ಕರಿರಾಜ : ಹೇ ದೇವಾ, ಹೇ ಜಗದ್ರಕ್ಷಕ, ಹೇ ಕಾಲಕಂದರ, ಹೇ ವಿರೂಪಾಕ್ಷ, ಹೇ ಪರಮಪುರುಷ ಈ ಕ್ಷಿತಿಯೊಳು ನಾನು ಮಾಡಿದ ಪುಣ್ಯಫಲದಿಂದ ನಿಮ್ಮಯ ಪಾದಪದ್ಮವನ್ನು ಕಂಡೆ, ಪನ್ನಗಾಧರ ಎನ್ನ ಜನ್ಮ ಸಾಫಲ್ಯವಾಯಿತು. ಹಿಂದೆ ಮಾರ್ಕಂಡೇಯ ಸಾರಂಗಧರ ಮೊದಲಾದವರಿಗೆ ಮೋಕ್ಷವನ್ನು ಕೊಟ್ಟಂತೆ ಎನ್ನನ್ನು ರಕ್ಷಿಸಬೇಕಯ್ಯ ಈಶ ಸಖ ಸರ್ವೇಶ –

ಈಶ್ವರ : ಅದೇ ಪ್ರಕಾರವಾಗಿ ಪಾಲಿಸುವೆನಯ್ಯ ಬಾಲಾ ಸದ್ಗುಣಶೀಲಾ –

ದರುವು

ಕಂತುಹರನೆ ಕೇಳು ಪಂಥಾದಿಂದಸುರೇಯು
ಯಾತಕ್ಕೆ ಕೊಂದಳು ಎನ್ನನು ದೇವಾ ಮಹಾದೇವ

ಕರಿರಾಜ : ಹೇ ದೇವಾ. ಈ ಮಂಡಲದಲ್ಲಿ ತೊಂಡನೂರಿ ಎಂಬ ರಕ್ಕಸಿಯು ನನ್ನನ್ನು ಪಂಥದಿಂದಲಿ ಕೊಂದಂಥ ಅಂತರಂಗವೇನು ಕಂತುಹರನೆ –

