ಕಂದ

ಬೇಸರವೆಲ್ಲವ ಕಳೆಯಲ್
ದೇಶಾಟನೆ ಮಾಡಿ ಸುಖದಿ ಇರಬೇಕೆಂಬ
ಆಸೆಯು ಪುಟ್ಟಿತು ನಾನೀವಾಸದಿ
ಕ್ಷಣ ಮಾತ್ರ ನಿಲ್ಲಲಾರೆನೂ ಜನನೀ ॥

ಪದ

ಲಾಲಿಸು ಮಾತೆ, ಬಾಲನೋಳ್ ಪ್ರೀತೆ
ಪೇಳುವ ಕುವರನ ಲೀಲೆಯನೀಗಲೇ ॥

ತುರುಗವನೇರುತೆ ಧರೆಯನು ತಿರುಗುತೇ
ಪರಿಪರಿ ಚೋದ್ಯವ ನಿರುಕಿಸಿ ಬರುವೆನೂ ॥

ಧರೆಯೊಳು ಶರಪುರಿ ವರ ರಂಗಧಾಮನ
ಚರಣವ ಸ್ಮರಿಸುತ ಭರದಿಂದ ಕಳುಹು ನೀಂ ॥ಲಾಲಿ ॥

ಗಯ : ಜನನಿ. ಪುತ್ರರು ಜನಿಸಿದ ಮೇಲೆ ಸಕಲ ದೇಶ ಸಂಚಾರ ಮಾಡಿ ಸಕಲ ವಿಚಾರಗಳನ್ನು ತಿಳಿದು ಪ್ರಾಜ್ಞತೆಯನ್ನು ಸಂಪಾದಿಸಿಕೊಂಡಿರಬೇಕಾದ ಪ್ರಯುಕ್ತ, ಇಂದು ನಾನು ಭೂ ಸಂಚಾರ ನಿಮಿತ್ಯ ಗಮನಾಸಕ್ತನಾಗಿರುತ್ತೇನೆ. ಕಾರಣ ಸನುಮತಿಯಿಂದ ಅಪ್ಪಣೆಯನ್ನಿತ್ತು ಕಳುಹಬೇಕಾಗಿ ಬೇಡುವೆನಮ್ಮ ಜನನಿ ಸೌಖ್ಯ ಪ್ರದಾಯಿನಿ ॥

ಚಿತ್ರಲೇಖೆ : ಅಯ್ಯೋ, ಯೀ ಬಾಲಕನಿಗೆ ನನ್ನನ್ನು ಬಿಟ್ಟು ತೆರಳಬೇಕೆಂಬ ಆಸೆಯು ಹುಟ್ಟಿರುವುದಲ್ಲಾ. ಯಿನ್ನು ಇವನನ್ನು ನಿಲ್ಲಿಸುವುದು ಹೇಗೆ – ಮಗನೆ ಅನೇಕ ವರುಷಗಳು ಘೋರ ತಪವಂ ಗೈದು ನಿನ್ನನ್ನು ಪಡೆದಿರುವ ನನ್ನನ್ನು ಬಿಟ್ಟು ತೆರಳುವುದು ಉಚಿತವಲ್ಲವೈ ಬಾಲಾ ಸುಜ್ಞಾನ ಶೀಲ.

ಪದ

ಕೇಳೈ ಸುಕುಮಾರನೆ ಕೇಳೈ ॥
ಪೇಳುವೆ ಮಾತನು ಲಾಲಿಸು॥
ನೀನೀಗ ಬಾಲಲೀಲೆಯತೋರಿ ॥

ಚಿತ್ರಲೇಖೆ : ಅಯ್ಯ ಸುಕುಮಾರನೆ. ನಾಂ ಪೇಳುವ ವಚನವನ್ನು ನಿನ್ನ ಮನಸ್ಸಿಗೆ ತಂದು ಚನ್ನಾಗಿ ಯೋಚಿಸು. ನನ್ನನ್ನು ದುಃಖಕ್ಕೆ ವಳಗು ಮಾಡಬೇಡ ॥

