ಕರಿರಾಜ : ಕುಸುಮ ಪುತ್ರನ ಸೋದರ ಪಶುಪಾಲಕನ ಸುತ ಕುಸವರನ ಸತಿರತಿಯಂತೆ ಪ್ರಕಾಶಿಸುವ ಎನ್ನ ಕುಶಲಕ್ಕೆ ಈಡಾಗಿ ಬಿಸುಜಾಕ್ಷಿಯಂತೊಪ್ಪುವ ಪುಂಡರೀಕಾಕ್ಷಿಯೆ ಕೇಳು, ದಾರಿಮಾರ್ಗವು ತಪ್ಪಿ ಬಂದ ಎನ್ನನ್ನು ಬಾರಿ ಬಾರಿಗೂ ಶೂರಮನ್ಮಥನ ಶರಕ್ಕೆ ಸಿಕ್ಕಿಸಿ ಕ್ರೂರ ರಕ್ಕಸಿಯು ಕೊಲ್ಲುವಳು ಪೋಗೆಂದು ಪೇಳುತ್ತಿರುವೆ. ನಾರೀಮಣಿ ನಿನ್ನನ್ನು ಎಂದಿಗೆ ಮರೆಯಲಿ. ಮಾರನ ಬಾಣಕ್ಕೆ ಹ್ಯಾಗೆ ತಾಳಲಿ ಕರದಿಡಿಯ ನಡುವಿನ ತರುಣಿಯೆ ನಿನ್ನ ರತಿಸುಖಗಳನ್ನು ಬಿಟ್ಟು ಹ್ಯಾಗೆ ಪೋಗಲೆ ರಮಣಿ ಅರಿಕುಲಾಭರಣಿ-

ಪುಂಡರೀಕಾಕ್ಷಿ : ಪಿನಾಕ ಶಾಸನಸುತ ಭಾವಗೋಕುಲ ಪತಿಸುತ ಮೀನಕೇತನನಂತೆ ಪ್ರಕಾಶಿಸುವ ಹೇ ಪ್ರಾಣಕಾಂತ ಪ್ರದ್ಯುಮ್ನ ಕೇಳಿವಿಲಾಸದ ದುಃಖವು ನನಗೂ ನಿನ್ನಂತೆಯೆ ಇರುವುದು. ಆದರೂ ಅಸಮ ಸಾಹಸವುಳ್ಳ ನೀನು ಕುಸುಮಗಂಧಿಯಾದ ಧರುಣಿ ಮೋಹಿನಿಯನ್ನು ಪರಿಣಯವಾಗಿ ಬರುವವರೆವಿಗೂ ಅಶನವಿಲ್ಲದೆ ವ್ಯಸನದಿಂದಲಿ ಮೊಸಮೊಸೆಯುವ ಅಗ್ನಿಗೆ ಸಿಲ್ಕಿ ನಿನ್ನ ನಿರೀಕ್ಷಣೆಯಲ್ಲಿ ಇರುವೆನು ಪೋಗಿ ಬಾರಾ ರಮಣ ರತಿಗುಣಾಭರಣ –

ಕರಿರಾಜ : ಭಲಾ ಲಲನೆಯರೊಳಗೆ ಕುಲಶಿರೋಮಣಿಯಾದ ಕಲಕೀರ ಮಣಿಯಂತೆ ನುಡಿಯುವ ಚೆಲುವ ಚಕೋರಾಕ್ಷಿಯೇ ಕೇಳು. ಪುರಹರನ ದಯದಿಂದ ನಾನು ಪರಿಣಯಕ್ಕಾಗಿ ಪೋಗಿ ಬರುವೆನು. ಅರಿಯದವಳಂತೆ ನೀನು ದುರುಳ ದನುಜೆಯ ಬಳಿ ಸೊರಗಿ ನಿದ್ರಿಸುವಂತೆ ಮಲಗಿರುವಂಥವಳಾಗು. ನಾನು ಪೋಗಿ ತ್ವರಿತದಿಂದಲಿ ಬರುವೆನೆ ನಾರಿ ನವಮೋಹನಕಾರಿ –

ದರುವು

ಕೇಳೆ ಪುಂಡರಿಕಾಕ್ಷಿ – ಏಳೇ ಬೆಳಗಾಯ್ತು
ಆಲಸ್ಯವ್ಯಾತಕ್ಕೆ – ಅಡಿಗೆ ಮಾಡಮ್ಮ॥

ತೊಂಡನೂರಿ : ಅಮ್ಮಾ ಮಗಳೆ. ನಿಶಾಚರ ಕುಲಶಿರೋಮಣಿಯಾದ ಪುಂಡರೀಕಾಕ್ಷಿಯೆ ಕೇಳು. ಪುಷ್ಕರನು ಉದ್ಭವಿಸುವ ಅನಿತರೊಳು ಎದ್ದು ಅತಿ ಜಾಗ್ರತೆಯಿಂದ ನಮ್ಮ ಮಂದಿರಕ್ಕೆ ಬಂದು ಎನ್ನ ತಮ್ಮನಿಗೆ ವಂಚನೆಯನ್ನು ಮಾಡಿ ನೀನು ಕೂಡಿರುವ ವಿಟನನ್ನು ಕೊಂದು ಇದ್ದೇನೆ. ಅತಿ ಜಾಗ್ರತೆಯಿಂದ ನೀನು ಆಲಸ್ಯ ಮಾಡದೆ ಅವನ ತನುವನ್ನೆಲ್ಲಾ ಸೀಳಿ ಬಗೆ ಬಗೆಯ ಶಾಖಪಾಕಗಳಿಂದ ಅಡಿಗೆಯನ್ನು ಮಾಡುವಂಥವಳಾಗಮ್ಮ ಮಗಳೇ ಮಲ್ಲಿಗೆ ಹರಳೆ-

ದರುವು

ಖಂಡ ಖಂಡವು ಕೊಯ್ದು ಕೆಂಡಾದಿ ಸುಟ್ಟು
ಗಂಡಾ ಬೊಮ್ಮಣ್ಣನಿಗೆ ಉಣಲಿಕ್ಕೆ ಮಗಳೇ॥

ತೊಂಡನೂರಿ : ಅಮ್ಮಾ ಮಗಳೆ. ಬಲು ಪರಾಕ್ರಮನೆಂದು ನಮ್ಮ ಆಲಯಕ್ಕೆ ಬಂದು ಇರುವ ಸುಂದರಾಂಗನು ಎಂಬ ಕರಿಯಭಂಟನ ಖಂಡ ಖಂಡಗಳನ್ನು ಕತ್ತರಿಸಿ ಬಹುವಿಧದಿ ಕೆಂಡಗಳಲ್ಲಿ ಸುಟ್ಟು ಅವನ ಗುಂಡಿಗೆಯನ್ನು ಕೊಯ್ದು ನಿನ್ನ ಗಂಡ ಬೊಮ್ಮಣ್ಣನಿಗೆ ಉಣಲಿಕ್ಕೆ ಇಡುವಂಥವಳಾಗಮ್ಮ ಮಗಳೇ ಮಲ್ಲಿಗೆ ಹರಳೆ-