ದರುವು

ಬಾಲಾ ಕೇಳೆಲೋ ಹಿಂದೆ ಕೈಲಾಸದೊಳು ನಾನು
ಲೋಲಾಕ್ಷಿಯೊಳಂದು ಕಥೆ ಪೇಳುತ್ತಿರಲು ॥

ಮಾಲೆಗಾರನು ಬಂದು ಮರೆಯಿಂದ ತಾ ಕೇಳಿ
ಲೀಲೆಯಿಂದಲಿ ತನ್ನ ಸತಿಗೆ ಪೇಳಿದನು ॥

ಗಿರಿಜೆ ಪೇಳಿದ ಕಥೆಯು ಮನವಿಟ್ಟು ತಾ ಕೇಳಿ
ತರಳೆಯು ಪುಸಿ ಎಂದು ನುಡಿದಳಾಕ್ಷಣದಿ ॥

ಲೋಲಲೋಚನೆ ಕೇಳಿ ಕೋಪಕಾತುರಳಾಗಿ
ಶಾಪಕೊಟ್ಟಳು ಅಸುರೆ ಆಗೆಂದು ॥

ಬಿಸುಜಾಕ್ಷಿ ಬಸವಳಿದು ಬೆಸಗೊಂಡು ಕೇಳಿದಳು
ಶಶಿಮುಖಿ ಶಾಪವು ಪೋಪುದಿನ್ನುಸುರು ॥

ಕರಿಯ ರಾಜನ ಕೊಂದು ರಕ್ತಾವ ಸವಿದಾರೆ
ಚಂದದಿಂದಲಿ ನಿನ್ನ ಶಾಪಾ ಪರಿಹಾರವು ॥

ಈಶ್ವರ : ಅಯ್ಯ ಬಾಲ. ರಜತಾದ್ರಿಯಲ್ಲಿ ಗಿರಿಜೆಯಾದ ಪಾರ್ವತಿಯು ಬೇಸರವ ಕಳೆವ ಉದ್ದಿಶ್ಯವಾಗಿ ಅಪರೂಪವಾದ ಇತಿಹಾಸವೆಂಬ ಒಂದು ಕಥೆಯನ್ನು ಉಸುರೆಂದು ಕೇಳಲು, ನಾನು ಪೇಳುತ್ತಿರುವಲ್ಲಿ ಪುಷ್ಪದಂತನು ಪುಷ್ಪಮಾಲಿಕೆಯನ್ನು ತಂದು ಒಪ್ಪಿಸುವುದಕ್ಕಾಗಿ ಬಂದು ಮರೆಯೊಳುನಿಂತು ನಾನು ಪೇಳುವ ಅತಿಶಯವಾದ ಕಥೆಯನ್ನು ಲಾಲಿಸಿ ತನ್ನ ಸತಿಯಾದ ಪುಷ್ಪದಂತಿಗೆ ಪೇಳಲು, ಮಿತವಿಲ್ಲದೆ ಎನ್ನ ಮೇಲೆ ಕೋಪ ಕಾತರಳಾದ್ದರಿಂದ ಹಿತದಿ ಪುಷ್ಪದಂತಿಯನ್ನು ಕರೆಸಿಕೇಳಲು ನನ್ನ ಪತಿ ಪೇಳಿದನೆಂದು ಉಸುರಲು ನಾನು ಕುತೂಹಲದಿ ನೀನು ಭೇತಾಳನಾಗೆನಲು, ಅದು ಪರಿಹಾರ ಕೇಳಿಕೊಳ್ಳಲು ವಿಕ್ರಮರಾಯನಿಂದ ಪರಿಹಾರವಾಗುವುದೆಂದು ಉಸುರಿದೆ ಮತ್ತು ಹಿಮವಂತನ ಸುತೆಯಾದ ಗಿರಿಜೆಯು ಪುಷ್ಪದಂತಿಗೆ ಬಹಿರಂಗವಾಗಿ ರಕ್ಕಸಿಯಾಗೆಂದು ಪೇಳಲು ಪುಷ್ಪದಂತಿಯು ಪರಿಹಾರವನ್ನು ಕೇಳಿಕೊಳ್ಳಲು ಮಾರಭೂಪಾಲನಸುತ ಕರಿರಾಜನ ರಕ್ತಪಾನವನ್ನು ಮಾಡಿದರೆ ನಿನಗೆ ಪರಿಹಾರವಾಗುವುದೆಂದು ಪೇಳಿದಳು. ಆದ್ದರಿಂದ ಇಂದಿನ ವೃತ್ತಾಂತಗಳು ಹೀಗೆ ನಡೆದಿರುವಲ್ಲಿ ಯಾರ ತಪ್ಪುಗಳು ಏನು ಇರುವುದಿಲ್ಲಾ. ನೀನು ಜಾಗ್ರತೆಯಾಗಿ ಶೃಂಗಾರವಾಗು ಬಳ್ಳಾಲರಾಯನ ಮಗಳಾದ ಈ ಧರಣೀ  ಮೋಹಿನಿಯನ್ನು ಈ ಪುಂಡರೀಕಾಕ್ಷಿಯನ್ನು ನಿನಗೆ ಮದುವೆ ಮಾಡುವೆನು. ಎನ್ನ ಭಕ್ತರಾದ ಈ ಏಳು ಮಂದಿ ಗೌಡರನ್ನು ನಿಮ್ಮಗಳ ಸಹಿತವಾಗಿ ಕೈಲಾಸಕ್ಕೆ ಕರೆಸಿಕೊಳ್ಳುವೆನಯ್ಯ ಬಾಲಾ ಸತ್ಯ ಗುಣಶೀಲಾ –

