ತೊಂಡನೂರಿ ಮತ್ತು ಬೊಮ್ಮನು ಬರುವಿಕೆ

ತ್ರಿಪುಡೆ

ಕುಟಿಲ ದಾನವಿ ಘೋರರಭಸದಿ ಕೂಗಿ ಆರ್ಭಟಿಸು
ತ್ತ ಬೊಮ್ಮನು ನಿಟಿಲನೇತ್ರನು ಬೆದರುವಂದದಿ
ಕುಟಿಲ ದನುಜೇ ॥

ಹೆಗಲ ಮೇಲೈ ನೂರು ಪೆಣಗಳು-ಮಿಗಿಲ ಕಂಕುಳಗತ್ತು ಸಾವಿರ
ಎಡದ ಕೈಯಲಿ ಸುರೆಯಗಡಿಗೆಯು-ಸೊಗಸಿನಿಂದ ॥

ಅಲ್ಲಿಗಲ್ಲಿಗೆ ಆರ್ಭಟಿಸುತ್ತಾ ಹಲ್ಲು ಕಡಿದು ಮುಕ್ಕಳಿಸುತ
ಕುಟಿಲದಾನವಿ ಕೂಗೋ ಶಬ್ದಕ್ಕೆ ಗಿರಿಯು ಸಿಡಿಯೇ ॥

ಮಂಡಲದಿ ತೊಂಡನೂರು ರಕ್ಕಸಿ ದಂಡಧರ ಬೊಮ್ಮಣ್ಣ ಸಹಿತ
ಪೆಂಡೆಯಂಗಳ ಪಿಡಿದು ಕೈಯಲಿ ತೊಂಡನೂರಿ ॥

ದರುವು

ಹೊಸ ಗಮುಲು ನಾರುತಿದೆ ಬೊಮ್ಮನ ಮನೆ ಮುಂದೆ
ಹೊಸ ಮನುಜಾರು ಯಾರೋ ಬಂದಿಹರೋ ತಮ್ಮ ॥

ತೊಂಡನೂರಿ : ಅಪ್ಪಾ ತಮ್ಮಾ. ಈವತ್ತಿನ ದಿನ ನಮ್ಮ ಪಟ್ಟಣದಲ್ಲಿ ಮಹಾ ಆಶ್ಚರ್ಯಕರವಾದ ಹೊಸಗಮಲು ಹೊಸ ವಾಸನೆಯು ತೋರುತ್ತಾ ಇದೆಯಲ್ಲಪ್ಪ ತಮ್ಮ.

ದರುವು

ಸಜ್ಜೇಯ ಮನೆ ಮುಂದೆ ಸಣ್ಣ ಸಣ್ಣ ಹೆಜ್ಜೆಗಳು
ಅತಿಚೋದ್ಯವಾದಂಥ ವಿಧವೇನೋ ತಮ್ಮಾ ॥

ತೊಂಡನೂರಿ : ಅಪ್ಪಾ ತಮ್ಮಾ. ಈ ಭೂಮಂಡಲದೊಳು ದಂಡಧರನಾದ ಅಂತಕನಪುರದಂತೆ ಶೋಭಿಸುವ ನಿನ್ನ ಮಂದಿರದ ಗೃಹಚಂದ್ರ ಶಾಲೆಗಳ ಮುಂದಣದಿ ಅಂದ ಚೆಂದಗಳಿಂದ ಹೊಸ ಮನುಜರ ಹೆಜ್ಜೆಗಳು ಹೊಂದಿರುವ ಅಂದಗಳು ನೋಡಿದರೆ ಮಹಾ ಆಶ್ಚರ್ಯಕರವಾಗಿ ತೋರುತ್ತಾ ಇದೆಯಲ್ಲಪ್ಪ ತಮ್ಮಾ-

ದರುವು

ದಾರಿ ಮಾರ್ಗವು ತಪ್ಪಿ ಯಾರೋ ಬಂದಿಹರಿಲ್ಲಿ
ನಾರಿಕಾಮಿನಿ ಅವನ ಕೂಡಿದಳೇನೋ ತಮ್ಮಾ ॥

ತೊಂಡನೂರಿ : ಅಪ್ಪಾ ತಮ್ಮ. ಇವತ್ತಿನ ದಿನದಲ್ಲಿ ಹೊಸ ಮನುಷ್ಯನಾದ ಧಾವನು ದಾರಿಮಾರ್ಗವನ್ನು ತಪ್ಪಿ ಬಂದನಾದ ಕಾರಣ ಜಾರೆ ಪುಂಡರೀಕಾಕ್ಷಿಯು ಚೋರತನದಿಂದ ಧೀರ ಮನ್ಮಥನಶರಕ್ಕೆ ಅವನೊಳಗೆ ಸೇರಿದ ಹಾಗೆ ತೋರುತ್ತಾ ಇದೆಯಲ್ಲಪ್ಪ ತಮ್ಮ-

ದರುವು

ಗಂಡ ನೀನಿರೆ ಮಗಳು ವಂಚೀಸಿ ಮಿಂಡರನ್ನು
ಕೂಡಿಕೊಂಡಳು ಕಾಣೇ ಕುಟಿಲತನದಿಂದ ॥

ತೊಂಡನೂರಿ : ಅಪ್ಪಾ ತಮ್ಮಾ, ನಾವುಗಳು ಇಲ್ಲದಂಥಾ ವೇಳೆಯಲ್ಲಿ ನಮ್ಮ ಶಿರೋಮಣಿಯಾದ ಪುಂಡರೀಕಾಕ್ಷಿಯು ಪುಂಡುತನದಿಂದ ನಮಗೆ ವಂಚನೆಯನ್ನು ಮಾಡಿ ಪಂಚಬಾಣನಂತೆಸೆಯುವ ಪುರುಷನನ್ನು ನೋಡಿ ಕೂಡಿಕೊಂಡಂತೆ ಇದೆಯಲ್ಲಪ್ಪ ತಮ್ಮ-

