಂಘಟನೆಗಳು ಮತ್ತು ಅವುಗಳ ಕಾರ್ಯಕ್ರಮಗಳು ಮೊಳಕೆಯೊಡೆದ ಭಾವನೆಗಳನ್ನು ವಿಸ್ತರಿಸಲು ಮತ್ತು ಬೆಳೆಸಲು ನೆರವಾಗಬಹುದು. ಹೀಗೆ ಕರಾವಳಿ ಕರ್ನಾಟಕದ ಕೋಮುವಾದವನ್ನು ಅರ್ಥಮಾಡಿಕೊಳ್ಳಬೇಕಾದರೆ ಎರಡು ಸಾಮಾಜಿಕ ಬೆಳವಣಿಗೆಗಳನ್ನು ವಿಶ್ಲೇಷಿಸುವುದು ಅನಿವಾರ್ಯವಾಗಿದೆ. ಒಂದು, ಪರಸ್ಪರ ವಿರುದ್ಧ ಗುಣಸ್ವಭಾವಗಳ ನೆಲೆಯಲ್ಲಿ ಸಮಾಜದಲ್ಲಿನ ವಿವಿಧ ಗುಂಪುಗಳನ್ನು ಕಲ್ಪಿಸಿಕೊಳ್ಳುವುದು ಮತ್ತು ಆ ಕಲ್ಪನೆಗನುಗುಣವಾಗಿ ದಿನನಿತ್ಯದ ಬದುಕಿನಲ್ಲಿ ವ್ಯವಹರಿಸುವ ಅಭ್ಯಾಸವನ್ನು ಅರ್ಥಮಾಡಿಕೊಳ್ಳುವುದು. ಎರಡು, ಕಾಲಕಾಲಕ್ಕೆ ಈ ಕಲ್ಪಿತ ‘ಸ್ವ’ ಮತ್ತು ‘ಅನ್ಯ’ದ ಕಲ್ಪನೆಯ ನೆಲೆಗಳಲ್ಲಿ ಆಗುವ ಬದಲಾವಣೆಗಳನ್ನು ಮತ್ತು ಆ ಬದಲಾವಣೆಗೆ ಕಾರಣವಾಗುವ ಅಂಶಗಳನ್ನು ಗುರುತಿಸುವುದು. ಹೀಗೆ ಕೋಮುವಾದದ ಹುಟ್ಟು ಮತ್ತು ಬೆಳವಣಿಗೆ ಕುರಿತಂತೆ ಇಷ್ಟರವರೆಗೆ ನಡೆಸಿದ ವಾಗ್ವಾದಗಳು ನಮ್ಮನ್ನು ಈ ಕೆಳಗಿನ ಪ್ರಶ್ನೆಗಳೊಂದಿಗೆ ಮುಖಾಮುಖಿಯಾಗಿಸುತ್ತವೆ. ಈ ಕಲ್ಪಿತ ‘ಸ್ವ’ ಮತ್ತು ‘ಆನ್ಯ’ದ ಪರಿವರ್ತನೆ ಮತ್ತು ಅದಕ್ಕೆ ಪೂರಕವಾಗಿ ಸಮಾಜವನ್ನು ‘ಹದಗೊಳಿಸುವ ಕೆಲಸ ಕೇವಲ ಕೋಮುವಾದಿ (ಹಿಂದೂ ಮತ್ತು ಮುಸ್ಲಿಂ ಕೋಮುವಾದಿ ಸಂಘಟನೆಗಳು) ಸಂಘಟನೆಗಳಿಂದಾಯಿತೇ? ಅಥವಾ ಚಾರಿತ್ರಿಕವಾಗಿಯೇ ನಮ್ಮ ಸಮಾಜದಲ್ಲಿ ಈ ಗುಣ ಇದೆಯೇ? ಒಂದು