. ಬೋವಿಗಳ ಹಿನ್ನೆಲೆ

ಭಾರತದಾದ್ಯಂತ ವಾಸಿಸುವ, ವೃತ್ತಿಯಲ್ಲಿ ಮಾತ್ರ ಸಾಮ್ಯತೆ ಇದ್ದ ಸಮುದಾಯವೇ ಬೋವಿ ಸಮುದಾಯ. ಹಲವು ಉಲ್ಲೇಖಗಳು ಐತಿಹ್ಯಗಳು, ಸಾಹಿತ್ಯ, ಶಾಸನಗಳು, ಇತಿಹಾಸಕಾರರ ಬರಹಗಳು, ಅರ್ಥಕೋಶಗಳು ಬೋವಿಗಳ ಕುರಿತು ಹೇಳುತ್ತವೆ. ’ಮನುಷ್ಯನನ್ನು ಹೊರುವವರು ವಹಿಕ್ಕರ್, ಅವರ ’ಹಿರಿಯವಂ ಬೋವನಕ್ಕುಂ”ಎಂದು ರೆವರೆಂಡ್ ಫಾದರ್ ಕಿಟ್ಟೆಲ್ಲರ ಪ್ರಖ್ಯಾತ ನಿಘಂಟು ಹೇಳುತ್ತದೆ. ಅಂದರೆ ಬೋವ ಎಂಬ ಪದವು ವೃತ್ತಿ ಸೂಚಕ ಪದ. ಬೋವನೇ ಬೋವಿ ಹಲವು ರಾಜರಿಂದ ಆಳಲ್ಪಡುತ್ತಿದ್ದ ದೇಶ ಭಾರತ. ರಾಜರು ಹಾಗೂ ಅವರ ಪರಿವಾರದವರನ್ನು, ಜಮೀನ್ದಾರರನ್ನು, ಶ್ರೀಮಂತರನ್ನು ಮೇಣೆಯಲ್ಲಿ / ದಂಡಿಗೆಯಲ್ಲಿ ಹೊತ್ತುಕೊಂಡು ಹೋಗುವುದು ಆಗಿನ ಕಾಲದಲ್ಲಿ ರೂಢಿಯಲ್ಲಿತ್ತು. ಹೀಗೆ ದಂಡಿಗೆ, ಮೇಣೆ, ಪಲ್ಲಕ್ಕಿ ಹೊರುವವರನ್ನು ಬೋವಿಗಳೆಂದು ಕರೆಯುತ್ತಿದ್ದರು. ಇವರೆಲ್ಲಾ ಒಂದೇ ಬುಡಕಟ್ಟಿಗೆ ಸೇರಿದವರಲ್ಲ. ಕರ್ನಾಟಕದಾದ್ಯಂತ ಬೋವಿಗಳು ನೆಲೆಸಿದ್ದಾರೆ ಎಂಬುದು ಕ್ಷೇತ್ರಾಧ್ಯಯನದಿಂದ ತಿಳಿದ ವಿಚಾರ. ಮೂಡಬಿದಿರೆ, ಕಾರವಾರ, ಸಿರ್ಸಿ, ಅಂಕೋಲಾ, ಸುಂಕೇರಿ, ಬೆಳಗಾವ್, ಮೈಸೂರು, ಕೊಡುಗು ಅಲ್ಲದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳ, ಹೀಗೆ ಭಾರತದ ಎಲ್ಲಾ ರಾಜ್ಯಗಳಲ್ಲಿ ಹೆಚ್ಚು ಕಡಿಮೆ ಬೋವಿ ಸಮುದಾಯ ನೆಲೆಸಿತ್ತು. ಎಲ್ಲ ಬೋವಿಗಳು ದಂಡಿಗೆ ಹೊರುವವರೇ ಆಗಿದ್ದರು. ಇದರೊಂದಿಗೆ ಉಪಜೀವಿಸಲು ಕಡಲು, ಹೊಳೆನದಿ, ಕೆರೆಗಳಲ್ಲಿ ಮೀನುಗಾರಿಕೆಯನ್ನು ಮಾಡುತ್ತಿದ್ದರು. ರಾಜರ ಆಳ್ವಿಕೆ ಕೊನೆಗೊಂಡಾಗ ದಂಡಿಗೆಯೇ ನಿಂತು ಹೋಯಿತು. ತೀರಪ್ರದೇಶಗಳ ಬೋವಿಗಳು ಮೀನುಗಾರಿಕೆಯನ್ನು ಮುಂದುವರಿಸಿದರು. ಒಳನಾಡಿನಲ್ಲಿರುವವರು ತಾವು ವಾಸಿಸುವ ಪ್ರದೇಶದಲ್ಲಿ ರೂಢಿಯಲ್ಲಿದ್ದ ಉದ್ಯೋಗಗಳನ್ನೋ, ಬೇಸಾಯವನ್ನೋ ತೋಟಗಾರಿಕೆಯನ್ನೋ ನೆಮ್ಮಿಕೊಂಡು ಉಪಜೀವಿಸತೊಡಗಿದರು.

ವಾಸ್ತವ್ಯ

ಮೋಯರ್ ಎಂದು ಕರೆಯಲ್ಪಡುವ ಬೋವಿಗಳು ಮೂಲತಃ ನೀಲಗಿರಿಯ ಮುಕೋರ್ತಿ ಬೆಟ್ಟದಲ್ಲಿ ಹುಟ್ಟಿ ಹರಿಯುವ ಮೋಯರ್ ನದಿತೀರದವರು. ಆದುದರಿಂದಲೇ ತಮ್ಮ ಜನಾಂಗಕ್ಕೆ ಈ ನದಿಯ ಹೆಸರನ್ನು ಇಟ್ಟಿರಬಹುದು.

ಇಲ್ಲಿಯ ಪ್ರಾದೇಶಿಕ ಭಾಷೆ ತಮಿಳು. ಆದರೆ ಹೆಚ್ಚಿನವರು ಕನ್ನಡದಲ್ಲಿಯೇ ವ್ಯವಹರಿಸುತ್ತಾರೆ. ಬೋವಿಗಳು (ಮೋಯರ್) ಕಾಲಕ್ರಮೇಣ ಮೋಯರ್ ನದಿತೀರವನ್ನು (ಈ ಪ್ರದೇಶವನ್ನು ತೆಜ್ ಮೊರಡ್ ಎನ್ನುತ್ತಾರೆ) ಬಿಟ್ಟು ಕೊಡಗನ್ನು ಸೇರಿದವರು. ಅಲ್ಲಿಯೇ ನೆಲೆನಿಂತ ಅವರು ತಮ್ಮ ಜೀವನವನ್ನು ಸುಗಮವಾಗಿ  ನಡೆಸಬೇಕೆಂಬ ಉದ್ದೇಶದಿಂದ ಕಟ್ಟುಕಟ್ಟಳೆಗಳನ್ನು ರೂಪಿಸಿಕೊಂಡರು. ಅವುಗಳನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಂಡು ಬೋವತನ ಮಾಡುತ್ತಾ ಬಹಳ ಕಾಲ ಕೊಡಗಿನಲ್ಲಿ ನೆಲೆಸಿದ್ದರು. ಇವರ ಭಾಷೆಯಲ್ಲಿ ತಮಿಳು ಅಲ್ಲದೆ ಕೊಡುವ ಭಾಷೆಯ ಪ್ರಭಾವವನ್ನೂ ಕಾಣಬಹುದು. ಇವರು ಒಂದೇ ಕಡೆಯಲ್ಲಿ ನೆಲೆನಿಲ್ಲುವ ಜಾಯಮಾನದವರಲ್ಲ. ಕಾರಣಾಂತರಗಳಿಂದ ಕೊಡಗಿನಿಂದ ಕೆಳಗೆ ಇಳಿಯುತ್ತಾ ಕೇರಳದ ವೈನಾಡನ್ನು ಸೇರಿದರು. ಕ್ರಮೇಣ ಉತ್ತರ ಕೇರಳದಿಂದ ಮುಂದುವರಿಯುತ್ತಾ ತೀರ ಪ್ರದೇಶದಲ್ಲಿ ನೆಲೆನಿಂತರು.

ಕರಾವಳಿ ತೀರದಲ್ಲಿ ಮೀನುಗಾರಿಕೆ ಮುಖ್ಯ ವ್ಯವಸಾಯವಾಗಿತ್ತು. ಅವರು ಮೀನುಗಾರಿಕೆಯನ್ನು ನೆಮ್ಮಿಕೊಂಡು ಬಾಳಿದರು. ಕೆಲವರು ಅಲ್ಲಲ್ಲಿ ಬೋವತನವನ್ನು ಮಾಡುತ್ತಿದ್ದರು. ಅಲ್ಲಿಂದ ಕೆಲವರು ಮುಂದುವರಿಯುತ್ತಾ ಕರ್ನಾಟಕದ ದಕ್ಷಿಣ ತೀರದ ಪ್ರದೇಶಕ್ಕೂ ವಲಸೆ ಹೋದರು. ಹೀಗೆ ಈ ಕರಾವಳಿ ಬೋವಿಜನಾಂಗದ ವಾಸ್ತವ್ಯ ಪಸರಿಸಿತು. ಆದರೆ ಕೇವಲ ೧೧ ಭಗವತೀ ಕ್ಷೇತ್ರಗಳ ವ್ಯಾಪ್ತಿಗೆ ಸೀಮಿತವಾಗಿದೆ. ಭಾಷಾವಾರು ಪ್ರಾಂತ್ಯ ರಚನೆಯಾದಾಗ ತುಳುನಾಡಿನಲ್ಲಿ ಸಮಾವೇಶವಾಗಿದ್ದ ೧೧ ಭಗವತೀ ಸ್ಥಾನಗಳ ಕ್ಷೇತ್ರಗಳಲ್ಲಿ ೯ ಕ್ಷೇತ್ರಗಳು ಕೇರಳ ರಾಜ್ಯದಲ್ಲಿ ಸಮಾವೇಶಗೊಂಡಿತು. ಕೇವಲ ೩ ಕ್ಷೇತ್ರಗಳು ಕರ್ನಾಟಕದ ದಕ್ಷಿಣ ಭಾಗದಲ್ಲಿ ಸಮಾವೇಶಗೊಂಡವು.