ಪುಂಡರೀಕಾಕ್ಷಿ : ಅಮ್ಮಾ ತಾಯೆ. ನಿನ್ನ ಮನಸ್ಸಿಗೆ ಬಂದಂತೆ ಮದ್ಯಪಾನವನ್ನೂ ಮಾಡಿ ದುರುಳತನದಿಂದ ಮನುಜನಾದವನನ್ನೂ ಬಿಟ್ಟು ಎನ್ನ ಪ್ರಾಣವಲ್ಲಭನಾದ ಬೊಮ್ಮನನ್ನು ಕೊಂದು ಇದ್ದೀಯ. ಮಂದಮತಿಯಿಂದ ನಿನ್ನ ಮನಸ್ಸಿಗೆ ಬಂದಂತೆ ಮಾತನಾಡುತ್ತಾ ಇದ್ದಿ ಆದರೆ ಶೀಘ್ರದಿಂದಲಿ ಎದ್ದು ನೋಡುವಂಥವಳಾಗಮ್ಮ ತಾಯಿ –

ತೊಂಡನೂರಿ : ಆಹಾ ಕೊಂದೆನಲ್ಲಪ್ಪಾ ತಮ್ಮಾ. ದುಷ್ಠ ಮನುಜನೆಂದು ಅರಿಯದೆ ಭ್ರಷ್ಠತನದಿಂದ ಎನ್ನ ಒಡಹುಟ್ಟಿದ ಅನುಜನೆಂದು ತಿಳಿಯದೆ ನಿನ್ನ ದೇಹವನ್ನು ನಷ್ಠಪಡಿಸಿ ಕಷ್ಠಕ್ಕೆ ಗುರಿ ಮಾಡಿದೆನೇನೋ ತಮ್ಮಾ ಅನುಜ –

ದರುವು

ಮಡಿದಾನೇ ಎನ್ನ ತಮ್ಮಾನು ಮುಂದೇನುಗತಿ
ಕೆಡುವದಾಯಿತೆ ನಾನು॥

ಕಡು ಪಾಪಿ ಸುತೆಯೊಳು ಮಾಡಿದ ಮೋಸಕೆ
ನೋಡಿ ಸೈರಿಸಲಾರೆನೋ ಅನುಜನೆ ಈಗ
ನುಡಿಯದೆ ಮಲಗಿದೇನೋ॥

ತೊಂಡನೂರಿ : ಅಪ್ಪಾ ತಮ್ಮಾ. ಈ ಮಂಡಲದಿ ದಂಢಧರನಾದ ಹಂತಕನಿಗಿಮ್ಮಿಗಲಾದ ಚಂಡಪರಾಕ್ರಮದಿ ಉದ್ದಂಡರೆನಿಸಿಕೊಂಡು ಇದ್ದು ಈಗ ಪುಂಡು ಮನುಜನಿಂದ ಕಡು ಪಾಪಿಯಾದ ಪುಂಡರೀಕಾಕ್ಷಿಯು ಮೋಸ ಕೃತ್ಯಗಳು ಮಾಡಿ ಹಿಂಡುಗಳಿಗೆ ಮಿಂಡನಾದ ನಿನ್ನನ್ನು ಎನ್ನ ಕೈಗಳಿಂದ ಕೊಲ್ಲಿಸಿದಳೆ. ಹೇ ಅನುಜ ಇನ್ನೇನುಗತಿ ಮಾಡಲಿ. ತಮ್ಮನೇ ಬಾರೆಂದು ಇನ್ನಾರನ್ನು ಕರೆಯಲಿ. ಪನ್ನಗ ಭೂಷಣನು ನಮಗೆ ಹಗೆಯಾದನೆ. ಎನ್ನ ಒಡಲೊಳಗೆ ಪುಟ್ಟಿದ ಕನ್ನೆಯನ್ನು ಈಗಲೀಗಲೇ ನುಂಗಿದರೆ ದೋಷವು ಬರುವುದು. ಆಹಾ ಆದರೂ ಚಿಂತೆ ಇಲ್ಲ ಮುಂದಿನ ಯೋಚನೆಯನ್ನು ಯೋಚಿಸಬೇಕು. ಚಿಂತೆ ಮಾಡಲು ಪ್ರಯೋಜನವಿಲ್ಲಾ ಮುಂದೇನುಗತಿ ಆಗುವುದೋ ಆಗಲಿ –

ದರುವು

ಕುಟಿಲೆ ಪುಂಡರೀಕಾಕ್ಷಿ ಕಪಟಕೃತ್ಯವ ಮಾಡಿ
ಪಟು ಪರಾಕ್ರಮಿ ಎನ್ನ ತಮ್ಮಾನ ಕೊಲ್ಲಿಸಿದೆ ॥

ತೊಂಡನೂರಿ : ಕೇಳುತ್ತೀಯೇನೇ ಪುಂಡರೀಕಾಕ್ಷಿ, ನನ್ನ ಒಡಲೊಳಗೆ ಪುಟ್ಟಿದ ಮಗಳು ನೀನಾಗಿ ನನಗೆ ವಂಚನೆಯನ್ನು ಮಾಡಿ ಕುಟಿಲ ಕಪಟಗಳಿಂದ ಮನುಜನಾದವನನ್ನು ತಪ್ಪಿಸಿ ಎನ್ನ ಒಡಹುಟ್ಟಿದ ಅನುಜನನ್ನು ಕೊಲ್ಲಿಸಿದೇನೆ ಮಗಳೆ-