ದರುವು

ಭಳಿರೇ ಈ ಕ್ಷಿತಿಯೊಳ್ ಬಳ್ಳಾಪುರದ ಶೌರಿ
ಹೊಸಮನುಜರ ಮಾಂಸ ಕೊಟ್ಟ ಶಂಕರನು ॥

ತೊಂಡನೂರಿ : ಅಪ್ಪಾ ತಮ್ಮಾ. ಈ ಕ್ಷಿತಿಯನ್ನು ಪರಿಪಾಲಿಸುವ ಲಂಬೋದರನಾದ ಶಂಕರನು ನಮ್ಮ ಅಂಬುಜಾಕ್ಷಿಯಾದ ಪುಂಡರೀಕಾಕ್ಷಿಗೆ ಅರಸನಾದವನನ್ನು ಹಿಡಿದು ಸಂಭ್ರಮದಿಂದ ಬಗೆ ಬಗೆಯ ಮಾಂಸಗಳು ಭಕ್ಷಿಸಲೆಂದು ಕಳುಹಿಸಿದ್ದಾನಪ್ಪ ತಮ್ಮ-

ದರುವು

ಅಕ್ಕ ಲಾಲಿಸು ಎನಗೆ ಅಪ್ಪಣೆಯ ಕೊಡುಬೇಗಾ
ಮುಕ್ಕೋಟಿ ಸುರರೊಳಗೆ ಎದುರಿಲ್ಲಾ ಎಮಗೆ

ಬೊಮ್ಮರಕ್ಕಸ : ಕೇಳುತ್ತೀಯೇನಮ್ಮ ಅಕ್ಕಾ. ಈ ಧಾತ್ರಿಯೊಳಗೆ ಹರಿಹರ ಬ್ರಹ್ಮಾಧಿ ಸುರ ಪ್ರಮುಖ ಅಷ್ಠದಿಕ್ಪತಿಗಳಾದಿಯಾಗಿ ಎನ್ನ ಎದುರಾಗಿ ಯುದ್ಧವನ್ನು ಮಾಡಿ ಜೈಸುವರು ಯಾರೂ ಇಲ್ಲ ಮತ್ತು ನೀನೀ ವೇಳೆಯಲ್ಲಿ ಅಪ್ಪಣೆಯನ್ನು ಕೊಟ್ಟಿದ್ದೇ ಆದರೆ ನಿಮಿಷಮಾತ್ರದಲ್ಲಿ ಅವನನ್ನು ಎನ್ನ ಗದಾದಂಡದಿಂದ ತುಂಡು ತುಂಡನ್ನು ಮಾಡುವೆನಮ್ಮಾ ಅಗ್ರಜಳೆ-

ದರುವು

ಕನಕಾದ್ರಿಯನು ಕಿತ್ತು ಕಡೆಗಿಡುವೆ ನವಖಂಡ
ಮುನಿದೆನಾದರೆ ಸುಡುವೆ ಮೂರುಲೋಕವನು॥

ಬೊಮ್ಮ : ಅಕ್ಕಯ್ಯ ನಾನು ಕೋಪವನ್ನು ಮಾಡಿದ್ದೇ ಆದರೆ ಈ ಧಾತ್ರಿಯೊಳ್ ಮಹಾಶ್ರೇಷ್ಠದಿಂದೊಪ್ಪಲ್ಪಟ್ಟ ಕನಕಾಚಲ ಪರ್ವತವನ್ನು ಕಿತ್ತು ಕಡೆಗೆ ಬಿಸಾಡುವೆ ಮತ್ತು ನವಖಂಡ ಸಪ್ತದ್ವೀಪಗಳು ಸುಟ್ಟು ಬೂದಿಯನ್ನು ಮಾಡಿ ಸಪ್ತ ಶರನದಿಗಳೆತ್ತಿ ಪಾನ ಮಾಡುವುದಕ್ಕೆ ನನಗೆ ಎಷ್ಟು ಮಾತ್ರಕ್ಕೂ ಸಂದೇಹವಿಲ್ಲವಮ್ಮ ಅಕ್ಕ-

ದರುವು

ಮನುಜನೋರ್ವನ ತಂದು ಮನೆಯೊಳಗೆ ಕೂಡಿರಲು
ದನುಜಾ ಬೊಮ್ಮನು ನೋಡಿ ಸೈರಿಪನೆ ಅಕ್ಕ॥

ಬೊಮ್ಮ : ಕೇಳುತ್ತೀಯೇನಮ್ಮ ಅಗ್ರಜಳೆ. ರಾವಣ ಕುಂಭಕರ್ಣ ಮೊದಲಾದ ರಕ್ಕಸರೊಳಗೆ ಮಹಾಶ್ರೇಷ್ಠನೆಂದೆನಿಸಿಕೊಂಡ ನಾನು ಇರಲು ಮಡದಿಯಾದ ಪುಂಡರೀಕಾಕ್ಷಿಯು ಪರಮಿಂಡನನ್ನು ಕೂಡಿಕೊಂಡಿದ್ದರೆ ನಾನು ನೋಡಿ ಹ್ಯಾಗೆ ಸೈರಿಸಲಮ್ಮ ಅಗ್ರಜಳೆ-