ಪದ

ಮೃಢನನ್ನು ಸ್ಮರಿಸಿ ನಾಂ ಪಡದಿಹೆ ನಿನ್ನನು
ಬಿಡುತಲೆನ್ನನು ಹೊರಡೆ ವಡಲಾ ನೀಗುವೆ ನಾನು ಕೇಳೈ ॥

ದುರುಳ ಬುದ್ಧಿಯ ಬಿಟ್ಟು ತರಳಾನೆ
ಶರಳಾಪುರಿವರ ರಂಗಧಾಮನ ನಿರುತಾ ಸ್ಮರಿಸು ಮನದಿ ॥

ಚಿತ್ರಲೇಖೆ : ಸುಕುಮಾರನೆ. ನಾನು ನಿನ್ನನ್ನು ಪರಮೇಶ್ವರನನ್ನು ಕುರಿತು ತಪವನ್ನಾಚರಿಸಿ ಪಡೆದು ಹರುಷದಿಂದ ನಿನ್ನನ್ನು ಪರಿಪಾಲಿಸುವ ವೇಳೆಯೋಳ್ ನೀನು ಯೀ ದುರುಳ ಬುದ್ಧಿಯಂ ಮನಸ್ಸಿಗೆ ತಂದುಕೊಂಡು ಯನ್ನಂ ತೊರೆದು ಪೋಗುತ್ತೇನೆಂಬ ಮನೋ ವ್ಯಾಕುಲವಂ ಬಿಟ್ಟು ಶರಪುರಿಯರಸನಾದ ಶ್ರೀರಂಗಧಾಮನಂ ಸ್ಮರಿಸುತ್ತ ಸುಖದಿಂದ ಇರುವವನಾಗೈ ಕಂದ ಇದೇನು ಚಂದ…..

ಪದ

ಚಿಂತೆಯೇತಕೆ ಮಾತೆ ಅಂತರಿಸದೆ ನೀನೂ ॥
ಇಂತು ತಪಿಸುವರೇ ಸಂತಸದಿಂದಿರು ॥

ಚಿಕ್ಕತನದಿ ನಾನು ಘಕ್ಕನೆ ಪೋಗುತೆ
ದಿಕ್ಕು ದೇಶಗಳನು ಅಕ್ಕರಿಂ ನೋಡಿ ಧರೆಯೊಳು
ಶರಪುರಿ ವರದ ಶ್ರೀರಂಗನ ಚರಣವ ಸ್ಮರಿಸುತ
ಹರುಷದಿಂ ಕಳುಹು ನೀನು ॥

ಗಯ : ಪುತ್ರರು ಪ್ರಾಪ್ತ ವಯಸ್ಕರಾದ ಮೇಲೆ ದೇಶ ಕೋಶಾದಿಗಳಂ ನೋಡಿ ಅನೇಕ ವಿಷಯಗಳನ್ನು ತಿಳಿದುಕೊಂಡು ರಾಜ್ಯಭಾರವಂ ಮಾಡಬೇಕು. ಕುಳಿತಲ್ಲಿಯೇ ಇದ್ದರೆ ಯಾವ ಕುಶಲತೆಯೂ ಬರಲರಿಯದು. ಆದ ಕಾರಣ ಹರುಷದಿಂದ ಶ್ರೀರಂಗಧಾಮನಂ ಸ್ಮರಿಸಿ ಅಪ್ಪಣೆಯಂ ಕೃಪೆಗೊಳಿಸಿ ಯನ್ನಂ ಕಳುಹಿಸಿ ಕೊಡಬೇಕಾಗಿ ಬೇಡುವೆನಮ್ಮಾ ಜನನಿ ॥

ಚಿತ್ರಲೇಖೆ : ಅಯ್ಯೋ, ನಾನು ಎಷ್ಟು ವಿಧವಾಗಿ ಹೇಳಿದರೂ ಹೀಗೆ ಮುಷ್ಕರವನ್ನು ಹಿಡಿದಿರುವನಲ್ಲಾ ಯೇನು ಮಾಡಲಿ. ಅದೋ ಆರ‌್ಯಪುತ್ರರು ಬರುತ್ತಿರುವರು. ಅವರಿಂದಲಾದರೂ ಹೇಳಿಸಿ ನೋಡುತ್ತೇನೆ.

ಚಿತ್ರಲೇಖೆ : ಕಾಂತ ವಂದಿಸುವೆನು.

ಕುಬೇರ : ರಮಣಿ ಸುಮಂಗಲಿಯಾಗು, ಕಾಂತೆ ಯೀ ದಿನ ನಿನ್ನ ಮುಖ ಕಮಲವು ಕಾಂತಿಹೀನ ವಾಗಿರಲು ಕಾರಣವೇನು. ಭರದಿಂದ ಅರುಹುವಳಾಗು.