ದರುವು

ಕಡಲಾಜಾನನೆ ಕೇಳು ತಡೆಯಾ ಜೈಸುವೆ ನಾಳೆ
ಪೊಡವಿಪತಿಯ ಕೊಲ್ವೆ ಸಡಗರದಿಂದಾ॥

ತೊಂಡನೂರಿ : ಕೇಳುತ್ತೀಯೇನೆ ತರಳೆ. ಈ ಇಳೆಯ ವಲ್ಲಭನಾದ ಕರಿರಾಜನ ಹರಣವನ್ನು ತಪ್ಪಿಸಿ ಕಳುಹಿಸಿದ್ದೀಯಾ ಆದಕಾರಣ ಈ ಇಳೆಯಾದಿ ನಾಲ್ಕು ಭುವನಂಗಳೆಲ್ಲಾ ಸಂಚರಿಸಿ ಅವನನ್ನು ಹಿಡಿದು ಭಕ್ಷಿಸದೇ ಬಿಟ್ಟಿದ್ದೇ ಆದರೆ ನಾನು ಪೊತ್ತಿರತಕ್ಕಂಥ ಎರಡು ಕುಚಗಳಲ್ಲವಮ್ಮಾ ತರಳೆ –

ದರುವು

ಭುವನತ್ರಯದೊಳಿರಲು ಆವನಿಪನ ರಕ್ತವನು
ಸವಿಯಾದಿದ್ದರೆ ಸಾಂಬಶಿವನಾಣೇ ಎನಗೆ॥

ತೊಂಡನೂರಿ : ಕೇಳುತ್ತೀಯೇನೆ ಮಗಳೆ. ಈ ಸೃಷ್ಠಿಯೋಳ್ ದುಷ್ಠ ರಕ್ಕಸರನ್ನು ಸಂಹರಿಸಿ ಪೋದವನ ಅಷ್ಠದಿಕ್ಪತಿಯಾದ ಅಂತಕನಪುರದಲ್ಲಿ ಬಚ್ಚಿಟ್ಟಿದ್ದಾಗ್ಯೂ ಸೃಷ್ಠಿಗಾಧೀಶನಾದ ಕರಿರಾಜನನ್ನು ಹಿಡಿದು ಎನ್ನ ಕರಾಗ್ರಗಳಿಂದ ಅವನ ಹೊಟ್ಟೆಯನ್ನು ಬಗೆದು ಕೊಲ್ಲದೆ ಇದ್ದರೆ ಈ ಸೃಷ್ಠಿಯನ್ನು ಪರಿಪಾಲಿಸುವ ಶಂಕರನ ಪಾದಸಾಕ್ಷಿಯಾಗಿ ಬಿಡುವುದಿಲ್ಲವೇ ಮಗಳೆ

 

ದ್ವಿಪದೆ ಆನಂದಭೈರವಿ

ಅಷ್ಠರೊಳು ತೊಂಡನೂರಿ ಅಧಿಕ ಚಿಂತೆಯಲಿ
ಕೆಟ್ಟಿತೋ ಕಾರ‌್ಯ ಕುಟಿಲೆ ಮಗಳಿಂದಕಟಕಟ
ನಿಟಿಲಾಕ್ಷ ಕಾಲಕಂಧರ ಎನ್ನ ಕಡೆ ಹಾಯ್ಸಿಂದು
ಕುಟಿಲೆ ನಿಜದೇಹವನು ಮಟುಮಾಯವನು ಮಾಡಿ
ಕಪಟದಿಂ ಭುವನ ಮೋಹಿಸುವಂತೆ ಸುಂದರಿಯು
ತಾನಾಗಿ ಕಡು ಸೊಬಗಿನಿಂದ ವನಿತೆ ದಿವ್ಯಾಭರಣ
ಭೂಷಿತವನ್ನು ಇಟ್ಟೆ ಕಡುರಮ್ಯತರವಾದ ಕಂಕಣ
ಉರುಳು ಗೆಜ್ಜೆ ಕಾಲಲ್ಲಿ ಕಿರುಪಿಲ್ಲಿ ವೀರಮುದ್ರಿಕೆಯನ್ನು
ವಿನಯದಿಂದಿರಿಸಿ ವನಿತೆ ವಜ್ರಾಣಿ
ಸೀರೆಯನ್ನು ಒಪ್ಪದಿಂದುಟ್ಟು ಸಣ್ಣ ನಡುವಿಗೆ ತಕ್ಕ
ಚಿನ್ನದೊಡ್ಯಾಣವನ್ನು ಚನ್ನೆ ತಾನಿಟ್ಟು ಕನ್ಯೆ ಕಾಮಿನೀ
ತನಗೆ ಎಣೆ ಇಲ್ಲವೆಂದು ವನಿತೆ ಮಯೋರ‌್ವಲ್ಲಿ ತಾ
ಕಲ್ಪವಲ್ಲಿಯೋ ಪಲ್ಲವಾಧರಿ ಪುಷ್ಪ ಮಾರ್ಗಣ
ದಂತೆ ಸುಂದರಿಯು ಪೃಥ್ವೀಪತಿ ಮರೆತ
ಖಡ್ಗವನ್ನು ಶಿಶುವಂತೆ ಮಾಯದಿಂ ಪೊರೆಯುತ
ತೊಟ್ಟಿಲು ಮಾಡಿ ವನಿತೆ ಬಾಣಂತಿ ವೇಷವನು
ಕಡು ದುಃಖದಿಂದ ಪೊಡವಿ ಪತಿಯನ್ನು
ಹುಡುಕುತ್ತ ತಡಕುತ್ತ ಬಂದಳಗ್ರಜಪುರಿ
ಫಣಿಮಾಲನಾಜ್ಞೆಯಿಂದ ಸುಂದರಿಯು ॥

