ಕಂದ

ಪುರಹರನರ್ಧಶರೀರಿಣಿ ಪರಿಪರಿವಿಧದಿಂದ
ಪ್ರಾರ್ಥಿಸಿದೆನಮ್ಮಾ ದುರುಳರ ಸಂಗವಗೈಯದೆ
ಸ್ಮರನಂತೆ ತೋರ್ಪ ಚೆಲ್ವ ಪುರುಷಾನಕೊಟ್ಟು
ಸಲಹೆನ್ನ ಮಾತೆ ಬೇಡುವೆನು ನಿಮ್ಮ
ಲೋಕವಿಖ್ಯಾತೆ
ನಂಬಿದೆನಾತಳ ಬೆಂಬಿಡದೆ ಬೇಗ
ಸಂಭ್ರಮದಲಿ ಚೆಲ್ವ ಪುರುಷಾನ ಕೊಟ್ಟು
ಸಲಹೆನ್ನ ಮಾತೆ, ಬೇಡುವೆನಮ್ಮ
ಲೋಕವಿಖ್ಯಾತೆ

ಪುಂಡರಿಕಾಕ್ಷಿ : ಅಮ್ಮಾ ಶಂಕರಿ. ಪರಿಪರಿವಿಧದಿಂದ ನಿಮ್ಮ ಪಾದ ಪದ್ಮವನ್ನು ಪೂಜಿಸುತ್ತಾ ಇದ್ದೇನೆ. ದುರುಳ ರಕ್ಕಸನಾದ ಬೊಮ್ಮನ ವಶವು ಮಾಡದೆ ಚತುರ ಚನ್ನಿಗನಾದ ಕಾಂತನನ್ನು ತೋರಿಸಮ್ಮ ಮಾತೆ ಲೋಕವಿಖ್ಯಾತೆ-

ಕಂದ

ಪುಂಡರಿಕಾಕ್ಷಿಯೆ ಕೇಳು ಕುಂಡಲಮಿತ್ರನ ಪೋಲ್ವ
ಚಲುವನ ಕೊಡುವೆನು ಮಂಡಲವ ಪಾಲಿಪ ರಾಜನು
ತೊಂಡನೂರಿನ ಸುತೆಯೆ ಕೇಳು

ಅಲ್ಲಿ ಕುಳಿತಿರುವ ಪುಂಡರಿಕಾಕ್ಷಿ ನೋಡು ಬಂದಿರುವ

ಧರೆಯಳುತ್ತಮದಿಂದ ನಗರವ ಪಾಲಿಸುವಂತಾ
ಮಾರ ಭೂಭುಜನ ಕುಮಾರ ಎಂಬುವ ಶೂರ
ಬಂದು ಇಲ್ಲಿರುವ ಬೇಗನೆ ಪೋಗಿ ಕರೆದಾರೆ ಬರುವಾ॥

ಕುಂಭಿಣಿದೇವಿ : ಅಮ್ಮ ಬಾಲೆ. ನಿನ್ನಯ ಮನಸ್ಸಿನ ಕೋರಿಕೆ ಇದ್ದಂತೆ ನಡೆಸಿ ಕೊಡುತ್ತೇನೆ. ಆದ ಕಾರಣ ಈ ಪೊಡವಿಯೊಳ್ ಧಾರಾಪುರಿಯ ಪಟ್ಟಣವ ಪರಿಪಾಲಿಸುವ ಕರಿರಾಜನೆಂಬುವ ಅರಸು ಈ ಕಾನನಕ್ಕೆ ಬಂದು ಇದ್ದಾನೆ. ನೀನು ಚಿಂತೆಯನ್ನು ಮಾಡದೆ-ಪರಮಸಂತೋಷದಿಂದ ಪೋಗಿ ಕರೆದುಕೊಂಡು ಬಾರಮ್ಮ ಬಾಲೆ ಭವ್ಯ ಗುಣಶೀಲೆ-

ಪುಂಡರಿ ಕಾಕ್ಷಿ : ನಿತ್ಯಾನುಷ್ಠಗರಿಷ್ಠ ರಜಸತ್ವ ತಮೋತ್ರಿಗುಣ ಸುಗುಣ ಸಂಪನ್ನೆಯಾದ ಹೇ ತಾಯೆ. ನಮ್ಮ ಕಾನನದ ಚಲುವ ವೃಕ್ಷಗಳ ನೆರಳಿನಲ್ಲಿ ಮಾರಭೂಪಾಲನ ಸುತ ಕರಿರಾಜನೆಂಬ ದೊರೆಯು ಬಂದು ಕುಳಿತಿದ್ದಾನೆಂದು ಪೇಳಿದಿರಿ. ಆದರೆ ಯಾವ ವೃಕ್ಷದ ತಡಿಯೊಳು ಇರುವನೊ ತಾವು ದಯವಿಟ್ಟು ಅಪ್ಪಣೆಯನ್ನು ಕೊಡಬೇಕಮ್ಮಾ ತಾಯೇ ಕರುಣದಿಂ ಕಾಯೆ-

ಕುಂಭಿಣಿದೇವಿ : ಫಳಫಳನೆ ಹೊಳೆಯುವ ಅಳಿಕುಲಮಿತ್ರ ಥಳಥಳ ಇಳೆಶೀತಲ ಮೆರೆಸುತೆ ರತಿಯಂತೆ ಪ್ರಕಾಶಿಸುವ ನಿಜಗುಣಸಂಪನ್ನೆಯಾದ ಹೇ ಬಾಲೆ ನಿಮ್ಮ ಸರೋವರದ ಬಳಿ ಮಲ್ಲಿಗೆ ಕುಸುಮ ಪಾರಿಜಾತ ಸುರಹೊನ್ನೆ ಪರಿಮಳ ವೃಕ್ಷಗಳ ಮಧ್ಯದೋಳ್ ಸಂಪಿಗೆಯ ಮರದ ನೆರಳಿನಲ್ಲಿ ಎಲೆ ಪಚ್ಚೆ ಚಿಗುರುಗಳೋಳ್ ಚೆಲುವ ಶಿಲೆಯ ಮೇಲೆ ಹಾಸಿರುವ ಹಾಸಿಗೆಯೋಳ್ ಕುಳಿತಿರುವನು. ನೀನು ಪೋಗಿ ವಸಂತನಂತೆ ಪೋಲ್ವ ಮುಖವುಳ್ಳ ರಾಯನನ್ನು ನೋಡಿ ಕರೆದುಕೊಂಡು ಬರುವಂಥವಳಾಗಮ್ಮ ಮಗಳೆ ಮಲ್ಲಿಗೆ ಹರಳೆ.

