ಋತುಸ್ನಾನ

ಹೆಣ್ಣು ಮಕ್ಕಳಲ್ಲಿ ವಯಸ್ಸಿಗ ತಕ್ಕಂತೆ ಮಾನಸಿಕ ಹಾಗೂ ದೈಹಿಕ ಬದಲಾವಣೆ ಆಗುತ್ತಾ ಇರುತ್ತದೆ. ಇವುಗಳನ್ನು ಗುರುತಿಸಲು, ಇತರರಿಗೆ ತಿಳಿಸಲು ಜನಪದರು ಕೆಲವು ಆಚರಣೆಗಳನ್ನು ಆಚರಿಸುತ್ತಾರೆ. ಆವುಗಳಲ್ಲಿ ಋತುಸ್ನಾನ ಒಂದು . ಹಿಂದೆ ಒಂದು ಕಾಲಕ್ಕೆ ಈ ಆಚರಣೆ ಬಹಳ ಸಂಭ್ರಮದಿಂದ ಕಟ್ಡುನಿಟ್ಟಾಗಿ ಆಚರಿಸಲ್ಪಡುತ್ತಿತ್ತು. ಆಧುನಿಕತೆಯ ಗಾಳಿ ಬೀಸಿದಂತೆ ಇವೆಲ್ಲ ಕೊಚ್ಚಿಕೊಂಡು ಹೋದವು. ಇಂತಹ ಆಚರಣೆಗಳು ಹಿಂದೆ ಆಚರಿಸಲ್ಪಡುತ್ತಿದ್ದವು ಎಂಬ ಇತ್ತುಗಳ ಧ್ವಜವನ್ನು ಎತ್ತಿ ಹಿಡಿಯುವ ಕೆಲಸ ಮಾತ್ರ ನಡೆದಿದೆ. ಇದಕ್ಕೆ ಬೋವಿ (ಮೋಯ) ಜನಾಂಗ ಹೊರತಲ್ಲ.

ಬೋವಿ (ಮೋಯ)ಗಳ ಹೆಣ್ಣು ಋತುಮತಿಯಾದಾಗಿನ ಆಚರಣೆಯನ್ನು ’ಬೈಸರ್ಚೆ ಮಜಾಲ್ಯೋಂ’ಎನ್ನುವರು. ಇದನ್ನು ನಡೆಸಿಕೊಡುವವರು ಹೆಂಗಸರು. ಇಲ್ಲಿ ಅವರದೇ ಯಜಮಾನಿಕೆ. ಹೆಣ್ಣು ಋತುಮತಿಯಾದಾಗ ಬೆದೆಯ ಕಾರ್ತಿಯರಿಗೆ ಹೇಳಿ ಕಳುಹಿಸುತ್ತಾರೆ (ಬೆದೆಯ ಕಾರ್ತಿಯರು = ನಾಲ್ಕು ಪ್ರಮುಖ ಬಳಿಯ ಮುತ್ತೈದೆ ಹೆಂಗಸರು) ಅವರು ಬಂದ ಬಳಿಕ ಹೆಣ್ಣನ್ನು ತೆಂಗಿನಮರದ ಅಥವಾ ಹಲಸಿನ ಮರದ ಬುಡದಲ್ಲಿ ನಾಲ್ಕು ಸೀಯಾಳ ಹಾಕಿಸಿ ಕುಳ್ಳಿರಿಸುತ್ತಾರೆ. ಐವರು ಸಣ್ಣ ಸಣ್ಣ ಹೆಣ್ಣು ಮಕ್ಕಳ ಕೈಯಲ್ಲಿ ಋತುಮತಿಯಾದ ಹೆಣ್ಣಿನ ತಲೆಗೆ ಎಣ್ಣೆ ಹಾಕಿಸುವರು. ಅವಳಿಗೆ ಆ ಬಳಿಕ ಸೀಯಾಳಕ್ಕೆ ೩/೫ ಸುತ್ತು ಬರಿಸಿ ಅವಳನ್ನು ಆ ಕಾಯಿಗಳ ಮೇಲೆ ಕುಳ್ಳಿರಿಸುತ್ತಾರೆ. ಬೆದೆಯ ಕಾರ್ತಿಯರು ಕಳಶದಲ್ಲಿ ನೀರು ತುಂಬಿಸಿ ತಂದು ಅವಳ ತಲೆಗೆ ಹೊಯ್ಯುತ್ತಾರೆ. ಬಳಿಕ ಅವಳನ್ನು ಹೊಲೆಮನೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸುತ್ತಾರೆ. ಹೊಸಬಟ್ಟೆ ತೊಡಿಸಿ ಮಡಿವಾಳ್ತಿ ಕೊಟ್ಟ ಮಡಿ ಬಟ್ಟೆಯನ್ನು ಅವಳ ಮೈ ಮೇಲೆ ಹಾಕಿ ಅವಳನ್ನು ಮನೆಯ ಒಳಗೆ ಕರೆದುಕೊಂಡು ಹೋಗುವರು. ಸುಮಾರು ೧೧ ಅಥವಾ ೧೫ರಲ್ಲಿ ಮೈ ನೆರೆದಾಗಿನ ಮದುವೆ (ಬೈಸರ್ಚೆ ಮಜಾಲೊಂ) ಮಾಡಿಸುವರು.  ಈ ನಡುವೆ ಹೆಣ್ಣು ದೊಡ್ಡವಳಾದ ವಾರ್ತೆಯನ್ನು ನೆಂಟರಿಷ್ಟರಿಗೆ ಹೇಳುವರು. ತೀರ ಹತ್ತಿರದ ಸಂಬಂಧಿಕರು ಅವಲಕ್ಕಿ ಬೆಲ್ಲ ಕಾಯಿಯನ್ನು ತಂದು ಅವಲಕ್ಕಿ ಕಲಸಿ ಹೆಣ್ಣೀಗೆ ತಿನ್ನಿಸುವರು. ಬೋವಿ (ಮೋಯ) ಗಳಲ್ಲಿ ಹಿಂದೆ ಬಾಲ್ಯ ವಿವಾಹ ಪದ್ಧತಿ ಇತ್ತು. ಹೆಣ್ಣು ಗಂಡನ ಮನೆಯಲ್ಲಿ ಇರುವಾಗ ದೊಡ್ಡವಳಾದರೆ ತಾಯಿ ಮನೆಯವರು ಅವಲಕ್ಕಿ, ಕಾಯಿಬೆಲ್ಲ ತಂದು ತಿನ್ನಿಸುವರು. ಹಾಗೂ ಮಗಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುವರು.  ತಾಯಿ ಮನೆಯಲ್ಲಿಯೇ ದೊಡ್ಡವಳಾದರೆ ಗಂಡನ ಮನೆಯವರು ಮುಡಿ ಅವಳಕ್ಕಿ, ಕಾಯಿ, ಬೆಲ್ಲ ತರುವರು. ಆಚರಣೆಯ  ಹಿಂದಿನ ದಿನ ಹೆಣ್ಣಿನ ಕೈಗೆ ಮದರಂಗಿ ಇಡುವರು. ಆಚರಣೆಯಂದು ನೆಂಟರಿಷ್ಟರು (ಹೆಂಗಸರು) ಸೇರುವರು. ಮಡಿವಾಳ್ತಿಯ ಮನೆಯ ಒಳಗೆ ಚಾವಡಿಯಲ್ಲಿ (ಕೊಟ್ಟು) ರಂಗೋಲಿ ಬಿಡಿಸುವಳು.  ರಂಗೋಲಿ ಬಿಡಿಸಿದಲ್ಲಿ ಮಣೆ ಅಥವಾ ಮುಕ್ಕಾಲಿಗ ಇಟ್ಟು ಹೆಣ್ಣನ್ನು ಅದರಲ್ಲಿ ಕುಳ್ಳಿರಿಸುವರು. ಮುಖ ಮುಚ್ಚಿ ಕುಳಿತ ಹೆಣ್ಣನ್ನು ಮಡಿವಾಳ್ತಿಯ ’ಮಾಲೋರೆ ಕಣ್ ಕೆಟ್ಟಕೊಳ್ಳುನೋ ಮಳ್ ಮಾಟಿಂ ಎಡೇ ಮೊಗೊಂ ತೊರ್ ನೊಳೊನೋ’ ಎಂದು ಹೇಳಿ ಹೆಣ್ಣಿನ ಮುಖವನ್ನು ಮೇಲೆತ್ತುತ್ತಾರೆ. ಎಲ್ಲರೂ ಅವಳನ್ನು ಸುಖಿಯಾಗಿ ಬಾಳು ಎಂದು ಹರಸುತ್ತಾರೆ. ಬಳಿಕ ಅವಳನ್ನು ಒಳಗೆ ಕರೆದುಕೊಂಡು ಹೋಗಿ ಜರಿ ಸೀರೆ ಉಡಿಸಿ, ತಲೆ ತುಂಬಾ ಹೂವಿನ ಜಲ್ಲಿ ಹಾಕುವರು. ಚಿನ್ನಾಭರಣಗಳನ್ನು ಇಟ್ಟು ಕೈತುಂಬಾ ಬಳೆ ತೊಡಿಸುವರು. ಹೀಗೆ ಸಿಂಗರಿಸಿದ ಬಳಿಕ ಅವಳನ್ನು ಕೈಹಿಡಿದು ಕರೆದುಕೊಂಡು ಹೊರಗೆ ಚಾವಡಿಗೆ ಬರುವರು. ಮಡಿವಾಳ್ತಿ ಹಾಕಿದ ಚೌಕಾಕಾರದ ನಡೆಮಡಿಯಲ್ಲಿ ತೂಗುದೀಪ ಹಿಡಿದ ಮುತ್ತೈದೆ. ಮಡಿ ಬಟ್ಟೆಯ ಬಟ್ಟಲನ್ನು ಹಿಡಿದ ಮುತ್ತೈದೆ, ಬಳಿಕ ಮದುಮಗಳು, ಅವಳ ಸೊಂಟ ಹಿಡಿದು ನಡೆಸುವ ತೊದೊತಿ (ಸೋದರತ್ತೆ ಅಥವಾ ಸೋದರತ್ತೆ ಮಗಳು) ಕೊನೆಯಲ್ಲಿ ಸಣ್ಣ ಹೆಣ್ಣು ಮಗಳು ಇವರೆಲ್ಲರೂ ನಡೆಮಡಿಯಲ್ಲಿ ನಿಧಾನವಾಗಿ ನಡೆದು ೫/೭ ಪ್ರದಕ್ಷಿಣೆ ಹಾಕುವರು. ಹೀಗೆ ಪ್ರದಕ್ಷಿಣೆ ಬಂದು ಬಳಿಕ ಮದುಮಗಳನ್ನು ನಡೆಮಡಿಯ ನಡುವೆ ಮಣೆಯಿಟ್ಟು ಕುಳ್ಳಿರಿಸುತ್ತಾರೆ. ಹಿರಿಯರು, ನೆಂಟರು, ಆತ್ಮೀಯರು ಉಡುಗೊರೆ ಕೊಟ್ಟು, ಅಕ್ಷತೆ ಹಾಕಿ ಆಶೀರ್ವದಿಸುವರು. ಬಂದವರಿಗೆ  ಸೊಗಸಾದ ಊಟದ ಏರ್ಪಾಡು ಮಾಡಿರುತ್ತಾರೆ. ಹೆಣ್ಣಿನ ಅಜ್ಜಿಮನೆಗೆ ಅವಳನ್ನು ಕರೆದುಕೊಂಡು ಹೋಗುವರು. ಎರಡು ದಿನದ ಬಳಿಕ ಅವಳನ್ನು ಕರೆದುಕೊಂಡು ಹೋಗುವರು. ಎರಡು ದಿನದ ಬಳಿಕ ಅವಳನ್ನು ಕರೆದು ತರುವರು. ಇಂದು ಆ ಆಚರಣೆ ಕಾಲಗರ್ಭದಲ್ಲಿ ಲೀನವಾಗಿದೆ.

