ಪದ

ಕಾರಣವೇನಿಂತು ಕ್ರೂರತ್ವ ನಿಮ್ಮೊಳಗೆ ಸೇರಿ
ಭೇದವು ತೋರೆ ಯಾರಿಂದಲಾದುದು.

ಈಶ್ವರ : ವಾರಿಜಾಕ್ಷ ಪಾಂಡವರ ಪಕ್ಷ. ಮಮ ಪ್ರಾಣಾಹಿ ಪಾಂಡವ ಎಂಬ ಬಿರುದಂ ಧರಿಸಿ ಪಾಂಡವರ ಪಂಚ ಪ್ರಾಣವೇ ನೀನಾಗಿದ್ದು ಯಿಂದಿನ ದಿನ ಯಿಂಥಾ ಕ್ರೂರತ್ವವು ನಿಮಗೆ ತೋರಿ ಬಂದ ಕಾರಣವೇನು. ಯಾರಿಂದ ಯೀ ವಿಘಾತ ಸಂಭವಿಸಿತು. ಅದಂ ಮಾಜದೆ ಯನ್ನೊಳು ಪೇಳುವರಾಗಿರೈ ಕೃಷ್ಣಾರ್ಜುನರೇ ಪರಾಕ್ರಮಾನ್ವಿತರೇ ॥

ಪದ

ಲಾಲಿಸು ನೀಂ ಶಂಕರನೇ ಪೇಳ್ವೆ ನಾನು ನಿನ್ನೊಳಿದನೇ ॥
ಲೀಲೆಯಿಂದ ಯಮುನೆ ಜಲದಿ ಬಾಲ ಸೂರ‌್ಯ ಅರ್ಘ್ಯ ಕೊಡುತಿರೆ ಲಾಲಿಸು ॥
ದುರುಳನಾದ ಗಯನು ಎಂಬುವ ತುರುಗವೇರಿ ವ್ಯೋಮ ಪಥದಿ
ಭರದಿ ಪೋಪ ವೇಳೆಯೊಳಗೆ ತುರುಗ ಬಾಯ್ನರೆ ಕರಕೆ ಬೀಳೆ ॥

ಕೃಷ್ಣ : ಪರಶಿವ ಮೂರ್ತಿಯೆ, ನಾಂ ಪೇಳ್ವ ಮಾತನ್ನು ಲೀಲೆಯಿಂದ ಲಾಲಿಸಬೇಕು. ನಾನು ಯಮುನಾ ನದಿ ಜಲದೋಳ್ ಮಿಂದು ಅರುಣೋದಯದಲ್ಲಿ ಸೂರ್ಯನಿಗೆ ಅರ್ಘ್ಯವಂ ಕೊಡುತ್ತಿದ್ದ ಕಾಲದಲ್ಲಿ ದುರುಳನಾದ ಗಯನು ತುರುಗಾರೂಢನಾಗಿ ಗಗನ ಮಾರ್ಗದಲ್ಲಿ ಪೋಗುತ್ತಿರುವ ವೇಳೆಯಲ್ಲಿ  ಕುದುರೆಯ ಬಾಯ್ನರೆಯು ಯನ್ನ ಕರದೋಳ್ ಬೀಳಲು ಯನ್ನ ವ್ರತಭಂಗವಾಯಿತೆಂದು ಕೋಪಗೊಂಡೆನಯ್ಯ ಶಂಕರ.

ಪದ

ಕನಲಿ ಅವನ ಶಿರವ ನಾನು ದಿನವು ಎಂಟರೋಳ್
ತೆಗೆವೆನೆಂದು ಘನದಿ ಪಂಥಗೈದು ಇಹೆನು ಮನ್ಮಥಾರಿ ಯಿನಿತು ದೃಢವು

ಕೃಷ್ಣ : ಪರಮೇಶ್ವರ ನಾನು ಮಹಾ ಕೋಪದಿಂದ ಯನಗೆ ಅಪಚಾರವಂ ಗೈದ ಆ ದುರುಳನ ಶಿರವಂ ದಿನ ಎಂಟರೊಳಗೆ ತೆಗೆಯುವೆನೆಂದು ಪಂಥವಂ ಗೈದಿಹೆನು. ಮನುಮಥಾರಿಯೇ ಇದೇ ನನ್ನ ಸಂಕಲ್ಪವು.

