ಪದ

ನರಹರಿಯೆ ವರ ಗಯನ ಪೊರೆಯುತೆ ಧುರವ ನಿನ್ನೊಳು
ಗೈಯ್ಯುವೆ ಭರದಿ ಶರಪುರದರಸನಾಣೆಯು ಉರುಳುಗೆಡಿಸುವೆ ಮರುಳೆ ನೀ॥

ಅರ್ಜುನ : ಹರಿಯೆ ಧೈರ‌್ಯವಂ ತೊರೆಯೆ. ಮರೆ ಹೊಕ್ಕಿರುವ ಗಂಧರ್ವನಂ ರಕ್ಷಿಸಿ ನಿನ್ನೋಳ್ ಧುರವಂಗೈದು ನಿನ್ನ ಪರಾಕ್ರಮವನ್ನು ಹುರುಳುಗೆಡಿಸಿ ಮರುಳನನ್ನಾಗಿ ಮಾಡಿ ಬಿಡುತ್ತೇನೆ. ಶರಪುರದರಸನಾದ ಸಿರಿಯರಸನೆ ಯಿದು ಖಂಡಿತವೆಂದು ತಿಳಿಯುವನಾಗೈ ದೇವಾ ನೋಡೆನ್ನ ಮತಿಭಾವ……

ಪದ

ಬಾರೊ ನರನೆ ತೋರೊ ಶೌರ‌್ಯವಾ ಭರದಿಂದ
ಬಿಡುವೆ ಮೀರಿದಂಥ ಕ್ರೂರ ಅಸ್ತ್ರವಾ ॥

ಕೃಷ್ಣ : ಯಲವೊ ಷಂಡ ನರನೆ, ಸೊಕ್ಕಿ ಮಿಕ್ಕು ಮೀರಿ ನನ್ನೊಳ್ ಯುದ್ಧಕ್ಕೆ ಬಂದಿರುವೆಯಾ. ಅಮೋಘವಾದ ಅಸ್ತ್ರಗಳನ್ನು ನಿನ್ನ ಮೇಲೆ ಬಿಡುತ್ತಲಿದ್ದೇನೆ. ತಡೆದುಕೊಳ್ಳೆಲಾ ಅರ್ಜುನ ನೀನತಿ ದುರ್ಜನ.

ಪದ

ತೋರೊ ಹರಿಯೆ ನಿನ್ನ ಶೌರ‌್ಯವ
ಘೋರಾಸ್ತ್ರವನ್ನು ಸಾರಿ ಬಿಡುವೆ ಮೀರಿ ಬಾಣವಾ ॥

ಅರ್ಜುನ : ಯಲವೋ ಕಳ್ಳ ಹರಿಯೆ, ನಿನ್ನ ಉರುತರವಾದ ಪರಮಶೌರ‌್ಯವನ್ನು ಯನ್ನಲ್ಲಿ ತೋರುವೆಯಾ. ಯಿಕೊ ನೋಡು ಯನ್ನ ಕರಾಗ್ರದಲ್ಲಿ ಭೋರ್ಗರೆಯುವ ಕ್ರೂರಾಸ್ತ್ರವನ್ನು ಸಾರಿ ಬಿಟ್ಟಿರುವೆನು. ಧೀರನಾದರೆ ಯಿದಂ ಸೈರಿಸಿಕೊಂಡು ಯನ್ನೊಳ್ ಧುರವಂ ಗೈಯುವನಾಗೊ ವಾರಿಜಾಕ್ಷ ॥

ಪದ

ನಿನ್ನ ಬಾಣವನ್ನು ಖಂಡ್ರಿಸಿ ಇನ್ನೀಗ
ಪಾರ್ಥ ಉನ್ನತಾ ಸೂರ‌್ಯಾಸ್ತ್ರ ಬಿಟ್ಟಿಹೇ ॥

ಕೃಷ್ಣ : ಯಲವೊ ನರನೆ, ನೀನು ಸರ್ವಶಕ್ತಿಯಿಂದ ಯನ್ನ ಮೇಲೆ ಬಿಟ್ಟ ಉನ್ನತವಾದ ಬಾಣವನ್ನು ನನ್ನ ಶಕ್ತಿ ಸಾಹಸದಿಂದ ಖಂಡ್ರಿಸಿ ನಾನೀಗ ನಿನ್ನ ಮೇಲೆ ಸೂರ‌್ಯಾಸ್ತ್ರವನ್ನು ಬಿಟ್ಟಿದ್ದೇನೆ. ಇದಂ ತಡೆದುಕೊಂಡು ಯೀ ಸೃಷ್ಟಿಯಲ್ಲಿ ಬಾಳೊ ನರನೇ ಕಡು ಮೂರ್ಖನೇ ॥

