ಕರಿರಾಜ : ಹೇ ನಾರಿ ಈ ಸೃಷ್ಠಿಯೊಳ್ ದುಷ್ಠ ನಿಗ್ರಹವನ್ನು ಮಾಡಿ ದೃಷ್ಠಿ ಮೂರುಳ್ಳ ಶಂಕರನ ಮತಸ್ಥರು ನಾವಾಗಿ ದುಷ್ಠ ರಕ್ಕಸರಲ್ಲಿ ಸ್ನೇಹವನ್ನು ಬೆಳೆಸಿದರೆ ಈ ದಿಕ್ಕುಗಳೊಳಗೆ ಸಿಕ್ಕಿದ ಹಾಗೆ ಮಾತುಗಳು ಧಿಕ್ಕರಿಸಿ ಆಡುವರಾದ ಕಾರಣ ನಿನ್ನನ್ನು ನಾನು ಎಷ್ಟು ಮಾತ್ರಕ್ಕೂ ಕೂಡುವದಿಲ್ಲವೇ ನಾರಿ-

ದರುವು

ತಡೆಯಲಾರೆ ತನುವ ತಾಪ ಬಿಡದೆ ಎನ್ನ ಕೈಯಪಿಡಿದು
ಪೊಡವಿಪತಿಯೆ ಕೂಡೊಬೇಗ ಸಡಗರದಿ ಬೇಡಿಕೊಂಬೆ ॥

ಪುಂಡರೀಕಾಕ್ಷಿ : ಅಯ್ಯ ರಾಜಾ ಕಂದರ್ಪನಟ್ಟುಳಿಯಶರಕ್ಕಾಗಿ ನಿನ್ನ ಚರಣ ಕಮಲವನ್ನು ಹಿಡಿದು ಬೇಡುವ ಕಾಮಿನಿಯಾದ ಎನ್ನ ಕೈಯ ಪಿಡಿದು ಕಾಮಕೇಳಿಯೊಳೆನ್ನ ಕೂಡಬೇಕಯ್ಯ ರಮಣ ಅತಿಗುಣಾಭರಣ-

ದರುವು

ಬಲ್ಲೆ ಬಲ್ಲೆ ನಿನ್ನ ಬೆಲ್ಲದ ಮಾತು ನಾನೊಲ್ಲೆ ನಡಿಯೆ
ನಲ್ಲೆ ಮನಸಿಲ್ಲೆ
ಪುಲ್ಲಶರನ ಸುಟ್ಟ ಬಳ್ಳಾಪುರ ಮೃಡಹರನ
ಭಜಿಸುವೆನೆ॥

ಕರಿರಾಜ : ಹೇ ನಾರಿ. ನಿನ್ನ ಖುಲ್ಲುರಕ್ಕಸರಲ್ಲಿ ಕುಠಿಲ ಕಪಟಗಳಿಂದ ಗುಲ್ಲು ಮಾಡದೆ ಮನುಜರನ್ನು ಕೊಲ್ಲುವ ರಾಜಕಾರಣ ಬಲ್ಲೆ. ಹಿಂದಕ್ಕೆ ಶೂರ್ಪನಖಿ ಎಂಬ ರಕ್ಕಸಿಯು ಸಲ್ಲಲಿತ ಸೌಂದರ‌್ಯ ಗುಣಸಂಪನ್ನೆಯ ಆಕಾರದಲ್ಲಿ ಬಂದು ಜಾನಕೀವಲ್ಲಭನನ್ನು ರತಿಗೆ ಬಾರೆಂದು ಬಾಧಿಸಲು ರಾಮನನುಜನಾದ ಸೌಮಿತ್ರಿಯ ಕೈಯಲ್ಲಿ ರಮಣಿ ತಾ ಭಂಗಪಟ್ಟದ್ದು ನೀ ಕೇಳಿಲ್ಲವೇ ನಾರಿ ಮದನ ಕಠಾರಿ-

ದರುವು

ಅಗಲಿ ಪೋಗುವರೇನೊ ಜಾಣಾ ಬೇಡುವೆನೊ ಸುಗುಣ ॥
ಕಾಮಕೊದಗಿಬಂದ ಸತಿಯ ಕಾಮಿಸದೆ ಜರಿವರಲ್ಲಾ
ಸೋಮ ಹಿಂದೆ ತಾರೆಯೊಡನೆ ಕಾಮಿಸಿದ ಕತೆಯನರಿಯ॥

ಪುಂಡರೀಕಾಕ್ಷಿ : ಅಯ್ಯ ರಾಜಾ. ಈ ಲೋಕದೊಳು ರಕ್ಕಸಕಾಮಿ ಎಂದು ಅಕ್ಕರವಿಲ್ಲದೆ ಮನಸ್ಸಿನಲ್ಲಿ ಧಿಕ್ಕರಿಸಿ ಜರಿದು ಪೋಗುವುದು ಉಚಿತವಲ್ಲಾ ಸೊಕ್ಕು ಜವ್ವನೆಯಾದ ಬೃಹಸ್ಪತಿ ಭಾಮಿನಿಯು ಕಾಮಕಕ್ಕಳಿತಳಾಗಿ ಹಿಮಕರನನ್ನು ಮೋಹಿಸಲು ಅಕ್ಕರದಿಂದ ಕೂಡಿದನಾದ ಕಾರಣ ಎನ್ನನ್ನು ರಕ್ಕಸ ಕಾಮಿನಿ ಎಂದು ನೀನೆಣಿಸದೆ ಅಕ್ಕರದಿಂದ ಕೂಡಬೇಕೈ ರಮಣ-

ದರುವು

ಮಾರನಾಸ್ತ್ರಗಳಿಗೆ ಪ್ರಾಯಾ ಸೂರೆ ಹೋಯಿತು
ಸುಗುಣ ಸುಖಿಸೋ ಧೀರ ನಿಮಿಷಮಾತ್ರ ಎನ್ನ
ಸೇರಿ ರತಿಯ ಸೊಗಸು ತೋರದೆ ॥

ಪುಂಡರೀಕಾಕ್ಷಿ : ಅಯ್ಯ ರಾಜಾ. ಕುಸುಮಶರನಾದ ಮನ್ಮಥನ ಶರಕ್ಕೆ ಎನ್ನ ಪ್ರಾಯ ಕುಸಿದು ಹೋಗುವುದಾದ ಕಾರಣ ನಿಮ್ಮ ಕುಸುಮ ಕೋಮಲವಾದ ಬಾಹುಭುಜಬಲದಿಂದ ತಬ್ಬಿ ತಕ್ಕಯಿಸಿ ಸುಖಿಸೈ ರಾಜ ಮಾರ್ತಾಂಡತೇಜಾ-

