ದುರ‌್ಯೋಧನ : ಪೂಜ್ಯರೆ ತಮ್ಮಂತಹ ಮಹಾತ್ಮರು ಯೀ ಲೋಕದಲ್ಲಿ ಉಂಟೆ? ಬಹಳ ವಳ್ಳೆಯ ಉಪಾಯವನ್ನು ಮಾಡಿರುವಿರಿ. ನನಗೆ ಈಗ ಬಹಳ ಸಂತೋಷವಾಯಿತು.

ಕಂದ

ಕುರುಕುಲ ಚಂದ್ರನೆ ನಿನ್ನಯ ಅರಿಗಳ
ನಾಶಕ್ಕೆ ಮನದಿ ಸಂಶಯವೇಕೈ
ನರಪನೆ ನಿನಗೀ ಲೋಕದೀ ಅರಿವಿಜಯವು
ಸುಲಭವಾಗಿ ಕೈವಶವಹುದೈ ॥

ನಾರದ : ರಾಜಾ ನಿನ್ನ ಇಷ್ಟಾರ್ಥವು ಪೂರ್ತಿಯಾಗುವುದು. ನಾಳೆಯೇ ಯುದ್ಧವು ಪ್ರಾರಂಭವಾಗುತ್ತದೆ. ನಾನಿನ್ನು ಹೊರಡುತ್ತೇನೆ. ನಾರಾಯಣ ನಾರಾಯಣ.

ಶಕುನಿ : ಯೀ ನಾರದರ ಮಾತನ್ನು ಕೇಳಿದರೆ ಏನೋ ವಿಪರೀತವಾಗಿ ತೋರುವುದು. ಕೃಷ್ಣನು ಅರ್ಜುನನನ್ನು ಕೊಲ್ಲುವುದುಂಟೆ? ಇರಲಿ ಮಹಾರಾಜನೆ ನಿನ್ನ ಇಷ್ಟದಂತೆ ಕಾರ‌್ಯವು ಸಫಲವಾಗುವುದು. ಯಿಂತಹ ಕಾಲದಲ್ಲಿ ವೈರಿಗಳನ್ನು ಪರಿಗ್ರಹಿಸಬೇಕು.

ಕಂದ

ಧರಣೀಪತಿ ಕೇಳ್ ನಿನ್ನಯ ಪರಿವಾರವನೆಲ್ಲ
ಬೇಗ ಜೊತೆಗೊಳಿಸುತ್ತಂ
ನರಗೆ ಸಹಾಯವ ಮಾಡುವ ತೆರದಿಂ
ನಟಿಸುತ್ತ ಅರಿಯ ಕೊಲ್ಲಿಸಬೇಕೈ ॥

ಶಕುನಿ : ದುರ‌್ಯೋಧನ ಭೂಪ. ಯೀ ಸಮಯದಲ್ಲಿ ಸೈನ್ಯವಂ ಜೊತೆಗೊಳಿಸಿಕೊಂಡು ಪಾಂಡವರಿಗೆ ಸಹಾಯ ಮಾಡುವ ನೆಪದಿಂದ ಕಾಮ್ಯಕವನಕ್ಕೆ ಹೋಗಿ ಮುಂದಿನ ಪರಿಯನ್ನು ನಿರೀಕ್ಷಿಸೋಣ ಹೋಗೋಣ.

ಕಂದ

ಧರಣೀಶನೆ ನೀನೀಪರಿ ಬರಿಯೋಚನೆಯಂ
ಮಾಳ್ಪುದಿದು ಸಮ್ಮತವಲೈ
ಅರಿಯನು ಕೊಲ್ಲ  ಲಸಾಧ್ಯವು
ತೆರಳೈ ನೀ ಬೇಗ ಕಾಮ್ಯಕವನಕಂ ॥

ಕರ್ಣ : ಮಹಾರಾಜನೆ ಯೀ ಸಮಯದಲ್ಲಿ ಉಪಾಯದಿಂದ ಅರಿಯಂ ಕೊಂದರೆ ಆ ಪಾಂಡವರು ನಿನ್ನ ಅಧೀನದಲ್ಲಿ ಬಾಳಲು ಅನುಕೂಲವಾಗುತ್ತದೆ. ಆದ್ದರಿಂದ ಸೇನಾ ಸಹಿತ ಕಾಮ್ಯಕವನಕ್ಕೆ ಹೋಗೋಣ.

ದುರ‌್ಯೋಧನ : ಮಿತ್ರಾ ರಾಧೇಯ. ನಮ್ಮ ಸೈನ್ಯವನ್ನು ಪಾಂಡವರ ಸಹಾಯಕ್ಕೆ ಕಳುಹಿಸಿ ಆ ಯಾದವರ ಅರಸನನ್ನು ನಿರ್ಮೂಲ ಮಾಡಿದರೆ, ಪಾಂಡವರು ನಿಸ್ಸಹಾಯಕರಾಗುತ್ತಾರೆ. ಆಗ ಅವರನ್ನು ಸುಲಭವಾಗಿ ಗೆಲ್ಲಬಹುದು. ಆದ ಕಾರಣ ಯೀ ವಿಚಾರವನ್ನು ಗಾಂಗೇಯ, ಕುಂಭ ಸಂಭವ, ಗುರುಸೂನು, ಕೃಪಾಚಾರಿ ಅತಿರಥ ಮಹಾರಥರಿಗೆ ತಿಳಿಸಿ ಯುದ್ಧಕ್ಕೆ ಸಿದ್ಧರಾಗಬೇಕೆಂದು ಆಜ್ಞೆಯಂ ನಿರೂಪಿಸು, ಸೈನ್ಯ ಯಾವತ್ತೂ ಕಾಮ್ಯಕ ಮಹಾವನಕ್ಕೆ ಪ್ರಯಾಣ ಮಾಡಲಿ

