ಪದ

ಬೇಗ ಬಾರೈ ಯೋಗೀಶ ನಮಿಪೆ ರಾಗ
ಭಾವ ಸ್ವರ ಯೋಗಿ ಮಹಾತ್ಮನೆ ॥

ನಿರುತವು ತ್ರಿಭುವನ ಚರಿಸುತಲಿರುವೆ ನೀಂ
ಭರದಿಂದಾ ಶಿರಿಯಿಂದಾ ॥ಬೇಗ ॥

ಗಯ : ಹೇ ದೇವ ಮುನೀಂದ್ರ ಯನ್ನ ಪ್ರಾರ್ಥನೆಯನ್ನು ಆಲಿಸಿ ಯನಗೆ ಪ್ರಸನ್ನನಾಗು ಮಹಾತ್ಮ.

ಪದ

ಪೊರೆಯೊ ಮಹಾನುಭಾವ ಶಿರಿಯರಸನೆ
ದೇವದೇವ ತರಳಧೃವನ ಭರದಿ ಕಾಯ್ದೆ
ಕರಿ ಮೊರೆಯಿಡೆ ಮಕರಿ ಕೊಂದೆ  ತರಳೆ
ಶಿಲೆಯ ನಾರಿಗೈದೆ  ಮುರಹರ ಮೂಜಗಕೆ ತಂದೆ ॥

ನಾರದ : ನಾರಾಯಣ ನಾರಾಯಣ

ಗಯ : ನಾರದ ಮಹಾ ಮುನಿಗಳಿಗೆ ವಂದಿಸುವೆನು.

ನಾರದ : ಧೀರ್ಘಾಯುಷ್ಯಮಸ್ತು  ನನ್ನಂ ಸ್ಮರಿಸಿದ ಕಾರಣವೇನೈ ಬಾಲಕ.

ಗಯ : ಮಹಾತ್ಮ ತಮಗೆ ತಿಳಿಯದ ವಿಚಾರವೇನಿರುವುದು.

ನಾರದ : ವತ್ಸಾ, ತಂಬೂರಿಯನ್ನು ಹೊತ್ತು ತಿರುಗುವ ಯೀ ಬ್ರಾಂಹಣನಿಗೆ ಯಾವುದು ತಾನೆ ತಿಳಿದೀತು. ಅದೇನು ವಿಶದವಾಗಿ ಹೇಳು.

ಪದ

ಯತಿವರ‌್ಯ ಲಾಲಿಸೊ
ಹಿತದಿಂದ ಪಾಲಿಸೊ
ಗತಿಯೇನು ಯನಗೀಗ ಪಥವನ್ನು ತೋರಿಸೊ ॥

ಮೋಸ ಹೋದೆನೈ ಮುನಿ ಸೂಸಲೇನೀಗಾ ಧ್ವನಿ
ವಾಸುದೇವನಿಂದ ಯೀಗ ಘಾಸಿ ವದಗಿ ಇರ್ಪುದೈ ॥ಯತಿ ॥

ಧರೆಯೊಳು ಶರಪುರಿ ವರದಾ ಶ್ರೀರಂಗನೆ
ಕರುಣಾದಿ ಯನ್ನನು ಪೊರೆಯೋ ನೀ ಬೇಗನೇ ॥ಯತಿ ॥

ಗಯ : ಪೂಜ್ಯರೆ, ನಾನು ಗಗನಚಾರಿಯಾಗಿ ಸಂಚರಿಸುವ ವೇಳೆಯಲ್ಲಿ, ದಿನಮಣಿಗೆ ಅರ್ಘ್ಯವಂ ಕೊಡುತ್ತಿದ್ದ ಶ್ರೀ ಕೃಷ್ಣನ ಕರದಲ್ಲಿ ನನ್ನ ಕುದುರೆಯ ಬಾಯ್ನರೆಯು ಬೀಳಲು ಕುಪಿತನಾದ ಹರಿಯು ಎಂಟು ದಿನಗಳೊಳಗಾಗಿ ಯನ್ನ ಕಂಠವಂ ಕತ್ತರಿಸುವೆನೆಂದು ಭಾಷೆಯಂ ಮಾಡಿರುವನು. ಇದರಿಂದ ನನ್ನನ್ನು ಪಾರು ಮಾಡಿ ಕಾಪಾಡಬೇಕಾಗಿ ಬೇಡಿಕೊಳ್ಳುವೆನೈ ಮುನೀಂದ್ರಾ ದಯಾಸಾಂದ್ರ ॥