ದರುವು

ಕ್ಷಣಮಾತ್ರದಲಿ ಅವನ ಕೊಂದು ಭೇತಾಳ
ಗಣಗಳಿಗೆ ಬಡಿಸುವೆನು ನರಮಾಂಸವನು॥

ಬೊಮ್ಮ : ಅಮ್ಮಾ ಅಕ್ಕಯ್ಯ ಈ ನಿಮಿಷಮಾತ್ರದಲ್ಲಿ ಆ ದುರುಳ ಮನುಜನನ್ನು ಹಿಡಿದು ಮರುಮಾಯಂಗಳಿಂದ ಅವನ ಹರಣವನ್ನು ತೆಗೆದು ನಮ್ಮ ಭೂತಪ್ರೇತ ಪಿಶಾಚಾದಿಗಳಿಗೆಲ್ಲಾ ಹಬ್ಬವನ್ನು ಮಾಡದೆ ಎಂದಿಗೂ ಬಿಡುವುದಿಲ್ಲವಮ್ಮ ಅಗ್ರಜಳೆ-

ತೊಂಡನೂರಿ : ಅಪ್ಪಾ ತಮ್ಮ. ಘಟಿಕತರವಾದ ನಿನ್ನ ಪಟುಪರಾಕ್ರಮದಿ ಶೌರ‌್ಯವನ್ನು ಕಂಡು ಎನ್ನ ಮನಸ್ಸಿಗೆ ಬಹಳ ಸಂತೋಷವಾಯಿತು. ಆದ ಕಾರಣ ನಾನು ಕುಟಿಲ ಕಪಟಗಳಿಂದ ಚತುರೋಪಾಯ ವನ್ನು ಮಾಡಿ ನನ್ನ ಮಗಳಾದ ಪುಂಡರೀಕಾಕ್ಷಿಯ ಮರ‌್ಮವನ್ನು ಮರು ಮಾಯಂಗಳಿಂದ ತಿಳಿದುಕೊಳ್ಳುತ್ತೇನೆ. ನೀನು ಅರಿಯದವನಂತೆ ಇರುವಂಥವನಾಗಪ್ಪ ತಮ್ಮಾ-

ಬೊಮ್ಮ : ಅದೇ ಪ್ರಕಾರ ಇರುತ್ತೇನಮ್ಮ ಅಗ್ರಜಳೆ-

ದರುವು

ಮಾನುನಿಮಣಿ ಯೇನಿದು ನಮ್ಮನೆಯೋಳು
ಮನುಜ ವಾಸನೆ ಕಾಣ್ವುದು॥

ಹರಿಹರಾದ್ಯರು ಸರಸಿಜೋದ್ಭವ ಸುರಪದಿಕ್ಪಾ
ಲಕರು ದಿವಿಜರು ಸ್ಮರಿಸಲೆನ್ನಯ ಪುರವ ಕೇಳಲು
ಮನಸಿನೊಳಗನುಮಾನವಿಲ್ಲದೆ ॥

ತೊಂಡನೂರಿ : ಅಮ್ಮಾ ಮಗಳೆ ನಳಿನಲೋಚನೆಯಾದ ಪುಂಡರೀಕಾಕ್ಷಿಯೆ ಕೇಳು. ನಮ್ಮ ಮರುಳರ ಅರಮನೆಗೆ ಮರುಳು ಮನುಜರ ವಾಸನೆಯು ಹೊರಳಿ ಹೋಗುವ ಹಾಗೆ ತೋರುತ್ತಾ ಇರುವುದಾದ ಕಾರಣವೇನು ಮತ್ತು ಹರಿಹರ ಬ್ರಹ್ಮಾದಿ ಸುರಪ ಅಷ್ಟದಿಕ್ಪತಿಗಳಾದಿಯಾಗಿ ಎನ್ನ ಪಟ್ಟಣದ ಹೆಸರು ಕೇಳಿದ್ದೇ ಆದರೆ ಸ್ಮರಿಸದೆ ಭಯಪಡುವರಾದ ಕಾರಣ ಈಗ ನಮ್ಮ ಅರಮನೆಗೆ ಧಾರು ಬಂದು ಇದ್ದಾರೆ ಪೇಳುವಂಥವಳಾಗಮ್ಮ ನೀರೆ ಶರಧಿ ಗಂಭೀರೆ-

ದರುವು

ದನುಜರಲ್ಲಿಗೆ ಮನುಜಾರು ಹೈತರುಲಾದು
ಮನಕೆ ಚೋದ್ಯವೆ ಮಗಳೆ॥

ಕುಂದರವದನೆ ನೀನಿಂದು ಕೊರತೆಯ ತಂದೆ ದಾನವ
ರೊಳಗೆ ಮುಖವ ತೋರದ ಹಾಗೆ ನಿಂದೆಯು
ತಂದು ಹರಡಿದೆ ಕುಂದರವದನೆ॥

ತೊಂಡನೂರಿ : ಅಮ್ಮಾ ಮಗಳೆ. ಈ ಧಾತ್ರಿಯೊಳಗೆ ಲಂಕಿಣಿ, ಶೂರ್ಪನಖಿ ತಾಟಕಿ ಮೊದಲಾದ ರಕ್ಕಸಿಯರಲ್ಲಿ ಮಹಾಶ್ರೇಷ್ಠಳೆಂದೆಣಿಸಿ ಈ ಭೂಮಂಡಲದಲ್ಲಿ ಎನ್ನ ಸಮಾನರಾದವರು ಯಾರೂ ಇಲ್ಲವೆಂದು ಇದ್ದೆ. ಆದರೆ ನೀನು ಪುಂಡಮನುಜನನ್ನು ಕೂಡಿಕೊಂಡು ಇರುವಹಾಗೆ ಕಾಣುತ್ತಾ ಇದೆ. ಆದ್ದರಿಂದ ನಮ್ಮ ದಾನವರ ತಂಡಗಳಲ್ಲಿ ಮುಖಮಂಡಲವೆತ್ತಿ ತಿರುಗದ ಹಾಗೆ ಧನುಜ ಬೊಮ್ಮನಿಗೆ ನೀನು ವಂಚನೆಯನ್ನು ಮಾಡಿದಂತೆ ಕಾಣುತ್ತಾ ಇದೆಯಲ್ಲಮ್ಮ ಬಾಲೆ ತಿಳಿದುಬರುತ್ತಾ ಇದೆ ನಿನ್ನ ಲೀಲೆ-

