ರಾಜ : ಅಮ್ಮಾ ಜನನೀ ಈ ಧರಿತ್ರಿಯೋಳ್ ಮಂಗಳ ಮಹಿಮನಾದ ಶ್ರೀ ಗಂಗಪಿತ ಬಳ್ಳಾಪುರ ನರಸಿಂಗನನ್ನು  ಎನ್ನ ಅಂಗದೊಳಗೆ ಧ್ಯಾನಿಸುತ್ತಾ ಬಂದು ಇದ್ದೇನೆ. ಆದ ಕಾರಣ ಅತಿ ಜಾಗ್ರತೆಯಾಗಿ ಆಶೀರ್ವಾದವನ್ನು ಮಾಡಿ ಕಳುಹಿಸುವಂಥವಳಾಗಮ್ಮ ತಾಯೆ ಕರುಣದಿಂ ಕಾಯೆ-

ದರುವು

ಪೋಗಬೇಡವೊ ಮಗನೆ ನೀನು ಹಳೆಯ ಬೀಡಿಗೆ ಈಗ ॥
ಪೊಡವಿಪಟ್ಟಣ ಬಿಟ್ಟು ಪೋಗಲು ಹಣೆಯ ಬರಹವೇನೋ ಕಂದ ॥ಬ್ಯಾಡವೊ॥

ಬನವಂತಾದೇವಿ : ಅಪ್ಪಾ ಬಾಲ. ಇಂದು ಸಮತೇಜನಾದ ಹೇ ಕಂದ ಮಂದಿಸಂದಣಿಯು ಮುಂತಾದ ಮಾರ್ಬಲವು ಮಂದಿರ ಗೃಹಚಂದ್ರಶಾಲೆಗಳ ಅಂಗಳ ಬಿಟ್ಟು ನೀ ಪೋಗುವುದು ಉಚಿತವೇನಪ್ಪ ಪುತ್ರ ಸುಂದರಗಾತ್ರ-

ದರುವು

ಅಣ್ಣಸ್ಥಿರದಿ ರಾಜ್ಯವನ್ನು ಆಳುತಿರಲು ಎನ್ನಯ ॥
ಕಣ್ಣು ಹಬ್ಬವ ನೋಡುವಂಥ ಪುಣ್ಯ ಉಂಟು ಕೇಳೋ ಕಂದ॥ಬ್ಯಾಡವೊ॥

ಬನವಂತಾದೇವಿ : ಅಪ್ಪಾ ಬಾಲ. ಅಸ್ಥಿವಾಹನನಂತೆ ಭೋಗದೋಳ್ ಸುಸ್ಥಿರದಿ ರಾಜ್ಯವನ್ನು ಆಳುತ್ತಿದ್ದರೆ ಅಸ್ಥಿಮುಖಪಿತನಾದ ಹರಿಯ ಕೃಪೆಯಿಂದ ಎನ್ನ ನೇತ್ರ ಅರ್ತಿಗಳಿಂದ ನೋಡುವೆ ನಾ ಪ್ರಬಲ ಭಾಗ್ಯಗುಣಶೀಲ-

ದರುವು

ಮಾತೆ ಈ ಪರಿ ನುಡಿವರೇನಮ್ಮ ಪ್ರೀತಿಯಿಂದಲಿ ಕಳುಹದೆ ॥
ನೀತಿಯಲ್ಲ ಪೋಗದಿರಲು-ನಿಂದಿಸುವರು ಲೋಕದೊಳಗೆ ॥

ಕರಿರಾಜ : ಅಮ್ಮಾ ತಾಯೆ ಪಶ್ಚಿಮದೇಶಾಧಿಪತಿಯಾದ ಬಲ್ಲಾಳ ರಾಯನು ತನ್ನಯ ಸ್ವಚ್ಛತರವಾದ ಮಂತ್ರಿಯವರ ಕೂಡೆ ಬಿತ್ತರಿಸಿದ ಕಾರಣ ತಮ್ಮ ಮನಸ್ಸಿನ ಅಕಳಂಕವಾದ ಚಪಲ ಚಿತ್ತವ ತೊರೆದು ನಿಷ್ಕಳಂಕಚಿತ್ತಳಾಗಿ ಅಪ್ಪಣೆಯನ್ನು ಸಾರುವಂಥವಳಾಗಮ್ಮ ಮಾತೆ ಸುಲಲಿತೆ.

ದರುವು

ಕುಂಭಿಣಿಯೊಳಗೆ ಬಳ್ಳಾಪುರಿಯ ಶಂಭುಶಂಕರಸಲಹುವ
ದುಮ್ಮಾನವೇಕೆ ಮನಸಿನೊಳಗೆ ಸಂಭ್ರಮದಿಂದ
ಕಳುಹಿಸಮ್ಮ॥ಬೇಡುವೆ॥

ಕರಿರಾಜ : ಅಮ್ಮಾ ಜನನಿ. ಈ ಕುಂಭಿಣಿಯನ್ನು ಪರಿಪಾಲಿಸುವ ಲಂಭೋದರ ಸಖ ಲಕ್ಷ್ಮೀಶನು ಕರುಣಕಟಾಕ್ಷವಿಟ್ಟು ರಕ್ಷಿಸುವ ನಿಮ್ಮಯ ಮನಸ್ಸಿನಲ್ಲಿ ಸುಕ್ಷೇಮದಿಂದ ಪೋಗಿ ಬಾರೆಂದು ಲಕ್ಷಣದಿಂದ ಅಪ್ಪಣೆಯನ್ನು ಕೊಟ್ಟು ತಕ್ಷಣ ಕಳುಹಿಸುವಂಥವಳಾಗಮ್ಮ ಮಾತೆ ಲೋಕವಿಖ್ಯಾತೆ-