ಪುಂಡರೀಕಾಕ್ಷಿ : ಅಮ್ಮ ತಾಯೆ ತಾವು ಹೇಳಿದ ಪ್ರಕಾರ ಸಂಪಿಗೆಯ ವೃಕ್ಷದ ನೆರಳಿನಲ್ಲಿ ಇಂಪಾಗಿ ಕುಳಿತಿರುವ ದೊರೆಯನ್ನು ಈಗಲೇ ಪೋಗಿ ಕರೆದುಕೊಂಡು ಬರುವೆನಮ್ಮ ತಾಯೆ ಕರುಣದಿಂ ಕಾಯೆ-

ಕುಂಭಿಣಿದೇವಿ : ಅಮ್ಮಾ ಮಗಳೆ. ಪರಮಪಾವನ ಬಿರುದಾಂಕಿತ ಶತಪತ್ರಜಾತೆಯಪತಿಸುತ ಮಕರಧ್ವಜನ ಸತಿಯಂತೆಸೆಯುವ ಪುಂಡರಿಕಾಕ್ಷಿಯೆ ಕೇಳು. ಧರಾಧೀಶ ಮಾರಭೂಪತಿಯ ಸುತ ಈ ಕರಿರಾಯನನ್ನು ನೀನು ವರಿಸಲು ಮುಂದೆ ಸಂದೇಹವಿಲ್ಲದೆ ನಿಮ್ಮಯ ವಂಶಕ್ಕೆ ಕುಂದು ಸಂಭವಿಸದೆ ಎಂದಿಗೂ ತಪ್ಪಲಾರದು. ನಾನು ಬಂದು ಬಹಳ ಹೊತ್ತಾಯಿತು. ಅಂತರ್ಧಾನಳಾಗುತ್ತೇನಮ್ಮಾ ಮಗಳೆ ತಾವರೆ ಹರಳೆ-

ಮಂಗಳಾರತಿ ದರುವು : ಅಟತಾಳ

ಎತ್ತೀದಳಾರತಿಯ ಶಂಕಾರಿಗಿನ್ನು ಬೇಗ
ಬೆಳಗಿದಳಾರತಿಯ ॥

ಶರಣು ಹೊಕ್ಕವರನ್ನು ಸಲಹಿ ರಕ್ಷಿಸುವಂಥ
ಕರುಣಸಾಗರನಾದ ಶಂಕರನರಸಿಗೆ ॥

ಪುರಹರನರ್ಧಾಂಗಿ – ಪರಮ ಕಲ್ಯಾಣಿಗೆ,
ಚರಣಕಮಲಕೆ ದಿವ್ಯ ರತ್ನದ ಆರತಿ ॥

ಕ್ಷಿತಿಯೊಳಗ್ರಜ ಬಳ್ಳಾಪುರದ ಸೋಮೇಶ್ವರನ
ಸತಿಶಿರೋಮಣಿ ಗುಣಮತಿಗೆ ಪಾರ‌್ವತಿಗೆ ॥

ಪುಂಡರೀಕಾಕ್ಷಿ : ಅಮ್ಮಾ ಸಖಿಯೆ. ಮನ್ಮಥನ ಕೈಯಲ್ಲಿರುವ ಪ್ರೇಮದರಗಿಳಿಯಂತೆ ಮೃದುನುಡಿಗಳನ್ನು ಪತ್ನಿಯರ ಕುಲಕ್ಕೆ ತಾ ಶಿರೋರತ್ನವೆಂದೆಣಿಪ ಶತಪತ್ರಲೋಚನೆಯಾದ ಕಟಕಿಯೆ ಕೇಳು ನಿಟಿಲನೇತ್ರೆ ಹರಸಿ ಎನಗೆ ದಿಟ್ಟ ಗಟ್ಟಿತರವಾದ ಅಭಯವನ್ನು ಕೊಟ್ಟು ಇದ್ದಾಳಾದ ಕಾರಣ ಹಿಮಕರ ಪ್ರಭೆಗೆ ಮಿಗಿಲಾದ ಮಕರಾಕ್ಷನಂತೆ ಎಸೆಯುವ ಭೂರಮಣನು ನಮ್ಮ ಕಾನನಕ್ಕೆ ಬಂದು ಇದ್ದಾನಂತೆ. ನೀನು ಅತಿ ತ್ವರಿತದಿಂದಲಿ ಪೋಗಿ ನೋಡಿಕೊಂಡು ಬಾರಮ್ಮ ಸಖಿಯೆ ವರ ಚಂದ್ರಮುಖಿಯೆ-

ಕರಿರಾಜ : ಅಹಹಾ ಇದೇನು ಆಶ್ಚರ‌್ಯ ಹುಲಿ ಕರಡಿ ಸಿಂಹ ಶಾರ್ದೂಲ ಚಮರಿ ಸಾರಂಗ ಮುಂತಾದ ಮೃಗಗಳು ಇರುವ ಕಾಡಿನೊಳ್ ಎನ್ನ ಪರಿವಾರ ಸಾಮಾಜಿಕರು ದಾರಿತಪ್ಪಿ ಎಲ್ಲಿ ಪೋದರೋ, ಕಾಣಲೇ ಇಲ್ಲವಲ್ಲಾ ಈ ಶೃಂಗಾರವಾದ ವನದಲ್ಲಿ ಪನಸ ದಾಳಿಂಭಿ ಮಾವು ಕಿತ್ತಳೆ ಸುರಹೊನ್ನೆದ್ರಾಕ್ಷಿಸಂಪಿಗೆಯ ವೃಕ್ಷಗಳು ಅತಿರಮಣೀಯವಾಗಿವೆ. ಪಚ್ಚವರ್ಣದ ಚಿಗುರುಗಳು ನೋಡಿದರೆ ಅಚ್ಯುತನ ವನದಂತೆ ಕಾಣುವುದು, ಇದು ಅಲ್ಲದೆ ನವಿಲುನಾಟ್ಯಗಳು ಚಕೋರಪಕ್ಷಿಗಳ ಧ್ವನಿಗಳು ಕೋಗಿಲೆಗಳ ರಾಗರಚನೆಗಳು ಗಿಳಿಯ ರಾಮನಾಮಗಳು ಕೇಳಿದರೆ ತುಂಬ ಕರ್ಣಾನಂದವಾಗಿದೆ. ಎನ್ನ ದೇಹದಾಯಾಸವನ್ನು ತೀರಿಸಿಕೊಳ್ಳಲು ಈ ಸಂಪಿಗೆಯ ವೃಕ್ಷದ ನೆರಳಿನಲ್ಲಿ ವಿಶ್ರಮಿಸಿಕೊಳ್ಳಲು ಚೆನ್ನಾಗಿದೆ. ಆದ್ದರಿಂದ ಇಲ್ಲಿಯೇ ಕುಳಿತುಕೊಳ್ಳುವುದುಚಿತವೆ ಸರಿ.