ನಾರದ : ಯಲೈ ಬಾಲನೆ ಬುಡಕ್ಕೆ ತಂದೆ. ಕೃಷ್ಣನ ಕೈಯಿಂದ ನಿನ್ನನ್ನು ಬಿಡಿಸುವುದಕ್ಕೆ ನನ್ನಿಂದ ಸಾಧ್ಯವೆ? ಆತನನ್ನು ಸವಿ ಮಾತುಗಳಿಂದ ವಡಂಬಡಿಸೋಣವೆಂದರೆ ಮಹಾ ಮೂರ್ಖನು ತುಂಟರಿಗೆಲ್ಲಾ ಗಂಡನು ಯಿಂಥಾದ್ದರಲ್ಲಿ ನಿನ್ನನ್ನು ರಕ್ಷಿಸುವುದು ಹೇಗೆ?

ಗಯ : ಪೂಜ್ಯರೆ ತಮಗೆ ಅಸಾಧ್ಯವಾದ ಕಾರ‌್ಯವುಂಟೆ.

ನಾರದ : ಯಾವ ಕಾರ‌್ಯವನ್ನಾದರೂ ಉಪಾಯದಿಂದಲೇ ಸಾಧಿಸಬೇಕು.

ಪದ

ವರ ಕುಬೇರ ಸುತನೆ ಕೇಳೊ ಹರುಷದಿಂದಲೀ
ಒರೆವೆನೊಂದುಪಾಯವನು ತ್ವರಿತದಿಂದಲೀ ॥
ಹರನ ಧುರದಿ ಗೆಲಿದು ಶರವ ಪಡೆದ ಪಾರ್ಥನ
ಸರಸಕೀಗ ಭರದಿ ಪೋಗು ಪೊರೆವ ನಿನ್ನನೂ ॥

ನಾರದ : ಅಯ್ಯ ಗಯನೆ. ಕಾಮ್ಯಕವನದಲ್ಲಿ ಪಾಂಡವರಿರುವರು. ಅರ್ಜುನನು ಏಕಾಂಗಿಯಾಗಿರುವ ವೇಳೆಯನ್ನೇ ನಿರೀಕ್ಷಿಸಿ ಹೋಗಿ ಅವನಂ ಮರೆಹೊಕ್ಕು ಮೊದಲು ಅವನಿಂದ ಅಭಯವಂ ತೆಗೆದುಕೊಂಡು ನಂತರ ನಿನ್ನಿರವಂ ಅರುಹುವನಾಗು ಹೋಗು.

ಪದ

ದಂಡ ಭೀಮನ ಕಾಣದೆ ಉದ್ದಂಡ
ಪಾರ್ಥನ ಕಂಡು ನೀನು ಬೇಡು
ಪೋಗಿ ಪ್ರಾಣದಾನವಾ ॥

ನಾರದ : ಅಯ್ಯ ಗಯನೆ. ಗಂಡುಗಲಿಯಾದ ಭೀಮನು ಕಾಣದಂತೆ ಉದ್ದಂಡ ಪರಾಕ್ರಮಿಯಾದ ಪಾರ್ಥನ ಕಾಲುಗಳಿಗೆರಗಿ ಧರ‌್ಮನಂದನನ ಪಾದ ಸಾಕ್ಷಿಯಾಗಿ ನಿನ್ನನ್ನು ಕಾಪಾಡುವೆನೆಂಬ ಅಭಯವಂ ಪಡೆದ ನಂತರವೇ ವಿಚಾರವನ್ನು ತಿಳಿಸು ಸುಖಿಯಾಗು ಹೋಗು.

