ಕವಿ : ತಿರುವೆಂಗಡ ಜೀಯರ್

ಪ್ರತಿಕಾರರು  : ಬೆಂಗಳೂರು ನಗರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ
ದೊಡ್ಡಬಳ್ಳಾಪುರ ಟೌನ್ ವೀರಭದ್ರಪ್ಪನ ಪೇಟೆಯ ಶ್ರೀ ಎನ್. ಚಿಕ್ಕವೆಂಕಟಪ್ಪನವರ ಪ್ರತಿಯನ್ನು ದೊಡ್ಡಬಳ್ಳಾಪುರದ ಮೂಡಲಪಾಯ ಯಕ್ಷಗಾನ ಭಾಗವತರಾದ
ಶ್ರೀ ಯದ್ಲಳ್ಳಿ ಪಾಪಣ್ಣನವರ ಶಿಷ್ಯರಾದ ಶ್ರೀ ಮಂಜುನಾಥ್, ಶಾಲಾ ಶಿಕ್ಷಕರು
ಪ್ರತಿ ಮಾಡಿದ ದಿನಾಂಕ : 16.02.1984

 

ತ್ರಿಪುಡೆ

ಕೇಳಿರೈ ಕರಿರಾಜ ಚಂದ್ರನ ಕಥೆಯಾ ಪೇಳುವೆ
ಹರುಷದಿಂದಲಿ ಮುದದಿ ವರ್ಣಿಪೆ ಸುಜನರೆಲ್ಲರು
ಮುದದಿ ಕೇಳಿ ॥

ಆ ಪುರಾಧೀಶ್ವರನು ಭೋಗದಿ ಅಮರಪತಿಗತಿ
ಶಯವು ಆಗಿರೆ ಭೂಪರಿಗೆ ಸರ‌್ವರಿಗೆ ತಾ
ಕಂಠೀರವನಾಗಿ ॥

ಲೋಕದೊಳ್ ಕರಿರಾಜ ಚಂದ್ರನು ಏಕಚಕ್ರದಿ
ಆಳುತಿರ್ದನು ಶ್ರೀಧರನ ಕೃಪೆಯಿಂದ
ತಾನೀ ಮೇಧಿನಿಯನು ॥

ಧಾರುಣಿಯೋಳ್ ಶೋಡಶಾಮಹ ದಾನಗಳನು
ನಡೆಸುತಾ ಪೊಡವಿಪತಿ ತಾನಾಳುತಿರ್ದನು
ಕಡುಪರಾಕ್ರಮದೀ ॥

ಧರೆಯೊಳುತ್ತಮವಾದ ಖಗಗಿರಿ ನರಮೃಗೇಶನ
ಚರಣಕಮಲದಿ ಹರುಷದಿಂದಲಿ ಭಜಿಸಿದವರಿಗೆ
ಹರಿಯು ಪೊರೆಯುವನು ॥

ಕರಿರಾಜ : ನಾವು ಧಾರೆಂದರೆ ಯೀ ಧರಾಮಂಡಲದೋಳ್ ಅತಿಸಂಭ್ರಮದಿಂದೊಪ್ಪುವ ಜಂಭಾರಿಯ ಲೋಕಕ್ಕೆ ಯಿಮ್ಮಿಗಿಲಾದ ಮರಕತ ಮಾಣಿಕ್ಯ ಮಣಿಖಚಿತ ಗೋಮೇಧಿಕ ಪುಷ್ಯರಾಗ ವಜ್ರ ವೈಡೂರ‌್ಯ ಕನಕಮಯದಿಂದೆಸೆಯುವ ಈ ಧರೆಗೆ ದಕ್ಷಿಣಾಧಿ ಕಾಶ್ಮೀರ ದೇಶಕ್ಕೆ ಅಧ್ಯಕ್ಷಿತನಾಗಿ ಮಾರಸಮರೂಪ ಧುರಧೀರ ರಣಶೂರ ಮಾರಪತಿಯ ಚಿತ್ರಕ್ಕೆವೊಪ್ಪುವ ಕನ್ನೆಯರೋಳ್ ಶಿರೋರತ್ನವೆಂದೆಣಿಪ ಸುದತಿ ಬನವಂತಾ ದೇವಿಯ ಉದರಾಬ್ಧಿಯೋಳ್ ವರ ಸುಧಾಂಶುವಿನಂತೆ ಮಾರಾರಿಯ ವರದಿಂದ ಪುಟ್ಟಿದ ರಣರಂಗಭೀಮ ಮುಖನಿರ್ಜಿತಸೋಮ ನವಕವ್ಯಕಾಮ ಮನೋನಿಗರ್ವಿಧಾಮ ಹರಿಕರಿಸಿಂಹಪರಾಕ್ರಮಗಳುಳ್ಳ ಕರಿರಾಜನೆಂಬ ನಾಮಾಂಕಿತವನ್ನು ಗ್ರಹಿಸಿದೆಯೇನೋ ದೂತ ರಾಜಸಂಪ್ರೀತ –

ಭಲಾ ಸೇವಕ ಈ ಸಭಾಮಂಟಪಕ್ಕೆ ಬಂದ ಕಾರಣವೇನೆಂದರೆ ಎನ್ನ ನಂಬಿಕೆಯುಳ್ಳ ಪ್ರಧಾನೋತ್ತಮನನ್ನು ಜಾಗ್ರತೆಯಾಗಿ ಕರೆದುಕೊಂಡು ಬರುವಂಥವನಾಗೈ ಸಾರಥಿ.

ಪ್ರಧಾನಿ : ಅಯ್ಯ ಸೇವಕ ಎಮ್ಮ ಸಮ್ಮುಖದಲ್ಲಿ ಬಂದು ನಿಂತು ಯಮ್ಮನ್ನು ಧಾರೆಂದು ಕೇಳುವಂಥವನಾಗುತ್ತಾ ಇದ್ದಿ. ಆದರೆ ಯಮ್ಮ ವಿದ್ಯಮಾನವನ್ನು ಚೆನ್ನಾಗಿ ಪೇಳುತ್ತೇನೆ. ಚಿತ್ತವಿಟ್ಟು ಕೇಳೈ ಸೇವಕ ಭಕ್ತಿಯೋಳ್ ಭಾವುಕ. ಅಯ್ಯ ಸಾರಥಿ ಈ ಸಪ್ತ ದ್ವೀಪಗಳೊಳಗೆ ಅತಿಶ್ರೇಷ್ಠದಿಂದೊಪ್ಪಲ್ಪಟ್ಟ ಜಂಭೂದ್ವೀಪದ ಮಧ್ಯದೊಳ್ ದೇಶಂಗಳು ಯಾವ ಯಾವೆಂದರೆ ಮಾಳ ಮಳಿಯಾಳ ಚೋಳ ಬಂಗಾಳ ಗುರ್ಜರ, ಟೆಂಕಣ, ಸಾಳ್ವ ನೇಪಾಳ ಸುರ ಸೇನಾಂದ್ರಾದಿ ದೇಶಗಳುಂಟು. ಆದರೆ ಆ ದೇಶಂಗಳೊಳಗೆ ಹರಿಹರಾದಿ ಭಕ್ತಿಮಯದಿಂದೊಪ್ಪಲ್ಪಟ್ಟ ಕನಕಾಚಲಕ್ಕೆ ದಕ್ಷಿಣ ಕಾಶ್ಮೀರ ದೇಶಕ್ಕೆ ಕಾರಣಕರ್ತರಾದ ಕರಿರಾಜಂಗೆ ಪಟುಭಟರಾದಿ ವೀರಭಟ ಪರಾಕ್ರಮದೊಳ್ ವೀರಭಟನೆಂದೆಣಿಸಿ ಶೋಡಷ ಪ್ರಧಾನರೊಳಗೆ ಶ್ರೇಷ್ಠನೆಂದೆಣಿಸಿಕೊಂಡಿರುವ ಚತುರ್ದಶಪೂರ್ಣಚಂದ್ರನಂತೆ ಪ್ರಕಾಶಿಸುವ ಸುಗುಣ ಸುಬುದ್ಧಿಯುಳ್ಳ ಪ್ರಧಾನೋತ್ತಮನು ನಾನೇ ಅಲ್ಲವೇನಯ್ಯ ಸೇವಕ ಭಕ್ತಿಯೋಳ್ ಭಾವಕ.