ದರುವು

ಚಿಂತೆ ಯಾತಕೆ ಬಳ್ಳಾಪುರದ ಕಂತುಪಿತನ
ಕರುಣದಿಂದ ದಂತಿಗಮನೆ ಜಾಂಬವತಿಯ
ಸ್ವಂತನಾದ ಮದುವೆಯಾದ ॥

ಪುಂಡರೀಕಾಕ್ಷಿ : ಹೇ ರಾಜ ದನುಜ ಕನ್ನೆಯರೊಡನೆ ಸಂಭಾಷಿಸುವುದಿಲ್ಲವೆಂದು ಪೇಳುತ್ತಾ ಇದ್ದಿ. ಆದರೆ ಹಿಂದಕೆ ಕ್ಷೀರಾಬ್ಧಿಶಯನನಾದ ಶ್ರೀಕೃಷ್ಣನು ಕರಡಿಯ ಮಗಳಾದ ಜಾಂಬವತಿಯನ್ನು ಮದುವೆಯನ್ನಾಗಿ ಸುಖಿಸಲಿಲ್ಲವೇನಯ್ಯ ರಾಜಾ ಹಿಮಕರತೇಜಾ-

ದರುವು

ಕೂಡು ಕೂಡು ಎಂದು ಕಾಡುವುದ್ಯಾತಕೆ
ಕುಲವು ಕೆಡುವುದಲ್ಲೆ ನಾ ಬಲ್ಲೆ ॥

ಕರಿರಾಜ : ಹೇ ನಾರಿ ನಾನು ಪರಿ ಪರಿ ವಿಧದಿಂದ ಪೇಳಿದಾಗ್ಯೂ ನೀನು ಕೇಳದೆ ಬಗೆ ಬಗೆಯಿಂದ ನನ್ನನ್ನು ಕೂಡೆಂದು ಬಂಧಿಸುತ್ತಾ ಇದ್ದೀಯ. ಆದರೆ ಈ ಧಾತ್ರಿಯೋಳ್ ದುಷ್ಠ ದುರ್ಜನರಾದ ದಾನವರಿಗೂ ಮಾನವರಿಗೂ ಸಾಂಗತ್ಯ ಹೊಂದುವುದು ದುರ್ಲಭವಾಗಿ ಕಾಣುವುದಾದ ಕಾರಣ ಈ ವೇಳೆಯಲ್ಲಿ ನಿನ್ನನ್ನು ಕೂಡಿದ್ದೇ ಆದರೆ ಎನ್ನ ವ್ರತ ನೇಮಾದಿಗಳು ಕೆಟ್ಟು ಹೋಗುವುದಾದ ಕಾರಣ ನಿನ್ನನ್ನು ನಾನು ಎಷ್ಟು ಮಾತ್ರಕ್ಕೂ ಕೂಡುವುದಿಲ್ಲವೇ ನಾರಿ ನವರಸ ಪೋರಿ-

ದರುವು

ಮಂಡಾಲಪತಿ ಕೇಳೋ ಹಿಂದೆ ಹಿಡಂಬೀಯ
ಕೂಡಲಿಲ್ಲವೆ ಭೀಮ ನಿಸ್ಸೀಮಾ ॥

ಪುಂಡರೀಕಾಕ್ಷಿ : ಹೇ ರಾಜಾ ಈ ಲೋಕದೊಳು ಕುಸುಮಗಂಧಿಯರಾದ ಸ್ತ್ರೀಯರು ಕುಸುಮಶರನಾದ ಮನ್ಮಥನ ಕೇಳಿಯೊಳು ಕೂಡಬೇಕೆಂದು ಚೆಲುವರಾದ ಪುರುಷರನ್ನು ಕರೆದರೆ ಕುಶಲತನದಿಂದ ಕೂಡಿ ಸುಖಿಸುವರಲ್ಲದೆ ಕುಲಗೋತ್ರಗಳು ಕೇಳಿಬಿಟ್ಟವರು ಯಾರೂ ಇಲ್ಲಾ. ಇದೂ ಅಲ್ಲದೆ ಹಿಂದಕ್ಕೆ ಕುಂತೀ ಕುಮಾರನಾದ ಭೀಮನು ದನುಜಕಾಮಿನಿಯಾದ ಹಿಡಂಬಿಯೆಂಬ ರಕ್ಕಸಿಯನ್ನು ಕೂಡಿ ತನುಜಾತನನ್ನು ಪಡೆಯಲಿಲ್ಲವೇನೈ ರಾಜಾ ಮಾರ್ತಾಂಡತೇಜಾ-

ದರುವು

ಹಿತವಲ್ಲ ದನುಜಾಧಿಪತಿಯ ಮಗಳ ಕೂಡಿ
ಕಾಮಸುತನು ಕಷ್ಟಪಟ್ಟ ತಾ ಕೆಟ್ಟ

ಶ್ಲೋಕ

ಶರ್ಕರಾ ಮಧುರಾಯುಕ್ತಂ
ನಿಂಭ ಬೀಜ ಪ್ರತಿಷ್ಠಿತಃ
ಕ್ಷೀರ ಕುಂಭ ಸಹಸ್ರಾಣಿ
ನಿಂಬಕಂ ಮಧುರಾಯತೆ॥

ಅಂದ ಹಾಗೆ ಹೇ ನಾರಿ ಸಕ್ಕರೆಯು ಜೇನುತುಪ್ಪದಲ್ಲಿ ಬೇವಿನ ಬೀಜವನ್ನಿಟ್ಟು ಅದರ ಮೇಲೆ ಸಹಸ್ರ ಕುಂಭ ಕ್ಷೀರವನ್ನೆರೆದರೆ ಬೇವಿನ ವೃಕ್ಷದ ವಿಷವು ಎಷ್ಟು ಮಾತ್ರಕ್ಕೂ ಹೋಗುವುದಿಲ್ಲವಾದ ಕಾರಣ ಇದೂ ಅಲ್ಲದೆ ಹಿಂದಕ್ಕೆ ಬಾಣಾಸುರನ ಮಗಳಾದ ಪುಷ್ಪಾದೇವಿಯು ಪುಷ್ಪಬಾಣನ ಮಗನಾದ ಅನಿರುದ್ಧನನ್ನು ಕೂಡಲು ಆ ರಕ್ಕಸರ ಬಲೆಯಲ್ಲಿ ಸಿಕ್ಕಿ ಕಷ್ಟ್ಠಪಟ್ಟನಾದ ಕಾರಣ ಎಷ್ಟು ಮಾತ್ರಕ್ಕೂ ನಿನ್ನನ್ನು ಕೂಡುವುದಿಲ್ಲವೆ ನಾರಿ ನವರಸಪೋರಿ-