ದರುವು

ಚೆಲುವ ನೋಡಲು ಆನಂದವೀಗಲು॥
ಈತನ ಸೊಬಗು ನೋಡಿದರೆ ಕ್ಷಿತಿಪತಿಯ
ಸುತನು ಪೋಲ್ವ-ಅತಿಶಯದಿ ಇರುವನೀತ
ಸತಿಗೆ ತಕ್ಕ ವರನು ಇವನು ॥

ಕಟಕಿ : ಸುಗಂಧ ಪರಿಮಳವಾಸನೆಯುಳ್ಳ ಈ ಸಂಪಿಗೆಯ ನೆರಳಲ್ಲಿ ಅಸಮಸಾಹಸ ಪರಾಕ್ರಮಗಳುಳ್ಳವನಂತೆ ವ್ಯಸನವಿಲ್ಲದೆ ಕುಶಲದಿಂದಲಿ ಕುಸುಮಶರನಂತೆ ಕುಳಿತಿರುವ ಈತನ ಮುಖ ನೋಡಿದರೆ ಚಂದ್ರಬಿಂಬದಂತೆಯು, ನೇತ್ರಗಳು. ಕಮಲದಂತೆಯೂ ನಾಸಿಕವು ಅತಿರಮಣೀಯ ವಾಗಿಯೂ ಇರುವುದು. ಕಿರೀಟ ಕರ್ಣಕುಂಡಲಧರನಾಗಿಯೂ ಇರುವನು.  ಈತನ ಸೌಂದರ‌್ಯಕ್ಕೂ ನಮ್ಮ ಪುಂಡರಿಕಾಕ್ಷಿಯ ಸೊಬಗಿಗೂ ತಕ್ಕ ಪುರುಷನೇ ಸರಿಯಾಗಿರುವನು. ಈಗಲೆ ಪೋಗಿ ನಮ್ಮ ಮಾತೆಯನ್ನು ಕರೆದುಕೊಂಡು ಬರುವೆನು-

ದರುವು

ತಡಬಡವಿಲ್ಲದೆ ಬಂದಳು ಒಡತಿಗೆ ಬಿಡದೆ
ಪೇಳುವೆನೆಂದೂ ಬಂದು ॥

ಇಂದುಮುಖಿ ಕೇಳ್ ಚಂದಿರನಂದದಿ
ಬಂದು ಇರುವನಮ್ಮಾ ತಾಯೆ ॥

ಸಖಿ : ಅಮ್ಮ ತಾಯೆ ನೀವು ಪೇಳಿದ ಪ್ರಕಾರ ನಾನು ವನಕ್ಕೆ ಹೋಗಿ ನೋಡುವಲ್ಲಿ ಮಾರಸಮಾನ ನೃಪನು ಇದ್ದಾನಮ್ಮಾ ತಾಯೆ-

ದರುವು

ಇಂದಿರಾಪತಿಯೋ ಭಾರತೀಪುರ ಮನ್ಮಥನ ಪಿತನಾದ
ಪಾರ‌್ವತಿಪತಿಯಂತೆ ತಾಯೆ ॥
ಸರಸಿಜ ತಡಿಯೊಳ್ ಮರದ ನೆರಳಿನಲ್ಲಿ
ಕುಳಿತು ಇರುವನಮ್ಮಾ ತಾಯೆ ॥

ಸಖಿ : ಅಮ್ಮಾ ತಾಯೆ ಮಂದಗಮನೆ ಸುಂದರಾಂಗನೆಯಾದ ಪುಂಡರಿಕಾಕ್ಷಿಯೇ ಕೇಳು. ಮನ್ಮಥನಂತೆ ದೃಷ್ಟಿ ಮೂರುಳ್ಳ ಶಂಕರನೋ ಚೈತ್ರನೋ ಸರಸಿಜೋದ್ಭವನಂತೆ ನಮ್ಮ ಕಾನನದಲ್ಲಿ ಸರೋವರದ ಬಳಿಯಲ್ಲಿ ಇರುವ ಚಲುವ ವೃಕ್ಷಗಳ ನೆರಳಿನಲ್ಲಿ ಚೆಲುವ ಚೆಂದಿರನಂತೆ ಕುಳಿತು ಇರುವನಮ್ಮ ಕುಂಧರವದನೆ-

ದರುವು

ನೋಡಿ ಅವನನಾ ನುಡಿಸದೆ ಬೆದರಿ
ಪೋಡಿ ಬಂದೆನಮ್ಮಾ ತಾಯೆ ॥

ಸಡಗರದಗ್ರಜ ಬಳ್ಳಾಪುರ ಮೃಡ
ನರಸಿಯ ದಯದಿಂದ ಕಾಯೆ ॥

ಸಖಿ : ಅಮ್ಮ ತಾಯೆ ಚೆಲುವ ಚೆನ್ನಿಗನಾದ ರಾಯನನ್ನು ನೋಡಿ ಎನ್ನಯ ಮನಸ್ಸು ಸೈರಿಸದೆ ನಿನ್ನ ಮನಸ್ಸಿಗೆ ತಕ್ಕ ಕಾಂತನೆಂದು ತಿಳಿದು ಪರಮಹರುಷದಿಂದಲಿ ಬಂದು ಇದ್ದೇನೆ. ಆದ ಕಾರಣ ಈ ಪೊಡವಿರಕ್ಷಕಿಯಾದ ಅಂಭಿಕಾದೇವಿ ಕೊಟ್ಟ ವರದಿಂದ ನಮ್ಮ ಸುಂದರ ಕಾನನದ ಮಧ್ಯದಲ್ಲಿ ಚಂದಿರನಂತೆ ಪ್ರಕಾಶಿಸುವ ಚೆಲುವನನ್ನು ಪರಮಸಂತೋಷದಿಂದಲಿ ಪೋಗಿ ಕರೆದುಕೊಂಡು ಬರುವಂಥವಳಾಗಮ್ಮ ತಾಯೆ-

