ಕೃಷ್ಣ : ಸ್ವಾಮಿ ತಾಪಸೇಂದ್ರ, ಯನ್ನ ಪರಿಯನ್ನು ನಿಮ್ಮೊಡನೆ ಯೇನೆಂದು ಹೇಳಲಿ. ನಳಿನ ಮಿತ್ರನಾದ ಭಾಸ್ಕರನಿಗೆ ಅರ್ಘ್ಯವಂ ಕೊಡುತ್ತಿದ್ದ ವೇಳೆಯಲ್ಲಿ ಗಯನೆಂಬುವನ ಹಯದೆಂಜಲು ಯನ್ನ ಅಂಜಲಿಯೋಳ್ ಬೀಳಲು ನಾನು ಕುಪಿತನಾಗಿ ಎಂಟು ದಿನಗಳೊಳಗಾಗಿ ಆ ತುಂಟನ ಕಂಠವಂ ಕತ್ತರಿಸುವೆನೆಂದು ಶಪಥವಂ ಮಾಡಿದೆನು. ಯನ್ನ ಪಂಥವು ನೆರವೇರುವಂತೆ ತೋರುವುದಿಲ್ಲ. ಗಯನೆಂಬುವನು ಎಲ್ಲಿರುವನೆಂಬುದನ್ನು ತಿಳಿಯದೆ ತಲ್ಲಣಿಸುವೆನೈ ಮೌನಿ ಭಾರ್ಗವ ಸಮಜ್ಞಾನಿ.

ಪದ

ಏಳು ದಿನವಾಯ್ತು ನಾರದ ಕೇಳು ಏಳು ದಿನವಾಯ್ತು
ನಾಳೇ ವಂದಿನದಿ ಆ ಖೂಳ ಗಯನನು ಹಿಡಿದು
ಬೀಳುಗಡಿವೆನವನ ನೆಲೆಯಾ ತೋರೆನಗೇ ॥

ಕೃಷ್ಣ : ಸ್ವಾಮಿ ಬ್ರಂಹನಂದನ. ಯನ್ನ ಪ್ರತಿಜ್ಞಾ ಅವಧಿಯು ಮುಗಿಯುತ್ತಾ ಬಂದಿರುವುದು. ಇಂದಿಗೆ ಏಳು ದಿನಂಗಳು ಕಳೆದು ಹೋದವು. ಯೀವರೆವಿಗೂ ಅವನ ನೆಲೆಯೇ ನನಗೆ ಕಾಣಲಿಲ್ಲ. ಆದ್ದರಿಂದ ತಾವು ತ್ರಿಲೋಕ ಸಂಚಾರಿಗಳು ತಮಗೇನಾದರೂ ಆ ಗಂಧರ್ವನ ನೆಲೆಯು ತಿಳಿದಿದ್ದರೆ ದಯವಿಟ್ಟು ಯನಗರುಹಿದರೆ ಆ ತುಂಟನ ಕಂಠವಂ ಚಕ್ರಕ್ಕೆ ಆಹುತಿಯಂ ಕೊಡುವೆನು. ತಮಗೆ ತಿಳಿದಿದ್ದರೆ ಅವನ ವಿಚಾರವಂ ಅರುಹುವರಾಗೈ ಮುನಿವರ ಮುಂದೆ ನೋಡು ಅದರ ವಿವರ.

ಪದ

ಹೇಳಲಾರೆನೊ ಹೇಳದುಳಿಯಲಾರೆನೋ ॥
ಹೇಳಲಾರೆನಯ್ಯ ರಂಗ ಹೇಳಲಾರೆನಂತರಂಗಾ ॥
ಹೇಳಲಾರೆನೊ ಹೇಳದುಳಿಯಲಾರೆನೊ ॥

ನಾರದ : ಅಯ್ಯ ಮಂಗಳಾಂಗ ಶುಭಾಂಗ ಅಂಗಜಪಿತ. ಯೀ ವಾರ‌್ತೆಯನ್ನು ಹೇಳಲು ನನಗೆ ಬಾಯಿ ಬರುವುದಿಲ್ಲಾ. ವಿಚಾರವನ್ನು ಹೇಳಿದರೆ, ಕಲಹಪ್ರಿಯನಾದ ನಾರದನು ತಂದಿಟ್ಟ ವ್ಯಾಜ್ಯವೆಂಬ ಕೆಟ್ಟ ಅಪನಿಂದೆ ನನಗೇಕೆ. ಆದರೂ ವಿಚಾರವನ್ನು ಹೇಳುತ್ತೇನೆ ಕೇಳು.

ಪದ

ಧೂರ್ತಗಯ ತಾನು ಪೋಗಿ ಆರ್ತಧ್ವನಿಯಲೀ ॥
ವಾರ‌್ತೆಯನ್ನು ಪೇಳದಂತೆ ಪಾರ್ಥನನ್ನು
ಮರೆಯ ಹೊಕ್ಕ ॥ಹೇಳಲಾರೆನೊ ॥

ನಾರದ : ಕೃಷ್ಣಾ ನಿನ್ನ ವೈರಿಯಾದ ಗಯನು ಕಾಮ್ಯಕವನಕ್ಕೆ ತೆರಳಿ ಅರ್ಜುನನು ಏಕಾಂಗಿಯಾಗಿರುವ ವೇಳೆಯಲ್ಲಿ ತನ್ನ ವಿಚಾರವನ್ನು ಮೊದಲು ತಿಳಿಸದೆ, ಆತನಿಂದ ಅಭಯ ಪ್ರದಾನವಂ ಪಡೆದನಂತರ ತನ್ನಿರವಂ ಅರುಹಿರುವನು. ಬಂಧುತ್ವದಲ್ಲಿ ಕಲಹ ಬಂದೊದಗಿರುವುದೊ ಶ್ರೀಹರಿ ಮುಂದೇನು ದಾರಿ.

