ಶ್ರೀ

ಗಣಸ್ತುತಿ

ಶ್ರೀನಿಧಿಜಾತನೆ ವಂದಿಪೆ ಭೋಗಿಯಬಂದನನೆ
ಕರಿಮುಖಗಣಪ, ಆಗಮಪುರಾಣ ವೇದಿತ-
ರಾಗಾಲಂಕಾರಪುರುಷ, ಭೋಗೀಶತನಯ
ಭಜಿಸುವೆ ನಿಮ್ಮ – ವೇದಾಂತಶಿರಿಯ-
ನಾರಾಶಯನ ಸಖನಾತ್ಮಜಾ, ಪ್ರಥಮನೆ
ಭೋಗಿಶುಕ್ಲಾಂಭರ-ಪಾಲಿಸು ನಮ್ಮಯ
ಭೋಗೀಶತನಯ-ಭಜಿಸುವೆ ನಿಮ್ಮ
ವೇದಾಂತಶಿರಿಯ॥

ಶಾರದಾಸ್ತುತಿ

ಸರಸ್ವತಿ ಶರಣಂಟಿನಿ-ನಾರದ ತುಂಬುರುಲು
ಮತಿಯುನಾತುನ್ನೀಯವೆ ಅಂಭಾ-
ದೇವದೇವೋತ್ತಮ ದೇವತಾಸಾರ‌್ವಭೌಮ ಆದಿ ಮಧ್ಯಂತ-
ಅಖಿಲಾಂಡಕೋಟಿ – ಬ್ರಹ್ಮಾಂಡನಾಯಕ ಭಾಗವತ
ನಿಕಿ ಮೊದಲೇವುದುಟಿ

 

 

ಶ್ರೀಗಣೇಶನ ದರುವು

ಗಿರಿಪುತ್ರನೇ-ಸದಾಲೋಕಪಾಲನೆ ದೇವಾ-ಸುಂದರಾಂಗ
ಸುಗುಣಾಕಾರ-ಇಂದುಧರನಕುವರ ನಿಮ್ಮ- ವಂದೇ ಮುದದಿ
ಪೂಜಿಸುವೆನು, ಗೌರಿನಂದನ ಸದಾಲೋಕಪಾಲನೆದೇವಾ ॥

ಶೇಷಭೂಷಣನಣುಗಪುತ್ರಾ-ಭೂಷಿತಾಂಗ-
ಭುವನ ಪೋಷಾ-ದೋಷರಹಿತ ಪಾಪಹರಣಾ- ಶೇಷಬಂಧ
ನಾ, ಸದಾ ಲೋಕಪಾಲನದೇವಾ ॥

ಮಕರವೈರಿ-ಮುಖನೆ ಸಬಲ-ನಿಖಿಲ ಶಾಸ್ತ್ರ
ನಿಪುಣ ನೀನೇ-ಅಖಿಲಾಗಮ ಪುರಾಣಕಾದಿ-ಸಿಂಧು ದೇವನೆ
ಸದಾಲೋಕಪಾಲನೇದೇವಾ ॥

ಧರೆಯೋಳಧಿಕವಾದ ವೈಣಿತೆ-ಯಾದ್ರಿಯೊಳಗೆ
ನೆಲಸಿ ಇರುವ ಲಕ್ಷ್ಮೀರಮಣ ಸಖನ-ಸುತಗಣಾ-
ಪತಿಯ ನಿಮ್ಮ ಸ್ತುತಿಸುತಿರುವೆ ॥

ಈಶ್ವರ : ಅಯ್ಯ ಸೇವಕ ಯಮ್ಮ ಸಮ್ಮುಖದಲ್ಲಿ ಬಂದು ನಿಂದು ಯಮ್ಮನ್ನು ದಾರೆಂದು ಕೇಳುವಂತವನಾಗುತ್ತಾ ಇದ್ದಿ. ಆದರೆ ಯಮ್ಮಯ ವಿಧ್ಯಮಾನವನ್ನು ವಿಸ್ತಾರವಾಗಿ ಪೇಳುತ್ತೇನೆ. ಚಿತ್ತವಿಟ್ಟು ಕೇಳಯ್ಯ ಸೇವಕ ಭಕ್ತಿಯೊಳ್ ಭಾವುಕಾ-

ಅಯ್ಯ ಸೇವಕ ಯೀರೇಳುಲೋಕಕ್ಕೆ ಅತ್ಯಧಿಕವಾದ ಕೈಲಾಸಕ್ಕೆ ಕಾರಣಕರ್ತನೆಂದೆಣಿಸಿ ಸುರಪ್ರಮುಖ ಅಷ್ಠದಿಕ್ಷತಿಗಳಾದಿಯಾಗಿ ಗರುಡಗಂಧರ‌್ವ, ಯಕ್ಷಸುರಸಿದ್ಧಸಾಧ್ಯರು ಮೊದಲಾಗಿ ಸುರನರಾದಿಗಳೆಲ್ಲಾರಂ ಪೊರೆಯುವಂಥ ತ್ರಿಪುರಾಸುರ ನಗರವನ್ನು ಮುರಿದ ತ್ರಿಪುರಾಂತಕನು ನಾನೇ ಅಲ್ಲವೇನಯ್ಯ
ಸೇವಕ ಭಕ್ತಿಯೋಳ್ ಭಾವುಕ-

ಸಾರಥಿ : ಹೇ ಸ್ವಾಮಿ ಯೀ ಸಭಾಮಧ್ಯರಂಗಸ್ಥಳಕ್ಕೆ ಏನುಕಾರಣ ಬಾಹೋಣವಾಯಿತೈ ಸ್ವಾಮಿ ಭಕ್ತಜನ ಪ್ರೇಮಿ-