ವಿವಾಹ

ಬಹಳ ಹಿಂದೆ ಮೋಯ ಜನಾಂಗದಲ್ಲಿ ಬಾಲ್ಯ ವಿವಾಹ ಪದ್ಧತಿ ಜಾರಿಯಲ್ಲಿತ್ತು. ಹೆಣ್ಣು ಋತುಮತಿಯಾಗುವ ಮೊದಲೇ ವಿವಾಹ ಮಾಡುತ್ತಿದ್ದರು. ಹೆಚ್ಚಾಗಿ ಸೋದರಿಕೆಯಲ್ಲಿಯೇ ವಿವಾಹವಾಗುತ್ತಿತ್ತು. ಹೆಣ್ಣು / ಗಂಡು ನೋಡಿ ಮೆಚ್ಚಿಕೆ  ಒಪ್ಪಿಗೆಯಾದಲ್ಲಿ ಮಾತುಕತೆಯಾಡಿ ವಿವಾಹ ನಿಶ್ಚಯಿಸುತ್ತಾರೆ. ದಿನ, ಮುಹೂರ್ತ ನಿಗದಿ ಪಡಿಸುತ್ತಾರೆ. ಆಪ್ತರಿಗೆ, ನೆಂಟರಿಷ್ಟರಿಗೆ, ಹೇಳಿಕೆ ಮಾಡಿ ಕರೆಸುತ್ತಾರೆ. ವಧೂ-ವರರ ಮನೆಯಲ್ಲಿ ಚಪ್ಪರದಂದು ಎಲ್ಲರೂ ಸೇರುತ್ತಾರೆ. ವಧು ನಿಶ್ಚಯ ತಾಂಬೂಲ ನಡೆಯದಿದ್ದಲ್ಲಿ ಚಪ್ಪರದಂದು ಹೆಣ್ಣಿನ ಮನೆಯಲ್ಲಿ ಈ ಆಚರಣೆ ನಡೆಯುತ್ತದೆ. ವರನ ಮನೆಯ ಹಿರಿಯರು ವಧುವಿನ ಮನೆಯಲ್ಲಿ ಈ ಆಚರಣೆಯನ್ನು ನಡೆಸಿ ವರನ ಮನೆಯಲ್ಲಿ ಮರಳಿ ಸೇರುವರು.

ಮರುದಿನ ವರನ ಮನೆಯಲ್ಲಿ ಮುಖಸೇಸೆ (ಮೋಟೋಳು) ನಡೆಯುತ್ತದೆ. ಕ್ಷೌರಿಕನು ವರನ ಕ್ಷೌರ ಮಾಡಿದ ಬಳಿಕ ಅವನು ಸ್ನಾನ ಮುಗಿಸಿ ಬರುವನು. ಮುಹೂರ್ತದ ವೇಳೆಯಲ್ಲಿ ಭಗವತಿ ಪಾತ್ರಿಗಳ ಕೈ ಬಳೆ (ಮುರ್ಗಿ) ಇಡಿಸಿ, ಚಕ್ರಸರ ಹಾಗೂ ಕಾಲುಂಗರ ತೊಡಿಸುವರು. ವರನನ್ನು ಕಳಸ ಸ್ನಾನಕ್ಕೆ ಕರೆದುಕೊಂಡು ಹೋಗುವರು. ಕಳಸದ ಸ್ನಾನದ ನೀರನ್ನು ಬೆದೆಯ ಕಾರ್ತಿಯರು ನೆರೆಮನೆಯಿಂದ (ನಾಲ್ಕು ಮಂದಿ ಮುತ್ತೈದೆ ಮಹಿಳೆಯರು) ತರುವರು. ಮೇಲ್ಯಾಪಿನ (ತಲೆಯ ಮೇಲೆ ಬಿಡಿಸಿ ಹಿಡಿದ ಬಿಳಿ ಬಟ್ಟೆ) ಅಡಿಯಲ್ಲಿ ಬೆದೆಯ ಕಾರ್ತಿಯರು ಕಳಸದೊಂದಿಗೆ ನೀರಿಗೆ ಹೋಗುವರು. ಹಾಗೆ ಕಳಸದಲ್ಲಿ ನೀರು ತುಂಬಿಸಿ ಅವರು ಅದೇ ರೀತಿಯಾಗಿ ಹಿಂತಿರುಗಿ ಮದುವೆಯ ಮನೆಯ ಅಂಗಳದಲ್ಲಿಟ್ಟ ಪೀಠದ (ಕುರ್ಚಿ)ನಾಲ್ಕು ಬದಿಯಲ್ಲಿ  ಇಡುವರು. ತೂಗುದೀಪ ಹಿಡಿದ ಮುತ್ತೈದೆ ಮಹಿಳೆ, ಅವಳ ಹಿಂದೆ ಮಡಿಬಟ್ಟೆಯ ಬಟ್ಟಲನ್ನು ಹಿಡಿದ ಮಹಿಳೆ, ಅವರ ಹಿಂದೆ ವರ ಹೀಗೆ ಮೂವರು ಪ್ರದಕ್ಷಿಣೆ ಬರುವರು. ಪೀಠದಲ್ಲಿ ವರನನ್ನು ಕುಳ್ಳಿರಿಸಿ ಅವನ ಎದುರಿನಲ್ಲಿಟ್ಟು ಮಣೆಯ ಮೇಲೆ ತೂಗುದೀಪ, ಹಾಗೂ ಮಡಿಬಟ್ಟೆಯ ಬಟ್ಟಲನ್ನು ಇಡುವರು. ವರನಿಗೆ ಅವರಿಬ್ಬರೂ ಅಕ್ಷತೆ ತಳಿಯುವರು. ಬೆದಿಯ ಕಾರ್ತಿಯರು ಕಳಸದ ನೀರನ್ನು ಮೊದಲು ಮಾವಿನ ಎಲೆಯಿಂದ  ಪ್ರೊಕ್ಷಿಸಿ ಬಳಿಕ ಆ ನೀರನ್ನು ವರನ ತಲೆಗೆ ಹೊಯ್ಯುವರು. ಯಥಾಪ್ರಕಾರ ಮುತ್ತೈದೆಯರು ಬಂದು ವಧುವಿಗೆ ಧಾರೆ ಸೀರೆ ಕೊಡುವರು (ಪೊಡಕೊಡುಕುನೋ) ಆಚರಣೆ ನಡೆಯುವುದು ಧಾರೆ ಸೀರೆ ಪಡೆದ ವಧುವಿನ ಸೋದರಮಾವ ಅದನ್ನು ವಧುವಿನ ಕೈಯಲ್ಲಿ ಕೊಟ್ಟಾಗ ವಧು ಪಡೆದುಕೊಂಡು ಸೋದರ ಮಾವನ ಕಾಲಿಗೆ ವಂದಿಸುವಳು. ವರನ ಕಡೆಯ ಹೆಂಗಳೆಯರು ವಧುವನ್ನು ಸೀರೆ ಉಡಿಸಿ,  ಮಲ್ಲಿಗೆಯ ಜಲ್ಲಿ ಹಾಕಿ, ಸೊಂಟದ ಪಟ್ಟಿಯಿಟ್ಟು ಸಿಂಗರಿಸಿ ಧಾರೆಗೆ ಕರೆದು ತರುವರು. ತೂಗುದೀಪ ಹಿಡಿದ ಮುತ್ತೈದೆ, ಮಡಿ ಬಟ್ಟೆಯ ಬಟ್ಟಲಿನ ಮುತ್ತೈದೆ, ಅವರ ಹಿಂದೆ ವರ, ವರನ ಹಿಂದೆ ವಧು ವಧುವಿನ ಹಿಂದೆ ಅವಳ ತೊದೊತಿ (ಸಹಕರಿಸುವ ಮುತ್ತೈದೆ) ಹೀಗೆ ಐವರು ಪೀಠದ ನಾಲ್ಕು ಮೂಲೆಗಳಲ್ಲಿ ಇಟ್ಟಿರುವ ಕಾಲುದೀಪ, ಅದರ ಒಳಗೆ ಮಡಿವಾಳ್ತಿ ಹಾಕಿರುವ ಚೌಕಾಕಾರದ ನಡೆಮಡಿಯಲ್ಲಿ ೫/೭ ಪ್ರದಕ್ಷಿಣೆ ಬರುವರು. ಪ್ರದಕ್ಷಿಣೆ ಪೂರೈಸಿದ ಬಳಿಕ ವಧು ವರರನ್ನೂ ಪೀಠದಲ್ಲಿ ಕುಳ್ಳಿರಿಸುವರು. ಅವರ ಎದುರಿನಲ್ಲಿ ಅಕ್ಕಿಯ ಸಣ್ಣ ರಾಶಿ ಇರುತ್ತದೆ. ಅದರ ಎದುರಿನಲ್ಲಿ ಇಟ್ಟ ಮಣೆಯಲ್ಲಿ ತೂಗುದೀಪ, ಮಡಿ ಬಟ್ಟೆಯ ಬಟ್ಟಲನ್ನು ಇಟ್ಟು ಮುತ್ತೈದೆಯರು ದೀಪಕ್ಕೆ ಅಕ್ಷತೆ ಹಾಕಿ ವಂದಿಸುವರು. ವಧೂ ವರರಿಗೆ ಅಕ್ಷತೆಯನ್ನು ತಳಿಯುವರು. ಚಪ್ಪರದ ಮುಖ್ಯಸ್ಥ ಬಂದು ೧೧ ಸ್ಥಾನಗಳ ಅನುಮತಿ ಕೇಳಿ ಕಂಚಿ (ಬಟ್ಟಲು) ಯನ್ನು ಇಟ್ಟು ತಮ್ಮ ಉಡುಗೊರೆಯನ್ನು ವಧೂವರರಿಗೆ ಕೊಟ್ಟು ಅಕ್ಷತೆ ತಳಿಯುವವರು.