 

(ಸಖಿಯೊಡನೆ ರುಕ್ಮಿಣಿ ಬರುವಿಕೆ)

ರುಕ್ಮಿಣಿ : ಪ್ರಿಯ ಸಖಿ, ಯಮುನಾನದಿ ಸ್ನಾನಕ್ಕೆ ಹೋದ ಪ್ರಾಣಕಾಂತನು ಇನ್ನೂ ಬಾರದಿರುವುದಕ್ಕೆ ಕಾರಣವೇನೋ ತಿಳಿಯಲಿಲ್ಲಾ ಯೇನು ಮಾಡಲಿ

ಸಖಿ : ದೇವಿ. ಯಮುನಾ ನದಿ ಸ್ನಾನದ ನೆಪದಿಂದ ಸ್ವಾಮಿಯವರು ಮತ್ತೆಲ್ಲಿಗೆ ಹೋದರೊ ಯಾರಿಗೆ ತಿಳಿಯುವುದು.

ರುಕ್ಮಿಣಿ : ಸಖಿ ಚನ್ನಾಗಿ ಹೇಳಿದೆ. ಆತನು ಕಾಲಕ್ಕೆ ತಕ್ಕ ನಟನೆಯಂ ಮಾಡುವುದಲ್ಲದೆ ಹದಿನಾರು ಸಾವಿರ ಗೋಪಾಂಗನೆಯರ ಮನೆಯಲ್ಲಿರುತ್ತಾನೆ. ಆದ್ದರಿಂದಲೇ ಆತನನ್ನು ಚೋರಶಿಖಾಮಣಿ ಯೆನ್ನುವುದು. ಸಖಿ ಪ್ರಾಣಕಾಂತನ ವಿಚಾರದಲ್ಲಿ ನನಗೆ ಅನುಮಾನವಾಗಿರುತ್ತದೆ.

ಸಖಿ : ಕಮಲಾಕ್ಷಿಯೆ, ನಿನ್ನ ಕಾಂತನ ಪರಿಯನ್ನು ಯೇನೆಂದು ಹೇಳಲಿ. ಆತನು ಸಕಲ ಲೋಕ ರಕ್ಷಕನು. ಭಕ್ತ ಪರಾಧೀನನು. ಭಕ್ತರ ಸಂಕಟವನ್ನು ಹರಿಸಲು ಯಾವಲ್ಲಿಗೆ ತೆರಳಿದರೊ ಯಾರು ಬಲ್ಲರು ವಡತಿ.

ರುಕ್ಮಿಣಿ : ಸಖಿ. ಬಹಳವಾಗಿ ಆತನು ಭಕ್ತರ ಸೇವೆಗಾಗಿಯೇ ತನ್ನ ತನುಮನ ಧನಗಳನ್ನು ಮುಡುಪಿಟ್ಟಿರುತ್ತಾನೆ. ಪ್ರಾಣಸಖಿ. ಆ ದಿನ ನೀನು ನೋಡಲಿಲ್ಲವೆ.

ಸಖಿ : ಯಾವ ದಿನ ವಡತಿ.

ರುಕ್ಮಿಣಿ : ನಿನಗೆ ಜ್ಞಾಪಕವಿಲ್ಲವೆ ಸಖಿ. ವಂದು ದಿನ  ನಿರ್ಗತಿಕನಾದ ಬ್ರಾಂಹಣ ಬಂದಿದ್ದನಲ್ಲ ಆತನನ್ನು ಕುಚೇಲನೆಂದು ಹೇಳಿದರು. ಪರಮಾತ್ಮನೂ ಆ ಬ್ರಾಹ್ಮಣನೂ ಬಾಲ್ಯ ಸ್ನೇಹಿತರಂತೆ. ನೋಡಲಿಲ್ಲವೆ ಆ ದಿನ ಪ್ರಾಣಕಾಂತನ ಸಂತೋಷವನ್ನು. ಆದ್ದರಿಂದಲೇ ಆತನನ್ನು ಲೋಕ ಹೊಗಳುವುದು.

ಸಖಿ : ಆ ದಿನ ಆ ಬ್ರಾಂಹಣನಿಗೆ ಮಾಡಿದ ಸತ್ಕಾರವನ್ನು ಕಣ್ಣಾರೆ ಕಂಡೆ ವಡತಿ.

