ಗೌಡರು : ಅಯ್ಯ ರಾಜ, ಈ ಲೋಕದೊಳು ತಾನು ಮಹಾ ಪರಾಕ್ರಮಶಾಲಿ ಆದಾಗ್ಯೂ ಒಂದಾನೊಂದು ವೇಳೆಯಲ್ಲಿ ದುರ್ಬುದ್ಧಿಗಳಿಂದ ಕೋಪಕಾತುರನಾಗಿ ಸುಗುಣವನ್ನು ಬಿಟ್ಟು ಸಮಯೋಚಿತವನ್ನು ಅರಿತು ದಾರಾದರೂ ಬಂದು ಬುದ್ಧಿಯನ್ನು ಪೇಳಿದರೆ, ಕೇಳಿ ಗ್ರಹಿಸುವರಾದ ಕಾರಣ ಈ ವೇಳೆಯಲ್ಲಿ ಈ ಕನ್ನೆ ಕಂದನನ್ನು ನೋಡಿ ಕರುಣಿಸಯ್ಯ ರಾಜಾ ಮಾರ್ತಾಂಡ ತೇಜಾ-

ದರುವು

ಕೂಡೀದ ಸತಿಯ ನೀಡಾಡುವರೇನಯ್ಯ
ರಾಜಚಂದ್ರ ॥

ರೂಢಿಯೊಳಗೆ ನಿನ್ನ ಆಡಿಕೊಂಬುವರಯ್ಯ
ರಾಜಚಂದ್ರ ॥

ರಕ್ಕಸಿ ಎಂದು ನೀ ರಮಣಿಯನ್ನು ಬಿಟ್ಟು
ರಾಜಚಂದ್ರ ॥

ಧಿಕ್ಕರಿಸುವರೇನೋ ಧೈರ್ಯಸಂಪನ್ನನೆ
ರಾಜಚಂದ್ರ ॥

ಗೌಡರು : ಅಯ್ಯ ರಾಜ. ಮತ್ತ ಗಜಗಾಮಿನಿಯಾದ ತರುಣಿ ಇವಳು ನಿನ್ನ ಚಿತ್ತದೊಳು ಭಯವನ್ನು ಪಡದೆ ಈ ರಾತ್ರಿ ಈ ದೇವಾಲಯದಲ್ಲಿ ನೀವು ದಂಪತಿಗಳು ಹಿತವಾಗಿದ್ದರೆ ಈ ಪೊಡವಿ ರಕ್ಷಕನಾದ ಶಂಕರನು ನಿನ್ನ ಸಂರಕ್ಷಣೆ ಮಾಡುವನು. ಆದಕಾರಣ ಈ ಕನ್ನೆ ಈ ಕಂದನನ್ನು ನೋಡಿ ದಾನವಿ ಎಂದು ಎಣಿಸತಕ್ಕದ್ದು ನಿನಗೆ ಉಚಿತವಲ್ಲಾ. ಲೋಕದಲ್ಲಿ ಸತ್ಯವಂತರ ಮಾತುಗಳು ಯಾವ ಮನುಷ್ಯರಾದರೂ ಕೇಳಬೇಕೆಂಬ ನೀತಿ ಉಂಟಾಗಿರುವುದಾದ ಕಾರಣ ನೀನು ನಮ್ಮಗಳ ಮಾತನ್ನು ಲಾಲಿಸಿ ಈ ಕನ್ನೆ ಕಾಮಿನಿಯ ಮನಸ್ಸು ಸಂತೋಷಪಡಿಸಿ ಸುಖದಿಂದ ಇರುವಂಥವನಾಗಯ್ಯ ರಾಜಾ ಮಾರ್ತಾಂಡ ತೇಜಾ ॥

ದರುವು

ಖಳಸತಿ ಅಲ್ಲೆಂದು ಕಳವಳ ಪಡುವಳು
ಬಳಕುತ ಬಳಲುವಳು ರಾಜ ॥

ಬಳಲಿರುವಳು ಬಂದಳಲಿಪುದುಚಿತವು
ಬಾಲೆಯ ಕೂಡಯ್ಯ ರಾಜ ॥

ಗೌಡರು : ಅಯ್ಯ ರಾಜ. ರಕ್ಕಸರ  ಕಾಮಿನಿ ನಾನಲ್ಲವೆಂದು ಅಕ್ಕರದಿಂದ ಪೇಳುತ್ತಾ ಇದ್ದಾಳೆ. ನೀನು ಅಕ್ಕರದಿಂದ ಕೂಡುವಂಥವನಾಗಯ್ಯ ರಾಜಾ ರವಿಸಮತೇಜಾ ॥

ದರುವು

ಬಲ್ಲಿದನಹುದು ನಮ್ಮಲ್ಲಿ ಸಿಕ್ಕಿದ ಮೇಲೆ
ಸಲ್ಲದು ದುರ್ನೀತಿ ರಾಜ
ನಲ್ಲೆಯನೊಂದಿರುಳಲ್ಲಿ ಕೂಡಿದ ಕಡೆ
ಯಲ್ಲಿ ನೋಡುವೆವು ರಾಜ ॥

ಗೌಡರು : ಅಯ್ಯ ರಾಜ. ನೀನು ಮಹಾ ಪರಾಕ್ರಮಶಾಲಿಯಾಗಿ ಕಾಣುತ್ತಾ ಇರುವುದೇನೋ ಸಹಜ ಮತ್ತು ಈ ರಾತ್ರಿ ಈ ಕಾಮಿನಿಯನ್ನು ಕೂಡುವಂಥವನಾಗಯ್ಯ ರಾಜಾ ರವಿಸಮತೇಜಾ.