ವೇಳೆ ಸ್ಥಳೀಯ ಸಮಾಜದಲ್ಲಿ ಅಂತರ್‌ಗತವಾದ ಸಂಗತಿಗಳು ಈ ಪರಿವರ್ತನೆಗೆ ಕಾರಣವಾಗಿದ್ದರೆ, ಅವು ಯಾವುವು? ಮತ್ತು ಅವು ಹೇಗೆ ಕಲ್ಪಿತ ಸಮುದಾಯಗಳನ್ನು ನಿರ್ಮಿಸುತ್ತವೆ? ಇದೇ ಸಂದರ್ಭದಲ್ಲಿ ‘ಪ್ರಭುತ್ವ’ ಪ್ರಾಯೋಜಿತ ಆಧುನೀಕರಣದ ಪ್ರಕ್ರಿಯೆಗಳು ಕೂಡ ಕೋಮುವಾದದ ಬೆಳವಣಿಗೆಗೆ ತಮ್ಮದೇ ಕೊಡುಗೆ ನೀಡಿವೆ ಎನ್ನುವ ವಾದವೂ ಇದೆ. ಅವುಗಳನ್ನು ಕೂಡ ಪರೀಕ್ಷಿಸುವ ಅಗತ್ಯವಿಲ್ಲವೇ? ‘ಸ್ವ’ ಮತ್ತು ‘ಅನ್ಯ’ಗಳನ್ನು ಕಟ್ಟಿಕೊಳ್ಳಲು ಕೋಮುವಾದಿಗಳು ಸೃಷ್ಟಿಸುವ ಸಂಕಥನಗಳು ಜನಸಾಮಾನ್ಯರ ಬದುಕಿನ ಮೇಲೆ ಮಾಡುವ ಪರಿಣಾಮಗಳೇನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಕರಾವಳಿ ಕರ್ನಾಟಕದ ಕೋಮುವಾದವನ್ನು ಅರ್ಥಮಾಡಿಕೊಳ್ಳಲು ಅನಿವಾರ್ಯವೆಂದು ಗ್ರಹಿಸಲಾಗಿದೆ. ಯಾಕೆಂದರೆ ಸಮಾಜದ ಒಟ್ಟು ಸಂರಚನೆಯಲ್ಲಿ ಸಂಭವಿಸುವಂಥ ಬದಲಾವಣೆಗಳಿಗೆ ಯಾವುದೋ ಒಂದೆರಡು ಎಳೆಗಳ ಕುಲುಕಾಟವೇ ಕಾರಣವಾಗಿರುವುದಿಲ್ಲ. ಹಾಗಾಗಿ ಈ ಅಧ್ಯಯನ ಸಮಾಜವೊಂದು ‘ಸ್ವ’ ಮತ್ತು ‘ಅನ್ಯ’ದ ಕಲ್ಪನೆಯನ್ನು ರೂಪಿಸಿಕೊಳ್ಳುವ ಮತ್ತು ಕಾಲಕಾಲಕ್ಕೆ ‘ಸ್ವ’ ಮತ್ತು ‘ಅನ್ಯ’ದ ಕಲ್ಪನೆಯಲ್ಲಿ ಮಾಡಿಕೊಳ್ಳುವ ಪರಿವರ್ತನೆಗಳ ಹಿಂದಿರುವ ಚಾರಿತ್ರಿಕ ಕಾರಣಗಳ ಹೆಣಿಗೆಯನ್ನು ಬಿಡಿಸುವುದರಲ್ಲಿ ಗಾಢ ಆಸಕ್ತಿ ಹೊಂದಿದೆ.