ಚಿತ್ರಲೇಖೆ : ಕಾಂತ, ನಾನು ಪುತ್ರ ಶೋಕವಂ ಮರೆಯಬೇಕೆಂದು ಬಹು ಕಷ್ಟಪಟ್ಟು ಪರಶಿವನಂ ಕುರಿತು ತಪವನ್ನಾಚರಿಸಿ ಪಡೆದ ಯೀ ಬಾಲನು ದೇಶಸಂಚಾರಾರ್ಥಮಾಗಿ ತೆರಳುವೆನೆಂದು ಹಟವಂ ಹಿಡಿದಿರುವನು. ನಾನು ಎಷ್ಟು ವಿಧವಾಗಿ ಹೇಳಿದರೂ ಲಕ್ಷ್ಯಕ್ಕೆ ತಾರನು. ಮುಂದಿನ ಪರಿಯನ್ನು ವಿಚಾರಿಸುವರಾಗಿರಿ.

ಕುಬೇರ : ಕುಮಾರ ನಾನೇ ಧನಪತಿಯಾಗಿರುವಲ್ಲಿ ನೀನು ದೇಶ ಸಂಚಾರ ಮಾಡಿ ಆರ್ಜಿಸುವ ಕಾರ್ಯವೇನಿರುವುದು ಭರದಿಂದ ಒರೆಯುವನಾಗು ॥

ಪದ

ಯಾತಕೆ ಯೀತೆರ ಜಾತನೆ ಪೇಳುವೆ
ಪ್ರೀತಿಯೊಳೆಮ್ಮಯ ಮಾತನು ಕೇಳದೆ ॥

ನಿನ್ನನು ಬಿಟ್ಟು ನಾವಿನ್ನಿರಲಾರೆವು
ಸನ್ನುತ ಪೋಪೆನೆಂದಿನ್ನುಸುರದೆ ಇರು ॥ಯಾತಕೆ

ಕುಬೇರ : ಸುಕುಮಾರನೆ ನೀನು ಹೊರಡುವೆನೆಂಬ ದುರುಳ ಬುದ್ಧಿಯಂ ಬಿಡು. ಹೆತ್ತವರಿಗೆ ದುಃಖವನ್ನು ವೆಕ್ಕಸಗೊಳಿಸಿ ಹೋಗುವುದು ಉತ್ತಮರ ಕರ‌್ತವ್ಯವಲ್ಲ. ಮಾತಾ ಪಿತೃವಾಕ್ಯ ಪರಿಪಾಲನೆಯು ಅತಿಶ್ರೇಷ್ಠವೆಂಬ ನ್ಯಾಯವಂ ನೀನರಿಯದವನೇ ಬಾಲಾ ಸುಜ್ಞಾನಶೀಲ.

ಚಿತ್ರಲೇಖೆ : ಮಗುವೆ ನಮ್ಮನ್ನು ದುಃಖಕ್ಕೆ ಗುರಿಮಾಡಬೇಡ. ಯಮ್ಮ ವಾಕ್ಯವಂ ಮನದೋಳ್ ಗ್ರಹಿಸು.

ಪದ

ಬಿಡು ಬಿಡು ಕಡುತಾಪವ ಜನಕನೆ ಬಿಡು ಬಿಡು ॥

ಯನ್ನ ಬಿನ್ನಪವ ಮನ್ನಣೆಗೈಯ್ಯುತ
ಮನ್ನಿಸಿ ಪೊರೆಯುತೆ ಯಿನ್ನಾಗ್ನೆ ಯೀವುತ ॥

ಕಿರಿಯರು ಗೈಯ್ಯುವ ಸರಸದ ಆಟವ ॥
ಹಿರಿಯರು ನೋಡುತ ಹರುಷವ ಪಡುವರೂ ॥ಬಿಡು ಬಿಡು॥

ಗಯ : ಜನನೀ ಜನಕರೆ, ಈ ರೀತಿ ಪ್ರಮಾಣ ವಚನವು ಇರುವದರಿಂದ ನೀವು ಖಂಡಿತಾ ಚಿಂತಿಸದೆ ಯನಗೆ ಅನುಗ್ನೆಯಂ ದಯಪಾಲಿಸಿರಿ.

ಕುಬೇರ : ಒಳ್ಳೆಯದು. ಜಯಶಾಲಿಯಾಗಿ ಹೋಗಿ ಬಾ.