ರುಕ್ಮಿಣಿ : ಸಖಿ ಆತನು ತಂದ ವಂದು ಹಿಡಿ ಅವಲಕ್ಕಿಯನ್ನು ಪ್ರಾಣೇಶ್ವರನು ಮಹಾ ಪ್ರಸಾದವೆಂದು ಸ್ವೀಕರಿಸಿ ತನ್ನ ಕಣ್ಣುಗಳಿಗೆ ವತ್ತಿಕೊಂಡು ಇದು ಪರಮೇಶ್ವರನ ಪೂಜಾ ಪ್ರಸಾದಕ್ಕಿಂತಲೂ ಶ್ರೇಷ್ಟವಾದುದೆಂದು ನಮ್ಮೆಲ್ಲರಿಗೂ ವಿನಯೋಗಿಸಿದರಲ್ಲಾ ಸಖಿ, ನೋಡು ಆತನಿಗೆ ಭಕ್ತರ ಮೇಲೆ ಯಷ್ಟು ಅಭಿಮಾನ.

ಸಖಿ : ಅಹುದು ವಡತಿ. ಜಗದ್ರಕ್ಷಕನ ಪಟ್ಟ ಮಹಿಷಿಯಾದ ನಿನ್ನ ಪುಣ್ಯಕ್ಕೆ ಎಣೆಯಿಲ್ಲ ವಡತಿ.

ರುಕ್ಮಿಣಿ : ನಿಜ, ನಿಜ ಸಖಿ. ನನ್ನ ಕಾಂತನಿಗೆ ನನ್ನ ಮೇಲಿನ ಅಭಿಮಾನದಿಂದಲೇ ನನಗೆ ಯೀ ಸ್ಥಾನವನ್ನು ಕೊಟ್ಟಿದ್ದಾರೆ. ಇದು ನನ್ನ ಪುಣ್ಯ. ಅದೋ ಕಾಂತರು ಇತ್ತಲೇ ಬರುತ್ತಿರುವರು.

 

(ಕೃಷ್ಣನ ಪ್ರವೇಶ)

ರುಕ್ಮಿಣಿ : ಪ್ರಾಣಕಾಂತ ನನ್ನ ವಂದನೆಗಳು.

ಕೃಷ್ಣ : ಸುಮಂಗಲೀಭವ, ಕಾಂತೆ ಮೇಲಕ್ಕೆ ಏಳು.

ರುಕ್ಮಿಣಿ : ನಾಥ ಯೇಕೆ ಯೀ ರೀತಿ ಖಿನ್ನ ಮನಸ್ಕರಾಗಿರುವಿರಿ.

ಕೃಷ್ಣ : ಪ್ರಿಯೆ, ನನಗೆ ವದಗಿರುವ ಉಭಯ ಸಂಕಟವನ್ನು ನಿನ್ನೊಡನೆ ಏನೆಂದು ಹೇಳಲಿ. ಇದರಿಂದ ನನ್ನ ಮನವೇ ಪರಿತಾಪಕ್ಕೆ ವಳಗಾಗಿರುವುದು.

ರುಕ್ಮಿಣಿ : ನಾಥ ಪ್ರಮಾದವೇನು ತಿಳಿಸಬಾರದೆ ಪ್ರಿಯಾ.

ಪದ

ಕಾಂತೆ ಕೇಳು ಪೇಳುವೆನೆ ಪ್ರಮಾದವ ಕಾಂತೆ
ಕಳದೇಳು ದಿನದಲ್ಲಿ ನಳಿನ ಮಿತ್ರಗೆ ಅರ್ಘ್ಯ
ಘಳಿಲನೆ ಕೊಡುತಿದ್ದೆ ನಳಿನಾಕ್ಷಿ ಕೇಳೇ ॥ಕಾಂತೇ ॥

ಕೃಷ್ಣ : ಯಲೈ ಪದುಮಾಕ್ಷಿಯೆ. ಕಳೆದ ಏಳು ದಿನಗಳ ಬೆಳಗಿನ ವೇಳೆಯಲ್ಲಿ ಆ ನಳಿನ ಮಿತ್ರನಾದ ಸೂರ್ಯನಿಗೆ ಅರ್ಘ್ಯವಂ ಕೊಡುತ್ತಲಿರ್ದೆನು. ಆ ವೇಳೆಯಲ್ಲಿ ಗಯನೆಂಬ ಗಂಧರ್ವನು ತುರುಗಾರೂಢನಾಗಿ ಗಗನ ಮಾರ್ಗದಲ್ಲಿ ಸಂಚರಿಸುವಾಗ ಅವನ ಕುದುರೆಯ ಬಾಯ್ನರೆಯು ಯನ್ನ ಕರದೋಳ್ ಬೀಳಲು ನಾನದಂ ಕಂಡು ಕಠೋರ ಪಂಥವಂ ಗೈದಿರುವೆನೆ ಕಾಂತೆ ಮತಿವಂತೆ.

ಪದ

ಯಂಟು ದಿನದಲಿ ಅವನ ಕಂಠವ ಕಡಿಯದಿರೆ
ಶ್ರೀಕಂಠನಾಣೆಯು ಬೀಳ್ವೆ ನಾನುರಿಗೆ ॥

ೃಷ್ಣ : ಹೇ ಕಾಂತೆ. ಯಂಟು ದಿನಗಳೊಳಗಾಗಿ ಆ ತುಂಟನಾದ ಗಯನಂ ಹಿಡಿದು ಅವನ ಕಂಠವಂ ಕತ್ತರಿಸದಿರ್ದಡೆ ಆ ಶ್ರೀಕಂಠಮೂರ್ತಿಯಾದ ಪರಶಿವನಾಣೆಗೂ ಬೆಂಕಿಯಲ್ಲಿ ಬೀಳುವೆನೆಂದು ಘೋರಪಂಥವಂ ಮಾಡಿರುವೆನೆ ಪ್ರಾಣ ನಾಯಕಿ.