ಮಂತ್ರಿ : ಅಯ್ಯ ಸಾರಥಿ. ನಮ್ಮ ದೊರೆಯಾದಂತಾ ಕರಿರಾಜನ ಭೇಟಿಯನ್ನು ಮಾಡಿಸುವಂತಾವನಾಗೊ ಸೇವಕ ಭಕ್ತಿಯೊಳ್ ಭಾವುಕ.

ಮಂತ್ರಿ : ನಮೋನ್ನಮೋ ಹೇ ರಾಜ ಮಾರ್ತಾಂಡತೇಜಾ

ಕರಿರಾಜ : ದೀರ್ಘಾಯುಷ್ಯಮಸ್ತು ಬಾರೈ ಮಂತ್ರಿ ಮಮಕಾರ‌್ಯ ಸ್ವತಂತ್ರಿ.

ದರುವು

ರಾಜ ರಾಜಾಧಿರಾಜ ರಾಜ ರವಿಸಮತೇಜಾ
ಸುಜನ ಸದ್ಗುಣಭೋಜ-ಕರಿರಾಜಭೂಪಾ
ಸುಜನಾ ಸದ್ಗುಣ ಭೋಜಾ ॥

ಮಂತ್ರಿ : ಅಯ್ಯ ದೊರೆಯೆ ತಾವು ಕರೆಸಿದಂಥ ಅಭಿಪ್ರಾಯವನ್ನು ಅಪ್ಪಣೆಯಾದದ್ದೇ ಆದರೆ ತಮ್ಮ ಆಜ್ಞೆ ಪ್ರಕಾರ ನಡೆದುಕೊಳ್ಳುತ್ತೇನಯ್ಯ ರಾಜಾ ಅರ್ಕಸಮತೇಜಾ-

ದರುವು

ಯೇನು ಕಾರಣ ಯೀಗ-ಯನ್ನ ಕರೆಸಿದೆ ಬೇಗಾ
ತಿಳಿಸಬೇಕಯ್ಯ ಭೂಪ ಶೌರ‌್ಯಪ್ರತಾಪ ತಿಳಿಸ
ಬೇಕಯ್ಯ ಭೂಪ ॥

ಮಂತ್ರಿ : ಅಯ್ಯ ರಾಜ. ಯನ್ನನ್ನು ಏನು ಕಾರಣದಿಂದ ಇಷ್ಟು ಜಾಗ್ರತೆಯಾಗಿ ಕರೆಸಿ ಇದ್ದೀರೋ ತಿಳಿಯಲಿಲ್ಲಾ ಮತ್ತು ಯಾವ ಆಲೋಚನೆ ಇದ್ದಾಗ್ಯೂ ಎನ್ನೊಡನೆ ಬಿತ್ತರಿಸಬೇಕಯ್ಯ ಶೂರ ಶರಧಿಗಂಭೀರ.

ದರುವು

ಶೂರ ಬಾರಯ್ಯ-ಮಂತ್ರಿವೀರ ಕೇಳಯ್ಯ ॥
ಧೀರನೆನೆಸಿ ಭೂಮಿಯೊಳಗೆ ಮಾರಹರನ ಕರುಣ
ದಿಂದ ಧಾರುಣಿಯನಾಳ್ದೆ ಸುಖದಿ ಧರ್ಮದಿಂದಲಿ
ಮಹಾಶೌರ‌್ಯದಿಂದಲಿ ॥

ಕರಿರಾಜ : ಅಯ್ಯ ಮಂತ್ರಿ. ಈ ಧರಿತ್ರಿಯೊಳ್ ವಾರಿಜಮಿತ್ರನಂತೆ ಒಪ್ಪುವ ಮಾರಾರಿಯ ಕರುಣ ದಿಂದ ವೀರಾಧಿವೀರರೊಳ್ ಮಹಾಶೂರನೆಂದೆಣಿಸಿಕೊಂಡು ಈ ಭೂಮಿಯನ್ನು ಆಳುತ್ತಾ ಇದ್ದೇವಯ್ಯ ಮಂತ್ರಿ ಯನ್ನ ಕಾರ‌್ಯಕ್ಕೆ ನೀನೇ ಸ್ವತಂತ್ರಿ.

ದರುವು

ಅಷ್ಠದಿಕ್ಕಿನ ರಾಯರೊಳಗೆ ಅಧಿಪನೆನಿಸಿ ಭೂಮಿ
ಯೊಳಗೆ ದುಷ್ಠರಾಯರ ಶೆರೆಯ ಪಿಡಿದು
ಕಷ್ಠಪಡಿಸುವೆ ಮಹಾಶ್ರೇಷ್ಠನೆನಿಸುವೆ ಮಂತ್ರಿ ॥1 ॥

ಕರಿರಾಜ : ಅಯ್ಯ ಮಂತ್ರಿ ಈ ಅಷ್ಠದಿಕ್ಕು ಪರಿಪಾಲಿಸುವ ರಾಜಾಧಿರಾಜ ಮಹಾರಾಜರಲ್ಲಿ ಮಹಾಶ್ರೇಷ್ಠನೆಂದೆನಿಸಿ ಕೊಂಡು ಮತ್ತು ಈ ಭೂಮಿಯೊಳ್ ದುಷ್ಠರಾಯರ ಗರ್ವವಂ ಮುರಿದು ಈ ಸೃಷ್ಠಿಯನ್ನು ಆಳುತ್ತೇವಯ್ಯ ಮಂತ್ರಿ ಎನ್ನಕಾರ‌್ಯಕ್ಕೆ ನೀನೇ ಸ್ವತಂತ್ರಿ-