ಧಾರೆಯ ಮುಹೂರ್ತ ಸಮೀಪಿಸಿದಾಗ ವರನ ಬಲ ಕೈಯಲ್ಲಿ ವಧುವಿನ ಬಲಕೈಯಲ್ಲಿ ಇಟ್ಟು ಅದರ ಮೇಲೆ ವೀಳೆಯದೆಲೆ ಅಡಿಕೆ ಇಟ್ಟು ಉರಿಸಿದ ದೀಪ (ಬತ್ತಿ)ವನ್ನು ಅದರ ಮೇಲೆ ಇಟ್ಟು ವಧುವಿನ ತಂದೆ ೧೧ ಸ್ನಾನಗಳ ವರ ಅನುಮತಿ ಕೇಳುತ್ತಾ ತನ್ನ ಮಗಳನ್ನು ಇಂತಹವರ ಮಗನಿಗೆ ಧಾರೆ ಎರೆದು ಕೊಡುತ್ತಾನೆ ಎಂದು ೩-೩ ಸಲ ಹೇಳುತ್ತಾ ಅಕ್ಕಿ ಹಾಕುತ್ತಾ ಅವರೀರ್ವರ ಕೈಯನ್ನು ಕೆಳಗೆ ಇರುವ ಅಕ್ಕಿಯ ರಾಶಿಯ ಮೇಲೆ ಜಾಗ್ರತೆಯಾಗಿ ಇಡುವರು. ವಧೂ ವರರು ಎದ್ದು ನಿಂತು ಹಾರ ವಿನಿಮಯ ಮಾಡಿಕೊಳ್ಳುವರು. ಬಳಿಕ ಹಿರಿಯರೆಲ್ಲರೂ ಅಕ್ಷತೆ ತಳಿದು ಆಶೀರ್ವದಿಸಿ ಉಡುಗೊರೆ ಕೊಡುವರು.

ಊಟದ ಬಳಿಕ ಹೆಣ್ಣು ಇಳಿಸಿ ಕೊಡುವ ಆಚರಣೆ : ಈ ಆಚರಣೆ ಮುಗಿದ ಬಳಿಕ ವರನು ವಧುವನ್ನು ದಿಬ್ಬಣ ಸಮೇತ ತನ್ನ ಮನೆಗೆ ಕರೆದುಕೊಂಡು ತರುವನು. ಅಲ್ಲಿ ವರನ ತಾಯಿ ಚಪ್ಪರ ಬಾಗಿಲಲ್ಲಿ ವಧೂವರರನ್ನು ಬರಮಾಡಿಕೊಂಡು ನಿವಾಳಿಸಿ ತೆಗೆದು ಚೆಲ್ಲುತ್ತಾಳೆ. ವಧೂವರರನ್ನು ಅಂಗಳದಲ್ಲಿ ಕಳಸ ಸ್ನಾನಕ್ಕಾಗಿ ಕೂಡಿಸುತ್ತಾರೆ. ತೂಗುದೀಪದವರು ಹಾಗೂ ಮಡಿ ಬಟ್ಟೆಯು ಬಟ್ಟಲಿನವರು, ವರ, ವಧು, ತೊದೊತೆ (ಸಹಕರಿಸುವರು) ಪ್ರದಕ್ಷಿಣೆ ಬಂದು ಪೀಠದಲ್ಲಿ ಕುಳಿತುಕೊಳ್ಳುವರು. ತೂಗುದೀಪ ಹಾಗೂ ಮಡಿ ಬಟ್ಟೆಯ ಬಟ್ಟಲಿನೊಂದಿಗೆ ಹಿಂತಿರುಗುವರು. ವರನನ್ನು ಸ್ನಾನಕ್ಕೆ ಕರೆದೊಯ್ಯುವರು. ಬಾವಿಯ ಸ್ನಾನಕ್ಕೆ ಹೋದ ವರನನ್ನು ಅವನ ಮಿತ್ರರು ಹಳದಿನೀರು, ಕೆಂಪು ನೀರು ತಯಾರು ಮಾಡಿಟ್ಟು ಲೇವಡಿ ಮಾಡುತ್ತಾ ಹೊಯ್ಯುವರು. ಸ್ನಾನ ಮುಗಿಸಿ ವರನು ಮುಖ ಸೇಸೆಗೆ ಸಿದ್ಧನಾಗುವನು. ಬಿಳಿ ಜುಬ್ಬ ಹಾಕಿಸಿ ಸೈಕಲ್ ಕಚ್ಚೆ ಉಡಿಸುವರು. ತಲೆಗೆ ಗುಲಾಬಿ ಬಣ್ಣದ ಬಟ್ಟೆಯಿಂದ ಮುಂಡಾಸುಕಟ್ಟಿ ಒಂದು ತುದಿಯನ್ನು ತುರಾಯಿಯಂತೆ ತಲೆಯ ಮೇಲೆ ಬಿಡಿಸುವರು. ಇನ್ನೊಂದು ತುದಿಯನ್ನು ಬೆನ್ನ ಹಿಂದೆ ಇಳಿಯ ಬಿಡುವರು. ತಲೆಯ ಹಿಂಬದಿಯಲ್ಲಿ ಮುಂಡಾಸಿನ ಮೇಲೆ ಮಲ್ಲಿಗೆಯ ಮಾಲೆಯನ್ನು ತೊಡಿಸುವರು. ಹಣೆಗೆ ಬೊಟ್ಟು ಇಟ್ಟು ಹೆಗಲಿಗೆ ಶಾಲು ಹಾಕಿ ವರನನ್ನು ಮೋತೋಳಿಗೆ (ಮುಖಸೇಸೆ) ಹೊರಡಿಸುವರು.

ವರನು ಗಣಪತಿಗೆ ಕಾಯಿ ಇಟ್ಟು ಕಾಲುದೀಪ ಊರಿಸಿಟ್ಟಲ್ಲಿಗೆ ಹೋಗಿ ವಂದಿಸಿ ಗುರುಹಿರಿಯರ ಕಾಲಿಗೆ ನಮಸ್ಕರಿಸುವನು. ಮೋತೋಳು ಆಚರಣೆಯನ್ನು ಚೌಕಾಕಾರವಾಗಿ ಮಡಿವಾಳ್ತಿಯ ಹಾಕಿರುತ್ತಾಳೆ. ತೂಗುದೀಪ ಹಾಗೂ ಮಡಿ ಬಟ್ಟೆಯ ಬಟ್ಟಲನ್ನು ಹಿಡಿದ ಮುತ್ತೈದೆ ಅವರ ಹಿಂದೆ, ವರ, ವರನ ಹಿಂದೆ ತೊದುವ (ಸಹಕರಿಸುವವ) ನಾಲ್ಕು ಮಂದಿಯಾಗುತ್ತಾರೆ ಎಂದು ಅವರ ಹಿಂದೆ ಸಣ್ಣ ಹೆಣ್ಣುಮಗಳೊಬ್ಬಳು ಹೀಗೆ ಐವರು ನಡೆಮಡಿಯಲ್ಲಿ ೫ ಪ್ರದಕ್ಷಿಣೆ ಬರುವರು. ವರನನ್ನು ಪೀಠದಲ್ಲಿ ಕುಳ್ಳರಿಸುವರು. ವರನ ಎದುರಿನಲ್ಲಿ ಮಣೆಯಿಟ್ಟು ತೂಗುದೀಪವನ್ನು ಮಡಿಬಟ್ಟೆಯ ಬಟ್ಟಲನ್ನು ಅದರ ಮೇಲಿಡುವರು. ಹಾಗೂ ಅಕ್ಷತೆಯನ್ನು ವರನಿಗೆ ತಳಿಯುವರು. ಕೈಮುಗಿಯುವರು. ಚಪ್ಪರದ ಮುಖ್ಯಸ್ಥ ಬಂದು ೧೧ ದೇವಸ್ಥಾನಗಳ ಅನುಮತಿ ಪಡೆದ ಕಂಚಿ (ಬಟ್ಟಲು) ಇಡುವರು. ಅದರಲ್ಲಿ ತನ್ನ ಉಡುಗೊರೆ ಇಟ್ಟು ಅಕ್ಷತೆ ತಳಿದು ವಂದಿಸುವರು. ಬಂದವರೆಲ್ಲ ಭಗವತಿ ಸ್ಥಾನದ ಪ್ರಕಾರವೇ ಬಂದು ದೀಪಕ್ಕೆ ಅಕ್ಷತೆ ಹಾಕಿ, ವರನಿಗೆ ಅಕ್ಷತೆ ತಳಿದು ವಂದಿಸಿ ತಮ್ಮ ಉಡುಗೊರೆ ಓದಿಸುವರು. ಬಳಿಕ ಈ ಆಚರಣೆಯಿಂದ ವರನನ್ನು ಎಬ್ಬಿಸಿ ತೂಗುದೀಪ, ಮಡಿಬಟ್ಟೆಯ ಬಟ್ಟಲನ್ನು ಹಿಡಿದ ಮುತ್ತೈದೆಯರು ಬಂದು ಅವನ್ನು ಎತ್ತಿಕೊಂಡು ವರನನ್ನು ಕರೆದೊಯ್ಯುವರು.

