ಭಾಗ ೨

ಸಾಮಾಜಿಕ ಮತ್ತು ಆರ್ಥಿಕ ಸಂರಚನೆ ಹಾಗೂ ಸಾಂಸ್ಕೃತಿಕ ನಡೆ-ನಡಾವಳಿಗಳು ಮೇಲ್ಜಾತಿಗಳ ಜನರಿಗೆ ಪ್ರಭಾವಶಾಲಿಯಾಗುವುದಕ್ಕೂ, ಕೆಳಜಾತಿಗಳ ಜನರಿಗೆ ಒಪ್ಪಿ ತಗ್ಗಿ – ಬಗ್ಗಿ ನಡೆಯುವಂಥ ವಾತಾವರಣವನ್ನೂ ಮತ್ತು ಅದಕ್ಕೆ ಬೇಕಾದ ಲಕ್ಷಣಗಳನ್ನೂ ನಿರ್ಮಿಸಿಕೊಡುತ್ತದೆ. ಈ ಯಾವ ಲಕ್ಷಣಗಳೂ ಅಮೂರ್ತವಾಗಿರುವುದಿಲ್ಲ. ದೈನಂದಿನ ಬದುಕಿನ ಭಿನ್ನ ಭಿನ್ನ ಸಾಮಾಜಿಕ ಅಥವಾ ಸಾಂಸ್ಕೃತಿಕ ಸನ್ನಿವೇಶಗಳಲ್ಲಿ ಅವು ಮೂರ್ತಗೊಂಡು ಬಿಡುತ್ತವೆ ಇತ್ಯಾದಿ ಸಂಗತಿಗಳನ್ನು ಲೇಖನದ ಮೊದಲ ಭಾಗದಲ್ಲಿ ನೋಡಿದ್ದೇವೆ. ಇಂಥ ಒಂದು ಸಾಮಾಜಿಕ ಸನ್ನಿವೇಶ ಎಪ್ಪತ್ತರ ದಶಕದ ನಂತರದಲ್ಲಿ ಒಂದು ಮಹಾನ್ ಪಲ್ಲಟಕ್ಕೊಳಗಾಯಿತು. ಅದು ಭಿನ್ನತೆ ‘ಜಾತಿ’ ನೆಲೆಯಿಂದ ‘ಧರ್ಮ’ದ ನೆಲೆಗೆ ಬದಲಾದಂಥ ಒಂದು ಪಲ್ಲಟ. ಈ ಪಲ್ಲಟದಲ್ಲಿ ಹಿಂದೆ ಕೆಳಜಾತಿಗಳು ಅನುಭವಿಸುತ್ತಿದ್ದ ಶಾಪಗ್ರಸ್ತ ಅನ್ಯದ ಪಾತ್ರವನ್ನು ಈಗ ಮುಸ್ಲಿಮರು ನಿರ್ವಹಿಸಬೇಕಾಗಿದೆ. ಅಲ್ಪ ಸಂಖ್ಯಾತರ ಅದರಲ್ಲೂ ಮುಸ್ಲಿಮರ ಗುಣಲಕ್ಷಣಗಳನ್ನು ವರ್ಣಿಸುವಾಗ ಬಹಳ ಗಾಢವಾದ ಮತ್ತು ಪರಿಚಿತವಾದ ಲಕ್ಷಣಗಳೆಂದರೆ ಅವರು ‘ಹೆಣ್ಣು ಬಾಕರು’ ‘ಬೀಜದ ಹೋರಿಗಳ ಸ್ವಭಾವದವರು’, ‘ಅತಿ ಸಂತಾನಪ್ರಿಯರು’, ‘ಕೋಮುವಾದಿ ಮನೋಧರ್ಮದವರು’ ಮತ್ತು ಆ ಕಾರಣಕ್ಕಾಗಿ ‘ಕಾಗೆಗಳಂತೆ ಒಟ್ಟಾಗುವವರು’, ‘ದೇಶದ ನಿಷ್ಠೆಗಿಂತ ಧರ್ಮದ ನಿಷ್ಠೆಯನ್ನು ತೋರುವವರು’, ಹಾಗಾಗಿ ಮುಸ್ಲಿಮ್‌ ರಾಷ್ಟ್ರವೊಂದು  ಭಾರತದ ಮೇಲೆ ಧಾಳಿ ಮಾಡಿದರೆ ಅವರು ವಿರೋಧಿ ಬಣದೊಡನೆ ಸೇರುತ್ತಾರೆ, ‘ಬೆನ್ನಿಗೆ ಚೂರಿ ಹಾಕುವವರು’, ‘ವ್ಯಾಪಾರದಲ್ಲಿ ಮೋಸಮಾಡುವವರು’ ಇತ್ಯಾದಿ ಗುಣವಿಶೇಷಣಗಳಿಂದ ಮುಸ್ಲಿಮರನ್ನು ಗುರುತಿಸುವುದು ಸಹಜವಾಗಿದೆ. ಈ ಎಲ್ಲ ಗುಣಲಕ್ಷಣಗಳ ಲೇವಡಿಗೆ-ಪ್ರಚಾರಕ್ಕೆ ಸಂಘ ಪರಿವಾರದ ವೇದಿಕೆಗಳಲ್ಲಿ, ಸಭೆಗಳಲ್ಲಿ ಮಾತ್ರ ಅವಕಾಶ ಒದಗುತ್ತಿರುವುದು ಅಲ್ಲ. ದ.ಕ. ಜಿಲ್ಲೆಯ ಬಹುತೇಕ ಜನ ಸಾಮಾನ್ಯರ ದಿನನಿತ್ಯದ ಬದುಕಿನ ವ್ಯವಹಾರಗಳಲ್ಲಿ, ವ್ಯಾಪಾರಗಳಲ್ಲಿ, ರಾತ್ರಿ ಎಲ್ಲ ನಿದ್ದೆ ಬಿಟ್ಟು ನೋಡುವ ಬಹುತೇಕ ಯಕ್ಷಗಾನ ಪ್ರಸಂಗಗಳಲ್ಲಿ ಇದಕ್ಕೆ ಧಾರಾಳ ಅವಕಾಶವನ್ನು ಈಗ ಒದಗಿಸಲಾಗುತ್ತಿದೆ.

ಒಂದು ಮುಖ್ಯವಾದ ಸಂಗತಿಯನ್ನು ಇಲ್ಲಿ ಉಲ್ಲೇಖಿಸುವುದಾದರೆ ಮುಸ್ಲಿಮರು ಈ ಜಿಲ್ಲೆಯಲ್ಲಿ ಕ್ರಿ.ಶ. ೭ನೆಯ ಶತಮಾನದಿಂದಲೂ ಇದ್ದರು ಎಂಬುದು. ಅವರು ಇಲ್ಲಿ ವಾಸವಾಗಿದ್ದರು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಇವೆ. ಬಾರಕೂರು, ಮಂಗಳೂರು ಮತ್ತು ಕಾಸರಗೋಡು (ಮೊದಲು ದ.ಕ. ಜಿಲ್ಲೆಯ ಭಾಗವಾಗಿದ್ದು ಈಗ ಕೇರಳ ರಾಜ್ಯಕ್ಕೆ ಸೇರಿದೆ)ಗಳಲ್ಲಿರುವ ಮಲಿಕ್ ದೀನಾರ್ ಎಂಬಾತನು ಕಟ್ಟಿಸಿದ ಮಸೀದಿಗಳು ಕ್ರಿ.ಶ. ೬೪೪ ರದ್ದಾಗಿವೆ.[1] ಹಾಗೆಯೇ ಈ ಪ್ರದೇಶದಲ್ಲಿ ಕ್ರಿಶ್ಚಿಯನ್ನರ ಮತ್ತು ಮುಸ್ಲಿಮರ ಜನಸಂಖ್ಯೆ ಹೆಚ್ಚು ಕಡಿಮೆ ಸಮ ಪ್ರಮಾಣದಲ್ಲಿದೆ.[2] ಈ ಎಲ್ಲ ಅಂಶಗಳಿದ್ದರೂ ಈ ಜಿಲ್ಲೆಯಲ್ಲಿ ಮುಸ್ಲಿಮರು ಪ್ರತಿಯೊಂದು ಮತೀಯ ಗಲಭೆಗಳಲ್ಲೂ ‘ಅನ್ಯ’ ಎಂಬ ಭಾವನೆಯಿಂದಲೇ ಬಲಿಪಶುಗಳಾಗುತ್ತಿದ್ದಾರೆ. ಎಪ್ಪತ್ತರ ದಶಕಕ್ಕಿಂತ ಹಿಂದೆ ಇಲ್ಲಿ ಕೆಳಜಾತಿ ಜನರು ಮೇಲ್ಜಾತಿ ಜನರಿಂದ ‘ಅನ್ಯ’ ಎಂಬ ದೂಷಣೆಗೊಳಗಾಗಿ ಹೇಗೆ ಶೋಷಣೆಗೀಡಾಗುತ್ತಿದ್ದರೋ ಹಾಗೆಯೇ ಈಗ ಮುಸ್ಲಿಮರು ಈಗ ನಮ್ಮ ಮುಂದಿರುವ ಪ್ರಶ್ನೆ ಏನೆಂದರೆ ಈ ಬದಲಾವಣೆ ಯಾಕೆ ಸಂಭವಿಸಿತು ಮತ್ತು ಈ ಬದಲಾವಣೆಯ ಹಿಂದಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಂಶಗಳೇನು? ಸ್ವಾತಂತ್ರ‍್ಯೋತ್ತರ ಕಾಲದ ಬದಲಾವಣೆಗಳನ್ನು ಇಲ್ಲಿ ಚರ್ಚಿಸುವುದಕ್ಕಿಂತ ಮೊದಲು ಸ್ವಾತಂತ್ರಪೂರ್ವದ ವಸಾಹತು ಆಳ್ವಿಕೆಯ ಕಾಲದಲ್ಲಿ ಆಧುನೀಕರಣ ಪ್ರಕ್ರಿಯೆಯು ಬಂದ ರೀತಿಯನ್ನು ಸ್ವಲ್ಪಮಟ್ಟಿಗೆ ವಿವೇಚಿಸುವುದು ಸೂಕ್ತ. ದಕ್ಷಿಣ ಕನ್ನಡದ ಮಟ್ಟಿಗೆ ಹೇಳುವುದಾದರೆ ಇಲ್ಲಿಗೆ ಬಂದ ಆಧುನಿಕತೆಯೋ, ಅಥವಾ ಆಧುನಿಕ ಜನಜೀವನವನ್ನು ಇಲ್ಲಿ ಹೊಂದಿಸುವುದಕ್ಕೆಂದು ಬಂದ ಆಧುನಿಕ ಸಂಘ-ಸಂಸ್ಥೆಗಳೇನಿದೆಯೋ ಅದಾವುದೂ ಪ್ರಭುತ್ವ ಪ್ರೇರಿತವಾಗಿ ಬಂದು ಇಲ್ಲಿ ಒಕ್ಕಲಾದ ಸಂಘ-ಸಂಸ್ಥೆಗಳಲ್ಲ. ಚಾರಿತ್ರಿಕವಾಗಿಯೆ ಬಹು ಪ್ರಸಿದ್ಧಿಯನ್ನು ಪಡೆದ ಕರಾವಳಿ ತಾಲೂಕುಗಳಾದ ಮಂಗಳೂರು ಉಡುಪಿ ಮತ್ತು ಕುಂದಾಪುರಗಳು ಆ ಕಾಲಕ್ಕೇನೇ ಸಾಗರೋತ್ತರ ವ್ಯಾಪಾರ-ವಹಿವಾಟುಗಳಿಂದಾಗಿ ವ್ಯವಹಾರ ನಿಬಿಡ ಪೇಟೆಗಳಾಗಿದ್ದವು. ಹಾಗಾಗಿ ವಸಾಹತು ಆಳ್ವಿಕೆಯ ಕಾಲದಲ್ಲಿ ಈ ಪೇಟೆಗಳು ಮತ್ತು ಅದಕ್ಕೆ ಹೊಂದಿಕೊಂಡ ಅದರ ಹಿಂದು-ಮುಂಚಿನ ಪ್ರದೇಶಗಳು ಇನ್ನೂ ಸ್ವಲ್ಪ ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬಂದವು.[3] ವಸಾಹತು ಪ್ರಭುತ್ವದ ಕಾಲದಲ್ಲಿ ಇಲ್ಲಿ ನಡೆದ ಕೆಲವು ಮೂಲಭೂತ ಬದಲಾವಣೆಗಳೆಂದರೆ ಒಂದು ಪಾರಂಪರಿಕ ಜೀವನಕ್ರಮದ ಪಲ್ಲಟ. ಅದುವರೆಗೆ ಆಡಳಿತ ಕೇಂದ್ರಗಳಾಗಿದ್ದ ಸೀಮೆ, ಮಾಗಣೆ, ಗುತ್ತುಗಳ ರಾಜಕೀಯ ಅಧಿಕಾರದ ಶಕ್ತಿ ಬಿಂದುಗಳು ವಸಾಹತು ಆಳ್ವಿಕೆಯ ಕಾಲದಲ್ಲಿ ವಸಾಹತು ಪ್ರಭುಗಳ ಕೋರ್ಟುಗಳಿಗೆ, ಕಂದಾಯ ಇಲಾಖೆಗಳಿಗೆ ಮತ್ತು ಪೊಲೀಸ್ ಸ್ಟೇಷನ್‌ಗಳ ಕಡೆಗೆ ಚಲಿಸಿನಿಂತವು.[4] ಆದರೆ ಭೂಮಾಲೀಕತ್ವದ ವಿಷಯದಲ್ಲಿ ಮಾತ್ರ ಈ ಚಲನೆ ಸಂಭವಿಸಲಿಲ್ಲ. ಅದು ಹಾಗೆಯೇ ಉಳಿದು ಅದೇ ಹಳೆಯ ಯಜಮಾನರುಗಳೊಂದಿಗೆ ಅದೇ ಹಳೆಯ ಮೌಲ್ಯಗಳೊಂದಿಗೆ ಮುಂದುವರಿಯಿತು.