ದರುವು

ಎಲ್ಲಿ ಪೋದನಮ್ಮಾ ನಲ್ಲಾ ಪಲ್ಲಾವಾಧರಿ ತೋರೆ ॥
ನಿಲ್ಲದೆನ್ನ ಮನಸು ಪುಲ್ಲಾಲೋಚನೆ ಕೇಳೇ॥

ಕರಿರಾಜ : ಇದು ಏನು ಆಶ್ಚರ್ಯ. ಹಳೆಯಬೀಡಿನ ಬಳ್ಳಾಲರಾಯನ ಪುತ್ರಿ ಧರಣಿ ಮೋಹಿನಿಯನ್ನು ಪರಿಣಯವಾಗಬೇಕೆಂದು ತಾಯಿ ಮಾತನ್ನು ಮೀರಿ ಬರುವ ಮಾರ್ಗದಲ್ಲಿ ತೊಂಡನೂರಿಯ ಮಗಳಾದ ಪುಂಡರೀಕಾಕ್ಷಿಯು ನಾ ಒಲ್ಲೆನೆಂದರೆ ಬಿಡದೆ ಬಲವಂತದಿ ವರಿಸಿದ್ದಾಯಿತು. ಸಂಗತಿಗಳು ತಿಳಿದು ದುಷ್ಠದಾನವಿಯಾದ ತೊಂಡನೂರಿಯೆಂಬ ಭ್ರಷ್ಠ ರಕ್ಕಸಿಯು ಇಲ್ಲದ ಮರುಳು ಮಾತುಗಳು ಹೇಳಿ ತರಳೆಯ ಮರ್ಮವನ್ನು ತಿಳಿದು, ದುರುಳೆಯು ಎನ್ನನ್ನು ಕೊಲ್ಲಲು ಕಾಲಿಗೆ ಗುರುತು ಕಟ್ಟಿಸಿದಳು. ತರುಣಿ ಪುಂಡರೀಕಾಕ್ಷಿ ಇದರ ಮರ್ಮವನ್ನು ತಿಳಿದು ರಕ್ಕಸನಾದ ಬೊಮ್ಮನ ಕಾಲಿಗೆ ಕಟ್ಟಿ ಮಲಗಲು ಚಂಡದಾನವಿಯು ಅರ್ಧರಾತ್ರಿಯೊಳೆದ್ದು ಗುರುತನ್ನು ನೋಡಿ ತನ್ನ ತಮ್ಮನೆಂದರಿಯದೆ ಬೊಮ್ಮನನ್ನು ಕೊಂದಳು. ಆ ಸಮಯದಿ ಮಾನಿನಿಯು ಎನ್ನನ್ನು ಎಬ್ಬಿಸಿ ಈ ಪರಿ ಮಾಯವನ್ನು ತೋರಿಸಿ ಕೋಪದಿಂದಲಿ ರಕ್ಕಸಿಯು ನಿನ್ನನ್ನು ಕೊಲ್ಲುವಳು ಪೋಗೆಂದು ನುಡಿಯಲು ಆ ಪುಂಡುದಾನವಿಯನ್ನು ಆಗಲೇ ತುಂಡು ತುಂಡುಗಳನ್ನು ಮಾಡುವೆನೆಂದರೆ ಖಂಡಿತದಿಂದ ಬೇಡವೆಂದು ಧರಣಿ ಮೋಹಿನಿಯನ್ನು ಪರಿಣಯವಾಗಿ ಬಾರೆಂದು ನುಡಿಯಲು ನಾ ಬಂದೆನು. ದಾನವಿಯು ಬೆಂಬತ್ತಿ ಆರ್ಭಟಿಸಿಕೊಂಡು ಬರುವುದನ್ನು ನೋಡಿ ಮಧ್ಯ ದಾರಿಯಲ್ಲಿ ನಾ ಬೆದರಿ ಖಡ್ಗವನ್ನು ಬಿಟ್ಟು ಬಂದದ್ದಾಯಿತು. ಈಗ ನೋಡಿದರೆ ಕೈಯಲ್ಲಿ ಖಡ್ಗವೂ ಇಲ್ಲ ಪರಿವಾರವೂ ಇಲ್ಲ. ಇಲ್ಲಿ ನೋಡಿದರೆ ಶಿಶುಕಲ್ಪನೆಯನ್ನು ಮಾಡಿ ಬಾಣಂತಿಯಾಗಿ ಬಂದಿರುವಳು. ನಮ್ಮ ತಾಯಿ ಹೇಳಿದ ನೀತಿಗಳು ಸ್ವಪ್ನದ ಫಲಗಳು ನೋಡಿದರೆ ಸರಿಯಾಗಿ ಕಾಣಬರುತ್ತಾ ಇದೆ. ಇನ್ನೇನು ಗತಿ ಮಾಡಲಿ, ದೈವಗತಿ ಇದ್ದಂತೆ ಆಗಲಿ, ಧರಣಿ ಮೋಹಿನಿಯನ್ನು ಪರಿಣಯವಾಗಲು ಹಳೇಬೀಡಿಗೆ ಹೊರಡುವುದೇ ಉತ್ತಮ –

ಬಾಣಂತಿ ದರುವು

ಎಲ್ಲಿ ಪೋಗುವೆ ಅಗಲಿ ಬಾರೋ ರಮಣ
ನಿಲ್ಲೆಲವೊ ಸುಗುಣ ॥

ಕನ್ಯಾ ಪ್ರಾಯದೊಳಗೆ ತನಗೆ ಕಂದರಾದರೆಂದು ಕಾಮ
ಕಲಿತನಾಗಿ ಮನಸಿನೊಳಗೆ ಚಪಲವ್ಯಾಕೊ ನಿಪುಣ ನಿಲ್ಲೋ

ತೊಂಡನೂರಿ : ಹೇ ನಲ್ಲಾ. ಸಾಗರ ಸುತನಾದ ಚಂದ್ರಂಗೆ ಪ್ರಿಯ ಜಾತೆ ರತಿಪತಿಯಾದ ಮನ್ಮಥನಂತೆ ಪ್ರಜ್ವಲಿಪ ಪ್ರಾಣವಲ್ಲಭನಾದ ರಾಯನೆ ಕೇಳು – ಮೂಜಗದಿ ಕಂಗಳಿಗೆ ಪ್ರಿಯವಾಗಿ ಮದುವೆಯನ್ನಾದ ಕುಲಾಂಗನೆಯನ್ನು ಬಿಟ್ಟು ಪರಾಂಗನೆಯರ ಕಾಮಿತನಾಗಿ ಪೋಗುವುದೇನು ಚಪಲಚಿತ್ತವು ಏಕೋ ನಲ್ಲಾ ನಿನಗಿದು ಸಲ್ಲಾ-

ದರುವು

ಮೆಚ್ಚಿ ಚಪಲನೇತ್ರಿಯರ ಮೋಹ ನಿನಗೆ ತಲೆಯೇರಿ
ನೆಚ್ಚಿದವಳ ಕೂಡದೀಪರಿ ರಚ್ಚೆಗಿಕ್ಕುವ ರಮಣ ತರವೆ ॥

ತೊಂಡನೂರಿ : ಅಯ್ಯ ರಾಜ. ಮತ್ಸ್ಯ ಕಂಠಿಯರಾದ ಸ್ತ್ರೀಯರ ಮೋಹ ಕಾತುರನಾಗಿ ಮನಸ್ಸಿನಲ್ಲಿ ಚಿತ್ತ ಚಂಚಲದಿಂದ ಚಿತ್ತಜನ ಮಡದಿಗಿಮ್ಮಿಗಿಲಾಗಿ ಇಚ್ಛೆ ಬಂದ ಸತಿಯನ್ನು ಕೂಡದೆ ಈ ಪರಿಯ ರಚ್ಚೆಗಿಕ್ಕುವರೇನೋ ರಮಣಾ ರತಿಗುಣಾಭರಣಾ-

