ಇದರ ಪ್ರಕಾರಗಳು

೧. ದೈನಂದಿನ ಮೀದ್ (ತರ್ಪಣ)

೨. ಅಮವಾಸ್ಯೆ ಮತ್ತು ಸಂಕ್ರಮಣದಿನಗಳಲ್ಲಿ ಮೀದ್ (ತರ್ಪಣ)

೩. ತವರಾಡ್  ಮೀದ್ (ಕುಟುಂಬದ ಮುಖ್ಯಮನೆಯಲ್ಲಿ ತರ್ಪಣ)

ದೈನಂದಿನ ಮೀದ್

ಬೋವಿಗಳು (ಮೋಯರು) ದೈನಂದಿನ ಅಡಿಗೆ ಪೂರೈಸಿ ಊಟಕ್ಕೆ ಮೊದಲು ಮಾಡಿದ ಅಡಿಗೆಯಲ್ಲಿ ಸ್ವಲ್ಪ ಸ್ವಲ್ಪ ತೆಗೆದು ಬಟ್ಟಲಿನಲ್ಲಿ ಬಡಿಸಿ ಎಡೆಯಿಡುತ್ತಾರೆ. ಮನೆಯ ಒಡತಿ ಬಟ್ಟಲಲ್ಲಿ ಬಡಿಸಿ ಅಡಿಗೆ ಮನೆಯ ಮ್ಯಾಪಡಿಯಲ್ಲಿ (ಎಡೆಯಿಡಲೆಂದೇ ಮಾಡಿದ ಮರದ ಹಲಗೆ) ಎಡೆಯಿಟ್ಟು ಕೈ ಮುಗಿಯುತ್ತಾಳೆ. ಸತ್ತವರು ಬೇರೆ ಯಾರೂ ಅಲ್ಲ ತಮ್ಮವರೇ ತಮ್ಮೊಡನೆ ಇದ್ದವರೇ ಎಂದು ಭಾವಿಸಿ ಎಡೆಯಿಟ್ಟು ಎಲ್ಲರ ಒಳಿತಿಗಾಗಿ ಕೈ ಮುಗಿಯುತ್ತಾಳೆ. ಎಡೆಯಿಟ್ಟ ಆಹಾರವನ್ನು ಪ್ರಸಾದವೆಂದು ಎಲ್ಲರೂ ಸ್ವೀಕರಿಸುತ್ತಾರೆ. ವಿಶೇಷ ದಿನಗಳಲ್ಲಿ ಇದೇ ರೀತಿ ಮಾಡಿದ ಅಡಿಗೆಯನ್ನೆಲ್ಲಾ ಬಡಿಸಿ ಹಿರಿಯರಿಂದ ಮುಟ್ಟಿಸಿಕೊಂಡು ಎಡೆಯಿಡುವ ಪದ್ಧತಿ ಈಗಲೂ ಆಚರಿಸಲ್ಪಡುತ್ತದೆ. ಈ ಆಹಾರವನ್ನು ಎಲ್ಲರೂ ಭಕ್ತಿಯಿಂದ ಸೇವಿಸುತ್ತಾರೆ.

ಅಮವಾಸ್ಯೆ ಸಂಕ್ರಮಣ

ಮನೆಯ ಹೆಣ್ಣುಮಕ್ಕಳೂ ತಮ್ಮ ತರವಾಡಿಗೆ ಅಮವಾಸ್ಯೆ ಸಂಕ್ರಮಣಗಳಲ್ಲಿ ಹೋಗುತ್ತಾರೆ. ತರವಾಡಿಗೆ (ಕುಟುಂಬದ ಮುಖ್ಯಮನೆ) ಹೋಗಿ ಅಲ್ಲಿ ಅಡಿಗೆ ಮಾಡಿದ ಬಳಿಕ ಎಡೆಯಿಡುವ (ಮೀದ್ ನ) ಕೋಣೆಗೆ ಹೋಗಿ (ತರವಾಡಿನಲ್ಲಿ ಸತ್ತವರಿಗೆ ಬಡಿಸುವ ವಿಶೇಷ ಕೋಣೆಯಿರುತ್ತದೆ) ವ್ಯಾಪಡಿಯ (ಹಲಗೆ) ಮೇಲೆ ಎಡೆಯಿಟ್ಟು ಹೆಣ್ಣು ಮಕ್ಕಳೆಲ್ಲಾ ಕೈಮುಗಿದು ಎಲ್ಲರ ಒಳಿತಿಗಾಗಿ ಬೇಡುತ್ತಾರೆ.

ತರವಾಡಿನಲ್ಲಿ (ಕುಟುಂಬದ ಮುಖ್ಯಮನೆ) – ಮೀದ್ (ಎಡೆ ಇಡುವುದು) ತರವಾಡಿನ ಮನೆ ಸಹಜವಾಗಿ ದೊಡ್ಡದಾಗಿರುತ್ತದೆ. ಕುಟುಂಬಸ್ಥರು ಅವರ ಮಕ್ಕಳು ಸೊಸೆಯಂದಿರು, ಅಳಿಯಂದಿರು, ಅವರ ಸಂಬಂಧಿಗಳು, ಮೊಮ್ಮಕ್ಕಳು ಎಲ್ಲರೂ ಸೇರುವ ಅವರ ಸಂಖ್ಯೆ ಹೆಚ್ಚೇ ಇರುತ್ತದೆ. ಈ ದೃಷ್ಟಿಯಿಂದ ವಾರ್ಷಿಕ (ತರವಾಡ್ ಮನೆಗಳಲ್ಲಿ) ತರವಾಡು ಮನೆಗಳನ್ನು ಕಟ್ಟುವಾಗ ಮುಂದಾಲೋಚನೆಯಿಂದ ವಿಸ್ತಾರವಾಗಿಯೇ ಕಟ್ಟಿಸುತ್ತಾರೆ. ವರ್ಷದಲ್ಲಿ ನಿಗದಿತ ದಿನದಲ್ಲಿ ಎಲ್ಲರೂ ತರವಾಡು ಮನೆಯಲ್ಲಿ ಸೇರುತ್ತಾರೆ. ಕೆಲವೆಡೆ ಬೆಳಗಿನಲ್ಲಿಯೇ ನಾಗತಂಬಿಲ ನಡೆಯುತ್ತದೆ. ಕೆಲವರು ತಮ್ಮ ತರವಾಡು ಮನೆಗಳಲ್ಲಿಯೇ ನಾಗ ಪ್ರತಿಷ್ಟೆ ಮಾಡಿಸಿರುವುದರಿಂದ ನಾಗತಂಬಿಲವನ್ನು ಅವರು ಅಲ್ಲಿಯೆ ಆಚರಿಸುತ್ತಾರೆ. ತಮ್ಮಲ್ಲಿಯೇ ಈ ವ್ಯವಸ್ಥೆ ಇಲ್ಲದವರು ಸಾರ್ವಜನಿಕವಾಗಿ ಪೂಜಿಸುವ ವ್ಯವಸ್ಥೆ ಇರುವಲ್ಲಿಗೆ ಹೋಗಿ ನಾಗತಂಬಿಲವನ್ನು ಮಾಡಿಸುತ್ತಾರೆ. ಪ್ರಸಾದವನ್ನು ತರವಾಡು ಮನೆಗೆ ತೆಗೆದುಕೊಂಡು ಹೋಗುತ್ತಾರೆ.

ಹೆಚ್ಚಿನ ತರವಾಡು ಮನೆಗಳಲ್ಲಿ ವೆಂಕಟರಮಣಸ್ವಾಮಿಯ ಹೆಸರಿನಲ್ಲಿ ಮುಡಿಪು (ಹುಂಡಿ) ಇರುತ್ತದೆ. ಇದನ್ನು ತರವಾಡು ಮೀದಿನ ದಿವಸ ಶುದ್ಧೀಕರಿಸಿ ಧೂಪ ದೀಪದಿಂದ ಆಚಿಕಾಸಿ ತಮ್ಮ ಶಕ್ತ್ಯಾನುಸಾರ ಮುಡಿಪಿಗೆ ಹಣ ಹಾಕಿ ಪುನಃ ಯಥಾಪ್ರಕಾರ ಇದ್ದಲ್ಲಿಯೇ ಕೊಂಡು ಹೋಗಿ ಕಟ್ಟುವರು. ತಮ್ಮ ಅನುಕೂಲ ಸಮಯ ನೋಡಿ ದಾಸಯ್ಯನೊಂದಿಗೆ  ತಿರುಪತಿಗೆ ಹೋಗಿ ಮುಡಿಪಿನ ಹಣವನ್ನು ಮುಟ್ಟಿಸುವರು. ಹಿಂದಿರುಗಿ ಬಂದ ಬಳಿಕ ಪಾನಕ ಪೂಜೆಯನ್ನು ನೆರವೇರಿಸುವರು. ಅಂದರೆ ತಡವಾಡಿನಲ್ಲಿ ವಾರ್ಷಿಕ ಮೀದ್ ನಡೆಯುವುದು.