ವಸಾಹತು ಆಳ್ವಿಕೆಯ ಕಾಲದಲ್ಲಿ ಕ್ರೈಸ್ತ ಮಿಷನರಿಗಳು ನಡೆಸಿದ ಚಟುವಟಿಕೆಗಳು ಇಲ್ಲಿ ಬಹಳ ಗುರುತರವಾದುದು. ಕರ್ನಾಟಕದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡದಲ್ಲಿ ಮಿಷನರಿಗಳ ಧಾರ್ಮಿಕ ಮತ್ತು ಸಾಮಾಜಿಕವಾದ ಕಾರ್ಯಾಚರಣೆ ಬಹಳ ವಿಶೇಷವಾದುದು. ಸಾವಿರಾರು ಕೆಳಜಾತಿಗಳ ಜನರನ್ನು ಮತಾಂತರಗೊಳಿಸಿದ ಮಿಷನರಿಗಳು ಅವರೆಲ್ಲರಿಗೆ ಒಂದು ‘ತಕ್ಷಣದ ಬಿಡುಗಡೆ’ಯ ಅವಕಾಶವನ್ನು ಮಾಡಿಕೊಟ್ಟರು.[5] ಹಾಗೆಯೇ ಶಾಲೆಗಳನ್ನು ತೆರೆದ ಮಿಷನರಿಗಳು ಒಂದೇ ಶಾಲೆಯ ಸೂರಿನಡಿ ಹೊರಗಿನ ಜಾತ್ಯಾಧಾರಿತ ಅಸಮಾನ ಸಂಬಂಧಗಳ ಶ್ರೇಣೀಕರಣದ ಮಾದರಿಯನ್ನು ಭೌತಿಕವಾಗಿಯೂ, ಬೌದ್ಧಿಕವಾಗಿಯೂ ಒಡೆದರು. ದಕ್ಷಿಣ ಕನ್ನಡದ ಸಾಮಾಜಿಕ ಸನ್ನಿವೇಶದಲ್ಲಿ ಹೀಗೆ ‘ನಡು ಪ್ರವೇಶ’ ಗೈದ ಕ್ರೈಸ್ತ ಮಿಷನರಿಗಳ ಕೆಲಸದ ಬಗ್ಗೆ ಇಲ್ಲಿಯ ಸ್ಥಳೀಯ ಬುದ್ಧಿಜೀವಿಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಕೆಲವರು ಈ ಬೆಳವಣಿಗೆಯನ್ನು ಸ್ವಾಗತಿಸಿದರೆ ಇನ್ನು ಕೆಲವರು ಇದನ್ನು ಅಷ್ಟೇ ತೀವ್ರವಾಗಿ ವಿರೋಧಿಸಿದರು. ಹೀಗಾಗಿ ಜಾತಿ, ಲಿಂಗ ಅಸಮಾನತೆಗಳ ಬಗ್ಗೆ, ವಿಧವಾ ವಿವಾಹದ ಬಗ್ಗೆ, ಕೆಳಜಾತಿ ಜನರ ಶಿಕ್ಷಣಾವಕಾಶಗಳ ಬಗ್ಗೆ ಕ್ರೈಸ್ತ ಮಿಷನರಿಗಳು ನಿರ್ವಹಿಸುವ ಪಾತ್ರದ ಬಗ್ಗೆ ಇಲ್ಲಿಯ ಉಚ್ಚಜಾತಿಯ ಜನರೊಳಗೆ ತೀವ್ರ ಭಿನ್ನಾಭಿಪ್ರಾಯಗಳು ಕಂಡು ಬಂದವು. ಬ್ರಾಹ್ಮಣರ ಒಂದು ಗುಂಪು ತಮ್ಮ ಸಮುದಾಯದೊಳಗಿನ ಈ ವಿಧಿ-ನಿಷೇಧಗಳ ಬಗ್ಗೆ ಬಂಡೆದ್ದಿತು. ಈ ಬಂಡಾಯದ ಫಲವಾಗಿ ಗೌಡ ಸಾರಸ್ವತ ಬ್ರಾಹ್ಮಣರ ನಾಯಕರಾದ ಉಳ್ಳಾಲ ರಘುನಾಥಯ್ಯ ಮಂಗಳೂರಿನಲ್ಲಿ ೧೮೭೦ರ ಹೊತ್ತಿಗೆ ಬ್ರಹ್ಮ ಸಮಾಜವನ್ನು ಸ್ಥಾಪಿಸಿದರು. ೧೯೦೧ ರಲ್ಲಿ ಪಂಡಿತ ಭವಾನಿಶಂಕರ ರಾವ್ ಅವರು ಥಿಯೋಸಾಫಿಕಲ್ ಸೊಸೈಟಿಯನ್ನು ಮಂಗಳೂರಿನಲ್ಲಿ ಸ್ಥಾಪಿಸಿದರು. ೧೯೧೮ ರಲ್ಲಿ ಕೆ.ಆರ್.ಕಾರಂತ, ಕೆ.ಶಾಮರಾವ್, ಅನಂತರಾವ್ ಮೊದಲಾದವರು ಆರ್ಯ ಸಮಾಜವನ್ನು ಸ್ಥಾಪಿಸಿದರು.[6] ತಮ್ಮ ಸಮುದಾಯದವರನ್ನು ಶೈಕ್ಷಣಿಕ, ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಮೇಲಕ್ಕೆತ್ತುವ ಪ್ರಯತ್ನವಾಗಿ ಬ್ರಾಹ್ಮಣರು ದಕ್ಷಿಣ ಕನ್ನಡ ಜಿಲ್ಲಾ ದ್ರಾವಿಡ ಬ್ರಾಹ್ಮಣರ ಸಂಘವನ್ನು ೧೯೨೪ ರಲ್ಲಿ ಸ್ಥಾಪಿಸಿದರು.[7] ಗೌಡ ಸಾರಸ್ವತ ಬ್ರಾಹ್ಮಣರಿಗೆ ಜಾತಿ ಸಂಘಟನೆಗಳಂತೂ ಇರಲಿಲ್ಲ. ಆದರೆ ಅವರ ಮನೆಗಳು ಮತ್ತು ದೇವಸ್ಥಾನಗಳು ಜಾತಿ ಬಾಂಧವರು ಒಟ್ಟಾಗಿ ಸೇರುವ ಕೇಂದ್ರಗಳಾಗಿದ್ದವು.

ಬಂಟ ಸಮುದಾಯದ ನಾಯಕರು ೧೯೦೭ ರಲ್ಲಿ ಬಂಟರ ಯಾನೆ ನಾಡವರ ಸಂಘವನ್ನು ಮಂಗಳೂರಿನಲ್ಲಿ ಸ್ಥಾಪಿಸಿದರು. ಬಂಟ ಜಾತಿಯ ಹುಡುಗರು ನಗರಗಳಲ್ಲಿ ಆಧುನಿಕ ಮತ್ತ ಉನ್ನತ ವಿದ್ಯಾಭ್ಯಾಸವನ್ನು ಪಡೆಯುವುದಕ್ಕೆ ಅನುಕೂಲವಾಗಲೆಂದು ಈ ಸಂಘ ೧೯೦೯ ರಲ್ಲಿ ಹುಡುಗರ ಹಾಸ್ಟೆಲನ್ನು ಸ್ಥಾಪಿಸಿತು. ೧೯೦೯ ರಲ್ಲಿ ಅದು ಶಿಕ್ಷಣದ ಬೇರೆ ಬೇರೆ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದಕ್ಕಾಗಿ ವಿದ್ಯಾರ್ಥಿ ವೇತನವನ್ನು ಕೊಡುವುದಕ್ಕೆ ಆರಂಭಿಸಿತು. ೧೯೩೧ ರಲ್ಲಿ ಅದು ವಿಜಯಾ ಬ್ಯಾಂಕನ್ನು ಸ್ಥಾಪಿಸಿತು. ಇದರ ಹಿಂದೆ ಎರಡು ಉದ್ದೇಶಗಳಿದ್ದವು.[8] ಒಂದು ಸ್ವಜಾತಿ ಉದ್ಯಮಶೀಲರಿಗೆ ಹಣಕಾಸಿನ ನೆರವು ನೀಡುವುದು, ಇನ್ನೊಂದು ಸ್ವಜಾತಿ ವಿದ್ಯಾವಂತ ತರುಣರಿಗೆ ಅದೇ ಬ್ಯಾಂಕಿನಲ್ಲಿ ಉದ್ಯೋಗ ಕೊಡಿಸುವುದು. ಇದೇ ಸಂದರ್ಭಧಲ್ಲಿ ಮೇಲ್ಜಾತಿ ತರುಣರು ಭಾರತದ ರಾಷ್ಟ್ರೀಯ ಹೋರಾಟದಲ್ಲೂ ತೊಡಗಸಿಕೊಂಡಿರುವುದನ್ನು ಇಲ್ಲಿ ನೆನಪಿಗೆ ತಂದುಕೊಳ್ಳಬಹುದು. ೧೯೩೦ರ ಕಾಲಕ್ಕೆ ಗೌಡ ಸಾರಸ್ವತ ಬ್ರಾಹ್ಮಣರು ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೋರಾಟದ ಮುಂಚೂಣಿಯಲ್ಲಿದ್ದರು. ಗೌಡ ಸಾರಸ್ವತ ಬ್ರಾಹ್ಮಣರು ಸ್ವಾತಂತ್ರ‍್ಯ ಹೋರಾಟದ ಮತ್ತು ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿದ್ದದ್ದನ್ನು ಗಮನಿಸಿದ ಬ್ರಾಹ್ಮಣರೂ ಕೂಡ ಇದರಲ್ಲಿ ಭಾಗಿಯಾಗ ತೊಡಗಿದರು. ಕಾರ್ನಾಡು ಸದಾಶಿವರಾಯರು, ಕಮಲಾದೇವಿ ಚಟ್ಟೋಪಾದ್ಯಾಯ ಮೊದಲಾದವರು ಈ ವರ್ಗದಿಂದ ಬಂದ ನಾಯಕರು.[9] ಇಲ್ಲಿಯ ವಿಪರ್ಯಾಸ ಏನೆಂದರೆ ಯಾವ ಯಾವ ಆಧುನಿಕ ಸ್ಥಳಾವಖಾಶಗಳು ಮೇಲ್ಜಾತಿ ಜನರನ್ನು ಆಧುನಿಕ ಕಾಲಕ್ಕೆ ‘ಸಲ್ಲುವ’ ಹಾಗೆ ಮಾಡಿದ್ದವೋ ಅದೇ ಸ್ಥಳಾವಕಾಶಗಳನ್ನು ಬಳಸಿಕೊಂಡು ಇದೇ ಜನರ ಮತ್ತೊಂದು ಗುಂಪು ಕ್ರಿಶ್ಚಿಯನ್ ವಿರೋಧದ ನೆಲೆಯಲ್ಲಿ ಧಾರ್ಮಿಕ ಗಡಿಗಳನ್ನು ನಿರ್ಧರಿಸುವ, ಖಾಯಂ ಮಾಡುವ ಮತ್ತು ರಕ್ಷಸುವ ಉದ್ದೇಶದಿಂದ ಮತೀಯ ಫಸಲನ್ನು ಅಪೇಕ್ಷಿಸಿ ಬೀಜ ಬಿತ್ತನೆ ಗೈದವು. ಮೇಲ್ಜಾತಿ ಜನರ ಅದರಲ್ಲೂ ಬ್ರಾಹ್ಮಣರ ಮತ್ತು ಗೌಡ ಸಾರಸ್ವತ ಬ್ರಾಹ್ಮಣರ ಒಂದು ಗುಂಪು ಮಿಶನರಿಗಳ ಶಾಲೆಗಳನ್ನು ವಿರೋಧಿಸುವುದಕ್ಕೆ ತೊಡಗಿದವು. ಆ ಶಾಲೆಗಳಲ್ಲಿ ಸಾಮಾಜಿಕ ಶ್ರೇಣೀಕರಣವನ್ನು ಮಟ್ಟಸಗೊಳಿಸಲಾಗಿದೆ ಎಂಬುದು ಅವರ ಅಸಹನೆಗೆ ಪ್ರಮುಖ ಕಾರಣ. ಆದರೆ ಅದನ್ನು ಹಾಗೆ-ಹಾಗೆಯೇ ಲೋಕಮುಖಕ್ಕೆ ಹೇಳುವುದಕ್ಕೆ ಸಾಮಾಜಿಕ ಅಳುಕು ಇದ್ದುದರಿಂದ ಅವರು ಅದನ್ನು ಧರ್ಮಾಧರಿತ ವಿಷಯಕ್ಕೆ ಪರಿವರ್ತಿಸಿದರು. ಕ್ರಿಶ್ಚಿಯನ್ನರು ಶಾಲೆಗಳನ್ನು ಸ್ಥಾಪಿಸಿದುದು ನಮ್ಮ ಉದ್ಧಾರಕ್ಕೆ ಅಲ್ಲ. ಅದು ನಮ್ಮೆಲ್ಲರನ್ನೂ ಅಂದರೆ ಹಿಂದುಗಳನ್ನ ಹಿಂಬಾಗಿಲ ಮೂಲಕ ಕ್ರೈಸ್ತರನ್ನಾಗಿಸುವ ಪ್ರಯತ್ನ ಎಂಬ ಪ್ರಚಾರದಲ್ಲಿ ಅವರು ತೊಡಗಿದರು.[10] ಅಂದರೆ ಅದೇ ಮೊದಲ ಬಾರಿಗೆ ‘ನಾವು’ ಮತ್ತು ‘ಅವರು’ ಎಂಬ ಸರ್ವನಾಮಗಳನ್ನು ಇವರು ಸಾರ್ವತ್ರಿಕಗೊಳಿಸುವುದಕ್ಕೆ ಹೊರಟರು. ನಿನ್ನೆಯವರೆಗೆ ಬ್ರಾಹ್ಮಣ, ಬಿಲ್ಲವ, ಹೊಲೆಯ ಎಂದು ಇದ್ದುದು ಇದೇ ಮೊದಲಿಗೆ ‘ಹಿಂದೂ ಎಂದು ಮರುನಾಮಕರಣಗೊಂಡಿತು. ದ.ಕ. ಜಿಲ್ಲೆಯ ಸಮಾಜ ಈ ಅರ್ಥದಲ್ಲಿ ‘ದ್ವಿಜ ಸಮಾಜ’ವಾಯಿತು (ಜಾತ್ಯಾಧಾರಿತ ಸಮಾಜದ್ದು ಮೊದಲ ಜನನ, ಧರ್ಮಾಧರಿತವಾದದ್ದು ಎರಡನೆಯ ಜನನ). ಕ್ರಿಶ್ಚಿಯನ್ನರ ಶಾಲೆ ಸ್ಥಾಪನೆಯ ಕ್ರಮಕ್ಕೆ ಪರ್ಯಾಯವಾಗಿ ಈ ಜನರೂ ಹಿಂದೂ ಶಾಲೆಗಳನ್ನು ಸ್ಥಾಪಿಸಿದರು. ಅನಂತರದಲ್ಲಿ ಹಲವಾರು ಶಾಲಾ-ಕಾಲೇಜುಗಳನ್ನು ಈ ಉದ್ದೇಶಕ್ಕಾಗಿಯೇ ಸ್ಥಾಪಿಸಲಾಯಿತು. ತದನಂತರದ ದಿನಗಳಲ್ಲಿ ಇದೇ ಕೆಲವು ಶಾಲಾ-ಕಾಲೇಜುಗಳು ಆರ್.ಎಸ್.ಎಸ್.ನ ಕಾರ್ಯ ಚಟುವಟಿಕೆಗಳ ಕೇಂದ್ರ ಸ್ಥಾನವಾದವು. ಈ ಎಲ್ಲ ಅಂಶಗಳು ಏನನ್ನು ತೋರಿಸುತ್ತವೆಯೆಂದರೆ ವಸಾಹತು ಕಾಲದಲ್ಲಿ ರೂಪುಗೊಂಡ ಈ ರಚನೆಗಳು, ಸಂಸ್ಥೆಗಳು ಮತ್ತು ಮೌಲ್ಯಗಳು ಅನಂತರದ ಆಧುನೀಕರಣ ಮತ್ತು ಕೋಮುವಾದ ಇವೆರಡನ್ನೂ ಹೀರಿ ಬೆಳೆದವು.

