ಪುಂಡರೀಕಾಕ್ಷಿ : ಅಮ್ಮಾ ತಾಯೆ. ಅಕ್ಷಿಗಳಲ್ಲಿ ಕಂಡರೂ ಪ್ರಮಾಣಿಸಿ ನೋಡಬೇಕೆಂಬುವರು ಲೋಕದೊಳು ಈಕ್ಷಿಸದೆ ಈ ಪರಿಯ ಬರಿಯ ಮಾತುಗಳನ್ನು ಆಡಿದರೆ ಈ ಜಗದೊಳಗೆ ಬಹಳ ಅಪಖ್ಯಾತಿಗೆ ಹೊಂದುವುದಮ್ಮಾ ಮಾತೆ ಲೋಕವಿಖ್ಯಾತೆ.

ದರುವು

ಮನುಜಾರ ತೋರಿಸೆಂದು ಬಾಧಿಸುವೆ ಕೇಳಿಂದು
ಯಾರ ತೋರಿಸಲಮ್ಮ ತಂದು॥

ಮನಸೀಗೆ ಬಂದಂತೆ ಮದ್ಯಾಪಾನವ ಮಾಡಿ
ಕನಸು ಕಂಡಂದದಿ ಎಳೆಯ ಹಸುಳೆಯ ಕೂಡೆ॥

ಪುಂಡರೀಕಾಕ್ಷಿ : ಅಮ್ಮಾ ತಾಯೆ. ಈ ಸೃಷ್ಠಿಯೊಳ್ ದುಷ್ಠ-ನಷ್ಠಗಳ ಪಡೆಯನ್ನು ಕಂಡು ಇಷ್ಠದಿಂ ಕುಳಿತ ಜೀವಿಗಳ ಕಷ್ಠವನ್ನು ಪಡಿಸದೆ ಎಷ್ಠು ಮಾತ್ರಕ್ಕೂ ಬಿಡದಾದ ಕಾರಣ ದುಷ್ಠ ರಕ್ಕಸರು ಎಂಬ ಬೆದರಿಕೆಯು ಇಲ್ಲದೆ ನಿನ್ನರಮನೆಗೆ ಮನುಜ ಮಾನವನು ಬಂದು ಇದ್ದಾನೆಂದು ಎನ್ನ ಪರಿಪರಿ ವಿಧದಿಂದ ಬಾಧಿಸುತ್ತಾ ಇದ್ದಿ ಆದರೆ ನಿನ್ನ ಮನಸ್ಸಿಗೆ ಬಂದಂತೆ ಮದ್ಯಪಾನವನ್ನು ಮಾಡಿ ಕನಸು ಕಂಡಂತೆ ಈ ಪರಿಯ ಮಾತುಗಳು ಆಡುವರೇನಮ್ಮ ತಾಯೆ ಕರುಣದಿಂ ಕಾಯೆ-

ದರುವು

ಕಾಡಬ್ಯಾಡವೆ ಎನ್ನ ಮಾತೆ ಬೇಡಿಕೊಂಬೆ ವಿಖ್ಯಾತೆ
ಸಾಕು ನುಡಿಯಲೇಕೆ ಮಾತೆ॥

ಕಪಟವ್ಯಾತಕೆ ಬಳ್ಳಾಪುರದ ಶ್ರೀಕಂಠನು
ಕುಟಿಲ ಕೃತ್ಯಗಳೆಂದು ಕ್ರೋಧಿಸುವನು ನಿನ್ನ॥

ಪುಂಡರೀಕಾಕ್ಷಿ : ಅಮ್ಮಾ ತಾಯೆ ನಿನ್ನರಮನೆಗೆ ಬಂದಿರುವ ಪುರುಷನನ್ನು ತಂದು ತೋರಿಸು ಎಂದು ಬಾಧಿಸುತ್ತಾ ಇದ್ದಿ. ಆದರೆ ಇಲ್ಲದ ಅಪರಾಧಗಳನ್ನು ಎನ್ನ ಮೇಲೆ ಇಟ್ಟು ಗುಲ್ಲು ಮಾಡಿದ್ದೇ ಆದರೆ ಈ ಕ್ಷಿತಿಯ ರಕ್ಷಕನಾದ ಗೌರೀವಲ್ಲಭನು ಎಷ್ಟು ಮಾತ್ರಕ್ಕೂ ಮೆಚ್ಚನಮ್ಮಾ ಮಾತೆ ಲೋಕವಿಖ್ಯಾತೆ-

ದರುವು

ಒಂದು ಹಗಲಿಗೆ ನೂರು ಮಂದಿಯನು ಕೂಡುವೆನು
ಸಂಜೆಯಂ ಬೆಳತನಕ ಸಾವಿರ ಕೂಡ್ವೆನೆ ಕೇಳು ಮಗಳೆ॥

ತೊಂಡನೂರಿ : ಅಮ್ಮಾ ಮಗಳೆ. ಒಂದು ಹಗಲಿಗೆ ನೂರು ಮಂದಿ ವಿಟರನ್ನು ಕೂಡುವೆನು ಮತ್ತು ಕಾಕೂಟದೊಳು ಸಂಜೆಯಂ ಬೆಳಗಿನ ತನಕ ಸಾವಿರ ಮಂದಿಯನ್ನು ಕೂಡುವ ಕಾಲದಲ್ಲಿ ಮುರಿದ ಮಂಚಗಳ ಲೆಕ್ಕವನ್ನು ಮಾಡಿದ್ದೇ ಆದರೆ ಹತ್ತು ಶಕೆಗಳ ಪರಿಯಂಥ ಆಗುವುದಮ್ಮಾ ಕೂಸೆ ಕೇಳೆನ್ನ ಭಾಷೆ-