ಗಯ : ಪೂಜ್ಯರೆ ನಾಂ ಧನ್ಯನಾದೆನು ಹೋಗಿ ಬರುತ್ತೇನೆ.

ನಾರದ : ಕಲ್ಯಾಣಮಸ್ತು ಹೋಗಿ ಬಾ ಗಂಧರ್ವ ಕುಮಾರ ॥

ಗಯ : ಅಯ್ಯೋ ಹರಹರ, ಆ ಮಹಾತ್ಮನಾದ ಅರ್ಜುನನು ಯಲ್ಲಿರುವನೊ ಯಂದಿಗೆ ಸಿಕ್ಕುವನೊ ನನ್ನ ಅವಧಿಯು ಸಮೀಪಿಸುತ್ತಾ ಬಂತು  ಯೀ ಪ್ರಾಣಾಪತ್ತು ಎಂದಿಗೆ ತಪ್ಪುವದೊ ಕಾಣೆನಲ್ಲಾ ಶ್ರೀ ಹರಿ ಕಾಪಾಡು ॥

 

(ಅರ್ಜುನ ಪ್ರವೇಶ)

ಪದ

ಹರಿಯೆ ಮಾಯಕಾರಿಯೆ ॥ಧಾ
ರುಣಿಯೊಳು ನಮಗೀ ರೀತಿಯಾದುದೆ ॥ಹರಿ ॥

ಘೋರ ಕಾನನವನ್ನು ಸೇರುವಂತಾಯಿತೇ
ತೊರೆದು ಪಟ್ಟಣವನ್ನು ಗಿರಿಗಳ ಮಧ್ಯದಿ
ತಿರಿದುಂಬುವರ ತೆರದಿ ತಿರುಗಬೇಕಾಯಿತೇ ॥
ಯೀಜಗದೊಳು ನಾವು  ರಾಜವಂಶದಿ ಪುಟ್ಟಿ
ತೇಜವಳಿದು ವನದಿ ವೋಜೆ ತಪ್ಪಿದೆವು

ಅರ್ಜುನ : ಅಯ್ಯೋ ನಾವು ಚಂದ್ರ ವಂಶದಲ್ಲಿ ಪಾಂಡುಮಹಾರಾಯನ ಉದರದೋಳ್ ಜನಿಸಿ, ರಾಜ್ಯ ಭೋಗಂಗಳಂ ತೊರೆದು ಯೀ ಅರಣ್ಯದಲ್ಲಿ ಹಲುಬುವಂತಾಯಿತೆ ಅಯ್ಯೋ ವಿಧಿಯೆ.

ಗಯ : ಆಹಾ ಯೀತನು ಯಾರಾಗಿರಬಹುದು. ತ್ರಿಪುರಾರಿಯಾದ ಮಹಾದೇವನೊ ಅಸುರಾರಿಯಾದ ಶ್ರೀ ಕೃಷ್ಣನೊ ಅಥವ ರತಿಕಾಂತನೊ ಶಚಿಕಾಂತನೊ ಕಾಣೆನಲ್ಲಾ. ಯೀತನ ಮುಖ ಪ್ರಭಾವವಂ ನೋಡಿದರೆ ಮಹಾವೀರಾಧಿವೀರನಂತೆ ತೋರುತ್ತದೆ. ಯೀತನು ಹಿಡಿದಿರುವ ಧನುರ್ಭಾಣಂಗಳಂ ನೋಡಿದರೆ ಆ ಪಾಂಡುಪುತ್ರನಾದ ಅರ್ಜುನ ಭೂಪಾಲನಂತೆ ಕಾಣುತ್ತದೆ. ಯಾರಾದರಾಗಲಿ ಮಾತನಾಡಿಸಿ  ನೋಡುತ್ತೇನೆ.