ಸ್ವಾತಂತ್ರ್ಯೋತ್ತರದ ದಿನಗಳಲ್ಲಿ ಅಂದರೆ ೧೯೭೦ ರವರೆಗೂ ಅಂಥ ಗಮನಾರ್ಹವಾದ ಬೆಳವಣಿಗೆಗಳೇನೂ ಇಲ್ಲಿ ಸಂಭವಿಸಲಿಲ್ಲ. ಈಗಾಗಲೇ ಪ್ರಸ್ತಾಪಿಸಿದಂತೆ ಮೊದಲಾರ್ಧದ ‘ಅಭಿವೃದ್ಧಿಯಲ್ಲಿ’ ಕರಾವಳಿ ಪಟ್ಟಣಗಳಾದ ಮಂಗಳೂರು, ಉಡುಪಿ, ಕುಂದಾಪುರಗಳು ಬಹುಮುಖ್ಯ ವಾಣಿಜ್ಯ ಕೇಂದ್ರಗಳಾಗಿ ರೂಪುಗೊಂಡವು. ಆದರೆ ಕರಾವಳಿಯ ಒಳನಾಡು ತಾಲೂಕುಗಳಾದ ಪುತ್ತೂರು, ಬಂಟ್ವಾಳ, ಸುಳ್ಯ, ಕಾರ್ಕಳ ಮತ್ತು ಬೆಳ್ತಂಗಡಿಗಳು ಯಥಾಸ್ಥಿತಿಯಲ್ಲೇ ಉಳಿದುಕೊಂಡವು. ಅನಂತರದಲ್ಲಿ ಬಹು ನಿಧಾನಕ್ಕೆ ಆಧುನಿಕ ಸೌಲಭ್ಯಗಳಾದ ಶಾಲೆಗಳು, ರಸ್ತೆಗಳು, ಆಸ್ಪತ್ರೆಗಳು ಇತ್ಯಾದಿಗಳು ಇಲ್ಲೂ ಆರಂಭಗೊಂಡವು. ಭೂ ಮಸೂದೆಯ ಮೂಲಕ ನಡೆದ ಭೂ ಹಿಡುವಳಿ ಸುಧಾರಣೆ, ಭತ್ತದ ಕೃಷಿಯ ಬದಲು ಅಡಿಕೆ, ಕೊಕ್ಕೊ ಮೊದಲಾದ ವಾಣಿಜ್ಯ ಬೆಳೆಗಳು ಮತ್ತು ಬೀಡಿ ಉದ್ಯಮ ಈ ಕರಾವಳಿಯ ಒಳನಾಡುಗಳ ಸ್ವರೂಪವನ್ನು ತೀವ್ರವಾಗಿ ಪ್ರಭಾವಿಸಿತು. ಇದೇ ಸಮಯದಲ್ಲಿ ನಾಗರಿಕ ಪ್ರಭುತ್ವವೊಂದು ಪ್ರದರ್ಶಿಸಿದ ರಾಜಕೀಯ ಇಚ್ಛಾಶಕ್ತಿಯ ಧೋರಣಾತ್ಮಕ ನಿರ್ಧಾರಗಳು ಈ ಪ್ರದೇಶದ ಆರ್ಥಿಕತೆಯ ಮೇಲೆ ಅಳಿಸಲಾಗದ ಪ್ರಭಾವವನ್ನು ಬೀರಿತು. ಪ್ರಭುತ್ವ ಪ್ರೇರಿತ ಆರ್ಥಿಕ ಹಾಗೂ ಸಾಮಾಜಿಕ ಪರಿವರ್ತನೆಯ ಕೆಲವು ಧೋರಣೆಗಳು ಪಾರಂಪರಿಕ ಅಧಿಕಾರದ ಕೇಂದ್ರಗಳನ್ನು ಬಹುಮಟ್ಟಿಗೆ ಮುರಿಯಿತು. ಈ ನಿಟ್ಟಿನಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ, ಭೂಸುಧಾರಣಾ ಕಾಯಿದೆ, ಕೈಗಾರಿಕೆ ಮತ್ತು ಕೃಷಿಯ ಆಧುನೀಕರಣ ಮತ್ತು ಉಚಿತ ಶಿಕ್ಷಣದ ಸಾರ್ವತ್ರೀಕರಣ ಮುಖ್ಯವಾದುವುಗಳು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯ ಮೂರು ಪ್ರಭಾವಿ ಜಾತಿಗಳಾದ ಬಂಟ, ಬ್ರಾಹ್ಮಣ ಮತ್ತು ಗೌಡಸಾರಸ್ವತ ಬ್ರಾಹ್ಮಣರು ಇಲ್ಲಿ ಐದು ಬ್ಯಾಂಕುಗಳನ್ನು ಆರಂಭಿಸಿದ್ದರು. ಸಿಂಡಿಕೇಟ್, ಕಾರ್ಪೋರೇಶನ್, ಕೆನರಾ ಬ್ಯಾಂಕುಗಳನ್ನು ಗೌಡ ಸಾರಸ್ವತ ಬ್ರಾಹ್ಮಣರು, ವಿಜಯಾ ಬ್ಯಾಂಕನ್ನು ಬಂಟರು ಮತ್ತು ಕರ್ನಾಟಕ ಬ್ಯಾಂಕನ್ನು ಬ್ರಾಹ್ಮಣರು ಇಲ್ಲಿ ಆರಂಭಿಸಿದ್ದರು. ಈ ಬ್ಯಾಂಕುಗಳನ್ನು ತಮ್ಮ ತಮ್ಮ ಸಮುದಾಯದ ಜನರು ಔದ್ಯೋಗಿಕವಾಗಿ ಮುಂದುವರಿಯುವುದಕ್ಕೆ ಹಣಕಾಸು ಪೂರೈಕೆಗಾಗಿ ಸ್ಥಾಪಿತಲಾಗಿತ್ತು. ಈ ಎಲ್ಲ ಬ್ಯಾಂಕುಗಳು ಲಾಭದಾಯಕವಾಗಿ ನಡೆಯುತ್ತಲೂ ಇದ್ದವು. ಆದರೆ ಕೇಂದ್ರದ ಕಾಂಗ್ರೆಸ್ ಸರ್ಕಾರದ ಬ್ಯಾಂಕುಗಳ ರಾಷ್ಟ್ರೀಕರಣದ ರಾಜಕೀಯ ನಿರ್ಧಾರ ಈ ಮೂರೂ ಬಲಾಢ್ಯ ಜಾತಿಗಳ ಆರ್ಥಿಕ ಹಿತಾಸಕ್ತಿಗೆ ಬಲವಾದ ಏಟು ನೀಡಿತು. ರಾಜಕೀಯ ನಿರ್ಧಾರಗಳು ಆರ್ಥಿಕ ಸ್ಥಿತಿಗತಿಯ ಜೊತೆಗೆ ನಿಕಟ ಸಂಬಂಧವನ್ನು ಹೊಂದಿರುವುದರಿಂದ ಈ ಏಟು ತಿಂದ ಮೂರೂ ಜಾತಿಗಳು ಕಾಂಗ್ರೆಸ್‌ನೊಂದಿಗೆ ಮುಂದುವರಿಯುವುದು ಅಸಾಧ್ಯವಾಯಿತು. ಹಾಗಾಗಿ ಈ ಪ್ರಬಲ ಜಾತಿಗಳು ತಮಗನುಕೂಲ ಕರವಾದ ರಾಜಕೀಯ ಅವಕಾಶವನ್ನು ಹುಡುಕುವುದಕ್ಕೆ ಹೊರಟವು.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸುವುದಾದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಮಸೂದೆ ಹೆಚ್ಚು ಸಮರ್ಪಕವಾಗಿ ನಡೆಯಿತು.[11] ಭೂಸುಧಾರಣ ಕಾಯಿದೆಯಿಂದ ಶತಮಾನಗಳಿಂದ ಕೃಷಿ ಕಾರ್ಮಿಕರಾಗಿ ದುಡಿದ ದಲಿತರಿಗೆ ಏನೇನೂ ಲಾಭವಾಗಿಲ್ಲ ಎನ್ನುವ ವಿಚಾರವನ್ನು ಗಮನದಲ್ಲಿಟ್ಟುಕೊಂಡೇ ಭೂ ಮಸೂದೆಯ ಲಾಭಗಳನ್ನು ಲೆಕ್ಕಹಾಕಬೇಕಾಗಿದೆ. ಇದೇ ಸಂದರ್ಭದಲ್ಲಿ ಈ ಭೂ ಮಸೂದೆಯ ಪರಿಣಾಮವನ್ನು ಒಬ್ಬ ಒಕ್ಕಲು ಎಷ್ಟು ಪ್ರಮಾಣದ ಭೂಮಿಯನ್ನು ಪಡೆದುಕೊಂಡ ಎನ್ನುವುದಕ್ಕಿಂತಲೂ ದೊರಕಿದ ಮತ್ತು ಈಗ ಸ್ವಂತದ್ದಾಗಿರುವ ಅವನ ಭೂಮಿ ಅವನಿಗೆ ಕೊಟ್ಟಿರುವ ಮಾನಸಿಕ ಧೈರ್ಯ ಮತ್ತು ಆತ್ಮಬಲದ ದೃಷ್ಟಿಯಿಂದ ನೋಡಬೇಕಾಗಿದೆ. ಒಬ್ಬ ಒಕ್ಕಲು ಆತ ಗೇಣಿಯನ್ನು ಕೊಡುವುದರಿಂದ ಅಥವಾ ಭೂ ಮಾಲೀಕನ ಕೈಕೆಳಗಿನಿಂದ ಮಾತ್ರ ಮುಕ್ತನಾದುದಲ್ಲ. ಈ ಸ್ವಾತಂತ್ರ‍್ಯ ಕೊಟ್ಟ ‘ಆತ್ಮವಿಶ್ವಾಸ’ ಭೂಮಿಯನ್ನು, ಕೃಷಿಯನ್ನು ಅಭಿವೃದ್ಧಿಗೊಳಿಸುವುದಕ್ಕೆ ಆತನ ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೆ ಮತ್ತು ಬದಲಾದ ಕಾಲಮಾನಕ್ಕೆ ತನ್ನನ್ನು ಸಜ್ಜುಗೊಳಿಸುವುದಕ್ಕೆ ಆತನಿಗೆ ನೆರವಾಯಿತು.[12] ವ್ಯಕ್ತಿ ಮಟ್ಟದಲ್ಲೂ, ಸಮುದಾಯ ಮಟ್ಟದಲ್ಲೂ, ಈ ಮಸೂದೆ ಬಹಳ ಕ್ರಾಂತಿಕಾರಿಯಾದ ಬದಲಾವಣೆಗಳನ್ನು ತಂದಿತು. ಸಮಾಜದಲ್ಲ ನಡೆದ ಈ ಬಗೆಯ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಳು ಈ ಪ್ರದೇಶದ ಮೇಲ್ಜಾತಿಗಳ ಚಹರೆಯನ್ನೇ ಬದಲಾಯಿಸಿತು. ಈಗ ಒಕ್ಕಲು ತನ್ನ ಪೂರ್ವದ ಧಣಿಯ ಆಳುಮಗನಲ್ಲ, ಅವಲಂಬಿತನಲ್ಲ. ಬದಲಾದ ಸನ್ನಿವೇಶದಲ್ಲಿ ಸಿಕ್ಕಿರುವ ಆರ್ಥಿಕ ಸ್ವಾತಂತ್ರ‍್ಯ ಆತನಿಗೆ ತನ್ನದೇ ಆದ ಒಂದು ನಿಲುವನ್ನು ಹೊಂದುವುದಕ್ಕೆ ಮತ್ತು ಹಿಂದಿನ ಪಾರಂಪರಿಕ ಸಾಮಾಜಿಕ ರಚನೆಯ ನಿಯಂತ್ರಣವನ್ನು ಸಾಂಕೇತಿಕವಾಗಿ ಎದುರಿಸುವುದಕ್ಕೆ ಅನುವು ಮಾಡಿಕೊಟ್ಟಿತು. ಇದುವರೆಗೆ ಸಂಬೋಧಿಸುತ್ತಿದ್ದ ‘ಧಣಿ’ ಎಂಬ ಪದ ಬದಲಾದ ಪರಿಸ್ಥಿತಿಯಲ್ಲಿ ಭೂಮಿ ಕಳೆದುಕೊಂಡವನನ್ನು ತಮಾಶೆ ಮಾಡುವ ಪದವಾಯಿತು. ಪದದ ಅರ್ಥವೂ ಪಲ್ಲಟಗೊಂಡಿತು. ಒಕ್ಕಲಿನ ಮೇಲೆ ದಬ್ಬಾಳಿಕೆ ಮಾಡುವ, ನಿಯಂತ್ರಣ ಹೇರುವ ಪ್ರಶ್ನೆಗಳೆಲ್ಲಾ ಈಗ ಭೂತಕಾಲದ ಸಂಗತಿಗಳಾದುವು. ಈ ಎಲ್ಲ ಬೆಳವಣಿಗೆಗಳು ಮೇಲ್ಜಾತಿಗಳ ‘ಅಹಂ’ ಅನ್ನು ತೀವ್ರವಾಗಿ ಬಾಧಿಸಿದವು. ಆದರೆ ಈಗ ಅದೇ ಹಳೆಯ ಯಜಮಾನಿಕೆಯನ್ನು ಹಿಂದಿನ ಸ್ವರೂಪದಲ್ಲಿ ಉಳಿಸಿಕೊಳ್ಳುವುದು ಸಾಧ್ಯವಿಲ್ಲದ ಸಂಗತಿಯಾಯಿತು. ಹಾಗೆಂದು ಮೇಲ್ಜಾತಿಗಳು ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ತಮ್ಮ ಯಜಮಾನಿಕೆಯನ್ನುಳಿಸಿ ಬೆಳೆಸಿಕೊಳ್ಳಲು ಅವರೆಲ್ಲರಿಗೆ ಒಂದು ರಾಜಕೀಯ ನೆಲೆ ಬೇಕಾಗಿತ್ತು ಮತ್ತು ಅದರ ಹುಡುಕಾಟ ಇನ್ನೂ ತೀವ್ರವಾಯಿತು. ಈ ರಾಜಕೀಯ ನೆಲೆಯನ್ನು ಅವರು ಮೊದಲಿಗೆ ಪ್ರಜಾ ಸೋಶಿಯಲಿಸ್ಟ್ ಪಾರ್ಟಿಯಲ್ಲಿ ಮತ್ತು ಜಸ್ಟಿಸ್‌ ಪಾರ್ಟಿಯಲ್ಲಿ ಕಂಡುಕೊಂಡರು. ಆದರೆ ಎಪ್ಪತ್ತರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳು ಹೇಳಹೆಸರಿಲ್ಲದಂತಾದವು. ಈ ಫಲಿತಾಂಶವು ಜಿಲ್ಲೆಯಲ್ಲಿ ರಾಜಕೀಯ ಧ್ರುವೀಕರಣಕ್ಕೆ ನಾಂದಿಯಾಯಿತು. ಇದೇ ಸಮಯದ ಆರಂಭದಲ್ಲಿ ಭಾರತೀಯ ಜನಸಂಘವಾಗಿದ್ದು ನಂತರ ಭಾರತಿಯ ಜನತಾ ಪಕ್ಷವಾಗಿದ್ದ ರಾಜಕೀಯ ಪಕ್ಷ ಮೇಲ್ಜಾತಿ ಜನರ ಬೆಂಬಲದೊಂದಿಗೆ ಜಿಲ್ಲೆಯಲ್ಲಿ ಪ್ರವರ್ಧಮಾನಕ್ಕೆ ಬಂತು. ಈ ಪಕ್ಷ ತಮ್ಮ ಹಿತಾಸಕ್ತಿಗಳನ್ನು ಕಾಯುವ ಪಕ್ಷವೆಂದು ಜಿಲ್ಲೆಯ ಈ ಪ್ರಬಲ ಜಾತಿಗಳು ಭಾವಿಸಿದವು.