ದರುವು

ಮಧುರವಾಣಿಯೆ ನಿನಗೆ ಮದುವೆ ಮಾಡುವೆನಯ್ಯ
ಮುದದಿಂದ ಶೃಂಗಾರವಾಗಯ್ಯ ಬಾಲಾ

ಅದೇ ಪ್ರಕಾರವಾಗಿ ಶೃಂಗಾರವಾಗುತ್ತೇನೈ ದೇವಾ

ಆದಿತಾಳ

ಕರಿರಾಯ ಜಯ ಜಯ ಕಾರುಣ್ಯ ಸಾಗರ
ಸುರಚಿರ ಗಂಭೀರ ಶೃಂಗಾರ ಶೇಖರಾ ॥

ನವರತ್ನ ತಂಬಿಗೆಯ ನಾರಿಯರು ಪಿಡಿಯುತ್ತಾ
ನವರತ್ನದುಕವನು ಅಭಿಷೇಕ ಮಾಡಿದರು ॥

ಕಸ್ತೂರಿಗಂಧವನು ಲೇಪಿಸುತಾ
ಶಿಸ್ತಿಂದ ಕುಸುಮಗಳ ಸ್ತ್ರೀಯರು ಧರಿಸಿದರು ॥

ಜಾತಿ ರತ್ನವ ಧರಿಸಿ ಪೀತಾಂಬರವ ಧರಿಸಿ
ಮಾತೆಯು ಮೈದಡವಿ ಮುದ್ದೀಸಿ ಹರಸಿದಳು ॥

ಕ್ಷಿತಿಯೊಳಗ್ರಜ ಬಳ್ಳಾಪುರವನ್ನು ಪಾಲಿಸುವ
ಶ್ರೀಕಂಠ ಸಲಹೆಂದು ಸ್ತ್ರೀಯರು ಶುಭವೆಂದು ॥

ಶೋಭಾನೆ

ಶೋಭಾನವೆ ನಿತ್ಯಾ ಶೋಭಾನವೇ ॥

ಶೋಭಾನವಾಡಿರೆ ಸುಂದರಗಾತ್ರಗೆ
ಸೋಮಾನಂತೆ ಪ್ರಕಾಶಿಸುವಾತಗೆ ॥

ಬಳ್ಳಾಲ ಪುತ್ರಿಯ ಪರಿಣಯವಾದಂತ
ಭಾವಜನಂದದಿ ಎಸೆಯುವ ಭೂಪಗೆ ॥

ಮಂಡಾಲದೊಳು ತೊಂಡನೂರು ದನುಜೆ ಪುತ್ರಿ
ಪುಂಡರೀಕಾಕ್ಷಿಯ ಕೂಡಿದ ಭೂಪಗೆ ॥

ಕಂಡೇಂದ್ರು ಮೌಳಿಗೆ ದಂಡವನರ್ಪಿಸಿ
ಮಂಡಲಪತಿ ಬನವಂತಾ ಕುಮಾರಗೆ ॥

ಕುಂಭಿಣಿಯೊಳು ಬಳ್ಳಾಪುರದಾ ಸೋಮೇಶನಾ
ವರದಿಂದ ಪುಟ್ಟಿದ ಕುಂಭಿಣಿಪಾಲಗೆ ॥

 

ಮಂಗಳಾರತಿ ದರುವು

ಅಂಗಜ ವೈರಿಶ್ರೀ ಗಂಗಾವಲ್ಲಭನಿಗೆ
ವೃಷಭಾತುರಂಗ ಕೃಪಾಂಗನಿಗೆ ಗರಳ ಕಂಧರ
ಸಾರಂಗಧರನ ಕಾಯ್ದ ಉರಗಭೂಷಣ ಗೌರೀ ವಲ್ಲಭಗೆ ॥

ದಕ್ಷಾನ ಗರ್ವ ಶಿಕ್ಷೀಸಿ ಲೋಕಾ ಸಂರಕ್ಷಣೆ ಮಾಡಿದ
ಫಾಲಾಕ್ಷಗೆ ಇಕ್ಷು ಶರನಾ ಸುಟ್ಟು ಈ ಕ್ಷಿತಿಯೊಳು
ಬಾಣಾಸುರನ ರಕ್ಷಿಸಿದಂಥ ಫಾಲಾಕ್ಷಗೆ
ಮಂಗಳಂ ಮಂಗಳಂ ಜಯ ಜಯ ॥

ವಾಯುಕುಮಾರಗೆ ವರವ ಪಾಲಿಸಿ ತ್ರಿಪುರಾಸುರರ
ಗರ್ವವ ಮುರಿದ ಭವಹರಗೆ ಕುಸುಮಬಾಣನ
ಸತಿಗಭಯಪಾಲಿಸಿದಂತ ಶಶಿಸೋಮೇಶ ಸಖಗೆ
ಮಂಗಳಂ ॥

ಮಂಡಾಲದೊಳು ಬಳ್ಳಾಪುರಿ ಪಟ್ಟಣವನಾಳ್ವ
ಕಂಡೇಂದು ಮೌಳಿ ಶ್ರೀಕಂಠನಿಗೆ ಪುಂಡರೀಕಾಕ್ಷ
ಲಕ್ಷ್ಮೀಶನ ಸಖ ಸುರಾರಕ್ಷ ಪಾಲಿಸೋ ಫಾಲಾಕ್ಷ
ನಿಟಿಲಾಕ್ಷ ಮಂಗಾಳಂ ಮಂಗಾಳಂ ಜಯ ಜಯ
ಮಂಗಾಳಂ ಮಂಗಾಳಂ ॥

***


ಶ್ರೀ ಕೃಷ್ಣಾರ್ಜುನರ ಕಾಳಗ

ಅಥವಾ

ಗಯ ಚರಿತ್ರೆ

 

 

ಕವಿ                                   :   ಹರಿಶರ್ಮನ ಶಿಷ್ಯ ಗೋವಿಂದ

ಪ್ರತಿಕಾರರು                      :   ಮೂಡಲಪಾಯ ಯಕ್ಷಗಾನ ಭಾಗವತರಾದ ನೇರಲಗುಡ್ಡದ
ಶ್ರೀ ಬಿ. ಗೋವಿಂದಪ್ಪನವರು.