ದರುವು

ಕರುಣವಿರಿಸೋ ಕಂದನ ಮ್ಯಾಲೆ ಮರುಗಲ್ಯಾಕೆ
ಬಳ್ಳಾಪುರದ ಉರಗ ಭೂಷಣ ನಿನ್ನ ಪೋಷಿಪ
ಸುಗುಣ ಸುಮ್ಮನೆ ಕಲಹವೇಕೆ ॥

ತೊಂಡನೂರಿ : ಹೇ ನಲ್ಲಾ. ನಿಪುಣ ಗುಣನೀತಿ ಸಂಪನ್ನನೆಂದೆಣಿಪ ಹೇ ರಾಜಾ, ನಿನ್ನ
ಒಡಲಿನಲ್ಲಿ ಪುಟ್ಟಿದಂಥ ಕಂದಯ್ಯನ ಕಣ್ಣೆತ್ತಿ ನೋಡದೆ ದುರುಳತನದಿಂದ ಪರರಂತೆ ನೋಡುತ್ತಾ ಇದ್ದಿ. ಆದೆ ನಿನ್ನ ಕುಲ ತರುಣಿಯಾದವಳನ್ನು ನೀನು ಕೂಡಿ ಕರುಣವಿಟ್ಟಿದ್ದೇ ಆದರೆ ಈ ಪೊಡವಿಯನ್ನು ಪರಿಪಾಲಿಸುವೆ. ಉರಗ ಭೂಷಣನು ನಿನ್ನ ಪೋಷಿಸುವನಯ್ಯ ಭೂಪ ಕೀರ್ತಿ ಕಲಾಪ –

ದರುವು

ಬಿಡು ಬಿಡು ಸೆರಗ ದುರುಳ ದನುಜೆ ನಿನ್ನ
ಶಿರವ ಕಡಿವೆ ನಡಿಯೆ ನೀ ನಡಿಯೆ
ಕುಟಿಲ ದನುಜೆ ನಿನ್ನ ಕಪಟವೆಲ್ಲವು ಬಲ್ಲೆ
ನಟಿಸಬ್ಯಾಡ ನಡಿಯೆ ನೀ ನಡಿಯೆ ॥

ಕರಿರಾಜ : ದೂರನಿಲ್ಲುವಂಥವಳಾಗೆ ದುರುಳ ರಕ್ಕಸಿ. ದುರುಳತನದಿಂದ ಈ ಪರಿಯ ಮರುಳು ವೇಷವ ತಾಳಿ ರಮಣಿಯಲ್ಲವೆ ನೀನು ರಕ್ಕಸಿಯು. ತರುಣಿಯಾಕಾರದೊಳು ಬಂದು ಮನದಿ ಮತ್ಸರದಿಂದ ಎನ್ನ ಶರಗನ್ನು ಪಿಡಿದು ಬಾಧಿಸುತ್ತಾ ಇದ್ದೀಯ. ನೀನು ಬಂದ ಮಾರ್ಗವು ಪಿಡಿದು ಪೋದರೆ ಸರಿ ಇಲ್ಲವಾದರೆ ಎನ್ನ ಚರಣದುಂಗುಷ್ಠದಿಂದ ಒದ್ದು ನಿನ್ನ ಹರಣವನ್ನು ತೆಗೆಯುತ್ತೇನೆ ದೂರ ನಿಂತು ಮಾತನಾಡುವಂಥವಳಾಗೆ ದುರುಳ ದನುಜೆ –

ದರುವು

ಕುಟಿಲತನದಿ ಸಂಘಟಿಸಿದ ಶಿಶುವ
ನಟಿಸಬೇಡ ನಲ್ಲೆ ನಾ ಬಲ್ಲೆ ॥
ಕಪಟಿ ನಿನ್ನಯ ಚತುರೋಕ್ತಿಯ ಬಲ್ಲೆನೆ
ನಿಟಿಲಾಂಭಕನಾಣೆ……

ಕರಿರಾಜ : ಹೇ ನಾರಿ. ಕಪಟ ಕೃತ್ಯಂಗಳಿಂದ ಶಿಶು ಕಲ್ಪನೆಯ ಮಾಡಿ ಕುಟಿಲತನದಿಂದ ಬಗೆ ಬಗೆಯ ಯುಕ್ತಿಗಳಿಂದ ನಟಿಸಿ ಎನ್ನೊಳು ನೀನು ನುಡಿಯುವಂಥ ಕಪಟ ವಚನಕ್ಕೆ ನಾನು ಬೆರಗಾಗುವನಲ್ಲಾ. ಈ ಕ್ಷಣ ಮಾತ್ರದಲ್ಲಿ ಎನ್ನ ಶರಗನ್ನು ಬಿಟ್ಟು ಹೋದರೆ ಸರಿ. ಇಲ್ಲವಾದರೆ ಈ ಧಾತ್ರಿಯೋಳ್ ನಿಟಿಲಾಕ್ಷನಾದ ಶಂಕರನಿಗೆ ನಿನ್ನ ಬಲಿ ಇಕ್ಕುವೆನು ಹೊರಟು ಹೋಗುವಂಥವಳಾಗೆ ಮೂಳ ರಕ್ಕಸಿ –

ಬಾಣಂತಿ ದರುವು

ಮನಸು ಬಾರದೆ ಮಾರಸುಂದರ ಪ್ರಿಯಾ
ಹ್ಯಾಂಗಿರಲಯ್ಯ ನಾ ಹ್ಯಾಂಗಿರಲಯ್ಯ ॥

ಕೂಡಿದವಳ ಕೈಯ್ಯ ಪಿಡಿಯಾದೆ ಪೋದರೆ
ಆಡಿಕೊಂಬುವರಯ್ಯ – ಲೋಕದಿ ನಲ್ಲಾ
ಹ್ಯಾಂಗಿರಲಯ್ಯಾ ॥

ತೊಂಡನೂರಿ : ಮನ್ಮಥ ಸಮರೂಪನಾದ ಹೇ ರಾಜಾ. ಈ ಲೋಕದೊಳು ಪತಿವ್ರತಾ ಶಿರೋಮಣಿಯಾದ ಸತಿ ಎಂದೆನಿಸಿ ನಿನ್ನ ಕೈಪಿಡಿದಂಥ ಕಾಮಿನಿಯನ್ನು ಬಿಟ್ಟು ಅಕ್ಕರವಿಲ್ಲದೆ ಎನ್ನ ಜರಿದು ಪೋಗುವದುಚಿತವಲ್ಲವೋ ನಲ್ಲಾ ನಿನಗಿದು ಸಲ್ಲಾ –