ದರುವು

ತರಳೆ ವಂಚಿಸಬ್ಯಾಡವೆ-ಬಳ್ಳಾಪುರಿ-ಮೃಡನು ರಕ್ಷಿಪ ಕೇಳತೀ ॥
ಕನ್ಯಾ ಕಾಮಿನಿ ಕೇಳು ನಿನ್ನರಮನೆಗೆ ಬಂದವನನ್ನು
ತೋರಲು ಕಣ್ಣು ಅರ್ತಿಲಿಯೆತ್ತಿ ಮುದ್ದಿಸಿ
ನಿನ್ನ ಮೆಚ್ಚುವೆ ನನ್ನ ಚಿನ್ನವೆ॥

ತೊಂಡನೂರಿ : ಅಮ್ಮಾ ಮಗಳೆ, ಈ ಧರೆಯೊಳಗೆ ಗರಳಗಂಧರನಾದ ಶಂಕರನು ಕರುಣಾ ಕಟಾಕ್ಷವಿಟ್ಟು ರಕ್ಷಿಸುವನಾದ ಕಾರಣ ನಿನ್ನ ಮನಸ್ಸಿನಲ್ಲಿ ಎಷ್ಟು ಮಾತ್ರಕ್ಕೂ ವಂಚನೆಯನ್ನು ಇಡದೆ ನಿನ್ನ ಅರಮನೆಗೆ ಬಂದಿರುವ ಚೆಲುವ ಪುರುಷನನ್ನು ತಂದು ತೋರಿದರೆ ಎನ್ನ ಕಣ್ಣು ಅರ್ತಿಗಳಿಂದ ನೋಡಿ ಎನ್ನ ಮನದ ಮಮತೆಗಳಿಂದ ಎತ್ತಿ ಮುದ್ದಿಸುವೆನಮ್ಮ ಕನ್ನೆ ದನುಜಕುಲ ಚನ್ನೆ-

ದರುವು

ಮಾತೆ ಎನ್ನಯ ಮೇಲೆ ಪ್ರೀತಿ ಇಲ್ಲದೆ ಇಂತಾ
ಮಾತನಾಡುವರೇನಮ್ಮಾ ಕೇಳಮ್ಮ ತಾಯೆ
ನೀತಿ ಇಲ್ಲದೆ ನುಡಿವಾರೆ॥

ಪುಂಡರೀಕಾಕ್ಷಿ : ಅಮ್ಮಾ ತಾಯೆ. ಈ ಭೂಮಂಡಲವನ್ನೆಲ್ಲಾ ಸಂಚರಿಸಿ ಬಿದ್ದಿರುವ ಪೆಣಗಳನ್ನು ತಿಂದು ಮನಕೆ ಬಂದಂತೆ ಮದ್ಯಪಾನವನ್ನು ಮಾಡಿ ಮರುಳುತನದಿಂದ ನಿನ್ನ ಉದರದಲ್ಲಿ ಹುಟ್ಟಿದ ತರಳೆಯ ಮೇಲೆ ಕರುಣವಿಲ್ಲದೆ ಎಂದಿಗೂ ಇಲ್ಲದ ಕಳವು, ನಿಂದೆಗಳು ನುಡಿಯುವುದು ಉಚಿತವೇನಮ್ಮ ತಾಯೆ ಕರುಣದಿಂ ಕಾಯೆ-

ದರುವು

ಹಿಂದೆ ದನುಜರ ಭಯಕ್ಕಾಗಿ ಗೋವಿಂದನು
ಶಿಂಧೂವಿಯನು ಪೊಕ್ಕಾನೆ ಕೇಳಮ್ಮ ತಾಯೆ
ಶಿಂಧೂವಿಯನು ಪೊಕ್ಕಾನೆ॥

ಪುಂಡರೀಕಾಕ್ಷಿ : ಅಮ್ಮಾ ತಾಯೆ. ಹಿಂದೆ ರಕ್ಕಸರ ಭಯಕ್ಕಾಗಿ ದೇವಕಿಸುತನಾದ ಶ್ರೀಕೃಷ್ಣನು ಕ್ಷೀರಸಾಗರದಲ್ಲಿ ಪೊಕ್ಕನಾದ ಕಾರಣ ರಕ್ಕಸರು ಇರುವ ಅರಮನೆಗೆ ನರಮನುಷ್ಯನಾದವನು ಬಂದು ಸಿಕ್ಕುವನಲ್ಲದೆ ದಕ್ಕಿ ಪೋಗುವನೇನಮ್ಮ ಮಾತೆ ಜಗದ್ವಿಖ್ಯಾತೆ-

ದರುವು

ತಿಳಿಯಲಿಲ್ಲವೆ ಇಂದ್ರ ಬೆದರಿ ದನುಜರ ಭಯಕೆ
ಪುರಕೆ ಕವಾಟಗಳಿಕ್ಕಿಸೀದ ಕೇಳಮ್ಮ ತಾಯೆ ಕಪಟ
ವೆನ್ನೊಳಗಿಲ್ಲಾವೇ