ಅಕ್ಕಿಯ ರೊಟ್ಟಿ (ಬೀತ್ಯೊಂಟೆ) ಸಿಹಿ ಕಡಬು ಮೊದಲು ನೆನೆ ಹಾಕಿದ ಅಕ್ಕಿಯನ್ನು ರುಬ್ಬುತ್ತಾರೆ. ಸತ್ತವರಿಗೆ ಬಡಿಸಲು ಮಾಡುವ ತಿಂಡಿ ಇದು. ಅಕ್ಕಿಯ ರೊಟ್ಟಿಗೆ ಕಡುಬಿಗೆ ರುಬ್ಬುವಾಗ  ಉಪ್ಪು ಹಾಕುವುದಿಲ್ಲ. ಸ್ವಲ್ಪ ದಪ್ಪವಾಗಿ ರುಬ್ಬಿ ರೊಟ್ಟಿ ತಟ್ಟುತ್ತಾರೆ. ಕಡುಬಿಗೆ ರುಬ್ಬುವಾಗ ಬೆಲ್ಲ, ಕಾಯಿ ದಪ್ಪವಾಗಿ ರುಬ್ಬುತ್ತಾರೆ. ಸಾಗುವಾನಿಯ ಎಲೆಯಲ್ಲಿ ಕಡುಬನ್ನು ತಟ್ಟಿ ಮಡಚಿ, ಇಡ್ಲಿ ಪಾತ್ರೆಯಲ್ಲಿಟ್ಟು ಬೇಯಿಸುವರು. ಅನ್ನ ಮಾಡುವರು. ಇದರ ನಂತರ ಮೀನಿನ ಸಾರಿಗೆ ಕೋಳಿಯ ಸಾರಿಗೆ ರುಬ್ಬಿ ಅದರ ಅಡಿಗೆ ಮಾಡುತ್ತಾರೆ.  ಇವೆಲ್ಲವೂ ಕುಟುಂಬದ ಹಿರಿಯ ಹೆಂಗಸರಿಂದಲೇ ಆಗಬೇಕು. ಅದೂ ಮುಟ್ಟು ನಿಂತ ಹಿರಿಯ ಹೆಂಗಸು ಮಡಿಯಲ್ಲಿಯೇ ತಯಾರಿಸಬೇಕು. ಸತ್ತವರಿಗೆ ಎಡೆಯಿಡುವ ಕೋಣೆಯ ಒಲೆಯಲ್ಲಿಯೇ ಅಡಿಗೆ ತಯಾರಿಸಬೇಕು. ಮುಸ್ಸಂಜೆಯ ಹೊತ್ತಿಗೆ ಅಡಿಗೆಯ ಕೆಲಸ ಮುಗಿದಿರಬೇಕು. ಬೋವಿ (ಮೋಯ)ಗಳಲ್ಲಿ ಕ್ಷೇತ್ರರಕ್ಷಕ ದೈವಗಳಾದ ಗುಳಿಗ ಹಾಗೂ ರಾಹುವಿಗೆ ವರ್ಷಂ ಪ್ರತಿ ಕೋಳಿ ಕಡಿಯುವ ಆಚರಣೆಯಿರುತ್ತದೆ. ತರವಾಡಿನ ಮೀದ್ ನಂದೇ ಸಂಜೆಯ ಹೊತ್ತಿನಲ್ಲಿ ಈ ಆಚರಣೆ ನಡೆಸುತ್ತಾರೆ. ಈ ಆಚರಣೆಗೆ ಬೇಕಾದ ಸಾಮಗ್ರಿಗಳನ್ನು ಗೆರೆಸೆಯಲ್ಲಿ ಮೊದಲೇ ಜೋಡಿಸಿಕೊಂಡಿರುತ್ತಾರೆ.  ಹಿತ್ತಲಿನಲ್ಲಿ ಪ್ರಶಸ್ತವಾದ ಸ್ಥಳದಲ್ಲಿ ಕೋಳಿ ಕಡಿಯುವ ಸ್ಥಳವನ್ನು ಮೊದಲೇ ನಿಗದಿ ಮಾಡಿ ಸ್ವಚ್ಛ ಮಾಡಿರುತ್ತಾರೆ. ವರ್ಷಂಪ್ರತಿ ಇದೇ ಸ್ಥಳದಲ್ಲಿ ಈ ಆಚರಣೆ ಮಾಡುತ್ತಾರೆ.

ಮನೆಯ ಹೆಂಗಸರು ಸತ್ತವರಿಗೆ ಎಡೆಯಿಡುವ ಕೋಣೆಯಲ್ಲಿ ಎಡೆಯಿಡುವ ತಯಾರಿ ನಡೆಸುವರು. ಕೆಲವು  ತರವಾಡು ಮನೆಗಳಲ್ಲಿ ಸತ್ತವರ ಮಡಿಕೆ ಎಂದು ಒಂದು ಮಡಿಕೆ ಇಟ್ಟಿರುತ್ತಾರೆ. ಇದನ್ನು ಮೀದ್ ನ ದಿವಸ ತೆರೆದು ಒರಸಿ ಧೂಪದಿಂದ ಅರ್ಚಿಸುತ್ತಾರೆ. ಅದರ ಬಳಿಯಲ್ಲಿ ಕಾಲುದೀಪವೊಂದನ್ನು ಬೆಳಗುವರು. ೧೧ ಎಲೆಗಳನ್ನು ಹಾಕುವರು ಅದರಲ್ಲಿ ಒಂದು ಎಲೆ ಕಾನಕಾವನ (ಗುರುವಿನ) ಎಲೆ, ಎಲೆಗಳನ್ನು ಹಾಕುವಾಗ ಕುಟುಂಬದ ಹಿರಿಯ ಹೆಂಗಸು ಹೊರಗೆ ಬಂದು ಅಲ್ಲಿರುವವರಲ್ಲಿ ಅನುಮತಿ ಕೇಳುವಳು. ಎಲೆ ಹಾಕಿದ ಬಳಿಕ ಕಾನಕಾವನ ಎಲೆಯ ಬಳಿ ಮಡಿ ಬಟ್ಟೆಯ ಬಟ್ಟಲು, ಆ ಬಟ್ಟಲಿನಲ್ಲಿ ೫ ವೀಳೆಯದೆಲೆ, ಅಡಿಕೆ ಹೋಳುಗಳನ್ನು ಇಟ್ಟು ಬಟ್ಟಲ ಬದಿಯಲ್ಲಿ ಒಂದು ಚೆಂಬುನೀರು ಇಡುವಳು. ಎರಡು ಬಟ್ಟಲು ಇಟ್ಟು ಎರಡೂ ಬಟ್ಟಲುಗಳಲ್ಲಿ ಮಾಡಿದ ಅಡಿಗೆಯನ್ನು ಬಡಿಸುವರು ಎಲ್ಲಾರು ಅದರಲ್ಲಿ ಕಡುಬಿನ ತುಂಡುಗಳನ್ನು ಇಡುವರು. ಅಡಿಗೆ ಮಾಡಿದ ಹೆಂಗಸರು ಎಲೆಗಳಿಗೆ ಎಲ್ಲ ಅಡಿಗೆಯನ್ನು ಬಡಿಸುವಾಗ ಅನುಮತಿ ಕೇಳಿ ಬಡಿಸುವರು. ಎಲ್ಲ ಎಲೆಗಳಿಗೂ  ಹೆಂಗಸರು ರೊಟ್ಟಿ, ಕಡುಬಿನ ತುಂಡುಗಳನ್ನು ಇಡುವರು. ಎಲೆಯ ತುದಿಯಲ್ಲಿ ವೀಳೆಯದೆಲೆಯ ತುಂಡು ಹಾಕಿ ಅಡಿಕೆ ಹೋಳುಗಳನ್ನು ಇಡುವರು. ಅಲ್ಲಿಯೇ ಮಧ್ಯದ ಹಾಗೂ ಸೇಂದಿಯನ್ನು ಹಾಕಿದ ಸಣ್ಣ ಸಣ್ಣ ಕವಾಟಿಗಳು ಪ್ರತೀ ಎಲೆಯ ತುದಿಯಲ್ಲಿ  ಇಡುವರು.

ಈ ಸಿದ್ಧತೆಯ ಬಳಿಕ ಗಂಡಸರು ತಮ್ಮ ಆಚರಣೆಯನ್ನು ಹಿತ್ತಲಿನಲ್ಲಿ ನಡೆಸುವರು. ಅವುಗಳನ್ನು ಪೂರೈಸಿದ ಬಳಿಕ ಎಲ್ಲರೂ ವಂದಿಸಿ ಬರುವರು. ಕೈಕಾಲು ತೊಳೆದು ಒಳಗೆ ಬಂದ ಗಂಡಸರು ಎಡೆಯಿಡುವ ಕೋಣೆಗೆ ಬಂದು ’ತಾವು ವರ್ಷಂಪ್ರತಿ ಈ ಆಚರಣೆ ನಡೆಸುತ್ತಾ ಬಂದಿದ್ದೇವೆ. ಇಂದೂ ನಡೆಸುತ್ತಿದ್ದೇವೆ. ಈ ಆಚರಣೆಯಲ್ಲಿ, ತಯಾರಿಸಿದ ಅಡಿಗೆಯಲ್ಲಿ, ಬಡಿಸಿದ ವಿಧಿ ವಿಧಾನಗಳಲ್ಲಿ ಹೆಚ್ಚು ಕಡಿಮೆ, ಲೋಪ ದೋಷಗಳು ಕಂಡು ಬಂದರೂ ಎಲ್ಲರೂ ಕ್ಷಮಿಸಿ ಬಡಿಸಿದುದನ್ನು ಸಂತೋಷದಿಂದ ಸ್ವೀಕರಿಸಬೇಕು ಎಂದು ಹೇಳಿ ಅಕ್ಷತೆ ತಳಿದು ಬೇಡುವರು. ಕುಟುಂಬದಲ್ಲಿ ಯಾರಾದರೂ ಆ ವರ್ಷದಲ್ಲಿ ಮರಣ ಹೊಂದಿದ್ದರೆ ಬಡಿಸುವಾಗ ಒಂದು ಎಲೆಯನ್ನು ಅಂತಹವರ ಹೆಸರಿಟ್ಟೇ ಹಾಕುತ್ತಾರೆ. ಅದಕ್ಕೆ ಮಾಡಿದ ಅಡಿಗೆಯನ್ನು ಬಡಿಸುವಾಗ ಪ್ರಾರ್ಥನೆ ಮಾಡುವಾಗ ಈ ಬಗ್ಗೆಯೂ ಹೇಳಿಕೊಳ್ಳುತ್ತಾರೆ. ’ನಮ್ಮ ಹಿರಿಯರೊಡನೆ, ಗುರು ಕಾನರವರೊಡನೆ ಸೇರಿಕೊಂಡು ಇಲ್ಲಿ ಎಡೆಯಿಟ್ಟುದುದನ್ನು ಸಂತೋಷದಿಂಸ ಸ್ವೀಕರಿಸಬೇಕು’ ಎಂದು ಬೇಡಿಕೊಳ್ಳುವರು. ಅದರಂತೆ ಹೆಂಗಸರು ಬಳಿಗೆ ಬಂದು ಬಟ್ಟಲಲ್ಲಿ ಬಡಿಸಿದುದನ್ನು ಎಲ್ಲರೊಡನೆ ಅನುಮತಿ ಕೇಳಿ ಎಡೆಯಿಡುವರು. ಒಂದು ಬಟ್ಟಲನ್ನು ಕುಟುಂಬದ ಹಿರಿಯ ಹೆಂಗಸು ಇನ್ನೊಂದು ಮದುವೆಯಾಗಿ ಬಂದ ಹಿರಿಯ ಹೆಂಗಸು  ಇಡುವರು. ಅಕ್ಷತೆ ತಳಿದು ಕೈ ಮುಗಿಯುವರು. ಹೊರಗೆ ಬಂದ ಬಳಿಕ ಹೆಂಗಸರಲ್ಲಿ ಒಬ್ಬಳು ಅಂಗಳದಲ್ಲಿರುವ ತೆಂಗಿನಮರಕ್ಕೆ ನೀರು ಎರೆದು (ಸತ್ತವರು ಕೈ ತೊಳೆದು ಒಳಗೆ ಹೋಗಲು ಸೂಚನೆ ನೀಡುವ ಜಾನಪದೀಯ ಆಚರಣೆ) ಎಡೆಯಿಟ್ಟ ಕೋಣೆಯ ಬಾಗಿಲು ಹಾಕುವರು. ಎರಡು ನಿಮಿಷಗಳಲ್ಲಿ ಬಾಗಿಲು ತೆರೆದು ಪುನಃ ಅಂಗಳದಲ್ಲಿರುವ ತೆಂಗಿನ ಮರಕ್ಕೆ ನೀರೆರೆಯುವರು (ಉಂಡ ಬಳಿಕ ಹೊರಗೆ ಬಂದು ಕೈ ತೊಳೆಯಲು ಈ ನೀರು)