ಪದ

ದ್ಯುಮಣಿ ಬಾಣವನ್ನು ಖಂಡ್ರಿಸಿ ನಾನು ಕಮಲಜಾಸ್ತ್ರವನ್ನು ಬಿಟ್ಟಿಹೇ ॥

ಅರ್ಜುನ : ಯಲವೋ ಮಧುಸೂದನ, ನೀನು ಕನಲಿ ಕ್ರೂರಮಾಗಿ ಯನ್ನ ಮೇಲೆ ಬಿಟ್ಟ ಸೂರ್ಯಾಸ್ತ್ರವನ್ನು ಮಧ್ಯದೋಳ್ ಖಂಡ್ರಿಸಿ ಬದಲಾಗಿ ನಿನ್ನ ಮೇಲೆ ಬ್ರಂಹಾಸ್ತ್ರವನ್ನು ಪ್ರಯೋಗಿಸಿರುವೆನು. ಯಿದಂ ಸೈರಿಸಿಕೊಂಡು ಯುದ್ಧವಂ ಮಾಡೊ ಮಾಧವ ಕಡಿಯುವೆ ನಿನ್ನ ಶಿರವ.

ಪದ

ಯನ್ನ ಕರುಣದಿಂದ ಭುವಿಯೊಳಿನ್ನು ಇರುವೆಯೊ
ನನ್ನ ಕರುಣ ತೊರೆಯೆ ಭುವಿಯೊಳ್ ಕುನ್ನಿ ಬಾಳ್ವೆಯಾ ॥

ಕೃಷ್ಣ : ಯಲೊ ಕುಲಘಾತಕನಾದ ಧೂರ್ತ ಪಾರ್ಥನೆ ನೀತಿಯಂ ತೊರೆದು ಪಾತಕನಾಗಿ ಯನ್ನಂ ಘಾತಿಸುವುದಕ್ಕೆ ಬಂದಿರುವೆಯಾ. ಕಿರೀಟಿ ಯನ್ನ ಉನ್ನತವಾದ ಕರುಣವು ನಿನ್ನ ಮೇಲೆ ಇದ್ದಕಾರಣ ಪರ್ವತದಂತೆ ಬಂದ ಕಂಟಕಗಳೆಲ್ಲಾ ಮಂಜಿನಂತೆ ಮಾಯವಾದವು. ಅದಂ ಮರೆತು ಯನಗೆ ವೈರಿಯಾಗಿ ಬಂದಿರುವೆ. ಯನ್ನ ಕರುಣವು ತಪ್ಪಿದಲ್ಲಿ ನೀನು ಧರೆಯೊಳು ಶಿರವೆತ್ತಿ ತಿರುಗುವದಂ ನಾನರಿಯದೆ ಹೋಗುವೆನೆ ಫಲ್ಗುಣಾ ನಿನ್ನಲ್ಲಿರುವುದೆಲ್ಲಾ ದುರ್ಗುಣ.

 

(ಕೃಷ್ಣಾರ್ಜುನರ ಯುದ್ಧಕೃಷ್ಣನ ಮೂರ್ಛೆ)

ಅರ್ಜುನ : ಹೇ ಭಾವ ದೇವಾಧಿದೇವ, ಯಿಂತಾ ನೀಚ ಕಾರ್ಯಕ್ಕೆ ಘಾಸಿಯಾಗುವರೇ.