ದರುವು

ನಘವೈರಿಸುತ ಹಿಂದೆ-ನಾಗಕನ್ನೆಯರನ್ನು
ಆಗಲಿಲ್ಲವೆ ಮದುವೆ-ನಾ ಬೇಡುವೆ॥

ಪುಂಡರೀಕಾಕ್ಷಿ : ಹೇ ರಾಜಾ. ಹಿಂದಕ್ಕೆ ವರಪರಾಶರಾದಿ ಮುನಿಯು ವನಿತೆ ಮತ್ಸ್ಯಗಂಧಿ ಎಂಬ ಕಾಮಿನಿಯನ್ನು ಕೂಡಿ ಸುಖಿಸಿದ ಮತ್ತು ಶ್ವೇತವಾಹನನಾದ ಅರ್ಜುನನು ಉರಗ ಕನ್ಯೆಯರಾದ ಉಲೂಪಿ ಚಿತ್ರಾಂಗದೆಯರನ್ನು ಕೂಡಿ ಮದುವೆಯಾಗಿ ಬಭ್ರುವಾಹನನೆಂಬ ಸುತನನ್ನು ಪಡೆದನಾದ ಕಾರಣ ಈಗ ಎನ್ನ ದನುಜ ಕಾಮಿನಿ ಎಂದು ಜರಿದು ಪೋಗುವುದು ಹಿತವೇನೋ ನಲ್ಲಾ ನಿನಗಿದು ಸಲ್ಲಾ-

ದರುವು

ಬಲ್ಲೇ ದನುಜಾರ ಕಪಟ ಬಳ್ಳಾಪುರದ-ಲಕ್ಷ್ಮೀ
ವಲ್ಲಭನಿಗೆ ಶಕ್ಯವಲ್ಲಾ ಶಿವ ಬಲ್ಲಾ॥

ಕರಿರಾಜ : ಹೇ ನಾರಿ ಈ ಧಾತ್ರಿಯೋಳ್ ದುಷ್ಠದಾನವರಾದ ರಾಕ್ಷಸರು ಕಳವು ಕಪಟಗಳಿಂದ ಮರುಳುಮಾಡಿ ಮನುಜರನ್ನು ಕೊಲ್ಲುವರಾದ ಕಾರಣ ಹಿಂದಕ್ಕೆ ಖುಲ್ಲುರಕ್ಕಸಿ ಎಂಬ ಪೂತನಿಯು ಗೊಲ್ಲ ಯುವತಿಯ ಆಕಾರದಲ್ಲಿ ಬಂದು ರುಕ್ಮಿಣಿ ವಲ್ಲಭನಿಗೆ ಗರಳ ಸ್ತನ್ಯವನ್ನು ಕೊಡಲು ದಾನವಿಯ ಜವಸತ್ವರಕ್ತ ಮಾಂಸಾದಿಗಳನ್ನು ಈರ‌್ಚಿದನಾದ ಕಾರಣ ಆ ಕಪಟ ದಾನವಿಯು ದೇಹವನ್ನು ಬಿಟ್ಟಳು. ಆದ ಕಾರಣ ನಿಮ್ಮ ದನುಜರನ್ನು ಎಷ್ಟು ಮಾತ್ರಕ್ಕೂ ನಂಬಲಾರೆನೇ ನಾರಿ-

ದರುವು

ಕಾಮಕಂದರ್ಪ ಸಮರೂಪ ಕೇಳಯ್ಯ ನಲ್ಲಾ
ಕಾಮಕೇಳಿಯೊಳೆನ್ನಾ ಕೂಡೋ ದಮ್ಮಯ್ಯ

ಪುಂಡರೀಕಾಕ್ಷಿ : ಹೇ ರಾಜಾ ಮುತ್ತು ನೀರಲಿ ಮೃಗದೊಳಗೆ ಪೊಸ ಕತ್ತುರಿಯು ಕೆಸರಲ್ಲಿ ತಾವರೆಯು ಮೃತ್ತಿಕೆಗಳಿಂದ  ಕನಕ ಪುಟ್ಟಿ ಜನಕೆ ಶ್ರೇಷ್ಠವೆಂದೆನಿಸುವ ಕಾರಣ ನಾನು ರಾಕ್ಷಸರಲ್ಲಿ ಪುಟ್ಟಿದಾಗ್ಯೂ ಉತ್ತಮಸತಿ ದಾನವಿ ಎಂದೆಣಿಸದೆ ಕರುಣ ಕಟಾಕ್ಷವಿಟ್ಟು ಕಾಮಕೇಳಿಯೊಳೆನ್ನ ಸುಖಿಸೈ ಸುಗುಣ ಸುಮಶರಬಾಣಾ-

ದರುವು

ಕಾಡಬ್ಯಾಡವೆ ರಮಣಿ ಎನ್ನ ಕೂಡಲೊಲ್ಲೆನೆ ನಿನ್ನಾ
ರೂಢಿಯೊಳಗೆ ನಿನ್ನ ಕೂಡಲು ಕೇಡುತಪ್ಪದು ಕೇಳೆ ನಾರಿ
ಬ್ಯಾಡವೆ॥

ಕರಿರಾಜ : ಹೇ ನಾರಿ. ಮಕರಧ್ವಜನ ಪುಷ್ಪಮಾರ್ಗಣದಂತೆಸೆಯುವ ಸಖಿ ಶಿರೋಮಣಿಯೆ ಕೇಳು. ಕುಸುಮಶರನಾದ ಮನ್ಮಥನ ಕೇಳಿಯೊಳು ಕೂಡಬೇಕೆಂದು ಎನ್ನನ್ನು ಆತುರದಿಂದ ಕರೆಯುತ್ತಾ ಇದ್ದೀಯೆ. ಆದರೆ ಎನ್ನ ಮತನೀತಿಗಳು ಬಿಟ್ಟು ನಿನ್ನಲ್ಲಿ ನಾನು ರತಿಗೆಳೆಸಿದ್ದೇ ಆದರೆ ನಿಮ್ಮ ಮಾತೆಯು ಎನ್ನನ್ನು ಕಂಡರೆ ಕ್ರೋಧಿಸುವಳಾದ ಕಾರಣ ನಿನ್ನ ಎಷ್ಟು ಮಾತ್ರಕ್ಕೂ ಕೂಡುವುದಿಲ್ಲವೇ ನಾರಿ ಮದನ ಕಠಾರಿ-