 

ಅರಣ್ಯ ಪ್ರದೇಶ

ಪದ

ತೋರುವದೀಗ ದುಶ್ಯಕುನ ಆಹಾ ಯಾರಿಗೆ ಪೇಳಲಿ ಕ್ರೂರವಾ ॥

ನರಿಗಳೂ ಕೂಗುವವು ಬಿರುಗಾಳಿ ಬೀಸುವುದು.
ತರುಗಳುರಿಯುತ್ತಿಹವು ಪರಿಯೇ ತೋರದು
ಘೋರವಾಯಸಗಳು ದಾರಿಯ ಕಟ್ಟುವವು
ಮೀರಿ ಕಾದುವವು ಬಿಡಾಲಗಳ್ ಪರಿ ತಿಳಿಯದು ॥
ತಂದೆ ತಾಯ್ವಚನವನಿಂದು ಮೀರುತೆ ನಾನು ಬಂದೆ
ಶರಪುರಿರಂಗ ಯಿಂದು ಪೊರೆಯೊ ತಂದೆ  ॥

ಕಂದ

ಸಕಲೈಶ್ವರ‌್ಯವ ತೊರೆಯುತೆ ಸುಖವ ನಾಂ
ಬಿಟ್ಟು ಮಹಿಯಂ ತಿರುಗುವ ಭ್ರಮೆಯಿಂ
ಸುಖ ಲೇಶ ಕಾಣದಿರುವುದು
ಅಕಟಕಟಾ ಮುಂದೆ ಏನೊದಗುವುದೊ

ಗಯ : ಆಹಾ ಇದೇನೋ ಮಹಾವಿಪತ್ತು ಸಂಭವಿಸುವ ಹಾಗೆ ನನ್ನ ಮನಸ್ಸಿಗೆ ತೋರುತ್ತಲಿರುವುದು. ಮಾರ್ಗದಲ್ಲಿ ಅನೇಕ ದುಶ್ಯಕುನಗಳು ಕಾಣುವವು. ಮಾತಾಪಿತೃಗಳು ಅನೇಕ ವಿಧವಾಗಿ ಹೇಳಿದ ಬುದ್ಧಿ ವಚನಗಳನ್ನು ಮನಸ್ಸಿಗೆ ತಾರದೆ ನಿರಾಕರಿಸಿ ಬಂದೆನು. ಸುಖಸಂತೋಷಗಳನ್ನು ತೊರೆದು ಬಂದು ಯೀ ಪರಿ ಘಾಸಿಪಡುವದಾಯಿತೆ ಶರಪುರಿರಂಗ ಹರಿಸೆನ್ನ ಭಂಗ –

 

ಶ್ರೀ ಕೃಷ್ಣ ಬರುವಿಕೆ

ಪದ

ಪರಮಾಪಾವನ ಮೂರ‌್ತಿ ಮೆರೆದ  ಹರಿಪೀಠದಲ್ಲಿ ಪರಮಾ ॥
ಸಿರಿಯರಮಣ, ಮುರಹರಿ ಗೋವಿಂದನು,
ಕರಿಯ ಕಾಯ್ದ ದೊರೆ ಉರಗ ತಲ್ಪದೊಳು ॥
ದಶರೂಪದಿ ಯೀ ವಸುಧೆಯ ಪೊರೆದವ
ಕುಸುಮಾಸ್ತ್ರನ ಪಿತ ಬಿಸಜನಾಭಹರಿ  ॥

ಕೃಷ್ಣ : ಸೇವಕ. ತ್ವರಿತದಿಂದ ಸಾತ್ಯಕಿಯನ್ನು ಕರೆದುಕೊಂಡು ಬಾ

ಸಾತ್ಯಕಿ : ನಮೋನ್ನಮೋ ಯದುನಂದನ.

ಕೃಷ್ಣ : ಯಲೈ ಸಾತ್ಯಕಿ. ನಮ್ಮ ದ್ವಾರಕಾಪುರವು ಸುರಕ್ಷಿತವಾಗಿರುವುದೆ ವಿಚಾರವಿದ್ದರೆ ತಿಳಿಸು.