ವೈಶಿಷ್ಟ್ಯ

ಬಹಳ ಹಿಂದಿನ ಕಾಲದಿಂದಲೂ ಭಾರತೀಯ ಜನತೆ ಮೈಮುರಿದು ದುಡಿದು, ಹೊಟ್ಟೆ ತುಂಬಾ ಉಂಡು, ಕಣ್ಣು ತುಂಬಾ ನಿದ್ರಿಸಿ ನೆಮ್ಮದಿಯ ಬದುಕನ್ನು ಬಾಳುತ್ತಿತ್ತು. ಅಂದಿನ ನೆಮ್ಮದಿ ಇಂದಿಲ್ಲ. ಅಂದಿನ ಜೀವನ ಕ್ರಮ ಇಂದಿಲ್ಲ. ಇದಕ್ಕೆ ಹಲವಾರು ಕಾರಣಗಳಿದ್ದು ಅಂದಿನ ಹಾಗೂ ಇಂದಿನ ನಡುವೆ ಆಳವಾದ ಕಂದಕ ಉಂಟಾಗಿದೆ. ಯಾವ ಜನಾಂಗವೂ ಇದಕ್ಕೆ ಹೊರತಲ್ಲ. ಇಂತಹ ಸಮುದಾಯಗಳಲ್ಲಿ ಬೋವಿ (ಮೋಯ) ಜನಾಂಗ ಒಂದು.

೧. ಇವರು ಗುಂಪು ಕೂಡಿ ವಾಸಿಸುವ ಸಮುದಾಯದವರು. ತಮ್ಮ ತಮ್ಮ ಜನರ ಮನೆಗಳು ಹತ್ತಿರದಲ್ಲೇ ಇರುವಂತೆ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ.

೨. ಬ್ರಾಹ್ಮಣರಲ್ಲಿ ಬಳಿ (ಗೋತ್ರ) ಗಳಿರುವಂತೆ ಇವರಲ್ಲಿ ೪೪ ಬಳಿಗಳನ್ನು ಗುರುತಿಸಲಾಗಿದೆ.

೩. ಇವರು ಮಾತೃ ಪ್ರಧಾನ ಕುಟುಂಬಸ್ಥರಾದುದರಿಂದ ಇವರ  ಬಳಿಗಳನ್ನು ತಾಯಿಯ ಬಳಿಯಿಂದ ಗುರುತಿಸಲಾಗಿದೆ.

೪. ಇವರ ಪ್ರತಿಯೊಂದು ಬಳಿಗೂ ತರಾಡು (ಹಿರಿಯರು ವಾಸಿಸುತ್ತಿದ್ದ ಮನೆ) ಮನೆಗಳಿವೆ. ಪ್ರಾದೇಶಿಕತೆ ಹಾಗೂ ಬಳಿಗಳ ಜನಸಂಖ್ಯಾ ಬಾಹುಳ್ಯದಿಂದ ಒಂದೇ ಬಳಿಯ ಹಲವು ತರಾಡು ಮನೆಗಳನ್ನು ಕಾಣಬಹುದು. ಪ್ರತಿಯೊಂದು ತರವಾಡಿಗೂ ಅವರದೇ ಆದ ಆರಾಧ್ಯ ದೈವಗಳಿರುತ್ತವೆ. ಇಲ್ಲಿ ಪ್ರತಿವರ್ಷ ಅಥವಾ ಅವರವರ ಅನುಕೂಲಕ್ಕೆ ತಕ್ಕಂತೆ ತಮ್ಮ ಆರಾಧ್ಯ ದೈವವನ್ನು ಪೂಜಿಸುತ್ತಾರೆ. ಕೆಲವೊಮ್ಮೆ ಹರಕೆ ಸೇವೆಯು ನಡೆಯುತ್ತದೆ.

೫. ಬೋವಿ (ಮೋಯ)ಗಳ ಆರಾಧ್ಯದೈವ ಭಗವತಿ. ಇವರು ತಮ್ಮನ್ನು ೧೧ ಭಗವತೀ ಸ್ಥಾನಗಳಲ್ಲಿ ಹಂಚಿಕೊಂಡು, ೧೧ ಭಗವತೀ ಕ್ಷೇತ್ರಗಳನ್ನು ಕಟ್ಟಿಕೊಂಡು ವಿಧಿ ಪ್ರಕಾರ ಆರಾಧಿಸುತ್ತಾ ಬಂದಿರುವರು. ಪ್ರತಿವರ್ಷ ನಡಾವಳಿ, ಪೋರಂಪಾಟ್, ರಿಲಾಪತ್ತ್, ಮಂಗಳವಾರದಂತಹ ದಿನಗಳಲ್ಲಿ ವಿಶೇಷಪೂಜೆ (ಚೊವ್ವ) ನಡೆಯುವುದು ವಾಡಿಕೆ. ಸಂಕ್ರಮಣಗಳಲ್ಲಿ ಹಬ್ಬ ಹರಿದಿನಗಳಲ್ಲಿ, ಪ್ರತಿ ವರ್ಷದ ಆಡಿ ತಿಂಗಳ ಆರಂಭಕ್ಕೆ ಹಾಗೂ ಆಟಿ ತಿಮಗಳು ಮುಗಿಯುವ ಕೊನೆಯ ದಿನದ ಸಂಕ್ರಮಣದಲ್ಲಿ ವಿಶೇಷ ರೂಪದ ಆರಾಧನೆ, ನೇರೋಳ್ ನೇರ್ಚೆ ( ಹರಕೆ) ಯಂತಹ ವಿಶೇಷ ಸೇವೆ, ಕಳಿಯಾಟವೆಂಬ ವಿಶೇಷ ಆರಾಧನೆ, ಕೆಲವೊಮ್ಮೆ ಹರಕೆಯ ಸೇವೆಯನ್ನು ಇವರು ತಮ್ಮ ಭಗವತೀ ಸ್ಥಾನಗಳಲ್ಲಿ ನಡೆಸುತ್ತಾರೆ.

೬. ಇವರಲ್ಲಿ ನಡೆಯುವ ಮದುವೆಯ ಕಾರ್ಯವು ವೈಶಿಷ್ಟ್ಯಪೂರ್ಣವಾದುದು. ಉಳಿದ ಜನಾಂಗದಲ್ಲಿರುವಂತೆ ಇವರ ಶುಭ ಕಾರ‍್ಯಗಳಲ್ಲಿ ಯಾವ ಪುರೋಹಿತರಾಗಲೀ, ಗುರುವಾಗಲೀ ಭಾಗವಹಿಸುವುದಿಲ್ಲ. ಇವರ ಹಿರಿಯರ, ಅನುಭವಿಗಳ ನೇತೃತ್ವದಲ್ಲಿ ಎಲ್ಲ ಕಾರ್ಯಗಳೂ ನೆರವೇರುತ್ತವೆ. ಇವರು ತಮ್ಮ ಹಿರಿಯರ ಸಮ್ಮುಖದಲ್ಲಿ ಆರಾಧ್ಯ ದೈವ ಭಗವತಿಯ ಸಾಕ್ಷಿಯಾಗಿ ಸಾಂಕೇತಿಕ ರೂಪಗಳನ್ನು (ದೀಪ, ನಡೆಮುಡಿ, ದಳಿಯ, ಕಂಚಿ) ಇಟ್ಟುಕೊಂಡು ವಿವಾಹದಂತಹ ಶುಭಕಾರ‍್ಯವನ್ನು ನೆರವೇರಿಸುತ್ತಾರೆ.

೭. ವಿವಾಹ ಕಾಲದ ವಿಶೇಷ ನಡವಳಿಕೆಗಳು

– ಭಗವತೀ ಸ್ಥಾನದಲ್ಲಿ ನಡೆಯುವ ವೀಳಯ ಶಾಸ್ತ್ರ (ಅನಿವಾದೊಂ ಕೇಕ್ ನ = ಮದುವೆಗೆ ಅಪ್ಪಣೆ ಕೇಳುವುದು)

– ಮದುವೆಯ ಹಿಂದಿನ ದಿನ ನಡೆಯುವ ಚಪ್ಪರ ಶಾಸ್ತ್ರ (ಪಂದಳ್ ಕೂಡುನೋ = ಚಪ್ಪರದಲ್ಲಿ ಸೇರುವುದು)

– ಚಪ್ಪರದಂದೇ ವಧುವಿನ  ಮನೆಯಲ್ಲಿ ನಡೆಯುವ ವಧು ನಿಶ್ಚಯ  (ಪೆಣ್ವ್ ವರ‍್ಪು= ವಧು ನಿಶ್ಚಯ ಈಗೀಗ ಮೊದಲೇ ಮಾಡಿರುತ್ತಾರೆ)

– ಮದುವೆಯ ದಿನ ವಧುವಿನ ಮನೆಯಲ್ಲಿ ಸೋದರತ್ತೆ ವಧುವಿಗೆ ಕಟ್ಟುವ ಕರಿಮಣಿ ಶಾಸ್ತ್ರ, ಕಾಲುಂಗರ ಇಡುವ ಶಾಸ್ತ್ರ.

– ಮದುವೆಯ ದಿನ ವರನ ಮನೆಯಲ್ಲಿ ನಡೆಯುವ ಮುಹೂರ್ತ – ಸೇಸೆ (ಮೋತೋಳ್ ಮುಖ ಸೇಸೆ)

– ಮದುವೆಯ ಮನೆ ( ಹೆಣ್ಣಿನ ಮನೆ ಅಥವಾ ಸಭಾಮಂಟಪ ಅಥವಾ ಮಂಗಲ ಕಾರ್ಯಾಲಯ ಹಾಲ್) ಯಲ್ಲಿ ವರನ ಸ್ವಾಗತ.

