ಭಾಗ ೧

‘ಸ್ವ’ ಮತ್ತು ‘ಅನ್ಯ’ದ ಕಲ್ಪನೆಗಳನ್ನು ಕಟ್ಟಿಕೊಳ್ಳಲು ಬಳಕೆಯಾಗುವ ಗುರುತುಗಳು (ಐಡೆಂಟಿಟಿ) ಕಾಲಕಾಲಕ್ಕೆ ಬದಲಾಗುತ್ತಿವೆ ಎನ್ನುವ ಗ್ರಹಿಕೆಯ ಹಿನ್ನೆಲೆಯಲ್ಲಿ ವಸಾಹತು ಪೂರ್ವದ ಸಾಮಾಜಿಕ ವಿಂಗಡನೆಗಳನ್ನು ಅರ್ಥಮಾಡಿಕೊಳ್ಳಲು ಲೇಖನದ ಈ ಭಾಗದಲ್ಲಿ ಪ್ರಯತ್ನಿಸಲಾಗಿದೆ. ಸುಮಾರು ಎಪ್ಪತ್ತರ ದಶಕದವರೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಸ್ವ’ ಮತ್ತು ‘ಅನ್ಯ’ದ ಕಲ್ಪನೆಯನ್ನು ಜಾತಿ ನೆಲೆಯಲ್ಲಿ ಕಟ್ಟಿಕೊಳ್ಳಲಾಗುತ್ತಿತ್ತು. ಸಮಾಜವನ್ನು ಜಾತಿಯ ಗೆರೆಗಳಲ್ಲಿ ಗೀಟು ಹಾಕಿ ಪ್ರತ್ಯ-ಪ್ರತ್ಯೇಕವಾಗಿ ಮೇಲ್ಜಾತಿ-ಕೆಳಜಾತಿ ಎಂದು ನೋಡಲಾಗುತ್ತಿತ್ತು. ಮೇಲ್ಜಾತಿ-ಕೆಳಜಾತಿಗಳೆನ್ನುವ ವಿಂಗಡನೆ ಸಂಕಥನದ ಕೊಡುಗೆಯೇ ಅಥವಾ ಅಂದಿನ ಸಮಾಜೋ ಆರ್ಥಿಕ ಪರಿಸ್ಥಿತಿಯ ಪಾತ್ರನೂ ಇದೆಯೇ ಎಂದು ಈ ಭಾಗದಲ್ಲಿ ಪರೀಕ್ಷಿಸಲಾಗುವುದು. ದಕ್ಷಿಣ ಕನ್ನಡದ ಪಾರಂಪರಿಕ ಸಮಾಜೋ-ಆರ್ಥಿಕ ಸಂರಚನೆ ಉಳಿದ ಜಿಲ್ಲೆಗಳ ಸಂರಚನೆಗಿಂತ ಬಹಳ ವ್ಯತ್ಯಾಸಗಳನ್ನೇನೂ ಹೊಂದಿಲ್ಲ. ಇಲ್ಲಿಯ ಸಾಮಾಜಿಕ ಸಂರಚನೆಯ ಮುಖ್ಯ ಲಕ್ಷಣಗಳೆಂದರೆ ಸಮಾಜದೊಳಗೆ ಬದುಕುತ್ತಿರುವ ಭಿನ್ನ ಭಿನ್ನ ಮತ ಧರ್ಮಾವಲಂಭಿಗಳಾದ ಜನರು, ಮತಾಂತರಗೊಂಡ ಜನರು ಮತ್ತು ಮತಾಂತರ ಧರ್ಮದಲ್ಲೂ ಪರಕೀಯರಾಗಿ ಬದುಕುವ ಜನರೂ ಈ ಪ್ರದೇಶದಲ್ಲಿ ಕಂಡುಬರುತ್ತಾರೆ. ೧೮೯೧ ರಲ್ಲಿ ನಡೆಸಿದ ಜನಗಣತಿಯಂತೆ ಈ ಪ್ರದೇಶದ ಜನಸಂಖ್ಯೆ ಶೇಕಡಾವಾರು ಪ್ರಮಾಣ ಹೀಗಿದೆ. ೮೧.೬೮% ಹಿಂದೂಗಳು, ೧೦.೬೦% ಮುಸ್ಲಿಮರು, ೦೬.೭೫% ಕ್ರಿಶ್ಚಯನ್ನರು ಮತ್ತು ೧% ಗಿಂತಲೂ ಕಡಿಮೆ ಇರುವ ಜೈನರು.[1] ಹಿಂದೂ ಧರ್ಮದ ಜನಸಂಖ್ಯೆಯನ್ನು ಜಾತಿವಾರು ಆಗಿ ನೋಡುವುದಾದಲ್ಲಿ ೧೬.೬೪% ರಷ್ಟು ಬಿಲ್ಲವರು, ೧೪.೭೩% ರಷ್ಟು ಹೊಲೆಯರು, ೧೦.೪೯%ರಷ್ಟು ಬಂಟರು, ೯.೧೯% ರಷ್ಟು ಬ್ರಾಹ್ಮಣರು, ೪.೧೨% ರಷ್ಟು ಗೌಡರು, ೩.೭೨% ರಷ್ಟು ಮೊಗವೀರರು, ೨.೬೩% ರಷ್ಟು ಕುಂಬಾರರು, ೨.೫೦% ರಷ್ಟು ದೇವಾಡಿಗರು, ೨.೪೮% ರಷ್ಟು ಮರಾಠಿಗರು, ೧.೪೭% ರಷ್ಟು ನಾಯರ್‌ಗಳು, ೧.೧೨% ರಷ್ಟು ಗಾಣಿಗರು, ೦.೯೪% ರಷ್ಟು ಅಗಸರು, ೦.೯೦% ರಷ್ಟು ದೇವಾಂಗರು, ೦.೪೪% ರಷ್ಟು ಹಜಾಮರು, ೦.೨೨% ರಷ್ಟು ಸಮಗಾರರು ಮತ್ತು ೪.೭೩% ರಷ್ಟು ಇತರರು ಇದ್ದರು.[2]