ಈಶ್ವರ : ಅಯ್ಯ ನಕತಿ ಚಾರಕ ನನ್ನ ಮಾನಕತಿ ಪ್ರೀತಿಯಾದ ಪಾರ್ವತಿಯನ್ನು ಕರೆಸುವಂಥವನಾಗಯ್ಯ ಚಾರಕ-

ಪಾರ್ವತಿ : ನಮೋನ್ನಮೋ ಯೀಶ – ಜಗದೀಶಾ

ಈಶ್ವರ : ಧೀರ್ಘಾಯುಷ್ಯ ಮಂಗಳಕರವಾಗಿ ಕುಳಿತುಕೊಳ್ಳುವಂಥವಳಾಗೆ ಮಂಗಳಾಂಗಿ-

ದರುವು

ರಮಣ ಯೀಗ ಕರೆಸಿದಂತಹ ಭ್ರಮಣವೆಲ್ಲವಾ ॥
ನಮಿಸಿ ಬೇಡ್ವೆ ಯನಗೆ ತಿಳುಹು ಸಮರವೈಭವಾ ॥

ಪಾರ್ವತಿ : ಅಕ್ಷಿಗಳವಿತ್ರಧರ ಪ್ರತ್ಯೇಕ್ಷದಿಂದಿರುವ ಹೇ ಸಾಂಬಮೂರ್ತಿ ತಕ್ಷಣ ಯೀಕ್ಷಿಸಿ ಕರೆಸಿದ ಪರಿ-ಯೀಕ್ಷಣ ಅರುಹಬೇಕಯ್ಯ ಪ್ರಾಣಕಾಂತ ಸದ್ಗುಣವಂತಾ-

ದರುವು

ಕಾಂತೆ ಕೇಳೆ-ಕೋಮಲಾಂಗಿ ದಂತವತ್ಸಲೆ ॥
ಇಂತು ಗಣಗಳೆಲ್ಲ ನಿನ್ನಾ-ಸಂತೈಪರಾಬಲೆ ॥

ಈಶ್ವರ : ಮರಿದುಂಬೆಗಳ ಪಾವನ ಪರಮವೈಭವದ ಪುಷ್ಪ ಮಿತ್ರ ಹಿಮಕರನ ಸತಿ-ಛಾಯಾದೇವಿ ಯಂತೊಪ್ಪುವ ಪಾರ‌್ವತಿಯೇ ಕೇಳು-ಸುರಗಣಾಧಿಗಳೆಲ್ಲರು ಪರಮ ಪ್ರೀತಿಯಿಂದ ನಿನ್ನನ್ನು ಸೇವಿಸುವತಿ ಕರಿಮುಖನಾದ ಸರ‌್ವಬಂದನನು ಸಹಿತ ಸುಖದಿಂದಿರುವರೇನೆ ಗಿರಿಜೆ-

ದರುವು

ಪತಿಯೆ ಬೇಸರಾವ ಕಳೆವಾ ಇತಿಹಾಸವ ॥
ಕ್ಷಿತಿಯೊಳಾರು-ಕೇಳದಿರುವ-ಕತೆಯ ಭಾವವಾ ॥

ಈಶ್ವರ : ಹೇ ಜಗದ್ರಕ್ಷಕ-ಹೇ ಪಾಲಾಕ್ಷ-ಹೇ ಪರಮಪುರುಷ-ಹೇ ಮೃತ್ಯುಂಜಯನೇ-ನಿಮ್ಮ ದರುಶನದಿಂದ ಪರಮಪಾವನೆಯಾದೆ- ಇಂತೀಗ ಯನ್ನ ಬ್ಯಾಸರವ ಕಳೆವ ಉದ್ದಿಶ್ಯ – ಈ ಕ್ಷಿತಿಯೊಳಗೆ ಯಾರೂ ಪೇಳದೆ ಕೇಳದೆ ಇರುವದೊಂದು ಇತಿಹಾಸವೆಂಬ ಕಥೆಯನ್ನು ಅಂತರಂಗದಿ ಪೇಳಬೇಕಯ್ಯ ಈಶಾ-ಲೋಕೇಶಾ-

ದರುವು

ಗಿರಿಜೆಕೇಳೆ-ಪೇಳ್ವೆ ಕಥೆಯ ಸ್ಮರಿಸಿ ಈಗನಾಂ ॥
ಧರೆಯ ಬಳ್ಳಾಪುರಿಯಂತಾನು ಪೊರೆವ ನಮ್ಮನು ॥

ಈಶ್ವರ : ಕಮಲೋದ್ಬವ – ಲಕ್ಷ್ಮಿಯಂತೆ ಪ್ರಕಾಶಿಸುವ ಹೇ ರಮಣೀ ಈ ಪೃಥ್ವಿಯೊಳಗೆ ಯಾರೂ ಪೇಳದೆ ಕೇಳದೆ ಇರುವ ಇತಿಹಾಸವೆಂಬ ಒಂದು ಕಥೆಯನ್ನು ಪೇಳಬೇಕೆಂದು ಕೇಳಿದೆ. ಆದರೆ ಪೇಳುವೆನು – ನಿಶ್ಚಲಚಿತ್ತಳಾಗಿ ಕುಳಿತುಕೊಂಡು ಕೇಳುವಂಥವಳಾಗೆ ಅಬಲೆ-

ಪಾರ್ವತಿ : ಅದೇ ಪ್ರಕಾರ ಪೇಳಬಹುದೈ ಪ್ರಾಣೇಶ-

ಈಶ್ವರನ : ಹೇ ರಮಣಿ ಅದೇ ಪ್ರಕಾರವಾಗಿ ಅಂತಃಪುರಕ್ಕೆ ಹೋಗೋಣ ನಡಿಯೆ ರಮಣಿ-

ಪುಷ್ಪದಂತ : ಕೈಲಾಸವಾಸನಾದ ಪರಮೇಶ್ವರನಿಗೆ ಪುಷ್ಪ ಮಾಲಿಕೆಯನ್ನು ಒಪ್ಪಿಸಲು ಕಾಲಾತೀತವಾಯಿತು. ಜಾಗ್ರತೆಯಾಗಿ ಜಗದೀಶನ ಬಳಿಗೆ ಹೋಗುವೆನು-