ಕೃಷ್ಣ : ಮುನೀಂದ್ರ ಅರ್ಜುನನು ಯೀ ರೀತಿ ಮಾಡಿರುವನೆ. ಆಗಲಿ ಯೀ ವಿಚಾರವು ಅವನಿಗೆ ತಿಳಿದಿರಲಾರದು. ನಾನೀಗಲೇ ದೂತನನ್ನು ಅಟ್ಟಿ ಗಯನನ್ನು ಬಿಟ್ಟುಬಿಡಬೇಕೆಂದು ಓಲೆಯಂ ಬರೆದು ಕಳುಹಿಸುತ್ತೇನೆ. ಅದಕ್ಕೆ ಅವನಿಂದ ಏನು ಉತ್ತರ ಬರುತ್ತದೆಯೋ ನೋಡೋಣ.

ಕೃಷ್ಣ : ಯಲೈ ಚಾರನೆ, ಯೀ ಪತ್ರಿಕೆಯನ್ನು ತೆಗೆದುಕೊಂಡು ಹೋಗಿ ಕಾಮ್ಯಕವನದಲ್ಲಿರುವ ಯುಧಿಷ್ಠಿರ ಮತ್ತು ಅರ್ಜುನನ ಕೈಗೆ ಕೊಟ್ಟು ಅವರಿಂದ ಬರುವ ಉತ್ತರವನ್ನು ಯನ್ನೊಡನೆ ಹೇಳಬೇಕಾಗಿ ತಿಳಿಸುತ್ತೇನೆ. ಬೇಗನೆ ಹೋಗು.

ಚಾರ : ಅಪ್ಪಣೆ ಮಹಾಪ್ರಭು

 

(ಕಾಮ್ಯಕವನಧರ್ಮಜನ ಪರ್ಣಶಾಲೆ)

ಚಾರ : ರಾಜಾಧಿರಾಜ ರಾಜ ಮಾರ‌್ತಾಂಡ ಯುಧಿಷ್ಟಿರ ಸಾರ‌್ವಭೌಮ ಬಹುಪರಾಕ್.

ಧರ್ಮ : ಚಾರನೆ ವರ‌್ತಮಾನವೇನು.

ಚಾರ : ಸ್ವಾಮಿ ಧರ್ಮರಾಯರೆ, ನಮ್ಮ ದೊರೆಯಾದ ಶ್ರೀ ಕೃಷ್ಣ ಪರಮಾತ್ಮ ಸ್ವಾಮಿಯವರು ತಮಗಾಗಿ ಓಲೆಯನ್ನು ಕಳುಹಿಸಿದ್ದಾರೆ. ಪರಾಂಬರಿಸಬೇಕಾಗಿ ಬೇಡುತ್ತೇನೆ.

ಧರ್ಮ : ಚಾರನೆ ಅದೇನು ವಿಚಾರ ಪ್ರಸಂಗಿಸುವನಾಗು.

ಚಾರ : ಅಪ್ಪಣೆ ಪ್ರಭು. ಕುಂಭಿಣಿಗೆ ರಾಜಾಧಿರಾಜ ಶಶಿವಂಶೋದ್ಭವ ಯಮನಂದನನಿಗೂ ಮಹಾವೀರಾಧಿವೀರ ಮಧ್ಯಮ ಪಾಂಡವ ಅರ್ಜುನ ಭೂಪಾಲನಿಗೂ ಸಹ, ಕಮಲಾಯತಾಂಬಕನು ಮಾಡುವ ವೇದೋಕ್ತ, ಮಂಗಳಾಶೀರ್ವಾದಗಳು. ಸಾಂಪ್ರತ ಯೀ ಪತ್ರಿಕೆಯ ಮೂಲಕ ನಿಮಗೆ ತಿಳಿಸುವುದೇನೆಂದರೆ ನನ್ನ ವೈರಿಯಾದ ಗಯನನ್ನು ನಿಮ್ಮಲ್ಲಿ ಇಟ್ಟುಕೊಂಡಿರುವದಾಗಿ ತಿಳಿಯಿತು. ಯೀ ಲೇಖನ ಕಂಡ ಕೂಡಲೆ ವೈರಿಯನ್ನು ತಂದೊಪ್ಪಿಸಿದರೆ ಸಮ ತಪ್ಪಿದರೆ ಕದನಕ್ಕೆ ಉದ್ಯುಕ್ತರಾಗಿರಬೇಕಾಗಿ ತಿಳಿಸುತ್ತೇನೆ.