ದೊರೆ ದರುವು

ವಕ್ಕಲಿಗರ ಪ್ರಭು ವಲ್ಲದೆಂಬುವ ನೀತಿ
ತಕ್ಕ ಕಾರ್ಯವು ಸಹಜಾ ಕೇಳಿ
ರಕ್ಕಸಿ ಎನ್ನನು ಕೊಂದರೆ ನೀವೆಲ್ಲ
ಮಾತಿಗೆ ಸಿಕ್ಕುವಿರಿ ಕೇಳಿ ॥

ಅಯ್ಯ ಗೌಡ ಪ್ರಭುಗಳಿರಾ

ಕರಿರಾಜ : ವಕ್ಕಲಿಗ ಪ್ರಭುವಲ್ಲ ಬೆಕ್ಕು ಹೆಬ್ಬುಲಿಯಲ್ಲ ಕಕ್ಕೇಯ ಕಾಯಿ ದುದಿಯಲ್ಲ ಇವ ಮೂರು ಲೆಕ್ಕಕ್ಕೆ ಇಲ್ಲವೆಂದು ಮಹಾಮಹಿಮನಾದ ಸರ್ವಜ್ಞ ಸಂಭೂತನಾದ ಮುನಿಪುಂಗವನು ಹೇಳಿರುತ್ತಾನೆ. ಆದ್ದರಿಂದ ನಾನು ಎಷ್ಠು ವಿಧವಾಗಿ ಪೇಳಿದಾಗ್ಯೂ ನೀವು ಕೇಳದೆ ರಕ್ಕಸಿ ಅಲ್ಲವೆಂದು ಪೇಳುತ್ತಾ ಇದ್ದೀರಿ. ಅದೇ ಪ್ರಕಾರ ನಿಮ್ಮಯ ವಚನವಾಕ್ಯವಂ ಕೇಳಿ ಸಿಕ್ಕುತ್ತಾ ಇದ್ದೇನೆ. ಸೃಷ್ಠಿ ರಕ್ಷಕನಾದ ಹರನ ಕೃಪೆ ತಪ್ಪಿ ಈ ದುಷ್ಠ ರಕ್ಕಸಿಯು ಎನ್ನ ಪ್ರಾಣವನ್ನು ನಷ್ಠ ಮಾಡಿದ್ದೇ ಆದರೆ ಈ ಸೃಷ್ಠಿಯೋಳ್ ಅಪಕೀರ್ತಿಯನ್ನು ಹೊಂದಿ ಕಷ್ಠವನ್ನು ಪಟ್ಟೀರಯ್ಯ ಗೌಡ ಪ್ರಭುಗಳಿರಾ –

ಗೌಡರು : ಅಯ್ಯ ರಾಜ. ನೀನು ಪೇಳಿದ ಅಭಿಪ್ರಾಯವನ್ನು ನೋಡಿದ್ದೇ ಆದರೆ ಎಮ್ಮಯ ಮನಸ್ಸಿಗೆ ಸಂಶಯ ತೋರುತ್ತಾ ಇದೆ. ಆದರೆ ನಾವು ಪೇಳಿದ ವಚನವು ಸತ್ಯವೆಂದು ತಿಳಿದು ಈ ಮತ್ತ ಗಜಗಾಮಿನಿಯು ಮತ್ಸರದಿ ನಿಮ್ಮನ್ನು ಕೊಂದದ್ದೇ ಆದರೆ ಮತ್ತೆ ವೈಶ್ವಾನರಂಗೆ ತನುವನಿತ್ತು ಮಡಿಯುತ್ತೇವಯ್ಯ ರಾಜಾ –

ಕರಿರಾಜ : ಅದೇ ಪ್ರಕಾರ ನಿಮ್ಮಯ ಮಾತಿಗೆ ಸಿಕ್ಕುತ್ತಾ ಇದ್ದೇನೆ. ಈ ಕಪಟದಾನವಿಯು ನನ್ನನ್ನು ಕೊಂದು ಪ್ರಾಣವನ್ನು ನಷ್ಠಪಡಿಸಿದ್ದೇ ಆದರೆ ಕೀರ್ತಿ ಅಪಕೀರ್ತಿಯು ಎಷ್ಟು ಮಾತ್ರಕ್ಕೂ ತಪ್ಪುವುದಿಲ್ಲವಯ್ಯ ಗೌಡ ಪ್ರಭುಗಳಿರಾ-

ಗೌಡರು : ಅಯ್ಯ ರಾಜಾ. ಈ ರಮಣಿ ನಿನ್ನನ್ನು ಕೊಂದದ್ದೇ ಆದರೆ ನಾವು ಏಳು ಮಂದಿ ಸಹಿತ ಅಗ್ನಿ ಪ್ರವೇಶವನ್ನು ಮಾಡುತ್ತೇವೆ. ಆದ ಕಾರಣ ಈ ರಾತ್ರಿ ಈ ದೇವಾಲಯದಲ್ಲಿ ನೀವು ದಂಪತಿಗಳು ಸಹಿತವಾಗಿ ಸುಖದಿಂದ ಇರುವಂಥವರಾಗಿರಯ್ಯ ರಾಜಾ ರವಿಸಮತೇಜಾ –

ಗೌಡರು : ಅಮ್ಮಾ ತಾಯೆ. ನಿನ್ನ ಮನಸ್ಸಿನೊಳು ಬಹಳ ಸಂತೋಷದಿಂದ ಮೃಷ್ಠಾನ್ನ ಭೋಜನವಂಗೈದು ನಿನ್ನ ಮನೋ ಇಷ್ಠಾರ್ಥವಿದ್ದಂತೆ ನಿನ್ನ ಗಂಡನನ್ನು ನಿನ್ನ ವಶಮಾಡಿದ್ದೇವೆ. ಅತಿ ಜಾಗ್ರತೆಯಿಂದ ನಿನ್ನ ಪತಿಯೊಡನೆ ಕೂಡುವಂಥವಳಾಗಮ್ಮಾ ತರುಣಿ ಸದ್ಗುಣಾಭರಣಿ –