ಈಶ್ವರನು ಪಾರ‌್ವತಿಗೆ ಪೇಳುವ ಕಥೆಯು

ಹೇ ಕಾಂತೆ. ಪುಳಿಂದ ದೇಶಾಧಿಪತಿಯಾದ ರಾಜೇಂದ್ರ ಭೂಪಾಲ ಕಂಠೀರವ ರಾಜನು ಆತನ ಸತಿ ಚಂದ್ರಚೂಡಾಮಣಿಯೆಂಬಾಕೆಯು ಸತ್ಯದಿಂದ ರಾಜ್ಯಪರಿಪಾಲನೆ ಮಾಡುತ್ತಿರಲು ಇವರಿಗೆ ಸತ್ಯ ಸುಂದರ ಸುಕುಮಾರನೆಂಬ ಸುಪುತ್ರನೊಬ್ಬನಿದ್ದನು. ರಾಜೇಂದ್ರ ಭೂಪಾಲ ಕಂಠೀರವ ರಾಜ ಈತನ ಸತಿ ಚಂದ್ರಚೂಡಾಮಣಿ ಅಪರ ವಯಸ್ಕರಾಗಿ ಇದ್ದರಿಂದ ತನ್ನ ಸುಪುತ್ರನಾದ – ಸತ್ಯ ಸುಂದರ ಸುಕುಮಾರನಿಗೆ-

ಪುಷ್ಪದಂತ : ಕೈಲಾಸವಾಸನಾದ ಪರಮೇಶ್ವರನಿಗೆ ಪುಷ್ಪ ಮಾಲಿಕೆಯನ್ನು ತೆಗೆದುಕೊಂಡು ಒಪ್ಪಿಸುವುದಕ್ಕಾಗಿ ಬಂದೆನು. ಒಳಗೆ ಹೋಗಲು ಅವಕಾಶವಿಲ್ಲ. ಪರಮೇಶ್ವರನು ಅಂತರಂಗದಲ್ಲಿ ಗಿರಿಜೆಗೆ ಏನೋ ಒಂದು ಇತಿಹಾಸದ ಕಥೆಯನ್ನು ಪೇಳುತ್ತಿರುವನು. ಅದು ತೀರುವವರೆಗೂ ಇಲ್ಲಿಯೇ ಇರುವೆನು.

ಈಶ್ವರ : ರಾಜ್ಯಪರಿಪಾಲನ ಪಟ್ಟವಂ ಕಟ್ಟಬೇಕೆಂದು ಪುತ್ರನಂ ಕೇಳಲು ಅಶಾಶ್ವತವಾದ ಈ ರಾಜ್ಯಭಾರದಿಂದ ಯಾವ ವಿಧವಾದ ಸುಖವೂ ಇಲ್ಲ. ಹರಿನಾಮಸ್ಮರಣ, ಸಾಧು ಸತ್ಪುರುಷರ ಸೇವೆಯಿಂದ ಸಾಂಖ್ಯವನ್ನು ಪರಿಗ್ರಹಿಸಿ ತಾರಕವನ್ನು ಸಾಧಿಸಿ ಅಮನಸ್ಕದೋಳ್ ಶಾಂಭವಿ ಮುದ್ರೆಯಿಂದ ಕೇಚರಿಭೂಚರಿ ನೋಡುತ್ತ ಇದ್ದರೆ ಪರಮಸುಖವುಂಟೆಂದು ಪೇಳಿದನು. ತಂದೆ ತಾಯಿಗಳು ನಿರ‌್ಭಂಧದಿಂದ ಪುತ್ರನಿಗೆ ಪಟ್ಟವಕಟ್ಟಿ ತಪೋನಿಷ್ಠೆಗೆ ಹೊರಟರು. ಸತ್ಯ ಸುಂದರ ಸುಕುಮಾರನು ಕೆಲವು ಕಾಲ ಸತ್ಯದಿಂದಲಿ ಪ್ರಜಾಪರಿಪಾಲನೆಯ ಮಾಡಿಕೊಂಡು ನಂತರ ತನ್ನ ದೇಶದ ಆಡಳಿತವೆಲ್ಲಾ ತನ್ನ ಪ್ರಧಾನಿಯಾದ ವಿಚಿತ್ರವೀರ‌್ಯನಿಗೊಪ್ಪಿಸಿ ತಾನು ತಪೋನಿಷ್ಠೆಗೆ ಪೋಗಿ ಕೆಲವು ಕಾಲ ತಪಸ್ಸು ಮಾಡಿ ಸಾಕ್ಷಾತ್ ಪರಾತ್ಪರ ವಸ್ತುವಾದ ಶ್ರೀಮನ್ ನಾರಾಯಣನ ನಿವಾಸ ಸ್ಥಳವಾದ ವೈಕುಂಠಕ್ಕೆ ಸೇರಿದನು. ಹೇ ಗಿರಿಜೆಯೆ ಎನ್ನ ಕಥೆಯನ್ನು ಕೇಳಿ ಮನೋಹರುಷವಾಯಿತೆ – ಇನ್ನು ನಮ್ಮ ನಿವಾಸಸ್ಥಾನಕ್ಕೆ ಹೋಗುವುದೇ ಉಚಿತ. ಇನ್ನು ನಮ್ಮ ಪ್ರಿಯಭಕ್ತನಾದ ಪುಷ್ಪದಂತನು ಪುಷ್ಪಮಾಲಿಕೆಯನ್ನು ತರುವ ಹೊತ್ತಾಯಿತು – ನೀನು ಜಾಗ್ರತೆಯಾಗಿ ತೆರಳುವಂಥವಳಾಗೆ ಕಾಂತಾಮಣಿ-

ದರುವು

ಶೇಷಾಭೂಷಣಾ ಜಗದೀಶ ಲೋಕೇಶನೆ ಕೇಳು ॥
ದೋಷವು ಹರಿಸುವ ಶೇಷ ಬಂಧನಪಿತ – ಭೂಷಣ
ಅಲಂಕಾರ-ಪುಷ್ಪಮಾಲೆಯು ॥

ಪುಷ್ಪದಂತ : ಹೇ ಸ್ವಾಮಿ ಮೃತ್ಯುಂಜಯನೇ ಈಶಾ-ಜಗದೀಶಾ-ಭವನಾಶ ಪರಮೇಶಾ-ಪಾಲಾಕ್ಷ-ಪರಮಪುರುಷ- ಕಂಜಾಕ್ಷ ನಿಟಿಲಾಕ್ಷ ನಿಮ್ಮ ಪಾದ ಪದ್ಮಂಗಳ ದರುಶನದಿಂದ ಧನ್ಯನಾದೆನು ಈಗಲೇ ವಂದಿಸುವನು. ಈ ಸುಗಂಧ ಪರಿಮಳವಾದ ಸೌಗಂಧಿಕ-ಸಂಪಿಗೆ-ಪಾರಿಜಾತ-ದುಂಡುಮಲ್ಲಿಗೆ ಪುಷ್ಪ ಮಾಲಿಕೆಯನ್ನು ತಂದಿರುವೆನು. ತಮಗೆ ಸಮರ್ಪಿಸುವೆನೈ ಮಹಾನುಭಾವ.