ಬಳಿಕ ಸಣ್ಣ ಸಣ್ಣ ಮಕ್ಕಳನ್ನು ಎಡೆಯಿಟ್ಟು ಕೋಣೆಗೆ ಕರೆದುಕೊಂಡು ಹೋಗಿ ಅಲ್ಲಿಯ ೧೧ ಎಲೆಗಳಲ್ಲಿ ಕುಳ್ಳಿರಿಸಿ ಉಣ್ಣಲು ಹೇಳುವರು. ಕಾನಕಾವನ (ಗುರು) ಎಲೆಯಲ್ಲಿ ಕುಟುಂಬದ ಹಿರಿಯ ಹುಡುಗನೊಬ್ಬನನ್ನು ಕುಳ್ಳಿರಿಸುವರು. ಉಂಡಾದ ಬಳಿಕ ಎಲ್ಲರೂ ಎದ್ದು ಕೈ ತೊಳೆಯುವರು. ಉಂಡಲ್ಲಿ ಗುಡಿಸಿ ಒರಸಿದ ನಂತರ ಉಂಡ ಈ ಮಕ್ಕಳು ಬಂದು ಅಡ್ಡ ಬಿದ್ದು ವಂದಿಸುವರು.

ಹಬ್ಬಗಳು

ನಮ್ಮ ಪೂರ್ವಿಕರು ನಿಸರ್ಗಪೂಜಕರು. ಆ ನಿಸರ್ಗ ನಮ್ಮನ್ನು ಪೋಷಿಸುತ್ತದೆ. ಆದುದರಿಂದ ಅದರ ರಕ್ಷಣೆ ನಮ್ಮ ಹೊಣೆ ಎಂಬ ಅರಿವು ಅವರಿಗಿತ್ತು. ನಿಸರ್ಗದಲ್ಲಿ ಆಗುವ ಬದಲಾವಣೆಗಳನ್ನು ಗುರುತಿಸಿಕೊಂಡರು. ಅದರ ವೃದ್ಧಿಗೆ, ಚೆಲುವಿಕೆಗೆ ಮನ ಸೋತು, ತಮ್ಮ ಸಂತೋಷವನ್ನು ವ್ಯಕ್ತ ಪಡಿಸುವ ಆಚರಣೆಗಳನ್ನು ಮಾಡತೊಡಗಿದರು. ಅವೇ ಹಬ್ಬ ಹರಿದಿನಗಳಾದುವು. ಬೋವಿ (ಮೋಯ) ಜನಾಂಗದಲ್ಲಿಯೂ ಇಂತಹ ಅನೇಕ ಹಬ್ಬಗಳ ಆಚರಣೆಗಳು ಕಂಡು ಬರುತ್ತವೆ.

ಬಿಸು – ಬಿದು – ಯುಗಾದಿ : ಬೋವಿ (ಮೋಯ)ಗಳ ಹೊಸ ವರ್ಷದ ಆರಂಭ ಬಿಸುವಿನಿಂದ ಆಗುತ್ತದೆ.  ದಕ್ಷಿಣ ಭಾರತದ ಹೆಚ್ಚಿನ ಜನಾಂಗಗಳ ಹೊಸ ವರ್ಷದ ಕಾಲಗಣನೆ ಈ ಹಬ್ಬದಿಂದಲೇ ಆರಂಭವಾಗುತ್ತದೆ. ಅಂದರೆ ಸವರಮಾನದಿಂದ ಕಾಲಗಣನೆಯ ಪದ್ಧತಿ ಇದೆ. ಅಂದು ಬೆಳಿಗ್ಗೆ ಬೇಗ ಎದ್ದ ಹಿರಿಯರು ಬಟ್ಟಲೊಂದರಲ್ಲಿ (ಹರಿವಾಣ) ಎಲೆ ಇಟ್ಟು ಬೆಳ್ತಿಗೆ ಅಕ್ಕಿ ಹಾಕಿ, ಅದರ ಮೇಲೆ ತೆಂಗಿನ ಕಾಯಿಯೊಂದನ್ನು ಇಡುತ್ತಾನೆ.  ಆ ಹರಿವಾಣದಲ್ಲಿ ೫-೭ ಬಗೆಯ ವಿವಿಧ ಹಣ್ಣುಗಳು, ಬೆಳ್ಳಿ, ಬಂಗಾರ, ಬೆಳ್ಳಿಯ ನಾಣ್ಯಗಳು, ಇವೆಲ್ಲವೂ ತೋರುವಂತೆ ಅದರಲ್ಲಿಯೇ ಒಂದು ಕನ್ನಡಿಯಿಟ್ಟು ಅದನ್ನು ಬಟ್ಟೆಯಿಂದ ಮುಚ್ಚಿ ಪೀಠವೊಂದರ ಮೇಲೆ ಇಡುವರು. ಮುಂಜಾನೆ ಎದ್ದವರೆಲ್ಲ ಈ ಕಣಿಯನ್ನು ನೋಡಬೇಕು. ಕಣಿಯ ಹತ್ತಿರ ಒಂದು ಕಾಲುದೀಪ ಹಚ್ಚಿ ಇಡುವರು. ಹಿರಿಯ/ಕಿರಿಯರಿಗೆ ಮನೆಮಂದಿಯೆಲ್ಲಾ ವಂದಿಸುವರು. ಅವರಿಂದ ಬೆಲ್ಲ, ಕಾಯಿ ತುಂಡುಗಳು ಹಾಗೂ ಗೇರುಬೀಜವನ್ನು ಪಡೆಯುವರು. ತರವಾಡಿನಲ್ಲಿ ಇರುವ ತಮ್ಮ ಸೋದರ, ಮಾವ, ಹಿರಿಯರಲ್ಲಿಗೆ ಹೋಗಿ ಅವರಿಗೆ ವಂದಿಸಿ ಊಟೋಪಚಾರ ಮಾಡಿಸಿಕೊಂಡು ಹಿಂತಿರುಗುವರು. ಹಿರಿಯ ಹೆಣ್ಣು ಮಕ್ಕಳು ಕಡುಬು, ಮೀನಿನ ಅಡಿಗೆ, ಹಾಗೂ ಸರಾಯಿಯನ್ನು ತರವಾಡಿಗೆ ಕೊಂಡು ಹೋಗಿ ಎಡೆಯಿಡುವರು. ಇಲ್ಲವೆ ಈ ಅಡಿಗೆಗಳನ್ನು ಅಲ್ಲಿಯೇ ಮಾಡಿ ಎಡೆಯಿಟ್ಟು ಸೇವಿಸಿ ಹಿಂತಿರುಗುವರು. ಯಾರು ಮರೆತರೂ ಮನೆಯ ಹಿರಿಯರು ಮರೆಯದೆ ಈ ಆಚರಣೆಗಳನ್ನು ಅದು ದೈನಂದಿನ ಇತರ ಸಂದರ್ಭಗಳಿದ್ದಾಗಲೇ ಮರೆಯದೆ  ಆಚರಿಸುವಂತೆ ನೆನಪಿಸುತ್ತಾರೆ. ಬಿದುವಿನ (ಯುಗಾದಿ) ದಿನ ಮನೆಮಂದಿಗೆಲ್ಲಾ ಮನೆಯ ಯಜಮಾನ ಬಟ್ಟೆ ಬರೆ ಉಡುಗೊರೆಯ ರೂಪದಲ್ಲಿ ಕೊಡುವನು / ಳು. ಕೆಲವು ಕಡೆ ಹಿರಿಯ ಹೆಂಗಸರು ಯಜಮಾನಿಕೆ ನಡೆಸುತ್ತಿರುವುದು ಈಗಲೂ ಕಂಡು ಬರುತ್ತದೆ.