ಪುಂಡರೀಕಾಕ್ಷಿ : ಅಮ್ಮಾ ತಾಯೆ. ದಿವಿಜಾಧಿಪತಿಯಾದ ಇಂದ್ರನು ದನುಜರ ಅಂಜಿಕೆಗೆದರಿ ತನ್ನ ಪುರಕ್ಕೆ ಕವಾಟಗಳನ್ನು ಇಕ್ಕಿಸಿ ಕಳುವಿನಿಂದಲಿ ಹೊಕ್ಕನಾದ ಕಾರಣ ಮಾನವರು ನೀನಿರುವ ಸ್ಥಳಕ್ಕೆ ಬರುವುದುಂಟೇನಮ್ಮ ತಾಯೆ ನಿನಗಿದು ಸರಿಯೆ-

ದರುವು

ಗಂಡಾನು ಎನಗೀರೆ ಪುಂಡು ಮನುಜ ಬಂದು
ಗಂಡನಾಗುವನೇನಮ್ಮಾ ಕೇಳಮ್ಮ ತಾಯೆ
ಇಂದು ದೂರುವರೇನಮ್ಮಾ॥

ಪುಂಡರೀಕಾಕ್ಷಿ : ಅಮ್ಮಾ ತಾಯೆ ನಿನ್ನ ಗರ್ಭದಲ್ಲಿ ಪುಟ್ಟಿದ ಆತ್ಮಜೆಯನ್ನು ಮನುಜಮಾನವನು ಬಂದು ಕೂಡಿದನೆಂಬ ಮಾತನ್ನು ನುಡಿದರೆ ಈ ಜಗದೊಳಗೆ ಎನ್ನ ಹಗರಣವು ಮಾಡುವರಾದ ಕಾರಣ ಬರಿಯ ಭ್ರಾಂತಿಗಳಿಂದ ಸ್ಮರಿಸಬಾರದ ಮಾತುಗಳನ್ನು ಆಡಿದರೆ ದನುಜ ಬೊಮ್ಮನು ಕೇಳಿ ಕೋಪಿಸದೆ ಎಷ್ಟು ಮಾತ್ರಕ್ಕೂ ಸುಮ್ಮನಿರನಲ್ಲದೆ ಮತ್ತು ಅನ್ಯರಿಗೆ ನಾನು ಎಷ್ಟು ಮಾತ್ರಕ್ಕೂ ಒಲಿವಳಲ್ಲಮ್ಮ ಮಾತೆ ಲೋಕವಿಖ್ಯಾತೆ-

ದರುವು

ಕೇಳೆ ಪುಂಡರೀಕಾಕ್ಷಿ ಪೇಳುವೆನೀಗಾ ಕಡೆಗಣ್ಣಿನೊಳು
ಕೆಂಪು ತೋರುವದೇನಮ್ಮಾ॥

ತೊಂಡನೂರಿ : ಅಮ್ಮಾ ಮಗಳೆ ರತ್ನ ಪರ್ವತಕ್ಕೆ ಚಂದ್ರನಾಗಿರತಕ್ಕಂಥವನು ಉದ್ಭವಿಸಿ ಬಂದರೆ ಎಷ್ಟು ರಮ್ಯವಾಗಿ ಕಾಣುತ್ತಾ ಇದೆಯೋ ಹಾಗೆ ಇದ್ದಂಥ ನಿನ್ನ ಮುಖವು ಕಂದಿಕಪ್ಪಾಗಿ ನಿನ್ನ ಕಡೆಗಣ್ಣಿನಲ್ಲಿ ಕೆಂಪು ತೋರುವ ಕಾರಣವೇನೆ ಮಗಳೆ-

ದರುವು

ನಿದ್ರೆ ಮಾಡುತಲೆದ್ದು ಬಂದಾರೆ ನೇತ್ರಾ
ಕೆಂಪು ಕಾಣಿಸುವುದು ಕೇಳದರಿಂದಾ॥

ಪುಂಡರೀಕಾಕ್ಷಿ : ಅಮ್ಮಾ ತಾಯೆ. ನಮ್ಮ ಮಂದಿರದಲ್ಲಿ ಅಂದ ಚಂದಗಳಿಂದ ಒಪ್ಪಿರುವ ಮಣಿಮಂಚದ ಮೇಲೆ ನಾನು ಮಲಗಿ ನಿದ್ರಿಸುತ್ತಿರಲು ನಮ್ಮ ಮಾತೆಯು ಬಂದಳೆಂಬ ಪ್ರೀತಿಯಿಂದ ಎದ್ದು ಬಂದೆನಾದ ಕಾರಣ ನನ್ನ ನೇತ್ರಗಳು ಕೆಂಪು ತೋರುತ್ತಾ ಇದೆಯಲ್ಲಮ್ಮ ಮಾತೆ ಸುಗುಣ ಸಂಪ್ರೀತೆ-

ದರುವು

ಸುದತಿ ರನ್ನಳೆ ನಿನ್ನ ಮುಡಿಬಿಚ್ಚಿ ಕುರುಳು
ಕೆದರಿಕೊಂಡಿರುವಂಥ ಕಾರಾಣವೇನಮ್ಮ

ತೊಂಡನೂರಿ : ಅಮ್ಮಾ ಮಗಳೆ. ಇಂದ್ರನೀಲಕ್ಕೆ ಇಮ್ಮಿಗಿಲಾದ ನಿನ್ನ ಕುರುಳು ಬೈತಲೆಯು ಮುಡಿ ಬಿಚ್ಚಿ ಕೆದರಿಕೊಂಡಿರುವಂಥ ಕಾರಣವೇನಮ್ಮ ಪುತ್ರಿ ಸುಂದರಗಾತ್ರಿ-