ಯೀಶ : ನಿನ್ನ ಮನೋಭಾವವೇನೈ ಪಾರ್ಥ.

ಪದ

ನಾನು ಪೇಳ್ವೆ ಬಿನ್ನಪಾ ನೀನು ಕೇಳ್ ಪ್ರಮಥಾಧಿಪಾ ॥
ವನದಿ ನಾನು ಚರಿಪ ಪೇಳೆ ಧನಪ ತನುಜ
ಗಯನು ಬಂದ ಪಾಲಿಸೆನ್ನನೆನುತಲಿ  ಕಾಲಿಗೆರಗೆ ಮರುಗಿ
ನಾಂ ಪಾಲಿಪೆನೆಂದಭಯವಿತ್ತೆ ಶೂಲಧರನೆ ಅರಿಯದೇ ॥

ಅರ್ಜುನ : ಮಹಾದೇವನೆ, ನಾಂ ಪೇಳುವ ವಿಜ್ಞಾಪನೆಯನ್ನು ಪ್ರೀತಿಯಿಂದ ಲಾಲಿಸುವನಾಗು. ವನದೋಳ್ ನಾನು ಚಲಿಸುತ್ತಿರುವ ವೇಳೆಯೋಳ್ ಧನಪತಿಯ ಸುತನಾದ ಗಯನೆಂಬ ಗಂಧರ್ವನು ಬಂದು ಯನ್ನಂ ಪೊರೆಯಬೇಕೆಂದು ಚರಣಕ್ಕೆ ಯರಗಿ ಪರಿಪರಿಯಿಂದ ಮೊರೆಯಿಟ್ಟನು. ಯನಗೆ ಕರುಣವು ಹುಟ್ಟಿ ಪರಿಯೇನೆಂಬುದನ್ನು ವಿಚಾರಿಸದೆ ಕಾಪಾಡುವೆನೆಂದು ಅಭಯವಂ ಕೊಟ್ಟೆನೈ ಶಂಕರಾ ನಾ ನಿಮ್ಮ ಕಿಂಕರಾ.

ಪದ

ಹರಿಯ ವೈರಿಯೆಂಬ ಪರಿಯು ತಿರುಗಿ ಯನ್ನೊಳ್ ವರೆದನೂ
ಅರಸು ಧರ್ಮ ತೊರೆಯದಂತೆ ಹರಿಯೋಳ್ ಧುರವು ದೊರಕಿತೈ ॥

ಅರ್ಜುನ : ಪರಶಿವ ಮೂರ‌್ತಿಯೆ. ಗಯನ ಪರಿಯಂ ವಿಚಾರಿಸುವಲ್ಲಿ ತಾನು ಹರಿಯ ವೈರಿಯಂಬುದಾಗಿ ಅರುಹಿದನು. ನಾನು ಕ್ಷತ್ರಿಯನಾಗಿ ಕೊಟ್ಟ ವಚನಕ್ಕೆ ತಪ್ಪಲಾಗದೆ ಹರಿಯೋಳ್ ಧುರವನ್ನೆಸಗಲು ನಿಂತಿರುವೆನೈ ಪರಮೇಶ. ಇದೇ ವನದ ಕ್ಲೇಶಾ ॥