ಹಾಗಿದ್ದರೂ ಇಲ್ಲಿ ನೆನಪಿಡಬೇಕಾದ ಸಂಗತಿಯೆಂದರೆ ಈ ಎಲ್ಲ ಸಾಮಾಜಿಕ ಬದಲಾವಣೆಗಳು ಸಂಭವಿಸಿದರೂ ಭೂಮಿಯ ಮೇಲಿನ ಮೇಲ್ಜಾತಿ ಜನಗಳ ಸ್ವಾಮ್ಯ ಸಂಪೂರ್ಣವಾಗಿ ಅಳಿಸಿ ಹೋಗಲಿಲ್ಲ. ಅವರು ಯಾವ ಯಾವ ಜನರಿಗೆ ಭೂಮಿ ಸಿಗಲಿಲ್ಲವೋ ಅಂಥವರನ್ನು ಬಳಸಿಕೊಂಡು ತಮ್ಮ ಭೂಮಿಯ ಗೈಮೆಯನ್ನು ಮಾಡಿಸಿಕೊಂಡರು. ಈ ಕೃಷಿ ಕಾರ್ಮಿಕರಿಗೆ ತಮ್ಮ ದಿನನಿತ್ಯದ ಕೂಳಿಗೆ ಹೀಗೆ ದುಡಿಯುವುದು ಅನಿವಾರ್ಯವಾಗಿತ್ತು. ಬೀಡಿ ಉದ್ಯಮದ ಪ್ರಭಾವಶಾಲಿ ಬೆಳವಣಿಗೆಯ ಬಳಿಕ ಈ ಕೃಷಿ ಕಾರ್ಮಿಕರೂ ಹೊಲದಿಂದ ಕಣ್ಮರೆಯಾದರು. ಬೀಡಿ ಉದ್ಯಮ ಭೂರಹಿತ ಜನರಿಗೆ ಒಂದು ಖಚಿತ ಆದಾಯದ ಮೂಲವಾಗಿ ಒದಗಿ ಬಂತು. ಹಾಗಾಗಿ ಅದು ಇಡೀ ಜಿಲ್ಲೆಯ ಮೂಲೆ ಮೂಲೆಗೆ ವಿಸ್ತರಿಸಿತು. ಬಹುತೇಕ ಹೆಂಗಸರು ಹೊಲದಿಂದ ಹೊರಟು ಬೀಡಿ ಕಟ್ಟುವುದಕ್ಕೆ ತೊಡಗಿದ ಬಳಿಕ ಕೃಷಿ ಕಾರ್ಯಗಳಿಗೆ ಕೂಲಿ ಕೆಲಸದ ಜನರು ಸಿಗುವುದು ಬಹಳ ಕಷ್ಟವಾಯಿತು. ಈ ಮಹಿಳಾ ಕೂಲಿ ಕೆಲಸಗಾರರ ಕೊರತೆ ಪುರುಷ ಕೂಲಿ ಕೆಲಸಗಾರರ ಕೊರತೆ ಮತ್ತು ಪುರುಷ ಕೂಲಿ ಕೆಲಸದವರ ಸಂಬಳ ಜಾಸ್ತಿಯಾಗುವಂತೆ ಮಾಡಿತು. ಹೀಗೆ ಬೀಡಿ ಉದ್ಯಮವೂ ಮೇಲ್ಜಾತಿ ಜನರ ಅಹಂಗೆ ಕೊಡಬೇಕಾದ ಅಂತಿಮ ಪೆಟ್ಟನ್ನು ಕೊಟ್ಟಿತು. ಮೇಲ್ವರ್ಗದ ಅಹಂಗೆ ಆದ ನೋವನ್ನು ಅರ್ಥಮಾಡಿಕೊಳ್ಳಬೇಕಾದರೆ ಆ ಕಾಲದ ತುಳು ನಾಟಕಗಳಲ್ಲಿ ಬಿಂಬಿಸಲ್ಪಡುವ ಬೀಡಿ ಕಟ್ಟುವ ಹೆಣ್ಮಗಳ ಪಾತ್ರಗಳನ್ನು ನೋಡಬೇಕು. ಆ ಕಾಲದ ತುಳು ನಾಟಕಗಳಲ್ಲಿ ಈ ಇಡಿಯ ಸಾಮಾಜಿಕ ಸಂಕೀರ್ಣತೆಯನ್ನು ಗಮನಿಸಬಹುದಾಗಿದೆ. ೧೯೮೦ರ ಹೊತ್ತಿಗೆ ಈ ತುಳು ನಾಟಕಗಳು ಜಿಲ್ಲೆ ಪೂರ್ತಿ ಪ್ರದರ್ಶನಗೊಳ್ಳುತ್ತಿದ್ದವು. ಮತ್ತು ಬಹಳ ಜನಪ್ರಿಯವಾಗಿದ್ದವು. ವೃತ್ತಿಪರರು, ಯುವಕ ಮಂಡಲಗಳು, ಕಾಲೇಜು ಹುಡುಗರು ಈ ತುಳು ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಬಹುತೇಕ ತುಳು ನಾಟಕಗಳಲ್ಲಿ ಬೀಡಿ ಕಟ್ಟುವ ಹೆಣ್ಮಗಳ ಪಾತ್ರ ಸಾಮಾನ್ಯವಾಗಿ ಇರುತ್ತಿತ್ತು. ಆಕೆಯ ದಿರಿಸು, ಆಕೆಯ ಭಾಷಾ ಶೈಲಿಗಳೆಲ್ಲಾ ಆಕೆ ಕೆಳಜಾತಿಯವಳೆಂಬುದನ್ನು ಹೇಳಬೇಕಾಗಿಲ್ಲವೆಂಬಂತೆ ಇತ್ತು. ಬಹಳಷ್ಟು ನಾಟಕಗಳಲ್ಲಿ ಆಕೆಯನ್ನು ಸಡಿಲು ನಾಲಗೆ ಮತ್ತು ಸಡಿಲುಬಟ್ಟೆಯವಳೆಂಬಂತೆ ಚಿತ್ರಿಸಲಾಗುತ್ತಿತ್ತು. ಇಂತಹ ಹೆಣ್ಮಗಳು ಮತ್ತು ಮುಸ್ಲಿಂ ಬೀಡಿ ಗುತ್ತಿಗೆದಾರರ ನಡುವೆ ಸಂಬಂಧ ಹೆಣೆಯಲಾಗುತ್ತಿತ್ತು.

ವ್ಯಾಪಾರೀಕರಣ ಎನ್ನುವುದು ಈ ಪ್ರದೇಶಕ್ಕೆ ತುಂಬ ಹೊಸದಾದ ಸಂಗತಿಯಲ್ಲ. ಮತ್ತು ಅದು ಕೃಷಿ ಕ್ಷೇತ್ರದಲ್ಲಿ ಮಾತ್ರ ಪ್ರವೇಶಿಸಿರುವುದೂ ಅಲ್ಲ. ಅದನ್ನು ಶಿಕ್ಷಣ, ಆರೋಗ್ಯ, ಸಾರಿಗೆ ಮತ್ತು ಬ್ಯಾಂಕಿನಂಥ ಇತರ ಕ್ಷೇತ್ರಗಳಲ್ಲೂ ಕೂಡ ಕಾಣಬಹುದಾಗಿದೆ. ಶಿಕ್ಷಣದ ಕ್ಷೇತ್ರದಲ್ಲಿ ಈ ಜಿಲ್ಲೆಯಲ್ಲಿ ನಡೆದಿರುವ ವ್ಯಾಪಾರೀಕರಣ ಕಲ್ಪನೆಗೂ ನಿಲುಕದ್ದು. ಆರಂಭದಲ್ಲಿ ಇಲ್ಲಿಯ ಜನ ಶಿಕ್ಷಣಕ್ಕೆ ಕೊಟ್ಟ ಒತ್ತಿಗೂ ಬದಲಾದ ಕಾಲಮಾನದ ಹಿನ್ನೆಲೆಯಲ್ಲಿ ಶಿಕ್ಷಣಕ್ಕೆ ಸಿಗುತ್ತಿರುವ ಆದ್ಯತೆಗೂ ಇಲ್ಲಿ ತುಂಬಾ ವ್ಯತ್ಯಾಸ ಇದೆ. ತಮ್ಮ ಸಮುದಾಯದ ಯುವ ಪೀಳಿಗೆಗೆ ಆಧುನಿಕ ಶಿಕ್ಷಣ ನೀಡುವ ಅಥವಾ ತಳ ಸ್ತರದ ಸಮುದಾಯಗಳು ಕ್ರಿಶ್ಚಿಯನ್ ಮೆಶಿನರಿಗಳ ಪ್ರಭಾವದಿಂದ ಸ್ಥಳೀಯ ಸಾಮಾಜಿಕ ಮೌಲ್ಯಗಳನ್ನು ಅಲ್ಲಗಳೆದು ವ್ಯವಹರಿಸಬಾರದೆನ್ನುವ ಉದ್ದೇಶಗಳಿಂದ ಆರಂಭದಲ್ಲಿ ಸ್ಥಳೀಯ ಮೇಲ್ವರ್ಗ ಶಿಕ್ಷಣ ಸಂಸ್ಥೆಗಳನ್ನು ಶುರು ಮಾಡಿತು. ಕಾಲಕ್ರಮೇಣ ಉದ್ದೇಶಗಳು ಬದಲಾದವು. ಕ್ಯಾಪಿಟೇಶನ್ ಶುಲ್ಕ ಈಗ ಈ ಕ್ಷೇತ್ರವನ್ನು ಸಾಕಷ್ಟು ಆಕರ್ಷಕಗೊಳಿಸಿದೆ. ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ಹೊರತುಪಡಿಸಿದರೂ ಆಧುನಿಕ ಕೋರ್ಸುಗಳಾದ ಪ್ಯಾಷನ್ ಟೆಕ್ನಾಲಜಿ, ಪಿಸಿಯೋ ತೆರಪಿ, ನರ್ಸಿಂಗ್, ಹೋಟೇಲ್ ಮ್ಯಾನೇಜ್‌ಮೆಂಟ್, ಕಂಪ್ಯೂಟರ್‌ ಸೈನ್ಸ್ ಇತ್ಯಾದಿ ಶಿಕ್ಷಣ ಸಂಸ್ಥೆಗಳು ಈ ಜಿಲ್ಲೆಯಲ್ಲಿ ಭಾರೀ ಸಂಖ್ಯೆಯಲ್ಲಿವೆ. ಒಂದು ಇಂಜಿನಿಯರಿಂಗ್, ಒಂದು ಪಾಲಿಟೆಕ್ನಿಕ್ ಮತ್ತು ಒಂದು ಐ.ಟಿ.ಐ.ಯನ್ನು ಹೊರತುಪಡಿಸಿದಂತೆ ಉಳಿದೆಲ್ಲವೂ ಖಾಸಗಿ ವ್ಯಕ್ತಿಗಳ ಅಧೀನದಲ್ಲಿವೆ. ಈ ಎಲ್ಲ ಶಿಕ್ಷಣ ಸಂಸ್ಥೆಗಳು ಕ್ಯಾಪಿಟೇಶನ್‌ ದುಡ್ಡಿನ ಮೂಲಕ ನಡೆಯುತ್ತವೆ. ಇಲ್ಲೂ ಕೂಡಾ ಬಹಳ ಇತ್ತೀಚಿನವರೆಗೆ ಹಣ ಮಾಡುವ ಮೆಡಿಕಲ್ ಕಾಲೇಜುಗಳು ಮಣಿಪಾಲದ ‘ಪೈ’ ಗ್ರೂಪ್‌ನ ಅಂಕೆಯೊಳಗಿದ್ದವು. ಆದರೆ ಈಗ ಅದು ವಿಕೇಂದ್ರೀಕರಣಗೊಂಡಿದೆ. ಬಂಟ, ಮುಸ್ಲಿಮ್, ಕ್ರಿಶ್ಚಿಯನ್ ಮತ್ತು ಗೌಡ ಸಮಾಜದವರು ಇಲ್ಲಿ ಒಂದೊಂದು ಮೆಡಿಕಲ್ ಕಾಲೇಜನ್ನು ಹೊಂದಿದ್ದಾರೆ. ಈ ಮೂಲಕ ಒಂದು ಕಾಲದಲ್ಲಿ ಗೌಡಸಾರಸ್ವತ ಬ್ರಾಹ್ಮಣರ ಏಕಮೇವ ಗುತ್ತಿಗೆಯಾಗಿದ್ದ ದುಡ್ಡು ತರುವ ಮೆಡಿಕಲ್ ಶಿಕ್ಷಣ ಕ್ಷೇತ್ರವನ್ನು ಈಗ ಮುಸ್ಲಿಮರೂ ಸೇರಿದಂತೆ ಇತರ ಪ್ರಬಲ ಜಾತಿ ಸಮುದಾಯದವರೂ ಸಮರ್ಥವಾಗಿ ಪ್ರವೇಶಿಸಿದರು.