ಪದ

ದುರುಳ ಗಯನು ಪೋಗಿ ಮರುಳು ಮಾಡಲು ನರನ
ಪೊರೆವೆನೆಂದಭಯವ ಭರದಿ ಕೊಟ್ಟಿಹನಂತೇ ॥ಕಾಂತೆ ॥

ಕೃಷ್ಣ : ಹೇ ಕಾಂತೆ, ಯನ್ನ ಪ್ರತಿಜ್ಞೆಯಂ ತಿಳಿದ ಗಯನು ಕಾಮ್ಯಕವನಕ್ಕೆ ತೆರಳಿ ಅರ್ಜುನನ ಅಡಿದಾವರೆಗಳಂ ಪಿಡಿದು ಯನ್ನಂ ಕಾಪಾಡಬೇಕೆಂದು ಬೇಡಲು ಪರಿಯರಿಯದ ನರನು ಉರುತರ ಪಂಥದಿಂದ ನಿನ್ನನ್ನು ಕಾಪಾಡುವೆನೆಂದು ಅವನಿಗೆ ಅಭಯವಂ ಕೊಟ್ಟಿರುವನಂತೆ. ನಾಳೆಯ ದಿನ ನರನಿಗೂ ನನಗೂ ಘೋರ ಯುದ್ಧವಾಗುವುದು. ಇದರಿಂದ ನನ್ನ ಮನವು ಕಳವಳಗೊಳ್ಳುವುದೆ ಕಾಂತೆ ಮತಿವಂತೆ.

ರುಕ್ಮಿಣಿ : ಪ್ರಾಣೇಶ್ವರ ವಿಧಿ ಲಿಖಿತವಂ ಮೀರಲು ಸಾಧ್ಯವೆ? ನರ ನಾರಾಯಣರಾದ ನಿಮಗೆ ಯುದ್ಧವೆ. ವಿಧಿ ಲೀಲೆಯು ಬಲವತ್ತರವಾದುದು. ಶಂಕರ ದೇವ, ಕಾಪಾಡು ಕಾಪಾಡು ॥

ಕೃಷ್ಣ : ಯಲೈ ಸೇವಕ. ಯನ್ನ ಅನುಜೆಯಾದ ಸುಭದ್ರಾದೇವಿಯನ್ನು ಕರೆದುಕೊಂಡು ಬಾ.

 

(ಸುಭದ್ರೆ ಬರುವಿಕೆ)

ಸುಭದ್ರೆ : ನಮೋನ್ನಮೊ ಅಣ್ಣನವರೆ.

ಕೃಷ್ಣ : ಅನುಜೆ ನಿನಗೆ ಮಂಗಳವಾಗಲಿ.

ಸುಭದ್ರೆ : ಅಣ್ಣ ನನ್ನನ್ನು ಕರೆಸಿದ ಕಾರಣವೇನು ಪೇಳುವರಾಗಿರೈ ನಾರಾಯಣ ಭಕ್ತರಕ್ಷಣ.

ಪದ

ಲಾಲಿಸಮ್ಮಾ ಅನುಜೆ ನೀನು ಪೇಳೈ ಸೊಲ್ಲನೂ
ಲೋಲ ನಿನ್ನ ರಮಣ ಪಾರ್ಥ ಪಾಲಿಸಿಹ ಗಯನನೂ ॥ಲಾಲಿ ॥

ನಾರದಾರುಷಿ ಬಂದು ಯನ್ನೊಳು
ಸಾರಿ ಪೋದರೀಗಲೂ ಸೇರಿಸಿಹನು
ವೈರಿಗಯನ ತರವೆ ಯೀ ಪರಿ ಮಾಳ್ಪುದೂ.

ಭ್ರಷ್ಟ ಗಯನ ಬಿಟ್ಟು ಬಿಡಲು ಶಿಷ್ಯ ಪಾರ್ಥಗೀಗಲೇ
ಇಷ್ಟು ತಿಳಿದು ಪೇಳಿ ಬರಲು
ನಿಷ್ಠೆಯಂ ನಿನ್ನ ಕರೆಸಿಹೇ ॥ಲಾಲಿಸಮ್ಮಾ ॥

ಕೃಷ್ಣ : ಅಮ್ಮಾ ಸುಭದ್ರ, ಪಾರ್ಥನು ನನ್ನ ವೈರಿಯಾದ ಗಯನನ್ನು ತನ್ನಲ್ಲಿಟ್ಟುಕೊಂಡಿರುವನಂತೆ. ಯೀ ವಿಚಾರವು ನಾರದರುಷಿಗಳಿಂದ ತಿಳಿದು ಬಂದಿತು. ಬಂಧುತ್ವದಲ್ಲಿ ಕಲಹ ಉಂಟಾಯಿತು. ವೈರಿಯಂ ಬಿಡುವಂತೆ ಅರ್ಜುನನಿಗೆ ತಿಳಿಸಿ ಬಾ. ಇಲ್ಲದಿದ್ದರೆ ಕಾರ್ಯವು ಕೆಡುವುದು.

