ಪ್ರವೇಶ

ಕಂದ

ಕಾನನ ವಿಧಾನವನೀಕ್ಷಿಸೆ ನಾನಾಜಾತಿ
ವೃಕ್ಷತತಿಗಳಿಂದೊಡಗೂಡಿ ಜ್ಞಾನಿ
ಗಳೊಡೆಯನ ಧ್ಯಾನಿಪ  ಮುನೀಶ್ವರರಿರ್ಪ
ಆಶ್ರಮದಂತೆ ತೋರುತಲಿರ್ಕುಂ ॥

ಗಯ : ಯೀ ಮರದ ನೆರಳಿನಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ಮುಂದಕ್ಕೆ ಪ್ರಯಾಣ ಮಾಡುತ್ತೇನೆ.

ಆಕಾಶವಾಣಿ : ಯಲೈ ಕುಬೇರ ನಂದನನೆ, ನೀನು ಯಮುನಾನದಿ ಪ್ರಾಂತದಲ್ಲಿ ಗಗನಚಾರಿಯಾಗಿ ಹೋಗುತ್ತಿರುವಾಗ್ಗೆ ಆರ್ಘ್ಯವಂ ಕೊಡುತ್ತಲಿರ್ದ ಶ್ರೀಕೃಷ್ಣನ ಕರದಲ್ಲಿ ನಿನ್ನ ಕುದುರೆಯ ಬಾಯ್ನರೆಯು ಬೀಳಲು ಅದಂ ಕಂಡ ಹರಿಯು ಯಂಟು ದಿನಗಳೊಳಗೆ ನಿನ್ನನ್ನು ಕೊಲ್ಲುತ್ತೇನೆಂದು ಶಪಥವಂ ಮಾಡಿರುವನು. ನೀನು ಕಾಲವಂ ಕಳೆಯದೆ ಪ್ರಾಣವಂ ಉಳಿಸಿಕೊಳ್ಳುವ ಪ್ರಯತ್ನವಂ ಮಾಡು. ಇಲ್ಲಿಂದ ಹೊರಡು.

ಗಯ : ಆಹಾ ಇದೇನು ಆಕಾಶವಾಣಿಯು ಯೀ ರೀತಿ ಹೇಳುತ್ತಿರುವುದಲ್ಲಾ. ವಿಧಿಯು ಇಂಥಾ ವಿಪತ್ತನ್ನು ತಂದುಬಿಟ್ಟಿತು. ಯಾವುದನ್ನೂ ಕಾಣದೆ ನನ್ನನ್ನು ಕೊಲ್ಲುವೆನೆಂದು ಶ್ರೀ ಕೃಷ್ಣನು ಪ್ರತಿಜ್ಞೆಯಂ ಮಾಡಿದನೆ ಹಾ ವಿಧಿ-

ಪದ

ಯೇನ ಮಾಡಲೀ ವಿಧಿ  ಹೀನತೆಗೊಳಿಸಿತೇ ॥
ದಾನವಾರಿ ಯನ್ನನೂ ಹಾನಿ ಮಾಡದಿಹನೇ ॥

ಗತಿಯೇನು ತೋರದೂ ಮತಿ ಭ್ರಾಂತಿಯಾದುದು
ಕ್ಷಿತಿಯಲ್ಲಿ ಬಾಳ್ವುದು ಹಿತ ತೊರೆದು ಪೋದುದು ॥

ಮಾತೆಯು ಪೇಳಿದ ಮಾತ ನಾ
ಕೇಳದೆ ಘಾತಿಗೆ ಶಿಲುಕಿದೆ.
ಧರಶರಪುರಿ ರಂಗಾ ॥

ಗಯ : ಅಯ್ಯೋ ಯದುಕುಲೋತ್ತಮನೆ, ಯಲ್ಲವನ್ನು ತಿಳಿದು ಬ್ರಂಹಾಂಡ ನಾಯಕನಾದ ನೀನು ನಿರಪರಾಧಿಯಾದ ಯನ್ನನ್ನು ಕೊಲ್ಲುವೆನೆಂದು ಪ್ರತಿಜ್ಞೆಯಂ ಮಾಡಬಹುದೆ ದೇವ ಭಕ್ತರ ಜೀವ ॥

ಕಂದ

ಹಿರಿಯರ ಮಾತಂ ಗಣಿಸದೆ
ಮೀರುತ ನಡೆವರ್ಗೆ ಯೀಗ ಲೋಕದಿ ಕಷ್ಟಂ
ಬರುವುದು ಸತ್ಯವಿದೆನ್ನುತ ಧರೆ
ಜನರೊರೆಯುವುದ ತೊರೆದು ಕೆಡುವರು ಜಗದೀ ॥

ಗಯ : ಅಯ್ಯೋ ಪರಮ ಪಾಪಿಯಾದ ಗಯನೆ, ತಂದೆ ತಾಯಿಗಳ ಆಜ್ಞೆಯಂ ಮೀರಿ ಮರಣಕ್ಕೆ ಗುರಿಯಾದೆಯಾ, ಕಷ್ಟ ಕಾಲದಲ್ಲಿ ಧೈರ‌್ಯವೇ ಮುಖ್ಯವಾದುದು. ಶ್ರೀಕೃಷ್ಣನಿಂದ ಮರಣವುಂಟಾದರೆ ಪದವಿ ಪ್ರಾಪ್ತವಾಗುವುದು ॥