(ಎದುರುಕೊಳ್ಳುನೋ= ಸ್ವಾಗತಿಸುವುದು)

– ಮದುವೆಯ ಮನೆಯಲ್ಲಿ ೧೧ ಸ್ಥಾನಗಳವರಿಗೆ ವೀಳಯ ಮರ್ಯಾದೆ

– ವಧುವಿಗೆ ಧಾರೆ ಸೀರೆ ಕೊಡುವ ಶಾಸ್ತ್ರ

(ಪೊಡವ ಕೊಡುಕುನೋ)

– ವಧು – ವರರು ನಡೆಮಡಿಯಲ್ಲಿ ಬೆಳಕ್ ದಳಿಯದವರು, ತೊದೊತಿಯರೊಂದಿಗೆ ನಡೆಯುವ ಸಪ್ತಪದಿ

– ಬಳಿಕ ನಡೆಯುವ ಅಗ್ನಿಸಾಕ್ಷಿಧಾರೆ

– ಇವೆಲ್ಲ ವೈಶಿಷ್ಟ್ಯ ಪೂರ್ಣವಾದುದು – ಇಂದಿಗೂ ಆಚರಿಸಲ್ಪಡುವ ಆಚರಣೆಗಳು.

೮. ವೈದಿಕ ಸಂಪ್ರದಾಯದಲ್ಲಿ ಸತ್ತವರಿಗೆ ತರ್ಪಣ ಕೊಡುವ ಪದ್ಧತಿ ಇದೆ. ಅಂತಹದೇ ಆದರೂ ಭಿನ್ನವಾದ ವೈಶಿಷ್ಟ್ಯಪೂರ್ಣ ಆಚರಣೆ ಮೀದ್ (ಎಡೆಯಿಡುವುದು) ಇವರಲ್ಲಿದೆ. ಪ್ರತಿದಿನ, ಸಂಕ್ರಮಣಗಳಲ್ಲಿ, ವಾರ್ಷಿಕವಾಗಿ ತಡವಾಡಿನಲ್ಲಿ ಈ ಆಚರಣೆಗಳನ್ನು ನಡೆಸುತ್ತಾರೆ.

೯. ಇವರಲ್ಲಿ ಆಚರಣೆಯಲ್ಲಿರುವ ಸಾವಿನ ಆಚರಣೆ ಹಾಗೂ ಉತ್ತರ ಕ್ರಿಯೆಯ ವಿಧಿ ವಿಧಾನಗಳು ಜಾನಪದ ಮೌಲ್ಯದಿಂದ ಕೂಡಿವೆ.  ಮರಣ ಪಟ್ಟ ವ್ಯಕ್ತಿಯ ದೇಹವನ್ನು ಅಗ್ನಿಗೆ ಅರ್ಪಿಸುವ ಆಚರಣೆ ಎಲ್ಲ ಜನಾಂಗಗಳಲ್ಲಿ ಹೆಚ್ಚು ಕಡಿಮೆ ಸಮಾನವಾಗಿದೆ. ಆದರೆ ಬೋವಿ (ಮೋಯ) ಗಳಲ್ಲಿ ವ್ಯಕ್ತಿಯ ಮರಣದ ದಿನದಿಂದ ಬೈಗೂ ಬೆಳಗೂ ಉತ್ತರ ಕ್ರಿಯೆಯ (೯/೧೧/೧೩) ಹಿಂದಿನ ದಿನದವರೆಗೆ ಇಡುವ ದೀಪ (ತಿರಿ) ಇದು ಇತರ ಜನಾಂಗಗಳಲ್ಲಿ ಇಲ್ಲದ ವಿಶಿಷ್ಟ ರೂಪದ ಆಚರಣೆ.

೧೦. ಇವರ ಹೆಣ್ಣುಮಕ್ಕಳು ಚೆಲುವೆಯರು, ಶಾಲೆ ಕಾಲೇಜುಗಳ ಮುಖ ಕಾಣದ ಹಿಂದಿನ ದಿನಗಳಲ್ಲಿ ಬರೇ ಮೀನು ಹೊತ್ತು ಊರುಗಳಲ್ಲಿ ಮಾರಿ, ಅಥವಾ ಮನೆಯಲ್ಲೇ ಸಿಗಿದು, ತೊಳೆದು ಉಪ್ಪು ಹಾಕಿ ಒಣಗಿಸುವುದರಲ್ಲೇ ಪ್ರಪಂಚದ ಎಲ್ಲ ಸುಖಗಳನ್ನು ಕಂಡವರು ಕಾಣುವವರು. ಆದುದರಿಂದಲೇ ಯಾವಾಗಲೂ ಕಾಯಿಲೆ ಕಸಾಲೆಗಳಿಲ್ಲದೆ, ಆರೋಗ್ಯವಂತರಾಗಿ, ದೃಢಕಾಯರಾಗಿ, ದಿಟ್ಟೆಯರಾಗಿ  ಬಾಳಿದವರು ಬಣ್ಣದಲ್ಲಿ ಎಣ್ಣೆ ಕಪ್ಪಾಗಿದ್ದರೂ ಶ್ರಮ ಜೀವನದ ಅವರ ದೇಹ ಮಾಟವಾಗಿ ಬೆಳೆದು ಚೆಲುವನ್ನು ಸೂಸುತ್ತವೆ.

ಇವರು ಜಾನಪೊದ ವೈದ್ಯದಲ್ಲಿ, ವೃತ್ತಿಯಲ್ಲಿ, ಆರೋಗಣಿಯ ಭಿನ್ನ ಭಿನ್ನ ತಯಾರಿಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ, ಸಾಂಸ್ಕೃತಿಕ ಕಾರ್ಯಗಳಲ್ಲಿ, ಸಾಮರಸ್ಯದಿಂದ ಅವಿಭಕ್ತ ಕುಟುಂಬದಲ್ಲಿ ಹೊಂದಿಕೊಂಡು ಬಾಳುವುದರಲ್ಲಿ, ಪ್ರತಿಯೊಂದು ಆಚರಣೆಯಲ್ಲಿ ಸಕ್ರಿಯವಾಗಿ ಪಾಲುಗೊಳ್ಳವುದರಲ್ಲಿ ನಿಷ್ಣಾತರು.

ಸಾಂಸ್ಕೃತಿಕ ಪರಂಪರೆ, ಜಾನಪದ ಆಚರಣೆಗಳು ದಿನೇ ದಿನೇ ಖಿಲವಾಗುತ್ತಿರುವ ಇಂದಿನ ದಿನಗಳಲ್ಲಿ ಬೋವಿ (ಮೋಯ) ಜನಾಂಗವು ತನ್ನೆಲ್ಲ ಆಚರಣೆಗಳನ್ನು ಸಂಪ್ರದಾಯಗಳನ್ನು ಉಳಿಸಿಕೊಂಡು ಬಂದು ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ. ಜನಪದ ಸೌಹಾರ್ದತೆಯನ್ನು ಸೂಚಿಸುವ ಈ ಎಲ್ಲಾ ಆಚರಣೆಗಳು ಮನುಷ್ಯ ಮನುಷ್ಯನನ್ನು ಮನ ಮನವನ್ನು ಹತ್ತಿರ ತರುವಂತಹದು. ಪರಸ್ಪರ ಆತ್ಮೀಯತೆಯನ್ನು ಉಂಟು ಮಾಡುವಂತಹವುಗಳು. ಇವು ಸಹಬಾಳ್ವೆಯ, ನೆಮ್ಮದಿಯ ಪ್ರತೀಕವಾಗಿವೆ.ಇದು ಭಾರತೀಯರ ಉಜ್ವಲ ಪರಂಪರೆಯಾಗಿದೆ. ಇದರಲ್ಲಿ ಬೋವಿ (ಮೋಯ) ಜನಾಂಗದ ಕೊಡುಗೆ ತಿಲ ಮಾತ್ರ. ಆಧುನಿಕತೆಗೆ ಮಾರು ಹೋಗಿ ಪಾಶ್ಚಾತ್ಯ ಸಂಸ್ಕೃತಿಯೇ ಶ್ರೇಷ್ಠ ಎನ್ನುವ ಬಿರುಗಾಳಿ ಬೀಸುವ ಈ ಸಂದಿಗ್ಧ ಕಾಲದಲ್ಲಿ ಶ್ರೀಮಂತ ಹಾಗೂ ವೈಶಿಷ್ಟ್ಯ ಪರಂಪರೆಯಿಂದ ಕೂಡಿದ ಸಮುದಾಯ ಆಚರಣೆಗಳು, ಸಾಂಸ್ಕೃತಿಕ ಮೌಲ್ಯಗಳು, ನಶಿಸಬಾರದು ಎಂದು ಅಂದಿನ ಮಾತೆಯರು ತಮ್ಮ ಪೀಳಿಗೆಗೆ ಹೇಗೆ ತಿಳಿಸಿಕೊಟ್ಟರೋ ಅದೇ ತಿಳುವಳಿಕೆಯನ್ನು ಇಂದಿನ ಮಾತೆಯರು ತಮ್ಮ ಪೀಳಿಗೆಗೆ ತಿಳಿಸಿ ಕೊಡಬೇಕು. ಅವರಿಗೆ ಮನವರಿಕೆ ಮಾಡಬೇಕು. ಈ ನಿ‌ಟ್ಟಿನಲ್ಲಿ ಎಚ್ಚರಿಕೆ ವಹಿಸಿ ಮುಂಬರುವ ಪೀಳಿಗೆಗೆ ತಿಳುವಳಿಕೆ ನೀಡುವ ಕರ್ತವ್ಯ ನಮ್ಮದು. ಕರ್ತವ್ಯಚ್ಯುತರಾಗದೆ ಮುನ್ನಡೆದರೆ ಒಳಿತು.