ದರುವು

ಗಂಡನಳಿದ ದುಃಖ ಮಿಂಡರಿಂದಲಿ ಮರೆತೆ
ಪುಂಡರೀಕಾಕ್ಷಿ ಕೇಳ್ ಪುಸಿಯಲ್ಲ ಈ ಮಾತು

ತೊಂಡನೂರಿ : ಅಮ್ಮಾ ಮಗಳೆ. ಚಂಡಪರಾಕ್ರಮನಾದ ನನ್ನ ಗಂಡನು ಅಳಿದ ದುಃಖವನ್ನು ನಾನು ಕೂಡಿರುವ ಮಿಂಡರಿಂದಲಿ ಮರೆತೆನಾದ ಕಾರಣ ಈ ಧಾತ್ರಿಯೊಳ್ ಪೆತ್ತ ತಂದೆಯು ಒಡನೆ ಜನಿಸಿದವನನ್ನು ಮಾತ್ರ ಬಿಟ್ಟು ಈ ಪೊಡವಿಯೊಳು ನಾನು ಕೂಡಿರುವ ಪುರುಷರನ್ನು ಎಣಿಸಲು ಅಸಾಧ್ಯವಾದ ಕಾರಣ ನಿನ್ನ ಮನಸ್ಸಿನಲ್ಲಿ ಎಷ್ಠು ಮಾತ್ರವೂ ಸಂದೇಹವನ್ನು ಇಡದೆ ನಿನ್ನ ಮನೆಗೆ ಬಂದಿತಕ್ಕಂಥ ಪುರುಷನನ್ನು ತಂದು ತೋರಿಸಬೇಕಮ್ಮ ಕನ್ನೆ ದನುಜಕುಲ ಚೆನ್ನೆ-

ಪುಂಡರೀಕಾಕ್ಷಿ : ಅಮ್ಮಾ ತಾಯೆ. ಗಡಬಡದಿ ಆರ್ಭಟಿಸಿ ಘರ್ಜಿಸುವ ಘರ್ಜನೆಯನ್ನು ಕಂಡು ಎನ್ನ ಮನಸ್ಸಿನಲ್ಲಿ ಬಹಳ ಭಯಪಟ್ಟು ನಡನಡುಗಿ ಕೇಳುವೆನಾದ ಕಾರಣ ನಿನ್ನಣುಗಿಯೊಳು ಕ್ರೋಧಿಸಿ ಪೂರ್ಣ ಕರುಣವಿಟ್ಟು ಎನಗೆ ನಂಬಿಕೆಯನ್ನು ಕೊಟ್ಟಿದ್ದೇ ಆದರೆ ನಮ್ಮ ಆಲಯಕ್ಕೆ ಬಂದು ಇರತಕ್ಕಂಥ ಭೂ ಲಲಾಮನನ್ನು ತಂದು ತೋರಿಸುತ್ತೇನಮ್ಮ ಮಾತೆ ಲೋಕವಿಖ್ಯಾತೆ-

ತೊಂಡನೂರಿ : ಅಮ್ಮ ಮಗಳೆ. ನಿನ್ನ ಮಧುರತರವಾದ ಮೃದುನುಡಿಗಳನ್ನು ಕೇಳಿದರೆ ಮೃದು ಹಣ್ಣು ಸಕ್ಕರೆಯು ಜೇನು ಸವಿದಂತೆ ರುಚಿಯು ತೋರುತ್ತಾ ಇದೆ. ನಿನ್ನ ಪ್ರಜ್ವಲಿಪ ಸಣ್ಣ ಪ್ರಾಯಕ್ಕೆ ಒಪ್ಪಿರುವ ಚನ್ನಿಗನನ್ನು ತಂದು ತೋರಿಸಿದ್ದೇ ಆದರೆ ಎನ್ನ ಕಣ್ಣ ಅರ್ತಿಗಳಿಂದ ನೋಡಿ ನಿನಗೆ ಮದುವೆ ಮಾಡುವೆನಾದ ಕಾರಣ ನಿನಗೆ ನಾನು ವಂಚನೆಯನ್ನು ಮಾಡಿದ್ದೇ ಆದರೆ ನಮ್ಮ ತಂದೆಯನ್ನು ಕಾಶಿಯಲ್ಲಿ ಕೊಂದರೆ ಎಷ್ಟು ಪಾತಕವೋ ಅಷ್ಟು ಪಾತಕವು ನನಗೆ ಬರಲಿ. ನಿನ್ನ ಮನಸ್ಸಿನಲ್ಲಿ ಎಷ್ಟು ಮಾತ್ರಕ್ಕೂ ವಂಚನೆಯನ್ನು ಇಡದೆ ನಿನ್ನರಮನೆಗೆ ಬಂದು ಇರತಕ್ಕಂಥ ಪುರುಷನನ್ನು ತಂದುತೋರಿಸುವಂಥವಳಾಗಮ್ಮ ನೀರೇ ಶರಧಿ ಗಂಭೀರೆ-

ಪುಂಡರೀಕಾಕ್ಷಿ : ಅಮ್ಮಾ ತಾಯೆ. ಈ ಧಾತ್ರಿಯೋಳ್ ಧಾರಾಪುರವೆಂಬ ಪಟ್ಟಣವ ಪರಿಪಾಲಿಸುವ ಮಾರಭೂಪಾಲ ರಾಯರಿಗೆ ಮಾರಹರನ ದಯದಿಂದ ಉದಿಸಿದ ಹರಿಕರಿಸಿಂಹನೆಂದೆನಿಪ
ಕರಿರಾಯ ಭೂಪತಿ ಎಂಬುವನು ಎಳೆಯ ಪ್ರಾಯದೊಳ್ ಶೋಭಿಸುತ್ತಾ ಇರಲು ಜನಪತಿ ಬಲ್ಲಾಳರಾಯನ ಸುತೆಯ ಪರಿಣಯಕ್ಕಾಗಿ ಹಳೆಯಬೀಡಿನ ಪಟ್ಟಣಕ್ಕೆ ಪೋಗುವ ಉದ್ದಿಶ್ಯವಾಗಿ ಪೋಗುವ ದಾರಿಯಲ್ಲಿ ದಾರಿಮಾರ್ಗವ ತಪ್ಪಿ ನಮ್ಮ ಕಾನನಕ್ಕೆ ಬರಲು ಗೌರೀವಲ್ಲಭನು ಎನಗೆ ತಕ್ಕ ವಲ್ಲಭನನ್ನು ಕೊಟ್ಟು ಇದ್ದಾನೆ. ನೀನು ಅಕ್ಕರದಿಂದ ನೋಡಿ ಪರಿಣಯವು ಮಾಡಬೇಕಮ್ಮ ತಾಯೆ ಎನ್ನನ್ನು ಕಾಯೆ-