ಸುಭದ್ರೆ : ವಾಸುದೇವ, ನಿನ್ನ ಮಹಿಮೆಯನ್ನು ತಿಳಿಯಲು ಪನ್ನಗ ಸುರ ಸಿದ್ದ ಸಾಧ್ಯರಿಗೂ ಅಸಾಧ್ಯವಾಗಿರುವುದು. ದೇವಾ ಮಹಾನುಭಾವ.

ಪದ

ನರಹರಿ ರೂಪನೆ ಪೊರೆ ಯನ್ನ ಪತಿಯನು
ದುರಿತ ಪಾವಕ ನಿಮ್ಮ ಪಾದವ ನಂಬಿದೆ ॥
ವಿಜಯನೊಳಹಿತವ ನಿಜದೊಳೆಸಗದಿರು
ರಜತಾದ್ರಿಧರಸಖ ಪೊರೆಯೆನ್ನ ಪತಿಯ……..

ಸುಭದ್ರೆ : ಹರಿ ಜಗದೋದ್ದಾರಿ. ಮಮ ಪ್ರಾಣಾಹಿ ಪಾಂಡವ ಎಂಬ ಬಿರುದಂ ಧರಿಸಿರುವ ಪರಮಾತ್ಮನೆ, ನಿರುತವೂ ನಿನ್ನ ಚರಣ ಸ್ಮರಣೆಯಲ್ಲಿ ಹರಣವಂ ಪೊರೆಯುವ ವರ ಕಿರೀಟಿಯ ಅಪರಾಧವಂ ಕ್ಷಮಿಸಿ ಕರುಣದಿಂ ರಕ್ಷಿಸಬೇಕೈ ಪಕ್ಷಿವಾಹನ – ನಾನೀಗಲೆ ಹೋಗಿ ನಿಮ್ಮ ಅಪ್ಪಣೆಯ ಮೇರೆಗೆ ಗಯನಂ ಬಿಡುವುದೆಂದು ಸರಸಿಗರುಹಿ ಬರುವೆನೈ ದೇವಾ ಮಹಾನುಭಾವ.

ಕೃಷ್ಣ : ವಳ್ಳೆಯದು ಹೋಗಿ ಬಾ ತಂಗಿ ಮಂಗಳಾಂಗಿ.

 

(ಅರಣ್ಯ ಅರ್ಜುನ ಸುಭದ್ರೆ)

ಸುಭದ್ರೆ : ನಮೋನ್ನಮೋ ಕಾಂತ.

ಅರ್ಜುನ : ಕಾಂತೆ ನಿನಗೆ ಮಂಗಳವಾಗಲಿ. ಯೀ ಘೋರಾರಣ್ಯದಲ್ಲಿ ನೀನೋರ‌್ವಳೆ ಬರಲು ಕಾರಣವೇನು. ತ್ವರಿತದಿಂದ ಯನ್ನೊಡನೆ ಹೇಳುವಳಾಗು.

ಸುಭದ್ರೆ : ಪ್ರಿಯಾ ಯನ್ನ ವಿಜ್ಞಾಪನೆಯನ್ನು ಲಾಲಿಸು.

ಪದ

ಯಂತೂ ನಾಂ ತಾಳಲಿ ಯಂತೂ ನಾಂ ಗೈಯಲಿ
ಕಂತೂ ಜನಕನೊಳು ಪಂಥವು ಬಂದುದೇ ॥

ಲೋಕಾಭಿರಾಮನೋಳ್ ಕೌಸಲ್ಯ ಧಾಮನೋಳ್
ನೀ ಕಲಹಗೈಯ್ಯಲೂ ತಾ ಕರುಣ ತೊರೆವನೂ ॥

ಸುಭದ್ರೆ : ಪ್ರಾಣಕಾಂತ. ಲೋಕಾಭಿರಾಮನಾದ ಜಗದೋದ್ಧಾರನಲ್ಲಿ ನೀವು ಕಲಹವಂ ಗೈದರೆ ಹರಿಯು ನಿಮ್ಮಲ್ಲಿ ಕರುಣವಂ ತೊರೆಯದಿರುವನೆ ಕಾಂತ ಮತಿವಂತ-

ಪದ

ಭ್ರಷ್ಟ ಗಯನನೂ ನೀನು ಬಿಟ್ಟರೆ ಯೀಗಲೇ
ಕೃಷ್ಣನು ನಿನ್ನನೂ ಶ್ರೇಷ್ಟನೆಂದೆಂಬನೂ ॥
ಕರಮುಗಿದು ಬೇಡುವೆ ಚರಣಕೆ ಯರಗುವೆ
ಕರುಣವಿಟ್ಟೆನ್ನೊಳು ತ್ವರಿತದಿ ಬಿಡು ಬಿಡು ॥