ದರುವು

ನೀತಿಯಲ್ಲವೋ ಮಗನೇ ನೀನು ಪೋಗುವುದು ॥
ಪ್ರೀತಿಯಿಂದಲಿ ಎನ್ನ ಮಾತು ನೀ ಕೇಳೋ ॥

ಬನವಂತಾದೇವಿ : ಸುಮಶರಸಮರೂಪನಾದ ಹೇ ಕಂದ ಆತುರದಿಂದ ನೀ ಪೋಗುವೆನೆಂಬ ಕಾತುರಬಿಟ್ಟು ಪ್ರೀತಿಯಿಂದಲಿ ಎನ್ನ ಮಾತು ಲಾಲಿಸಿ ಕೇಳಪ್ಪ ಜಾತ ಲೋಕವಿಖ್ಯಾತ-

ದರುವು

ಹೆಣ್ಣಿಗೋಸ್ಕರವಾಗಿ ಅಣ್ಣಾ ಪೋಗುವರೆ ॥
ನಿನ್ನ ಕಣ್ಣೀಗೆ ಪ್ರಿಯವಾದ ಹೆಣ್ಣು ನಾ ತರುವೆ ॥

ಬನವಂತಾದೇವಿ : ಸುಗುಣ ಸುಬುದ್ಧಿಯುಳ್ಳ ಹೇ ಕಂದಾ ಹೆಣ್ಣು ತರುವೆನೆಂದು ಮನ್ನಿನಿಯ ಮಮತೆಯಿಂದಲಿ ಹೋಗುವುದು ಉಚಿತವಲ್ಲ. ನಮ್ಮ ಮಂದಿರದಲ್ಲಿ ಇಂದ್ರನಂತೆ ಇದ್ದರೆ ನಿನ್ನ ಕಣ್ಣಿಗೆ ಪ್ರಿಯವಾದ ಚಂದ್ರವದನೆಯನ್ನು ತಂದು ನಿನಗೆ ಮದುವೆಮಾಡುವೆನಪ್ಪ ಕಂದ ಪೋಗುವುದೇನು ಚಂದ-

ದರುವು

ತಾಯಿ ಮಾತನು ಮೀರಿ ತರಳಾ ಸಾರಂಗ ॥
ತರಳೆ ಚಿತ್ರಾಂಗಿ ಕರ ಚರಣ ಕೊಯ್ಸಿದಳು ॥3॥

ಬನವಂತಾದೇವಿ : ಅಪ್ಪಾ ಬಾಲ. ಇಂದುವಂಶಜನಾದ ಸಾರಂಗಧರನು ಮುಂದಣ ಕುಂದು ಸಂಭವಿಸುವುದೆಂದರಿಯದೆ ತಾಯಿ ಮಾತನ್ನು ಮೀರಿ ಪೋದನಾದ ಕಾರಣ ಆತಂಗೆ ಕುಂದು ಸಂಭವಿಸಿದ್ದು ನೀನರಿಯಲಿಲ್ಲವೇನಪ್ಪ ಕೂಸೇ ಲಾಲಿಸಿ ಕೇಳೆನ್ನ ಭಾಷೆ-

ಶ್ಲೋಕ
ಮನೋಯೋಗ ತುರಂಗೇನಾ
ದೇಹಶ್ಚಂದನಮೇವಚ
ದ್ವಿಪಾದಿರಿರಥಚಕ್ರೇಣ
ಪೂರ‌್ವದತ್ತೇನಸಾರಥಿ
ಸುಕೃತಂ ದುಷ್ಕೃತಂ ಚೈವ
ದೈವೇ ಬಲೆ ದುರ್ಬಲೆ-

ಅಂದ ಹಾಗೆ ಹೇ ತಾಯೆ ತನ್ನ ಮನವೇ ತೇಜವಾಗಿ ದೇಹವೆ ರಥವಾಗಿಯೂ ಮತ್ತು ಪಾದಗಳೆರಡೂ ರಥ ಚಕ್ರವಾಗಿಯೂ ತಾನು ಪೂರ್ವದಲ್ಲಿ ಮಾಡಿದ ಪಾಪ ಕರ್ಮಾದಿಗಳು ಸಾರಥಿಯೋಪಾದಿಯಲ್ಲಿ ಎಳೆಯುತ್ತವೆಯಾದ ಕಾರಣ ವನಜ ಸಂಭವನಾದ ಬ್ರಹ್ಮನು ಬರೆದ ಲಿಖಿತವನ್ನು ಮೀರಿಯರಾದಿ ಕಾರಣ ಅತಿಜಾಗ್ರತೆಯಿಂದ ಅಪ್ಪಣೆಯನ್ನು ಕೊಟ್ಟು ಕಳುಹಿಸುವಂಥವಳಾಗಮ್ಮಾ ಮಾತೆ ಸುಗುಣಸಂಪ್ರೀತೆ-

ದರುವು

ಗಂಡಾನೆನ್ನುತಾಳೋರ‌್ವ ಚಂಡಾರಕ್ಕಸಿಯು ॥
ಭರದಿ ಗುಂಡಿಗೆಯನ್ನು ಸೀಳುವಳಯ್ಯ ॥॥

ಬನವಂತಾದೇವಿ : ಅಪ್ಪಾ ಬಾಲ. ಗಂಡನು ಎಂದು ಒಬ್ಬ ಚಂಡ ರಕ್ಕಸಿಯು ಒಬ್ಬ ಪುರುಷನ ಬೆಂಬಿಡದೆ ಬೆನ್ನತ್ತಿ ಬಂದು ಮನದಿ ಮತ್ಸರದಿಂದ ಗುಂಡಿಗೆಯನ್ನು ಸೀಳಿದ ಹಾಗೆ ಕನಸು ಕಂಡೆನಲ್ಲಪ್ಪ ಬಾಲಾ ಭಾಗ್ಯಗುಣಶೀಲ-