ಹೇ ದೇವ ನಾನು ಬಂದು ಬಹಳ ಹೊತ್ತಾಯಿತು. ಅಪ್ಪಣೆಯಾದರೆ ಹೋಗಿಬರುವೆನೈ ಈಶಾ-ಜಗದೀಶಾ.

ಈಶ್ವರ : ಅದೇ ಪ್ರಕಾರವಾಗಿ ಹೋಗಿಬರಬಹುದಯ್ಯ ಪುಷ್ಪದಂತಾ.

ಪುಷ್ಪದಂತಿ : ಶ್ರೀಶೈಲವಾಸನಾದ ಪರಮೇಶ್ವರನ ಸದಾಸೇವೆಯೊಳಿರುವ ಹೇ ಕಾಂತ ಪ್ರತಿದಿನವೂ ತಾವು ಪುಷ್ಪ ಮಾಲಿಕೆಯನ್ನು ಪರಮೇಶ್ವರನಿಗೆ ಒಪ್ಪಿಸಿ ಜಾಗ್ರತೆಯಾಗಿ ಬರುತ್ತಿದ್ದಿರಿ. ಈ ದಿವಸ ಮಾತ್ರ ಬಹು ಸಾವಕಾಶವಾಗಲು ಏನು ಕಾರಣವೋ ಗೊತ್ತಾಗಲಿಲ್ಲ. ಎನ್ನೊಡನೆ ಪೇಳಬೇಕೈ ಪ್ರಾಣವಲ್ಲಭ.

ಪುಷ್ಪದಂತ : ಶೃಂಗಾರವಾದ ಮಂಗಳಾಂಗಿಯಂತೊಪ್ಪುವ ಅಂಗನಾಮಣಿಯಾದ ತರುಣಿಯೇ ಕೇಳು – ನಾನು ಜಗದೀಶನ ಸನ್ನಿಧಿಗೆ ಪುಷ್ಪಮಾಲಿಕೆಯನ್ನು ತೆಗೆದುಕೊಂಡು ಪೋದೆನು. ಅನಿತರೊಳು ಏನು ಕಾರಣ ತಡವಾಯಿತೆಂದರೆ – ಪರಮೇಶ್ವರನು ಗಿರಿಜೆಗೆ ಒಂದು ಇತಿಹಾಸವಾದ ಕಥೆಯನ್ನು ಅಂತರಂಗಸ್ಥಳದಿ ಹೇಳುತ್ತಿದ್ದನು. ಆದ್ದರಿಂದ ಒಳಗೆ ಹೋಗಲು ಅವಕಾಶವಿಲ್ಲದೆ ನಿರೀಕ್ಷಣೆಮಾಡಿ ನಂತರ ಪುಷ್ಪಮಾಲಿಕೆಯನ್ನು ಒಪ್ಪಿಸಿಬಂದು ಇರುವೆನೇ ಪ್ರಾಣಕಾಂತೆ.

ಪುಷ್ಪದಂತಿ : ಹೇ ಸ್ವಾಮಿ ಪ್ರಾಣವಲ್ಲಭ-ಪರಮೇಶ್ವರನು ಪಾರ‌್ವತಿಗೆ ಪೇಳಿದ ಕಥೆಯು ತಾವು ಎನಗೆ ಅಪ್ಪಣೆ ಕೊಡಿಸಬೇಕೈ ಕಾಂತ ಸದ್ಗುಣವಂತ-

ಪುಷ್ಪದಂತ : ಹೇ ಪ್ರಾಣಾಂಗನೆ, ಈಶ್ವರನು ಗಿರಿಜೆಗೆ ಪೇಳಿದ ಕಥೆಯು ಬಹಿರಂಗವಾಗಿ ಪೇಳುವ ಇತಿಹಾಸವಲ್ಲ ಅಂತರಂಗಸ್ಥಳದಲ್ಲಿ ಹೇಳುತ್ತೇನೆ ಮಂದಿರಕ್ಕೆ ಪೋಗೋಣ ನಡಿಯೇ ತರುಣೀಮಣಿ.

ಪುಷ್ಪದಂತಿ : ಆಹಾ ರಜತಾದ್ರಿ ಗಿರಿವಾಸನ ಸತಿ ಗಿರಿಜೆಯಾದ ಪಾರ‌್ವತಾದೇವಿಗೆ ದುಂಡುಮಲ್ಲಿಗೆ-ಸುರಹೊನ್ನೆ- ಸಂಪಿಗೆಯ ಪುಷ್ಪದ ಮಾಲೆಯನ್ನು ಒಪ್ಪಿಸಲು ಬಹಳ ಹೊತ್ತಾಯಿತು. ಜಾಗ್ರತೆಯಾಗಿ ಒಪ್ಪಿಸಲು ಹೋಗುವೆನು.

ನಮೋನ್ನಮೋ ಹೇ ತಾಯೇ

ಪಾರ್ವತಿ : ಶುಭಮಂಗಳಕರವಾಗಿ ಬರುವಂಥವಳಾಗಮ್ಮ ಬಾಲೆ.

ದರುವು

ಮಾತೆ ನಿನ್ನ ಬೇಡಿಕೊಂಬೆನೆ – ಎನ್ನಮ್ಮ ಕೇಳೆ
ಆತುರದಿ ನಾನು ಬಂದೆನು ॥

ಸತತ ನಿಮ್ಮ ಸೇವೆಯಲ್ಲಿ ಪತಿತಳಾಗಿ ಇರುವೆ ನಾನು
ಅತಿಶಯಾದ ಪುಷ್ಪಮಾಲೆ ಹಿತದಿ ಒಪ್ಪಿಸುವೆನು ಮಾತೆ ॥

ಪುಷ್ಪದಂತಿ : ಹೇ ಜಗದ್ರಕ್ಷಕಿ ಪರಮಪಾವನೆ-ಗಿರಿನಂದನೆಯಾದ ಹೇ ತಾಯೆ ಸುಗಂಧ-ಪರಿಮಳ-ಸುವಾಸನೆಗಳುಳ್ಳ ಪಾರಿಜಾತ-ಸೌಗಂಧಿಕ-ಪುಷ್ಪಮಾಲಿಕೆಯನ್ನು ತಂದಿರುವೆನು ಒಪ್ಪಿಸಿಕೊಳ್ಳಬೇಕಮ್ಮ ತಾಯೇ ಎನ್ನನ್ನು  ಕಾಯೆ.