ದರುವು

ಒದಗೀ ಬಂದವಳಾ ನೀ ಬೆದರಿಸುವಾರೆ ನಲ್ಲಾ
ಮಧುಹಣ್ಣು ಸವಿಯಾದೆ ಜರಿದು ಪೋಗುವರೇ॥

ಪುಂಡರೀಕಾಕ್ಷಿ : ಕ್ಷುದ್ಭಾದಕವಾದ ಸಮಯದಲ್ಲಿ ಕ್ಷೀರ, ಸಕ್ಕರೆ, ಮಧು, ಹಣ್ಣು ಮೊದಲಾದ ಫಲಗಳು ಸಿಕ್ಕಿದರೆ ಅಕ್ಕರದಿಂದ ಭಕ್ಷಿಸುವರಾದ ಕಾರಣ ಕಾಮಕಕ್ಕಳಿತಳಾಗಿ ಬಂದು ಸಿಕ್ಕಿದ ಕಾಮಿನಿಯನ್ನು ಕಾಮಿಸಬೇಕಲ್ಲದೆ ಜರಿದು ಪೋಗುವುದು ನಿಮ್ಮಂಥ ಯೌವ್ವನ ಪುರುಷರಿಗೆ ಯೋಗ್ಯವಲ್ಲವಯ್ಯ ರಮಣ ರತಿಗುಣಾಭರಣ-

ದರುವು

ಕಪಟಗಳ ತೌರುಮನೆಯು ಕಳ್ಳ ರಕ್ಕಸರೊಳಗೆ
ಚಪಲೆ ನಿನ್ನ ಕೃತುಮೆ ಬೇರೆ ನಟಿಸಬ್ಯಾಡ ನಡಿಯೆ
ನಲ್ಲೆ ॥

ಕರಿರಾಜ : ಹೇ ನಾರಿ. ಕುಟಿಲ ಕಪಟಗಳು ಮಟುಮಾಯ ತಟವಟಾದಿ ಕೃತುಮೆಗಳು ರಾಕ್ಷಸರಲ್ಲಿ ತೌರುಮನೆಗಳಾಗಿರುವ ಕಾರಣ ನಿನ್ನನ್ನು ಉತ್ತಮಸತಿ ಎಂದು ಚಿರಜ ತಾಪದಿ ಕೂಡಿದರೆ ನಿಮ್ಮ ದೈತ್ಯರಲ್ಲಿ ಮೃತ್ಯುವು ಎಷ್ಟು ಮಾತ್ರಕ್ಕೂ ತಪ್ಪುವುದಿಲ್ಲವಾದ ಕಾರಣ ನಿನ್ನನ್ನು ಕೂಡುವುದಿಲ್ಲವೇ ನಾರಿ ನವರಸ ಪೋರಿ-

ದರುವು

ಕುಂಭಿಣಿಯೊಳು ಬಳ್ಳಾಪುರವ ಪಾಲಿಸುವ ನಲ್ಲಾ
ಶಂಭುಶಂಕರನಾಣೆ ಬಿಡೆನೋ ಪ್ರಾಣೇಶ॥

ಪುಂಡರೀಕಾಕ್ಷಿ : ಹೇ ರಾಜಾ. ಈ ಲೋಕದೊಳಗೆ ಸರಸಿಜೋದ್ಭವನಾದ ಬ್ರಹ್ಮನು ಎನಗೆ ನೀನು ಪತಿಯಾಗಬೇಕೆಂದು  ನಿರ್ಮಿಸಿದನಾದ ಕಾರಣ ಈ ಸಮಯದಲ್ಲಿ ಎನಗೆ ವಂಚನೆಯನ್ನು ಮಾಡಿ ಪೋದರೆ ಪಂಚಮುಖನಾದ ಶಂಕರನು ಎಷ್ಟು ಮಾತ್ರಕ್ಕೂ ಮೆಚ್ಚನಯ್ಯ ರಾಜಾ ರವಿಸಮತೇಜಾ-

ದರುವು

ಪೃಥ್ವಿಯೊಳಗೆ ಬಳ್ಳಾಪುರದ ತ್ರಿಪುರಹರನೇ ಪಾಲಿಪ
ಹಿತದಿ ನಿನ್ನ ಕೂಡಿಕೊಂಡರೆ ಕಪಟ ದಾನವಿ ಬಿಡುವಳೆ ಬ್ಯಾಡಯ್ಯಾ॥

ಕರಿರಾಜ : ಹೇ ನಾರಿ. ಈ ಧಾತ್ರಿಯೊಳಗೆ ಉರಗಭೂಷಣನಾದ ಉಮಾವಲ್ಲಭನ ಕರುಣ ಕಟಾಕ್ಷವು ತಪ್ಪಿ ಈ ಅಡವಿಯೊಳು ನಾನು ಸಿಕ್ಕಿದೆ. ಆದ್ದರಿಂದ ನಿನ್ನನ್ನು ಕೂಡಬೇಕೆಂದು ಪರಿಪರಿ ವಿಧದಿಂದ ವೇಧಿಸುತ್ತಾ ಇದ್ದೀಯಾ. ನಿಮ್ಮ ದೈತ್ಯರಲ್ಲಿ ಬಂಧುತ್ವಗಳು ಭೂಪೋತ್ತಮರು ಮಾಡಿದ್ದೇ ಆದರೆ ಮೃತ್ಯುವು ತಪ್ಪಲಾರದೆಂದು ಉತ್ತಮರಾದವರು ಪೇಳುವರಾದ ಕಾರಣ ನಿಮ್ಮ ದನುಜರಲ್ಲಿ ಸ್ನೇಹ ಬೆಳೆಸುವುದಕ್ಕೆ ಭಯವಾಗಿ ಕಾಣುತ್ತಾ ಇದೆಯೇ ಕನ್ನೆ ದನುಜಕುಲ ಚನ್ನೆ-