ಪ್ರತಿ ಮಾಡಿದ ದಿನಾಂಕ     :   1979ರ ಜನವರಿ 25 ರಂದು ಕಾಳಾಯುಕ್ತ ಸಂವತ್ಸರ, ಪುಷ್ಯ ಬಹುಳ ಏಕಾದಶಿ

ಮೂಲ ಪ್ರತಿ                       :   1936ರ ಧಾತು ಸಂವತ್ಸರ

 

ವಿನಾಯಕ ಸ್ತೋತ್ರ

ಶುಕ್ಲಾಂಬರಧರಂ ವಿಷ್ಣುಂ
ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೆ
ಸರ್ವ ವಿಘ್ನೋಪಶಾಂತಯೆ ॥

ಶಾರದಾ ಸ್ತುತಿ

ನಮಸ್ತೇ ಶಾರದಾ ದೇವಿ
ಕಾಶ್ಮೀರಪುರವಾಸಿನಿ ತ್ವಮಹಂ
ಪಾರ್ಥಯೇ ದೇವಿ
ವಿದ್ಯಾ ದಾನಂಚ ದೇಹಿಮೆ ॥

ಗಣಸ್ತುತಿ

ಗಜವದನಾ ಪಾಲಿಸೋ, ಸುಜನಾರ್ಚಿತ ಪದತ್ರಿಜಗ
ನಮಿತ ಗಜವದನ ಪಾಲಿಸೊ ॥- ಸಾಂಬಕುಮಾ
ರ ಹೇರಂಭ ಗುಣಾಕರ – ನಂಬಿದೆ ನಿಮ್ಮ ಪದಾಂ
ಬುಜವನು ॥ಗಜ ॥
ಮೂಷಕ ವಾಹನ ದೋಷನಿವಾರಣ
ಶೇಷ ವಿಭೂಷಣ ಪೋಷಿಸೆಮ್ಮ

ಗಜವದನ ಪಾಲಿಸೊ ॥
ಮಾಡುವ ಕಾರ‌್ಯಕೆ ನೀಡು ನಿರ್ವಿಘ್ನವ ಜೋಡಿಸಿಕೈಯನು
ಬೇಡಿದೆ ನಾನು ॥ಗಜವದನ – ಧರೆಯೊಳಧಿಕ
ಶರಪುರಿಯೊಳು ನೆಲಸಿಹ ವರದ ಶ್ರೀರಂಗನ
ಪರಮಸಖನ ಸುತ ॥ಗಜವದನ ಪಾಲಿಸೊ ॥

ಶಾರದಾ ಸ್ತುತಿ

ಭಾರತಿ ಪದ್ಮಜ ರಾಣಿಯೆ ಶಾರದೆ ಕುಂಡಲ ವೇಣಿಯೆ
ಭಾರತಿ ಪದ್ಮಜ ಅಜನ ರಾಣಿ
ನಿಮ್ಮ ಭಜಿಪೆನು ನಿರುತಮ ॥ಸೃಜಿಸುವ ಕಾರ‌್ಯ
ಕೆ ವಿಜಯವ ಕೊಡು ನೀ ॥ಭಾರತಿ ಪದ್ಮಜ ॥
ಸುರನರ ಪೂಜಿತ ಧರೆಜನ ವಂದಿತೆ  ಪರಮ
ಪವಿತ್ರೆಯೆ ಪೊರೆಯೆ ಯನ್ನನು ನೀಂ ॥ಭಾರತಿ ॥
ಧರೆಯೊಳಧಿಕ ಶರಪುರಿಯೊಳು ನೆಲಸಿಹ ವರದ
ರಂಗನ ಪ್ರಿಯ ಹಿರಿಯ ಸುತನ ಸತಿ ॥ಭಾರತಿ ॥

ಶಾರದೆ : ಅಯ್ಯ ಸಾರಥಿ ನಾವು ಧಾರೆಂದರೆ ಯೀ ಸಮಸ್ತ ಸಚರಾಚರ ಪ್ರಾಣಿ ಕೋಟಿಗಳನ್ನು ಉತ್ಪತ್ತಿ ಮಾಡುವ ಚತುರ್ಮುಖ ಬ್ರಹ್ಮದೇವನಿಗೆ ಪಟ್ಟದರಾಣಿಯಾದ ಸಕಲ ವಿದ್ಯಗಳಿಗೂ ಅಧಿದೇವತೆಯಾದ ಸರಸ್ವತಿ ದೇವಿಯೆಂದು ತಿಳಿಯಪ್ಪ ಸಾರಥಿ ಅತಿಶಯ ಪ್ರೀತಿ. ಅಣ್ಣಯ್ಯ ಸಾರಥಿ

ಯೀ ತಂಗಾಳಿ ಬೀಸುವ ರಂಗುಮಂಟಪಕ್ಕೆ ನಾನು ಬಂದ ಕಾರಣವೇನೆಂದರೆ ಯೀ ದಿನ ಭಾಗವತರು ಯನ್ನನ್ನು ಗಾನನರ್ತನಾದಿಗಳಿಂದ ಧ್ಯಾನವಂ ಮಾಡಿ ಪ್ರಾರ್ಥಿಸಿಕೊಂಡ ಕಾರಣ ಬಾಹೋಣವಾಯಿತು. ಭಾಗವತರನ್ನು ತೋರಿಸು ಕಂಡೆಯಾ ಸಾರಥಿ ॥

ಭಾಗವತ : ನಮೋನ್ನಮೊ ಶಾರದಾಂಬ.