ತೊಂಡನೂರಿ : ಹೇ ನಲ್ಲ ಹೇ ಸುಗುಣ, ಹೇ ಕಾಂತ ಈ ಪರಿಯ ಕಾಮಕೂಟದೊಳು ಎನ್ನ ಕೂಡದೆ ಕಲಹದಿಂದಲಿ ಮುನಿದು ಮಾತನಾಡದೆ ಇರುವ ಮೌನವು ಏತಕ್ಕೊ ನಲ್ಲಾ ನಿನಗಿದು ಸಲ್ಲಾ-

ಬಾಣಂತಿ ದರುವು

ನೋಡಿದಳು ನೃಪತಿಯನು ಮಾಡಿದಳು ಮೋಹವನ್ನು
ಕೂಡು ಕೂಡೆಂದು ಕೈಯಾ ಪಿಡಿಯುವಳು  ॥

ಮಾಡಿದಳು ಕೋಪವನ್ನು ಕೂಡೆಂದು ಕುಚಗಳ
ಪಿಡಿದಾಳು ದೈತ್ಯೆ ನಿಜರೂಪವ ಧರಿಸಿ ॥

ತ್ರಿವುಡೆ

ಕೇಳು ಪಾರ್ವತಿ ದನುಜೆ ರೌದ್ರವತಾಳಿ ಕೋಪದಿ
ಕರಿಯಭಂಟನ ಸೀಳಿದಳು ರವದಿಂದಲಾ ಬೇತಾಳನರಸಿ ॥

ಕುಡಿಕುಡಿದು ರಕ್ತವನು ತೇಗುತ – ಪೊಡವಿಪತಿ
ಯನ್ನು ಕೊಂದಳಮ್ಮಲಿ ನಿಡಿದಳಾಕ್ಷಣ
ಪೂರ್ವದಲಿ ತಾ ಪಡೆದ ಫಲವ ॥

ತೀರಿತೆನ್ನಯ ಶಾಪವಿಲ್ಲಿಗೆ ಹಾರಿಸುತ್ತಾ ಗುಡಿಯ
ಶಿಲೆಯನು ಸೇರಿದಳು ಸುಖದಿಂದ ಗಿರಿಜಾಪತಿಯ ಪುರವಾ ॥

ತೊಂಡನೂರಿ : ಹೇ ಗಗನವಾಣಿಯೆ, ಕರಿರಾಜನ ರಕ್ತಪಾನವನ್ನು ಮಾಡಿದ ಕೂಡಲೆ ಶಾಪ ಪರಿಹಾರವಾಗುವುದೆಂದು ಎನ್ನೊಡನೆ ಗಿರಿಜೆಯು ಪೇಳಿದ್ದಳು. ಅದೇ ರೀತಿ ಮಾಡಿದ್ದರಿಂದ ಶಾಪ ಪರಿಹಾರವಾಯಿತು. ಈಗಲೇ ನಿಜಶರೀರವೆತ್ತಿ ಎನ್ನ ನಿಜಸ್ಥಾನವಾದ ಪಾರ್ವತಿ ಸಮ್ಮುಖಕ್ಕೆ ಹೊರಡುತ್ತೇನೆ-

ಗೌಡರು : ಅಯ್ಯ ಗೌಡ ಪ್ರಭುಗಳಿರಾ. ಇಂದಿನ ರಾತ್ರಿಯಲ್ಲಿ ಕರಿರಾಜನು ಪೇಳಿದ ಮಾತುಗಳು ಕೇಳದೆ ಕಪಟ ಕಾಮಿನಿಯ ಮಾತು ನಿಶ್ಚಯವೆಂದು ತಿಳಿದು ಭೂಪತಿಯ ಒಡಂಬಡಿಸಿ ಕಳುಹಿಸಲು ಕುಟಿಲೆ ಪ್ರಾಣವನ್ನು ಕೊಂದು ಕೂಗಿ ಆರ್ಭಟಿಸಿ ಪೋದಳಾದ ಕಾರಣ ನಾವು ಈ ವೇಳೆಯಲ್ಲಿ ಕೊಟ್ಟಂಥ ಭಾಷೆಯನ್ನೂ ತಪ್ಪದೆ ಅತಿ ಜಾಗ್ರತೆಯಿಂದ ಕರಿರಾಜನ ಸಹಿತವಾಗಿ ಅಗ್ನಿ ಪ್ರವೇಶವನ್ನು ಮಾಡುವುದಕ್ಕೆ ಅತಿ ಜಾಗ್ರತೆಯಾಗಿ ಪೋಗೋಣ ನಡಿರಯ್ಯ ಗೌಡ ಪ್ರಭುಗಳಿರಾ –

