(ಅಭಿಮನ್ಯು ಪ್ರವೇಶ)

ಅಭಿಮನ್ಯು : ದೊಡ್ಡಪ್ಪ ವಂದಿಸುವೆನು.

ಧರ್ಮರಾಜ : ಅಭಿಮನ್ಯು ಕುಮಾರ ನಿನಗೆ ಮಂಗಳವಾಗಲಿ. ಚಿರಂಚೀವಿ ಯೀ ಕಾಂತಾರದಲ್ಲಿ ನೀನೋರ‌್ವನೆ ಬರಲು ಕಾರಣವೇನು.

ಪದ

ತಾತ ಲಾಲಿಸೊ ಪ್ರೀತಿಯಿಂದಲೀ ಜಾತ ಪೇಳುವ
ರೀತಿಯಾ ಕಾತರಿಸಿ ಹರಿ ಘಾತಿಪಡಿಸಲು. ನೋಡು ಬಂದಿಹೆ ತಿಳಿಯಿತೇ ॥
ಬಂದಿಹೆನು ಇಂದವನನೀಗಲೇ ಮಂದಮತಿಯನು ಬಿಡಿಸುತೇ
ಚಂದದಿಂದಲಿ ಯದುಬಲವ ನಾಂ ಕೊಂದು ಹಾಕುವೆ ಯೀಕ್ಷಣ॥

ಅಭಿಮನ್ಯು : ದೊಡ್ಡಪ್ಪ, ಆ ಯಿಂದಿರಾ ವಲ್ಲಭನು ಹಿಂದೂ ಮುಂದೂ ಯೋಚಿಸದೆ ಕದನವಂ ಕೈಗೊಂಡು ಹದಮೀರಿ ಬಂದಿರುವನು. ಯೀ ವಿಧವಂ ತಿಳಿದು ಕದನಕ್ಕೆ ಸಿದ್ಧನಾಗಿ ಬಂದಿರುತ್ತೇನೆ. ಯನಗೆ ನೇಮವಂ ಕೊಡು ಆ ಯದು ಬಲವನ್ನೆಲ್ಲಾ ನಿರ್ಮೂಲ ಮಾಡಿ ಬರುವೆನು. ಅಣು ಮಾತ್ರವೂ ಚಿಂತಿಸದೆ ಅಪ್ಪಣೆಯಂ ಕೊಡೈ ತಂದೆ ಕಾತುರನಾಗಿ ಬಂದೆ.

ಧರ್ಮರಾಜ : ಸುಂದರನಾದ ಯನ್ನ ಕಂದನೆ, ಗಂಧರ್ವನಿಗೆ ಮಾತು ಕೊಟ್ಟ ಕಾರಣ ಯೀ ತೆರದ ಕದನಕ್ಕೆ ಕಾರಣವಾಯಿತು. ಯುದ್ಧದಲ್ಲಿ ಶ್ರೀ ಕೃಷ್ಣನಂ ಗೆಲ್ಲುವೆನೆಂಬ ಸೊಲ್ಲು ಸಲ್ಲದು. ಬರಿದೇ ಪಂಥವಂ ಗೈಯಬೇಡವೊ ಬಾಲ ಸುಜ್ಞಾನಶೀಲ

 

(ಅರಣ್ಯ  : ಸಾತ್ಯಕಿ ಅಭಿಮನ್ಯು ಯುದ್ಧ)

ಸಾತ್ಯಕಿ : ಯಲವೊ ಬಾಲಕ ಬಂದಿರುವ ನಮ್ಮ ವೈರಿಯಂ ಹಿಂದಿಟ್ಟುಕೊಂಡು ಮಂದಮತಿಯಂದದಿ ನಿಂದಿರುವೆಯಾ. ವೈರಿಯಂ ಬಿಡದೇ ಹೋದರೆ. ನಿನ್ನ ದುರುಳಾಟವನ್ನಡಗಿಸಿ ಬಿಡುವೆನೊ ತರಳಾ ಕೊಯ್ಯುವೆ ನಿನ್ನ ಕೊರಳ.