ಭಾಷೆ

ಕರ್ನಾಟಕದ ಕಾರವಾರದಿಂದ ಕೇರಳ ನೀಲೇಶ್ವರದವರೆಗೆ ಇದ್ದ ಭೂ ಪ್ರದೇಶ ತುಳುನಾಡು ಎಂದು ಕರೆಯಲ್ಪಡುತ್ತಿತ್ತು. ಈ ತುಳುನಾಡಿನಲ್ಲಿ ಬಾಳಿದ್ದ ಬೋವಿ (ಮೋಯ) ಜನಾಂಗದ ಮೇಲೆ ತುಳವ ಸಂಸ್ಕೃತಿಯ, ಜಾನಪದ ಹಾಗೂ ಭಾಷೆಯ ಪ್ರಭಾವ ಬಹಳಷ್ಟು ಆಗಿದೆ. ತಮಿಳುನಾಡಿನಿಂದ ಹೊರಟ ಈ ಜನಾಂಗ ದೀರ್ಘಕಾಲ ಕೊಡಗಿನಲ್ಲಿ ನೆಲೆಸಿ, ಕೇರಳದ ಕರಾವಳಿಯನ್ನು ಸೇರಿ, ಕರ್ನಾಟಕದ  ದಕ್ಷಿಣದ ಕರಾವಳಿಯವರೆಗೂ ವಲಸೆ ಹೋಯಿತು.  ಆದುದರಿಂದ ಇವರ ಭಾಷೆಯು ತಮಿಳಿನ, ಕೊಡಗಿನ, ಕೇರಳದ, ಕರ್ನಾಟಕದ ಭಾಷೆ ಹಾಗೂ ಅಲ್ಲಿಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಒಂದು ವಿಶಿಷ್ಟ ರೂಪದ ಭಾಷೆ, ಸಂಸ್ಕೃತಿಯ ಆವಿಷ್ಕಾರವಾಯಿತು. ’ಮಲಾಮ’ ಎಂದು ಕರೆಯಲ್ಪಡುವ ಈ ಭಾಷೆಯ ಮಲೆಯಾಳದ ಉಪಭಾಷೆಯಾಗಿದೆ. ತುಳುನಾಡಿನಲ್ಲಿ ಸಮಾವೇಶವಾಗಿದ್ದ ಕಾಲಕ್ಕೆ ನೀಲೇಶ್ವರದವರೆಗೆ ಕನ್ನಡ ಶಾಲೆಗಳಿದ್ದು, ಹಿಂದಿನ ತಲೆಮಾರಿನವರ ಶಿಕ್ಷಣ ಅಲ್ಲಿಯೇ ಆಗಿತ್ತು. ಅವರು ಕನ್ನಡವನ್ನು ಚೆನ್ನಾಗಿ ಬಲ್ಲವರಾಗಿದ್ದರು.

ಉದಾ. ೧೯೩೩ ರಿಂದ ೩೭ರವರೆಗೆ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಲೆಯಾಳ ಬೋವಿಯರ ಮೂರು ಪರಿಷತ್ತುಗಳು ಹಾಗೂ ಅದರ  ವಿವರಣೆಗಳೆಲ್ಲಾ ಕನ್ನಡದಲ್ಲಿವೆ. ಕಾರ್ಯಕ್ರಮವನ್ನು ಕನ್ನಡದಲ್ಲಿ ಆಯೋಜಿಸಲಾಗಿತ್ತು. ಆದುದರಿಂದ ಕನ್ನಡ ಬಲ್ಲವರು ಮಲಾಮ ಭಾಷೆಯನ್ನು ಕನ್ನಡದಲ್ಲಿ ಬರೆಯುತ್ತಾರೆ. ಕೇರಳದಲ್ಲಿ ಮಲೆಯಾಳವನ್ನು ಬಳಸುತ್ತಾರೆ. ಮಲಾಮ ಎಂಬ ಉಪಭಾಷೆಗೆ ಲಿಪಿ ಇಲ್ಲ. ಆದರೆ ಒಂದು ಉಪಭಾಷೆಗೆ ಇರುವ ಎಲ್ಲ ಇತಿ – ಮಿತಿಗಳನ್ನು ಈ ಭಾಷೆಯಲ್ಲಿಯೇ ಕಾಣಬಹುದು.

ವೇಷಭೂಷಣ

ಭಾರತೀಯರ ವೇಷಭೂಷಣ ವೈವಿಧ್ಯಮಯವಾದದು. ಹವಮಾನಕ್ಕೆ ತಕ್ಕಂತೆ ಸಂದರ್ಭಗಳಿಗೆ ತಕ್ಕಂತೆ, ತಮ್ಮ ಆರ್ಥಿಕ ಸ್ಥಿತಿಗೆ ತಕ್ಕಂತೆ, ವಿವಿಧ ಜನಾಂಗಗಳ ಉಡಿಗೆ ತೊಡಿಗೆ ಕಂಡು ಬರುತ್ತದೆ. ಅಂತೆಯೇ ಕರಾವಳಿಯ ಬೋವಿ ಜನಾಂಗದ ಹೆಣ್ಣುಮಕ್ಕಳ (ಮೋಯ ಜನಾಂಗ) ವೇಷ ಭೂಷಣಗಳು ಅವರ ಪ್ರಾದೇಶಿಕ ಸಂಸ್ಕೃತಿ, ಹವಮಾನ ಹಾಗೂ ಪರಿಸರಕ್ಕೆ ಅನುಗುಣವಾಗಿ ವ್ಯತ್ಯಾಸವಾಗುತ್ತಾ ಹೋಗಿದೆ. ಹೆಣ್ಣುಮಕ್ಕಳ ಉಡಿಗೆ ತೊಡಿಗೆಗಳನ್ನು ಎರಡು ವಿಭಾಗವಾಗಿ ವಿಂಗಡಿಸಿಕೊಳ್ಳಬಹುದು.

೧. ದೈನಂದಿನ

೨. ವಿಶೇಷ ಸಂದರ್ಭಗಳಲ್ಲಿ

ಬಹಳ ಹಿಂದೆ ಕೇರಳದಲ್ಲಿ ರಾಜರ ಆಳ್ವಿಕೆಯ ಕಾಲವಿತ್ತು. ಆಗ ಅವರ ರಾಣಿಯವರನ್ನು ಹೊರತು ಪಡಿಸಿ ಉಳಿದ ಹೆಂಗಸರಿಗೆ ಎದೆಯನ್ನು ಮುಚ್ಚುವ ಸ್ವಾತಂತ್ರ‍್ಯವಿರಲಿಲ್ಲ. ಅದು ಕೇವಲ ರಾಣಿಯವರಿಗೆ ಮೀಸಲಾಗಿತ್ತು. ನಾರಾಯಣ ಗುರುಸ್ವಾಮಿಯ ಸಾಮಾಜಿಕ ಆಂದೋಲನದ ಬಳಿಕ ಅಲ್ಲಿಯ ಹೆಂಗಸರಿಗೆ ರವಿಕೆ ತೊಡುವ ಅವಕಾಶ ದೊರೆಯಿತು. ಒಂದು ಕೂಡುಕಟ್ಟಿಗೆ ಸೇರಿದ ಕರಾವಳಿಯ ಬೋವಿ (ಮೋಯ)ಗಳ ೧೧ ಭಗವತಿ ಸ್ಥಾನಗಳಲ್ಲಿ ದಕ್ಷಿಣದ ೯ ಸ್ಥಾನಗಳು ಭಾಷಾವಾರು ಪ್ರಾಂತ್ಯದ ರಚನೆಯ ಬಳಿಕ ಕೇರಳದಲ್ಲಿ ಸಮಾವೇಶವಾಯಿತು.  ಕೇರಳದ ಮಧ್ಯಭಾಗದ ತೀರದ ನಾಲ್ಕು ಸ್ಥಾನಗಳ ಒಳನಾಡಿನ ಭಾಗಗಳಲ್ಲಿ ಈಗಲೂ ಹಿರಿಯರಲ್ಲಿ ಕೆಲವರು ಹಳೆಯ ಸಂಪ್ರದಾಯವನ್ನು ಪಾಲಿಸುತ್ತಾರೆ. ಒಂದು ವೇಳೆ ಎದೆಯನ್ನು ಮುಚ್ಚು ಬಟ್ಟೆ ತೊಟ್ಟರೆ ಅವರ ಸಂತತಿ ನಾಶವಾಗುತ್ತದೆ ಎಂಬ ಭಯ (ನಂಬಿಕೆ) ಅವರನ್ನು ಇಂದಿಗೂ ಕಾಡುತ್ತಿದೆಯಂತೆ. ಉಳಿದ  ಹೆಂಗಸರು ಅಡ್ಡಮುಂಡು ಉಟ್ಟು ರವಿಕೆ ತೊಡುವರು. ಹೊರಗೆ ಹೋಗುವಾಗ ಮಾತ್ರ ಹೆಗಲವಸ್ತ್ರವನ್ನು ಸೆರಗಿನಂತೆ ಉಪಯೋಗಿಸುವರು. ಉಳಿದ ೭ ಸ್ಥಾನಗಳಲ್ಲಿ ವಾಸಿಸುವ ಬೋವಿ (ಮೋಯ) ಹೆಂಗಸರು ಸೀರೆ ರವಿಕೆ ತೊಡುವರು. ವಯಸ್ಸಾದ ಹೆಂಗಸರು ಪೊಳು (ಅರ್ಧಸೀರೆ) ಉಟ್ಟು ಸೆರಗು ಹಾಕುವರು. ರವಿಕೆ ಹಾಕುವ ಪದ್ಧತಿ ಇರಲಿಲ್ಲ. ಮಧ್ಯವಯಸ್ಕರಾದ ಹೆಂಗಸರು ಕಟ್ಟುವ ರವಿಕೆಯನ್ನು ಉಪಯೋಗಿಸುತ್ತಿದ್ದರು.