ಬೇರೆ ಬೇರೆ ಕ್ಷೇತ್ರದಲ್ಲಿ ನಡೆದ ಹಣಕಾಸಿನ ಆಸಕ್ತಿಗಳು ಮತ್ತು ಕೋಮುವಾದದ ಬೆಳವಣಿಗೆ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಈ ಚರ್ಚೆಯನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ವ್ಯಾಪಾರೀಕರಣ ಮತ್ತು ಕೋಮುವಾದದ ನಡುವಿನ ಸಂಬಂಧವನ್ನು ಅರ್ಥೈಸಿಕೊಳ್ಳಲು ಇಲ್ಲಿನ ಮುಸ್ಲಿಮ್‌ ಸಮುದಾಯವನ್ನು ತಿಳಿದುಕೊಳ್ಳುವುದು ಸೂಕ್ತ.[13] ಇಲ್ಲಿನ ಬಹುಸಂಖ್ಯಾತ ಮುಸ್ಲಿರಮು ವ್ಯಾಪಾರಿಗಳು. ಇವರು ವ್ಯಾಪಾರಿಗಳಾಗಿದದ್ದು ಸ್ವಯಂ ಇಚ್ಛೆಯಿಂದಲ್ಲ. ಬದುಕಿನ ಅನಿವಾರ್ಯತೆಯಿಂದ. ಇವರಲ್ಲಿ ಬಹುಪಾಲು ಜನರಿಗೆ ಭೂಮಿ ಇಲ್ಲ. ವ್ಯಾಪಾರವೇ ಇವರ ಮುಖ್ಯ ವೃತ್ತಿ. ಸಾಗಾಟವೂ ಸೇರಿದಂತೆ ಇತರೆ ಎಲ್ಲ ಅನುಕೂಲಗಳು ವ್ಯಾಪಾರಕ್ಕೆ ರಸ್ತೆ ಬದಿಯಲ್ಲೇ ಹೆಚ್ಚಿರುವುದರಿಂದ ಅವರು ರಸ್ತೆ ಬದಿಗೆ ತಾಗಿಕೊಂಡಂತೆ ಮನೆ ಕಟ್ಟುತ್ತಾರೆ. ಹಳ್ಳಿ ಪ್ರದೇಶದಲ್ಲಿ ಇವರು ಮನೆಯಿಂದ ಮನೆಗೆ ಹಸಿ ಮೀನು ಮಾರುತ್ತ, ಬಾಟಲಿ, ಪ್ಲಾಸ್ಟಿಕ್ ಹೆಕ್ಕುತ್ತಾ, ಗೇರುಬೀಜ, ಬಾಳೆಗೊನೆ ಕೊಳ್ಳುತ್ತಾ ಹೋಗುತ್ತಿರುತ್ತಾರೆ.[14] ಸಹಜವಾಗಿಯೇ ವ್ಯಾಪಾರದಲ್ಲಿ ಲಾಭವಾಗುವುದಕ್ಕಾಗಿ ಕಡಿಮೆ ಬೆಲೆಗೆ ಕೊಳ್ಳುತ್ತಾರೆ. ಸಣ್ಣ (ರೈತರು) ಪ್ರಮಾಣದಲ್ಲಿ ವಾಣಿಜ್ಯ ಬೆಳೆ ಬೆಳೆಯುವ ರೈತರು (ಗೇರು ಬೀಜ, ಅಡಿಕೆ ಇತ್ಯಾದಿಗಳನ್ನು ತಕ್ಷಣ ಮಾರಿ ತಮ್ಮ ದಿನನಿತ್ಯದ ಕರ್ಚು ಭರಿಸಬೇಕಾದ ರೈತರು) ಮಾತ್ರ ಮುಸ್ಲಿಮರಿಗೆ ತಮ್ಮ ಬೆಳೆಗಳನ್ನು ಮಾರುತ್ತಾರೆ. ತಾವು ಬಯಸಿದ ಬೆಲೆ ಸಿಗುವವರೆಗೆ ಕಾಯಲು ಶಕ್ತಿ ಇರುವ ರೈತರು (ದೊಡ್ಡ ರೈತರು) ಮುಸ್ಲಿಮರಿಗೆ ತಮ್ಮ ವಾಣಿಜ್ಯ ಬೆಳೆಗಳನ್ನು ಮಾರುವುದಿಲ್ಲ. ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಬಂದ ಸಂದರ್ಭದಲ್ಲಿ ಮಾರುಕಟ್ಟೆಗೆ ತಮ್ಮ ಬೆಳೆಗಳನ್ನು ಸಾಗಿಸಿ ಮಾರುತ್ತಾರೆ. ಹೀಗೆ ಅನುಕೂಲಸ್ಥ ರೈತರು ತಮ್ಮ ಬೆಳೆಗಳಿಗೆ ಪಡೆಯುವ ಬೆಲೆಗೂ ಸಣ್ಣ ರೈತರು ತಮ್ಮ ಉತ್ಪನ್ನಗಳಿಗೆ ಪಡೆಯುವ ಬೆಲೆಗೂ ತುಂಬಾ ವ್ಯತ್ಯಾಸವಿರುತ್ತದೆ. ‘ಕಡಿಮೆ ಬೆಲೆ ಕೊಟ್ಟು ಬ್ಯಾರಿ ನಿಮಗೆ ಟೋಪಿ ಹಾಕಿದ’ ಎಂದು ಸಣ್ಣ ರೈತರಿಗೆ ಹೆಚ್ಚಿನ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಿದ ರೈತರು ಹೇಳುತ್ತಾರೆ. ಪ್ರತಿದಿನ ಮಾರುಕಟ್ಟೆಗೆ ಹೋಗುವವರಿಗೆ ವ್ಯಾಪಾರದಲ್ಲಿರುವ ಈ ಬೆಲೆ ವ್ಯತ್ಯಾಸ ಗೊತ್ತಿರುವುದೇ. ಎಲ್ಲ ವ್ಯಾಪಾರಿಗಳು ಇದನ್ನೇ ಮಾಡುತ್ತಿರುವುದು. ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚು ಬೆಲೆಗೆ ಮಾರುವ ವ್ಯಾಪಾರದ ಒಂದು ಸಾಮಾನ್ಯ ಕ್ರಮವನ್ನು ಕೂಡ ಇಲ್ಲಿ ಕೋಮುವಾದಿ ಭಾವನೆಗಳನ್ನು ರೂಪಿಸಲು ಬಳಸಿಕೊಳ್ಳಲಾಯಿತು. ಈ ದಿನನಿತ್ಯದ ವ್ಯಾಪಾರದ ಅನುಭವ ಮುಸ್ಲಿಮರು ಮೋಸಗಾರರು ಎನ್ನುವ ಸಾರ್ವತ್ರಿಕ ಅಭಿಪ್ರಾಯಕ್ಕೆ ಒಂದು ಅನುಭವನಿಷ್ಟ ಬುಡ ಒದಗಿಸಿತು. ಗೇರುಬೀಜ, ಕೊಕ್ಕೋ, ಅಡಿಕೆಗಳಂತಹ ವಾಣಿಜ್ಯ ಬೆಳೆಗಳ ಜೊತೆಗೆ ಮುಸ್ಲಿಮರು ಮೀನು ವ್ಯಾಪಾರವನ್ನು ನಡೆಸುತ್ತಾರೆ. ಮೀನು ಹಿಡಿಯುವ ಮತ್ತು ಮೀನು ಮಾರುವ ಈ ಎರಡೂ ಬಗೆಯ ಕೆಲಸಗಳಲ್ಲೂ ನಿಷ್ಣಾತರೂ ಆಗಿದ್ದಾರೆ. ಮಾರುಕಟ್ಟೆಯನ್ನು ಬಹುಮಟ್ಟಿಗೆ ತಮ್ಮ ಹಿಡಿತದಲ್ಲಿರಿಸಿಕೊಂಡವರೂ ಆಗಿದ್ದಾರೆ. ಇದೇ ವೃತ್ತಿಯನ್ನು ಮಾಡುವ ಮೊಗವೀರರಲ್ಲಿ ಗಂಡಸರು ಮೀನು ಹಿಡಿಯುತ್ತಾರೆ ಮತ್ತು ಹೆಂಗಸರು ಮೀನು ಮಾರುತ್ತಾರೆ. ಮಾರುಕಟ್ಟೆಗಳಲ್ಲಿ ಈ ಮೊಗವೀರ ಹೆಂಗಸರು ತಮ್ಮ ಜೊತೆಗೆ ಮೀನು ಮಾರು ಮುಸ್ಲಿಮ್ ಗಂಡಸರೊಂದಿಗೆ ವ್ಯಾಪಾರ ನಿಮಿತ್ತದ ಸಂಬಂಧಗಳನ್ನು ಇಟ್ಟುಕೊಳ್ಳುವುದು ಸಹಜವೇ ಆಗಿದೆ. ಆದರೆ ಈ ಸಂಬಂಧವನ್ನು ಬೇರೆ ಬೇರೆ ರೀತಿಗಳಲ್ಲಿ ಮಾರುಕಟ್ಟೆಯ ಹೊರಗೆ ಮತ್ತು ಒಳಗೆ ವ್ಯಾಖ್ಯಾನಿಸಲಾಯಿತು. ಮುಸ್ಲಿಮ್‌ ಬೀಡಿ ಕಂಟ್ರಾಕ್ಟ್‌ದಾರ ಮತ್ತು ಬೀಡಿ ಕಟ್ಟುವ ಹಿಂದೂ ಮಹಿಳೆಯ ವಿಷಯದಲ್ಲಿ ನಾವು ಈಗಾಗಲೇ ಏನನ್ನು ಗಮನಿಸಿದ್ದೇವೋ ಅವೇ ಸಂಗತಿಗಳು ಇಲ್ಲಿ ಪುನರಾವರ್ತನೆಯಾದವು. ಇದು ಮೊಗವೀರ ಮತ್ತು ಮುಸ್ಲಿಮರ ನಡುವೆ ಒಂದು ಬಗೆಯ ಅನುಮಾನಾಸ್ಪದ ಸಂಬಂಧವನ್ನು ಹುಟ್ಟು ಹಾಕಿತು. ದಿ. ವಿಶುಕುಮಾರರವರು ಬರೆದ ಕಾದಂಬರಿ ‘ಕರಾವಳಿ’ಯಲ್ಲು ಇದು ಬಹಳ ಅದ್ಭುತವಾಗಿ ಚಿತ್ರಿತಗೊಂಡಿತು.[15] ಇದೇ ಕಾದಂಬರಿಯು ಸಿನಿಮಾವಾಗಿಯೂ ಪ್ರದರ್ಶನಗೊಂಡಿತು. ಆದರೆ ಈ ಸಿನಿಮಾ ಕರಾವಳಿಯಲ್ಲಿ ಪ್ರದರ್ಶನಗೊಳ್ಳದಂತೆ ಇಲ್ಲಿನ ಮೊಗವೀರರು ಅದರ ವಿರುದ್ಧ ಪ್ರತಿಭಟನೆ ಮಾಡಿದರು.