ಪದ

ಪಾಲಿಸೆನ್ನನೂ ಫಾಲಲೋಚನನೆ
ಬಾಲನನ್ನು ನೀ ಲೀಲೆಯಿಂದಲೀ ॥

ಹಯವನೇರುತೆ ಭರದಿ ಪೋದವಾ
ತರಳ ಗಯ ತಾನು ಬರದೆ ಇರುವನೂ ॥

ಕುಬೇರ : ಹೇ ಪಾರ್ವತೀಶನೆ. ಯನ್ನ ಸುತನು ಯಲ್ಲಿರುವನೊ ಇನ್ನೂ ಬರಲಿಲ್ಲವಲ್ಲ ಯನ್ನ ವ್ಯಥೆಯಂ ಪರಿಹರಿಸೈ ಶಂಕರಾ ಸರ್ವೇಶ್ವರಾ ॥

ಚಿತ್ರಲೇಖೆ : ಆರ‌್ಯಪುತ್ರರೆ. ದೇಶ ಸಂಚಾರಾರ್ಥವಾಗಿ ಹೋಗಿದ್ದ ಬಾಲಕನು ಇನ್ನೂ ಬರಲಿಲ್ಲವಲ್ಲ ಕಾರಣವೇನು?

ಕುಬೇರ : ದೇವಿ ಯಾತಕ್ಕೆ ಯೋಚಿಸುವೆ, ಯಿಗೋ ಸುಕುಮಾರನು ಚಿಂತಾಕ್ರಾಂತನಾಗಿ ಬರುತ್ತಲಿರುವನು॥

ಗಯ : ಜನನೀ ಜನಕರಿಗೆ ವಂದಿಸುವೆನು.

ಕುಬೇರರಾಣಿ : ಕುಮಾರ ನಿನಗೆ ಮಂಗಳವಾಗಲಿ. ಸುಕುಮಾರನೆ ನೀನು ಕಾಂತಿಹೀನನಾಗಿ ಬಂದಿರಲು ಕಾರಣವೇನು?

ಕಂದ

ನಿಮ್ಮಾಜ್ಞೆಗಳೆಲ್ಲಕೆ ನಾಂ ಸಮ್ಮತಿಗೊಳದೆ
ಪೋದ ಮಾತ್ರಕೆ ಯನಗಂ ಅಮ್ಮನೆ
ಪ್ರಾಣಾಪತ್ತಂ ಬ್ರಂಹನು ತಂದಿಹನು
ಅದನು ಲಾಲಿಸು ಮಾತೇ ॥

ಗಯ : ಜನನೀ ನನ್ನ ದುರಾದೃಷ್ಟವನ್ನು ನಿನ್ನೊಡನೆ ಏನೆಂದು ಹೇಳಲಿ.

ಚಿತ್ರಲೇಖೆ : ಕುಮಾರ ಇದೇನು ಹೀಗೆ ಹೇಳುವೆ, ನಿನಗೆ ಸಂಭವಿಸಿದ ಪ್ರಾಣಾಪತ್ತೇನಿರುವುದು.

ಗಯ : ಜನನಿ, ನಿಮ್ಮಾಜ್ಞೆಯಂ ಮೀರಿ ಗಗನಚಾರಿಯಾಗಿ ಸಂಚರಿಸುವ ಕಾಲದಲ್ಲಿ ಯಮುನಾ ನದಿಯಲ್ಲಿ ಭಾಸ್ಕರನಿಗೆ ಅರ್ಘ್ಯವಂ ಕೊಡುತ್ತಲಿರ್ದ ಶ್ರೀಮನ್ನಾರಾಯಣನ ಕರದೋಳ್ ಯನ್ನ ಕುದುರೆಯ ಬಾಯ್ನರೆಯು ಬೀಳಲು, ಅದನ್ನು ಕಂಡ ಹರಿಯು ಇಂದಿಗೆ ಎಂಟು ದಿನಗಳೊಳಗಾಗಿ ಯನ್ನ ಕಂಠವನ್ನು ಕತ್ತರಿಸುವೆನೆಂದು ಪಂಥವಂ ಮಾಡಿರುವನು. ಜನನೀ ಮುಂದೇನು ಗತಿ.

ಕುಬೇರ : ಹಾ ವಿಧಿಯೆ ವೃಥಾ ವಿಪತ್ತು ಬಂದೊದಗಿತೆ.

ರಾಣಿ : ಅಯ್ಯೋ ಪುತ್ರ ಶೋಕದಿಂದ ಪೀಡಿತಳಾಗಿದ್ದ ಯನಗೆ ಪುನಃ ದುಃಖವು ಪ್ರಾಪ್ತವಾಯಿತೇ.