ವಧುವಿನ ಮನೆಯಲ್ಲಿ ಇದೇ ಹೊತ್ತಿಗೆ ವಿಶಿಷ್ಟ ರೂಪದ ಆಚರಣೆಯೊಂದು ನಡೆಯುತ್ತದೆ. ಮುಹೂರ್ತದ ವೇಳೆಯಲ್ಲಿ  ವಧುವಿನ ಮನೆಯಲ್ಲಿಯೂ ವಧುವಿಗೆ ಅವಳ ಸೋದರತ್ತೆಯು ಮಂಗಳಸೂತ್ರವನ್ನು ತೊಡಿಸುವಳು. ಬೋವಿ (ಮೋಐ) ಜನಾಂಗದವರ ಆರಾಧ್ಯದೈವ ಭಗವತಿ ಕನ್ನಿಕಾಪರಮೇಶ್ವರಿ, ಆಕೆಯನ್ನು ಸಾಕ್ಷಿಯಾಗಿಟ್ಟು ನಡೆಯುವ ಈ ವಿವಾಹದಲ್ಲಿ ಅವಳಿಗೆ ಅಪಚಾರ ಸಲ್ಲದು. ಆಕೆಯ ಪ್ರತೀಕವಾದ ತೂಗುದೀಪ ನಾಲ್ಕು ದಿಕ್ಕುಗಳಲ್ಲಿ ಇಡುವ ಕಾಲುದೀಪ, ನಡೆಮಡಿ, ಮಡಿಬಟ್ಟೆಯ ಬಟ್ಟಲು, ಕಂಚಿ ಇವನ್ನು ಇಟ್ಟುಕೊಂಡು ನಡೆಯುವ ವಿವಾಹವಿದೆ. ಅದಕ್ಕೆಂದೇ ಮುಹೂರ್ತದಂದು ಬೆಳಿಗ್ಗೆ ಈ ಆಚರಣೆ ಮಾಡುವರು. ಕಾಲಿಗೆ ಕಾಲುಂಗರ ಇಡುವರು. ಚಪ್ಪರ ಸೀರೆ ಉಟ್ಟುಕೊಳ್ಳುವಳು. ಅಷ್ಟು ಹೊತ್ತಿಗೆ ವರನ ದಿಬ್ಬಣ ಬಂದು ಅವನನ್ನು ಬರಮಾಡಿಕೊಳ್ಳುವದು. ೧೧ ಭಗವತೀ ಸ್ಥಾನದ ಮುಖ್ಯಸ್ಥರೂ ಅಂಗಳದಲ್ಲಿ ವರನೊಂದಿಗೆ ಕುಳಿತುಕೊಳ್ಳುವರು. ಅಲ್ಲಿ ಎಲ್ಲರಿಗೂ ವೀಳೆಯದೆಲೆಯ ಗೌರವ ಸಲ್ಲುತ್ತದೆ. ಬಳಿಕ ಎದುರಿಗೆ ಇಟ್ಟ ಮಣೆಯ ಮೇಲೆ ಇಟ್ಟು ಅಕ್ಷತೆ ತಳೆಯುವರು. ಮದುವೆಗೆ ಹೋಗದೆ ಮನೆಯಲ್ಲೇ ಉಳಿದ ಹಿರಿಯರು ವಧೂ ವರರಿಗೆ ಉಡುಗೊರೆ ಕೊಟ್ಟು ಅಕ್ಷತೆ ತಳೆದು ಆಶೀರ್ವದಿಸುವರು. ವಧೂವರರ ತಲೆಯ ಮೇಲ್ಬಾಗದಲ್ಲಿ ಬಟ್ಟೆಯೊಂದನ್ನು ಬಿಡಿಸಿ ಅದರ ನಾಲ್ಕು ಮೂಲೆಗಳನ್ನು ನಾಲ್ಕು ಮಂದಿ ಹಿಡಿದು ನಿಂತುಕೊಳ್ಳುವರು.  ನಾಲ್ವರು ಹೆಣ್ಣು ಮಕ್ಕಳು ೪ ಕಳಸದಲ್ಲಿ ನೀರು ತಂದು ಆ ನೀರನ್ನು ಮಾವಿನ ಎಲೆ ಹಿಡಿದು ವಧೂವರರ ತಲೆಯ ಮೇಲೆ ಪ್ರೋಕ್ಷಿಸುವರು. ಈ ಆಚರಣೆ ಮುಗಿದ ಬಳಿಕ ಅಲ್ಲಿಂದ ಎಲ್ಲರೂ ಮನೆಯ ಒಳಗೆ ಪ್ರವೇಶಿಸುವರು. ವಧುವಿನ ಕೈಯಲ್ಲಿ ಕೊಟ್ಟ ಎಲೆ ಅಡಿಕೆಯನ್ನು ತನ್ನ ಅತ್ತೆಯ (ವರನ ತಾಯಿ) ಕೈಯಲ್ಲಿ ಕೊಟ್ಟು ಕಾಲಿಗೆ ವಂದಿಸುವಳು.

ಒಳಗೆ ಪ್ರವೇಶಿಸಿದ ವಧೂ ವರರಿಗೆ ಒಂದು ವಿಶಿಷ್ಟ ಆಚರಣೆ ಆಚರಿಸಬೇಕಾಗುತ್ತದೆ. ವರನನ್ನು ಊಟಕ್ಕೆಬ್ಬಿಸುವುದು, ವಧುವು ವರನಿಗೆ ಎಲೆ ಹಾಕಿ ಅಂದು ಮಾಡಿದ ಅಡಿಗೆಯನ್ನು ಬಡಿಸಬೇಕು. ಅವನು ಉಂಡು ಎದ್ದ ಬಳಿಕ ವಧುವು ಅದೇ ಎಲೆಯಲ್ಲಿ ಕುಳಿತು ಅವನ ಎಂಜಲನ್ನು ಉಣ್ಣಬೇಕು. ಬದಲಾಗಿ ವರನು ವಧುವಿಗೆ ಹಣವನ್ನೋ, ಚಿನ್ನವನ್ನೋ ಉಡುಗೊರೆಯಾಗಿ ಕೊಡುವನು. ಈಗ ಹಾಲು ಕುಡಿದು ಈ ಆಚರಣೆಯನ್ನು ಮುಗಿಸುತ್ತಾರೆ.

ಹೀಗೆ ಕೇವಲ ಧಾರೆಯ ಸಂದರ್ಭದಲ್ಲಿ ಮಾತ್ರ ಗಂಡಸರು ಭಾಗವಹಿಸುತ್ತಾರೆ. ಆದರೆ ಉಳಿದ ಎಲ್ಲ ಆಚರಣೆಗಳಲ್ಲಿ ಮಹಿಳೆಯರದು ಸಿಂಹಪಾಲು.

ಸೀಮಂತ

ತಾಯ್ತನ ಹೆಣ್ಣಿನ ಭಾಗ್ಯ. ಮದುವೆಯಾದ ಕೆಲವು ತಿಂಗಳಲ್ಲಿ ಆಕೆ ಗರ್ಭಧರಿಸುತ್ತಾಳೆ. ಗರ್ಭಿಣಿಗೆ ಸಹಜವಾಗಿ ತನ್ನ ತವರು ನೆನಪಾಗುತ್ತದೆ. ಮನದಲ್ಲಿ ನಾನಾ ರೀತಿಯ ಬಯಕೆ ಅಂಕುರಿಸುತ್ತದೆ. ಅವನ್ನು ಈಡೇರಿಸಲು, ಪೂರೈಸಲು ತಾಯಿ ಮನೆಯವರು ಗಂಡನ ಮನೆಯವರು ಯತ್ನಿಸುತ್ತಾರೆ.

೭ನೇ ತಿಂಗಳಲ್ಲಿ ಬಸುರಿಗೆ ಹೂ ಮುಡಿಸುವ ಸಂಪ್ರದಾಯ ಹೆಚ್ಚು ಕಡಿಮೆ ಭಾರತದ ಪ್ರತಿಯೊಂದು ಜನಾಂಗದಲ್ಲಿ ಆಚರಣೆಯಲ್ಲಿದೆ. ಇದು ಗಂಡನ ಮನೆಯಲ್ಲಿ ನಡೆಯುವ ಆಚರಣೆ. ಇದು ಹೆಂಗಸರ ಆಚರಣೆಯ ವ್ಯಾಪ್ತಿಯಲ್ಲಿ ಬರುತ್ತದೆ. ಇವೆಲ್ಲಾ ಹೆಂಗಸರೇ ಆಚರಿಸುವ ಆಚರಣೆಗಳಾಗಿರುತ್ತವೆ. ಬೋವಿ (ಮೋಯ) ಜನಾಂಗದಲ್ಲಿ ಇದನ್ನು ಕರುಪ್ಪುಣ್ಚಿ ಚಿಮ್ಮಾನೊಂ (ಸೀಮಂತ) ಎನ್ನುವರು. ಬಸುರಿಗೆ ೭ನೇ ತಿಂಗಳು ಆರಂಭವಾದಾಗ ಸೀಮಂತದ ದಿನದಂದು ನೆಂಟರಿಷ್ಟರು ಸೇರುತ್ತಾರೆ. ಅಡಿಗೆಯ ತಯಾರಿ ಒಂದು ಕಡೆಯಲ್ಲಿ ನಡೆದಿರುತ್ತದೆ. ಗಣಪತಿ ದೇವರಿಗೆ ಕಾಯಿ ಇಟ್ಟು ದೀಪ ಉರಿಸಿ ಹಿರಿಯರೆಲ್ಲರೂ ಬಸುರಿ ಸಮೇತ ವಂದಿಸುತ್ತಾರೆ. ತಮ್ಮ ಆರಾಧ್ಯ ದೈವ, ಕುಲದೈವವನ್ನು ವಂದಿಸುತ್ತಾ ಬಸುರಿಗೆ ಅವಳ ಗಂಡನ ತಾಯಿಯು ಹೂ ಸೀರೆ ಚೆನ್ನಾಭರಣ ಕೊಡುವಳು. ಸ್ವೀಕರಿಸಿದ ಆಕೆ ಎಲ್ಲರಿಗೂ ವಂದಿಸುವಳು.

ಮನೆಯ ಹೆಣ್ಣು ಮಕ್ಕಳು, ಹಿರಿಯರು ಅವಳಿಗೆ ಸೀರೆ ಉಡಿಸಿ ಹೂವಿನ ಅಲಂಕಾರ ಮಾಡುವರು. ತಲೆ ತುಂಬಾ ಮಲ್ಲಿಗೆ ಹೂವಿನ ಜಲ್ಲಿ ಹಾಕುವರು. ಕೈತುಂಬಾ ಬಳೆಯಿಡುವರು. ಕೊರಳ ತುಂಬಾ ಚಿನ್ನಾಭರಣ ತೊಡಿಸುವರು. ಬಸುರಿಯನ್ನು ತವರಿಗೆ ಕರೆದುಕೊಂಡು ಹೋಗಲು ಬಂದವರೊಡನೆ ಕುಳ್ಳಿರಿಸಿ ಉಣ್ಣಿಸುವರು. ಬಸುರಿಗೆ ಎಲ್ಲ ಬಗೆಯ ಸಿಹಿ ತಿನಿಸು, ಖಾರದ ತಿನಿಸುಗಳನ್ನು ಇಟ್ಟು ತಿನ್ನಿಸುವರು. ಉಳಿದವರಿಗೂ ತಿಂಡಿಯನ್ನು ಕೊಡುವರು. ನೆಂಟರಿಷ್ಟರು ಇದರಲ್ಲಿ ಭಾಗವಹಿಸುತ್ತಾರೆ. ಹೊರಡುವ ವೇಳೆಯಾಗಲು ಬಸುರಿ ಎಲ್ಲರ ಕಾಲಿಗೆ ವಂದಿಸುವಳು. ಹಿರಿಯರು ಆಶೀರ್ವದಿಸುವರು. ಹಿಂದಿನ ಕಾಲದಲ್ಲಿ ಬಸುರಿಯ ಸೆರಗಿನಲ್ಲಿ ಸಾಸಿವೆ, ಕರಿಮೆಣಸು, ಜೀರಿಗೆ, ಓಲೆಬೆಲ್ಲ ಮೊದಲಾದವುಗಳನ್ನು ಹಿರಿಯ ಹೆಂಗಸು ಕೊಟ್ಟು ಕಳುಹಿಸುತ್ತಿದ್ದರು. ಹೀಗೆ ಸೀಮಂತ ಮುಗಿಸಿ ತವರಿಗೆ ಕರೆದುಕೊಂಡು ಹೋದ ಬಳಿಕ ಆಕೆ ತೊಟ್ಟಿಲ ಮಗುವಿನೊಂದಿಗೇ ಬರಬೇಕು. ಈಗೆಲ್ಲಾ ಈ ಆಚರಣೆ ಕಡಿಮೆಯಾಗಿದೆ. ತವರಿಗೂ ಗಂಡನ ಮನೆಗೂ ಹೋಗುತ್ತಾ ಬರುತ್ತಾ ಇರುತ್ತಾಳೆ.