ಈ ಅಧ್ಯಯನದಲ್ಲಿ ಮತ್ತೆ ಮತ್ತೆ ಪ್ರಸ್ತಾವಿತವಾಗುವ ‘ಜಾತಿ’ ಮತ್ತು ‘ಸಮುದಾಯ’ ಎಂಬೆರಡು ಪರಿಭಾಷೆಗಳನ್ನು ಕ್ವಚಿತ್ತಾಗಿ ವಿವರಿಸುವುದು ಅಗತ್ಯ. ಇಲ್ಲಿ ಈ ಎರಡೂ ಪರಿಭಾಷೆಗಳನ್ನು ಮಿತವಾದ ಉದ್ದೇಶಗಳಿಗಾಗಿ ಬಳಸಲಾಗಿದೆ. ಇಲ್ಲಿ ‘ಜಾತಿ’ ಎಂದರೆ ‘ಹಿಂದೂ’ ಎಂಬ ಧಾರ್ಮಿಕ ವ್ಯವಸ್ಥೆಯೊಳಗಿರುವ ಸಾಮಾಜಿಕ ವಿಭಜನೆಯನ್ನೂ ‘ಸಮುದಾಯ’ ಎನ್ನುವುದು ಸಮಾಜದೊಳಗಿರುವ ಬಹುಧಾರ್ಮಿಕ ವ್ಯವಸ್ಥೆಯನ್ನೂ ಸೂಚಿಸಲು ಬಳಸಲಾಗಿದೆ. ಈ ಅಧ್ಯಯನವನ್ನು ಮೂರು ಭಾಗಗಳಲ್ಲಿ ಮಂಡಿಸಲಾಗಿದೆ. ‘ಸ್ವ’ ಮತ್ತು ‘ಅನ್ಯ’ದ ಕಲ್ಪನೆಯ ಬೇರುಗಳನ್ನು ಹುಡುಕುವ ಪ್ರಯತ್ನವನ್ನು ಅಧ್ಯಯನದ ಮೊದಲ ಭಾಗದಲ್ಲಿ ಮಾಡಲಾಗಿದೆ. ಎಪ್ಪತ್ತರ ದಶಕದ ಹಿಂದೆ ಸಾಮಾಜಿಕ ವಿಂಗಡನೆಗಳು ಜಾತಿ (ಮೇಲ್ಜಾತಿ-ಕೆಳಜಾತಿ) ನೆಲೆಯಲ್ಲಿದ್ದವು ಎಂದು ಊಹಿಸಲಾಗಿದೆ. ಈ ಊಹೆಯ ಸತ್ಯಾಸತ್ಯತೆಯನ್ನು ಪರಿಶೀಲಿಸುವ ದೃಷ್ಟಿಯಿಂದ ವಿಶ್ಲೇಷಿಸಿದ ವಸಾಹತು ಮತ್ತು ವಸಾಹತು ಪೂರ್ವದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚರಿತ್ರೆಯ ವಿವರಗಳನ್ನು ಮೊದಲ ಭಾಗದಲ್ಲಿ ನೀಡಲಾಗಿದೆ. ಸಾಮಾಜಿಕ ವಿಂಗಡನೆ ಜಾತಿ ನೆಲೆಯಿಂದ ಧರ್ಮದ ನೆಲೆಗೆ ಪಲ್ಲಟಗೊಂಡ ಸಂದರ್ಭ ಮತ್ತು ಈ ಪರಿವರ್ತನೆಗೆ ಕಾರಣವಾದ ಆರ್ಥಿಕ, ರಾಜಕೀಯ ಕಾರಣಗಳನ್ನು ಅಧ್ಯಯನದ ಎರಡನೇ ಭಾಗದಲ್ಲಿ ಕೊಡಲಾಗಿದೆ. ಕೋಮುವಾದ ಮತ್ತು ಕೋಮುಗಲಭೆಗಳು ತಳಸ್ತರದ ಜನರ ಜೀವನದ ಮೇಲೆ ಮಾಡುವ ಪರಿಣಾಮವನ್ನು ಅಧ್ಯಯನದ ಕೊನೆ ಭಾಗದಲ್ಲಿ ವಿವರಿಸಲಾಗಿದೆ. ಸಾಮಾಜಿಕ ವಿಂಗಡನೆಗಳನ್ನು ಜನಸಾಮಾನ್ಯರ ಪ್ರಜ್ಞೆಯ ಭಾಗವಾಗಿಸಲು ಉಪಯೋಗಿಸುವ ಸಂಕೇತಗಳು, ಆಚರಣೆಗಳು, ಮೌಲ್ಯಗಳು ಎರಡೂ ಸಮುದಾಯಗಳ (ಹಿಂದೂ ಮತ್ತು ಮುಸ್ಲಿಂ) ತಳಸ್ತರದ ಜನರ ಆರ್ಥಿಕ ಹಾಗೂ ರಾಜಕೀಯ ಬದುಕನ್ನು ಕಾಡುತ್ತವೆ. ಇದರಿಂದಾಗಿ ಈ ಜನರು ಅನುಭವಿಸಬೇಕಾದ ಇಬ್ಬಂದಿತನ ಮತ್ತು ಖಾಯಂ ಆಗಿ ಮೇಲ್ವರ್ಗ ಸೃಷ್ಟಿಸಿದ ಟ್ರ‍್ಯಾಪ್ ಒಳಗೆ ಬಂಧಿಯಾಗುವುದರ ಚಿತ್ರಣವನ್ನು ಈ ಭಾಗದಲ್ಲಿ ನೋಡಬಹುದು.