ಸುಭದ್ರೆ : ಅಹೋ ಪ್ರಾಣನಾಥ, ದುಷ್ಟರಾದ ದುರ್ಯೋಧನಾದಿಗಳು ನಮಗೆ ಮಾಡಿದ ಮೋಸ ಕೃತ್ಯಗಳಷ್ಟನ್ನೂ, ಕ್ರಿಷ್ಣನು ನೋಡಿ ನಮಗೆ ಕ್ಷೇಮವನ್ನುಂಟು ಮಾಡಿದನು. ಅದನ್ನು ನಾವು ಮರೆತು ಕೃಷ್ಣನ ಶತೃತ್ವವನ್ನು ನಾವಿಟ್ಟುಕೊಳ್ಳುವದು ಧರ್ಮವಲ್ಲ. ಗಯನಂ ಬಿಟ್ಟು ಕೊಡದೆ ಇಟ್ಟುಕೊಂಡಲ್ಲಿ ಬಂಧುತ್ವದಲ್ಲಿ ಕಲಹವುಂಟಾಗುತ್ತದೆ. ಮುಂದಿನ ಕಾರ‌್ಯಗಳು ಕೆಡುವವೈ ರಮಣ.

ಪದ

ಕಾಂತೆ ಕೇಳು ಯನ್ನೊಳು ನೀನಿಂತು ಪೇಳುವೆ
ಪಂಥ ಬಂದುದೀಗ ನೋಡು ಕಂತುಜನಕನೋಳ್
ಬಿಟ್ಟೂ ಕಳುಹೆ ಗಯಗೆ ನಾನು ಕೊಟ್ಟೆ ಭಾಷೆಯಾ
ಯಿಷ್ಟದಿಂದ ಬಿಡಲು ಅವನ ಶ್ರೇಷ್ಟವೇನದೂ ॥

ಅರ್ಜುನ : ಪ್ರಿಯೆ, ಶ್ರೀಕೃಷ್ಣನ ವೈರಿಯೆಂಬುದನ್ನರಿಯದೆ ಭಾಷೆಯಂ ಕೊಟ್ಟೆನು. ಕೊಟ್ಟ ಭಾಷೆಗೆ ತಪ್ಪಿ ನಡೆಯುವುದು ಕ್ಷತ್ರಿಯರ ಧರ್ಮವಲ್ಲ. ಕೃಷ್ಣನೊಡನೆ ಯುದ್ಧವಂ ಮಾಡಿದರೂ ಚಿಂತೆಯಿಲ್ಲ ಗಯನಂ ಖಂಡಿತ ಬಿಡುವುದಿಲ್ಲಾ. ನೀನು ಹೇಳುವ ಮಾತುಗಳನ್ನು ನಾಂ ಕೇಳುವದಿಲ್ಲವೇ ಕಾಂತೆ ಬಿಡು ಯೀ ಭ್ರಾಂತೆ.

ಪದ

ಬೇಡ ಬೇಡವೈ ಪ್ರಿಯಾ ಬೇಡಿಕೊಂಬೆನೈ ॥
ಬೇಡುವೆ ನಿನ್ನನು ಜೋಡಿಸಿ ಕೈಯನು
ಮಾಡಬೇಡ ಕಲಹ ರೂಢಿನಾಥ ಪ್ರಿಯಾ ಬೇಡ ॥

ಸುಭದ್ರೆ : ಪ್ರಾಣೇಶನೆ ತಮ್ಮ ಚರಣಗಳಿಗೆರಗಿ ಬೇಡಿಕೊಳ್ಳುವೆನು. ಅಜಪಿತನೋಳ್ ಕಲಹವು ನಿಜವಾಗಿಯೂ ಸಲ್ಲದು. ಯಿಂತಾ ಪಂಥವಂ ಮಾಡಬೇಡವೈ ಕಾಂತ ಬಿಡು ಯೀ ಭ್ರಾಂತಿ –

ಪದ

ನುಡಿಯಬೇಡ ಯನ್ನೊಳೀಗ ಬೆಡಗಿನ ನುಡಿಯಾ,
ಜಡಜಾಂಬಕಿ ಲಾಲಿಸೀಗ ಯನ್ನ ವಚನವಾ

ಅರ್ಜುನ : ಹೇ ರಮಣಿ, ಇಂಥಾ ಬೆಡಗು ಬಿನ್ನಾಣದ ನುಡಿಯಂ ಯನ್ನೊಳ್ ನುಡಿಯಬೇಡ. ಕೃಷ್ಣನ ದರ್ಪಕ್ಕೆ ನಾಂ ಹೆದರುವೆನೆ. ಗಯನಂ ರಕ್ಷಿಸುವೆನೆಂದು ಭಾಷೆಯಂ ಕೊಟ್ಟಿರುವೆನು. ಯೀಗ ಬಿಡಲು ಸಾಧ್ಯವೆ ಹೇಳು. ಯಿಂತಾ ನೀತಿ ಮಾತುಗಳನ್ನಾಡುವದನ್ನು ಬಿಟ್ಟು ಕಡೆಗೆ ಸಾರೆ ಸುಭದ್ರ.