ಶಾರದೆ : ನಿನಗೆ ಮಂಗಳವಾಗಲಯ್ಯ ಭಾಗವತರೆ. ಅಯ್ಯ ಭಾಗವತರೆ ಎನ್ನನ್ನು ಗಾನನರ್ತನಾದಿ ಗಳಿಂದ ಧ್ಯಾನ ಮಾಡಿ ಪ್ರಾರ್ಥಿಸಿಕೊಂಡ ಕಾರಣವೇನಯ್ಯ ಭಾಗವತರೆ ಗಾನಾನ್ವಿತರೆ.

ಭಾಗವತ : ತಾಯಿ ಶಾರದಾಂಬ. ಯೀ ದಿನ ಗಾನನರ್ತನಾದಿಗಳಿಂದ ನಿಮ್ಮನ್ನು ಧ್ಯಾನಿಸಿ ಕರೆಸಿಕೊಂಡ ಕಾರಣವೇನೆಂದರೆ ನಾನು ಯೀ ದಿನ ಇಲ್ಲಿ ನೆರೆದಿರುವ ಸಭಾಮಂಡಲಿಯವರ ಮನಸ್ಸನ್ನು ಸಂತೋಷಪಡಿಸಲೋಸುಗ ಶ್ರೀ ಕೃಷ್ಣಾರ್ಜುನರ ಯುದ್ಧವೆಂಬ ನಾಟಕವನ್ನು ಅಭಿನಯಿಸಬೇಕೆಂದಿರು ತ್ತೇನೆ. ಈ ನಾಟಕದಲ್ಲಿ ನನ್ನಿಂದಾಗಲಿ ನಮ್ಮ ಬಾಲಕರಿಂದಾಗಲಿ ಬರುವ ತಪ್ಪು ತೊದಲು ನುಡಿಗಳಿದ್ದಾಗ್ಯೂ ಮನ್ನಿಸಿ ಕೃಪೆಯಿಂದ ಕಾಪಾಡಬೇಕಾಗಿ ಬೇಡುವೆನಮ್ಮಾ ಜನನಿ ಸೌಖ್ಯ ಪ್ರದಾಯಿನಿ.

ಶಾರದೆ : ಅಯ್ಯ ಭಾಗವತರೆ. ನೀವು ನಡೆಸಬೇಕಾಗಿರುವ ಶ್ರೀ ಕೃಷ್ಣಾರ್ಜುನರ ಯುದ್ಧವೆಂಬ ನಾಟಕಕ್ಕೆ ಯಾವ ವಿಘ್ನವೂ ಬರದಂತೆ ನಿರ್ವಿಘ್ನವಾಗಿ ಕಥೆಯು ನಡೆಯಲೆಂದು ವರವನ್ನು ದಯಪಾಲಿಸಿರುತ್ತೇನೆ ಕಥೆಯನ್ನು ಸಾಂಗವಾಗಿ ನಡೆಸಬಹುದಯ್ಯ ಭಾಗವತರೆ ಗಾನಾನ್ವಿತರೆ.

ಭಾಗವತ : ಅಪ್ಪಣೆಯಂತಾಗಲಮ್ಮ ಜನನಿ.

ಶಾರದೆ : ಅಯ್ಯ ಭಾಗವತರೆ ನಾನು ಬಂದು ಬಹಳ ಹೊತ್ತಾಯಿತು. ನಮ್ಮ ಸತ್ಯ ಲೋಕಕ್ಕೆ ಬಿಜಯಂಗೈಯುತ್ತೇನೈ ಭಾಗವತರೆ ॥

 

ಕಥಾ ಸೂಚನೆ ತ್ರಿವುಡೆ

ರಾಯ ಜನಮೇಜಯಗೆ ವೈಶಂಪಾಯ
ಮುನಿ ಹೇಳಿದನು ವಿಜಯಗು ಸಿರಿಯರಸನಿಗು
ಬಂದ ಸಂಗರದಾಯಕವ ನಾನು ॥

ಮೃಢನ ಸಖ ಕುಬೇರನೆಂಬುವ ಬಡಗ
ಕಧಿಪತಿ ಇವನ ತನಯನು ಕಡುಪರಾಕ್ರಮಿ
ಗಯನು ತಾ ಬಲು ಸಡಗರದೊಳು ॥

ಮೇಲೆ ತುರುಗವ ವ್ಯೋಮ ಪಥದೊಳು
ಸಾರಿ ಪೋಗುತ್ತಿರಲು ಆಗಲೆ
ವಾರಿಜಾಕ್ಷನು ಯಮುನ ನದಿಯನು ಸಾರಿ ಬೇಗಾ ॥