ಪಾರ್ವತಿ : ಹಾಗೆ ಆಗಬಹುದಮ್ಮಾ ಮಗಳೆ. ಅಮ್ಮ ನಿಜಸತ್ವ ತಮೋ ತ್ರಿಗುಣಗಳುಳ್ಳ ಹೇ ಬಾಲೆ ಎನ್ನ ಪತಿಯಾದ ಜಗದೀಶನು ಒಂದು ಇತಿಹಾಸವಾದ ಕಥೆಯನ್ನು ಹೇಳಿರುವರು. ಅದನ್ನು  ನಿನಗೆ ಪೇಳುತ್ತೇನೆ. ಕುಳಿತುಕೊಂಡು ಕೇಳುವಂಥವಳಾಗಮ್ಮ ಬಾಲೆ.

ಪುಷ್ಪದಂತಿ : ಅದೇ ಪ್ರಕಾರ ಹೇಳುವಂಥವಳಾಗಮ್ಮ ತಾಯೇ.

ಪಾರ್ವತಿ ಪುಷ್ಪದಂತೆಗೆ ಪೇಳುವ ಕಥೆಯು

ಅಮ್ಮ ಪುಷ್ಪದಂತೆ ಪುಳಿಂದ ದೇಶಾಧಿಪತಿಯಾದ ರಾಜೇಂದ್ರಭೂಪಾಲ ಕಂಠೀರವ ರಾಜನು ಆತನ ಸತಿ ಚಂದ್ರಚೂಡಾಮಣಿ ಎಂಬಾಕೆಯು ಸತ್ಯದಿಂದ ರಾಜ್ಯ ಪರಿಪಾಲನೆ ಮಾಡುತ್ತಿರಲು ಇವರಿಗೆ ಸತ್ಯ ಸುಂದರ ಸುಕುಮಾರನೆಂಬ ಸುಪುತ್ರನೊಬ್ಬನಿದ್ದನು. ರಾಜೇಂದ್ರ ಭೂಪಾಲ ಕಂಠೀರವ ರಾಜನಿಗೂ ಈತನ ಸತಿ ಚಂದ್ರಚೂಡಾಮಣಿಗೂ ಅಪರವಯಸ್ಕರಾಗಿ ಇದ್ದರಿಂದ ತನ್ನ ಸುಪುತ್ರನಾದ ಸತ್ಯಸುಂದರ ಸುಕುಮಾರನಿಗೆ ರಾಜ್ಯ ಪರಿಪಾಲನೆ ಪಟ್ಟವಂ ಕಟ್ಟಬೇಕೆಂದು ಪುತ್ರನಂ ಕೇಳಲು ಅಶಾಶ್ವತವಾದ ಈ ರಾಜ್ಯಭಾರದಿಂದ ಯಾವ ವಿಧವಾದ ಸುಖವೂ ಇಲ್ಲ, ಹರಿನಾಮಸ್ಮರಣೆ ಸಾಧು ಸತ್ಪುರುಷರ ಸೇವೆಯಿಂದ ಪರಮಸುಖ ಉಂಟೆಂದು ಹೇಳಿದನು. ತಂದೆ ತಾಯಿಗಳು ನಿರ್ಬಂಧದಿಂದ ಪುತ್ರನಿಗೆ ಪಟ್ಟವಂ ಕಟ್ಟಿ ತಪೋನಿಷ್ಠೆಗೆ ಹೊರಟರು.

ಪುಷ್ಪದಂತಿ : ಅಮ್ಮ ತಾಯೆ ನೀವು ಪೇಳಿದ ಕಥೆಯಲ್ಲಿ ಸ್ವಲ್ಪ ಬಿಟ್ಟು ಪೇಳಿರುವಿರಿ ಅದು ಹಾಗಲ್ಲ-ಹ್ಯಾಗೆಂದರೆ ಸಾಧು ಸತ್ಪುರುಷರ ಸೇವೆಯಿಂದ ಸಾಂಖ್ಯವನ್ನು ಪರಿಗ್ರಹಿಸಿ ತಾರಕವನ್ನು ಸಾಧಿಸಿ ಅಮನಸ್ಕದೊಳ್ ಶಾಂಭವಿ ಮುದ್ರೆಯಿಂದ ಖೇಚರಿ-ಭೂಚರಿ-ನೋಡುತ್ತಾ ಇದ್ದರೆ ಪರಮಸುಖವುಂಟೆಂದು ಹೇಳಿರುವುದು – ಈ ಕಥೆಯು ಹೀಗಿರುವುದಮ್ಮಾ ತಾಯೆ.

ಪಾರ್ವತಿ : ಅಯ್ಯಸಾರಥಿ. ಎನ್ನ ಪ್ರಾಣಕಾಂತನಾದ ಸಾಂಬಮೂರ್ತಿಯನ್ನು ಅತಿಜಾಗ್ರತೆಯಿಂದ ಕರೆದುಕೊಂಡು ಬರುವಂಥವನಾಗಯ್ಯ ಸಾರಥಿ.

ಸಾರಥಿ : ಅದೇ ಪ್ರಕಾರವಾಗಿ ಕರೆದುಕೊಂಡು ಬರುತ್ತೇನಮ್ಮ ತಾಯೇ.