ದರುವು

ನೋಡೋ ನಿನ್ನಯ ಮಡದಿ ಕೂಡಿರುವ ವಿಟನನ್ನು
ಮೂಢಾನಂತೆ ನೀನು ಇರುವೆಯೇನೊ ತಮ್ಮಾ॥

ತೊಂಡನೂರಿ : ಅಪ್ಪಾ ತಮ್ಮಾ. ಚಂಡಪರಾಕ್ರಮರಾದ ರಾಕ್ಷಸರೊಳಗೆ ಮಹಾ ಪ್ರಚಂಡದಾನವರೆಂದು ಎನಿಸಿಕೊಂಡು ಈ ಭೂಮಂಡಲದಲ್ಲಿ ದಂಡಧರನಂತೆ ನೀನಿರಲು ನಿನ್ನ ಮಡದಿಯಾದ ಪುಂಡರೀಕಾಕ್ಷಿಯನ್ನು ಪುಂಡು ಮನುಷ್ಯನು ಬಂದು ಕೂಡಿಕೊಂಡು ಇರುವುದು ನೋಡಿ ಮೂಢನಂದದಿ ಇರುವೆಯಲ್ಲೋ ತಮ್ಮ ಲಿಖಿಸಿದ ಬ್ರಹ್ಮ-

ದರುವು

ಅಗಜಾರಮಣನು ನಮಗೆ ಹಗೆಯಾ ತೋರಿದನಲ್ಲೊ
ಜಗದೊಳು ಅಪಕೀರ್ತಿ ಬಂತಲ್ಲೋ ತಮ್ಮಾ॥

ತೊಂಡನೂರಿ : ಅಪ್ಪಾ ತಮ್ಮಾ, ಈ ಧಾತ್ರಿಯೊಳ್ ಅಗಜಾರಮಣನಾದ ಶಂಕರನು ನಮಗೆ ಈ ಕಾಲಕ್ಕೆ ಹಗೆಯನ್ನು ತೋರಿದನಾದ ಕಾರಣ ಈ ಸಮಯದಲ್ಲಿ ಕುಲದ್ರೋಹಿಯಾದ ಪುಂಡರೀಕಾಕ್ಷಿ ಯನ್ನು ಕೂಡಿಕೊಂಡಿರುವ ವಿಟನನ್ನು ಕೊಲ್ಲದೆ ಬಿಟ್ಟಿದ್ದೇ ಆದರೆ ದಿಕ್ಕು ದಿಕ್ಕಿನೊಳು ನಮಗೆ ಅಪಕೀರ್ತಿ ಎಷ್ಟು ಮಾತ್ರಕ್ಕೂ ತಪ್ಪುವುದಿಲ್ಲವಪ್ಪ ತಮ್ಮಾ-

ಬೊಮ್ಮ : ಅಮ್ಮಾ ಅಕ್ಕಯ್ಯ, ನಮ್ಮ ಆಲಯದಲ್ಲಿ ಚೋರತನದಿಂದ ಬಂದು ಇರುವಂಥ ಪುಂಡು ಮನುಷ್ಯನನ್ನು ಕೊಂದು ಬರುತ್ತೇನೆ. ಜಾಗ್ರತೆಯಿಂದ ಅಪ್ಪಣೆಯನ್ನು ಕೊಟ್ಟು ಕಳುಹಿಸುವಂಥವಳಾಗಮ್ಮ ಅಗ್ರಜಳೆ-

ತೊಂಡನೂರಿ : ಅದೇ ಪ್ರಕಾರವಾಗಿ ಹೋಗಿ ಆ ಪುಂಡು ಮನುಷ್ಯನನ್ನು ಕೊಂದು ಬರುವಂಥವನಾಗಪ್ಪ ತಮ್ಮ-

ಬೊಮ್ಮ : ಕೇಳುತ್ತೀಯೇನೊ ಮಾನವ. ಚಂಡದಾನವರೆಂಬ ಬೆದರಿಕೆಯು ಇಲ್ಲದೆ ನಮ್ಮ ದಾನವರ ತಂಡಗಳಲ್ಲಿ ಸಿಲ್ಕಿ ನನ್ನ ಮಡದಿಯಾದ ಪುಂಡರೀಕಾಕ್ಷಿಯನ್ನು ಕೂಡಿಕೊಂಡು ಇದ್ದೀಯಾ. ಆದರೆ ನಿನ್ನ ಖಂಡಗಳನ್ನು ಕಡಿದು ಕೆಂಡಗಳಲ್ಲಿ ಸುಟ್ಟು ನಮ್ಮ ದಾನವ ತಂಡಗಳಿಗೆಲ್ಲ ಹಬ್ಬವನ್ನು ಮಾಡಿಸುವೆನು ಎದ್ದು ಯುದ್ಧವನ್ನು ಮಾಡುವಂಥವನಾಗೋ ಪುಂಡು ಮನುಷ್ಯನೆ-

ಕರಿರಾಜ : ಎಲಾ ರಾಕ್ಷಸ, ಲಕ್ಷ್ಯವಿಲ್ಲದೆ ಎನ್ನೊಳು ವೀಕ್ಷಿಸದೆ ಬೊಗಳುವೆಯೊ, ತಕ್ಷಣ ಎನ್ನೊಳು ಯುದ್ಧಕ್ಕೆ ಬಂದರೆ ಇಕ್ಷುಶರವೈದಿ ದಕ್ಷನನ್ನು ಕಡಿದ ಹಾಗೆ ಈ ಕ್ಷಣ ನಿನ್ನನ್ನು ನಕ್ಷತ್ರದವರೆವಿಗೂ ಎತ್ತಿ ಬಿಸುಡುವೆನು ಮತ್ತು ಕಡಿಯುವೆನು ಯುದ್ಧಕ್ಕೆ ಬರುವುದಾಗಿದ್ದರೆ ಮಾನವರನ್ನು ಭಕ್ಷಿಸುವೆನೆಂಬ ಗರ್ವವನ್ನು ಬಿಟ್ಟು ಬರುವಂಥವನಾಗೊ ಬೊಮ್ಮ ಮುರಿಯುವೆನು ನಿನ್ನ ಹಮ್ಮ-

ಬೊಮ್ಮ : ಎಲಾ ನರಹುಳುವೆ. ನಮ್ಮ ತಂಡಗಳಲ್ಲಿ ಸಿಲ್ಕಿ ಪುಂಡುತನವು ಮಾಡಿದೆನೆಂಬುದು ತಿಳಿಯದೆ ನಿರಾಕರಿಸುವೆಯಾ ಚಂಡ ಪ್ರಚಂಡರೊಳಗೆ ಉದ್ದಂಡನಾದ ಬೊಮ್ಮನೆಂದು ತಿಳಿಯದೆ ಬೊಗಳುತ್ತಿದ್ದಿ ಖಂಡಗಳು ಕತ್ತರಿಸಿ ತಂಡ ತಂಡಗಳಲ್ಲಿರುವ ನಮ್ಮ ದಂಡಧರರಿಗೆಲ್ಲಾ ಹಂಚಿಕೆಯನ್ನು ಮಾಡುವೆನು. ಛೀ ತಡ ಮಾಡದೆ ಯುದ್ಧಕ್ಕೆ ಬರುವಂಥವನಾಗೋ ಮನುಜಾ ಕಡಿಯುವೆನು ಈಗಲೇ ನಿನ್ನ ಭುಜ-