 

(ಅರ್ಜುನನ ಪ್ರಲಾಪ)

ಪದ

ಯೇಳು ಯೇಳೈ ಯನ್ನ ಭಾವ ತಾಳೆ ನೋವಾ
ಶ್ರೀಲತಾಂಗಿಯ ಪತಿ ವ್ಯಾಳಶಾಯಿಯೆ ನೀನು
ತಾಳುವರೆ ಮೂರ್ಚೆಯ ಲೀಲಾ ನಾಟಕನೇ
ನರರಂತೆ ಮೈಮರೆಯುವರೇ ಧರೆಯೋಳ್ ನಗರೇ
ಸರಸಿಜೋದ್ಭವಪಿತನೆ ಧುರಕೆ ನೀನಂಜಲೂ ॥

ಅರ್ಜುನ : ಹೇ ಭಾವ ದೇವ ದೇವ. ಯನ್ನ ನೋವಂ ನೋಡಲಾರೆಯಾ ಹೇ ಪ್ರಭು. ನಮಗೆ ಪರಿಪರಿಯ ವಿಧದಲ್ಲಿ ಉಪಕಾರವಂ ಮಾಡಿ ನಮ್ಮನ್ನು ಪಾರುಮಾಡಿ ಕಾಪಾಡಿದ ದೇವನೆ. ನೀನು ನರರಂತೆ ಕದನದಲ್ಲಿ ಮೈಮರೆಯಬಹುದೇ, ಏಳು ಯನ್ನೊಡನೆ ವಂದು ಪ್ರೀತಿಯ ಮಾತನ್ನಾಡಬಾರದೆ. ಹೇ ಪನ್ನಗಶಯನ. ನನ್ನ ಅಪರಾಧವಂ ಮನ್ನಿಸಿ ಯನ್ನೊಡನೆ ಮಾತನಾಡೈ ಶೌರಿ ಕೋಪವಂ ತೊರಿ.

ಪದ

ಯನ್ನಪರಾಧವೇನಿಹುದೈ ಇನ್ನು ತಿಳಿಯೈ ನನ್ನಿಯಿಂ
ಗಯನಿಗಭಯವ ಕೊಟ್ಟಕಾರಣ ನಿನ್ನೋಳ್
ಧುರವನೆಸಗೆ ಯಿನ್ನು ನಾನಿಂತೇ ॥

ಅರ್ಜುನ : ಹೇ ಭಾವ ಯನ್ನ ಪ್ರಾಣಸಂಜೀವ, ಯನ್ನೊಳ್ ವಂದು ಮಾತನ್ನಾಡಬಾರದೆ. ನಾ ನಿನ್ನ ಭಾವಮೈದುನನಲ್ಲವೆ. ಸಿರಿಯರಸನೆ ಭುಜಗಶಯನ. ವಿಜಯನಾದ ಯನ್ನನ್ನು ತ್ಯಜಿಸಿ ನರರಂತೆ ನೀ ಮೈಮರೆದೊರಗುವರೇ  ಸರಸಿಜೋದ್ಭವನೆ. ಅಜನಂ ಪೆತ್ತವನೆ. ಧುರಕ್ಕೆ ನೀ ಬಂದು ಕುಂದಿ ಮೈಮರೆಯುವರೆ. ಯನ್ನ ಅಪರಾಧವೇನಿರುವುದು. ಬೆನ್ನು ಬಿದ್ದ ಗಯನಂ ಪೊರೆವೆನೆಂದು ಅಭಯವಂ ಕೊಟ್ಟ ಕಾರಣ ನಿನ್ನೊಳ್ ಕದನವಂ ಕೈಗೊಂಡೆನಲ್ಲದೆ ಸ್ವಾಮಿದ್ರೋಹಿಯಾಗುವೆನೆ. ದೇವ. ನಾರಾಯಣನಾದ ನೀನು ಮರೆದೊರಗುವರೇ ಭಕ್ತ ಪರಾಧೀನ ದೀನೋದ್ದಾರಿ ಭಕ್ತಜನರಕ್ಷಕ ಕುಜನರ ಶಿಕ್ಷಕ ನಾರಾಯಣ ಏಳು ಏಳು.