ದರುವು

ಪದ್ಮವ ಮುಡಿದಿರೆ ಮರಿದುಂಬಿ ಮುತ್ತಿ
ವದನವು ತುಂಬಿತ್ತು ಕಬರಿ ಕೇಳಮ್ಮ॥

ಪುಂಡರೀಕಾಕ್ಷಿ : ಅಮ್ಮಾ ತಾಯೆ. ಪದ್ಮಪುಷ್ಪಗಳನ್ನು ತಂದು ಎನ್ನ ತುರುಬಿನಲ್ಲಿ ಮುಡಿದುಕೊಂಡಿರಲು ಮಧುರ ರಸಪಾನಕ್ಕಾಗಿ ಮರಿದುಂಬಿಗಳು ಬಂದು ಆ ಮಧುರವನಕ್ಕೆ ಮುತ್ತಿದವಾದ ಕಾರಣ ನಾನು ಕಟ್ಟಿದ ಮುಡಿಯನ್ನು ಬಿಚ್ಚಿ ಹಾಕಿದೆನಮ್ಮಾ ತಾಯೆ-

ತೊಂಡನೂರಿ ದರುವು

ತರುಣಿ ಮಣಿಯೆ ಗುರು ಕುಚಗಳ ಮೇಲೆ
ನಸುರೇಖೆ ಇರುವುದು ಏನು ಕಾರಣವೆ॥

ತೊಂಡನೂರಿ : ಅಮ್ಮಾ ಮಗಳೆ. ದಿಟ್ಟತರವಾದ ಬಟ್ಟ ಗುರುಕುಚಗಳ ಮೇಲೆ ಮುಟ್ಟಿ ಸೀಳಿದ ಹಾಗೆ ತಟ್ಟನೆ ಗಾಯಗಳು ಕಾಣುವ ಪರಿ ಯಾವುದೇನಮ್ಮ ಮಗಳೆ-

ದರುವು

ಪರಿಮಳಗಂಧ ಕಸ್ತೂರಿ ಪೂಸಿರಲು
ಗುರುತಾಯಿತು ನಖಾ ರೇಖೆ ಕೇಳಮ್ಮ

ಪುಂಡರೀಕಾಕ್ಷಿ : ಅಮ್ಮಾ ತಾಯೆ. ಗಂಧ ಕಸ್ತೂರಿ ಪುನುಗು ಜವ್ವಾಜಿ ಪಚ್ಚ ಕರ್ಪೂರ ಮುಂತಾದ ಪರಿಮಳಗಳನ್ನು ಕಲೆಸಿ ಎನ್ನ ಸ್ವಚ್ಛತರವಾದ ಹಸ್ತಗಳಿಂದ ಲೇಪನ ಮಾಡುವ ಕಾಲದಲ್ಲಿ ಎನ್ನ ಹಸ್ತದ ನಖರೇಖೆಗಳ ಗುರುತು ಕಾಣಿಸುತ್ತಾ ಇದೆಯಲ್ಲಮ್ಮ ಮಾತೆ ಸುಗುಣ ಸಂಪ್ರೀತೆ-

ದರುವು

ಜಲಜಾಕ್ಷಿ ಅಧರದ ಮೇಲೆ ಕೆಂಬಾಲಗಾಯ
ಕಾಣಿಸುತ್ತಿರುವಂಥ ಕಾರಣವೇನಮ್ಮಾ-

ತೊಂಡನೂರಿ : ಅಮ್ಮಾ ಮಗಳೆ. ಜಲಜಲೋಚನೆಯಾದ ಪುಂಡರೀಕಾಕ್ಷಿಯೆ ಕೇಳು. ನಿನ್ನ ತೊಂಡೆ ಹಣ್ಣುಗಳಿಗಿಮ್ಮಿಗಿಲಾದ ನಿನ್ನ ತುಟಿಗಳ ಮೇಲೆ ಕೆಂಬಾಲ ಗಾಯಗಳು ಕಾಣಿಸುವಂಥ ಕಾರಣವೇನಮ್ಮ ಜಾಣೆ ಜಾರ ಪ್ರವೀಣೆ-

ದರುವು

ಗಿಣಿಯು ಕೈಯೊಳು ಪಿಡಿದು ಮುದ್ದಿಸುತಿರಲು
ತೊಂಡೆಯ ಹಣ್ಣೆಂದು ತುಟಿ ಕಚ್ಚೀತಮ್ಮ॥

ಪುಂಡರೀಕಾಕ್ಷಿ : ಅಮ್ಮಾ ತಾಯೆ. ಬ್ಯಾಸರವ ಕಳೆವ ಉದ್ದಿಶ್ಯ ಅರಮನೆಯ ಅರಗಿಳಿಯನ್ನು ಪಿಡಿದು ಮುದ್ದಿಸುವ ಕಾಲದಲ್ಲಿ ತೊಂಡೆಯ ಹಣ್ಣುಗಳೆಂದು ಎನ್ನ ತುಟಿ ಕಚ್ಚಿತಮ್ಮಾ ತಾಯೆ-

ದರುವು

ಉಟ್ಟ ಸೀರೆಯು ಜಾರಲೇನು ಕಾರಣವೆ
ದಿಟ್ಟ ಕೋಮಲೆ ನೀನು ದಿಟ್ಟವಾಗಿ ಪೇಳೆ॥

ತೊಂಡನೂರಿ : ಅಮ್ಮಾ ಮಗಳೆ, ನೀನು ಉಟ್ಟಿರುವಂಥ ಪಟ್ಟುಪೀತಾಂಬರವು ಕಟ್ಟಸಡಲಿ ಬಿಚ್ಚಿ ಜಾರಿರುವ ಕಾರಣವೇನಮ್ಮಾ ಪುತ್ರಿ ಸುಂದರಗಾತ್ರಿ-