ಕೃಷಿ ಈ ಪ್ರದೇಶದ ಬಹುಮುಖ್ಯ ಆರ್ಥಿಕ ಚಟುವಟಿಕೆ. ಇಲ್ಲಿಯ ಬಹುಸಂಖ್ಯಾತ ವರ್ಗ ಅಂದರೆ ಅಂದಾಜು ೬,೭೬,೨೫೦ ಮಂದಿ ಕೃಷಿ ಕ್ಷೇತ್ರದ ಮೇಲೆ ಅವಲಂಭಿತರಾಗಿದ್ದರು. ಈ ವರ್ಗದಲ್ಲಿ ಜಮೀನ್ದಾರರು, ಒಕ್ಕಲುತನ ಮಾಡುವವರು ಮತ್ತು ಕೇವಲ ಕೃಷಿ ಕಾರ್ಮಿಕರು ಇದ್ದರು. ಕೃಷಿ ಮಾಡುವ ಮತ್ತು ಮಾಡದ ಭೂಮಾಲೀಕರ ಸಂಖ್ಯೆ ಸುಮಾರು ೧೭೧೦೦೦ ಇತ್ತು. ೪,೫೦,೦೯೮ ಮಂದಿ ಒಕ್ಕಲುತನ ಮಾಡುವವರು ಮತ್ತು ಕೃಷಿ ಕಾರ್ಮಿಕರು ಇದ್ದರು.[3] ಇವರಲ್ಲಿ ಬ್ರಾಹ್ಮಣರು, ಬಂಟರು ಮತ್ತು ಜೈನರಲ್ಲಿ ಬಹುತೇಕರು ಭೂಮಿ ಹೊಂದಿದ್ದರು.[4] ಆ ಕಾರಣದಿಂದಾಗಿ ಬಹಳ ಪ್ರಭಾವಶಾಲಿಗಳಾಗಿ ಇತರ ಸಮುದಾಯದವರನ್ನು ತಮ್ಮ ನಿಯಂತ್ರಣದಲ್ಲಿರಿಸಿಕೊಂಡಿದ್ದರು. ಒಟ್ಟು ಜನಸಂಖ್ಯೆಯಲ್ಲಿ ಎರಡನೆಯವರಾಗಿರುವ ಪರಿಶಿಷ್ಟ ಜಾತಿಗೆ ಸೇರಿದ ಜನರು ಇಲ್ಲಿ ಕೃಷಿ ಕಾರ್ಮಿಕರಾಗಿದ್ದಾರೆ. ಜನಸಂಖ್ಯೆಯಲ್ಲಿ ಮೊದಲಿಗರಾಗಿರುವ ಬಿಲ್ಲವರು ಮತ್ತು ಇತರ ಹಿಂದುಳಿದ ಜಾತಿಗಳ ಜನರು ಇಲ್ಲಿ (ಗೇಣಿ ಅಥವಾ ಒಕ್ಕಲುತನದ ಭೂಮಿಯಲ್ಲಿ) ಕೃಷಿಯೊಂದಿಗೆ ತಮ್ಮ ತಮ್ಮ ಕುಲಕಸುಬುಗಳಲ್ಲಿ ತೊಡಗಿಸಿಕೊಂಡಿದ್ದರು. ಇಲ್ಲಿ ೧೦.೯೦% ರಷ್ಟು ಬಾಹುಳ್ಯದಲ್ಲಿ ಮುಸ್ಲಿಮ್ ಜನಸಂಖ್ಯೆ ಇದ್ದರೂ ಅದು ಮೊನ್ನೆ ಮೊನ್ನೆಯವರೆಗೆ ಹಿಂದೂ ಮುಸ್ಲಿಮ್ ಎಂಬ ಬಣಗಳಾಗಿ ರೂಪುಗೊಂಡಿರಲಿಲ್ಲ. ಬದಲಿಗೆ ಒಟ್ಟಾರೆ ಸಾಮಾಜಿಕ ವ್ಯವಸ್ಥೆಯಲ್ಲಿ ಹಿಂದೂ ಧರ್ಮದ ಒಳಗೆ ಬ್ರಾಹ್ಮಣ ಮತ್ತು ಅಬ್ರಾಹ್ಮಣ ಎಂಬೆರಡು ವರ್ಗಗಳು ಸೃಷ್ಟಿಯಾಗಿ ಅವೆರಡು ನಿರಂತರವಾಗಿ ಶಕ್ತಿ ರಾಜಕಾರಣದ ರಾಜಕೀಯವನ್ನು ಈ ಜಿಲ್ಲೆಗಳಲ್ಲಿ ನಡೆಸಿಕೊಂಡು ಬಂದಿದ್ದವು. ಬ್ರಾಹ್ಮಣರೆಂದರೆ ಶ್ವೇತವರ್ಣೀಯರು, ಸಂಸ್ಕಾರವಂತರು, ಬೌದ್ಧಿಕ ಪ್ರತಿಭಾಶಾಲಿಗಳು, ಸಸ್ಯಾಹಾರಿಗಳು, ಅಹಿಂಸಾವಾದಿಗಳು, ದೈಹಿಕ ಶ್ರಮ ಕಡಿಮೆ ಮಾಡಿ ಬೌದ್ಧಿಕ ಕೆಲಸ ಜಾಸ್ತಿ ಮಾಡುವವರು ಇತ್ಯಾದಿ ಗುಣಲಕ್ಷಣಗಳಿಂದ ಜನಸಾಮಾನ್ಯರಿಂದ ಗುರುತಿಸಲ್ಪಡುತ್ತಿದ್ದರು.[5] ಹಾಗಾಗಿ ಈ ಪ್ರದೇಶದ ಬಹುಸಂಖ್ಯಾತರ ಭಾಷೆಯಾದ ತುಳುವಿನಲ್ಲಿ ‘ಕಪ್ಪು ಬೆರಣೆರೆನ್ ನಂಬಿಕೆ ಬೊಲ್ದು ಹೊಲೆಯೆರೆನ್ ನಂಬಡ’ (ಕಪ್ಪು ಬ್ರಾಹ್ಮಣರನ್ನು ನಂಬದಿರು, ಬಿಳಿ ಹೊಲೆಯರನ್ನು ನಂಬದಿರು- ಅಂದರೆ ಅದು ಅಸಹಜ ಎಂಬಂತೆ) ‘ಜನಿವಾರ ಪಾಡ್‌ನಾಯ್‌ನ ಕೈಟ್ ನಾಯೆರ್ ಪತ್ತೆರೆ ಬಲ್ಲಿ’ (ಯಜ್ಞೋಪವೀತ ಧರಿಸಿದವನು ಕೈಯಲ್ಲಿ ನೇಗಿಲು ಹಿಡಿಯಬಾರದು – ಅಂದರೆ ದೈಹಿಕ ಶ್ರಮದ ಬೆವರು ಬರಿಸುವ ಕೆಲಸ ಮಾಡಬಾರದು) ಇತ್ಯಾದಿ ನುಡಿಗಟ್ಟುಗಳ ಮೇಲೆ ಹೇಳಿದ ಬ್ರಾಹ್ಮಣರ ಗುಣ – ವಿಶೇಷಗಳನ್ನು ಸಮರ್ಥಿಸುವಂತೆ ಇದೆ. ಪದ್ಧತಿಯಲ್ಲಿ ಬ್ರಾಹ್ಮಣ ಎನ್ನುವುದು ಏಕಕಾಲಕ್ಕೆ ಒಂದು ವರ್ಣವೂ ಹೌದು. ಹಾಗೆಯೇ ಒಂದು ಜಾತಿಯೂ ಹೌದು. ಆದರೆ ಶೂದ್ರ ಎನ್ನುವ ಒಂದು ವರ್ಣ ಇದೆ. ಆದರೆ ಒಂದು ಜಾತಿ ಇಲ್ಲ. ಬದಲಿಗೆ ಅಲ್ಲಿ ಸಾವಿರಾರು ಬ್ರಾಹ್ಮಣೇತರ ಜಾತಿಗಳಿವೆ. ಈ ಎಲ್ಲವನ್ನು ಒಟ್ಟು ಹಾಕಿ ಅದಕ್ಕೆ ‘ಶೂದ್ರ’ ಎಂಬ ವರ್ಣವನ್ನು ಕೊಡಲಾಯಿತು. ಸಾಮಾಜಿಕ ಏಣಿಶ್ರೇಣಿಯಲ್ಲಿ ಜಾತಿಯೊಂದರ ಸ್ಥಾನ ಆ ಜಾತಿಯ ಗುಣಲಕ್ಷಣಗಳು, ಗುಣವಿಶೇಷಗಳು ಜನಸಾಮಾನ್ಯರ ಪ್ರಜ್ಞೆಯ ಭಾಗವಾಗುವಲ್ಲಿ ಬಹುದೊಡ್ಡ ಪಾತ್ರವಹಿಸುತ್ತದೆ. ಹಾಗಾಗಿ ಕರಾವಳಿ ಜಿಲ್ಲೆಯ ಮೇಲ್ಜಾತಿಗಳ ಗುಣಲಕ್ಷಣಗಳು ಬಹುತೇಕರ ಅರಿವಿನ ಭಾಗವಾಗಿದೆ. ಅದೇ ಸಂದರ್ಭದಲ್ಲಿ ತಳಸ್ತರದ ಜಾತಿಗಳ ಗುಣವಿಶೇಷಗಳನ್ನು ಪ್ರತ್ಯೇಕಿಸದೆ ಮೂಟೆಕಟ್ಟಿ ಒಂದು ಕಡೆ ಪೇರಿಸಲಾಗಿದೆ. ಮೇಲ್ಜಾತಿಗಳು ಬಹಳ ಪ್ರಧಾನವಾಗಿ ಚಾಲ್ತಿಯಲ್ಲಿರುವುದಕ್ಕೆ ಮತ್ತು ಹೆಚ್ಚು ಹೆಚ್ಚು ಬಿಂಬಿತಗೊಳ್ಳುವುದಕ್ಕೆ ಈ ಜಾತ್ಯಾಧಾರಿತ ಸ್ಥಾನಮಾನವೇ ಬಹು ಮುಖ್ಯ ಕಾರಣವಾಗಿದೆ.