ಕರಿರಾಜ : ಹೇ ಜನನೀ ತಾನು ಪೂರ್ವದಲ್ಲಿ ಮಾಡಿದ ಪಾಪ ಪುಣ್ಯಗಳ ಫಲಾಫಲಗಳನ್ನು ಕೋಟಿ ವರುಷವಿದ್ಯಾಗ್ಯೂ ತಾನೇ ಅನುಭವಿಸಬೇಕಲ್ಲದೆ ಅನ್ಯರಿಗೆ ಬರುವುದಿಲ್ಲಾ. ತಾವು ಕಂಡ ಸ್ವಪ್ನದ ಫಲಗಳು ಎನ್ನ ಮುಂದೆ ಪೇಳಿದ್ದೇ ಆದರೆ ನಾನು ಸರ್ವಥಾ ಕೇಳುವುದಿಲ್ಲಾ ಆದಕಾರಣ ಅತಿ ಜಾಗ್ರತೆಯಿಂದ ಅಪ್ಪಣೆಕೊಟ್ಟು ಕಳುಹಿಸುವಂಥವಳಾಗಮ್ಮಾ ಜನನೀ-

ದರುವು

ಕಂದ ಲಾಲಿಸೊ ಕರಿರಾಯ ಪೇಳ್ವೆ ಮುಂದಾಣಪರಿಯ ॥
ಕಾಮಿನೀ ನೆವದಿಂದ ಕಾಮಾಸುತನು ಇಂದೆ ಬಾಣಾಸು
ರನ ಸೆರೆಮನೆಯೊಳ್ ಶಿಲ್ಕಿದನಯ್ಯಿ ॥

ಬನವಂತಾದೇವಿ : ಅಪ್ಪಾ ಬಾಲ. ಹಿಂದೆ ಮನ್ಮಥನ ಪಿತನಾದ ಅನಿರುದ್ಧನು ಕಾಮಿನಿಯ ನೆವದಿಂದ ಶ್ರೋಣಿತಾನಗರದಲ್ಲಿ ಬಾಣಾಸುರನ ಸೆರೆಮನೆಯೊಳಗೆ ಸಿಲ್ಕಿ ಬಾಧೆಯನು ಪಟ್ಟದ್ದು ನೀ ಕೇಳಲಿಲ್ಲವೇನಪ್ಪಾ ಕೂಸೇ ಲಾಲಿಸಿ ಕೇಳೆನ್ನ ಭಾಷೆ-

ಕರಿರಾಜ : ಅಮ್ಮಾ ತಾಯೆ. ಆದಿನಾರಾಯಣನಾದ ರಾಘವನು ಹಿಂದೆ ವಾಲಿಯನ್ನು ಕೊಂದ ಕರ್ಮಫಲವಾಗಿ ಕೃಷ್ಣಾವತಾರದಲ್ಲಿ ಬೇಕಾಗಿ ಬೇಡನ ಕೈಯಲ್ಲಿ ಬಿದ್ದ ಮತ್ತು ಈ ಧಾರುಣೀಯೋಳ್ ಆರುಮಂದಿ ಚಕ್ರವರ್ತಿಗಳು ಅಗಣಿತ ಹದಿನಾರು ಮಂದಿ ಅರಸುಗಳು ಲಯವಾದರೆಂಬ ಸೊಲ್ಲ ನೀ ಕೇಳಲರಿಯೆ ಮತ್ತು ಈ ದೇಹವು ಸ್ಥಿರವೆಂದು ಎಣಿಸಿಕೊಂಡು ಇರುವುದಕ್ಕೆ ದಾರ ಯತ್ನವೂ ಇಲ್ಲ. ಜನ್ಮಾಂತರಗಳಲ್ಲಿ ಮಾಡಿದ ಕರ್ಮಫಲಗಳು ಅನುಭವಿಸಬೇಕಲ್ಲದೆ ತಪ್ಪಲಾಗದು. ಆದ್ದರಿಂದ ಅತಿ ಜಾಗ್ರತೆಯಾಗಿ ಅಪ್ಪಣೆಯನ್ನು ಕೊಟ್ಟು ಕಳುಹಿಸುವಂಥವಳಾಗಮ್ಮ ಮಾತೆ ಜಗತ್ಪ್ರಖ್ಯಾತೆ-

ದರುವು

ಸೋಮವಂಶಜ ಸುಕುಮಾರ ರಣಶೂರ ಗಂಭೀರ
ಧೀರಪಾರ್ಥನಸುಕುಮಾರ ತಾಯಿ ಮಾತನು ಮೀರಿ
ತರಳನಾದ ಅಭಿಮನ್ಯು ಚಕ್ರಬಿಂಬದ
ಕೋಟೆಯೊಳಗೆ ಸಿಲ್ಕಿದನಯ್ಯಿ॥ಲಾಲಿಸು॥

ಬನವಂತಾದೇವಿ : ಸುಮಂತ್ರದಿಂದೊಪ್ಪುವ ಹೇ ಕಂದ ಹಿಂದೆ ಪಾಂಡವರ ಕುಲಪುತ್ರ ಅಭಿಮನ್ಯು ತಾಯಿ ಮಾತನ್ನು ಮೀರಿ ಹೋದನಾದ ಕಾರಣ ಚಕ್ರಬಿಂಬದ ಕೋಟೆಯಲ್ಲಿ ಸಿಲ್ಕಿ ನೊಂದದ್ದು ನೀ ಕೇಳಲಿಲ್ಲವೇನಪ್ಪ ಕಂದ ನೀ ಪೋಗುವುದೇನು ಚಂದ-

ದರುವು

ಪೋಗಲಾಗದೋ ಎನ್ನ ಕಂದ
ಪೋಗುವುದೇನು ಚಂದ-
ಬೇಡಿಕೊಂಬುವೆ ದಯದಿಂದ ॥

ಒಂದೇ ಮನಸಿನಲ್ಲಿ ಬಳ್ಳಾಪುರೀಶನ
ವಂದಿಸಿದರೆ ಸುಖದಿಂದ ರಕ್ಷಿಸುವನು॥

ಬನವಂತಾದೇವಿ : ಪುರಹರವರದಿಂದ ಪುಟ್ಟಿದ ಹೇ ಕಂದಮ್ಮ ಪರಿ ಪರಿ ವಿಧದಿಂದ ನಾ ಪೇಳಿದ ಮಾತು ನೀನು ಕೇಳದೆ ದುರುಳತನದಿಂದ ನೀ ಪೋಗುವುದೇನು ಉಚಿತವಲ್ಲ. ಆದರೆ ಈ ಪೊಡವಿಯನ್ನು ಪರಿಪಾಲಿಸುವ ನರ ಮೃಗೇಶನನ್ನು ನಿನ್ನ ಚಿತ್ತದೋಳ್ ಧ್ಯಾನಿಸಿದ್ದೇ ಆದರೆ ಸರ್ವಸಂಪತ್ಕಳಾದಿ ಸೌಖ್ಯಗಳನ್ನು ಕೊಟ್ಟು ಸುಖದಿಂದ ರಕ್ಷಿಸುವನಪ್ಪಾ ಬಾಲಾ ಗುಣವಿಶಾಲಾ-