ದರುವು

ಶುಭಗಳಿಂದ ಪ್ರಜೆಗಳೆಲ್ಲ ಸುಖಗಳಿಂದ
ಬಾಳುತಿಹರು ಅಖಿಲದೊಳಗೆ ಬಳ್ಳಾಪುರಿಯ
ಹರಿಯು ಸಲಹುವ ನರಹರಿಯು ಪೊರೆಯುವ ಮಂತ್ರಿ ॥1 ॥

ಕರಿರಾಜ : ಅಯ್ಯ ಮಂತ್ರಿ ಈ ಕ್ಷಿತಿಯೊಳ್ ಪಕ್ಷಿವಾಹನನಾದ ಲಕ್ಷ್ಮೀಶನ ಕರುಣದಿ ಸುಕ್ಷೇಮದಿ ಬ್ರಹ್ಮ, ಕ್ಷತ್ರಿಯ, ವೈಶ್ಯ, ಶೂದ್ರ ನಾನಾ ವರ್ಣಗಳ ಜನರು ತಮ್ಮ ತಮ್ಮ ಮತಾನುಸಾರವಾಗಿ ನಡೆಯುವ ನಿತ್ಯಕರ್ಮಾನುಷ್ಠಾನಗಳನ್ನು ನಡೆಸುತ್ತಾ ಶುಭಕೃತಗಳಿಂದಲಿ ಪ್ರಜೆಗಳು ಧನಕನಕ ವಸ್ತುವಾಹನಂಗಳಿಂದಲೂ ಮರಕತ ಮಾಣಿಕ್ಯ ಆಭರಣಾದಿಗಳಿಂದ ಭೂಷಿತರಾಗಿ ಸುರತಾದಿ ಭೋಗಗಳಿಂದ ಸುಖದಿಂದ ಬಾಳುವರೇನೈ ಪ್ರಧಾನಿ ವಾರುಧಿ ಸಮಾನಿ-

ಪ್ರಧಾನಿ : ಅಯ್ಯ ರಾಜ ಪುರಹೂತನ ಸುತ ಧುರಧೀರ ಪಾರ್ಥನ ಧೀರತ್ವಕ್ಕೆ ಸಮಾನರಾದ ಹರಿಕರಿಸಿಂಹ ಪರಾಕ್ರಮಗಳುಳ್ಳ ಹೇ ರಾಜಾ – ಈ ಧರಿತ್ರಿಯೋಳ್ ಇರುವ ಚಾತುರ್ವರ್ಣಂಗಳಲ್ಲಿಯೂ ಮರಕತ ಮಾಣಿಕ್ಯ ಕನಕಾಭರಣಭೂಷಿತ ಅಲಂಕಾರ ನಿತ್ಯಕರ್ಮಾನುಷ್ಠಾನಂಗಳು ನಡೆಸಿಕೊಂಡು ಸುಖದಿಂದ ಇದ್ದಾರಯ್ಯಾ ದೊರೆಯೆ ಕೇಳೆನ್ನ ಸಿರಿಯೆ-

ದರುವು

ಮಂತ್ರಿಶೇಖರ ಕೇಳೈ ತ್ಪರಿತದಿಂದಲಿ ನೀನು
ಮರ್ತ್ಯಾದೊಳೆನ್ನ ಶೌರ‌್ಯ ಮರೆತಾರೇನಯ್ಯ
ಸುತ್ತಣದ ಅರಸುಗಳ ಮರ್ದಿಸಿ
ಪಿಡಿದು ಬಿತ್ತರಿಸಿ ಕಾಣಿಕೆಯ ತರಿಸಿಕೊಂಡಿಹನಾ॥

ಕರಿರಾಜ : ಅಯ್ಯ ಮಂತ್ರಿ ಈ ವಸುಮತಿಯೋಳ್ ಪಶುಪತಿಯ ಕರುಣದಿ ಅಸಮ ಸಾಹಸ ಪರಾಕ್ರಮಗಳುಳ್ಳ ಅರಸುಗಳೆಲ್ಲರನ್ನು ಜೈಸಿ ಕಲಶ ವಚನಗಳಿಂದ ಕಪ್ಪಕಾಣಿಕೆಗಳನ್ನು ತರಿಸಿಕೊಳ್ಳುತ್ತಾ ಮೊಸೆ ಮೊಸೆದು ಎಮ್ಮ ಆಜ್ಞೆಯೋಳ್ ಸರ್ವರೂ ಇದ್ದಾರೇನಯ್ಯಾ ಮಂತ್ರಿ-

ದರುವು

ಧರಣೀಶ ಕೇಳ್ ನಿಮ್ಮ ಶೌರ‌್ಯಕ್ಕೆ ಎದುರಿಲ್ಲಾ
ದೊರೆಗಳೆಲ್ಲರು ನಿಮ್ಮ ಆಜ್ಞೆಯೊಳ್ ಇಹರೈ ॥

ಮಂತ್ರಿ : ಅಯ್ಯ ರಾಜ ಈ ಪೊಡವಿಯೊಳಿರುವ ರಾಜರೆಲ್ಲರೂ ಉಡುರಾಜನಂತೆ ತೋರ್ವ ನಿಮ್ಮ ಪ್ರತಾಪಗಳಿಗೆ ನಡುಗುತ್ತಾ ನಿಮ್ಮ ಆಜ್ಞೆಯ ಪ್ರಕಾರ ನಡೆಯುವರಲ್ಲದೆ ಗಡಬಡಿಸಿ ಗರ್ಜಿಸುವ ಘರ್ಜನೆಯು ಕೇಳಿದಾಕ್ಷಣಕ್ಕೆ ಕಾಡುಗಳನ್ನು ಸೇರಿ ಅಡಗಿಕೊಳ್ಳುವರಯ್ಯ ರಾಜಾ ಮಾರ್ತಾಂಡತೇಜಾ-

ದರುವು

ದುರ್ಗಾಧಿಪತಿಗಳು ದುಷ್ಠದುರ್ಜನರೆಲ್ಲಾ
ಶರಣೆಂದು ಭಕ್ತಿಯೊಳ್ ಸೇವಿಸುತಿಹರೇ ॥

ಕರಿರಾಜ : ಅಯ್ಯ ಮಂತ್ರಿ. ಕಠಿಣತರವಾದ ಭಟ ಪರಾಕ್ರಮರೋಳ್‌ಪಟರೆಂದೆನಿಸಿಕೊಂಡು ಇರುವ ದುರ್ಗಾಧಿಪತಿಗಳಂ ಸರ್ವಸನ್ನಾಹದಿಂದ ಪಿಡಿದು ಮತ್ತು ರವಿರಶ್ಮಿಗಳಿಲ್ಲದ ಪೊದೆಗಳಲ್ಲಿ ಅಡಗಿರುವ ದುಷ್ಠದುರ್ಜನರು ಮೊದಲಾಗಿ ಕಪ್ಪ ಕಾಣಿಕೆಯನ್ನು ತಂದು ಒಪ್ಪಿಸುತ್ತಾ ಇರುವರೇನಯ್ಯ ಮಂತ್ರಿ-