ಪದ

ದುಷ್ಟರಾ ಶಿಕ್ಷಿಸಿ ಶಿಷ್ಟರ ರಕ್ಷಿಪ
ಕ್ರಿಷ್ಣನೋಳ್ ವೈರವು ಶ್ರೇಷ್ಟವಲ್ಲವು ಪ್ರಿಯಾ ॥ಬೇಡ ॥

ಸುಭದ್ರೆ : ಪ್ರಾಣನಾಥ. ದುಷ್ಟ ಶಿಕ್ಷ ಶಿಷ್ಟ ರಕ್ಷಕನೆಂಬ ಬಿರುದಂ ಧರಿಸಿರುವ ಜಗದೋದ್ಧಾರನಲ್ಲಿ ಹಗರಣವಂ ಗೈದರೆ. ಧರೆಯ ಜನರೆಲ್ಲಾ ಅಪಹಾಸ್ಯವಂ ಮಾಡುವುದಿಲ್ಲವೆ. ಆದ ಕಾರಣ ಗಯನಂ ಬಿಟ್ಟು ಬಿಡಬೇಕೈ ಕಾಂತ.

ಅರ್ಜುನ : ಯಲೈ ಮೋಹನಾಂಗಿ, ನಾನು ಕ್ಷತ್ರಿಯನಾಗಿ ಕೊಟ್ಟ ವಚನಕ್ಕೆ ತಪ್ಪಿ ಸತ್ಯ ಭ್ರಷ್ಟನಾದರೆ ಯೀ ಸೃಷ್ಟಿಯ ಜನರು ಯನ್ನನ್ನು ತುಚ್ಛನೆಂದು ಆಡಿಕೊಳ್ಳುವದಿಲ್ಲವೆ ಸಾರಸಾಕ್ಷಿ ॥

ಸುಭದ್ರೆ : ಹೇ ಪ್ರಾಣನಾಥ ನಮ್ಮ ಅಣ್ಣನು ನಿಮಗೇನು ಅಪರಾಧವಂ ಮಾಡಿರುವನು. ಯಿಂತಾ ಕಷ್ಟಗಳನ್ನು ನೋಡುವುದು ನನಗೆ ಪ್ರಾಪ್ತವಾಯಿತೆ. ಅಯ್ಯೋ ಕಾಂತ ಗಂಧರ್ವನಂ ಬಿಡುವುದು ಬಹಳ ಕ್ಷೇಮವಾಗಿ ಕಾಣುವದೈ ಕಾಂತ ಮತಿವಂತ ॥

ಕಂದ

ನಾರಿಯೆ ನೀನೀಗಲೆ ದ್ವಾರಕಿಗೆ ತೆರಳಿ ಮಾರ
ಜನಕನ ಕಂಡು ವೈರಿಯ ಬಿಡಲಿಲ್ಲವೆನುತಲಿ
ಸಾರೀಗಲೆ ಬೇಗ ಹರಿಗದ ಪೇಳೂ ॥

ಅರ್ಜುನ : ಲಲಿತಾಂಗಿಯೆ, ನೀನೀಗಲೆ ದ್ವಾರಕಿಗೆ ತೆರಳಿ ಮಾರಜನಕನಿಗೆ ಸಾರುವದೇನೆಂದರೆ ವೈರಿಯಂ ಬಿಡುವದಿಲ್ಲವೆಂದು ನಾನೊರೆದ ಸಮಾಚಾರವನ್ನೆಲ್ಲಾ ನಿಮ್ಮ ಅಣ್ಣನಾದ ಶ್ರೀಹರಿಯೊಡನೆ ಹೇಳು. ಶೀಘ್ರದಿಂ ತೆರಳುವಳಾಗೆ ರಮಣಿ ಮಾರನರಗಿಣಿ.

ಸುಭದ್ರೆ : ಅಯ್ಯೋ ಪೂರ್ವಜನ್ಮದಲ್ಲಿ ನಾನೇನು ಅಪರಾಧವಂ ಮಾಡಿದ್ದೆನೊ – ಯೀ ಹಗರಣವಂ ನೋಡುವಂತಾಯಿತೇ ಕಾಂತ ಅಪ್ಪಣೆಯಾದರೆ ಹೋಗಿ ಬರುತ್ತೇನೆ.

ಅರ್ಜುನ : ವಳ್ಳೆಯದು ಹೋಗಿ ಬಾ.

 

(ಕೃಷ್ಣ ಸುಭದ್ರೆ ಮಾತು)

ಸುಭದ್ರೆ : ವಾಸುದೇವ ವಂದಿಸುವೆನು.

ಕೃಷ್ಣ : ತಂಗಿ ನಿನಗೆ ಮಂಗಳವಾಗಲಿ. ನೀನು ಹೋದ ಕಾರ‌್ಯವೇನಾಯಿತು ತಿಳಿಸು.

ಪದ

ಲಾಲಿಸೂ ದೇವಾ ಪೇಳುವೆ ನಿಜವಾ ॥
ವ್ಯಾಳಶಾಯಿಯೆ ನೀನು ಹೇಳಿದ ಪರಿಯಲಿ
ಲೋಲ ಪಾರ್ಥಗೆ ನಾನು ಪೇಳಿದೆನೆಲ್ಲವಾ ಲಾಲಿಸು॥