ಕಂದ

ಘೋರಾರಣ್ಯದೊಳೀಪರಿ ಭಾರಿಯ ಕೋದಂಡವನ್ನು
ಕರದೋಳ್ ಪಿಡಿದು ವಾರಿಜಮಿತ್ರನ
ತೆರದಿಂ ರಾರಾಜಿಸುವ ವೀರನೆ ನಿನ್ನಯ
ಪೆಸರದೇನು ತಿಳುಹೈ ಕೃಪೆಯಿಂ ॥

ಗಯ : ಅಯ್ಯ ಮಹಾನುಭಾವನೆ. ನಿನ್ನನ್ನು ನೋಡಿದರೆ ಸುರಕಿನ್ನರ ವಿದ್ಯಾಧರರಂತೆ ತೋರುತ್ತಿರುವೆ. ನಿನ್ನ ಪ್ರೀತಿಯ ಅಭಿದಾನವೇನೆಂಬುದನ್ನು ತಿಳಿಸಬೇಕಾಗಿ ಬೇಡುತ್ತೇನೆ.

ಅರ್ಜುನ : ಯಲೈ ಅಪರಿಚಿತನೆ ನಾನೇ ಅರ್ಜುನನು. ನೀನು ಯಾರು ಮತ್ತು ಯಾವ ಕಾರ‌್ಯಕ್ಕಾಗಿ ಬಂದಿರುವೆ ಮರೆಮಾಚದೆ ಹೇಳುವನಾಗು.

ಪದ

ಪಾಲಿಸು ನೀ ಅರ್ಜುನನೇ  ಜಾಲ ಮಾಡದೆನ್ನ ನೀನೇ  ಶೀಲನೆಂದು ಕೇಳಿಬಂದೆ
ಬಾಲನನ್ನು ಪೊರೆಯೊ ತಂದೆ  ಪರಶಿವನೊಳು ಧುರವನೆಸಗಿ
ಕರುಣದಿಂದ ಸರಳ ಪಡೆದ  ಹರಿಯಸಖ್ಯ ಬೆರದುನಿರುತ
ದುರುಳರನ್ನು ತರಿದ ಧೀರನೆ ॥

ಯನ್ನ ಪೊರೆವೆಯಂದು ಬಂದೆ ಯಿನ್ನು
ನೀ ಕೃಪೆ ಮಾಡು ಎಂದೆ ನನ್ನಿಯಿಂದ ಬೇಡಿಕೊಂಬೆ
ಮುನ್ನ ಅಭಯವೀಯೊ ತಂದೆ ॥

ಗಯ : ಅಯ್ಯ ಮಹಾನುಭಾವನಾದ ಅರ್ಜುನನೆ. ನೀನು ರಾಜ ಕುಲೋತ್ಪನ್ನನಾಗಿಯೂ ಸಕಲ ರಾಜ ಧರ್ಮಗಳನ್ನು ಬಲ್ಲವನಾಗಿಯೂ ಇರುವೆಯೆಂಬ ನಿನ್ನ ಸತ್ಯಸಂಧತೆಯಂ ಕೇಳಿ ನಿನಗೆ ಶರಣು ಹೊಕ್ಕಿರುವೆನು. ಅನಾಥನಾದ ಯನ್ನನ್ನು ಕೃಪೆಯಿಂದ ಕಾಪಾಡಬೇಕಾಗಿ ಬೇಡುತ್ತೇನೆ.

ಅರ್ಜುನ : ಯಲೈ ಬಾಲನೆ ಶರಣಾಗತರಂ ರಕ್ಷಿಸದಿರ್ದೊಡೆ, ನಾನು ಚಂದ್ರ ವಂಶದಲ್ಲಿ ಹುಟ್ಟಿ ತಾನೆ ಫಲವೇನು ಅನುಮಾನಿಸದೆ ಹೇಳುವನಾಗು.

ಗಯ : ರಾಜೋತ್ತಮನೆ ಕಾಪಾಡುವೆನೆಂದು ಅಭಯವಾದರೆ ಹೇಳಿಕೊಳ್ಳುವೆನು. ಇಲ್ಲವಾದರೆ ವೃಥಾ ಹೇಳಿದ್ದರಿಂದ ಫಲವೇನು  ಆಪತ್ತನ್ನು ನಿವೃತ್ತಿಗೊಳಿಸುವ ನಿನ್ನಂತಹ ಶೂರರಲ್ಲಿ ಹೇಳಿಕೊಳ್ಳಬೇಕಲ್ಲದೆ ಮಿಕ್ಕ ಬಣಗುಗಳಲ್ಲಿ ಹೇಳಿಕೊಂಡರೆ ಅಪಹಾಸ್ಯಕ್ಕೆ ಕಾರಣವಾಗುವದೇ ವಿನಹ ಪ್ರಯೋಜನವಾಗಲಾರದು.