ಇಲ್ಲಿಯ ಬ್ರಾಹ್ಮಣೇತರ ಸಮುದಾಯದಲ್ಲಿ ಬಹಳ ಪ್ರಧಾನವಾಗಿರುವ ಎರಡು ಸಮುದಾಯಗಳೆಂದರೆ ಬಂಟ ಮತ್ತು ಜೈನ ಸಮುದಾಯಗಳು. ಇಲ್ಲಿ ಬಂಟ ಎನ್ನುವುದು ಒಂದು ಜಾತಿಯಾಗಿದ್ದರೆ ಜೈನ ಎಂಬುದು ಒಂದು ಜಾತಿ ಅಲ್ಲ. ಅದೊಂದು ಧರ್ಮ. ಈ ಎರಡೂ ಸಮುದಾಯಗಳು ಕೆಲವೇ ಕೆಲವು ಭಿನ್ನತೆಗಳನ್ನು ಹೊರತುಪಡಿಸಿದರೆ ಉಳಿದಂತೆ ಹೆಚ್ಚೂ-ಕಡಿಮೆ ಸಮಾನ ಗುಣಲಕ್ಷಣಗಳನ್ನು ಹೊಂದಿವೆಯೆಂದು ತಿಳಿಯಲಾಗಿದೆ. ಬಂಟರು ಮಾಂಸಾಹಾರಿಗಳು ಮತ್ತು ಜೈನರು ಸಸ್ಯಾಹಾರಿಗಳು. ಬಂಟರನ್ನು ಇಲ್ಲಿ ‘ಧೈರ್ಯಶಾಲಿಗಳು’ ‘ಅಧಿಕಾರಯುಕ್ತ ಧೋರಣೆಯವರು’ ‘ಉದ್ಯಮಶೀಲರು’, ‘ಪ್ರಭುತ್ವಪರರು’, ಎಂದೆಲ್ಲಾ ಬಿಂಬಿಸಲಾಗಿದೆ.[6] ಈ ಜಿಲ್ಲೆಗಳಲ್ಲಿರುವ ಉಳಿದ ಜಾತಿಗಳ ವಿಷಯಕ್ಕೆ ಬಂದಾಗ ಮೇಲ್ಜಾತಿಗಳ ಗುಣವಿಶೇಷಗಳಿಗೆ ವಿರುದ್ಧವಾದ ಮತ್ತು ಕೇವಲವಾದ ಗುಣಲಕ್ಷಣಗಳಿಂದ ಗುರುತಿಸುವುದು ಸಾಮಾನ್ಯವಾಗಿತ್ತು. ಬಹಳ ಬಾರಿ ತಾತ್ಸಾರದ, ತಮಾಷೆಗೆ ಪಕ್ಕಾದ (‘ಪರವನ ತೆಳಿಕೆನ್ ನಂಬಿಯರ ಬಲ್ಲಿ’… ಪಂಬದನ ನಗುವನ್ನು ನಂಬಬಾರದು – ಒಳಗೊಂದು ಹೊರಗೊಂದು ಮಾಡುವವ ಎನ್ನುವ ಅರ್ಥ, ‘ಓಡಾರಿ ಲೆಕ್ಕ ದಾನೆ ಪಾತೆರುವ’, – ಕುಂಬಾರನ ತರ ಯಾಕೆ ಮಾತಾಡುತ್ತೀಯಾ? – ಮುಂದಾಲೋಚನೆಯಿಲ್ಲದೆ ಮಾತಾಡುವವ, ಬಿರುವೆ ಕೋಪ ಬತ್ತ್‌ಂಡ ಕೆರುವೆ – ಬಿಲ್ಲವ ಕೋಪ ಬಂದರೆ ಕೊಲ್ಲುವ – ಅಂದರೆ ಆಲೋಚನೆ ಮಾಡುವ ಶಕ್ತಿ ಇಲ್ಲ) ಗುಣಲಕ್ಷಣಗಳಿಂದ ಗುರುತಿಸುವುದು ಸಾಮಾನ್ಯವಾಗಿತ್ತು. ತಳಸ್ತರದ ಸಮುದಾಯಗಳ ನಡುವಿನ ಭಿನ್ನತೆ, ಅವರ ಗುಣಲಕ್ಷಣಗಳು, ಗುಣವಿಶೇಷಣಗಳು ಪ್ರತ್ಯೇಕವಾಗಿ ಬಹುತೇಕರ ಅರಿವಿನ ಭಾಗವಾಗಿರಲಿಲ್ಲ. ಅವರೆಲ್ಲರನ್ನು ಒಟ್ಟಾರೆಯಾಗಿ ಪರಿಗಣಿಸಿ ಮೂರನೇ ದರ್ಜೆ ಗುಣವಿಶೇಷಣಗಳಿಂದ ಗುರುತಿಸುವುದು ಸಮಸ್ಯೆಯಾಗಿರಲಿಲ್ಲ. ಈಗ ಇರುವ ಪ್ರಶ್ನೆ ಏನೆಂದರೆ ಒಂದು ಸಮಾಜವನ್ನು ಹೀಗೆ ಮೇಲ್ಜಾತಿ ಮತ್ತು ಕೆಳಜಾತಿಗಳಾಗಿ ವಿಭಜಿಸುವುದಕ್ಕೆ ಹೇಗೆ ಸಾಧ್ಯವಾಯಿತು? ಈ ವಿಭಜಿತ ಸಂರಚನೆಯ ಹಿಂದೆ ಕೇವಲ ಸಂಕಥನದ ಪಾತ್ರ ಇದೆಯೇ? ಅಥವಾ ಆರ್ಥಿಕ ಸಂರಚನೆಯೇ ಈ ಬಗೆಯ ವರ್ಗೀಕರಣಗಳನ್ನು ಬೆಳೆಸಿ ಉಳಿಸಿತೇ? ಈ ಎಲ್ಲ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ತಿಳಿದುಕೊಳ್ಳಬೇಕಿದ್ದಲ್ಲಿ ನಾವು ಈ ಪ್ರದೇಶದ ಚರಿತ್ರೆಯ ಒಳಹೆಣಿಗೆಗಳ ಸ್ವರೂಪವನ್ನು ಅಧ್ಯಯನ ಮಾಡಬೇಕು. ವಸಾಹತು ಪ್ರಭುತ್ವದ ಪೂರ್ವದಿಂದಲೂ ಈ ಪ್ರದೇಶದ ಯಾವುದೇ ಭಾಗ ಸಾಮ್ರಾಜ್ಯದ ಕಟ್ಟುನಿಟ್ಟಿನ ಕಣ್ಗಾವಲಿನ ಆಳ್ವಿಕೆಗೆ ಒಳಗಾದ ಪ್ರದೇಶವಲ್ಲ. ಈ ಪ್ರದೇಶವನ್ನು ಆಳಿದ ‘ಘಟ್ಟದ ಮೇಲಿನ ಪ್ರಭುತ್ವಗಳಿಗೆ ಬಹಳ ದಟ್ಟವಾದ ಪಶ್ಚಿಮ ಘಟ್ಟವನ್ನು ಇಳಿದು ಬಂದು ಈ ತುಂಡು ಜಾಗವನ್ನು ಆಳ್ವಿಕೆ ಮಾಡುವುದು ಸುಲಭಸಾಧ್ಯವಾದ ಸಂಗತಿಯೇನಾಗಿರಲಿಲ್ಲ. ಹಾಗಾಗಿ ಇಲ್ಲಿ ಯಾರು ಬಲಶಾಲಿಗಳೂ, ರಾಜಕೀಯ ಚತುರರೂ ಆಗಿದ್ದರೋ ಅವರು ಸಣ್ಣ ಮಟ್ಟಿನ ಪಾಲೆಯಗಾರರಾಗಿ ರೂಪುಗೊಂಡಿದ್ದರು. ಘಟ್ಟದ ಮೇಲಿನ ಪ್ರಭುತ್ವ ಬಲಾಢ್ಯವಾಗಿದ್ದ ಸಂದರ್ಭದಲ್ಲಿ ಅದಕ್ಕೆ ಒಂದು ಹಂತದರೆಗಿನ ನಿಷ್ಠೆಯನ್ನು ಮತ್ತು ಪ್ರಭುತ್ವ ಬಲಹೀನವಾದಾಗ ಸಣ್ಣಮಟ್ಟಿನ ಸ್ವಾಯತ್ತತೆಯನ್ನು ಪ್ರದರ್ಶಿಸಿಕೊಂಡು ಬಂದವರಾಗಿದ್ದರು.[7]

ಈ ಬಗೆಯ  ರಾಜಕೀಯ ಸನ್ನಿವೇಶದಲ್ಲಿ ‘ಸೀಮೆ’, ‘ಮಾಗಣೆ’, ಮತ್ತು ‘ಗುತ್ತುಗಳು’, ಈ ಪ್ರದೇಶಗಳ ಮುಖ್ಯ ರಾಜಕೀಯ ಘಟಕಗಳಾಗಿದ್ದವು.[8] ಜನಸಾಮಾನ್ಯರ ದಿನನಿತ್ಯದ ಬದುಕಿಗೆ ತುಂಬಾ ಹತ್ತಿರವಾಗಿದ್ದ ರಾಜಕೀಯ ಘಟಕವೆಂದರೆ ‘ಗುತ್ತು ಮನೆಗಳು’. ಈ ಗುತ್ತು ಮನೆಗಳವರು ಮುಖ್ಯವಾಗಿ ಬಂಟರು ಮತ್ತು ಜೈನರೇ ಆಗಿದ್ದರು. ಈ ಗುತ್ತು ಅನ್ನುವ ಪದದ ಚರಿತ್ರೆ ನೋಡುವುದಾದರೆ ಇದೇನೂ ಅಂಥ ಬಹುದೊಡ್ಡ ಗೌರವದ ಸಂಗತಿಯೇನಲ್ಲ. ‘ಮೇಲಿನ’ ಪ್ರಭುತ್ವದ ಸ್ವಾಧೀನದಲ್ಲಿ ಈ ‘ಕೆಳಗಿನ’ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡ ಮನೆಗಳವರೇ ಗುತ್ತಿನ ಮನೆಯವರು. ಇಲ್ಲಿನ ತಳಸ್ತರದ ಸಮುದಾಯಕ್ಕೆ ಸೇರಿದ ಜನರಿಂದ ಇವರು ಭೂ ಸಾಗುವಳಿ ಮಾಡಿಸಿ ಆದಾಯದ ಸ್ವಲ್ಪವನ್ನು ಕೆಲಸಗಾರರಿಗೂ ಇನ್ನು ಸ್ವಲ್ಪವನ್ನು ಘಟ್ಟದ ಮೇಲಿನ ಪ್ರಭುತ್ವಕ್ಕೂ ಕೊಟ್ಟು ಉಳಿದ ಬಹುಪಾಲು ಭಾಗವನ್ನು ತಾವೇ ಇಟ್ಟುಕೊಂಡು ಈ ಮಧ್ಯವರ್ತಿ ಗುತ್ತುಮನೆಗಳವರು ಬಲಾಢ್ಯರಾದರು. ಯಾವಾಗ ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ಘಟ್ಟದ ಮೇಲಿನ ಪ್ರಭುತ್ವ ಸ್ಥಾನ ಪಲ್ಲಟವಾಗುತ್ತಿತ್ತೋ ಆವಾಗೆಲ್ಲಾ ಸ್ಥಳೀಯ ಪಾಳೇಗಾರರು ತಮ್ಮನ್ನು ತಾವು ಸ್ವತಂತ್ರ ಪ್ರಭುಗಳೆಂದು ಘೋಷಿಸಿಕೊಳ್ಳುತ್ತಿದ್ದರು. ಇಂತಹ ಮೇಲ್‌ಸ್ತರದ ರಾಜಕೀಯ ಪಲ್ಲಟಗಳು ಗುತ್ತು ಒಡೆತನಗಳಲ್ಲಿ ಮತ್ತು ವ್ಯವಹಾರಗಳಲ್ಲಿ ಸಣ್ಣಪುಟ್ಟ ಏರುಪೇರುಗಳಿಗೆ ಕಾರಣವಾಗುತ್ತಿದ್ದವು. ಹಾಗೆಂದು ಅವುಗಳು ಗುತ್ತುಮನೆಗಳ ಗುಣಲಕ್ಷಣಗಳನ್ನು ಮೂಲಭೂತವಾಗಿ ಪರಿವರ್ತಿಸಿಲ್ಲ. ತಮ್ಮ ಒಕ್ಕಲುಗಳ ನಿಯಂತ್ರಣಕ್ಕೆಂದು ಈ ಗುತ್ತು ಮನೆ ಗಳವರು ತಮ್ಮದೇ ಆದ ಕೆಲವೊಂದು ಕಟ್ಟುಪಾಡುಗಳನ್ನು ರೂಪಿಸಿಕೊಂಡಿದ್ದರು. ಈ ಕಟ್ಟುಪಾಡುಗಳು ಕೇವಲ ಒಕ್ಕಲುತನ ಗೇಣಿ, ಕೆಲಸದ ಅವಧಿ, ಕೂಲಿ ಇತ್ಯಾದಿಗಳಿಗೆ ಮಾತ್ರ ಸೀಮಿತವಾಗಿಲ್ಲ. (ಒಕ್ಕಲುಗಳ) ಮನೆಯಿಂದ ಹೊರಗಿನ ಬಹುತೇಕ ವ್ಯವಹಾರಗಳನ್ನು ಈ ಕಟ್ಟುಪಾಡುಗಳು ನಿರ್ದೇಶಿಸುತ್ತಿದ್ದವು. ಮಾತುಕತೆ, ಉಡುಗೆತೊಡುಗೆ, ಓಡಾಟ ಒಡಾಟ ಇತ್ಯಾದಿಗಳನ್ನು ಗುತ್ತಿನ ಕಟ್ಟುಪಾಡುಗಳು ನಿರ್ದೇಶಿಸಿದ್ದವು. ಈ ಕಟ್ಟುಪಾಡುಗಳನ್ನು ಆಳು ಮಕ್ಕಳು ಯಾರಾದರೂ ಉಲ್ಲಂಘಿಸಿದಲ್ಲಿ ಕಠಿಣ ಶಿಕ್ಷೆಯೂ ಅವರಿಗಾಗಿ ಕಾದಿತ್ತು.[9] ಆಳು ಹೆಣ್ಣು ಮಕ್ಕಳನ್ನು ತಮ್ಮ ಊಳಿಗದವರಾಗಿಯೂ ಮತ್ತು ತಮ್ಮ ಲೈಂಗಿಕ ಆಸಕ್ತಿಯ ಪೂರೈಕೆಗಾಗಿಯೂ ಇವರು ಬಳಸಿಕೊಳ್ಳುವುದು ಅಸಹಜವಾಗಿರಲಿಲ್ಲ. ಇದು ಗುತ್ತಿನ ಮನೆಯ ಒಂದು ಪ್ರತಿಷ್ಠೆಯ ಸಂಗತಿಯಾಗಿತ್ತು. ಭೂ ಮಸೂದೆ ಬರುವವರೆಗೂ ಗುತ್ತಿನ ಕಟ್ಟುಪಾಡುಗಳು ಬೇರೆ ಬೇರೆ ಸ್ವರೂಪದಲ್ಲಿ ಅಸ್ತಿತ್ವದಲ್ಲಿದ್ದವು.[10]