ಕರಿರಾಜ : ಜನನೀ ಪರಿಪರಿ ವಿಧದಿಂದ ನಿಮ್ಮ ಪಾದಪದ್ಮಂಗಳಿಗೆ ವಂದಿಸಿ ಬೇಡುವ ನಿಮ್ಮ ಗರ್ಭದಲ್ಲಿ ಪುಟ್ಟಿದಂಥ ಸುಕುಮಾರನಾದ ಎನಗೆ ಸುಖದಿಂದ ಪೋಗಿ ಬಾರೆಂದು ಲಕ್ಷಣದಿ ಅಪ್ಪಣೆಯನ್ನು ಕೊಟ್ಟು ಕಳುಹಿಸಬೇಕಮ್ಮ ಜನನಿ ಸದ್ಗುಣಾಭರಣಿ-

ರಾಗದ್ವಿಪದೆಮುಖಾರಿ

ಶ್ರೀಕಂಠವರಪುತ್ರ ಶ್ರುತಜನಮಂದಾರ ಕುಸುಮ
ಶರಸಮರೂಪ ಕುವರನೆ ಕೇಳು ಕಂದಯ್ಯ ನಿನ್ನನು
ಕಾಣನಿದ್ದೆಡೆಯು ಒಂದು ದಿನವು ಎನಗೆ ಒಂದು
ಯುಗವಾಗಿಹುದು ಕಂದಯ್ಯ ನಿನ್ನ ಕಳುಹಿ ನಾನೆಂತು
ತಾಳುವೆನು ಎನ್ನ ಪುತ್ರಕನೆಂದು ಇನ್ನಾರನೊಳ್ಪೆ
ಹಸಿದನಂದರೆ ನಿನಗೆ ಅನ್ನ ಇಕ್ಕುವೆನು-ಹಸುವಿಡೆ
ಯಲಾರೊಳು ಕೇಳ್ವೆ ನನ್ನಪ್ಪ ನನ್ನ ಪೆತ್ತವನೆ ನನ್ನ ಮು
ದ್ದಿನ ಕಂದ ನನ್ನ ಮಾಣಿಕ್ಯವೆ ಇನ್ನು ನೀನು ಖಗದೊಳಗೆ
ಹಳೆಯಬೀಡಿಗೆ ಪೋಗಿ ಮಧುರವಾಣಿಯೆ ಬೇಗ ಮದು
ವೆಯನ್ನಾಗಿ ಸುಖದಿಂದ ಬಾರಯ್ಯ ಆ ಕ್ಷತ್ರಜೆಯಿಂದ
ಆರ‌್ಯಜನ ಪೋಷ ಆಪುತ್ರಭೋದಯ-ಆಕಲ್ಪವೃಕ್ಷ
ಅವನೀಸುರ ರಕ್ಷ-ಪಕ್ಷೀ ವಾಹನ ಲಕ್ಷ್ಮೀಪತಿ ನಿನ್ನ ರಕ್ಷಿ
ಸುವ ಸುಕ್ಷೇಮದಿಂದ ನೀ ಪೋಗಿಬಾರಯ್ಯ
ಕರಿರಾಜ ಚಂದ್ರ-

ದರುವು

ಪೋಗಿ ಬಾರೆಲೊ ಕಂದ ನರಹರಿ ದಯದಿಂದ
ನೀನು ಪೋಗಿ ಬಾರೆಲೊ ಕಂದ ॥

ಗಂಗಾಜನಕನಾ ನಿನ್ನಂದದೊಳ್ ಧ್ಯಾನಿಸಿ
ಶೃಂಗಾರದಿಂದಲಿ ಮಂಗಳಕರನಾಗಿ ॥

ಧರೆಯೊಳೀಗ ಬಳ್ಳಾಪುರವ ಪಾಲಿಸುವಂಥ
ವರ ವೆಂಕಟೇಶನ ಭಜನೆಯ ಮಾಡುತ ॥

ಬನವಂತಾದೇವಿ : ಅಪ್ಪಾ ಬಾಲ ಈ ಧರೆಯೊಳತ್ಯಧಿಕವಾದ ಮಂಗಳ ಮಹಿಮನಾದ ಶ್ರೀಹರಿಯನ್ನು ನಿನ್ನಂಗದಲ್ಲಿ ಧ್ಯಾನಿಸುತ್ತ ಮಂಗಳಕರನಾಗಿ ಹಳೆಯಬೀಡಿಗೆ ಪೋಗಿ ಧರಣಿಮೋಹಿನಿಯೆಂಬ ಕಾಮಿನಿಯನ್ನು ಪರಿಣಯವು ಆಗಿ ಸುಖದಿಂದ ಬರುವಂಥವನಾಗಪ್ಪ ಕಂದ ಎನ್ನ ಮನಕಾನಂದ-