ಪದ ತ್ರಿಪುಡೆ

ಯಲವೊ ಪಾರ್ಥನೆ ಯನ್ನ ಬಳಲಿಸಿ
ಕಲಿಯು ತಾನೆಂದೆನುತಲಿರುವೆಯಾ ತಲೆಯ
ನೀಗಲೆ ಯಿಳುಹುವೆನು ನಾಂ ನೆಲದೋಳ್ ನಿನ್ನ॥

ಕೃಷ್ಣ  : ಯಲವೊ ಘನ್ನ ಘಾತಕನಾದ ಕುನ್ನಿ ಪಾರ್ಥನೆ ಯನ್ನಂ ಕೊಳುಗುಳದೊಳು ಬಳಲಿಸಿ,
ನೀನೇ ಮೀರಿದ ಪರಾಕ್ರಮಿ ಯಂದು ಮದಗರ್ವದಿಂದ ಕುದಿಯುತ್ತಾ ನಿಂತಿರುವೆಯಾ. ನಿನ್ನ ತಲೆಯನ್ನೀಗಲೇ ಖಂಡ್ರಿಸಿ ಈ ನೆಲದೋಳ್ ಕೆಡಹಿ ಬಿಡುತ್ತೇನೆ. ದೃಢದಿಂದ ಯನ್ನಲ್ಲಿ ಕದನವಂ ಗೈಯ್ಯುವನಾಗೊ ಪಾರ್ಥ ನಿನ್ನ ಸಾಹಸ ವ್ಯರ್ಥ.

ಪದ

ಧುರದಿ ಯನ್ನಯ ತಲೆಯ ತೆಗೆಯಲು
ಮರುಳೆ ನಿನ್ನಿಂದಹುದೆ ಕೇಳೆಲೊ ಸರಳ
ಬಿಡುವೆನು ಕರುಳ ತೆಗೆವೆನು ದುರುಳ ತಾಳೊ ॥

ಅರ್ಜುನ : ಯಲವೊ ಕಳ್ಳ ಹರಿಯೆ, ಜಳ್ಳು ಮಾತುಗಳನ್ನು, ಯನ್ನಲ್ಲಿ ಸೊಲ್ಲಿಸಬೇಡ ಕಂಡ್ಯಾ. ಯನ್ನ ತಲೆಯಂ ತೆಗೆಯಲು ನಿನ್ನಿಂದಲಾಗುವುದೇ ಯೀಗ ನಾನು ಉಗ್ರವಾದ ಬಾಣವಂ ಬಿಟ್ಟು ನಿನ್ನ ಉರವಂ ಸೀಳಿ ಕರುಳಂ ತೆಗೆಯುವೆನು. ನೋಡೊ ಮಾಧವ ಕಡಿಯುವೆ ನಿನ್ನ ಶಿರವ.

ಪದ

ದಾನವಾಂತಕನೆಂಬ ಬಿರುದನು ನೀನು ಕೇಳದೆ
ಯಿರುವೆ ಯೇನಲೊ ಹೀನ ಪಾರ್ಥನೆ
ನ್ಯೂನ ಮಾಡುವೆ ನಾನು ಯೀಕ್ಷಣದಿ

ಕೃಷ್ಣ : ಯಲವೊ ಷಂಡ ಪಾರ್ಥನೆ, ದಾನವಾಂತಕನೆಂದು ಯೀ ಸೃಷ್ಟಿಯಲ್ಲಿ ಸಕಲರೂ ಪರಿಪರಿಯಾಗಿ ಹೊಗಳುತ್ತಿರುವದಂ ಮರೆತು ಅಹಂಕಾರದಿಂ ಜರಿದಾಡಿದರೆ ಸರಿಯೆ ನಿನ್ನಲ್ಲಿ ಧುರವಂಗೈದು
ಧರೆಯಲ್ಲಿ ನಿನ್ನನ್ನು ಇರಿಸದಂತೆ ಶಿರವಂ ತರಿದು ದಂಡಧರನಾಲಯಕ್ಕೆ ಕಳುಹಿಸಿ ಬಿಡುತ್ತೇನೆ. ಪುಂಡಾಟವಾಡುವೆಯಾ ಭಂಡ ನರನೆ.