ದರುವು

ಕಟ್ಟಿ ಉಯ್ಯಲೆ ನಾನಾಡುತ್ತಾ ಇರಲು
ಕಟ್ಟು ಸಡಲಿತು ಕಾಣೆ ಉಟ್ಟಾ ಸೀರೆಯು॥

ಪುಂಡರೀಕಾಕ್ಷಿ : ಅಮ್ಮಾ ತಾಯೆ, ನಮ್ಮ ಮಂದಿರದ ಮಧ್ಯದೊಳ್ ಅಂದ ಚಂದಗಳಿಂದ ಹೊಂದಿರುವ ದಿಟ್ಟತರವಾದ ಉಯ್ಯಲೆಯ ಮೇಲೆ ಕಟಕಿಯು ನಾನು ಸಹಿತ ಆಡುತ್ತಿರುದಲ್ಲಿ ಕಟ್ಟು ಸಡಲಿ ನಾನುಟ್ಟಿರುವ ಸೀರೆಯು ಬಿಚ್ಚಿತಮ್ಮ ತಾಯೆ ಕರುಣದಿಂ ಕಾಯೆ-

ದರುವು

ಹುಡುಗೀ ನಿನ್ನಯ ತೊಡೆಯು ನಡುಗುವುದೇಕೆ
ನುಡಿ ನುಡಿಗೂ ಬಾಯಿ ತಡಬಡವೇನೇ॥

ತೊಂಡನೂರಿ : ಅಮ್ಮಾ ಮಗಳೆ ಕದಳಿ ಕಂಬಗಳಂತೆಸೆಯುವ ನಿನ್ನ ತೊಡೆಗಳು ನಡುಗುತ್ತಾ ಇರುವುದು ಮತ್ತು ನುಡಿ ನುಡಿಗೂ ಬಾಯಿ ತಡಬಡವಾಗಿ ಮಾತನಾಡುವಂಥ ಕಾರಣವೇನಮ್ಮಾ ಜಾಣೆ ಜಾರ ಪ್ರವೀಣೆ-

ದರುವು

ಅಡಗಿಸಿಕೊಂಡಿರ್ಪೆ ಓರ್ವನ ಎನಲು
ನುಡಿಯಲು ಎನ್ನಯ ತೊಡೆ ನಡುಗಿತಮ್ಮಾ॥

ಪುಂಡರೀಕಾಕ್ಷಿ : ಅಮ್ಮಾ ತಾಯೆ, ಈ ವೇಳೆಯಲ್ಲಿ ನಿನ್ನ ಮನಸ್ಸಿಗೆ ಒಪ್ಪುವ ಪುರುಷನನ್ನು ಅಡಗಿಸಿಕೊಂಡು ಇದ್ದೀಯ ಎಂದು ಹೇಳಲು ನಾನು ಭಯಪಟ್ಟು ಎನ್ನಯ ತೊಡೆಗಳು ನಡುಗುತ್ತಾ ಇದೆಯಲ್ಲಮ್ಮಾ ತಾಯೆ ಎನ್ನನ್ನು ಕಾಯೆ-

ದರುವು

ಕುಂಭಿಣಿಯೊಳು ಬಳ್ಳಾಪುರವ ಪಾಲಿಸುವಾ
ಕುಟಿಲ ಕಪಟವೆಲ್ಲಾ ನಿಟಿಲಾಕ್ಷಿ ಬಲ್ಲಾ॥

ತೊಂಡನೂರಿ : ಅಮ್ಮಾ ಮಗಳೆ, ಈ ಕುಂಭಿಣಿಯನ್ನು ಪರಿಪಾಲಿಸುವ ಶಂಭುಶಂಕರನಾದ ಸಾಂಬಮೂರ್ತಿ ನಿನ್ನ ಕುಟಿಲ ಕಪಟಗಳೆಲ್ಲಾವು ಬಲ್ಲನಾದ ಕಾರಣ ಅಮ್ಮ ಮಗಳೆ ನಿನ್ನ ಮನಸ್ಸಿನಲ್ಲಿ ಎಷ್ಟು ಮಾತ್ರಕ್ಕೂ ವಂಚನೆಯನ್ನಿಡದೆ ನಿನ್ನ ಮನೆಗೆ ಬಂದಿರತಕ್ಕಂಥ ಚೆಲುವ ಪುರುಷನನ್ನು ನನ್ನ ಎದುರಿಗೆ ತಂದು ತೋರುವಂಥವಳಾಗಮ್ಮಾ ಪುತ್ರಿ ಸುಂದರಗಾತ್ರಿ-

ಪುಂಡರಿಕಾಕ್ಷಿ : ಅಮ್ಮಾ ಜನನೀ. ನಿನ್ನಯ ಗರ್ಭದಲ್ಲಿ ಪುಟ್ಟಿದಂಥ ಕುವರಿಯನ್ನು ಅನ್ಯಾಯವಾಗಿ ನಿರಾಕರಿಸಿ ಈ ಭೂಮಂಡಲದಲ್ಲಿ ನನ್ನಂತೆಯೆ, ಜಾರತ್ವಗಳು ಮಾಡಿರಬಹುದೆಂದು ದೂರ ಸರಿಯುವರಲ್ಲ. ಅಪಹಾಸ್ಯಕ್ಕೆ ಈಡುಮಾಡುವುದು ನಿನಗೆ ತಕ್ಕ ಮರ್ಯಾದೆಯಲ್ಲಮ್ಮಾ ತಾಯೆ ನಿನ್ನಂಥವಳನ್ನು ನಾನರಿಯೆ-