ಪುಂಡರೀಕಾಕ್ಷಿ : ಅದೇ ಪ್ರಕಾರವಾಗಿ ಪೋಗೋಣ ನಡಿಯಮ್ಮ ಬಾಲೆ ಸೌಂದರ‌್ಯ ಗುಣಶೀಲೆ-

ದರುವು

ಈತನ್ಯಾರಮ್ಮ ನೀರೇ ತೋರಮ್ಮ
ಕೃಷ್ಣನಾದರೆ ಕೈಯಲಿ ಶಂಖುಚಕ್ರಗಳುಂಟು
ಕೃಷ್ಣನು ತಾನಲ್ಲಾ ಮುಕ್ಕಣ್ಣನಂತಿರುವನ್ಯಾರಮ್ಮ
ಭಲೆ ಪೇಳಮ್ಮ ॥

ಪುಂಡರೀಕಾಕ್ಷಿ : ಅಮ್ಮ ಸಖಿಯೆ ಈ ಲೋಕದೊಳ್ ಮನ್ಮಥನ ಪಿತನಾದ ಯದುಕುಲಾಂಭುದಿ ಚಂದ್ರ ಯಾದವನಂತೆ ತೋರುತ್ತಾ ಇದೆ. ಈತ ಮಾಧವನಾದದ್ದೇ ಆದರೆ ಕೈಲಿ ಶಂಖ ಚಕ್ರಗಳಿಲ್ಲ. ಈತ ತ್ರಿಪುರಾಸುರರ ಗರ್ವವಂ ಮುರಿದ ತ್ರಿಪುರಾಂತಕನಂತೆ ತೋರುತ್ತಾ ಇದೆಯಲ್ಲಮ್ಮ ಸಖಿಯೆ ವರ ಚಂದ್ರಮುಖಿಯೆ-

ದರುವು

ಮುಕ್ಕಣ್ಣನಾದರೆ ಮೂರು ನೇತ್ರಗಳುಂಟು
ಮುಕ್ಕಣ್ಣ ತಾನಲ್ಲ ಕಂದರ್ಪನಂತಿರುವ
ನ್ಯಾರಮ್ಮಾ ಸಖಿಯೇ ಪೇಳಮ್ಮಾ ॥

ಪುಂಡರೀಕಾಕ್ಷಿ : ಅಮ್ಮಾ ಸಖಿಯೆ-ಚಂಚಲಾಕ್ಷಿಯರೊಳಗೆ ಮಿಂಚಿನಿಂದೊಪ್ಪುವ ಅಂಚೆಗಾಮಿನಿ ಯಾದ ಕಟಕಿಯೆ ಕೇಳು ಈತ ಪಂಚಬಾಣನನ್ನು ಸುಟ್ಟು ಬೂದಿಯನ್ನು ಮಾಡಿ ಭಸ್ಮಿತವನ್ನು ಧರಿಸಿದ ಫಾಲಲೋಚನನಂತೆ ತೋರುತ್ತಾ ಇದೆ. ಈತ ಫಾಲಾಕ್ಷನಾದದ್ದೇ ಆದರೆ ಮುಖದಲ್ಲಿ ಮೂರು ನೇತ್ರಗಳಿಲ್ಲ ಈತ ಪಂಚಬಾಣನಂತೆ ತೋರುತ್ತಾನಮ್ಮ ಸಖಿಯೇ ವರ ಚಂದ್ರಮುಖಿಯೇ-

ದರುವು

ಕಂದರ್ಪನಾದರೆ ಕಬ್ಬು ಮಾರ‌್ಗಣವುಂಟು
ಕಂದರ್ಪ ತಾನಲ್ಲ ಕಮಲಜನಂತಿರುವ
ನ್ಯಾರಮ್ಮಾ ಬಾಲೆ ಪೇಳಮ್ಮ ॥

ಪುಂಡರಿಕಾಕ್ಷಿ : ಅಮ್ಮ ಸಖಿಯೆ ಈ ಭೂಮಿಯೊಳ್ ಚರಚೋರರಿಗೆಲ್ಲಾ ವೈರಿಯಂದೆನಿಪ ತಾರಾಧಿಪತಿ ಯಾದ ಚಂದ್ರಂಗೆ ಪ್ರಿಯಜಾತೇ ರತಿಗಧಿಪತಿಯಾದ ಮನ್ಮಥನಂತೆ ತೋರುತ್ತಾ ಇದೆ. ಈತ ಮನ್ಮಥನಾದದ್ದೇ ಆದರೆ ಕೈಲಿ ಕಬ್ಬು ಮಾರ‌್ಗಣವು ಇಲ್ಲ . ಈತ ಕಮಲಜನಾದ ಬ್ರಹ್ಮನಂತೆ ತೋರುತ್ತಾನಮ್ಮ ಸಖಿ-

ದರುವು

ಲೋಕೇಶನಾದರೆ ನಾಲ್ಕು ಮುಖಗಳುಂಟು
ಲೋಕೇಶ ತಾನಲ್ಲ ಕರಿರಾಜನಂತಿರುವ
ನ್ಯಾರಮ್ಮ ಸಖಿಯೆ ತೋರಮ್ಮ ॥

ಪುಂಡರೀಕಾಕ್ಷಿ : ಅಮ್ಮಾ ಸಖಿಯೆ. ಈ ಕ್ಷಿತಿಯೊಳ್ ಶಾರದೆಗೆ ಪತಿಯಾದ ವಾರಿಜಾಸನನಂತೆ ತೋರುತ್ತಾ ಇದೆ. ಈತ ವಾರಿಜಾಸನನಾದರೆ ಕಾಣುವುದೇ ಚತುರ್ಮುಖಗಳಿಲ್ಲ. ಈತ ಮುರಾರಿಯ ವರದಿಂದ ಪುಟ್ಟಿದ ಕರಿರಾಜನಂತೆ ಇರುವ ಹಾಗಿದೆಯಲ್ಲಮ್ಮಾ ಸಖಿಯೆ ವರ ಚಂದ್ರಮುಖಿಯೆ.