ಪದ

ಕೇಳು ಕೇಳು ಯನ್ನಯ ನುಡಿ ಲಾಲಿಸೈ
ನೀಲಕಂಠನ ಸಖನೆ ಪಾಲಿಸೊ ॥
ರಾಕ್ಷಸಾಂತಕನೆಂದು ಯೀ ಕ್ಷಿತಿ ಪೊಗಳ್ವುದು
ಪಕ್ಷಿವಾಹನ ಮೋಕ್ಷದಾಯಕ ॥
ಧರೆಶರಪುರಿರಂಗ ಶಿರಿರಮಣನೆ ನಿನ್ನ
ಸ್ಮರಿಸಲು ದುರಿತವು ಪರಿಹಾರವೈ ॥

ಸಾತ್ಯಕಿ : ಯದುಪತಿಯೆ ಯೀ ಸಾಗರದ ಮಧ್ಯದಲ್ಲಿ ನಿಮ್ಮಿಂದ ರಕ್ಷಿಸಲ್ಪಡುವ ಯೀ ದ್ವಾರಾವತಿ ನಗರಕ್ಕೆ ರಕ್ಕಸರ ಭಯ ಲೇಶವೂ ಇರುವುದಿಲ್ಲ. ರಾಕ್ಷಸಾಂತಕನೆಂಬ ಬಿರುದಂ ಧರಿಸಿರುವ ಪಕ್ಷಿವಾಹನನೆ. ನಿನಗೆ ಯಾವುದು ತಾನೆ ಲಕ್ಷ್ಯ ॥

 

ನಾರದರ ಆಗಮನ

ಪದ

ಹರಿಯೇ ಸದಮಲಭಾವ ಪೊರೆಯೊ ನೀ ದೇವದೇವ
ದೀನದಯಾಪರ ಲೀಲ ದಾನವಕುಲ ವಂಶಕಾಲ
ಭಾನು ತನಯ ಸಖ್ಯಸೀಲ ಜಾನಕಿಯ ಪ್ರಾಣಲೋಲ ॥
ಕರುಣಾಕರ ನಿನ್ನ ನಂಬಿದೆ ಶರಣಾಗತ ಪರಿಪಾಲಕ ಬಿರುದಾಂಕಿತ,
ಶ್ರೀ ಹರಿಯೇ ನೀಂ ದೇವ ದೇವ

ಚಾರ : ಬ್ರಂಹಾಂಡ ನಾಯಕ ಕೃಷ್ಣಮೂರ‌್ತಿ ಬಹುಪರಾಕ್.

ಕೃಷ್ಣ : ಚಾರ, ಜಯಧ್ವನಿಗೆ ಕಾರಣವೇನು.

ಚಾರ : ತ್ರಿಲೋಕ ಸಂಚಾರಿಗಳಾದ ನಾರದರುಷಿಗಳು ಬಂದಿದ್ದಾರೆ.

ಕೃಷ್ಣ : ಬಹಳ ಸಂತೋಷ. ಮರ‌್ಯಾದೆಯಿಂದ ಮಹಾತ್ಮರನ್ನು ಕರೆದುಕೊಂಡು ಬಾ.

ಕೃಷ್ಣ : ಸುರಮುನಿ ಬಹಳ ದಿವಸಕ್ಕೆ ಆಗಮಿಸಿದಂತಾಯಿತು. ವಂದನೆ ಯೀ ಪೀಠದಲ್ಲಿ ಕುಳಿತುಕೊಳ್ಳುವರಾಗಿರಿ ॥

ನಾರದ : ವಳ್ಳೆಯದು ಶುಭಂ.

ಕೃಷ್ಣ : ಮುನೀಂದ್ರ ಬಹಳ ದಿವಸಕ್ಕೆ ಆಗಮಿಸಿದಂತಾಯಿತು. ತಮ್ಮ ಪಾದಧೂಳಿಯಿಂದ ಯೀ ನನ್ನ ಗೃಹವು ಪಾವನವಾಯಿತು.  ಕೃತಾರ್ಥನಾದೆ ಮಹಾತ್ಮ.

ನಾರದ : ಹೇ ಕಪಟ ನಾಟಕ ಸೂತ್ರಧಾರ. ನಿನ್ನ ಲೀಲೆಯನ್ನು ಎಷ್ಟೆಂದು ಹೇಳಲಿ. ನಾನು ಯಲ್ಲವನ್ನೂ ತಿಳಿದವನಂತೆ ತಮಗೆ ಮಾತ್ರ ಯೇನೂ ತಿಳಿಯದಂತೆ ನಟಿಸುವೆಯಲ್ಲಾ. ಆದ್ದರಿಂದಲೇ ಭಕ್ತ ಪರಾಧೀನನೆಂಬ ಪೆಸರಂ ಧರಿಸಿರುವುದು. ಯದುಕುಲ ಲಲಾಮನೆ ನಿನ್ನ ಮಾಯಗಳನ್ನು ನಾನರಿಯದವನೆ. ಬಾಯಲ್ಲಿ ಬ್ರಂಹಾಂಡವನ್ನು ತೋರಿಸಿದ ಮಹಿಮನಿಗೆ ಯಾವುದೂ ತಿಳಿಯುವುದಿಲ್ಲ ಸರಿ ಸರಿ-