ಪದ

ಸುತನೇ ನಿನ್ನೆಂತೂ ನಾನಗಲಿ ಕ್ಷಿತಿಯೊಳಿರಲೀ
ಮತಿಹೀನಳಾದೆನಾಂ ಗತಿಯೇನು ನನಗೆ
ಚಿಕ್ಕಂದಿನಿಂದಲೂ ನಿನ್ನ ಅಕಟಾ ಮುನ್ನ ಅಕ್ಕರಿಂ
ಗಿಣಿ ಸಾಕಿ ಬೆಕ್ಕಿನ ಬಾಯ್ಗಿಕ್ಕಿ, ದುಃಖಾವ ಪಡುತಾನಾಂ
ವೆಕ್ಕಸಾಪಡುವೇ ॥ಸುತ ॥ಧರೆಯೊಳು ಶರಪುರ
ವರರಂಗೇಶಾ ತರಳಾನ ಹರಣವ ಉಳಿಸೋ ನೀ ಶ್ರೀಶಾ ಸುತನೇ ॥

ಚಿತ್ರಲೇಖೆ : ಅಯ್ಯೋ ಸುಕುಮಾರನೆ ನಿನ್ನ ಚಿಕ್ಕಂದಿನಿಂದಲೂ ಬಹು ರೀತಿಯಿಂದ ಸಾಕಿ ಅಕ್ಕರದಿಂದ ಸಾಕಿದ ಗಿಣಿಯನ್ನು ಬೆಕ್ಕಿನ ಬಾಯಿಗೆ ತುತ್ತಾಗಿ ಕೊಟ್ಟಂತಾಯಿತೇ ಕಂದ. ಶರಪುರದರಸನಾದ ಶ್ರೀ ರಮಣನೆ ಯನ್ನ ತರಳನಂ ಪೊರೆಯೊ ಕರುಣಾಕರ ॥

ಕುಬೇರ : ಶ್ರೀ ಕೃಷ್ಣನು ಪ್ರತಿಜ್ಞೆಯಂ ಮಾಡಿದ ಸಂಗತಿಯು ನಿನಗೆ ಹೇಗೆ ತಿಳಿಯಿತು.

ಗಯ : ತಂದೆಯೆ ಆಕಾಶವಾಣಿಯಿಂದ ತಿಳಿದುಬಂತು.

ಕುಬೇರ : ಅಯ್ಯೋ ವಿಧಿಯೆ ಹರಹರ ಏನು ಮಾಡಲಿ.

ಪದ

ಹಾ ಪಾಪಿಯಾದೆನೇ ತಾಪವ ಸೈಸೆ
ನಾಂ  ಯೀ ಪರಿ ಬಾಳ್ವೆಯಾ  ಕಾಪಾಡುವರಾರು ॥
ನೀರಜನಾಭನೂ ಯೀ ರೀತಿ ಗೈದನೂ ಮೂರು
ಲೋಕಾದಿ ಯಿನ್ನು  ಪೊರೆವರ ಕಾಣೆನೂ ॥

ಕುಬೇರ : ಅಯ್ಯೋ ಧನಪತಿಯೆಂದೂ ಉತ್ತರ ದಿಶಾನಾಥನೆಂದೂ ಬಿರುದಂ ಧರಿಸಿರುವ ನನಗೆ ಶ್ರೀರಂಗಧಾಮನೆ ಯಿಂಥಾ ಸಂಕಟಕ್ಕೆ ಗುರಿಮಾಡಿದೆಯಾ, ವಿಧಿಯೆ ನನ್ನಂಥ ಪಾಪಾತ್ಮನು ಇನ್ನಾರಿರುವರು.

ಗಯ : ಜನನೀ ಜನಕರೆ, ಅದೃಷ್ಟಹೀನನಾದ ನನಗಾಗಿ ನೀವೇಕೆ ವ್ಯಸನಪಡುತ್ತಲಿರುವಿರಿ.

ರಾಣಿ : ಆರ‌್ಯಪುತ್ರ ದಿಕ್ಪಾಲಕನಾದ ನೀನೂ ರಕ್ಷಿಸಲಾರೆಯಾ.

ಕುಬೇರ : ಕಾಂತೆ ಶ್ರೀಕೃಷ್ಣನು ಪ್ರತಿಜ್ಞೆಯಂ ಮಾಡಿರುವಾಗ್ಗೆ ಯಾರು ತಾನೆ ರಕ್ಷಿಸಲು ಸಾಧ್ಯ. ಇದೆಲ್ಲಾ ದೈವ ವಿಲಾಸವು. ನಾವು ದೇವತೆಗಳಾಗಿ ತಿಳಿಯದವರಂತೆ ಹಲುಬುವುದು ಉಚಿತವೇ ರಮಣಿ.

ರಾಣಿ : ಆರ‌್ಯಪುತ್ರನೆ, ಯಿನ್ನು ಸುಕುಮಾರನೆ ಯಂದು ಯಾರನ್ನು ಕರೆಯಲಿ.