ದರುವು

ಸಿಕ್ಕ ಸೂಳೆಯರ ಬಾಳಿಗೆ ಸಂಸಾರದೊಳ್
ಅಕ್ಕರ ರಹಿತನಾಗುವರೇನೋ ನಲ್ಲಾ ಹ್ಯಾಂಗಿರಲಯ್ಯಾ ॥

ತೊಂಡನೂರಿ : ಹೇ ನಲ್ಲ. ಸೊಕ್ಕು ಜವ್ವನೆಯಾದ ತನ್ನ ಸತಿಯನ್ನು ಬಿಟ್ಟು ಸಿಕ್ಕ ಸೂಳೆಯರ ಬಲೆಗೆ ಸಿಲ್ಕಿ ತನ್ನ ಸಂಸಾರದೋಳ್ ಅಕ್ಕರ ರಹಿತವಾಗಿ ಎನ್ನ ರಕ್ಕಸಿ ಎಂದು ಬಿಟ್ಟು ಪೋಗುವುದು ಹಿತವೇನೋ ನಲ್ಲ ನಿನಗಿದು ಸಲ್ಲಾ –

ದರುವು

ಎನ್ನ ಪಾಲಿಸುವರಿನ್ನಾರಯ್ಯಾ ಲೋಕದಿ
ಕನ್ನೇಯಾರಿಗೆ ಪತಿಯಲ್ಲದೇ ನಲ್ಲಾ
ಹ್ಯಾಂಗಿರಲಯ್ಯಾ – ನಾ ಹ್ಯಾಂಗಿರಲಯ್ಯಾ ॥

ತೊಂಡನೂರಿ : ಹೇ ಕಾಂತ. ಚಿತ್ತಜ ತಾಪದಿ ನಿಮ್ಮ ಚಿತ್ತ ಚಂಚಲವಾಗಿ ಎನ್ನೊಡನೆ ಕಲಹವನ್ನು ಬೆಳಸಿ ಕರುಣವಿಲ್ಲದೆ ನಿನಗೆ ಉದಿಸಿದ ಕಂದನನ್ನು ಬಿಟ್ಟು ಪೋದರೆ ಕರುಣಾ ಸಾಗರನಾದ ಶಂಕರನು ಎಷ್ಠು ಮಾತ್ರಕ್ಕೂ ಮೆಚ್ಚನಯ್ಯ ರಾಜಾ ಮಾರ್ತಾಂಡತೇಜಾ ॥

 

(ಗೌಡ ಪ್ರಭುಗಳು ಬರುವುದು)

ಅಟತಾಳ

ಚಂದ್ರಶೇಖರ ಶಂಭೋ ಚಂದ್ರಶೇಖರ ಶಂಭೊ
ಚಂದ್ರಶೇಖರ ಶಂಭೋ ಲಂಭೋದರ ಹರಾ ॥

ಇಕ್ಷುಶರನಾ ಸುಟ್ಟ ದಕ್ಷ ಸಂಹಾರಿ ಶಂಭೋ
ರಕ್ಷಿಸೋ ಗರಳ ಭಕ್ಷಣ ಗೌರಿ ಶಂಭೋ ॥

ಗೌಡಪ್ರಭು : ಅಯ್ಯ ಸೇವಕ, ಈಗ ಬಂದವರು ಧಾರೆಂದು ಕೇಳುವಂಥವನಾಗುತ್ತಾ ಇದ್ದಿ ಆದರೆ ಪೇಳುತ್ತೇನೆ ಚಿತ್ತವಿಟ್ಟು ಕೇಳಯ್ಯ ಸೇವಕ. ಈ ಧರಾಮಂಡಲ ಮಧ್ಯದೋಳ್ ಮಹಾ ಶ್ರೇಷ್ಠದಿಂದೊಪ್ಪಲ್‌ಪಟ್ಟು  ಪಶ್ಚಿಮದೇಶದೊಳ್ ಸ್ವಚ್ಚತರಮಾದ ಮಹಿಷಾಸುರ ಪುರಕ್ಕೆ ಸಮೀಪದಲ್ಲಿ ಒಪ್ಪಿರುವ ಮಲ್ಲಿಗನೂರು ಗ್ರಾಮದಲ್ಲಿ ಸಲ್ಲಲಿತ ಸೌಂದರ್ಯ ಗುಣಸಂಪನ್ನರಾಗಿ ಮಲ್ಲಿಕಾರ್ಜುನನಾದ ಶಂಕರನ ಕೃಪೆಯಿಂದ ಈ ಮಹಿಯೊಳ್ ಉದಿಸಿರುವ ಗೌಡ ಪ್ರಭುಗಳು ನಾವೇ ಅಲ್ಲವೇನಯ್ಯ ಸಾರಥಿ. ಅಯ್ಯ ಸೇವಕ ನಾವು ಯಾರು ಯಾರು ಬಂದು ಇದ್ದೀರಿ ಎಂದು ಕೇಳುತ್ತೀಯ. ಪೇಳುತ್ತೇನೆ ಕೇಳಯ್ಯ ಸಾರಥಿ, ಚಿಕ್ಕಶಾಂತೇಗೌಡ, ದೊಡ್ಡ ಶಾಂತೇಗೌಡ, ಪುಟ್ಟಶಾಂತೇಗೌಡ, ಪುಟ್ಟ ವೀರೇಗೌಡ, ದೊಡ್ಡವೀರೇಗೌಡ, ಶಿದ್ದವೀರೇಗೌಡ, ಪುಟ್ಟಲಿಂಗೇಗೌಡರೆಂಬ ನಾವು ಏಳು ಮಂದಿ ಗೌಡರು ಬಂದು ಇದ್ದೇವಯ್ಯ ಸಾರಥಿ-

ಸಾರಥಿ : ಹಾಗಾದರೆ ಈ ಸಭಾಸ್ಥಾನಕ್ಕೆ ಏನು ಕಾರಣ ಬಾಹೋಣವಾಯಿತಯ್ಯ ಗೌಡ ಪ್ರಭುಗಳಿರಾ-

ಗೌಡರ : ಅಯ್ಯ ಸೇವಕ ಇಲ್ಲಿ ಅಘೋರಮಾದ ತಾಳ ಮೃದಂಗಗಳ ಶಬ್ದಗಳು ಆಗುವಂಥದ್ದು ಕೇಳಿ ಬಂದು ಇದ್ದೇವಯ್ಯ ಸೇವಕ –