ಶಿವರಾತ್ರಿ : ಬೋವಿ (ಮೋಯ)ಗಳು ಶಿವರಾತ್ರಿಯನ್ನು ಆಚರಿಸುತ್ತಾರೆ. ಶಿವರಾತ್ರಿಯಂದು ಗಂಡುಗಳು ಬೇರೆಯವರ ಬಾಯಿಂದ ಬೈಗಳನ್ನು ಕೇಳಬೇಕು ಎಂಬ ನಂಬಿಕೆ ಮೋಯರಲ್ಲಿದೆ. ಅದಕ್ಕೋಸ್ಕರ ಗಂಡು ಹುಡುಗರು ಇಲ್ಲದ ಗಲಾಟೆ ಎಬ್ಬಿಸುತ್ತಾರೆ. ಮರಕ್ಕೆ ಹತ್ತಿ ತೆಂಗಿನಕಾಯಿ ಖಾಲಿ ಮಾಡುವುದು,  ಮನೆಯ ಮಾಡಿಗೆ ಕಲ್ಲು ತೂರುವುದು ಇಂತಹದ್ದೇ ಕ್ಷುಲ್ಲಕ ಹಾವಳಿಯಿಂದ ರೊಚ್ಚಿಗೆದ್ದ ಮನೆಯವರು ಬೈಯ್ಯುತ್ತಾರೆ. ಅದು ಕೇಳಿದರೆ ಒಳ್ಳೆಯದು ಎಂಬ ಆಶಯದಿಂದ ಕೂಡಿದ ಈ ಆಚರಣೆ ಈಗಲೂ ಕೆಲವು ಕಡೆ ಇವರಲ್ಲಿ ಆಚರಣೆಯಲ್ಲಿದೆ. ಈ ಹಾವಳಿಯನ್ನು ಕಡಿಮೆ ಮಾಡಲು, ರಕ್ಷಿಸಲು ಹಿರಿಯರು ಭಜನೆಯಂತಹ ಕಾರ್ಯಕ್ರಮ ಹಮ್ಮಿಕೊಂಡರು. ಭಜನೆ ಗುಂಪಿನವರು ಮನೆ ಮನೆಗೆ ಹೋಗಿ ಭಜನೆಯ ಹಾಡುಗಳನ್ನು ಕುಣಿಯುತ್ತಾ ಹಾಡುತ್ತಾರೆ. ಮನೆಯ ಹೆಂಗಸರು ಅಂಗಳ ಗುಡಿಸಿ ಸಾರಿಸಿ, ಅಂಗಳದ ನಡುವೆ ದೇವರ ಪಟವನ್ನು ಇಟ್ಟು, ತಿನ್ನಲು ಅವಲಕ್ಕಿ, ಕುಡಿಯಲು ಪಾನಕಗಳ ವ್ಯವಸ್ಥೆ ಮಾಡಿ ರಾತ್ರಿ ಕಾಯುತ್ತಿರುತ್ತಾರೆ. ಭಜನೆಯವರು ಹಾಡುಗಳನ್ನು ಹಾಡುತ್ತಾ – ಕುಣಿಯುವರು. ಮನೆಯವರಿಗೆ ಗಂಧ ಪ್ರಸಾದ ಕೊಡುವರು. ಮನೆಯವರು ಅವರನ್ನು ಆದರದಿಂದ ಬರಮಾಡಿಕೊಂಡು ಸತ್ಕರಿಸುವರು.

ನಾಗಪಂಚಮಿ: ನಿಸರ್ಗದ ಒಂದು ಜೀವಿ ನಾಗ – ಸರ್ಪ. ಸದಾಕಾಲ ಭೂಮಿಯ ಮೇಲೆ ಸಂಚರಿಸುತ್ತಿರುವ ಈ ಜೀವಿಯಿಂದ ಹಾನಿಯಾಗದಿರಲಿ ಎಂಬ ಆಶಯದೊಂದಿಗೆ ನಾಗಾರಾಧನೆ ಆರಂಭವಾಯಿತು. ಪಂಚಮಿಯಂದು ನಾಗನಕಲ್ಲಿಗೆ ಮೋಯರು ಹಾಲು ಹಾಗೂ ಸೀಯಾಳದಿಂದ ಅಭಿಷೇಕ ಮಾಡುತ್ತಾರೆ. ನಾಗಬನ ಇರುವಲ್ಲಿಗೆ, ತಮ್ಮ ಕುಟುಂಬ ನಾಗರ ಹಾವಿನ ಕಲ್ಲು ಇರುವಲ್ಲಿ  ಅಥವಾ ದೈವಸ್ಥಾನಗಳಿಗೆ ಹೋಗಿ ಹಾಲಿನ, ಎಳನೀರಿನ ಅಭಿಷೇಕ ಮಾಡುತ್ತಾರೆ. ರುಬ್ಬಿದ ಅಕ್ಕಿಯ ಹಿಟ್ಟನ್ನು ಹಳದಿಯ ಎಲೆಯ ಮೇಲೆ ತಟ್ಟಿ ಅದರ ಮೇಲೆ ಕಾಯಿಬೆಲ್ಲವನ್ನು ಇಟ್ಟು ಎಲೆಯನ್ನು ಮಡಚಿ ಇಡ್ಲಿ ಪಾತ್ರೆಯ ಉಗಿಯಲ್ಲಿ ಬೇಯಿಸಬೇಕು. ಈ ಕಡುಬು ಬೇಯುವಾಗ ಹಳದಿ ಎಲ್ಲೆಯ ಪರಿಮಳ ಸುತ್ತಲೂ ಹರಡುತ್ತದೆ. ರಾತ್ರಿ ಈ ಕಡುಬನ್ನು ಉಳಿದ ಅಡಿಗೆಯೊಂದಿಗೆ ಎಡೆಯಿಟ್ಟು ಆಮೇಲೆ ಎಲ್ಲರೂ ಉಣ್ಣುವರು.

ಗೋಕುಲಾಷ್ಟಮಿ : ಈ ಹಬ್ಬಕ್ಕೆ  ಬಹಳ ಮಂದಿ ಉಪವಾಸ ಆಚರಿಸುತ್ತಾರೆ. ಶ್ರೀಕೃಷ್ಣನ ಜನ್ಮದಿನದ ರಾತ್ರಿಯಂದು ಚಂದ್ರೋದಯ ಆಗುವವರೆಗೂ ಜನರು ಭಜನೆಯಲ್ಲಿ ಪಾರಾಯಣದಲ್ಲಿ ನಿರತರಾಗಿರುತ್ತಾರೆ. ಚಂದ್ರೋದಯ ಆದ ತಕ್ಷಣ ಭಜನೆ ಹಾಡುಗಳನ್ನು ಹಾಡಿ ಬಟ್ಟಲು ಬಡಿದು ಶ್ರೀಕೃಷ್ಣನ ಜನ್ಮವನ್ನು ಸಾರುತ್ತಾರೆ. ದೇವರಿಗೆ ವಂದಿಸಿ ಪಾಯಸ ತಿನ್ನುತ್ತಾರೆ. ಅಂದು ಮೋಯರು (ಪಾಳಪ್ಪೊ) ಹಾಲು ಹಾಕಿ ಇಲ್ಲವೇ ತೆಂಗಿನ ಕಾಯಿ ಹಾಲು ಹಾಕಿ ಅಕ್ಕಿಯ ಪಾಯಸ ಮಾಡುತ್ತಾರೆ.

ದಸರಾ ಮನೆ ತುಂಬಿಸುವ ಹಬ್ಬ : ಮೋಯ ಜನಾಂಗ ಈ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತದೆ. ಹಿಂದೆ ಇವರು ಸ್ವಾವಲಂಬಿಗಳಾಗಿ ತಮಗೆ ಬೇಕಾದ ಆಹಾರ ವಸ್ತುಗಳನ್ನೆಲ್ಲಾ ತಾವೇ ಬೆಳೆಯುತ್ತಿದ್ದರು. ಅವೆಲ್ಲವುಗಳನ್ನು ಒಂದು ಬುಟ್ಟಿಯಲ್ಲಿಟ್ಟು ಮನೆಯ ಅಂಗಳದಲ್ಲಿ ಇಟ್ಟಿರುತ್ತಾರೆ. ಅವರವರ ಭಗವತಿ ಕ್ಷೇತ್ರಗಳಲ್ಲಿ ಈ ಹಬ್ಬವನ್ನು ಮುಂಜಾನೆಯೇ ಆಚರಿಸುತ್ತಾರೆ. ಆಲ್ಲಿಯ ಆಚರಣೆ ಮುಗಿದ ಬಳಿಕ ಬತ್ತದ ಕದಿರನ್ನು ಪ್ರಸಾದವೆಂದು ತಂದು ಅಂಗಳದಲ್ಲಿದ್ದ ಬುಟ್ಟಿಯಲ್ಲಿ ಇಡುತ್ತಾರೆ. ಮನೆ ಮಂದಿ ಎಲ್ಲ ಆ ಬುಟ್ಟಿಯನ್ನು ಕೈಯಲ್ಲಿ ಹಿಡಿದುಕೊಂಡು ಪೊಲಿಪೊಲಿ (ವೃದ್ಧಿ) ಎನ್ನುತ್ತಾ ಮನೆಯ ಒಳಗೆ ಪ್ರವೇಶಿಸುವರು. ಗಣಪತಿಗೆ ಕಾಯಿ ಇಟ್ಟಲ್ಲಿ ಅದನ್ನೂ ಇಡುತ್ತಾರೆ. ಭತ್ತದ ಕದಿರನ್ನು ಅತ್ತಿ, ಆಲ, ಮಾವು ಹಾಗೂ ಕದಿರಿನೊಂದಿಗೆ ಗೊಂಡೆ ಹೂವೊಂದನ್ನು ಇಟ್ಟು ಕಟ್ಟಿ ಮನೆಯ ಮುಂಬಾಗಿಲು, ಹಾಗೂ ಹಾರೆ, ಗುದ್ದಲಿ ಯಂತ್ರಗಳಿಗೆ ಕಟ್ಟುತ್ತಾರೆ. ಮನೆಯ ಮುಂಬಾಗಿಲನ್ನು ಚಂದನದ ಬೊಬ್ಬಿಟ್ಟು ಸಿಂಗರಿಸುತ್ತಾರೆ. ಅನ್ನದ ಪಾತ್ರೆಗೂ ಚಂದನ ಲೇಪಿಸುವರು. ಅನ್ನಕ್ಕೆ ಹೆಸರಿಡುವಾಗ ಮನೆಯ ಹಿರಿಯರ ಅನುಮತಿ ಕೇಳುತ್ತಾರೆ. ಹೊಸ ಅಕ್ಕಿ ಅನ್ನ ಮಾಡಲು ಹೆಸರಿಡುತ್ತೇವೆ ಎಂದಾಗ ಎಲ್ಲರೂ ಆಗಲಿ ಎನ್ನುತ್ತಾರೆ. ಅಕ್ಕಿ ಹಾಕುವಾಗಲೂ ಹೊಸ ಅಕ್ಕಿಯ ಅನ್ನ ಮಾಡುತ್ತೇವೆ ಎಂದಾಗ ಎಲ್ಲರೂ ಆಗಲಿ ಎನ್ನುತ್ತಾರೆ.