ಪದ

ಇನಿತು ಚಿಂತಿಪರೆ ಮಾತೆ
ಯೀ ತನುವು ನಿತ್ಯ ಸ್ಥಿರವೆಂದೂ ॥
ನರಕಾಂತನೆ ಯನ್ನ ಶಿರ ಹರಿದರೆ ಭವ ದುರಿತ ಹರಿದು
ಪರಭವದಿ ದೊರಕುವುದು ॥

ಜನನ ಮರಣವಿವು ದಿನದಲಿರುತಿಹವು
ಜನಿಸಿದ ಪ್ರಾಣಿಗೆ ತನುವು ಸ್ಥಿರವಿಹುದೆ

ಧರೆಯೊಳಧಿಕ ಶರಪುರಿವರ ರಂಗನ
ನಿರುತ ಭಜಿಸುವಗೆ ದುರಿತವು ಹರಿವುದು

ಗಯ : ಜನನೀ ನೀನು ಯೀ ಪರಿಯಾಗಿ ದುಃಖಿಸುವರೆ. ಜನಿಸಿದ ಪ್ರಾಣಿಗೆ ಮರಣವು ಸ್ಥಿರವೆಂದು ಧರೆಯಲ್ಲಿ ಸರ್ವರಿಗೂ ತಿಳಿದೇ ಇದೆ. ಇಂಥಾದ್ದರಲ್ಲಿ ಶ್ರೀ ಹರಿಯೇ ಶಿರವಂ ತೆಗೆಯಲು ಶಪಥವಂ ಗೈದಿರುವಲ್ಲಿ ಭರದಲ್ಲಿ ಮೋಕ್ಷವು ದೊರಕುವುದು ನಾಂ ಧನ್ಯನಾದೆನು. ಇನ್ನು ಕಾಲವಂ ಕಳೆಯದೆ ಪ್ರಾಣವನ್ನು ಉಳಿಸಿಕೊಳ್ಳುವ ಪ್ರಯತ್ನವಂ ಮಾಡಬೇಕಾಗಿರುತ್ತದೆ. ಆತನ ಅವಧಿಯು ಸಮೀಪಿಸುತ್ತ ಬಂದಿರುವುದು. ನಾನೀಗಲೇ ಹೊರಡುತ್ತೇನೆ ॥

ರಾಣಿ : ಅಯ್ಯೋ ಸುಕುಮಾರನೆ ನಿನ್ನನ್ನು ಮರೆತು ಹೇಗೆ ಜೀವಿಸಲಿ.

ಗಯ : ಜನನೀ ನೀವುಗಳು ಯಾತಕ್ಕೆ ದುಃಖಿಸುವಿರಿ. ಯನ್ನ ಆಸೆಯಂ ತೊರೆದು ಬಿಡಿ.

ಚಿತ್ರಲೇಖೆ : ಪುತ್ರಾ ನಾನೇ ಆ ದಾನವಾಂತಕನ ಬಳಿಗೆ ತೆರಳಿ ಆತನ ಕಾಲುಗಳಿಗೆರಗಿ ನನಗೆ ಪುತ್ರದಾನವಂ ಕೊಡಬೇಕೆಂದು ಬೇಡಿಕೊಳ್ಳುತ್ತೇನೆ. ಭಕ್ತರಕ್ಷಕನಾದ ಶ್ರೀಹರಿಯು ಕರುಣವಿಟ್ಟು ನಿನ್ನನ್ನು ಕಾಪಾಡುವನು. ಪುತ್ರಾ ನಾನೀಗಲೇ ಹರಿಸನ್ನಿಧಿಗೆ ಹೋಗಿ ಬರುತ್ತೇನೆ.

ರಾಣಿ : ನಮೋನ್ನಮೋ ನಾರಾಯಣ

ಕೃಷ್ಣ : ನಿನಗೆ ಮಂಗಳವಾಗಲಮ್ಮ ಚಿತ್ರಲೇಖೆ. ಅಮ್ಮಾ ಗಂಧರ್ವಸತಿ, ಇಷ್ಟು ಗಾಬರಿಯಿಂದ ಯನ್ನೆಡೆಗೆ ಬರಲು ಕಾರಣವೇನು ತಿಳಿಸಮ್ಮಾ ಚಿತ್ರಲೇಖೆ.

ರಾಣಿ : ಭಕ್ತ ರಕ್ಷಕ. ಯನ್ನ ವಿಜ್ಞಾಪನೆಯನ್ನು ಚಿತ್ತವಿಟ್ಟು ಲಾಲಿಸಬೇಕಾಗಿ ಪ್ರಾರ್ಥಿಸುತ್ತೇನೆ.

ಪದ

ಹರಿಯೇ ಮನ್ನಿಸು ತಪ್ಪ ದೊರೆಯೇ
ವರಸುತ ಗಯನನ್ನು ಶಿರವ ಹರಿಯುವೆನೆಂದು
ಪರಿಭಾಷೆ ಮಾಳ್ಪುದು, ತರವೇ
ಶ್ರೀಹರಿ ನಿಮಗೆ ॥ಹರಿಯೇ॥

ಚಿತ್ರಲೇಖೆ : ಹೇ ಪರಮ ಪುರುಷ. ನನ್ನ ಪುತ್ರನಾದ ಗಯನು ಅರಿಯದೆ ತಮ್ಮಡಿಗೆ ಮಾಡಿದ ಅಪರಾಧಕ್ಕಾಗಿ ಆತನ ಶಿರವನ್ನು ಹರಿಯುವೆನೆಂದು ಕಠೋರ ಶಪಥವನ್ನು ಮಾಡಿದರೆ ಯೀ ಧಾತ್ರಿಯಲ್ಲಿ ನಮ್ಮನ್ನು ಕಾಪಾಡುವರಾರು. ಕರುಣವಿಟ್ಟು ಕುಮಾರನನ್ನು ರಕ್ಷಿಸಬೇಕಾಗಿ ತಮ್ಮಡಿದಾವರೆಗಳಿಗೆರಗಿ ಬೇಡಿಕೊಳ್ಳುತ್ತೇನೈ ದಾನವಾಂತಕ.