ದರುವು

ಯುದ್ಧ ಮಾಡುವೆ ಎದ್ದು ಬಾರೋ ನಿನ್ನ ಮರ್ದಿ
ಸುವೆ ನಾನು ನೋಡೋ॥

ಮದ್ಯಪಾನವ ಮಾಡಿ ಮದಮಾಂಸಗಳ ತಿಂದು
ಕೊಬ್ಬಿದ ಭುಜಭಲಾ ಅಬ್ಬರಿಸುತ ನಿಮ್ಮ ಇಬ್ಬರ
ಕೊಲ್ಲುವೆ ಬಾರೋ-ಎದ್ದು ಬಾರೋ॥

ಕರಿರಾಜ : ಎಲೋ ದಾನವನೇ. ಈ ಭೂಮಂಡಲದಿ ಬಿದ್ದಿರುವ ಸತ್ತ ಪೆಣಗಳನ್ನು ತಿಂದು ಮದ್ಯಪಾನವನ್ನು ಮಾಡಿ ಕುಂಡಿಗಳನ್ನು ಬೆಳೆಸಿಕೊಂಡು ಖಂಡಗರ್ವಗಳಿಂದ ಬೊಗಳುವೆಯ ಚಂಡದಾನವ ನಿಮ್ಮ ಅಕ್ಕನಾದ ತೊಂಡನೂರಿಯನ್ನು ನಿನ್ನನ್ನು ಸಹಾ ಖಂಡಗರ್ವವನ್ನು ಮುರಿದು ಚಂಡಿಕಾದೇವಿಗೆ ಈ ಕ್ಷಣ ಖಂಡಿತದಿ ಚಂಡಿಸಿ ಒಪ್ಪಿಸುವೆ ಎನ್ನೆದುರು ನಿಂತು ಮುಖಮಂಡಲವೆತ್ತಿ ಯುದ್ಧವನ್ನು ಮಾಡುವಂಥವನಾಗೋ ಲಂಡ ಖಂಡಿಸುವೆನು ನಿನ್ನ ಮುಂಡ-

ದರುವು

ಹುಲು ಮನುಜ ನಿಲ್ಲೊ ನಿಲ್ಲೋ
ನಿನ್ನ ಮಲ್ಲಯುದ್ಧದಿ ಕೊಲ್ವೆನಲ್ಲೊ॥

ಗುಲ್ಲು ಮಾಡದೆ ನವಗೋಪ್ಯದಿಂದಲಿ ನಿನ್ನ
ಹಲ್ಲು ಕೀಳುವೆ ನಿನ್ನ ವಲ್ಲಭೆಯನ್ನು ಬಿಟ್ಟು ಬಾರೊ
ನೀಚ ಬಾರೊ॥

ಬೊಮ್ಮ : ಕುಟಿಲ ಕುಂತಳೆಯಾದ ಚೋರನೆ ಕೇಳು. ಪಟುಪರಾಕ್ರಮನೆಂದು ಚಟುಲ ಧೈರ್ಯದಿಂದ ಬೊಗಳುತ್ತಾ ಇದ್ದೀಯ. ಅಕಟಕಟಾ ನಿನ್ನ ಮುಖವನ್ನು ನೋಡಿದಾಕ್ಷಣಕ್ಕೆ ಚಿಟಿಲ ಚಿಂಚಿಟಿಲ ನಿಟಿಲಾಕ್ಷನಾದ ಎನ್ನಯ ರೋಮಗಳು ನೆಟ್ಟನೆ ನಿಲ್ಲುವುದಾದ ಕಾರಣ ಈ ಕ್ಷಣದಿ ಎನ್ನ ದಿಟ್ಟ ಕೋಮಲೆಯನ್ನು ಬಿಟ್ಟು ಪೋದರೆ ಸಮ ಇಲ್ಲವಾದರೆ ಕಠೋರತರವಾದ ಉದ್ರೇಕದಿಂದ ನಿನ್ನ ಹಲ್ಲುಗಳನ್ನು ಕಿತ್ತು ಬಿಸುಡಿ ನಿನ್ನ ರಕ್ತವನ್ನು ಫಟಫಟನೆ ಪಾನವನ್ನು ಮಾಡುವೆ ತ್ವರಿತದಿಂದಲಿ ಎದುರು ನಿಲ್ಲುವಂಥವನಾಗೋ ಜಾರ ಕೊಲ್ಲುವೆನು ನೋಡೋ ಚೋರಾ-

ದರುವು

ನಿಲ್ಲೆಲೋ ಓಡದೆ ಖುಲ್ಲುರಕ್ಕಸ ಕೇಳೋ
ಕೊಳ್ಳು ಶರವ ಬಿಡುವೆ ನೀ ಮಡಿವೆ॥

ಕರಿರಾಜ : ನಿಶಾಚರನಾದ ದೈತ್ಯನೇ ಕೇಳು. ಬಹು ಪರಾಕ್ರಮನಂತೆ ಬಂದು ಗರ್ಜಿಸುತ್ತಾ ಇದ್ದೀಯಾ ಆದರೆ ಇಕೋ ಈ ದಿವ್ಯ ಮಾರ್ಗಣದಿಂದ ಈ ಭೂಮಿಗೆ ನಿನ್ನ ಬಲಿಯನ್ನು ಕೊಡುತ್ತೇನೋ ರಾಕ್ಷಸಾಧಮಾ-

ದರುವು

ನೋಡೆಲೋ ಈ ಗದಾದಂಡದಿ ನಿನ್ನಯ
ಗುಂಡಿಗೆ ಸೀಳುವೆನೊ ಕೇಳೋ ಮನುಜಾ॥

ಬೊಮ್ಮ : ಎಲಾ ಪುಂಡು ಮಾನವನೇ ಕೇಳು. ಇಕೋ ಎನ್ನ ಗದಾ ದಂಡದಿಂದ ನಿನ್ನನ್ನು ತುಂಡುಗಳನ್ನು ಮಾಡಿ ಗುಂಡಿಗೆಯನ್ನು ಎನ್ನ ಕೋರ್ದವಡೆಗಳಿಂದ ಅಗಿದು ನುಂಗುವೆನು ನೋಡುವಂಥವನಾಗೊ ಮನುಜಾಧಮ-