ಉಳಿದ ಎಲ್ಲ ಕ್ಷೇತ್ರಗಳಂತೆ ಸರಕಾರ ಮೀನುಗಾರಿಕಾ ಕ್ಷೇತ್ರದಲ್ಲೂ ಆಧುನಿಕ ಉಪಕರಣಗಳನ್ನು ತಂದುದರಿಂದ ಹಳೆ ಮಾದರಿಯ ಮೀನು ಹಿಡಿಯುವ ಕ್ರಮಗಳು ಹೊರಟು ಹೋದವು. ಯಾಂತ್ರೀಕರಿತ ಮೀನುಗಾರಿಕೆ ಬಂತು.[16] ಈ ಬದಲಾವಣೆಯ ಅತಿ ಹೆಚ್ಚಿನ ಲಾಭವನ್ನು ಪಡೆದವರೆಂದರೆ ಮುಸ್ಲಿಮರು. ಈ ವ್ಯಾಪಾರದ ಸ್ಪರ್ಧೆಯೂ ಬಹು ಮುಖ್ಯವಾಗಿ ಮುಸ್ಲಿಮರು ಮತ್ತು ಮೊಗವೀರರ ನಡುವೆ ಆಳವಾದ ಬಿರುಕನ್ನು ಮೂಡಿಸಿತು. ಈ ಎಲ್ಲಾ ಅಂಶಗಳನ್ನು ಇಲ್ಲಿ ಚರ್ಚಿಸಿದ ಉದ್ದೇಶ ಏನೆಂದರೆ ಸಂಘ ಪರಿವಾರದ ‘ಥಿಂಕ್ ಟ್ಯಾಂಕು’ಗಳು ಈ ಎಲ್ಲ ಸಂಗತಿಗಳನ್ನು ತತ್ವೀಕರಿಸಿ ಮತ್ತು ಹೀಗೆ ತತ್ವೀಕರಿಸುವಾಗ ಸಾಮಾಜಿಕ, ಆರ್ಥಿಕ ಆಯಾಮಗಳನ್ನು ಬಿಟ್ಟು ಕೇವಲ ಧಾರ್ಮಿಕವಾದ ಭಿನ್ನತೆಯನ್ನು ಮಾತ್ರ ಎತ್ತಿಹಿಡಿದು ಮುಸ್ಲಿಮ್ ದ್ವೇಷದ ಸಾಮಾಜಿಕ ವಾತಾವರಣವೊಂದನ್ನು ನಿರ್ಮಾಣ ಮಾಡಿದವು. ವ್ಯಾಪಾರ ನಿಮಿತ್ತದ ಈ ಸ್ಪರ್ಧೆ ಏನಿದೆ ಅದು ನಿನ್ನೆ-ಇಂದಿನ ಕತೆಯಲ್ಲ. ವಸಾಹತುಪೂರ್ವ ಕಾಲದಿಂದಲೂ ಅದಕ್ಕೊಂದು ದೊಡ್ಡ ಚರಿತ್ರೆ ಇದೆ. ಹಿಂದಿನಿಂದಲೂ ಮುಸ್ಲಿಮ್ ಮತ್ತು ಗೌಡಸಾರಸ್ವತ ಬ್ರಾಹ್ಮಣರ ನಡುವೆ ವ್ಯಾಪಾರ ನಿಮಿತ್ತದ ಸ್ಪರ್ಧೆಗಳಿದ್ದವು. ವಿಜಯನಗರದ ಅರಸರ ಕಾಲದಿಂದಲೂ ಪಶ್ಚಿಮ ಕರಾವಳಿಯ ಇಡಿಯ ವ್ಯಾಪಾರ-ವಹಿವಾಟನ್ನು ಮುಸ್ಲಿಮ್ ವ್ಯಾಪಾರಿಗಳು ನಿಯಂತ್ರಿಸುತ್ತಿದ್ದರು.[17] ಹಾಗೆಯೇ ವಸಾಹತು ಕಾಲದಲ್ಲಿ ಪೋರ್ಚುಗೀಸರ ಮತ್ತು ಮುಸ್ಲಿಮರ ನಡುವೆಯೂ ವ್ಯಾಪಾರ ಅಧಿಪತ್ಯದ ಕಾರಣಕ್ಕಾಗಿ ಸುದೀರ್ಘ ಸಂಘರ್ಷ ನಡೆದಿತ್ತು. ಆ ಸಂಘರ್ಷದಲ್ಲಿ ಪೋರ್ಚುಗೀಸರು ಮೇಲುಗೈ ಸಾಧಿಸಿದರು. ಆದರೆ ಪೋರ್ಚುಗೀಸರ ಗೆಲುವು ಹೆಚ್ಚು ಸಮಯ ಬಾಳಲಿಲ್ಲ. ಪೋರ್ಚುಗೀಸರ ಅಧಿಪತ್ಯವನ್ನು ಆರಂಭದಲ್ಲಿ ಭಾಗಶಃ ಡಚ್ಚರಿಗೆ ತದನಂತರ ಸಂಪೂರ್ಣವಾಗಿ ಬ್ರಿಟಿಷರಿಗೆ ಬಿಟ್ಟುಕೊಡಬೇಕಾಯಿತು.[18] ವ್ಯಾಪಾರದ ಹತೋಟಿಗೆ ಮೇಲ್‌ಸ್ತರದಲ್ಲಿ ನಡೆದ ಹೋರಾಟಗಳು ಪಶ್ಚಿಮ ಕರಾವಳಿಯಲ್ಲಿ ಸಕ್ರಿಯವಾಗಿದ್ದ ವ್ಯಾಪಾರಿ ಸಮುದಾಯಗಳ ಸ್ವರೂಪವನ್ನು ಬದಲಾಯಿಸಿದೆ. ರಾಜಕೀಯವಾಗಿ ಬ್ರಿಟಿಷರ ಹಿಡಿತ ಬಿಗಿಗೊಂಡಂತೆ ವ್ಯಾಪಾರದಲ್ಲಿ ಮುಸ್ಲಿಮರ ಹತೋಟಿ ನಿಧಾನವಾಗಿ ಕಡಿಮೆಯಾಗಿ ಗೌಡಸಾರಸ್ವತ ಬ್ರಾಹ್ಮಣರು ಈ ರಾಜಕೀಯ ಬದಲಾವಣೆಯ ಪೂರ್ಣ ಪ್ರಯೋಜನವನ್ನು ಪಡೆದುಕೊಂಡರು ವಸಾಹತು ಆಳ್ವಿಕೆಯ ಕಾಲ ಮತ್ತು ವಸಾಹತುಪೂರ್ವದ ಕಾಲದಲ್ಲಿ ಇಡಿ ವ್ಯಾಪಾರ ವಹಿವಾಟಿನ ಚಟುವಟಿಕೆಗಳು ಬಹಳ ನಿರ್ಬಂಧಿತವಾಗಿದ್ದವು. ಯಾವ ಸಮುದಾಯಕ್ಕೆ ಮನ್ನಣೆ ನೀಡಬೇಕು ಅಥವಾ ನೀಡಬಾರದು ಎನ್ನುವ ತೀರ್ಮಾನವನ್ನು ವಸಾಹತು ಆಡಳಿತ ಮಾಡುತ್ತಿತ್ತು. ವಸಾಹತು ಆಡಳಿತದೊಂದಿಗೆ ಉತ್ತಮ ಸಂಬಂಧ ಇರಿಸಿಕೊಳ್ಳುವ ಮೂಲಕ ವ್ಯಾಪಾರಿ ಸಮುದಾಯಗಳು ಮಾನ್ಯತೆ ಗಿಟ್ಟಿಸಬಹುದಿತ್ತು. ಆದರೆ ಸ್ವಾತಂತ್ರ‍್ಯ ನಂತರ ಪ್ರಜಾಪ್ರಭುತ್ವ ನೀತಿಗನುಸಾರ ಆಯ್ಕೆಯಾದ ಸರಕಾರಗಳು ವ್ಯಾಪಾರದ ನೀತಿ ನಿಯಮಗಳನ್ನು ರೂಪಿಸುತ್ತಿವೆ. ಈಗ ವ್ಯಾಪಾರಿ ಸಮುದಾಯಗಳು ಎರಡು ರೀತಿಯಲ್ಲಿ ತಮಗೆ ಪೂರಕವಾದ ವ್ಯಾಪಾರಿ ನೀತಿಗೆ ಪ್ರಯತ್ನಿಸಬಹುದು. ಒಂದು ಯಾವುದೋ ಬಗೆಯ ರಾಜಕೀಯ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡ ಸರಕಾರವನ್ನು ಮನವೊಲಿಸಿ ತಮ್ಮ ಹಿತಕ್ಕೆ ಪೂರಕವಾದ ವ್ಯಾಪಾರದ ನೀತಿಗಳನ್ನು ರೂಪಿಸಲು ಪ್ರಯತ್ನಿಸುವುದು. ಎರಡು, ರಾಜಕೀಯ ಪ್ರಕ್ರಿಯೆಯನ್ನೇ ಪ್ರಭಾವಿಸುವುದು. ಅಂದರೆ ತಮ್ಮ ಆಸಕ್ತಿಯನ್ನು ಪ್ರತಿನಿಧಿಸುವ ರಾಜಕೀಯ ಪಕ್ಷವನ್ನು ಕಟ್ಟುವುದಕ್ಕೆ ಮತ್ತು ಬೆಳೆಸುವುದಕ್ಕೆ ಸಕ್ರಿಯ ಬೆಂಬಲ ನೀಡುವುದು. ಪಕ್ಷ ಕಟ್ಟಿದ ಕೂಡಲೇ ರಾಜಕೀಯ ಶಕ್ತಿ ಬರುವುದಿಲ್ಲ. ಜನಸಾಮಾನ್ಯರು ಬೆಂಬಲಿಸಿದಾಗ ಮಾತ್ರ ರಾಜಕೀಯ ಶಕ್ತಿ ಪ್ರಾಪ್ತವಾಗುವುದು. ಜನ ಸಾಮಾನ್ಯರು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಬೇಕಾದರೆ ಆ ಪಕ್ಷ ಅವರ (ಜನಸಾಮಾನ್ಯರ) ಆಸಕ್ತಿಗಳನ್ನು ಪ್ರತಿನಿಧಿಕರಿಸುತ್ತದೆ ಎನ್ನುವ ಭರವಸೆ ಅವರಿಗೆ ಮೂಡಬೇಕು. ವ್ಯಾಪಾರಿಗಳ ಅಥವಾ ಮೇಲ್ವರ್ಗದ ಆಸಕ್ತಿಗಳನ್ನು ಪ್ರತಿನಿಧಿಕರಿಸಲೆಂದು ಹುಟ್ಟಿದ ಪಕ್ಷಕ್ಕೆ ಜನಸಾಮಾನ್ಯರ ಬೆಂಬಲ ಪಡೆಯಬೇಕಾದರೆ ಆ ಪಕ್ಷ ಪ್ರಾಮಾಣಿಕವಾಗಿ ಜನಸಾಮಾನ್ಯರ ಆಸಕ್ತಗಳನ್ನು ಪ್ರತಿನಿಧಿಕರಿಸಬೇಕು ಅಥವಾ ಇಡೀ ಚುನಾವಣ ಪ್ರಕ್ರಿಯೆಯನ್ನು ಆರ್ಥಿಕೇತರ ವಿಚಾರಗಳ ಮೇಲೆ ಕೇಂದ್ರೀಕರಿಸಬೇಕು. ಅಂದರೆ ನಿರ್ದಿಷ್ಟ ಪಕ್ಷ ಅಧಿಕಾರಕ್ಕೆ ಬಂದರೆ ಏನು ಮಾಡುತ್ತದೆ ಎನ್ನುವ ವಿಚಾರಕ್ಕಿಂತ ಹೆಚ್ಚು, ಜಾತಿ, ಧರ್ಮ ಇತ್ಯಾದಿಗಳ ನೆಲೆಯಲ್ಲಿ ಜನರ ಭಾವನೆಗಳನ್ನು ಕೆದಕಿ ಓಟು ಪಡೆಯಲು ಪ್ರಯತ್ನಿಸುವುದು. ಇಂತಹ ರಾಜಕೀಯಕ್ಕೆ (ಆರ್ಥಿಕ ಆಸಕ್ತಿಗಳನ್ನು ಮರೆಮಾಚಲು ಧರ್ಮದ ಪ್ರಶ್ನೆಯನ್ನು ಮುಂಚೂಣಿಗೆ ತರುವ) ಬೇಕಾಗಿರುವ ವಾತಾವರಣವನ್ನು ಕೋಮುವಾದ ಸೃಷ್ಟಿಸುತ್ತದೆ.

ಇದರ ಜೊತೆ ಜೊತೆಗೆ ೭೦-೮೦ರ ದಶಕಗಳಲ್ಲಿ ‘ಗಲ್ಫ್‌ ವಲಸೆ’ಗೆ ತೊಡಗಿದ ಕರಾವಳಿಯ ಬಹುತೇಕ ಕೆಳ ಜಾತಿಯ ಜನರು ಮತ್ತು ಮುಸ್ಲಿಮರು ಈ ಜಿಲ್ಲೆಯ ಆರ್ಥಿಕ ಸ್ಥಿತಿ ಮತ್ತು ಸಾಮಾಜಿಕ ಗತಿಯ ಬದಲಾವಣೆಗೂ ಒಂದು ರೀತಿಯಲ್ಲಿ ಕಾರಣರಾಗಿದ್ದಾರೆ.[19]