ಪ್ರಧಾನಿ ದರುವು

ಪುನ್ನಾಗದೇಶದ ಚನ್ನಿಗರಾಯನು
ಇನ್ನೂ ಕಾಣಿಕೆಯನ್ನು ತಂದುಕೊಡಲಿಲ್ಲ ॥

ಮಂತ್ರಿ : ಅಯ್ಯರಾಜ. ಈ ಐವತ್ತಾರು ದೇಶಂಗಳಲ್ಲಿ, ಇರುವ ಅರಸುಗಳೆಲ್ಲರು ಕಪ್ಪ ಕಾಣಿಕೆಯತಂದು ನಿಮ್ಮ ಉತ್ತಮವಾದ ಭಂಡಾರಕ್ಕೆ ಒಪ್ಪಿಸಿದರು. ಪುನ್ನಾಗದೇಶದ ಅರಸನಾದ ಚನ್ನಿಗರಾಯನೆಂಬುವನು ತನ್ನಯ ಗರ್ವದಿಂದಲಿ ಇದುವರೆವಿಗೂ ಕಾಣಿಕೆಯನ್ನು ತಂದು ಒಪ್ಪಿಸಲಿಲ್ಲಾ. ನಿಮ್ಮ ಅಪ್ಪಣೆ ಆದದ್ದೇ ಆದರೆ ನನ್ನ ಶೌರ್ಯ ಪರಾಕ್ರಮಗಳಿಂದ ತರಿಸಿ ಭಂಡಾರಕ್ಕೆ ಸೇರಿಸುವೆನಯ್ಯ ರಾಜಾ-

ದರುವು

ಬೆದರಿದರು ಭಯದಿಂದ ಎದುರಿಲ್ಲ ಎಮಗಿಂದು
ಮುದದಿಂದ ಕರಿಸಯ್ಯ ಭಟಕಾವಿಜನರಾ ॥

ಕರಿರಾಜ : ಅಯ್ಯ ಮಂತ್ರಿ. ಈ ಛಪ್ಪನೈವತ್ತಾರು ದೇಶಂಗಳೊಳಗೆ ಇರುವ ರಾಜಾಧಿರಾಜ ಮಹಾರಾಜ ರಣಶೂರರು ನಮ್ಮಯ ಆಜ್ಞೆಯಾಗಿ ಮತ್ತು ದುರ್ಗಾಧಿಪತಿಗಳು ಮುಂತಾದವರು ನಮ್ಮ ಆಜ್ಞೆಯಲ್ಲಿದ್ದಾರೆ. ಆದರೆ ಈ ಧರಿತ್ರಿಯೋಳ್ ಎಮಗೆ ವೈರಿಗಳಾದವರು ಯಾರನ್ನು ಕಾಣಲಿಲ್ಲಾ ಮತ್ತು ಉರುಗಭೂಷಣನಾದ ಉಮಾವಲ್ಲಭನ ಕರುಣದಿಂದ ಈ ಪೃಥ್ವಿಯಾ ಸುಖದಿಂದ ಪಾಲಿಸಬೇಕಯ್ಯ ಮಂತ್ರಿ ಎನ್ನ ಕಾರ‌್ಯಕ್ಕೆ ನೀನೇ ಸ್ವತಂತ್ರಿ-

(ಹಳೇಬೀಡಿನ ಪ್ರಧಾನಿಯು ಕರಿರಾಜನ ಸಭೆಗೆ ಆಗಮಿಸುವುದು)

ಯಲಾ ಸೇವಕ ಯಮ್ಮ ಸಮ್ಮುಖದಲ್ಲಿ ಬಂದುನಿಂದು ಯಮ್ಮನು ದಾವ ಸಮುಸ್ತಾನಕ್ಕೆ ಕಾರಣಕರ್ತರೆಂದು ಕೇಳುವಂಥವನಾಗುತ್ತಾ ಇದ್ದಿ. ಆದರೆ ಯಮ್ಮಯ ವಿದ್ಯಮಾನವನ್ನು ಚೆನ್ನಾಗಿ ಪೇಳುತ್ತೇನೆ ಚಿತ್ತವಿಟ್ಟು ಕೇಳೈ ದೂತ ರಾಜ ಸಂಪ್ರೀತ-ಅಯ್ಯ ಸೇವಕ ಯೀ ಪೂರ‌್ವಿಯೊಳ್ ಶಶಿಶೇಖರನಾದ ಶಂಕರನ ಕರುಣದಿ ಸಿರಿಸಂಪತ್ತುಳ್ಳ ವೈಭವದಿಂದೊಪ್ಪುವ ಮುತ್ತುಮಾಣಿಕ್ಯ ಪವಳಮಯವಾಗಿ ಒಪ್ಪುವ ಪಶ್ಚಿಮ ದೇಶದೊಳ್ ಸ್ವಚ್ಛತರವಾದ ಪಚ್ಚೆಗಳ ಮಯದಂತೆ ಅಚ್ಚುತನಪುರಕ್ಕೆ ಸಮವೆಂದೆಣಿಸಿಕೊಂಡಿರುವ ಹಳೆಯಬೀಡಿನ ಪುರಕ್ಕೆ ಕಾರಣಕರ್ತನಾದ ರಾಯನು ಹ್ಯಾಗೆ ವೊಪ್ಪಿರುವನು ಅಂದರೆ ಮಲ್ಲಿಗೆಯ ದುರ‌್ಗದಲ್ಲಿ ಪುಲ್ಲಶರನಾದ ಮನ್ಮಥನು ಪರಿಪಾಲಿಸುವ ಹಾಗೆಯು ಮತ್ತು ದ್ರವ್ಯಾದಿಪತಿಯಾದ ಕುಬೇರನು ಅಲಕಾಪುರಿಯ ಪರಿಪಾಲಿಸುವ ರಾಯರಿಗೆ ಸಮವೆಂದೆಣಿಸಿ ಈ ಧರಣಿಯೋಳ್ ರಾಜಾಧಿರಾಜರಿಗೆ ರಾಯನೆಂದೆಣಿಸಿಕೊಂಡಿರುವ ಬಲ್ಲಾಳಭೂಪತಿಯ ಸಮ್ಮುಖದಲ್ಲಿ ಅಷ್ಠ ಪ್ರಧಾನರೊಳಗೆ ಶ್ರೇಷ್ಠನೆಂದೆಣಿಸಿಕೊಂಡಿರುವ ಸಭಾರತ್ನವೆಂದೆಣಿಪ ಪ್ರಧಾನೋತ್ತಮನು ನಾನೇ ಅಲ್ಲವೇನಯ್ಯ ಸೇವಕ ಭಕ್ತಿಯೋಳ್ ಭಾವುಕ-

ಪ್ರಧಾನಿ : ನಿಮ್ಮ ದೊರೆಯಾದಂಥ ಕರಿರಾಜರ ಭೇಟಿಯನ್ನು ಮಾಡಿಸುವಂಥವನಾಗೋ ಚಾರ ಗುಣಗಂಭೀರ- ನಮೋನ್ನಮೋ ಹೇ ರಾಜ ಮಾರ್ತಾಂಡತೇಜ.