ವಚನರಾಗಸಾವೇರಿ

ಇಂತು ಸತ್ಯವಂತರಾದ ಗೌಡರು ಶೋಕಿಸುತ್ತಾ ಇರಲು
ಅತ್ತಲಾ ನೃಪೋತ್ತಮನ ಸಚಿವರು ಮತ್ತೆ ಚಾರರಂ
ಕಳುಹಿಸಿ ಮಲ್ಲಿಗನೂರು ವರ್ತಮಾನವು ತಿಳಿದು
ಚಿತ್ತದೊಳತಿ ದುಗುಡವನುಪಟ್ಟು ಮತ್ತೆ ಆ ಪುರವಂ
ಪೊಕ್ಕು ಪೃಥ್ವೀಪತಿನಳಿದುದಂ ಬಿತ್ತರಿಸಿ
ಬನವಂತಾದೇವಿ ಪುತ್ರಶೋಕದಿಂ ಕೂಗಿಡುತ್ತಾ
ಮಲ್ಲಿಗನೂರು ಎತ್ತೆನುತ್ತಾ ನಡೆತಂದು ಮಡಿದಿದ್ದ
ಆತ್ಮಜನಂ ಕಂಡೆಡೆಬಿಡದೆ ಘೋರಶೋಕದಿ
ಮೂರ್ಛೆಯನ್ನಾಂತು ತನ್ನೊಡಲಂ ಬಡಿಯುತ್ತ
ಹಾ ಕಲ್ಪವೃಕ್ಷ ಫಾಲಾಕ್ಷ ಶಂಕರ
ನಿನ್ನ ಕೃಪೆ ತಪ್ಪಿತೇ ಎಂದೆನುತ ಮರುಗಿ ದುಃಖಿಸುತ್ತಿದ್ದಳು
ಪದ್ಮಾಯತಾಕ್ಷಿ –

ದರುವು

ಮಾತನಾಡೆಲೊ ಕಂದ  ಏತಕ್ಕೆ ಮಲಗಿದ್ದಿ
ಕೋಪವೇತಕೊ ಎನ್ನೊಳು ॥

ಪಾಪಿ ವಿಧಿಯು ಬಾಲ ಬೆಂಬಿಡದೆ ನಿನ್ನಾ
ಈ ಪರಿಯಾಯಿತೆ ಇಂದುಶೇಖರ ಕಾಯೋ
ಮಾತಾಡೋ ಕಂದ ॥

ಸುತನೆಂಬೊ ಆಸೆ ಸಂಪೂರ್ಣವಾಯಿತೆ ಇನ್ನು
ಮಕರಾಂಕನ ಪೋಲ್ವ ಮಗನೆ ॥

ಅತಿಶಯಾ ಪರಿಣಯಕ್ಕಾಗಿ ನೀ ಬಂದು
ಪ್ರತಿಕೂಲ ಮಾಡಿತೆ ವಿಧಿಯು ನಿನ್ನನು ಈಗ
ಗತಿಸೀದೆ ಕಂದ ಇನ್ಯಾಗೆ ನಾ ತಾಳಲಿ ಬಾಳಲಿ ॥

ಬನವಂತಾದೇವಿ : ಅಪ್ಪಾ ಕಂದ. ಮಕರಧ್ವಜನಂತೆ ಪ್ರಕಾಶಿಸುವ ಹೇ ಕಂದಮ್ಮ. ಮುಖವೆತ್ತಿ ಎನ್ನೊಡನೆ ಮಾತನಾಡದೆ ಮೌನದಲ್ಲಿ ಮಲಗಿರುವ ಹಾಗೆ ನಿದ್ರೆಯು ಬಂದಂತೆ ಇರುವ ಕಾರಣವೇನು ಮತ್ತು ಎನ್ನೊಡನೆ ಮಾತನಾಡುವಂಥವನಾಗಪ್ಪ ಕಂದ –

ದರುವು

ಈ ಕ್ಷಿತಿಯೊಳು ಬಳ್ಳಾಪುರದಾ ಸೋಮೇಶನು
ಈ ಪರಿ ಮಾಡಿದನೆ ॥

ಸಾರಿ ಸಾರೀ ನಾ ಪೇಳಿದ ಮಾತು ನಿಸ್ಸಾರ
ಮಾಡಿಯೂ ಬಂದು ತನುವ ನೀಗಿದೆ ಕಂದ
ಪೇಳಲಿನ್ನೇನು ಆರೊಳಗಿನ್ನು ಉಸುರಾಲಿನ್ನೇನು ॥

ಬನವಂತಾದೇವಿ : ಅಪ್ಪಾ ಕಂದ. ಹಿಂದೆ ನಾನು ಎಷ್ಠು ವಿಧವಾಗಿ ಪೇಳಿದಾಗ್ಯೂ ನೀನು ಕೇಳದೆ ಮಂದಮತಿಯಿಂದ ಮುಂದಣದ ಅಂದವನ್ನೂ ಅರಿಯದೆ ಮಂದಿಮಾರ‌್ಬಲವು ಸಂದಣಿಯು ಮುಂತಾದ ಅಂದವನ್ನು ಬಿಟ್ಟು ನೀ ಬಂದುದಕ್ಕೆ ನಿನಗೆ ಕುಂದು ಸಂಭವಿಸಲೆಂದು ಕುಮುದಲೋದ್ಭವನಾದ ಬ್ರಹ್ಮನು ಲಿಖಿಸಿದನೋ ಏನೋ ಇದಕ್ಕೆ ಧಾರು ಮಾಡುವುದೇನು. ಆದರೆ ಈ ಕುಂಭಿಣಿಯ ರಕ್ಷಕನಾದ ಶಂಕರನು ನಿನ್ನನ್ನು ಎಂದಿಗೆ ಪಾಲಿಸುವನಪ್ಪಾ ಬಾಲಾ ಸತ್ಯಗುಣಶೀಲಾ-

ಗೌಡರು : ಎಷ್ಠು ಮಾತ್ರಕ್ಕೂ ಚಿಂತೆಯನ್ನು ಮಾಡಲಾಗದಮ್ಮಾ ತಾಯೆ. ಅಯ್ಯ ಚಿಕ್ಕ ಶಾಂತೇಗೌಡರೆ ಕೇಳಿ. ಅತಿ ಜಾಗ್ರತೆಯಿಂದ ಸುಗಂಧ ಕಾಷ್ಠಗಳು, ಗಂಧ ಪರಿಮಳ ದ್ರವ್ಯಗಳು ಘೃತ ತೈಲಗಳು ಸಮೇತ ಸಿದ್ಧಪಡಿಸಿಕೊಂಡು ನಮ್ಮ ಮಲ್ಲಿಗನೂರು ಗ್ರಾಮದ ಪ್ರಜೆಗಳನ್ನೆಲ್ಲಾ ಕರೆಸಿಕೊಂಡು ಸಭೆಯವರನ್ನು ನಿಲ್ಲಿಸಿಕೊಂಡು ಅವರ ಮುಂದೆ ನಮ್ಮ ಸತ್ಯ ವಾಕ್ಯದಂತೆ ನಾವು ಅಗ್ನಿ ಪ್ರವೇಶ ಮಾಡುವುದಕ್ಕೆ ಸಾವಕಾಶವನ್ನು ಮಾಡಲಾಗದಯ್ಯ ಗೌಡರುಗಳಿರಾ –