ದರುವು

ಬಲ್ಲೆನೆಂಬುವರೇನೋ ಎಲೋ ರಾಜಾ ಸೈಸೈ
ಎಲೋ ಜಾಣಾ ಇಲ್ಲಾದಾಯಿತೆ ಕರುಣಾ ಕೇಳೋ ಜಾಣಾ॥
ದುರುಳೇಯ ಮಗಳೆಂದು ದೂರಿ ಪೋಗುವರೇನೋ
ಸುರನಾರಿಯರಿಗೆ ಎಮ್ಮಿಗಿಲಾಗಿ ಇರುವೆನು ನಾನು
ನೋಡೋ ದಯಮಾಡೋ॥

ಪುಂಡರೀಕಾಕ್ಷಿ : ಸುಗುಣ ಸುಬುದ್ಧಿಯುಳ್ಳ ಹೇ ರಾಜಾ ದುರುಳ ರಕ್ಕಸಿಯ ಮಗಳೆಂದು ಎನ್ನ ಅಕ್ಕರವಿಲ್ಲದೆ ಜರಿದು ಪೋಗುವುದು ಉಚಿತವಲ್ಲ ಮತ್ತು ಈ ಧಾತ್ರಿಯೊಳಗೆ ಸುರಸಿದ್ಧಸಾಧ್ಯರ ಸತಿಯರಿಗಿಮ್ಮಿಗಿಲಾಗಿ ಇದ್ದೇನಾದ ಕಾರಣ ನಿನ್ನ ಮಧುರತರವಾದ ಮೃದುನುಡಿಗಳಿಂದ ಎನ್ನ ಮಾತನಾಡಿಸಿ ಕೂಡಿ ಸುಖಿಸೈಯ್ಯ ಸುಗುಣ ಸುಮಶರಬಾಣ-

ದರುವು

ಇಂದೆ ಅಂಬಿಕದೇವಿ ಕರುಣಾದಿಂದಲಿ ಕಂಡೆ
ವಂದಿಸುವೆನು ಸುಂದರಾಂಗನೆ ವಂಚಿಸಿ ಪೋಪರೇನೊ
ನೀತಿಯೇನೊ ॥

ಪುಂಡರೀಕಾಕ್ಷಿ : ಅಯ್ಯ ರಾಜಾ. ಈ ಪೊಡವಿರಕ್ಷಕಿಯಾದ ಅಂಬಿಕಾದೇವಿಯನ್ನು ಭಕ್ತಿಭಾವಗಳಿಂದ ಪೂಜಿಸಿದ ಕಾರಣ ಆದಿಶಕ್ತಿಯು ನಿಮ್ಮನ್ನು ಆಧರಿಸಿದಳು. ಆದ್ದರಿಂದ ಈಗ ಭೇದವೆಣಿಸದೆ ಎನ್ನ ಬಿಗಿದಪ್ಪಿ ತರ್ಕಯಿಸಿ ಉಪರತಿಯ ಸಮರತಿಗಳಿಂದ ಸುಖಿಸಬೇಕಯ್ಯ ದೊರೆಯೆ ಲೋಕದ ಸಿರಿಯೆ-

ದರುವು

ಸುಂದರಾಂಗನೆ ಎನ್ನ ಮಂದಿರಕೆ ನೀ ಬಂದು
ಸುರತಾ ಕ್ರೀಡೆಯೊಳೆನ್ನ ಸುಖಿಸಲು ಸೇರುವೆನು
ನಿನ್ನೊಳು ಸುಖಾದೋಳು ॥

ಪುಂಡರೀಕಾಕ್ಷಿ : ಹೇ ರಾಜಾ. ಕಂದರ್ಪನಂತೆ ಎನ್ನ ಮಂದಿರಕ್ಕೆ ನೀ ಬಂದು ಎನ್ನ ಸುಂದರತರವಾದ ಮಣಿಮಂಚದ ಮೇಲೆ ಗಂಧ ಪರಿಮಳಪುಷ್ಪಮಯವಾದ ಹಾಸಿಗೆಯ ಮೇಲೆ ಅಂದ ಚಂದಗಳಿಂದ ಎನ್ನ ಆಲಂಗಿಸಬೇಕಯ್ಯ ಭೂಪ ಕೀರ್ತಿಕಲಾಪ-

ದರುವು

ಸುರತಾ ಸೌಖ್ಯದೊಳೆನ್ನ ಸುಖಿಸದಿದ್ದರೆ ಮುನ್ನ
ಇರಿಸಬಾರದು ಎನ್ನ ಪ್ರಾಣವು ಇದ್ದು ಫಲವೇನು
ಜಾಣಾ ಪ್ರವೀಣ॥

ಪುಂಡರೀಕಾಕ್ಷಿ : ಹೇ ಕಾಂತ, ಹೇ ರಮಣ. ಆತುರಕ್ಕಾಗಿ ಬಂದ ಕಾಮಿನಿಯನ್ನು ಕಾತುರದಿ ಸುಖಿಸುವರಲ್ಲದೆ ಚಾತುರ‌್ಯತರವಾದ ಮಾತುಗಳನ್ನಾಡಿ ಜರಿದು ಪೋದರೆ ಈ ಭೂತಲದ ಮೇಲೆ ಎನ್ನ ಪ್ರಾಣ ಇರಿಸುವುದು ನೀತಿಯಲ್ಲವೊ ಭೂಪ ಕೀರ್ತಿಕಲಾಪ-

ದರುವು

ಭೂಪಾಲಪತಿ ಎನ್ನ ಮಾತು ಲಾಲಿಸೊ-ಬಳ್ಳಾ
ಪುರದಾ ಸೋಮೇಶ ರಕ್ಷಿಪ ನಿನ್ನ ಯೋಚಿಸ
ಬ್ಯಾಡ ಎನ್ನಾ ಕೂಡೋ ಮುನ್ನ॥

ಪುಂಡರೀಕಾಕ್ಷಿ : ಅಯ್ಯೋ. ರಾಜಹರನ ಉರಿನೇತ್ರಗಳಿಂದ ಉರಿದ ಸ್ಮರನ ತಾಪಕ್ಕಾಗಿ ಬಂದ ಕಾಮಿನಿಯನ್ನು ಅರೆ ನಿಮಿಷವಾದರೂ ಸುಖಿಸಿದ್ದೇ ಆದರೆ ಸುಮಶರನುರಿಪಹರನು ನಿನ್ನನ್ನು ರಕ್ಷಿಸುವನಯ್ಯ ರಾಜಾ ಮಾರ್ತಾಂಡತೇಜಾ-