ಪದ

ಕಂದಾ ಮಾಡಿದ ತಪ್ಪು ಕುಂದುಗಳೆಣಿಸದೇ
ಮಂದಹಾಸದಿ ಸಲಹೊ ಇಂದಿರೆವಲ್ಲಭ ॥ಹರಿಯೇ ॥

ರಾಣಿ : ಹೇ ಮಧುಸೂದನ. ವಿಧವರಿಯದೆ ತಾವು ಯನ್ನ ಕುವರನ ಅಪರಾಧಗಳಂ ಮನ್ನಿಸಿ ಕೃಪೆಯಿಂದ ಕಾಪಾಡಬೇಕಾಗಿ ಬೇಡಿಕೊಳ್ಳುತ್ತೇನೈ ಶ್ರೀಹರಿ ದಾನವಾರಿ.

ಪದ

ಅರಿಯದೆ ಮಾಡಿದ ತರಳನಪರಾಧವ
ಮರೆತು ಮನ್ನಿಸಿ ಸಲಹೊ ಮಾರಜನಕ ನೀನು ॥ಹರಿಯೇ ॥

ಚಿತ್ರಲೇಖೆ : ಹೇ ದೇವ ದೇವ. ಭಕ್ತ ರಕ್ಷಕನೆಂಬ ಬಿರುದಂ ಧರಿಸಿರುವ ನೀನು ಅರಿಯದ ಅಜ್ಞಾನಿಯಾದ ಯನ್ನ ಕುಮಾರನು ಮಾಡಿದ ಅಪರಾಧಗಳಂ ಮನ್ನಿಸಿ. ಸುಕುಮಾರನಾದ ಗಯನಿಗೆ ಪ್ರಾಣದಾನವಂ ಮಾಡಿ ಕರುಣೆಯಿಂದ ಕಾಪಾಡಬೇಕಾಗಿ ನಿಮ್ಮನ್ನು ಪ್ರಾರ್ಥಿಸುವೆನೈ ದೇವ ಮಹಾನುಭಾವ.

ಪದ

ಯಾತಕೆ ಪೇಳುವೆ ಪ್ರೀತಿಯಿಂದಲಿ ಯನಗೆ
ಹತವ ಮಾಡದೆ ಬಿಡೆನು ಪಾತಕಿ ಗಯನನು ಕೇಳಲೆ ॥ಯಾತಕೆ ॥

ಮಾಡಿದ ಭಾಷೆಗೆ ರೂಢಿಯೊಳ್ ತಪ್ಪುವರೇ
ಸಲೆ ಆಡದಿರು ಯೀ ಮಾತ ಗಾಢದಿ ತೆರಳಲೆ ನೀನೀಗ   ॥ಯಾತಕೆ ॥

ಶ್ರೀಕೃಷ್ಣ : ಅಮ್ಮಾ ಕುಬೇರನ ಪತ್ನಿ. ನೀನೆಷ್ಟು ಪರಿಯಿಂದ ಬೇಡಿಕೊಂಡರೂ ಯನಗೆ ಕರುಣವು ಬರಲರಿಯದು. ನಾನು ಯದುಕುಲೋತ್ಪನ್ನನಾಗಿ ಮಾಡಿದ ಭಾಷೆಗೆ ತಪ್ಪಿದರೆ ಯೀ ರೂಢಿಯ ಜನರೆಲ್ಲಾ ಅಪಹಾಸ್ಯವಂ ಮಾಡುವುದಿಲ್ಲವೆ. ಆದ್ದರಿಂದ ಇಂಥಾ ಮರುಳು ಮತನ್ನಾಡದೆ ತೆರಳುವಳಾಗಮ್ಮ ಗಂಧರ್ವ ಪತ್ನಿ.