ಪದ

ನಿಲ್ಲೊ ನಿಲ್ಲೊ ಖಳನೆ ನಾನು ಯಲ್ಲಿ ಬರುವೆಯೊ
ಸೊಲ್ಲನಡಗಿಸುವೆನು ನೋಡೊ ಹುಲು ಸಾತ್ಯಕೀ॥

ಅಭಿಮನ್ಯು : ಯಲವೊ ಖುಲ್ಲ ಸಾತ್ಯಕಿ. ಮೇರೆದಪ್ಪಿ ಶೂರನಂತೆ, ಸಾರಿ ಬರುವೆಯಾ ಘೋರ ಯುದ್ಧದೋಳ್ ನಿನ್ನಂ ಗಾರು ಗೆಡಿಸಿ ನಿನ್ನ ಸೊಲ್ಲನ್ನಡಗಿಸುವೆನೊ ಹುಲು ಸಾತ್ಯಕಿ ॥

ಪದ

ಬಾಲ ಭಾಷೆಯಾಡಿ ನೀನು ಬೀಳ್ವೆ ನೋಡೆಲಾ ॥
ಕಾಲ ನಗರಿಗೊಯ್ವೆ ನಿನ್ನ ಬಾಲ ಕೇಳೆಲಾ ॥

ಸಾತ್ಯಕಿ : ಯಲೊ ಹುಡುಗ, ದುಡುಕಿ ಮಾತನಾಡಿ ವೃಥಾ ಕೆಡಬೇಡ. ದೃಢದಿಂದ ನಿನ್ನನ್ನು ದಂಡಧರನಾಲಯಕ್ಕೆ ಕಳುಹಿಸಿ ಬಿಡುತ್ತೇನೆ ನೋಡೊ ಬಾಲಕ.

ಪದ

ಯಾಕೆ ಕೋಪ ಮಾಳ್ವೆ ನೀನು ಧೂರ್ತ ಸಾತ್ಯಕೀ
ಜೋಕೆಯಿಂದ ಪೋಗು ಬೇಗ ರೀತಿಯೇನಿದು ॥

ಅಭಿಮನ್ಯು : ಯಲವೊ ಯದುಮುಖನಾದ ಧೂರ್ತ ಸಾತ್ಯಕಿಯೆ. ವೃಥಾ ಆಟೋಪನ್ನೇಕೆ ತೋರಿಸುವೆ. ನಿನ್ನ ದರ್ಪಕ್ಕೆ ನಾಂ ಹೆದರುವೆನೆ – ಮುದದಿಂದ ಕದನಕ್ಕೆ ವದಗಿ ಬಾರೊ ಮೂರ್ಖ ಯಾಕೆ ಯನ್ನೊಳೂ ತರ್ಕ.

 

(ಭೀಮ ಬಲರಾಮ ಸಂವಾದ)

ಪದ

ನಿಲ್ಲೆಲೊ ನಿಲ್ಲೆಲೊ ಕೊಲ್ಲುವೆ ನಿನ್ನ ಖುಲ್ಲ ಬಲನೆಯೀಗ ಬೇಗ

ಭೀಮ : ಯಲವೊ ಬಲರಾಮ, ನೀನು ಮಹಾಶೂರನೆಂದು ನಮ್ಮಲ್ಲಿ ಸಂಗರಕ್ಕೆ ಬಂದಿರುವೆಯಾ. ಯಿಕೊ ಯನ್ನ ಕರಾಗ್ರದಲ್ಲಿ ಭೋರ್ಗರೆಯುತ್ತಲಿರುವ ಗದಾದಂಡದಿಂದ ನಿನ್ನ ರುಂಡವಂ ನಿನ್ನ ಪಂಚತ್ವವಂ ಅಂತಕನಲ್ಲಿಗೆ ಕಳುಹಿಸಿ ಬಿಡುತ್ತೇನೆ. ಬಡಿವಾರವಂ ಬಿಟ್ಟು ನಡುಕಟ್ಟಿ ಯುದ್ಧಕ್ಕೆ ನಿಲ್ಲೊ ಹಲಾಯುಧ-