ಸಾರಥಿ : ಹಾಗಾದರೆ ಈ ಸ್ಥಳದಲ್ಲಿ ಕುಳಿತುಕೊಳ್ಳಬಹುದಯ್ಯ ಗೌಡ ಪ್ರಭುಗಳಿರಾ –

ಸಿದ್ಧವೀರೇಗೌಡ : ಎಲ್ಲ ಲೋಕಗಳನ್ನು ಪರಿಪಾಲಿಸುವ ಫುಲ್ಲ ಶಂಕರನಾದ ಮನ್ಮಥ ಪಿತನ ಪೋಷಣೆಯಲ್ಲಿರುವ ಮಲ್ಲಿಗನೂರು ಗ್ರಾಮಕ್ಕೆ ಪ್ರಭುವಾದ ಸಲ್ಲಲಿತ ಸೌಂದರ‌್ಯ ಗುಣ ಸಂಪನ್ನ ನಮ್ಮೆಲ್ಲರಿಗೂ ನಾಡ ಗೌಡರಾದ ಚಿಕ್ಕ ಶಾಂತೇಗೌಡರೆ ಕೇಳಿ. ಇಲ್ಲಿ ಶೃಂಗಾರವಾದ ಮಂಗಳಾಂಗಿಯಂತೊಪ್ಪುವ ಈ ಅಂಗನಾಮಣಿ ಯಾರೋ ಬಂಗಾರ ಛಾಯೆಯುಳ್ಳ ಈ ಕಂದನಾರೋ ಸಂಗೀತ ಸಲ್ಲಾಪಗಳಿಂದ ಈ ಅಂಗನೆಯು ದುಃಖಪಡುವ ಕಾರಣವೇನೋ ಗಂಗಾಧರನನ್ನು ಧ್ಯಾನಿಸುತ್ತಾ ನಾವುಗಳು ಪೋಗಿ ವಿಚಾರಿಸೋಣ ಬನ್ನಿರಯ್ಯಿ ಗೌಡ ಪ್ರಭುಗಳಿರಾ-

ಗೌಡರು : ಅಮ್ಮಾ ತಾಯೆ. ನಾರಿಯರೋಳ್ ಶಿರೋರನ್ನೆಯಾದ ವಾರಿಜಾಕ್ಷಿಯಂತೊಪ್ಪುವ ಜಾಣೆಯೆ ಕೇಳ್, ನೀನ್ಯಾರು ನಿನ್ನ ಗ್ರಾಮವಾವುದು ನಿನ್ನ ತಾಯಿತಂದೆಗಳಾರು ಮತ್ತು ಈ ಕಂದನಾರು ನೀನು ಗೋಳಾಡುವ ಕಾರಣವೇನು? ನಮ್ಮೊಡನೆ ವಿಸ್ತಾರವಾಗಿ ಪೇಳಬೇಕಮ್ಮಾ ತರುಣೀಮಣಿ-

ಬಾಣಂತಿ ದರುವು

ಧರ್ಮಗುಣಾಂಬುಧಿ ಧರ‌್ಮಪಾಲರೆ ಕೇಳಿ
ಪ್ರಾಣವಲ್ಲಭ ಎನ್ನ ಬಿಟ್ಟು ಪೋಗುವನೇ ಕೇಳಿ ॥
ಭೂ ತಳದಲ್ಲಿ ನೀವು ಸತ್ಯವಂತರು ಕೇಳಿ
ಮಾತು ಲಾಲಿಸಿ ಪ್ರಾಣನಾಥನ ಒಲಿಸೀ ॥

ತೊಂಡನೂರಿ : ಧರ್ಮ ಗುಣಾಂಬುಧಿ ಪರಿಶೀಲರಾದ ಹೇ ಗೌಡ ಪ್ರಭುಗಳಿರಾ ಕೇಳಿ. ಎನ್ನ ಪ್ರಾಣವಲ್ಲಭನಾದ ಕಾಂತನು ಎನ್ನ ಮೇಲಗಲಿ ಚಿತ್ತ ಚಂಚಲನಾಗಿ ಪೋಗುತ್ತಾ ಇದ್ದಾನೆ. ನೀವಾದರೂ ನಿರ್ಮಲಮತಿಯನ್ನೂ ಪೇಳಿರಯ್ಯ ಗೌಡ ಪ್ರಭುಗಳಿರಾ –

ದರುವು

ಇನ್ನೇನು ಗತಿ ಮುಂದೆ ಈ ಧಾತ್ರಿಯೊಳ್ ನಾನು
ಇರಿಸಬಾರದು ಪ್ರಾಣ ಇದ್ದು ಫಲವೇನು ಕೇಳಿ
ಹೆಣ್ಣು ಮಕ್ಕಳು ಪೆತ್ತ ಅಣ್ಣಗಳಿರಾ ಕೇಳಿ
ಸಮ್ಮತಿಯನು ಪೇಳಿ ಕೂಡೀಸಿರಯ್ಯ ಕೇಳಿ ॥

ತೊಂಡನೂರಿ : ಅಯ್ಯ ಪ್ರಭುಗಳಿರಾ. ಈ ಧಾತ್ರಿಯೋಳ್ ಕಲ್ಪವೃಕ್ಷಗಳಂತೆ ಪ್ರಜ್ವಲಿಪ ಕರುಣಮತಿಗಳುಳ್ಳ ಧರ‌್ಮಾತ್ಮಗಳಿರಾ ಕೇಳಿ. ಸೊಕ್ಕು ಜವ್ವನೆಯಾದ ತನ್ನ ಸತಿಯನ್ನು ಬಿಟ್ಟು ಅಕ್ಕರದಿ ಕಂಗಳಿಗೆ ಪ್ರಿಯವಾದ ಅಂಬುಜಾಕ್ಷಿಯರನ್ನು ಕೂಡಿ ತನ್ನ ಸತಿಯ ಹಂಬಲವನ್ನು ಬಿಟ್ಟು ಚಿತ್ತ ಚಂಚಲದಿಂದ ಇರುವ ಭೂಪತಿಗೆ ಬಿತ್ತರಿಸಿ ಬುದ್ಧಿಯನ್ನು ಪೇಳಿರಯ್ಯ ಗೌಡ ಪ್ರಭುಗಳಿರಾ-

ದರುವು

ಈ ಕ್ಷಿತಿಯೊಳ್ ಬಳ್ಳಾಪುರದ ಸೋಮೇಶನು
ರಕ್ಷಿಸುವನು ಎನ್ನ ದಕ್ಷ ಸಂಹಾರಾ ಕೇಳಿ ॥ಪ॥

ತೊಂಡನೂರಿ : ಅಯ್ಯ ಗೌಡಗಳಿರಾ. ಈ ಕ್ಷಿತಿಯನ್ನು ಪರಿಪಾಲಿಸುವ ದಕ್ಷ ಸಂಹಾರಕನಾದ ಫಾಲಾಕ್ಷ ರಕ್ಷಿಸುವನಾದ ಕಾರಣ ಇಕ್ಷುವಿನಂತೆ ಪ್ರಜ್ವಲಿಪ ಎನ್ನ ಪ್ರಾಣವಲ್ಲಭನಿಗೆ ಕರುಣ ಕಟಾಕ್ಷವಿಟ್ಟು ಕೂಡೆಂದು ಸುಕ್ಷೇಮದಿಂದ ಸುಗುಣಮತಿಯನ್ನು ಪೇಳಿರಯ್ಯ ಸುಗುಣ ಪ್ರಭುಗಳಿರಾ –