ಕೃಷ್ಣ : ತ್ರಿಲೋಕ ಸಂಚಾರಿಗಳಾದ ತಾವು ಅರಿಯದ್ದನ್ನು ನಾನರಿಯುವೆನೆ ಮುನೀಂದ್ರ –

ನಾರದ : ನೀನು ಯಾವುದೂ ಕಾಣೆ ನನಗಂತೂ ಏನೂ ತಿಳಿಯದು ಅದಿರಲಿ. ನಿನ್ನ ಭಕ್ತರಾದ ಪಾಂಡವರು ಅರಣ್ಯದಲ್ಲಿ ಪತ್ನಿಯೊಡನೆ ಬಳಲುವುದು. ದುರ‌್ಯೋಧನಾದಿಗಳು ಸಕಲೈಶ್ವರ‌್ಯದಿಂದ ಕೂಡಿ ಮೆರೆಯುತ್ತಿರುವರು ಇಷ್ಟನ್ನು ಮಾತ್ರ ನಾನು ಕಂಡೆ.

ಕೃಷ್ಣ : ಪೂಜ್ಯರೆ. ಮಹಾತ್ಮರಾಗಿಯೂ ಭಗವದ್ಭಕ್ತರಾಗಿಯೂ ಇರುವ ಪಾಂಡವರಿಗೆ ಐಶ್ವರ‌್ಯ ಉಂಟಾದರೆ ನನ್ನನ್ನು ಮರೆಯಬಹುದೆಂದು ಆ ಸೃಷ್ಟಿಕರ‌್ತನು ಅವರನ್ನು ಹಾಗೆ ಇಟ್ಟಿರಬಹುದು. ಆದರೆ ಆಗಾಗ ವದಗುವ ಕಷ್ಟಗಳನ್ನು ಪರಿಹಾರ ಮಾಡುತ್ತಿರುವೆನಲ್ಲಾ ಮುನೀಂದ್ರ ॥

ನಾರದ : ಬಹಳ ಚನ್ನಾಯಿತು

ಕೃಷ್ಣ : ಪೂಜ್ಯರೆ ತಾವು ಇಲ್ಲಿಗೆ ಬಂದದ್ದರಿಂದ ನಾನು ಧನ್ಯನಾದೆ. ಭವದಾಸೆಯಿಂದ ಗೈದ ಪಾಪ ಪರಿಹಾರಕ್ಕಾಗಿ ಯೀ ದಿನ ಭಾಸ್ಕರನಿಗೆ ಅರ್ಘ್ಯವಂ ಕೊಡಬೇಕಾದ ಕಾರಣ ತಾವು ನನ್ನ ಜೊತೆಯಲ್ಲಿ ಯಮುನಾನದಿ ಪ್ರಾಂತಕ್ಕೆ ಬನ್ನಿ. ಇದರಲ್ಲಿ ತಾವು ಭಾಗವಹಿಸಬೇಕೆಂದು ಬೇಡುತ್ತೇನೆ ಮುನೀಂದ್ರ. ಸಾತ್ಯಕಿ ಪೂಜಾ ಸಾಮಗ್ರಿಗಳನ್ನು ಸಿದ್ಧಗೊಳಿಸು.

ನಾರದ : ಯೀಗ ಇದ್ದುದೂ ಚನ್ನಾಯಿತು. ನೀನು ಮಾಡಿರುವ ಪಾಪಗಳನ್ನು ನಾನು ಪರಿಹರಿಸಬೇಕೆ ಸರಿ ಸರಿ-

ಪದ

ಯಾತಕೀ ಪರಿ ಇಂದ್ರಜಾಲ ಭೂತನಾಥನೆ
ಸಾಕು ನಿನ್ನ ಮಾಯಾಜಾಲ ಲೋಕವಂದ್ಯನೇ ॥
ನೀಲ ಮೇಘ ಶ್ಯಾಮ ನಿನ್ನ ಬಾಲ ಲೀಲೆಯಾ
ಪೇಳಬಹುದೆ ತಿಳಿದವರಿಗೆ ವ್ಯಾಳಶಾಯಿಯೇ ॥