ಕರಿರಾಜ : ದೀರ್ಘಾಯುಷ್ಯಮಸ್ತು-ಬನ್ನಿರಯ್ಯಿ ಆಸ್ಥಾನಾಧಿಪತಿಗಳಿರಾ.

ದರುವು

ಯಾವ ದೇಶದ ನೃಪರೊ ಯಾವ ಪಟ್ಟಣದವರೊ
ಏನೂ ಕಾರಣ ನೀವು ಬಂದಿರಿ ಪೇಳಿ ॥

ಕರಿರಾಜ : ಅಯ್ಯ ನೃಪರೆ ನೀವು ಯಾವ ದೇಶಂಗಳು ಪಾಲಿಸುವ ನೃಪರೋ ಮತ್ತು ಧಾವ ಪಟ್ಟಣಕ್ಕೆ ಕಾರಣಕರ್ತರೂ-ಏನು ನಿಮಿತ್ಯಾರ್ಥವಾಗಿ ಬಂದು ಇದ್ದೀರೊ ತಿಳಿಯಲಿಲ್ಲಾ. ನೀವು ಬಂದ ವರ್ತಮಾನವನ್ನು ಏನಿದ್ದಾಗ್ಯೂ ಪೇಳಬೇಕಯ್ಯ ನೃಪರೆ-

ದರುವು

ಮಂಡಾಲಪತಿ ಕೇಳೋ ಮಾರ್ತಾಂಡಸಮತೇಜ
ಮಂಡಾಲದೊಳು ಚಲುವೆ ಬಲ್ಲಾಳಪುತ್ರಿ ॥

ಪ್ರಧಾನಿ : ಈ ಭೂಮಂಡಲದಲ್ಲಿ ಮಾರ್ತಾಂಡಗೆ ಸಮವೆಂದೆಣಿಸಿದ ಚಂಡಪರಾಕ್ರಮನಾದ ರಾಯನೆ ಕೇಳು. ಈ ನವಖಂಡದೊಳ್ ಅತಿಚೋದ್ಯಗಳಿಂದೊಪ್ಪುವ ಪುರಹೂತನ ಪುರದಂತೆ ಶೋಭಿಸುವ ಈ ಪೊಡವಿಯೋಳ್ ಅತಿಸಡಗರದಿಂ ಮೆರೆಯುವ ಹಳೆಯಬೀಡಿನ ಪುರಕ್ಕೆ ಕಾರಣಕರ್ತರಾದ ಬಲ್ಲಾಳ ಭೂಪತಿಯ ಮೋಹದ ಪುತ್ರಿ ಅಂಗಜನರಗಿಣಿಯಂದದಿ ಶೃಂಗಾರದ ಸುಗುಣಿಯು ಬಂಗಾರದ ಪ್ರತಿಮೆಗಿಮ್ಮಿಗಿಲಾದ ಈ ಧರಿತ್ರಿಯೋಳ್ ಧರಣಿ ಮೋಹಿನಿಯೆಂಬ ಕಾಮಿನಿಯು ನಿಮ್ಮನ್ನು ಮೋಹಿಸಿ ಇದ್ದಾಳಯ್ಯ ರಾಜಾ ಮಾರ್ತಾಂಡತೇಜ-

ದರುವು

ಪೃಥಿವೀಪಾಲರನೆಲ್ಲಾ ಮೆಚ್ಚಾದೆ ಮಾನುನಿಯು
ಪೃಥಿವೀ ಮೋಹಿನಿ ನಿಮ್ಮ ಮೆಚ್ಚೀದಳಯ್ಯ ॥

ಪ್ರಧಾನಿ : ಅಯ್ಯ ರಾಜ. ಈ ಪೃಥ್ವಿಯ ಪರಿಪಾಲಿಸುವ ರಾಜಾಧಿರಾಜ ಮಹಾರಾಜ ಶ್ರೇಷ್ಠರೆಲ್ಲರನ್ನು ನೋಡಿ ಮೆಚ್ಚದೆ ಚಿತ್ತ ಸಮರೂಪ ನಿಮ್ಮ ಚಿತ್ರ ಪಟವನ್ನು ನೋಡಿ ಮತ್ತಗಜಗಾಮಿನಿಯು ಚಿತ್ತದೋಳ್ ತತ್ತರಿಸಿ ಕಾತುರಕ್ಕೆ ತರಹರಿಸುತ್ತಿರಲು ಮತ್ತೆ ಆ ಮಾನಿನಿಯ ಪಿತನಾದ ಭೂಪತಿಯು ಬಿತ್ತರಿಸಿ ಏನನ್ನು ಕಳುಹಿಸಿ ಇದ್ದಾರಯ್ಯಾ ದೊರೆಯೆ ಲೋಕದೊಳು ಸಿರಿಯೆ-

ದರುವು

ಪಚ್ಚೇಯ ಪಲ್ಲಕ್ಕಿ ಹೆಚ್ಚೀನಾ ಕುದುರೇಯ
ಹೊಸದೀಗ ಭೂಷಣವು ಮುಂತಾಗಿ ಇನ್ನು ॥

ಪ್ರಧಾನಿ : ಅಯ್ಯರಾಜ. ಶ್ರೇಷ್ಟತರವಾದ ಪಚ್ಚೆಗಳ ಮಯದ ಪಲ್ಲಕ್ಕಿಯು ವಸ್ತು ವಾಹನವು ಮುಂತಾಗಿ ಛತ್ರಿ ಚಾಮರವು ಕಪ್ಪ ಕಾಣಿಕೆಯು ಕಳುಹಿಸಿದಾರಯ್ಯ ದೊರೆಯೆ ಲೋಕದೊಳ್ ಸಿರಿಯೆ-

ದರುವು

ದಯಮಾಡಬೇಕಯ್ಯ ಹಳೆಯಬೀಡಿಗೆ ನೀವು
ವಡೆಯಾ ಬಳ್ಳಾಪುರಿ ವಾಸ ಸಲಹುವನು ॥

ಪ್ರಧಾನಿ : ಅಯ್ಯ ರಾಜಧರ‌್ಮಗುಣಾಂಬುಧಿ ಪರಿಶೀಲನಾದ ಬಲ್ಲಾಳರಾಯನು ನಿಮ್ಮ ಶೌರ‌್ಯಪ್ರತಾಪಗಳಿಗೆ ವೀರನೆಂದು ತಿಳಿದು ನಮ್ಮನ್ನು ಕಳುಹಿಸಿ ಇದ್ದರಾದ ಕಾರಣ ನೀವು ಪೊಡವಿಯನ್ನು ಪರಿಪಾಲಿಸುವ ಉರುಗ ಭೂಷಣನ ಸಖ ನರಮೃಗೇಶನನ್ನು ನಿಮ್ಮ ಚಿತ್ತದೋಳ್ ಧ್ಯಾನಿಸುತ್ತಾ ಅತಿ ಜಾಗ್ರತೆಯಿಂದ ದಯಮಾಡಬೇಕಯ್ಯ ಭೂಪ ಶೌರ‌್ಯ ಪ್ರತಾಪ-