ಅದೇ ಪ್ರಕಾರ ಅಗಬಹುದಯ್ಯ ಗೌಡರೆ –

ಅಮ್ಮಾ ತಾಯೆ ಕುಸುಮಶರನ ಸತಿ ರತಿಯಂತೆ ತೋರುವ ಹೇ ಜನನೀ. ಹಿಮಕರನ ಪ್ರಭೆಗೆ ಇಮ್ಮಿಗಿಲಾದ ನಿಮ್ಮ ಕುಮಾರನನ್ನು ಚಮತ್ಕಾರವಾದ ಬಾಣಂತಿಯ ಮಾತು ಕೇಳಿ ಶ್ರಮಗೊಳಿಸಿ ನಾವು ಪ್ರಮಾಣ ಕೊಡಲು ನಮ್ಮ ಮಾತು ಸತ್ಯವೆಂದು ತಿಳಿದು ಕರಿರಾಜನು ಈ ದೇವಾಲಯದಲ್ಲಿ ಸೇರಲು ರಕ್ಕಸಿಯು ರಾಜನ ಪ್ರಾಣವನ್ನು ನಷ್ಠಗೊಳಿಸಿ ಕೂಗಿಕೊಂಡು ಹಾರಿ ಪೋದಳು. ಆದಕಾರಣ ನಮ್ಮ ಸತ್ಯ ವಾಕ್ಯದ ಪ್ರಕಾರವಾಗಿ ಅಗ್ನಿ ಪ್ರವೇಶವನ್ನೂ ಮಾಡುತ್ತೇವೆ. ನಮ್ಮ ಸತ್ಯವೇ ಕಾಪಾಡಬೇಕು. ಆದ್ದರಿಂದ ತಾವು ಸ್ವಲ್ಪ ದೂರವಾಗಿರಬೇಕಮ್ಮ ತಾಯೆ –

ದ್ವಿಪದೆ

ಸಿರಿಗಂಧ ಕರ್ಪೂರವು
ಬಗೆ ಬಗೆಯ ಕಾಷ್ಠಂಗಳ ತರಿಸಿ ಮಿಗೆ ವಹಿಲದಿಂ
ವೈಶ್ವಾನರನಂ ಪುಟಗೊಳಿಸಿ ಗೌಡರು
ಪಾವಕನ ಸ್ತುತಿಸಿ ಬೀಳುವ
ಅನಿತರೊಳು ಒದಗಿದರು ವನಿತೆ
ಪುಂಡರೀಕಾಕ್ಷಿ ಕಟಕಿಯು ಸಹಿತ

ಪುಂಡರೀಕಾಕ್ಷಿ : ಆಹಾ ಇದು ಏನು ಚೋದ್ಯ. ಈ ಕರಿರಾಜನು ಎಷ್ಟು ವಿಧವಾಗಿ ಪೇಳಿದರೂ ನಾನು ಕೇಳದೆ ನಂಬಿಕೆಯನ್ನೂ ಕೊಟ್ಟು ಅಂಬಿಕಾ ದೇವಿ ಕೊಟ್ಟ ವರದಿಂದ ಕೂಡಿದ್ದಾಯಿತು. ಎನ್ನ ಕಾಂತನು ಹೇಳಿದ್ದೆ ನಿಜವಾಯಿತು. ಇನ್ನೇನು ಮಾಡಲಿ ಹೇ ಕಾಂತ, ಹೇ ರಮಣ ನಿನ್ನ ಮಾತುಗಳನ್ನು ಕೇಳದೆ ನಿನ್ನನ್ನು ಕೂಡಿದ್ದಾಯಿತು. ಪನ್ನಗ ಭೂಷಣನು ಈ ರೀತಿ ಮಾಡಿದನೆ ಹೇ ರಮಣ ಸದ್ದಿಲ್ಲದೆ ಮಲಗಿರುವೆಯಲ್ಲಾ ನಿನ್ನ ಮುದ್ದು ಮುಖವೆತ್ತಿ ಎನ್ನ ನೋಡಿ ಪ್ರದ್ಯುಮ್ನ ಕೇಳಿಯೋಳ್ ಎನ್ನ ಕೂಡಬಾರದೆ. ಬೆಂಬಿಡದೆ ಬಂದು ರಕ್ಕಸಿಯು ಕೊಂದಳೆ ಇನ್ನೆಲ್ಲಿ ಪೋಗಲೋ ಸುಂದರಾಂಗ –

ಸಾವೇರಿ

ಮತ್ತೆ ಬಳ್ಳಾಲ ಪುತ್ರಿ ಧಾತ್ರಿಮೋಹಿನಿ
ಎಂಬ ಕಾಮಿನಿಯು ಮಲ್ಲಿಗನೂರು
ವರ್ತಮಾನವು ತಿಳಿದು ಚಿತ್ತದೋಳ್
ಶೋಕಿಸುತ್ತಾ ಚಿತ್ರದಪಟವನ್ನು ನೋಡಿ
ಚಿಂತಿಸಿ ಮನದಿ ಮೃತ್ಯುವಾದನೆ ನಲ್ಲಾ
ಎಂದೆನುತ ನಡೆತಂದಳು ಅಂಬುಜಾಕ್ಷಿ