ನಿನ್ನಯ ವೈರಿಯಂದೆನ್ನುವದರಿಯದೆ
ನನ್ನಿಯಿಂ ಭಾಷೆಯ ಯಿನ್ನು ಕೊಟ್ಟಿಹ ಪಾರ್ಥ ಲಾಲಿಸು॥

ಸುಭದ್ರೆ : ವಾಸುದೇವ, ನಿನ್ನಾಜ್ಞೆಯಂತೆ ನಾನು ಪತಿಯಲ್ಲಿಗೆ ಹೋಗಿ ನಿನ್ನ ಮನೋಗತವನ್ನು ಪೇಳಿದೆನು. ಪಾರ್ಥನು, ಗಂಧರ್ವನು ನಿನ್ನ ವೈರಿಯಂಬುದನ್ನರಿಯದೆ ನಿಮ್ಮನ್ನು ನಂಬಿ ಆ ಗಯನನ್ನು ಕಾಪಾಡುವೆನೆಂದು ಭಾಷೆಯಂ ಕೊಟ್ಟಿರುವರಂತೆ. ಧರ್ಮಿಷ್ಟರಾದ ಪಾಂಡವರಲ್ಲಿ ತಪ್ಪೇನಿರುವುದು. ವಿವರವು ತಿಳಿದ ನಂತರ ನಿನ್ನ ಧ್ಯಾನದಲ್ಲೇ ನಿರತರಾಗಿರುವರು. ಭಾಷೆಯಂ ಕೊಟ್ಟು ತಪ್ಪುವುದಕ್ಕಾಗುವುದೇ ಶ್ರೀಹರಿ ಕೋಪವಂ ತೊರಿ.

ಕಂದ

ಅನುಜೆಯೆ ಯನ್ನಯ ನುಡಿಕೇಳ್
ದನುಜಾರಿಯುಗೈದ ಪಂಥ ಪೂರೈಸದಿರೇ.
ಜನರೇ ನಂಬರು ಜಗದೋಳ್
ವಿನಯದಿ ನೀನೇನ ಪೇಳ್ ಕೇಳೆನು ನಾನು ॥

ಕೃಷ್ಣ : ಅಮ್ಮಾ ಸುಭದ್ರ, ದನುಜಾರಿ ಯಂದು ತ್ರಿಭುವನದೋಳ್ ಬಿರುದಂ ಹೊಂದಿದ ನಾನು ಮಾಡಿದ ಪಂಥವನ್ನು ಪೂರೈಸದೆ ಬಿಟ್ಟರೆ ಜನರು ಅಪಹಾಸ್ಯವಂ ಮಾಡುವದಿಲ್ಲವೆ. ನೀನು ಯಷ್ಟು ವಿಧದಿಂದ ಬೇಡಿಕೊಂಡರು ನನಗೆ ಕರುಣವು ಬರಲರಿಯದು. ದುಷ್ಟ ಗಯನಿಂದ ಪಾಂಡವರು ನಷ್ಟವಾಗುವರಮ್ಮಾ ತಂಗಿ ಮಂಗಳಾಂಗಿ.

ಸುಭದ್ರೆ : ಹಾ ದುರ್ವಿಧಿಯೆ ಬಂಧುತ್ವದಲ್ಲಿ ಯಿಂತಾ ಕಷ್ಟ ಬಂದೊದಗಿತೆ. ಇದಕ್ಕೆ ನನ್ನಿಂದ ಯೇನಾಗುವದು. ಶ್ರೀಯರಸನ ಕರುಣವಿದ್ದಂತಾಗಲಿ. ಮಾಡುವದೇನು ಕಂತುಪಿತನೆ ನಾಂ ಪೋಗಿ ಬರುವೆನು.

ಕೃಷ್ಣ : ತಂಗಿ ನಿನಗೆ ಮಂಗಳವಾಗಲಿ ಹೋಗಿ ಬಾ.

ಚಾರ : ಯದುಪತಿಯೆ ವಂದಿಸುವೆನು.

ಕೃಷ್ಣ : ಚಾರನೆ ಸಮಾಚಾರವೇನು.

ಚಾರ : ಮಹಾನುಭಾವನೆ ನಾನು ತೆಗೆದುಕೊಂಡು ಹೋಗಿದ್ದ ಪತ್ರಿಕೆಯನ್ನು ಭೀಮಸೇನನು ನನ್ನ ಕೊರಳಿಗೆ ಕಟ್ಟಿ ಕಳುಹಿಸಿರುವನು. ಇದರಿಂದ ನನಗೆ ಅವಮಾನವಾಯಿತೈ ದೇವ.

ಕಂದ

ಯಿಂತೀ ಕೃತ್ಯವಗೈದೀಗ ಕುಂತೀಸುತರಾದ ಬಣಗು
ಪಾಂಡವರನ್ನು ಯಿಂತಿನ್ನು ನೋಡಲಾಪೆನೆ
ಅಂತಕನೊಳವನ್ನು ಮಾಳ್ಪೆ ಯಿದು ನೀನೋಡೈ ॥

ಕೃಷ್ಣ : ಆ ನೀಚರಾದ ಪಾಂಡವರು ನಾನು ಮಾಡಿದ ಉಪಕಾರವನ್ನು ಮರೆತು ಯನ್ನ ವೈರಿಯನ್ನು ಪರಿಗ್ರಹಿಸಿದರೆ ವಳ್ಳೆಯದು ಇವರನ್ನು ದಂಡಧರನಾಲಯಕ್ಕೆ ಕಳುಹಿಸಿ ಬಿಡುತ್ತೇನೆ ಇರಲಿ.