ಪದ

ಪೊಡವಿ ಶರಪುರದರಸ ಒಡೆಯ ಶ್ರೀರಂಗನಾಣೆ
ನೀ ಹಡೆದ ಸುತನನು ನಾನು ಕೊಡುವೆ ಚಕ್ರಕೆ ಬಲಿಯ॥ಯಾತಕೆ ॥

ಕೃಷ್ಣ : ಅಮ್ಮಾ ಚಿತ್ರಲೇಖೆ. ಯೀ ಪೊಡವಿಯ ಮಧ್ಯದಲ್ಲಿ ಪರಿಶೋಭಿಸುವ ಶರಪುರ ಅರಸನಾದ ಶ್ರೀ ರಂಗಧಾಮನ ಪಾದದಾಣೆಗೂ ನಿನ್ನ ಮಗನಾದ ಗಯನನ್ನು ಯನ್ನ ಹಸ್ತದೋಳ್ ಕಂಗೊಳಿಪ ಚಕ್ರಾಯುಧಕ್ಕೆ ಬಲಿಯಂ ಕೊಡುತ್ತೇನೆ. ನೀನು ಪರಿಪರಿಯಾಗಿ ವ್ಯಸನಪಟ್ಟರೆ ಫಲವಿಲ್ಲ. ಬಂದ ದಾರಿಯಂ ಹಿಡಿದು ತೆರಳಬಹುದಮ್ಮಾ ಕುಬೇರನ ಸತಿ ಮಾಡುವೆ ಗಯನನ್ನು ಹತಿ.

ಕಂದ

ಮರಣವು ವದಗುವ ಕಾಲಕೆ ನರರಿಂಗಿತ್ಯಾದಿ
ಔಷಧಿಯು ವಿಷವಾಗುತೆ ಮೇಣ್
ಹರುಷವ ಕಾಣದೆ ಬಳಲುವ ಪುರುಷರ
ಕೈಬಿಡುವರು ಸುರರೆಲ್ಲರು ಸತ್ಯಂ ॥

ಗಯ : ಆಹಾ ಮರಣ ಕಾಲಕ್ಕೆ ಮದ್ದಿಲ್ಲ. ಕೆಟ್ಟವರಿಗೆ ದೇವರೇ ಗತಿಯೆಂಬ ಗಾದೆಯು ನನಗೆ ತಿಳಿಯಿತು. ವಳ್ಳೆಯದು. ನಾನೀಗಲೇ ಕೈಲಾಸಕ್ಕೆ ಹೋಗಿ ಜಗನ್ಮಾತೆಯಾದ ಪಾರ್ವತಿಗಾದರೂ ಮರೆಬೀಳುವೆನು.

ಪದ

ಶ್ರೀ ರಾಜರಾಜೇಶ್ವರಿ ಸುರವರಾರ್ಚಿತ ಶಂಕರೀ
ಶರ್ವಾಣಿ ಗೀರ್ವಾಣಿ ಪರ್ವತ ಪುತ್ರಿಯೆ
ಪಾರ್ವತಿ ಯನ್ನನ್ನು ಪೊರೆ ಬೇಗ ಶಂಕರಿ ॥

ಮರೆಹೊಕ್ಕೆ ನಾ ನಿಮ್ಮ ಭರದಿಂದ ರಕ್ಷಿಸು
ಕರುಣದಿಂದೀಗಾ ನೀ ಸರಸಾದಿ ಪಾಲಿಸು ॥

ಧಾತ್ರಿಯೋಳ್ ಶರಪುರಿ ಕ್ಷೇತ್ರಾದಿ ನೆಲಸಿಹ
ಧಾತ್ರೀಶ ರಂಗನ ಮಿತ್ರಾನ ರಾಣಿಯೆ
ಶ್ರೀ ರಾಜರಾಜೇಶ್ವರಿ ॥

ಗಯ : ಜಗದಂಬೆಯೆ ಕಾಪಾಡು ಕಾಪಾಡು.

ಪಾರ್ವತಿ : ಯಲೈ ಬಾಲಕನೆ. ನೀನು ಯಾರು. ಯಾವ ಕಾರ್ಯಕ್ಕಾಗಿ ಬಂದಿರುವೆ ಹೇಳು ಭಯಪಡಬೇಡ ॥

ಗಯ : ಲೋಕಮಾತೆ ಯನ್ನ ವಿಜ್ಞಾಪನೆಯನ್ನು ಲಾಲಿಸು.

ಪದ

ಪಾಲಿಸೆಮ್ಮಾ ಶೈಲಬಾಲೆ  ಫಾಲಲೋಚನನ ಸತಿಯೆ ॥
ಬಾಲನನ್ನು ಲೀಲೆಯಿಂದ ವ್ಯಾಳಭೂಷಣನಾ ಪ್ರಿಯೆ ॥

ಕಮಲವದನೆ ಪಾಲಿಸೆನ್ನ ಭ್ರಮರ ಕುಂತಳೆ
ವಿಮಲ ಚರಣಕೀಗ ಮಣಿವೆ –
ಸುಮಶರಾರಿ ಪ್ರಿಯಳೆ ಯನ್ನ ॥

ಧರೆಶರಪುರಿವರದ ರಂಗನ ಪರಮ ಮಿತ್ರನಾ
ಸರಸ ಪ್ರೀತಿಯರಸಿಯೆನಿಪ  ವರದೆ ಶಂಕರೀ ॥

ಗಯ : ಅಮ್ಮಾ ಜಗನ್ಮಾತೆ. ನಾನು ದಿಕ್ಪಾಲಕನಾದ ಕುಬೇರನ ಸುತ ಗಯನು. ಶರಣಾಗತನಾಗಿ ಬಂದು ನಿಮ್ಮನ್ನು ಮರೆ ಹೊಕ್ಕಿರುವೆನು. ಕಾಪಾಡುವೆನೆಂದು ಅಭಯವಿತ್ತರೆ ಯನ್ನ ವೃತ್ತಾಂತವಂ ಹೇಳುತ್ತೇನೆ. ಇಲ್ಲವಾದರೆ ಈ ಖಡ್ಗದಿಂದ ನಿನ್ನೆದುರಿನಲ್ಲಿ ಪ್ರಾಣತ್ಯಾಗವಂ ಮಾಡಿಕೊಳ್ಳುವೆನು. ಕಾಪಾಡು ಜನನಿ ॥