ಗುತ್ತು ಮನೆಯ ದಬ್ಬಾಳಿಕೆಯ ಈ ಗುಣ ಅವರು ಹೊಂದಿರುವ ಭೂಮಿಯ ಪ್ರಮಾಣದ ಮೇಲ ಅವಲಂಬಿತವಾಗಿತ್ತು. ಆದರೆ ಬ್ರಾಹ್ಮಣರ ಸ್ಥಾನ-ಮಾನ ಅವರು ಹೊಂದಿರುವ ಭೂ-ಪ್ರಮಾಣದ ಮೇಲೆ ಮಾತ್ರ ನಿರ್ಧರಿತವಾಗಿರಲಿಲ್ಲ. ಅವರಲ್ಲಿ ಸಾಕಷ್ಟು ಜನ ಬೇಕಾದಷ್ಟು ಭೂಮಿಯನ್ನು ಹೊಂದಿರದಿದ್ದರೂ ಬಹುತೇಕ ಬ್ರಾಹ್ಮಣರಿಗೂ ಸಾಕಷ್ಟು ಸಾಮಾಜಿಕ ಗೌರವ ದಕ್ಕುತ್ತಿತ್ತು. ಕೆಳಜಾತಿಗಳ ಜನರು ಈ ಬ್ರಾಹ್ಮಣರು ದಾರಿಯಲ್ಲಿ ಬರುವಾಗಲಾಗಲೀ ಇತರೇ ಸಾರ್ವಜನಿಕ ಸ್ಥಳಗಳಲ್ಲಾಗಲೀ ಸಾಕಷ್ಟು ಅಂತರವನ್ನು ಇರಿಸಿಕೊಳ್ಳಬೇಕಾಗಿತ್ತು.[11] ಈ ಅಂತರ ಜಾತಿಯಿಂದ ಜಾತಿಗೆ ಭಿನ್ನವಾಗಿತ್ತು ಮತ್ತು ಹೆಚ್ಚು ಕಡಿಮೆಯದ್ದೂ ಆಗಿತ್ತು. ಸಮಾಜದ ತಳಸ್ತರದಲ್ಲಿರುವ ಜಾತಿಗಳು ಅತಿಯಾದ ಅಂತರ ಕಾಪಾಡಿಕೊಳ್ಳಬೇಕಿತ್ತು. ಸಾಮಾಜಿಕ ಏಣಿಶ್ರೇಣಿಯಲ್ಲಿ ಮೇಲೆ ಮೇಲೆ ಹೋದಂತೆ ಕಾಪಾಡಿಕೊಳ್ಳಬೇಕಾದ ಅಂತರ ಕೂಡ ಕಡಿಮೆ ಆಗುತ್ತಿತ್ತು.[12] ಹಾಗೆಯೇ ಈ ಅಂತರ ಭೌತಿಕ ಅಂತರ ಮಾತ್ರ ಆಗಿಲ್ಲ ಎನ್ನುವುದೂ ಇಲ್ಲಿ ಮುಖ್ಯವಾದುದಾಗಿದೆ. ಹೆಸರಿನಿಂದಲೇ ವ್ಯಕ್ತಿಯೊಬ್ಬರ ಸಾಮಾಜಿಕ ಸ್ಥಾನವನ್ನು ಗುರುತಿಸಬಹುದಿತ್ತು. ಕೇಶವ, ಲಕ್ಷ್ಮಿಶ, ಗೋಪಾಲ, ನಾರಾಯಣ ಇತ್ಯಾದ (ದೇವರ) ಹೆಸರುಗಳು ಮೇಲ್ಜಾತಿ ಜನರ ಗುತ್ತಿಗೆಯಾದರೆ ತನಿಯ, ಗುರುವಪ್ಪ, ಸೊಂಪ, (ಹುಟ್ಟಿದ ದಿನದ ಹೆಸರು), ಮೈಂದ, ಕೆಪ್ಪೆ (ಶಾರೀರಿಕ ದೋಷಗಳ ಹೆಸರು) ಇತ್ಯಾದಿ ಹೆಸರುಗಳ ಕೆಳಜಾತಿ ಜನರ ಭಾಗ್ಯವಾಗಿತ್ತು.[13] ಮೇಲ್ಜಾತಿಗಳಾದ ಬ್ರಾಹ್ಮಣ ಬಂಟ ಮತ್ತು ಜೈನರನ್ನು ಕೆಲವೊಂದು ವಿಶಿಷ್ಟವಾದ ಪದಗಳ ಮೂಲಕವೇ ಕರೆಯಬೇಕಾಗಿತ್ತು. (ಅಣ್ಣೆರೆ, ದೊಕ್ಕುಲೆ, ಖಾವೆಂದರೆ ಇತ್ಯಾದಿ) ಆದರೆ ಇದಕ್ಕೆ ವಿರುದ್ಧವಾಗಿ ಮೇಲ್ಜಾತಿಯ ಒಬ್ಬ ಸಣ್ಣ ಹುಡುಗನೂ ಕೆಳಜಾತಿಯ ಅತ್ಯಂತ ವೃದ್ಧರನ್ನೂ ಏಕವಚನದಲ್ಲಿ ಮಾತಾಡಿಸುವುದು ಈ ಸಾಮಾಜಿಕ ಸಂರಚನೆಯಲ್ಲಿ ಅಸಹಜವಾಗಿರಲಿಲ್ಲ. ದೇವಾಲಯಗಳಿಗೆ ಪ್ರವೇಶ ಎನ್ನುವುದು ದಲಿತ ಸಮುದಾಯಕ್ಕೆ ಹೇಗೆ ನಿರಾಕರಿಸಲ್ಪಟ್ಟಿತ್ತೋ ಹಾಗೆಯೇ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದ ಬಿಲ್ಲವರಿಗೂ ಹಲವೆಡೆ ನಿಷೇಧವಾಗಿತ್ತು.