ಕರಿರಾಜ : ಹೇ ನಾರಿ. ಇಕ್ಷುಶರಮಾವ ನಕ್ಷತ್ರಗಳ ಪತಿ ದಕ್ಷನ ಅಳಿಯ ಅಕ್ಷಿಗಳ ಮಿತ್ರ ಚಂದ್ರಸುತೆ ರತಿದೇವಿಯಂತೆ ಪ್ರಕಾಶಿಸುವ ಹೇ ರಮಣಿ ಮನ್ನಣೆ ಮಮತೆಯಿಂದ ಕೂಡೆಂದು ಉನ್ನತವಾಗಿ ಪೇಳುತ್ತಿರುವೆ. ಕನ್ನೆಯೇ ನಿನ್ನನ್ನು ಕೂಡಲು ಎನ್ನಯ ಮನಸ್ಸಿಗೆ ಹಿಂಸೆಪಡುವ ಹಾಗೆ ಕಾಣುವುದೋ ಏನೋ ಹಂಸಗಾಮಿನಿಯಾದ ನಿನ್ನ ಅಹಿಂಸೆಯಿಂದ ಕೂಡಿದರೆ ಕಂಸಾರಿ ಮೆಚ್ಚನು. ಆದ ಕಾರಣ ನಿನ್ನನ್ನು ವರಿಸಲು ಎನ್ನನ್ನು ದುರುಳನೆನ್ನುವರು. ಸುಮ್ಮನೆ ತೆರಳುವಂಥವಳಾಗೆ ನಾರಿ ಮದನ ವಯ್ಯರಿ-

ಪುಂಡರೀಕಾಕ್ಷಿ : ಅಮ್ಮ ಸಖಿಯೆ. ಪ್ರದ್ಯುಮ್ನ ವಾಹನದಂತೆ ಮೃದುನುಡಿಗಳನ್ನು ನುಡಿಯುವ ಪದ್ಮಲೋಚನೆಯಾದ ಸಖಿ ಶಿರೋಮಣಿಯೇ ಕೇಳು. ಮದನ ಸಮರೂಪನಾದ ರಾಯಂಗೆ ನಾನು ಎಷ್ಟು ವಿಧವಾಗಿ ಪೇಳಿದಾಗ್ಯೂ ಕೇಳುವುದಿಲ್ಲ. ನೀನಾದರೂ ನಿನ್ನ ಚಾರುತರವಾದ ಮೃದುನುಡಿಗಳಿಂದ ಹಿತವಾದ ಮಾತುಗಳ ಪೇಳಿ ನನ್ನ ವಶವಾಗುವ ಹಾಗೆ ಮಾಡಿದರೆ ನನ್ನ ಕೊರಳಿನಲ್ಲಿರುವ ಆಣಿಮುತ್ತಿನ ಹಾರವು ನಿನ್ನ ಕೊರಳಿಗೆ ಹಾಕುವೆನಮ್ಮಾ ಸಖಿಯೆ ವರಚಂದ್ರಮುಖಿಯೆ-

ಸಖಿ : ಅಮ್ಮ ತಾಯೆ. ಅದೇ ಪ್ರಕಾರವಾಗಿ ನನ್ನ ಮಧುರತರವಾದ ಮೃದು ನುಡಿಗಳಿಂದ ಮದನರೂಪನಾದ ರಾಯಂಗೆ ಪೇಳಿ ನಿನ್ನ ವಶವಾಗುವ ಹಾಗೆ ಮಾಡುತ್ತೇನೆ. ನೀನು ಚಿಂತೆಯನ್ನು ಮಾಡದೆ ಇರುವಂಥವಳಾಗಮ್ಮ ತಾಯೆ ಕರುಣದಿಂ ಕಾಯೆ-

ದರುವು

ಭೂತಲಪತಿ ಎನ್ನ ಮಾತು ಲಾಲಿಸಿ ಕೇಳೋ
ನೀತಿಯೆ ನಿನಗಿದು ರಾಯ॥
ಅಸುರೆಯು ಎನ್ನನು ಹಾರಕೆ ತಂದರೆ
ಶಶಿಮುಖಿ ಕಾಯ್ದಳೆನ್ನಾ ಮುನ್ನ
ಅನ್ನ ಪಾಲ್ಬೆಣ್ಣೆಗಳಿಕ್ಕುತ ಎನ್ನನು
ಕನ್ನೆಯು ಸಲಹಿದಳಯ್ಯ ರಾಜಾ॥

ಸಖಿ : ಅಯ್ಯ ರಾಜಾ. ಮನ್ಮಥ ಕೋಟಿ ಸಮರೂಪನಾದ ರಾಜಶ್ರೇಷ್ಠನೆ ಕೇಳು. ಮತ್ತಗಜಗಾಮಿನಿ ಯಾದ ಪುಂಡರೀಕಾಕ್ಷಿಯ ಮಾತು ಕೇಳದೆ ಕೋಪಕಾತುರನಾಗಿ ಪೋಗುವುದು ಉಚಿತವಲ್ಲ. ಇದೂ ಅಲ್ಲದೆ ಹಿಂದಕ್ಕೆ ತೊಂಡನೂರಿ ಎಂಬ ರಕ್ಕಸಿಯು ಎನ್ನನ್ನು ಹಿಡಿದು ತಿನ್ನುವ ಕಾಲದಲ್ಲಿ ನನ್ನನ್ನು ಬಿಡಿಸಿಕೊಂಡು ಬಂದು ಅನ್ನ ಪಾನಾದಿಗಳಿಂದ ತೃಪ್ತಿಪಡಿಸಿ ಕನ್ಯಕಾಮಿನಿಯಾದ ಪುಂಡರೀಕಾಕ್ಷಿ ಸಲಹಿದಳಯ್ಯ ರಾಜಾ ಮಾರ್ತಾಂಡತೇಜಾ-

ದರುವು

ಚೆನ್ನಿಗ ನೀನೀ ಕನ್ನೆಯ ಕೂಡದೆ ಸುಮ್ಮನೆ ಪೋಗುವರೆ ರಾಜಾ
ಸೋತಳು ನಿನ್ನಯ ಮಾತಿನ ಸವಿನುಡಿ ಯಾತಕೆ ಭಯಪಡುವೆ॥