ಸಾರು, ಬಗೆ ಬಗೆಯ ಪಲ್ಯ ಪಾಯಸ ಸಿದ್ಧವಾದ ಮೇಲೆ ಮನೆಯ ಹಿರಿಯ ಮಹಿಳೆ ಎಲ್ಲರ ಅನುಮತಿ ಪಡೆದು ಎಡೆಯಿಡುತ್ತಾಳೆ. ಎಲ್ಲರಿಗೂ  ಎಲೆ ಹಾಕಿ ಅಂದು ಊಟಕ್ಕೆಬ್ಬಿಸುವರು. ಉಂಡ ಬಳಿಕ ಚಂದನವನ್ನು ಹಣೆಗೆ ಲೇಪಿಸಿಕೊಳ್ಳುವರು.

ಜಾತ್ರೆ

ತಮ್ಮ ಊರಿನಲ್ಲಿ ಜಾತ್ರೆ ನಡೆದರೂ ಬೆಳೆದ ಹೆಣ್ಣು ಮಕ್ಕಳಿಗೆ ಜಾತ್ರೆ ನೋಡಲು ಹೋಗುವ ಅವಕಾಶ ಮೋಯರ ಹೆಣ್ಣು ಮಕ್ಕಳಿಗೆ ಇರಲಿಲ್ಲ. ಏನೂ ತಿಳಿಯದ ವಯಸ್ಸಿನಲ್ಲಿ ಜಾತ್ರೆಗೆ ಕರೆದುಕೊಂಡು ಹೋಗುವುದಿತ್ತೆ ವಿನಃ ಸ್ವಲ್ಪ ದೊಡ್ಡವರಾದರೂ  ಅವರಿಗೆ ಜಾತ್ರೆ ನೋಡುವುದಕ್ಕೆ ಅವಕಾಶವಿರಲಿಲ್ಲ.  ಆ ಹೆಣ್ಣು ಮಕ್ಕಳು ಮದುವೆಯಾದ ಮೇಲೆಯೇ ತಮ್ಮ ಗಂಡನ ಜೊತೆಯಲ್ಲಿ ಜಾತ್ರೆಗೋ ಮದುವೆಗೋ ಇತರ ಸಮಾರಂಭಗಳಿಗೋ ಹೋಗಬೇಕು., ಮನೆಯವರೆಲ್ಲ ಜಾತ್ರೆಗೆ ಹೋದರೆ ಮನೆಕಾಯುವ ಕೆಲಸ ಯುವತಿಯರದು ಮತ್ತು ಹಿರಿಯರದು. ತೀರ ಹತ್ತಿರದಲ್ಲಿದ್ದರೆ ಒಂದು ಗಳಿಗೆ ಹೋಗಿ ಬರುತ್ತಾರೆ. ಮೋಯರ ೧೧ ಭಗವತೀ ಕ್ಷೇತ್ರಗಳಲ್ಲಿ ಜಾತ್ರೆ ನಡೆಯುತ್ತಾ ಇರುತ್ತದೆ. ಕೆಲವು ಕಡೆ ಕೆಲವು ವರ್ಷಗಳಿಗೊಮ್ಮೆ ನಡಾವಳಿಯನ್ನು  ಆಚರಿಸುತ್ತಾರೆ. ಕೆಲವೊಮ್ಮೆ ೨೫ ವರ್ಷ ಗಳಿಗೊಮ್ಮೆ, ೬೦ ವರ್ಷಗಳಿಗೊಮ್ಮೆ, ನೋರೋಳ್ ತೀರ್ಸಿ ಕಳಿಯೋರ್ತಿಗಳಂತಹ ವಿಶೇಷ ಜಾತ್ರೆ ನೆರವೇರುತ್ತದೆ. ಈ ಸಂದರ್ಭದಲ್ಲಿ ಮನೆಮಂದಿಗೆ ಹರಕೆ ಒಪ್ಪಿಸಲು ಇದ್ದರೆ, ಹೂ ಹಾಕಲು ಇದ್ದರೆ ತಮ್ಮ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ತಮ್ಮ ಊರಿನ ಜಾತ್ರೆಗೆ ಮನೆಯವರು ತಮ್ಮ ದೂರದ ನೆಂಟರನ್ನು ಮದ್ಲಾಗಿನ ಮನೆಯವರನ್ನು ಆಮಂತ್ರಿಸುತ್ತಾರೆ. ನಾಲ್ಕೈದು ದಿನದ ಜಾತ್ರೆಗೆ ಬಂದವರು ಮನೆಯಲ್ಲಿರುವಾಗ ಮಕ್ಕಳಿಗೆ ಸಂಭ್ರಮ. ಹಬ್ಬದ ವಾತಾವರಣ, ಮನೆಯೆಲ್ಲಾ ಗಿಜಿಗಿಜಿ ಎನ್ನುತ್ತಿರುತ್ತದೆ. ಈಗೆಲ್ಲಾ ಜಾತ್ರೆಯಲ್ಲಿ ಅನ್ನ ಸಂತರ್ಪಣೆ ನಡೆಯುವುದರಿಂದ ನೆಂಟರಿಷ್ಟರಿಗೆ ಅಡಿಗೆ ಮಾಡಿ ಹಾಕುವ ತಾಪತ್ರಯ ಇರುವುದಿಲ್ಲ. ಎಲ್ಲರೂ ಜಾತ್ರೆಯಲ್ಲಿಯೇ ಉಂಡು ಬರುತ್ತಾರೆ.

ಜಾತ್ರೆಯಂದು ಮೋಯರ ಬೇರೆ ಬೇರೆ ತಡವಾಡುಗಳ ಹಿರಿಯ ಮಹಿಳೆ ಪ್ರಸಾದ ಪಡೆಯಬೇಕು. ಆ ಪ್ರಸಾದವನ್ನು ಬಿದು (ಯುಗಾದಿ) ಯಂದು ಹೆಣ್ಣು ಮಕ್ಕಳಿಗೆ ವಿತರಿಸಬೇಕು. ಇದು ನಿಗದಿಯಾದ ದಿನವಾದುದರಿಂದ ಹೇಳಿಕೆ ಇಲ್ಲದೇ ಎಲ್ಲರೂ ಅಲ್ಲಿ ಸೇರಬೇಕು. ಇದನ್ನು ಅಮ್ಮಾರೆ ಸಭಾ (ತಾಯಿಯಂದಿರ ಸಭೆ) ಎನ್ನುವರು. ವಾರ್ಷಿಕವಾಗಿ ಆ ಸ್ಥಾನಕ್ಕೆ ಸಂಬಂಧ ಪಟ್ಟವರೆಲ್ಲರೂ ತಮ್ಮ ವಂತಿಗೆಯನ್ನು ಅಂದು ತಲುಪಿಸಬೇಕು. ಈ ಹಣದಿಂದ ಅಗತ್ಯ ಇರುವವರಿಗೆ, ಸಾಲ ಕೊಡುತ್ತಾರೆ. ಇಲ್ಲವಾದರೆ ಜಾತ್ರೆಯ ವಿಶೇಷ ಸಂದರ್ಭಗಳಲ್ಲಿ ಹರಕೆ, ಸೇವೆಯ ಜಾತ್ರೆಯಲ್ಲಿ, ಕಾಳಿಯಾಟ ಸೇವೆಯಂತಹ ವಿಶೇಷ ಜಾತ್ರೆಗಳಲ್ಲಿ ತಮ್ಮ ಪಾಲಿನ ವಂತಿಗೆಯನ್ನು ಕೊಡುತ್ತಾರೆ. ಇಲ್ಲವೇ ಸಾರ್ವಜನಿಕವಾಗಿ ಅನ್ನ ಸಂತರ್ಪಣೆ ನಡೆಯುವುದರಿಂದ, ಅನ್ನ ಬೇಯಿಸುವ ದೊಡ್ಡ ಕಟಾರ (ಪಾತ್ರೆ) ಸ್ಟೀಲಿನ ಪಾತ್ರೆಗಳನ್ನು ತಮ್ಮ ಸಭೆಯ ಹೆಸರಿನಲ್ಲಿ ಕೊಡುತ್ತಾರೆ. ಈ ಆಚರಣೆ ಮೋಯರ ಎಲ್ಲಾ ೧೧ ಸ್ಥಾನಗಳಲ್ಲಿಯೂ ನಡೆಯುತ್ತದೆ