ಈಶ್ವರ : ಬಾಲರಸಾಲ-ನವಪಲ್ಲವ-ಕೋಮಲೆಯಾದ, ಭಾರತಿಯಂತೊಪ್ಪುವ ಹೇ ಕಾಂತೆ ಯನ್ನಿಷ್ಠು ಜಾಗ್ರತೆಯಿಂದ ಕರೆಸಿದ ಕಾರಣವೇನೋ ಹೇಳಬೇಕೆ ರಮಣಿ-

ದರುವು

ಬಿಡು ಬಿಡು ಬಿಡು ಬಿಡಯ್ಯ ಜಗದೀಶನೆ
ಬಿಡು ಬಿಡು ಬಿಡು ಬಿಡಯ್ಯ ॥

ಬಿಡು ಬಿಡು ಯನ್ನೋಳ್-ನುಡಿದ
ಕಥೆಯು ಈಗ ಪೊಡವಿಯೋಳೆಲ್ಲರು
ನುಡಿವ-ನುಡಿಯನು ಪೇಳ್ವೆ ॥

ಪಾರ್ವತಿ : ಹೇ ಪ್ರಾಣನಾಥ ನೀನು ತಮೋ ತ್ರಿಗುಣ-ಸಂಪನ್ನನೆಂದು ನಂಬಿ ಒಂದು ಇತಿಹಾಸವಾದ ಕಥೆಯನ್ನು ಪೇಳೆಂದರೆ ಈ ಪೃಥ್ವಿಯೊಳು ಎಲ್ಲರು ಬಲ್ಲವರಲ್ಲದೆ ನಮ್ಮ ಪುಷ್ಪದಂತೆಯೂ ಸಹ ಬಲ್ಲಂತ ಕಥೆಯನ್ನು ಪೇಳಿದೆ – ನಿನ್ನಲ್ಲಿ ಕಟಪವಿರುವುದರಿಂದ ನಿನ್ನನ್ನು ನಂಬಬಾರದು – ನನ್ನ ಸಮ್ಮುಖದಲ್ಲಿ ನಿಲ್ಲದೆ ಹೊರಟುಹೋಗುವಂಥವನಾಗೈ ರಮಣ :

ದರುವು

ಕೋಪವೇಕೆ ಎನ್ನ ಕಾಂತೆಯೇ ತಾಪಸವರ‌್ಯೆ
ಕೋಪವೇಕೆ ಎನ್ನ ಕಾಂತೆಯೇ ॥

ಈ ಪರಿಯ ನುಡಿವರೇನೆ ಆದುದಾವು
ಪೇಳಲಿಲ್ಲ ಪಾಪಿ ನಾನು-ನುಡಿದ ಕಥೆಯು
ತಾಪ ಹೆಚ್ಚಿ ನಿಂದಿಸುವರೆ ॥

ಈಶ್ವರ : ಹೇ ರಮಣಿ – ನಾನು ಯಾರಿಗೂ ತಿಳಿಯದ ಇತಿಹಾಸವೆಂಬ ಕಥೆಯನ್ನು ನಿನ್ನೊಳು ಪೇಳಿದೆನು. ಅದು ನಿನ್ನಯ ಭಕ್ತಳಿಗೆ ತಿಳಿದಿದೆ ಎಂದು ಎನ್ನ ಮೇಲೆ ಕೋಪಗೊಳ್ಳಲಿ ಬೇಡ. ಈ ಕಥೆಯು ಪುಷ್ಪದಂತೆಗೆ ಹ್ಯಾಗೆ ತಿಳಿಯಿತೋ ಆಕೆಯನ್ನು ಕರೆಸಿ ಕೇಳಿದರೆ ನಿನಗೆ ಗೊತ್ತಾಗುತ್ತದೆ. ಆದ್ದರಿಂದ ಜಾಗ್ರತೆಯಿಂದ ಕರೆಸುವಂಥವಳಾಗು.

ಪಾರ್ವತಿ : ಅಯ್ಯ ಸಾರಥಿ, ನಮ್ಮ ಪುಷ್ಪದಂತೆಯನ್ನು ಅತಿ ಜಾಗ್ರತೆಯಿಂದ ಕರೆದುಕೊಂಡು ಬರುವಂಥವನಾಗೈ ಸಾರಥಿ :

ಪುಷ್ಪದಂತೆ : ವಂದನೆ ಮಾಡಿ ಬೇಡಿಕೊಂಬುವೆ ಹೇ ಸ್ವಾಮಿ ಲೋಕ ರಕ್ಷಕ ಎನ್ನನ್ನು ಕರೆಸಿದ ಕಾರಣವೇನೋ ನಿಮ್ಮಯ ಭಕ್ತಳಾದ ಯನ್ನೊಡನೆ ವುಸರಬೇಕಯ್ಯ ಸ್ವಾಮಿ ಲೋಕರಕ್ಷಕ.

ಈಶ್ವರ : ಅಮ್ಮ ಪುಷ್ಪದಂತೆ. ಎನ್ನ ಸತಿಯಾದ ಗಿರಿಜೆಯು ನಿನ್ನೊಂದಿಗೆ ಪೇಳಿದ ಕಥೆಯು ನಿನಗೂ ತಿಳಿದಿರುವುದೆಂದು ಪಾರ‌್ವತಿಯು ಎನ್ನ ಮೇಲೆ ಕೋಪೋದ್ರೇಕಳಾದಳು. ಈ ಕಥೆಯು ನಿನಗೆ ಹ್ಯಾಗೆ ತಿಳಿಯಿತೋ ಪೇಳುವಂಥವಳಾಗಮ್ಮಾ ಪುಷ್ಪದಂತೆ.

ಪುಷ್ಪದಂತೆ : ಹೇ ಸ್ವಾಮಿ ಜಗದ್ರಕ್ಷಕ – ನಾನು ಎನ್ನ ಪತಿಯನ್ನು ಒಂದು ಕಥೆಯನ್ನು ಪೇಳೆಂದು ಕೇಳಿದೆನು. ಅದಕ್ಕೆ ಪಾರ್ವತಿಯು ನನಗೆ ಪೇಳಿದ ಕಥೆಯನ್ನೆ ಎನ್ನ ಪತಿಯೂ ಪೇಳಿದನು. ಆದ್ದರಿಂದ ಅದು ನನಗೆ ಜ್ಞಾಪಕದಲ್ಲಿ ಇದ್ದುದರಿಂದ ಗಿರಿಜೆಯು ಯನಗೆ ಕಥೆಯನ್ನು ಪೇಳುವಾಗ ಮರೆತು ಪೇಳಿದ್ದರಿಂದ ನಾನು ಅದನ್ನು ಜ್ಞಾಪಕ ಕೊಟ್ಟೆನಯ್ಯ ಮಹಾಸ್ವಾಮಿ-

ಈಶ್ವರ : ಈ ಕತೆಯನ್ನು ನಿನ್ನ ಪತಿಯು ಪೇಳಿದನೋ ಹ್ಯಾಗಮ್ಮ ಹಾಗಾದರೆ ಪಷ್ಷದಂತನನ್ನು ಕರೆಸುವಂಥವನಾಗಯ್ಯ ಸಾರಥಿ.