ಸಖಿ : ಸಹಜವಮ್ಮಾ ಮಾತೆ ಸದ್ಗುಣ ಸಂಪ್ರೀತೆ

ಪುಂಡರೀಕಾಕ್ಷಿ : ಅಮ್ಮಾ ಸಖಿಯೆ. ಕಂಗೊಳಿಪ ಮುಖಕಾಂತಿ ಕಮಲದಂತಹ ವದನ ಭೃಂಗ ಕುಂತಳೆಯಾದ ಕಟಕಿಯೆ ಕೇಳು ಪುರುಷನಿಲ್ಲದ ತರುಣಿ ಇಹಳೆಂದು ಮನ್ಮಥನು ಪುಷ್ಪ ಮಾರ‌್ಗಣವಿಲ್ಲದೆ ಮನುಜನಾಕಾರದಲ್ಲಿ ಬಂದು ಎನಗೆ ವಿರಹವನ್ನು ಪುಟ್ಟಿಸಿದ ಚೋದ್ಯದಂತಿದೆ. ಈತ ಎಂತಹ ಮಹಾತ್ಮನು ತಿಳಿಯಲಿಲ್ಲಾ ಮತ್ತು ನಾನು ಮಾತನಾಡಿಸಿದರೆ ಮಾಯವಾಗುವವನೇನೋ ತರಳೆ  ತಾವರೆಯ ಹರಳೆ-

ಸಖಿ : ಅಮ್ಮಾ ತಾಯೆ. ತಾವರೆಯ ಮೊಗ್ಗಿಗೆ ಮಿಗಿಲಾದ ಗುರುಕುಚಗಳುಳ್ಳ ಕೋಗಿಲೆಯ ಸ್ವರದಂತೆ ರಾಗರಚನೆಗಳಿಂದ ಮೃದುನುಡಿಗಳನ್ನು ನುಡಿವ ಪುಂಡರಿಕಾಕ್ಷಿಯೆ ಕೇಳು. ವರದರಾತ್ಮಕಿಯಾದ ಅಂಬಿಕಾದೇವಿ ಕೊಟ್ಟ ವರದಿಂದ ಚಲುವ ಚಂದಿರನಂತೆ ಬಂದು ಇದ್ದಾನೆ. ನೀನು ಚಿಂತೆಯನ್ನು ಮಾಡದೆ ಪರಮಸಂತೋಷದಿಂದ ಪೋಗಿ ಆತನ ಪಾದಪದ್ಮಂಗಳನ್ನು ಪಿಡಿದಿದ್ದೇ ಆದರೆ ನಿನ್ನ ವಶನಾಗುವನಮ್ಮ ತಾಯೆ ಕರುಣದಿಂ ಕಾಯೆ-

ಪುಂಡರೀಕಾಕ್ಷಿ : ಕುಸುಮ ಸುಗಂಧಗಳುಳ್ಳ ಈ ವನ ಮಧ್ಯದೋಳ್ ಪಶುಪತಿಯಸುತ ಮಕರಾಂಕನಂತೆ  ಮುಖವುಳ್ಳಂಥ ಕುಶಲದಿಂದಲಿ ವ್ಯಸನವಿಲ್ಲದೆ ಅಸಮಸಾಹಸ ಪರಾಕ್ರಮದಿಂದ ಮೊಸ ಮೊಸೆವ ಖಡ್ಗವನ್ನು ಹಿಡಿದು ಕುಳಿತಿರುವ ಕಾರಣವೇನು ಬಿಸುಜಾಕ್ಷಿಯಾದ ಎನ್ನ ಮಂದಿರಕ್ಕೆ ಬಂದು ನಸುನಗುತ್ತ ಆಯಾಸವನ್ನು ತೀರಿಸಿಕೊಳ್ಳಲು ದಯಮಾಡಬೇಕು ರಮಣೀಯ ಲೋಲ-

ದರುವು

ಮಾತನಾಡಯ್ಯ ಮದನ-ಕೋಟಿ ಸೂರ್ಯ ॥
ಕುಶಾಲ ನಿಮ್ಮ ವಸುಧೆ ಯಾವುದೋ ರಾಯ
ಅಸಹಾಯ ಶೂರ ನಿಮ್ಮ ಪೆಸರೇನಯ್ಯ ರಾಜಾ॥ ॥

ಪುಂಡರೀಕಾಕ್ಷಿ : ಇಕ್ಷು ಸಮರೂಪನಾದ ಹೇ ರಾಜಾ ಈ ಕ್ಷಿತಿಯೊಳ್ ಅತಿಶಯವಾಗಿ ನೀ ಪಾಲಿಸುವಂಥ ದಾವ ಪಟ್ಟಣಕ್ಕೆ ಕಾರಣಕರ್ತರೊ ಮತ್ತು ನಿನ್ನ ಪೆತ್ತ ಜನನೀ ಜನಕರ ಪೆಸರೇನೋ ಅರುಹಬೇಕೈ ವೀರ ಶರಧಿ ಗಂಭೀರ-

ದರುವು

ತಿಳಿಯ ಪೇಳುವೆ ನಾನು ಕೇಳು ಸುಂದರನಾರಿ ॥
ಕುಸುಮಗಂಧಿಯೆ ಕೇಳು ವಸುಧೇಗಾಧಿಪ ಧಾರಾ

ನಗರಾಧಿಪತಿಯ ಕುಮಾರನಾನು ನಾರಿ ॥

ಕರಿರಾಜ : ಹೇ ನಾರಿ ಈ ವಸುಧೆಯೊಳಗೆ ಕುಸುಮಶರನರ್ಧಾಂಗಿಯಂದದಿ ಎಸೆಯುವ ಕುಸುಮಗಂಧಿಯೆ ಕೇಳು ಈ ವಸುಧೆಗುತ್ತರವಾದ ಧಾರಾಪುರ ಪಟ್ಟಣಕ್ಕೆ ಕಾರಣಕರ್ತರಾದ ಕಂದರ್ಪ ಸಮರೂಪ ಧರ್ಮಗುಣದೀಪನೆಂದೆನಿಪ ಮಾರಭೂಪತಿಯ ಚಿತ್ತಕ್ಕೆ ಒಪ್ಪುವ ಕನ್ಯೆಯರೋಳ್ ಶಿರೋರತ್ನವೆಂದೆನಿಪ ಬಲನವಂತಾ ದೇವಿಯ ಗರ್ಭದಲ್ಲಿ ಮುರಾರಿಯ ವರದಿಂದ ವರ ಸುಧಾಂಶುವಿನಂತೆ ಜನಿಸಿದ ಹರಿಕರಿಸಿಂಹರೂಪನಾದ ಕರಿರಾಜನೆಂದು ಕರೆಯುವರೆ ನಾರಿ ಸೌಂದರ‌್ಯಗುಣ ಪೋರಿ-