ಚಾರ : ಯುದಿಷ್ಠಿರ ಸಾರ‌್ವಭೌಮ ಯೀ ಪತ್ರಿಕೆಯಂತೆ ಗಯನನ್ನು ಬಿಟ್ಟು ಬಿಡಿ. ಇಲ್ಲವಾದರೆ ಅವನನ್ನು ನಾನೇ ಹೆಡಮುರಿಯಿದ ಹಿಡಿದುಕೊಂಡು ಹೋಗುತ್ತೇನೆ.

ಪದ

ನ್ಯಾಯವೆ ನಿನಗಿದು ಗಯನನು ಪಿಡಿವುದು
ಕಾಯಜಪಿತನಿಗೆ ಪಾಯವೆಸಗಿದೆವು ॥

ಅರಿಯದೆ ಗಯನಿಗೆ ಭರವಸೆ ಕೊಟ್ಟೆವು
ಧರೆಶರರಂಗಗೆ ಅರಿಗಳಾದೆವು ನಾವು

ಧರ್ಮ : ಚಾರನೆ ಮರೆಬಿದ್ದವರನ್ನು ಕಾಪಾಡುವುದು ಕ್ಷತ್ರಿಯ ಧರ್ಮವು. ಕೃಷ್ಣನ ವೈರಿಯೆಂದು ತಿಳಿಯಲಿಲ್ಲಾ ಅಭಯವಂ ಕೊಟ್ಟಿದ್ದಾಯಿತು. ಯೀಗ ಕಾಪಾಡದೆ ಬಿಡುವುದು ಯಾವ ಧರ್ಮ.

ಪದ

ಬಿಡು ಬಿಡು ಬಿಡು ಚಾರನೆ ದುಡುಕುಗೈವರೆ ಪೋರನೆ
ತಡೆಯದೀಗಲೆ ನಿನ್ನ ಕಡಿವೆ ಶಿರವ ನಾಂ
ಬಡಿವಾರವನು ಬಿಡು ವಡಲಾ ಬಗೆವೆ ನಿನ್ನ ॥

ಬರಿದೆ ನೀ ಗಳುಹದೆ ಹರಿಗೆ ಹೇಳಲೊ ಬೇಗ
ತರಳ ನಿನ್ನಯ ಪ್ರಾಣ ತರಿಯದೆ ಬಿಡೆ ನಾನು ॥
ಶರಪುರಿ ರಂಗನು ಸೊಗಸಿಂದ ಬರಲೀಗ
ಹಗರಣಗೈದೀಗ ಜಗಳಾ ಮಾಡುವೆ ನಾನು ॥

ಭೀಮ : ಯಲವೊ ಚಾರನೆ, ಆ ಕೃಷ್ಣನು ಹೇಳಿದ ದರ್ಪಕ್ಕೆ ಹೆದರುವರು ಯಾರೂ ಇಲ್ಲಾ, ಗಯನನ್ನು ಬಿಡುವುದಿಲ್ಲ. ನೀನೀಗಲೆ ಹೋಗಿ ಆ ನಗಧರನಿಗೆ ಜಗಳಕ್ಕೆ ಬರಬೇಕೆಂದು ಯೀ ವಿಚಾರವನ್ನು ಬಕಾಂತಕನರುಹಿದನೆಂದು ನಿಮ್ಮೊಡೆಯನಿಗೆ ತಿಳಿಸು. ಯೀಗಲೆ ಹೊರಡು ಎಚ್ಚರವಿರಲಿ.

ಪದ

ತಡಿ ತಡಿ ಭೀಮನೇ, ಕೇಳೀಗಾ ಯನ್ನಾ ನುಡಿ ॥
ದುಡುಕವದಲ್ಲವು ಕೆಡುವುದು ಕಾರ್ಯವು ॥
ಕಡುಗಲಿಯಾಗಿ ನೀ ಪಡದಿರು ಛಲವನ್ನು ॥

ಪಾಪಿ ಅರ್ಜುನನೀಗ ಯೀಪರಿ ಮಾಡಿದ
ಕೋಪವು ಸಲ್ಲದು ಭೂಪಕೇಳ್ ಯೀ ಪರಿ ॥

ಧರ್ಮರಾಜ : ತಮ್ಮಾ ಭೀಮಸೇನ. ಈ ಪರಿ ಕೋಪವು ಸಲ್ಲದು. ಸೈರಿಸು ಶಾಂತನಾಗು.

ಭೀಮ : ಅಣ್ಣಾ ಯಮ ತನುಜ. ಯಮ್ಮ ಸತಿಯಾದ ಪಾಂಚಾಲಿಯನ್ನು ಸಭೆಯಲ್ಲಿ ದುಶ್ಯಾಸನನು ಮಾನಭಂಗವಂ ಮಾಡುವಾಗ ಸೈರಿಸು ಸೈರಿಸು ಕಾಲವಲ್ಲವೆಂದು ಧರ್ಮವನ್ನು ಅನುಸರಿಸಿ ನಿಮ್ಮ ಹೇಳಿಕೆಯಂತೆ ಸುಮ್ಮನಿದ್ದ ಕಾರಣ ನಮ್ಮ ಸಾಮರ್ಥ್ಯಗಳೆಲ್ಲಾ ವ್ಯರ್ಥವಾಗಿ ಸತಿಯಳ ಮಾನಾಪಹರಣ ವಾಯಿತು. ಅಲ್ಲದೆ ಆ ಕುನ್ನಿ ಕೌರವನಿಗೆ ಲೆತ್ತ ಮುಖದಿಂದ ರಾಜ್ಯಾದಿ ಬೊಕ್ಕಸ ಭಂಡಾರವಂ ಸೋತು ಅಡವಿ ಪಾಲಾದೆವು. ಅಣ್ಣಾ ಧರ್ಮನಂದನ ಶ್ರೀ ಕೃಷ್ಣನಿಗೆ ಹೆದರಿ ಗಂಧರ್ವನಂ ಬಿಡುವುದೆ. ಇಲ್ಲಾ ಇದು ಸಾಧ್ಯವಿಲ್ಲಾ ॥

ಚಾರ : ಸ್ವಾಮಿ ಧರ್ಮರಾಯರೆ ಗಯನನ್ನು ಹಿಡಿದುಕೊಂಡು ಹೋಗುತ್ತೇನೆ.