ತಲೆಯನ್ನು ಸಾಮಾನ್ಯವಾಗಿ ಸೂಡಿ ಕಟ್ಟುತ್ತಾರೆ. ಸೂಡಿಗೆ ಸರಿಗೆಯ ಮುಳ್ಳುಗಳನ್ನು ಕಟ್ಟಿಕೊಳ್ಳುವರು. ತಲೆ ತುಂಬಾ ಹೂವು ಮುಡಿದು ಕೈಗಳಿಗೆ ಕೆಂಪು ಗಾಜಿನ ಬಳೆಯನ್ನು ಹಾಕುವರು. ಕಿವಿಯಲ್ಲಿ ಓಲೆ ಅಥವಾ ಕುಡುಕ ಕೊಪ್ಪು, ಪುಗಡಿ, ಮೂಗಿನಲ್ಲಿ ನತ್ತು, ಕುತ್ತಿಗೆಯಲ್ಲಿ  ಕರಿಮಣಿಸರ ಕಾಲಲ್ಲಿ ಕಾಲುಂಗರ ಇವನ್ನು ಧರಿಸುತ್ತಾರೆ. ಹೆಣ್ಣುಮಕ್ಕಳು ಉದ್ದದ ಲಂಗ, ರವಿಕೆ ಹಾಕುವರು. ಎರಡು ಜಡೆ ಹೆಣೆದು  ಜಡೆಯ ತುದಿಯನ್ನು ಬಾಳೆಯ ನಾರಿನಿಂದಾಗಲೀ ಬಣ್ಣಬಣ್ಣದ ರಿಬ್ಬನಿನಿಂದಾಗಲೀ ಕಟ್ಟುವರು. ಸಣ್ಣ ಸಣ್ಣ ಹೆಣ್ಣು ಮಕ್ಕಳು ಲಂಗ ರವಿಕೆ ಧರಿಸುವರು. ಕೈಗೆ ಬಳೆ, ಕಿವಿಗೆ ಲೋಲಾಕು, ಮೂಗಿಗೆ ಮೂಗುತಿ, ಕಾಲಿಗೆ ಗೆಜ್ಜೆ ಕಟ್ಟುವರು, ದೊ‌ಡ್ಡವರಾದಾಗ ಹೆಣ್ಣುಮಕ್ಕಳು ಉದ್ದದ ಲಂಗ ಹಾಕಿ ರವಿಕೆ ತೊಟ್ಟು ಅದರ ಮೇಲೆ ದಾವಣಿ (ಅರ್ಧಸೀರೆ) ಧರಿಸಿ ಸೆರಗು ಹಾಕುವರು.

ವಿಶೇಷ ಸಂದರ್ಭಗಳಲ್ಲಿ : ಬೋವಿ (ಮೋಯ) ಹೆಂಗಸರು ವಿಶೇಷ ಸಂದರ್ಭಗಳಲ್ಲಿ ಸಿಲ್ಕಿನ, ರೇಶ್ಮೆಯ ನೂಲಿನ ಉತ್ತಮ ಸೀರೆಗಳನ್ನು ಉಡುತ್ತಾರೆ. ಗಾಜಿನ ಬಳೆಗಳೊಂದಿಗೆ ಚಿನ್ನದ ಬಳೆಗಳನ್ನೂ (ಅನುಕೂಲಸ್ಥರು) ತೊಡುವರು. ತುರುಬು ಕಟ್ಟಿ ಹೂಮುಡಿಯುವರು. ಕುತ್ತಿಗೆಯಲ್ಲಿ ಕರಿಮಣಿಸರ (ಮಾಂಗಲ್ಯ) ದೊಂದಿಗೆ ಬೇರೆ ಬೇರೆ ಚಿನ್ನದ ಆಭರಣಗಳನ್ನು ಧರಿಸುವರು.  ಚಕ್ರಹಾರ, ಕೊತ್ತಂಬರಿಸರ, ಮಲ್ಲಿಗೆ ಹಾರ, ಕುಕ್ಕುಮುಡಿ, ಇವೇ ಮೊದಲಾದ ಚಿನ್ನದ ಸರಗಳನ್ನು ಧರಿಸುತ್ತಾರೆ. ಮಿಸಿರಿನಮಾಲೆ (ಪವನುಸರ) ಹಾಗೂ ಚಕ್ರಹಾರ ಇವರ ವಿಶೇಷ ಆಭರಣ. ಮೂಗಿಗೆ ಮೂಗುತಿ, ಕಿವಿಗೆ ಓಲೆ, ಕೊಪ್ಪು, ಚವಳಗಳನ್ನೂ ಕಾಲಿಗೆ ಕಾಲುಂಗುರವನ್ನೂ ಇಡುವರು.

ಮದುಮಗಳ ಉಡಿಗೆ : ಮದುಮಗಳಿಗೆ ಮದುವೆಯ ಹಿಂದಿನ ದಿನ ಮಾಡುವ ಚಪ್ಪರ ಶಾಸ್ತ್ರದಂದು ಚಪ್ಪರದ ಸೀರೆ ಉಡುಸಿ, ಕೆಂಪು, ಹಸಿರಿನ ಗಾಜಿನ ಬಳೆಗಳೊಂದಿಗೆ ಚಿನ್ನದ ಬಳೆಗಳನ್ನೂ ದೃಷ್ಟಿ ಆಗದಿರಲಿ ಎಂದು ಒಂದೊಂದು ಕಪ್ಪಿನ ಬಳೆಯನ್ನೂ ತೊಡಿಸುವರು. ಬೆರಳಿಗೆ ಉಂಗುರಗಳನ್ನೂ ತೊಡಿಸುವರು. ಮದುವೆಯ ದಿನದಂದು ಮುಂಜಾನೆಯ ಮುಹೂರ್ತದಲ್ಲಿ ಸೋದರತ್ತೆಯ ಅಥವಾ ಸೋದರಮಾವನ ಮಗಳು ಕಾಲುಂಗರ ಇಡುವಳು. ಸೋದರತ್ತೆಯು ವಧುವಿನ ಕುತ್ತಿಗೆಗೆ ಕರಿಮಣಿ ಸರವನ್ನು ಕಟ್ಟುವಳು. ಅವರ ಆರಾಧ್ಯದೈವ ಭಗವತಿ ಕನ್ನಿಕಾ ಪರಮೇಶ್ವರಿಯನ್ನು  ಸಾಂಕೇತಿಕವಾಗಿ ಸಾಕ್ಷಿಯಾಗಿಟ್ಟು ನಡೆಯುವ ಬೋವಿಗಳ (ಮೋಯ) ಮದುವೆಯ ಕಾರ್ಯದಲ್ಲಿ ಕರಿಮಣಿಸರವನ್ನು ವಧುವಿಗೆ ಕಟ್ಟುವುದಿಲ್ಲ. ಮುಂಜಾನೆಯ ಮುಹೂರ್ತದಲ್ಲಿಯೇ ಈ ಆಚರಣೆ ನಡೆಯಬೇಕು. ವರನ ದಿಬ್ಬಣ ಬಂದ ನಂತರ ನಡೆಯುವ ಕಾರ್ಯ ಕಲಾಪಗಳಲ್ಲಿ ಧಾರೆ ಸೀರೆ ಕೊಡುವ ಪೊಡವ (ಪೊಡವ ಕೊಡುಕುನ್ನೊ) ಸಂಪ್ರದಾಯವಿದೆ.  ಈ ಆಚರಣೆ ನಡೆದ ನಂತರ ಧಾರೆಸೀರೆ, ರವಿಕೆಯನ್ನು ವಧುವಿಗೆ ಉಡಿಸುವರು. ತಲೆಗೆ ಮಲ್ಲಿಗೆ ಹೂವಿನ ಜಲ್ಲಿ ಹಾಕುವರು. ಜಡೆಯನ್ನೂ ಮಲ್ಲಿಗೆ ಹೂವಿನಿಂದ ಸಿಂಗರಿಸಿ ಜಡೆ ಬಿಲ್ಲೆ ಇಡುವರು. ಜಡೆಯ ತುದಿಗೆ ಕೆಂಪುರಿಬ್ಬನ್ನು ಕಟ್ಟುವರು. ಸೊಂಟಕ್ಕೆ ಸೊಂಟದ ಪಟ್ಟಿ, ಕೈಗೆ ವಂಕಿ, ತಲೆ ಮುಂದಲೆ ಇವೇ ಮೊದಲಾದ ಆಭರಣಗಳನ್ನು ಇಟ್ಟು ಅಲಂಕರಿಸುವರು, ಕುತ್ತಿಗೆಗೆ ಕರಿಮಣಿಸರದೊಂದಿಗೆ ಪಕಳದ ಸರ, ಮಿಸಿರಿನ ಮಾಲೆ, ಕೊತ್ತಂಬರಿಸರ, ಅವಲಕ್ಕಿಸರ, ಕುಕ್ಕುಮುಡಿಸರ, ಮಲ್ಲಿಗೆ ಸರ ಚಕ್ರಹಾರ, ಚಂದ್ರಹಾರ, ಇವೇ ಮೊದಲಾದ ಸರಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಸಿಯೋ ಅಥವಾ ಸಂಬಂಧಿಕರ ಸರವನ್ನೋ ಇಡುವರು. ಎಲ್ಲ ಅಲಂಕಾರ ಮುಗಿದ ಬಳಿಕೆ ಹೆಗಲಿಗೆ ಒಂದು ಮೆದಲೆ (ಜರಿಶಾಲು) ಯನ್ನು ಹಾಕುವರು.