ಪುಷ್ಪದಂತ : ನಮೋನ್ನಮೋ ಸ್ವಾಮಿ ಎನ್ನನ್ನು ಜಾಗ್ರತೆಯಿಂದ ಕರೆಸಿದ ಕಾರಣವೇನೋ ಪೇಳಬೇಕು ಮಹಾಸ್ವಾಮಿ.

ಈಶ್ವರ : ಮಂಗಳವಾಗಲಿ ಪುಷ್ಪದಂತನೇ – ನಿನ್ನ ಸತಿಗೆ ಪೇಳಿದ ಕಥೆಯು ನಿನಗೆ ಹ್ಯಾಗೆ ಗೊತ್ತಾಯಿತೋ ಪೇಳುವಂಥವನಾಗು.

ಪುಷ್ಪದಂತ : ಹೇ ಸ್ವಾಮಿ ಜಗದ್ರಕ್ಷಕ ನಾನು ಪುಷ್ಪಮಾಲಿಕೆಯನ್ನು ತೆಗೆದುಕೊಂಡು ತಮಗೆ ಒಪ್ಪಿಸುವ ಉದ್ದಿಶ್ಯ ಬಂದೆನು. ತಾವು ನಮ್ಮ ಮಾತೆಯಾದ ಪಾರ್ವತಿಗೆ-ಏಕಾಂತದಲ್ಲಿ ಪೇಳುತ್ತಿದ್ದಿರಿ. ನಾನು ಒಳಗೆ ಬರಲು ಅವಕಾಶವಿಲ್ಲದ್ದರಿಂದ ಆಚೆಯೇ ನಿಂತುಕೊಂಡು ಕೇಳಿಸಿಕೊಂಡೆನು. ಆ ಕಥೆಯನ್ನು ಎನ್ನ ಸತಿಗೆ ಪೇಳಿದೆನೈ ಸ್ವಾಮಿ ಭಕ್ತಜನಪ್ರೇಮಿ.

ಈಶ್ವರ : ಎಲಾ ಪುಷ್ಪದಂತ ನೀನು ಮರೆಯಲ್ಲಿ ನಿಂತು ನಾನು ಹೇಳುತ್ತಿದ್ದ ಕಥೆಯನ್ನು ಕೇಳಿ ನಿನ್ನ ಸತಿಗೆ ಪೇಳಿದ ಕಾರಣ ನೀನು ಭೂಲೋಕದಲ್ಲಿ ಭೇತಾಳನಾಗಿ ಸಂಚರಿಸುವಂತೆ  ಶಾಪವನ್ನಿತ್ತಿರುವೆನು. ಹೊರಡುವಂಥವನಾಗು.

ದರುವು

ಶ್ರೀಶೈಲವಾಸನೆ ಈಶ ಪಾಲಿಸು ಪರ
ಮೇಶನೆ ಗುಣಧಾಮಾ ಕುಶಲರಪ್ರೇಮಾ ॥

ಹರನೆ ಯನ್ನಾ ಆಶೆಯು ತಹರಿಪಪ್ಪೀಸೆ
ಪಾಶಾಭಾವವ ಕೊಟ್ಟಿಯಾ ಪರಿರ‌್ಯಾರು ॥

ಪುಷ್ಪದಂತ : ಹೇ ಸ್ವಾಮಿ ಜಗದ್ರಕ್ಷಕ ನಿರಪರಾಧಿಯಾದ ಯನ್ನನ್ನು ಭೇತಾಳನಾಗಿ ಸಂಚರಿಸುವಂತೆ ಶಾಪವನ್ನು ಕೊಟ್ಟಿರಿ. ಸತತವೂ ನಿಮ್ಮ ಸೇವೆಯಲ್ಲಿ ಇರುತ್ತಿದ್ದೆನು. ಈ ಶಾಪವು ಪರಿಹಾರವಾಗಿ ಪುನಹ ನಿಮ್ಮ ಸೇವೆಗೆ ಬರಬೇಕಾದರೆ ಎಂದಿಗೆ ಪೇಳಬೇಕಯ್ಯ ಸ್ವಾಮಿ ಭಕ್ತಜನಪ್ರೇಮಿ.

ಈಶ್ವರ : ಅಯ್ಯ ಪುಷ್ಪದಂತನೆ ಭೂಲೋಕದಲ್ಲಿ ವಿಕ್ರಮಾದಿತ್ಯರಾಯನೆಂಬ ಒಬ್ಬ ರಾಜನು ಹುಟ್ಟುವನು. ಆತನು ತನ್ನ ಸೇವೆಗೋಸ್ಕರವಾಗಿ ನಿನ್ನನ್ನು ಕರೆದುಕೊಂಡು ಹೋಗುವೆನು. ಅವನ ಸೇವೆಯಿಂದಲೇ ನಿನ್ನ ಶಾಪವು ಪರಿಹಾರವಾಗಿ ನಂತರ ನನ್ನ ಸೇವೆಗೆ ಬರುವೆ ಹೊರಡುವಂಥವನಾಗು.

ಪಾರ್ವತಿ : ಅಮ್ಮ ಪುಷ್ಪದಂತೆ ನಾನು ನಿನ್ನೊಂದಿಗೆ ಪೇಳಿದ ಇತಿಹಾಸದ ಕಥೆಯಲ್ಲಿ ತಪ್ಪು ಅಂದದ್ದರಿಂದ ನೀನು ಭೂಲೋಕದಲ್ಲಿ ರಾಕ್ಷಸಿಯಾಗಿ ಸಂಚರಿಸುವಂಥವಳಾಗು.