ಪದ

ಯಾಕೆ ಬೊಗಳುವೆ ಸೂಕರನಂದದಿ ಸಾಕು ನಿಲ್ಲಿಸೊ ಸೊಲ್ಲ ॥

ಬಲರಾಮ : ಯಲವೊ ಕೊಬ್ಬಿನಿಂದ ಮಬ್ಬು ಮುಚ್ಚಿಕೊಂಡಿರುವ ದೊಡ್ಡ ಹೊಟ್ಟೆಯುಳ್ಳ ಹೆಡ್ಡಭೀಮನೆ, ಯಾತಕ್ಕೆ ಬಾಯಿ ತೆರೆದು ನರಿಯಂತೆ ವಿವೇಕವಿಲ್ಲದೆ ಜೊಳ್ಳು ಕೂಗನ್ನು ಕೂಗುವೆ. ನೀನು ಪರಾಕ್ರಮಿಯಾದರೆ ಧುರವನ್ನೆಸಗುವನಾಗೊ ಖುಲ್ಲ ಮುರಿಯುವೆ ನಿನ್ನ ಹಲ್ಲ-

ಪದ

ಯೀಗಲೆ ನಿನ್ನಯ  ಕೂಗನು ಅಡಗಿಪೆ
ಸಾಗೋ ನೀ ಬೇಗನೆ ಜಾಗು ಮಾಡದಲೇ ॥

ಭೀಮ : ಯಲವೊ ಬಲರಾಮ ಬಿಡು ನಿನ್ನ ಛಲ. ಬಲವುಳ್ಳ ಯೀ ಭೀಮನು ನಿನ್ನ ಜೊಳ್ಳು ಕಾಳಗಕ್ಕೆ ಹೆದರುವನೆ. ನಿನ್ನ ಪಕ್ಕೆಲುಬುಗಳನ್ನು ನುಗ್ಗೊತ್ತಿ ನಿನ್ನ ಉರವಂ ಭರದಿಂ ಸೀಳಿ ಬಿಡುವೆನು ಜಾಳು ಮಾತುಗಳನ್ನಾಡುವೆಯೇನೋ ದೇವಕೀಪತಿ ಆಯಿತು ನಿನ್ನ ಗತಿ.

ಪದ

ರೂಢಿಯೋಳ್ ನಿಮಗೆ ನಾವ್ ಮಾಡಿದ
ಉಪಕಾರ ನೋಡದೆಮಗೆ ನಾವು॥

ಬಲರಾಮ : ಯಲವೊ ನೀತಿಯಂ ತಪ್ಪಿ ಘಾತಕತನದಿಂದ ಮಾತನಾಡುವ ಪಾತಕಿಯಾದ ಭೀಮ. ನಿಮಗೆ ಬಂದ ನಾನಾವಿಧವಾದ ಕುಂದು ಕೊರತೆಗಳನ್ನು ಚಂದದಿಂ ಪೊರೆದ ಉಪಕಾರಗಳನ್ನು ನೆನೆಯದೆ ದುರುಳತನದಿಂದ ನಮಗೆ ವೈರಿಗಳಾದಿರಾ. ಪಚ್ಚಕರ್ಪೂರದ ಪಾತಿಯಂ ಮಾಡಿ ಕಸ್ತೂರಿಯೆಂಬ ಗೊಬ್ಬರವನ್ನು ಹಾಕಿ ಪನ್ನೀರನ್ನು ಸುರಿಸಿ ಬೆಳೆಸಿದಾಗ್ಯು ನೀರುಳ್ಳಿಯ ಗೆಡ್ಡೆಯು ತನ್ನ ಜಾತಿಯ ವಾಸನೆಯನ್ನು ಬಿಡುವುದೇ. ಹಾಗೇ ನಾವು ಮಾಡಿದ ಉಪಕಾರಂಗಳಂ ಮರೆತು ಈಗ ನಮಗೆ ಶತೃಗಳಾಗಿ ನಿಂತಿರುವಿರಾ ಭೀಮ ದುರ್ಬಲಧಾಮ.