ಭೀಮ : ಛೀ ಅಧಮ. ನಿಲ್ಲೊ ನಿಲ್ಲೊ ಗಯನನ್ನು ಮುಟ್ಟಬೇಡ. ಭೀಮನು ಪ್ರಚಂಡನೆಂಬುದನ್ನು ತಿಳಿಯದೆ ಹೀಗೆ ಮಾಡಿದೆ ಅವಿವೇಕಿ. ನಿನ್ನೊಡೆಯನು ಬರೆದು ಕಳುಹಿಸಿದ ಪತ್ರಿಕೆಯನ್ನು ನಿನ್ನ ಕೊರಳಿಗೆ ಕಟ್ಟುತ್ತೇನೆ. ನಿಲ್ಲೊ ಮಂದಮತಿ ॥

ಪದ

ಅಗ್ರಜ ವೈರ ವಿರಾಮ ಶೀಘ್ರದಿ ಕೊಡು ನೇಮ
ನಿಗ್ರಹಿಸಿ ಬರುವೆ ನಿಸ್ಸೀಮಾ ॥
ದುರುಳ ಶ್ರೀಹರಿಯನ್ನು ಕರ ಯುಗದಿಂದುರೆ ಬಗೆದು
ಕರುಳ ವನಮಾಲೆಯ ಧರಿಸುವೆನೊ ॥

ಭೀಮ : ಅಣ್ಣಾ ಧರ್ಮನಂದನ. ಯುದ್ಧಕ್ಕೆ ಯನಗೆ ಅನುಜ್ಞೆಯನ್ನು ಕೊಡು. ಆ ಹರಿಯಾದಿ ಸಮಸ್ತ ಯಾದವರನ್ನು ಧುರದೋಳ್ ಕೊಂದು ಅವರ ರುಧಿರವಂ ಕುಡಿದು ಅಂತಕನಾಲಯಕ್ಕೆ ಕಳುಹಿಸಿ ಬರುತ್ತೇನೆ. ಅತಿಜಾಗ್ರತೆಯಿಂದ ಅಪ್ಪಣೆಯಾಗಲೈ ಅಣ್ಣಾ.

 

(ದುರ್ಯೋಧನನ ಸಭೆ :ಕರ್ಣಶಕುನಿ)

ಪದ

ಪೂತಾನೀತ ಮಾತ ಕೇಳೈ
ಯೀ ತೆರ ಕಾರ‌್ಯವಧಾತನೆ ನೀನು ॥
ಕುಂತಿಯ ಸುತರನ್ನು ಪಂಥದಿಂ ಸೋಲಿಸಿ
ಇಂತೆಲ್ಲ ಭಾಗ್ಯವ ಸಂತಸದಿ ಇತ್ತೆ ಯನಗಿಂತು
ಉಪಕಾರ ವಿನಯದಿಂ ಮಾಡಿದೆ ಮನದಿ
ಸಂತೋಷದಿ ಮಣಿವೆ ಪಾದಕೆ ಮಾವ॥
ಮಾನ್ಯ ಶಕುನಿಯಿಂದ ಧನ್ಯನಾದೆನು ನಾನು
ಗಣ್ಯನಾಗಿಳೆಯೊಳು ಪುಣ್ಯವ ಪಡೆದೇ ॥ಪೂತಾ ॥

ದುರ‌್ಯೋಧನ : ಹೇ ಮಾವ ನಿನ್ನಿಂದ ನಾಂ ಧನ್ಯ ಧನ್ಯ ದುರ‌್ಯೋಧನ ॥

ಕಂದ

ಅರಿಗಳಾಗಿಹ ಪಾಂಡವರನು ನಾಂ ಪರಿಪರಿ
ವಿಧದಲ್ಲಿ ಜರಿದು ಕಾಡಿಗಟ್ಟಿದೆ ಜವದೀ॥
ವರ ಶಕುನಿಯ ಬಲದಿಂದಲಿ
ಪರಮ ಐಶ್ವರ‌್ಯಂಗಳು ಲಭಿಸಿತು ಮಾವ