ತವರಿಗೆ ಹೋದ ಹೆಣ್ಣಿಗೆ ತಾಯಿಯ ವಾತ್ಸಲ್ಯ ಸದಾ ದೊರೆಯುತ್ತದೆ. ಆಕೆಯ ಆರೈಕೆಯಲ್ಲಿ ಬಸುರಿ ನೆಮ್ಮದಿಯನ್ನು ಪಡೆಯುತ್ತಾಳೆ. ಹೆರಿಗೆ ಸುಲಭವಾಗಲಿ ಎಂಬ ದೃಷ್ಟಿಯಿಂದ ಮನೆಯ ಹಿರಿಯ ಹೆಂಗಸರು ಅವಳಿಗೆ ಬುದ್ಧಿವಾದ ಹೇಳುತ್ತಾ, ಅವಳಿಂದ ಬೇರೆ ಬೇರೆ ಹಗುರವಾದ ಕೆಲಸಗಳನ್ನು ಮಾಡಿಸುತ್ತಾರೆ. ಹೆಣ್ಣಿನ ತಾಯಿ ಹೆರಿಗೆಗೆ ಬೇಕಾದ, ಮಗುವಿನ ಹಾಗೂ ಬಾಣಂತಿಯ ಆರೈಕೆಗೆ ಬೇಕಾದ ವಸ್ತುಗಳನ್ನು ಸಂಗ್ರಹಿಸುತ್ತಾಳೆ. ಇಂತಹ ಮುಂದಾಲೋಚನೆ ಅತೀ ಅವಶ್ಯ. ಅಂತಹ ತಾಯಿಯಂದಿಯರನ್ನು ಬೋವಿ (ಮೋಯ) ಜನಾಂಗದಲ್ಲಿ ಹಳ್ಳಿಗಳಲ್ಲಿ ಇಂದಿಗೂ ಗುರುತಿಸಬಹುದು.

ಅವಿಭಕ್ತ ಕುಟುಂಬದಲ್ಲಿ ಒಬ್ಬರಲ್ಲ, ಒಬ್ಬರಿಗೆ ಬಸಿರು, ಬಾಣಂತನ, ಇವೆಲ್ಲ ನಡೆಯುತ್ತ ಇರುತ್ತದೆ. ಅಲ್ಲಿಯ ಹೆಣ್ಣುಮಕ್ಕಳು, ಹಿರಿಯ ಹೆಂಗಸರು ಇವರೆಲ್ಲ  ನುರಿತವರು. ಬಸುರಿಗೆ ಹೆರಿಗೆ ಬೇನೆ ಬಂದಾಗ ಹಿರಿಯ ಅನುಭವೀ ಮಹಿಳೆ ಇಲ್ಲವೇ ತಮ್ಮಲ್ಲಿಯೇ ಪ್ರತೀತಿ ಪಡೆದ ಸೂಲಗಿತ್ತಿಗೆ ಹೇಳಿ ಕಳುಹಿಸುತ್ತಾರೆ. ಆಕೆ ಬಂದ ಬಳಿಕ ಬಸುರಿಯನ್ನು ಒಪ್ಪಿಸಿ, ಅವಳಿಗೆ ಬೇಕಾದ ನೆರವನ್ನು ನೀಡಲು ಟೊಂಕಕಟ್ಟುತ್ತಾರೆ. ಹೆರಿಗೆ ಆದ ತಕ್ಷಣ ತಾಯಿಯಿಂದ ಮಗುವನ್ನು ಬೇರ್ಪಡಿಸಿ ಮಗುವಿನ ಹೊಕ್ಕಳನ್ನು ಬಿಗಿಯಾಗಿ ಕಟ್ಟುತ್ತಾಳೆ. ತಾಯಿಯ ಬಸುರಿನಿಂದ ಬಿದ್ದ ಕಲ್ಮಶ (ಮಾವು) ವನ್ನು ಮನೆಯ ಒಳಗೆ ಸಣ್ಣ ಹೊಂಡ ತೆಗೆದು ಹೂಳುತ್ತಾರೆ.

ಹೆರಿಗೆಯ ಮೂರನೆಯ ದಿನ ಮಡಿವಾಳ್ತಿಗೆ ಹೇಳಿ ಕಳುಹಿಸುತ್ತಾರೆ. ಮಡಿವಾಳ್ತಿ ಕೊಟ್ಟ ಮಡಿಯನ್ನು ಬಾಣಂತಿ ಸ್ನಾನ ಮಾಡಿದ ಮೇಲೆ ಉಡುವಳು. ಮಗುವಿಗೂ ಮಡಿಬಟ್ಟೆಯನ್ನು ಹಾಕುವರು. ಈ ಮಡಿ ಬಟ್ಟೆಯನ್ನು ಮಾಟ್ಯಿ ಎನ್ನುವರು. ಐದನೆಯ ದಿನ ಬಾಣಂತಿಯ ಶುದ್ಧದ ಎರಡನೆಯ ಹಂತ. ಬಾಣಂತಿ ಹಾಗೂ ಮಗುವಿನ ಸ್ನಾನದ ನಂತರ ಮಡಿ ಬಟ್ಟೆ ಉಟ್ಟ ಅವರನ್ನು ಕಾಲುದೀಪ ಉರಿಸಿ ಗಣಪತಿಗೆ ಕಾಯಿ ಇಟ್ಟ ಸ್ಥಳದಲ್ಲಿ ಮಣಿಯಿಟ್ಟು ಕುಳ್ಳಿರಿಸುವರು. ಆಮಂತ್ರಿತ ನೆಂಟರು ಬಾಣಂತಿ ಮಗುವಿಗೆ ಸೇಸೆ ತಳಿದು ದೀಪಕ್ಕೆ ಕೈಮುಗಿಯುತ್ತಾರೆ. ಮಡಿವಾಳ್ತಿ ಕಪ್ಪುದಾರವನ್ನು ಮಗುವಿನ ಸೊಂಟಕ್ಕೆ ಕಟ್ಟುವಳು. ದೃಷ್ಟಿಬೊಟ್ಟು ಇಡುವಳು.

ಮಗುವಿನ ಆರೈಕೆ

ಬಾಣಂತಿಯ ತಾಯಿ, ಮಗುವಿನ ಆರೈಕೆಯನ್ನು ಮಾಡುತ್ತಾಳೆ.  ಕತ್ತರಿಸಿದ ಹೊಕ್ಕುಳ ಬಳ್ಳಿಗೆ ಸ್ನಾನ ಮಾಡಿಸುವಾಗ ನೀರು ಹೋಗಬಾರದೆಂದು ಬಟ್ಟೆ ಕಟ್ಟುತ್ತಾರೆ. ಎಣ್ಣೆ ಹಚ್ಚಿ, ಮಗುವಿನ ಕೈಕಾಲನ್ನು ತೀಡಿ, ಮೂಗು ಹಣೆ ತಿಕ್ಕುವರು. ದೇಹವು ಸರಿಯಾದ ಪ್ರಮಾಣ ಬೆಳೆಯಲು ಎಣ್ಣೆಹಚ್ಚಿ ತಿಕ್ಕುವ ತೀಡುವ ಅವಶ್ಯಕತೆಯಿರುತ್ತದೆ. ಬಿಸಿ ಬಿಸಿ ನೀರನ್ನು ಮಗುವಿಗೆ ಹೊಯ್ದು ಜಾಗ್ರತೆಯಿಂದ ಸ್ನಾನ ಮಾಡಿಸುತ್ತಾರೆ. ಕಡಲೆ ಹಿಟ್ಟಿಗೆ ಸ್ವಲ್ಪ ಹಳದಿ ಹುಡಿ ಹಾಗೂ ಹಾಲು ಬೆರಸಿ ಲೇಪನ ತಯಾರಿಸಿ ಮಗುವಿಗೆ ಸ್ನಾನ ಮಾಡಿಸುವಾಗ ಹಚ್ಚುತ್ತಾರೆ. ಉಣ್ಣೆಯ ಚಿಗುಟು ಹೋಗಲು, ಇದು ಸಹಾಯಕಾರಿ. ತೂತಾದ ಗೆರಟೆಯನ್ನು ಮಗುವಿಗೆ ನೀರು ಹಾಕಲು ಉಪಯೋಗಿಸುತ್ತಾರೆ. ಹೆಚ್ಚಿನ ನೀರು ಬೀಳಬಾರದೆಂಬುದಕ್ಕೆ ಇಂತಹ ಮುಂಜಾಗ್ರತೆ ವಹಿಸುತ್ತಾರೆ. ಸ್ನಾನದ ಕೊನೆಯಲ್ಲಿ ನೀರಿನಿಂದಲೇ ದೃಷ್ಟಿ ತೆಗೆಯುತ್ತಾರೆ. ನೆತ್ತಿ ಊದಿ ಕೈಕಾಲು ಕೊಡಹಿ ಬಟ್ಟೆಯಿಂದ ಒರಸುತ್ತಾರೆ. ಅದರಲ್ಲಿಯೇ ಸುತ್ತಿಕೊಂಡು ಒಲೆಯ ಹತ್ತಿರ ಬಂದು ದೃಷ್ಟಿ ನಿವಾಳಿಸಿ ತೆಗೆದು ಒಲೆಗೆ ಹಾಕುತ್ತಾರೆ. ಒಲೆಯಿಂದ ಮಸಿತೆಗೆದು ಮಗುವಿನ ಹಣೆಗೆ ಹಚ್ಚುತ್ತಾರೆ. ಮೈಯನ್ನು ಒರಸಿದ ಬಳಿಕ ಗೆರಟೆ ಹೊತ್ತಿಸಿ ಸಿದ್ಧಪಡಿಸಿದ ಕೆಂಡಕ್ಕೆ ಲೋಭಾನಹಾಕಿ ಆ ಹೊಗೆಗೆ ಮಗುವನ್ನು ಜಾಗ್ರತೆಯಿಂದ ಹಿಡಿಯುವರು. ಇದರಿಂದ ಮಗುವಿಗೆ ಶೀತಬಾಧೆಯಾಗುವುದಿಲ್ಲ. ಬಾಧೆ ಕೊಡಲು ಬಂದ ಭೂತ, ಪ್ರೇತಗಳೆಲ್ಲ ಈ ದೂಪದಿಂದ ದೂರ ಸರಿಯುತ್ತವೆ ಎಂಬ ನಂಬಿಕೆ ಮೋಯರಲ್ಲಿದೆ. ಮಗುವಿನ ಸಂದು ಸಂದುಗಳಿಗೆ ಚಿಹ್ನೆಯ ತೈಲವನ್ನು ಮುಟ್ಟಿಸುತ್ತಾರೆ. ಮಗುವಿಗೆ ಬಟ್ಟೆ ಹಾಕಿ ಬೆಚ್ಚಗೆ ಮಲಗಿಸುತ್ತಾರೆ. ಮಗು ಹೆಚ್ಚು ಹೊತ್ತು ಮಲಗುತ್ತದೆ. ಮಗುವನ್ನು ಮಲಗಿಸುವಲ್ಲಿ ೩-೪ ಪೊರಕೆಕಡ್ಡಿಗಳು, ಚರ್ಮದ ಚಪ್ಪಲಿಯನ್ನು ಇಡುವರು. ಭೂತ ಪ್ರೇತಗಳ ಬಾಧೆಯಾಗದಿರಲು ಮುನ್ನೆಚ್ಚರಿಕೆ ವಹಿಸುವರು. ಇವೆಲ್ಲ ನಂಬಿಕೆಗಳು ಈಗಲೂ ಆಚರಣೆಯಲ್ಲಿವೆ. ಹಳ್ಳಿಯಾಗಲೀ ದಿಲ್ಲಿಯಾಗಲೀ ಮಗುವಿನ ಆರೈಕೆ ಮಗುವಿಗೆ ಆರೋಗ್ಯವನ್ನು ಕೊಡುತ್ತದೆ. ಆದುದರಿಂದಲೇ ಮಹಿಳೆಯರು ಜಾಗರೂಕತೆಯಿಂದ ಮಗುವನ್ನು ಪಾಲಿಸುತ್ತಾರೆ.