ಪದ

ಹರಿಯೆ ಕೇಳು ನೀನೀಗ ಬರಿಯ ಮಾತ್ಯಾತಕೊ
ಬೇಗಾ ಧುರದೊಳು ನಿನ್ನನು ಹುರುಳುಗೆಡಿಸುವೆನು
ಮರುಳನೆ ನಿನ್ನಯ ಚರಿತೆಯ ಬಲ್ಲೆನೂ ॥

ಅರ್ಜುನ : ಯಲವೊ ಫುಲ್ಲನಾಭನೆ. ನಿನ್ನ ಯಲ್ಲಾ ಮಾಯಗಳನ್ನು ನಾಂ ಬಲ್ಲೆನು. ನಿನ್ನ ಬಾಯಿ ಮಾತಿನ ಘರ್ಜನೆಗೆ ಅಂಜುವರ‌್ಯಾರಿಲ್ಲ. ಧುರದೋಳ್ ನಿನ್ನ ಮರುಳು ಮಾಡಿ ಯೀ ಸರಳಿನಿಂದ ನಿನ್ನ ತಲೆಯಂ ತೆಗೆದು ಬಳಲಿಸುವೆನು. ಬರಿಯ ಮಾತಲ್ಲವೊ ಹರಿ ಧೈರ‌್ಯವನ್ನು ತೊರಿ.

ಪದ

ಯಲವೊ ನರನೆ ನೀ ಛಲವ ಮಾಡಿ ಯನ್ನ
ತಲೆಯ ತೆಗೆದು ನೀಂ ಇಳೆಯೊಳು ಬಾಳ್ವೆಯಾ ॥

ಕೃಷ್ಣನ : ಯಲವೊ ಉಪಕಾರ ಸ್ಮರಣೆಯನ್ನರಿಯದ ಹೀನ ಪಾರ್ಥನೆ. ನೀನು ಯನ್ನ ಮೇಲೆ ಛಲವಂ ಮಾಡಿ ಯನ್ನ ತಲೆಯಂ ತೆಗೆಯುತ್ತೇನೆಂಬ ಬಲುಹಂ ಬಿಡು. ಯನ್ನಂ ಅಳಲಿಸಿ ಯೀ ಧರೆಯಲ್ಲಿ ನೀ ತಲೆಯೆತ್ತಿ ತಿರುಗುವ ಪುಣ್ಯವೆಲ್ಲಿಯದೊ ಫಲ್ಗುಣ ತೀರಿತು ನಿನಗೆ ಭೂಮಿಯ ರುಣ……..

ಪದ

ನಿನಗೆ ಯಾಕೊ ಯೀ ಬಿನುಗು ಮಾತುಗಳು
ದನುಜಾರಿಯೆ ಯನ್ನ ಕನಲಿಸದಿರು ನೀ ಹರಿಯೆ ಕೇಳೊ ॥

ಅರ್ಜುನ : ಯಲವೊ ದಾನವಾರಿ, ನೀನು ಬಿನುಗು ಬಿನ್ನಾಣದ ಮಾತುಗಳನ್ನಾಡಿ ಯನ್ನ ಮನಕ್ಕೆ ಕೋಪವಂ ಹುಟ್ಟಿಸಿ ಕಟ್ಟುಗ್ರವಂ ಗೈಯ್ಯುತ್ತಿರುವೆ. ಇದು ನಿನಗೆ ಕಡೆಗಾಲವಾಗಿ ತೋರುತ್ತಿರುವುದು ನೋಡೊ ಮಧುಸೂದನ ಮಾಡು ಯನ್ನೊಳ್ ಕದನ.

ಪದ

ನೋಡಲೆ ಪಾರ್ಥನೆ ಯಿದೆ ಯನಗೆ ನೀಂ
ಜೋಡಿಸಿ ಅಸ್ತ್ರವ ತೋಡುವೆ ರುಧಿರವ ಹರಿಯೆ॥

ಕೃಷ್ಣ : ಯಲವೊ ನರನೆ, ನೀನೆನಗೆ ಸಮನೆ ಗಾಢದಿಂದ ಯೀ ದಿವ್ಯಾಸ್ತ್ರವನ್ನು ಬಿಟ್ಟು ನಿನ್ನ ತನುವಿನಲ್ಲಿರುವ ಬಿಸಿನೆತ್ತರನ್ನು ಹಸನಾಗಿ ತೋಡಿ ಯೀ ವಸುಮತಿಯಲ್ಲಿ ಕೆಡಹಿ ಬಿಡುತ್ತೇನೆ ನೋಡೊ ಪಾರ್ಥ ನಿನ್ನ ಸಾಹಸ ವ್ಯರ್ಥ.