ಯೀಶ : ಆಹಾ ಚನ್ನಾಯಿತು. ಯಲೈ ಕೃಷ್ಣಾರ್ಜುನರೆ ವಳ್ಳೆಯ ಪಂಥವಂ ಮಾಡಿರುವಿರಿ. ನಾನು ಮೆಚ್ಚಿದೆ. ಯಲೈ ನಾರಾಯಣನೆ ಯೀರೇಳು ಲೋಕವಂ ನಿನ್ನ ಕುಕ್ಷಿಯಲ್ಲಿಟ್ಟುಕೊಂಡು ರಕ್ಷಿಸುವ ಶ್ರೀ ಹರಿಯೆ ನಿನ್ನ ಕಿಂಕರನಾದ ಅರ್ಜುನನೊಡನೆ ಯುದ್ಧವಂ ಮಾಡುವದು ಯಾವ ಧರ್ಮ ಸಾಕು ಸಾಕು ನಿಲ್ಲಿಸು. ಯಲೈ ಧನಂಜಯನೆ, ನಿಮ್ಮ ಐವರ ಪ್ರಾಣಕ್ಕೆ ಹೊಣೆಯೆಂದು ತಲೆಯಲ್ಲಿ ಹೊತ್ತು ನಿಮ್ಮನ್ನು ನಿರುತವೂ ಕಾಪಾಡುತ್ತಿರುವ ಧನುಜಾರಿಯಾದ ಮನುಮಥ ಜನಕನೋಳ್ ಬಂಧುತ್ವದಲ್ಲಿ ಯೀ ಪರಿ ರೋಷಾಬದ್ಧವಾಗಿ ಯುದ್ಧವಂ ಮಾಡುವದು ಸರಿಯೇ ಸಾಕು ಬಿಡು ಬಿಡು.

ಯೀಶ : ಸಿರಿಯರಸನೆ ಯೀ ಮನೋಕ್ಲೇಶವಂ ಬಿಟ್ಟು ನರನಂ ಕ್ಷಮಿಸು.

ಕೃಷ್ಣ : ಮೃತ್ಯುಂಜಯನೆ ನಾನು ಮಾಡಿರುವ ಪಂಥವು ಚ್ಯುತಿ ಬಾರದಂತೆ ಗಯನ ಶಿರವಂ ತೆಗೆಯುವುದೇ ನನ್ನ ಮನೋಗತವಾಗಿರುವುದು.

ಶಿವ : ಯಲೈ ಗಾಂಡೀವಿಯೆ, ಯೀಗ ನಿನ್ನ ಅಭಿಮತವೇನು.

ಅರ್ಜುನ : ಚಂದ್ರಶೇಖರ, ಕ್ಷಾತ್ರಿಯ ಪದ್ಧತಿಯ ಪ್ರಕಾರ. ನಾನು ಕೊಟ್ಟಿರುವ ಭಾಷೆಯು ಹೋಗದಂತೆ ಆ ಗಯನ ಪ್ರಾಣವಂ ಉಳಿಸುವುದೇ ನನ್ನ ಮನೋಗತವಾಗಿರುವುದು.

ಈಶ್ವರ : ಯಲೈ ನರನಾರಾಯಣರೆ, ನಿಮ್ಮೀರ್ವರ ಪಂಥಗಳೂ ಕಿಂಚಿತ್ತೂ ಲೋಪಬಾರದ ಹಾಗೆ ನೆರವೇರುವ ಪರಿಯನ್ನೊರೆಯುವೆನು. ಅದರಂತೆ ನೀವು ನಡೆಸುವಿರೊ.

ಕೃಷ್ಣ : ನನ್ನ ಸಂಕಲ್ಪವಂ ನೆರವೇರಿಸಿಕೊಡಲು ಬದ್ಧ ಕಂಕಣನಾಗಿರುವಲ್ಲಿ ನಾಂ ಬೇಡವೆನುವೆನೆ ಅಗತ್ಯವಾಗಿ ಆಗಬಹುದು.