ತರಣಿಗರ್ಘ್ಯವ ಕೊಡುತಲಿರೆ ಹರಿ.
ತುರುಗ ಬಾಯ್ನರೆ ಕರಕೆ ಬೀಳಲು
ಸಿರಿಯರಸ ಶಿರವೆತ್ತಿ ನೋಡುತ ಭರದಿ ॥

ಶಪಥವಿದೆ ಯನ್ನ ನೇಮವ ಬನ್ನ
ಪಡಿಸಿದ ಕುನ್ನಿಯನು ಇನ್ನೆಂಟು ದಿನದಲಿ
ಮುನ್ನ ಶಿರವರಿಯದಿರೆ ರೌರವವನು ನಾ ಪೊಗುವೆ ॥

ಶ್ರೀಶ ಮಾಡಿದ ವಾಣಿಯನು ಆಕಾಶ
ವಾಣಿಯು ಗಯನಿಗುಸುರಲು –
ಈಶ ಸತಿ ಪಾರ್ವತಿಯ ಬೇಡಿದ ಘಾಸಿಯಿಂ ಗಯನು ॥

ಅಗಜೆ ಆ ಕ್ಷಣ ಶಿವಗೆ ಪೇಳಲು
ಅಘಹರನು ನಾರದರ ಮಂತ್ರವ
ಅಗಣಿತದಿ ಉಪದೇಶ ಮಾಡಲು ಆಗ ಗಯನು ॥

ಮಂತ್ರವನು ಜಪಿಸಲ್ಕೆ ನಾರದ ಸಂತಸದಿ ತಾಂ
ಗಯಗೆ ಪೇಳ್ದನು ಕುಂತಿಸುತ ಅರ್ಜುನನ
ಮರೆ ಹೊಗು ಚಿಂತೆ ಬೇಡೆಂದಾ ॥

ವಿಜಯನನು ಗಯ ಭರದಿ ಮರೆಹೊಗೆ
ಅಜಪಿತನು ಯೀ ವಾರ್ತೆ ತಿಳಿಯುತೆ
ಭುಜಗನಂದದಿ ಕಾಳಗಕೆ ಹರಿಬಿಜಯ ಮಾಡೆ ॥

ಧುರದಿ ಹರಿನರ ಕ್ರೂರ ಭಾವದಿ ಯಿರದೆ ಕಾದಲು
ಹರನು ಬಂದಾ ಅರಿಭಟರ ಪಂಥಗಳ
ಪೂರ್ತಿಸಿ ಪೊರೆದ ಶಂಕರನೂ ॥

ಧರಣಿಗತಿಶಯಮಾದ ಶರಪುರದರಸ
ಶಿರಿವರ ರಂಗಧಾಮನ ಕರುಣದಿಂದಲಿ
ಸುರಪನಂದನನಿರ್ದ ಸಂತಸದೀ ॥

 

ಕುಬೇರನ ಆಸ್ಥಾನ

ಪದ

ವರಮಂತ್ರಿ ಕೇಳು. ಪೇಳುವೆ ಭರದೊಳು ವಿವರಿಸುವೆ ॥
ಪುರದೊಳು ಪ್ರಜೆಗಳು ಹರಿಹರ ಸ್ಮರಣೆಯ ನಿರುತವು
ತಪ್ಪದೆ ಸ್ಮರಿಸುವರೆ ಕರೆಕರೆಯಿಲ್ಲದೆ ಇರುವರೆ ಸುಖದೊಳು
ಹರುಷದಿ ಶಿರಿಯೊಳು ಮೆರೆಯುವರೆ
ತಪ್ಪದೆ ಕಾಣಿಕೆ ಕ್ಷಿಪ್ರದಿಂದಲಿ  ವಪ್ಪದಿಂ ತಂದೊಪ್ಪಿಸುತಿಹರೇ ॥
ದರ್ಪಕೆ ಹೆದರುತಲಿರ್ಪರೆ ಅರಿಗಳು ತಪ್ಪದೆ ಯನ್ನೊಳು ಪೇಳುವದೈ ॥
ಧರೆಯೊಳಧಿಕ ಶರಪುರಿಯೊಳು ನೆಲಸಿಹ
ಸಿರಿವರರಂಗನ ಚರಣವನು ನಿರುತವು ಸ್ಮರಿಸುತ ಇರುವರೆ
ಪುರಜನ ಭರದಿಂದಲಿ ನೀನೊರೆಯುವೈ ॥ವರ ಮಂತ್ರಿ ॥