ದರುವು

ಹೆಂಡಾ ಕುಡಿಕ ಎನ್ನ ಖಡ್ಗಾದಿಂದಲಿ ನಿನ್ನ
ಖಂಡ್ರಿಸುವೆನು ತಲೆಯ

ಕರಿರಾಜ : ನಿಶಾಚರನಾದ ದೈತ್ಯನೇ ಕೇಳು. ಖುಲ್ಲು ರಕ್ಕಸರಲ್ಲಿ ನೀನು ಶ್ರೇಷ್ಠನೆಂದು ಚೆಲುವ ಮಾತುಗಳನ್ನು ಆಡುವೆಯಾ ಗುಲ್ಲು ಮಾಡದೆ ಎನ್ನೆದುರು ನಿಲ್ಲು, ಬಲ್ಲೆ ನಿನ್ನ ಶೌರ‌್ಯ ಈ ಖಡ್ಗದ ಬಾಧೆ ತಡೆದುಕೊಳ್ಳುವಂಥವನಾಗೋ ರಾಕ್ಷಸಾಧಮಾ-

ತೊಂಡನೂರಿ : ಕೇಳುತ್ತೀ ಏನಪ್ಪಾ ತಮ್ಮಾ. ಪುಂಡು ಮನುಷ್ಯನಾದ ಮಾನವನು ಮಹಾಬಲಾಢ್ಯ ಪರಾಕ್ರಮಶಾಲಿಯಾಗಿ ಕಾಣುತ್ತಾ ಇದ್ದಾನೆ. ಆದರೆ ಇವನನ್ನು ನಮ್ಮ ಮರುಳು ಮಾಯಗಳಿಂದ ಹರಣವನ್ನು ತೆಗೆಯಬೇಕಲ್ಲದೆ ಇದರ ವಿನಃ ಆಗಲಾರದು. ಆದ ಕಾರಣ ನೀನು ಅರಿಯದವನಂತೆ ಇರುವಂಥವನಾಗಪ್ಪಾ ತಮ್ಮಾ-

ದರುವು

ತರಳೆ ಕೇಳು ಮರುಗಲ್ಯಾಕೆ ಕರೆದುತಾರೆ ಅಳಿಯನ॥
ಚೆಲುವೆ ನಿನಗೆ ತಕ್ಕ ಪುರುಷ ಸಿಕ್ಕಿದನು ಮದುವೆ ಮಾಳ್ಪೆ॥

ತೊಂಡನೂರಿ : ಕುಲಶಿರೋಮಣಿಯಾದ ಪುಂಡರೀಕಾಕ್ಷಿಯೆ ಕೇಳು. ಈ ಲೋಕದೊಳು ಸರಸಿಜೋದ್ಭವನಾದ ಬ್ರಹ್ಮನು ನಿನ್ನ ಚೆಲ್ವಿಕೆಗೆ ತಕ್ಕ ಕಾಮಕಂದರ್ಪನಂತೆಸೆಯುವ ಭುಜಬಲ ಪರಾಕ್ರಮಿಯಾದ ಕರಿರಾಜನು ಎಂಬ ಭೂಪತಿಯು ಸಿಕ್ಕಿದನಾದ ಕಾರಣ ಎನ್ನ ಮನೋ ಅಕ್ಕರದಿಂದ ನಿನ್ನನ್ನು ಕೊಟ್ಟು ಮದುವೆ ಮಾಡುವೆನು. ಆದ ಕಾರಣ ನಿನ್ನ ಮನಸ್ಸಿನೊಳು ಸಂತೋಷ ಹರುಷಿತಳಾಗಿ ಕರಿರಾಜನನ್ನು ಎನ್ನ ಮಂದಿರಕ್ಕೆ ಕರೆತರುವಂಥವಳಾಗಮ್ಮ ತರಳೆ ತಾವರೆ ಹರಳೆ-

ದರುವು

ಎಡದ ಭುಜವೆ ಅನುಜಬೊಮ್ಮ ಬಲದ
ಭುಜವೆ ಕರಿನೃಪ ಇರಲು ಪೊಡವಿಯೊಳಗೆ
ತನಗೆ ಎದುರು ನುಡಿವಳ್ಯಾರೆ ಮಗಳೆ
ಕರೆತಾರಮ್ಮ

ತೊಂಡನೂರಿ : ಅಮ್ಮಾ ಮಗಳೆ. ಈ ಭೂಮಂಡಲದೊಳು ಭುಜಬಲಪರಾಕ್ರಮಶಾಲಿಯಾದ ಕರಿರಾಜನು ಎನಗೆ ಬಲಭುಜವಾಗಿಯೂ ಮತ್ತು ನಿಶಾಚರಾಗ್ರಣಿಯಾದ ಬೊಮ್ಮನು ಎನಗೆ ಎಡ ಭುಜವಾಗಿಯೂ ಇರುವುದರಿಂದ ಹರಿ ಹರಾದಿಗಳಾದಿಯಾಗಿ ಎನಗೆ ಬೆದರುವರಲ್ಲದೆ ಎನ್ನ ಎದುರಾಗಿ ನಿಲ್ಲುವರು ಯಾರೂ ಇಲ್ಲ. ನೀನು ಅತಿ ಜಾಗ್ರತೆಯಿಂದ ಎನ್ನ ಅಳಿಯನಾದ ಕರಿರಾಜನನ್ನು ಎನ್ನ ಮಂದಿರಕ್ಕೆ ಕರೆದುಕೊಂಡು ಬಂದು ಈ ರಾತ್ರಿಯಲ್ಲಿ ನೀವು ದಂಪತಿಗಳು ಹಿತವಾಗಿದ್ದರೆ ಎನಗೆ ಬಹಳ ಸಂತೋಷವಾಗಿ ಇರುವುದಾದ ಕಾರಣ ಅತಿ ಜಾಗ್ರತೆಯಿಂದ ಕರೆದುಕೊಂಡು ಬರುವಂಥವಳಾಗಮ್ಮಾ ಮಗಳೆ-