ಕಂದ

ಕೇಳೈ ಬಾಲನೆ ಪೇಳುವೆ
ಶ್ರೀಲೋಲನ ಪಾದ ಕಮಲದಾಣೆಯು ನಿನ್ನಂ
ಭೂಲೋಲ ಧರ್ಮಜನಾಣೆಯು
ಪಾಲಿಪೆನು ಇದು ಸತ್ಯ ಸತ್ಯ ಬೇಗನೆ ತಿಳುಹೈ ॥

ಅರ್ಜುನ : ಯಲೈ ತರುಣನೆ ನೀನು ಭಯಪಡಬೇಡ  ಸುರನರ ಗರುಡ ಗಂಧರ್ವ  ಯಕ್ಷ ರಾಕ್ಷಸರಿಂದಾಗಲಿ  ನಿನಗೆ ಆಪತ್ತನ್ನು ತಂದೊಡ್ಡಿರುವವನು ಅವನ್ಯಾರೆ ಆಗಲಿ ಅವನಿಂದ ನಿನ್ನನ್ನು ಕಾಪಾಡುತ್ತೇನೆ. ಇದಲ್ಲದೆ ಆ ಯದುಕುಲೋತ್ಪನ್ನನಾದ ಶ್ರೀಕೃಷ್ಣನ ಪಾದ ಕಮಲದಾಣೆಯೂ ಮತ್ತು ಯಮ್ಮ ಅಣ್ಣನಾದ ಧರ್ಮರಾಯನ ಚರಣ ಸಾಕ್ಷಿಯಾಗಿಯೂ ನಿನ್ನನ್ನು ಕಾಪಾಡುತ್ತೇನೆ ಭಯಪಡಬೇಡ ಹೇಳು ॥

ಪದ

ಲಾಲಿಸು ಭೂಪ ಪೇಳ್ವೆನಾ ತಾಪ ॥
ಬಡಗ ದಿಶಾಧಿಪ  ವಡೆಯ ಕುಬೇರನು ಪಡೆದ ತನಯನು ಗಯ
ಕಡುಗಲಿ ಪಾಲಿಸು
ಹರಿ ಯನ್ನ ಶಿರವನು ಹರಿಯಲು ಶಪಥವ
ಭರದಿ ಮಾಡಿರುತಿಹ  ಪೊರೆಯೊ
ನೀ ಯನ್ನನೂ ಲಾಲಿಸು ॥
ಕುಂತಿ ಸುತನೆ ನಿನ್ನ ನಾ ನಂಬಿಹೆ  ಅಂತಕ ಹರಿಸುತೆ
ಸಂತಸದಿಂದಲೀ ಲಾಲಿಸು ॥

ಗಯ : ಅಯ್ಯ ಅರ್ಜುನ ಭೂಪಾಲನೆ, ನಾನು ಕುಬೇರನ ಸುತನಾದ ಗಯನೆಂಬುವನು. ಶ್ರೀ ಕೃಷ್ಣನು ನನ್ನನ್ನು ಕೊಲ್ಲುವೆನೆಂದು ಶಪಥವಂ ಮಾಡಿರುವನು. ಆದ್ದರಿಂದ ಕಾಪಾಡಬೇಕಾಗಿ ಕರುಣಾಳುವಾದ ನಿನ್ನಂ ಮರೆಹೊಕ್ಕಿರುವೆನು. ನನ್ನನ್ನು ರಕ್ಷಿಸಬೇಕೈ ಪಾರ್ಥ ತ್ರಿಲೋಕ ಸಮರ್ಥ ॥