ಕರಿರಾಜ : ಅಯ್ಯ ಆಸ್ಥಾನಾಧಿಪತಿಗಳಿರಾ, ಯನ್ನ ಮಸ್ತಕದ ರೂಪುರೇಖೆ ಸೌಂದರ್ಯಗಳ ಬರೆದ ಚಿತ್ರ ಪಟವನ್ನು ನೋಡಿ ಆಸ್ತಿ ಹಯ ವಸ್ತು ವಾಹನಗಳು ಕಳುಹಿಸಿದರು ಆದರೆ ಆ ಧರಣೇಶನ ಸುತೆಯಾದ ಧರಣಿ ಮೋಹಿನಿಯ ಪರಮ ವೈಭವದ ಚಿತ್ರ ಪಟವನ್ನು ನಾನು ನೋಡಿ ಸಂತೋಷಪಟ್ಟರೆ ತ್ವರಿತದಿಂದಲಿ ಬರುತ್ತೇನಾದ ಕಾರಣ ನಿಮ್ಮ ಧರಣಿ ಮೋಹಿನಿಯ ಚಿತ್ರ ಪಟವನ್ನು ಎನಗೆ ತೋರಿಸಬೇಕಯ್ಯ ನೃಪೋತ್ತಮರೇ-

ದರುವು

ರಾಜ ಕೇಳಯ್ಯ ಚಿತ್ರಪಟವ ನೋಡಯ್ಯ ರಾಜ
ಧಾರುಣಿಯೊಳು ಧರುಣಿಮೋಹಿನಿ ಮಾರನ ಸತಿಯ
ರತಿಯಳಂತೆ ನಾರಿ ಇರುವಳಯ್ಯ ಭೂಪ ಮಾರ
ಸುಂದರಾ ಧುರಧೀರ ಚಂದಿರಾ ॥

ಪ್ರಧಾನಿ : ದುರಧೀರ ಹಮ್ಮೀರ ರಣಶೂರನಾದ ಹೇ ದೊರೆಯೆ ಗಿರಿಜೆವಲ್ಲಭನ ಶಿರದೋಳ್ ಕುಮುದವಾಗಿರುವ ಶಶಿಸುತೆಯಂತೆ ತೋರುತ್ತಿರುವ ಧರಣಿ ಮೋಹಿನಿಯ ಪರಮವೈಭವದ ಚಿತ್ರಪಟವನ್ನು ತೋರಿಸಿ ನಿಮಗೆ ಒಪ್ಪಿಸಿ ಇದ್ದೇನೆ ತ್ವರಿತದಿಂದಲಿ ಚಿತ್ತಯಿಸಬೇಕಯ್ಯ ದೊರೆಯೇ ಕೇಳೆನ್ನ ಸಿರಿಯೆ-

ದರುವು

ಪೊಡವಿಯೊಳಗೆ ಬಳ್ಳಾಪುರದಾ ಮೃಡನು
ನಿಮ್ಮ ಪೋಷಿಸುವನು. ನಡಿರಿ ನಡಿರಿ
ಹಳೆಯಬೀಡಿಗೆ ಮಡದಿ ನೋಡಲು
ಪರಿಣಯವು ಆಗಲು ॥

ಪ್ರಧಾನಿ : ಅಯ್ಯರಾಜ. ಈ ಕ್ಷಿತಿಯನ್ನು ಪರಿಪಾಲಿಸುವ ಲಕ್ಷ್ಮೀರಮಣನ ಸಖ ಪಾಲಾಕ್ಷ ನಿಮಗೆ ಅಕ್ಷಯವಾಗಲೆಂದು ಸುಕ್ಷೇಮವ ಕುರಿತು ಆಶೀರ್ವದಿಸಿ ಇರುವನು. ತಕ್ಷಣ ಹಳೆಯಬೀಡಿಗೆ ದಯಮಾಡಿಸಿ ಧರಣಿ ಮೋಹಿನಿಯೆಂಬ ಕಾಮಿನಿಯನ್ನು ವೀಕ್ಷಿಸಿ ಪರಿಣಯವು ಆಗಲು ದಯಮಾಡಬೇಕಯ್ಯ ರಾಜಾ ಅರ್ಕಸಮತೇಜಾ-

ಕವಿರಾಜ : ಅಯ್ಯ ನೃಪರೆ. ತಾವು ಕೊಟ್ಟ ಚಿತ್ರಪಟವನ್ನು ನೋಡಲು ಮತ್ತಗಜಗಾಮಿನಿಯು ಕಸ್ತೂರಿಯ ಮೃಗ ಪುತ್ಥಳಿಯ ಬೊಂಬೆಯಂತೆ ಎಸೆಯುವಳು ಮತ್ತೆ ಆ ಮಾನಿನಿಯನ್ನು ಪರಿಣಯವು ಆಗಲು ನಾಳೆ ಶತಪತ್ರ ಮಿತ್ರನು ಉದಯವಾಗುತ್ತಲೇ ಹಳೆಯಬೀಡಿಗೆ ಹೊರಟುಬರುತ್ತಾ ಇದ್ದೇನೆ ನೀವು ಹೋಗಬಹುದಯ್ಯ ಆಸ್ಥಾನಾಧಿಪತಿಗಳಿರ-

ದೊರೆ : ಅಯ್ಯ ಸುಗುಣ ಸುಬುದ್ಧಿಯುಳ್ಳ ಮಂತ್ರಿಯೆ ಕೇಳು. ಈ ಧರುಣಿಯೋಳ್ ಹಳೆಯಬೀಡಿನ ದೊರೆಯಸುತೆ ಧರಣೀ ಮೋಹಿನಿಯೆಂಬ ತರುಣಿಯನ್ನು ಎನಗೆ ಕೊಟ್ಟು ಪರಿಣಯವು ಮಾಡುವೆನೆಂದು ಪರಮಹರುಷದೊಳ್ ಆಕೆಯ ರೂಪುಲಾವಣ್ಯ ಚಿತ್ರ ಪಟವನ್ನು ಕೊಟ್ಟು ಕಳುಹಿಸಿದ್ದಾರೆ. ಆದ ಕಾರಣ ನಾನು ಹೋಗುವುದು ಉಚಿತವಲ್ಲವೇನಯ್ಯ ಮಂತ್ರಿ ಎನ್ನ ಕಾರ್ಯಕ್ಕೆ ನೀನೇ ಸ್ವತಂತ್ರಿ.