. ಕೌಟುಂಬಿಕ ನೆಲೆಯಲ್ಲಿ ಮಹಿಳೆ

ದಿನಚರಿ : ಮಾತೃಪ್ರಧಾನ ಕುಟುಂಬ, ಅಳಿಯಕಟ್ಟು ಎಂದೆಲ್ಲ ಕರೆಯಲ್ಪಡುವ ಕುಟುಂಬ ವ್ಯವಸ್ಥೆ ಬೋವಿ (ಮೋಯ) ಜನಾಂಗದಲ್ಲಿ ಕಂಡು ಬರುತ್ತದೆ. ಇವರಲ್ಲಿ ಹೆಚ್ಚಿನವರು ಕರಾವಳಿ ತೀರದಲ್ಲಿ ನೆಲೆಸಿರುವುದರಿಂದ ಉಪಜೀವಿಸಲು ಮೀನುಗಾರಿಕೆ ಪ್ರಧಾನವೃತ್ತಿಯಾಗಿತ್ತು. ಮನೆಯ ಗಂಡಸರು ಮುಂಜಾನೆಯೇ ಎದ್ದು ತಂಗಳನ್ನ ಉಂಡೋ, ತಿಂಡಿಯನ್ನ ತಿಂದೋ, ಬುತ್ತಿಕಟ್ಟಿಕೊಂಡು ದೋಣಿಯಲ್ಲಿ ಮೀನು ಹಿಡಿಯಲು ಹೋಗುತ್ತಾರೆ. ತಿಂಡಿಯನ್ನು ಕೆಲವೊಮ್ಮೆ ರಾತ್ರಿಯೇ ತಯಾರಿಸಿಟ್ಟಿರುತ್ತಾರೆ. ಕೆಂಡದ ಕಡಬು, ಅಥವಾ ಪುಂಡಿಯನ್ನು ರಾತ್ರಿಯೇ ಮಾಡಿಟ್ಟಿರುತ್ತಾರೆ. ಅವರು ಮೀನು ಹಿಡಿಯಲು ಹೋದ ಬಳಿಕ ಮನೆಯವರು ಗಂಜಿಯ ತಯಾರಿಯಲ್ಲಿಯೋ, ತಿಂಡಿಯ ತಯಾರಿಯಲ್ಲಿಯೋ ಮನೆಯ ಸೊಸೆಯಂದಿರು ತೊಡಗಿರುತ್ತಾರೆ. ಯುವತಿಯರು ಸಣ್ಣ ಮಕ್ಕಳೂ ನಿತ್ಯ ವಿಧಿಯನ್ನು ತೀರಿಸುವುದನ್ನು ನೋಡಿಕೊಳ್ಳುತ್ತಾರೆ.  ಎಲ್ಲರಿಗೂ ಗಂಜಿ ಊಟ ಉಣ್ಣಿಸುತ್ತಾರೆ. ಹಿಂದೆ ಎಲ್ಲ ಕಡೆ ಗಂಜಿ ಊಟವೇ ಮುಖ್ಯವಾಗಿತ್ತು. ಮೋಯರಲ್ಲಿ ರಾತ್ರಿ ಸ್ನಾನದ ಪದ್ಧತಿ, ಕೆಲವರು ಬೆಳಿಗ್ಗೆಯೂ ರಾತ್ರಿಯೂ ಸ್ನಾನ ಮಾಡುತ್ತಾರೆ. ಸ್ನಾನದ ಬಳಿಕ ಹೆಂಗಸರು ತುಳಸಿಗೆ ನೀರು ಹಾಕಿ ಸೂರ್ಯ ದೇವನಿಗೆ ವಂದಿಸುತ್ತಾರೆ. ಮನೆಯ ಒಳಗೆ ಬಂದು ದೀಪ ಇಟ್ಟು ಕುಲದೈವಕ್ಕೆ ವಂದಿಸುತ್ತಾರೆ. ಇವರ ಮನೆಯ ಚಾವಡಿಯಲ್ಲಿ ತೂಗುದೀಪವೊಂದು ಸದಾಕಾಲ ಬೆಳಗುತ್ತಿರುತ್ತದೆ. ಬೆಳಗೂ ಬೈಗೂ ಚೆಂಬಿನಲ್ಲಿ ನೀರನ್ನು ಇವರು ತೂಗುದೀಪದ ಹತ್ತಿರ ಬಿಟ್ಟಿರುತ್ತಾರೆ. ತಮ್ಮ ದೈವದ ಮೇಲೆ ಅವರಿಗೆ ಬಹಳ ನಂಬಿಕೆ ಇತ್ತು. ವಿಶ್ವಾಸವಿತ್ತು. ಬೇರೆ ಜಪ, ತಪ, ಉಪವಾಸ ಇವರಿಗೆ ತಿಳಿಯದು.

ಆರ್ಥಿಕ ಸ್ಥಿತಿಗತಿ : ಮೋಯರಲ್ಲಿ ಮೀನುಗಾರಿಕೆ ಕೇವಲ ೧೦% ರಷ್ಟು ಮಾತ್ರ ಉಳಿದುಕೊಂಡಿದೆ. ಉಳಿದುವರೆಲ್ಲ ನಗರದಲ್ಲಿ ಪಟ್ಟಣದಲ್ಲಿ ನೌಕರಿಯನ್ನು ಮಾಡುತ್ತಿದ್ದು ಊರಿನಲ್ಲಿ ನಡೆಯುವ ಜಾತ್ರೆಗೆ, ವಾರ್ಷಿಕವಾಗಿ ಎಡೆಯಿಡುವಾಗ ಹೋಗುತ್ತಾರೆ. ಹೆಚ್ಚಿನ ಹೆಂಗಸರು ನೌಕರಿ ಮಾಡುತ್ತಾರೆ. ಹೆಚ್ಚಿನವರು ಈಗ ಸುಶಿಕ್ಷಿತರು ನಗರಕ್ಕೆ ಬರಲಾರದ ಹೆಂಗಸರು ತಮ್ಮ ಊರಿನಲ್ಲಿಯೇ ಇದ್ದು ಮಕ್ಕಳ ಸಂಗೋಪನ, ವಿದ್ಯಾಭ್ಯಾಸವನ್ನೆಲ್ಲಾ ಹೊರುತ್ತಾರೆ. ಕೆಲವೊಮ್ಮೆ ಮೀನು ಮಾರಿ ತೆಂಗಿನಕಾಯಿ ಮಾರಿ ತೆಂಗಿನ ಸೊಗೆಯನ್ನು ಹೆಣೆದು ಅದನ್ನು ಮಾರಿ ಹಣ ಸಂಪಾದಿಸುತ್ತಾರೆ. ನಗರದಿಂದ ಬಂದ ಹಣವನ್ನು ಸೇರಿಸಿಕೊಂಡು ಕುಟುಂಬವನ್ನು ಪೋಷಿಸುತ್ತಾಳೆ. ಅವಳ ಸ್ಥಾನಮಾನ ಇಲ್ಲಿ ಮುಖ್ಯವಾಗಿ ಕಂಡು ಬರುತ್ತದೆ. ಪ್ರತಿಯೊಂದಕ್ಕೂ ಅವಳೇ ಹೊಣೆಯಾದುದರಿಂದ ಅವಳು ಈ ಗುರುತರವಾದ ಹೊಣೆಯನ್ನು ಚೆನ್ನಾಗಿಯೇ ನಿಭಾಯಿಸುತ್ತಾಳೆ.

ನಗರದಲ್ಲಿನ ಮಹಿಳೆಯರು ಉದ್ಯೋಗಸ್ಥರು, ಕಲಿಸುವಿಕೆಯಲ್ಲಿ ಹೆಚ್ಚಿನ ಮೋಯ ಮಹಿಳೆಯರು ತೊಡಗಿದ್ದಾರೆ. ಕೈ ತುಂಬಾ ಸಂಪಾದನೆ ಮಾಡಿದರೂ ಅವರಿಗೆ ಆರ್ಥಿಕ ಸ್ವಾತಂತ್ರ‍್ಯವಿಲ್ಲ (ಕೆಲವು ಅಪವಾದಗಳೂ ಇವೆ) ದುಡಿದದ್ದೆಲ್ಲ ಮನೆಗೆ ಸರಿಹೋಗುತ್ತದೆ. ಗಂಡನ ಪಾಲಾಗುತ್ತದೆ. ಮಕ್ಕಳ ವಿದ್ಯಾಭ್ಯಾಸ ಉಡಿಗೆ, ತೊಡಿಗೆ ಆಹಾರ ವಿಹಾರಗಳಲ್ಲಿ ವಿನಿಯೋಗವಾಗುತ್ತದೆ.

ಆರ್ಥಿಕವಾಗಿ ಬಲಿಷ್ಠವಾಗಿ ಇಡೀ ಮನೆಯ ಆಗುಹೋಗನ್ನು ನಡೆಸುವ ಸಾಮರ್ಥ್ಯವಿದ್ದ ಮೋಯ ಹೆಣ್ಣು, ಸ್ಥಾನಮಾನ ಇಟ್ಟುಕೊಂಡು ಬಾಳುತ್ತಿದ್ದಳು. ಗಂಡಸರು ಹೊರಗೆ ದುಡಿದೋ, ಮೀನು ಹಿಡಿದು ತಂದೋ ಬಂದ ಹಣವನ್ನು ಮನೆಯಲ್ಲಿ ಕೊಟ್ಟರೆ ಮನೆಯ ಹೆಂಗಸರು ಮೀನು ಮಾರಿ, ತೆಂಗಿನ ಕಾಯಿ ಮಾರಿ ಹಣ ಸಂಗ್ರಹಿಸಿ ಅಚ್ಚುಕಟ್ಟಾಗಿ ದಿನದಿನದ ವ್ಯವಹಾರ ಖರ್ಚು ವೆಚ್ಚ ತೂಗಿಸುತ್ತಿದ್ದರು.