 

(ಅರ್ಜುನನ ಮೂರ್ಛೆ)

ಪದ

ಯೇಳು ಯೇಳಲೈ ಪಾರ್ಥ ವೇಳೆಯಾಕೆಲೈ ॥
ಮಾತನಾಡೊ ಪ್ರೀತಿತೋರೋ ಧಾತುಗುಂದಿ
ಯಾತಕಿರುವೆ ನೀತಿಯಲ್ಲ ಸ್ವೇತವಾಹನ ಘಾತವದಗಿ ಮಾತ ತೊರೆದ್ಯಾ ॥

ಕೃಷ್ಣ : ಯಲೈ ಯನ್ನ ಮೋಹದ ಭಾವ ಮೈದುನನಾದ ಶ್ವೇತ ವಾಹನನೇ, ಯನ್ನೋಳ್ ಮಾತನಾಡದೆ ಪ್ರೀತಿಯಂ ತೊರೆದು ಧಾತುಗುಂದಿ ನೀತಿಯಿಲ್ಲದೆ ಯಾತಕ್ಕೆ ಯೀ ಧರೆಯೋಳ್ ಮರುಳನಂತೆ ಮರೆದು ಮಲಗಿರುವೆ. ಭರದಿಂ ಯನ್ನಲ್ಲಿ ಮಾತನಾಡಿ ಪ್ರೀತಿಯಂ ತೋರೊ ಪಾರ್ಥ ನೀ ಸಮರ್ಥ॥

ಪದ

ಅರಿಗಳ ಜಯ ಧುರ ವಿಜಯನೆ
ಮರುಳನಾಗಿ ನೀಂ ದುರುಳ ಗಯನಿಗಾಗಿ
ನೀನು ಧುರದಿ ಮೈದೊರಗಬಹುದೇ ॥

ಕೃಷ್ಣ : ಯಲೈ ವಿಜಯನೆ, ಮೂರು ಲೋಕದ ಗಂಡ ಅರಿತಿಮಿರ ಮಾರ‌್ತಾಂಡನೆಂಬ ಬಿರುದಂ ಧರಿಸಿರುವ ವೀರಫಲ್ಗುಣನೆ ನೀಂ ಮರುಳನಂತೆ ವೈರಿಯಾದ ಗಯನಿಗಾಗಿ ಧುರದೋಳ್ ನೀ ಮೈಮರೆದೊರಗಬಹುದೆ. ಅರಿಗಳು ಅಪಹಾಸ್ಯವಂ ಮಾಡದಿರುವರೆ ಪಾರ್ಥ ನೀ ಬಹುಸಮರ್ಥ.

ಪದ

ಪ್ರೀತಿ ಮೈದುನ ತೊರೆದೆ ಯನ್ನ ನಾಂ
ನೀತಿವಂತ ಪಂಥವಾಂತೆ ಯಾತಕೆನ್ನೊಳು
ಮಾತ ತೊರೆದೆ ದಾತನಲ್ಲವೆ ನಿನಗೆ ನಾನು ॥ಏಳು ಏಳಲೈ ॥

ಕೃಷ್ಣ : ಯಲೈ ಯನ್ನಯ ಮೈದುನನಾದ ಕಿರೀಟಿಯೆ. ಯನ್ನ ಜೊತೆಯಂ ತೊರೆಯಬಹುದೆ. ಬಲವಂತನೆನಿಸಿದ ನೀನು ಯನ್ನೋಳ್ ಮಾತನಾಡದೆ ಮುನಿದು ಸುಮ್ಮನಿರುವೆ. ನಿನ್ನನ್ನು ಪರಿಪರಿಯಾಗಿ ಪೊರೆದ ಕರುಣಾಳು ನಾನಲ್ಲವೆ. ಸರಸದಿಂದೆದ್ದು ಭರದಿಂ ಮಾತನಾಡಿ ಪ್ರೀತಿಯಂ ತೋರುವನಾಗೈ ಭೀಭತ್ಸ ತೋರು ನಿನ್ನ ಸಾಹಸ.