ಅರ್ಜುನ : ಹರಹರ ಇದಕಿನ್ನೇನು ಮಾಡಲಿ  ಅಯ್ಯೋ ವಿಧಿಯೆ  ಯಂತಹ ಸಂಕಟವನ್ನು ತಂದೊಡ್ಡಿದೆ ಶಿವ ಶಿವ ಶಂಕರಾ  ಗಂಗಾಧರ ಕಾಪಾಡು ಕಾಪಾಡು ॥

ಪದ

ಕೇಳು ನೀನೀಗಲೆ ಹೇಳುವ ಮಾತನು
ಬಾಲ ನೀ ಬೇಗನೆ ಲಾಲಿಸಿ ಕೇಳ್ವುದು ॥
ರಾಜ್ಯವ ಬಿಟ್ಟು ನಾವ್ ಪೂಜ್ಯರಂತಿರುವೆವು
ಸೋಜಿಗವಾಯಿತು ಮೂಜಗದೊಳಗೆ
ಕೃಷ್ಣನು ಯಮ್ಮನು ಶಿಷ್ಟದಿಂ ಪಾಲಿಪ
ಶ್ರಿಷ್ಟಿಯೊಳವನಿಗೆ ಕೆಟ್ಟವನಾದೆನು ॥

ಅರ್ಜುನ : ಅಯ್ಯೋ ವಿಧಿಯೆ. ನನ್ನನ್ನು ಯೀ ಉಭಯ ಸಂಕಟಕ್ಕೆ ಗುರಿಮಾಡಿದೆಯಾ. ಶ್ರೀ ಕೃಷ್ಣನೊಡನೆ ಯುದ್ಧವೇ ಅವನಂ ಜೈಸಿ ಇವನಂ ರಕ್ಷಿಸಲೇ? ಯುದ್ಧವನ್ನು ಮಾಡೋಣವೆಂದರೆ ಕ್ರಿಯಾಭ್ರಷ್ಟನಾಗಿ ಗುರುದ್ರೋಹಿಯಾಗುವೆನು. ಇಂದಿಗೆ ಪಾಂಡವರ ವಂಶ ಮುರಿಯಲು ಕಾರಣವಾಯಿತೇ ಕೃಷ್ಣ ನಾರಾಯಣ ಮುಂದೇನು ಗತಿ ॥

ಗಯ : ವೀರಾಧಿವೀರನಾದ ಅರ್ಜುನ ಭೂಪಾಲ, ಕಾಪಾಡುವೆನೆಂದು ನನಗೆ ಅಭಯವಂ ಕೊಟ್ಟು ಹೀಗೇಕೆ ಯೋಚಿಸುತ್ತಿರುವೆ. ನಿನ್ನ ಕೈಯಿಂದ ನನ್ನನ್ನು ಕಾಪಾಡುವುದು ಸಾಧ್ಯವಿಲ್ಲದಿದ್ದರೆ ಹೇಳು ಮತ್ತೆಲ್ಲಿಗಾದರೂ ಹೋಗುತ್ತೇನೆ॥

ಅರ್ಜುನ : ಯಲೈ ಗಂಧರ್ವ ಕುಮಾರ ನೀನು ಭಯಪಡಬೇಡ ಧೈರ‌್ಯವಾಗಿರು ॥

ಪದ

ಹೆದರುವದಿನ್ಯಾತಕೆ ನೀಂ
ಮುದದೊಳಗಿರು ಗಂಧರ್ವ
ಪದುಮನಾಭನ ಭಯಕೆ
ಹೆದರುವರೇ ನೀನೂ ॥

ಅರ್ಜುನ : ಯಲೈ ಗಯನೆ ಆ ಶ್ರೀಕೃಷ್ಣನ ಘಾತಿಗೆ ನೀನು ಹೆದರಬೇಡ. ಹರಿಹರ ವಿರಂಚಿ ಸುರರಾದಿಯಾಗಿ ಏಕ ಕಾಲದಲ್ಲಿ ಬಂದರೂ ಮಾರೊಡ್ಡಿನಲ್ಲಿ ಅವರೊಡನೆ ಕಾದಿ ನಿನ್ನನ್ನು ರಕ್ಷಿಸುತ್ತೇನೆ. ಭಯಪಡಬೇಡವೊ ಗಂಧರ್ವ ಕುವರ॥