ಸಖಿ : ಅಯ್ಯ ರಾಜ. ಚೆಲುವ ಚೆಲುವರಿಗೆಲ್ಲಾ ಚೆಲುವ ಹಿಮಕರನಂತೆ ಪ್ರಜ್ವಲಿಪ ನಿನ್ನ ಚೆಲ್ವಿಕೆಯನ್ನು ನೋಡಿ ಚದುರೆ ಪುಂಡರೀಕಾಕ್ಷಿ ಧೀರ ಮನ್ಮಥನ ಶರಕ್ಕೆ ಗುರಿಯಾಗಿ ಮನಸೋತು ಬಂದ ಮಾನಿನಿಯನ್ನು ನೀನು ಮಮತೆಯಿಂದಲಿ ಕೂಡಬೇಕಯ್ಯ ರಾಜಾ ಹಿಮಕರತೇಜಾ-

ದರುವು

ಸುರನರಸತಿಯರಿಗತಿಶಯವಾಗಿದೆ ಕಳರಂತಯ್ಯ ರಾಜಾ
ಕುಟಿಲವು ಎಣಿಸದೆ ಕೂಡು ಬಳ್ಳಾಪುರಿ ನಿಟಿಲಾಕ್ಷನ ದಯದಿ ಮನದಿ

ಸಖಿ : ಹೇ ರಾಜಾ. ಈ ಲೋಕದೊಳು ಪಾಕಶಾಸನನಾದ ಸುರಪತಿಯ ಪುರದ ಕಾಮಿನಿಯರಿಗೆ ಅತಿಶಯವಾಗಿ ಪ್ರಜ್ವಲಿಪ ಸತಿ ಅಲ್ಲದೆ ದುಷ್ಟ ರಕ್ಕಸಿಯೆಂದೆಣಿಸದೆ ಅಕ್ಕರದಿಂದ ಕೂಡಿದ್ದೇ ಆದರೆ ಈ ಪೊಡವಿಯನ್ನು ಪರಿಪಾಲಿಸುವ ಮೃಡನು ಖಂಡೇಂದ್ರಮೌಳಿ ನಿನ್ನನ್ನು ಪೋಷಿಸುವನಯ್ಯ ರಾಜಾ ಬಾ ಸುಮತೇಜಾ-

ಕರಿರಾಜ : ಹೇ ಸಖಿಯೆ ಶಶಿಬಿಂಬದಂತೆಸೆಯುವ ಕುಸುಮಗಂಧಿಯೆ ಕೇಳು ಈ ಸಮಯದಲ್ಲಿ ನಿನ್ನ ಕುಶಲತರವಾದ ಮೃದು ನುಡಿಗಳಂ ಕೇಳಿ ನಿಮ್ಮ ಅಸುರೆಯ ಅರಮನೆಗೆ ಬಂದು ಆ ಲತಾಂಗಿಯನ್ನು ಕೂಡಲು ನಿಮ್ಮ ಮಾತೆಯಾದ ರಕ್ಕಸಿಯು ನನ್ನನ್ನು ಸುಮ್ಮನೆ ಬಿಡುವಳೇನೆ ಸಖಿಯೇ ವರ ಚಂದ್ರಮುಖಿಯೆ-

ಪುಂಡರೀಕಾಕ್ಷಿ : ಹೇ ನಲ್ಲ, ಹೇ ಸುಗುಣ ಅಸುರರ ಅರಮನೆಗೆ ನಾ ಬಾರೆನೆಂದು ಉಸುರುತ್ತಾ ಇದ್ದೀಯ. ಆದರೆ ಆ ದುಷ್ಠ ಅಸುರೆಯ ಗೃಹವು ಬೇರೆ ಇರುವುದು. ಆದ ಕಾರಣ ನಿನ್ನ ಮನಸ್ಸಿನಲ್ಲಿ ವ್ಯಸನವನ್ನು ಪಡದೆ ಕುಶಲತನದಿಂದ ಎನ್ನ ಮಂದಿರಕ್ಕೆ ಆನಂದದಿಂದ ದಯಮಾಡಬೇಕೈ ನಲ್ಲಾ ನಿನಗೇನು ಅಪಾಯವಿಲ್ಲ.

ಕರಿರಾಜ : ಅದೇ ಪ್ರಕಾರ ಆಗಬಹುದೇ ರಮಣಿ-

ದರುವು

ಮಚ್ಚಕಂಗಳೆ ನಡಿಯೆ ಮೆಚ್ಚಿದೆ ನಿನ್ನ
ಇಚ್ಛೆಯಿಂದಲಿ ಕೂಡುವೆ॥
ಮನಸಿನೊಳಗನುಮಾನವಿಲ್ಲದೆ ಮದನ ಕಲಹದಿ
ಕೂಡುವೆ ನಾನಾಳುವೆ॥ಮಚ್ಛಕಂಗಳೆ ನಡಿಯೆ॥
ಕಾಮಿನಿ ಕಾಮಿಸದೆ ಕಾಮನ ಪುಷ್ಪಶರಕೆ
ನಾ ಗುರಿಯಾದೆನೆ
ಕಾಮಕಲಹದಿ ನಿನ್ನ ಸೋಲಿಸಿ ಬೆರೆಯುವೆ
ಮೆರೆಯುವೆ॥

ಮರುಗಲ್ಯಾತಕೆ ಪೋಗುವೆ ಬಳ್ಳಾಪುರಿಯ ಉರಗ
ಭೂಷಣ ಕಾಯುವ॥
ಕರುಣಾಸಾಗರನಾದ ಶಂಕರಚರಣ ಕಮಲವ
ಭಜಿಸುವೆ ನಾ ಸ್ತುತಿಸುವೆ॥