ದರುವು

ಹೊರಟ ಕರಿಕಲ ಚಂದ್ರ ಸಡಗರದಿ ಯೆಂದು ಹೇಗೆ
ಪಟುಭಟರು ಕೂಡಿಕೊಂಡು ನಟನೆಯಿಂದಲಿ ॥

ಛತ್ರೀಯು-ಚಾಮರವು-ಈಟಿ ಕತ್ತಿಗಳಿಂದ
ಹಿಡಿದ ಹೆಗ್ಗಳ ಭೇರಿ ವಾದ್ಯದಿಂದಲೀ ತಾನ್ಹೊರಟ  ॥

ಕರಿರಾಜ : ಅಯ್ಯ ಸುಗುಣ ಸುಬುದ್ಧಿಯುಳ್ಳ ಪ್ರಧಾನೋತ್ತಮನೆ ಕೇಳು ನೀನು ಪೇಳಿದ ಅಭಿಪ್ರಾಯದಂತೆ ನಮ್ಮ ಮಾತೆಯಾದ ಬನವಂತಾದೇವಿಯವರಿಂದ ಆಶೀರ್ವಾದವನ್ನು ಪಡೆದು ಬಂದು ಇರುತ್ತೇನೆ. ಆದ ಕಾರಣ ನಾನು ಹಳೆಬೀಡಿಗೆ ಪೋಗಿ ಬಲ್ಲಾಳಪತಿಯ ಪುತ್ರಿ ಅಂಗಜನರಾಣಿಯಂತೊಪ್ಪುವ ಶೃಂಗಾರದ ಸೊಬಗಲಿ ಬಂಗಾರಕುಚ ಪದ್ಮರಾಣಿಯಾದ ಅಂಗನಾಮಣಿಯನ್ನು ಪರಿಣಯವು ಆಗಿ ಬರುವವರೆವಿಗೂ ನಮ್ಮ ರಾಜ್ಯದ ಪ್ರಜೆಗಳನ್ನು ಸುಖ ಸಾಮ್ರಾಜ್ಯ ವೈಭವದಿಂದ ಪರಿಪಾಲಿಸಿಕೊಂಡು ಇರುವುದಲ್ಲದೆ ಶ್ರೀಹರಿಯ ಧ್ಯಾನಾನಂದನಿರುತನಾಗಿ ಇರಬೇಕಯ್ಯ ಪ್ರಧಾನಿ ಭಾರ್ಗವ ಸಮಾನಿ-

ಪ್ರಧಾನಿ : ಅದೇ ಪ್ರಕಾರವಾಗಿ ಇರುತ್ತೇನೆ. ನೀವು ಹೋಗಿ ಬರಬಹುದಯ್ಯ ದೊರೆಯೆ ಲೋಕದ ಸಿರಿಯೆ-

ದ್ವಿಪದೆರಾಗಆರಭಿ

ಶ್ರೀ ರುಕ್ಮಿಣೀನಾಥ ಶ್ರುತಪಾರಿಜಾತ ವಾರಿಜಾಸನವಂದ್ಯ
ವರಮುನಿಸ್ತೋತ್ರ ಪಾಲಾಕ್ಷಸಖ ಲಕ್ಷ್ಮೀಪತಿಯೊಡ
ಶ್ರೀಹರಿಯಪಾದವನು ಚಿತ್ತದಲಿ ಧ್ಯಾನಿಸುತ
ವನಿತೆ ಪುಂಡರೀಕಾಕ್ಷಿ ಅರುಣೋದಯದೊಳೆದ್ದು
ಅತಿ ಹರುಷದಿಂದ-ಮುಖಮಜ್ಜನವ ಮಾಡಿ
ಮುದದಿ ಹರಿಸಿನಪೂಸಿ-ಪಣೆಯಲ್ಲಿ-ಕಸ್ತೂ
ರಿ ತಿಲಕವ ತಿದ್ದಿ ಪ್ರಣತಿಕಣ್ಣಿಗೆ-ಪ್ರಿಯವಾದ
ಕಾಡಿಗೆಯನ್ನಿಟ್ಟು-ಬಂಗಾರುಮಯವಾದ
ಸೀರೆಯನು ಬಾಲೆ ತಾನುಟ್ಟು-ರಂಗುಳ್ಳ ಕುಪ್ಪಸ
ವರಮಣಿ ತಾ ತೊಟ್ಟು-ವಾಲೆ-ಬುಗುಡಿಯು
ಚೌಲಿ ರ‌್ಯಾಗಟೆಯು-ವನಿತೆ ತಾ ತೊಟ್ಟು-ಮೇಲಾದ
ನವರತ್ನದಾಭರಣ ನಾರಿ ತಾ ಧರಿಸಿ-ನಡುವಿ
ನೊಡ್ಯಾಣವು-ಚಳಿಕೆಯನ್ನು ಕಟ್ಟಿ-ಕಡವು ಇಲ್ಲದೆ
ಬಾಲೆ ತರುಣಿ ತಾ ಬೇಗ-ಧರೆಯೊಳತಿ ಹಿರಿಯ
ಬಳ್ಳಾಪುರಿಯ ನರಹರಿಯ ನೆನೆಯುತ್ತ-ಮೆಲ್ಲಡಿ
ಗಳನಿಟ್ಟು-ಮುಂಗಾರು ಮಿಂಚಿನಂದದಲಿ ತಲ್ಲಣಿಸಿ
ತಾ ಮೆಚ್ಚಿ-ಬಂದಳು ಪೂರ್ವದೊಳು ಪಾರ್ಥಂಗೆ
ಮೆಚ್ಚಿದ ಊರ್ವಶಿಯಂತೆ ಪದ್ಮಯತಾಕ್ಷಿ

ಪುಂಡರೀಕಾಕ್ಷಿ : ಅಪ್ಪಾ ಸೇವಕ. ಎಮ್ಮ ಸಮ್ಮುಖದಲ್ಲಿ ಬಂದುನಿಂದು ಎಮ್ಮನ್ನು ಧಾರೆಂದು ಕೇಳುತ್ತಾ ಇರುವೆ. ಆದರೆ ಎಮ್ಮಯ ವಿದ್ಯಮಾನವನ್ನು ಚೆನ್ನಾಗಿ ಪೇಳುತ್ತೇನೆ. ಚಿತ್ತವಿಟ್ಟು ಕೇಳಯ್ಯ ಸೇವಕ ಭಕ್ತಿಯೊಳ್ ಭಾವುಕಾ-