ಪದ

ಘುಡಿಘುಡಿಸಿ ಬಂದವರ ಕಡಿಕಡಿದು ಬಿಸುಡುವೆನು
ಹಿಡಿ ಅಭಯವ ಕೊಡುವೆನೊ ಗಂಧರ್ವ ॥

ಅರ್ಜುನ : ಯಲೈ ಗಯನೆ ನಿನ್ನನ್ನು ಕೊಲ್ಲಬೇಕೆಂದು ಘುಡಿಘುಡಿಸಿ ಬರುವ ವೈರಿಗಳ ಪಡೆಯೆಲ್ಲ ವನ್ನೂ ನಿರ್ನಾಮ ಮಾಡಿಬಿಡುತ್ತೇನೆ. ನಿನ್ನನ್ನು ಯನ್ನ ಬತ್ತಳಿಕೆಯಲ್ಲಿಟ್ಟು ಕಾಪಾಡುತ್ತೇನೆ. ಭಯವನ್ನು ತೊರೆದು ನಿರ್ಭಯನಾಗಿರುವನಾಗೊ ಗಯನೆ ॥

ಅರ್ಜುನ : ಯಲೈ ಗಂಧರ್ವ ಕುವರ. ಸಮೀಪದಲ್ಲಿಯೇ ನಮ್ಮ ಕುಟೀರವಿರುವುದು. ಅಲ್ಲಿ ಯಮ್ಮ ಅಣ್ಣನಾದ ಧರ್ಮನಂದನನಿರುವನು. ಆತನನ್ನು ಕಾಣುವ ಬಾರೈ ಕುವರ.

 

(ಧರ್ಮರಾಜ ಪ್ರವೇಶ)

ಪದ

ಪರಮ ಸತ್ಯಸಂಧನೆನಿಪ ನರಪತಿ
ಧರ್ಮಜನು ಆಗ ಸಿರಿಯರಮಣನನ್ನು
ಮನದಿ ನಿರುತ ಸ್ಮರಿಸುತಾಗ ಬಂದ
ಧರೆಯ ಕೌರವರಿಗೆ ಸೋತು ಸಿರಿವನದೊಳು
ಚರಿಸುತಾಗ ಪರಿಪರಿ ವ್ಯಥೆಗೊಳುತಲಿನ್ನು
ಧರೆ ಶರಪುರಿ ಹರಿಯ ಸ್ಮರಿಸುತ ॥॥

ಕಂದ

ದ್ಯೂತದಿ ಸಕಲೈಶ್ವರ‌್ಯವ ಸೋತಡವಿಯಲ್ಲಿ ಕಷ್ಟಪಡುತೇ ॥
ಕಾತರಿಸಿ ವೆಲ್ಲರಕಟಾ ಹೇತುವಿದೇಂ ಕಷ್ಟಪಡದಿಹ ಫಲವೊ ॥

ಧರ್ಮರಾಜ : ಹಾ ದೈವವೆ  ಕಪಟ ದ್ಯೂತದಲ್ಲಿ ಕೌರವನಿಗೆ ರಾಜ್ಯವಂ ಸೋತು ಅನುಜರೊಡನೆ ಅರಣ್ಯವಾಸಿಗಳಾಗಿ ಯಿರುವದಾಯಿತೆ ಹಾ ವಿಧಿಯೆ॥

ಅರ್ಜುನ : ಅಗ್ರಜ ವಂದಿಸುವೆನು.