ಪುಂಡರೀಕಾಕ್ಷಿ : ಅದೇ ಪ್ರಕಾರವಾಗಿ ಕರೆದುಕೊಂಡು ಬರುತ್ತೇನಮ್ಮ ಮಾತೆ ಲೋಕವಿಖ್ಯಾತೆ-

ಪುಂಡರೀಕಾಕ್ಷಿ : ನಿಟಿಲಾಕ್ಷನ ವರದಿಂದ ಪುಟ್ಟಿದ ಪಟುಭದ್ರನೆ ಕೇಳಿ ಎನ್ನ ಮಾತೆಯು ಕುಟಿಲಕಪಟವು ಇಲ್ಲದೆ ಎನ್ನೊಳು ಪಟುಪರಾಕ್ರಮಿಯಾದ ಕರಿರಾಜನೆಂಬ ಅಳಿಯನಿಗೆ ಕೊಟ್ಟು ಮದುವೆ ಮಾಡುವೆನೆಂದು ಕಡುಪ್ರೀತಿಯಿಂದ ಎನಗೆ ಭಾಷೆಯನ್ನು ಕೊಟ್ಟು ಇದ್ದಾಳಾದ ಕಾರಣ ನೀವು ಅತಿ ಜಾಗ್ರತೆಯಿಂದ ದಯಮಾಡಬೇಕೈ ರಾಜ ಹಿಮಕರತೇಜಾ-

ಕರಿರಾಜ : ಅದೇ ಪ್ರಕಾರವಾಗಿ ಬರುತ್ತೇನೆ ಪೋಗೋಣ ನಡಿಯೇ ಬಾಲೆ ಸೌಂದರ‌್ಯ ಗುಣಶೀಲೆ-

ದರುವು

ಬೆಳಗಿದಾರೆ ಅಳಿಯನೀಗೆ ಪುರದ ಪಟ್ಟವ ಕಟ್ಟುವೆ
ಲಲನೆ ನಿನ್ನಯ ಪತಿಯ ಕಾಲಿಗೆ ಮುತ್ತಿನ ಪೆಂಡೆ
ಗುರುತು ಕಟ್ಟಿ ಬಾರಮ್ಮಾ॥

ತೊಂಡನೂರಿ : ಅಮ್ಮ ಮಗಳೆ. ಬಹುಪರಾಕ್ರಮಿಯಾದ ಕರಿರಾಜನು ಎನಗೆ ಪ್ರೇಮದಳಿಯನಾಗಿ ಇರುವುದರಿಂದ ಮನದೊಳಗೆ ಹಲವು ಯೋಚನೆ ಎಂಬುದು ನನಗೆ ಎಷ್ಟು ಮಾತ್ರಕ್ಕೂ ಇಲ್ಲ. ನಾಳೆ ಸೂರ್ಯೋದಯ ಕಾಲಕ್ಕೆ ಈ ಪುರದ ಆಧಿಪತ್ಯವನ್ನು ಇಳೆಯಾಧಿಪತಿಗೆ ಕೊಡುವೆನು ಮತ್ತು ನಾನು ವೃದ್ಧಾಪ್ಯ ದೆಶೆಯಾಗಿರುವುದರಿಂದ ರಾತ್ರಿಯ ಕಾಲದಲ್ಲಿ ಎದ್ದು ಈಚೆಗೆ ಬರುವ ಸಮಯದಲ್ಲಿ ನನ್ನ ಅಳಿಯನಿಗೆ ಎನ್ನ ಕಾಲು ತಗುಲೀತು. ಆದ ಕಾರಣ ಕರಿರಾಜನ ಕಾಲಿಗೆ ಈ ಮುತ್ತಿನ ಪೆಂಡೆಯನ್ನು ಗುರುತು ಕಟ್ಟುವಂಥವಳಾಗಮ್ಮಾ ಮಗಳೆ-

 

ವಚನ

ಕೇದಾರಗೌಳ

ಕೇಳಲಿಲ್ಲವೇನಯ್ಯ ಈ ಪ್ರಕಾರವಾಗಿ
ತೊಂಡನೂರಿ ಎಂಬ ರಕ್ಕಸಿಯು ಕಪಟ
ಕೃತ್ಯಗಳಿಂದ ಕುಟಿಲವನು ಮನಸಿನೊಳ
ಗಿಟ್ಟು ತನ್ನ ಮಗಳಾದ ಪುಂಡರೀಕಾಕ್ಷಿಯ
ಕೂಡೆ ತನ್ನ ಅಳಿಯನಾದ ಕರಿರಾಜನ ಕಾಲಿಗೆ
ಮುತ್ತಿನ ಪೆಂಡೆಯನ್ನು ಗುರುತು ಕಟ್ಟೆಂದು ಹೇಳಲು
ಪುಂಡರೀಕಾಕ್ಷಿಯು ಆ ಕರಿರಾಜನನ್ನು ಕೊಲ್ಲು
ವಳೆಂದು ಮನಸ್ಸಿನಲ್ಲಿ ಚಿಂತಿಸಿ ಬಹು ಚಿಂತೆಯಿಂದ
ಕಟ್ಟಿದ ಗುರುತನ್ನು ಬಿಚ್ಚಿ ಬೊಮ್ಮ ರಕ್ಕಸನ
ಕಾಲಿಗೆ ಕಟ್ಟಿರಲು-

ಪುಂಡರೀಕಾಕ್ಷಿ : ಆಹಾ ಇದು ಏನು ಆಶ್ಚರ್ಯವಾಗಿರುವುದು. ಕಂತುಶರಸಮರೂಪ ಶಾಂತವತ್ಸಲನಾದ ಕರಿರಾಜನ ಕಾಲಿಗೆ ಮುತ್ತಿನ ಪೆಂಡೆಯನ್ನು ಗುರುತು ಕಟ್ಟೆಂದು ಎನ್ನ ತಾಯಿಯು ಪೇಳಲು ಎನ್ನ ಅಂತರಂಗದಲ್ಲಿ ಯೋಚಿಸಲು ಮನಸ್ಸಿಗೆ ಸಂಶಯವಾಗಿ ಕಾಣುವುದಲ್ಲಾ. ಆಹಾ ಮುಂದೇನು ಅಪಾಯಗಳು ನಡೆಯುವುದೋ ಕಾಣೆನಲ್ಲಾ. ಇದಕ್ಕೆ ಚಿಂತಿಸುವುದೇತಕ್ಕೆ. ತಕ್ಕ ಉಪಾಯದಿಂದ ಕರಿರಾಜನ ಕಾಲಿಗೆ ಕಟ್ಟಿರುವ ಮುತ್ತಿನ ಪೆಂಡೆಯನ್ನು ಬಿಚ್ಚಿ ಬೊಮ್ಮರಕ್ಕಸನ ಕಾಲಿಗೆ ಕಟ್ಟಿದರೆ ಮುಂದೇನು ಪರಿಯಾಗುವುದೋ ನೋಡುವೆನು. ಆಹಾ ರಕ್ಕಸಿಯೂ ರಕ್ಕಸನೂ ನಿದ್ರೆಗೈಯುತ್ತಿರುವರು. ಇದೇ ಸಮಯವಾಗಿದೆ. ಕರಿರಾಜನ ಕಾಲಿಗೆ ಕಟ್ಟಿರುವ ಮುತ್ತಿನ ಪೆಂಡೆಯನ್ನು ಬಿಚ್ಚಿ ಬೊಮ್ಮರಕ್ಕಸನ ಕಾಲಿಗೆ ಈಗಲೇ ಕಟ್ಟಿ ನಾನು ಏನನ್ನೂ ಅರಿಯದವಳಂತೆ ಮಲಗಿ ನಿದ್ರಿಸುವೆನು.