ದರುವು

ಗಿರಿಜೆ ಕೇಳಮ್ಮಯ್ಯ ಕರುಣವಿಲ್ಲದೆ ನೀನು
ದುರುಳ ರಕ್ಕಸಿಯಾಗೆಂದು ನುಡಿದೆಯೆ ಇಂದು ॥

ಪಾರಾಗಿ ಬರುವಂತಾ ದಾರೀಯು ತಿಳುಹಮ್ಮಾ
ಸೇರಿ ನಿನ್ನಯ ಸೇವೆಗೆ ಬರುವುದು ಹ್ಯಾಗೆ ॥

ಪುಷ್ಪದಂತೆ : ಅಮ್ಮ ತಾಯೆ ರಕ್ಕಸಿಯಾಗಿ ಸಂಚರಿಸೆಂದು ಎನ್ನ ಪತಿಗೆ ಭೇತಾಳನಾಗಿ ಪೋಗೆಂದು ಪರಮೇಶ್ವರನು ನುಡಿದಿರುವನು. ನಾನು ಪತಿಹೀನಳಾಗಿ ಇರುವುದಲ್ಲದೆ ಸಂತಾನ ಬಂಜೆಯಾಗಿದ್ದರೆ – ಸದ್ಗತಿಗಳಿಗೆ ಕಾರಣವಿಲ್ಲದೆ ಇರುವುದಾದ ಕಾರಣ ಮುಂದೇನು ಗತಿ ಮಾಡಲಮ್ಮಾ ತಾಯೇ ಕರುಣದಿಂದ ಕಾಯೆ.

ಪಾರ್ವತಿ : ಅಮ್ಮ ಮಗಳೆ ನೀನು ಬಂಜೆಯಾಗದೆ ಸಂತಾನ ಪಡೆಯಲು ಕಾರಣ ಪೇಳುವೆನು.  ನೀನು ಕೈಲಾಸದಿಂದ ಹೋದ ಮೇಲೆ ರಕ್ಕಸಿಯಾಗಿ ಸಂಚರಿಸಿ ದಿವ್ಯಯಾತ್ರೆಗಳನ್ನು ಮಾಡಿ ಪುಣ್ಯಕ್ಷೇತ್ರಗಳಲ್ಲಿ ಸ್ನಾನ ಮಾಡುತ್ತಾ ಗಂಗಾದಿಪೂಜೆಯನ್ನು ಮಾಡಿದರೆ ಸುರಗಂಗೆಯ ವರದಿಂದ ಸ್ತ್ರೀ ಸಂತಾನವಾಗುವುದು. ಆ ಪುತ್ರಿಯು ಧಾರಾಪುರಿ ಪಟ್ಟಣವ ಪರಿಪಾಲಿಪ ಮಾರಭೂಪಾಲನ ಸುತ – ಕರಿರಾಜನೆಂಬುವನನ್ನು ವರಿಸುವಳು. ನೀನು ಆತನ ರಕ್ತಪಾನವನ್ನು ಮಾಡಿದರೆ ನಿನ್ನ ಶಾಪವು ಪರಿಹಾರವಾಗಿ ನಂತರ ನನ್ನ ಸೇವೆಗೆ ಸುಖವಾಗಿ ಬರುವೆ. ನಿನ್ನ ಪತಿಯೂ ಸಹ ಭೇತಾಳ ರೂಪವನ್ನು ಬಿಟ್ಟು ಪರಮೇಶ್ವರನ ಸನ್ನಿಧಿಗೆ ಬರುವನು. ಆದ ಕಾರಣ ನೀನು ಕೈಲಾಸದಿಂದ ಜಾಗ್ರತೆಯಾಗಿ ಹೊರಡುವಂಥವಳಾಗು.

ಪುಷ್ಪದಂತೆ : ತಮ್ಮ ಅಪ್ಪಣೆ ಮೇರೆಗೆ ಹೊರಟುಹೋಗುತ್ತೇನಮ್ಮ ತಾಯೆ.

 

ಸಭಾವಂದನೆ

ರಾಗ ಕೇದಾರಗೌಳ

ಶ್ರೀರಮಣೀಯವಾದ ಯೀ ಸಭಾಮಂಟಪದಿ
ಶ್ರೀಹರಿಯ ನೆನೆದು ಪಾಕಶಾಸನ ರುದ್ರಯೀಶನಂ
ಸ್ತುತಿಸಿ ಲೋಕೇಶಫಣಿ ಲಿಖಿತ ಬ್ರಹ್ಮನಂ ನೆಲೆ
ಗೊಳಿಸಿ ಆಕಾರಶ್ರೀಗೆ ಲಕ್ಷ್ಮಿವಾಗ್ಗರಿಸುಚಿಗಳಂ ಭಜಿಸಿ
ಪ್ರಥಮದೇವರು ನಿರ್ವಿಘ್ನ ಗಣಪತಿಯಂ ವಂದಿಸಿ
ಪತಿತ ಪಾವನರಾದ ದಿಕ್ಪತಿಗಳನ್ನು ಹಿತದಿ ವ್ಯಾಸಪುರಾಣ
ಶುಕಸನಕಾದಿ ವಾಲ್ಮೀಕರನ್ನು ಅತಿಶಯವಾದಂತೆ
ಋಗ್ವೇದ ಸಾಮ ಅಥರ್ವಣ ಕಲಿತ ಕವಿಸಾರ್ವ
ಭೌಮರಿಗೆ ನಿರುತನಿರ್ಮಲನಾಗಿ ಸ್ಮರಿಸಿ ಬೇಡುವೆನು.
ಅರಿಯೆನು ರಘುವಂಶ ವ್ಯಾಕರಣ ಛಂದಸ್ಸು
ತಾವು ಪರಪುರುಷರೆ ಕೇಳಿ ಈ ದಿನ ರಾತ್ರಿ ಪರ
ವಸ್ತು ವೈಷ್ಣವ ತಿರುವೆಂಗಡ ಜೀಯರ್‌ರವರಿಂದ
ವಿರಚಿತವಾದ ಈ ಕರಿರಾಜನ ಕತೆಯನ್ನು
ನಮ್ಮ ಗುರುಗಳಾದ ಯದ್ಲಹಳ್ಳಿ ಪಾಪಣ್ಣನವರ ಶಿಷ್ಯ
ರಾದ ನಾವುಗಳು ಪೇಳುವೆವು ಇದರಲ್ಲಿ ತಪ್ಪು
ನೆಪ್ಪುಗಳು ವಾಚಾಶಬ್ದಗಳು ಒಪ್ಪದಿದ್ದಲ್ಲಿ ನೀವು
ತಿದ್ದಿ ಲಾಲಿಪುದು ವಂದನವೈ ಸಭಾಸಜ್ಜನರೆ