ಪಾರ್ವತಿ : ಪುತ್ರನೆ ನಾನಿರುವುದೇ ಶರಣಾಗತರಂ ರಕ್ಷಿಸುವದಕ್ಕೆ ಅಲ್ಲದೆ ಅನ್ಯಥಾ ಇಲ್ಲಾ. ನಿನಗೆ ಯಂತಹ ವಿಪತ್ತು ಸಂಭವಿಸಿದ್ದರೂ ಪರಿಹರಿಸುತ್ತೇನೆ ಸಂಶಯವಿಲ್ಲದೆ ನಿರೂಪಿಸುವನಾಗು ॥

ಗಯ : ಲೋಕಮಾತೆ. ನಾನು ಗಗನದಲ್ಲಿ ತುರುಗಾರೂಢನಾಗಿ ಸಂಚರಿಸುತ್ತಿರುವ ಕಾಲದಲ್ಲಿ ಯಮುನೆಯಲ್ಲಿ ಸೂರ್ಯನಿಗೆ ಅರ್ಘ್ಯವಂ ಕೊಡುತ್ತಲಿರ್ದ ಶ್ರೀ ಕೃಷ್ಣನ ಕರದೋಳ್ ಯನ್ನ ಕುದುರೆಯ ಬಾಯ್ನರೆಯು ಬೀಳಲು ಇನ್ನೆಂಟು ದಿನಗಳೊಳಗಾಗಿ ಯನ್ನ ಕಂಠವಂ ಕತ್ತರಿಸುವೆನೆಂದು ನಾರಾಯಣನು ಪ್ರತಿಜ್ಞೆಯಂ ಮಾಡಿರುವನು. ಆದ್ದರಿಂದ ನಿನ್ನಂ ಮರೆಹೊಕ್ಕಿರುವೆನು. ಜಗನ್ಮಾತೆಯಾದ ನೀನು ಯನ್ನಂ ರಕ್ಷಿಸಿ ಖ್ಯಾತಿಯಂ ಪಡೆಯಬೇಕೆಂದು ಬೇಡಿಕೊಳ್ಳುವೆನಮ್ಮಾ ಜನನಿ ಸೌಖ್ಯ ಪ್ರದಾಯಿನಿ॥

ಪಾರ್ವತಿ : ಆಹಾ ಮುಂದೇನು ಗತಿ. ಶ್ರೀ ಕೃಷ್ಣನೇ ಕೊಲ್ಲುವೆನೆಂದು ಪ್ರತಿಜ್ಞೆಯಂ ಮಾಡಿರುವಾಗ್ಗೆ ರಕ್ಷಿಸುವುದಕ್ಕೆ ಯಾರಿಂದ ತಾನೇ ಸಾಧ್ಯವಾದೀತು. ಯಾವ ವಿಧದಿಂದ ಇವನಂ ರಕ್ಷಿಸಲಿ (ಆಲೋಚಿಸಿ) ವಳ್ಳೆಯದು ಯನ್ನ ಹೃದಯ ವಲ್ಲಭನಿಗೆ ಹೇಳಿ ಇವನನ್ನು ರಕ್ಷಿಸುವ ಉಪಾಯವಂ ಮಾಡುತ್ತೇನೆ॥

ಪಾರ್ವತಿ : ಅಗೋ ಪ್ರಾಣಕಾಂತನು ಇತ್ತಲೇ ಬರುತ್ತಿರುವರು. ಪ್ರಾಣೇಶ್ವರ ನಮಸ್ಕರಿಸುವೆನು ॥

ಈಶ್ವರ : ಸನ್ಮಂಗಳಾನಿ ಭವಂತು ಪ್ರಾಣೇಶ್ವರಿ. ಯೀ ಬಾಲಕನಾರು, ಯಾವ ಕಾರ‌್ಯನಿಮಿತ್ತವಾಗಿ ಬಂದಿರುತ್ತಾನೆ, ವಿಚಾರವೇನು ತಿಳಿಸು ॥

ಪಾರ್ವತಿ : ಶಂಕರ, ಯಿವನು ಕುಬೇರನ ತನಯನಾದ ಗಯನು. ಶ್ರೀ ಕೃಷ್ಣನು ಇವನನ್ನು ಕೊಲ್ಲುವೆನೆಂದು ಶಪಥವಂ ಮಾಡಿರುವನಂತೆ. ಅದಂ ತಿಳಿಯದೆ ನಾನು ರಕ್ಷಿಸುವೆನೆಂದು ಇವನಿಗೆ ಅಭಯವಂ ಕೊಟ್ಟಿರುತ್ತೇನೆ. ನೀವೇ ಕಾಪಾಡಬೇಕಾಗಿ ಬೇಡುತ್ತೇನೆ.