ವಚನ

ಕೇದಾರ ಗೌಳ

ರಕ್ಕಸಿಯು ಮಧ್ಯರಾತ್ರಿಯೊಳೆದ್ದು ಕಟ್ಟಿರುವ
ಗುರುತನ್ನು ನೋಡಿ ಬೊಮ್ಮ ರಕ್ಕಸನು ತನ್ನ
ತಮ್ಮನೆಂದರಿಯದೆ ಕರಿರಾಜನೆಂದು ತಿಳಿದು

ತೊಂಡನೂರಿ : ಭಲಾ ಭಲಾ ಇದು ಒಳ್ಳೆ ಸಮಯ. ನಮ್ಮ ಪುಂಡರೀಕಾಕ್ಷಿಯನ್ನು ಕೂಡಿಕೊಂಡಿರುವ ಪುಂಡು ಮನುಜನನ್ನು ಈಗಲೇ ಚಂಡಿಸಿ ಗುಂಡಿಗೆಯನ್ನು ಸೀಳಿ ಮಂಡೆಯನ್ನು ಕತ್ತರಿಸಿ ಚಂಡ ದಾನವರಿಗೆ ಹಬ್ಬವನ್ನು ಮಾಡಿದರೆ ಅಂಡಪಿಂಡ ಬ್ರಹ್ಮಾಂಡದಲ್ಲಿ ನಮಗೆ ಎದುರು ಯಾರು ಇರುವುದಿಲ್ಲ. ಇಗೋ ಈಗಲೇ ನಾನು ಕಟ್ಟಿಸಿರುವ ಗುರುತನ್ನು ನೋಡಿ ಹಿಡಿಹಿಡಿದು ಕಡಿ ಕಡಿದು ಪೊಡವಿಪನ ರಕ್ತವನ್ನು ಪಾನ ಮಾಡುವೆನು, ನಂತರ ತಮ್ಮನಾದ ಬೊಮ್ಮನಿಗೂ ಪುಂಡರೀಕಾಕ್ಷಿಗೂ ಪರಿಣಯವು ಮಾಡಬಹುದು. ಆಹಾ ಎಲ್ಲಿ ಇರುವೆಯೊ ಪುಂಡುಮಾನವ-

ವಚನ ಕೇದಾರಗೌಳ

ಕಡುರೋಷದಿಂದ ಖಡ್ಗದಿಂದಲಿ ತಿವಿದು ಗರಗರನೆ
ಶಿರವನ್ನು ಹರಿದು ಸುರಿಸುರಿವ ರಕ್ತವನ್ನು ಬಿರಬಿರನೆ
ನೆಕ್ಕಿ ಓಹೋ ಈ ಜಗದೊಳಗೆ ಎನಗೆ ಹಗೆಯಿಲ್ಲ
ವೆಂದು ಸಂತೋಷದಿಂದ ಎನ್ನ ತಮ್ಮನ ಮದುವೆಗೆ
ವಿಘ್ನಗಳಿಲ್ಲವೆಂದು ಮರೆತು ಮಲಗಿದಳು ಊರು
ಮಾರಿಯಂತೆ ದನುಜೆ –

ದರುವು

ಕಾಮಿನೀ ಪ್ರೇಮನೆ ನಿದ್ರೆಗೈವುದು ಸಾಕು
ಸೋಮಸುಂದರ ಏಳಯ್ಯ  ॥
ತಾಮಸವ್ಯಾತಕ್ಕೆ – ತಾಯಿ ಮಾಡಿರುವಂಥ
ಈ ಮಹಾ ಕೃತ್ಯವು ಬೇಗಾನೆ ನೀನೋಡೋ॥

ಪುಂಡರೀಕಾಕ್ಷಿ : ಹೇ ರಾಜಾ. ಸಿಂಧುಜಾತೆಯಸುತ ಮನ್ಮಥನು ಇಂದುಸುತೆ ಮಂದಗಾಮಿನಿಯೊಳು ಕಂದರ್ಪ ಕೇಳಿಯೊಳು ಲಲಿತವಾದಂತೆ ಸುಂದರಾಂಗನೆಯಾದ ಎನ್ನೊಳು ಚುಂಬಿಸುವ ಹೇ ಕಾಂತ ಮಂದಮತಿಯಂತೆ ನೀನು ನಿದ್ರೆಗೈಯ್ಯುವುದು ಏನು ಇಂದೀಗ ಚಂಡ ದಾನವಿಯು ಮಾಡಿರುವ ಕೃತ್ಯಗಳ ಅಂದಗಳು ನೋಡಲು ಬೇಗನೆ ಏಳಯ್ಯ ರಮಣ ರತಿಗುಣಾಭರಣ –

ಕರಿರಾಜ : ಹೇ ರಮಣೀ ಉರಗ ಭೂಷಣ ಶಿರದ ಪುಷ್ಪದ ಹರಿಣಾಂಕನಸುತೆಯಂತೆ ಪ್ರಜ್ವಲಿಪ ಸರಸಿಜಾಕ್ಷಿಯೇ ಕೇಳು, ನಾನು ಸುರತ ಸೌಖ್ಯಗಳನ್ನು ಅನುಭವಿಸಿ ನಿದ್ರಿಸುವ ಕಾಲದೊಳು ಪರಿಪರಿ ವಿಧದಿಂದ ಎಚ್ಚರಿಸಿದ ಕಾರಣವೇನು ತ್ವರಿತದಿಂದಲಿ ಅರುಹಬೇಕೈ ರಮಣಿ ರತಿಗುಣಾಭರಣಿ –