 

[1]ಅವಿಭಜಿತ ದಕ್ಷಿಣ ಕನ್ನಡದಲ್ಲಿ ಒಟ್ಟು ಎಂಟು ತಾಲೂಕುಗಳಿದ್ದವು. ಕುಂದಾಪುರ, ಉಡುಪಿ, ಮಂಗಳೂರು, ಕಾರ್ಕಳ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ಇವೇ ಆ ಎಂಟು ತಾಲೂಕುಗಳು. ೧೯೯೭ರಲ್ಲಿ ಕುಂದಾಪುರ, ಉಡುಪಿ ಮತ್ತು ಕಾರ್ಕಳ ತಾಲೂಕುಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರ್ಪಡಿಸಿ ಉಡುಪಿ ಜಿಲ್ಲೆಯನ್ನು ಸೃಷ್ಟಿಸಲಾಗಿದೆ.

[2]ಮಂಗಳೂರಿನಲ್ಲಿ ಹಳೇ ಬಂದರು ಪ್ರದೇಶ, ಉಡುಪಿಯಲ್ಲಿ ಮಲ್ಪೆ ಮತ್ತು ಕುಂದಾಪುರದಲ್ಲಿ ಬಸ್ರೂರು ಆಯಾಯ ತಾಲೂಕಿನ ಚಾರಿತ್ರಿಕ ವ್ಯಾಪಾರ ಕೇಂದ್ರಗಳಾಗಿದ್ದವು. ಆದರೆ ಈ ತಾಲೂಕುಗಳ ಹಿಂದಿನ ವ್ಯಾಪಾರ ಕೇಂದ್ರಗಳು ಹೊಸ ಆಧುನಿಕ ವ್ಯಾಪಾರ ಕೇಂದ್ರಗಳಾಗಿ ಬೆಳೆದಿಲ್ಲ. ಹೊಸ ವ್ಯಾಪಾರ ಕೇಂದ್ರಗಳು ಹುಟ್ಟಿಕೊಂಡಿವೆ.

[3]ಗವರ್ನ್‌‌ಮೆಂಟ್ ಆಫ್ ಕರ್ನಾಟಕ, ಹ್ಯೂಮನ್ ಡೆವಲಪ್‌ಮೆಂಟ್ ರಿಪೋರ್ಟ್‌ – ಕರ್ನಾಟಕ ೧೯೯೯, ಬೆಂಗಳೂರು: ಡಿಪಾರ್ಟ್‌‌ಮೆಂಟ್ ಆಫ್ ಪ್ಲಾನಿಂಗ್ ಆಂಡ್ ಸ್ಪೆಟಿಸ್ಟಿಕ್ಸ್, ೧೯೯೯, ಗವರ್ನ್‌‌ಮೆಂಟ್ ಆಫ್ ಕರ್ನಾಟಕ, ಹ್ಯೂಮನ್ ಡೆವಲಪ್‌ಮೆಂಟ್‌ ರಿಪೋರ್ಟ್‌ – ಕರ್ನಾಟಕ ೨೦೦೫, ಬೆಂಗಳೂರು: ಡಿಪಾರ್ಟ್‌‌ಮೆಂಟ್ ಆಫ್‌ ಪ್ಲಾನಿಂಗ್ ಆಂಡ್ ಸ್ಪೆಟಿಸ್ಟಿಕ್ಸ್‌, ೨೦೦೬ ಮ್ತು ಗವರ್ನ್‌‌ಮೆಂಟ್ ಆಫ್ ಕರ್ನಾಟಕ, ಫೈನಲ್ ರಿಪೋರ್ಟ್‌ ಆಫ್‌ ಹೈಪವರ್ ಕಮಿಟಿ ಫಾರ್ ರಿಡ್ರೆಸಲ್ ಆಫ್ ರೀಜನಲ್ ಇಂಬೇಲನ್ಸ್‌ಸ್, ಬೆಂಗಳೂರು, ೨೦೦೨

[4]ಪುತ್ತೂರಿನ ಸಾಲ್‌ಮರ ಎಂಬಲ್ಲಿ ಹಿಂದೆ ಕೋಮು ಗಲಭೆಗಳು ನಡೆಯುತ್ತಿದ್ದವು. ಆ ಗಲಭೆಗಳಲ್ಲಿ ಸ್ಥಳೀಯ ಅಥವಾ ಪುತ್ತೂರು ಪೇಟೆಯ ಮುಸ್ಲಿಮರು ಪಾಲುಗೊಳ್ಳುವಿಕೆ ಕಡಿಮೆ ಇದ್ದು ನೆರೆ ತಾಲ್ಲೂಕು (ಬಂಟ್ವಾಳ) ಅಥವಾ ನೆರೆ ಜಿಲ್ಲೆ ಕಾಸರಗೋಡು (ಈಗ ನೆರೆ ರಾಜ್ಯ) ಮುಸ್ಲಿಮರ ಪಾಲುಗೊಳ್ಳುವಿಕೆ ಹೆಚ್ಚು ಇತ್ತು. ಇದೇ ರೀತಿಯಲ್ಲಿ ಕಲ್ಲಡ್ಕ ಬಂಟ್ವಾಳ ತಾಲೂಕಿನಲ್ಲಿ ಕೋಮುಗಲಭೆಗೆ ಪ್ರಖ್ಯಾತವಾಗಿತ್ತು.