ದರುವು

ಸುಂದರಾಂಗನೆ ನೀನು ಇಂದು ಎಲ್ಲಿಗೆ ಪೋಪೆ
ಸಿಂಧು ಗಂಭೀರ ಇಲ್ಲಿ ಬಂದದ್ಯಾಕಯ್ಯಾ ॥

ಪುಂಡರೀಕಾಕ್ಷಿ : ವಸಂತಋತು ಕಾಲದಲ್ಲಿ ಶೃಂಗಾರವಾದ ವನಗಳಿಗೆ ಕಾರಣಕರ್ತನಂತೆ ಚೆಲುವ ಚೆನ್ನಿಗನಾದ ವಸಂತ ದೇವರಂದದಿ ಪ್ರಕಾಶಿಸುವ ಹೇ ರಾಜ ನಮ್ಮ ಕಾನನದ ಚೆಲುವ ವೃಕ್ಷಗಳ ನೆರಳಿನಲ್ಲಿ ಚೆಲುವ ಚಂದಿರನಂತೆ ಬಂದು ಕುಳಿತಿರುವ ಕಾರಣವೇನು ಮತ್ತು ಧಾವ ಕಾರ‌್ಯಕ್ಕೆ ಬಂದು ಇದ್ದೀಯೆ ತಿಳಿಯಲಿಲ್ಲ ಪೇಳಬೇಕೈ ರಾಜಾ ಮಾರ್ತಾಂಡತೇಜಾ-

ದರುವು

ಹಳೆಯಬೀಡಿನ ಪುರಕೆ ತರುಣಿ ಪೋಪೆನು ನಾನು
ಇಳೆಯ ಮೋಹಿನಿಯೆಂಬ ತರುಣಿಗೋಸುಗ ನಾರಿ॥

ಕರಿರಾಜ : ಚಿತ್ತಜನ ಪೊಸಸಾನೆ ಕತ್ತಿಯಂ ಜಳುಪಿಸಲು ತತ್ತಳಿಪ ಕಾಂತೆಗಿಮ್ಮಿಗಿಲಾದ ಪುತ್ಥಳೀ ಬೊಂಬೆಯಂತೆ ಎಸೆಯುವ ಮತ್ತಗಜಗಾಮಿನಿಯಾದ ತರುಣಿಯೆ ಕೇಳು. ಈ ಧರಾಮಂಡಲದಲ್ಲಿ ಆ ಮಾರಾರಿಯ ಕರುಣದಿ ಹಳೆಯಬೀಡಿನ ಪಟ್ಟಣಕ್ಕೆ ಕಾರಣಕರ್ತನಾದ ಕಂದರ್ಪ ಸಮರೂಪ ಬಲ್ಲಾಳ ಭೂಪತಿಯ ಮೋಹದಪುತ್ರಿ ಧಾತ್ರಿ ಮೋಹಿನಿ ಎಂಬ ಕಾಮಿನಿಯು ಈ ಧರಿತ್ರಿಯಂ ಪರಿಪಾಲಿಸುವ ಕ್ಷತ್ರಿಯರಂ ಮೆಚ್ಚದೆ ಮತ್ತ ಗಜಗಾಮಿನಿಯು ಎನ್ನಯ ಚಿತ್ರ ಪಟವನ್ನು ನೋಡಿ ಬಿತ್ತರಿಸಿದಳಾದ ಕಾರಣ ಆಕೆಯ ಪರಿಣಯಕ್ಕಾಗಿ ಪೋಗಿ ಬರುತ್ತೇನೆ ನಾರಿ ಗುಣ ಗಂಭೀರಿ-

ದರುವು

ನಾರಿ ನೀನಾರೆ ಮಧುರವಾದ ನೀನಾರೆ ॥
ವಾರಿಜಾಕ್ಷಿ ಅಡವಿಯೊಳಗೆ ಕ್ರೂರಜಾತಿ ಮೃಗಗ
ಳೊಳಗೆ ಭಯವು ಇಲ್ಲದೆ ತಿರುಗುವಂಥ ಬಾಲೆ
ನೀನು ಯಾರು ಪೇಳೆ ॥

ಕರಿರಾಜ : ಝೇಂಕರಿಪ ಈ ಕಾಠಿಣ್ಯತರವಾದ ಘೋರ ಅಟವಿಯೊಳ್ ಹೂಂಕರಿಪ ಕರಿ, ಸಿಂಹ, ಶಾರ್ಧೂಲ, ವ್ಯಾಘ್ರ, ಗಂಡಭೇರುಂಡ ಮೃಗಜಾತಿಗಳ ತಂಡಗಳಲ್ಲಿ ಸಂಚರಿಪ ಕಡವೆ, ಕಾಡೆಮ್ಮೆ, ಸಾರಂಗ, ಕರಡಿ, ಹಂದಿ, ಹುಲ್ಲೆ ಮುಂತಾದ ದುಷ್ಠ ಮೃಗ ಜಾತಿಗಳು ಸಂಚರಿಪ ಈ ಅಟವಿಯೋಳ್ ಝಣ ಝಣತ್ಕಾರ ಶಬ್ಧಗಳಿಂದ ಸಂಚರಿವ ನೀನ್ಯಾರೆ ನಾರಿ ಮದನ ಕಠಾರಿ-

ದರುವು

ತಿಳಿಯಪೇಳುವೆ ರಾಜಾಚಂದ್ರ ಪೇಳುವೆನು ರಾಜೇಂದ್ರ ॥
ಹರನಿಂದ ಜನಿಸಿದ ವಸುಧಾಧೀಶನು ನೀನು ಸುರಗಂಗೆ
ವರದಿ ನಾನುದಿಸಿದೆನಯ್ಯ ॥

ಪುಂಡರೀಕಾಕ್ಷಿ : ಅಯ್ಯ ರಾಜಾ. ಚಂದ್ರಶೇಖರನಾದ ಶಂಕರನ ವರದಿಂದ ಉದ್ಭವಿಸಿದಂಥ ಚಲುವ ಚಂದಿರನಂತೆ ಎಸೆಯುವ ಚದುರನೇ ಕೇಳು ಹರನ ಅರ್ಧ ಶರೀರಿಣಿಯಾದ ಸುರಗಂಗೆಯ ವರದಿಂದ ಉದಿಸಿದಂಥ ತರುಣಿ ನಾನೈ ರಾಜಾ ರವಿಸಮತೇಜ-

ದರುವು

ಎಳೆಯ ಪ್ರಾಯದ ಚೆಲುವೆಜಾಣೆ ಜವ್ವಾಜಿಯ ಚರಣಿ
ನಿನ್ನಂತಾ ಚದುರೆ ನಾ ಕಾಣೆ ॥
ಕುಂಧಾರಧರೆ ನಿನ್ನ ಪಟ್ಟಾಣ ಯಾವುದೆ ತಂದೆ ತಾಯಿ
ಗಳಾರು ಕುಲದ ಕುರುಹು ಪೇಳೆ ॥