ಹೊರಗಿನ ಪ್ರಭಾವಗಳಿಂದ ಆಗಿರುವ ಬದಲಾವಣೆಗಳು :

ಮನುಷ್ಯ ತನ್ನ ತುತ್ತಿನ ಚೀಲ ತುಂಬಲು ಪಡಬಾರದ ಪಾಡು ಬಹಳ ಹಿಂದಿನಿಂದ ಪಡುತ್ತಿದ್ದ. ಕಾಲಕ್ರಮೇಣ ಜೀವನದ ಅವಶ್ಯಕತೆಗಳು ಹೆಚ್ಚಿದವು. ಅವುಗಳಿಗಾಗಿ ಸಾಕಷ್ಟು ಸಂಶೋಧನೆಗಳಾದುವು. ಹೊಸ ಹೊಸ ಆವಿಷ್ಕಾರಗಳಿಂದ ಮಾನವನ ಚಿಂತನೆಯಲ್ಲಿ ಸಾಕಷ್ಟು ಬದಲಾವಣೆಯಾಯಿತು.  ಸೌಕರ್ಯಗಳು ದಿನೇ ದಿನೇ ಹೆಚ್ಚಿದುವು. ಹೊರಗಿನ ಗಾಳಿಯು, ಪ್ರಭಾವವೂ ಬದಲಾವಣೆ ತಂದುವು. ಪಾಶ್ಚಾತ್ಯರು ಶಾಂತಿಗೆ, ಜೀವನ ಕ್ರಮಕ್ಕೆ ಭಾರತದತ್ತ ವಾಲಿದರೆ ಭಾರತೀಯರು ಪಾಶ್ಚಾತ್ಯರ ಜೀವನ ಕ್ರಮಕ್ಕೆ ಸೋತು ಹೋಗಿದ್ದಾರೆ. ಪರಿಣಾಮವಾಗಿ ನಮ್ಮದಲ್ಲದ ಸಂಸ್ಕೃಥಿ ಇಲ್ಲಿ ಬೇರೂರ ತೊಡಗಿತು. ನಮ್ಮ ಸಂಸ್ಕೃತಿ, ನಾಗರೀಕತೆ, ಶ್ರೀಮಂತವಾದ ಜಾನಪದ ಇವುಗಳ ಗೊಡವೆ ನಮಗಿಲ್ಲ. ಪಾಶ್ಚಾತ್ಯ ಸಂಸ್ಕೃತಿಗಳ ಪ್ರಭಾವದಿಂದ ಅವುಗಳ ಅನುಕರಣದಿಂದ ನಮ್ಮ ಜೀವನ ಕ್ರಮ ಬದಲಾಯಿತು. ಭಾರತದ ಎಲ್ಲ ಜನಾಂಗಗಳಿಗೂ ಈ ಗಾಳಿ ಬಡಿದಿವೆ. ಮೋಯ ಜನಾಂಗವೇನೂ ಇದಕ್ಕೆ ಹೊರತಲ್ಲ.

ಬೋವಿ ಮಹಿಳೆ ಒಡಲಭಿತ್ತಿ

ಸಂಚಾರಿ ಜನಾಂಗವಾದ ಬೋವಿ (ಮೋಯ) ವಲಸೆಯ ಕಾಲಕ್ಕೆ, ಹಲವು ಪ್ರದೇಶಗಳಲ್ಲಿ ತಂಗಿ ಅಲ್ಲಿಯ ಭಾಷೆಗಳನ್ನು ತನ್ನ ಭಾಷೆಯ ಜೊತೆಗೆ ಸೇರಿಸಿಕೊಂಡು ತನ್ನದೇ ವಿಶಿಷ್ಟ ಭಾಷೆಯನ್ನು ರೂಪಿಸಿತು. ಅದುವೆ ಮಲಾಮ ಭಾಷೆ. ಮಲೆಯಾಳದ ಉಪಭಾಷೆಯೆಂದು ಇದಕ್ಕೆ ಹೆಸರು. ಒಂದು ಉಪಭಾಷೆಗೆ ಅದರದೇ ಆದ ಇತಿಮಿತಿಗಳಿವೆ. ತನ್ನ ಅನುಭವದ ಮೂಸೆಯಲ್ಲಿ ಬೆಂದು ಅಪ್ಪಟವಾದ ಮಾತುಗಳು, ಹಲವು ಸಂದರ್ಭಗಳ ಅನುಭವಗಳು ಒಂದಾಗಿ ಗಾದೆಗಳಾಗಿ ರೂಪಾಂತರಗೊಂಡಿವೆ. ಉಪವೃತ್ತಿಯಿಂದ ಜೀವಿಸುವ ಕಾಲಕ್ಕೆ, ಒಂದಲ್ಲ ಒಂದು ವೃತ್ತಿಯಲ್ಲಿ ತೊಡಗಿರುವ ಕಾಲಕ್ಕೆ, ಮೋಯ ಜನಾಂಗವು ತಾವಿರುವ ಪ್ರದೇಶದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿತು. ಭಾಷೆಯಲ್ಲಿ ಮಾತ್ರವಲ್ಲದೆ ಆಚಾರ – ವಿಚಾರಗಳಲ್ಲಿ, ನಡೆನುಡಿಯಲ್ಲಿ, ಆರಾಧನೆಯಲ್ಲಿ ಸಂಸ್ಕೃತಿಯಲ್ಲಿ ಕೊಡುಕೊಳ್ಳುವಿಕೆ ದೊಡ್ಡ ಪ್ರಮಾಣದಲ್ಲಿ ಆಗಿದೆ. ಗಾದೆಗಳು, ಒಡಪುಗಳು, ಹಾಡುಗಳು, ಕತೆಗಳು ಇವೆಲ್ಲ ಹಿಂದೆ ಮೌಖಿಕ ಪರಂಪರೆಯಿಂದ ಒಂದು ಬಾಯಿಯಿಂದ ಇನ್ನೊಂದು ಬಾಯಿಗೆ ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣ ಬೆಳೆಸಿವೆ. ಇನ್ನೊಂದು ಭಾಷೆಯಿಂದ ಬೆಳೆದಿದೆ. ಆ ಮಣ್ಣಿನ ಸೊಗಸನ್ನು ಸೇರಿಸಿಕೊಂಡಿದೆ. ಆದುದರಿಂದ ಇವೆಲ್ಲವುಗಳಲ್ಲಿ ಸಾಮ್ಯತೆಯನ್ನು ಕಾಣಬಹುದು.

ದುಡಿಯುವ ಕಾಲಕ್ಕೆ ತಮ್ಮ ಶ್ರಮ, ಆಯಾಸ, ದುಃಖ, ದುಗುಡಗಳು ಶಮನವಾಗಲಿ, ಕಡಿಮೆಯಾಗಲಿ ಎಂಬ ಉದ್ದೇಶದಿಂದ ಹೆಣ್ಣುಮಕ್ಕಳು ಈ ಪರಂಪರೆಯನ್ನು  ಬೆಳೆಸಿದರು. ನಾಡಿನಿಂದ ನಾಡಿಗೆ ಸಾಗಿಸಿದರು.

ಗಾದೆಗಳು : (ಕೇವಲ ಮಹಿಳೆಯರಿಗೆ ಸಂಬಂಧಪಟ್ಟ ಗಾದೆಗಳನ್ನು ಅನುವಾದಿಸಿ ಕೊಡಲಾಗಿದೆ)

೧. ಲಿಮ್ಮಾಯಿ ಒಡ್ಯೆರೆಲತ್ತಿನಿ ಕಣ್ ಕ್ ಇಲ್ಲ.
-ಅತ್ತೆ ಒಡೆದ ಮಡಕೆಗೆ ಲೆಕ್ಕವಿಲ್ಲ – ಅಸೂಯೆ

೨. ಅವರವರೆ ತಲೆಕ್ ಅವರವರೆ ಕೈ
-ಅವರವರ ತಲೆಗೆ ಅವರವರದೆ ಕೈ – ಸ್ವಾಭಿಮಾನ

೩. ಉಳ್ಳಂಗೈಲಿ ಬೆಳ್ತಕಾರ ಪಾರೈಪೋಲೆ

-ಅಂಗೈಯಲ್ಲಿ ಬಿಳಿ ಹಕ್ಕಿ ಹಾರಿದಂತೆ – ಸುಳ್ಳು

೪. ಕಾಟ್ ಕೋದಿಕ್ ಚಂಜ್ರಾಂದಿ ಇಲ್ಲ
-ಕಾಡು ಕೋಳಿಗೆ ಸಂಕ್ರಮಣ ಇಲ್ಲ – ಕುಸಂಸ್ಕಾರ

೫. ಕುದುರ‍್ಯಾಕ್ ಕುಡು ಇಟ್ಯಪೋಲ್ಯೆ
-ಕುದುರೆಗೆ ಹುರುಳಿ ಹಾಕಿದಂತೆ – ಧಾರಾಳತನ

೬. ಚೆಲ್ಲಿ ಕೊಡ್ತೊ ಪದುಕೊಂ ಕೆಟ್ಟ ಕೊದ್ತೊ ಬುತ್ತಿಕಡವ ಕಡ್ ನಪಿನ್ಯ ಮರ್ ನ್ ಪೋಲೆ
-ಹೇಳಿಕೊಟ್ಟ ಮಾತೂ ಕಟ್ಟಿಕೊಟ್ಟ ಬುತ್ತಿಯ ಅಂಗಣ ದಾಟಿದ ಮೇಲೆ ಮರೆತಂತೆ – ಸ್ವಂತಿಕೆ ಬೇಕು.