ದುರ‌್ಯೋಧನ : ಮಹಾನುಭಾವನಾದ ಶಕುನಿಯೆ, ನೀನು ನನಗೆ ಮಾಡಿದ ಉಪಕಾರಕ್ಕೆ ನಾನೇನು ಪ್ರತ್ಯುಪಕಾರವಂ ಮಾಡಲಾರೆನು. ಮಾವ, ಈ ದೇಹವೇ ನಿನ್ನದಾಗಿರುವುದು. ನಿನಗೆ ನಾನು ಕೃತಜ್ಞನಾಗಿರುವೆನು ಮಾವ. ನಮ್ಮ ಶತೃಗಳಾದ ಪಾಂಡವರು ಕಾಮ್ಯಕವನದಲ್ಲಿ ಅನ್ನ ಆಹಾರಗಳಿಲ್ಲದೆ ನಾನಾ ವಿಧವಾದ ಕಷ್ಟಗಳನ್ನು ಅನುಭವಿಸುತ್ತಿರಬೇಕಲ್ಲವೆ ಮಾವ ॥

ಪದ

ಕರುಣಿ ಗಂಗಾಧರನ ಕರುಣದಿಂದಲಿ ಯನಗೆ
ಪರಿಪರಿ ಸಾಮ್ರಾಜ್ಯ ದೊರಕಿ ಇಹುದು ಮಾವ ॥

ದುರ‌್ಯೋಧನ : ಮಾವ ಸೌಬಲರಾಜ. ನಿನ್ನಯ ಕೃಪಾದೃಷ್ಟಿಯಿಂದಲೂ ಆ ಪರಮೇಶ್ವರನ ಕೃಪೆಯಿಂದಲೂ, ಪರಮ ಸಾಮ್ರಾಜ್ಯ ವೈಭವಭರಿತನಾಗಿರುವೆನು. ಇದು ನಿನ್ನ ಕರುಣಾದೃಷ್ಟಿಯ ಫಲ ಮಾವ ॥

ಪದ

ದುರುಳ ಪಾಂಡವರನ್ನು ಮರುಳು ಮಾಡುತೆ ನೀನು
ಮರಳಿ ಮರಳಿ ದುಃಖಪಡುವಂತೆ ಮಾಡಿದೆ.

ದುರ‌್ಯೋಧನ : ಮಾವ ಶಕುನಿ ಮಹಾರಾಜ. ನಿನ್ನಯ ಬುದ್ಧಿ ಕೌಶಲದಿಂದ ಬಿದ್ದ ಲೆತ್ತಗಳ ಸಂಖ್ಯೆಯ ದೆಸೆಯಿಂದ ಆ ಬಡ ಯುಧಿಷ್ಠಿರನು ಕಾಡು ಪಾಲಾದನು ಮಾವ. ನಿನ್ನ ಉಪಾಯಕ್ಕೆ ಸಂತೋಷಿಸುತ್ತೇನೆ ಮಾವ. ನೋಡು ಮಾವ ನಾವುಗಳೆಲ್ಲರೂ ಸೇರಿ ಪಾಂಡವರ ಮುಂದೆ ನಮ್ಮ ವೈಭವಗಳನ್ನು ಪ್ರದರ್ಶಿಸಬೇಕಲ್ಲವೆ ಇದಕ್ಕೆ ನಿನ್ನ ಅಭಿಮತವೇನು ಮಾವ.

ಪದ

ಏನನಾಡಿದೆ ಕುರುಕುಲೇಂದ್ರನೆ ಕಾನನದಿ ಆ ಪಾಂಡವರ್
ನ್ಯೂನದಿಂ ತಪಿಸುವರು ಎನ್ನುವ ಮಾನಸವ ನೀಂ ಮಾಜಲ್ಕೆ ॥
ಶಿರಿಯ ರಮಣನ ಕರುಣದಿಂದಲಿ ನಿರುತವೂ ಪಾಂಡವರಿಗೆ
ಪರಮ ಸುಖಸಾಮ್ರಾಜ್ಯದಿಂದಲಿ ಮೆರೆಯುತಲೆ ಇರುತಿರ್ಪರೈ ॥
ಶರಪುರದಿ ಸೊಗಸಿಂದ ಮೆರೆಯುವ ನಗಧರಾ ಶ್ರೀ ರಂಗನಾ
ಅಗಣಿತದ ಮಿಗೆ ಕರುಣವಿರುತಿರೆ ಜಗದೊಳಿದಿರೇನಿರುವುದೈ ॥

ಶಕುನಿ : ಕುರು ಸಾರ‌್ವಭೌಮ. ಹಾಗೆ ನೀಂ ತಿಳಿಯಬೇಡ – ಅವರಿರುವ ಅಡವಿಯೆ ಅವರಿಗೆ ಅಖಿಲ ಸಾಮ್ರಾಜ್ಯಕ್ಕಿಂತ ಮಿಗಿಲಾಗಿರುವುದು. ಶ್ರೀ ಕೃಷ್ಣನ ದಯದಿಂದ ಅವರ ಕಷ್ಟಗಳೆಲ್ಲ ಮಂಜಿನಂತೆ ಮಾಯವಾಗುವುದು. ಕುರುರಾಜ-

ಕಂದ

ಸಿರಿಯರಸನ ಕರುಣದಿ ಕೌಂತೇಯಗೆ
ವರತರಣಿ ಕೊಟ್ಟಿಹ ಪಾತ್ರೆಯ ದೆಸೆಯಿಂ
ಹರಣವ ಪೊರೆಯಲು ಸುಲಭವು
ಕರುಣಾಕರ ಶ್ರೀಹರಿ ದಯವಿರುತಿಹುದೈ