 

(ಬಲರಾಮನ ಸೋಲು)

ಪದ

ಬಾರೆಲೊ ಬಾರೆಲೊ ಶೂರನಂತೆ
ನೀಂ ಸಾರಿ ಬಂದೆ ಕೃಷ್ಣಾ ಶ್ರೀ ಕೃಷ್ಣಾ ॥
ಧೀರ ನೀನಾದರೆ ತೋರು ಸಾಹಸವ
ಗಾರುಗೊಳಿಪೆ ನಿನ್ನ ಯಿನ್ನ॥

ಅರ್ಜುನ : ಹೇ ಕೃಷ್ಣಾ, ನೀ ಬಹು ಶ್ರೇಷ್ಟ ಧೀರನಾಗಿ ಬಂದು ಯನ್ನೋಳ್ ಧುರವನ್ನೆಸಗಲು ಬಂದು ನಿಂತಿರುವೆಯಾ. ನಿನ್ನ ಸಾಹಸವಂ ಯನ್ನಲ್ಲಿ ತೋರಿದರೆ ನಾಂ ನಿನ್ನ ಶೂರತ್ವವಂ ಅಡಗಿಸಿ ಬಿಡುವೆನೊ ಹರಿಯೇ ಪ್ರಾಣದಾಸೆಯಂ ತೊರೆಯೆ.

ಪದ

ವೀರ ಪಾರ್ಥ ನೀ ಮೀರಿದ ಗರ್ವದಿ ತೋರುತ್ತಿರುವೆ
ಶೌರ‌್ಯ ಧೈರ‌್ಯ ವೈರಿಯ ಬಿಡು ನೀಂ ॥
ಕಾರ್ಯ ಕೆಡುತಿಹುದು ಸಾರಿ ಪೇಳ್ವೆನೀಗಾ ಬೇಗಾ॥

ಕೃಷ್ಣ : ಯಲವೋ ಪಾರ್ಥನೆ, ಮೀರಿದ ಗರ್ವದಿಂದ ಮದವೇರಿ ಯನ್ನೊಳ್ ಪರಾಕ್ರಮವಂ ತೋರುವೆಯಾ. ಯನ್ನ ವೈರಿಯಾದ ಗಯನಂ ಬಿಡದೆ ಹೋದರೆ ನೀ ಸರ್ವಥಾ ಕೆಟ್ಟು ಹೋಗುವೆಯಲ್ಲೊ. ಅರ್ಜುನ ನಾಂ ಸಾರಿ ನಿನಗೆ ಹೇಳುತ್ತೇನೆ ವಿವೇಕವಂ ತಂದುಕೊಳ್ಳಲಾ ನರನೇ ನೀ ಬಹುಬೇಗನೇ ॥

ಪದ

ಶತೃವ ಬಿಡಲು ನಾಂ ಕ್ಷತ್ರಿಯನಲ್ಲವೆ ಯತ್ತ ಮಾತನಾಡ್ವೆ
ಪೇಳ್ವೆ ಧಾತ್ರಿಯಲಿ ಯುದ್ಧಕ್ಕೆ ಯತ್ನ ನಿಲ್ಲೆಲೊ ಅರ್ತಿಲಿ ಶಿಕ್ಷಿಸುವೇ ॥