ದರುವು

ದುರುಳೆ ಕೈಯೊಳು ನೀನು ಧರೆಯೋಳ್
ಸೊಕ್ಕಿದೆಯಾ ಕರುಣವಿಟ್ಟೆನ್ನೊಳ್
ಸರಸವಾಡಯ್ಯ ॥

ಪುಂಡರೀಕಾಕ್ಷಿ : ಹೇ ರಾಜ ಹೇ ಕಾಂತ. ಹೇ ರಮಣ. ಚೆನ್ನಿಗನಾದ ನೀನು ಕನ್ನೆಯಾದ ಎನ್ನೊಡನೆ ಮನ್ನಣೆ ಮಮತೆಯಿಂದ ಉನ್ನತವಾದ ಮಾತುಗಳನ್ನಾಡದೆ ಮಲಗಿರುವೆಯಲ್ಲಾ ದುಷ್ಠ ರಕ್ಕಸಿಯು ನಿನ್ನನ್ನು ನಷ್ಠಗೊಳಿಸಿದಳೇ ಇನ್ನೇನು ಮಾಡಲೋ ಪ್ರಾಣವಲ್ಲಭ –

ದರುವು

ಪೊಡವಿ ಬಳ್ಳಾಲಪುರಿಯ ಮೃಢನು ಮಡಿದನೆ
ಬಿಡದೆ ನಿನ್ನನು ದುಡುಕಿ ನಡೆಸಿದನೆ ॥

ಪುಂಡರೀಕಾಕ್ಷಿ : ಹೇ ರಾಜಾ. ಅಸಮ ಸಾಹಸವುಳ್ಳ ಶಶಿ ಸೋದರನ ಸುತ ಕುಸುಮ ಶರನಂತೆ ಪೋಲ್ವ ನಿನ್ನ ಮುಖವು ಕುಸಿದು ಪೋದ ಹಾಗೆ ಬಿಸುಜಾಕ್ಷಿಯಾದ ಎನಗೆ ಕಾಣಿಸುತ್ತಿರುವುದಲ್ಲ ಮಾರಹರನು ಎನಗೆ ವ್ಯಸನಕ್ಕೆ ಗುರಿ ಮಾಡಿದನೆ ಇನ್ನೇನು ಮಾಡಲೋ ಪ್ರಾಣವಲ್ಲಭ-

ಧರಣಿ ಮೋಹಿನಿ : ಆಹಾ ಇದು ಏನು, ಗಗನವಾಣಿ ಹೇಳಿದ್ದೇ ನಿಜವಾಗಿದೆ. ಹೇ ಪ್ರಾಣವಲ್ಲಭ ನಿನ್ನ ಚಿತ್ರಪಟವನ್ನೂ ನೋಡಿ ಬಿಸುಜಾಕ್ಷಿಯ ಪತಿಸುತ ಕುಸುಮ ಶರ ಸಮರೂಪನಂತೆ ಕಾಣಲು ನಿನ್ನನ್ನು ಪರಿಣಯವಾಗಬೇಕೆಂದು ಮೆಚ್ಚಿ ಇಳೆಯ ಭೂಪತಿ ಬಳ್ಳಾಲರಾಯನ ಪುತ್ರಿ ಧರಣಿ ಮೋಹಿನಿಯಾದ ನನ್ನ ಚಿತ್ರದ ಪಟವನ್ನು ಕಳುಹಿಸಲು ಆನಂದಭರಿತನಾಗಿ ಪರಿಣಯಕ್ಕಾಗಿ ಬರುತ್ತೇನೆಂದು ಹೇಳಿ ಕಳುಹಿಸಿದೆ. ನಾನು ಸಂಭ್ರಮಗೊಂಡು ಬರುತ್ತಾನೆಂದು ಇರುವಾಗ್ಯೆ ವಾಗ್ದೇವಿ ಪತಿ ಚತುರ್ಮುಖನು ಈ ರೀತಿ ಬರೆದಿದ್ದನೇ ಹೇ ರಮಣ ಮತ್ಯಾರನ್ನು ಪರಿಣಯವಾಗಲಾರೆ, ಮುದ್ದುಮುಖನಾದ ನಿನ್ನ ಜೊತೆಯಲ್ಲೆ ಸಹಗಮನವಾಗುವೆನಯ್ಯ ಪ್ರಾಣಕಾಂತ –

ದರುವು

ಸರಿಯೇ ಮಲಗಿರುವ ಬಗೆಯು ಆಯಿತೆ ಎನಗೆ
ಹರಿಕರಿಸಿಂಹ ಪರಾಕ್ರಮನೆಂದೆಣಿಸಿ ಧರಣೀಶ
ಮಲಗಿರಬಹುದೆ ಶಿರವೆತ್ತಿ ನೋಡದೆ ॥

ಧರಣಿಮೋಹಿನಿ : ಹೇ ರಾಜಾ ಕುಸುಮಶರ ಸಮರೂಪ ಶಶಿಬಿಂಬದಂತೆ ಎಸೆಯುವ ಕುಶಲನಾದ ಹೇ ದೊರೆ, ಹೇ ಧುರಧೀರ ಧರಣಿ ಭೂಪಾಲ ಹರಿಕರಿಸಿಂಹ ಪರಾಕ್ರಮಗಳುಳ್ಳ ಶೌರ‌್ಯ ಪ್ರತಾಪನೆ ಇಲ್ಲಿ ಮಲಗಿರುವೆಯಲ್ಲಾ ಉನ್ನತವಾದ ಎನ್ನ ಮುಖವನ್ನು ಚೆನ್ನಿಗನಾದ ನೀನು ಕಣ್ಣೆತ್ತಿ ನೋಡಬಾರದೆ ಕಾಂತ ಕಾಮಿನಿ ವಸಂತ –