ಕುಬೇರ : ಯಲೈ ಸಚಿವನೆ. ನಮ್ಮ ಪುರ ಪರಿವಾರದವರೆಲ್ಲಾ ಹರಿಹರ ಭೇದವನ್ನೆಣಿಸದೆ ನಿರುತವೂ ದೇವತಾ ಸ್ಮರಣೆಯಲ್ಲಿರುವರೆ. ನಮಗೆ ಬರುತ್ತಿರುವ ಕಪ್ಪ ಕಾಣಿಕೆಗಳನ್ನು ತಪ್ಪದೆ ಕ್ಲುಪ್ತಕಾಲಕ್ಕೆ ತಂದೊಪ್ಪಿಸಿ ಶರಣಾಗುತ್ತಿರುವರೆ. ಧರೆಗತ್ಯಧಿಕವಾದ ಶರಪುರದರಸ ಶ್ರೀ ರಂಗನಾಥನಂ ಸ್ಮರಿಸಿ ಭರದಿಂದ ಪೇಳುವನಾಗೈ ಮಂತ್ರಿ ಕಾರ‌್ಯ ಸ್ವತಂತ್ರಿ ॥

ಮಂತ್ರಿ : ಜೀಯಾ ವಿಗ್ನಾಪಿಸುವೆನು

ಪದ

ಕೇಳು ರಾಜೇಂದ್ರನೆ ಕೇಳು ಕುಬೇರನೆ ಕೇಳು
ನೀ ಪಾರವ ಪೇಳ್ವೆ ವಿಚಾರವ ಕೇಳು ॥
ಪುರದೊಳಗಿರುತಿಹ ಪರಿಜನರೆಲ್ಲರೂ
ನಿರುತವು ಹರಿಹರ ಸ್ಮರಣೆಯೊಳಿರುವರು
ಕಪ್ಪ ಕಾಣಿಕೆಗಳು ತಪ್ಪದೆ ಬರ್ಪವು
ಸರ್ಪಶಯನ ಭಕ್ತ ಕ್ಷಿಪ್ರದಿಂ ಲಾಲಿಸು ॥
ಕೇಳು ಧರೆಯೊಳು ಶರಪುರಿ ವರದ
ಶ್ರೀರಂಗನ ನಿರುತವು ಸ್ಮರಿಸುತ  ಸೌಖ್ಯದೊಳಿರುವರು ॥ಕೇಳು  ॥

ಮಂತ್ರಿ : ಮಹಾರಾಜನೆ ನಮ್ಮ ಪ್ರಜೆಗಳ್ಯಾವತ್ತು ಹರಿಹರರೆಂಬ ಬೇಧವನ್ನೆಣಿಸದೆ ಇರುತ್ತಾ ಅರಿ ರಾಯರು ಸರಿಯಾಗಿ ಕಾಲಕಾಲಕ್ಕೆ ಕಪ್ಪ ಕಾಣಿಕೆಗಳನ್ನು ತಪ್ಪದೆ ತಂದೊಪ್ಪಿಸಿ, ತಮ್ಮ ದರ್ಪಕ್ಕೆ ಅಂಜಿ ಶರಣಾಗುತ್ತಿದ್ದಾರೆ. ಧರೆಯೊಳ್ ಶರಪುರದ ಶಿರವರನು ಕರುಣದಿಂದ ಪೊರೆಯುತ್ತಿರುವನೈ ರಾಜಾ ಭಾಸ್ಕರ ತೇಜ ॥

ಕುಬೇರ : ಭಲಾ ಭಲಾ, ಯಲೈ ಸೈನ್ಯಾಧ್ಯಕ್ಷನೆ ನಮ್ಮ ಸೇನೆಯು ಯಾವ ರೀತಿಯಿಂದಿರುವುದು ವಿವರಿಸು.

ಸೇನಾಪತಿ : ಜೀಯ ವಿಜ್ಞಾಪಿಸುವೆನು.