ಈ ವಲಸೆ ಇಲ್ಲಿ ತಂದ ಬದಲಾವಣೆ ಅದು ಭೂ ಸುಧಾರಣೆ ಮತ್ತು ಬೀಡಿ ಉದ್ಯಮಗಳು ತಂದ ಬದಲಾವಣೆಗಳಿಗಿಂತಲೂ ಹೆಚ್ಚು ಸಾಂಕೇತಿಕವಾದುದು. ಯಾರು ಗಲ್ಫ್‌ ದೇಶಗಳಲ್ಲಿ ಉದ್ಯೋಗದಲ್ಲಿರೋ ಅವರು ನಿಯತವಾಗಿ ಊರಿಗೆ ಕಳಿಸುತ್ತಿದ್ದ ಹಣ ಮತ್ತು ಅವರು ಊರಲ್ಲಿ ಕಟ್ಟಿಸುತ್ತಿದ್ದ ಮನೆಗಳು ಮತ್ತು ಅವರ ವ್ಯವಹಾರಗಳು ಆ ಜಾತಿಯ ಜನರಿಗೆ ಸಾಮಾನ್ಯವಾಗಿ ಸಲ್ಲುತ್ತಿದ್ದ ಸಾಮಾಜಿಕ ಸ್ಥಾನಕ್ಕೆ ‘ಮಾನ’ ಬರುವುದಕ್ಕೆ ಪೂರಕವಾಯಿತು. ಈ ಬದಲಾವಣೆಗೆ ದ.ಕ. ಜಿಲ್ಲೆಯ ಕೆಲವು ವೃತ್ತಿಪರ ತಾಂತ್ರಿಕ ಕೋರ್ಸುಗಳು ಸಹಾಯಕವಾಗಿ ಒದಗಿ ಬಂದವು. ಭರಿಸಲಾಗದ ಕ್ಯಾಪಿಟೇಶನ್ ಫೀಗಳಿಂದಾಗಿ ತಳಸ್ತರಕ್ಕೆ ಸೇರಿದ ಸಮುದಾಯಗಳ ವಿದ್ಯಾರ್ಥಿಗಳು ಮೆಡಿಕಲ್ ಇಂಜಿನಿಯರ್ ಕೋರ್ಸ್‌‌ಗಳನ್ನು ಮಾಡುವ ಆಸೆ ಕೈಬಿಟ್ಟು ಪಾಲಿಟೆಕ್ನಿಕ್, ಐ.ಟಿ.ಐ.ಗಳಲ್ಲಿ ಡಿಪ್ಲೋಮ ಮಾಡುವುದರಲ್ಲಿ ತೃಪ್ತರಾಗಬೇಕಾಗಿದೆ. ಆರಂಭದಲ್ಲಿ ಗಲ್ಫ್‌ ದೇಶಗಳಲ್ಲಿ ಟೈಲರ್‌ಗಳು, ಫಿಟ್ಟರ್‌ಗಳು, ಪ್ಲಂಬರ್‌ಗಳು ಇಲೆಕ್ಟ್ರೀಷಿಯನ್‌ಗಳು ಮೊದಲಾದವರಿಗೆ ಬೇಡಿಕೆ ಇದ್ದುದರಿಂದ ಈ ಹುಡುಗರು ಗಲ್ಫ್‌ ದೇಶಗಳಲ್ಲಿ ಯಶಸ್ವಿಯಾದರು. ಈ ಅವಕಾಶಗಳನ್ನು ಪಡೆದವರಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ತಳಸ್ತರದ ಹಿಂದು ಜನರೇ ಅಧಿಕರಾಗಿದ್ದರು.[20] ಗಲ್ಫ್‌ನಿಂದ ಊರಿಗೆ ಬಂದ ಈ ಹುಡುಗರು ಆಹಾರ, ಬಟ್ಟೆ, ಶಿಕ್ಷಣ, ಪ್ರವಾಸ, ಮನರಂಜನೆಗಳ ಮೇಲೆ ಮಾಡುವ ಕರ್ಚು ಭೂ ಖರೀದಿಗೆ, ಕಟ್ಟಡ ಕಟ್ಟುವುದಕ್ಕೆ, ಬಂಗಾರ ಖರೀದಿಸುವುದಕ್ಕೆ ಮಾಡಿದ ಹೂಡಿಕೆಗಳು ಕರಾವಳಿಯ ಪಾರಂಪರಿಕ ಸಾಮಾಜಿಕ ಸ್ಥಾನಮಾನಗಳಲ್ಲಿ ಸಣ್ಣಮಟ್ಟಿನ ಕಂಪನವನ್ನು ಹುಟ್ಟಿಸಿದವು. ಒಂದು ಕಾಲದಲ್ಲಿ ಸರಕಾರಿ ಶಾಲೆಗೆ ಸೇರುವುದೇ ದುಸ್ತರವಾಗಿದ್ದ ಮಕ್ಕಳು ಈಗ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಹೋಗತೊಡಗಿದರು. ಸಣ್ಣಪುಟ್ಟ ಮಂಗಳೂರು ಹಂಚಿನ ಮನೆಗಳ ಮಧ್ಯೆ ದೂರದಿಂದಲೇ ‘ಅದು ಗಲ್ಫ್‌ ದುಡ್ಡಿನಿಂದ’ ಕಟ್ಟಿಸಿದ ಮನೆಯೆಂದು ಗುರುತಿಸಬಹುದಾದ ಸುಂದರ ಮನೆಗಳು ಜಿಲ್ಲೆಯ ಎಲ್ಲ ಕಡೆ ಬಂದವು.[21] ಈ ಎಲ್ಲ ಬದಲಾವಣೆಗಳು ಮೇಲ್ಜಾತಿಗಳ ಜನರ ಯಜಮಾನ್ಯವನ್ನು ಪರಿಣಾಮಕಾರಿಯಾಗಿಯೇ ಚುಚ್ಚಿತು. ತಳಸ್ತರದ ಸಮುದಾಯಗಳಲ್ಲಿ ಆಗುತ್ತಿರುವ ಈ ಎಲ್ಲ ಬದಲಾವಣೆಗಳು ಜಿಲ್ಲೆಯ ಒಟ್ಟಾರೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಂಬಂಧಗಳನ್ನು ಗಾಢವಾಗಿ ಪ್ರಭಾವಿಸಿದೆ. ಆಯಾ ಕ್ಷೇತ್ರದ ಬದಲಾವಣೆಗೆ ಪ್ರತಿಕ್ರಿಯೆಯನ್ನು ಆಯಾ ಕ್ಷೇತ್ರದಲ್ಲಿ ನೀಡದೆ ಬೇರೆ ಕಡೆಗೆ ವರ್ಗಾಯಿಸುವುದು ನಮ್ಮ ಸಂಸ್ಕೃತಿಯ ಬಹುದೊಡ್ಡ ಕೊಡುಗೆ. ಜಿಲ್ಲೆಯಲ್ಲೂ ಹೆಚ್ಚು ಕಡಿಮೆ ಇದೇ ವಿಧಾನ ಅನುಸರಿಸಲಾಯಿತು. ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರದ ಪಲ್ಲಟಗಳಿಗೆ ಮೇಲ್ವರ್ಗ ಸಾಂಸ್ಕೃತಿಕ ಕ್ಷೇತ್ರದಲ್ಲಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿತು. ಮೇಲ್ವರ್ಗದ ಹಿತಾಸಕ್ತಿಯನ್ನು ಪ್ರತಿನಿಧೀಕರಿಸುವ ಸಂಘ ಪರಿವಾರ ಈ ಪರಿಸ್ಥಿತಿಯನ್ನು ಜಾಣತನದಿಂದ ನಿಭಾಯಿಸಿತು. ಸಂಘ ಪರಿವಾರದ ಆಶಯದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಶನಿ ಪೂಜೆಗಳು, ವರಮಹಾಲಕ್ಷ್ಮೀ ಪೂಜೆಗಳು ಆರಂಭಗೊಂಡವು. ಬಹುತೇಕ ಹಳ್ಳಿ ಮತ್ತು ಪೇಟೆಗಳಲ್ಲಿ ನಡೆದ ಈ ಆಚರಣೆಗಳಲ್ಲಿ ಪಾರಂಪರಿಕ ಸಾಮಾಜಿಕ ರಚನೆಯ ಮುಖ್ಯಸ್ಥನಾಗಿದ್ದ ಮೇಲ್ಜಾತಿಯ ಊರ ಹಿರಿಯ ಈ ಪೂಜಾ ಸಮಿತಿಗಳ ಗೌರವಾಧ್ಯಕ್ಷನಾಗಿಯೋ, ಅಧ್ಯಕ್ಷನಾಗಿಯೋ ಇರುತ್ತಿದ್ದ, ದುಡ್ಡು ಸಂಗ್ರಹಿಸುವುದಕ್ಕೆ ಆಧುನಿಕ ಕಾಲದಲ್ಲಿ ಸ್ಥಿತಿವಂತರಾಗಿರುವ ಕೆಳಜಾತಿಗಳ ಪಾದರಸದಂತಹ ಹುಡುಗರು ಕಾರ್ಯದರ್ಶಿಗಳಾಗುತ್ತಿದ್ದರು. ಇದರಿಂದ ಸಂಘ ಪರಿವಾರ ಮೂರು ಉದ್ದೇಶಗಳನ್ನು ಈಡೇರಿಸಿತು. ಒಂದೆಡೆಯಿಂದ ಅದು ಕೆಳಜಾತಿಗಳು ಮೇಲ್ಜಾತಿಗಳ ಜೊತೆ ನಡೆಸಬಹುದಾಗಿದ್ದ ಸ್ಪರ್ಧೆಯ ತೀವ್ರತೆಯನ್ನು ಕಡಿಮೆಗೊಳಿಸಿತು. ಇನ್ನೊಂದೆಡೆಯಿಂದ ಮೇಲ್ಜಾತಿಗಳ ಯಜಮಾನ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಂಡಿತು. ಮೂರನೆಯದಾಗಿ ಸಾಕಷ್ಟು ಆಂತರಿಕ ಭಿನ್ನಾಭಿಪ್ರಾಯಗಳುಳ್ಳ, ಪ್ರತಿಷೇಧಗಳುಳ್ಳ ಈ ಎರಡೂ ಸಮುದಾಯಗಳ ನಡುವೆ ಹಿಂದುತ್ವದ ಮೇಲು ಮುಸುಕನ್ನು ಹಾಕಿ ಅನ್ಯನಾದ ಮುಸ್ಲಿಮ್ ವಿರುದ್ಧ ಧಾರ್ಮಿಕ ಧ್ರುವೀಕರಣವಾಗುವಂತೆ ಮಾಡಿತು.

 

[1]ಎ. ವಹಾಬ್ ದೊಡ್ಡಮನೆ, ಮುಸ್ಲಿಮ್ಸ್‌ ಇನ್ ದಕ್ಷಿಣ ಕನ್ನಡ, ಮಂಗಳೂರು: ಗ್ರೀನ್ ವರ್ಡ್ಸ್ ಪಬ್ಲಿಕೇಶನ್ಸ್, ೧೯೯೩

[2]೧೯೮೪ ರಲ್ಲಿ ಜಿಲ್ಲೆಯ ಒಟ್ಟು ಜನಸಂಖ್ಯೆ ೨೪೨೩೩೧೫ ಇರುವಾಗ ೩೦೯೨೫೧ (ಶೇ. ೧೨.೭೬) ಮುಸ್ಲಿಮರು ಮತ್ತು ೨೦೧೧೦೦ (ಶೇ., ೮.೨೯) ಕ್ರಿಶ್ಚಿಯನ್ನರು ಇದ್ದರು. ಗವರ್ನ್‌‌ಮೆಂಟ್ ಕರ್ನಾಟಕ, ರಿಪೋರ್ಟ್‌ ಆಫ್ ದಿ ಸೆಕೆಂಡ್ ಬೇಕ್‌ವರ್ಡ್‌ ಕ್ಲಾಸಸ್ ಕಮಿಶನ್, ವಾಲ್ಯೂಮ್‌ ೩, ಬೆಂಗಳೂರು: ೦೯೮೬, ಪುಟ ೫೪-೫೫.

[3]ಕೃಷಿ ಉತ್ಪನ್ನಗಳನ್ನು ತಮ್ಮ ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುವ ದೃಷ್ಟಿಯಿಂದ ವಸಾಹತು ಸರಕಾರ ಸ್ಥಳೀಯ ಅರ್ಥವ್ಯವಸ್ಥೆಯನ್ನು ವಸಾಹತು ಮಾರುಕಟ್ಟೆಯೊಂದಿಗೆ ಬಹು ಹಿಂದೆಯೇ ಜೋಡಿಸಿಕೊಂಡಿದೆ. ಈ ಉದ್ದೇಶಗಳಿಗಾಗಿ ಉಪ್ಪು ಮತ್ತು ತಂಬಾಕು ಉತ್ಪಾದನೆಗಳ ಮೇಲೆ ಏಕಸ್ವಾಮ್ಯತೆಯನ್ನು ವಸಾಹತು ಸರಕಾರ ಘೋಷಿಸಿತ್ತು, ವ್ಯಾಪಾರ ವಹಿವಾಟುಗಳ ಮೇಲೆ ಸುಂಕ ವಿಧಿಸಲು ಆರಂಭಿಸಿತು. ವ್ಯಾಪಾರ ವಹಿವಾಟುಗಳನ್ನು ಸುಸೂತ್ರಗೊಳಿಸುವ ದೃಷ್ಟಿಯಿಂದ ಕೋರ್ಟ್‌ ಕಚೇರಿಗಳನ್ನು ಸ್ಥಾಪಿಸಿತು. ಹೆಚ್ಚಿನ ವಿವರಗಳಿಗೆ ಮಾಲತಿ ಕೆ. ಮೂರ್ತಿಯವರ ‘ಟ್ರೇಡ್ ಅಂಡ್ ಕೋಮರ್ಸ್‌ ಇನ್ ಕಲೋನಿಯಲ್ ಸೌತ್ ಕೆನರಾ (೧೭೯೯-೧೮೬೨) (ಮಂಗಳೂರು ವಿಶ್ವವಿದ್ಯಾಲಯದ ಚರಿತ್ರೆ ವಿಭಾಗಕ್ಕೆ ಸಲ್ಲಿಸಿದ ಅಪ್ರಕಟಿತ ಪಿಹೆಚ್‌.ಡಿ. ಮಹಾಪ್ರಬಂಧ, ೧೯೯೧) ಮತ್ತು ಎನ್‌ ಶ್ಯಾಮ್ ಭಟ್, ಸ್ಟಡಿ ಇನ್ ಕಲೋನಿಯಲ್ ಎಡ್ಮಿನಿಸ್ಟ್ರೇಶನ್‌ ಅಂಡ್ ರೀಜನಲ್ ರೆಸ್ಪಾನ್ಸ್ (ಮಂಗಳೂರು ವಿಶ್ವವಿದ್ಯಾಲಯ ಚರಿತ್ರೆ ವಿಭಾಗಕ್ಕೆ ಸಲ್ಲಿಸಿದ ಅಪ್ರಕಟಿತ ಪಿಹೆಚ್.ಡಿ. ಮಹಾ ಪ್ರಬಂಧ, ೧೯೮೭)ಗಳನ್ನು ನೋಡಬಹುದು.

[4]ರಾಜಕೀಯ ಕ್ಷೇತ್ರದಲ್ಲಾದ ಬದಲಾವಣೆಗಳ ಪ್ರತಿಬಿಂಬವನ್ನು ಸಾಂಸ್ಕೃತಿಕ ಕ್ಷೇತ್ರದಲ್ಲೂ ಕಾಣಬಹುದು. ವಸಾಹತು ಅಧಿಕಾರ ಪ್ರವೇಶ ಮಾಡುವ ಮುನ್ನ ಆಯಾಮ ಪ್ರದೇಶದ (ಸೀಮೆ, ಮಾಗಣೆ, ಗುತ್ತು) ಭೂತಗಳು ಆಯಾಯ ಪ್ರದೇಶದ ಸಾಮಾಜಿಕ ಆರ್ಥಿಕ ಜಗಳಗಳನ್ನು ಪರಿಹರಿಸುವ ತೀರ್ಪುಗಳನ್ನು ನೀಡುತ್ತಿದ್ದವು. ವಸಾಹತು ಆಡಳಿತದ ಕೋರ್ಟ್‌ ಕಚೇರಿಗಳು ಆರಂಭವಾದ ನಂತರ ಭೂತಗಳು ಮುಖ್ಯವಾಗಿ ಭೂವಿವಾದಗಳ ಮೇಲೆ ತೀರ್ಪು ಕೊಡುವುದನ್ನು ಕಡಿಮೆ ಮಾಡಿದವು. ಚಿನ್ನಪ್ಪ ಗೌಡರ, ‘ದಿ ಡೈನಾಮಿಕ್ಸ್‌ ಆಪ್ ಭೂತ ವರ್ಶಿಪ್‌’, ಎನ್ನುವ ಲೇಖನ ಸಂಪಾದಕೀಯ ಸಮಿತಿ ಸಂಪಾದಿಸಿದ ಪರ್‌ಸ್ಪೆಕ್ವೀವ್ಸ್‌ ಆನ್‌ ದಕ್ಷಿಣ ಕನ್ನಡ ಆಂಡ್ ಕೊಡಗು-ಮಂಗಳೂರು ಯುನಿವರ್ಸಿಟಿ ಡೆಸಿನಿಯಲ್‌ ವಾಲ್ಯೂಮ್‌, ಕೋಣಾಜೆ: ಮಂಗಳ ಗಂಗೋತ್ರಿ, ೧೯೯೧, ಪುಟ ೧೧-೨೧.