ಅರ್ಜುನ : ಪರಶಿವ ಮೂರ‌್ತಿಯೆ, ನೀನು ಕರುಣದಿಂದ ಯನ್ನ ಪಂಥವಂ ಲೋಪಬಾರದಂತೆ ನೆರವೇರಿಸಿ ಕೊಡಲು ನೀವು ವಪ್ಪಿದರೆ ನಾಂ ಬೇಡವೆನ್ನುವೆನೆ ಸಾಂಬ ಸೌಭಾಗ್ಯ ಕದಂಬ.

ಪದ

ಒರೆವೆ ಕೇಳು ನಾನೀಗ ಹರಿನರರಿಗೆ ಬಲುಬೇಗಾ ॥
ಉಭಯರ ಪಂಥವು ವಿಭವದಿ ಗೆಲ್ಲುವ
ಶುಭೋದಯವನೀ  ವಿಬುಧರು ಲಾಲಿಸಿ ॥ವರವೇ ॥

ಈಶ್ವರ : ಯಲೈ ನರನಾರಾಯಣರೆ, ನಾನೊಂದು ಮಾತನ್ನು ಹೇಳುವೆನು ಕೇಳುವರಾಗಿರಿ. ನಿಮ್ಮ ಉಭಯರ ಪಂಥವು ಶುಭವಾಗಿ ಗೆಲ್ಲುವಂತೆ ನಾನು ಯೋಚಿಸಿರುವೆನು. ಅದನ್ನು ನೀವು ಮನವಿಟ್ಟು ಲಾಲಿಸುವರಾಗಿರಿ.

ಪದ

ಶಿರಕೆ ಬದಲು ಆ ಶಿರದ ಕಿರೀಟವ ಹರಿಸಲು
ಹರಿ ಪಂಥವು ಸರಿಹೋಯಿತು॥॥

ಈಶ : ಯಲೈ ಪುರುಷೋತ್ತಮನೆ. ನೀನು ಗಯನ ಶಿರವಂ ತೆಗೆಯುವೆನೆಂದು ಶಪಥವಂ ಗೈದಿರುವುದು ಸರಿಯಷ್ಟೆ. ಆ ಶಿರಕ್ಕೆ ಬದಲಾಗಿ ಆ ಶಿರದೋಳ್ ಧರಿಸಿರುವ ಕಿರೀಟವಂ ಕೆಡಹಿದಲ್ಲಿ ನಿನ್ನ ಸಂಕಲ್ಪವು ನೆರವೇರಿದಂತಾಯಿತು. ಯಿದಕ್ಕೆ ದುಡುಕು ಕದನವೇತಕ್ಕೆ ಬಿಡು ಬಿಡು.

ಕೃಷ್ಣ : ಪುರಹರನೆ ನಿನ್ನ ವಚನಕ್ಕೆ ನಾಂ ಇಷ್ಟಪಟ್ಟೆನು ಕಪಟವಂ ಬಿಟ್ಟೆನು.

ಪದ

ನರನೆ ಗಯನ ನೀ ಪೊರೆವೆನೆಂದಭಯವ ಭರದಿ
ಕೊಟ್ಟುದಕೆ ಹರುಷದಿ ಬದುಕಿದ ವರವೆ ಕೇಳಿ ॥

ಶಿವ : ಯಲೈ ಅರ್ಜುನನೆ, ನೀನು ಗಂಧರ್ವನಾದ ಗಯನ ಶಿರವಂ ಉಳುಹುವೆನೆಂದು ಭರವಸೆಯಂ ಕೊಟ್ಟಿದ್ದು ಸರಿಯಷ್ಟೆ. ಆ ಗಯನ ಶಿರಕ್ಕೆ ಕೊರತೆಯುಂಟಾಗದಂತೆ ಅವನು ಭುವಿಯೋಳ್ ಬದುಕಿದರೆ ನಿನ್ನ ಸಂಕಲ್ಪವು ನೆರವೇರುವುದು ತಾನೇ.