ಮಗುವಿಗೆ ಶೀತವಾದಲ್ಲಿ ಜೇನುತುಪ್ಪವನ್ನು ಮಧ್ಯದ ಹನಿಯೊಂದಿಗೆ ನೆಕ್ಕಿಸುತ್ತಾರೆ. ಹೊಂಗಾರಕನ ಮರದ ಎಳತು ಚಿಗುರನ್ನು ಬೆಳ್ಳುಳ್ಳಿ, ಕರಿಮೆಣಸಿನ ಕಾಳಿನೊಂದಿಗೆ ಅರೆದು ಮಗುವಿಗೆ ಕುಡಿಸುತ್ತಾರೆ. ಕಫ ವಾಂತಿಯಾಗುತ್ತದೆ. ಇಲ್ಲವಾದಲ್ಲಿ ಮಲದೊಂದಿಗೆ ವಿಸರ್ಜನೆಯಾಗುತ್ತದೆ. ಮಂಗಳವಾರ, ಶನಿವಾರಗಳಲ್ಲಿ, ಅಮವಾಸ್ಯೆ – ಹುಣ್ಣಿಮೆಗಳಲ್ಲಿ ಸಂಕ್ರಮಣ ದಿನಗಳಲ್ಲಿ, ಮಧ್ಯಾಹ್ನದ ನಂತರ ಮನೆಮದ್ದನ್ನು ಕುಡಿಸಬಾರದು ಎಂಬ ನಂಬಿಕೆ ಇದೆ. ವೈಜ್ಞಾನಿಕವಾಗಿ ಇವನ್ನು ವಿಶ್ಲೇಷಿಸಿದರೆ ಮಾನವ ಜೀವನದಲ್ಲಿ ಭರತ-ಇಳಿತಗಳಿಂದ ಹೆಚ್ಚು ಕಡಿಮೆಯಾಗುತ್ತದೆ. ಅಮವಾಸ್ಯೆ, ಹುಣ್ಣಿಮೆ, ಸಂಕ್ರಮಣಗಳಲ್ಲಿ ಭರತ – ಇಳಿತಗಳು ವಿಶೇಷ ಪ್ರಭಾವ ಬೀರುತ್ತವೆ. ನಂಬಿಕೆಗಳನ್ನು ನೇರವಾಗಿ ಹೇಳದೆ ನಮ್ಮ ಪೂರ್ವಿಕರು ಇಂತಹ ಅನೇಕ ನಂಬಿಕೆಗಳ, ವಿಧಿವಿಧಾನಗಳ ಆಚರಣೆಯಲ್ಲಿ ನಿಷೇಧಗಳನ್ನು ಹೇರಿದ್ದಾರೆ. ಇವುಗಳ ಬಗ್ಗೆ ಸರಿಯಾದ ತಿಳುವಳಿಕೆ ಮಾಡಿಕೊಂಡು ಆಚರಿಸಬೇಕಾದುದು ಕರ್ತವ್ಯ. ಹೀಗೆ ತಾಯ್ತನ ಹೊಂದಿದ ಹೆಣ್ಣು ತನ್ನ ಸಂಸಾರವನ್ನು ಈ ರೀತಿ ಜೋಪಾನ ಮಾಡುತ್ತಾಳೆ.

ಬಾಣಂತಿ ಸಾಕಣೆ

ಬಹಳ ಎಚ್ಚರಿಕೆಯಿಂದ ಬಾಣಂತಿಯನ್ನು ಆರೈಕೆ ಮಾಡಬೇಕು. ಕನಿಷ್ಠ ಪಕ್ಷ ಬಾಣಂತಿಗೆ ನಲ್ವತ್ತು ದಿನಗಳಷ್ಟಾದರೂ ವಿಶ್ರಾಂತಿ ಬೇಕು. ಕೆಲವರು ೬-೬ ತಿಂಗಳು ಬಾಣಂತಿ ಕೋಣೆಯಿಂದ ಹೊರಗೆ ಬರದೇ ಇದ್ದ ಉದಾಹರಣೆಗಳು ಇವೆ. ಹಿಂದಿನ ಕಾಲದ ಮಹಿಳೆಯರ ಆರೋಗ್ಯವನ್ನು ಗಮನಿಸಿದರೆ ಅವರನ್ನು ಅವರ ತಾಯಂದಿರು, ಅವರ ಹಿರಿಯರು ಯಾವ ರೀತಿಯ ಆರೈಕೆಯಿಂದ ಪೋಷಿಸಿದ್ದಾರೆ ಎಂಬುದನ್ನು ಅರಿತುಕೊಳ್ಳಬಹುದು.  ಅವನ್ನು ಸ್ವಲ್ಪ ಮಟ್ಟಿಗಾದರೂ ಅನುಸರಿಸಿದರೆ, ಪಾಲಿಸಿದರೆ ಆರೋಗ್ಯವಂತ ಮಹಿಳೆಯರನ್ನು  ನಾವೂ ಸಮಾಜಕ್ಕೆ ಕೊಡಬಹುದು. ಹೆತ್ತವಳಿಗೆ ಮೂರನೆಯ ದಿನ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಾರೆ. ಬಾಣಂತಿಯ ತಾಯಿಯೆ, ಈ ಕೆಲಸ ಮಾಡುತ್ತಾಳೆ. ಸ್ನಾನಕ್ಕೆ ಮೊದಲು ಅನ್ನಕ್ಕೆ ಸ್ವಲ್ಪ ತೆಂಗಿನಕಾಯಿ ಹುರಿ, ಒಂದು ಕಲ್ಲು, ಉಪ್ಪು ಹಾಕಿ ಬೆರಸಿ ಬಾಣಂತಿಗೆ ತಿನ್ನಲು ಕೊಡುವರು. ಎದೆ ಹಾಲು ಹೆಚ್ಚಿಸುವಲ್ಲಿ ಇದು ಸಹಕರಿಸುತ್ತದೆ. ಎಣ್ಣೆ ಹಚ್ಚಿ ಒಂದೆರಡು ಗಂಟೆಗಳ ಕಾಲ ಹಾಗೇ ಬಿಟ್ಟು ಬಳಿಕ ಸ್ನಾನ ಮಾಡಿಸುತ್ತಾರೆ.  ಹಳ್ಳಿಯಲ್ಲಿ ಹಂಡೆ ಹಂಡೆ ಬಿಸಿನೀರಿನಲ್ಲಿ ಸ್ನಾನ ಮಾಡಿಸುತ್ತಾರೆ.  ಅನ್ನ ಬಸಿದ ನೀರು, ಕಡಲೆ ಹುಡಿ ಹಚ್ಚಿ ಸ್ನಾನ ಮಾಡಿಸುವರು, ಎಣ್ಣೆಯ ಜಿಗುಟು ಇದರಿಂದ ತೆಗೆಯಬಹುದು. ಸ್ನಾನದ ಬಳಿಕ ಒದ್ದೆ ತೆಗೆದು ತಲೆಗೆ ಬಟ್ಟೆಕಟ್ಟಿ ಉಡುಪನ್ನು ಉಡಿಸುವರು. ಹೊಟ್ಟೆ ಇಡೀ ಸೀರೆಯನ್ನು ಸುತ್ತುವರು. ಸೊಂಟಕ್ಕೆ ಇದರಿಂದ ಬಲಬರುತ್ತದೆ. ಹೆರಿಗೆಯಾದ ಸಡಿಲವಾದ ಸ್ನಾಯುಗಳು ಯಥಾಸ್ಥಾನಕ್ಕೆ ಬರಲು ಈ ಕಟ್ಟಿದ ಬಟ್ಟೆ ಸಹಕರಿಸುತ್ತದೆ. ಕುಡಿಯಲು ಕಾಳಜೀರಿಗೆಯ ಕಷಾಯ ಹಾಗೂ ಓಲೆ ಬೆಲ್ಲ ತಿನ್ನಲು ಕೊಡುವರು. ಇವೆಲ್ಲ ಬಾಣಂತಿಗೆ ಶೀತಬಾಧೆಯಾಗದಂತೆ ಸಹಕರಿಸುತ್ತದೆ. ಮೈಯ ನಂಜು ಕಡಿಮೆಯಾಗಲು ಸಹಕರಿಸುತ್ತದೆ. ಕಂಬಳಿ ಹೊದ್ದುಕೊಂಡು ಬಾಣಂತಿ ಒಂದೆರಡು ಗಂಟೆ ನಿದ್ರಿಸಿದರೆ ಅವಳಿಗೆ ಉತ್ತಮ ವಿಶ್ರಾಂತಿ ದೊರಕಿ ಅವಳು ಆರೋಗ್ಯವಂತಳಾಗಲು ಇದು ಸಹಕರಿಸುತ್ತದೆ.