 ೨. ಬೋವಿ (ಮೋಯ) ಜನಾಂಗ ಮಹಿಳೆಯರ ವೃತ್ತಿ ಪರಂಪರೆಗಳು

ಮೀನುಗಾರಿಕೆ : ಕರಾವಳಿಯ ಮೋಯ ಜನಾಂಗದ ಮುಖ್ಯ ಕಸುಬು ಮೀನುಗಾರಿಕೆ. ಮೀನು ಹಿಡಿದು ದಡಕ್ಕೆ ತರುವುದಷ್ಟೇ ಗಂಡಸರ ಕೆಲಸವಾಗಿತ್ತು. ಅಲ್ಲಿಂದ ಅದು ಮಾರಾಟಕ್ಕೆ ಹೋಗಬೇಕಿದ್ದರೆ ಮಹಿಳೆಯಿಂದಲೇ ಆಗಬೇಕು. ಮಹಿಳೆಯರು ಏಲಂಗೆ ನಿಂತು ಮೀನು ತೆಗೆದುಕೊಂಡು ಮಾರಾಟಕ್ಕೆ ಕೊಂಡು ಹೋಗುತ್ತಾರೆ. ದೊಡ್ಡ ದೊಡ್ಡ ಪೇಟೆಗಳಿಗೆ ಸಾಗಿಸುತ್ತಾರೆ. ಹೇರಳವಾಗಿ ಮೀನು ದೊರಕಿದಂದು ದೋಣಿಯ ಪಾಲುದಾರಿಗೆ ಹೆಚ್ಚು ಮೀನು ದೊರೆಯುತ್ತದೆ.  ಪ್ರತಿ ಮನೆಯ ಹೆಂಗಸರು ಮನೆಯ ಖರ್ಚಿಗೆ ಬೇಕಾದಷ್ಟು ತೆಗೆದಿಟ್ಟು ಉಳಿದುದನ್ನು ಮಾರುತ್ತಾರೆ. ಬಹಳಷ್ಟು ಉಳಿದರೆ ಮನೆಗೆ ತಂದು ಸಿಗಿದು ತೊಳೆದು ಉಪ್ಪಿನಲ್ಲಿ ಹಾಕಿಡುತ್ತಾರೆ. ಸಿಮೆಂಟಿನ ಟಾಂಕಿ ಈ ಕೆಲಸಕ್ಕೆಂದೇ ಕಟ್ಟಿಸುತ್ತಿದ್ದರು. ಉಪ್ಪು ಹಾಕಿಟ್ಟ ಸ್ವಲ್ಪ ಮೀನನ್ನು ಮಾರನೆಯ ದಿನ ಮೂಡ್ಲಾಯಿಗೆ ಮಾರಾಟಕ್ಕೆ ಒಯ್ಯುತ್ತಿದ್ದರು. ಉಳಿದುದನ್ನು ಕಡಲತೀರಕ್ಕೆ ಒಯ್ದು ಬಿಸಿಲಿರುವಲ್ಲಿ ಹಳೆಯ ಬಲೆಯನ್ನೋ, ಹೆಣೆದ ತೆಂಗಿನ ಮಡಲನ್ನೋ ಬಿಡಿಸಿ, ಅಥವಾ ಬಂಡೆಯ ಮೇಲೆ ಮೀನನ್ನು ಒಣಗಲು ಇಡುವರು. ಸರದಿಯಂತೆ ಮನೆಮಂದಿ ಅಲ್ಲಿ ಕಾವಲಿರುತ್ತಾರೆ. ಹೀಗೆ ಮೀನು ಒಣಗಿ ಮನೆಗೆ ಬಂದು ತಲುಪುವವರೆಗಿನ ಜವಾಬ್ದಾರಿ ಮನೆಯ ಹೆಂಗಸರದು. ಎರಡು ಮೂರು ಬಿಸಿಲಲ್ಲಿ ಅದು ಒಣಗಬೇಕು. ಮನೆಯಲ್ಲಿ ಬುಟ್ಟಿ ಅಥವಾ ಗೋಣಿಯಲ್ಲಿ ತುಂಬಿಸಿ ದಾಸ್ತಾನು ಮಾಡುತ್ತಾರೆ. ಮಳೆಗಾಲದಲ್ಲಿ ಮನೆಯ ಖರ್ಚಿಗೂ, ಬೇಕಾದವರಿಗೆ ಮಾರಾಟ ಮಾಡಲು ಉಪಯೋಗಿಸುತ್ತಾರೆ.

ಸೆಣಬು ಬೆಳೆಸುವುದು :

ಮೀನುಗಾರಿಕೆಯಲ್ಲಿ ಸೆಣಬಿನ ಬಲೆಯನ್ನು ಹಿಂದೆ (ಈಗ ನೈಲನ್ ಬಲೆ) ಮೋಯರು ಉಪಯೋಗಿಸುತ್ತಿದ್ದರು. ಸೆಣಬಿನ ಬೀಜಬಿತ್ತಿ, ಅದು ಮೊಳಕೆಯೊಡೆದು, ಸಸಿಬೆಳೆದು ಉದ್ದುದ್ದವಾದ ಗಿಡವಾಗುತ್ತದೆ. ಬಲಿತಾಗ ಅವುಗಳನ್ನು ಕತ್ತರಿಸಿ ಹೊಳೆಯಲ್ಲಿ ಕಲ್ಲುಕಟ್ಟಿ ನೆನೆಸಿ ಇಡುತ್ತಾರೆ.  ಅವು ಚೆನ್ನಾಗಿ ನೆನೆದು ಕೊಳೆತ ಮೇಲೆ ಕಡಲತೀರದಲ್ಲಿ ಒಣಗಿಸುತ್ತಾರೆ. ಚೆನ್ನಾಗಿ ಒಣಗಿದ ಮೇಲೆ ಮನೆಗೆ ತಂದು ಹಾಕುತ್ತಾರೆ. ಮನೆಮಂದಿಯೆಲ್ಲಾ ಹೆಚ್ಚಾಗಿ ಹೆಂಗಸರೇ ಅದರ ನಾರನ್ನೂ ಸೆಣಬಿನ ಕೋಲಿನಿಂದ ಪ್ರತ್ಯೇಕಿಸುತ್ತಾರೆ. ಆ ಮೇಲೆ ಆ ನಾರಿನ ನೂಲನ್ನು ಹೆಂಗಸರು ನೂಲುತ್ತಾರೆ.  ಕೊನೆಯಲ್ಲಿ ಗಂಡಸರು ಅವನ್ನು ಜೋಡಿಸಿ ಕಾಯಿಸುತ್ತಾರೆ (ಹುರಿಹಗ್ಗ ಮಾಡಿದಂತೆ  ಜೋಡಿಸುವುದು) ಬಳಿಕ ಅವನ್ನು ಅನ್ನದ ನೀರಿನಲ್ಲಿ ನೆನಸಿ, ಒಣಗಿಸಿ, ಕದಿ ಮಾಡಿ ಬಲೆ ಹೆಣೆಯಲು ಉಪಯೋಗಿಸುತ್ತಾರೆ. ಮಳೆಗಾಲದಲ್ಲಿ ಮೀನುಗಾರಿಕೆ ಇಲ್ಲದುದ್ದರಿಂದ ಈ ಎಲ್ಲಾ ಕೆಲಸವನ್ನು ಮನೆಯ ಹೆಂಗಸರು ಮಾಡುತ್ತಾರೆ. ಕೆಲಮಟ್ಟಿಗೆ ಮಾತ್ರ ಪುರುಷರು ಬಲೆ ಹೆಣೆಯುತ್ತಾರೆ. ಇಲ್ಲದಿದ್ದರೆ ಹೆಚ್ಚಿನ ಕೆಲಸ ಹೆಂಗಸರದ್ದೇ.

ಮೂಡ್ಲಾಗೆ ಹೋಗುವುದು : ಅವಿಭಕ್ತ ಕುಟುಂಬ ಪ್ರತೀತಿಯಲ್ಲಿದ್ದ ಕಾಲದಲ್ಲಿ ಸಹಕರಿಸಿ ಬಾಳುತ್ತಿತ್ತು ಮೋಯ ಜನಾಂಗ. ಮನೆಯ ಕೆಲಸ, ಮಕ್ಕಳ ನೋಡಿಕೊಂಡು ತಮಗೆ ಮೂಡ್ಲಾಗೆ ಹೋಗಲು ಕೊಂಡು ಹೋಗುವ ಬುತ್ತಿಯನ್ನು ಸಿದ್ಧಗೊಳಿಸಿ ಹೊರಡುತ್ತಿದ್ದರು. ಕೆಲವೊಮ್ಮೆ ಉಪ್ಪಿನಲ್ಲಿ ಹಾಕಿಟ್ಟ ಮೀನನ್ನು ಮೂಡ್ಲಾಗೆ ಕೊಂಡು ಹೋಗಿ ಒಂದೆರಡು ದಿನಗಳಲ್ಲಿ ಹಿಂತಿರುಗುತ್ತಾರೆ. ಅಂದರೆ ಹತ್ತಿರದ ಊರಿಗೆ ಹೋಗಿ ಬರುತ್ತಾರೆ. ಒಣ ಮೀನನ್ನು ದೂರದ ಊರಿಗೆ ಕೊಂಡು ಹೋಗುತ್ತಾರೆ. ಬುಟ್ಟಿಯಲ್ಲಿ ಮೀನನ್ನು ಪೇರಿಸಿಟ್ಟು ಅದರೊಂದಿಗೆ ತಮ್ಮ ಬುತ್ತಿಯನ್ನು ಕಟ್ಟಿಕೊಂಡು, ಕಾಲ್ನಡಿಗೆಯ ಪ್ರವಾಸದಲ್ಲಿ ತಾವು ಹೋಗಬೇಕಾದ ಊರನ್ನು ಸೇರುತ್ತಾರೆ. ಇವರು ಗುಂಪಾಗಿ ಹೊರಡುತ್ತಾರೆ. ದೂರದ ಊರು ಒಬ್ಬರಿಗೊಬ್ಬರು ಸಹಾಯಕ್ಕಿರಲಿ ಎಂಬ ಉದ್ದೇಶದಿಂದ ಒಟ್ಟಾಗಿ ಹೊರಡುತ್ತಾರೆ.  ಕಾಲ್ನಡಿಗೆಯಲ್ಲಿ ಹೋಗುತ್ತಾ ಸಣ್ಣ ಸಣ್ಣ ಹೊಳೆ ನದಿಯನ್ನು ದಾಟಲು ಮೇಣಿಯ ಸಹಾಯ ಪಡೆಯುತ್ತಾರೆ. ಈ ಸಮಯದಲ್ಲಿ ತಮ್ಮ ಆಯಾಸ ಪರಿಹಾರ ಬೇಕೆನ್ನುವ ಉದ್ದೇಶದಿಂದ ಹಾಡುಗಳನ್ನು ಹಾಡುತ್ತಾರೆ. ಕಥೆಗಳನ್ನು ಹೇಳುತ್ತಾರೆ. ತಮಗೆ ತಿಳಿದ ವಿನೋದ ಪ್ರಸಂಗಗಳನ್ನು ಆಡುತ್ತಾರೆ. ಈ ಮೌಖಿಕ ಸಾಹಿತ್ಯ ಅಲಭ್ಯವಾದರೂ ಅವು ಒಂದು ಕಾಲಕ್ಕೆ ಸಾಕಷ್ಟು ಇದ್ದವು ಎಂದು ಬಲ್ಲವರು, ಹಿರಿಯರು ಹೇಳುತ್ತಾರೆ.