ಶಕುನಿ : ರಾಜೇಂದ್ರ, ಅಡವಿಯಲ್ಲಿ ಪಾಂಡವರು ಕಡು ಕಷ್ಟಪಡುವರೆಂದೆಣಿಸಬೇಡ. ಅವರಿಗೆ ಆ ದಿನಮಣಿಯು ಅನ್ನ ಪಾನಾದಿಗಳಿಗೆ ಅನುಕೂಲವಾಗುವಂತೆ ಅಕ್ಷಯ ಪಾತ್ರೆಯನ್ನು ಅನುಗ್ರಹಿಸಿರುವನು. ಅದರ ದೆಸೆಯಿಂದ ಅವರು ಮೃಷ್ಟಾನ್ನವನ್ನುಂಡು ಕಷ್ಟವನ್ನು ಕಾಣದೆ ಇರುವರು ಇಷ್ಟೆಲ್ಲಾ ಶ್ರೀ ಕೃಷ್ಣನ ಕರುಣೆ ಕುರುರಾಜ-

ದುರ‌್ಯೋಧನ : ಯಲೈ ಸೇವಕ. ಯನ್ನ ಪ್ರಾಣಸಖನಾದ ರಾಧೇಯನನ್ನು ಕರೆದುಕೊಂಡು ಬಾ.

ಕರ್ಣ : ಯಲೈ ಸೇವಕ, ಶ್ರೀಮಾನ್ ನಿಖಿಲ ಜಗದ್ಗಂಡ ಪ್ರಚಂಡ ಸುರಭಾಂಡೇಯ ಪಂಡಿತ ಭುಜಾಂಡ ಆಹವ ವೈರಿ ಮಸ್ತಕಾರಿ, ಕ್ಷುದ್ರೇಡ್ಜನ ಪರಾಕ್ರಮಿ ಯನಿಸಿ ಯನ್ನ ಯಡಬಲದ ಕುಡಿಮೀಸೆಗಳಂ ಕುಣಿಸುತ್ತ ಪಿಡಿದ ಕರಾಚಲದಿಂ ತಳಕ್ ತಳಕ್ ಎಂದು ಝಳಪಿಸುತ್ತಾ ರಣರಂಗದೋಳ್ ಮುಂದಕ್ಕೆ ಇಟ್ಟ ಕಾಲ ಹಿಂದಕ್ಕೆ ಇಡುವರ ಗಂಡ ವೈರಿ ಮದಗಜ ಭೇರುಂಡನೆನಿಸಿ ಹಸ್ತಿನಾಪುರವಂ ಸತ್ಯದಿಂದ ಪರಿಪಾಲಿಸುವ ಕೌರವೇಂದ್ರನಿಗೆ ಅತ್ಯಂತ ಪ್ರೀತಿಪಾತ್ರನಾದ ಕಮಲ ಮಿತ್ರ ಜಗತ್ರಯಪಾಲ ಭೂಲೋಲರ ಗಂಡ ತ್ಯಾಗದೋಳ್ ಕರ್ಣಕೀರ‌್ತಿ ಪ್ರತಾಪನೆಂದು ತಿಳಿಯೊ ದೂತ ರಾಜ ಸಂಪ್ರೀತ.

ಯಲೈ ಸೇವಕ ನಾನೀ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಯೀ ದಿನ ಯನ್ನ ಪ್ರಾಣ ಮಿತ್ರನಾದ ಕೌರವೇಂದ್ರನು ಕರೆಸಿದ ಕಾರಣ ಬಾಹೋಣವಾಯಿತು. ಕುರುಭೂಪಾಲನನ್ನು ಕರೆದುಕೊಂಡು ಬಾರೋ ಸೇವಕ.

ಕರ್ಣ : ದುರ್ಯೋಧನ ರಾಜೇಂದ್ರ ವಂದಿಸುವೆನು.

ದುರ‌್ಯೋಧನ : ಮಿತ್ರ ರಾಧೇಯ ನಿನಗೆ ಮಂಗಳವಾಗಲಿ. ಮಿತ್ರ ರಾಧಾನಂದನ. ಆ ನೀಚರಾದ ಪಾಂಡವರಿಗೆ ಹಲವು ವಿಧದಲ್ಲಿಯೂ ಸಂಕಟವನ್ನುಂಟು ಮಾಡಬೇಕೆಂಬುದೇ ನನ್ನ ಮುಖ್ಯ ಮನೋಗತವಾಗಿರುವುದು ಇದಕ್ಕೆ ಏನು ಮಾಡಬೇಕೈ ಮಿತ್ರ ॥

ಕರ್ಣ : ಮಹಾರಾಜ. ನಿನ್ನ ಶತೃಗಳಾದ ಪಾಂಡವರು ಕಷ್ಟದಿಂದ ಬಳಲುತ್ತಿರುವರಲ್ಲದೆ ಅವರಿಗೆ ಸುಖವೆಲ್ಲಿಯದು ರಾಜೇಂದ್ರ.