ಈ ಬಗೆಯ ಸಾಮಾಜಿಕ ಹಾಗೂ ಆರ್ಥಿಕ ಕ್ರಿಯಾಚರಣೆಗಳ ಜೊತೆಗೆ, ಸಾಂಸ್ಕೃತಿಕ ಚಟುವಟಿಕೆಗಳೂ ಈ ಜಾತಿ ಪ್ರಜ್ಞೆಯನ್ನು ಹರಳುಗಟ್ಟಿಸುವ ಕೆಲಸವನ್ನೂ ನಿರ್ವಹಿಸಿದವು. ಮೇಲ್ಜಾತಿ ಕೆಳಜಾತಿ ಭಿನ್ನತೆಯನ್ನು ಗಟ್ಟಿಗೊಳಿಸಲು ಸಹಕಾರಿಯಾದ ಎರಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  – ಯಕ್ಷಗಾನ ಮತ್ತು ಭೂತಾರಾಧನೆಯನ್ನು – ಇಲ್ಲಿ ನಿದರ್ಶನಗಳಾಗಿ ಕೊಡಬಹುದು. ಮೂಲತಃ ಬಿಲ್ಲವರು, ಮಲೆಯಾಳಿ ಬಿಲ್ಲವರು, ದೇವಾಂಗರು ಮತ್ತು ಇನ್ನೂ ಬಹುತೇಕ ಕೆಳಜಾತಿಯವರೇ ಪ್ರಧಾನವಾಗಿ ರೂಪಿಸಿದ ಯಕ್ಷಗಾನಕ್ಕೆ ಕಾಲಕ್ರಮೇಣ ಉನ್ನತ ಜಾತಿಗಳವರು ಪ್ರವೇಶಿಸಿ ಅದನ್ನೊಂದು ‘ಕಲಾಶಿಸ್ತು’ ಆಗಿ ರೂಪಿಸಿ ಊಳಿಗಮಾನ್ಯ ಮೌಲ್ಯಗಳನ್ನೇ ಪ್ರತಿಪಾದಿಸುವ ಪ್ರಸಂಗಗಳನ್ನೇ ಆಡಿದ್ದು, ಆಡಿಸಿದ್ದು ಈಗ ಈ ಕಲೆಯು ಸಾಂಸ್ಕೃತಿಕ ಇತಿಹಾಸದ ಒಂದು ಪ್ರಮುಖ ಭಾಗ. ಯಕ್ಷಗಾನ ಮತ್ತು ತಾಳಮದ್ದಲೆಗಳು ಸ್ಥಳೀಯ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟುವ ಮತ್ತು ನಿರ್ವಚನೆ ಮಾಡುವ ಕೆಲಸವನ್ನು ತುಂಬಾ ಪರಿಣಾಮಕಾರಿಯಾಗಿ ಮಾಡಿವೆ. ಸ್ಥಳೀಯ ದೇವಸ್ಥಾನ, ಮಠಮಂದಿರಗಳ ಪ್ರೋತ್ಸಾಹದಲ್ಲಿ ಬೆಳೆದ ಯಕ್ಷಗಾನ ಮಂಡಳಿಗಳು ವರ್ಷದ ಏಳೆಂಟು ತಿಂಗಳು ಜಿಲ್ಲೆಯ ಮೂಲೆ ಮೂಲೆಯಲ್ಲಿ ಯಕ್ಷಗಾನ ಪ್ರಸಂಗಗಳನ್ನು ಆಡಿ ತೋರಿಸುತ್ತವೆ. ಹಿಂದೆ ದೇವಿ ಮಹಾತ್ಮೆ, ಮಹಿಷಾಸುರ ಮರ್ಧಿನಿ ಇತ್ಯಾದಿ ವೈದಿಕ ಮೌಲ್ಯಗಳನ್ನು ಸಾರುವ ಯಕ್ಷಗಾನ ಪ್ರಸಂಗಗಳು ಚಾಲ್ತಿಯಲ್ಲಿದ್ದವು.[14] ನಂತರದ ದಿನಗಳಲ್ಲಿ ಸಮಾಜ ತಳಸ್ತರದ ಜನರ ಸಾಂಸ್ಕೃತಿಕ ವೀರರ ಯಕ್ಷಗಾನ ಪ್ರಸಂಗಗಳು ಮುಂಚೂಣಿಗೆ ಬಂದವು. ಈ ಪ್ರಸಂಗಗಳು ದ.ಕ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಲ್ಲವರ, ಬಂಟರ, ಬೆಸ್ತರ ಸಾಂಸ್ಕೃತಿಕ ಸಾಮಾಜಿಕ ಚರಿತ್ರೆಯನ್ನು ಕಟ್ಟಿಕೊಟ್ಟಿವೆ. ಜಾನಪದ ಕಥನಗಳು ಯಕ್ಷಗಾನ ರೂಪದಲ್ಲಿ ಬಂದವೆಂದು ಕುಶಿ ಪಡುವ ಅಗತ್ಯವಿಲ್ಲವೆನ್ನುವ ಅಭಿಪ್ರಾಯಗಳೂ ಇವೆ. ಯಾಕೆಂದರೆ, ‘ಈ ಕಥೆಗಳ ಪ್ರದರ್ಶನದಲ್ಲೂ ಪುರಾಣ ಕಾಲದ ಊಳಿಗಮಾನ್ಯ ಸಮಾಜದ ಮೌಲ್ಯಗಳನ್ನೇ ಪ್ರತಿನಿಧಿಸಲಾಗುತ್ತಿದೆ. ಅದೃಷ್ಟವಾದ, ಜಾತಿಭೇದ, ಕರ್ಮ ಸಿದ್ಧಾಂತ, ಹುಟ್ಟಿನಿಂದ ಅಸಮಾನತೆ ಮುಂತಾದ ಮೌಲ್ಯಗಳ ಪುನರ್ ಮಂಡನೆಯಾಗುತ್ತದೆ.’[15] ಕಳೆದ ಒಂದು ಹತ್ತು ವರ್ಷಗಳಿಂದೀಚೆಗಿನ್ನೂ ಸ್ಪಷ್ಟವಾಗಿ ಹೇಳುವುದಾದಲ್ಲಿ ಬಾಬರಿ ಮಸೀದಿ ಕೆಡವಿದ ನಂತರದ ದಿನಗಳಲ್ಲಂತೂ ಇಲ್ಲಿಯ ಯಕ್ಷಗಾನ ಬಹುತೇಕ ಪ್ರಸಂಗಗಳು ಮುಸ್ಲಿಮ್ ದ್ವೇಷದ ಕಥನಗಳೇ ಆಗಿದ್ದವು. ಇನ್ನು ಕೆಲವು ಬರಿ ಪ್ರಸಂಗ ಯಾವುದೇ ಆದರೂ ಅದರಲ್ಲಿ ಮುಸ್ಲಿಮ್ ಅವಹೇಳನದ ಹಿಂದೂ ಸಂಘಟನೆಗಳ ಮತ್ತು ರಾಜಕೀಯ ಪಕ್ಷಗಳ ಕೀರ್ತನೆಯ ಸಂಭಾಷಣೆಗಳು ಜನಜಂಗುಳಿಯ ಶಿಳ್ಳೆ, ಚಪ್ಪಾಳೆಗಳ ಮತ್ತು ರಾಜಕೀಯ ಪಕ್ಷಗಳ ಕೀರ್ತನೆಯ ಸಂಭಾಷಣೆಗಳು ಜನಜಂಗುಳಿಯ ಶಿಳ್ಳೆ, ಚಪ್ಪಾಳೆಗಳ ನಡುವೆ ವಿಜೃಂಭಿಸುತ್ತಿದ್ದವು.