ಅರ್ಜುನ : ಮಹಾದೇವನೆ. ಅಷ್ಟೇ ನನ್ನ ಮನದ ದೃಢ. ಅದರಂತೆ ಗಯನ ಶಿರವು ಉಳಿದರೆ ಅದು ನಿಮ್ಮ ಕೃಪಾದೃಷ್ಟಿಯ ಫಲ ಮಹಾನುಭಾವ ॥

ಯೀಶ : ಪುರುಷೋತ್ತಮನೆ ಯೀಗ ನೀನು ಸುದರ್ಶನವಂ ತೆಗೆದುಕೋ. ಗಯನು ಶಿರದೋಳ್ ಧರಿಸಿರುವ ಮಣಿ ಕಿರೀಟವಂ ಧರೆಗೆ ಉರುಳಿಸುವನಾಗು.

ಕೃಷ್ಣ : ಪರಮೇಶ್ವರ, ನಾನು ಗಂಧರ್ವನ ಶಿರವನ್ನು ಹರಿಯುವೆನೆಂದು ಶಪಥವಂ ಗೈದ ಮೇರೆಗೆ ಯನ್ನ ಹಸ್ತದೋಳ್ ಪ್ರಜ್ವಲಿಸುವ ಚಕ್ರವಂ ಪ್ರಯೋಗಿಸಿ ವೈರಿಯ ಶಿರದೋಳ್ ಮೆರೆಯುವ ಮಣಿ ಕಿರೀಟವಂ ಘನದಿ ತೆಗೆದು ಯನ್ನ ಮನೋರಥವಂ ಪೂರೈಸಿಕೊಳ್ಳುವೆನು ಭಲಾ ॥

ಈಶ : ಅಯ್ಯ ಶ್ರೀ ಹರಿಯೆ ನಿನ್ನ ಕಠೋರ ಪಂಥ ನೆರವೇರಿತು ತಾನೆ.

ಕೃಷ್ಣ : ಶಂಕರ ಮೂರ‌್ತಿಯೆ ನನ್ನ ಶಪಥವು ನಿನ್ನ ಕರುಣದಿಂದ ನೆರವೇರಿತು. ನಾಂ ಧನ್ಯನಾದೆನೈ ಯೀಶ ಗಂಗಾಧರೇಶ.

ಶಿವ : ಯಲೈ ಅರ್ಜುನನೆ ನಿನ್ನ ಪಂಥವು ಯೀಡೇರಿತು. ಗಯನ ಪ್ರಾಣ ಉಳಿಯಿತು. ಇನ್ನು ನೀವು ಶಾಂತರಾಗಿರಿ.

ಅರ್ಜುನ : ಮಹಾದೇವನೆ ತಮ್ಮ ದರುಶನ ಪ್ರಭಾವದಿಂದ ನನ್ನ ಮನೋರಥವು ನೆರವೇರಿತು. ನಾಂ ಧನ್ಯನಾದೆ ಮಹಾದೇವ.

ಶಿವ : ಯಲೈ ಕೃಷ್ಣಾರ್ಜುನರೆ ನಿಮ್ಮ ಮನೋಕ್ಲೇಶಗಳನ್ನು ಬಿಟ್ಟು ಮೊದಲಿನಂತೆ ಅನುರಾಗದಿಂದ ಇರುವರಾಗಿರಿ.

ಕೃಷ್ಣ : ತಮ್ಮ ವಾಕ್ಯದಂತೆ ನಡೆಯುವೆನೈ ಶಂಕರಾ, ಅಭಯಂಕರಾ.

ಅರ್ಜುನ : ಭಾವ ವಂದಿಸುವೆನು.

ಕೃಷ್ಣ : ಅರ್ಜುನ ನಿನಗೆ ಮಂಗಳವಾಗಲಿ.

ಗಯ : ಪಾರ್ವತೀಶ ನಾಂ ಧನ್ಯನಾದೆ.