ಮಂತ್ರಿ : ಅಯ್ಯ ರಾಜ. ತಾವು ಹಳೆಯಬೀಡಿಗೆ ಪರಿಣಯಕ್ಕಾಗಿ ಪೋಗುವುದು ಉಚಿತವೇ ಸರಿ. ಆದರೆ ಈ ಧರುಣಿಯೋಳ್ ಉತ್ತಮರಾದವರು ದಾವ ಕಾರ‌್ಯಕ್ಕೆ ಹೋಗಬೇಕಾದರೂ ತಮ್ಮಯ ಮಾತಾ ಪಿತೃಗಳಿಂದ  ಆಶೀರ್ವಾದವನ್ನು ಪಡೆದು ಹೋಗಬೇಕಾದ ನೀತಿ ಇರುವುದರಿಂದ ತಮ್ಮ ಮಾತೆಯಾದ ಬನವಂತಾದೇವಿಯವರ ಅಪ್ಪಣೆ ಪ್ರಕಾರ ದಯಮಾಡಿಸಬಹುದಯ್ಯ ರಾಜ.

ದೊರೆ : ಅಯ್ಯ ಸುಗುಣ ಸುಬುದ್ಧಿಯಾದ ಪ್ರಧಾನೋತ್ತಮನೇ ಕೇಳು. ನೀನು ಪೇಳಿದ ವಾಕ್ಯವು ಸತ್ಯವಾದದ್ದೇ ಸರಿ. ನಮ್ಮ ಮಾತೆಯವರಾದ ಬನವಂತಾದೇವಿಯವರನ್ನು ಅತಿ ಜಾಗ್ರತೆಯಿಂದ ಕರೆಸುವಂಥವನಾಗೋ ಪ್ರಧಾನಿ ಭಾರ್ಗವ ಸಮಾನಿ-

ಮಂತ್ರಿ : ಅದೇ ಪ್ರಕಾರವಾಗಿ ಕರೆಸುತ್ತೇನಯ್ಯ ರಾಜಾ ಮಾರ್ತಾಂಡ ತೇಜಾ.

 

ಬನವಂತಾದೇವಿಯ ದ್ವಿಪದೆ

ರಾಗ ಕಾಂಭೋದಿ

ಶ್ರೀ ಪುಂಡರೀಕಾಕ್ಷ ಅವನಿಸುರಕಕ್ಷ-ಶಬರಿರಕ್ಷಕನಾದ
ಶ್ರೀ ಹರಿಯ ಪಾದವನು ಚಿತ್ತದೋಳ್ ಧ್ಯಾನಿಸುತ ವನಿತೆ
ಬೇಗದಲಿ ಅರುಣೋದಯದೊಳೆದ್ದು ಅತಿಹರುಷದಿಂದ
ಮುಖಮಜ್ಜನವಮಾಡಿ ಮುದದಿಂದ ತಾನು
ಕಸ್ತೂರಿ ತಿಲಕವನು ಕಾಂತೆ ತಾನಿಟ್ಟು ಬಂಗಾರಮಯವಾದ
ಸೀರೆಯನುಟ್ಟು ಚಂದ್ರಗಾವಿಯ ಕುಪ್ಪಸ ಚಲ್ವೆ ತಾ ತೊಟ್ಟು
ಚದುರೆ ಬೇಗದಲಿ ಕನಕಮಣಿಮಯವಾದ ಆಭರಣವಿಟ್ಟು ಕಡು ಹರುಷದಿಂದ
ಕಂಕಣ ಉರುಳಿ ಗೆಜ್ಜೆ ಕಾಲಲ್ಲಿ ಕಿರುಪಿಲ್ಲಿ ವೀರ ಮುದ್ರಿಕೆಯನ್ನು
ವಿನಯದಿಂ ಧರಿಸಿ ಕರ್ಪೂರತಾಂಬೂಲ ಕಾಮಿನಿಯು ಸವಿದು
ಭಳಿರೆ ಭಳಿರೆ ಭಳಿರೆಂದು ಬನವಂತಾದೇವಿ
ಧರೆಯೊಳಗೆ ಬಳ್ಳಾಪುರಿಯ ನೆನೆಯುತ್ತ
ಬಂದು ತೆರೆಯೊಳಗೆ ನಿಂದಳು ಇಂದುಮುಖಿ

 

ತೆರೆಬಿಡಿಸುವ ದರುವು

ರಾಗಆದಿತಾಳ

ಪಾರ‌್ವಾತಿ ಪ್ರಾಣನಾಥ ಪಾಲಿಸಯ್ಯ
ಶಂಕರನೇ ॥

ಪೊಸಳೆ ಮಾರ್ತಾಂಡಗೊಲಿದು
ಪಾಲಿಸಿದೆ-ಪಾಲನೇತ್ರಾ॥

ಬನವಂತಾದೇವಿ : ಅಯ್ಯ ಸೇವಕ ಎಮ್ಮ ಸಮ್ಮುಖದಲ್ಲಿ ಬಂದು ನಿಂದು ಎಮ್ಮನ್ನು ಧಾರೆಂದು ಕೇಳುವಂಥವನಾಗುತ್ತಾ ಇದ್ದಿ. ಆದರೆ ಎಮ್ಮಯ ವಿದ್ಯಮಾನವನ್ನು ವಿಸ್ತಾರವಾಗಿ ಪೇಳುತ್ತೇನೆ ಚಿತ್ತವಿಟ್ಟು ಕೇಳಯ್ಯ ಸೇವಕ ಭಕ್ತಿಯೊಳ್ ಭಾವುಕ. ಅಯ್ಯ ಸಾರಥಿ. ಪರಮವೈಭವದಿಂದ ಈ ಮೇಧಿನಿಯನ್ನು ಪಾಲಿಸುವ ನೃಪ ಕುಲಶಿರೋಮಣಿಯಾದ ಮಾರಸಮರೂಪ ಧುರಧೀರ ಮಾರಭೂಪತಿಯ ಚಿತ್ತಕ್ಕೆ ಒಪ್ಪುವ ಕನ್ನೆಯರೊಳ್ ಶಿರೋರತ್ನವೆಂದೆಣಿಪ ಈ ವಸುಧೆಯೋಳ್ ಬನವಂತಾದೇವಿ ಎಂಬ ನಾಮಾಂಕಿತವು ನಿನ್ನ ಚಿತ್ತಕ್ಕೆ ಗೊತ್ತಿರುವುದೋ ಭೃತ್ಯ ಶ್ರೇಷ್ಠಮಾದಿತ್ಯ. ಅಯ್ಯ ಸಾರಥಿ ಈ ಸಭಾ ಮಧ್ಯ ರಂಗಸ್ಥಳಕ್ಕೆ ಬಂದ ಕಾರಣವೇನೆಂದರೆ ಎನ್ನ ಪುತ್ರ ಶಿರೋಮಣಿಯಾದ ಕರಿರಾಜನನ್ನು ನೋಡುವ ಉದ್ದಿಶ್ಯ ಬಂದು ಇದ್ದೇನೆ. ಸುಂದರನಾದ ಕಂದನೆಲ್ಲಿ ಇದ್ದಾನೋ ತೋರಿಸಪ್ಪಾ ಸಾರಥಿ ಸದ್ಗುಣಪಾರಾವಾರುತಿ-