ತೊಂಡನೂರಿ : ಅಮ್ಮಾ ಮಗಳೆ. ಅಂಗಜನ ಮೋಹದರಾಣಿಗಿಮ್ಮಿಗಿಲಾಗಿ ಪ್ರಕಾಶಿಸುವ ಪುಂಡರೀಕಾಕ್ಷಿಯೆ ಕೇಳು. ಈ ಲೋಕದೊಳು ಕಳವು, ಹಾದರವು ಕಪಟ ಕುಟಿಲ ಕೃತ್ಯಗಳನ್ನು ಸುಳವುಗಳನ್ನು ನೋಡಿದಾಕ್ಷಣವೆ ತಿಳಿಯುವಳಾದ ಕಾರಣ ಹಿಂದಕ್ಕೆ ಬಹು ಜಾಣತನದಿಂದ ನಾನು ಮಾಡಿರುವ ಜಾರತ್ವದ ಕೃತ್ಯಗಳನ್ನು ವಿಧ ವಿಧವಾಗಿ ವಿವರಿಸಿ ಪೇಳುತ್ತೇನೆ ಕೇಳುವಂಥವಳಾಗಮ್ಮಾ ಪುತ್ರಿ ಸುಂದರಗಾತ್ರಿ-

ದರುವು

ಎನ್ನಿಂದ ಪುಟ್ಟಿದ ಹಾದರವ ಕೇಳಮ್ಮ
ಕನ್ನೇ ನೀ ಕಂಡರಿಯೆ ಇನ್ನು ಪೇಳುವೆನು॥

ತೊಂಡನೂರಿ : ಅಮ್ಮಾ ಮಗಳೆ. ನಾನು ಚಿಕ್ಕತನದಿಂದ ಈ ಲೋಕದೊಳು ಅಕ್ಕರದಿಂ ಕಂಗಳಿಗೆ ಪ್ರಿಯವಾದ ಪುರುಷರು ಸಿಕ್ಕಿದರೆ ಕಳವು ಕಪಟಗಳು ಗುಪಿತಗೋಪ್ಯಗಳಿಂದ ಎಣೆ ಇಲ್ಲದೆ ವಿಧ ವಿಧವಾಗಿ ನಾನು ರತಿಸಿದಂಥ ವಿಧವನ್ನು ವಿವರಿಸಿ ಪೇಳುತ್ತೇನೆ ಅಕ್ಕರದಿಂದ ಕೇಳುವಂಥವಳಾಗಮ್ಮಾ ಕನ್ನೆ ದನುಜಕುಲ ರನ್ನೆ-

ದರುವು

ಎನ್ನ ಮೋಹದ ಮಗಳೆ ಏನಾ ಪೇಳಲಿ ನಾನು
ಸಣ್ಣ ಪ್ರಾಯದಿ ನಾನು ಕೂಡೀದ ವಿಟರನ್ನೇ ॥

ತೊಂಡನೂರಿ : ಅಂಗಜನ ಪುಷ್ಪ ಮಾರ್ಗಣದಂತೆಸೆಯುವ ಶೃಂಗಾರ ಸುಗುಣೆಯಾದ ಪುಂಡರೀಕಾಕ್ಷಿಯೆ ಕೇಳು. ಚಿಕ್ಕತನದಿಂದ ಪ್ರಜ್ವಲಿಪ ನನ್ನ ಪ್ರಾಯ ಕಾಲದೊಳು ಅಕ್ಕರದಿ ಕಂಗೊಳಿಪ ಪುರುಷರು ಸಿಕ್ಕಿದರೆ ಅಂಗಜನ ಕೇಳಿಯೊಳು ಕೂಡಿದಂಥ ವಿಟರನ್ನು ಲೆಕ್ಕ ಮಾಡಿದ್ದೇ ಆದರೆ ಎನ್ನ ಎದೆಯು ಝಲ್ ಎನ್ನುವುದಮ್ಮಾ ಮಗಳೆ-

ದರುವು

ಅತ್ತೆ ನೆತ್ತಿಯ ಮೇಲೆ ಬುತ್ತಿ ಏರಿಸಿಕೊಂಡು
ಚಿತ್ತಕ್ಕೆ ಬಂದಂತೆ ವಿಟರನ್ನು ಕೂಡುವೆನೆ ॥

ತೊಂಡನೂರಿ : ಅಮ್ಮಾ ಮಗಳೆ. ಚಿತ್ತಜನ ಕಾತುರಕ್ಕಾಗಿ ನಮ್ಮ ಅತ್ತೆಯ ನೆತ್ತಿಯ ಮೇಲೆ ಬುತ್ತಿಯನ್ನು ಏರಿಸಿಕೊಂಡು ನನ್ನ ಚಿತ್ತಕ್ಕೆ ಬಂದಂಥ ವಿಟರನ್ನು ಒಂದು ಹಗಲಿಗೆ ಒಂದು ಸಾವಿರ ಮಂದಿಯತನಕ ಕೂಡಿದೆ. ಎಷ್ಟು ಮಾತ್ರಕ್ಕೂ ಬಿಟ್ಟಂಥವಳಲ್ಲಾ ಮಗಳೆ. ಆದ ಕಾರಣ ಅತಿ ಜಾಗ್ರತೆಯಾಗಿ ನಿನ್ನರಮನೆಗೆ ಬಂದಿರತಕ್ಕಂಥ ಪುರುಷನನ್ನು ತಂದು ತೋರಿಸುವಂಥವಳಾಗಮ್ಮಾ ಬಾಲೆ ಸೌಂದರ್ಯ ಗುಣಶೀಲೆ-

ದರುವು

ಅಮ್ಮಾ ಏನೇಳಲೀ ನಾನು ಉಮ್ಮಳಿಸುವೆ ಎನ್ನೊಳು
ಸುಮ್ಮನೆ ಈ ಪರಿ ಎನ್ನ ಭೇದಿಸಬ್ಯಾಡ
ನಿನ್ನರಮನೆಗಿನ್ನು ಯಾರು ಬಂದಿಹರಮ್ಮಾ॥