ಪದ

ಚಿಂತೆಯದೇತಕೆ ಕುರುಕುಲ ಚಂದ್ರನೆ
ಸಂತಸವನು ಹೊಂದೈ ಅಂತು ನಿನ್ನ
ಇಷ್ಟಾರ್ಥಗಳೆಲ್ಲವೂ ಪಂಥ ಪೂರ‌್ತಿಯಹುದೈ ॥

ಬಡ ಪಾಂಡವರುಗಳ್ ಅಡವಿಯೊಳ್ ಚರಿಸುತೆ
ಕಡು ಕಷ್ಟವ ಪಡುತೆ ಒಡಲನು
ಒರೆವರೆವರು ಜಡರಾಗಿರುವರು ಸಡಗರವೆಲ್ಲಿಹುದೈ

ಕರ್ಣ : ಮಹಾರಾಜ ಚಿಂತಿಸದೆ ಶಾಂತನಾಗು. ನಿನ್ನ ಇಷ್ಟಾರ್ಥಗಳೆಲ್ಲವೂ ಸಂತಸದಿಂದ ಪೂರ‌್ತಿಯಾಗುವವು. ಅವರಿಗೆ ಆ ಕೃಷ್ಣನ ಸಹಾಯದಿಂದ ಬರುವ ಕಷ್ಟಗಳೆಲ್ಲಾ ಬಯಲಾಗುವುವು. ಶ್ರೀ ಕೃಷ್ಣನಿಗೂ ಪಾಂಡವರಿಗೂ ಭೇದವನ್ನು ಕಲ್ಪಿಸಿ ಕೃಷ್ಣನಿಂದ ಪಾಂಡವರನ್ನು ಬೇರ್ಪಡಿಸಿದರೆ ನಿನ್ನ ಕಾರ್ಯವು ಸಂದೇಹವಿಲ್ಲದೆ ನೆರವೇರುವದಲ್ಲದೆ ತೊಂದರೆಯಾಗಲಾರದು. ಆದಕಾರಣ ಕೃಷ್ಣನಿಗೂ ಪಾಂಡವರಿಗೂ ದ್ವೇಷದ ಬೀಜವನ್ನು ಬಿತ್ತುವಂತೆ ಮಾಡಬೇಕಾಗಿರುತ್ತದೆ.

ದುರ್ಯೋಧನ : ಬಹಳ ಸಂತೋಷ ಕರ್ಣ. ರವಿಸಮತೇಜನಾದ ನೀನು ಮತ್ತು ಯುಕ್ತಿಪರಾಯಣನಾದ ಯೀ ನಮ್ಮ ಮಾವ ಸೌಬಲರಾಜನೂ ಆದ ಶಕುನಿ ಭೂಪಾಲನೂ ಸೇರಿ ನಮ್ಮ ದಾಯಾದಿಗಳಾದ ಆ ಪಾಂಡವರನ್ನು ಅಡವಿಗಟ್ಟುವದಕ್ಕೆ ಸಹಾಯ ಮಾಡಿದಿರಿ. ಆದ್ದರಿಂದ ಯೀ ಕುರು ಸಾರ‌್ವಭೌಮನು ತಮಗೆ ಚಿರರುಣಿಯಾಗಿರುತ್ತಾನೆ. ಯಲೈ ಚಾರನೆ ಆಸ್ಥಾನಕ್ಕೆ ನರ್ತಕಿಯರನ್ನು ಬರಹೇಳು.

ಚಾರ : ಅಪ್ಪಣೆ ರಾಜೇಂದ್ರ.

 

(ನರ್ತಕಿಯರ ಪ್ರವೇಶ)

ಪದ

ಬೃಂದಾವನ ಗೋವಿಂದ ಮುಕುಂದ ಇಂದಿರಾ
ರಮಣನೆ ಕರುಣದಲಿ ಚಂದದಿ ಪೊರೆಯೊ
ಮುಕುಂದನೆ ಯಮ್ಮನು ನಂದಗೋಪನು
ಮಾಧವನೆ ಹರಿಯೇ ನಿಮ್ಮನು ಸ್ಮರಿಸುವನೈ
ನರಕಾಂತನೆ ಕಾಯ್ವುದು ಕೃಪೆಯಿಂದ
ಸರಸದಿ ಪೊರೆಯೊ ಸಿರಿವರರಂಗನೆ
ಶರಪುರದರಸಗೆ ಕರಿವರದಾ

ಕಂದರಾಗಮಧ್ಯಮಾವತಿ

ತರುಣಿಯರ ಸರಸಗಾನಕೆ ತರಹರಿಸುತಿರ್ಪ
ಮನವಿದೀಗ ಹರುಷಮದಾಯ್ತು
ತರಿಸಿ ಕೊಡಿವರಿಗೆ ಭೂಷಣ ತ್ವರಿತದಿ
ನೀನೀಗ ಚಾರ ಹರುಷದೊಳೀಗಾ ॥

ದುರ್ಯೋಧನ : ಯಲೈ ಚಾರನೆ. ಈ ನರ್ತಕಿಯರಿಗೆ ಬಹುಮಾನವಾಗಿ ಪಾರಿತೋಷಕವನ್ನು ಕೊಟ್ಟು ಕಳುಹಿಸು.

 

(ನಾರದ ಪ್ರವೇಶ)

ಪದ

ಜಯ ಜಯ ಶ್ರೀರಾಮ ರಘುವರಾ ಶುಭಕರ
ಶ್ರೀರಾಮ ರಾಮಾ ರವಿಕುಲ ಜಲನಿಧಿ ಸೋಮ
ತಾರಕನಾಮ ದಶರಥರಾಮ ದನುಜ
ನಿರ್ನಾಮ ಪಟ್ಟಾಭಿರಾಮ ॥ಜಯ ಜಯ ॥

ಕಾಮಿತದಾಯಕ ಕರುಣಾಧಾಮ
ಭೂಮಿಸುತಾ ಕಾಮಾ ಶ್ರೀರಾಮ ॥
ಜಯ ಜಯ ಶ್ರೀ ರಾಮ ॥

ನಾರದ : ನಾರಾಯಣ ನಾರಾಯಣ.