ಕರಿರಾಜ : ಹೇ ನಾರಿ. ವಾರಿಜಾಕ್ಷಿಯರೊಳಗೆ ವನಿತೆ ಎಂದೆನಿಪ ಚೆಲುವ ಚಕೋರಾಕ್ಷಿಯಾದ ತರುಣಿಯೇ ಕೇಳು. ನಿನ್ನ ಇಚ್ಛಾನುಸಾರವಾಗಿ ಎನ್ನ ಮನಸ್ಸಿನಲ್ಲಿ ಬಹಳ ಸಂತೃಪ್ತನಾಗಿ ನಿನ್ನರಮನೆಗೆ ಬಂದು ನಿನ್ನ ಮನೋ ಇಚ್ಛೆಯಾದ ಮದನತಾಪವನ್ನು ಪರಿಹರಿಸಲು ಅನುಮಾನವಿಲ್ಲದೆ ಕಾಮಕೂಟದಲ್ಲಿ ಬೆರೆತು ಆನಂದಿಸುತ್ತೇನೆ. ಜಾಗ್ರತೆಯಾಗಿ ತೆರಳೇ ತರಳಾಕ್ಷಿ ಚಲುವ ಚಕೋರಾಕ್ಷಿ-

ಪುಂಡರೀಕಾಕ್ಷಿ : ಕನ್ನೆಯರೊಳಗೆ ಪನ್ನಗವೇಣಿಯಂತೊಪ್ಪುವ ಉನ್ನತವಾದ ಕಟಕಿಯೇ ಕೇಳು. ಶತಪತ್ರನ ಸಖ ರಾಜಾಚಂದ್ರನಸುತ ರತಿಪತಿಯಂತೆ ಹಿತಸೊಬಗಿನಿಂದೆಸೆಯುವ ಕುಶುಮ ಶರನಂತೆ ಪೋಲ್ವ ಮಾರಭೂಪಾಲನ ಸುತ ಕರಿರಾಜನನ್ನು ನನ್ನ ವಶವು ಮಾಡುವ ಹಾಗೆ ಮಾಡಿದರೆ ಮುತ್ತಿನ ಹಾರವನ್ನು ಕೊಡುತ್ತೇನೆಂದು ಮಾತು ಕೊಟ್ಟಿದ್ದೆ. ಆ ಪ್ರಕಾರ ಮುತ್ತುಮಾಣಿಕ್ಯ ಗೋಮೇಧಿಕ ವಜ್ರವೈಢೂರ‌್ಯ ಕನಕಮಣಿಮಯವಾದ ಈ ಪದಕವನ್ನು ನಿನ್ನ ಕೊರಳಿಗೆ ಹಾಕುವೆನಮ್ಮ ಸಖಿಯೆ.

ಅಮ್ಮಾ ಸಖಿಯೆ. ಈ ಕ್ಷಿತಿಯೊಳಗೆ ಇಕ್ಷುಶರನಾದ ಮನ್ಮಥನ ವಾಹನದಂತೆ ಮೃದು ನುಡಿಗಳನ್ನು ನುಡಿಯುವ ಕುಟಿಲ ಕುಂತಳೆಯಾದ ಕಟಕಿಯೆ ಕೇಳು, ನಿಟಿಲಧರನಾದ ಶಂಕರನು ಎನ್ನ ಚೆಲ್ವಿಕೆಗೆ ತಕ್ಕ ಪಟುಪರಾಕ್ರಮಿಯಾದ ಕರಿಯಭೂಪಾಲನನ್ನು ಕಳುಹಿಸಿದನಾದ ಕಾರಣ ನಾನು ಸುರತಸೌಖ್ಯಗಳಿಂದ ಇರುವ ಪರಿಯಂತರವೂ ನಮ್ಮ ಮಂದಿರದ ದ್ವಾರದಲ್ಲಿ ದ್ವಂದ್ವಗಳು ಬಾರದಂತೆ ಕಾದುಕೊಂಡು ನಮ್ಮ ಮಾತೆಯು, ಬೊಮ್ಮನು ಬಂದರೆ ಪ್ರೀತಿಯಿಂದಲಿ ಪೇಳಬೇಕಮ್ಮಾ ಸಖಿಯೆ-ವರ ಚಂದ್ರಮುಖಿಯೆ-

ಸಖಿ : ಅದೇ ಪ್ರಕಾರವಾಗಿ ಪೇಳುತ್ತೇನಮ್ಮಾ ತಾಯೆ ಕರುಣದಿಂ ಕಾಯೆ

ಸಖಿ : ಆಹಾ ಇದೇನು ಆಶ್ಚರ್ಯ. ಪುಂಡರೀಕಾಕ್ಷಿಯು ಕರಿರಾಜನು ಅಂತಃಪುರದಲ್ಲಿ  ಸುರತಸುಖವನ್ನು ಪಡುವ ಅನಿತರೊಳು ಈ ನೀಚಳಾದ ರಕ್ಕಸಿಯು ನಿಶಾಚರನಾದ ಬೊಮ್ಮನು ಆರ್ಭಟಿಸಿಕೊಂಡು ಬರುತ್ತಿರುವರು. ಇವರು ಬಂದರೆ ಪೇಳೆಂದು ಹೇಳಿದ್ದಳು. ಈಗ ಪುಂಡರೀಕಾಕ್ಷಿಗೆ ಪೇಳುವುದೆ ಸರಿ. ಪುಂಡರೀಕಾಕ್ಷಿಯೇ ಕೇಳು. ನಿಮ್ಮ ಮಾತೆಯು ಮತ್ತು ಬೊಮ್ಮನು ಪೆಣಗಳನ್ನೂ ಹೊತ್ತುಕೊಂಡು ಆರ್ಭಟಿಸಿಕೊಂಡು ದೂರದಲ್ಲಿ ಬರುತ್ತಿರುವರು. ನೀವು ಪೇಳಿದ ಪ್ರಕಾರ ನಿಮಗೆ ಅರುಹುವೆನಮ್ಮ ತಾಯೆ-

ಪುಂಡರೀಕಾಕ್ಷಿ : ಒಳಿತಾಯಿತಲ್ಲ. ಕಟಕಿಯು ಹೇಳಿದ ಪ್ರಕಾರ ನೀಚರಾಕ್ಷಸಿಯಾದ ತೊಂಡನೂರಿ, ನಿಶಾಚರನಾದ ಬೊಮ್ಮನು ಗಡಬಡದಿ ಆರ್ಭಟಿಸಿಕೊಂಡು ಬರುತ್ತಿರುವರು. ಮುಂದೇನು ಮಾಡಲಿ ಹೇ ರಾಜ ನಿನ್ನನ್ನು ಮರೆಮಾಚುವೆನು. ಎನ್ನಯ ಅಂತಃಪುರದಲ್ಲಿ ಇರುವಂಥವನಾಗೈ ಭೂಪ ಕೀರ್ತಿಕಲಾಪ-