ಕರಿರಾಜ : ಏ ನಾರಿ. ನೀನಾರು, ನಿನ್ನ ಪಟ್ಟಣ ಯಾವುದು ನಿನ್ನ ಪೆತ್ತ ಜನನೀ ಜನಕರ ಪೆಸರೇನೂ ನಿನ್ನ ಕುಲದ ಕುರುಹು ಏನು ಪೇಳಬಹುದೆ ನಾರಿ ನವರಸ ಅಲಂಕಾರಿ-

ದರುವು

ಮಂಡಾಲಪತಿ ಧಾತ್ರಿಯೋಳ್-ಉತ್ತಮ ತೊಂಡನೂರು
ದೈತ್ಯೇಂದ್ರ ಸಲಹಿದ ಕೇಳು॥
ಚಂಡ ದಾನವಿಗೆ ಭೇತಾಳನು ಪತಿಯಾಗಿ
ಕಂಡು ವಿಕ್ರಮನು-ಕೊಂಡೋದ ಸದ್ಗತಿಗಾಗಿ ॥

ಪುಂಡರೀಕಾಕ್ಷಿ : ಅಯ್ಯ ರಾಜಾ. ಈ ಭೂಮಂಡಲದೋಳ್ ತಂಡಗನಪುರಿ ಪಟ್ಟಣಕ್ಕೆ ಕಾರಣಕರ್ತನಾದ ದೈತ್ಯೇಂದ್ರನು ಚಂಡ ದಾನವಿ ಎಂಬ ರಕ್ಕಸಿಯನ್ನು ಸಲಹಿದನು. ಅಂತೊಪ್ಪ ರಕ್ಕಸಿಗೆ ಭೂತ ಪ್ರೇತ, ಪಿಶಾಚಾಧಿಗಳಿಗೆ  ಶ್ರೇಷ್ಠವೆಂದೆನಿಪ ಬೇತಾಳನಿಗೆ ಕೊಟ್ಟು ಮದುವೆಯನ್ನು ಮಾಡಿರಲು ಗಂಡುಗಲಿಯಾದ ವಿಕ್ರಮಾದಿತ್ಯರಾಯನು ಕಳುವಿನಿಂದಲಿದ್ದು ತನ್ನ ಸೇವೆಗೋಸ್ಕರವಾಗಿ ಇರಿಸಿಕೊಂಡು ಕಡೆಗೆ ಸದ್ಗತಿಗಾಗಿ ಕೊಂಡುಪೋಗಲು ರಕ್ಕಸಿಯು ಬಹಳ ದುಃಖದಿಂದ ಇದ್ದಾಳಯ್ಯಾ ರಾಜಾ ಮಾರ್ತಾಂಡತೇಜಾ-

ಕಂದಾರ್ಥ

ಪತಿ ಬೇತಾಳನ ವಿಕ್ರಮ ಹಿತದಿಂ ಕೊಂಡೋದ ಬಳಿಕ
ಪುತ್ರಿಯಂ ಪಡೆಯಲು ಕ್ಷಿತಿಗಂಗೆಯ ಸ್ನಾನಾದಿ ಬೇಡಲು
ಸುತೆ ಯನ್ನನು ಕೊಟ್ಟಳಯ್ಯ
ಧರುಣಿಪಾಲನೆ
ಕೇಳೆಲೋ ಜಾಣಾ
ಸುಮಶರ ಬಾಣಾ
ದುರುಳರಕ್ಕಸನೀಗೆ ತರುಣಿ ಎನ್ನನು ಕೊಟ್ಟು
ಪರಿಣಯಮಾಡುವ ಪರಿಯಲೋಚಿಸಿದಳು
ಕೇಳೆಲೋ ಜಾಣಾ
ಸುಮಶರ ಬಾಣಾ

ಪುಂಡರೀಕಾಕ್ಷಿ : ಸ್ಮರನ ಸಮರೂಪನಾದ ಹೇ ರಾಜಾ ಗಂಡನಗಲಿ ಪೋದನೆಂದು ಚಂಡದಾನವಿಯಾದ ರಕ್ಕಸಿಯು ಈ ಧರೆಯ ಪುಣ್ಯಕ್ಷೇತ್ರಗಳಲ್ಲಿ ಸ್ನಾನವನ್ನು ಮಾಡಿದ ಫಲದಿಂದ ಸುರಗಂಗೆಯ ವರದಿಂದ ಈ ದಾನವಿಯ ಗರ್ಭದಲ್ಲಿ ಸ್ಮರನರಸಿಗೆಣೆಯಾಗಿ ಉದಿಸಿ ವರ್ಧಿಸಿದೆ. ದುರುಳರೋರ್ವನು ಬೊಮ್ಮ ಖಳಸೋದರಂಗೆ ಎನ್ನನ್ನು ಕೊಟ್ಟು ಮದುವೆ ಮಾಡುತ್ತೇನೆಂದು ನಿಶ್ಚೈಯಿಸಿದಳಾದ ಕಾರಣ ನನ್ನ ಮನಸ್ಸಿನಲ್ಲಿ ದುಃಖಿಸುತ್ತಾ ಇಳೆಯ ರಕ್ಷಕಿಯಾದ ಅಂಬಿಕಾದೇವಿಯನ್ನು ಕುಶಲ ಭಕ್ತಿ ಭಾವಗಳಿಂದ ಬೇಡಲು ನಿಮ್ಮನ್ನು ತೋರಿಸಿದಳೈ ರಾಜಾ ಮಾರ್ತಾಂಡತೇಜಾ-

ಕಂದಾರ್ಥ

ಕುಂದರತನಯೇ ಕೇಳ್ ನೀ ಸಿಂಧುವಿನ ವರದಿಂದ
ಪುಟ್ಟಿರಬಹುದೆ ಸುಂದರಿ ಎನ್ನೋಳ್ ನಿನಗೀ
ಚಂದದ ಮಾತನು ಪೇಳ್ವೆ ಚಂದಿರವದನೇ