ಚಾರ : ರಾಜೇಂದ್ರ, ನಾರದ ಮಹಾಮುನಿಗಳು ದಯಮಾಡಿಸಿರುವರು.

ದುರ‌್ಯೋಧನ : ಮಹಾತ್ಮರನ್ನು ಮರ‌್ಯಾದೆಯಿಂದ ಕರೆದುಕೊಂಡು ಬಾ.

ದುರ್ಯೋಧನ : ಮುನೀಂದ್ರ ವಂದಿಸುವೆನು.

ನಾರದ : ವಿಜಯೋಸ್ತು ಕುರುರಾಜ ನಿನಗೆ ಮಂಗಳವಾಗಲಿ.

ಕಂದ

ಮುನಿನಾಥನೆ ಮೂಲೋಕವ ಅನುನಯದಿ
ಚರಿಸುತಿರ್ಪ ಕಾರಣದಿ ಜನಿಸಿರ್ಪ
ವಿಶೇಷಂಗಳ ಯನಗೊಲವಿಂ ಪೇಳ್ದು
ಮನಕೆ ಮಾಳ್ಪುದು ಮುದಮಂ ॥

ದುರ‌್ಯೋಧನ : ಮುನೀಂದ್ರ ತಾವು ತ್ರಿಲೋಕ ಸಂಚಾರಿಗಳು ತ್ರಿಕಾಲ ಜ್ಞಾನಿಗಳು – ಯಾವ ಯಾವ ದೇಶದಲ್ಲಿ ಏನು ಸಮಾಚಾರವೆಂಬ ವಿಚಾರವನ್ನು ನನಗೆ ತಿಳಿಸಬೇಕಾಗಿ ಬೇಡುತ್ತೇನೆ.

ನಾರದ : ಕುರುರಾಜ ನಾನು ಯಾವ ವಿಚಾರವನ್ನೂ ಕಾಣೆ. ಆದರೆ ನಿನ್ನ ಐಶ್ವರ‌್ಯಕ್ಕೆ ಸಮಾನವಾದ ಐಶ್ವರ‌್ಯವನ್ನು ದೇವೇಂದ್ರನಲ್ಲಿಯೂ ಕಾಣಲಿಲ್ಲ ಇದೊಂದೇ ದೊಡ್ಡ ವಿಶೇಷ ॥

ದುರ‌್ಯೋಧನ : ಮಹನೀಯರ ಅನುಗ್ರಹವಿದ್ದರೆ ಸಾಕು ॥

ನಾರದ : ನಿನ್ನ ಭಾವನೆ ಹಾಗೆ ಇದ್ದರೆ ಸರಿ. ಅದು ಹಾಗಿರಲಿ ಪಾಂಡವರ ವರ‌್ತಮಾನವ ಕೇಳಲಿಲ್ಲವೊ॥

ದುರ್ಯೋಧನ : ಪೂಜ್ಯರೆ ಅದೇನು ವಿಚಾರ. ಪಾಂಡವರ ವರ‌್ತಮಾನವೇನು ದಯವಿಟ್ಟು ತಿಳಿಸಬೇಕೈ ಮೌನಿ ಭಾರ್ಗವ ಸಮಜ್ಞಾನಿ.

ನಾರದ : ಅಯ್ಯ ದುರ್ಯೋಧನ ಭೂಪತಿಯೆ. ಕುಬೇರನ ಮಗನಾದ ಗಯನನ್ನು ಎಂಟು ದಿನಗಳಲ್ಲಿ ಕೊಲ್ಲುವೆನೆಂದು ಶ್ರೀಕೃಷ್ಣನು ಪ್ರತಿಜ್ಞೆಯಂ ಮಾಡಿದನು. ನಿನ್ನ ವೈರಿಗಳನ್ನು ನಾಶಗೊಳಿಸಿ ನಿನಗೆ ಸಂತೋಷವನ್ನುಂಟು ಮಾಡಬೇಕೆಂದು ನಾನು ಗಯನಿಗೆ ಅರ್ಜುನನ ಮರೆ ಹೋಗುವಂತೆ ಉಪಾಯವಂ ಹೇಳಿ ಕಳುಹಿಸಿದೆನು. ಯೀ ಸಂಗತಿಯನ್ನು ತಿಳಿಯದೆ ಅರ್ಜುನನು ಗಯನಂ ರಕ್ಷಿಸುವೆನೆಂದು ಅಭಯವಂ ಕೊಟ್ಟನು. ನಾಳೆಯ ದಿನವೆ ಕೃಷ್ಣನಿಗೂ ಅರ್ಜುನನಿಗೂ ಯುದ್ಧವು ನಡೆಯುವುದು. ಕೃಷ್ಣನಿಂದ ಅರ್ಜುನನು ಮರಣವಾಗುವುದು ಖಂಡಿತ ನೋಡಿದೆಯೋ ಹೇಗಿದೆ.