ಅಪ್ಪ ಸೇವಕ ಈ ಮಹೀಮಂಡಲ ಮಧ್ಯದೊಳ್ ಮಾರ್ತಾಂಡನ ಪ್ರಭೆಗೆ ಹಿಮ್ಮಿಗಿಲಾದ-ಮಕರ ಧ್ವಜನ ಪುರದಂತೆ ಶೋಭಿಸುವ ಮಣಿಖಚಿತಕನಕ ಮಯದಿಂದೊಪ್ಪಲ್ಪಟ್ಟ ಈ ಪೊಡವಿಯೋಳ್ ತಂಡಗನ ಪುರಿಯ ಪಟ್ಟಣಕ್ಕೆ ಕಾರಣಕರ್ತರಾದ ಚಂಡ ದಾನವಿ ಎಂಬ ರಕ್ಕಸಿಯು ಈ ನವಖಂಡ ದೊಳಿಹ ನದಿಗಳಲ್ಲಿ ಸ್ನಾನವಂ ಮಾಡಿದ ಫಲದಿಂದ ಮೃಡನ ಅರ್ಧ ಶರೀರಿಣಿಯಾದ ಸುರಗಂಗೆಯ ವರದಿಂದ ತೊಂಡನೂರಿಯ ಗರ್ಭದಲ್ಲಿ ಉದ್ಭವಿಸಿದಂಥ ಆಣಿ ಶ್ರೀ ಕುಲಕೆ ಕಟ್ಟಾಣಿ ಎಂದೆಣಿಪ ಪುಂಡರೀಕಾಕ್ಷಿ ನಾನೇ ಅಲ್ಲವೇನಪ್ಪಾ ದೂತಾ-ರಾಜಾ ಸಂಪ್ರೀತಾ.

ಕಟಕಿ : ಅಪ್ಪಾ ಸೇವಕ. ಎಮ್ಮ ಸಮ್ಮುಖದಲ್ಲಿ ಬಂದು ನಿಂದು ಯಮ್ಮನ್ನು ಧಾರೆಂದು ಕೇಳುವಂಥವ ನಾಗುತ್ತಾ ಇದ್ದಿ. ಆದರೆ ಯಮ್ಮಯ ವಿದ್ಯಮಾನವನ್ನು ಚನ್ನಾಗಿ ಪೇಳುತ್ತೇನೆ ಚಿತ್ತವಿಟ್ಟು ಕೇಳಪ್ಪ ಸೇವಕ ಭಕ್ತಿಯೋಳ್ ಭಾವುಕ-

ಅಪ್ಪಾ ಸೇವಕ. ಈ ಪೊಡವಿಯೋಳ್ ತಂಡಗನ ಪುರಿಯ ಪಟ್ಟಣಕ್ಕೆ ಕಾರಣಕರ್ತಳಾದ ರಕ್ಕಸಿಯು ದಂಡಧರನಂತೆ ಉದ್ದಂಡ ಬೊಮ್ಮ ಅಗ್ರಜೆಯಳಾದ ತೊಂಡನೂರಿಯ ಉದರದಲ್ಲಿ ಪುಟ್ಟಿದ ಚಿತ್ತ ಜನ ವನಿತೆಂಗಿಮ್ಮಿಗಿಲಾದ ಪುಂಡರೀಕಾಕ್ಷಿಗೆ ಕುರುಳು ಬೈತಲೆಯನ್ನು ತಿದ್ದಿ ಅರಳುವ ಕುಸುಮವಂ ಮುಡಿಸಿ ಕಣ್ಣಿಗೆ ಕಾಡಿಗೆಯನ್ನಿಟ್ಟು ನಟನೆಯಂ ಕನ್ನಡಿಯ ತೋರಿಸುವ ಕುಟಿಲ ಕುಂತಳೆಯಾದ ಕಟಕಿಯು ನಾನೇ ಅಲ್ಲವೇನಪ್ಪಾ ದೂತ ರಾಜ ಸಂಪ್ರೀತ-

ದರುವು

ಮುಖವ ತೋರಿಸೆ ಮೋಹನಾಂಗಿ ಮಾತನಾಡುವೆ
ಶೋಭನಾಂಗಿ ॥
ಪುರಹರನು ತಕ್ಕ ಪುರುಷಾನ ಕೊಡದಿರೆ ಇರಲಾರೆ
ಜೀವಿಗೆ ನೀತಿ ಪೇಳುವೆನೆ ಗಂಭೀರೆ ॥

ಪುಂಡರೀಕಾಕ್ಷಿ : ಅಮ್ಮಾ ಸಖಿಯೆ. ವಾರಿಜಾಕ್ಷಿಯರೊಳಗೆ ವನಿತೆಯೆಂದೆನಿಪ ಕುಟಿಲ ಕುಂತಳೆಯಾದ ಕಟಕಿಯೇ ಕೇಳು ನಿಟಿಲ ನೇತ್ರನಾದ ಶಂಕರನು ಎನ್ನ ದಿಟ್ಟತರವಾದ ಚಲ್ವಿಕೆಗೆ ತಕ್ಕ ಪುರುಷನನ್ನು ಕೊಡದೆ ಎನ್ನ ರಕ್ಕಸನ ವಶವ ಮಾಡುವ ಹಾಗೆ ಕಾಣುತ್ತಾ ಇದೆಯಲ್ಲಮ್ಮ ಸಖಿಯೆ ವರಚಂದ್ರಮುಖಿಯೆ-

ದರುವು

ಅಕ್ಕ ಲಾಲಿಸೆ ಬೊಮ್ಮ ರಕ್ಕಾಸನನ್ನು ಕೂಡಿ
ಅಂತಾಕನಂತವಾಗಿನ್ನು ಬಾಳಿರಲಾರೆ ಮುನ್ನ ತಾಯೆ ॥

ಪುಂಡರೀಕಾಕ್ಷಿ : ಹರಿಣಲೋಚನೆಯಾದ ತರುಣಿಯೇ ಕೇಳು. ದುರುಳರಕ್ಕಸನಾದ ಬೊಮ್ಮನೊಳು ಸೇರಿ ಬದುಕುವುದಕ್ಕಿಂತ ಗರಳವನ್ನು ಕುಡಿದು ದೇಹವನ್ನು ಬಿಡುವುದು ಉಚಿತವಲ್ಲವೇನಮ್ಮ ನೀರೆ ಶರಧಿಗಂಬೀರೆ-