 

(ಅರ್ಜುನನ ಎಚ್ಚರ)

ಅರ್ಜುನ : ಬಾರೊ ಶೌರಿ, ನಿನ್ನ ಶೌರ‌್ಯವೆಷ್ಟಿದ್ದಾಗ್ಯೂ ಬೇಗನೆ ತೋರಿಸುವನಾಗು. ಯಿಕೋ ನೋಡು ಯನ್ನ ಮುಡಿಗೆಯಲ್ಲಿರುವ ಮಹಾ ಕ್ರೂರವಾದ ಸರ್ಪ ಬಾಣವನ್ನು ಪ್ರಯೋಗಿಸುತ್ತೇನೆ. ನಿನ್ನ ಶಕ್ತಿ ಸಾಮರ್ಥ್ಯಗಳೆಷ್ಟಿದ್ದರೂ ಇದರ ಮೇಲೆ ತೋರಿಸುವನಾಗೊ ಹರಿಯೆ ಜೀವದಾಸೆಯಂ ತೊರೆಯೆ ॥

ಪದ

ಸರ್ಪಶಯನ ನಾನೆ ಆಗಿ ಇರ್ಪೆ ಕಾಣೆಲಾ
ಕ್ಷಿಪ್ರದಿಂ ಸುಪರ್ಣ ಬಾಣ ಭಕ್ಷಿಸುವದಲಾ॥

ಕೃಷ್ಣ : ಯಲವೊ ನರನೆ, ಯನ್ನ ಪರಿಯನ್ನು ನೀನರಿಯದವನೆ. ಸರ್ಪಶಯನನೆಂಬ ಪೆಸರನ್ನು ಪಡೆದು ಸರ್ಪವೇ ನನಗೆ ಹಾಸಿಗೆಯಾಗಿರುವಾಗ ನೀ ಬಿಡುವ ಸರ್ಪ ಬಾಣವು ನನ್ನನ್ನು ಏನು ಮಾಡಬಲ್ಲದು. ಅದಕ್ಕೆ ಪ್ರತಿಯಾಗಿ ಗರುಡಾಸ್ತ್ರವನ್ನು ಪ್ರಯೋಗಿಸಿ ಬಿಡುತ್ತೇನೆ. ನಿನ್ನ ಸರ್ಪನಂ ಭಕ್ಷಿಸಿ ಹಿಂದಿರುಗುವುದು. ಇದು ನಿನಗೆ ಘನವೇನೊ ಅರ್ಜುನ ನಿನ್ನಲ್ಲಿರುವುದು ದುರ್ಗುಣ.

ಪದ

ಪಾಶುಪತವ ತೆಗೆದು ಬಿಡುವೆ ಯೀಶ ಕೊಟ್ಟಿಹ
ವಾಸುದೇವ ನಿನ್ನ ಅಸುವ ನಾಶಗೊಳಿಪುದೊ ॥

ಅರ್ಜುನ : ಯಲವೊ ವಾಸುದೇವನೆ. ಯನ್ನ ಉನ್ನತವಾದ ಸಾಹಸಕ್ಕೆ ಮೆಚ್ಚಿ ಪರಶಿವನು ಇಂದ್ರಕೀಲಾರಣ್ಯದಲ್ಲಿ ಸಂಭ್ರಮದಿ ಕೊಟ್ಟ ಅಮೋಘವಾದ ಪಾಶುಪತವೆಂಬ ಮಹಾಬಾಣವಂ ನಿನ್ನ ಮೇಲೆ ಪ್ರಯೋಗಿಸುತ್ತೇನೆ. ಇದು ನಿನ್ನ ತನುವನ್ನು ಇನ್ನಿರಿಸಲಾರದು. ನಿನ್ನ ಶೌರ‌್ಯವನ್ನು ಇದರ ಮೇಲೆ ತೋರೊ ಹರಿಯೆ.