[5]ಸ್ಥಳೀಯ ಪತ್ರಿಕೆಗಳು ಕೋಮುಗಲಭೆಗಳನ್ನು ಪ್ರಕಟಿಸುವ ಶೈಲಿಯನ್ನು ಇನ್‌ಸ್ಟಿಟ್ಯುಟ್‌ ಫಾರ್ ಮೀಡಿಯಾ ಸ್ಟಡೀಸ್‌ನವರು ವಿಶ್ಲೇಷಿಸಿದ್ದಾರೆ. ಅವರ ಪ್ರಕಾರ ಆರ್‌.ಎಸ್.ಎಸ್‌.ನ ಮುಖವಾಣಿಯಾದ ಹೊಸದಿಗಂತ ದಿನಪತ್ರಿಕೆ ಕೋಮು ಸೌಹಾರ್ದವನ್ನು ಕದಡುವ ಸುದ್ದಿಗಳನ್ನು ಪ್ರಕಟಿಸುವ ಮೂಲಕ ನೇರವಾಗಿ ಕೋಮುಗಲಭೆಯಲ್ಲಿ ಪಾಲುಗೊಂಡರೆ ಜಿಲ್ಲೆಯ ಮತ್ತೊಂದು ದಿನಪತ್ರಿಕೆ ಉದಯವಾಣಿ (ಇದಕ್ಕೆ ಬಹುತೇಕರಲ್ಲಿ ಕೋಮು ನಿರ್ಲಿಪ್ತ ಪತ್ರಿಕೆ ಎನ್ನುವ ಇಮೇಜ್ ಇದೆ) ಕೋಮುಗಲಭೆಗಳಿಗೆ ಸಂಬಂಧಿಸಿದ ಸುದ್ದಿಯನ್ನು ಸೂಚ್ಯವಾಗಿ ಪ್ರಕಟಿಸುತ್ತಾ ಪರೋಕ್ಷವಾಗಿ ಕೋಮುಗಲಭೆಗೆ ಕುಮಕ್ಕು ಕೊಡುತ್ತಿದೆ. (ಇನ್‌ಸ್ಟಿಟ್ಯೂಟ್ ಫಾರ್ ಮಿಡಿಯಾ ಸ್ಟಡೀಸ್, ಓರೆಕೋರೆ ೯೯-ಮಾಧ್ಯಮ ಕ್ಷೇತ್ರದ ಅಂಕುಡೊಂಕುಗಳ ಅಧ್ಯಯನ, ಮಂಗಳೂರು, ೧೯೯೯)

[6]ಇಲ್ಲಿನ ಪೇಜಾವರ ಮಠದ ಸ್ವಾಮೀಜಿ ಶ್ರೀ ವಿಶ್ವೇಶ ತೀರ್ಥರು ವಿಶ್ವ ಹಿಂದೂ ಪರಿಷತ್‌ನ ಉಪಾಧ್ಯಕ್ಷರಾಗಿ ಹಲವಾರು ವರ್ಷ ‘ಕಾರ್ಯನಿರ್ವಹಿಸಿಕೊಂಡು’ ಬಂದಿದ್ದಾರೆ.

[7]ಈ ಕುರಿತು ಹೆಚ್ಚಿನ ಮಾಹಿತಿಗೆ ಮುಜಾಫರ್ ಆಸಾದಿಯವರ, ‘ಕರ್ನಾಟಕ-ಕಮ್ಯುನಲ್ ವಾಯಿಲೆನ್ಸ್ ಇನ್ ಕೋಸ್ಟಲ್ ಬೆಲ್ಟ್’, ಎನ್ನುವ ಲೇಖನವನ್ನು ನೋಡಬಹುದು. ಈ ಲೇಖನ ಎಕಾನಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ (ವಾಲ್ಯೂಮ್ ೩೪, ಸಂ.೮, ಫೆಬ್ರವರಿ ೨೦, ೧೯೯೯, ಪುಟ ೪೪೬-೪೪೮) ಯಲ್ಲಿ ಪ್ರಕಟವಾಗಿದೆ.