ನಿದ್ದೆಯಿಂದ ಎದ್ದ ಬಳಿಕ ಅವಳಿಗೆ ಅನ್ನಸಾರು ಕೊಡುತ್ತಾರೆ. ಓಮದ ಸಾರು ಇಲ್ಲಿ ಮುಖ್ಯವಾದುದು. ಕೋಳಿಮರಿಯ ಸಾರು (ಸೂಪ್) ಮಾಡಿಕೊಟ್ಟರೆ ದೇಹದ ನೀರಿನ ಅಂಶ ಕಡಿಮೆಯಾಗುತ್ತದೆ ಎನ್ನುತ್ತಾರೆ. ಬಾಣಂತಿಯ ಆರೈಕೆಯನ್ನು ಮಾಡುವ ಹಳೆಯಕಾಲದ ತಾಯಂದಿರು ೧೧, ೧೬, ೨೧, ೪೦ರಲ್ಲಿ ತಮ್ಮ ಅನುಕೂಲ ನೋಡಿಕೊಂಡು ಮಗುವಿನ ನಾಮಕರಣಶಾಸ್ತ್ರ, ತೊಟ್ಟಿಲಿನ ಶಾಸ್ತ್ರವನ್ನು ನೆರವೇರಿಸುತ್ತಾರೆ. ಅಂದು ಬಾಣಂತಿ ಸ್ನಾನ ಮಾಡಿ ಮಡಿವಾಳ್ತಿ ಕೊಟ್ಟ ಮಡಿ ಬಟ್ಟೆಯನ್ನು ಉಟ್ಟು ಬಾವಿಯ ಹತ್ತಿರ ಹೋಗಿ ೫ ತಿರಿ (ಬತ್ತಿ) ಹೊತ್ತಿಸಿ ೫ ವೀಲೆಯದೆಲೆಯ ಮೇಲೆ ಅಡಿಕೆ ಹಾಗೂ ಆ ತಿರಿ ಇಟ್ಟು ಬಾವಿಗೆ ಹಾಕುವಳು. ಅಂದಿನಿಂದ ಅವಳು ಬಾವಿಯನ್ನು ಮುಟ್ಟಬಹುದು. ಅಂದು ಚಿನ್ನಾಭರಣ ಇಟ್ಟು ಹೊಸ ಸೀರೆ ಉಟ್ಟು ಮಗುವಿನೊಂದಿಗೆ ಬಾಣಂತಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗುವರು. ಸೇರಿದ ಹಿರಿಯರು, ನೆಂಟರು ಮಗುವಿಗೆ, ತಾಯಿಗೆ ಉಡುಗೊರೆ ಕೊಡುವರು. ಮಗುವಿನ ತಂದೆಯ ಕಡೆಯಿಂದ ಹಿರಿಯ ಮಗುವಿಗೆ ಉಡುಗೊರೆ ತರುವಾಗ ತಮ್ಮ ಯಥಾನುಶಕ್ತಿಯಾಗಿ ಹೆರಿಗೆಯ ಖರ್ಚಿನ ಹಣವನ್ನು ಕೊಡುತ್ತಾರೆ. ಇದನ್ನು ಪೇಟ್ಯೆ ಎನ್ನುವರು.

ಬಾಣಂತಿಗೆ ನಾನಾ ರೀತಿಯ ಅಡಿಗೆಯನ್ನು ತಯಾರಿಸಿ ಉಣಿಸುವರು. ಓಮ, ಕೊತ್ತಂಬರಿ, ಮೆಂತ್ಯೆ, ಬೆಳ್ಳುಳ್ಳಿ, ತೆಂಗಿನಕಾಯಿ ಹುಡಿಮಾಡಿ ಬೆಲ್ಲ, ತೆಂಗಿನೆಣ್ಣೆ ಹಾಕಿ ಬೆರೆಸಿದ ಹಸಿ ಮದ್ದನ್ನು ದಿನಾಲು ತಿನ್ನಿಸುವರು. ಇದನ್ನು ಅಕ್ಕಿಯ ಹಿಟ್ಟಿನಲ್ಲಿ ಮುಳುಗಿಸಿ ಕಾಯಿಸಿ ಬೆಳಿಗ್ಗೆ ಸ್ನಾನ ಮಾಡಿ ಬಂದ ತಕ್ಷಣ ತಿನ್ನಿಸುವರು. ೩-೩ ದಿನಗಳಲ್ಲಿ ಬದಲಿಸಿ, ಬದಲಿಸಿ, ಸಾಸಿವೆ ಗಂಜಿ, ಕೊತ್ತಂಬರಿ ಬಂಜಿ,  ಓಮದ ಗಂಜಿ ಮೆಂತ್ಯೆಯ ಗಂಜಿ, ಬೆಳ್ಳುಳ್ಳಿ ಬೆಲ್ಲ ಗಂಜಿಯಲ್ಲಿ ಮಾಡಿಕೊಳ್ಳುತ್ತಾರೆ. ಉಡಿಹಾಲು  ಹೆಚ್ಚಾಗಲು ಉದುರಿ ಬೇರನ್ನು ಹಾಕಿ ಗಂಜಿ ಮಾಡಿಕೊಳ್ಳುತ್ತಾರೆ. ಇವೆಲ್ಲವುಗಳಿಂದ ತಾಯಿಯ ಹೊಣೆ ಎಷ್ಟು ಗುರುತರವಾದುದು ಎಂಬುದರ ಅರಿವಾಗುತ್ತದೆ ?

ಸಾವು

ಸಾವು ಒಂದು ನಿರಂತರ ಸತ್ಯ. ಹುಟ್ಟಿದ ಜೀವಿಗೆ ಸಾವು ಕಟ್ಟಿಟ್ಟುದುದು. ಇದು ಪ್ರಕೃತಿಯ ನಿಯಮ. ವ್ಯಕ್ತಿಯೊಬ್ಬ ಸತ್ತಾಗ ಅವನ ದೇಹವನ್ನು ಸುಡುವವರೆಗಿನ ವಿಧಿವಿಧಾನ ಎಲ್ಲ ಜನಾಂಗಗಳಲ್ಲಿ ಸಾಮಾನ್ಯವಾಗಿ ಒಂದೇ ರೀತಿಯಾಗಿ ನಡೆಯುತ್ತದೆ.  ಅಗ್ನಿ ಸಂಸ್ಕಾರ ಆದ ಬಳಿಕ ನಡೆಯುವ ಆಚರಣೆಗಳು ಭಿನ್ನವಾಗಿರುತ್ತವೆ. ಮೋಯರಲ್ಲಿ ಇಂತಹ ಭಿನ್ನವಾದ ವಿಶೇಷ ಆಚರಣೆ ನಡೆಯುತ್ತದೆ.

ದೀಪ (ಉರಿ)

ಮೋಯರಲ್ಲಿ  (ಗಂಡ/ಹೆಣ್ಣು) ಮಹಿಳೆಯೊಬ್ಬಳು ಮೃತಪಟ್ಟರೆ ಅವಳ ಕುಟುಂಬದವರಿಗೆ ಸೂತಕವಿರುತ್ತದೆ. ಈ ಸೂತಕ ೧೬ ದಿನಗಳವರೆಗೆ ಇರುತ್ತದೆ. ಮೃತಪಟ್ಟ ದಿನದಿಂದಲೇ ಆ ಮಹಿಳೆಯ ಹೆಸರಿನಲ್ಲಿ ದೀಪ (ತಿರಿ) ಇಡುತ್ತಾರೆ. ಸಂಜೆಯ ಹೊತ್ತಿಗೆ ಬಂಧು ಬಾಂಧವರು ಸೇರಿರುತ್ತಾರೆ. ಸುಮಾರು ೭-೭.೩೦ರ ಹೊತ್ತಿಗೆ ತಿರಿ ಇಡುವ ಆಚರಣೆ ನಡೆಯುತ್ತದೆ. ಬಂದ ಗಂಡಸರು ಒಬ್ಬೊಬ್ಬರೇ ಮನೆಯ ಒಳಗೆ ಹೋಗಿ ಅಲ್ಲಿ ತಿರಿಕೊಡಲು ನಿಂತವರ ಕೈಯಿಂದ ಉರಿಸಿದ ತಿರಿ ತೆಗೆದುಕೊಂಡು ಮಣೆಯ ಮೇಲಿಟ್ಟ ಮಣ್ಣಿನ ಸಣ್ಣ ಪಾತ್ರೆಯಲ್ಲಿ ಇಟ್ಟು ಕೈಮುಗಿಯುವವರು. ಸೇರಿದ ಸಭಿಕರು ತಿರಿ ಇಟ್ಟ ಮೇಲೆ ಹೊರಗೆ ಹೋಗಿ ಒಟ್ಟಾಗಿ ಕೈಮುಗಿಯುವರು. ಅದೇ ಹೊತ್ತಿಗೆ ಒಳಗೆ ಕುಳಿತಿರುವ ಹೆಂಗಸರಲ್ಲರೂ ಕೈಮುಗಿಯುವರು.

ಉತ್ತರ ಕ್ರಿಯೆ : ಹೀಗೆ ಬೆಳಗೂ ಬೈಗೂ ತಿರಿ ಇಡುವ ಆಚರಣೆಯು ಉತ್ತರ ಕ್ರಿಯೆಯ ಹಿಂದಿನ ದಿನದವರೆಗೆ ನಡೆಯುತ್ತದೆ. ಈ ನಡುವೆ ಮೈತಳ ಅಗ್ನಿ ಸಂಸ್ಕಾರ ನಡೆಸಿದ ಬೂದಿಯನ್ನು ೫ನೇ ದಿವಸ ಕಡಲಿನಲ್ಲಿ ಬಿಡುವರು. ಮೋಯ ಜನಾಂಗದಲ್ಲಿ ಸತ್ತವರ ಹೆಸರಿನಲ್ಲಿ ಇಡುವ ತಿರಿಗೆ ಹೇಗಾದರೂ ಹೋಗಿ ತಿರಿ ಇಟ್ಟು ತಮ್ಮ ಶ್ರದ್ಧಾಂಜಲಿ ಅರ್ಪಿಸುವ ದೊಡ್ಡ ಮನಸ್ಸು ಇನ್ನೂ ಉಳಿದುಕೊಂಡಿದೆ. ಉತ್ತರ ಕ್ರಿಯೆಯ ಹಿಂದಿನ ದಿನ ಶುದ್ಧೀಕರಣ ನಡೆಯುತ್ತದೆ. ಹಿಂದೆ ಮಡಿವಾಳ್ತಿ ಬಂದು ಈ ಶುದ್ಧೀಕರಣ ಕ್ರಿಯೆಯನ್ನು ಆಚರಿಸುತ್ತಿದ್ದಳು. ಈಗ ಕೆಲವು ಕಡೆಗಳಲ್ಲಿ ಮಡಿವಾಳ್ತಿ ಬಂದು ತನ್ನ ಕೆಲಸ ಮಾಡಿ ಸಂಭಾವನೆ ಪಡೆದು ಹೋಗುತ್ತಾಳೆ. ಕೆಲವು ಕಡೆಗಳಲ್ಲಿ ಮಡಿವಾಳ್ತಿಯ ಕುಟುಂಬವೇ ಇಲ್ಲ. ಆಗ ಊರಿನ ಹಿರಿಯರು ಈ ಆಚರಣೆ ನಡೆಸುತ್ತಾರೆ.  ಕುಟುಂಬದ ಹಿರಿಯಳನ್ನು ಶುದ್ಧೀಕರಣ ಮಾಡುತ್ತಾರೆ. ತಲೆ ಬೋಳಿಸುವವರು, ಮೀಸೆ ಬೋಳಿಸುವವರು ಈ ಶುದ್ಧೀಕರಣದ ದಿವಸ ಬೋಳಿಸುತ್ತಾರೆ.