ಅರ್ಜುನ : ಯಲೈ ಪುರುಷೋತ್ತಮನೆ. ನಿನ್ನ ಶತೃವು ಯನ್ನಂ ಬಂದು ಮರೆಹೊಕ್ಕಿರುವನು, ನಾನು ನಿನ್ನ ಶತೃವೆಂಬುದನ್ನರಿಯದೆ ಅವನನ್ನು ರಕ್ಷಿಸುವೆನೆಂದು ಅಭಯವಂ ಕೊಟ್ಟಿರುವೆನು. ನಿನ್ನ ಡಂಬಕ್ಕೆ ನಾಂ ಅಂಜಿ ಅವನಂ ರಕ್ಷಿಸದೇ ಹೋದರೆ ಯನ್ನಂ ಕ್ಷತ್ರಿಯನೆಂದು ಯೀ ಧಾತ್ರಿಯ ಜನರು ಮತ್ತೆ ನಂಬುವರೆ. ನಿನ್ನೊಳ್ ಯುದ್ಧವಂ ಬಿದ್ದದಿಂ ಮಾಡುವೆನಲ್ಲದೆ ಗಂಧರ್ವನಂ ಖಂಡಿತ ಬಿಡುವುದಿಲ್ಲವೈ ಹರಿಯೆ ಆ ವಚನವಂ ತೊರೆಯೆ.

ಪದ

ದಕ್ಷತನವಿರೆ ರಕ್ಷಿಸು ಗಯನನು ಶಿಕ್ಷಿಪೆನೆಲೊ ಪಾರ್ಥ
ಸಮರ್ಥ ರಕ್ಷಿಸುವರ ನಿನ್ನ ತಕ್ಷಣ ಕರಿಸಿಕೊ ಯೀ ಕ್ಷಣ ಕೊಲ್ಲುವೆನೊ ॥

ಕೃಷ್ಣ : ಯಲವೊ ಅರ್ಜುನ, ಕ್ಷತ್ರಿಯನೆಂದು ಶ್ರೇಷ್ಟತ್ವವಂ ಹೇಳಿಕೊಳ್ಳುವೆ ಸಹಜ. ಯೀ ಗಯನಂ ಉಳಿಸಿಕೊಂಡು ಮತ್ತೆ ನಿನ್ನ ಪ್ರಾಣ ರಕ್ಷಣೆಗೆ ಯಾರಾದರೂ ಇದ್ದರೆ ತಕ್ಷಣ ಕರೆಸಿಕೊಂಡು ಯನ್ನೊಳ್ ಯುದ್ಧಕ್ಕೆ ಸಿದ್ಧನಾಗೊ ಪಾರ್ಥ ನಿನ್ನ ಸಾಹಸ ವ್ಯರ್ಥ.

ಪದ

ಕಂತುಜನಕನೀ ಭ್ರಾಂತಿ ಮಾತ ಬಲು ಸಂತಸದಿಂದಾಡೈ ನೋಡ್ವೆ
ನಿಂತರೆ ಯುದ್ಧದೋಳ್ ಪೌರುಷವ ಪಂಥವ ನಾಂ ತೋರ‌್ಪೆ ॥

ಅರ್ಜುನ : ಯಲೈ ಮನುಮಥ ಜನಕನಾದ, ಚಿನುಮಯಾತ್ಮಕನೆ, ಯನ್ನೋಳ್ ನೀನು ಚಲ್ಲಾಟದ ಮಾತುಗಳನ್ನಾಡುತ್ತಿರುವೆ. ಯಲೈ ಫುಲ್ಲನಾಭನೆ ನೀನು ದೃಢವಾಗಿ ಯುದ್ಧಕ್ಕೆ ನಿಂತರೆ ನುಡಿ ತಪ್ಪದೇ ಸಡಗರದಿಂದ ಯುದ್ಧವಂ ಮಾಡಿ ನುಡಿದಿರುವ ಪಂಥವಂ ಸಂತಸದಿಂ ನೆರವೇರಿಸುವೆನೈ ಹರಿಯೇ, ಹಗೆಯಂ ಬಿಡೆಂಬುದಂ ತೊರೆಯೆ…

ಪದ

ಪುರುಹೂತ ಸಂಭವನೇ ಅರಿಯಾಗಿ ನಿಂದವನೇ ॥
ಬಂಧುವೆನ್ನುತ ಹಿಂದಿನಿಂ ನಿಮ್ಮ ಬಂದ ಕಷ್ಟಗಳೆಲ್ಲವ ವಂದು
ತಾಕದ ಹಾಗೆ ಪೊರೆಯಲು ಇಂದು ಯನಗರಿಯಾದೆಯಾ ॥