ಪದ

ಅಳಕಾಧಿಪ ತಳಮಳವೇತಕೆ ಕಳವಳವನು ಬಿಡು ॥
ಶತೃರಾಜರನು ಮತ್ತದಿಂದ ಬಲ್ ಕತ್ತಿಯಿಂದ ನಾ ಕತ್ತರಿಸಿ
ಮತ್ತೆ ಮತ್ತೆ ನಮ್ಮತ್ತ ಬಾರದಂತೆತ ತ್ತರಪುಟ್ಟಿಸಿ ಬಿತ್ತರದಿಂದೆಹೆ ॥

ಸೊಕ್ಕಿ ಮದದಿ ತಾವ್ ಠಕ್ಕಿನಿಂದಲಿ  ಅಕ್ಕರವಿಲ್ಲದೆ ಹರಿಹರರೋಳ್ ವೆಕ್ಕಸದಿಂ
ಬಲು ಫಕ್ಕನೆ ಸ್ಮರಿಸದ ಚಕ್ರಿಗಳನು ಮುರಿದಿಕ್ಕುತಲಿರುವೆನು ॥
ಧರೆಯೊಳಧಿಕ ಶರಪುರಿಯೊಳು ನೆಲಸಿಹ ಶಿರವರ ರಂಗನ
ಸ್ಮರಿಸುತಲಿ ಹರುಷದೊಳಿರುವೆನು ಸರಿ ಯಾರೆನಗೆಣೆ
ಧುರದೊಳು ಮುರಿದೋಡಿಸುವೆ ಅರಿನೃಪರ॥

ಸೇನಾಪತಿ : ಸ್ವಾಮಿ ಕುಬೇರ ಮಹಾರಾಜರೆ. ಶತೃಗಳೆಂಬ ನೊರಜುಗಳನ್ನು ಅಟ್ಟಹಾಸದಿಂ ಯೀ ಕತ್ತಿಯಲ್ಲಿ ಕತ್ತರಿಸಿ ನಮ್ಮ ಹತ್ತಿರ ಬಾರದಂತೆ, ತತ್ತರ ಪುಟ್ಟಿಸಿ ಮದಗರ್ವದಿಂದ ಸೊಕ್ಕಿ ಹರಿಹರ ಸ್ಮರಣೆಯಿಂ ಮಾಡದೆ ಮೆರೆಯುತ್ತಲಿರುವ ಚಕ್ರಿಗಳನ್ನು ಘಕ್ಕನೆ ವಕ್ಕಲಿಕ್ಕಿ ಶ್ರೀರಂಗಧಾಮನಂ ನಿರುತವೂ ಸ್ಮರಿಸಿ ನಿಮ್ಮಡಿಗೆ ಶಿರಬಾಗಿ ನಡೆಯುವಂತೆ ಮಾಡಿರುವೆನೈ ಭೂಪ ಕೀರ್ತಿ ಕಲಾಪ ॥

ಕುಬೇರ : ಯಲೈ ಮಂತ್ರಿ ಸೇನಾಧಿಪತಿಗಳಿರ, ನಿಮ್ಮಂತಹ ಅಸಹಾಯಶೂರರು ಯನಗಿರುವಲ್ಲಿ ಯನ್ನ ಭಾಗ್ಯಕ್ಕೆ ಎಣೆಯುಂಟೆ ಬಹಳ ಸಂತೋಷ ನೀವಿನ್ನು ಹೊರಡಬಹುದು ॥ ಯಾರಲ್ಲಿ ಯನ್ನ ರಾಣಿಯನ್ನು ಕುಮಾರ ಗಯ ಭೂಪಾಲನನ್ನು ಕರೆದುಕೊಂಡು ಬನ್ನಿ ॥

ಚಿತ್ರಲೇಖೆ : ನಮೋನ್ನಮೋ ಪ್ರಾಣೇಶ್ವರ.

ಕುಬೇರ : ಪ್ರಿಯೆ ನಿನಗೆ ಮಂಗಳವಾಗಲಿ.

ಗಯ : ತಂದೆಯೆ ವಂದಿಸುವೆನು.

ಕುಬೇರ : ಪುತ್ರಾ ಚಿರಂಜೀವಿಯಾಗು.

ಗಯ : ತಂದೆಯೆ. ಯನ್ನನ್ನು ಇಷ್ಟು ತ್ವರಿತದಿಂದ ಕರೆಸಿದ ಕಾರಣವೇನು, ಅಪ್ಪಣೆಯಾಗಲಿ.

ಕುಬೇರ : ಪುತ್ರ ನಾನು ಇಂದ್ರನ ಆಸ್ಥಾನಕ್ಕೆ ಹೋಗಿ ಬರುವೆನು. ಆವರೆವಿಗೂ ರಾಜಕಾರ್ಯದಲ್ಲಿ ನಿರತನಾಗಿರು.

ಗಯ : ಅಪ್ಪಣೆಯಂತಾಗಲಿ ಜನಕ.

ಕುಬೇರ : ರಮಣಿ ನಾನು ಬರುವವರೆಗೂ ಅಂತಃಪುರದಲ್ಲಿ ಸಂತೋಷಚಿತ್ತಳಾಗಿರು.

ಚಿತ್ರಲೇಖೆ : ಆರ‌್ಯಪುತ್ರ ಅಪ್ಪಣೆಯಂತಾಗಲಿ.