ಇದು ಒಂದೆಡೆಯಾದರೆ ಕೇವಲ ತಳಸ್ತರ‍್ಕೆ  ಸೇರಿದ ಮೂರು ಜಾತಿಗಳವರು ಮಾತ್ರ ನಿರ್ವಹಿಸುವ ಭೂತಾರಾಧನೆ ಇಲ್ಲಿಯ ಇನ್ನೊಂದು ಪ್ರಮುಖ ಸಾಂಸ್ಕೃತಿಕ ಆಚರಣೆಯಾಗಿದೆ. ಇದನ್ನೊಂದು ‘ಕಲೆ’ ಎಂದು ವಾದಿಸುವ ವಿದ್ವಾಂಸರೂ ಸಾಕಷ್ಟು ಜನ ಇದ್ದಾರೆ. ಹಾಗೆಯೇ ಇದನ್ನೊಂದು ‘ಕಲೆ’ ಎಂದು ಭಾವಿಸಿ ವೇದಿಕೆಯಲ್ಲಿ ಪ್ರದರ್ಶಿಸುವ ಅನ್ಯ ಜಾತಿಯವರೂ ಇದ್ದಾರೆ. ರಾಜಕೀಯ ನಾಯಕರ, ಸಾಹಿತ್ಯ, ಕರಾವಳಿ ಸಮ್ಮೇಳನಗಳ ಮೆರವಣಿಗೆಗಳಲ್ಲಿ ಭೂತಾರಾಧನೆಯ ವೇಷ ಹಾಕಿ ಮೆರವಣಿಗೆ ಹೋಗುವವರೂ ಇದ್ದಾರೆ. ಹೀಗೆ ಭೂತದ ವೇಷ ಹಾಕಿ ಮೆರವಣಿಗೆ ಹೋಗುವುದನ್ನು ವಿರೋಧಿಸುವ ಭೂತದ ಪಾತ್ರಿಗಳೂ, ದಲಿತರೂ ಇದ್ದಾರೆ. ಇಲ್ಲಿ ಇರುವ ಒಂದು ವ್ಯತ್ಯಾಸ ಎಂದರೆ ಭೂತದ ವೇಷ ಹಾಕಿ ಒಂದು ವೇದಿಕೆಯಲ್ಲಿ ಪ್ರದರ್ಶನ ಕೊಡುವ ಭೂತದ ಪಾತ್ರಿಗಳು ಇಲ್ಲಿ ಇಲ್ಲ. ಹಾಗೆಯೇ ದೇವಸ್ಥಾನಗಳಲ್ಲಿ ಭೂತದ ವೇಷ ಹಾಕಿ ಕುಣಿಯುವ ಇತರೆ ಮೇಲ್ಜಾತಿಯ ಜನರೂ ಇಲ್ಲಿ ಇಲ್ಲ. ಈ ಆರಾಧನೆಗೆ ಸಂಬಂಧಿಸಿದಂತೆ ಭಿನ್ನ ಭಿನ್ನ ವ್ಯಾಖ್ಯಾನಗಳು ಇವೆ. ಕೆಲವರ ಪ್ರಕಾರ ಭೂತಾರಾಧನೆ ಕೆಳವರ್ಗಗಳ ಸಾಂಸ್ಕೃತಿಕ ಪ್ರತಿಭಟನೆಯಾಗಿದೆ.[16] ಕೆಳವರ್ಗಗಳ ಸಾಂಸ್ಕೃತಿಕ ವೀರರು (ಇವರು ಸಾಂಸ್ಕೃತಿಕ ವೀರರು ಎಂದೆನಿಸಿಕೊಳ್ಳುವುದೇ ಅಸಹಜ ಸಾವಿಗೆ ಒಳಗಾದ ಮೇಲೆ) ಭೂತಗಳಾಗಿ ಆರಾಧನೆಗೊಳಗಾಗುತ್ತಾರೆ. ಭೂಮಾಲೀಕರಿಂದ ದೌರ್ಜನ್ಯಕ್ಕೊಳಗಾದ ಕೆಳಜಾತಿಯ ಪುರುಷ/ಮಹಿಳೆ ತನ್ನ ಅಸಹಜ ಮರಣಾನಂತರದಲ್ಲಿ ಈ ಭೂಮಾಲೀಕರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ/ಳೆ. ಕೊನೆಗೆ ಇದರಿಂದ ಸುಸ್ತಾದ ಭೂಮಾಲೀಕ ಆತನ/ಕೆಯ ನೆನಪಿಗೆ ಒಂದು ಕಲ್ಲನ್ನು ಗದ್ದೆಯಲ್ಲೋ ಅಥವಾ ಗುಡ್ಡದಲ್ಲೋ ಸ್ಥಾಪಿಸಿ ಅದಕ್ಕೆ ಪೂಜೆ/ಬಲಿ ಇತ್ಯಾದಿಗಳನ್ನು ಕೊಟ್ಟು ಆ ಭೂತವನ್ನು ‘ಸುಪ್ರೀತಗೊಳಿಸಿ’ ನಂಬುತ್ತಾನೆ.[17]ನಂಬಿದ ಕೂಡಲೇ ಅಲೌಕಿಕದ ಆ ಭೂತ ಲೌಕಿಕದ ಈ ಭೂಮಾಲೀಕನ ಸೇವಕನಂತೆ ಆತನ ಕುಟುಂಬ ಸಂಸಾರವನ್ನು, ಪಶುಪ್ರಾಣಿಗಳನ್ನು, ಬೆಳೆ-ಸೆಲೆ (ನೀರು)ಗಳನ್ನು ರಕ್ಷಿಸುವ ಕೆಲಸವನ್ನು ನಿರ್ವಹಿಸುತ್ತದೆ. ಲೌಕಿಕದ ಶೋಷಣೆ, ದೌರ್ಜನ್ಯಗಳು ಮತ್ತೆ ನಿರಂತರವಾಗುತ್ತದೆ. ಹಾಗಾಗಿ ಭೂತಾರಾಧನೆಯ ಚರಿತ್ರೆಯಾಗಲೀ, ಭವಿಷ್ಯವಾಗಲೀ ಇಡಿಯ ಪ್ರಕ್ರಿಯೇ ಅತ್ಯಂತ ವಿಚಿತ್ರವೂ ತೀವ್ರ ವಿರೋಧಾಭಾಸವುಳ್ಳದ್ದೂ ಆಗಿದೆ. ಭೂತವನ್ನು ಕೆಳಜಾತಿಯ ವ್ಯಕ್ತಿಯೊಬ್ಬನಲ್ಲಿ ಆವಾಹಿಸಿ ನಡೆಸುವ ನೇಮ/ಕೋಲದಂಥ ಉತ್ಸವಗಳೂ ಈ ವಿರೋಧಾಭಾಸದಿಂದ ಮುಕ್ತವಾದುದಲ್ಲ. ಈ ನೇಮ ಮತ್ತು ಕೋಲದಂತಹ ಆಚರಣೆಗಳಲ್ಲಿ ಊರಿಗೆ ಊರೇ ತಮ್ಮ ತಮ್ಮ ಜಾತಿಗನುಗುಣವಾದ ಕಸುಬುಗಳಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ಅಗಸ ಸ್ಥಳ ಶುದ್ಧಿಗೊಳಿಸುತ್ತಾನೆ, ಕ್ಷೌರಿಕ ಎಣ್ಣೆ ಹಿಡಿಯುವವನಾಗುತ್ತಾನೆ.[18] ಈ ಕೆಲಸಗಳೆಲ್ಲಾ ಸಮಾಜದಲ್ಲಿ ಆತ ಹೊಂದಿರುವ ಸ್ಥಾನ-ಮಾನಗಳ ಕುರಿತು ಹೇಳುತ್ತವೆ. ಕೆಳಜಾತಿಯ ವ್ಯಕ್ತಿಯೇ ಸತ್ತು ಭೂತ ಆಗಿದ್ದು ಆತನನ್ನೇ ಮರು ಆವಾಹಿಸುವ ಪ್ರಕ್ರಿಯೆಯಲ್ಲಿ ಯಾವ ತಥಾಕಥಿಕ ‘ಮರ್ಯಾದೆ’ಯೂ ಕೆಳಜಾತಿಯವನಿಗೆ ಸಿಗುವುದಿಲ್ಲ. ‘ದೈವ’ ಎಂದು ಸಮುದಾಯ ಭಾವಿಸಿರುವ ವ್ಯಕ್ತಿ, ಭೂತದ ವೇಷ-ಭೂಷಣಗಳೊಂದಿಗೆ, ಹಿಮ್ಮೇಳನದ ವಾದನದೊಂದಿಗೆ ನಡೆದು ಬಂದಾಗ ಇಡಿಯ ಸಭೆ ಎದ್ದು ನಿಂತು ಗೌರವ ಸಲ್ಲಿಸುತ್ತದೆ. ಆದರೆ ತಾಂತ್ರಿಕ ಕೆಲಸಗಳನ್ನು ನಿರ್ವಹಿಸುವ ಬ್ರಾಹ್ಮಣ ತಂತ್ರಿ ಮಾತ್ರ ಕುಳಿತೇ ಇರುತ್ತಾನೆ. ಭೂತ ಅವನಿರುವಲ್ಲಿಗೇ ಹೋಗಿ ಅವನಿಗೆ ಮೊದಲ ಗಂಧ-ಪ್ರಸಾದ ಕೊಟ್ಟು ಅವನನ್ನು ಗೌರವಿಸುತ್ತದೆ. ಅನಂತರ ನೇಮೋತ್ಸವ ನಡೆಸಿದ ಗುತ್ತಿನ ಮನೆಯವರನ್ನು ‘ಭೂತ’ ಗೌರವಿಸುತ್ತದೆ. ಕೊಟ್ಟ ಮನೆಗೆ ಲೌಕಿಕದ ಬದುಕಿನಲ್ಲಿ ತಾನು (ಭೂತ) ಯಾವ ಜಾತಿಗೆ ಸೇರಿದವನಾಗಿದ್ದನೋ ಅಂಥ ಜಾತಿಗೆ ಸೇರಿದವನಿಗೆ ಮರ್ಯಾದೆ ಸಲ್ಲುತ್ತದೆ.[19] ಹಾಗಾಗಿ ಭೂತಾರಾಧನೆಯ ಮೂಲಕ ಕೆಳಜಾತಿಯ ಜನರು ತಮ್ಮ ಸಾಮಾಜಿಕ ಅಸಮಾನ ಸ್ಥಿತಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನುವುದು ‘ಬೀಸು ಹೇಳಿಕೆ’ಯನ್ನು ಕೊಡುವುದಾಗುತ್ತದೆ. ಅಷ್ಟು ಮಾತ್ರವಲ್ಲ ಈ ಸಂಕೀರ್ಣ ಸ್ಥಿತಿಯನ್ನು ಮತ್ತು ವಿಚಿತ್ರ ವಿರೋಧಾಭಾಸವನ್ನು ಅಗ್ಗಗೊಳಿಸುವ ಮತ್ತು ಸರಳಗೊಳಿಸುವುದಾಗುತ್ತದೆ. ಈ ಆಚರಣೆಯ ಮೂಲಕ ಅಥವಾ ಇದು ನಮ್ಮ ಸಂಸ್ಕೃತಿ ಎಂದು ಹೇಳುವ ಮೂಲಕ ಸಾಂಸ್ಕೃತಿಕ ಕ್ರಿಯಾಚರಣೆಯೊಂದು ಮತ್ತದೇ ಹಳೆಯ ಸಾಂಪ್ರದಾಯಿಕ ಶ್ರೇಣೀಕರಣದ ಮಾದರಿಯ ಪುನರಾವರ್ತನೆಯನ್ನು ಇಲ್ಲಿ ಮರೆಯಲಾಗದು, ಮರೆಯ ಬಾರದು.[20] ಈ ಇಡೀ ಸಾಂಸ್ಕೃತಿಕ ಕ್ರಿಯಾಚರಣೆಯನ್ನು ಹೊಸದಾಗಿ ಅಭ್ಯಾಸ ಮಾಡುವ ತಾತ್ವಿಕತೆ ಇನ್ನಷ್ಟು ಬಲಗೊಳ್ಳಬೇಕಾಗಿದೆ. ಹೀಗೆ ಭೂ ಒಡೆತನದ ಅಡಿಪಾಯ ಹೊಂದಿದ್ದ ಯಜಮಾನಿಕೆಯನ್ನು ಸಹಜಗೊಳಿಸುವ ಕ್ರಿಯೆಯನ್ನು ಸಾಂಸ್ಕೃತಿಕ ಲೋಕದ ವ್ಯವಹಾರಗಳು ಮಾಡುತ್ತಿದ್ದವು. ಆದುದರಿಂದ ‘ಸ್ವ’ ಮತ್ತು ‘ಅನ್ಯ’ದ ಕಲ್ಪನೆ ರೂಢಿಗೆ ಬರುವುದು ಕೇವಲ ಸಂಕಥನದಿಂದಲ್ಲ; ಆರ್ಥಿಕ ಸಂಬಂಧಗಳು ಕೂಡ ಮಹತ್ತರವಾದ ಪಾತ್ರ ವಹಿಸುತ್ತವೆ. ಈ ಎರಡರಲ್ಲಿ (ಸಂಕಥನ ಮತ್ತು ಆರ್ಥಿಕ ಸಂಬಂಧಗಳಲ್ಲಿ) ಯಾವುದು ಮೊದಲು ಅಥವಾ ಪ್ರಾಮುಖ್ಯ ಎನ್ನುವ ಪ್ರಶ್ನೆಗೆ ಉತ್ತರಿಸುವುದು ಬೀಜ ವೃಕ್ಷ ನ್ಯಾಯ ಬಿಡಿಸಿದಷ್ಟೇ ಕಷ್ಟಕರ.