ರಕ್ಕಸಿ ಮಗಳೆ
ಬೇಗಾನೆ ತೆರಳೆ

ಶಿಂಶುಮತಿಯಾದ ಕಂಸನವೈರಿಯು ಹಿಂಸೆ
ಪಟ್ಟಿರುವಂಥ-ಅಂಶವು ನಾ ಬಲ್ಲೆ-ರಕ್ಕಾಸಿ ಮಗಳೆ

ಬೇಗಾನೆ ತೆರಳೆ
ರಕ್ಕಸಿ ಮಗಳೆ

ಕರಿರಾಜ : ಹೇ ನಾರಿ ಸರಸಿಜೋದ್ಭವನ ಸಖ ಸ್ಮರಹರನಾದ ಹರಸರಸಿ ಗಂಗೆಯ ವರದಿಂದ ಧರಾದೇವಿಯಾದ ಕುಂಭಿಣಿದೇವಿಯನ್ನು ಪರಮಭಕ್ತಿಗಳಿಂದ ಪೂಜಿಸಿದ್ದರಿಂದ ಎನ್ನನ್ನು ತೋರಿಸಿದಳೆಂದು ನುಡಿಯುವೆ. ಆದರೆ ನೀನು ದುಷ್ಟದನುಜೆಯ ಮಗಳಲ್ಲದೆ ಉತ್ತಮರಲ್ಲಿ ಪುಟ್ಟಿದವಳಲ್ಲ. ಆದ್ದರಿಂದ ನಿಮ್ಮ ಕೆಟ್ಟವರಲ್ಲಿ ಕೂಡಿದರೆ ಕಷ್ಠವು ಎಂದಿಗೂ ತಪ್ಪಲಾರದು. ಈ ಸೃಷ್ಟಿಯೋಳ್ ದುಷ್ಟನಿಗ್ರಹವನ್ನು ಮಾಡಿ ಶಿಷ್ಟರನ್ನು ಪಾಲಿಸುವ, ಇಷ್ಠಾರ್ಥ ಕೊಡುತಿರ್ದ ಶ್ರೀಕೃಷ್ಣನು ಆ ಸುರೇಂದ್ರನ ಸುತೆ ಶಿಂಶುಮತಿಯಿಂದ ಕಷ್ಟಪಟ್ಟವನಾದ ಕಾರಣ ನಿನ್ನಲ್ಲಿ ನಾನು ಸುಖಿಸಲು ಸಂಶಯವಾಗಿ ತೋರುವುದೇ ರಮಣೀ ಸದ್ಗುಣಾಭರಣೀ-

ದರುವು

ತಿಳಿಯಪೇಳಿದೆ ನೋಡೊ ರಮಣ ಇಳೆಯಾಧಿಪನೆ
ಕೂಡೋ ಜಾಣ
ವುಳುಕಲುಚಿತವೇನೋ ರಮಣ ತಾಳಲಾರೆ ಕೂಡೋ
ಸುಗುಣ॥ಬಾಬಾ॥

ಪುಂಡರೀಕಾಕ್ಷಿ : ಅಯ್ಯ ಮದನನತಾಪಕ್ಕಾಗಿ ಮೊರೆ ಹೊಕ್ಕು ಬಂದು ಇದ್ದೇನಾದ ಕಾರಣ ಅತಿ ಜಾಗ್ರತೆಯಿಂದ ಸ್ಮರನ ಕೇಳಿಯೊಳೆನ್ನ ಕೂಡಿ ಸುಖಿಸೈ ರಾಜಾ ಮಾರ್ತಾಂಡತೇಜ-

ದರುವು

ನಡಿನಡಿ ನಡಿನಡಿ ಹುಡುಗಿ ನನ್ನ ಮನಾವೊಡಗಿಕೂಡೆನು
ಬಿಡೆ ದಾರಿ ಕೇಳೆನಾರಿ-
ಧಡಿಗ ರಕ್ಕಸಿಯೋಳ್ ಪಡದ ಕುಮಾರಿಯೆ
ಬಂದದಾರಿ ಹಿಡಿಯೆ ನಡಿಯೆ

ಕರಿರಾಜ : ಹೇ ನಾರಿ. ನಿನ್ನ ಸಕ್ಕರೆಯ ಚೆಂದುಟಿಗೆ ಸಮನಾದ ಸವಿನುಡಿಗಳ ಕೇಳಿ ರಕ್ಕಸದ ಗುರುಕುಚಗಳುಳ್ಳ ಕಾಮಿನಿಯು ಸಿಕ್ಕಿದಳೆಂದು ಅಕ್ಕರದಿಂದ ಕೂಡುವೆನೆಂದು ಇದ್ದೆ ನೀನು. ದುಷ್ಠ ರಕ್ಕಸಿಯ ಮಗಳಾದ ಕಾರಣ ನಾನು ಎಷ್ಟುಮಾತ್ರಕ್ಕೂ ಕೂಡುವುದಿಲ್ಲ. ನೀ ಬಂದ ದಾರಿ ಹಿಡಿಯುವಂಥವಳಾಗೆ ನಾರಿ ನವರಸ ಪೋರಿ-

ದರುವು

ಚಿಕ್ಕ ಪ್ರಾಯದವಳ ನೋಡಿ ಯಾಕೆ ಸುಮ್ಮನಾದೆ ನಲ್ಲಾ॥
ಅಕ್ಕರದಿಂದ ಮನದ ವಿರಹ ಸೊಕ್ಕಿಸು ವರ ರತಿಯ
ತೋರೋ ॥

ಪುಂಡರೀಕಾಕ್ಷಿ : ಹೇ ನಲ್ಲಾ ಎನ್ನ ಅಕ್ಕಸದ ಪ್ರಾಯವುಳ್ಳ ಕಾಮಿನಿಯಂ ಧಿಕ್ಕರಿಸಿ ನೋಡುವುದಂ ಬಿಟ್ಟು ಅಕ್ಕರದಿಂದ ಎನ್ನ ಸಕ್ಕರೆಯ ಚೆಂದುಟಿಗೆ ಸಮವಾದ ರಕ್ಕಸದ ಗುರುಕುಚಗಳನ್ನು ಪಿಡಿದು ಅಕ್ಕರದಿಂದ ಕೂಡಬೇಕಯ್ಯ ನಲ್ಲಾ ಕೇಳೆನ್ನ ಸೊಲ್ಲಾ-

ದರುವು

ಅಸ್ತಿಗಮನೆ ಕೇಳ್ ಶಿವ ಮತಸ್ತರು ನಾವು
ಕುಸ್ತರಿಸಲು ಬೇಡೆ ನಾರಿ
ಅವಿವೇಕದಲಿ ನಿನ್ನನನುಭವಿಸಿದರೆನ್ನ- ಪವ
ನ ಕೆಡುವದಲ್ಲಿ ನಾ ಬಲ್ಲೆ