ಗೌಡರು : ಅಯ್ಯ ರಾಜ ನೃಪಕುಲಶಿರೋಮಣಿ  ಎಂದೆನಿಪ ಹೇ ರಾಜ ಶ್ರೇಷ್ಠನೆ ಕೇಳು. ನೀನು ಧಾರು ನಿನ್ನ ಪಟ್ಟಣ ಧಾವುದು ಮತ್ತು ನಿನ್ನ ಪೆತ್ತ ತಂದೆ ತಾಯಿಗಳ ಪೆಸರೇನು ನಿನ್ನ ದೇಶವನ್ನು ಅಗಲಿ ಏನು ನಿಮಿತ್ತಾರ್ಥವಾಗಿ ಬಂದು ಇದ್ದಿ ಮತ್ತು ಈ ವನಿತಾಮಣಿ ಪರಿಪರಿ ವಿಧದಿಂದ ಫಲಬಗೆಯ ನೆನೆದು ಹಲುಬುತ್ತಾ ಈ ಕಂದನು ಗೋಳಾಡುವ ಕಾರಣವೇನು. ಈ ಕನ್ಯಾ ಕಾಮಿನಿ ನಿನಗೆ ಮಾಡಿರುವ ಅಪರಾಧವೇನು ಸವಿಸ್ತಾರವಾಗಿ ಪೇಳಬೇಕೈ ರಾಜಾ.

ಕರಿರಾಜ : ಅಯ್ಯ ಗೌಡ ಪ್ರಭುಗಳಿರಾ. ಈ ವಿಶ್ವದೋಳ್ ಅಶ್ವ ಮಸ್ತಕನೆಂದೆನಿಪ ಅಸ್ಥಿಮುಖಪಿತನಾದ ಹರನ ಕೃಪೆಯಿಂದ ಧಾರಾಪುರವೆಂಬ ಪಟ್ಟಣವ ಪರಿಪಾಲಿಸುವ ಪರಾಕ್ರಮಿ ಮಾರ ಭೂಪತಿಗೆ ಮಾರಹರನ ಕೃಪೆಯಿಂದ ಉದ್ಭವಿಸಿದಂಥ ಹರಿಕರಿಸಿಂಹ ರೂಪನೆಂದೆನಿಪ ಕರಿರಾಜನೆಂದು ಖ್ಯಾತಿಯನ್ನು ವಹಿಸಿ ಈ ವಸುಧೆಯನ್ನು ಆಳುತ್ತಿರಲು ಎನ್ನಯ ಘನ ಸೌಂದರ್ಯ ಪರಾಕ್ರಮಗಳನ್ನು ಕೇಳಿ ಹಳೆಯಬೀಡಿನ ಬಳ್ಳಾಲರಾಯನ ಪುತ್ರಿ ಧಾತ್ರಿ ಮೋಹಿನಿ ಎಂಬ ಕಾಮಿನಿಯನ್ನು ಎನಗೆ ಕೊಡುತ್ತೇನೆಂದು ತನ್ನ ಮಂತ್ರಿಯನ್ನು ಕಳುಹಿಸಿದ್ದಾನಾದ ಕಾರಣ, ಪರಿಣಯಕ್ಕಾಗಿ ನಾನು ಬರುವ ಮಾರ್ಗದಲ್ಲಿ ತೊಂಡನೂರಿ ಎಂಬ ರಕ್ಕಸಿಯ ಮಗಳಾದ ಪುಂಡರೀಕಾಕ್ಷಿಯು ಎನ್ನನ್ನು ಕರೆದುಕೊಂಡು ಪೋಗಿ ಕಾಮ ಕಲಹದಲ್ಲಿ ನಾನು ಕೂಡಿರುವ ಕಾಲದಲ್ಲಿ, ಅಸುರೆ ಪೆಣಗಳನ್ನು ಹೊತ್ತುಕೊಂಡು ಆರ್ಭಟಿಸಿಕೊಂಡು ಬರಲು ಶಶಿಮುಖಿಯು ಎನ್ನನ್ನೂ ಬಚ್ಚಿಟ್ಟಿರುವ ಸಮಯದಲ್ಲಿ ಅಸುರೆ ಹೊಸ ಗಮುಲು ಹೊಸವಾಸನೆಯನ್ನು ಹಿಡಿದು ಬಿಸುಜಾಕ್ಷಿಯ ಮರ್ಮವನ್ನು ತಿಳಿದು ಯನ್ನನ್ನು ಕೊಲ್ಲುವೆನೆಂದು ಮೋಸದಿಂದ ತನ್ನ ತಮ್ಮನ ಕೊಂದಳಾದ ಕಾರಣ, ದುಷ್ಠ ಅಸುರೆಯು ಮನದಿ ಮತ್ಸರದಿಂದ ಎನ್ನ ಕೊಲ್ಲಬೇಕೆಂದು ಅಸುರೆ ವೇಷವನ್ನು ಬಿಟ್ಟು ಪುಸಿಯಿಂದ ಬಾಣಂತಿ ವೇಷವನ್ನು ಧರಿಸಿ ಬೆಂಬತ್ತಿ ಬಂದು ಇದ್ದಾಳಯ್ಯಾ ಗೌಡ ಪ್ರಭುಗಳಿರಾ –

ದರುವು

ಭೂಪ ಲಾಲಿಸಿ ಕೇಳು ಕೋಪಿಸಾದೆ ಮಾತ
ರಾಜಚಂದ್ರ ॥

ಭುವನ ವಿಖ್ಯಾತ ಸದ್ಗುಣ ಸಾರ್ವಭೌಮನೆ
ರಾಜಚಂದ್ರ ॥

ಯುವತಿ ಮಣಿ ಎಂದು ಕರುಣಿಸಬೇಕಯ್ಯ
ರಾಜಚಂದ್ರ ॥

ಅವಿವೇಕವನು ಬಿಟ್ಟು ಕಂದನ ನೋಡಯ್ಯ
ರಾಜಚಂದ್ರ ॥