[5]ಬಾಶಲ್ ಮಿಶನ್ ಇಂಡಸ್ಟ್ರೀಸ್‌ನ ಜನರಲ್ ಏಜಂಟರಾಗಿದ್ದ ಹೆಚ್ ಹಾಪ್‌ಮನ್ ಪ್ರಕಾರ, ‘ಜಾತಿ ಚೌಕಟ್ಟುಗಳು ತುಂಬಾ ಬಿಗಿಯಾಗಿದ್ದವು. ತಮ್ಮ ಜಾತಿ ಬಿಟ್ಟು ಕ್ರಿಶ್ಚಿಯನ್ ಧರ್ಮಕ್ಕೆ ಸೇರುವವರು ಹಲವಾರು ಸಂಗತಿಗಳನ್ನು ಕಳೆದುಕೊಳ್ಳಬೇಕಿತ್ತು. ಆದುದರಿಂದ ಮತಾಂತರಗೊಂಡವರಿಗೆ ಬದಲೀ ಉದ್ಯೋಗ ಮತ್ತು ಆದಾಯದ ಮೂಲಗಳನ್ನು ಕಲ್ಪಿಸುವುದು ಕೂಡ ಮಿಶನರಿಗಳ ಜವಾಬ್ದಾರಿಯಾಗಿತ್ತು’. (ಹೆಚ್‌ ಹಾಪ್‌ಮನ್‌, ದಿ ಬಾಶಲ್‌ ಮೆಶಿನ್ ಇಂಡಸ್ಟ್ರೀಸ್, ಮಂಗಳೂರು: ಬಾಶೆಲ್ ಮಿಶನ್‌ ಪ್ರೆಸ್, ೧೯೧೩, ಪುಟ ೪)

[6]ಪಿ.ಕೆ.ನಾರಾಯಣ, ದಕ್ಷಿಣ ಕನ್ನಡದಲ್ಲಿ ಸ್ವಾತಂತ್ರ‍್ಯ ಹೋರಾಟ, ಮಂಗಳೂರು ಕಾರ್ನಾಡ್ ಸದಾಶಿವರಾವ್ ಸ್ಮಾರಕ ಟ್ರಸ್ಟ್, ೧೯೮೧, ಪುಟ ೩೦-೪೦ ಮತ್ತು ಶಿವರಾಮ ಪಡಿಕ್ಕಲ್‌, ‘ಸಮ್‌ ಮೂವ್‌ಮೆಂಟ್ಸ್‌ ಇನ್ ದಿ ಹಿಸ್ಟರಿ ಆಫ್ ಕನ್ನಡ ನಾವೆಲ್ ವಿದ್ ಸ್ಪೆಷಲ್ ರೆಪರೆನ್ಸ್‌ಟು ದಕ್ಷಿಣ ಕನ್ನಡ’, ಸಂಪಾದಕೀಯ ಮಂಡಳಿ ಸಂಪಾದಿಸಿದ, ಪರ್‌ಸ್ಪೆಕ್ಟೀವ್ಸ್‌ ಆನ್ ದಕ್ಷಿಣ ಕನ್ನಡ ಅಂಡ್‌ ಕೊಡಗು, ಪುಟ ೩೩-೪೦

[7]ಎ. ಶ್ರೀಧರ, ದಿ ಕಾಂಗ್ರೆಸ್ ಪಾರ್ಟಿ ಇನ್ ದಕ್ಷಿಣ ಕನ್ನಡ – ಆಫ್ಟರ್ ಇಂಡಿಪೆಂಡೆನ್ಸ್, ಮಂಗಳೂರು ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರ ವಿಭಾಗಕ್ಕೆ ಸಲ್ಲಿಸಿದ ಅಪ್ರಕಟಿತ ಎಂಫಿಲ್‌ ಪ್ರಬಂಧ, ೧೯೯೮

[8]ಬಿ. ಶರ್ಮಿಲ ರೈ, ಬಂಟ್ಸ್ ಆಫ್ ದಕ್ಷಿಣ ಕನ್ನಡ ಅಂಡ್ ದಿಯರ್ ಪೊಲಿಟಿಕಲ್ ಪಾರ್ಟಿಸಿಪೇಶನ್, ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಅಪ್ರಕಟಿತ ಎಂಫಿಲ್ ಪ್ರಬಂಧ, ೧೯೮೯.

[9]ಎ. ಶ್ರೀಧರ, ದಿ ಕಾಂಗ್ರೆಸ್ ಪಾರ್ಟಿ ಇನ್ ದಕ್ಷಿಣ ಕನ್ನಡ, ಪುಟ ೧೭೫-೧೯೨

[10]ಆ ಸಂದರ್ಭದ ರಾಜಕೀಯ ಹಾಗೂ ಸಾಂಸ್ಕೃತಿಕ ಲೋಕದ ವ್ಯವಹಾರಗಳ ಮೇಲೆ ಬೆಳಕು ಚೆಲ್ಲುವ ಅಧ್ಯಯನಗಳ ಹಿನ್ನೆಲೆಯಲ್ಲಿ ಮೇಲಿನ ತೀರ್ಮಾನಕ್ಕೆ ಬರಬಹುದು. ಎ. ಶ್ರೀಧರ ಅವರ, ದಿ ಕಾಂಗ್ರೆಸ್ ಪಾರ್ಟಿ ಇನ್ ದಕ್ಷಿಣ ಕನ್ನಡ, ಪುಟ ೪೮-೪೯, ಶಿವರಾಮ ಪಡಿಕ್ಕಲ್ ಅವರ ಸಮ್‌ ಮೂವ್‌ಮೆಂಟ್ಸ್‌ ಇನ್ ದಿ ಹಿಸ್ಟರಿ ಆಫ್ ಕನ್ನಡ ನಾವೆಲ್ಸ್, ಪುಟ ೩೩-೪೦, ಪಿ.ಸಿ. ವಾಸುದೇವ ಕಾಮತ್, ‘ವಿದ್ಯಾಧಾಯಿನಿ ಹಿರಿಯ ಪ್ರಾಥಮಿಕ ಶಾಲೆ’, ಅಮೃತಾಜತ, ಶಾಲೆಯ ಐವತ್ತನೇ ವರ್ಷ ತುಂಬಿದ ಸಂದರ್ಭದಲ್ಲಿ ಹಿಂದು ವಿಧ್ಯಾದಾಯಿನಿ ಸಂಘ, ಸುರತ್ಕಲ್ ಹೊರತಂದ ಪತ್ರಿಕೆ, ೧೯೯೨ ಇತ್ಯಾದಿ ಬರಹಗಳನ್ನು ನೋಡಬಹುದು.

[11]ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭೂಸುಧಾರಣೆಯ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಜೇಮ್ಸ್‌ಮೇನರ್ ಅವರ, ‘ಪ್ರಾಗ್‌ಮೆಟಿಕ್‌ ಪ್ರೊಗ್ರೆಸಿವ್ ಇನ್ ರೀಜನಲ್ ಪೊಲಿಟಿಕ್ಸ್ – ದಿ ಕೇಸ್ ಸ್ಟಡಿ ಆಫ್ ದೇವರಾಜ್ ಅರಸ್, ‘ಎಕಾನಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ,ವಾಲ್ಯೂಂ. ೧೫, ನಂ.೫, ೬ ಮತ್ತು ೭, ಎನ್ವಲ್‌ ನಂಬರ್‌, ೧೯೮೦, ಪುಟ ೨೦೧-೨೧೩ ನೋಡಬಹುದು. ಭೂಸುಧಾರಣ ಮಸೂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯಗತ ಗೊಂಡಿರುವ ವಿವರಗಳನ್ನು ಚಂದ್ರಶೇಖರ ದಾಮ್ಲೆ ಅವರ, ‘ಇಂಪೇಕ್ಟ್ ಆಫ್ ಟೆನೆನ್ಸಿ ಲೆಜಿಸ್ಲೇಶನ್ ಆಂಡ್‌ ಚೇಂಜಿಂಗ್ ಅಗ್ರೇರಿಯನ್‌ ರಿಲೇಶನ್ಸ್-ಎ ಕೇಸ್ ಆಫ್ ದಕ್ಷಿಣ ಕನ್ನಡ ಡಿಸ್ಟ್ರೀಕ್ಟ್, ಕರ್ನಾಟಕ’, (ಸೋಶಿಯಲ್ ಸೈಯಿಂಟಿಸ್ಟ್, ವಾಲ್ಯೂಮ್, ೧೭, ನಂ.೧೧-೧೨, ನವೆಂಬರ್-ಡಿಸೆಂಬರ್ ೧೯೮೯, ಪುಟ ೮೩-೯೭) ಎನ್ನುವ ಲೇಖನದಲ್ಲಿ ನೋಡಬಹುದು.

[12]ಭೂಸುಧಾರಣ ಮಸೂದೆಯ ಜತೆಗೆ ಹಿಂದುಳಿದ ವರ್ಗಗಳ ಬದುಕನ್ನು ಸುಧಾರಿಸಲು ದೇವರಾಜ್ ಅರಸ್ ಕೈಗೊಂಡ ಹಲವಾರು ಇತರ ಕಾರ್ಯಕ್ರಮಗಳ ಪಾತ್ರನೂ ಇದೆ. ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿ ಅದಕ್ಕೆ ಎಲ್.ಜಿ. ಹಾವನೂರು ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ಹಾವನೂರು ಆಯೋಗ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಹಿಂದುಳಿದ ವರ್ಗಗಳ ಶೈಕ್ಷಣಿಕ ಸುಧಾರಣೆಗಾಗಿ ಫೀ ಕಡಿತ, ಉಚಿತ ವಸತಿ ನಿಲಯ, ಉಚಿತ ಪುಸ್ತಕ ಇತ್ಯಾದಿ ಸವಲತ್ತುಗಳನ್ನು ನೀಡಬೇಕೆಂದು ಸಲಹೆ ನೀಡಿತು. ಭೂಸುಧಾರಣೆಯ ಜತೆಗೆ ನಡೆದ ಶೈಕ್ಷಣಿಕ ಸುಧಾರಣೆಯ ಕಾರ್ಯಕ್ರಮಗಳು ಬಹುತೇಕ ಹಿಂದುಳಿದ ವರ್ಗಗಳಿಗೆ ಅನುಕೂಲವಾಗಿವೆ. ಹೆಚ್ಚಿನ ವಿವರಗಳಿಗೆ ಜೆ.ಎಸ್. ಸದಾನಂದ ಅವರ, ‘ಶ್ರೀ ದೇವರಾಜ್ ಅರಸು – ಹಿಂದುಳಿದ ವರ್ಗಗಳ ಸಂಘಟನೆ ಮತ್ತು ಹಾವನೂರು ವರದಿ’, ಅರಿವು ಬರಹ, ನಂ.೭, ೧೯೯೪, ಪುಟ ೩೮-೬೦ ನೋಡಬಹುದು.

[13]ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಹೆಚ್ಚಿನ ವಿವರಗಳಿಗೆ ರೆಹಮಾನ್ ಖಾನ್ ಅವರ, ರಿಪೋರ್ಟ್ ಆಫ್ ಹೈಪವರ್ ಕಮಿಟಿ ಆನ್ ಸೋಶಿಯೋ ಎಕಾನಮಿಕ್ ಅಂಡ್ ಎಜುಕೇಶನಲ್ ಸರ್ವೇ-೧೯೯೪ ಆಫ್ ರಿಲೀಜಿಯಸ್ ಮೈನಾರಿಟೀಸ್ ಇನ್ ಕರ್ನಾಟಕ, (ಬೆಂಗಳೂರು:ಕರ್ನಾಟಕ ಸ್ಟೇಟ್‌ ಮೈನಾರಿಟೀಸ್ ಕಮಿಶನ್, ೧೯೯೫)ವನ್ನು ನೋಡಬಹುದು.

[14]ಮುಜಾಫರ್ ಆಸಾದಿ, ಕಮ್ಯುನಲ್ ವಾಯಿಲೆನ್ಸ್, ಪುಟ ೪೪೬-೪೪೮

[15]ವಿಶುಕುಮಾರ್, ಕರಾವಳಿ, ಬೆಂಗಳೂರು:ಡೈರೆಕ್ಟರೇಟ್ ಆಫ್ ಕನ್ನಡ ಆಂಡ್ ಕಲ್ಚರ್, ೧೯೮೫

[16]ಕೆ.ವಿ.ಎಮ್. ವಾರಂಬಳ್ಳಿ, ಮೆಕನೈಸ್ಡ್‌ ಫಿಶಿಂಗ್ ಇನ್ ಕೋಸ್ಟಲ್ ಕರ್ನಾಟಕ – ಎ ಸ್ಟಡಿ ಆಫ್ ಇಟ್ಸ್‌ ಇಂಪೇಕ್ಟ್ ಆನ್ ಫಿಶರ್‌ಮೆನ್ ಹೌಸ್‌ಹೋಲ್ಡ್ಸ್, ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಅಪ್ರಕಟಿತ ಮಹಾಪ್ರಬಂಧ, ೧೯೯೩

[17]ಕೆ.ವಿ.ರಮೇಶ್, ಹಿಸ್ಟರಿ ಆಫ್ ದಕ್ಷಿಣ ಕನ್ನಡ, ಪುಟ ೬೪-೭೮

[18]ಸ್ಟರಕ್, ಮೆಡ್ರಾಸ್ ಡಿಸ್ಟ್ರಿಕ್ಟ್ ಮೇನ್ವಲ್, ಪುಟ ೧೩೪-೧೯೧ ಮತ್ತು ಎಫ್‌ ಬುಖಾನನ್, ಜರ್ನಿ ಪ್ರೊಮ್ ಮೆಡ್ರಾಸ್ ಥ್ರೋ ದಿ ಕಂಟ್ರೀಸ್‌ ಆಫ್ ಮೈಸೂರು, ಕೆನರಾ ಆಂಡ್ ಮಲಬಾರ್, ವಾಲ್ಯೂಂ, ೧, ಮೆಡ್ರಾಸ್, ೧೮೧೧

[19]ವಾಲ್ಟರ್ ಡಿ ಸೋಜ, ಗಲ್ಫ್‌ ಮೈಗ್ರೇಶನ್ ಆಂಡ್ ಇಟ್ಸ್‌ ಸೋಶಿಯೋ ಎಕನಾಮಿಕ್ ಇಂಪೇಕ್ಟ್, ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗಕ್ಕೆ ಸಲ್ಲಿಸಿದ ಅಪ್ರಕಟಿತ ಪಿಹೆಚ್‌.ಡಿ. ಪ್ರಬಂಧ, ೨೦೦೪

[20]ವಾಲ್ಟರ್ ಡಿ ಸೋಜ, ಗಲ್ಫ್‌ ಮೈಗ್ರೇಶನ್ ಆಂಡ್ ಇಟ್ಸ್‌ ಸೋಶಿಯೋ ಎಕನಾಮಿಕ್ ಇಂಪೇಕ್ಟ್, ಪುಟ ೧೫೨-೧೭೮

[21]ವಾಲ್ಟರ್ ಡಿ ಸೋಜ, ಗಲ್ಫ್‌ ಮೈಗ್ರೇಶನ್ ಆಂಡ್ ಇಟ್ಸ್‌ ಸೋಶಿಯೋ ಎಕನಾಮಿಕ್ ಇಂಪೇಕ್ಟ್, ಪುಟ ೧೮೦-೨೨೪