ದರುವು

ಧರೆಯೋಳಾಗ್ರಜ ಬಳ್ಳಾಪುರದಾ ವೆಂಕಟೇಶ ತಾ ಚೆಲು
ವ ಪುರುಷನ ಕೊಡು ಈಶ ಬೇಡುವೆನು
ತಾಯೆ ॥

ಪುಂಡರೀಕಾಕ್ಷಿ : ಅಮ್ಮಾ ಸಖಿಯೆ. ಈ ಪೊಡವಿಯ ರಕ್ಷಕನಾದ, ಕಂತುಪಿತನಾದ ಶಂಕರನು ಎನಗೆ ವಂಚನೆಯನುಮಾಡಿ  ಕಂತು ಸ್ವರೂಪನಾದ ಕಾಂತನನ್ನು ಕೊಡಲಿ ತಿಳಿಯೆ ಏಕಾಂತದೊಳಗೆ ಒಂದು ನೆಲೆಯನ್ನಾದರೂ ಪೇಳಮ್ಮ ನೀರಜಾಕ್ಷಿ.

ದರುವು

ಕೇಳಮ್ಮ ಪುಂಡಾರಿಕಾಕ್ಷಿ-ಪೇಳುವೆ ಚಪಲಾಕ್ಷಿ ॥
ಮಧುರವಾಣಿಯೆ ನಿನ್ನ ಮನಸೀಗೆ ತಕ್ಕನಾದ
ಚದುರಾನ ವರಿಸುವೆ ಚದುರೋಪಾಯಗೈಂಬೆ ॥

ಸಖಿ : ಅಮ್ಮಾ ತಾಯೆ ದನುಜರುಟ್ಟಳಿಯ ಸೆರೆಗೆ ಸಿಲ್ಕಿದೆನೆಂದು ಚಿಂತಿಸುವುದೇಕೆ ನಿನ್ನ ಅಂತರಂಗಕೆ ತಕ್ಕ ಕಾಂತನು ಬರುವುದಕ್ಕೆ ಒಂದು ಉಪಾಯವನ್ನು ಪೇಳುವೆನಮ್ಮ ತಾಯೆ ಕರುಣದಿಂದೆನ್ನ ಕಾಯೆ.

ದರುವು

ಅಂಗನಾಮಣಿ ಕೇಳೆ ಯವ್ವ ದನುಜರಿಲ್ಲದ ವ್ಯಾಳೆ
ಸಮಯವನು ನೋಡಿ ಯವ್ವ  ॥

ವನಿತೆ ತನ್ನೊಳು ಕೇಳೆ ವನದಿ ಕುಂಭಿಣಿಯನ್ನು
ವರವ ಬೇಡಲು ಅಬ್ಬೆ ಪುರುಷನ ಕೊಡುವಳು॥

ಸಖಿ : ಅಮ್ಮಾ ತಾಯೆ. ತರುಣಿಯರ ಕುಲದೊಳಗೆ ಮಲ್ಲಿಗೆ ಹರಳಿನಂತೆ ಪ್ರಕಾಶಿಸುವ ಪುಂಡರೀಕಾಕ್ಷಿಯೆ ಕೇಳು. ದುರುಳ ರಕ್ಕಸಿಯು ಬರುವ ಅನಿತರೊಳಗೆ ಮೃಡನ ಅರ್ಧ ಶರೀರಿಯಾದ ಕುಂಭಿಣಿದೇವಿಯನ್ನು ಭಕ್ತಿ ಭಾವಗಳಿಂದ ಪೂಜಿಸಿದ್ದೇ ಆದರೆ ಚೆಲುವ ಪುರುಷನನ್ನು ಕೊಡುವಳಮ್ಮ ಮಾತೆ ದನುಜಪ್ರಖ್ಯಾತೆ-

ದರುವು

ಕುಂದರಂಗನೆ ತಡವ್ಯಾಕೆ-ಗೌರಿಪೂಜೆ ಮನಕೆ
ಒಪ್ಪುವ ಪುರುಷಾನ ಕ್ಷಣಕೆ ॥

ಧರೆಯೊಳಗ್ರಜ ಬಳ್ಳಾಪುರದಾ ಲಕ್ಷ್ಮೀಶನು
ವರಸುತಾನಂದದಿ ವರನ ತೋರಿಸುವಳು ತಾಯೆ ॥

ಸಖಿ : ಅಮ್ಮ ತಾಯೆ. ಕುಸುಮಬಾಣನ ಕೈಯ್ಯ ಪುಷ್ಪ ಮಾರ್ಗಣನಂತೆ ಎಸೆಯುವ ಕುಸುಮಗಂಧಿಯೆ ಕೇಳು ಈ ವಸುಧೆ ರಕ್ಷಕಿಯಾದ ಅಂಬಿಕಾದೇವಿಯನ್ನು ನಿಶ್ಚಲ ಭಕ್ತಿ ಭಾವಗಳಿಂದ ಪೂಜಿಸಿದ್ದೇ ಆದರೆ ಈ ಕ್ಷಿತಿಯೊಳ್ ಪಕ್ಷಿವಾಹನನಾದ ಲಕ್ಷ್ಮೀಶನ ಸುತನಂತೆ ಪ್ರಕಾಶಿಸುವ ಪುರುಷನನ್ನು ಕೊಡುವಳಮ್ಮ ತಾಯೆ ಕರುಣದಿಂದೆನ್ನ ಕಾಯೆ-

 