ಈಶ್ವರ : ದೇವಿ ಯೀ ಬಾಲಕನ ಶಿರವಂ ಹರಿಯುವೆನೆಂದು ಸಿರಿವರನು ಪ್ರತಿಜ್ಞೆಯಂ ಮಾಡಿರುವನು. ಮೊದಲು ಯಿವನನ್ನು ಕಳುಹಿಸು ॥

ಪಾರ್ವತಿ : ಶಂಕರಾ ಶರಣಾಗತ ರಕ್ಷಕನೆಂಬ ಬಿರುದಂ ಧರಿಸಿರುವ ಮೂರ್ತಿಯೆ ಶರಣು ಹೊಕ್ಕವರನ್ನು ಪೊರೆಯಬೇಕಲ್ಲದೆ ಬಿಡಲಾಗದು. ನಾನು ಪಾಲಿಸುವೆನೆಂದು ಮೊದಲೇ ಇವನಿಗೆ ವಾಗ್ದಾನ ಮಾಡಿರುತ್ತೇನೆ. ನೀ ಕರುಣವಿಡದಿದ್ದ ಪಕ್ಷದಲ್ಲಿ ನಾನು ಹರಣವಂ ತೊರೆಯುತ್ತೇನೆ.

ಈಶ್ವರ : ದೈವನೇಮಕವಂ ಮೀರುವುದು ಅಸಾಧ್ಯವೆಂದು ತಿಳಿದಿದ್ದಾಗ್ಯೂ ಅರ್ಧಾಂಗಿಯಾದ ನಿನ್ನ ಮಾತಂ ಮೀರಲಾರೆ. ಪರಿಗ್ರಹಿಸಬೇಕಾಯಿತು.

ಕಂದ

ಕಲ್ಲಿನ ತೆರದೊಳು ಹೃದಯವು
ಉಳ್ಳಹ ಪುರುಷನ ಮನವನು ಕ್ಷಣ
ಮಾತ್ರದೊಳು ವಳ್ಳೆಯ ಮಾತುಗಳಿಂದಲಿ ಪ
ಲ್ಲವ ಪಾಣಿಯರು ಬೇಗ ತಿದ್ದುವರಬಲೇ ॥

ಈಶ್ವರ : ಆಹಾ ಸ್ತ್ರೀಯರ ಬುದ್ಧಿಯು ಅತಿ ಕೌಶಲವಾದುದು ನೋಡು. ಕಲ್ಲಿನೋಪಾದಿಯಲ್ಲಿದ್ದ ನನ್ನ ಹೃದಯವನ್ನು ಎಷ್ಟು ಬೇಗನೇ ನಿನ್ನ ಇಷ್ಟಕ್ಕೆ ಮಾಡಿಕೊಂಡೆಯಲ್ಲಾ ಪಾರ್ವತಿ.

ಪಾರ್ವತಿ : ನಿಮ್ಮಂಥವರೇ ಸ್ತ್ರೀಯರ ಮಾತಿಗೆ ಮರುಳಾಗುತ್ತಿರುವಲ್ಲಿ ನರರು ಮರುಳಾಗುವದೇನು ಆಶ್ಚರ‌್ಯ. ನಾರಿಯರ ಚೈತನ್ಯವಂ ಎಷ್ಟೆಂದು ಹೇಳಬೇಕು ॥

ಈಶ್ವರ : ಯಲೈ ಗಯನೆ ಇಲ್ಲಿ ಬಾ. ನಿನಗೆ ನಾರದ ಮಂತ್ರವನ್ನು ಉಪದೇಶ ಮಾಡುವೆನು. ಆ ಮಂತ್ರವನ್ನು ಯೇಕಚಿತ್ತ ಮನೋಭಾವದಿಂದ ಪಠಿಸಿದರೆ ನಾರದರು ಬರುವರು. ನೀನು ಅವರಿಗೆ ಶರಣಾಗತನಾಗಿ ವಿಚಾರವನ್ನು ತಿಳಿಸು. ಆತನು ನಿನ್ನನ್ನು ರಕ್ಷಿಸುವನು. ಮಂತ್ರವನ್ನು ಉಪದೇಶ ಮಾಡುತ್ತೇನೆ ಇಲ್ಲಿ ಬಾ.

(ಈಶ್ವರನಿಂದ ಮಂತ್ರೋಪದೇಶ)

 

ಗಯ : ನಾಂ ಕೃತಾರ್ಥನಾದೆ ಮಹಾದೇವ. ನಮಸ್ಕರಿಸುವೆನು. ಲೋಕಮಾತೆ ನಮಸ್ಕರಿಸುವೆನು. ಅಪ್ಪಣೆಯಾದರೆ ಹೋಗಿ ಬರುತ್ತೇನೆ.

ಕಲ್ಯಾಣಮಸ್ತು ಹೋಗಿ ಬಾ ಗಂಧರ್ವ ಕುಮಾರ.