ದರುವು

ದೊರೆಯೆ ನಿನ್ನನು ನಾನು ಪರಿಣಯವಾಗಲು
ಸ್ಥಿರವೆಂದು ನಾ ನಂಬಿ ಇರುವೆ ಈ ಪರಿ
ಮಲಗಿರುವೆ ಆಹಾ ಸರಿಯೆ ॥

ಧರಣಿಮೋಹಿನಿ : ಹೇ ರಾಜಾ. ಸಿಂಧುಜಾಪತಿಯಾದ ಮಂದರಗಿರಿಧರ ಇಂದಿನೇತ್ರನ ಸುತ ಕಂದರ್ಪನಂತೆಸೆಯುವ ನಿನ್ನ ಉನ್ನತವಾದ ಚಿತ್ರದೋಳ್ ಮುಖ ಮಂಡಲವನ್ನು ನೋಡಿ ಪರಿಣಯವಾಗಬೇಕೆಂದು ಇದ್ದೆನು. ಈ ರೀತಿ ಬಿದ್ದಿರುವೆಯಲ್ಲಾ ಕಾಂತ ಸದ್ಗುಣವಂತ –

ದರುವು

ಕ್ಷೋಣಿ ಬಳ್ಳಾಪುರಿ ಸೋಮೇಶನಾ ಸಖಾ
ವಾಣೀಶ ಈ ರೀತಿ ಬರೆದ ಪ್ರಾಣೇಶನು ಮಡಿದಾ
ಆಹಾ ಸರಿಯೆ ॥

ಧರಣಿಮೋಹಿನಿ : ಹೇ ರಾಜಾ. ನಮ್ಮ ಪುರವರಾಧಿಪತಿ ಚೆನ್ನಿಗನ ಸಖ ಉರಗ ಭೂಷಣ ಉಮಾವಲ್ಲಭನು ತರುಣಿಯಳಾದ ಎನ್ನ ಮೇಲೆ ಕರುಣವಿಲ್ಲದೆ ಈ ರೀತಿ ಮಾಡಿದನೆ. ನಾನೆಷ್ಠು ಮೊರೆ ಇಟ್ಟರೂ ಕರುಣಾ ಬಾರದೆ ಆಹಾ ಕಾಂತನೆ ಚಿಂತೆಗೆ ಒಳ ಮಾಡಿದೆಯಲ್ಲೋ ರಮಣ –

ಗೌಡರು : ಅಮ್ಮ ಪುಂಡರೀಕಾಕ್ಷಿ ಧರಣಿ ಮೋಹಿನಿಗಳಿರಾ. ನಾವುಗಳು ಕರಿರಾಜನ ಸಹಿತ ಅಗ್ನಿ ಪ್ರವೇಶವಾಗಬೇಕಾಗುತ್ತೆ. ಆದ್ದರಿಂದ ನೀವುಗಳು ಚಿಂತಿಸದೆ ಸ್ವಲ್ಪ ದೂರವಾಗಿರಬೇಕಮ್ಮ ತಾಯಿಗಳಿರಾ

ದರುವು

ಪ್ರಭುಗಳು ಮೊದಲಾಗಿ ಪುಂಡರೀಕಾಕ್ಷಿಯು
ಪೃಥ್ವಿ ಮೋಹಿನಿಸಹಿತ ಬೀಳ್ವನಿತರೊಳು ॥

ಸಾವೇರಿ

ಶ್ರೀ ಗಂಗಾಧರ ಗೌರಿಮನೋಹರಾ ರಜತಾದ್ರಿ ಪುರವರ
ಶೇಷಭೂಷಣ ಶಿರಾ ಈಶ್ವರ ಪರಮೇಶ್ವರ ಈಶ
ಜಗದೀಶ ಭವನಾಶ ತ್ರಿಗುಣೇಶ ನಂದಿವಾಹನ
ಕಸ್ತೂರಿ ಚಂದನ ಲೇಪನ ಮಾರ್ಕಂಡೇಯ ಪಾಲನೆ
ಮಲ್ಲಿಕಾರ್ಜುನ ಪಾಲಾಕ್ಷ ಶರಣಾಗತ ಪಕ್ಷ
ದುರ್ಜನ ಶಿಕ್ಷ ಪಂಕಜಾಕ್ಷ ಭಕ್ತನಿರ್ದೋಷ
ಸಾರಂಗಧರಪೋಷ ಜ್ಞಾನಂದಗೋಷ ತತ್ವವೇತ್ರ
ಮನೋ ನಿಗರ್ವಿಧಾಮ ವನಮಾಲಿಕಾಲಿಲಾಮ
ಈ ರಾಜಂಗೆ ನಾವೆಲ್ಲರೂ ಮಾತು ಕೊಟ್ಟಂತೆ
ತನುಗಳಂ ಯಜ್ಞೇಶ್ವರಂಗೆ ಸಮರ್ಪಿಸುವೆವು
ಮಾಂರಕ್ಷ ಪುಂಡರೀಕಾಕ್ಷ ಪಾಲಿಸೆಮ್ಮನು ದೇವಾ
ನಮಸ್ತೆ, ನಮಸ್ತೆ ನಮಃ –

 