ದರುವು

ಕಾಂತಾ ಮಾತೆಯು ಈಗ ನಾಥ ನೀನೇ ಎಂದು
ಪ್ರೀತಿ ತಮ್ಮನ ಕೊಂದಳೈ ॥ಪ ॥

ಪಂಥದಿಂದಲಿ ನಿನ್ನ ಕೊಲ್ಲದೆ ಬಿಡಲೀಗ ಎಂತು
ಮಾಡಲಿ ನಾನು ಚಿಂತೆ ಸಂಭವಿಸೀತು ಏನಾ ಪೇ
ಳಲಿ ಕಾಂತನೆ ಮತ್ತಿನ್ನೇನ ಉಸುರಾಲಿ॥

ಪುಂಡರೀಕಾಕ್ಷಿ : ಹೇ ರಾಜಾ. ನೆನ್ನೆಯ ದಿನ ರಾತ್ರಿಯೋಳ್ ಮನ್ನಣೆ ಮಮತೆಯಿಂದಲಿ ಎನ್ನ ತಾಯಿಯು ಎನ್ನಳಿಯನ ಕಾಲಿಗೆ ಮುತ್ತಿನ ಪೆಂಡೆಯನ್ನು ಗುರುತು ಕಟ್ಟೆಂದು ಉಸುರಲು ಚೆನ್ನಿಗನಾದ ನಿನ್ನ ಪ್ರಾಣವನ್ನು ಕೊಲ್ಲುವಳೆಂದು ನಾ ತಿಳಿದು ಸನ್ನಾಹದಿಂದಲಿ ಬೊಮ್ಮನ ಕಾಲಿಗೆ ಕಟ್ಟಲು ಅನ್ಯಕಾರಿಯಾದ ದನುಜೆ ತನ್ನ ತಮ್ಮನೆಂದರಿಯದೆ ಕೊಂದಿರುವಳು ಮುನ್ನ ತಾನೆದ್ದು ನೋಡಿ ಗುಣ ಸಂಪನ್ನನಾದ ನಿನ್ನನ್ನು ಕೊಲ್ಲುವಳೆಂಬ ಚಿಂತೆಯು ಎನಗೆ ಸಂಭವಿಸಿತೈ ರಾಜಾ ಮಾರ್ತಾಂಡತೇಜಾ –

ದರುವು

ಚಿಟಿಲ ಚಿಟಿಲ ಪೆಟಿಲಧ್ವನಿಯು ಪಟುಕಠಾರಿಯೊಳ್
ಕುಟಿಲೆಯನ್ನ ಕೊಂದುಬಿಡುವೆ ಒಂದು ಕ್ಷಣದೊಳು
ಭಳಿರೆ ಭಳಿರೆ ವ್ಯಸನವ್ಯಾಕೆ ನೋಡು ಶೌರ‌್ಯವಾ
ಇಳೆಯ ಬಳ್ಳಾಪುರಿಯವಾಸ ಎಮ್ಮ ಪೊರೆಯುವಾ ॥

ಕರಿರಾಜ : ಹೇ ನಾರಿ. ಚಿತ್ತಜನ ಸತಿಯ ಕೈಯಲ್ಲಿ ಬಿತ್ತರಿಸುವ ಕಸ್ತೂರಿ ಮೃಗದಂತೆಸೆಯುವ ಪುತ್ಥಳಿಯ ಬೊಂಬೆಯೆ ಕೇಳು. ಕಡು ರಭಸದಿ ಅಡಿಗಡಿಗೆ ಗರ್ಜಿಸಿ ಪೊಡವಿ ಪರಸತ್ವವನ್ನು ಬಿಡಬಿಡದೆ ಹಿಡಿ ಹಿಡಿದು ಕಡು ಸಡಗರದಿಂದ ಮೆರೆಯುವ ಎನ್ನೊಡನೆ ನೀನು ವ್ಯಸನವನ್ನು ಪಡಲ್ಯಾಕೆ ಇಕ್ಕೋ ನೋಡು ಎನ್ನ ಕರದಿಡಿಯ ಕಠಾರಿಯೋಳ್ ಕುಟಿಲ ದಾನವಿಯ ಹಿಡಿಹಿಡಿದು ನಡುನಡುಗಿಸಿ ಗರಗರನೆ ತಿರುಗಿಸಿ ಕಡಿಕಡಿದು ಬಿಡುವೆನೆ ನಾರಿ ಸೌಂದರ‌್ಯಗುಣ ಪೋರಿ –

ಪುಂಡರೀಕಾಕ್ಷಿ : ಅಯ್ಯ ರಾಜಾ. ದುರುಳ ದನುಜೆಯನ್ನು ಮರಣ ಹೊಂದಿಸಿದರೆ ತಾಯಿ ಉದರದಲ್ಲಿ ತರಳೆ ಪುಟ್ಟಿ ಪರಪುರುಷನ ಕೂಡಿ ಮರ್ಯಾದೆ ಇಲ್ಲದೆ ಹರಣವನ್ನು ತೆಗೆಸಿದಳೆಂದು ಪರರು ದೂರುವರಲ್ಲದೆ ಉರಗ ಭೂಷಣನಾದ ಶಂಕರನು ಮೆಚ್ಚನು ಕರುಣವಿಟ್ಟೆನ್ನ ಮೇಲೆ ಧರಣಿ ಮೋಹಿನಿಯ ಪರಿಣಯವಾಗಿ ಬರುವವರೆಗೂ ತಮ್ಮ ನಿರೀಕ್ಷಣೆಯಲ್ಲಿ ಕಾದಿರುವೆನು. ಈ ವೇಳೆಯಲ್ಲಿ ತಾವುಗಳು ಇಲ್ಲಿರದೆ ತ್ವರಿತದಿಂದ ಪೋಗಿ ಬರುವಂಥವರಾಗೈ ಕಾಂತ ಸದ್ಗುಣದಾತ ॥

ದರುವು

ಪೋಗಲಾರೆನೆ ನಿನ್ನನು ಬಿಟ್ಟು ಹ್ಯಾಗೆ ಪೋಗುವೆನೆ ॥

ನಾಗಾವೇಣಿಯೆ ನಿನ್ನ ಬಾಧೆಯಿಂದಲಿ ನಾನು
ಭೋಗಾಸುಖವಪಟ್ಟು ಹ್ಯಾಗೆ ಪೋಗುವೆನೆ|| 1॥

ಮದನ ಮೋಹನಾಂಗಿ – ಸುದತಿರನ್ನಳೆ ಕೇಳೆ
ಮದನ ತಾಪವು ಈಗ – ಸದರಾದಿ ಬಿಡದಲ್ಲಾ॥