 

[1]ಹೆರಾಲ್ಡ್‌ ಎ ಸ್ಟುವರ್ಟ್‌, ಮೆಡ್ರಾಸ್ ಡಿಸ್ಟ್ರಿಕ್ಟ್‌ ಮೇನ್ವಲ್ಸ್ಸೌತ್ ಕೆನರಾ, ಮೆಡ್ರಾಸ್: ಪ್ರಿಂಟೆಡ್ ಬೈ ಸುಪರಿಂಟೆಂಡೆಂಟ್, ಗವರ್ನ್‌‌ಮೆಂಟ್ ಪ್ರೆಸ್, ೧೮೯೫, ಪುಟ ೧೧

[2]ಹೆರಾಲ್ಡ್ ಸ್ಟುವರ್ಟ್‌, ಮೆಡ್ರಾಸ್ ಡಿಸ್ಟ್ರಿಕ್ಟ್‌ ಮೇನ್ವಲ್ಸ್, ಪುಟ ೧೬-೨೫

[3]ಹೆರಾಲ್ಡ್ ಸ್ಟುವರ್ಟ್‌, ಮೆಡ್ರಾಸ್ ಡಿಸ್ಟ್ರಿಕ್ಟ್‌ ಮೇನ್ವಲ್ಸ್, ಪುಟ ೧೩೮

[4]ಹೆರಾಲ್ಡ್ ಸ್ಟುವರ್ಟ್‌, ಮೆಡ್ರಾಸ್ ಡಿಸ್ಟ್ರಿಕ್ಟ್‌ ಮೇನ್ವಲ್ಸ್, ಪುಟ ೧೩೮

[5]ಆಯಾಯ ಪ್ರದೇಶದ ಮೇಲ್ವರ್ಗದ ಚರಿತ್ರೆಗಳನ್ನು, ಆಚಾರ ವಿಚಾರಗಳನ್ನು, ಕಲೆ ಸಂಸ್ಕೃತಿಗಳನ್ನು ಆ ಪ್ರದೇಶದ ಚರಿತ್ರೆಗಳೆಂದು, ಆಚಾರ ವಿಚಾರಗಳೆಂದು, ಸಂಸ್ಕೃತಿಗಳೆಂದು ಪ್ರಚಾರ ಪಡಿಸುವುದು ಸಾಮಾನ್ಯ. ಇದನ್ನು ಡೊಮಿನೆಂಟ್‌ ಹಿಸ್ಟರಿಯೋಗ್ರಫಿ ಎನ್ನುತ್ತಾರೆ. ದಕ್ಷಿಣ ಕನ್ನಡದ ಚರಿತ್ರೆಯ ರಚನೆಯಲ್ಲೂ ಈ ಗುಣವನ್ನು ಕಾಣಬಹುದು. ಸ್ಥಳೀಯ ಮೇಲ್ವರ್ಗಗಳ ಸಾಮಾಜಿಕ ಸಾಂಸ್ಕೃತಿಕ ಬದುಕಿನ ವಿವರಗಳು ದಕ್ಷಿಣ ಕನ್ನಡದ ಚರಿತ್ರೆಯ ಬಹುತೇಕ ಬರಹಗಳಲ್ಲಿ ಹೆಚ್ಚಿನ ಜಾಗವನ್ನು ಆಕ್ರಮಿಸಿಕೊಂಡಿವೆ. ಬಿ.ಎ. ಸಾಲೆತ್ತೂರು ಅವರ, ಹಿಸ್ಟರಿ ಆಫ್ ತುಳುವಾಸ್ (ಪೂನಾ: ಓರಿಯಂಟಲ್ ಬುಕ್ ಏಜನ್ಸಿ, ೧೯೩೬), ಎಮ್. ಗಣಪತಿ ರಾವ್ ಅವರ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ (ಮಂಗಳೂರು: ಮಂಗಳೂರು ಟ್ರೇಡಿಂಗ್‌ ಎಸೋಶಿಯನ್, ೧೯೨೩), ಪಿ. ಗುರುರಾಜ್ ಭಟ್ ಅವರ, ತುಳುನಾಡುಸಾಮಾಜಿಕ ಚರಿತ್ರೆಯಲ್ಲಿ ಒಂದು ಸಂಶೋಧನಾತ್ಮಕ ವಿವೇಚನೆ. (ಉಡುಪಿ: ಭವ್ಯವಾಣಿ, ೧೯೬೩) ಮುಂತಾದ ಬರಹಗಳಲ್ಲಿ ಈ ಬಗೆಯ ಪ್ರಾದೇಶಿಕ ಚರಿತ್ರೆಯನ್ನು ನೋಡಬಹುದು.

[6]ಜೆ.ಸ್ಟರಕ್, ಮೆಡ್ರಾಸ್ ಡಿಸ್ಟ್ರಿಕ್ಟ್ ಮೇನ್ವಲ್ಸ್‌ ಸೌತ್ ಕೆನರಾ, ಮೆಡ್ರಾಸ್ ಗವರ್ನ್‌‌ಮೆಂಟ್‌ ಪ್ರೆಸ್, ೧೮೯೪, ಪುಟ ೧೫೭ ೧೫೯, ಎಡ್ಗರ್ ಥರ್ಸ್ಟನ್‌, ಕಾಸ್ಟ್ಸ್‌ ಆಂಡ್ ಟ್ರೈಬ್ಸ್ ಆಫ್ ಸೌತ್ ಇಂಡಿಯಾ, ವಾಲ್ಯೂಮ್-೧, ನ್ಯೂಡೆಲ್ಲಿ: ಏಶಿಯನ್ ಎಜುಕೇಶನಲ್ ಸರ್ವೀಸಸ್‌, ೧೯೮೭, ಪುಟ ೧೪೬-೧೭೧, ಶೀನಪ್ಪ ಹೆಗ್ಡೆ, ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾಲಪಾಂಡ್ಯನ ಅಳಿಯಕಟ್ಟು, ಉಡುಪಿ: ಗೋವಿಂದ ಪೈ ಸಂಶೋಧನ ಕೇಂದ್ರ, ೧೯೧೯, ಪುಟ ೧೧೧-೧೩೧ ಮುಂತಾದ ಬರಹಗಳಲ್ಲಿ ದಕ್ಷಿಣ ಕನ್ನಡದ ಮೇಲ್ಜಾತಿಗಳ ಗುಣಲಕ್ಷಣಗಳ ಬಗ್ಗೆ ಮಾಹಿತಿ ಇದೆ.

[7]ಕೆ.ವಿ.ರಮೇಶ್, ಎ ಹಿಸ್ಟರಿ ಆಫ್ ದಕ್ಷಿಣ ಕನ್ನಡ ಪ್ರೋಮ್‌ ದಿ ಅರ‍್ಲಿಯರ್ ಟೈಮ್ಸ್ ಟು ದಿ ಫಾಲ್ ಆಫ್ ವಿಜಯನಗರ, ಧಾರವಾಡ: ಕರ್ನಾಟಕ ಯುನಿವರ್ಸಿಟಿ, ೧೯೭೦, ಪುಟ ೧೪೦-೧೫೬

[8]ಸೀಮೆ, ಮಾಗಣೆ, ಗುತ್ತು ಇತ್ಯಾದಿ ಆಡಳಿತ ಪ್ರದೇಶಗಳ ಕಲ್ಪನೆ ವಿಜಯನಗರ ಅರಸರ ಕಾಲದಲ್ಲಿ ಚಾಲ್ತಿಗೆ ಬಂತು. ಹಲವಾರು ಗುತ್ತುಗಳು ಸೇರಿ ಮಾಗಣೆ ಮತ್ತು ಹಲವಾರು ಮಾಗಣೆಗಳು ಸೇರಿ ಸೀಮೆ ಆಗುತ್ತಿತ್ತು. ಹಲವಾರು ಕುಟುಂಬಗಳು ನೆಲೆ ನಿಂತ ಪ್ರದೇಶ ಊರು ಮತ್ತು ಒಂದು ಗುತ್ತಿನ ಕೆಳಗೆ ಕೆಲವು ಊರುಗಳು ಬರು‌ತ್ತಿದ್ದವು. ಗುರುರಾಜ್‌ ಭಟ್, ತುಳುನಾಡುಸಾಮಾಜಿಕ ಚರಿತ್ರೆ, ಪುಟ ೪೯-೬೪

[9]ಗುತ್ತಿನ ಮನೆಯವರು ಕರೆದಾಗ ಅವರ ಹೊಲದಲ್ಲಿ ಅಥವಾ ಮನೆಯಲ್ಲಿ ಬಿಟ್ಟಿ (ಕೂಲಿ ಇಲ್ಲದ) ಕೆಲಸ ಮಾಡಬೇಕಿತ್ತು. ಬಿಶು (ಯುಗಾದಿ) ಹಬ್ಬದಂದು ಅಥವಾ ಇತರ ಹಬ್ಬದಂದು ಗುತ್ತಿನ ಮನೆಯವರಿಗೆ ಬೆಳೆ ಕಾಣಿಕೆ ನೀಡಬೇಕಿತ್ತು. ಒಕ್ಕಲು ಮನೆಯವರು ಗುತ್ತಿನ ಮನೆಯವರ ರೀತಿಯಲ್ಲಿ ಬಟ್ಟೆ ಬರೆ ತೊಡುವುದು ನಿಷೇಧವಾಗಿತ್ತು. ಮೇಲಿನ ಮಾಹಿತಿ ಮೂಲಗಳು ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಿದ ಪ್ರಾಥಮಿಕ ಮಾಹಿತಿ ಮತ್ತು ಚಿತ್ತರಂಜನ್ ದಾಸ್ ಅವರ ಅಳಿದುಳಿದವರು (ಮಂಗಳೂರು: ನಾಗಶಕ್ತಿ ಪ್ರಕಾಶನ, ೧೯೯೦) ಕಾದಂಬರಿ.

[10]ಗುತ್ತಿನ ಮನೆಯವರು ಒಕ್ಕಲು ಮನೆಯಲ್ಲಿ ಕೋಳಿ ಅಥವಾ ದನದ ಕರು ಇತ್ಯಾದಿಗಳನ್ನು ಸಾಕಣೆಗೆ ಬಿಡುವ ಕ್ರಮ ಇತ್ತು. ಸಾಕಣೆಗೆ ಬಿಟ್ಟ ಕೋಳಿ ಅಥವಾ ದನಕರುಗಳನ್ನು ನೋಡುವ ನೆಪದಲ್ಲಿ ಗುತ್ತಿನ ಪುರುಷರು ಒಕ್ಕಲು ಮನೆಗೆ ಆಗಾಗ್ಗೆ ಭೇಟಿ ಕೊಡುತ್ತಿದ್ದರು. ಅಂತಹ ಭೇಟಿಗಳು ಒಕ್ಕಲು ಮನೆಯ ಪುರುಷ ಸದಸ್ಯರ ಮನೆಯಲ್ಲಿ ಇಲ್ಲದ ಮತ್ತು ಮಹಿಳೆ ಮಾತ್ರ ಇರುವ ಸಂದರ್ಭದಲ್ಲೆ ನಡೆಯುತ್ತಿದ್ದವು.