ಧರ್ಮರಾಜ : ನಿನಗೆ ಮಂಗಳವಾಗಲೈ ಅನುಜಾ. ಯಲೈ ಸಹಜಾತನೆ ನಿನ್ನ ಮುಖ ಕಮಲವನ್ನು ನೋಡಿದರೆ ಪಂಚ ಮಹಾ ಪಾಪಂಗಳಂ ಮಾಡಿದವನಂತೆ ಕಾಣುತ್ತದೆ. ಕಾರಣವೇನು ಹೇಳುವನಾಗು॥

ಪದ

ಏನ ಹೇಳಲಿ ವಿಧಿಯಾ ಮಾಯ ಅಣ್ಣಯ್ಯ
ನಾನು ಕಾನನಕ್ಕೆ ಬಂದು ನೊಂದೆ ಅಣ್ಣಯ್ಯ
ಅರಿಯದೆ  ಭಾಷೆಯ ಕೊಟ್ಟೆ ಗಯಗೆ
ಮರುಳು ಹೋಗಿ ದುರುಳನಾದೆ ಅಣ್ಣಯ್ಯ ॥

ಭಾವ ಕೃಷ್ಣನೊಳು ಕದನ ವದಗಿತು ಅಣ್ಣಯ್ಯ
ಇದಕೆ ದೇವ ನಾನೇಂ ಗೈಯ್ಯಲೀಗ ಅಣ್ಣಯ್ಯ

ಅರ್ಜುನ : ಅಣ್ಣ ಯಮನಂದನ. ಯನ್ನ ಪರಿಯನ್ನು ನಿನ್ನೊಡನೆ ಏನೆಂದು ಹೇಳಲಿ. ಶ್ರೀಕೃಷ್ಣನು ಇವನಂ ಸಂಹರಿಸುವೆನೆಂದು ಪಂಥವಂ ಮಾಡಿರುವನಂತೆ. ಯಿದಂ ನಾನರಿಯದೆ ಕಾಪಾಡುವೆನೆಂದು ಅಭಯವಂ ಕೊಟ್ಟು ವ್ಯಸನ ಪಡುತ್ತಿರುವೆನೈ ಅಗ್ರಜಾ.

ಪದ

ನಾನೇನ ಮಾಡಲಿ ನಾನೆಲ್ಲಿ ಪೋಗಲಿ
ಅನುಜನು ಮಾಡಿಹ ಘನತೆಯ ಕಾರ್ಯದೀ ॥
ಮನವು ತಲ್ಲಣಿಸಿ ಇನಿತು ತೋರದಿಹುದು ॥
ಯಾವುದೂ ನೋಡದೆ ಯೀ ವಿಧವ ಗೈದಡೆ
ಜೀವಿಪುದೆಂತು ನಾಂ ಭುವಿಯೊಳಗೆ.

ಧರ‌್ಮರಾಜ : ಅಯ್ಯ ತಮ್ಮ. ಕೃಷ್ಣನೊಡನೆ ಯುದ್ಧವೆ? ಸಕಲ ಸಾಮ್ರಾಜ್ಯವಂ ಕಳೆದುಕೊಂಡು ಅರಣ್ಯವಂ ಸೇರಿ ಪರಿಪರಿ ಚಿಂತೆಯಲ್ಲಿ ಕೊರಗುತ್ತಿರುವ ನಮ್ಮನ್ನು ನಿರುತವೂ ಆ ಪರಮಾತ್ಮನು ರಕ್ಷಿಸುತ್ತಿರುವನು. ಅಂತಹ ದೇವಾಧಿದೇವನೊಡನೆ ಕಲಹವೇ. ಹಾ ತಮ್ಮ ಯಾವುದನ್ನೂ ಅರಿಯದೆ ಹೀಗೆ ಮಾಡಿ ನಮ್ಮನ್ನು ಕೆಡಿಸಿದೆಯಾ ತಮ್ಮ. ಕಿರೀಟಿ ಮಿಂಚಿದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲಾ. ಆದುದಾಗಲಿ ಶ್ರೀಹರಿ ನಿನ್ನ ದಯವಿರಲಿ.

ಧರ್ಮ : ಯಾರೋ ಸೇವಕ. ಅತುಲ ಭುಜಬಲ ಪರಾಕ್ರಮಿಯಾದ ಬಕಾಂತಕ ಯನ್ನನುಜ ಭೀಮಸೇನನನ್ನು ಕರೆದುಕೊಂಡು ಬಾ ॥