ಹೀಗೆ ಮೀನಿನ ಬುಟ್ಟಿಯನ್ನು ಹೊತ್ತುಕೊಂಡು ಹೋಗುವಾಗ ರಾತ್ರಿಯಾದಲ್ಲಿ ಪರಿಚಿತರ ಮನೆಯಲ್ಲಿ ತಂಗಿ ತಾವು ಕೊಂಡು ಹೋದ ಬುತ್ತಿಯನ್ನು ಉಣ್ಣುತ್ತಾರೆ. ಅಂತಹ ಆತ್ಮೀಯ ದಿನಗಳನ್ನು ಮೂಡ್ಲಾಯಿಗೆ ಹೋದವರೂ, ಪರಿಚಿತರೂ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ನಾಲ್ವರಲ್ಲಿ ವ್ಯವಹರಿಸಿದ ಅವರಿಗೆ ಹೇಗೆ ಒಂದಾಗಿ ಬಾಳುವುದು ಎಂಬುದರ ಅರಿವಿತ್ತು. ಆ ಅರಿವೇ ಅವರಿಗೆ ಗುರುವಾಗಿ ಅವರು ಅಂತಹ ಬಾಳನ್ನು ಅಂದು ಬಾಳಿದವರು. ಒಮ್ಮತವೇ ಅಂದಿನ ಯಶಸ್ವೀ ಬಾಳಿನ ಗುಟ್ಟಾಗಿತ್ತು. ಮೂರು ನಾಲ್ಕು ದಿನಗಳಲ್ಲಿ ಮೀನು ಮಾರಿ ಹಿಂತಿರುಗುವಾಗ ಹಣದ ಬದಲಾಗಿ ಅಕ್ಕಿ, ಭತ್ತ, ಸೌತೆ, ಮೆಣಸು, ಹುಳಿ, ಬೆಲ್ಲ, ರಾಗಿ ಇವೆಲ್ಲವನ್ನೂ ತರುತ್ತಿದ್ದರು. ಆಗ ವಸ್ತು ವಿನಿಮಯ ವ್ಯಾಪಾರವಿತ್ತು. ಎಲ್ಲ ವಸ್ತುಗಳನ್ನು ಒಂದೇ ದಿವಸ ತರಲಾಗದಿದ್ದಲ್ಲಿ ಅಲ್ಲೇ ಬಿಟ್ಟು ಮತ್ತೆ ಯಾವತ್ತಾದರೂ ಒಂದು ದಿನ ಮನೆ ಮಕ್ಕಳನ್ನು ಕರೆದುಕೊಂಡು ಹೋಗಿ ಅವೆಲ್ಲವನ್ನು ತರುತ್ತಾರೆ.

ತಮ್ಮ ಊರಿನಲ್ಲಿ ಜಾತ್ರೆ ಇದ್ದರೆ ತಾವು ಮೂಡ್ಲಾಯಿಗೆ ಹೋಗುವ ಊರಿನವರಲ್ಲಿ ತಮ್ಮ ತೀರ ಪರಿಚಯಸ್ಥರನ್ನು ಆತ್ಮೀಯರನ್ನು ಆಮಂತ್ರಿಸುತ್ತಾರೆ. ನಾಲ್ಕೈದು ದಿನವಿದ್ದು ಅವರು ಜಾತ್ರೆ ಮುಗಿಸಿ ಹಿಂತಿರುಗುತ್ತಾರೆ. ತಮ್ಮಲ್ಲಿಯೇ ಅವರನ್ನು ಇಟ್ಟುಕೊಂಡು ಆದರೋಪಚಾರ ನೀಡುತ್ತಾರೆ. ಇಂತಹ ಮನುಷ್ಯತ್ವ ಇಂದು ಬೇಕಾಗಿದೆ.

ಮೂಡ್ಲಾಗೆ ಹೋಗುವಾಗ ಇವರು ದೋಣಿಯಲ್ಲಿ ಕುಳಿತು ತಮ್ಮ ಶ್ರಮ ಪರಿಹಾರವಾಗಲಿ ಎಂದು ಹಾಡುತ್ತಿದ್ದರು. ಇವುಗಳಲ್ಲಿ ಹೆಚ್ಚಿನವುಗಳು ರಾಮಾಯಣ, ಮಹಾಭಾರತಕ್ಕೆ ಸಂಬಂಧ ಪಟ್ಟ ಹಾಡುಗಳು, ಕಥೆಗಳು ತಚ್ಚೊಳ್ಳಿವಾದನ ಎಂಬ ಮಲೆಯಾಳ ಪಾಟು ಇವೇ ಮೊದಲಾದವುಗಳನ್ನು ನುಡಿಯುತ್ತಿದ್ದರು.

ಮೋಯ ಮಹಿಳೆಯರ ಕಾರ್ಯ ವೈಖರಿ

ಮೋಯರ ಹೆಣ್ಣುಗಳು ದಿಟ್ಟೆಯರು. ಅವರು ತಾವು ಹಿಡಿದ ಕೆಲಸವನ್ನು ಯಶಸ್ವಿಯಾಗಿ ಪೂರಾ ಮಾಡದೆ ಬಿಡಲಾರಳು. ಶಿಕ್ಷಣದ ಗಂಧ ಗಾಳಿ ಇಲ್ಲದಿರುವ ಕೆಲಸಕ್ಕೆ ಮೋಯ ಮಹಿಳೆಯರು ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಈ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಅವಿಭಕ್ತ ಕುಟುಂಬದಲ್ಲಿ ಬೆಳೆದ ಇವರು ಸಹನಶೀಲತೆಯನ್ನು ಹೊಂದಾಣಿಕೆಯನ್ನು ಆತ್ಮೀಯತೆಯನ್ನು ಮೈಗೂಡಿಸಿಕೊಂಡು ಬೆಳೆದವರು. ಆದುದರಿಂದ ಅವರಲ್ಲಿ ಸಹಜವಾಗಿಯೇ ಪರೋಪಕಾರೀ ಬುದ್ಧಿ ಬೆಳೆಯಿತು. ಸೂಲಗಿತ್ತಿಯಾಗಿ ಅಜ್ಜಿಮದ್ದು ಕೊಡುತ್ತಾ, ಸಲಹೆ ಸೂಚನೆಗಳನ್ನು ಕೊಡುತ್ತಾ, ನ್ಯಾಯತೀರ್ಮಾನ ಮಾಡಿ ಹೆಣ್ಣುಮಕ್ಕಳನ್ನು ಅವರ ಸರ್ವ ಸಮಸ್ಯೆಯಿಂದ ಮುಕ್ತಿ ಕೊಡಿಸುವವಳಾಗಿ, ಉತ್ತಮ ಅಡಿಗೆ ಮಾಡುವವಳಾಗಿ, ಹಾಡುಗಾರ್ತಿಯಾಗಿ ತನ್ನನ್ನು ದುಡಿಸಿಕೊಂಡವಳು. ಅವಳಲ್ಲಿ ಹತ್ತು ಜನರ ಸಾಮರ್ಥ್ಯವಿತ್ತು. ಅವೆಲ್ಲವನ್ನು ಇಂದು ನಾವು ಮರೆತರೂ ಅವಳು ತನ್ನನ್ನು ಈ ಎಲ್ಲ ಕೆಲಸಗಳಲ್ಲಿ ತೊಡಗಿಸಿಕೊಂಡುದುದು ಸುಳ್ಳಲ್ಲ. ಇಂತಹವರು ಒಬ್ಬರಲ್ಲ ಇಬ್ಬರಲ್ಲ. ೧೧ ಭಗವತೀ ಕ್ಷೇತ್ರಗಳಲ್ಲಿ ನೆಲೆಸಿರುವ, ನೆಲೆಸಿದ್ದ ಆ ತಾಯಿಯಂದಿರ ಸಂಖ್ಯೆ ನನ್ನ ಊಹೆಗೂ ಮೀರಿದ್ದು.