[11]ಹೆಚ್‌.ಹಾಪ್‌ಮನ್, ದಿ ಬಾಶಲ್ ಮಿಶನ್ ಇಂಡಸ್ಟ್ರೀಸ್, ಮಂಗಳೂರು: ಬಾಶಲ್ ಮಿಶನ್‌ಪ್ರೆಸ್, ೧೯೧೩, ಪುಟ ೪

[12]ಹೆಚ್. ಹಾಪ್‌ಮನ್, ದಿ ಬಾಶಲ್ ಮಿಶನ್ ಇಂಡಸ್ಟ್ರೀಸ್, ಪುಟ ೪

[13]ಕ್ಷೇತ್ರಕಾರ್ಯದಿಂದ ಸಂಗ್ರಹಿಸಿದ ಪ್ರಾಥಮಿಕ ಮಾಹಿತಿ ಮತ್ತು ಹೆಚ್.ನಾಗವೇಣಿ ಅವರ, ಗಾಂಧಿ ಬಂದ, (ಬಳ್ಳಾರಿ: ಲೋಹಿಯಾ ಪ್ರಕಾಶನ) ಕಾದಂಬರಿ ಮಾಹಿತಿ ಮೂಲಗಳು.

[14]ಶಿವರಾಮ ಕಾರಂತ, ‘ಯಕ್ಷಗಾನ’, ಮಾಲಿನಿ ಮಲ್ಯ (ಸಂ), ಶಿವರಾಮ ಕಾರಂತರ ಲೇಖನಗಳು, ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾಲಯ, ೧೯೯೪, ಪುಟ ೫೮೮-೬೦೫ ಮತ್ತು ರವಿ ಆರ್‌ ಆಂಚನ್, ಯಕ್ಷಗಾನ, ಬಾಂಬೆ: ಕನ್ನಡ ಸಾಹಿತ್ಯ ಸಂಘ, ೧೯೯೨, ಪುಟ ೫೫-೬೧, ರಾಮಚಂದ್ರ ಉಡುಪ, ‘ಯಕ್ಷಗಾನ ಅಂದು-ಇಂದು-ಮುಂದು’, ಸಿ. ಉಪೇಂದ್ರ ಸೋಮಯಾಜಿ (ಸಂ), ಬಾಲಗೋಪಾಲ ರಜತ ಸಂಚಿಕೆ, ಉಡುಪಿ: ಸಾಲಿಗ್ರಾಮ ಮಕ್ಕಳ ಮೇಳ, ೨೦೦೨, ಪುಟ ೪೭-೫೧, ಶಿವರಾಮ ಕಾರಂತ, ಯಕ್ಷಗಾನ ಬಯಲಾಟ, ಬೆಂಗಳೂರು: ಕನ್ನಡ ಸಂಸ್ಕೃತಿ ನಿರ್ದೇಶನಾಲಯ, ೧೯೮೩.

[15]ಜಾನಪದ ಕಥನಗಳು ಯಕ್ಷಗಾನ ರೂಪದಲ್ಲಿ ಬಂದವೆಂದು ಕುಶಿ ಪಡುವ ಅಗತ್ಯವಿಲ್ಲವೆಂದು ಚಂದ್ರಶೇಖರ ದಾಮ್ಲೆಯವರ ಮಾತುಗಳು ಎಚ್ಚರಿಸುತ್ತವೆ. ಚಂದ್ರಶೇಖರ ದಾಮ್ಲೆ, ‘ಯಕ್ಷಗಾನದಲ್ಲಿ ಪರಿವರ್ತನೆ – ವೇಗ ಮತ್ತು ವಿಸ್ತಾರ’, ಪ್ರಭಾಕರ ಜೋಶಿ (ಸಂ), ಯಕ್ಷಗಾನ ಚಿಂತನೆ, ಮುಂಡಾಜೆ: ಶತಾಬ್ಧಿ ವಿದ್ಯಾಲಯ ಸಮಿತಿ, ೧೯೯೦, ಪುಟ ೧೭-೨೭.

[16]ಜೆ. ಕೊಮರಾಪ್, ಬಾಡಿ ಆಫ್ ಪವರ್, ಸ್ಪಿರಿಟ್ ಆಫ್‌ ರೆಸಿಸ್ಟೆನ್ಸ್‌, ಚಿಕಾಗೋ: ಚಿಕಾಗೋ ಯುನಿವರ್ಸಿಟಿ ಪ್ರೆಸ್, ೧೯೮೫

[17]ಭೂತಾರಾಧನೆಯನ್ನು ಈ ಬಗೆಯಲ್ಲಿ ನೋಡುವ ದೃಷ್ಟಿಕೋನವನ್ನು ಬಿ.ಎ. ವಿವೇಕ ರೈ: ತುಳು ಜಾನಪದ ಸಾಹಿತ್ಯ (ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್, ೧೯೮೫), ಕೆ.ಚಿನ್ನಪ್ಪ ಗೌಡ, ಭೂತಾರಾಧನೆ ಜಾನಪದೀಯ ಅಧ್ಯಯನ (ಮಂಗಳಗಂಗೋತ್ರಿ: ಮದಿಪು ಪ್ರಕಾಶನ. ೧೯೯೦) ಬರಹಗಳಲ್ಲಿ ನೋಡಬಹುದು.

[18]ವಿವಿಧ ಬಗೆಯ ಭೂತಗಳು ಮತ್ತು ಅವುಗಳ ಆಚರಣೆಯ ವಿಸ್ತೃತ ಚಿತ್ರಣವನ್ನು ಕೆ.ಚಿನ್ನಪ್ಪ ಗೌಡ ಇವರ ಭೂತಾರಾಧನೆ – ಜಾನಪದೀಯ ಅಧ್ಯಯನದಲ್ಲಿ ನೋಡಬಹುದು. ಇದರ ಜತೆಗೆ ಸುಶೀಲಾ ಉಪಾಧ್ಯಾಯ ಅವರ, ದಕ್ಷಿಣ ಭಾರತ ಜಾನಪದ ಕೆಲವು ನೋಟಗಳು, (ಉಡುಪಿ: ಗೋವಿಂದ ಪೈ ಸಂಶೋಧನಾ ಕೇಂದ್ರ, ೧೯೯೮), ಸಂಪಾದಕೀಯ ಸಮಿತಿ, ಶೀನಪ್ಪ ಹೆಗಡೆ ಸಮಗ್ರ ಸಾಹಿತ್ಯ (ಉಡುಪಿ: ಪೊಳಲಿ ಶೀನಪ್ಪ ಹೆಗಡೆ ಜನ್ಮ ಶತಾಬ್ಧಿ ಸಮಿತಿ, ೧೯೯೧) ಮುಂತಾದ ಬರಹಗಳಲ್ಲಿ ನೋಡಬಹುದು.

[19]ಚಿನ್ನಪ್ಪ ಗೌಡ, ಭೂತಾರಾಧನೆ ಜಾನಪದೀಯ ಅಧ್ಯಯನ, ಪುಟ ೧೯೪-೧೯೮

[20]ಭೂತಾರಾಧನೆ ಕುರಿತ ಈ ನಿಲುವನ್ನು ನಿಕೊಲಸ್ ಬಿ ಡರ್ಕ್ಸ್‌ ಅವರ ಬರಹಗಳಿಂದ ಪಡೆಯಲಾಗಿದೆ. ಭೂತಾರಾಧನೆಯಂತಹ ಆಚರಣೆಗಳನ್ನು ತಳವರ್ಗದ ಪ್ರತಿಭಟನೆ ಎಂದು ವ್ಯಾಖ್ಯಾನಿಸುವ ಕೊಮರಾಪ್ ಅವರ ನಿಲುವನ್ನು ನಿಕೊಲಸ್ ಒಪ್ಪುವುದಿಲ್ಲ. ನಿಕೊಲಸ್ ಪ್ರಕಾರ ದಿನನಿತ್ಯದ ಬದುಕಿನ ಏಣಿಶ್ರೇಣಿಗಳನ್ನು ಮತ್ತು ಅಧಿಕಾರದ ಹಂಚುವಿಕೆಯಲ್ಲಿನ ತಾರತಮ್ಯವನ್ನು ಇಂತಹ ಸಾಂಸ್ಕೃತಿಕ ಆಚರಣೆಯಲ್ಲೂ ಕಾಣಬಹುದು. (ನಿಕೊಲಸ್ ಬಿ.ಡರ್ಕ್ಸ್‌ ಅವರ, ‘ರಿಚ್ಚುವಲ್ ಅಂಡ್ ರೆಸಿಸ್ಟೆನ್ಸ್ – ಸಬ್‌ವರ್ಶನ್‌ ಯಾಸ್ ಎ ಸೋಶಿಯಲ್ ಫೇಕ್ಟ್’, ಎನ್ನುವ ಲೇಖನ ಡಿ. ಹೇನ್ಸ್‌ ಮತ್ತು ಜಿ.ಪ್ರಕಾಶ್ ಸಂಪಾದಿಸಿದ, ಕಂಟೆಸ್ಟಿಂಗ್‌ ಪವರ್‌ ರೆಸಿಸ್ಟೆನ್ಸ್ ಆಂಡ್ ಎವರಿಡೇ ಸೋಶಿಯಲ್ ರಿಲೇಶನ್ಸ್‌ ಇನ್ ಸೌತ್ ಏಶಿಯಾ, ಡೆಲ್ಲಿ: ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್, ೧೯೯೧, ಪುಟ ೨೧೩-೩೮)