ಕರಿರಾಜ : ನಮೋನ್ನಮೋ ಹೇ ಜನನೀ ಭವಭಯಹಾರಿಣಿ-

ಬನವಂತಾದೇವಿ : ದೀರ್ಘಾಯುಷ್ಯ ಶುಭಮಸ್ತು ಬಾರಪ್ಪ ಪುತ್ರ ಸುಂದರಗಾತ್ರ-

ದರುವು

ಬಂದೀಯೋ ಬಾಲ ಕಂದ ಬಂದ ಕಾರಣವೇನಯ್ಯ
ಕರಿರಾಯ ಬಾರೋ ಕಂದ ಬಂದ ಕಾರಣವೇನಯ್ಯ ॥

ಬನವಂತಾದೇವಿ : ಕುಸುಮಶರಸಮರೂಪನಾದ ಹೇ ಕಂದ ಈವೊತ್ತಿನ ದಿನ ಏನು ಕಾರಣ ಬಂದು ಇದ್ದೀಯೋ ಪೇಳಬಹುದಪ್ಪಾ ಕಂದಾ ನೀ ಬಹು ಚಂದಾ-

ದರುವು

ಸೋಮ ಸುಮಶರ ಇಂತಾ ಸೊಬಗಿನೊಳು
ಭೋಗದೊಳು ಶೂರನಂತೆ ಸುಖದಿ ಬಾಳಯ್ಯ ॥

ಬನವಂತಾದೇವಿ : ಕುಲ ಶಿರೋಮಣಿಯಾದ ಹೇ ಕೂಸೆ. ಈ ವಸುಧೆಯೊಳ್ ಚಂದ್ರ ಮನ್ಮಥರಂತೆ ಶಂಕರನ ಕರುಣದಿಂದಲಿ ಮೇಘ ವಾಹನನಂತೆ ಭೋಗದೊಳ್ ಮೇದಿನಿಯನ್ನು ಪಾಲಿಸಪ್ಪಾ ಬಾಲ ಭಾಗ್ಯ ಗುಣಶೀಲ.

ದರುವು

ತಂದೆ ಖಗಗಿರಿ ನರಹರಿ ಕರುಣದಲೀ
ಮಂದಿರದಲ್ಲಿ ಇಂದ್ರನಂತೆ ಸುಖದಿ ಬಾಳಯ್ಯ ॥

ಬನವಂತಾದೇವಿ : ಹರಿಕರಿ ಸಿಂಹರೂಪನಾದ ಹೇ ಕಂದಾ ಈ ಧಾತ್ರಿಯೋಳ್ ಹಿರಿಯ ಬಳ್ಳಾಪುರಿಯ ಲಕ್ಷ್ಮೀರಮಣನನ್ನು ನಿನ್ನ ಚಿತ್ತದಲ್ಲಿ ಧ್ಯಾನಿಸುತ್ತಾ ಅತಿ ಜಾಗ್ರತೆಯಿಂದ ನೀ ಬಂದ ವರ್ತಮಾನವನ್ನು ಎನ್ನೊಡನೆ ಪೇಳುವಂಥವನಾಗಪ್ಪ ಕೂಸೇ ಲಾಲಿಸಿ ಕೇಳೆನ್ನ ಭಾಷೆ-

ದರುವು

ಬೇಡಿಕೊಂಬೆನೆ ಮಾತೆ ಈ ಕ್ಷಣ
ಬೇಗ ಅಪ್ಪಣೆ ಕೊಟ್ಟು ತಕ್ಷಣ॥
ತಡೆಯದೇನೆ ಹಳೆಯ ಬೀಡಿಗೆ
ಪೋಗಿ ಮಡದಿ ತರುವೆ ಮಾತೆ ಬೇಡುವೆ ॥

ಕರಿರಾಜ : ಪತಿವ್ರತಾಶಿರೋಮಣಿಯಾದ ಹೇ ತಾಯೆ. ಪೊಡವಿಪತಿ ಬಲ್ಲಾಳರಾಯನು ಎನ್ನಯ ಘನ ಸೌಂದರ‌್ಯ ಪರಾಕ್ರಮವನ್ನು ಕೇಳಿ ಘನ ಸಂಭ್ರಮದಿಂದಲಿ ತನ್ನ ಮಗಳಾದ ಧರಣಿ ಮೋಹಿನಿಯೆಂಬ ಕಾಮಿನಿಯನ್ನು ಎನಗೆ ಕೊಡುತ್ತೇನೆಂದು ತನ್ನ ಮಂತ್ರಿಯನ್ನು ಕಳುಹಿಸಿದ್ದಾನಾದ್ದರಿಂದ ಪೋಗಿ ಬರುತ್ತೇನೆ. ಅತಿ ಜಾಗ್ರತೆಯಿಂದ ಪರಮಸಂತೋಷದೊಳ್ ಎನಗೆ ಆಶೀರ್ವದಿಸಿ ಅಪ್ಪಣೆಯನ್ನು ಕೊಟ್ಟು ಕಳುಹಿಸಬೇಕಮ್ಮ ಮಾತೆ ಸದ್ಗುಣವಿನೀತೆ-

ದರುವು

ಕನಕಪಲ್ಲಕ್ಕಿ ಜಾತಿಹಯವು ಕನಕಭೂಷಣ
ಮುತ್ತು ಪವಳ ಕಳುಹಿಸಿದನು ಕರುಣದಿಂದ
ತಡವು ಮಾಡದೆ ಕಳುಹಿಸಮ್ಮ ಬೇಡುವೆ ॥

ಕರಿರಾಜ : ಅಮ್ಮಾ ತಾಯಿ. ಬಂಗಾರಪಲ್ಲಕ್ಕಿಯು ಧವಳ ತುರಂಗವು ಶೃಂಗಾರದ ಭೂಷಣವು ಮುಂತಾಗಿ ಕಳುಹಿಸಿದರಾದ ಕಾರಣ ಅತಿ ಜಾಗ್ರತೆಯಿಂದ ಅಪ್ಪಣೆಯನ್ನು ಕೊಟ್ಟು ಕಳುಹಿಸಮ್ಮಾ ಮಾತೆ ಲೋಕವಿಖ್ಯಾತೆ-

ದರುವು

ಮಂಗಳಾಂಗ ಬಳ್ಳಾಪುರಿ ನರಸಿಂಗನನ್ನು ಧ್ಯಾನಿಸುತ್ತ
ಮಂಗಳಾಕಾರನಾಗಿ ಬಂದು ಶೃಂಗರಿಸೆನ್ನ ಕಳುಹಿಸಮ್ಮ ॥