ಧರೆ ಶರಪುರಿ ವರದರಂಗನೆ ತರವೆ ಪೇಳ್ವುದು
ಸುರನರೋರುಗರರಿಯರು ನಿನ್ನ ಪರಿಯ ಮಾಯವ ॥ಯಾತಕೀ ॥

ನಾರದ : ದೇವಕೀನಂದನ ನೀನು ಮುಗ್ಧನಂತೆ ಬಹಳ ಪಾಪ ಕಾರ್ಯಂಗಳಂ ಮಾಡಿದವನಂತೆ ನಟನಾ ವಾಕ್ಯಂಗಳನ್ನಾಡುವುದು ಆಶ್ಚರ‌್ಯಕರವಾಗಿರುವುದು. ನೀನೇ ಈ ಪರಿ ಮಾತನಾಡಿದರೆ ನಾನು ಮಾಡತಕ್ಕ ಕಾರ‌್ಯವೇನಿರುವುದು. ಆಗಲಿ ಹೋಗೋಣ ನಡೆ.

ಕೃಷ್ಣ : ಅರುಣೋದಯವಾಗುತ್ತಿದೆ. ದಿನಮಣಿಗೆ ಅರ್ಘ್ಯವಂ ಕೊಡಲು ಇದು ವಳ್ಳೆಯ ಸಮಯ. ತಾವು ಬಂದು ನನ್ನನ್ನು ಕೃತಾರ್ಥನನ್ನಾಗಿ ಮಾಡಬೇಕಾಗಿ ಬೇಡುವೆನು.

ನಾರದ : ರೋಗಿ ಬಯಸಿದ್ದು ಹಾಲು ಅನ್ನ – ವೈದ್ಯ ಹೇಳಿದ್ದೂ ಹಾಲು ಅನ್ನ. ಹಾಗಾದರೆ ನಿನ್ನ ಇಷ್ಟದಂತೆ ಆಗಲಿ ನಾನು ಬರುವೆನು.

ಕೃಷ್ಣ : ಹೇ ದೇವ ಮಹಾನುಭಾವ. ನಿನ್ನಿಂದ ಸಕಲ ಚರಾಚರ ಪ್ರಾಣಿ ಕೋಟಿಗಳು ಜೀವದಿಂದ ಇರುವವು. ನಿನ್ನನ್ನು ಕಾಣದ ದಿನ ದುರ್ದಿನವೆಂದು ಹಿರಿಯರು ಹೇಳುತ್ತಾರೆ. ಹೇ ದಿವಾಕರ ಪಾಹಿಮಾಂ ಪಾಹಿಮಾಂ ಪಾಹಿ.

ತ್ರಿಪುಡೆ

ವ್ಯೋಮಪಥದೊಳು ತಾಮಸಿಲ್ಲದೆ ಭೀಮ ವಿಕ್ರಮ ಗಯನು ತುರುಗದಿ
ತಾ ಮನೋಹರಮಾಗಿ ಪೋಗುತೆ ನೇಮದಾಗೆ ಹರಿಯಾ ॥
ಕರದೊಳಗೆ ಆ ಕ್ಷಣದಿ ತುರುಗದಿ ನೊರೆಯು ಬಾಯಿಂ ಸುರಿಯಲಾಗಲೇ
ಸಿರಿಯರಸ ಶಿರವೆತ್ತಿ ನೋಡುತ ಭರದಿ ಶಪಥವಿಡೇ ॥

ಕೃಷ್ಣ : ಇದೇನು ನನ್ನ ಕೈಯ್ಯಲ್ಲಿ ಅಪರಿಶುದ್ಧವಾದ ವಸ್ತುವು ಬೀಳಲು ಕಾರಣವೇನು. ಓಹೋ ಇದು ಯಾವನೋ ಗಗನಚಾರಿಯಾಗಿ ಹೋಗುತ್ತ ಅಜಾಗರೂಕತೆಯಿಂದ ಉಗುಳಿರುತ್ತಾನೆ. ಯಲವೋ ಮದಾಂಧನಾದ ಗಯನೆ. ಇಷ್ಟು ದುರಹಂಕಾರವೇ ಮೂರ್ಖ.