ಕೃಷ್ಣ : ಯಲವೊ ಸುರಪಸುತನಾದ ಅರ್ಜುನನೆ, ಯಮ್ಮ ಬಂಧುವೆಂದು ನಿಮ್ಮನ್ನು ಯನ್ನ ಹಿಂದಿಟ್ಟುಕೊಂಡು ಕಾಪಾಡಿದ್ದಕ್ಕೆ ಇಂದಿನ ದಿನ ಯನಗೆ ವೈರಿಯಾಗಿ ಯುದ್ಧಕ್ಕೆ ಬದ್ಧ ಕಂಕಣನಾಗಿ ನಿಂತಿರುವೆಯಾ ಅರ್ಜುನ ನೀ ದುರ್ಜನ-

ಪದ

ಪುರುಷೋತ್ತಮನೆ ಕೇಳೈ ಅರುಹುವೆನು
ಪರಿ ತಿಳಿಯಯೈ ನಿನ್ನ ಅರಿಯೆಂಬುದನ್ನು
ತಿಳಿಯದೆ ಇನ್ನು ನಾ ಗಂಧರ್ವಗೆ ಮನ್ನಿಸುತ
ಭಾಷೆಯನು ಕೊಟ್ಟೆನು ನನ್ನದೇನಪರಾಧವೈ ಪುರು ॥

ಅರ್ಜುನ : ಸಿರಿಯರಸನಾದ ನರಹರಿಯೆ, ನಾನೊರೆಯುವ ಪರಿಯನ್ನು ಚನ್ನಾಗಿ ಅರಿಯುವವನಾಗು. ಗಂಧರ್ವನು ನಿನ್ನ ವೈರಿ ಯಂಬುದು ನನಗೆ ತಿಳಿಯದು. ನನ್ನಂ ಮರೆಹೊಕ್ಕನಾದ್ದರಿಂದ ಕಾಪಾಡುವೆನೆಂದು ಭಾಷೆಯಂ ಕೊಟ್ಟೆನು. ಅನಂತರ ವಿವರವು ತಿಳಿಯಿತು. ಮಿಂಚಿದ ಕಾರ್ಯಕ್ಕೆ ಚಿಂತಿಸಿ ಮಾಡುವದೇನು ಇದರಲ್ಲಿ ನನ್ನ ಅಪರಾಧವೇನೈ ಕೃಷ್ಣ ಜಗದೋಳ್ ಶ್ರೇಷ್ಟಾ ॥

ಪದ

ಕುಂತಿಪುತ್ರನೆ ಯಂತು ಅರಿಯನು ನಿಂತು ನೀನವನುಳಿಸುವೆ
ಭ್ರಾಂತಿ ಬಿಟ್ಟೆನ್ನೊಡನೆ ಯುದ್ಧವ ಪಂಥದಿಂ ಮಾಡೆನ್ನೊಡನೆ ॥

ಕೃಷ್ಣ : ಯಲವೋ ಕುಂತಿನಂದನನಾದ ಕಿರೀಟಿಯೆ, ಯನ್ನ ವೈರಿಯಂ ಬೆನ್ನು ಹಾಕಿಕೊಂಡು ನನ್ನಿಯಿಂ ಇನ್ನಿವನನ್ನು ಉಳಿಸಿಕೊಳ್ಳುವದನ್ನು ನಾಂ ಕಾಣದೆ ಹೋಗುವೆನೆ. ಭರದಿಂ ಯನ್ನೊಡನೆ ಧುರವನ್ನೆಸಗಿ ಅರಿಯಂ ಪೊರೆದು ಹರುಷದಿಂ ಧರಣಿಯಲ್ಲಿ ನೀಂ ಶಿರವೆತ್ತಿ ತಿರುಗುವೆನೆಂಬ ಪರಮ ಹರುಷವಿನ್ಯಾತಕೊ ವಿಜಯಾ ಖಂಡಿತ ವದಗಿತು ಅಪಜಯ.