ಉತ್ತರ ಕ್ರಿಯೆಯಂದು ಬೇರೆ ಬೇರೆ ಅಡಿಗೆ ಮಾಡುತ್ತಾರೆ. ಬಿಳಿಬಟ್ಟೆ ಉಟ್ಟು ತೆಳಪಿಗೆ ನಿಂತವಳೆ ಎಲೆಗೆ ಬಡಿಸುವ ಅನ್ನವನ್ನು ತಯಾರಿಸಬೇಕು. ಮೃತರ ಹೆಸರಿನಲ್ಲಿ ಹಾಕಿದ ಎಲೆಗೆ ಮೊದಲು ಅನ್ನ ಬಡಿಸಿ ಉಳಿದ ಸಾರುಪಲ್ಯಗಳನ್ನು ಬಡಿಸುತ್ತಾಳೆ. ಬಾಳೆ ಕಾಯಿಯ ಗಸಿ, ಕುಂಬಳಕಾಯಿ ಸಾರು ಕಡಲೆ ಬಾಳೆ ಹೂ ಹಾಕಿದ ಪಲ್ಯ, ಬಾಳೆಯ ದಿಂಡು, ಪಾಯಸ ಸಿಹಿತಿಂಡಿ ಇವೆಲ್ಲವನ್ನು ಮಹಿಳೆಯರು ಸ್ವಲ್ಪ ಸ್ವಲ್ಪ ಬಡಿಸುತ್ತಾರೆ.  ಇನ್ನೊಂದು ಬದಿಯಲ್ಲಿ ಬಿಳಿ ಬಟ್ಟೆಯ ಮೇಲೆ ಇಟ್ಟ ಎಳನೀರು ಹಾಗೂ ತೆಂಗಿನ ಕೊಂಬನ್ನು ಒಟ್ಟಾಗಿ ಬಿಗಿಯಾಗಿ ಕಟ್ಟುವರು. ಮೃತಳ ಮಗ ಮತ್ತು ಅವಳ ಗಂಡನ ಕುಟುಂಬದವರ ತಲೆಯ ಮೇಲೆ ಈ ಎರಡು ಗಂಟುಗಳನ್ನು ಇಡುವರು. ಅವರು ಮೊದಲೇ ತಲೆಗೆ ಬಿಳಿ ಬಟ್ಟೆ ಹಾಕಿಕೊಂಡು ನಿಂತಿರುತ್ತಾರೆ. ಈ ಗಂಟನ್ನು ಹೊತ್ತುಕೊಂಡು ಇತರರೊಂದಿಗೆ ಅಗ್ನಿಸಂಸ್ಕಾರ ಮಾಡಿದಲ್ಲಿಗೆ ಹೋಗುವರು. ಅಲ್ಲಿಯ ವಿಧಿ ವಿಧಾನಗಳು ಮುಗಿದ ಮೇಲೆ ಉಳಿದವರೊಂದಿಗೆ ಅವರೂ ಹಿಂತಿರುಗುವರು. ಸ್ನಾನಾದಿಗಳನ್ನು ಮುಗಿಸಿ ಬಂದ ಅವರೂ ಇತರರೊಡನೆ ಊಟಕ್ಕೆ ಕುಳಿತುಕೊಳ್ಳುವರು. ಅಂದು ರಾತ್ರಿ ಮೀನಿನ ಅಡಿಗೆ ಮಾಡಿ ಉಂಡು ಅದುವರೆಗೆ ಹಿಡಿದ ಉಪವಾಸವನ್ನು ಕುಟುಂಬದವರು ಬಿಡುವರು.

ಒಳಗೆ ಕರೆಯುವುದು : ೧೬ನೆ ದಿನ ಮೃತಳ ಆತ್ಮವನ್ನು ಒಳಗೆ ಕರೆಯುವ ಆಚರಣೆ ನಡೆಸುತ್ತಾರೆ. ಮೃತಳ ಕುಟುಂಬದ ಹಿರಿಯರು ಅಂದಿನ ಅಡಿಗೆಯಲ್ಲಿ ತೊಡಗುವರು. (ಎಡೆಯಿಡುವಂತಹದೇ ಆಚರಣೆ ಇದು) ಅನ್ನ, ಉಪ್ಪು ಹಾಕದ ಕಡುಬು, ದಪ್ಪರೊಟ್ಟಿ (ಬೀತ್ಯೊರಟಿ) ಮೀನು ಹಾಗೂ, ಕೋಳಿಯ ಸಾರು ಇವೇ ಮೊದಲಾದ ಅಡಿಗೆಯನ್ನು ತಯಾರಿಸುವರು. ೧೧ ಎಲೆಗಳನ್ನ ಹಾಕುವಾಗ ಎಲ್ಲರ ಅನುಮತಿ ಕೇಳುತ್ತಾರೆ. ಎರಡು ಬಟ್ಟಲಲ್ಲಿ ಬಿಡಿಸಿ ಎಡೆಯಿಡುವ ತಯಾರಿ ಮಾಡುತ್ತಾರೆ. ೧೧ ಎಲೆಗಳಿಗೆ ಮಾಡಿದ ಅಡಿಗೆಯನ್ನು ಬಡಿಸುತ್ತಾರೆ. ಒಂದು ಎಲೆ ಮೃತಳ ಹೆಸರಿನಲ್ಲಿಯೇ ಹಾಕಿರುತ್ತಾರೆ. ಒಂದು ಮನೆಯಲ್ಲಿ ೧೧ ವೀಲೆಯದೆಲೆ ಇಟ್ಟು ಅದರ ಮೇಲೆ ದೀಪ (ತಿರಿ) ಉರಿಸಿಡುತ್ತಾರೆ. ಮನೆಯ ಮುಂಬಾಗಿಲಿನಿಂದ ಈ ಮನೆಯನ್ನು ಹಿಡಿದುಕೊಂಡು ವ್ಯವಸ್ಥೆ ಹಿಂದುಮುಂದಾಗಿ ನಿಧಾನವಾಗಿ ಚಲಿಸುತ್ತಾ ಬಡಿಸಿದ ಕೊನೆಗೆ ಹೋಗುವರು. ಅಲ್ಲಿ ಮಣೆಯನ್ನು ಇಟ್ಟು ಹಿಂತಿರುಗುವರು. ಅವರು ಇದನ್ನು ಮರಳಿ ನೋಡಬಾರದು. ಬಳಿಕ ಎಡೆಯಿಡಲು ಬಿಡಿಸಿದ ೨ ಬಟ್ಟಲುಗಳನ್ನು ಎಡೆಯಿಟ್ಟು ವಂದಿಸುವರು. ಗಂಡಸರು ಆ ಕೋಣೆಗೆ ಬಂದು ಹಿಂದೆ ಗತಿಸಿ ಹೋದವರೊಂದಿಗೆ ಸೇರಿಕೊಂಡು ಎಲ್ಲರನ್ನು ರಕ್ಷಿಸಿರಿ ಎಂದು ಬೇಡಿಕೊಂಡು ಅಕ್ಷತೆ ತಳಿದು ಕೈಮುಗಿಯುವರು. ಆ ಬಳಿಕ ಹೆಂಗಸರು ಹಾಗೆ ಹೇಳಿಕೊಂಡು ಕೈಮುಗಿಯುವರು. ಬಾಗಿಲು ಹಾಕುವ, ತೆಂಗಿನ ಮರದ ಬುಡಕ್ಕೆ ನೀರು ಹಾಕಿ ಬಾಗಿಲು ಹಾಕುವರು. ಸ್ವಲ್ಪ ಹೊತ್ತಿನ ನಂತರ ಬಾಗಿಲು ತೆರೆದು ಪುನಃ ತೆಂಗಿನ ಮರದ ಬುಡಕ್ಕೆ ನೀರು ಹಾಕುವರು. ಮೊದಲು ನೀರು ಹಾಕಿದಾಗ ಕೈತೊಳೆಯಲು ಉಣ್ಣಲು ಹೋಗಿ ಎಂಬ ನಂಬಿಕೆ ಮತ್ತೆ ನೀರು ಹಾಕಿದಾಗ ಉಂಡ ನೀವು ಕೈ ತೊಳೆಯಿರಿ ಎಂಬ ನಂಬಿಕೆ ಮೋಯರಲ್ಲಿ ಕಂಡು ಬರುತ್ತದೆ. ಇವತ್ತಿನವರೆಗೂ ಈ ಆಚರಣೆ ನಗರದಲ್ಲಾಗಲೀ ಹಳ್ಳಿಯಲ್ಲಾಗಲೀ ಆಚರಣೆಯಲ್ಲಿದೆ.

. ವಾರ್ಷಿಕ ಆವರ್ತನದ ಆಚರಣೆಗಳಲ್ಲಿ ಮಹಿಳೆ

ಎಡೆಯಿಡುವುದು ಸಾಮೂಹಿಕವಾಗಿ ಆಚರಿಸುವ ಆಚರಣೆಗಳೆಲ್ಲವೂ ವಾರ್ಷಿಕವಾಗಿಯೇ ಹೆಚ್ಚಾಗಿ ನಡೆಯುವವುಗಳು. ವರ್ಷದಲ್ಲಿ ಒಂದು ಬಾರಿಯಾದರೂ ತಾವು ತಮ್ಮ ಕುಟುಂಬಸ್ಥರು, ತಮ್ಮ ನೆಂಟರಿಷ್ಟರು, ಒಂದೆಡೆ ಸೇರುವ, ಸುಖ ದುಃಖಗಳನ್ನು ಹಂಚಿಕೊಳ್ಳುವ ಎಂಬ ಉದ್ದೇಶದಿಂದ ಹಿರಿಯರು ಈ ವಾರ್ಷಿಕ ಆವರ್ತನಗಳು ಆಚರಣೆಗಳನ್ನು ರೂಢಿಮಾಡಿರಬೇಕು. ಬೋವಿ ಜನಾಂಗದಲ್ಲಿ ಮೋಯ (ಎಡೆಯಿಡುವ) ಮೀದ್ ಎಂಬ ವಿಶಿಷ್ಟ ಆಚರಣೆಯಲ್ಲಿದೆ. ಸರ್ವಪಿತೃಪಕ್ಷದಲ್ಲಿ ಸತ್ತವರಿಗೆ ತರ್ಪಣ (ಎಡೆಯಿಡುವ) ಕೊಡುವಾಗ ಆಚರಣೆಗಳನ್ನು ಹೆಚ್ಚಿಸಿ ಜನಾಂಗಗಳಲ್ಲಿ ಕಾಣಬಹುದು. ಬೋವಿ ಮೋಯ ಜನಾಂಗದಲ್ಲಿ ಈ ಆಚರಣೆ ವಿಶಿಷ್ಟ ರೀತಿಯಲ್ಲಿ ಇಂದಿಗೂ ಆಚರಿಸಲ್ಪಡುತ್ತದೆ. ಇವೆಲ್ಲ ಹೆಣ್ಣು ಮಕ್ಕಳ ಅಚರಣೆಗಳಾಗಿವೆ.