೭. ಕುಪ್ಪೇಲಿ ಇರ್ ನೋಡು ಮಾಡತಿಂಡೆ ಕಿನ್ಯಾವು
-ಗುಡಿಸಲಿನಲ್ಲಿ ಇದ್ದವಳಿಗೆ ಮಹಲಿನ ಕನಸು – ಆಶೆ

೮. ತಲಕ ಬೀತಿಯೆ ತಣ್ಣಿ ಕಾಶ್ ಕೇ ಬೀದು
-ತಲೆಗೆ ಹಾಕಿದ ನೀರು ಕಾಲಿಗೆ ಬೀಳುತ್ತದೆ – ಮಾಡಿದ್ದುನ್ನು ಉಣ್ಣು

೯. ಕೋದಿಕ್ಕೊರಿ ಕಾಲೊಂ ಬಾದಕ್ಕೊರಿ ಕಾಲೊಂ
-ಕೋಳಿಗೊಂದು ಕಾಲ, ಬಾಲಿಗೊಂದು ಕಾಲ – ಪರಿಸ್ಥಿತಿ

೧೦. ತಾದ ಬೆಚ್ಚಂಗಿ ಮೀರ್ ಅರಿಕ್ಕುಂ ಮೀದ ಬೆಚ್ಚಂಗಿನಕೇರಿ ಕೊಂಡುಪೋವುಂ
-ಕೆಳಗೆ ಇಟ್ಟರೆ ಇರುವೆ ತಿಂದೀತು ಮೇಲೆ ಇಟ್ಟರೆ ಗಿಡುಗ ಒಯ್ದೀತು – ಅತೀ ವಾತ್ಸಲಯ್

೧೧. ಪೆಡ್ಯಿ ಒಕ್ಕುನೋ ಕುಂಉಂದೆ ಆರ್ತಕೇ
– ಹೇಂಟೆ ಕೆದುಕುವುದು ತನ್ನ ಮರಿಗಳ ಹತ್ತಿರಕ್ಕೆ – ಮಮತೆ

೧೨. ಪಾಳ್ ಕ್ ಬನ್ನೊರು ಉರ್ಮಂಡೆ ಬೆಲೆಎನ್ ನಿ
-ಹಾಲಿಗೆ ಬಂದವಳಿಗೆ ಉರ್ಮೆಯ ಕ್ರಯ ಏಕೆ? ಅಧಿಕ ಪ್ರಸಂಗ

ಒಡಪುಗಳು

ಜನಾಂಗಗಳ ಬುದ್ಧಿಮತ್ತೆಯ ಕೌಶಲ್ಯವನ್ನು ಒಡಪುಗಳು ಒರೆಗೆ ಹಚ್ಚುವಂತಹವುಗಳು

೧. ಅಮ್ಮ ಇರ್ ನಿನಾ ವೋವೋತಿರೀನಾ ಕಡೆಯಿನಕಲ್ಲಿ – ಕುಟ್ಟಿ

ಅಮ್ಮ ಕುಳಿತಿದ್ದಾಳೆ. ಮಗಳು ತಿರುಗುತ್ತಾಳೆ. – ಕಡೆಯುವ ಕಲ್ಲು

೨. ಅಮ್ಮಂಡೆ ಔತಣ ವೋವೋ ಪೋನಾ. ಮೋಳೋ ಜಾತಕ್ ಅಮ್ಮ ಪೋನ್ ಲಾ,ಸೇರ್ ಪಾಲ್

ಅಮ್ಮನ ಒಳಗೆ ಮಗಳು ಹೋಗುತ್ತಾಳೆ. ಮಗಳ ಒಳಗೆ ಅಮ್ಮ ಹೋಗುವುದಿಲ್ಲ. ಪಾವು, ಸೇರು, ಅಳತೆ

೩. ಅಂಜಾಡಿನ್ ಕೊಂಡುಬರ್ ನ ಎದುರುಕ್ ಬೆಟ್ಟಿಟ್ ಬುಳಿಪಿನ್ನ

ಅಂಗಡಿಯಿಂದ ತರುತ್ತಾಳೆ, ಎದುರಿಟ್ಟು ಅಳುತ್ತಾಳೆ  – ಈರುಳ್ಳಿ

೪. ಒರಿಪುಡಿ ಬರ್ತಂಗಿ ಓರಿ ಮೂಡ ಪೊರಿಪೋವು  ಅರಸೊ

ಒಂದು ಹಿಡಿ ಹುರಿದರೆ ಒಂದು ಮುಡಿ ಅರಳಾದೀತು. – ಕೋಪದ ಮುಖ

೫. ಕಾಸ್ ಡೆ  ಕುದುರ‍್ಯಾಕೆ  ಬೀಳತಿಲಿ ಲಗಾಮು – ಸೂಚಿ ಸೂಚಕ್

ಕಾಸಿನ ಕುದುರೆಗೆ ಬಾಲದಲ್ಲಿ ಲಗಾಮು -ಸೂಚಿ ನೂಲು

೬. ಅಮ್ಮಕ್ ಒರಿಬಳ, ಮೋಕು ಒರಿಬಳ, ಮೋಳ ಮೋಕು ಒಂಚೆರಿಯೆ ಒಳಮಾರು – ಮೂಗುತಿ

ಅಮ್ಮನಿಗೆ ಒಂದು ಬಳೆ, ಮಗಳಿಗೆ ಒಂದು ಬಳೆ ಮಗಳ ಮಗಳಿಗೆ ಒಂದು ಸಣ್ಣ ಬಳೆ – ಮೂಗು ಮೂಗುತಿ

ಪಾಟುಗಳು

ಬೋವಿ (ಮೋಯ)ಗಳ ದೈವ  ಭಗವತೀ, ತಮ್ಮ ಆರಾಧನಾ ಕಾಲಕ್ಕೆ ಭಗವತಿಯ ಪಾಟುಗಳನ್ನು ತೋಟ್ಯಂಗಳನ್ನು ಹಾಡುತ್ತಾರೆ. ಮೋಯರ ಭಗವತೀ ಸ್ಥಾನಗಳಾದ ನೀಲೇಶ್ವರ, ಚಿವಕಾತ್ತೂರು, ಮಣಿಕೋತ್ತು, ತ್ವಯಂಗೆರೆಗಳಲ್ಲಿ ಪೂರಂ ಪಾಟುಗಳು ಪ್ರತಿವರ್ಷವೂ ಅಲ್ಲಿಯ ಆರಾಧನೆಯ ವೇಳೆಗೆ ಹಾಡಲ್ಪಡುತ್ತದೆ. ಇವುಗಳನ್ನು ಮೋಯ ಸ್ತ್ರೀಯರು, ಸೆಣಃಬಿನ ನೂಲು ತೆಗೆಯುವಾಗ, ಬಲೆಕಟ್ಟುವಾಗ, ಮುಡ್ಲಾಯಿಗೆ ಹೋಗುವಾಗ ದೋಣಿಯಲ್ಲಿ, ಮಕ್ಕಳನ್ನು ಮಲಗಿಸುವಾಗ ಜೋಗುಳ ಹಾಡುವಲ್ಲಿ, ಇಂತಹ ಪಾಟುಗಳನ್ನು ಹಾಡುತ್ತಿದ್ದರು. ಇವು ಇಂದು ನಶಿಸಿ ಹೋಗಿವೆ.

ವಕ್ತೃಗಳ ವಿವರ

೧. ಶ್ರೀಮತಿ ಪೊನ್ನಮ್ಮ ಬಟ್ಟಪಾಡಿ, ಉಚ್ಚಿಲ ಸೋಮೇಶ್ವರ, ಕರ್ನಾಟಕ

೨. ಶ್ರೀಮತಿ ಜಾನಕಿ ದೊಡ್ಡಮನೆ, ಲಿಡ್ಕ, ಕೋಟೆಕಾರು, ಕರ್ನಾಟಕ

೩. ಶ್ರೀಮತಿ ಪೊನ್ನಮ್ಮ, ಆರ್. ಉಚ್ಚಿಲ, ಉಚ್ಚಿಲ ಸೋಮೇಶ್ವರ, ಕರ್ನಾಟಕ

೪. ಶ್ರೀಮತಿ ಕಮಲ ಜೆ. ಉಚ್ಚಿಲ, ಉಚ್ಚಲ ಸೋಮೇಶ್ವರ ಕರ್ನಾಟಕ

೫. ಶ್ರೀಮತಿ ಸರಸ್ವತಿ ತಲಪಾಡಿ, ಉಚ್ಚಿಲ ಉಚ್ಚಿಲ ಸೋಮೇಶ್ವರ, ಕರ್ನಾಟಕ

೬. ಶ್ರೀಮತಿ ದೇವಕಿ ಸೋಮೇಶ್ವರ, ಮುಂಬಯಿ, ಮಹಾರಾಷ್ಟ್ರ

೭. ಶ್ರೀಮತಿ ವಸಂತಿ ಉಚ್ಚಲ್ ಉಚ್ಚಿಲ ಸೋಮೇಶ್ವರ, ಕರ್ನಾಟಕ

೮. ಶ್ರೀಮತಿ ಕಮಲ ಜಿ. ಆಋ. ವಾಮಂಜೂರು, ಕೇರಳ

೯. ಶ್ರೀಮತಿ ಕಲ್ಯಾಣಿ ಕೆ. ಚಿವತ್ ತ್ತೂರ್, ಕೇರಳ

ಗ್ರಂಥ ಋಣ

೧. ಚ.ರಾ.ಕಡಲಕರೆಯ ಚಿತ್ರಗಳು ಪ್ರಯೋಗ ಪ್ರಕಾಶನ, ಸೊಮೇಶ್ವರ, ಕರ್ನಾಟಕ ೧೯೫೬

೨. ಸುಳ್ಯ ಪರಿಸರದ ಗೌಡರು ಒಂದು ಸಾಂಸ್ಕೃತಿಕ ಅಧ್ಯಯನ, ೧೯೮೫ ಅಪ್ರಕಟಿತ

೩. ಕರಾವಳಿ ಜಾನಪದ, ಮಂಗಳಗಂಗ್ರೋತ್ರಿ ದ.ಕ. ೧೯೯೦

೪. ಡಾ. ವಾರ್. ಎನ್. ಉಚ್ಚಿಲ್ಕರ್

ಬೋವಿ (ಮೋಯ) ಜಾನಪದ ಒಂದು ಅಧ್ಯಯನ, ೨೦೦೧, ಯುಂಗ್ ಮೆನ್ಸ್, ಅಸೋಸಿಯೇಷನ್

೪. ಗಣಪತಿ ಬಿ.ಡಿ. ಕನ್ನಿಕಾವೇರಿ ಮಡಿಕೇರಿ, ಕೊಡಗಿನ ಮೂಲ ನಿವಾಸಿಗಳ ಜೀವನ ಕಥೆ, ಕೊಡಗು ಕಂಪನಿ  ೧೯೬೦

೬. ಬನ್ನಂಜೆ ಬಾಬು ಅಮೀನ್, ತುಳುವ ಜನಪದ ಆಚರಣೆಗಳು, ಗುರುಭಾರತಿ ಅಧ್ಯಯನ ಕೇಂದ್ರ.