ಪದ

ಯನ್ನ ಚಕ್ರವನ್ನು ಬಿಡುವೆ ಇನ್ನು ನಿನ್ನಯಾ
ಉನ್ನತಾದ ಶಿರವ ತರಿದು ಭಿನ್ನ ಮಾಳ್ಪುದು

ಕೃಷ್ಣ : ಯಲವೊ ಕಿರೀಟಿಯೆ. ಇಕೊ ನೋಡು ಯನ್ನ ಹಸ್ತದೋಳ್ ಪ್ರಖ್ಯಾತಿ ಹೊಂದಿ ಪ್ರಜ್ವಲಿಸುವ ಯೀ ಸುದರ್ಶನವಂ ಪ್ರಯೋಗಿಸುತ್ತೇನೆ. ಅದು ನಿನ್ನನ್ನು ಅಂತಕನಾಲಯಕ್ಕೆ ಸಂತಸದಿಂದ ಕಳುಹಿಸಿ ಬಿಡುತ್ತದೆ. ನಿನ್ನ ಪಂಥವೆಲ್ಲಾ ನಿಂತು ಹೋಯಿತೊ ಫಲ್ಗುಣ ತೀರಿತು ನಿನಗೆ ಭೂಮಿಯ ರುಣ.

 

(ಈಶ್ವರ ಪ್ರತ್ಯಕ್ಷ)

ಈಶ್ವರ : ಕೃಷ್ಣಾರ್ಜುನರೆ ತಾಳಿ ತಾಳಿ.

ಕೃಷ್ಣ : ನಮೋನ್ನಮೋ ಶಂಕರಾ.

ಯೀಶ : ನಿನಗೆ ಮಂಗಳವಾಗಲೈ ನಾರಾಯಣ.

ಅರ್ಜುನ : ದೇವ ದೇವ ಗಂಗಾಧರ ನಮೋನ್ನಮೊ.

ಯೀಶ : ಅರ್ಜುನ ನಿನಗೆ ಮಂಗಳವಾಗಲಿ.

ಪದ

ಯೇನಿದು ವಿಪರೀತವೈ ದಾನವಾರಿಯೆ. ಯೇನಿದು ವಿಪರೀತವೈ ॥
ನರನಾರಾಯಣರು ನೀವು ತೊರೆದೈಕಮತ್ಯವ
ಧುರವನೆಸಗುವದು ತರವೇ ಮರುಳರಂತೇ ॥

ಈಶ್ವರ : ಯಲೈ ಪುರುಷೋತ್ತಮನೆ. ನೀವು ನರ ನಾರಾಯಣರು. ನಿಮ್ಮಲ್ಲಿದ್ದ ಮಿತ್ರಭಾವವಂ ತೊರೆದು ಮರುಳರಂತೆ ಆಂತರ‌್ಯದೋಳ್ ಶಾಂತತ್ವವಂ ತೊರೆದು ಧುರವನ್ನೆಸಗುವದು ನಿಮಗೆ ತರವೇನೈ ನಾರಾಯಣನೆ.

ಪದ

ಹರಿನರರೊಳು ಭೇದವಿರಲಿಲ್ಲಿಂದಿನವರೆಗೂ
ಕರುಣ ತೊರೆದು ನೀವು ಧುರವಸೆಗುವದಿದು ॥ಯೇನಿದು ॥

ಈಶ್ವರ : ಹೇ ದೇವ, ದುಷ್ಟ ಶಕ್ತಿ ಶಿಷ್ಟ ರಕ್ಷನೆಂಬ ಬಿರುದಂ ವಹಿಸಿ ಹರಿನರರಲ್ಲಿ ಭೇದವಿಲ್ಲದೆ ಮೋದದಿಂದ ಇರ್ದ ನಿಮಗೆ ಇಂಥಾ ಕಾರಣದಿಂದ ನೀವು ಧುರವನ್ನೆಸಗುವದು ಸರಿಯಲ್ಲವೈ ಶ್ರೀಹರಿ ಯೇನು ಯೀ ಪರಿ.