ಆ ಮೇಲಿನ ಕಾಲ ಶಿಕ್ಷಣ ಕಾಲಿಟ್ಟ ಕಾಲ, ಹೆಣ್ಣು ಮಕ್ಕಳೆಲ್ಲ ಶಾಲೆ ಕಲಿತರು, ಮೆಟ್ರಿಕ್ಕು, ಮುಗಿದ ತಕ್ಷಣ ಶಿಕ್ಷಕ ತರಬೇತಿಯನ್ನು ಪಡೆದು ತಮ್ಮ ಊರಿನಲ್ಲೋ, ಮುಂಬಯಿಯಲ್ಲೋ, ಬೆಂಗಳೂರಿನಲ್ಲೋ ಶಿಕ್ಷಕಿಯಾಗಿ ಸೇರಿದರು. ನೂರು, ಇನ್ನೂರಕ್ಕೂ ಮೀರಿ ಅವರ ಸಂಖ್ಯೆ ಬೆಳೆದಿದೆ. ಈಗ ಆ ಸಂಖ್ಯೆಯಲ್ಲಿ ಬಹಳ ಇಳಿಮುಖವಾಗಿದೆ. ಈ ಶಿಕ್ಷಕಿಯರಲ್ಲಿ ಅನೇಕರು ತಮ್ಮ ಶಿಕ್ಷಣ ಸಂಸ್ಥೆಗಳಿಗಾಗಿ ಕಾಯಾವಾಚಾಮನಸಾ ದುಡಿದವರು. ಮೇಯರ್ ಪ್ರಶಸ್ತಿಯನ್ನು ಪಡೆದವರು ಇವರಲ್ಲಿ ಇರುವರು. ಇನ್ನು ಕೆಲವರು ಎಲೆಯ ಮರೆಯ ಕಾಯಿಯಂತೆ, ಕರ್ತವ್ಯವೇ ದೇವರು ಎಂದು ತಿಳಿದುಕೊಂಡು ಯಾವ ಪ್ರಶಸ್ತಿಯನ್ನು ಕಾಯದವರು. ವಿದ್ಯಾರ್ಥಿಗಳ ಏಳಿಗೆಗಾಗಿ ದುಡಿದು ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ತಳಹದಿಯನ್ನು ಹಾಕಿಕೊಟ್ಟ ಇವರು ಸದಾ ವಂದನೀಯರು.

ವೈದ್ಯಕೀಯ ರಂಗದಲ್ಲಿ ಈಗೀಗ ಮೋಯರ ಸಂಖ್ಯೆ ಹೆಚ್ಚಿದೆ. ಬರಹಗಾರ್ತಿಯರು, ಲೇಖಕಿಯರು, ಕತೆಗಾರ್ತಿಯರು, ಈಜು ಹೇಳಿಕೊಡುವವರು (ಒಂದು ವಿಶೇಷ ಕ್ಷೇತ್ರ) ನ್ಯಾಯವಾದಿಗಳಾಗಿ ಅಲ್ಲದೆ ರಾಜಕೀಯ ರಂಗದಲ್ಲಿ ಮಿಂಚಿದವರು ಬೆರಳೆಣಿಕೆಯಲ್ಲಾದರೂ ಇದ್ದಾರೆ  ಎಂಬುದು ಅಭಿಮಾನ ಸಂಗತಿ.

. ಜೀವನಾವರ್ತನದ ಆಚರಣೆಗಳಲ್ಲಿ ಮಹಿಳೆ

ಹುಟ್ಟಿನಿಂದ ಸಾಯುವವರೆಗಿನ ಕಾಲಾವಧಿ ಜೀವನಾವರ್ತನದ ಕಾಲಾವಧಿಯಾಗಿದೆ. ಸಮಾಜ ಜೀವಿಯಾದ ಮಾನವನು ಈ ಕಾಲಾವಧಿಯಲ್ಲಿ ನಡೆಯುವ ಬೇರೆ ಬೇರೆ  ಪ್ರಕ್ರಿಯೆಗಳನ್ನು ಗುರುತಿಸಿಕೊಂಡು ನೋವು ನಲಿವುಗಳನ್ನು ಹಂಚಿಕೊಳ್ಳಲು ಜನಪದರು ತಮ್ಮದೇ ಆದ ಬೇರೆ ಬೇರೆ ಆಚರಣೆಗಳನ್ನು ಆಚರಿಸುತ್ತಾರೆ. ಪರಸ್ಪರ ಸೌಹಾರ್ದತೆ, ಆತ್ಮೀಯತೆ, ಒಲವು ಮೂಡಲಿ ಎಂಬ ಅರಿವೇ ಇದಕ್ಕೆ ಮೂಲಕಾರಣ. ಹೆಣ್ಣು ಸಮಾಜದ ಕಣ್ಣು ಸಮಾಜದ ಒಳಿತಿಗೂ ಕೆಡುಕಿಗೂ ಅವಳೇ ಕಾರಣ. ಅವಳಿಗೆ ಪ್ರಾಶಸ್ತ್ಯ ನೀಡಿದರೆ ಅವಳು ಒಲಿದ ನಾರಿಯಾಗುತ್ತಾಳೆ. ಒಳಿತನ್ನು ಬೆಸೆಯುವ ಕೊಂಡಿಯಾಗುತ್ತಾಳೆ. ಅವಳ ಮುಂದಾಳುತನದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಜಾನಪದೀಯ ಆಚರಣೆಗಳು ಸದಾಕಾಲ ನಡೆಯುತ್ತಿರುತ್ತವೆ. ಜೀವನಾವರ್ತನ ಆಚರಣೆಗಳಲ್ಲಿ ಹೆಣ್ಣಿಗೆ ಪ್ರಾಶಸ್ತ್ಯ ಹೆಚ್ಚು. ಅವಳೇ ನಡೆಸುವ ಕೆಲವು ಆಚರಣೆಗಳು ಬೋವಿ (ಮೋಯ) ಜನಾಂಗದಲ್ಲಿ ಕಂಡು ಬರುತ್ತವೆ.

ಕನ್ನೆಮಂಗಲ

ಬೋವಿಗಳಲ್ಲಿ (ಮೋಯರಲ್ಲಿ) ಬಹಳ ಹಿಂದೆ ಕನ್ನೆಮಂಗಳ ಎಂಬ ವಿಶೇಷ ಜಾನಪದವೊಂದು ಆಚರಣೆಯಲ್ಲಿತ್ತು. ಹೆಣ್ಣುಮಕ್ಕಳು ಋತುಮತಿಯಾಗುವುದಕ್ಕೆ ಮೊದಲು ಆಚರಿಸುವ ಶಾಸ್ತ್ರವೇ ಕನ್ನೆಮಂಗಲ. ಅವಿಭಕ್ತ ಕುಟುಂಬ ಪದ್ಧತಿ ಎಲ್ಲೆಡೆಯಲ್ಲಿಯೂ ಇದ್ದ ಕಾಲಕ್ಕೆ ರೂಢಿಯಲ್ಲಿದ್ದ ಈ ಆಚರಣೆಗೆ ಒಂದು ರೀತಿಯ ಸೊಗಡೂ ಸೊಗಸೂ ಇದ್ದವು. ಕನ್ನೆಮಂಗಲಕ್ಕೆ ದಿನ ನಿಶ್ಚಯಿಸಿ ನೆಂಟರಿಷ್ಟರಿಗೆ ಹೇಳಿಕೆ ನೀಡಿ ಅವರನ್ನು ಆಮಂತ್ರಿಸುತ್ತಾರೆ. ಹೆಣ್ಣುಮಕ್ಕಳನ್ನು ಜರಿಯಲಂಗ, ರವಿಕೆಯಿಂದ ಹೂವಿನ ಅಲಂಕಾರದಿಂದ ಆಭರಣಗಳಿಂದ, ಬಳೆಗಳಿಂದ, ಸುಂದರವಾಗಿ ಸಿಂಗರಿಸುತ್ತಾರೆ. ಮಡಿವಾಳ್ತಿಯು ಅಂಗಣದಲ್ಲಿ ಶುದ್ಧ ನೀರನ್ನು ಪ್ರೋಕ್ಷಿಸಿ ಚೌಕಾಕಾರದಲ್ಲಿ ನಡೆಮಡಿಯನ್ನು ಹಾಸಿರುತ್ತಾಳೆ. ಕನ್ಯಾಮಂಗಲದ ಕನ್ಯೆಯರನ್ನು ಕೈಹಿಡಿದು ಕರೆದುಕೊಂಡು ಬರುವರು. ನಡೆಮಡಿಯಲ್ಲಿ ತೂಗುದೀಪ ಹಿಡಿದ ಮುತ್ತೈದೆ, ಅವಳ ಹಿಂದೆ ಮಡಿಬಟ್ಟೆಯ ಬಟ್ಟಲು ಹಿಡಿದ ಮುತ್ತೈದೆ, ಅವಳ ಹಿಂದೆ ಕನ್ಯಾಮಂಗಲದ ಕನ್ಯೆಯರು ಅವರ ಹಿಂದೆ ತೊದೊತ್ತಿ ಸಹಕರಿಸುವವಳು. ಹೀಗೆ ಎಲ್ಲರೂ ನಡೆಮುಡಿಯಲ್ಲಿ ನಿಧಾನವಾಗಿ ಪ್ರದಕ್ಷಿಣೆ ಹಾಕುವರು. ಪ್ರದಕ್ಷಿಣೆ ಹಾಕಿದ ಬಳಿಕ ಮದುಮಕ್ಕಳನ್ನು ನಡೆಮಡಿಯ ಮಧ್ಯದಲ್ಲಿ ಇರಿಸಿದ ಮಣೆಯ ಮೇಲೆ ಕುಳ್ಳರಿಸುವರು. ಬಂದ ನೆಂಟರಿಷ್ಟರು ಮುಖ ಸೇಸೆ ಮಾಡಿ (ಅಕ್ಷತೆ ತಳಿದು) ಹರಸಿ ಉಡುಗೊರೆಯನ್ನೋ ಹಣವನ್ನೋ ನೀಡುವರು. ಅಂದು ಈ ಆಚರಣೆಗೆ ಬಂದ ಎಲ್ಲರಿಗೂ ಸೊಗಸಾದ ಊಟವಿರುತ್ತದೆ.