ಈಶ್ವರನು ಪ್ರತ್ಯಕ್ಷ

ದರುವು

ಸ್ತುತಿಸುವ ಭಕ್ತಿಗೆ ಶಂಕರ ನಡೆತಂದು
ಪೃಥ್ವಿಯೋಳ್ ಇದು ಯೇನು ಚೋದ್ಯ ॥

ಈಶ್ವರ : ಅಯ್ಯ ಭಕ್ತಾದಿಗಳಿರಾ. ನೀವು ಮಹಾ ಪ್ರಲಾಪದಿಂದ ನನ್ನ ಪ್ರಾರ್ಥನೆಯನ್ನು ಮಾಡಿ ಬೇಡುವ ಕಾರಣವೇನು ನಿಮ್ಮಯ ಮನಸ್ಸಿಗೆ ಮೆಚ್ಚಿ ಬಂದು ಇದ್ದೇನೆ. ಈ ವೇಳೆಯಲ್ಲಿ ಈ ವನಿತೆಯರು ಸಹಿತವಾಗಿ ನೀವು ಏಳು ಮಂದಿಯೂ ಅಗ್ನಿ ಪ್ರವೇಶವನ್ನು ಮಾಡತಕ್ಕ ಕಾರಣವೇನು. ಸವಿಸ್ತಾರವಾಗಿ ಪೇಳುವಂಥವರಾಗಿರಯ್ಯ ಭಕ್ತಾದಿಗಳಿರಾ –

ದರುವು

ಕುಸುಮ ಬಾಣನ ವೈರಿ ಉಸುರಾಲೇನತಿ ಚೋದ್ಯ
ವಸುಧಾಧಿಪನು ಈ ಕರಿರಾಜನಿಂದಾ ॥

ಗೌಡರು : ಹೇ ದೇವಾ. ಈ ಧರೆಯೊಳು ಉತ್ತಮವಾದ ಧಾರಾಪುರಿ ಪಟ್ಟಣವ ಪರಿಪಾಲಿಸುವ ಕರಿರಾಜನೆಂಬುವನು ಧರಣಿ ಮೋಹಿನಿ ಎಂಬ ಕಾಮಿನಿಯ ಪರಿಣಯಕ್ಕಾಗಿ ಬರುವ ದಾರಿಯೊಳು ತೊಂಡನೂರಿ ಎಂಬ ರಕ್ಕಸಿಯ ಮಗಳಾದ ಪುಂಡರೀಕಾಕ್ಷಿಯೆಂಬ ಕಾಮಿನಿಯು ಮೋಹಿಸಿಕೊಂಡಿರುವ ಕಾಲದೊಳು ಚಂಡದಾನವಿಯಾದ ರಕ್ಕಸಿಯು ಕಂಡು ತನ್ನ ಮಗಳ ಮರ್ಮವನ್ನು ತಿಳಿದು ರಾಜನನ್ನು ಕೊಲ್ಲುವುದಕ್ಕೆ ಪ್ರಯತ್ನಿಸಿ ಮೋಸದಿಂದ ತನ್ನ ತಮ್ಮನನ್ನು ಕೊಲ್ಲಲು, ಭೂಪತಿಯು ತಪ್ಪಿಸಿಕೊಂಡು ಹೊರಟು ಬರಲು ಚಂಡದಾನವಿಯು ಮನದಿ ಮತ್ಸರದಿಂದ ಈ ಮಂಡಲಾಧಿಪನನ್ನು ಬೆಂಬತ್ತಿ ಬಂದು ನನ್ನ ಗಂಡ ಅಗಲಿ ಬಂದನೆಂದು ಪುಂಡುತನದಿಂದ ಪೇಳಿದಳಾದ ಕಾರಣ, ವನಿತೆಯ ಕುಟಿಲವನ್ನು ಅರಿಯದೆ ಒಡಂಬಡಿಸಿ ಈ ಗುಡಿಯೊಳಗೆ ನಾವು ಇರಿಸಲು, ಕುಟಿಲೆ ಭೂಪತಿಯ ಪ್ರಾಣವನ್ನು ಕೊಂದು ಕೂಗಿ ಆರ್ಭಟಿಸಿ ಪೋದಳಾದ ಕಾರಣ ರಾಜನಿಗೆ ನಾವು ಕೊಟ್ಟಿದ್ದ ಭಾಷೆಗೆ ತಪ್ಪಬಾರದೆಂದು ಅಗ್ನಿ ಪ್ರವೇಶವನ್ನು ಮಾಡುತ್ತೇವೈ ದೇವಾ ಮಹಾನುಭಾವ –

ದರುವು

ಸತ್ಯ ವಚನಕೆ ನಾನು ಮೆಚ್ಚಿದೆ ಕರಿನೃಪನಾ
ಇಚ್ಛೆಯಿಂದಲಿ ಪ್ರಾಣ ಕೊಡುವೇ ॥

ಈಶ್ವರ : ಅಯ್ಯ ಭಕ್ತಾದಿಗಳಿರಾ. ನಿಮ್ಮ ಸತ್ಯ ಪ್ರಮಾಣ ವಚನಕ್ಕೆ ತಪ್ಪದೆ ಮೆಚ್ಚಿಯಿದ್ದೇನೆ. ಆದಕಾರಣ ಈ ವೇಳೆಯಲ್ಲಿ ಕರಿರಾಜನಿಗೆ ಪ್ರಾಣವನ್ನು ಕೊಟ್ಟು ಇದ್ದೇನೆ. ಅತಿ ಜಾಗ್ರತೆಯಿಂದ ಎಬ್ಬರಿಸುವಂಥವ ರಾಗಿರೈಯ್ಯ ಭಕ್ತಾದಿಗಳಿರಾ –

ದರುವು

ಚಂದ್ರಶೇಖರ ಶಂಭುಲಿಂಗಾ ಬೇಡಿಕೊಂಬೆ ಶುಭಾಂಗ ॥

ಸಾರಂಗಧರನಿಗೆ ಕರಚರಣವನ್ನಿತ್ತೆ – ತರಳ ಮಾರ್ಕಂ
ಡನಾ ವಲಿದು ರಕ್ಷಿಸಿದಂಥ ದೇವಾ ॥