ಪದ

ಯಂಟೂ ದಿವಸದಿ ನಾನು
ತುಂಟ ಗಯನನು ಹಿಡಿದು ಕಂಠವ ಛೇದಿಸುವೆನೊ
ಶ್ರೀಕಂಠನಾಣೆ ಹರನಾಣೆ ॥

ಕೃಷ್ಣ : ಯಲೈ ಕುಬೇರ ನಂದನನಾದ ಗಯನೆ. ಇಂತಹ ಅಪಚಾರವಂ ಮಾಡಿದೆಯಾ ಪಾಪಿ. ಇನ್ನೆಂಟು ದಿನಗಳೊಳಗಾಗಿ ನಿನ್ನನ್ನು ಹಿಡಿದು ನಿನ್ನ ಕಂಠವನ್ನು ಆ ಶ್ರೀಕಂಠ ಮೂರ‌್ತಿಯ ಸಾಕ್ಷಿಯಾಗಿಯೂ ಕತ್ತರಿಸುತ್ತೇನೆ ಅಧಮ.

ಪದ

ಹಿಡಿದು ಅವನನು ನಾನು ಕೊಡುವೆ ಚಕ್ರಕೆ
ಬಲಿಯ ಮೃಢನಾಣೆ ಯನುತಲಿ
ಘುಡಿಘುಡಿಸಿ ಹರಿಯೂ ॥

ಕೃಷ್ಣ : ಯಲೊ ದುರಾತ್ಮನಾದ ಗಯನೆ. ನೀನು ಮೂರುಲೋಕಂಗಳಲ್ಲಿ ಹೊಕ್ಕರು ಬಿಡದೆ ನಿನ್ನನ್ನು ಹಿಡಿದು ತಂದು ಊರು ಮಾರಿಯ ಮುಂದೆ ಹರಕೆ ಕುರಿಯಂ ತರಿದಂತೆ ನಿನ್ನ ಶಿರವಂ ಸೀಳಿ ಬಿಡುತ್ತೇನೆ. ದ್ರೋಹಿ ವ್ರತಭಂಗವಂ ಮಾಡಿದೆಯಾ ಪಾಪಿ.

ಪದ

ವರ ಕುಬೇರನ ಸುತನ ವರಗೀಸದಿರ್ದಡೆ
ಪುರಹರನಾಣೆಯೂ ನಾನು ಬೀಳುವೆನೊ ಉರಿಗೇ ॥

ಕೃಷ್ಣ : ಯಲೈ ಗಂಧರ್ವ. ನಾನು ಕುಬೇರನ ಮಗನೆಂಬ ಅಹಂಕಾರದಿಂದ ಯನ್ನ ಕರದೋಳ್ ಉಗುಳಿ ಯನ್ನ ವ್ರತಭಂಗವಂ ಮಾಡಿದೆಯಾ ಪಾಪಿ. ನೀನು ಆ ಪಿನಾಕಪಾಣಿಯಾದ ಪರಮೇಶ್ವರನ ಮರೆ ಹೊಕ್ಕರೂ ಬಿಡದೆ ನಿನ್ನನ್ನು ಹಿಡಿದು ಯನ್ನ ಸುದರ್ಶನಕ್ಕೆ ಬಲಿಯಂ ಕೊಡುತ್ತೇನೆ. ಹಾಗೆ ಮಾಡದೆ ಪಂಥಕ್ಕೆ ತಪ್ಪಿದರೆ ಆ ಪುರಹರನ ಸಾಕ್ಷಿಯಾಗಿ ಉರಿಯಲ್ಲಿ ಬಿದ್ದು ಯನ್ನ ತನುವಂ ಕಳೆದುಕೊಳ್ಳುತ್ತೇನೆ.

ನಾರದ : ಕೃಷ್ಣಾ ಹಿಂದು ಮುಂದೂ ಆಲೋಚಿಸದೆ ಯಿಂಥಾ ಕ್ರೂರ ಪ್ರತಿಜ್ಞೆಯಂ ಮಾಡಬಹುದೆ. ಕುಬೇರನ ಸುತನಾದ ಗಯನು ಗಗನಪಥದಲ್ಲಿ ಸಂಚರಿಸುವಾಗ್ಗೆ ಆತನ ಕುದುರೆಯ ಬಾಯ್ನರೆಯು ನಿನ್ನ ಬೊಗಸೆಯಲ್ಲಿ ಬೀಳಲು ಇದನ್ನೆಲ್ಲವಂ ತಿಳಿದ ನೀನು ಹೀಗೆ ಮಾಡಿರುವೆಯಾ. ನಿನ್ನ ಮಾಯಗಳನ್ನು ನೀನೇ ಬಲ್ಲೆ ನಾರಾಯಣ.