ಯೀಶ್ವರ : ಗಯನೆ ಆಯುಷ್ಯವಂತನಾಗು.

ಗಯ : ನಾರಾಯಣ ವಂದಿಸುವೆನು.

ಕೃಷ್ಣ : ನಿನಗೆ ಶುಭವಾಗಲೈ ಗಂಧರ್ವ ಕುಮಾರ.

ಗಯ : ಪ್ರಾಣದೊಡೆಯ ವಂದನೆ.

ಅರ್ಜುನ : ಗಯನೆ ನಿನಗೆ ಜಯವಾಗಲಿ.

ಕೃಷ್ಣ : ಯೀ ದಿನ ನಮ್ಮ ಮನೋರಥಗಳೆಲ್ಲಾ ಪರಮೇಶ್ವರನ ಸಂಕಲ್ಪದಿಂದ ಈಡೇರಿದವು ಕಾರಣ
ಶ್ರೀ ಗಿರಿಜಾಧವನಂ ಕುರಿತು ಮಂಗಳಂ ಪಾಡೋಣ

 

ಮಂಗಳ

ಅಂಗಜ ಮದಹರ ತಾವಾಜಯ ಮಂಗಳಂ
ಸಂಗವಿದೂರ ಭವ ಮಂಗಳರೂಪಾ ಧವಳಾಂಗಾ ಭುಜಗಾವಿಭೂಷಣ ॥ಅಂಗ ॥
ವಾರಣಚರ್ಮಾಂಬರ ಭವಹರ ಶಂಕರಾ
ಕ್ರೂರತಾರಾರೀಪುರ ತಾರಣ ಗೌರಿವರ ಚಾರ ಸಿದ್ಧವಿನುತಾ ॥ಅಂಗ ॥
ಕೋಮಲ ಪಾದಾನುತ ಭಕ್ತಾಕುಲ ಭರಣ ಸಾಮಜ ದೈತಾಂಕ
ಸೋಮವಂಶೋದ್ಧಾರಕ. ಕಾಮಿತಫಲವರದಾ ॥ಅಂಗಜ ಮದಹರ ॥
ಕೋಮಲ ತನುರುಚಿ ಜೀತಾ ಶಶಿಶೇಖರಾ ॥ವಂದಿತ ದಕ್ಷಧ್ವರಾ
ಬೃಂದಾರಕ ಪಾದಾವಿನುತ ॥ಅಂಗಜಮದಹರ ॥

ತ್ರಿಪುಟ

ಧರಣಿಗಗ್ಗಳಮಾಗಿ ಮೆರೆಯುವ ಶರಪುರಿಯ
ವರಲಕ್ಷ್ಮಿ ರಂಗನ ಪರಮಭಕ್ತನು
ಬೇಟೆರಂಗನ ಸುತನು ತಾನಾದ ॥

ವರ ಕವಿಯು ಹರಿಶರ್ಮನೆಂಬುವ, ಉರುತರದ
ಶಿವಯೋಗಿ ತನ್ನಯ ಪರಮ ಶಿಷ್ಯನು
ನಟ ಭಟನು ಗೋವಿಂದನೆಂಬುವನಾ ॥

ಹರಸಿ ಕಳುಹಿದ ನಟನೆಗೈಯ್ಯಲು
ಪೊರೆದು ಕೃಷ್ಣಾರ್ಜುನರ ಸಮರದ ಪರಮ
ಮಂಗಳ ಯಕ್ಷಗಾನದ ಕಥೆಯ ವಿಸ್ತರದಿ ॥

ವರ ಸಭಾಜನ ತಪ್ಪು ಮನ್ನಿಸಿ  ಉರುತರದ
ಬಹುಭಕ್ತಿಭಾವದಿ ತೆರದ ಮನದಲಿ ನೋಡೆ
ನೀಡುವ ರಂಗ ಮಂಗಳವಾ॥ ॥