ಕುಂಭಿಣಿಪೂಜೆ

ಆದಿತಾಳ

ಪೂಜಿಸುವೆನು ಪುರಹರನ ರಾಣಿಯ ನಾನು॥

ಹರನರಾಣಿಯ ನಾನು ಪರಮ ಕಲ್ಯಾಣಿಗೆ॥
ಚಲುವ ಚಾಮುಂಡಿಯ ಚರಣ ಭಜಿಸುವೆ
ಚಲುವ ಪುರುಷನಾ ಕೊಟ್ಟು ಸಲಹಬೇಕಮ್ಮಾ ತಾಯೆ॥
ಪರಮ ಕಲ್ಯಾಣಿ ಬಳ್ಳಾಪುರ ಪುರವ ಪಾಲಿಸುವಂತ
ಸರಸಿಜಾಕ್ಷನ ರಾಣಿ ಚರಣವ ಭಜಿಸುವೆ॥

ಸ್ತೋತ್ರ  : ಸೌರಾಷ್ಟ್ರ ರಾಗ

ಶ್ರೀ ಶಿವಶಕ್ತಿ ಶಂಕರಿ ಮಹೇಶ್ವರಿ ಚಾಮುಂಡಿ
ಮೃಡನ ಅರ್ಧಶರೀರಿಣಿ ಮಹಿಷಾಸುರಮರ್ದಿನಿ,
ಕಾತ್ಯಾಯಿನಿ ಕಾಳಿ ತ್ರಿಪುರಸುಂದರಿ ತ್ರಿಲೋಕ
ರಕ್ಷಕಿ ನಿಮ್ಮಯ ಪಾದಪದ್ಮಂಗಳನ್ನು ಸ್ತುತಿಸುವೆನು
ಈ ಕ್ಷಣ ನಿನ್ನ ಕುಕ್ಷಿಯಲಿ ಪುಟ್ಟಿದ ಕುವರಿಗೆ
ಕರುಣ ಕಟಾಕ್ಷವಿಟ್ಟು ಎನ್ನ ರಾಕ್ಷಸನ ವಶವು
ಮಾಡದೆ ಎನಗೀ ಕ್ಷಿತಿಯೊಳ್ ಇಕ್ಷುಶರನಂತೆ ಪೋಲ್ವ
ಚಲುವ ಪುರುಷನನ್ನು ಕೊಟ್ಟು ರಕ್ಷಿಸಬೇಕಮ್ಮ ಜಗದ್ರಕ್ಷಕಿ-

ಕುಂಭಿಣಿ ದೇವಿಯು ಪ್ರತ್ಯಕ್ಷ

ಕುಂಭಿಣಿ : ಅಮ್ಮಾ ಮಗಳೆ ಲಲನೆಯೆ ಕಲಕೀರವಾಣಿ, ಚಲುವ ಚಕೋರಾಕ್ಷಿಯಂತೊಪ್ಪುವ ನಲನೀಲವೇಣಿಯಾದ ಪುಂಡರೀಕಾಕ್ಷಿಯೆ ಕೇಳು. ಮನ್ನಣೆ ಮಮತೆಯಿಂದಲಿ ಉನ್ನತವಾದ ನಿನ್ನ ಹಸ್ತದೋಳ್ ಎನ್ನನ್ನು ಪೂಜಿಸಿ ಬೇಡಿದ ಕಾರಣವೇನಮ್ಮಾ ಮಗಳೆ ಮಲ್ಲಿಗೆ ಹರಳೆ.

ಕಂದ

ಅಮ್ಮ ಶಂಕರಿ ಲಾಲಿಸು ನಿಮ್ಮ ಚರಣ
ಕಮಲವನು ನಂಬಿದೆನಮ್ಮ ಎನಗೋರ‌್ವ
ಚಲ್ವ ಪುರುಷನ ಕೊಡೆ
ಮೌನವು ಏಕೆ ನೀ ದಯಮಾಡೆ
ಹರಿಣ ಲೋಚನೆ ನೀನು ಕರುಣಿಸದಿದ್ದರೆನ್ನ
ಹರಣ ಒಪ್ಪಿಸುವೆ ನಿನ್ನಯ ಚರಣಕ್ಕೆ

ಪುಂಡರೀಕಾಕ್ಷಿ : ಹೇ ಜಗದ್ರಕ್ಷಕಿ. ಈ ಸಮಯದಲ್ಲಿ ಎನಗೋರ‌್ವ ಚೆಲುವ ಪುರುಷನ ಕೊಡದೆ ನೀನು ಮೌನದಲ್ಲಿ ಇದ್ದದ್ದೇ ಆದರೆ ಎನ್ನ ಹರಣವನ್ನು ನಿನ್ನ ಚರಣಕ್ಕೆ ಒಪ್ಪಿಸುವೆನಮ್ಮಾ ಮಾತೆ ಲೋಕವಿಖ್ಯಾತೆ.

ಕಂದ

ಚೆನ್ನಯ ರನ್ನಳೆ ಕೇಳು, ನಿನ್ನ ಭಕ್ತಿಗೆ ಮೆಚ್ಚಿದೆನಮ್ಮ
ಸುಮ್ಮನೆ ನಿನ್ನ ಹರಣವನು ಬಿಡಲ್ಯಾಕೆ ಕನ್ನೆಯೆ ನಿನ್ನಿಷ್ಟವನು ಕೊಡುವೆನು ನಾನು

ನೀ ಕೇಳೆ ಮಗಳೆ ಪುಂಡರೀಕಾಕ್ಷಿ ನೀ ಕೇಳೆ ಮಗಳೇ

ಕುಂಭಿಣಿದೇವಿ : ದನುಜ ಕುಲಶಿರೋಮಣಿಯಾದ ಪುಂಡರಿ ಕಾಕ್ಷಿಯೆ ಕೇಳು ನೀನು ಪರಿಪರಿವಿಧದಿಂದ ಪೂಜಿಸಿದ ಭಕ್ತಿಭಾವಕ್ಕೆ ಎನ್ನಯ ಮನಸ್ಸು ಬಹಳ ಸಂತೋಷವಾಯಿತು. ಆದ ಕಾರಣ ನೀನು ಕೋರಿದ ಕೋರಿಕೆಯನ್ನು ನೆರವೇರಿಸಿ ಕೊಡುವೆನಮ್ಮ ಕನ್ನೆ ದನುಜ ಕುಲಚೆನ್ನೆ.